| ಶ್ರೀ ವೀತರಾಗಾಯ ನಮಃ |

ಶ್ರೀವರ್ದ್ಧಮಾನ ಜಿನನಂ
ಕೇವಲ ಬೋಧಸ್ವರೂಪನಂ ವಂದಿಸಿ ನಾಂ
ಭೂವಳಿಯದೊಳತಿ ಹಿತಮಂ
ಭಾವಕರಿಗೆ ಲಬ್ಧಿ ವಿಧಿಯ ಕಥೆಯಂ ಪೇಳ್ವೆಂ ||

ವ || ಅದೆಂತೆಂದೊಡೆ ಜಂಬೂದ್ವೀಪದ ಭರತ ಕ್ಷೇತ್ರದೊಳು ಮಗಧೆಯೆಂಬುದು ನಾಡು ರಾಜಗೃಹಮೆಂಬುದು ಪೊಳಲನಾಳ್ವಂ ಪರಮ ಕ್ಷಾಯಿಕ ಸಮ್ಯಗ್ದೃಷ್ಟಿಯಪ್ಪ ಶ್ರೇಣಿಕ ಮಹಾರಾಜನಾತನ ಪಟ್ಟದರಸಿ ಶೀಲಗುನ ಸಂಪಂನೆ ಪರಮದರ್ಶನೆ ಧಾರಿಣಿ ಚೇಳಿನಿ ಮಹಾದೇವಿಯೆಂಬಳಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೈಯುತ್ತಮಿರಲೊಂದು ದಿವಸಂ ವನಪಾಲಕಂ ಬಂದು ಸಾಷ್ಟಾಂಗವೆರಗಿ ಪೊಡವಟ್ಟು ಬಿಂನಪಮೆಂದಿಂತೆಂದನೆಲೆ ಮಹಾರಾಜಾ ನಂಮ ವಿಪುಲಾಚಲದೊಳು ಶ್ರೀ ವೀರವರ್ದ್ಧಮಾನ ತೀರ್ತ್ಥಕರ ಸಮವಸರಣಂ ಬಂದು ನೆಲಸಿರ್ದ್ದುದೆಂದು ಬಿಂನಪಂಗೆಯ್ಯೆ ತದ್ವಚನಮಂ ಕೇಳ್ದು ಸಿಂಹಾಸನದಿಂನೆರ್ದ್ದಾ ದೆಸೆಗೇಳಡಿಯಂ ನಡದು ಸಾಷ್ಟಾಂಗ ಪ್ರಣುತನಾಗಿ ವನಪಾಲಕಂಗಂಗ ಚಿತ್ತಮುನಿತ್ತು ಆನಂದ ಭೇರಿಯಂ ಪೊಯಿಸಿ ಪುರಜನಪರಿಜನಾಂತ : ಪುರಜನ ಸಮನ್ವಿತವಾಗಿ ಸಮವಸರಣಮನೈದಿ ಗಂಧಕುಟಿಯಂ ತ್ರಿಃಪ್ರದಕ್ಷಿಣೆಂಗೆಯ್ದನೇಕ ಸ್ತುತಿ ಶತಸಹಸ್ರಂಗಳಿಂ ಸ್ತುತಿಯಿಸಿ ತದನಂತರಂ ಗೌತಮ ಗಣಧರರು ಮೊದಲಾದ ಸಮಸ್ತ ಋಷಿ ಸಮೂಹಮಂ ಗುರು ಪರಿವಿಡಿಯಿಂ ವಂದಿಸಿ ಪಂನೊಂದನೆಯ ಮನುಷ್ಯ ಕೋಷ್ಠದೊಳ್ಕುಳ್ಳಿರ್ದ್ದು ನಿರ್ಮ್ಮಲ ಚಿತ್ತದಿಂ ಜೀವಾದಿ ವಸ್ತು ಸ್ವರೂಪಮಂ ಸಾಗಾರನಾಗಾರ ಧರ್ಮ್ಮ ಸ್ವರೂಪಮಂ ಚತುರಾನುಯೋಗ ಸ್ವರೂಪಮಂ ಬೆಸಸೆ ಕೇಳ್ದು ಸಂತುಷ್ಟಚಿತ್ತನಾಗಿ ತದನಂತರಂ ಶ್ರೇಣಿಕ ಮಹಾರಾಜಂ ಮತ್ತಮಿಂತೆಂದು ಬೆಸಗೊಂಡನೆಲೆ ಸ್ವಾಮಿ | ಯೀ ಗೌತಮ ಗಣಧರಂ ಬ್ರಾಹ್ಮಣ ಕುಲದೊಳು ಪುಟ್ಟಿ ಯಿಂತಪ್ಪಗಣಧರ ಪದವಿಯನದಾವ ಪುಂಣ್ಯದಷಾ ಮಾತ್ರದಿಂ ಪಡದನೆನಗದಂ ಬೆಸಸಿ ಯೆನಲಾ ಪರಮೇಶ್ವರಂ | ಗೌತಮ ಗಣಧರ ವೃತ್ತಾಂತಮಂ ಶ್ರೇಣಿಕ ಮಹಾಮಂಡಲೇಶ್ವರಂಗಿಂತೆಂದು ಬೆಸಸಿದರೀ ಜಂಬೂದ್ವೀಪದ ಭರತ ಕ್ಷೇತ್ರದೊಳು ಕಾಶಿಯೆಂಬುದು ನಾಡು | ವಾರಣಾಸಿಯೆಂಬುದು ಪುರಮದನಾಳ್ವಂ | ವಿಶ್ವಲೋಭನೆಂಬರಸನಾತನ ಪಟ್ಟದರಸಿ ವಿಶಾಲಾಕ್ಷಿಯೆಂಬಳಂತವರೀರ್ವ್ವರೂ | ರಾಜ್ಯ ಸುಖಮನನುಭವಿಸುತ್ತಿರಲೊಂದು ದಿವಸಮರಸು ಪೊರಗಿರೆ ವಿಶಾಲಾಕ್ಷಿ ಗವಾಕ್ಷದಿ ನಾಟಕಮಂ ನೋಡಿ ಚಂಚಲ ಚಿತ್ತೆಯಾಗಿ | ಯೆನ್ನನೀಯರಸು ಸೆರೆಯೊಳಿಕ್ಕಿದಂ | ಸ್ವೇಚ್ಛಾ ವಿಹಾರಮಂ ಪಡದೆನಿಲ್ಲೆಂದು ಚಿಂತಿಸಿ ಕೃತ್ರಿಮ ಸ್ತ್ರೀರೂಪಂ ಮಾಡಿ ತಂನ ವಸ್ತ್ರಾಭರಣದಿಂದಮಾ ಸ್ತ್ರೀರೂಪನಲಂಕರಿಸಿ ಮಂಚದೊಳ್ಮಲಗಿಸಿದಂತು ಮಾಡಿ ತಾನುಂ ಚಾಮರೆ ರಂಗಿಯೆಂದಬಿರ್ವ್ವರು ಚೇಟಿಯರಂ ಕೂಡಿಕೊಂಡು ರಾತ್ರಿಯೊಳು ಕ್ಷುಲ್ಲಕ ದ್ವಾರದಿ ಪೊಱಮಟ್ಟು ಪೋದಳಂನೆಗಮಿತ್ತಲರಸಂ ಬಂದು ತಂನರಸಿಯುಂ ಕಾಣದೆ ಬಹುಶೋಕಂಗೆಯ್ದು ಸ್ತ್ರೀಯರು ಮಾಡದ ಮಾಯೆ ಈ ಲೋಕದೊಳಾವುದುಮಿಲ್ಲೆಂದು ಸ್ತ್ರೀಯರ ಮಾಯಾ ಪ್ರಪಂಚಮಂ ಮನದೊಳು ಚಿಂತಿಸುತ್ತಂ ತದ್ಭಿಯೋಗದಿಂದಾರ್ತ್ಥಧ್ಯಾನಮನೆಯ್ದಿ ತದ್ದುಃಖದಿಂ ಮರಣಮನೆಯ್ದಿದನಾತನ ಮಂತ್ರಿಗಳು ತತ್ಪುತ್ರನಂ ರಾಜ್ಯಂಸ್ಥನಂ ಮಾಡಿದರಿತ್ತಲು ಮೂವರು ಸ್ತ್ರೀಯರುಂ ಯೋಗಿನಿ ರೂಪಂ ಧರಿಸಿ ಕಂಥೇ ವಾದುಕ ಯೋಗ ದಂಡ ಖರ್ಪ್ಪರಮಂ ಸ್ವೀಕರಿಸಿ ಯೋಗಿನಿ ರೂಪಂ ಧರಿಸಿ ಕಂಥೇ ವಾದುಕ ಯೋಗ ದಂಡ ಖರ್ಪ್ಪರಮಂ ಸ್ವೀಕರಿಸಿ ಯೋಗಿನಿ ವೃಂದಮಂ ಕೂಡಿಕೊಂಡು ಸ್ವೇಚ್ಛಾ ವಿಹಾರದಿಂ ವಿಹರಿಸುತ್ತಂ ಕಾಮಾಕುಲೆಯರಾಗಿ ಬ್ರಾಹ್ಮಣಂ ಮೊದಲಾಗಿ ಚಾಂಡಾಲಂ ಕಡೆಯಾದವರೊಳು ವರ್ತ್ತಿಸುತ್ತಂ ಜನಂಗಳನಸತ್ಯದಿಂ ಮೋಹಿಸುತ್ತ ಮುಜ್ಜೆನಿಗೆ ಬರಲಾಪ್ರಸ್ತಾವದೊಳು ಧರ್ಮ್ಮಾಚಾರ್ಯರೆಂಬ ಮುನೀಶ್ವರನಾ ಚರ್ಯ್ಯಾ ಮಾರ್ಗದಿಂ ಚಾವಡಿಗೊಟ್ಟು ಬಿಜಯಂ ಮಾಡುತ್ತಿರ್ದ್ದನಂ ಕಂಡು ತಂಮನಿಬರುಂ ಯೆಲೆ ಲಜ್ಜೆಗೆಡೆ ಸ್ತ್ರೀಜನ ಮಧ್ಯದೊಳೇಕೆ ನಗ್ನರೂಪದಿಂ ಭ್ರಮಿಸುತಿರ್ದ್ದಪೆ ಯೆಮಗೆ ರಾಜಮಂದಿರಕ್ಕೆ ಪೋಪವರ್ಗ್ಗಪಸಕುನಂ ಮಾಡಿದೆ ಯದಱ ಫಲಮನಿಂದಿರುಳೊಳು ತೋಱೆದಪ್ಪೆವೆಂದು ಪೇಳಿ ಪೋಗಿ ಮುನೀಶ್ವರನವರ ಕೆಡೆನುಡಿಗೇಳ್ದು ಚರ್ಯ್ಯಾಂತರಾಯ ಮಾದೊಡೆ ತಿರಿಗಿ ವನಕ್ಕೆ ಪೋಗಿ ಕಾಯೋತ್ಸರ್ಗದೊಳಿರ್ದ್ದನಂನೆಗಮಾ ಮೂವರುಂ ಸ್ತ್ರೀಯರುಂ ಬಂದು ಪರಮ ಮನೀಶ್ವರಂಗನೇಕುಪಸರ್ಗ್ಗಮನೊಡರ್ಚ್ಚಿದ ರಂತುಗ್ರೋಪಸರ್ಗ್ಗಮನೊಡರ್ಚ್ಚಿದೊಡಂ ಪರಮೋಪಶಮಮನವಲಂಬಿಸಿ ಚಿತ್ತದೊಳು ಮೇರುಗಿರಿಯಂತಚಲಿತನಾಗಿರ್ದ್ದನಂನೆಗಂ ಪ್ರಭಾತ ಸಮಯಮಾಗೆ ಜನಂಗಳ ಗಮನಾಗಮನಮಂ ಕಂಡು ಭೀತಿಯಂ ತಾವನಿಬರುಂ ಕಂಡಕಡೆಗೋಡಿ ಪೋದರಂನೆಗಮಲ್ಲಿಯ ಶ್ರಾವಕರುಂ ಬಂದು ಮುನೀಶರಗಾದುಪಸರ್ಗ್ಗಮನಱಿದು ಮಹಾನುಭಾವನಿಂತಪ್ಪುಪಸರ್ಗ್ಗಮಂ ಧೈರ್ಯದಿಂ ಗೆಲ್ದನೆಂದನೇಕಾರ್ಚ್ಚನೆಗಳಿಂದರ್ಚ್ಛಿಸಿ ವಂದಿಸಿ ಧರ್ಮ ಪ್ರಭಾವನೆಯಂ ಮಾಡಿ ಪೋದರಂನೆಗಮಿತ್ತಲಾ ಮೂವರು ಸ್ತ್ರೀಯರುಂ ಸರ್ವ್ವಾಂಗದೊಳು ತತ್ಪಾಪ ಫಲದಿಂದ ಕುಷ್ಠವ್ಯಾಧಿ ಪುಟ್ಟಿ ನವದು ಸತ್ತೈದನೆಯ ನರಕದೊಳ್ಪುಟ್ಟಿದರಲ್ಲಿ ಕ್ಷೇತ್ರ ಜನಿತಮುಂ ಕಾಯೀದ್ಭವರುಂ ಮಾನನಿಕಮುಂ ಪರಸ್ಪರ ಸಂಜಾತಯುಂ ಮೊದಲಾದನೇಕ ದುಃಖಮಂ ಪದಿನೇಳು ಸಾಗರೋಪಮ ಕಾಲಪರ್ಯ್ಯಂತಮನುಭವಿಸಿ ಯೆಂತಾನು ಕಾಲಕ್ಕಲ್ಲಿಂ ಪೊಱವಟ್ಟು ಬೆಕ್ಕುಗಳುಂ ಹಂದಿಗಳುಂ ನಾಯಿಗಳುಂ ಕೋಳಿಗಳುಮಾಗಿ ಪುಟ್ಟಿ ದುಃಖಮನುಂಡು ಸತ್ತುಮುಜ್ಜಯಿನಿಯೊಳ್ತುಱು ಪಟ್ಟಿಕಾಱಂ ದೇವಿಲನೆಂಬಂಗೆ ಪುತ್ರಿಯುಂ ಪೌತ್ರಿಯುಂ ದೌಹಿತ್ರಿಯುಮೆಂಬ ಮೂವರುಂ ಕಂನೆಯರಾದರವರು ಪುಟ್ಟಿದ ಮುಹೂರ್ತ್ತದೊಳ್ತಂದೆ ತಾಯಿ ಬಂಧು ಜನಂ ಮೊದಲಾದವರು ಸರ್ವ್ವರುಂ ಮರಣಮನೆಯ್ದಿದರು ಧನಮುಂ ನಾಶಮಾದುದು ದೇಶದೊಳಂ ದುರ್ಬ್ಬಿಕ್ಷಮಾದುವಂತಾಗಲೊಡಮುಣಲುಮುಡಲುಮಿಲ್ಲದೆಉ ಭೈಕ್ಷಾಹಾರದಿಂ ಜೀವನೋಪಾಯಮನಾಗಿ ಜೀರ್ನ್ನ ವಸ್ತ್ರ ಮನಾವರಿಸಿಕೊಂಡು ಭಿಕ್ಷಾರ್ತ್ಥಂ ದೇಶ ಗ್ರಾಮಂಗಳೊಳು ಭ್ರಮಿಯಿಸುತ್ತಂ ಪುಷ್ಪಪುರಮನೆಯ್ದಿದಾ ಪ್ರಸ್ತಾವದೊಳಂಗಭೂಷಣ ಮುನಿರಾಜಂ ಸಮಸ್ತ ಭ್ರಮಿಯಿಸುತ್ತಂ ಪುಷ್ಪಪುರಮನೆಯ್ದಿದಾ ಪ್ರಸ್ತಾವದೊಳಂಗಭೂಷಣ ಮುನಿರಾಜಂ ಸಮಸ್ತ ಮುನಿ ಸಮುದಾಯಂ ಬೆರಸು ತತ್ಪುರೋದ್ಯಾನಕ್ಕೆ ಬಿಜಯಂಗೆಯ್ದನೆಂಬ ವಾರ್ತ್ತೆಯಂ ವನಪಾಲಕನಿಂದಱಿದು ತತ್ಪುರಾಧೀಶ್ವರಂ ಮಹಿಚಂದ್ರ ಮಹಾರಾಜಂ ಪುರಜನ ಪರಿಜನ ಅಂತಃಪುರಜನ ಸಹಿತನಾಗಿ ತದುದ್ಯಾನಮಯ್ದಿ ತನ್ಮುನೀಶ್ಚರನಂ ಫಲವರ್ಚ್ಚನೆಗಳಿಂದರ್ಚ್ಛಿಸಿ ವಂದಿಸಿ ಮುಂದೆ ಕುಳ್ಳಿರ್ದ್ದು ನಿರ್ಮ್ಮಲಚಿತ್ತದಿಂ ಧರ್ಮ್ಮ ಸ್ವರೂಪಮಂ ಕೇಳ್ದು ಪರಮಾನಂದದಿಂ ರೋಮಾಂಚ ಕಂಚುಕಿತ ಶರೀರನಾದನನಂತರ ಭಿಕ್ಷಾರ್ತ್ಥಮಾಗಿ ತಿರಿಗುತ್ತಲ್ಲಿರೆ ಬಂದ ಮೂವರುಂ ಕಂನಿಕೆಯರು ಮಹಿಚಂದ್ರಂ ಮೊದಲಾದ ಜನಂಗಳ ಮೇಳಾಪಕಮನಾ ವನದೊಳ್ಕಂಡು ತಮಗಾಶ್ಚರ್ಯ್ಯಮಾಗಿ ನೋಡುತ್ತಂ ಭಿಕ್ಷೆಗೆ ಪೋಗದಲ್ಲಿಯ ಮುನಿ ಸಂನಿಧಿಯೊಳಿರ್ದ್ದವರಂ ಕಂಡು ತನಗವರ ಮೇಲತ್ಯಂತ ಮೋಹಮಾಗಿ ಮಹಿಚಂದ್ರ ಮಹಿರಾಜಂ ತನ್ಮುನೀಶ್ವರನಿಂತೆಂದು ಬೆಸಸಿದನು ನೀಂ ಮುಂನ ಕಾಶಿದೇಶದೊಳು ವಾರಣಸಿಯೆಂಬ ಪುರದೊಳು ನೀ ವಿಶ್ವಲೋಭನನೆಂಬರಸನಾಗಿರ್ದ್ದೆಯಿಕೆ ನಿಂನರಸಿ ವಿಶಾಲಾಕ್ಷಿಯೆಂಬಳು ಯಿವಂದಿರಿಬ್ಬರು ಕಂನೆಯರು ಚಾಮರೆ ರಂಗಿಯೆಂಬ ಚೇಟಿಯರುಮೊಂದು ದಿನಂ ನಿಂನರಸಿ ನಾಟಕಮರೆ ನೋಡಿ ಚಂಚಲಚಿತ್ತೆಯಾಗಿ ಚಾಮರೆ ರಂಗಿಯೆಂಬ ಚೇಟಿಯರಂ ಕೂಡಿಕೊಂಡು ಕ್ಷುಲ್ಲಕ ದ್ವಾರದಿಂ ಪೊಱಮಟ್ಟು ಪೋಗಿ ಯೋಗಿನಿ ರೂಪ ಧರಿಸಿ ಸ್ವೇಚ್ಛಾವಿಹಾರದಿಂ ವಿಹಾರಿಸುತ್ತಮುಜ್ಜಯಿನಿಗೆ ಬಂದು ಧರ್ಮ್ಮಾಚಾರ್ಯ್ಯಂ ಗುಪಸರ್ಗಮನೆಸಗಿ ತತ್ಪಾಪ ಫಲದಿಂದದಯ್ದನೆಯ ನರಕದೊಳ್ಪುಟ್ಟಿ ಬಹುತರ ದುಃಖಮನುಂಡುಮಲ್ಲಿಂದ ಬಂದು ಬೆಕ್ಕು ಹಂದಿ ನಾಯಿ ಕೋಳಿಗಳಾಗಿ ಪುಟ್ಟಿ ಬಹು ದುಃಖಮನುಂಡನು ಕ್ರಮದಿಂದುಜ್ಜನಿಯನಿಯೊಳ್ತುಱು ಪಟ್ಟಿಯೊಳು ದೇವಿಲನೆಂಬ ಪಟ್ಟಕಾಱಗೆ ಮೂವರು ಕಂನೆಯರಾಗಿ ಪುಟ್ಟಿದರಂದು ತಾಯಿ ತಂದೆ ಬಂಧುಗಳೆಲ್ಲಂ ಸಾಯಲುಮುಣಲುಮುಡಲುಮಿಲ್ಲದೆ ಜಿರ್ಣ್ನ ವಸ್ತ್ರಂಮನಾವರಿಸಿಕೊಂಡು ಭಿಕ್ಷಾರ್ತ್ಥಣ ದೇಶ ಗ್ರಾಮ ಪುರಂಗಳಂ ಪುಗುತ್ತಮಿಲ್ಲಿಗೆ ಬಂದರು ನೀನುಮಾ ವಿಶಾಲಾಕ್ಷಿಯ ವಿಯೋಗದಿಂ ಬಹು ಶೋಕಂಗೆಯ್ದು ಸತ್ತು ಸಂಸಾರದೊಳು ಭ್ರಮಿಸಿ ಮತ್ತೊಂಮೆ…ಯಾಗಿ ಪುಟ್ಟಿದಲ್ಲಿ ದಿವ್ಯ ಮುನೀಶ್ವರನೊರ್ವ್ವಂ ಸಂಬೋಧಿಸಿ ಶ್ರಾವಕ ವ್ರತಮಂ ಕೈಕೊಂಡು ನಡದು ಕಡೆಯೊಳು ಸನ್ಯಸನದಿಂ ಮರಣಮನೆಯ್ದು ಮೊದಲ ಸೌಧರ್ಮ್ಮ ಕಲ್ಪದೊಳು ದೇವನಾಗಿ ಪುಟ್ಟಿಯಲ್ಲಿಂದಂ ಬಂದು ನೀನಿಲ್ಲಿ ಮಹಿಚಂದ್ರನಾದೆ ಯಿಂನು ಕತಿಪಯ ಭವಂಗಳಿಂ ಮುಕ್ತ್ಯಂಗನಾ ಪೀ ನ ಪಯೋಧರಮನಾಲಿಂಗನಂಗೆಯ್ದಪೆಯದು ಕಾರಣಮಾಗಿ ನಿನಗಿವರ ಮೇಲತ್ಯಂತ ಮೋಹಮಾದುವೆಂದು ಬೆಸಸೆ ಕೇಳ್ದು ಮಹಿಚಂದ್ರ ಮಹಾರಾಜಂ ಸಂಸಾರದ ವಿಚಿತ್ರತೆಗೆ ವೈರಾಗ್ಯಮನೆಯ್ದು ತನ್ಮುನಿ ಸಮಕ್ಷದೊಳು ದೀಕ್ಷೆಯಂ ಕೈಕೊಂಡನಾ ಮೂವರು ಕಂನೆಯರುಂ ತಂಮ ಭವಾವಳಿಯಂ ಕೇಳ್ದು ಹರುಷಚಿತ್ತೆಯರಾಗಿ ತನ್ಮುನಿಯ ಪಾದಪದ್ಮಕ್ಕೆಱಗಿ ಕೈಗಳಂ ಮುಗಿದು ಬಿಂನಪಮೆಂದಿಂತೆಂದರೆಲೆ ಸ್ವಾಮಿ ನಾವು ಗೆಯ್ದ ಪಾಪಮದತ್ಯಂತ ಪಿರಿದದಂ ತೊಲಗಿಸು ಸಂಸಾರ ದುಃಖಮಂ ಪಿಂಗಿಸೆಂದು ಬಿಂನಪಂ ಗೆಯ್ಯೆ ತದ್ಭಚನಮಂ ಕೇಳ್ದು ಮುನಿರಾಜನಿಂತೆಂದು ಬೆಸಸಿದನೆಲೆ ಮಕ್ಕಳಿರಾ ನಿಮಗಿಂನು ಲಬ್ಧಿ ವಿಧಾನಮೆ ಯೋಗ್ಯಮೆಂಬುದುಮಂತಾದೊಡಾ ನೋಂಪಿಯ ವಿಧಾನಮಂ ಬೆಸಸಿಮೆನಲವರಿಂತೆಂದು ಬೆಸಸಿದರು ಭಾದ್ರಪದ ಮಾಸದ ಶುಕ್ಲ ಪಕ್ಷದ ಪಾಡ್ಯಂ ಮೊದಲ್ಗೊಂಡು ದಿನತ್ರಯ ಪರ್ಯ್ಯಂತಂ ಬ್ರಹ್ಮಚರ್ಯ್ಯಪೂರ್ವಕ ಮುಪವಾಸಮಂ ಮೇಣೇಕಾಂತಮಂ ಶಕ್ತಿಗೆ ತಕ್ಕಂತು ಕೈಕೊಂಡು ತ್ರಿಕಾಲದಲ್ಲಿ ಮಹಾಭಿಷೇಕಷ್ಟ ವಿಧಾರ್ಚನೆಗಳಂ ಮಾಡಿ ಅಪರಾಜಿತ ಮಂತ್ರದಿಂ ನೂಱೆಂಟು ಪುಷ್ಪಮನಿಕ್ಕಿವುದು ರಾತ್ರಿಯೊಳು ಜಾಗರಮಂ ಮಾಳ್ಪುದು ನೃತ್ಯಗೀತ ವಾದ್ಯಂಗಳಿಂ ಧರ್ಮ್ಮಕಥಾ ವಿನೋದದಿಂದ ರಾತ್ರಿಯಂ ಕಳೆವುದಿಂತೀ ಕ್ರಮದಿಂ ಮೂಱು ವರುಷಂ ನೋಂತುದ್ಯಾಪನೆಯಂ ಮಾಳ್ಪುದಾವುದ್ಯಾಪನೆಯಂ ಮಾಳ್ಪ ಕ್ರಮದೆಂತೆಂದೊಡೆ ವರ್ದ್ಧಮಾನ ತೀರ್ತ್ಥಕರ ಪ್ರತಿಮೆಯಂ ಮಾಡಿಸುವುದು ಶಾಂತಿಕಮಂ ಮಾಳ್ಪುದು ಮಹಾಭಿಷೇಕ ಪೂಜೆಯಂ ಮಾಳ್ಪುದು ಅಷ್ಟವಿಧಾರ್ಚ್ಚನಾ ದ್ರವ್ಯದಿಂದೆ ಮಾಳ್ಪುದು ತದನಂತರಂ ಶ್ರುತ ಪೂಜೆಯಂ ಗುರುಪೂಜೆಯಂ ಮಾಳ್ಪುದು ನೂಱೆಂಟು ತಂಡುಲ ಪುಂಜಮನಿಕ್ಕುವುದು ಆ ಪುಂಜದ ಮೇಲೆ ಪುಷ್ಪ ನೈವೇದ್ಯ ದೀಪ ಧೂಪ ಫಲಂಗಳಂ ದ್ರವ್ಯಂಗಳಂ ಯಥಾ ಶೌಚಮಾಗಿ ಅರ್ಚ್ಛನೆಯಂ ಮಾಳ್ಪುದು ಚೈತ್ಯಾಲಯಕ್ಕೆ ವುಪಕರಣಂಗಳಂ ಕುಡುವುದು ಚತುರ್ವ್ವಿಧ ಸಂಘಕ್ಕಾಹಾರ ದಾನವಂ ಮಾಳ್ಪುದು ಆರು ಕೆಲಂಬರಿಗೆ ಉದ್ಯಾಪನೆಯಂ ಮಾಳ್ಪ ಸಾಮರ್ತ್ಥ್ಯಂ ದೊರೆಕೊಳ್ಳದವರುಗಳುಂ ಭಕ್ತಿ ಪೂರ್ವಕಮಾಗಿ ಮತ್ತಂ ಮೂಱು ವರುಷಂ ನೋಂಪಿಯಂ ಮಾಡುವುದೆಂದು ನೋಂಪಿಯ ವ್ರತಮಂ ಮುನೀಶ್ವರಂ ಬೆಸಸೆ ಕೇಳ್ದು ತಾವು ಮೂವರುಮಾ ನೋಂಪಿಯಂ ಕೈಕೊಂಡು ಶ್ರಾವಕರ ಸಹಾಯದಿಂದಾ ನೋಂಪಿಯಂ ನೋಂತು ಶಕ್ತಿಗೆ ತಕ್ಕಂತುದ್ಯಾಪನೆಯಂ ಮಾಡಿಸಿಯಾಯುರಾವಸಾನದೊಳು ಸನ್ಯಸನ ಪೂರ್ವ್ವಕಂ ಸಮಾಧಿ ಮರಣಮನೆಯ್ದಿ ಪಂಚಮ ಸ್ವರ್ಗ್ಗದೊಳು ಮಹರ್ದ್ದಿಕ ದೇವರ್ಕ್ಕಳಾಗಿ ಪುಟ್ಟಿದರವರು ನಿಜಾವಧಿಜ್ಞಾನದಿಂ ವ್ರತ ಫಲದಿಂದಾದ ನಿಜೈಶ್ವರ್ಯಮಂ ಕಂಡು ಜಿನಧರ್ಮ್ಮ ದೊಳ್ ದೃಢತರರಾದರೆಲ್ಲರೆಲೆ ಶ್ರೇಣಿಕ ಮಹಾರಾಜಾ ಯಿಂನವರವತಾರಮಂ ಕೇಳದೆಂತೆಂದೊಡೆ ಮಘದ ದೇಶದೊಳು ಬ್ರಾಹ್ಮಣ ಪುರದೊಳು ಕಾಶ್ಯಪ ಗೋತ್ರ ಗಗನ ಚಂದ್ರನಪ್ಪ ಶೌಂಡಲ್ಯನೆಂಬ ಬ್ರಾಹ್ಮಣಂಗಂಮಾತನ ಬ್ರಾಹ್ಮಣಿ ಶಾಂಡಿಲ್ಯಾ ಕೇಸರಿಗಂ ಸ್ವರ್ಗದಿಂದಾ ದೇವರ್ಕ್ಕಳು ಪತ್ತು ಸಾಗರೋಪಮ ಕಾಲ ಪರ್ಯ್ಯಂತಂ ದಿವ್ಯ ಸುಖಮನನುಭವಿಸಿಯಾಯುರವಸಾನದೊಳಲ್ಲಿಂದಂ ಬಂದು ಗೌತಮನುಂ ಗಾರ್ಗ್ಯನುಂ ಭಾರ್ಗ್ಯವನುಮೆಂಬ ಮೂವರು ಮಕ್ಕಳಾದರು ಅವರು ಪುಟ್ಟಿದ ಮುಹೂರ್ತ್ತದೊಳು ಪುರದೊಳು ಪರಮಾನಂದಮಾದುದಂತವರು ತರ್ಕ್ಕ ವ್ಯಾಕರಣ ಛಂದೋಲಂಕಾರ ಕಾವ್ಯ ನಾಟಕ ಜ್ಯೋತಿಷ್ಯ ವೇದ ಪುರಾಣಂಗಳೊಳು ಪ್ರಸಿದ್ಧರಾದವರೊಳು ಗೌತಮಂ ತರ್ಕ್ಕ ಶಾಸ್ತ್ರದೊಳ್ ಪ್ರಚಂಡರಾದವರೊಳೊರ್ವ್ವರೊರ್ವ್ವರಿಗೈನೂರ್ವ್ವರೈನೂರ್ವ್ವರು ಶಿಷ್ಯರಾದರಂತವರ್ಸುಖದಿಂದಿರಲಿತ್ತ ಶ್ರೀ ಕುಂಡಪುರದೊಳು ಸಿದ್ಧಾರ್ಢನೆಂಬ ಮಹಾರಾಜಂಗಮಾತನ ಪ್ರಾಣವಲ್ಲಭೆಯಪ್ಪ ಪ್ರಿಯಕಾರಿಣಿಗಂ ಶ್ರೀ ವರ್ದ್ಧಮಾನ ತೀರ್ತ್ಥಕರನೆಂಬ ಕಡೆಯ ತೀರ್ತ್ಥಂಕರಂ ಪುಟ್ಟಿದನಾತಂ ಮೂವತ್ತು ವರುಷಂ ಕುಮಾರಕಾಲಂ ಪೋದಿ ಬಳಿಯಂ ದೀಕ್ಷೆಯಂ ಕೈಕೊಂಡು ಪಂನೆರಡು ವರುಷಂ ತಪಸ್ವಿನೊಳಿರ್ದ್ದು ಕೇವಲ ಜ್ಞಾನಮಂ ಪಡದು ಸಮವಸರಣಾಷ್ಟ ಮಹಾಪ್ರಾತಿಹಾರ್ಯ್ಯ ಚತುರ್ವಿಂಶದಂತಿಶಯ ಶೋಭಿತವಾಗಿರ್ದ್ದ ವರ್ದ್ಧಮಾನ ತೀರ್ತ್ಥೇಶ್ವರನಂ ಕಂಡು ದೇವೇಂದ್ರನಿಂತೆಂದು ಬಗೆದನಿದೇನು ಕಾರಣ ಸರ್ವ್ವಂಜ್ಞಂಗೆ ದಿವ್ಯ ಧ್ವನಿ ಪೊಱಮಡದಂದು ನಿಜಾವಧಿಯಿಂ ಗಣಧರರಿಲ್ಲದ ಕಾರಣಂ ದಿವ್ಯ ಧ್ವನಿ ಪೊಱಮಡದೆಂದಱಿತು ವೃದ್ಧ ಬ್ರಾಹ್ಮಣ ವೇಷಮಂ ಧರಿಸಿ ನಡುಗುವ ಕಯ್ಯಿಂದ ಮುಷ್ಟಿಯಂ ಪಿಡಿದುಕೊಂಡು ಬ್ರಾಹ್ಮಣಪುರದೊಳಿರ್ದ್ದ ಗೌತಮನಧ್ಯಯನ ಶಾಲೆಗೆ ವಂದು ಎಲೆ ಬ್ರಾಹ್ಮಣಾ ಯೆಂನ ಶ್ಲೋಕಾರ್ತ್ಥಮಂ ವ್ಯಾಖ್ಯಾನಿಸು ಯೆಂನ ಗುರು ಮೌನವ್ರತಮಂ ಕೈಕೊಂಡಿರ್ದ್ದಪಡೆಂನ ಶ್ಲೋಕಾರ್ತ್ಥಮಂ ಪೇಳ್ದೆಯಾದಡಾಂ ನಿಂನ ಶಿಷ್ಯನಪ್ಪೆನಲ್ಲದಂದು ನೀವೆಂನ ಗುರುವಿನ ಶಿಷ್ಯರಾಗಲ್ವೇಳ್ಕುಮೆಂದು ತಂದೆ ಮುಂತಾದ ಸರ್ವ್ವಜ್ಞನ ಸಾಕ್ಷಿಕಮಾಗಿ ಪ್ರತಿಜ್ಞೆಯ ಮಾಡಿದೊಡಂತಾಗಲಿ ನಿಂನ ಶ್ಲೋಕಮಂ ಪಠಿಸೆಂದುಪೇಳೆ ಬ್ರಾಹ್ಮಣನಿಂತೆಂದಂ

ತ್ರೈಕಾಲ್ಯಂ ದ್ರವ್ಯ ಷಟ್ಕಂ ನವಪದ ಸಹಿತಂ ಜೀವ ಷಟ್ಕಾಯಲೇಶ್ಯಃ
ಪಂಚಾನೈಚಾಸ್ತಿಕಾಯಾ ವ್ರತ ಸಮಿತಿಗತಿ ಜ್ಞಾನ ಚಾರಿತ್ರ ಭೇದಾಃ |
ಯಿತ್ಯೇತನ್ಮೋಕ್ಷ ಮೂಲಂ ತ್ರಿಭುವನಮಹಿತೈ ಪ್ರೋಕ್ತಮರ್ಹದ್ಭಿರೇಷೈಃ
ಪ್ರತ್ಯೇತಿ ಶ್ರದ್ಧದಾತಿ ಸ್ಪೃಶತಿ ಚ ಮಹಿಮಾನ್ಯ : ಸಃ ವೈ ಶುದ್ಧ ದೃಷ್ಟಿ ||

ಯೆಂದು ಪಠಿಸಿ ಶ್ಲೋಕಾರ್ತ್ಥಂ ತನಗೆ ಸಂದಿಗ್ಧಮಾಗಿ ತಿಳಿಯದಿರ್ದ್ದೊಡಂ ಗರ್ವ್ವಾರೂಢನಾಗಿ ಮತ್ತಮಿಂತೆಂದನೆಲೆ ವೃದ್ಧ ನೀಂ ವಿವೇಕ ವಿಕಲಂ ನಿಂನ ಮುಂದೇನೆಂದು ಪೇಳ್ವೆಂ ನಿಂನ ಗುರುವಿನ ಮುಂದೆ ಪೇಳ್ದಪೆಂ ನಡೆ ಎಂದು ತಂಮೊಡಹುಟ್ಟಿದರು ಶಿಷ್ಯರು ಪುರಜನಂಗಳು ವೆರಸು ವೃದ್ಧ ಬ್ರಾಹ್ಮಣನೊಂದಾಗಿ ಪೋಗುತ್ತಂ ಮಾರ್ಗ್ಗದೊಳಿಂತೆಂದು ಚಿಂತಿಸುತಿರ್ದ್ದನಾವನೊರ್ವ್ವನ ಶಿಷ್ಯನಂ ವಶಂ ಮಾಡಲ್ನೆಱೆದೆನಿಲ್ಲ | ಯಿಂನೆಂತಾತನ ನೊಡಂಬಡಿಸುವೆವೆಂದನಂನೆಗಂ ವೃದ್ಧ ದ್ವಿಜಂ ಗೌತಮನಂ ವರ್ದ್ಧಮಾನ ತೀರ್ತ್ಥಕರರ ಸಮವಸರಣಕ್ಕೊಡಗೊಂಡು ಪೋದನಾ ಗೌತಮಂ ಪೂರ್ವ್ವದಿಗವಸ್ತಿತ ಮಾನಸ್ತಂಭಮಂ ಕಾಣಲೊಡನೆ ಮಾನಂ ಕೆಟ್ಟು ಪೋಗಿ | ಜಯತಿ ಭಗವಾನಿತ್ಯಾದಿ ಸ್ತೋತ್ರಮಂ ಮಾಡಿ ತೀರ್ತ್ಥಕರ ಸಮವಸರಣದೊಳ್ ದೀಕ್ಷೆಯಂ ಕೈಕೊಂಡು ದೀಕ್ಷಾನಂತರಂ ಚತುರ್ಜ್ಞಾನ ಸಂಪಂನನಾಗಿ ವರ್ಧಮಾನ ತೀರ್ತ್ಥಕರಿಂಗೆ ಪ್ರಥಮ ಗಣಧರನಾದಂ ಗಾರ್ಗ್ಯ ಭಾರ್ಗ್ಯವರುಂ ದೀಕ್ಷೆಯಂ ಕೈಕೊಂಡರು ಯಿಂದ್ರನು ಯಿಂದ್ರಭೂತಿ ಅಗ್ನಿಭೂತಿ ವಾಯುಭೂತಿಯೆಂಬ ಪೆಸರನಿಟ್ಟನಿಂತನುಕ್ರಮದಿಂ ವರ್ದ್ಧಮಾನ ತೀರ್ತ್ಥಕರರಿಂಗೆ ಪಂನೊಂದು ಮಂದಿ ಗಣಧರರಾದರು ಬಳಿಯಂ ದಿವ್ಯಧ್ವನಿ ನಿರ್ಗ್ಗಮನಮಾದಂದು ಯಿಂದ್ರಭೂತಿ ಗಣಧರ ದೇವಂ ಜಿನವಾಕ್ಯದಿಂ ಸಮಸ್ತ ದೇಶದೊಳು ಶ್ರೀ ಜಿನ ಧರ್ಮ್ಮಮಂ ಪ್ರಕಟಿಸಿದಂ ಬಳಿಯಂ ಕ್ರಮದಿಂ ಮೂವರುಂ ಕೇವಲ ಜ್ಞಾನಮಂ ಪಡದು ಮೋಕ್ಷಮನೈದುವರು ಪೂರ್ವ್ವದೊಳು ಲಬ್ಧಿ ವಿಧಾನಮಂ ಮಾಡಿದ ಫಲದಿಂದಿತೀ ಗಣಧರ ಪದವಿಯಂ ಪಡೆದರೆಂದು ಬೆಸಸೆ ಕೇಳ್ದು ಶ್ರೇಣಿಕ ಮಹಾರಾಜಂ ತಾನುಂ ಚೇಳಿನಿ ಮಹಾದೇವಿಯುಮಾ ನೋಂಪಿಯಂ ಕೈಕೊಂಡು ಸರ್ವ್ವಜ್ಞನಂ ಬೀಳ್ಕೊಂಡು ಪುರಮನರಮನೆಯಂ ಪೊಕ್ಕು ತಾವಾ ನೋಂಪಿಯಂ ನೋಂತು ಪಲವು ನಿಧಿ ನಿಧಾನಂಗಳ್ಗೊಡೆಯರಾದರಿಂನಾರು ಕೆಲಂಬರು ಸ್ತ್ರೀಪುರುಷರು ಮನೊ ವಚನ ಕಾಯ ತ್ರಿಕರಣ ಶುದ್ದಿಯಿಂದೀ ನೋಂಪಿಯಂ ನೋಂತರು ದಿವಿಜ ಮನುಜ ಸುಖಮನನುಭವಿಸಿ ಮೋಕ್ಷ ಸುಖಮನೆಯ್ದುವರು ಯಿಂತೀ ಲಬ್ಧಿ ವಿಧಾನದ ಕಥೆಯ ಪೇಳ್ದವರ್ಗ್ಗ ಪೇಳ್ದವರ್ಗ್ಗಂ ಕೇಳ್ದವರ್ಗ್ಗಂ ಕ್ರಮದಿನೊಡಂಬಟ್ಟವರ್ಗ್ಗಂ ಮಂಗಲ ಮಹಾಶ್ರೀ.