ಶ್ರೀ ವೀತರಾಗಾಯ ನಮಃ ||

ಶ್ರೀ ಪಂಚಗುರು ಪದಾಬ್ಜ
ಕ್ಕಾಂ ಪ್ರೀತಿಯೊಳೆಱಗಿ ಸಕಲ ಜನಹಿತಮೆಂಬೀ
ರೂಪಾವತಿಶಯದ ನೋಂಪಿಯ
ನೇಂ ಪಡೆಮಾತೋಮಹೋತ್ಸವಂ ಮಿಗೆ ಪೇಳ್ವೆಂ
||

          ರತಿ ರಂಭೆ ತಿಲೋತ್ತಮೆ ಭಾ
ರತಿ ರೋಹಿಣಿ ಗೌರಿ ಗಂಗೆ ಪದ್ಮಾವತಿಗಂ
ರತಿ ಪತಿಯಂ ಶ್ರೀಪತಿಯೆಂ

ದತಿಶಯದ ರೂಪಿಂದ ಮೆಱವರಿದ ನೋಂತವರ್ಗ್ಗಳ್ ||

|| ವ || ಅದೆಂತೆಂದೊಡೆ ಜಂಬೂ ದ್ವೀಪದ ಭರತ ಕ್ಷೇತ್ರದ ಕಾಶ್ಮೀರ ವಿಷಯದ ಹಸ್ತಿನಾಪುರದ ಪರದನೊರ್ವ್ವಂ ಜನಮಿತ್ರನೆಂಬನಾತನ ಪೆಂಡತಿ ಜನಾನಂದೆಯೆಂಬಳಾ ಯಿರ್ವ್ವರ್ಗ್ಗಂ ಪುಟ್ಟಿದ ಮಗಳು ಸುಮತಿಯೆಂಬಳು ಪ್ರಾಯಸ್ಥೆಯಾಗಿಯುಂ ರೂಪು ಲಾವಣ್ಯ ಸೌಭಾಗ್ಯ ವಿಳಾಸ ವಿಹೀನೆಯಪ್ಪುದಱಿಂದಾರುಂ ಮದುವೆಯಾಗದಿರೆ | ತಾಯುಂ ತಂದೆಯಂ ಚಿಂತಾಕ್ರಾಂತೆಯಾಗಿರ್ಪ್ಪಿನಮೊಂದು ದಿವಸಂ ದೇವಯಶೋಮುನಿ ತಿಲಕರು ಮಾಸೋಪವಾಸದ ಪಾರಣೆಯೊಳ್ಚರ್ಯ್ಯಾ ಮಾರ್ಗ್ಗದಿಂ ಬರೆ ಕಂಡಿದಿರಂ ಬಂದು | ತ್ರಿಕರಣಶುದ್ದಿಯಿಂದೆಱಗಿ ನಿಲಿಸಿ | ಚರ್ಯ್ಯಾನಂತರಂ ಕೈಗಳಂ ಮುಗಿದು | ಸ್ವಾಮಿ ನಂಮ ಮಗಳಪ್ಪ ಸುಮತಿಯ ಜನ್ಮಂ ಮದುವೆಯಿಲ್ಲದೆ ನಿರರ್ತ್ಥಕಮಾಗಿ ಪೋಗಿತಿರ್ದಪುದಿದಾವ ಪಾಪದ ಫಲಮಿದಂ ಬೆಸಸಿಮೆನಲವರವಧಿಯಿಂದಱಿದು ಹಿಂದಿನ ಭವದೊಳೀಕೆ ರುಷಿಯರಂ ಕಂಡು ಪೇಸಿ ಉಗುಳ್ದು ಪಳಿದ ಪಾಪದ ಫಲದಿಂ | ವಿದ್ರೂಪಿತ್ವಮುಂ | ದುರ್ಭ್ಭಗತ್ವಮಾಗಿ ಪುಟ್ಟಿದಳಿಪ್ಪುದಱಿಂದಾರುಂ ಮದುವೆಯಾಗದಿರ್ದ್ದಪರೆಂಬುದುಮಾ ದೋಷಮಂ ಪರಿಹರಿಸು ಉದಾಉದಾನುಮನೊಂದು ನೋಂಪಿಯಂ ಬೆಸಸಿಮೆನೆ ರೂಪಾತಿಶಯದ ನೋಂಪಿಯೆನಿಂತೆಂದು ಪೇಳ್ದರಾಉದಾನುಮೊಂದು ನಂದೀಶ್ವರದಷ್ಟಮಿಯೊಳ್ಕೈಕೊಂಡು | ಕಾರ್ತ್ತಿಕ ನಂದೀಶ್ವರದ ಪೌರ್ನ್ನಮಿ ಪರಿಯಂತರಂ | ಧರಣೇಂದ್ರ ಪದ್ಮಾವತಿ ಸಹಿತಮಿಪ್ಪ ಪಾರ್ಶ್ವದೇವರ್ಗ್ಗೆ ಮೇಣು ಚತುರ್ವ್ವಿಶಂತಿ ತೀರ್ತ್ಥಕರ ಪ್ರತುಮೆಗೆ ಮೇಣು ಪಂಚ ಪರಮೇಷ್ಠಿಗಳ ಪ್ರತುಮೆಗೆ ಮೇಣು ನಿತ್ಯಾಭಿಷೇಕ ಪೂಜೆಯಂ ಮಾಡಿ || ಕಂಮನಪ್ಪ ಗಂಧಾಕ್ಷತೆ ಪುಷ್ಪ ಕರ್ಪ್ಪೂರದಾರತಿ ತಾಂಬೂಲಮಂ ಪ್ರತಿದಿನಂ ತಪ್ಪದರ್ಚ್ಚಿಸೂದೂ | ನಾಲ್ಕು ತಿಂಗಳು ಪರಿಯಂತರಂ | ಪಂಚಮಿ ಅಷ್ಟಮಿ ಚತುರ್ದ್ದಶಿಗಳೊಳುಪವಾಸಮಂ ಮಾಳ್ಪುದಾಱದೊಡೆ ಕಠಿಣದಿಂದೇಕಭುಕ್ತಮಂ ಮಾಳ್ಪುದೂ | ಪಾರಣೆಯ ದಿನದೊಳು ಯಥಾಶಕ್ತಿಯಿಂ ಸಮುದಾಯಮಂ ಮಾಳ್ಪುದು ಧ್ಯಾನಾಧ್ಯಯನ ಕಾಯಕ್ಲೇಶ ತಪೋನುಷ್ಠಾನ ನಿಷ್ಠಿತರ ಪರಿಶ್ರಮಮನಱಿದು ದಾನಂಗೊಡುಉದು | ಕಡೆಯೊಳುಜ್ಜವಣೆಯ ಕ್ರಮವೆಂತೆಂದರೆ | ದೇವರ್ಗ್ಗೆ ಮಹಾಭಿಷೇಕಪೂಜೆಯಂ ಸವಿಸ್ತರಂ ಮಾಡಿ ಅಕ್ಕಿಯ ಪಾಯಸ ಯೆಂಣಹೂರಿಗೆ | ಬಿಸುಹೂರಿಗೆ | ಹೂಸಣಂಬು | ಘಾರಿಗೆ ತಱಗು ಚಕ್ಕುಲಿ ಲಡ್ಡುಗೆ ಮರುಂಡೆ | ಹಾಲುಂಡೆಯುಮಂ | ಹಾಲು ತುಪ್ಪ ಶರ್ಕ್ಕರೆ ಬಾಳೆಯ ಹಂಣು ಬೆಲ್ಲದಚ್ಚು ಸಹಿತಂ ದೇವರ್ಗ್ಗೆಂ ಧರಣೇಂದ್ರ ಪದ್ಮಾವತಿಗೆ ವೊಡ್ಡಚರುವನಿಡುಉದು | ಶ್ರುತ ವಸ್ತ್ರ ಸಹಿತಂ ಶ್ರುತಗುರು ಪೂಜೆಯಂ ಮಾಡಿ | ನೆಲ್ಲು ಕಬ್ಬನರ್ಚ್ಛಿಸೂದು | ದೊರಕೊಡಂತಪ್ಪ ಫಲಂಗಳನರ್ಚ್ಚಿಸೂದು | ಶುಂಠಿ ಮೆಣಸು ಹಿಪ್ಪಲಿ ಜಾಯಿಫಲ ಮೊದಲಾದೌಷಧಿಗಳರ್ಚ್ಚಿಸೂದು ತದನಂತರಂ ಕಥೆಯಂ ಕೇಳ್ದು | ನೋನಿಸಿದಜ್ಜಿಯರ್ಗ್ಗೆ ಉಡಕೊಡುಉದು | ಕಥಕಂಗೆ ದಕ್ಷಿಣೆ ಸಹಿತ ಬಾಯಿನಮಂ ಕೊಡುಉದು | ಚಾತುರ್ವ್ವರ್ಣ್ನಕ್ಕಾಹಾರ ದಾನ ಸುವರ್ಣ್ನ ದಾನಮಂ ಮಾಳ್ಪುದು | ಬಡವರೊಡೆಯರೆಂನದೆ ಯಥಾಶಕ್ತಿಯಿಂ ಭಕ್ತಿಪೂರ್ವ್ವಕಂ ನೋಂಪುದು | ಯಿದುಜ್ಜವಣೆಯ ಕ್ರಮವೆಂದು ಪೇಳೆ ಕೇಳ್ದು ಸುಮತಿ ಸಂತುಷ್ಟ ಚಿತ್ತೆಯಾಗಿ ನೋಂಪಿಯಂ ಸಮ್ಯಕ್ತ್ವಪೂರ್ವ್ವಕಂ ಕೈಕೊಂಡು ಯಥಾಕ್ರಮದಿಂ ನೋಂತುಜ್ಜೈಸಿ ತತ್ಫಲದಿಂ ತದ್ಭವದೊಳೆ ರೂಪುಲಾವಣ್ಯ ಸೌಭಾಗ್ಯ ವಿಳಾಸಮಂ ಪಡೆದು ತತ್ಪುರದ ರಾಜಶ್ರೇಷ್ಠಿಯ ಮಗನಪ್ಪ ಸುಪ್ರಭದೇವಂಗೆ ಪ್ರಾಣವಲ್ಲಭೆಯಾಗಿ ಸಮಸ್ತ ಸಂಸಾರ ಸುಖಮನನುಭವಿಸಿ ದೇವಕುಮಾರ ಸಂನಿಭರಪ್ಪ ಪಲಂಬರ್ಮ್ಮಕ್ಕಳಂ ಪಡೆದು ಪಲಉ ನಿಧಿ ನಿಧಾನಂಗಳ್ಗೊಡೆಯಳಾಗಿ | ಚತುರ್ವ್ವಿಧಮಪ್ಪ ಸಾಗಾರ ಧರ್ಮ್ಮದೊಳ್ಕೂಡಿ ಜಿನಧರ್ಮ್ಮವಂ ಪ್ರಭಾವಿಸುತ್ತಂ ಭವ್ಯೋತ್ತಮೆಯೆನಿಸಿ ನೆಗಳುತ್ತಮಿರ್ದ್ದು ಕಾಲಜ್ಞಾನದೊಳ್ತಾನತಿ ಪ್ರೌಢೆಯಪ್ಪುದಱೆಂ ಕಿವಿಯ ಸಮುದ್ರಘೋಷಮಂ ಕೇಳದುದನಱಿದು ತನಗಿಂನೇಳು ದಿನದಾಯುಷ್ಯಮೆಂದಱಿದು ನಿಶ್ಚಯಿಸಿ | ಸಂಸಾರ ಶರೀರ ಭೋಗ ಪರಾಯಣೆಯಾಗಿ ಲಕ್ಷ್ಮೀಮತಿ ಗಂತಿಯರ ಸಮಕ್ಷಮದೊಳ್ಜಿನದೀಕ್ಷೆಯಂ ಕೈಕೊಂಡು ವಿಶಿಷ್ಟ ತಪದೊಳ್ನೆಗಳ್ದಂತ್ಯ ಕಾಲದೊಳು ಪರಮ ಸಮಾಧಿವಿಧಿಯಂ ಶರೀರ ಭಾರಮನಿಳಿಪಿ | ಪದಿನಾಱನೆಯಚ್ಯುತ ಕಲ್ಪದೊಳ್ಮ ಹರ್ಧಿಕ ದೇವನಾಗಿ ಪುಟ್ಟಿ ಯಿಪ್ಪಿತ್ತೆರಡು ಸಾಗರೋಪಮ ಕಾಲಂಬರಂ ದಿವ್ಯ ಸುಖಮನನುಭವಿಸಿ ಬಂದಿಲ್ಲಿ ದಿವ್ಯೋತ್ತಮನಾಗಿ ಪುಟ್ಟಿ ಪರಂಪರೆಯಿಂ ಮೋಕ್ಷಕ್ಕೆ ಸಂದಳಿಂತು

|| ಕ || ಪೆಂಪಿನ ರೂಪಾತಿಶಯದ
ನೋಂಪಿಯ ಫಲದಿಂ ನಿಳಿಂಪ ದಂಪತಿಗಳವೋ
ಲ್ಸಂಪೂರ್ಣ್ನ ರೂಪ ವಿಭವದ
ಲಂಪಿಂ ಮಿಗೆ ಸಕಲ ಸೌಖ್ಯ ಭಾಜನರಪ್ಪರೂ ||

          ಯಿಂತಿದು ಜಿನಭಾಷಿತಮದ
ಱಿಂ ತಡೆಯದೆ ಜೈನ ಧರ್ಮ್ಮದಿ ನೋಂಪಿಗಳಂ ವಿ
ಶ್ರಾಂತದಿ ಕೇಳ್ದುಂ ನೋನದ
ಜಂತುಗಳಿಹ ಪರ ಸುಖಂಗಳಂ ಪಡೆದಪರೇ ||

ಯಿಂತು ರೂಪಾತಿಶಯದ ನೋಂಪಿಯಂ ತ್ರಿಕರಣ ಶುದ್ಧಿಯಿಂ ಸಮ್ಯಕ್ತ್ವ ಪೂರ್ವ್ವಕಮಾಗಿ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಡಂ ಬಟ್ಟವರ್ಗ್ಗಂ ಮಂಗಲ ಮಹಾಶ್ರೀ