ಶ್ರೀ ವೀತರಾಗಾಯನಮಃ ||
ಶ್ರೀ ರಮಣಿಗೆ ಪದಯುಗ ವಾಕ್
ಶ್ರೀರಮಣಿಗೆ ವದನ್ದ.. ನಜ.. ವೆ ಮುಕ್ತಿ
ಶ್ರೀ ರಮಣಿಗೀಶನೆನಿಸಿದ
ವೀರಜಿನಪ ಕುಡುಗೆ ನಮಗೆ ಪಿರಿದುನ್ನತಿಯಂ ||

          ಅನು ಮಿಷಪತಿನುತನೆನಿಸಿದ
ಸನುಮತಿ ಜಿನನಾಥನ ಮಳಭರಣಂಗಳ್ಗಾಂ
ವಿನಮಿತನಾಗಿಯೆ ಪೇಳ್ಷೆಂ
ಅನುಪಮ ಮಿಗಿಲರಳ ನೋಂಪಿಯಂ ಕಂನಡದಿಂ ||

|| ವ || ಅದೆಂತೆಂದೊಡೀ ಜಂಬೂದ್ವೀಪದ ಭರತ ಕ್ಷೇತ್ರದೊಳ್ಮಗಧೆಯೆಂಬುದು ನಾಉ ರಾಜಗೃಹಮೆಂಬುದು ಪೊಳಲದನಾಳ್ವಂ ಶ್ರೇಣಿಕ ಮಹಾರಾಯನಾತನ ಪಟ್ಟದರಸಿ ಚೇಳಿನಿ ಮಹಾದೇವಿಯೆಂಬಳಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ | ವೈಶ್ಯಕುಲ ಕಮಳ ಮಾರ್ತ್ತಂಡನುಂ | ಜಿನಸಮಯ ವಾರ್ದ್ಧಿವರ್ದ್ಧನ | ಸುಧಾಕರರುಂ | ಆಹಾರಾಭಯ ಭೈಷಜ್ಯ ಶಾಸ್ತ್ರದಾನ ವಿನೋದಿಯುಂ | ಅಗಂಣ್ಯ ಪುಣ್ಯೋದಯನುಂ | ಜೈನ ಜನಬಾಂಧವನುಂ | ಕೀರ್ತಿ ಕಾನ್ತಾಮನೋಜನುಮಪ್ಪ ಜಯವರ್ಮ್ಮ ಸೆಟ್ಟಿಯೆಂಬನಾತನ ಭಾರ್ಯ್ಯೆ ಜಯಶ್ರೀಯೆಂಬಳಾ ಯರ್ವ್ವಂಗ್ಗಂ ರೂಪವತಿಯೆಂಬ ಮಗಳ್ಪುಟ್ಟಿ | ಶೈಶವಮಂ ಷತ್ತುವಿಡಲಾ ಜಯವರ್ಮ್ಮಂ ಜಿನ ಮಂದಿರದೊಳು ಶ್ರೀಮತಿಗಂತಿಯರ ಸಮೀಪದೊಳೋದಲಿಟ್ಟೊಡೋದುತ್ತಮಿರಲ್ಸಮ್ಯಕ್ತ ದೃಢ ವ್ರತೆಯಾಗಿ | ಸಕಳ ಶಾಸ್ತ್ರ ಪರಿಣತೆ ಯಾಗಿರ್ಪ್ಪುದುಮೊಂದು ದಿವಸಂ ಚೈತ್ಯಾಲಯದೊಳ್ನೋನುತ್ತಮಿರ್ದ್ದ ಶ್ರಾವಕ ಜನಂಗಳಂ ಕಂಡು | ರೂಪಾವತಿ ಹರುಷ ಚಿತ್ತೆಯಾಗಿ | ಭಕ್ತಿಪೂರ್ವಕದಿಂ ಕರಕಮಳಂಗಳಂ ಮುಗಿದು | ಅಜ್ಜಿಯರ್ಗ್ಗೆ ವಂದನೆಯಂ ಮಾಡಿ | ಅವ್ವಗಳೆ ಯಿದಾವ ನೋಂಪಿಯದರ ಪೆಸರೇನೆಂಬುದುಂ | ಶ್ರೀಮತಿ ಗಂತಿಯರು ಯಿಂತೆಂದರು | ಯಿದು ಮಿಗಿಲರಳ ನೋಂಪಿಯೆಂಬುದು ಯೀ ನೋಂಪಿಯ ವಿಧಾನಮೆಂತೆನೆ | ಅಜ್ಜಿಯರಿಂತೆಂದು ಪೇಳ್ದರಾಷಾಢ ಶುದ್ಧ ಪೌರ್ಣಮಿಯೊಳು ದಮ್ತಧಾವನಂಗೆಯ್ದು ಮಿಂದು ಧೌತದ ವಸ್ತ್ರಮನುಟ್ಟು ಚೈತ್ಯಾಲಯಕ್ಕೆ ಪೋಗಿ ಜಿನೇಶ್ವರಂಗಭಿಷೇಕ ಪೂಜೆಯಂ ಮಾಡಿಸಿ ಸುಗಂಧ ಮಿಶ್ರಜಲದಿಂ ಗಂಧೋದಕ ಮಂ ಮಾಡಿಸಿವ್ಯಾರ್ಚ್ಚನೆಗಳಿಂದರ್ಚ್ಚಿಸಿ ತದನಂತರಂ ದೇವರ ಮುಂದೈದು ಪಿಡಿಯಕ್ಕಿಯಂ ಪುಂಜಿಸಿ ಅಯ್ದು ನಿವಾಳಿಯಂ ನಿವಾಳಿಸೂದು | ಪದಿಮೂಱು ಪುಷ್ಪಮಂ ತೀರ್ತ್ಥಕರ ಪೆಸರ್ಗ್ಗೊಂಉ ಅರ್ಚ್ಚಿಸೂದು | ವಂದನೆಯಂ ಮಾಳ್ಪುದು | ಯಿದು ನೋಂಪಿಯ ವಿಧಾನಮೀ ಕ್ರಮದಿಂ ನಾಲ್ಕು ತಿಂಗಳುವರಂ ಪ್ರತಿದಿವಸಂ ನೋನುತ ದೇವರ್ಗ್ಗೆ ಶ್ರುತಕ್ಕೆ ಗುರುಗಳ್ಗೆ ಅಜ್ಜಿಕೆಯರ್ಗ್ಗೆ ವಂದನೆಯಂ ಮಾಳ್ಪುದು || ನೋಂಪಿಯ ಉದ್ಯಾಪನೆಯ ಕ್ರಮಮೆಂತೆಂದೊಡೆ ಮುಂಪೇಳ್ದ ಕ್ರಮದಿಂ ಚೈತ್ಯಾಲಯಕ್ಕೆ ಪೋಗಿ ಜಿನೇಶ್ವರಂಗೆ ಸವಿಸ್ತರಂ ಮಹಾಭಿಷೇಕ ಪೂಜೆಯಂ ಮಾಡಿಸಿ ಪಂಚ ಭಕ್ಷ ಚರುವನಿಡುಉದು | ಯಥಾಶಕ್ತಿಯಿಂ ಸುವರ್ನ್ನದ ಪುಷ್ಪಮಂ ಮಾಡಿಸಿ ಶೃತದ ಮುಂದರ್ಚ್ಚಿಸೂದು | ಹದಿಮೂಱಡಕೆ ಹದಿಮೂಱೆಲೆಯಿನರ್ಚ್ಛಿಸೂದು ಹದಿಮೂಱು ಫಲಮನರ್ಚ್ಚಿಸೂದು | ಶ್ರುತಗುರು ಪೂಜೆಯಂ ಮಾಡಿ ನೋನಿಸಿದವರ್ಗ್ಗುಡೆ ಕೊಡುಉದು | ಕಥೆಯಂ ಕೇಳ್ದು ಕಥಕಂಗೆ ದಕ್ಷಿಣೆಯ ಸಹಿತ ಬಾಯಿನಮಂ ಕೊಡುಉದು | ಚಾತುರ್ವ್ವರ್ನ್ನಕ್ಕೆ ಚತುರ್ವ್ವಿಧ ದಾನಮಂ ಮಾಳ್ಪುದು | ಯಿದುಜ್ಜವಣೆಯಕ್ರಮಮೆಂದು ಪೇಳೆ ಕೇಳ್ದು ರೂಪಾವತಿ ನೋಂಪಿಯಂ ಕೈಕೊಂಡು | ನೋನುತ್ತ ಮಿರಲಾಕೆಯಂ ಲೋಕಮೆಲ್ಲಂ ದೇವರ್ಗ್ಗೊಂದರಳಮಿಗಿಲನರ್ಚ್ಚಿಸಿದಳೆಂಬ ಪ್ರಖ್ಯಾತಿಯಿಂ ಕೊಂಡಾಡುತ್ತಮಿರೆ || ಯಿತ್ತ ಪಂಚಾಳ ದೇಶದ ಲಲಿತ ಪುರದಮನಾಳ್ವಂ ರಾಜಶೇಖರನೆಂಬರಸನಾತನರಸಿ ಕುಸುಮಾವಳಿಯೆಂಬಳವರೀರ್ವ್ವರ್ಗ್ಗೆ ರೂಪ ಕಮ್ದರ್ಪ್ಪನೆಂಬ ಕುಮಾರಂ ಪುಟ್ಟಿರಲಾ ಕುಮಾರಂ ರೂಪಾವತಿಯ ರೂಪಾತಿಶಯಮಂ ಕೇಳ್ದು | ಕಿವಿವೇಟಂಗೊಂಡಿರಲಾ ರಾಜಶೇಖರ ಮಹಾಮಂಡಲೇಶ್ವರಂ ರೂಪಕಮ್ದರ್ಪ್ಪಂಗೆ ವಿವಾಹ ಕಲ್ಯಾಣಂ ಮಾಡಲ್ವೇಡಿ ದೇವ ಕಾಂತೆಯರ್ಗ್ಗೆ ಸಮಾನೆಯರೆನಿಪ ರಾಜಸುತೆಯರಂ ತರಿಸಿ ತೋಱಿಸಿದೊಡಾರುಮಂ ಮೆಚ್ಚದಿರ್ಪ್ಪುದುಮದನಱಿದಂ | ದಾನಾರ್ತ್ಥಿ ರೂಪವತಿಯ ರೂಪಂ ಚಿತ್ರಪಟಮಂ ನಿಮಿರ್ಚ್ಛಿ ನೋಡುತ್ತಿರ್ಪ್ಪುದುಂ | ಬಲಗೆಲದ ಹೇಮಾಸನದೊಳಿರ್ದ್ದ ರೂಪಕಂದರ್ಪಂ ಕಾಣಲು | ಸೋಲ್ತು ನೋಡುತ್ತಿರೆ | ಆತನ ಮನಮನಱಿದು ರಾಜಶೇಖರನಿದಾರ ಪಟಮೆಂದು ಬೆಸಗೊಳ್ವುದುಂ ಮಗಧ ವಿಷಯದ | ರಾಜ ಗೃಹದ ರಾಜಶ್ರೇಷ್ಟಿ ಜಯವರ್ಮ್ಮನ ತನೂಭವೆಯಪ್ಪ ರೂಪಾವತಿಯ ಪಟಮೆಂಬುದು ಮಾತಂಗಭೀಷ್ಟಾರ್ತ್ಥ ಸಿದ್ಧಿಯಂ ಮಾಡಿ ತಂದ ನಂತರಂ ಜಯವರ್ಮ್ಮ ಶ್ರೇಷ್ಠಿಗುಪಾಯನ ಪುರಸ್ಪರಂ ಪ್ರಧಾನರಂ ಕಳುಪಲವರ್ಬ್ಬಂದು ಸೆಟ್ಟಿಗೆ ಪೊಡೆವಟ್ಟು | ತಂಮ ತಂದುಪಾಯನಂಗಳಂ ಕೊಟ್ಟು | ಬಂದ ವೃತ್ತಾಂತಮಂ ಬಿಂನಪಂಗೆಯ್ದು ಪ್ರಾರ್ತ್ಥನಾ ಪೂರ್ವ್ವಕಂ ರೂಪವತಿಯಂ ಬೇಡಿ ಲಬ್ಧಕಾರ್ಯ್ಯರಾಗಿ | ಶ್ರೇಷ್ಟಿ ಮಾಡಿಸಿದ ಮಜ್ಜನ ಭೋಜನ ವಸ್ತ್ರಾಭರಣಂಗಳ್ಮೊದಲಾದ ಸನ್ಮಾನಂಗಳಿಂ ಸಂತುಷ್ಟರಾಗಿ ಕಳುಹಿಸಿಕೊಂಡು ಬಂದ ವೃತ್ತಾಂತಮನರಸಂಗೆ ಬಿಂನಪಂಗೆಯ್ಯೆ ರೂಪ ಕಂದರ್ಪ್ಪಂ ಪರಿಜನ ಪುರಜನ ಸಹಿತಂ | ರಾಜಗೃಹಮಂ ಪೊಕ್ಕು ರೂಪ ಕಂದರ್ಪ್ಪಗಂ ರೂಪಾವತಿಗಂ ಜಯವರ್ಮ್ಮ ಸೆಟ್ಟಿ ಮಹಾ ವಿಭವದಿಂ ಮದುವೆಯಂ ಮಾಡಿ ಅನೇಕ ವಸ್ತು ವಾಹನಂಗಳು ಬಳುವಳಿಗೊಟ್ಟು ಮದುವೆಯಂ ಕಳಿಪಿದೊಡರ್ಬ್ಬಂದು ಶುಭದಿನ ಮುಹೂರ್ತ್ತದೊಳ್ಪರಮನರಮನೆಯಂ ಪೊಕ್ಕು ಸುಖದಿಂದಿರಲೊಂದು ದಿವಸಂ ರಾಜಶೇಖರಂ ಭೋಗ ವಿರಕ್ತನಾಗಿ ರೂಪ ಕಂದರ್ಪ್ಪಂಗೆ ಸಾಂಮ್ರಾಜ್ಯ ಪಟ್ಟಮಂ ಕಟ್ಟಿ ಜಿನದೀಕ್ಷೆಯಂ ಕೈಕೊಂಡು ತಪಸ್ಥನಾದನಿತ್ತಲು | ರೂಪಾವತಿಗೆ ಪಟ್ಟಮಹಾದೇವಿ ಪದಮಂ ಕೊಟ್ಟು ರಾಜ್ಯಂ ಗೆಯ್ಯುತ್ತಮಿರ್ದ್ದು ರೂಪಾವತಿ ಮಹಾದೇವಿ ಶ್ರೀಮತಿ ಗಂತಿಯರು ಪೇಳ್ದ ಕ್ರಮದಿಂ ಮಿಗಿಲರಳ ನೋಂಪಿಯಂ ಮಹೋತ್ಸವದಿಂ ನೋಂತು | ಕುಸುಮಶರ ಸಂನಿಭರಪ್ಪ ಪಲಂಬರರಸು ಮಕ್ಕಳಂ ಪಡೆದು ಸಾಂಮ್ರಾಜ್ಯ ಸುಖಾಮೃತ ರಸದೊಳೋಲಾಡುತ್ತಮಿರ್ರ್ದಳಂತು | ಯೀ ನೋಂಪಿಯಂ ಭಕ್ತಿ ಪೂರ್ವ್ವಕಂ ನೋಂತುಜ್ಜವಣೆಯಂ ಮಾಡಿದರ್ಗ್ಗೆ ಧನಧಾನ್ಯಸಮೃದ್ಧಿಯುಂ | ಪುತ್ರಮಿತ್ರ ಸಂತೋಷಮುಂ | ಪಿರಿದಪ್ಪಾಯುಷ್ಯಮುಂ | ಪುರುಷರೊಲುಮೆಯುಂ | ಸಕಲ ಬಂಧು ಜನಂಗಳ ಪೆರ್ಚ್ಚುಗೆಯುಂ ಕೂಡಿ ಸುಖದಿಂದಿರುತಿರ್ಕ್ಕುಂ

|| ಕಂ || ರಿಂತಿದನತ್ಯಾನಂದದಿ
ನೋಂತವರುಂ ಬರೆವ ಕೇಳ್ವ ಬಾಜಿಸುವವರುಂ
ಸಂತತಮಭ್ಯುದಯ ಶ್ರೀ
ಕಾನ್ತೆಗೆ ಪತಿಯಪ್ಪರಮಳ ಬೋಧರೆನಿಪ್ಪರೂ ||

ಯಿಂತೀ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಮಂಗಳ ಮಹಾಶ್ರೀ