|| ಶ್ರೀ ವೀತರಾಗಾಯನಮಃ ||

          ಶ್ರೀ ವಾಸು ಪೂಜ್ಯ ಜಿನಪನ
ಪದ ಕಮಲಕ್ಕೆಱಗಿ ತಾನು ಭಕ್ತಿಯ ಭರದಿಂ |
ಭೂವಳಯಕಱಿಯೆ ಪೇಳ್ವೆಂ
ಭಾವಿಪ ಮುಕ್ತಾವಳಿ ವಿಧಾನಮನೊಲವಿಂ ||

|| ವ || ಅದೆಂತೊಡೆ ಯೀ ಜಂಬೂದ್ವೀಪದ ಭರತ ಕ್ಷೇತ್ರದ ಮಗಧ ದೇಶದ ರಾಜಗೃಹನಗರದಧಿಪಂ ಶ್ರೇಣಿಕನೆಂಬನಾತನರಸಿ ಚೇಳಿನಿಯೆಂಬಳು | ಅಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ | ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ | ವನಪಾಲಕನನೇಕ ಪುಷ್ಪಫಲಂಗಳಂ ಕೊಂಡು ಬಂದು ಕಾಣಿಕೆಯಂ ಕೊಟ್ಟು | ದೇವಾ ಬಿಂನಪಮೆಂದಿಂತೆಂದಂ ನಂಮ ಪಟ್ಟಣದ ಬಹಿರ್ಭಾಗದ ವಿಪುಳಚಳಾದೊಳು || ಶ್ರೀ ವೀರವರ್ಧಮಾನ ಸ್ವಾಮಿಯ ಸಮವಸರಣಂ ಬಂದು ನೆಲಸಿರ್ದ್ದುದೆಂದು ಬಿಂನವಿಸೆ ಕೇಳ್ದಾ ದೆಶೆಗೇಳಡಿಯಂ ನಡದು ಬಂದು ಸಾಷ್ಟಾಂಗವೆಱಗಿ ಪೊಡಮಟ್ಟು ಸಮಸ್ತ ಪರಿಜನ ಪುರಜನಂ ಬಂಧು ಜನಂಗಳ್ವೆರಸು ಬಂದು | ಹರುಷೋತ್ಕರುಷ ಚಿತ್ತನಾಗಿ ಆನಂದ ಭೇರಿಯಂ ಪೊಯಿಸಿ ರುಷಿ ನಿವೇದಕಂಗಂಗ ಚಿತ್ತಮನಿತ್ತು ಚೇಳಿನಿ ಮಹಾದೇವಿಯುಂ ತಾನುಂ ಸಮಸ್ತ ಭವ್ಯಜನಂಹಳ್ವೆರಸು ಪೋಗಿ | ದೂರಾಂತರದೊಳು ವಾಹನಂಗಳನಿಳಿದು ಪಾದ ಮಾರ್ಗ್ಗದಿಂ ಸಮವಸರಣಂ ಪೊಕ್ಕು | ಗಂಧ ಕುಟಿಯಂ ತ್ರಿಃಪ್ರದಕ್ಷಿಣಗೆಯ್ದುವೊಳಗಂ ಪೊಕ್ಕು ತ್ರಿಭುವನ ಸ್ವಾಮಿಯಪ್ಪ ಶ್ರೀ ವರ್ದ್ಧಮಾನ ತೀರ್ತ್ಥೆಶ್ವರಂಗಭಿಮುಖನಾಗಿ ವಂದಿಸಿ | ಅಷ್ಟವಿಧಾರ್ಚ್ಚನೆಯಿಂದರ್ಚ್ಚಿಸಿ ಸ್ತುತಿಶತಸಹ್ರಂಗಳಿಂ ಸ್ತುತಿಯಿಸಿ ವಂದಿಸಿ ತದನಂತರಂ ಗೌತಮಗಣಧರರ್ಮ್ಮೊದಮಾದ ರುಷಿ ಸಮುದಾಯಮಂ ಪರಿವಿಡಿಯಿಂ ವಂದಿಸಿ ಮನುಷ್ಯಕೋಷ್ಟದೊಳ್ಕುಳ್ಳಿರ್ದ್ದು ನಿರ್ಮಲ ಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ತದನಂತರಂ ಚೇಳಿನಿ ಮಹಾದೇವಿ ಗಣಧರ ಪರಮೇಷ್ಠಿಗಳ್ಗೆ ಕರಕಮಲಗಳಂ ಮುಗಿದು ಬಿಂನಪಮೆಂದಿಂತೆಂದಳೆಲೆಸ್ವಾಮಿ ಶ್ರೀ ವಾಸುಪೂಜ್ಯ ತೀರ್ತ್ಥಕರ ಗಣಧರರಪ್ಪ ಪದ್ಮರಥಮುನಿಗಳ ಭವಾವಳಿಯನವರ ಪುಣ್ಯಾತಿಶಯಮಂ ಬೆಸಸಿಮೆನಲವರಿಂತೆಂದರು ಮುಕ್ತಾವಳಿಯ ವಿಧಾನಮಂ ಮಾಡಿ ಪಡೆದರದೆಂತೆಂದೊಡೆ ಜಂಬೂದ್ವೀಪದ ಪೂರ್ವ್ವ ವಿದೇಹದ ಕಚ್ಛವಿಷಯದ ವಿಜಯಾರ್ದ್ದ ಪರ್ವ್ವತದುತ್ತರ ಶ್ರೇಢಿಯ ರಥನೂಪುರ ಚಕ್ರವಾಳ ಪುರಮನಾಳ್ವಂ ಯಶೋಧರ ಮಹಾರಾಜನಾತನರಸಿ ವಿಜಯಾವತಿಯೆಂಬಳವರ ಪುರೋಹಿತಂ ಸುಗತಿಯೆಂಬನಾತನರಸಿ ಮದನವೇಗೆ ಯೆಂಬಳವರ ಮಗಂ ವಿಶಾಖದತ್ತನೆಂಬನಾಪುರದೊಳು ಮತ್ತಮೊರ್ವ್ವ ಬ್ರಾಹ್ಮಣಂ ವಿಷ್ಣುವೆಂಬನಾತನ ಪೆಂಡತಿ ಮಧುಮುಖಿಯೆಂಬಳವರ್ಗ್ಗೆ ಕಾಮಸೇನೆಯೆಂಬ ಮಗಳಾಗೆ ಆಕೆಯಂ ವಿಶಾಖದತ್ತಂ ಮದುವೆನಿಂದು ವೊಂದು ದಿವಸಂ | ಚೈತ್ರಮಾಸದೊಳಂ ವನಯಾತ್ರೆಗೆ ಕಾಮಸೇನೆವೆರಸು ಸಮಸ್ತ ಪರಿವಾರಂ ಸಹಿತಂ ಸೋಮದತ್ತಂ ಪೋಗುತ್ತಂ | ಮರ್ಗ್ಗದೊಳು ಉಅಶೋಭದ್ರರೆಂಬ ಮುನಿಗಳಂ ಕಂಡು ಕಾಮಸೇನೆ ಮಿಥ್ಯಾತ್ವಮದದಿಂ ಮುನಿ ನಿಂದೆಯಂ ಮಾಡಿದ ಪಾಪದ ಫಲದಿಂದಾಯುಷ್ಯಾವಸಾನದೊಳು ಕಾಮಸೇನೆ ಸತ್ತಾಱನೆಯ ನರಕದೊಳು ಯಿಪ್ಪತ್ತೆರಡು ಸಾಗರೋಪಮ ಕಾಲಂಬರಂ ನರಕ ದುಃಖಮನುಂಡು ಅಲ್ಲಿಂದ ಬಂದು ಪುಷ್ಕರಾರ್ದ್ಧ ದ್ವೀಪದ | ಪೂರ್ವ್ವ ಮಮ್ದರದ ಭರತಕ್ಷೇತ್ರದಯೋಧ್ಯಾಪುರದರಸಂ ಶ್ರೀವರ್ಮ್ಮನಾತನರಸಿ ಲಕ್ಷ್ಮೀಮತಿಯೆಂಬಳಂತವರ ಸೆಜ್ಜೆವಾಳದ ಬ್ರಾಹ್ಮಣಂ ಕಪಿಲನೆಂಬನಾತನ ಪೆಂಡತಿ ಸುಪ್ರಭೆಯೆಂಬಳಿವರ್ಗ್ಗೆ ಕಾಮಸೇನಾಚರಿ ಮಗಳಾಗಿ ಪುಟ್ಟುವುದುಂ | ಆಕೆ ದುರ್ಗ್ಗಂಧಮಪ್ಪ ತೊಂನಾಗಿ ಆಕೆಯು ಮಾತಾಪಿತೃಗಳು ಮೊದಲಾದವರುಗಳೆಲ್ಲ ಕಾಲಮನೆಯ್ದಲಾಕೆಯಂ ಸಕಹುತ್ತಿರ್ದ್ದ ಮುತ್ತಬ್ಬೆ ಕುಷ್ಟ ನಿಮಿತ್ತಂ ಅರಣ್ಯಕ್ಕೆ ಪೋಗಿ ನಾಭಿಗಿರಿಯೊಳಾಕೆಯಂ ಪಾವು ತಿನೆ ತಾ ಮತ್ತಂ ನಾಭಿಗಿರಿಯಂ ಪೊಕ್ಕು ನೊಳ್ಪಂನೆಗಮಾ ಪರ್ವ್ವತದಲ್ಲಿ ಮನೋಗಮ್ಯಗುಪ್ತರೆಂಬ ಮುನಿಗಳಂ ಕಂಡು ಕರ್ಮ್ಮೋಪಶಮದಿಂ ಕಂನೆಯಂ ಮಾಡಿ ಯೆಲೆ ಸ್ವಾಮಿಪೂರ್ವದೊಳಾವ ಪಾಪಮಂ ಮಾಡಿಯಿಂತಪ್ಪ ದುಃಖಕ್ಕೆ ಭಾಜನೆಯಾದೆನೆನಲು | ಮುನಿನಿಂದೆಯಂ ಮಾಡಿದ ಪಾಪದ ಫಲದಿಂ ದುಃಖಮಾಯ್ತೆನಲು | ಆ ಪಾಪ ಪರಿಹಾರಾರ್ತ್ಥಮಪ್ಪುದಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರಿತೆಂದರೂ || ಮುಕ್ತಾವಳಿಯ ನೋಂಪಿಯಂ ನೋನಲುಮದಱ ವಿಧಾನಮಂ ಬೆಸಸಿ ಮೆನಲಿಂತೆಂದರು | ಭಾದ್ರಪದ ಮಾಸದ ಶುಕ್ಲಪಕ್ಷದ ಸಪ್ತಮಿಯ ದಿನದಉಪವಾಸಮಂ ಮಾಡುವುದು ಮಾಡುವುದು ನಿರ್ವ್ವಾಣಮೆಂಬ ಪೆಸರುನುಳ್ಳದು ನಿರ್ವ್ವಾಣ ಸಿದ್ಧಿಫಲಮಕ್ಕುಂ || ೧ || ಆ ಮಾಸದ ಕೃಷ್ಣಪಕ್ಷದ ಷಷ್ಟಿಯಂದುಪವಾಸಮಂ ಮಾಳ್ಪುದು ಆದಿತ್ಯ ಪ್ರಭೆಯೆಂಬ ಪೆಸರನುಳ್ಳದು ಸಹಸ್ರ ಪಲ್ಯದ ಫಲಮಕ್ಕುಂ || ೨ || ಆ ಕೃಷ್ಣಪಕ್ಷದ ತ್ರಯೋದಶಿಯಂದು ಉಪವಾಸಮಂ ಮಾಡುವುದು ಚಂದ್ರಪ್ರಭಯೆಂಬ ಪೇಸರನುಳ್ಲದು | ವೊಂದು ಪಲ್ಯದ ಫಲಮಕ್ಕುಂ || ೩ || ಅಶ್ವಯಿಜಮಾಸದ ಶುಕ್ಲಪಕ್ಷದ ಯೇಕಾದಶಿಯಂದು ಉಪವಾಸಮಂ ಮಾಡುವುದು ಕುಮಾರ ಸಂಭವಮೆಂಬ ಪೆಸರ ನುಳ್ಳುದು ಸಹಸ್ರಪಲ್ಯಮಕ್ಕುಂ || ಆ ಮಾಸದ ಕೃಷ್ಣಪಕ್ಷದ ದ್ವಾದಶಿಯಂದು ಉಪವಾಸಮಮ್ ಮಾಡುವುದು | ಸರ್ವ್ವಾರ್ತ್ಥ ಸಿದ್ಧಿಯೆಂಬ ಪೆಸರನುಳ್ಳುದು ಸರ್ವ್ವಾರ್ತ್ಥಸಿದ್ಧಿಯ ಫಲಮಕ್ಕುಂ || ೫೨ || ಕಾರ್ತ್ತಿಕ ಮಾಸದ ಶುಕ್ಲ ಕೃಷ್ಣಪಕ್ಷದ ತದಿಗೆಯಂದುಪವಾಸಮಂ ಮಾಡುಉದುಂ ನಂದೀಶ್ವರಮೆಂಬ ಪೆಸರನುಳ್ಳುದು ಸಹಸ್ರ ಪಲ್ಯದ ಫಲಮಕ್ಕುಂ || ಕಾರ್ತ್ತಿಕಮಾಸದ ಶುಕ್ಲಪಕ್ಷದ ಯೇಕಾದಶಿಯಂದು ಉಪವಾಸಮಂ ಮಾಡುಉದು ಪ್ರಾತಿಹಾರ್ಯ್ಯ ಮೆಂಬ ಪೆಸರನುಳ್ಳುದು | ಪ್ರಾತಿಹಾರ್ಯ್ಯಮೆಂಬ ಫಲಮಕ್ಕುಂ | ಆ ಮಾಸದ ಕೃಷ್ಣಪಕ್ಷದ ಯೇಕಾದಶಿಯಂದು ಉಪವಾಸಮಂ ಮಾಡುಉದು ಜಿನೇಂದ್ರ ಧ್ವಜಮೆಂಬ ಪೆಸರನುಳ್ಳುದು ಕೋಟಿಪಲ್ಯದ ಫಲಮಕ್ಕು || ೮ || ಮಾರ್ಗ್ಗಶಿರಮಾಸದ ಶುಕ್ಲ ಪಕ್ಷದ ತದಿಗೆಯಂದು ಪವಾಸಮಂ ಮಾಳ್ಪುದು | ಅನಂತಕರಮೆಂಬ ಪೆಸರನುಳ್ಳುದು ಅಸಂಖ್ಯಾತ ಫಲಮಕ್ಕುಂ || ೯ || ಯಿಂತು ನಾಲ್ಕು ತಿಂಗಳಿಗೆ ವೊಂಬತ್ತು ಉಪವಾಸಮಂ ಮಾಳ್ಪುದು ಆ ಉಪವಾಸದ ದಿನದೊಳು ಅರ್ಹತ್ಪರಮೇಶ್ವರಂಗೆ ಪಂಚಾಮೃತಾಭಿಷೇಕ ಪೂಜೆಯಂ ಮಾಡಿ ಆ ಪ್ರತುಮೆಯ ಮುಂದೆ ೯ ಜಲಧಾರೆರ್ಗಂಧ ತಿಲಕ ೯ ಅಕ್ಷತೆಯ ಪುಂಜ ೯ ತೆಱದ ಪುಷ್ಪತೆಱದ ಭಕ್ಷ ೯ ದೂಪ ೯ ತೆಱದ ಫಲ ೯ ಅಡಕೆ ೯ ಎರ್ಲೆ ಅರ್ಗ್ಘ್ಯಶಾಂತಿಧಾರೆಯ ಕೊಟ್ಟು ಶ್ರುತಮಂ ಗುರುಗಳುಮಂ ಪೂಜಿಸುಉದು | ಕಥೆಯಂ ಕೇಳುಉದು | ಈ ಕ್ರಮದಿಂ ೯ ವರುಷಂ ಬರಂ ನೋಂಪುದು | ಉದ್ಯಾಪನೆಯ ಮಾಳ್ಪಕ್ರಮ ಆದಿದೇವರ ಪ್ರತುಮೆಯಂ ಮಾಡಿಸಿ ಪ್ರತಿಷ್ಟಾ ವಿಧಾನದಿಂ ಮಹಾಭಿಷೇಕ ಪೂಜೆಯಂ ಮಾಡಿಸಿ ವೊಂಬತ್ತು ತಂಡ ರುಷಿಯರ್ಗ್ಗೆ ತಟ್ಟು ಕುಂಚ ಕಮಂಡಲ ಠವಣೆ ಕೋಲು ಪುಸ್ತಕ ಶ್ರುತಪಾವಡೆ ಕವಳಿಗೆ ಸಹಿತಂ ಕೊಟ್ಟು ಶ್ರುತ ಪೂಜೆಯಂ ಮಾಡುಉದು | ವೊಂಬತ್ತು ತಂಡ ಅಜ್ಜಿಯರ್ಗ್ಗೆ ಚರಿಗೆಯಂ ಮಾಡಿಸಿ ಉಡ ಕೊಡುವುದು | ದೇವರಿಗೆ ವೊಂಬತ್ತು ಪ್ರಕಾರದಬ್ ಉಪಕರಣಂಗಳಂ ಮಾಡಿಸಿ ಕೊಡುಉದು ಚಾತುರ್ವರ್ಣ್ಣಕ್ಕೆ ಚತುರ್ವ್ವಿಧ ದಾನಮಂ ಮಾಡೂದು | ಬಡವರೊಡೆಯರೆಂನದೆ ಯಥಾ ಶಕ್ತಿಯಂ ಭಕ್ತಿಪೂರ್ವಕಂ ಮಾಳ್ಪುದೆಂದು ಮುನಿನಾಥಂ ಪೇಳೆ ದುರ್ಗ್ಗಂಧಿ ಕೇಳಿ ಯೀ ಮುಕ್ತಾವಳಿಯ ನೋಂಪಿಯಂ ಕೈಕೊಂಡು ನೋಂತು ಉದ್ಯಾಪನೆಯಂ ತಂನ ಶಕ್ತಿಯಿಂ ಭಕ್ತಿಪೂರ್ವಕಂ ಮಾಡಿದ ಫಲದಿಂ ತಂನ ಶರೀರದ ರೋಗಂಗಳೆಲ್ಲಂ ಪಿಂಗಿ | ಆಯುರಂತ್ಯದೊಳ್ಮುಡಿಪಿ ಸೌಧರ್ಮ್ಮ ಕಲ್ಪದೊಳು ದೇವನಾಗಿ ಪುಟ್ಟಿ ಯೆರಡು ಸಾಗರೋಪಮ ಕಾಲಂ ದೇವಲೋಕದ ಸುಖಮನನುಭವಿಸಿ | ಬಂದೀ ಜಂಬೂದ್ವೀಪದ ಭರತಕ್ಷೇತ್ರದ ವಿದೇಹ ದೇಶದ ಮಿಥುಳಾ ಪುರದರಸಂ ಪೃಥ್ವಿಪಾಳನೆಂಬಾತನರಸಿ ಪೃಥ್ವಿಸೇನೆಯೆಂಬಳಾ ಈರ್ವ್ವರ್ಗ್ಗಮಾ ದೇವಂ ಪದ್ಮರಥನೆಂಬ ಮಗನಾಗಿ ಪುಟ್ಟಿ ರಾಜ್ಯದೊಳ್ನಿಂದು ವೊಂದು ದಿವಸಂ ಚತುರಂಗ ಬಲಂ ಬೆರಸು ಮಹಾರಣ್ಯಕ್ಕೆ ಪೋಗಿ | ಆನೆಗಳಂ ಪಿಡಿಯಲೆಂದು ಬೀಡು ಬಿಟ್ಟಿರ್ದ್ದಲ್ಲಿ ತೊಳಲುತ್ತಿರಲು ಮಹಾಪರ್ವತದ ಗುಹೆಯೊಳು ತೇಜೊವೃದ್ಧಿ ಪ್ರಾಪ್ತರೆಂಬ ಮುನಿಗಳ ಪ್ರಭಾವದಿಂ ಹುಲಿ ಹುಲ್ಲೆ ಮೊದಲಾದವನ್ಯೋನ್ಯ ಜಾತಿ ತಂತಂಮ ವೈರಂಗಳಂ ಬಿಟ್ಟು | ಉಪಶಮ ಭಾವದಿಂದಿರ್ದ್ದವಂ ಕಂಡು ಪದ್ಮರಥನಾಶ್ಚರ್ಯ್ಯಂಬಟ್ಟು ಮುನಿಗಳಂ ಕಂಡು ವಂದನೆಯಂ ಮಾಡಿ ಕುಳ್ಳಿರ್ದ್ದು ಅವರ ಶರೀರದ ತೇಜಸ್ವಿನಿಂದಾ ಗುಹೆಯ ಕತ್ತೆಲೆ ಸರಿದುದಂ ಕಂಡು ಆಶ್ಚರ್ಯ್ಯಂಬಟ್ಟು ಪದ್ಮರಥಂ ಕೇಳ್ವುದುಂ | ಅವರಿಂತೆಂದರು | ಅಂಗದೇಶದ ಚಂಪಾಪುರದಲ್ಲಿ ಶ್ರೀ ವಾಸುಪೂಜ್ಯ ಮುನಿಗಳಿರ್ದ್ದಪರವರ ನಂಮಅಂತರಮಂ ನೋಡಲು ಮೇರುವಿನ ಬಳಿಯ ಸಾಸವೆಯಂತರಂ | ಸೂರ್ಯನುಂ ಮಿಂಚುಪುಳುವಿನಂತರಮೆಂದು ಪೇಳಲ್ವಿಸ್ಮಯಂಬಟ್ಟು ತಂನ ಪುರಕ್ಕೆ ಪೋಗಿ ಮಱುದಿವಸಂ ಶ್ರೀ ವಾಸುಪೂಜ್ಯ ತೀರ್ತ್ಥಕರವಂದನೆಗೆ ಪೋದ | ಮೊದಲಾ ಪ್ರಸ್ತಾವದೊಳು ಧನ್ವಂತರಿ ವಿಶ್ವಾನು ಲೋಮನೆಂಬ ಯಿರ್ವ್ವರು ದೇವರ್ಕ್ಕಳು ಪದ್ಮರಥನ ದೃಢಭಕ್ತಿಯಂ ನೋಳ್ಪ ಕಾರಣದಿಂ | ಪುರದ ದಾರವಟ್ಟಂ ಬೀಳ್ವುದು ಪಟ್ಟಣಂ ಮೊದಲಾಗಿ ಬೇವುದಂ ಮಾಡಲಾ ಮಂತ್ರಿಗಳೆಲ್ಲಂ ಅಪಶಕುನಂಗಳಾದವೆಂದು ಮಾಣಿಸಲು ಮಾಣದೆ ಶ್ರೀ ವಾಸುಪೂಜ್ಯಾಯ ನಮಃ ಯೆಂದು ಮುಂದಕೆ ನಡಉದುಂ ಮುಂದೆ ಸರ್ಪ್ಪಂ ಕಡಿ ಖಂಡಮಾಗಿಪ್ಪುದುಂ ದಾರಾವರ್ತ್ತಮಪ್ಪ ಮಳೆಯಾಗಿ ಮಾರ್ಗ್ಗಂ ಪಿರಿದಪ್ಪ ಕೆಸಱಾಗಿ ತಾನೇಱಿದ್ದಾನೆ ಮುಳುಗುವಂತೆ ಮಾಡಲದೇನುಮಂ ಲೆಕ್ಕಿಸದೆ ಶ್ರೀ ವಾಸುಪೂಜ್ಯಾಯನಮಂ ಯೆಂದು ತಾನೇಱಿದಾನೆಯಂ ನಡಸಲು ಆ ದೇವರ್ಕ್ಕಳು ಮೆಚ್ಚಿ ಗಗನ ಮಾರ್ಗ್ಗದಿಂದಿಳಿದು ಪ್ರತ್ಯಕ್ಷರಾಗಿ ಸರ್ವ್ವ ವ್ಯಾಧಿಹರಮಪ್ಪ ಹಾರಮಂ ಯೋಜನ ಘೋಷಮೆಂಬ ಭೇರಿಯಂ ಕೊಟ್ಟು ಸಂತೋಷಂಬಟ್ಟು ಸಮ್ಯಕ್ತ್ವದಿಂ ಕೇಡಿಲ್ಲಮೆಂದಱಿದು | ಅತಿಹರುಷದಿಂ ಸಮವಸರಣಮನೆಯ್ದಿ ಪದ್ಮರಥ ಮಹಾರಾಜಂ ಗಂಧಕುಟಿಯಂ ತ್ರಿಃ ಪ್ರದಕ್ಷಿಣಂಹ್ಗೆಯ್ದು ಪರಮೇಶ್ವರಂಗೆ ಸಾಷ್ಟಾಂಗವೆಱಗಿ | ಸ್ತುತಿ ಶತ ಸಹಸ್ರಂಗಳಿಂ ಸ್ತುತಿಯಿಸಿ ಮನುಷ್ಯ ಕೋಷ್ಟದೊಳ್ಕುಳ್ಳಿರ್ದ್ದು ಧರ್ಮ್ಮಮಂ ಕೇಳ್ದು ತದನಂತರ ತಂನ ಭವಾಳಿಯಂ ಕೇಳಲ್ ಬೆಸಗೊಳಲು ಯಿಂತೆಂದರು ನೀನು ಮೊದಲ ಜಲ್ಮದಲ್ಲಿ ಕಾಮಸೇನೆ | ಯೆರಡನೆಯ ಭವದೊಳು ಆಱನೆಯ ನರಕಂ ಬೊಕ್ಕು ಮೂಱನೆಯ ಜಲ್ಮದೊಳು ದುರ್ಗ್ಗಂಧಿನಿ | ನಾಲ್ಕನೆಯ ಜಲ್ಮದೊಳು ದೇವಕುಮಾರನಾದೆ | ಅಯ್ದನೆಯ ಜಲ್ಮದೊಳು ಪದ್ಮರಥ ಮಹಾರಾಜನಾದೆ | ಯೆಂಬುದಂ ಕೇಳ್ದು ವೈರಾಗ್ಯ ಸಂಪಂನವಾಗಿ ಸರ್ವಜ್ಞನ ಸಮೀಪದೊಳು ಜಿನದೀಕ್ಷೆಯಂ ಕೈಕೊಂಡು | ಉಗ್ರೋಗ್ರ ತಪದಿಂ ಗಣಧರ ಪದವಿಯಂ ತಳೆದು | ಕೇವಲ ಜ್ಞಾನಂ ಪುಟ್ಟಿ ಮೋಕ್ಷಮನೆಯ್ದಿದನೆಂದು ಗೌತಮಗಣಧರ ಸ್ವಾಮಿಗಳು ಶ್ರೇಣಿಕ ಮಹಾರಾಜಂಗಂ ಚೇಳಿನಿ ಮಹಾದೇವಿಗಂ ಪೇಳೆ ಕೇಳ್ದು ಆ ನೋಂಪಿಯಂ ಕೈಕೊಂಡು | ತಂಮ ನಗರಮನೆಯ್ದಿ ಮುಕ್ತಾವಳಿಯ ನೋಂಪಿಯಂ ನೋಂತು ಉದ್ಯಾಪನೆಯಂ ಮಾಡಿ ಸ್ವರ್ಗ್ಗಾಪವರ್ಗ್ಗಮನೆಯ್ದಿದರು | ಯಿಂತೀ ಮುಕ್ತಾವಳಿಯ ನೋಂಪಿಯಂ ನೋಂತವರ್ಗ್ಗಂ ನೋದಿಸಿದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಮಂಗಳ ಮಹಾಶ್ರೀ