ಶ್ರೀಪದ್ಮ ಪ್ರಭ ತೀರ್ಥಕರಾಯ ನಮಃ ||

ಅಡಿಅಡಿಗೆ ನೇಮಿಜಿನಪತಿ
ಅಡಿಗಳ್ಗೆರಗಿಂತು ಶ್ರೀಪಂಚಮಿ ಕಥೆಯಂ |
ಕಡುವುದುಮಕ್ಷಯ ಸುಖಮಂ |
ತಡೆಯದೆ ಕಂನಡದಿನರ್ಥಿಯಿಂ ವಿರಚಿಸುವೆಂ ||

ವ || ಅದೆಂತೆದೊಡೀ ಜಂಬೂದ್ವೀಪ ಭರತ ಕ್ಷೇತ್ರದೊಳು ಮಗಧೆಯಂಬುದು ನಾಡು ರಾಜ ಗೃಹವೆಂಬ ಪೊಳಲನದನಾಳ್ವ ಶ್ರೇಣಿಕ ಮಹಾರಾಜನಾತನ ಪಟ್ಟದರಸಿ ಚೇಳಿನಿ ಮಹಾದೇವಿಯಂಬಳವರಿರ್ವರ್ಗಂ ಸುಖದಿನಿರೆ

ಕಂ || ಪರಿತಂದು ಋಷಿ ನಿವೇದಕ
ನರಸಗೆ ಸಾಷ್ಟಾಂಗವೆರಗಿ ಪೊಡಮಟ್ಟೆಂದಂ ||
ನರನಾಥ ವಿಪುಳಗಿರಿಯೊಳು
ಪರಮಾತ್ಮ ಬಂದು ನೆಲಸಿಹಂ ವೀರಜಿನಂ ||

ವ || ಅಂತೊಸಗೆ ವೇಳ್ದಾತಂಗಂಗ ಚಿತ್ತಮಂ ಕೊಟ್ಟಾ ದೆಸೆಗೇಳಡಿಯಂ ನಡೆದು ಪೊಡಮಟ್ಟಾನಂದ ಬೇರಿಯಂ ಪೊಯ್ಸಿ ಚೇಳಿನಿ ಮಹಾದೇವಿವೆರಸು ಪೋಗಿ ತ್ರಿಃ ಪ್ರದಕ್ಷಿಣಂಗೆಯ್ದು ಜಿನರಂ ಪೂಜಿಸಿ ವಂದಿಸಿ ಪೊಡಮಟ್ಟು ಗಣಧರ ದೇವಾದಿ ಸಮೂಹಮಂ ಗುರುಭಕ್ತಿಯಿಂ ವಂದಿಸಿ ಚೇಳಿನಿ ಮಹಾದೇವಿವೆರಸು ಪಂನೊಂದನೆಯ ಮನುಷ್ಯ ಕೋಷ್ಠದೊಳ್ಕುಳ್ಳಿರ್ದು ಧರ್ಮ ಶ್ರವಣಮಂ ಕೇಳ್ದು ತದನಂತರಂ ಗೌತಮ ಸ್ವಾಮಿಗಳಂ ಸಪ್ತರ್ಧಿ ಸಂಪನ್ನರುಂ ಚತುರ್ ಜ್ಞಾನಧಾರಿಗಳುಂ ಪೊಡವರ್ಗಮನೆಯ್ದಿದನಾತನ ಕಥೆಯಂ ಬೆಸಸಿಮೆನೆ ಗಣಧರ ದೇವರಿಂತೆಂದು ಬೆಸಸಿದರೂ –

ಯಿ ಜಂಬೂ ದ್ವೀಪದ ಭರತಕ್ಷೇತ್ರದೊಳು ಮಗಧೆಯೆಂಬುದು ನಾಡು ಕನಕ ಪುರಮದನಾಳ್ವಂ ಜಯಂಧರ ಮಹಾರಾಜನಾತನ ಮಹಾದೇವಿ ವಿಶಾಲ ನೇತ್ರೆಯೆಂಬಳವರ ಮಗಂ ಶ್ರೀಧರನೆಂಬನವರ ಮಂತ್ರಿ ನಯಂಧರನೆಂಬನಾ ಅರಸನೊಂದು ದಿವಸಂ ಸಾಮಂತ ಮಹಾ ಸಾಮಂತ ಶ್ರೇಷ್ಠಿ ಸೇನಾಪತಿ ತಳವಾರ ದಂಡ ನಾಯಕ ಪುರೋಹಿತ ಪ್ರಭೃತಿಗಳು ಸಹವಾಸ್ಥಾನ ಮಂಟಪದೊಳೊಡ್ಡೋಲಗಂ ಗೊಟ್ಟು ಕುಳಿರ್ಪನ್ನೆಗಂ –

ಕಂ || ವಾಸವನೆಂಬಂ ಪರದಂ
ಕೇಶವನಂ ಪೋಲ್ಕುಮಾತನಿಂ ರೂಪಿಂದಂ
ಭಾಸುರ ರತ್ನಮಯಂಗಳ
ನಾಸಭೆಯೊಳಗೊಯ್ದು ತಳಿಗೆಯೊಳ್
ತಂದಿಟ್ಟಂ ||

ವ || ಅವರ ಮೇಲೆ ಬರೆದ ಚಿತ್ರಪಟಮನಿಟ್ಟು ಬಂದರಸನಂ ಕಂಡು ಪೊಡಮಟ್ಟಾ ತಂಗೆ ಆಸನವಿಕ್ಕಿಸಿ ತಾಂಬೂಲಮಂ ಸ್ವಹಸ್ತದಿಂ ಕೊಟ್ಟುಯಿನಿತು ಕಾಲಂ ಯೆಲ್ಲಿರ್ಪ್ಪೆಯೆತ್ತಣಿಂ ಬಂದೆಯೆನಲಾ ಪರದಂ ದೇವಾ ಲಾಳ ದೇಶದಿಂ ಬಂದೆನೆಂದೊಡರಸಂ ರತ್ನಂಗಳಂ ಮೇಲೆ ಪಟಮನಿಟ್ಟು ತಂದುದಂ ಕಂಡು ವಿಸ್ಮಯಂಬಟ್ಟು ನೋಡಿ ಹಾವಭಾವ ವಿಲಾಸ ವಿಭ್ರಮಂಗಳೊಳು ಕೂಡಿರ್ದ ಸ್ತ್ರೀರೂಪಮಂ ಕಂಡು ಚಿತ್ರದ ರೂಪಿನಂತೆ ಕಿರಿದು ಪೊತ್ತು ನಿಶ್ಚಲನಾಗಿರ್ದು ತಂನಾಸ್ಥಾನಮಂ ವಿಸರ್ಜಿಸಲ್ವೇಳ್ದು ವಾಸನವ ಕೈಯ್ಯಂ ಪಿಡಿದು ಯೇಕಾಂತದ ಮನೆಗೊಡಗೊಂಡು ಪೋಗಿ ಯೀ ರೂಪು ದೇವಾಂಗನೆಯೊ ವಿದ್ಯಾಧರಿಯೊ ನಾಗಕಂನೆ ರೂಪೊ ಪೇಳೆನಗೆ ನಿಸ್ಸಂದೇಹಮಾಗಿಯೆನೆ ಪರದನೆಂದಂ ಮನುಷ್ಯಸ್ತ್ರೀರೂಪಿದು ಸೌರಾಷ್ಟ್ರದೇಶದೊಳು ಗಿರಿನಗರಮೆಂಬುದು ಪೊಳಲದನಾಳ್ವಂ ಶ್ರೀವರ್ಮನೆಂಬನಾತನರಸಿ ಶ್ರೀಮತಿಯೆಂಬಳವರ ಮಗಂ ಹರಿವರ್ಮನಾತನ ಕಿರಿಯಳು ಪೃಥ್ವೀಮಹಾದೇವಿಯೆಂಬ ಕಂನೆಯ ರೂಪಂ ಬರೆದು ತಂದೆನೆನೆಯಬ್ಬಿಯಾ ಪರದನುಮನಾತ್ತರಪ್ಪ ಪುರುಷರುಮಂ ಪಾಗುಡಮಂ ಬೆರಸಿ ಶ್ರೀವರ್ಮನಲ್ಲಿ ಗಟ್ಟದದವರ್ಪೋಗಿ ಕಂಡು ಪಾಗುಡಮಂ ಕೊಟ್ಟು ಕುಳ್ಳಿರ್ದವರ್ಗು ಚಿತವಂ ಮಾಡಿ ಬಂದ ಕಾರಣಮಂ ಬೆಸಗೊಂಡಡೆ ವಾಸವನಿಂತೆಂದ ನುಡಿದ ನೆಂಮರಸಂ ಜಯಂಧರ ಮಹಾರಾಜನಾತಂಗೆ ಮತ್ತೋರ್ವಳು ಸರಸ್ವತಿಯೆ ಬಳಾತನ ಮುಖಕಮಲದೊಳಗಿರ್ಪವರ್ಗೆ ನಿಂಮ ಮಗಳಂ ಪೃಥ್ವೀದೇವಿ ಕಂನೆಯಂ ಸವತಿಯಂ ಮಾಳ್ಪೆನೆಂಬ ಬಗೆಯಿಂದೆಂಮಂ ನಿಂಮಲ್ಲಿಗೆ ಅಟ್ಟಿದರೆನೆ ಶ್ರೀವರ್ಮನೆಂದಂ ಸುವರ್ಣ ರತ್ನಗಳ ಸಂಯೋಗಮನಾರ್ನಿಶ್ಚೈಸುವರೆಂದು ನುಡಿದು ಜೋಯಿಸರಂ ಕರದು ದಿವಸ ವಾರ ಮುಹೂರ್ತಮಂ ನಿಶ್ಚೈಸಿ ವಸಗೆಯನಟ್ಟುವೆನೆಂದರಸನವರ ವಿಸರ್ಜಿಸಲವರ್ಪೋಗಲರೊಡನೆ ತಂನ ಪ್ರಧಾನರನಟ್ಟಿದೊಡವರು ವಾಸವನೊಡನೆ ಪೋಗಿ ಜಯಂಧರ ಮಹಾರಾಜನಂ ಕಂಡು ಅವರ್ಗುಚಿತಮಂ ಚಿತ್ತೈಸಿ ಸಿವಿಕೆಯೊಡನೆಮತ್ತಮಾ ಪರದನಟ್ಟಿ ಸಿವಿಕೆ ಬರ್ಪಾಗಳು ಶ್ರೀವರ್ಮನಿದಿರಂ ವಂದು ಪೊಳಲಂ ಪೊಕ್ಕು ಸುಝದಿನಿರ್ದನಿತ್ತಂ ಪೃಥ್ವಿಕಂನೆಯ ಬರವನರಿದು ಜಯಂಧರ ಮಹಾರಾಜಂ ಪೊಳಲೊಳೆಲ್ಲಂ ಗುಡಿ ತೋರಣಮಂ ಕಟ್ಟಿಸಿ ತಾನಿದಿರ್ಪೋಗಿತಂದು ಸಪ್ತತಲ ಪ್ರಾಸಾದದೊಳಿರಿಸೆ ಶುಭದಿನ ಮುಹೂರ್ತದೊಳು ಕಂನೆಯ ಕೈಯಂ ಜಯಂಧರ ಮಹಾರಾಜಂ ಅಗ್ನಿಸಾಕ್ಷಿಯೊಳಂಗಿತೆಂಬಂತೆ ಪಿಡಿದನೆಂನ ಮನವೆಂಬ ರತ್ನಮಂ ನೀನಿತು ದಿವಸಂ ಕದ್ದುಕೊಂಡು ಕದ್ದೆಯಾಗಿರ್ಪಾಗೀಗ ನಿಂನ ಕಂಡೆನಿಂನೇತಕೆ ಬಿಡುವೆನೆಂಬಂತೆ ಕೈಯಂ ಪಿಡಿದು ಮದುವೆನಿಂದು ಸುಖದಿನಿರ್ದನಾಂತಗೆಣ್ಘಾಸಿರರಸಿಯರು ಅವರಲ್ಲಿ ವಿಶಾಲನೇತ್ರೆಯಮೋ ಲಗಿಸಿಪೋಪರೀ ಪೃಥ್ವೀ ಮಹಾದೇವಿ ತನ್ನ ಸೌಭಾಗ್ಯಮದದಿಂ ಪೋಗಲೊಲ್ಲದಿರಲೊಂದು ದಿವಂ ವನಪಾಲಕಂ ಅನೇಕ ಕುಸುಮ ಮಂಜರಿಯಂ ತಂದುಕೊಟ್ಟು ದೇವಾ ನಂದನವನಕ್ಕೆ ವಸಂತರಾಜಂ ಬಂದನೆಂದು ಬಿಂನಪಂಗೆಯಿದನರಸಂ ವನಕ್ರೀಡೆಗೆ ಪೋಗುತ್ತಂ ಅರಸಿಯರೆಲ್ಲರ ಬರವೇಳ್ದು ಪೋದಡರಸನಬಳಿಯ ವಿಶಾಲ ನೇತ್ರೆ ಭದ್ರ ಹಸ್ತಿಯನೇರಿ ಪರಿವಾರ ಸಮನ್ವಿತೆಯಾಗಿ ಪೋಗುತ್ತಂ ಪೆರಗೆ ಶಂಖಕಹಳೆ ಧ್ವನಿಯ ಕೇಳ್ದು ನೋಡಿ ಸುವರ್ನ್ನ ಸಿವಿಕೆಯನೇರಿ ದೂರದಿಂ ಬರ್ಪುದಂ ಕಂಡೀಕೆಯಾರ್ಗೆನೆ ಮತ್ತೊರ್ವಳಿಂತೆಂದಳರಸನ ಪ್ರಾಣವಲ್ಲಭೆ ನಿಂಮ ತಂಗಿ ಪೃಥ್ವೀಮಾಹಾದೇವಿ ಬಂದಳೆಪೆನೆ ವಿಶಾಲ ನೇತ್ರೆಯೆಂದಳಪ್ಪೊಡಾಕೆಯ ರೂಪು ಲಾವಣ್ಯಮಂ ಯವ್ವನಮಂ ಯವ್ವನಮಂ ನೋಳ್ಪೆನೆಂದು ಪೋಪ ಪಥಮಂ ನಿಲಿಸಿರ್ದಳಾ ಪೃಥ್ವೀಮತಿ ಮಹಾದೇವಿಯುಂ ಮುಂದೆ ನೋಡಿ ಸಿವಿಗೆ ಯನೇರಿರ್ದಳಾಕೆಯಾರನೆ ಯೋರ್ವಳೆಂದಳರಸನ ಪಿರಿಯ ಪೆಂಡತಿ ವಿಶಾಲ ನೇತ್ರೆಯೆಂಬಳು ನಿಂಮ ಬರ್ಪುದುಂ ಕಂಡುಮೊಡನೆ ಗೋಷ್ಟಿಯಿಂ ಪೋಪಮೆಂದಿರ್ದಪಳಕ್ಕು ಮೆನೆ ಪೃಥ್ವೀಮತಿ ಮಹಾದೇವಿ ತಂನ ಮನದೊಳಿಂತೆಂದು ಚಿಂತಿಸಿದಳೆಂನಿಂದಂ ತನಗೆ ಪೊಡವಡಿಸಿ ಕೊಳ್ವ ಬಗೆಯಿಂದಲಿರ್ದಳೆಂದಲ್ಲಿಯೆ ನಿಂದಳು ನಿಂದುದಂ ಕಂಡು ವಿಶಾಲ ನೇತ್ರೆ ಮುಳಿದು ಮುಂದೆ ಪೋದಳೀ ಕಿರಿಯರಸಿಯಂ ಮಗುಳ್ದು ಸಹಸ್ರ ಕೂಟ ಚೈತ್ಯಾಲಯಕ್ಕೆ ಬಂದು ಜಿನ ಬಿಂಬಮಂ ಪೂಜಿಸಿ ಪಿಹಿತಾಸ್ರವ ಭಟ್ಟಾರಕರಂ ವಂದಿಸಿ ಧರ್ಮಶ್ರವಣಮಂ ಕೇಳ್ದು ದೀಕ್ಷೆಯಂ ಬೇಡಿದಡವರೆಂದರ್ನ್ನಿನಗೆ ಚರಮಾಂಗನಪ್ಪ ಮಗನಾದಪಂ ನೀಂ ನಿಂಮ ಸ್ವಾಮಿಯೊಡನೆ ತಪಂ ಬಡುವೆಯೆನೆ ಸಂತೋಷಂಬಟ್ಟು ಮನೆಗೆ ಬಂದಿರ್ದಳಂನೆಗಂ ಜಯಂಧರ ಮಹಾರಾಜಂ ಪೃಥ್ವೀ ಮಹಾದೇವಿಯಂ ಕಾಣದೆ ವನಕ್ರೀಡೆಯನಾಡದೆ ಬಿಟ್ಟಾಕೆಯ ಮನೆಗೆ ಬಂದೇಕೆ ನೀಂ ವನಕ್ರೀಡೆಗೆ ಬಂದುದಿಲ್ಲವೆನೆ ತಾಂ ಬಸದಿಗೆ ಪೋದುದಂ ವೈರಾಗ್ಯಕ್ಕೆ ಸಂದು ದೀಕ್ಷೆಯಂ ಬೇಡಿದುದು ವನವರ್ತನಗೆ ಮುಂದೆ ನೀಂ ಮಗನಂ ಪಡೆದು ಭರ್ತಾರನೊಡನೆ ತಪಂಬಡುವೆನೆದುದುಮಂ ಅರಸಂಗೆ ತಿಳಿಯೆ ಪೇಳ್ದು ಸುಖದಿನಿರ್ದೊಂದು ದಿವಸಂ ನಾಲ್ಕು ನೀರಂ ಮಿಂದು ಬೆಳಗಪ್ಪ ಜಾವದೊಳು ವೃಷಭಂ ಬಂದು ತಂನ ಮನೆಯಂ ಪೊಗುವುದುಮನಾದಿತ್ಯನುದಯಗೆಯ್ದುದುಮಂ ಕನಸಿನಳ್ಕಂಡು ತಂನ ಸ್ವಾಮಿಗರಿಯ ಪೇಳಿದಡಾತಂ ದಿವ್ಯಜ್ಞಾನಿಗಳಪ್ಪ ತಪೋಧನರಂ ಬೆಸಗೊಳ್ಳಮೆಂದು ಬಸದಿಗೆ ಬಂದು ಪಿಹಿತಾಸ್ರವ ಭಟ್ಟಾರಕರಂ ವಂದಿಸಿ ಕಂಡ ಕನಸಂ ಬಿಂನಪಂಗೆ ಯ್ದಡವರು ಯಿಂತೆಂದು ಪೇಳ್ದಪರೂ –

ವೃಷಭನಂ ಕಂಡುದರಿಂದುತ್ತಮಮಪ್ಪ ಮಗನಂ ಪಡೆಗುಮಾದಿತ್ಯನ ಕಂಡುದರಿಂದ ಮಾತಂ ಕೇವಲ ಜ್ಞಾನಿಯಕ್ಕು ಮೆಂದೊಡರಸನೆಂದನಾವ ಭಾಷಾಭಿಜ್ಞಾನದಿಂದಮರಿಯಲಕ್ಕು | ಮುನಿಪತಿಯಿಂತೆಂದಂ | ನಿಂಮ ಮಾಡದ ಪೆರಗಣ ನಂದನವನದೊಳು ಸಿದ್ಧಕೂಟ ಜಿನಾಲಯಮುಂಟದರ ಪಡಿಗಳಂ ಆರ್ಗುಂ ತೆರೆಯ ಬಾರವುನಿಂಮ ಮಗನ ಕಾಲ್ಗಳೆಂಬ ತಾಳುಕೋಲಿಂದಮಾ ಪಡಿಗಳ್ತೆರೆಗುಂ ಮತ್ತಲ್ಲಿ ನಾಗವಾಪಿಯುಂಟದರೊಳು ಕೂಸು ಬೀಳ್ಗು ಮಲ್ಲಿಯ ನಾಗಂಗಳು ಮಾತನಂ ಪೆಡೆಯೊಳು ಪೊತ್ತುಕೊಂಡಿರ್ಕುಂ ಮತ್ತಂ ನೀಲಗಿರಿಯೆಂಬ ಆನೆಯಂ ವಶಂ ಮಾಡಿ ಕಟ್ಟುಗುಂ ದುಷ್ಠಾಶ್ವವುಯೆಂಬ ಕುದುರೆಯಂ ವಶಂ ಮಾಡುಗುಂ ಇವರಿಂದಮಾ ಸ್ವಪ್ನಂ ದಿಟಮಕ್ಕುಮೆಂದರಿಪುವುದೆನೆ ಭಟ್ಟಾರಕರಂ ವಂದಿಸಿ ಮನೆಗ ಪೋಗಿ ಸುಖನಿದಿರೆ ಕೆಲವಾನು ದಿವಸಕ್ಕೆ ಗರ್ಭಮಾಗಿ ಬಯಕೆಯಂ ಬಯಸಿ ಮಂಣಂ ಬಯಸಿದೊಡದು ಪೇಳೆ ಪೃಥ್ವೀಶ್ವರನಕ್ಕುಮೆಂಬುದುಂ ಆಕೆಯ ನಿಟ್ಟವನಂ ಪೇಳ್ಗುಮಾತಂಗೆ ಮಿಥ್ಯತ್ವಮಿಲ್ಲೆಂಬುದು ಆಕೆಯ ಬಸುರು ಮೂರು ರೇಖೆಯ ಕೇಡಿಂದಾತಗೆ ಜನನ ಜರಾಮರಣಂಗೆಳಿಲ್ಲೆಂಬುದುಮಿಂತು ನವಮಾಸಂ ನೆರೆದು ಶುಭದಿನ ಮುಹೂರ್ತದೊಳು ಪುಟ್ಟಿದುತ್ಸವಂ ಮಾಡಿ ಕೂಸಿಂಗೆ ಪ್ರತಾಪಂಧರನೆಂದು ಪೆಸರನಿಟ್ಟು ಸುಖದಿಂ ಕೂಸು ಬೆಳೆಯುತ್ತಮಿರೆ ದಾದಿಯರೊಂದು ದಿವಸಂ ಕೂಸನೆತ್ತಿಕೊಂಡು ನಂದನವನದ ಬಸದಿಗೆ ಪೋಗಿ ಪಡಿಯಂ ಪತ್ತಿದೊಡಾ ಕೂಸಿನ ಕಾಲು ಮುಟ್ಟೆ ತೊಟ್ಟನೆ ಪಡಿಗಳ್ತೆರೆಯೆ ಕೂಸ ನಿಳಿಪಿ ಬಸದಿಯಂ ಪೊಕ್ಕು ನೋಡುತ್ತಮಿರಲಾ ಕೂಸು ತೆವಳುತ್ತಂ ಬಂದು ಬಾವಿಯೊಳು ಬೀಳೆ ನಾಗಂಗಳುಂ ತಂನ ಪಡೆಯೊಳೆತ್ತಿ ಕೊಂಡಿರ್ದನಂನೆಗಂ ದಾದಿ ಬಸದಿಯಂ ಪೊರಮಟ್ಟು ಕೂಸಂ ಕಾಣದತ್ತಿತ್ತಂ ನೋಡಿ ಬಾವಿಯೊಳು ಬಿರ್ದುದಂ ಕಂಡು ಪರಿತಂದು ತಾಯಿಗೆ ಪೇಳ್ದೆಡೆ ತಾಯುಂ ಬಂದು ದುಃಖದಿಂ ಬಾವಿಯಂ ಪೋಗೆ ಆ ನೀರ್ಮೊಳಕಾಲುದ್ದಮಾದುದು ಕೂಸಿನ ಪುಣ್ಯದಿಂದಮಾಕೆ ಕೂಸನೆತ್ತಿಕೊಂಡು ಬಾವಿಯಂ ಪೊರಮಡುಬಾಗರಸನುಂ ಕೇಳ್ದು ಬಂದೊಡನೆ ಸಿದ್ಧಕೂಟ ಚೈತ್ಯಾಲಯಮಂ ಪೊಕ್ಕು ದೇವರಂ ವಂದಿಸಿ ಬರುತ್ತಂ ನಾಗಂಗಳಿಂ ಪೂಜೆವೆತ್ತ ಕುಮಾರನಂ ಕಂಡು ನಾಗಕುಮಾರನೆಂದು ಪೆಸರನಿಟ್ಟು ಭಟ್ಟಾರಕರು ಪೇಳ್ದ ಸಾಭಿಜ್ಞಾನಮಂ ನೆನೆಯುತ್ತರಮನೆಗೆ ಮನೆಗೆ ಪೋಗಿ ಸುಖದಿಂದರ್ದಾತನೈದು ವರ್ಷದಂದು ಜೈನೋಪಾಧ್ಯರ ಪಕ್ಕದೊಳು ವೋದಲಿಟ್ಟಡೆ ಆತಂ ಅಕ್ಕರ ಲೆಕ್ಖ ಗಣಿತ ಗಾಂಧರ್ವ ನೀತಿಶಾಸ್ತ್ರ ಮೊದಲಾಗೊಡೆಯ ಶಾಸ್ತ್ರಂಗಳಂ ಕಲ್ತುಮಿರಲೊಂದ ದಿವಸಂ ಪಂಚಸುಗಂದಿಯೆಂಬ ಗಣಿಕೆ ಬಂದು ಜಯಂಧರ ಮಹಾರಾಜಗಿಂತೆಂದಂ ಬಿಂನಪಂಗೆಯ್ದಳಿಂನ ಮಕ್ಕಳು ಕಿಂನರಿ ಮನೋಹರಿಯರೆಂಬವರ್ ಪ್ರತಿಜ್ಞೆಗೆಯ್ದಿರ್ಪರೆಂದು ವೀಣಾವಾದದಿಂನಾವನೋರ್ವಂ ಗೆಲ್ವಮಾತನೆಂದು ಭರ್ತಾರಕನಕ್ಕುಮಲ್ಲದೊಡೆ ತಪಂಬಡುವೆನೆಂದಿರ್ಪರು ದೇವಾ ನಾಗಕುಮಾರನ ವೀಣಾವಾದ್ಯಮಂ ಪರೀಕ್ಷಿಸಲು ಬೆಸಸುವುದೆನೆ ಭೂತನಾಥಂ ಬೆಸಸಿದೊಡಾತನವರ ವೀಣಾವಾದ್ಯಮಂ ಪರೀಕ್ಷಿಸಿ ಬಿಂನಪಂಗೆಯ್ದನಿರ್ವರೊಳಂ ಕಿರಿಯಾಕೆ ವೀಣೆಯೊಳು ಪರಿಣತೆಯೆನಲರಸನೆಂದಂ ಸಮಾನವಯಸಿನೊಳವರ ಪ್ರಾಯಮನೆಂತರಿದೆಯೆನೆ ನಾಗಕುಮಾನೆಂದಂ ಮನೋಹರಿಯ ಕೈ ಬಾರಿಸುವಾಗ ಕಿಂನರಿ ಕಡೆಗಂಣಿಂ ನೋಡೆ ಅಂಜಿ ನೆಲನಂ ನೋಡುಗುಮದರಿಂದೀಕೆ ಕಿರಿಯಳೆಂಬುದುಮರಸಿಂಗೆ ಪೇಳ್ದು ಪೊಡಮಟ್ಟನಂನೆಗಂ ಪಂಚಸುಗಂಧಿ ತಂನ ಮಕ್ಕಳ ಪ್ರತಿಜ್ಞೆಯನರಸಿಂಗರಿಪಿ ಯಿರ್ವರುಮಂ ನಾಗಕುಮಾರಂಗೆ ಶುಭದಿನ ಮುಹೂರ್ತದೊಳು ಕೊಟ್ಟೊಡಾತನುಮವಸಂಗೆ ಸುಖಮಮನುಭವಿಸುತ್ತಿರಲೊಂದು ದಿವಸಂ ವೋರ್ವಂ ಪರಿತಂದುಮರಸಂಗೆ ಬಿಂನಪಂಗೆಯ್ದಂ ನೀಲಗಿರಿಯೆಂಬಾನೆ ಅಡವಿಯಿಂ ಬಂದು ಜನಂಗಳಂ ಕೊಲುತ್ತಂ ಪೊಳಲೊಳಂಪೊಕ್ಕುದೆನೆ ಶ್ರೀಧರನೆಂಬ ತಂನ ಮಗನಂ ಕರದು ಆನೆಯಂ ಪಿಡಿದು ಕಟ್ಟೆಂದೊಡೆ ಆತಂ ತಂನ ಬಲ ಸಾಮಗ್ರಿ ವೆರಸು ಪೋಗಿ ಕಟ್ಟಲಾರದೆ ಮಗುಳೆ ಬಂದೊಡೆ ನಾಗಕುಮಾರನಂ ಬೆಸಸಿದೊಡಾತನದಂ ವಶಂ ಮಾಡಿ ಯೇರಿ ಬಂದರಸಂಗೊಪ್ಪಿಸಿದೊಡಾ ಆನೆಯಂ ನಾಗಕುಮಾರಂಗೆ ಕೊಟ್ಟು ಮತ್ತೊಂದು ದಿವಸಂ ಕುದುರೆಯ ಮಂದಿರದೊಳ ರಕ್ಷಪಾಲರ್ದುಷ್ಟಾಶ್ವಮೆಂಬ ಕುದುರೆಯಂ ಜಂತ್ರದಿಂ ಮೇಯಿಸೋದುಂ ಕಂಡು ನಾಗಕುಮಾರಂ ಬೆಸಗೊಂಡೊಡವರ್ಗಳೆಂದರಾಸಂನವರ್ತಿಯಪ್ಪರಂ ಕರ್ಚುಗುಮಾದೆ ಯಾಗುಯೆಂದೊಡಾತಂ ಕುದುರೆಯ ಕೊರಳ ನೇಣಂ ಬಿಟ್ಟು ಹಲ್ಲಣಂ ಗಟ್ಟಿ ಅತ್ತಿತ್ತಲೇರಿಯಾಡಿ ವಶಂ ಮಾಡಿ ತಂದರಸಂ ಗೊಪ್ಪಿಸಿ ಆ ಕುದುರೆಯ ನಾಗಕುಮಾರಂಗೆ ಕೊಟ್ಟೊಡಂ ಕೊಂಡು ಮನೆಗೆ ಪೋಗಿ ಸುಖದಿನಿರ್ದರಿತ್ತಲು ವಿಶಾಲನೇತ್ರೆ ತಂನ ಮಗಂ ಶ್ರೀಧರಂಗಿಂತೆಂದಳು ನೀಂನನೀ ಪುರದವರುಂ ನಾಡವರುಂ ಅರಸನುಂ ಪರಿಜನಮುಂ ಮುಂಕಂಡರಿಯರುಮಾತನೆಲ್ಲಾಯೆಡೆಯೊಳು ಪ್ರಸಿದ್ಧನಾದಂ ನಿನ್ನ ಶರೀರಮದಾವತೆರದಿಂ ರಕ್ಷಿಸಿವೆನೆ ಜನನಿಯ ವಚನದಿಂ ಪಂಚಶತಸಹಸ್ರ ಭಟರಂ ತಾನಾಳುತ್ತಂ ಶ್ರೀಧರನಿರ್ದಂ

ಇತ್ತ ನಾಗಕುಮಾರನೊಂದು ದಿವಸಂ ಮನೆಯ ನಂದನ ಕುಬ್ಜ ವಾಪಿಗೆ ಜಲಕ್ರೀಡೆಯನಾದಲಂತಿರ್ವರು ಸ್ತ್ರೀಯರ್ವೆರಸು ಪೋದಡೆ ಪೃಥ್ವಿ ಮಹಾದೇವಿ ವಸ್ತ್ರಾಭರಣಂಗಳ ಕೊಂಡು ಪೋಪುದುಂ ವಿಶಾಲ ನೇತ್ರೆ ಜಯಂಧರಂವೆರಸು ಮಾಡದೊಳು ಕುಳ್ಳಿರ್ದು ಕಂಡರಸಂಗಿತೆಂದಳು ನೋಡು ನೋಡು ನಿಂನ ಪ್ರಾಣವಲ್ಲಭೆಯಾಟಮಂ ತನ್ನಂ ಪಾದರಿಗಂಗೇನಾನುಮುಂ ಮುಚ್ಚಿಕೊಂಡು ಪೋಪಳೆನೆಯರಸಂ ಕೇಳ್ದು ಬೆರಗಾಗಿರ್ಪನಂನೆಗಂ ನಾಗಕುಮಾರಂ ತಂನ ತಾಯ ಬರವಂ ಕಂಡು ತಂನ ಪೆಂಡತಿಯರ್ವೆರಸು ತಾಯಿಗಿದಿರ್ವಂದು ನಮಸ್ಕಾರಮಂ ಮಾಡಿತಿರ್ದುದನರಸಂ ಕಂಡು ವಿಶಾಲನೇತ್ರೆಗೆ ಮುಳಿದು ಪಾಪಕರ್ಮಿ ಪೊಲ್ಲದು ನುಡಿಯ ನುಡಿದೆಯೆಂದು ಬಗ್ಗಿಸಿ ಪೃಥ್ವೀಮಹಾದೇವಿಯುಂ ಕುಮಾರನುಂ ಸೊಸೆಯರ್ವೆರಸು ಬರ್ಪುದಂ ಕಂಡುಯೆಲ್ಲಿಗೆ ಪೋದೆಯೆನೆ ನಾಗಕುಮಾರಂ ಜಲಕ್ರೀಡೆಯನಾಡುವಲ್ಲಿಗೆ ಪೋದೆನೆಂದೊಡರಸಂ ಕುಮಾರನಂ ಮನೆಯಿಂ ಪೊರಮಡಲೀಯವೇಡೆನೆ ಮನೆಯೊಳಾಡುತಿರ್ಕೆಯೆಂದು ಪೇಳ್ದು ಪೋದನಿತ್ತ ನಾಗಕುಮಾರಂ ಚಿಂತಾಕ್ರಾಂತೆಯಾಗಿರ್ದ ತಾಯಂ ಕಂಡು ಬೆಸಗೊಳೆ ಜಯಂಧರ ಮಹಾರಾಜನೆಂದುದಂ ಪೇಳ್ದೊಡಂ ಕೇಳ್ದು ನೀಲಗಿರಿಯನೇರಿ ಪಂಚಮಹಾ ಶಬ್ದಂಗಳ್ವೆರಸು ಪೊಳಲೊಳು ತೊಳಲುತಿರ್ಪನನರಸಂ ಕಂಡುಯಿತನಾರ್ಗೆನೆ ನಿಂಮ ಮಗಂ ನಾಗಕುಮಾರನೆನೆ ಮುನಿದುಮಾತನ ಮನೆಯಂ ಸೂರೆಗೊಳಿಸಿ ತಂನ ಮನೆಯಂ ತೀವಿಸಿದನಂನೆಗಂ ನಾಗಕುಮಾರಂ ಬಂದು ನಿರಾಭರಣೆಯಾಗಿರ್ದ ತಂನ ತಾಯಂ ಕಂಡಿದೇಂ ಕಾರಣಮೆನೆ ನಿಮ್ಮಯ್ಯಂ ತಂನಾಜ್ಞೆಯಂ ಮೀರಿ ನೀನೂರೊಳು ತೊಳಲುತಿರ್ಪುದಂ ಕಂಡು ಮುನಿದು ಮನೆಯಂ ಸೂರೆಗೊಳಿಸಿದನದು ಕಾರಣದಿಂದುಮ್ಮಳಿಸುತ್ತಿರ್ದೆನೆನೆ ತಾಯಂ ಸಂತವಿಟ್ಟು ಮನೆಯಂ ಪೊರಮಟ್ಟು ಜೂಜಾಡುವೆಡೆಗೆ ಪೋಗಿ ಪಲಂಬರರ್ಮಕಟ ಬದ್ಧರೊಡನೆ ಜೂಜನಾಡಿಗೆಲ್ದು ಬಂದಾ ದ್ರವ್ಯಮಂ ಜನಜಿಗೊಪ್ಪಿಸಿ ಕುಳ್ಳಿರ್ದಂನೆಗಂ ಮಕುಟಬದ್ಧರೆಲ್ಲಂ ನಿರಾಲಂಕಾರರಾಗಿ ಬಂದೋಲಗ ಶಾಲೆಯೊಳಿರೆ ಅರಸಂ ಕಂಡು ಯಿದೇನು ನಿರಾಲಂಕಾರರಾಗಿ ದೇವಾ ನಾಗಕುಮಾರನೊಡನೆ ಜೂಡಾಡಿಯೆಲ್ಲಾ ದ್ರವ್ಯಮಂ ಸೋಲ್ತು ಬಂದೆವೆನೆ ಅರಸಂ ನಾಗಕುಮಾರನಂ ಬರಿಸಿ ತಾನುಮಾತನೊಡನೆ ಜೂಜಾಡಿ ಭಂಡಾರ ಮೊದಲಾದ ದ್ರವ್ಯಮಂ ಸೋಲ್ತು ದೇಶಂಗಳನೊಡ್ಡುವಾಗ ಕುಮಾರನೆಂದಂ ದೇವಾ ಜೂಜೆಮಗೆ ಸಾಲ್ಗುಮೆಂದು ಪೊಡಮಟ್ಟು ತಂನ ಜನನಿಯ ದ್ರವ್ಯಮಂಕೊಂಡರಸನ ದ್ರವ್ಯಮಂ ಮಕುಟಬದ್ಧರ ದ್ರವ್ಯಮಂ ಮಗುಳೆ ಕೊಟ್ಟು ನಿಜ ಜನನಿಯಲ್ಲಿಗೆ ಬಂದು ಸ್ವಹಸ್ತದಿಂದಾಭರಣಂಗಳಂ ಕೊಟ್ಟು ಸುಖದಿಂದಿರಲರಸಂ ಪೊಳಲ ಸಮೀಪದೊಳಾತಂಗೆ ಬೇರೆ ಪೊಳಲಂ ಮಾಡಿಸಿಕೊಟ್ಟು ಸುಖದಿಂ ರಾಜ್ಯಂಗೆಯ್ಯುತ್ತಮಿರ್ದರಿತ್ತಲು

ಸೂರಸೇನಮೆಂಬುದು ಜನಪಮುತ್ತರ ಮಧುರೆಯೆಂಬುದು ಪೊಳಲದನಾಳ್ವಂ ಜಯವರ್ಮನೆಂಬರಸನಾತನ ಮಹಾದೇವಿ ಜಯವತಿಯಂಬಳವರ್ಗೆ ಮಕ್ಕಳು ವ್ಯಾಲಮಹಾವ್ಯಾಲರೆಂಬರಲ್ಲಿಗೊಂದು ದಿವಸಂ ಯಮಧರರೆಂಬಾಚಾರ್ಯರ್ಬಂದಿದ್ದವರಂ ವಂದಿಸಲ್ವೇಡಿ ಜಯವರ್ಮಂ ತಂನ ಮಕ್ಕಳು ವ್ಯಾಲ ಮಹಾವ್ಯಾಲರ್ವೆರಸು ಪೋಗಿ ವಂದಿಸಿ ಧರ್ಮ ಶ್ರವಣಮಂ ಕೇಳ್ದು ಭಟ್ಟಾರಕರಂ ಬೆಸಗೊಂಡನೆನ್ನ ಮಕ್ಕಳು ಕೋಇ ಭಟರುಮಿವರು ಪೆರರ್ಗೆ ಆಳಾಗಿ ಬಾಳ್ವರೊ ತಂಮ ರಾಜ್ಯದೊಳಿರ್ಪರೊ ಪೇಳಿಮೆನಲವರಿಂತೆಂದರು ವ್ಯಾಲನ ನೊಸಲ ಕಂಣುಮಾವನೊರ್ವನ ದೃಷ್ಟಿಯಿಂದದೃಶ್ಯಮಕ್ಕು ಮಾತನೀತಂಗೆ ಸ್ವಾಮಿಯಕ್ಕುಂ ಮಹಾವ್ಯಾಲ ಕಾಮಸಂನಿಭನಂ ಕಂಡಾವಳೊರ್ವಳ್ಖೇಚರೆಮೆಚ್ಚಳಾಕೆಗೆಗಾವ ನೊರ್ವಂ ಭರ್ತಾರನಕ್ಕುಮಾತನೀತಂಗೆ ಸ್ವಾಮಿಯಕ್ಕುಮೆನೆ ವೈರಾಗ್ಯಪರಾಯಣನಾಗಿ ವ್ಯಾಲಂಗೆ ರಾಜ್ಯಮಂಕೊಟ್ಟು ದೀಕ್ಷೆಯಂ ಕೊಂಡವರ್ಗಳು ತಂಮ್ಮ ರಾಜ್ಯಂ ದುಷ್ಟವಾಕ್ಯನೆಂಬ ಮಂತ್ರಿಗೆ ಸಮರ್ಪಿಸಿ ಸ್ವಾಮಿಯಂ ನ್ವೇಷಣಾರ್ಥಂ ಪಾಟಿಳಿಪುರಕ್ಕೆ ಪೋಗಿ ರಾಜಮಂದಿರದ ಸಮೀಪದಂಗಡಿಯೊಳು ಪಧಸ್ರಾಂತರಾಗಿ ಕುಳ್ಳಿರ್ದರಾ ಪೊಳಲನಾಳ್ವಂ ಶ್ರೀವರ್ಮನೆಂಬನಾತನರಸಿ ಶ್ರೀಮತಿ ಯೆಂಬಳವರ ಮಗಳು ಗಣಿಕ ಸೌಂದರಿಯಂನಾಕೆಯ ಕೆಳದಿ ತ್ರಿಪುರೆಯೆಂಬಾಕೆಯವರಂ ಕಂಡು ಪರಿತಂದು ಗಣಿಕ ಸೌಂದರಿಗೆಯಿಂತೆಂದ ಳಿರ್ವರ್ಪುರುಷರಂಗಡಿಯೊಳು ಕಂಡೊರ್ವ ಮಹಾದೇವನಂತೆ ಮೂರು ಕಂಣುಮೊಡೆಯಂ ಮತ್ತೊರ್ವ ರತಿಸಮೀಪದೊಳಿದ್ದ ಕಾಮದೇವನಂತೆದೊಡಾಕೆ ಗವಾಕ್ಷಮಾರ್ಗದಿಂ ಮಹಾವ್ಯಾಲನಂ ನೋಡಿ ಕಾಮಾಸಕ್ತಿಯಾಗಿರ್ದಳಾ ವಾರ್ತೆಯಂ ಶ್ರೀವರ್ಮನರಿದು ಗಣಿಕಸೌಂದರಿಯಂ ವಿವಾಹ ವಿಧಿಯಿಂ ಮಹಾವ್ಯಾಲಂಗೆ ಕೊಟ್ಟನಾಕೆಯ ದಾದಿಯ ಮಗಳಂ ಲಲಿತ ಸೌಂದರಿಯಂ ವ್ಯಾಲಂಗೆ ವಿವಾಹ ವಿಧಿಯಿಂ ಕೊಡೆ

ಇತ್ತ ವಿಜಯಪುರದರಸಂ ಜಿನಶತ್ರುವೆಂಬಂ ಪಾತಲಿಪುರದ ಕಂನೆಯಂ ಬೇಡೆಸುತ್ತ ಕೊಂಡಿರ್ದುದನಾ ಪೊಳಲ ಜನಂಗಳ ಯುದ್ಧ ಸಾಮಗ್ರಿಯಂ ಕಂಡು ವ್ಯಾಲ ಮಹಾವ್ಯಾಲಂಗಿಂತೆಂದಂ ನೀಂ ಪೋಗಿ ಜಿತಶತ್ರುವ ಕೋಟೆಯ ಸುತ್ತಗಳಿದು ಪೋಪಂತಾಗಿ ಬುದ್ಧಿಗಲಿಸಿ ಬರ್ಪುದಕ್ಕೆ ಕೆಳದೊಡದಕ್ಕೆ ತಕ್ಕುದಂ ಮಾಡಿ ಬರ್ಪುದೆನೆಯಂತೆ ಗೆಯ್ವೆನೆಂದು ಸಭೆಯಂ ಪೊಕ್ಕು ಜಿನಶತ್ರುವಿಗೆಯಿಂತೆಂದಂ ಶ್ರೀವರ್ಮನೆಂನಂ ಕಳುಪಿದನೀ ಕೋಂಟೆಯ ಸುತ್ತನಳಿದು ಬೇಗಂ ಪೋಪುದು ಪೋಗದೆಯಪ್ಪಡೆ ನಾ ನಿನಗೆ ತಕ್ಕುದಂ ಮಾಳ್ಪೆನೆಂದನದಂ ಕೇಳ್ದು ಮುಳಿದು ಯೀ ದೂತನಂ ಪಿಂಕಟ್ಟಂ ಕಟ್ಟುವುದಂನೆಗಂ ಆನೆಯ ಕಟ್ಟುವ ಕಂಭಮಂ ಕಿತ್ತುಕೊಂಡದರಿಂ ಯಿದಿರಾಗಿ ಬರ್ಪಭೃತ್ಯರಂ ತೊಲಗಿಸಿ ಅರಸನಂ ಕಟ್ಟಿ ವ್ಯಾಲನ ಮುಂದೆ ತಂದಿರಿಸಲು ವ್ಯಾಲನಾತನಂ ಸೆರೆಯೊಳಿಕ್ಕಿಸಿದನೊಂದು ದಿವಸಂ ವ್ಯಾಲಂ ಮಹಾವ್ಯಾಲಂಗೆ ತಂನ ಮನಮನರುಪಿ ಬೆಳಗಪ್ಪ ಜಾವದೊಳೆರ್ದಾ ಕನಕ ಪುರಕ್ಕಭಿಮುಖನಾಗಿ ಪೊಳಲನೈದುವ ಪ್ರಸ್ತಾವದೊಳು ನಾಗಕುಮಾರಂ ಆನೆಯನೇರಿ ಪರಿಜನಸಮನ್ವಿತನಾಗಿ ಬರ್ಪನಂ ಕಂಡು ಸಮೀಪಕ್ಕೆ ಪೋಪಾಗಳಾತನ ದೃಷ್ಟಿಯಿಂ ವ್ಯಾಲನ ನೊಸಲ ದೃಷ್ಟಿಯದೃಶ್ಯಮಾಗೆ ನೋಳ್ಪ ಜನಂಗಳೆಲ್ಲಂ ಯೆಂದರೀತನ ನೊಸಲ ಕಂಣು ನೋಡೆ ಚೋದ್ಯಮದ್ಯಶ್ಯಮಾದುದೆನೆ ಜನಗಳೆಲ್ಲಾ ನುಡಿವ ನುಡಿಯಂ ಸ್ಪರ್ಶನದಿಂದರಿದು ನಾಗಕುಮಾರಂಗೆ ಪೊಡಮಟ್ಟು ಸೇವಾರ್ಥಿಯಾಗಿ ನಿಂಮ ಸಮೀಪಕ್ಕೆ ಬಂದೆನೆನೆ ಕರಮೊಳ್ಳಿತ್ತಾಯ್ತೆಂದು ಸ್ವಹಸ್ತದಿಂ ತಾಂಬೂಲಮಂ ಕೊಟ್ಟು ಕ್ಷೇಮ ಕುಶಲಮಂ ಕೇಳಿಯರಮನೆಯಂ ಪೊಗುವಾಗಲಾತನ ಮರದು ಮನೆಯಂ ಪೋಗಲಾತಂ ಶ್ರೀದ್ವಾರದೊಳೊರ್ವನೆ ನಿಂದಿರ್ದನಂನೆಗಂ ಶ್ರೀಧರನ ಭೃತ್ಯರೈನೂರ್ವರು ಸಹಸ್ರಭಟರು ಶ್ರೀಧರನಾಜ್ಞೆಯಿಂ ನಾಗಕುಮಾರನ ಮನೆಗೆ ಬರ್ಪುದಂ ಕಂಡು ವ್ಯಾಲ ದ್ವಾರಪಾಲರ ಬೆಸೆಗೊಂಡನೀ ಬಪ್ಪವರಾರು ಕೈದುಗಳಿಂ ಪಿಡಿದುತ್ಸುಕರಾಗಿ ಬಂದಪರೆನೆಯವರೆಂದರೀ ಸಹಸ್ರ ಭಟರು ಶ್ರೀಧರನಾಜ್ಞೆಯಿಂ ನಾಗಕುಮಾರನ ಮೇಲೆ ಬಂದರೆನೆ ಶ್ರೀದ್ವಾರದ ಲಾಳಮುಂಡಿಗೆಯಂ ಕೊಂಡೈನೂರ್ವರಂ ಮೂರ್ಛೆಯನೆಯ್ದಿಸಿದೊಡಾಕ್ರೋಶಮಂ ನಾಗಕುಮಾರಂ ಕೇಳ್ದರಮನೆಯಂ ಪೊರಮಟ್ಟು ಆತನಂ ಪ್ರೋತ್ಸಾಹಿಸಿ – ನಿಂದನಿತ್ತಲು ಶ್ರೀಧರಂ ತಂನ ಪದಾತಿ ಮೂರ್ಛೆಗೆ ಸಂದುದಂ ಕೇಳ್ದು ಮುಳಿದು ಮೇಲೆತ್ತಿ ಬರ್ಪಾಗಳು ಜಯಂಧರ ಮಹಾರಾಜಂ ಕೇಳ್ದು ನಯಂಧರನೆಂಬ ಮಂತ್ರಿಯ ಕರಯಿಸಿ ಅವರ ಯುದ್ಧಮಂ ನಿವಾರಿಸಲ್ಪೇಳ್ದಡೆ ಮಮ್ತ್ರಿಯವರ ಯುದ್ಧಮಂ ನಿವಾರಿಸಿ ಜಯಂ ಧರಂಗಿತೆಂದಂ ದೇವಾ ಪೊಳಲಿಂದಿರ್ವರೊಳೊರ್ವನಂ ಕಳೆವುದಲ್ಲದೊಡೆ ಕಲಹಂ ಕುಂದದೆಂದು ಬಿಂನಪಂಗೆಯ್ದರಸನೆಂದಂ ನೀನರಿವೆ ಯೀರ್ವರೊಳಗೆಯೊರ್ವನಂ ಕಳೆವುದೆನೆ ಮಂತ್ರಿಯಿಂತೆಂದಂ ನಾಗಕುಮಾರಂ ಪೊರಮಡಿಸಿ ಪೊಳಲಿಂ ಪೋಗಲ್ವೇಳ್ದೊಡಾತನುಮಂತೆಗೆಯ್ವೆನೆಂದು ತಂನ ಜನನಿಯ ಸಮೀಪಕ್ಕೆ ಬಂದು ಮಂತ್ರಿ ನುಡಿದುದಂ ಪೇಳ್ದು ತಂನ ಗಮನವರಿಪಿ ತಾಯಿಗೆ ಪೊಡಮಟ್ಟು ಕೆಲವು ದಿವಸಕ್ಕೆ ಉತ್ತರಮಧುರೆಯನೆಯ್ದಿ ದೇವದತ್ತೆಯೆಂಬ ವಿಲಾಸಿನಿಯರ ಮನೆಯೊಳು ಬೀಡಂ ಬಿಟ್ಟು ಭೋಜನ ಕ್ರಿಯೆಯಂ ಮಾಡಿ ಅಂಗಡಿಗೆ ಪೋಪಾಗಳಾ ನಾಗಕುಮಾರಂಗೆ ದೇವದತ್ತೆಯೆಂದಳೀ ಪೊಳಲೊಳಂನ್ಯಾಯಮುಂಟು ತೊಳಲಯವೇಡೆನೆಯದೇ ಕಾರಣಮೆನೆ ದೇವದತ್ತೆಯೆಂದಳು ಉಜ್ಜೇನಿಯಂಬುದು ಪೊಳಲದನ್ವಾಳಂ ಜಯವರ್ಮನೆಂಬರಸಂಗಂ ಗುಣವತಿಗಂ ಪುಟ್ಟದಮಗಳು ಸುಶೀಲೆಯೆಂಬಳಾಕೆಯಂ ಸಿಂಹಪುರದ ಹರಿವರ್ಮಂಗೆ ಕುಡಲು ಪೋಪಾಗಳಾಕೆಯಂ ಬಂಧುವರ್ಮನೆಂಬರಸಂ ಪಿಡಿದು ತಂದಂಗಡಿಯೊಳು ಸೆರಯ ನಿಟ್ಟನಾಕೆಯು ಸುಭಟರ ಕಂಡು ಪುಯ್ಯಲಿಡುವಳದರಿಂ ಪೊಗಲ್ವೇಡೆನೆಯದಂ ನೋಡಲ್ವೇಳ್ಕುಮೆಂದು ಬರ್ಪನಂ ಕಂಡು ಪುಯ್ಯಲಿಡಲದಂ ಕೇಳ್ದಂಜದಿರೆಂದು ಕಾಪಿನವರಂ ತೊಲಗಿಸಿ ಸೆರೆಯಮನೆಯಿಂದಾಕೆಯಂ ಬಿಟ್ಟು ನಾಗಕುಮಾರಂ ಸುಶೀಲೆಗೆ ಕಾಪಿನಾಳ್ವೆರಸು ಸಂಬಳಮಂ ಕೊಟ್ಟು ಹರಿವರ್ಮನಲ್ಲಿಗೆ ಅಟ್ಟೆ ಸುಖದಿನಿರ್ಪಂನೆಗಂ

ಒಂದು ದಿವಸಂ ಬೀಣೆಗಳಂ ಪೆಗಲೊಳಿಟ್ಟು ಪೊರಗೆ ಪೋಪರಂ ಕರಸಿ ನೀವೆತ್ತಣಿಂ ಬಂದಿರಿಯೆತ್ತ ಪೋದಪಿರಿ ನೀನಾರ್ಗೆನೆಯಲ್ಲಿ ಮುಖ್ಯನೋರ್ವನೆಂದಂ ಕಾಶ್ಮೀರಮೆಂಬ ಪೊಳಲನಾಳ್ವಂ ಮಹಾನಂದನೆಂಬರಸನಾತನರಸಿ ಧಾರಿಣಿಯೆಂಬಳ ವರ್ಗೆ ಮಗಳು ತ್ರಿಭುವನ ರತಿಯೆಂಬಳಾಕೆಯೊಡನೆ ವೀಣೆಯಂ ವಾಜಿಸಿ ಸೋಲ್ತು ಬಂದೆವು ಸುಪ್ರತಿಷ್ಠಮೆಂಬುದು ಪೊಳಲು ಅಶೋಕನೆಂಬರಸಂಗೆ ವಿನಯವತಿಗಮಾಂ ಪುಟ್ಟದೆನೆಂನ ಪೆಸರು ಕೀರ್ತಿವರ್ಮನೆಂದು ಪೇಳ್ದೊಡವರ ಕಳುಪಿ ಕೆಲವು ದಿವಸಕ್ಕೆ ತಾನುಮಲ್ಲಿಗೆ ಪೋಗಿಯಾ ಕಂನೆಯ ವೀಣಾವಾದದಿಂ ಗೆಲ್ದು ಮದುವೆ ನಿಂದು ಸುಖದಿನಿರ್ಪಂ

ಅನ್ನೆಗಮೊರ್ವ ಮಹಾಪರದನಾಸ್ಥಾನಕ್ಕೆ ಬಂದಾತನಂ ಕಂಡು ಕುಳ್ಳಿರ್ಪುದುಮಾ ಪರದನಂ ನಾಗಕುಮಾರಂ ಬೆಸಗೊಂಡನೇನಾಮಾಶ್ವರ್ಯಮಂ ಪರದು ಪೋದಲ್ಲಿ ಕಂಡುದುಂಟೆಯೆನೆ ಪರದ ರಮ್ಯಕಮೆಂಬಡವಿಯೊಳು ಭೂತಿಲಕಮೆಂಬ ಬಸದಿಯ ಮುಂದೆ ಮಧ್ಯಾಹ್ನದೊಳೊರ್ವಂ ಪುಯ್ಯಲಿಡುವುದಂ ಕಂಡೆನೆನೆ ಮಾವನ ಪಕ್ಕದೆ ತ್ರಿಭುವನ ರತಿಯನಿರಿಸಿ ಮುನ್ನಿನರ್ವೆರ ಪೊರಮಟ್ಟು ಕೆಲವು ದಿವಸಕ್ಕೆ ರಮ್ಯ ಕವನವನೆಯ್ದಿ ಚೈತ್ಯಾಲಯಮಂ ತ್ರಿಃಪ್ರದಕ್ಷಿಣಂಗೆಯ್ದು ನಿಷಿಧಿಯಿಂದೊಳಗಂ ಪೊಕ್ಕು ಸಾಷ್ಟಾಂಗವೆರಗಿ ಪೊಡಮಟ್ಟು ಸರ್ವಜ್ಞಗಭಿಮುಖನಾಗಿ ಸ್ತವನಂಗಳಿಂತೆಂದು ಪೇಳ್ದಂ –

ವೃ || ಧ್ಯಾನ ಸಮೀರನೊಳ್ತರಲ ಘಾತಿ ಚತುಷ್ಟಯ ನೀಲಮೇಘದಂ
ತಾನಕಮಾವಗಂ ಪ್ರಕಟಮಾದ ನಿಜಾತ್ಮದಿ ದೇಶ ಮಂಡಲಾ
ನೂನ ಮರೀಚಿಯೆಂಬಿನಮನಂತ ಚತುಷ್ಟಯನಪ್ಪ ಮೋಕ್ಷಲ
ಕ್ಷ್ಮೀನಿಧಿಯೆಂಬ ಗೌರವ ತಾಳ್ದಿದೆ ನೀನೆ ವಲಂ ಜಿನೇಶ್ವರಾ || ೧ ||

          ದುರಿತ ವಿಲೇಪಮಂ ಕೆಡಿಸಿ ಪಂಚ ಸಹಸ್ರ ಶರಾಸನಾಂತರಂ
ಬರಮೊಗೆದಂಬರ ಸ್ಥಳಕೆ ಭಾಸುರ ಕೋಟಿ ದಿವಾಕರ ಪ್ರಖ್ಯಾತ
ಸ್ಫುರಿತಮುಮಂ ಪಳಂಚಲೆವಮೆಯ್ವೆಳಗಿಂ ಚತುರಾನನತ್ವದಿಂ
ನಿರುಪಮ ಮೂರ್ತಿಯಾಪರಮಾತ್ಮನೆ ನೀನೆವಲಂ ಜಿನೇಶ್ವರಾ || ೨ ||

          ಜ್ಞಾನಸಮೃದ್ಧನಾಗಿ ವಿವಿಧಾತಿಶಯಾಕರದೇವ ನಿರ್ಮಿತ
ಸ್ಥಾನ ವಿಚಿತ್ರರತ್ನ ಮಯಮಂಟಪ ಮಧ್ಯದ ಸಿಂಹಪೀಠದೊ
ಳ್ದಾನವ ಖೇಚರಾಮರ ಮುನೀಂದ್ರ ಸಭಾಪತಿಯಾಗಿಸಂದ
ನಿ ನ್ನಿರವದ್ಯ ಲಕ್ಷ್ಮಿಯನೇಯಜನ ಪ್ರಣುತಂ ಜಿನೇಶ್ವರಾ || ೩ ||

          ಮದನ ಭುಜಂಗಮಪ್ರಬಲ ಘೋರ ವಿಷಚ್ಛೇದ ದಿವ್ಯಮಂತ್ರಮಾ
ದುದು ಭವಸಾಗರೋತ್ತರಕಾರಣ ರೂಪಮಹಾಬಹಿತ್ರಮಾ
ದುದು ಬಲಮದ್ವಿಮೋಹ ತಿಮಿರ ಪ್ರವಿನಾಶ ರತ್ನದೀಪಮಾ
ದುದು ಭವದೀಯ ದಿವ್ಯ ವಚನತ್ರಯದೊಳ್ಜಿನೇಶ್ವರಾ || ೪ ||

          ಪರಮಜಿನೇಶ ಭಾವದಿನನಂತಗುಣೋತ್ತನಾಗಿ ಘೋರಸಂ
ಸರಣ ಸಮುದ್ರದಿಂ ಪೊರಗೆ ನೀ ನೆಲಸಿರ್ದಪೆ ದೇವ ನಿಂನಗಾ
ದರದೊಳೆ ಕಂಡು ರಾಗಿಸುವ ಭವ್ಯಜನಾಗ್ರಣಿಗಾ ಮಹೋಗ್ರಸಾ
ಗರತಳಮೆಂಬುದಾದಗಘನಂ ಕಡುಸಾರದೊಲಂ ಜಿನೇಶ್ವರಾ || ೫ ||

          ಮನಸಿಜ ದರ್ಪಭಂಜನ ಮನೋರಥ ಸಿದ್ಧಿಯನೀವೆನೆಂಬ ಭಾ
ವನೆ ನಿನಗಿಲ್ಲ ನಿಂನ ಪದಸೇವೆಯೊಳಿರ್ಪ ಜನ ಸುಖೈಕ ಭಾ
ಜನಮೆನಿಕಂ ಸುವರ್ಣಮಯಮಾಗದೆ ಪೊದಿರ್ದ ಲೋಹವರ್ಗಕಾಂ
ಚನತೆಯ ನೀವ ಚಿಂತೆ ಪರುಷಕ್ಕಿನಿತಿಲ್ಲದೊಡಂ ಜಿನೇಶ್ವರಾ || ೬ ||

          ಕಾಮಿತ ವಸ್ತುವಂ ತಣಿವಿನಂ ಕುಡಲಾರ್ಪುದು ಕಾಮಧೇನು ಚಿಂ
ತಾಮಣಿ ಕಲ್ಪವೃಕ್ಷಮೆನುತಂ ಪಲರುಂ ಭ್ರಮೆಗೊಂಡು ಭೋಗಪ್ಪ
ಷ್ಣಾಮಯ ದಾಹದಿಂ ಬರಿಫ
ೆ ಕಾಂಕ್ಷಿಪರನ್ಯರ ಭವ್ಯ ಲೋಕ ರ
ಕ್ಷಾಮಣಿ ಮೈಮೆವೆತ್ತ ನಿಜ ಭಕ್ತಿಯೊ ನಾಮ ಮೊದಲ್ ಜಿನೇಶ್ವರಾ || ೭ ||

          ಅನುಪಮ ರಾಹಮುಧ್ಬವಿಸುಗುಂ ಭವದೀಯ ಸಭಾ ಸಮೀಪ ಮೇ
ದಿನಿಯನೆ ಸಾರ್ದವಂಗೆನೆ ಜಾತ್ರಯ ಬಾಂಧವ ದೇವ ನಿಂ
ನನೆ ಹೃದಯಾಬ್ಜದೊಳ್ತ ಳೆದು ಭಕ್ತಿಯೊದವಿ ನದಿಯಿಂದೆ ತಂ
ಣನೆ ತಣಿದಾತನುತ್ಸವಮನಾನದೆನೆ ಪೊಗಳ್ವೆಂ ಜಿನೇಶ್ವರಾ || ೮ ||

ವ || ಯೆಂದು ನಮಸ್ಕಾರಂಗೆಯ್ದು ಕುಳ್ಳಿರ್ದ ಪ್ರಸ್ತಾವದೊಳು ಪುಯ್ಯಲಿಡುವ ಧ್ವನಿಯಂ ಕೇಳ್ದವನಂ ಕರಸಿ ನೀನಾರ್ಗೆನೆ ಪುಯ್ಯಲಿಡುವಿದೇಕೆಂದೆನೆಯಿಂತೆದನಾಂ ರಮ್ಯಕನೆಂಬ ಬೇಡಂ ತಂನ ಪೆಂಡತಿಯನೊಯ್ದು ಕಾಳುಗೆಯೆಂಬ ಗುಹೆಯೊಳು ಭೀಮರಾಕ್ಷಸನುಭವಿಸುತ್ತಿರ್ದನದು ಕಾರಣದಿ ಪುಯ್ಯಲಿಡುವೆನೆಂದೊಡಾತನಂ ನನಗೆ ತೋರೆಂದೊಡಾತಂಗೆ ನಾನಂಜುವೆನೆಂದು ದೂರದಿಂ ಗುಹೆಯಂ ತೋರಿದೊಡಾ ನಾಗಕುಮಾರನಲ್ಲಿಗೆ ಪೋಗಿ ಪೊಕ್ಕೊಡಾ ಭೀಮರಾಕ್ಷಸನಿದಿರ್ವಂದು ಪೊಡಮಟ್ಟು ಬೆಸನಾವುದೆಂದೊಡೆ ಬೇಡನ ಪೆಂಡತಿಯನೊಪ್ಪಿಸೆಂದೊಡಾಕೆಯನೊಪ್ಪಿಸಿ ಚಂದ್ರಹಾಸ ಖಡ್ಗಮಂ ಶ್ರೀಮಂಚಮಂ ಕಾಮಕರಂಡಮೆಂಬ ಕರಡಗೆಯಂ ಕೊಟ್ಟು ಅಲ್ಲಿಂ ಪೊರಮಟ್ಟು ವ್ಯಾಧನಂ ಬೆಸಗೊಂಡಡೆ ಕಾಂಚನ ಗುಹೆಯಂ ತೋರೆ ನಾಗಕುಮಾರಂ ಅಲ್ಲಿಗೆ ಪೋಗೆ ಸುದರ್ಶನೆಯೆಂಬ ದೇವತೆ ದೇವಾ ಸುವರ್ಣ ಕುಂಭೋದಕದಿಂ ಪಾದ ಪ್ರಕ್ಷಾಲನಂಗೆಯ್ದು ಪೊಡಮಟ್ಟೆಂದಳಾಂ ನಿಂನ ಕಾರಣಮಾಗಿ ನಾಲ್ಸಾ ಸಿರ ವಿದ್ಯೆಗಳಂ ಕಾದಿರ್ದೆನೆಂದೊಡಾತನದೇ ಕಾರಣಮೆನೆ ಸುದರ್ಶನೆಂದಳು –

ಯೀ ಜಂಬೂದ್ವೀಪದ ವಿಜಯಾರ್ಧ ಪರ್ವತದ ದಕ್ಷಿಣ ಶ್ರೇಡಿಯೊಳಳ ಕಾಪುರದೊಳು ವಿದ್ಯುತ್ಪ್ರಭನೆಂಬ ವಿದ್ಯಾಧರ ವಿಮಲ ಪ್ರಭೆಯೆಂಬ ವಿದ್ಯಾಧರಿಗಂ ಜಿತಶತ್ರುವೆಂಬ ಮಗನಾತಂ ಪಂನೆರಡು ವರ್ಷಮಲ್ಲಿರ್ದು ಜಪಹೋಮಂಗಳಂ ಮಾಡಿ ಯಾಕಾಶಗಾಮಿನಿ ಮೊದಲಾದ ನಾಲ್ಸಾಸಿರ ವಿದ್ಯೆಗಳಂ ಸಾಧಿಸಿದನಾದಿವಸದೊಳು ಸಿದ್ಧವೀರನೆಂಬ ಗುಹೆಯೊಳು ಮುನಿಸುವ್ರತ ಭಟ್ಟಾರಕರ್ಗೆ ಕೇವಲಜ್ಞಾನಂ ಪುಟ್ಟಿದಡೆ ದೇವದುಂದುಭಿಗಳೊಳಗೆಯಾಧ್ವನಿಯಂ ಜಿತಶತ್ರು ಕೇಳ್ದವಲೋಕಿನಿ ವಿದ್ಯೆಯಿನದೇನೆಂದರಿದು ಬಾಯೆಂದಟ್ಟಿದೊಡಮರಿದು ತದ್ವೃತ್ತಾಂತಮಂ ಬಂದುಪೇಳ್ದೊಡೆ ಜಿತಶತ್ರುವಲ್ಲಿಗೆ ಪೋಗಿ ವಂದಿಸಿ ದೀಕ್ಷೆಯಂ ಬೇಡಿದೊಡಾವೆಂದೆವೆಂಮ ಸಾಧಿಸಿ ಪಡೆದೆಯೆಂಮಿಂ ಬೆಸಗೆಯ್ಸಿಕೊಂಡುದಿಲ್ಲಮಿಂನಾರ್ಗೆ ಬೆಸಗೆಯ್ವಮೆಂದೊಡಾತಂ ಕೇವಲಿಗಳಂ ಬೆಸಗೊಂಡು ನಮಗಿಂತೆಂದಂ ನೇಮಿಭಟ್ಟಾರಕರ ಕಾಲದೊಳು ನಾಗಕುಮಾರನೆಂಬಾತನುದ್ಭವಿಸುಗುಮಾತನಿಲ್ಲಿಗೆ ಬರ್ಕುಮಾತಂಗೆ ಬೆಸಗೆಯ್ಯಿಮೆಂದು ದೀಕ್ಷೆಯಂ ಕೈಕೊಂಡು ಮುಕ್ತಿಗೆ ಪೋದನಾ ಮುನಿ ಇದು ಕಾರಣವಿಲ್ಲಿರ್ದೆವೆಂದೊಡಾ ನಾಗಕುಮಾನೆಂದಂ ನೀವುಮಿಲ್ಲಿಯೆ ಕಾರ್ಯಪುಟ್ಟೆ ನೆನೆದಾಗಳ್ಪಂನಿಮೆಂದು ಪೇಳ್ದು ಪೋಗಿ ಮತ್ತಮಾ ಬೇಡನ ಬೆಸಗೊಳೆ ಮತ್ತಮಾ ಬಸದಿಯ ವುತ್ತರ ಭಾಗದೊಳು ವೇತಾಳನಂ ತೋರಿದೊಡಲ್ಲಿಗೆ ಪೋಗಿ ಕೃತಿಮಮಂ ದರಿದು ಮದರವೊಯಿಲ್ಗಳಂ ತಪ್ಪಿಸಿ ತೆಗದು ಬಿಳಿತಿಕ್ಕೆಯದರ ಕೆಲದೊಳಿರ್ದ ನಿಧಿರತ್ನಗಳಂ ಕಂಡು ಅದರೊಳಿರ್ದ ಪತ್ರ ಶಾಸನಮಂ ಬಾಜಿಸಿ ನೋಡೆಯದಕ್ಕೆ ವಿದ್ಯೆಯಂ ಕಾಪನಿಕ್ಕಿ ಸಂತೋಷದಿಂ ಬಂದು ವ್ಯಾಲ ಮೊದಲಾದ ಜನಂಗಳಂ ಕಂಡು ರಮ್ಯಕವನದಿಂ ಪೊರಮಟ್ಟು ಗಿರಿಕೂಟ ಪೊಳಲಿಗಿದಿರಾಗಿ ಬರುತ್ತಂ ಆಲದ ಮರನಂ ಕಂಡು ಕುಳ್ಳಿರ್ದನಂಗೆಗಮದರ ಬಿಳಿಲು ಪೊರಮಟ್ಟು ಕೆಳಗಿಳಿದದರಿಂದುಯ್ಯಲಂ ಕಟ್ಟಿ ಯೆಡೆಯಾಡುತಿರ್ಪಂನೆಗೆ ಮಾವೃಕ್ಷಮಂ ಕಾದಿರ್ದಾತಂ ಗಿರಿಕೂಟಕ್ಕೆ ಪರಿತಂದು ವನರಾಜಂಗಂ ವನಮಾಲೆಗಂ ಅರಿಪಿದೊಡೆ ವನರಾಜನಿದಿರ್ವಂದು ಪೊಳಲಂ ಪೊಗಿಸಿ ತಂನರಮನೆಗೊಡಗೊಂಡು ಪೋಗಿ ತಂನ ಮಗಳಂ ಲಕ್ಷ್ಮೀಮತಿಯ ನಾತಂಗೆ ಮದುವೆಯ ಮಾಡಿಕೊಟ್ಟರ್ಪಂನೆಗಂ ನಾಗಕುಮಾರ ಜಯವಿಜಯರೆಂಬ ದಿವ್ಯಜ್ಞಾನಿಗಳಂ ಕಂಡು ಪೊಡಮಟ್ಟುರೆ ಬೆಸಗೊಂಡೆನೀ ವನರಾಜನೆಂಬ ನಾರ್ಗೆಂದೊಡವರೆಂದರು ವನರಾಜಂ ಪುಂಡ್ರವರ್ಧನದರಸಂ ಯೀತನ ಮುತ್ತಯ್ಯನಂ ಸೋಮಪ್ರಭನ ಮುತ್ತಯ್ಯಂ ದಾಯಿಗನಾಗಿ ಪೊಳಲಿಂ ಪೊರಮಡಿಸಿ ಕಲೆದೊಡಡವಿಯಂ ಪೊಕ್ಕು ಗಿರಿಕೂಟ ಪುರಮ ಮಾಡಿರ್ದನೀಗಳಾ ಪೊಳಲ ಸೋಮಪ್ರಭನಾಳ್ವನೆಂದೊಡದಂ ಕೇಳ್ದು ಮುನಿವರರಂ ವಂದಿಸಿ ಮನೆಗೆ ಪೋದನೊಂದು ದಿವಸಂ ವನರಾಜನಂ ಬರೆಯಿಸಿದ ಶಿಲಾಶಾಸನಮಂ ಕಂಡು ಮುನಿವರರು ಬೆಸಸಿದರೆಂದು ಸತೋಷಬಟ್ಟು ವ್ಯಾಲನಂ ಸೋಮಪ್ರಭನಲ್ಲಿಗಟ್ಟಿದೊಡಾತಂ ಪೋಗಿ ಸೋಮಪ್ರಭನಂ ಕಟ್ಟಿ ನಾಗಕುಮಾರಂಗೋಲೆಯ ನಟ್ಟಿದೊಡೆ ಮಾವಂ ಬೆರಸು ಬಂದು ಸೋಮಪ್ರಭನಂ ಬಿಡಿಸಿ ರಾಜ್ಯಮಂ ವನರಾಜಂಗೆ ಕೊಟ್ಟು ಸುಖದಿನಿರ್ದಂ ಸೋಮಪ್ರಭಂ ಪೋಗಿ ಯಮಧರರೆಂಬಾಚಾರ್ಯರ ಪಕ್ಕದೆ ದೀಕ್ಷೆಯಂ ಕೊಂಡು ವಿಹಾರಿಸುತ್ತಿರ್ದನಿತ್ತಲು

ಸುಪ್ರತಿಷ್ಠಮೆಂಬ ಪೊಳಲದನಾಳ್ವಂ ಜಯಮರ್ಮಂಗಂ ಜಯಾವತಿಗಂಪುಟ್ಟಿದ ಮಕ್ಕಳು ಅಚ್ಛೇದ್ಯರಭೇದ್ಯರೆಂಬವರೊಂದು ದಿವಸಂ ಆ ಪೊಳಲಿಗೆ ಪಿಹಿತಾ ಸ್ರವಭಟ್ಟಾರಕರೆಂಬ ದಿವ್ಯಜ್ಞಾನಿಗಳು ಬಂದಡೆ ಜಯವರ್ಮಂ ಸ್ವಪುತ್ರರ್ವೆರಸಿ ಪೋಗಿ ವಂದಿಸಿ ಧರ್ಮಶ್ರವಣಮಂ ಕೇಳ್ದು ಮತ್ತಮಿಂತೆಂದು ಬೆಸಗೊಳೆ ಯೆನ್ನ ಮಕ್ಕಳು ಯೀರ್ವರು ಕೋಟಿಭಟರಿವರ್ಪೆರರ್ಗೆ ಆಳ್ವೆಸನ ಮಾಡುವರೊ ತಂಮ ಪದದೊಳಿಂದು ರಾಜ್ಯಂಗೆಯ್ವರೊಯೆನೆ ಭಟ್ಟಾರಕರೆಂದರ್ಪುಂಡ್ರವರ್ಧನದ ಸೋಮಪ್ರಭನ ನಾವನೊರ್ವಂ ಬಂದು ಪೊರಮಡಿಸಿ ಕಳಗುಮಾತನಿವರ್ಗೆ ಸ್ವಾಮಿಯಕ್ಕುಮೆಂದೊಡೆ ವೈರಾಗ್ಯದಿಂ ಅಚ್ಛೇದ್ಯಂಗೆ ರಾಜ್ಯಮಂ ಕೊಟ್ಟು ಯಮಧರರ ಸಮಕ್ಷದೊಳ್ತಪಮಂ ಕೈಕೊಂಡರಿತ್ತಲಾ ಸೋಮಪ್ರಭ ಮುನಿಯ ಸಮುದಾಯದೊಡನೆ ವಿಹಾರಿ ಸುತ್ತಯಾ ಪೊಳಲ್ಗೆವಂದೊಡಾ ಮುನಿಯ ಕಂಡು ಕೂಸು ಪ್ರಾಯದೊಳೇಕೆ ತಪಂ ಬಟ್ಟಿರೆಂದು ಬೆಸಗೊಂಡೊಡೊರ್ವ ಮುನಿಪತಿಯೆಂದನಿವಂ ಸೋಮಪ್ರಭನೆಂಬ ಪುಂಡ್ರವರ್ಧನದರ ನಿವರಂ ನಾಗಕುಮಾರಂ ಕಳೆದು ವನರಾಜಂಗೆ ರಾಜ್ಯಮಂ ಕೊಟ್ಟಿಡಿವರ್ತ ಪಂಬಟ್ಟರೆಂದು ಪೇಳ್ದಡವರುಂ ಪುಂಡ್ರವರ್ಧನಕ್ಕೆ ಪೋಗಿ ನಾಗಕುಮಾರಂಗಾಳಾದರಲ್ಲಿಂ ನಾಗಕುಮಾರಂ ಪೊರಮಟ್ಟು ಜಾಲಾಂತಿಕಮೆಂಬಡವಿಯ ಪೊಕ್ಕು ಆಲದಮರದ ಕೆಳಗೆ ಕುಳ್ಳಿರ್ದ ಅವಧಿ ಜ್ಞಾನರಂ ಪೊಡಮಟ್ಟು ಬೆಸಗೊಂಡೋಡವರ್ಗೆ ಸ್ವಾಮಿಯಾ ರಕ್ಕುಮೆನಲವರಿಂತೆಂದರು ಜಾಳಾಂತಿಕವನದೊಳುಷವೃಜಕ್ಷದ ಫಲಂಗಳನಾನನೊರ್ವಂ ಪಕ್ವ ಫಲಂಗಳಂ ಕೊಯ್ದು ಮೆಲಗುಮಾತಂ ನಿಮಗೆ ಸ್ವಾಮಿಯಕ್ಕುಮೆನೆ ನಾಗಕುಮಾರಂ ವಿಷ ನಿವಾರಿಯಪ್ಪುದರಿಂ ಮೆಲು ತಿಪ್ಪಂ ಅನೂರ್ವರ್ಸಹಸ್ರ (ಅಯ್ನೂರ್ವರ್ವೀರ) ಭಟರು ಬಂದು ಪೊಡಮಟ್ಟು ದೇವಾ ನೀಂ ಕಾರಣಮಾಗಿ ವಟವೃಕ್ಷಮಂ ಕಾದಿರ್ದೆವೆನೆ ನಾಗಕುಮಾರನದೇಕೆಯನಲವರೆಂದರೆ ಮಗೊರ್ವ ಅವಧಿ ಜ್ಞಾನಿಗಳ್ ಪೇಳ್ದರಾವನೊರ್ನವೀ ವಿಷವೃಕ್ಷದ ಫಲಂಗಳಂ ಮೆಲುಗುಮಾತಂ ನಿಮಗೆ ಸ್ವಾಮಿಯಕ್ಕುಮೆನಲೀ ಮರನಂ ಕಾದಿರ್ದೆವುಮವರು ಪೇಳಿದಭಿಜ್ಜಾನಮಂ ಕಂಡೆವೆನೆ ನೀವು ಸ್ವಾಮಿ ಯಕ್ಕುಮೆನೆ ಲೇಸಾಯ್ತೆಂದು ಸಂತೋಷಂಬಿಟ್ಟು ಅಯ್ನೂರ್ವರ್ವೀರ ಭಟರ್ಗೆ ವಿದ್ಯಮಂ ಕೊಟ್ಟು ಅಲ್ಲಿಂದೆರ್ದ್ದು ಪೋಪಾಗಳಾನ್ತರ ಪಟ್ಟನೆಯ್ದುವಾಗಳಿಲಿಯರಸಂ ಸಿಂಹರಥನೆಂಬನಾತನಿರ್ವಂದು ತಂನರಮನೆಗೊಡಗೊಂಡು ಪೋಗಿ ಮಜ್ಜನ ಭೋಜನಾನಂತರಂ ಕುಳ್ಳಿರ್ಪನೆಗನೋರ್ವನೋಲೆಯಂ ಕೊಂಡು ಬಂದು ಸಿಂಹರಥನ ಮುಂದಿಕ್ಕಿದೊಡಂ ಬಾಜಿಸಿ ಸಿಂಹರಥನೆಂದನೆಂನ ಮಿತ್ರಂಗೆ ಕಾರ್ಯಂ ಪುಟ್ಟಿರ್ದುದಲ್ಲಿಗೆ ಪೋಗಿ ಬರ್ಪಂನೆಗಂ ನೀಮಿಲ್ಲಿ ಸುಖಮಿರ್ಪುದೆನೆ ನಾಗಕುಮಾರನದೆಂತೆಷ್ಟ ಕಾರ್ಯಮೆನೆ ಸಿಂಹರಥನೆಂದಂ ಸೌರಾಷ್ಟ ದೇಶದೊಳು ಗಿರಿನಗರಮೆಂಬುದು ಪೊಳಲದನಾಳ್ವ ಹರಿವರ್ಮನೆಂಬನಾತನ ಭಾರ್ಯೆ ಮೃಗಲೋಚನೆಯೆಂಬಳವರ್ಗೆ ಮಗಳು ಗುಣವತಿಯೆಂಬಳಾಕೆಯಂ ಬೇಡಿ ಸಿಂದುದೇಶದರಸಂ ಚಂಡಪ್ರದ್ಯೋತನೆಂಬನಾ ಪೊಳಲಂ ಸ್ತುತಿಕೊಂಡು ಕಾದುತ್ತಮಿರ್ದನಂ ಹರಿವರ್ಮನೆಂದಂ ಗರ್ಭದೊಳಗಿರ್ದಂತೆ ಸೋದರಳಿಯ ನಾಗಕುಮಾರಂಗೆ ಕೊಟ್ಟಿನಿಂನೀ ಕೂಸಂ ಪೆರರ್ಗೆ ಕೊಡನೆಂದು ಪೇಳ್ದೊಡಂ ಪೋಗದಿರ್ದಪನದು ಕಾರಣ ನಾಂ ಪೋದಪೆನೆಂದೊಡೆ ನಾಗಕುಮಾರನುಂ ಕೂಡೆ ಬರ್ಪುದು ನರಿದು ಜಯ ವಿಜಯ ರೆಂಬರಿರ್ವರ್ಸಾಮಂತರನಿತ್ತ ಬರಲೀಯ್ಸದಿರಿಮೆಂದು ಚಂಡ ಪ್ರದ್ಯೋತನುಂ ಮುಳಿದು ತಾನೊಂದು ಮುಖದೊಳು ಸುಮತಿಯೆಂಬ ಮಂತ್ರಿಯೊಂದು ಮುಖದಿ ನಿಲೆ ಸುಮತಿ ಮಮ್ತ್ರಿಗೆ ವ್ಯಾಲನಂ ವೇಳ್ದಳಿದರವರ್ಗೆ ಸುಭಟರಂ ಪೇಳಲವರ್ತಂ ತಂಮುಖದೊಳಿದಿರಾಗಿ ಅಂತಾಂತರಂ ತಾವೆ ಕಟ್ಟಿ ತಂದೊಪ್ಪಿಸಿ ನಾಗಕುಮಾರಂ ಹರಿವರ್ಮಂಗಟ್ಟಿದೊಡಾತನವರಂ ಸೆರೆಯೊಳಿಕ್ಕಿ ನಾಗಕುಮಾರಂಗಿ ದಿರ್ವಂದು ಪೊಳಲಂ ಪೊಗಿಸಿ ಗುಣವತಿಯಂ ವಿವಾಹ ವಿಧಿಯಂ ಕೊಟ್ಟು ಸುಖದಿನಿರ್ಪರಂನೆಗಂ ನಾಗಕುಮಾರಂ ನೇಮಿ ಭಟ್ಟಾರಕರ ನಿರ್ವಾಣಭೂಮಿಯೂರ್ಜಯಂತ ತೀರ್ಥಮಂ ವಂದಿಸಲ್ಕೆ ಪೋದನಿತ್ತಲಿತ್ಸವವೆಂಬುದು ನಾಡು ಕೌಶಾಂಬಿಯೆಂಬುದು ಪೊಳಲದನಾಳ್ವಂ ಶುಭಶ್ಚಂದ್ರನಾತನರಸಿ ಸುಖಾವತಿಯೆಂಬಳವರ್ಗೆ ಮಕ್ಕಳೇಳ್ವರು ಸ್ವಯಂ ಪ್ರಭೆಸುಪ್ರಭೆಕನಕಪ್ರಭೆಸುವರ್ಣಮಾಲೆ ಆನಂದೆ ಪದ್ಮಶ್ರೀನಾಗತ್ತೆಯೆಂದುಮಿವರ್ ಸುಖಮಿರಲತ್ತ ವಿಜಯಾರ್ಧ ಪರ್ವತದ ದಕ್ಷಿಣ ಶ್ರೇಣಿಯ ರತ್ನಸಂಚಯ ಪುರಮನಾಳ್ವ ಮೇಘವಾಹನನೆಂಬ ವಿದ್ಯಾಧರಂ ಸುಕಂಠ ವಿದ್ಯಾಧರನನೆಬ್ಬಟ್ಟೆ ಬಂದು ಕೌಶಾಂಬಿಯ ಸಮೀಪದೊಳಲಂಘ್ಯ ಪುರಮಂ ಮಾಡಿ ಶುಭಶ್ಚಂದ್ರನ ಮಕ್ಕಳಂ ಮದುವೆ ನಿಲ್ವೆನೆಂದು ಬೇಡಿ ಪಡೆಯದೆ ಸಂಗ್ರಾಮದೊಳಾತನಂ ಕಡಿದಾ ಕಂನೆಯರಂ ಮದುವೆ ನಿಲ್ವೆನೆಂದಡವರೆಂದರಾವನೋರ್ವಂ ಸುಕಂಠನಂ ಕೊಲುವನಾಂತನೆಂಮ ಪತಿಯೆಂದು ಪ್ರತಿಜ್ಞೆಗೆಯ್ದುಮವರಿರ್ಕುವಾ ನಾಗದತ್ತೆ ದೇವ ವಶದಿ ನೋಡಿ ಪೋಗಿ ಕಂತಿಕೆಯರ ದೇಹಾರಮಂ ಪೊಕ್ಕಿರ್ದು ಕುರುಜಾಂಗಣ ದೇಶದೊಳು ಹಸ್ತಿನಾಪುರದೊಳು ಶುಭಶ್ಚಂದ್ರನನುಜ ಅಭಿಶ್ಚಂದ್ರನೆಂಬನಾಕೆಯ ಕಿರಿಯಯ್ಯನಪ್ಪನವನಲ್ಲಿಗೆ ಪೋಗಿ ತಮ್ಮಯ್ಯ ಸತ್ತ ವೃತ್ತಾಂತಮುಮಂ ತಮ್ಮಸೆರೆಯೊಳಿಕ್ಕಿರ್ದುದುಮುಮಂ ಪೇಳ್ದಡವಂ ಕೇಳ್ವು ನಾಗಕುಮಾರಂಗೋಲೆಯನಟ್ಟಿದೊಡಾವೋಲೆಯಂ ಬಾಜಿಸಿ ಗಿರಿನಗರಕ್ಕೆ ಪೋಗಿಯಾಕೆಗೀ ಕಾರ್ಯಮನರುಪಿ ಶುಭಶ್ಚಂದ್ರನ ಪೊಳಲು ಕೌಶಾಂಬಿಗೆ ಪೋಗಿ ಅಭಿಶ್ಚಂದ್ರನು ನಾಗಕುಮಾರನು ಅಲ್ಲಿಗೆ ಬಂದು ಕಂಡನಾ ನಾಗಕುಮಾರ ಸುಕಂಠ ವಿದ್ಯಾಧರಂಗೆ ವೋಲೆಯಂ ಕೊಟ್ಟುಕಂನೆಯರಂ ಬಿಡುವುದೆಂದಟ್ಟಿದಡದಂ ಕೇಲದಿರ್ದೊಡೆ ಕಾದಿಯಾತನಂ ಚಂದ್ರಹಾಸ ಖಳ್ಗದಿಂ ಪೊಯ್ದು ರತ್ನ ಸಂಚಯ ಪತ್ತನದಿಂ ಮೇಘವಾಹನನ ನೋಡಿ ಸುಕಂಠನ ಮಗನಂ ವಜ್ರಕಂಠನಂ ರಾಜ್ಯದೊಳ್ನಿಲಿಸಿ ಶುಭಚಂದ್ರನಮಕ್ಕಳೇಳ್ವರುಮಂ ಅಭಿಚಂದ್ರನ ಮಗಳು ಚಂದ್ರಪ್ರಭೆಯುಮಂ ವಜ್ರಕಂಠನ ತಂಗಿಯಪ್ಪ ರುಗ್ಮಿಣಿಯುವಂ ಮದುವೆ ನಿಂದು ಹಸ್ತಿನಾಪುರದೊಳು ಸುಖದಿಂದಿರ್ದನಿತ್ತಲು ಪಾಂಡ್ಯದೇಶದೊಳು ಮದುರೆಯೆಂಬುದು ಪೊಳಲದನಾಳ್ವಂ ಮೇಘವಾಹನನೆಂಬರಸಂ ಜಯಲಕ್ಷ್ಮಿಯೆಂಬರಸಿ ಯವರ ಮಗಳು ಶ್ರೀಮತಿಯೆಂಬಳಾಕೆಯ ದಾದಿಯ ಮಗಳು ಕಾಮಲತೆಯೆಂಬಳಾಕೆ ಕಾಮದೇವನಾದೊಡಂ ಮೆಚ್ಚಳೆಂಬುದಂ ಮಹಾವ್ಯಾಲಕೇಳ್ದು ಪಾಟಳಿಪುರದಿಂ ಪೊರಮಟ್ಟು ಮದುರೆಗೆ ಬಂದಿರ್ದನಂ ಕಾಮಲತೆ ಕಂಡು ಮೋಹಿಸಿದೊಡಾಕೆಯಂ ಮದುವೆನಿಂದು ಸುಖದಿನಿರ್ದ ನಿತ್ತಲು ಆವಂತಿಯೆಂಬುದು ನಾಡುಮುಜ್ಜೇನಿಯೆಂಬುದು ಪೊಳಲದನಾಳ್ವಂ ಜಯಸೇನನೆಂಬರಸನಾತನರಸಿ ಜಯಶ್ರೀಯೆಂಬಳವರ ಮಗಳು ಮೇನಕಿಯೆಂಬ ಪುರುಷ ದ್ವೇಷಿಣಿಯೆಂಬುದಂ ಕೇಳ್ದು ಮಹಾವ್ಯಾಲಂ ಪೋಗಿ ಅಂಗಡಿಯ ನಡುವೆ ನಿಂದಿರ್ದನಂ ಜನಂಗಳೆಲ್ಲಂ ನೋಡುವಾಗಳು ಮೇನಕಿ (ಕೆ) ಬಂದು ಮೆಚ್ಚದಿರ್ದಳವನರಿದು ಹಸ್ತಿನಾಪುರಕ್ಕೆ ಬಂದು ವ್ಯಾಲನಂಕಡು ತಂನ ಬಂದ ವಾರ್ತೆಯನರಿದು ನಾಗಕುಮಾರನ ರೂಪಂ ಪಟದೊಳು ಬರದುಕೊಂಡುಜ್ಜೇನಿಗೆ ಪೋಗಿಯಾಕೆಗೆ ಪಟಮಂ ತೋರಿ ಮೋಹಿಸಿದುದನರಿದು ಮಗುಳೆ ಬಂದು ವ್ಯಾಲಂ ವೆರಸು ನಾಗಕುಮಾರನಂ ಕಂಡು ಪೊಡಮಟ್ಟಡೀತನಾರ್ಗೆಂದು ಬೆಸಗೊಳೆ ವ್ಯಾಲಂ ನಂನ ತಮ್ಮನುಜ್ಜೇನಿಯಿಂದ ನಿಂಮ ಕಾಣಲು ಬಂದನೆನೆ ಸಂತೋಷಂ ಬಟ್ಟು ಕರಮೊಳ್ಳಿತ್ತಾಯಿತ್ತೆಂದು ಸಂತವಿಟ್ಟು ವೀಳ್ಯಯಮುಂ ಕೊಟ್ಟು ಬಳಿಯಮೊಂದು ದಿವಸಂ ಮೇನಕಿಯ ವಾರ್ತೆಯಂ ಕೇಳಿದೊಡಲ್ಲಿಗೆ ಪೋಗಿ ಮೇನಕಿಯ ಮದುವೆ ನಿಂದಲ್ಲಿ ಬಳಿಯ ಮದುರೆಯ ಮೇಘವಾಹನನ ಮಗಳು ಶ್ರೀಮತಿಯ ನೃತ್ಯದೊಳಾರು ಮೃಂದಂಗಮಂ ಬಾರಿಸಲಾರರದೆಂಬುದಂ ಕೇಳ್ದಲ್ಲಿಗೆ ಪೋಗಿ ಮೃದಂಗ ವಾದ್ಯದಿನಾಕೆಯಂ ಗೆಲ್ದು ಮದುವೆ ನಿಂದು ಸುಖದಿನಿರ್ಪಂನೆಗಂ

ಓರ್ವ ಪರದಂ ಮೇಘವಾಹನನಾಸ್ಥಾನಕ್ಕೆ ಬಂದುದಂ ಕಂಡು ಕೌತುಕಮಂ ಬೆಸಗೊಳೆ ಪರದನೆಂದಂ ಸಮುದ್ರದ ನಡುವೆ ಭೂತಿಲಕಮೆಂಬ ದ್ವೀಪದೊಳು ಪೊಂನ ಬಸದಿಯಮುಂದೈಬೂರ್ವರ್ಕಂನೆಯರು ಮಧ್ಯಾಹ್ನದೊಳು ಪುಯ್ಯಲಿಡುವುದಂ ಕೇಳ್ದೆ ನೆನೆ ನಾಗಕುಮಾರಂ ಕೇಳ್ದು ತಂನ ವಿದ್ಯೆಗಳನ್ನೆಲ್ಲಮಂ ನೆನೆದು ಬರಸಿಯಲ್ಲಿಂ ಪೊರಮಟ್ಟು ಮಾದ್ವೀಪಕ್ಕೆ ಕತಿಪಯ ಪ್ರಯಾಣಂಗಳಂ ಪೋಗಿ ಸುವರ್ಣ ವೈತ್ಯಾಲಯಮನೆಯ್ದಿಶ್ರೀ ಪದಕ್ಷಿಣಂಗೆಯ್ದು ನಿಷಧಿಯಿಂದೊಳಗೆ ಪೊಕ್ಕು ಸಾಷ್ಟಾಂಗವೆರಗಿ ಪೊಡಮಟ್ಟು ಕೈಗಳಂ ಮುಗಿದು ನಿಂದಿರ್ದು

ಕೇವಲ ಬೋಧದಿಂದರಿದು ಪಾತ್ರಮಪಾತ್ರಮೆಂಬ ಭೇದವಂ
ದೇವರದೇವಸಂಚರಮಕ್ಷಯ ಸೌಖ್ಯ ಸುಖಕ್ಕೆ ಸಲ್ವೆನೆ
ಯಾವಳಿಗಿತ್ತು ಪಾತ್ರ ದಿವಿಜೇಂದ್ರನರೇಂದ್ರ ಫಣೀಂದ್ರ ರಾ
ಜೃವಿಭವಂಗಳ ತಳೆದು ನೀಂ ಜಸಮಂ ಜಗದೊಳ್ ಜಿನೇಶ್ವರ || ೧ ||

          ಯಿತ್ತಪೆ ನೀನೆ ದೇಹಗನುರೂಪಮೆನಲ್ ಸುಖದೇಶಮಾಗಿ
ಯತ್ತಲನಂತ ಸೌಖ್ಯಮವಸಾನ ಮೆನಲ್ಪರರಾಡುವರ
ನಿತ್ತ ಪರಂನ್ಯರೆಂಬ ಬಹಿರಂಗ ನಿಮಿತ್ತ ದಿನೆಂಬದೇನರಿ
ದೆತ್ತ ನೀನೆ ಭೋಗಿ ಪೆಸರಂ ಪಡೆದೈ ಜಗದೊಳ್ ಜಿನೇಶ್ವರಾ || ೨ ||

          ಪಗೆ ಕೆಳೆಯೆಂಬ ಭೇದವರಿತಂತಮಲ್ಲಿಗೆ ಗಿಲ್ಲದೆ ತಂಮನಂಟರರ
ರಗೆವಡೆಗೆತ್ತು ಕೊಂದು ಕುಲಿಯಪ್ಪನವರಕ್ಕೆಮ ಘಾಂತಿಕರ್ಮಮು
ಪಗೆವಡೆಯಂ ಪಡಲ್ಪಡಿಸಿಕ್ಕಿದೆ ಕೃತಾಂತನನಿಕ್ಕಿವೀರ ಲಕ್ಷ್ಮೀಗೆನಲ್
ಯಗಮೆಯಿಗಲಿಯೆ ನೀನೆ ವಲಂ ಜಗದೊಳ್ ಜಿನೇಶ್ವರಾ || ೩ ||

          ನನೆಗಣೆಯಂ ಜಗತ್ರಯಮಂದಂಡಲೆದಂಗಭವಂಗಮಂ
ಜನಿಯಿಸಿದೈ ಚರಾಚರರುಮಂತವ ನುಂಗಿದ ಕಾಲದಂಡಶೂಕ
ರನದ ಮಂಕಳಲಿ ಕಳದೈ ಕಡು ಬಲ್ಲಿದನಪ್ಪ ಮೋಹಮ
ಲ್ಲನ ಬಲಗೈಯ್ಯ ಮುರಿದೈ ಕಲಿನೀನೆ ವಲ ಜಿನೇಶ್ವರಾ || ೪ ||

          ನೀರೆಯರುಂ ನತಸ್ತನದ ಭಾರಂಗಳ ಭಾರಮವುಂಕಿ ನೀರೇರಿದ
ರೇರಿನ ರ್ಸೈರರಾಪೀಠ ಮೂರನ್ಯರೊಳಾಪ್ತರೆಂಬಿ ಮಾತೆಂದು
ಭಾರತಿ ಸ್ತನಸಾರಂಗಳ ಭಾರಮನೌಂಕಿ ಸೋಂಕಿ
ನೀರೆರಿದ ಸಿಂಹಪೀಠ ವಿಷ್ಠರಮನೇರಿದೆ ನೀನೆವಲಂ ಜಿನೇಶ್ವರಾ || ೫ ||

ವ || ಯೆಂದು ತ್ರಿಭುವನ ಸ್ವಾಮಿಯ ಪೊಡಮಟ್ಟು ಕುಳ್ಳಿರ್ದಂನೆಗಮೈನೂರ್ವರ್ಕಂನೆ ಯರುಮೊಡನೆ ಬಂದು ದೇವಾ ದಾನವ ಗಂಧರ್ವ ಯಕ್ಷರಾಕ್ಷಸ ಭೂತಿ ಪಿಶಾಚರಿರಾ ವಾಯುವೇಗನೆಂಬನನ್ಯಾಯದಿ ಪಿಡಿದು ಸೆರೆಯಿಟ್ಟನೆಂಬ ಪುಯ್ಯಲಂ ಕೇಳ್ದು ಬರಿಸಿ ಬೆಸಗೊಂಡಲ್ಲಿ ಧರಣಿ ಸುಂದರಿಯೆಂಬ ಕಂನೆಯಿಂತೆಂದಳೂ –

ಪೃಥ್ವೀತಿಲಕಮೆಂಬುದು ದ್ವೀಪಮಲ್ಲಿ ರಕ್ಷಕನೆಂಬ ವಿದ್ಯಾಧರನೆಂಬ ತಂದೆಯಂ ಮಜ್ಜನಕನೊಡಪುಟ್ಟಿದಳ ಮಗ ವಾಯುಮೇಗನೆಂಬನೆಂಮ ಬೇಡಿ ಪಡೆಯದೆ ರಾಕ್ಷಸವಿದ್ಯೆಯ ಸಾಧಿಸಿ ಸಂಗ್ರಾಮದೊಳೆಂಮಯ್ಯನ ಕೊಂದೆಂಮ ಮದುವೆ ನಿಲಲೆಂದಿರ್ದಡಾವೆಂದುಮ ನಿಂನ ತಲೆಯನಾವನೊರ್ವಂ ಕೊಳ್ವನಾತನೆಮಗೆ ಮದುವೆ ನಿಲ್ಕುಮೆಂದು ನುಡಿದಡೆ ಮುಳಿದೆಂಮನೆಂದನಾರು ತಿಂಗಳೊಳಗೆ ಪ್ರತಿಮಲ್ಲನಂ ನೀಂ ತಾರದಿರ್ದೊಡೆ ನಿಮಗೆ ತಕ್ಕುದಂ ಮಾಡುವೆನೆಂದೆಂಮುಮನೆಂಮ ಸಹೋದರರಪ್ಪ ಮಹಾರಾಕ್ಷಸರುಮಂ ಸೆರೆಯೊಳಿಟ್ಟುನದು ಕಾರಣದಿಂದಾಕ್ರೋಶಮೆಂದೊಡಂಜದಿರಿಮೆಂದು ಕಾಪಿನವರಂ ತೊಲಗಿಸಿ ಅಯ್ನೂರ್ವರ್ಕಂನೆಯರಂ ಮದುವೆನಿಂದು ತಂನ ಮೈದುನರ್ಗೆ ರಾಜ್ಯಮಂ ಕೊಟ್ಟರ್ಪಂನೆಗಂ ಆಲದಮರದ ಕೆಳಗಿರ್ದಯ್ನೂರ್ವರ್ಸಹಸ್ರ ಭಟರ್ಬಂದು ಪೊಡಮಟ್ಟು ನಿಂಮ ಭೃತ್ಯರಾವೆನೆಯದೇನು ಕಾರಣಮೆನೆಯವರಿಂತೆಂದರು ಯಮಗೊರ್ವದಿವ್ಯಜ್ಞಾನಿಗಳು ಪೇಳ್ದರೀಯೈನೂರ್ವರ್ಕಂನೆಯರನಾವನೂರ್ವಂ ಮದುವೆ ನಿಲ್ಗುಮಾತಂ ನಿಮಗೆ ಸ್ವಾಮಿಯಕ್ಕುಮನಲು ಅದು ಕಾರಣದಿಂ ಬಂದೆವೆನೆ ಸಂತೋಷಂ ಬಟ್ಟು ವೀಳ್ಯಯಮಂ ಕೊಟ್ಟು ಸಂತವಿಟ್ಟು ಅಲ್ಲಿಂ ಪೊರಮಟ್ಟು ಕಾಂಚಿಪುರಕ್ಕೆ ಬಂದು ಬಳಿಕ್ಕಂ ಕಂಲಿಂಗ ದೇಶದ ದಂತಿಪುರಮಂ ಪೊಕ್ಕು ಚಂದ್ರಗುಪ್ತಂಗಂ ಚಂದ್ರಮತಿಗಂ ಪುಟ್ಟಿದ ಮಗಳು ಮದನ ಮಂಜೂಷೆಯಂ ಮದುವೆನಿಂದು ಆನನ್ತರಂ ಕೊಂಗ ದೇಶದೊಳು ತ್ರಿಲೋಕಮೆಂಬುದು ಪೊಳಲು ವಿಜಯವರ ಭೂಪಾಲಂಗಂ ವಿಜಯಮತಿಗಂ ಪುಟ್ಟಿದ ಮಗಳು ಲಕ್ಷ್ಮೀಮತಿಯಲ್ಲಿಗೆ ಪೋಗಿ ಯಾ ಕಂನೆಯ ಮದುವೆ ನಿಂದು ಪರಸ್ಪರ ಪ್ರೀತಿಯಾಗಿರ್ಪಂನೆಗಮಲ್ಲಿಗೆ ಪಿತಿತಾಸ್ರವ ಭಟ್ಟಾರಕರ್ಬಂದೊಡೆನಾಗಕುಮಾರಂ ಲಕ್ಷ್ಮೀಮತಿವೆರಸು ಪೋಗಿ ಧರ್ಮಶ್ರವಣಮಂ ಕೇಳ್ದು ಮತ್ತಮಿಂತೆಂದು ಬೆಸಗೊಂಡನೀ ಲಕ್ಷ್ಮೀಮತಿಯಂ ಕಂಡೆನಗೆ ಪಿರಿದು ಸ್ನೇಹಮಾದುದಾವ ಕಾರಣಮೆನೆ ಭಟ್ಟಾರಕರಿಂತೆದರು-

ಯೀ ಜಂಬೂದ್ವೀಪದ ಮೇರುವಿನುತ್ತರ ದೆಶೆಯೊಳೈರಾವತ ಕ್ಷೇತ್ರದೊಳವ ವೀತಶೋಕಪುರಮನಾಳ್ವಂ ಮಹೇಂದ್ರ ವಿಕ್ರಮನೆಂಬರಸನಲ್ಲಿ ಧನದತ್ತನೆಂಬ ಪರದಂ ಧನಶ್ರೀಯೆಂಬಳಾತನ ಪೆಂಡತಿಯವರ್ಗೆ ನಾಗದತ್ತನೆಂಬ ಮಗಂ ನೀನಾದೆ ಮತ್ತಲ್ಲಿಯೆ ಸುದತ್ತನೆಂಬ ಪರದಂ ವಸುಮತಿಯೆಂಬಳಾತನ ಭಾರ್ಯೆಯಾ ಯಿರ್ವಗಂ ಮಗಳಾ ಕಾಲದೊಳೀಕೆ ನಾಗವಸುವಾಹನೆಯೆಂಬಳೀಕೆಯಂ ನೀಂ ಮದುವೆನಿಂದು ಸುಖಮಿರಲ್ಲಿಗೆ ಮುನಿಗುಪ್ತ ಭಟ್ಟಾರಕರ್ಬರೆಯವರ ಪಕ್ಕದೆ ನಾಗದತ್ತಂ ಶುಕ್ಲಪಕ್ಷದ ಪಂಚಮಿಯುಪವಾಸಮಂ ಕೈಕೊಂಡು ಮನೆಗೆ ಪೋಗಿ ನಡುವಿರುಳಾದಾಗ ಪಸುವಿನಿಂ ಪಿಡಿಸಿ ಪಟ್ಟಿರ್ದನಂ ಕಂಡು ಪಲವುಗವಾಕ್ಷಂಗಳಂ ಮಾಡಿ ಕಂನಡಿಗಳ ನಿಟ್ಟು ತಾಯಿತಂದೆ ಬಂಧುಗಳೆಲ್ಲಂ ನೆರೆದು ಬೆಳಗಾದುದುಯೆದ್ದು ದೇವರಂ ವಂದಿಸಿ ಪಾಲ್ಗಂಜಿಯಂ ಕುಡಿದು ಶ್ರಮಮಂ ಆರಿಸುವುದೆಂದೊಡೆ ನಾಗದತ್ತನೆಂದಂ ರಾತ್ರಿಯ ಪ್ರಮಾಣಮಂ ನಾನರಿವೆಂ ದೇವ ಗುರುಸಾಕ್ಷಿಯಿಂ ಕೈಕೊಂಡ ವ್ರತಮನಳಿವನಲ್ಲೆಂ ಪಚನಮಸ್ಕಾರಮಂ ಪೇಳಿಮೆಂದಿರ್ದು ಗುರುಸಾಕ್ಷಿಯಿಂ ಕೈಕೊಂಡ ವ್ರತಮನಳಿವನಲ್ಲೆಂ ಪಂಚನಮಸ್ಕಾರಮಂ ಪೇಳಿಮೆಂದಿರ್ದು ಮನದಿಂದೆರಗಿ ಕುಳ್ಳಿರ್ದು

ವೃಂ || ಕೇಳುತ್ತಂ ಪರಮೇಷ್ಠಿ ಮಂತ್ರಪದಮಂ ನಾಸಾಗ್ರದೊಳವ ದೃಷ್ಟಿಯ ನಿರಿಸಿ
ತಳ್ತಿರೆಮೇಗಳಂ ಕರಯುಗಂ ತಾನೇರಿಶಿರಾಗ್ರಮಂ ಮೋನಂಗೊಂಡಿ
ರಲಂತೆ ಕರ್ಮರಿಪುವಂ ಮೆಟ್ಟಕ್ಕಿ ಸಂಗ್ರಾಮದೊಳ್ ಸೋಲಂ
ಕಾಲಗುನ ಸುರೇಂದ್ರ ಪುರಮಂ ತಾನೆಯ್ದಿದಂ ಲೀಲೆಯಿಂ ||

ವ || ಅಲ್ಲಿ ಸೌಧರ್ಮ ಕಲ್ಪದೊಳು ಸೂರ್ಯ ಪ್ರಭ ವಿಮಾನದೊಳಂತ ರ್ಮೂಹೂರ್ತದೊಳಮಳ್ಪಾಸಿ ನೆಡೆಯೊಳು ಪದಿನಾರುವರ್ಷದ ಕುಮಾರನಾಗಿ ಪುಟ್ಟಿ ಅವಧಿ ಜ್ಞಾನದಿನಿಂತೆಂದರಿದು

ಕ || ವೊಂದುಪವಾಸದ ಫಲದಿಂ
ಬಂದೆಂ ಸೌಧರ್ಮಮೆಂಬ ಕಲ್ಪಕ್ಕೀಗಳು
ಮುಂದೆ ಜಯಂಧರ ನೃಪತಿಗೆ
ನಂದನನಾಗಿರ್ದು ಮುಕ್ತಿ ಸುಖಮಂ ಪಡೆವಂ ||

ವ || ಯೆಂದರಿದು ವಿಮಾನಾರೂಢನಾಗಿ ಬಂದು ತಾಯಿ ತಂದೆ ಬಂಧುಗಳೆಲ್ಲರುಮಂ ಬೋಧಿಸಿ ತಂನ ಪೋದಂ ನಾಗವಸುವುಂ ನಿದಾನದಿಂದೆ ತಪಂಗೆಯ್ದು ಸಮಾಧಿಯಿಂ ಮುಡುಪಿ ಸೌಧರ್ಮ ಕಲ್ಪದೊಳಾತಂಗೆ ಮಹಾದೇವಿಯಾಗಿ ಪುಟ್ಟಿರ್ವರುಂ ಪಂಚಪಳಿತೋಪಮಾಯುಷ್ಯಮನುಂಡು ಸ್ವರ್ಗದಿಂ ಬಳಿಸಿ ಬಂದೀಗಳಾತ್ರಿಲೋಕತಿಲಕಪುರದೊಳು ವಿಜಯಂಧರ ಮಹಾ ರಾಜಂಗಂ ವಿಜಯೆ ಯೆಂಬರಸಿಗಂ ಲಕ್ಷ್ಮೀಮತಿಯೆಂಬ ಮಗಳಾಗಿ ನಿನಗೀಗಳು ಪ್ರಾಣವಲ್ಲಭೆಯಾದಳದು ಕಾರಣ ಸ್ನೇಹಸಂಮಂದಮೆಂದು ಪೇಳ್ದಡಂ ಕೇಳ್ದು ಪಂಚಮಿಯ ನೋಂಪಿಯ ಕ್ರಮಮಂ ಬೆಸಸಿಮೆನೆ ಭಟ್ಟಾರಕರೆಂದರಾವುದಾನೊಂದು ನಂದೀಶ್ವರದ ಶುಕ್ಲ ಪಕ್ಷದ ಚವುತಿಯಲ್ಲಿ ದಂತದಾವನ ಸ್ನಾನಾದಿಗಳಂ ಮಾಡಿ ಚತುರ್ವಿಂಶತಿ ತೀರ್ಥಂಕರರಂ ಪೂಜಿಸೂದು ತಾನು ದಾನ ಸಮನ್ವಿತಂ ವುಂಡು ಬಸದಿಗೆ ಪೋಗಿ ಗುರುಗಳ ಸಮಕ್ಷದೊಳು ಚತುರ್ವಿಧಾಹಾರಮಂ ಪ್ರತ್ಯಾಖ್ಯಾನಮಂ ಕೈಕೊಂಡು ಪಂಚಮಿಯೊಳು ಸ್ನಾನಾನುಲೇಪನ ಭೂಷಣಂಗಳಂ ತೊರೆದು ಜಿನೇಶ್ವರಂಗೆ ಯಥಾಶಕ್ತಿಯಿಂದ ಅಭಿಷೇಕ ಪೂಜೆಯಂ ಮಾಡಿ ಮಧ್ಯಾಹ್ನ ಪಗಲಂ ಕಳಿದು ಯಿರುಳು ಪಂಚನಮಸ್ಕಾರಮಂ ಜಪಿಯಿಸುತ್ತುಂ ಭೂಶಯನಂಗೆಯ್ದು ಮರು ದಿವಸಂ ದೇವರಂ ವಂದಿಸಿ ಋಷಿಯರ್ಗೆ ಆಹಾರ ದಾನಮಂ ಕೊಟ್ಟು ತದನಂತರದೊಳು ತಾನು ಮಾಹಾರಮಂ ಕೊಳ್ವುದು ಯಿಪಂಗುಯಿತಿಂಗಳು ತಿಂಗುಳಿಗೊಂದುಪವಾಸಮಂ ಮಾಳ್ಪುದುಮಿಂತುಮಯ್ದು ವರ್ಷಮಯ್ದು ತಿಂಗಳ್ವಂ ಪಿರಿಯ ಪಂಚಮಿನೋಂಪಕ್ರಮಂ ಕಿರಿಯ ಪಂಚಮಿಯ ನೋಂಪಕ್ರಮಂ –

ಆಯ್ದು ತಿಂಗಳಿಗುಜ್ಜವಣೆಯಂ ಮಾಡಲಾರದಂದು ಉಪವಾಸಮಂ ದ್ವಿಗುಣಮಂ ಮಾಳ್ಪುದು ಉಜ್ಜವಣೆಗೆ ಶಕ್ತಿವುಳ್ಳವರು ಅಯ್ದು ಪ್ರತುಮೆಯಂ ಮಾಡಿ ಪ್ರತಿಷ್ಠೆಯಂ ಮಾಡಿಸಿ ಪ್ರಭಾವಲಯಮಯ್ದು ಪರಿವಾಣಮಯ್ದು ಜಯಘಂಟೆಯಯ್ದು ದೀಪಾರತಿ ಧೂಪಘಟಮಂ ಮಾಡಿಸಿ ಕೊಡುವುದು ಆಯ್ದು ಶ್ರೀ ಪಂಚಮಿಯ ಪುಸ್ತಕಮಂ ಬರಸಿ ಠವಣೆಕೋಲು ಕವಳಿಗೆ ಶ್ರುತಪಾವಡೆ ಸಹಿತಮಯ್ವರಾಚಾರ್ಯರ್ಗೆ ಕೊಡುವುದು ಮುನಿ ಸಮುದಾಯಕ್ಕೆ ಔಷಧ ದಾನಮಂ ಆಹಾರದಾನಮಂ ಮಾಡಿ ಅಜ್ಜಿಯರ್ಗೆ ಶ್ರಾವಕರ್ಗೆ ಸ್ವಶಕ್ತಿಯಿಂ ವಸ್ತ್ರಸುವರ್ಣಮಂ ಕೊಡುವುದು ಯಲ್ಲರ್ಗಂ ಆಹಾರದಾನಮಂ ಮಾಳ್ಪುದು ಯಿದು ಉಜ್ಜವಣೆಯ ಕ್ರಮವೆಂದು ಪೇಳೆ ಕೇಳ್ದು ಸಂತೋಷಂಬಟ್ಟು ಭಟ್ಟಾರಕರಂ ವಂದಿಸಿ ನಾಗಕುಮಾರ ತ್ರಿಲೋಕ ತಿಲಕಮೆಂಬ ಪೊಳಲಂ ಪೊಕ್ಕು ಸುಖದಿನಿರ್ಪನೆಗಂ ಯಿತ್ತಲು ಜಯಂಧರ ಮಹಾರಾಜನುಂ ಪೃಥ್ವೀಮಹಾದೇವಿಯಂ ನಯಂಧರನೆಂಬ ಮಂತ್ರಿಯಂ ಕರೆದು ಕಂಡುದೇ ಪೊತ್ತಾಗಿ ನಾಗಕುಮಾರನನೊಡಗೊಂಡು ಬರ್ಪುದೆಂದೊಡಾತಂ ಬಂದು ನಾಗಕುಮಾರನಂ ಕಂಡು ಪೊಡಮಟ್ಟು ತಾಯಂ ತಂದೆಯಮನಟ್ಟಿದ ಕ್ರಮಮೆಲ್ಲಮಂ ಪೇಳ್ದೊಡಗೊಂಡು ಪೋಪಂನೆಗಮಿತ್ತಲು –

ವಿಶಾಲನೇತ್ರೆಯೂ ಶ್ರೀಧರನೂ ನಾಗಕುಮಾರಂ ಬಂದಪನೆಂದು ಕೇಳ್ದುಂ ಜಯಂಧರ ಮಹಾರಾಜಂಗೆ ತಮಗಾಗದುದನರಿಲ್ಪದು ದೇಶಾಂತರಂ ಪೋಗಿ ತಪಂ ಬಟ್ಟರು ಯಿತ್ತಲು ನಾಗಕುಮಾರಂ ವಿದ್ಯಾವಿಗುರ್ವಣೆಯಿಂದೊಂದು ಯೋಜನ ಪ್ರಮಾಣಂಬರಂ ಚತುರಂಗ ಬಲಮಂ ವಿಗುರ್ವಿಸಿ ವ್ಯಾಲಂವೆರಸು ನೀಲಗಿರಿಯೆಂಬಾನೆಯನೇರಿ ಅಚ್ಛೇದ್ಯ ವ್ಯಾಲ ಮಹಾವ್ಯಾಲಾದಿಗಳಂ ವೇಷ್ಟಿಸಿ ಬರ್ಪಾಗಳು ಜಯಮ್ಧರ ಮಹಾರಾಜಂ ಪುರದೊಳಷ್ಟ ಶೋಭೆಯಂ ಮಾಡಿಸಿ ಪೃಥ್ವಿಮಹಾದೇವಿ ವೆರಸು ತಾನಿಸಿರ್ಪೋಗಿ ಮಗನಂ ಕಂಡಪ್ಪಿಕೊಂಡು ಪೊಡಮಟ್ಟಾತನಂ ಪರಸಿ ಪೊಳಲು ಪೊಕ್ಕು ಸುಖದಿನಿರ್ದನಿತ್ತಲು –

ನಾಗಕುಮಾರಂ ತಾನುಂ ಮದುವೆನಿಂದ ಸ್ತ್ರೀಜನಂಗಳೆಲ್ಲರುಂ ಶಯ್ಯಾನಿಮೇಶ ಕರಂಡಕಂಗಳೆಲ್ಲಮಂ ತಂನ ವಿದ್ಯಗಳಿಂ ಬರೆಸಿ ಸುಖಮಿರಲೊಂದು ದಿವಸಂ ಜಯುಂಧರ ಮಹಾರಾಜಂ ವೊಡ್ಡೋಲಗಂ ಗೊಟ್ಟಿ ಸುಖಸಂಕಥಾ ವಿನೋದದೊಳಿರ್ದು ಕಂನಡಿಯೊಳ್ತಂನ ತಂನ ಮೊಗಮಂ ನೋಡುತ್ತಂ ಕೆಂನೆಯನೆರೆಯಂ ಕಂಡು ವೈರಾಗ್ಯಮಂ ಭಾವಿಸಿ ನಾಗಕುಮಾರಂಗೆ ರಾಜ್ಯಮಂ ಪತ್ತುವಿಟ್ಟು ಅಚ್ಯುತ ಕಲ್ಪದೊಳು ದೇವನಾದಂ ಅಭೇದ್ಯರ್ಗೆ ಕೌಶಲದೇಶ ಮಾಳವದೇಶಮಂ ಕೊಟ್ಟು ಮಹಾವ್ಯಾಲಂಗೆ ಗೌಳವೈದರ್ಭಮಂ ಕೊಟ್ಟು ಸಹಸ್ರಭಟರ್ಗೆಲ್ಲಂ ತಂಮತಂಮ ದೇಶಮಂ ಕೊಟ್ಟು ಅಂತಃಪುರ ಜನಂಗಳ್ಗೆ ಗ್ರಾಮಂಗಳಂ ಕೊಟ್ಟು ಲಕ್ಷ್ಮೀಮತಿ ಧರಣಿಸೌಂದರಿ ತ್ರಿಭುವನರತಿ ಗುಣವತಿಯೆಂಬೀ ನಾಲ್ವರ್ಗಂ ಮಹಾದೇವಿ ಪಟ್ಟಂಗಟ್ಟಿ ಧರ್ಮಕಥೆಗಳ ಕೇಳುತ್ತಂ ಮುನಿಜನಂಗಳಿಗಾಹಾರದಾನಂ ಮಾಡುತ್ತಂ ದುಷ್ಟರಂ ನಿವಾರಿಸುತ್ತಂ ಶಿಷ್ಟರಂ ಪ್ರತಿಪಾಲಿಸುತ್ತಂ ಜಿನರಂ ಪೂಜಿಸುತ್ತಂ ಮುನಿವರರನರ್ಚಿಸುತ್ತಂ ಜಿನಧರ್ಮ ಪ್ರಭಾವಮಂ ಪ್ರಕಟಮಂ ಮಾಡುತ್ತಂ ಕಂದುಕಕ್ರೀಡೆ ಮೊದಲಾದ ಕ್ರೀಡೆಯನರ್ತಿಸುತ್ತಂ ಅಂನೆಗಂ ಲಕ್ಷ್ಮೀಮತಿ ಮಹಾದೇವಿಗಂ ದೇವ ಕುಮಾರಂ ಪುಟ್ಟಿ ಬೆಳೆವುತ್ತಮಿರ್ದಲ್ಲಿ ನಾಗಕುಮಾರಗೆ ಮಕುಟಬದ್ಧರೆಣ್ಫಾಸಿರ ಅಂತಃಪುರಸ್ತ್ರೀಯರೆಣ್ಫಾಸಿರ ಅಂತು ರಾಜ್ಯಂಗೆಯ್ಯುತಮೊಂದು ದಿವಸಂ ಸಪ್ತತಲ ಪ್ರಸಾದದೊಳಿರ್ದು ದಿಶಾವಲೋಕನಂ ಗೆಯ್ಯುತ್ತಂ ಸಹಸ್ರಕೂಟ ಸಂಕಾಶಮಪ್ಪಭ್ರಮಂ ಕಂಡು ಪಲಗೆಯೊಳು ರೇಖೆಯಂ ತೆಗೆದು ಮಗುಳ್ದು ನೋಡುವಾಗಳಿಲ್ಲದುದಂ ಕಂಡು ವೈರಾಗ್ಯಂ ಪುಟ್ಟಿ ದೇವಕುಮಾರಗೆ ರಾಜ್ಯಮಂ ಕೊಟ್ಟು ವಿಮಳಮತಿಗಳೆಂಬ ಕೇವಳಿಗಳ ಪಕ್ಕದೊಳು ವ್ಯಾಲ ಮೊದಲಾದ ಪರಿಜನಂಗಳ್ವೆರಸು ಪೋಗಿ ದೀಕ್ಷೆಯಂ ಕೈಕೊಂಡು ಲಕ್ಷ್ಮೀಮತಿ ಮೊದಲಾದರಸಿಯರು ಪದ್ಮಶ್ರೀ ಕಮ್ತಿಯರ ಪಕ್ಕದಿ ದೀಕ್ಷೆಯಂಗೊಂಡು ನಾಗಕುಮಾರಂಗೆ ಕುಮಾರ ಕಾಲಂ ೭೦ ವರ್ಷಂ ಛದ್ಮಸ್ಥಕಾಲಂ ೬೪ ವರ್ಷ ರಾಜ್ಯಕಾಲಂ ೮೦೦ ವರ್ಷಂ ಕೇವಳಿ ವಿಹಾರ ಕಾಲಂ ೬೬ ವರ್ಷಂ ಯಿಂತೀ ವರ್ಷಂ ಆಯುಷ್ಯ ೧೦೦೦ ವರ್ಷಂ ತದನಂತರಂ ಅಷ್ಟಾಪದ ಪರ್ವತದೊಳು ಶುಕ್ಲಧ್ಯಾನದಿಂ ಕರ್ಮನಿರ್ಮೂಲನಂ ಮಾಡಿ ನಾಗಕುಮಾರಂ ವ್ಯಾಲಮಹಾವ್ಯಾಲಂ ಅಚ್ಛೇದ್ಯ ಅಭೇದ್ಯರ್ಮೊದಲಾದವರ್ ಮೋಕ್ಷಕ್ಕೆ ಪೋದರು –

ವುಳಿದವರ್ಸಹಸ್ರ ಭಟರುಂ ಸೌಧರ್ಮ ಕಲ್ಪದೊಳ್ಪುಟ್ಟಿದರುಂ ಲಕ್ಷ್ಮೀಮತಿ ಮಹಾದೇವಿ ಮೊದಲಾದ ದೇವಿಯರುಮಾ ಕಲ್ಪದೊಳ್ಪುಟ್ಟಿದರೆಂದು ಗೌತಮ ಗಣಧರ ಸ್ವಾಮಿಗಳು ನಾಗಕುಮಾರನ ಕಥೆಯಂ ಪೇಳೆ ಕೇಳ್ದು ಶ್ರೇಣಿಕ ಮಹಾರಾಜಂ ಗೌತಮಸ್ವಾಮಿಗಳಂ ವಂದಿಸಿ ಚೇಳಿನಿಮಹಾದೇವಿವೆರಸು ರಾಜಗೃಹಮಂ ಪೊಕ್ಕು ಸುಖದಿಂ ರಾಜ್ಯಂಗೆಯ್ಯುತ್ತಮಿರ್ದಂ

ವೃ || ವೊಂದುಪವಾಸಮಿರ್ದು ಸಿರಿಪಂಚಮಿಯೊಳ್ ಶ್ರಮಮಾಗೆ ರಾತ್ರಿಯೊಳ್
ನಿಂದು ಸಮಾಧಿಯಿಂ ಮೊದಲ ಕಲ್ಪಮನೆಯ್ದಿ ಬಳಿಕ್ಕಮತ್ತಣಿಂ
ಬಂದು ಜಯಂಧರಂಗೆ ಮಗನಾಗಿ ಸುಖಂಗಳೆಯ್ದಿದೀಕ್ಷೆಯೊಳ್
ನಿಂದಘವೈರಿಯಂ ಕೆಡಿಸಿ ಮುಕ್ತಿಯನೆಯ್ದಿದಂಗೆ ಬೇಳ್ಪುದುಂ ||

          ಕಂ || ನಾಗಕುಮಾರನ ಕಥೆಯಂ
ಬೇಗಂ ಕಡುಜಡರಮರಿಯೆ ವನಿತಾಜನಮುಂ
ರಾಗದಿನಶೇಷ ವಿದ್ಯಾ
ಭಾಗಿನಿ ಶ್ರೀಮಲ್ಲಿಷೇಣ ಮುನಿಪಂ ಪೇಳ್ದಂ ||

ಶ್ರೀ ಶ್ರೀ ಯೀಂತೀ ನೋಂಪಿಯಂ ನೋಂತವರ್ಗಂ ನೋನಿಸಿದವರ್ಗಂ ಕೇಳ್ದವರ್ಗಂ ಪೇಳ್ದವರ್ಗಂ ಸ್ವರ್ಗ ಮೋಕ್ಷಂಗಳಪ್ಪುವೂ || ಮಂಗಳ ಮಹಾಶ್ರೀ ಶ್ರೀ ಶ್ರೀ