(ಆರ್ಕವಾರದ ಕಥೆ, ರವಿವಾರದ ಕಥೆ, ಭಾನುವಾರದ ಕಥೆ ಎಂಬ ಹೆಸರುಗಳೂ ಇವೆ)

ಶ್ರೀ ವರ್ದ್ಥಮಾನ ಜಿನರಂ
ಪಾವನ ಪದಕಮಲಕೆಱಗಿ ಭಕ್ತಿಯ ಕಥೆ ಭರದಿಂ
ರವಿವಾರದ ಕಥೆಯಂ
ಭಾವಿಸಿ ತಾಂ ಅಱೆಯೆ ಪೇಳ್ವೆ ಪೊಸ ಕಂನಡದಿಂ || ೧ ||

ಮೇರುವಿನ ತೆಂಕ ಭಾಗದೊಳಾ ಭರತ ಕ್ಷೇತ್ರದಲ್ಲಿ ಪಟ್ಟಣ್ಮೊಂದುಂ | ತಾನದ ಪೇಳ್ವುದೆಚೋದ್ಯಂ ರಾಜಗೃಹಂ ಶೋಭಿಸುತಂ ಇಹುದು ಮಗಧೆಯೆಂಬ ದೇಶಮದೆಂತುಂ ಅದನಾಳ್ವರಸಂ ಪೆಸರೊಳು ಮುದದಿಂ ಸೌಭಾಗ್ಯವಂತ ಶ್ರೇಣಿಕನೆಂಬ | ಭುವನಸ್ತುತೆ ಚೇಳಿನಿಯಿಂ ಪರಮಾರ್ಥಂ ರಾಜ್ಯ ಸುಖಮನನುಭವಿಸುತ್ತಂ ಅಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಮನನುಭವಿಸುತ್ತಮಿರಲೊಂದು ದಿವಸಂ ವೊಡ್ಡೋಲಗಂಗೊಟ್ಟಿರ್ದ್ದ ಸಮಯದೊಳು ವನಪಾಲಕಂ ಬಂದು ಪುಷ್ಪಫಲಂಗಳಾಂ ತಂದುಕೊಟ್ಟು ಸಾಷ್ಟಾಂಗ ಪ್ರಣುತನಾಗಿ ಕರ ಕಮಲಂಗಳಂ ಮುಗಿದಿಂತೆಂದಂ ಯೆಲೆ ದೇವಾ ನಿಂಮ ಪುಣ್ಯೋದಯದಿಂ ನಂಮ ಪುರದ ಬಹಿರುದ್ಯಾನ ವನದೊಳಿರ್ದ್ದ ಸಹಸ್ರ ಕೂಟ ಚೈತ್ಯಾಲಯಕ್ಕೆ ಶ್ರೀ ವರ್ದ್ಧಮಾನ ಸ್ವಾಮಿಯ ಸಮವರಸಣಂ ಬಂದು ನೆಲಸಿರ್ದ್ದುದೆಂದು ಬಿಂನಪಂಗೆಯ್ಯೆ ಆತನಾಮಾತುಗೇಳ್ದು ಹರ್ಷೋತ್ಕರ್ಷ ಚಿತ್ತನಾಗಿ ಆಸನದಿಂದೆರ್ದ್ದು ಆ ದೆಸೆಗೇಳಡಿಯಂ ನಡೆದು ಸಾಷ್ಟಾಂಗ ಪ್ರಣುತನಾಗಿ ಯರ್ದ್ದು ವೊಸಸಗೆದಂದಂಗಂಗ ಚಿತ್ತ ಮನಿತ್ತಾನಂದ ಭೇರಿಯಂ ಪೊಯ್ಸಿ ಸಮಸ್ತ ಪುರಜನ ಪರಿಜನ ಬಂಧು ಜನಂ ತಂನಸ್ತ್ರೀಯರುಂ ಪುರದ ಸ್ತ್ರೀಯರಂ ಕೂಡಿಕೊಂಡು ಪಾದ ಮಾರ್ಗ್ಗದಿಂ ಪೋಗಿ ಸಮವಸಣಮನೆಯ್ದಿಗಂಧ ಕುಟಿಯಂ ತ್ರಿಪದಕ್ಷಿಣಂಗೆಯ್ದು ಸ್ವಾಮಿಗೆ ಸಾಷ್ಟಾಂಗ ಪ್ರಣುತನಾಗಿ ಪೊಡವಟ್ಟು ಗಣಧರಿಂಗೆಱಗಿ ಪಂಚಮುಷ್ಟಿಯಿಂ ವಂದನೆಯಿಂ ಮಾಡಿ ಮನುಷ್ಯ ಕೋಷ್ಟದೊಳ್ಕುಳಿರ್ದ್ದ ನಿರ್ಮ್ಮಲ ಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ಬಳಿಕ್ಕಂ ಶ್ರೇಣಿಕ ಮಹಾ ಮಂಡಲೇಶ್ವರಂ ಚೇಳಿನಿ ಮಹಾದೇವಿಯುಂ ಕರಕಮಲಂಗಳಂ ಮುಗಿದು ಯೆಲೆ ಸ್ವಾಮಿಯೆನಗಾವು ದಾನುಮೊಂದು ನೋಂಪಿಯಂ ಕಾರುಣ್ಯಮಂ ಮಾಳ್ಪುದೆನಲಂತಾಗಲಿಯೆಂದು ಮತ್ತಮಿಂತೆಂದು ಪೇಳ್ದರು | ಯೆಲೆ ಶ್ರೇಣಿಕ ಮಹಾರಾಜಾ ದಾರಿದ್ರ ವಿನಾಶಮಪ್ಪ ಭವ ನಿವಾರಣವಪ್ಪುದೊಂದು ನೋಂಪಿಯಂ ನೋನಿಮೆನಲು ಅದೆಂತೆನೆ ಅದಿತ್ಯವಾರದ ನೋಂಪಿಯಂ ನೋನಿಮೆನೆ | ಅದಱ ವಿಧಾನಮಂ ಸ್ವಾಮಿ ಯೆನಗೆ ಸವಿಸ್ತರಂ ಬೆಸಸಮೆನಲವರಿಂತೆಂದರೂ ಆವುದಾನುಮೊಂದು ನಂದೀಶ್ವರದಷ್ಟಾಹ್ನಿಕದೊಳು ಬಂದರ್ಕ್ಕವಾರದೊಳುಪವಾಸಮಂ ಮಾಡುವುದು ವುಪವಾಸಕ್ಕಾಱದಿರ್ದ್ದೊಡೇಕ ಭುಕ್ತಮಂ ಯೆಕರಾಮದಿಂದೇಕಭುಕ್ತಮಂ ಕೈಕೊಂಡು ಅಧಃಶ್ಯಯನ ಬ್ರಹ್ಮಚರ್ಯ್ಯಂ ಕೈಕೊಂಬುದು ಆಯ್ದು ವಸ್ತುವಿನಲ್ಲಿ ಹಾಲು…. ದಿ ರಹಿತವಾಗಿ ಏಕ ಭುಕ್ತಮಂ ಮಾಳ್ಪುದು | ಆಹಾರಮಂ ಕೊಂಬಲ್ಲಿ ಅಂಬಿಲದಲ್ಲಿ ಅಷ್ಟವಸ್ತುವಂ ಯೆಲೆ ವಾದ್ರಂಗಳಂ ಕಂದ ಮೂಲಮಂ ಲಶುನ ಮೊದಲಾದ ವಸ್ತುಗಳಂ ವ್ರತವ ಮಾಡೂದು | ಇಂತಿಱೆಂ ಶುಚಿರ್ಬ್ಭೂತರಾಗಿ ಮಧ್ಯಾಹ್ನದಲ್ಲಿ ಪಂಚ ಪರಮೇಷ್ಠಿಗಳ್ಗೆ ಅಭಿಷೇಕ ಪೂಜೆಯಂ ಮಾಡಿ ಅಷ್ಟ ವಿಧಾರ್ಚ್ಛನೆಯಂ ಮಾಡುವಾಗ | ವೊಂಭತ್ತು ಜಲಧಾರೆ | ವೊಂಭತ್ತು ಗಂಧ | ಒಂಭತ್ತು ಅಕ್ಷತೆ | ಒಂಭತ್ತು ಚರು | ವೊಂಭತ್ತು ದೀಪಧೂಪ ಫಲಂಗಳಿಂದಂ | ಅರ್ಚ್ಚಿಸಿ | ಅರ್ಗ್ಘ್ಯ ಶಾಂತಿಧಾರೆಯಿಂದರ್ಚಿಸಿಮೆಂದು ಪೇಳೇ ಕೇಳ್ದು ಸಂತುಷ್ಟ ಚಿತ್ತರಾಗಿ ಗಣಧರರ್ಗ್ಗೆ ಪಾದಾರ್ರ್ಚನೆಯಂ ಮಾಡಿ ನೋಂಪಿಯಂ ಕೈಕೊಂಡು ಮನೆಗೆ ಪೋಗಿ ನೋಂಪಿಯ ದಿನಂ ಬರೆ ಶುಚ್ಚಿರ್ಬ್ಭೂತರಾಗಿ ಚೈತ್ಯಾಲಯಕ್ಕೆ ಬಂದು ಪಾರ್ಶ್ವನಾಥ ಮಧ್ಯಮ ಪ್ರತುಮೆಯಾಗಿರ್ದ್ದ ಪಂಚ ಪರಮೇಷ್ಠಿಗಳ್ಗೆ ಪಂಚಾಮೃತಾಭಿಷೇಕಮಂ ಮಾಡಿ ಪೂರ್ವೋಕ್ತ ಕ್ರಮದಿಂದಷ್ಟ ವಿಧಾರ್ರ್ಚನೆಯಂ ಮಾಡಿ ಕಥೆಯಂ ಕೇಳ್ದು ಗುರುಗಳ್ಗೆ ವಂದಿಸಿ ಮೇಣೊಂದು ತಂಡ ರುಷಿಯರಾಗಲಿ ಮೇಣೊಂದು ತಂಡ ಅಜ್ಜಿಯರಾಗಲಿ ಅಥವಾ ಋಷಿಯರಜ್ಜಿಯರ್ದ್ದೋರಕದ್ದಿರ್ದ್ದರೆ ಸಮ್ಯಗ್ದೃಷ್ಟಿಗಳಪ ಶ್ರಾವಕ ಶ್ರಾವಕಿತ್ತಿಯರಾಗಲಿ ಕೂಡಿಕೊಂಡು ಏಕಭುಕ್ತ ಮಾಡುವುದು | ಯೀ ಪ್ರಕಾರದಿಂ ವೊಂಭತ್ತು ವಾರ ಮಾಳ್ಪುದು ಜಗನ್ಯ ಪಕ್ಷ | ಮಧ್ಯಮದಿಂದೊಂಭತ್ತು ತಿಂಗಳು ಮಾಳ್ಪುದು | ಉತ್ಕೃಷ್ಟದಿಂ ದೊಂಭತ್ತು ವರುಷಮಂ ಮಾಳ್ಪುದು | ಜನ್ಮಾವಧಿಯಾಗಲಿ ನೋಂಪಿಯಂ ಮಾಳ್ಪುದು | ತವಗೆ ಕೂಡಿದಾಗ ಉದ್ಯಾಪನೆಯಂ ಮಾಡುವುದು ಉದ್ಯಾಪನೆಯ ಮಾಳ್ಪ ವಿಧಾನಮೆಂತೆನೆ ಪಾರ್ಶ್ವನಾಥ ತೀರ್ಥಂಕರ ಪ್ರತುಮೆ ಮುಖ್ಯವಾದ ಪಂಚ ಪರಮೇಷ್ಠಿಗಳ ಪ್ರತುಮೆಯಂ ಮಾಡಿಸಿ ಪ್ರತಿಷ್ಟೆಯಂ ಪ್ರತಿಮಾ ವಿಧಾನದಿಂ ತಂನ್ನ ಶಕ್ತಿಗೆ ತಕ್ಕಂತು ಮಾಡಿಸಿ ಚತುರ್ವ್ವರ್ಣ್ನಕ್ಕಾಹಾರ ದಾನಮಂ ಮಾಡುವುದು | ಉದ್ಯಾಪನೆಯಂ ಮಾಳ್ಪಾಗಳು || ೧೨ || ಹಂನೆರಡು ಕಲಶಮಂ ಮಾಡಿಸಿ ಆ ಕಳಶದೊಳಗೆ | ವೊಂಭತ್ತು ಬಗೆಯ ಖಜ್ಜಾಯಮಂ ತುಂಬಿ | ವೊಂಭತ್ತು ಎಲೆ | ವೊಂಭತ್ತು ಅಡಕೆಯಂ ಹಾಕಿ ವೊಂಭತ್ತು ಮಂಡಗೆಯಂ ಮುಚ್ಚಿ ದೇವರಿಗೆ ಶ್ರುತಕ್ಕೆ ತನಗೆ ಮಿಕ್ಕ ಬಾಯಿನಮಂ ಸೊವಾಸಿನಿಯರ್ಗ್ಗೆ ಕೊಟ್ಟು ಉಪವಾಸವಾಗಲಿ ಏಕ ಭುಕ್ತವಾಗಲಿ ಮಾಡುವುದು | ಯಿದೀಗ ನೋಂಪಿಯ ಕ್ರಮವೆಂದು ಗೌತಮ ಗಣಧರರು ಶ್ರೇಣಿಕನುಂ ಚೇಳಿನಿ ಮಹಾದೇವಿಯುಂ ಕೇಳ್ದು ಸಂತೋಷಂ ಬಟ್ಟು ಮತ್ತೆ ಕೈಗಳಂ ಮುಗಿದು ಯೆಲೆ ಸ್ವಾಮಿ ಯೀ ನೋಂಪಿಯಂ ಮುಂನ ನೋಂತು ಫಲಮನೈದಿದವರ ಕಥೆಯಂ ಪೇಳಿಮನೆಲವರುಮಿಂತೆಂದು ಪೇಳ್ದರು | ಯೀ ಜಂಬೂ ದ್ವೀಪದೊಳತಿ ರಂಜಿಸುವ ಭರತ ಕ್ಷೇತ್ರಮದಱೊಳಗೆಸೆದು ರಾಜಿಸುವುದು | ವಾರಣಾಸಿ ಯದನಾಳ್ವರಸು ಸಿಂಹಪರಾಕ್ರಮನು ಅಂತು ರಾಜ್ಯ ಸುಖಮನನುಭವಿಸುತ್ತಮಿರಲೊಂದು ದಿವಸಂ ವೊಡ್ದೋಲಗಂ ಗೊಟ್ಟಿರ್ದ್ದರಾ ಸಮಯದೊಳು ಪಟ್ಟಣದ ಪೊಱಗಣ ಸಹಸ್ರಕೂಟ ಚೈತ್ಯಾಲಯಕ್ಕೆ ಋಷಿ ಸಮುದಾಯ ಬಿಜಯಂಗೆರ್ದ್ದುದೆಂದು ವನಪಾಲಕಂ ಕಡು ತ್ವರಿತದಲ್ಲಿ ಬಂದು ರಾಜಸಭೆಯಂ ಪೊಕ್ಕು ಅರಸಂಗೆ ಮಾಧು ಫಲಮಂ ಕೊಟ್ಟು ಸಾಷ್ಟಾಂಗವೆಱಗಿ ಪೊಡವಟ್ಟು ದೇವಾ ನಿಂಮ ಪುಂಣ್ಯೋದಯದಿಂ ಸಮುದಾಯ ಸಹಿತವಾಗಿ ಮಹಾಮುನೀಶ್ವರರು ಬಿಜಯಂ ಗೆಯ್ದು ದುಮಂ ಬಿನ್ನವಿಸಲೊಸಗೆ ದಂದಂಗಂಚಿತ್ತಮನಿತ್ತಾನಂದ ಭೇರಿಯಂ ಪೊಯ್ಸಿ | ಸಮಸ್ತ ಪುರಜನ ಪರಿಜನಂ ಸಹಿತ ಪಾದ ಮಾರ್ಗ್ಗದಿಂ ಪೋಗಿ ಚೈತ್ಯಾಲಯನೈಯ್ದಿ ತ್ರಿಃಪ್ರದಕ್ಷಿಣಂಗೆಯ್ದು ಚೈತ್ಯಾಲಯದೊಳಗಂ ಪೊಕ್ಕು ದೇವರಂ ವಂದಿಸಿ ಋಷಿಯರಿಗೆ ಪಂಚ ಮುಷ್ಠಿಯಿಂ ನಮೋಸ್ತು ಮಾಡಿ ಧರ್ಮ್ಮಶ್ರವಣಮಂ ಕೇಳ್ದು ಬಳಿಕಂ ಗುರುಗಳಿಗೆ ಕೈಗಳಂ ಮುಗಿದು | ಯೆಲೆ ಸ್ವಾಮಿ ಯೆನಗೆ ದಾರಿದ್ರ ವಿನಾಶನಮಾಗಿ ಭವವಿನಾಶವನಮಪ್ಪುದಾವುದಾನೊಂದು ನೋಂಪಿಯಂ ಬೆಸಸೂದೆನೆ ಅವರಿಂತೆಂದು ಪೇಳ್ದರೂ

|| ಕಂ || ಅತಿಶಯವಪ್ಪು ನೋಂಪಿಯ
ನತಿ ಮುದದಿಂ ಪೇಳ್ವೆನೆಂದು ಕೈಕೊಳ್ಳೆನುತಂ
ಅತಿ ದಾರಿದ್ರ ವಿನಾಶನ
ಮತಿಶಯದಿಂದರ್ಕಕ್ಕವಾರ ನೋಂಪಿಯ ತೆಱನಂ ||

ಅಂತು ಅದಿತ್ಯವಾರದ ನೋಂಪಿಯಂ ಸವಿಸ್ತರವಾಗಿ ಮುಂನ ಪೇಳ್ದಂತೆ ಪೇಳ್ದು ಆ ಪಟ್ಟಣದೊರ್ರ್ವ ವೈಶ್ಯರಾಜಶ್ರೇಷ್ಠಿ ಆತನ ಸ್ತ್ರೀಗೆ ಯೇಳು ಮಂದಿ ಗಂಡು ಮಕ್ಕಳು ಅವರೊಳಗೆ ಅಱು ಮಂದಿಗೆ ವಿವಾಹಮಾಗಿ ಕಿಱೆಯ ಮಗಂಗೆ ವಿವಾಹಮಿಲ್ಲದಿರೆ ಆತಂ ಅರಸಿನ ಸಂಗಾತಂ ಬಂದು ಅದಿತ್ಯವಾರದ ನೋಂಪಿಯಂ ಕೈಕೊಂಡು ಮನೆಗೆ ಬಂದು ಯೆಲೆ ಅಬ್ಬಾ ನಾನೊಂದು ನೋಂಪಿಯಂ ಕೈಕೊಂಡು ವಿನಾಶನಮಪ್ಪ ಭವನಿವಾರಣಮೆಂಬ ನೋಂಪಿಯೆನೆ | ಆ ನೋಂಪಿಯ ವಿಧಾನಮೆಂತೆನೆ ಅಬ್ಬಾ ಕಣಿಕದಲ್ಲಿ ಫಲಂಗಳಂ ಮಾಡಿ | ವೊಂಭತ್ತು ಜಲಧಾರೆ ಮುಂತಾಗಿ ಅಷ್ಟವಿಧಾರ್ರ್ಚನೆಯಂ ಮಾಡಿ ಪಾರ್ಶ್ವನಾಥ ಮುಖ್ಯಮಾದ ಪಂಚ ಪರಮೇಷ್ಠಿಗಳಿಗೆ ಅಭಿಷೇಕ ಪೂಜೆಯಂ ಮಾಡುವುದು | ಆವುದಾನೊಂದುಷ್ಟಾಹ್ನಿಕದೊಳಗೆ ಬಂದ ಅದಿವಾರದಲ್ಲಿ ವುಪವಾಸಮಂ ಮಾಡುವುದು ಯಥಾಶಕ್ತಿ ಪೂರ್ವಕಂ ವ್ರತಮಂ ಸ್ವೀಕರಿಸುವುದು | ವುಪವಾಸಕ್ಕಾಱದಿರ್ದ್ದೊಡೇಕ ಭುಕ್ತಮಂ ಮಾಡೂದು | ಯೇಕ ಭುಕ್ತ ಮಾಳ್ಪಲ್ಲಿ ಅಂಬಿಲದಲ್ಲಿಟ್ಟ ಅಶನಮಂ ಹಾಲಮುಂ ಯೆಲೆ ವಾದ್ರ ಮುಂತಾದವಂ ವ್ರತಮುಂ ಮಾಡಿ ನೋಂಪಿಯಂ ಮಾಡುವುದೆಂದು | ಏಕ ಭುಕ್ತಮಂ ಮಾಳ್ಪುದೆಂದು ನೋಂಪಿಯಂ ಕೈಕೊಂಡುಬಂದೆನೆನೆ ಆತನ ತಾಯಿ ಮಗನೆ ನೀನಿದಾವ ನೋಂಪಿಯಂ ಕೈಕೊಂಡು ಬಂದೆ ಮಗನೆ ನಮಗೆಂದೂ ದಾರಿದ್ರಮಿಲ್ಲ ನಂಮಂ ಬಿಟ್ಟು ದೊರೆಗಳಿಲ್ಲ ಅನೇಕ ಕೋಟಾಕೋಟಿ ದ್ರವ್ಯಮುಳ್ಳವರು ನಮಗೆ ಸರಿಯವರಿಲ್ಲ ನಾವುಂ ಗಜಕುಲವಂಶದವರು ಅನರ್ಗ್ಘ್ಯ ರತ್ನ ಅನರ್ಗ್ಘ್ಯಮಪ್ಪ ವಸ್ತುಗಳಂ ಮುತ್ತಿನಕ್ಷತೆಗಳಂ ಸುವರ್ಣ್ನಪುಷ್ಪಂಗಳಾಂ ದೇವರಿಗೆ ಅರ್ಚ್ಚನೆಯಂ ಅನೇಕ ತೆಱದ ನೃತ್ಯಗೀತವಾದ್ಯ ತೂರ್ಯ್ಯ ದುಂದುಭಿಗಳಂ ಮಾಡಿ ದೇವರಂ ಪೂಜಿಸಲು ಬೇಕು ನೀನು ಮಹಾ ಹೀನವಾಗಿದ್ದ ನೋಂಪಿಯ ಕಣಿಕದ ಫಲಂಗಳಾಂ ಕೊಂಡು ಪೋಗಿ ದೇವರಿಗರ್ಚ್ಚಿಸುವೆನೆಂದು ನೋಂಪಿಯ ಕೈಕೊಂಡು ಬಂದೆಯೆಂದು ನಿರಾಕರಿಸಿ ಆ ನೋಂಪಿಯನುದಾಸೀನಂ ಮಾಡಿದ ಫಲದಿಂ ತಂನ ಮನೆಯ ಧನ ದಾನ್ಯ ವಸ್ತು ವಾಹನಂಗಳುಂ ಪೋಗಿ ದರಿದ್ರಮಾಗಿ ಉಣಲುಂ ತೊಡಲುಂ ಕುಡುಲು ವಸ್ತ್ರಂಗಳ ಸಂಪತ್ತು ದಿನದಿನಕ್ಕೆ ಯಿಲ್ಲದೆಯುಂ ಕೆಲವು ದಿವಸಮಿರ್ದ್ದು ತಂದೆ ತಾಯಂ ತಗುಳ್ದೆಲ್ಲರುಂ ನಿರಾಕರಿಸಿ ಕಿಱೆಯ ತಂಮನಂ ಕೂಡಿಕೊಂಡು ತಂಮ ಸ್ತ್ರೀಯರೊಡಗೂಡಿ ದೇಶಾಂತರಮಂ ಪೊಱಮಟ್ಟು ಪೋಗಿ ಉಜ್ಜೆನಿಯೆಂಬ ಪಟ್ಟಣದ ಪೊಱಗೂ ಉದ್ಯಾನವನಮಂ ಸಾರಿಪ್ಪಸಮಯದೊಳು ಆ ಪಟ್ಟಣದೊಳೊರ್ವ್ವ ವೈಶ್ಯೋತ್ತಮನೆನಿಸಿದ ರಾಜಶ್ರೇಷ್ಠಿ ಯಾವುದ್ಯಾನವನಕ್ಕೆ ಬಂದು ಅವರಂ ಕಂಡುದೂರದಿಂ ನೋಡಿ ನೀವಾವ ದೇಶದಿಂ ಬಂದಿರೆಂದು ಸಮೀಪಕ್ಕೆ ಬಂದು ಬೆಸಗೊಳಲವರುಂ ನಾವು ವಾರಣಾಸಿಯಿಂ ಬಂದೆವೆಂದು ತಂಮ ಪ್ರಸಂಗಂಗಳಂ ಪೇಳ್ದು ನಮಗೊಂದು ಬಿಡಾರಮನೀವುದೆಂದು ಬೆಸಗೊಳಲಾ ಮಾತನಿಂತೆಂದಂ ನೀವು ವ್ಯವಹಾರಮಂ ಮಾಡಿಯುಂಟು ನೀವು ಬಂನಿಮೆಂದು ಕರದುಕೊಂಡು ಬಂದು ವೊಂದು ಬಿಡಾರಮಂ ಕೊಟ್ಟು ನೀವು ಆವುದಾನುಮೊಂದು ವುದ್ಯೋಗಮಂ ಮಾಡಿ ಕೊಳತ್ತಮಿರಲು ವಾರಣಾಸಿಯಿಂದೊರ್ರ್ವ ಋಷಿ ಸಮುದಾಯಂ ಸಹಿತ ಉದ್ಯಾನವನಕ್ಕೆ ಬಿಜಯಂಗೆಯ್ಯಲು ಅದಂ ಆ ಪಟ್ಟಣದರಸು ಕೇಳ್ದು ಅನೇಕ ಸಂಭ್ರಮದಿಂ ಪೋಗುತ್ತಮಿ ಯೀ ಮಹಾ ದಾರಿದ್ರಮಾಗಿರ್ದ್ದ ಸ್ತ್ರೀಪುರುಷರುಂ ಪೋಗಿ ವಂದಿಸಿ ನಮೋಸ್ತು ಮಾಡಿ ಯೆಲೆ ಸ್ವಾಮಿ ಯೆನಗೆ ದಾರಿದ್ರಮೇಕಾಯ್ತುಮೆಂದು ನಂಮ ಸಂತಾನಂ ಬಿಟ್ಟುದಿದೇನು ಪಾಪದ ಫಲಮೆಂದು ಬೆಸಸಲುಮವರಧಿಯಿಂ ನೋಡಿಮಿಂತೆಂದರು ನಿಂನ ಕಿಱೆಯ ಮಗಂ ರವಿವಾರದ ನೋಂಪಿಯಂ ಕೈಕೊಂಡು ಬಂದರೆ ನೀನುದಾಸೀನಂ ಮಾಡಿ ಬಿಟ್ಟಿರಿ ಅದು ನಿಮಿತ್ತಂ ದಾರಿದ್ರಮಾಯ್ತು ನಿಂಮ ಮಕ್ಕಳು ನಿಂಮಂ ಬಿಟ್ಟು ಪೋದರು ಇಂನು ರವಿವಾರದ ನೋಂಪಿಯಂ ನೋಂತರೆ ಮುನ್ನಿನಂತೆ ಭಾಗ್ಯಶಾಲಿಗಳಪ್ಪಿರೆಂದೊಡೆ ಅಂತಾದೊಡಾ ನೋಂಪಿಯ ವಿಧಾನಮಂ ಕೇಳ್ದು ಯಥಾ ಕ್ರಮದಿಂ ನೋನುತ್ತಮಿರೆ ಅವರಿಗೆ ಸೌಭಾಗ್ಯಂ ಪೆಚ್ಚುತ್ತಮಿರಲು | ಯಿತ್ತಲು ಆ ರಾಜಶ್ರೇಷ್ಠಿಯ ಕಿಱೆಯ ಮಗಂ ಅತಿಗೆಯಂ ಉಣಬೇಡಲಾಕೆ ಇಂತೆಂದಳು | ನೀನುಮಾಡುತ್ತಮಿರ್ದ್ದ ನೀನು ಸಟ್ಟಿಯ ಮನೆಯ ಕಱುವಿಗೆ ಪುಲ್ಲಂ ತಂದು ಕೊಟ್ಟರೆ ನಿನಗುಣಲಿಕ್ಕೆ ಕೊಡುವೆನೆಂದು ಪೇಳೆ ಆದರೆ ಕುಡುಗೋಲ ಬೇಡಿ ಕೊಟ್ಟರೆ ಹುಲ್ಲ ತಹನೆಂದವಂ ಪೇಳೆ | ಆ ಸೆಟ್ಟಿಯ ಮನೆಯ ಕುಡುಗೋಲ ಬೇಡಿಕೊಂಡಲು ಆತನು ಹುಲ್ಲತಂದು ಕಱುವಿಗೆ ಹಾಕಲು ಆತಂಗೆ ವುಣಲಿಕ್ಕೆ ಕೊಡಲುಂಬ ಸಮಯದೊಳು ಕುಡುಗೋಲಂ ಬೆಸಗೊಳೆ ಆ ಕುಮಾರಂ ಕುಡುಗೋಲಂ ಅಲ್ಲಿಯೆ ಮಱದು ಬಂದೆನೆನೆ ಅಂತಾದೊಡೆ ನಮಗೆ ಕಳ್ಳತನಂ ಬಂದಪುದು ದರಿದ್ರರು ಕುಡುಗೋಲಂ ಮಾಱಿ ತಿಂದರೆಂದು ಅಪಕೀರ್ತ್ತಿ ಬಂದಿತೆಂದು ನುಡಿಯೆ | ಅಂತಾದೊಡೆ ನಾನು ಕುಡುಗೋಲಂ ಕೊಂಡು ಬಪ್ಪೆನೆಂದು ಭೋಜನಮಂ ಬಿಟ್ಟು ಕುಡುಗೋಲಂ ತರಲು ಪೋಗಲು ಆ ಕುಡುಗೋಲ ಮೇಲೆ ವೊರ್ವ್ವ ಧರಣೇಂದ್ರಂ ಫಣಾಮಣಿಯನಿಟ್ಟು ಆಡುತ್ತಮಿರಲು ಆ ಧರಣೇಂದ್ರನಂ ಕಂಡು ಯೆಲೆ ಧರಣೇಂದ್ರಾ ಕುಡುಗೋಲಂ ಕುಡುಮೆನೆ ಆ ಧರಣೇಂದ್ರಂ ತಲೆಯಂ ತೂಗಿ ಆಡುತ್ತ ಮುಂದಕ್ಕೆ ಬರಲು | ಆಡುತ್ತಲಿರ್ದ ಧರಣೇಂದ್ರನಂ ಕಂಡು | ಯೀಗ ನೀವು ನಂನ ಪಿಡಿದೊಡೆ ಯೆಂನ ಮೇಲೆ ಕಳವು ಬಂದೀತು ನಾನು ಕುಡುಗೋಲಂ ಕೊಟ್ಟು ಬಂದೆಪೆ ನೀನೇನ ಮಾಡಿಕೊಳ್ಳಬೇಕಾದುದ ಮಾಡಿಕೊಳ್ಳೆಂದು ನುಡಿವ ಪ್ರಸ್ತಾವದೊಳು | ಪದ್ಮಾವತಿಗಾಸನಂ ಕಂಪಮಾಗಿ ಧರಣೇಂದ್ರನ ಸಮೀಪಕ್ಕೆ ಬಂದು | ಯೆಲೆ ಧರಣೇಂದ್ರಾ ಯಿವರ ತಾಯಿ ತಂದೆ ಪಂಚ ಪರಮೇಷ್ಠಿಗಳ ನೋಂಪಿಯಂ ಅರ್ಕ್ಕವಾರದೊಳು ನೋಂಪಿಯಂ ನೋಂತು ಸುಖಮನೆಯ್ದಿದರು | ಮತ್ತಮೀತಂ ಸತ್ಯವಂತಂ ಐಶ್ವರ್ಯ್ಯಮುಪ್ಪ ಪರಕೆಯುಂ | ಮಹಾ ದಿವ್ಯ ಪದಕಮುಮೈದನರ್ಗ್ಘ್ಯ ರತ್ನಂಗಳಂ ಕೊಟ್ಟು ಕುಡುಗೋಲಂ ಕೊಟ್ಟು ಕಳುಪೊದೆನೆ ಧರಣೇಂದ್ರಂ ಕೇಳ್ದು ದಾರಿದ್ರ ವಿನಾಶನಮಪ್ಪುಭವ ನಿವಾರಣವೆಂಬ ಪರಕೆಯ ದುಣಲು ಮಹಾ ರತ್ನಂಗಳಂ ಕೊಟ್ಟು ಪೊಗಳ್ದವನಂ ಕಳುಪೆ | ಪರಕೆ ಸಹಿತಂ ಕುಡುಗೋಲುಮಂ ಕೊಂಡು ಮನೆಗೆ ಪೋಗೆ ಅವರ ಕುಡುಗೋಲಂ ಅವರಿಗೆ ಕೊಟ್ಟು ತಾನು ಧರಣೇಂದ್ರ ಪದ್ಮಾವತಿ ಕೊಟ್ಟ ಅನರ್ಗ್ಘ್ಯ ವಸ್ತುಗಳಂ ತಂನ ಬೀಡಿಗೆ ಕೊಂಡು ಪೋಗಿ ಸುಖದಿಂದಿರುತ್ತಂ ಆ ಕುಮಾರಂ ಧನ ಕನಕ ಸಮೃದ್ಧನಾಗಿ ಅನೇಕ ಐಶ್ವರ್ಯದೊಳ್ಕೂಡಿ ಸುಖಮಿರ್ದ್ದು ದಾನ ಪೂಜೆಗಳಂ ಮಾಡುತ್ತಮಿರಲು ವೊಂದು ದಿವಸಂ ರಾಜಶ್ರೇಷ್ಠಿಯೀತನಾ ಧನ ಧಾನ್ಯ ಸಂಪತ್ತುಮಂ ನೀವು ವಿಚಾರಿಸಿಮೆಂದು ಅರಸಿಂಗೆ ಪೇಳ್ದು | ಅರಸಂಗೆ ಪೋಗಿ ಪೇಳಲು | ಅರಸಂ ಕೇಳ್ದು ಚೋದ್ಯಂ ಬಟ್ಟು ಆತನಂ ಕರೆಯ ಕಳುಹಲಾ ಕುಮಾರಂ ಧರಣೇಂದ್ರ ಪದ್ಮಾವತಿ ಕೊಟ್ಟ ಹಾರಮಂ ಯಿಕ್ಕಿಕೊಂಡು ಜಿನೇಶ್ವರನಂ ಪೂಜೆಯಂ ಮಾಡಿ ಮನೆಗೆ ಬಂದು ಭೋಜನಮಂ ಮಾಡಿ ಅನೇಕ ವಸ್ತ್ರಾಭರಣ ಭೂಷಿತನಾಗಿ ಪೊಱಮಡೆ | ವೊರ್ವ್ವ ಭೃತ್ಯಂ ಯೆಲೆ ದೇವಾ ನಿಂಮನರಸಂ ಬರಹೇಳಿದನೆನೆ | ಆದೊಡೆ ನಡೆಯೆಂದು ಬಪ್ಪಾಗ ಅರಸು ಯೀತನಂ ಕಂಡು ಯೀತನೆತ್ತಣ ಕಳ್ಳ | ಯೀತ ಮಹಾಪುರುಷನೆಂದು ಮನದೊಳು ಬಗೆದು ಆ ಕುಮಾರನಂ ಸಮೀಪಕ್ಕೆ ಕರದು ಕುಮಾರನಂ ಕಂಡು ಪಾದಾಕ್ರಾಂತನಾಗಿರೆ ಅರಸಂ ಆತನಂ ಸಮೀಪಕ್ಕೆ ಕರದು ಕುಳ್ಳಿರಿಮೆಂದುದಂ ಆ ಸೆಟ್ಟಿ ಆಶ್ವರ್ಯ್ಯಂ ಬಟ್ಟು ನೋಡುತ್ತಮಿರೆ | ಅರಸಿಂಗೆ ಧರಣೇಂದ್ರ ಮಾಡಿದ ಪ್ರಭಾವಮಂ | ತಾನುಂ ಪುಲ್ಲತರ ಹೋದ ವೃತ್ತಾಂತಮಂ ಸವಿತ್ತರದಿಂ ಪೇಳ್ವುದುಂ ಅರಸನಿಂತೆಂದಂ | ಯೀತಂ ಮಹಾಪುರುಷನೆಂದು ತಂನ ಕುಮಾರಿಯಂ ಕೊಟ್ಟು ನವರತ್ನ ಖಚಿತ ವಿವಾಹ ಮಂಟಪಮಂ ಮಾಡಿ ಮಹಾ ವಿಭೂತಿ ಪೂರ್ವ್ವಕದಿಂ ತಂನ ಮಗಳಂ ಶುಭ ಮುಹೂರ್ತ್ತದೊಳು ಮದುವೆಯಂ ಮಾಡಿ ಸುಖದಲ್ಲಿ ಇರುತ್ತಂ ಸ್ತ್ರೀ ಪುರುಷರ ಮನೆಗೆ ಕಳುಪಲು ಬಪ್ಪಾಗ | ಆ ಕುಮಾರಂ ತನಗೆ ವುಪಕರಿಸಿದ ಸೆಟ್ಟಿಯ ಮನೆಗೆ ಪೋಗಿ ಸೆಟ್ಟಿಯ ಕಾಲಿಂಗೆಱಗಿ | ಯಿದು ನಿಂನ ಪ್ರಸಾದದಿಂದಿನಿತಾಯ್ತೆಂದು ಪೇಳೆ ಕೇಳ್ದು ಹರುಷವಟ್ಟು ಪರಕೆಯಂ ಕೊಂಡು ಮನೆಗೆ ವಂದು ಸುಖಮಿರುತ್ತಿರಲು | ಕೆಲವು ದಿನಕ್ಕೆ ತಂನ ತಾಯಿ ತಂದೆಯ ನೆನದು ಅರಸನ ಸಮೀಪಕ್ಕೆ ತಕ್ಕಂತು ಸುವಸ್ತು ವಾಹನ ಆಭರಣಂಗಳಂ ಬಳುವಳಿಯಂ ಕೊಟ್ಟು ಕಳುಪಲುಂ ಆ ಕುಮಾರಂ ವಾರಣಾಸಿಗೆ ಬಂದು ಮಹದೈಶ್ವರ್ಯ್ಯದಿಂ ತಾಯ್ತುಂದೆಯಂ ಕಂಡು ಪೊಡವಟ್ಟು ತಾನುಂ ಬಂದ ವೃತ್ತಾಂತಮಂ ವೋರೊರ್ವ್ವರುಂ ಪೇಳೆ ಕೇಳ್ದು ಸಂತೋಷಂ ಬಿಟ್ಟು ಸುಖಮಿರಲು ಯೀ ಭವಾವಳಿಯ ಕೇಳ್ದು ಮುಂನಿನ ನೋಂಪಿಯಂ ಕೈಕೊಂಡು ನೋಂತು ಸ್ವರ್ಗ್ಗಾಪವರ್ಗ್ಗಮಂ ಪಡದರು | ಅದು ಕಾರಣಂ ಭಕ್ತಿ ಪೂರ್ವ್ವಕಂ ಸಮ್ಯಗ್ದರ್ಶನ ಶುದ್ಧರಾಗಿ ನೆನೆದ ಫಲಮಕ್ಕು | ಯೀ ಪ್ರಕಾರದಿಂದಾದಿತ್ಯವಾರದ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಸ್ವರ್ಗ್ಗಾಪವರ್ಗ್ಗಮಂ ಪಡವರು ಮಂಗಳ ಮಹಾ ಶ್ರೀ