| ಶ್ರೀ ವೀತರಾಗಾಯ ನಮಃ |

ಶ್ರೀ ವೃಷಭ ಜಿನೇಂದ್ರಾದಿ ಮ
ಹಾವೀರ ಜಿನಾಂತ್ಯಮಾದ ಜಿನಪತಿಗಳು ಭ
ವ್ಯಾವಳಿಗೆ ಚತುರ್ವ್ವಿಂಶತಿ
ದೇವರ್ದ್ದಯಗೈಗೆ ವಿಮಲ ರತ್ನ ತ್ರಯಮಂ ||

          ಭವಭಯ ಹರ ವೀರ ಜಿನಂ
ಗವಯವದಿಂದೆಱಗಿ ಭಕ್ತಿಯಂ ವಿರಚಿಸುವೆಂ
ಭುವನದೊಳತಿಶಯವೆನಿನಿಪಿ
ಸುವಸ್ತು ಕಲ್ಯಾಣದೊಂದು ನೋಂಪಿಯ ಕಥೆಯಂ ||         

|| ವ || ಅದೆಂತೆಂದೊಡೆ ಜಂಬೂ ದ್ವೀಪದ ಭರತ ಕ್ಷೇತ್ರದೊಳು ಮಗಧೆಯಂಬುದು ನಾಡು ರಾಜಗೃಹಮೆಂಬ ಪೊಳಲದನಾಳ್ವಂ ಶ್ರೇಣಿಕನೆಂಬ ಮಹಾಮಂಡಲೇಶ್ವರನಾತನರಿಸಿ ಚೇಳಿನಿ ಮಹಾದೇವಿ ಯೆಂಬಳಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲಲ್ಲಿಯ ಪರದಂ ಧನಮಿತ ನೆಂಬನಾತನ ಪರದತಿ ಧನವತಿಯೆಂಬಳವರ ಮಗಂ ನಂದಿಮಿತ್ರನೆಂಬನಾತಂ ಸಪ್ತ ವ್ಯಸನಾಶಕ್ತಿರ್ಪ್ಪಿನಮಾ ಪುರದುದ್ಯಾನವನದೊಳಿರ್ದ್ದ ಸಹಸ್ರ ಕೂಟ ಚೈತ್ಯಾಲಯದೊಳು ಪಿಹಿತಾಸ್ರವ ಭಟ್ಟಾರಕರು ಸಮುದಾಯಂ ಬೆರಸು ಬಂದು ವ್ಯಾಖ್ಯಾನಮಂ ಮಾಡುತಿರಲಾ ನಂದಿಮಿತ್ರಂ ಜಾರಾಂಗನಾ ಸಮೇತ ಬಂದಾ ಚೈತ್ಯಾಲಯದೊಳು ಕ್ರೀಡಿಸಲ್ಪಡೆಯದೆ ಸಮುದಾಯಂ ಹೋಗದುದಂ ಕಂಡು ಕೊಲುವಂತು ಕೋಪವನೆತ್ತಿಕೊಂಡು ಕೊಲಲು ನೆರೆಯದಲ್ಲಿಂದವರ್ಪ್ಪೋ ಪಂತು ಬಗೆದು ಚೈತ್ಯಾಲಯದೊಳಗೆ ಪೂತಿಕಳೆವರಮಂ ತಂದಿಕ್ಕಿನಾ ದೇವರಷ್ಟ ವಿಧಾರ್ಚ್ಛನೆಯ ದ್ರವ್ಯಂಗಳಂ ಕೊಂಡೋಡುವನಾ ತಪೋಧನರ ಪರಮಾಗಮಂಗಳ ಪುಸ್ತಕಂಗಳಂ ಕ್ಷೇತ್ರ ಶುದ್ದಿಯಿಲ್ಲದಲ್ಲಿ ಕೊಂಡೊಯ್ದು ಯಿಉ ಮೊದಲಾದ ಪಲ ತೆಱದುಪಸರ್ಗ್ಗಂಗಳಂ ಮಾಡುತ್ತಮಿರ್ದ್ದ ಪಾಪದ ಫಲದಿಂ ಕುಷ್ಟರೋಗಿಯಾಗಿ ಪುಳಿತು ಸತ್ತು ಮಂಗಳಾವತಿ ವಿಷಯದ ಚಕ್ಷುವನಮೆಂಬ ಪೇರಡವಿಯೊಳು ವ್ಯಾಘ್ರನಾಗಿ ಪುಟ್ಟಿ ಬೇಡರಿಂ ಕೊಲೆ ಸತ್ತು ಮೊದಲ ನರಕದೊಳ್ಪತ್ತು ಸಾವಿರ ವರುಷ ಜಘನ್ಯಾಯುಷ್ಯಮನೊಡೆಯ ನಾರಕನಾಗಿ ನರಕ ದುಃಖಮನುಂಡಲ್ಲಿಂದ ಬಂದು ಸೌರಾಷ್ಟ್ರ ದೇಶದ ಕುಕ್ಕುಟ ಗ್ರಾಮದೊಳಾಡಿನ ಬಸುಱೊಳ್ಪೊಂತಾಗಿ ಪುಟ್ಟಿ ವ್ಯಾಧರಿಂ ಸತ್ತೆರಡನೆಯ ನರಕದೊಳ್ಪುಟ್ಟಿ ಮೂಱು ಸಾಗರೋಪಮಾಯುಷ್ಯಂ ಬರಂ ದುಃಖಮನುಂಡಲ್ಲಿಂದಂ ಬಂದು ಕಾಳಿಂಗ ದೇಶದ ಕೌಶಂಬಿಯೆಂಬ ಪುರದೊಳ್ಪಂದಿಯಾಗಿ ಪುಟ್ಟಿ ನಾಯಿ ಕೊಲೆ ಸತ್ತು ಮೂಱನೆಯ ನರಕದೊಳ್ಪುಟ್ಟಿ ಯೇಳು ಸಾಗರೋಪಾಯುಷ್ಯಂಬರಂ ದುಃಖಮನುಂಡಲ್ಲಿಂದ ಬಂದು ವರಾಳ ದೇಶದ ವೈದರ್ಬ್ಭಮೆಂಬ ಪುರದೊಳ್ಕೋಣನಾಗಿ ಪುಟ್ಟಿ ಮತ್ತೊಂದು ಕೋಣಂ ಪೊಯ್ಯೆ ಸತ್ತು ನಾಲ್ಕನೆಯ ನರಕದೊಳ್ಪುಟ್ಟಿ ಪತ್ತು ಸಾಗರೋಪಮಾಯುಷ್ಯಂ ಬರಂ ದುಃ ಖಮನುಂಡು ಅಲ್ಲಿಂದಂ ಬಂದು ವೈದರ್ಬ್ಭೆಯೆಂಬ ದೇಶದ ಕನಕಪುರ ದುದ್ಯಾನವನದೊಳ್ಮಹಾ ಮಂಡೂಕನಾಗಿ ಪುಟ್ಟಿ ಒರುಮೆ ಬಂದ ಚಕ್ರಿಯ ಗಜಂ ಮೆಟ್ಟಿ ಸತ್ತಾಱನೆಯ ನರಕದೊಳ್ಪುಟ್ಟಿಪ್ಪತ್ತೆರಡು ಸಾಗರೋಪಮಾಯುಷ್ಯಂ ಬರಂ ದುಃಖಮನುಂಡಲ್ಲಿಂದಂ ಬಂದು ಕೌಶಲ ದೇಶದ ಕೌಶಂಬಿ ಎಂಬ ಪುರದೊಳ್ಸುಶರ್ಮ್ಮನೆಂಬನ ಮಸಿಯೊಳಾವಾಗಿ ಪುಟ್ಟಿ ಮಳೆಗಾಲದೊಳಡವಿಯೊಳು ಪಿರಿದುಂ ಮಳೆಕೊಂಡು ಸೆಡುಹತ್ತಿ ಕಂಠಗತ ಪ್ರಾಣನಾಗಿಪ್ಪ ಸಮಯದೊಳೊರ್ವ್ವ ದಿವ್ಯ ತಪೋಧನರ್ಕ್ಕಂಡು ಕಾರುಣ್ಯದಿಂ ಗುಂಡಿಗೆಯ ನೀರಂ ಮಂತ್ರಿಸಿ ಸಕಲ ಶ್ರಾವಕ ವ್ರತಂಗಳಂ ಕೊಟ್ಟು ಪೋಗಲಾ ಫಲದಿಂ ಮುಡುಪಿ ಪುಷ್ಕಲಾವತಿ ವಿಷಯದ ಪುಂಡರಿಕಿಣೀ ಪುರಮನಾಳವ ವಿದ್ಯುತ್ಪ್ರಭನೆಂಬರಸಂಗಮಾತನ ಪಟ್ಟದರಸಿ ವಿಮಲನೇತ್ರೆಗಂ ಮಗನಾಗಿ ಪುಟ್ಟುವುದುಂ ವಿದ್ಯುತ್ಪ್ರಭಂ ಪುತ್ರ ಮುಖಾವಲೋಕನಂ ಮಾಡಲೆಂದು ಬಂದು ನೋಡಿ ಕುಮಾರನ ಕೈ ಕಾಲ್ಗಳು ನಾಡೆಯುಂ ಕುಬ್ಜಂಗಳಾದುದಂ ಕಂಡು ಸುಖ ದುಃಖಂಗಳಂ ತಾಳ್ದಿರ್ಪ್ಪುದುಂ ಕುಮಾರಂ ಪೆಸರಿಲ್ಲದೆ ಬೆಳದು ನಾಲ್ಕು ವರುಷಮಾದೊಡಂ ನುಡಿಯಲುಂ ನಡೆಯಲುಮಱಿಯದೆ ಪಸಿದಾಗ ಚೆಂಬನೆಂಬುದು ನೀರಡಸಿದಾಗಳಂಬುವೆಂಬುದು ಬೇಡುತ್ತಿರಲರಸನುಮರಸಿಯುಮಾತಂಗಂಬು ಚೆಂಬನೆಂಬ ಪೆಸರನಿಟ್ಟು ಕರೆಯುತ್ತಮಿರಲಾತನ ಪುಂಣ್ಯದೇವತೆ ಬಪ್ಪಂತೆ ಚಾರಣ ಯುಗಳಂ ಬಂದಾ ಪುರವ ಬಹಿರುದ್ಯಾನವನದ ಚೈತ್ಯಾಲಯದೊಳಿರ್ಪ್ಪುದುಂ ವನಪಾಲಕಂ ಬಂದರಸಂಗೆ ಭಿಂನಪಂಗೆಯ್ಯಲರಸಂ ಕೇಳ್ದು ಹರುಷದಿಂದಾನಂದ ಭೇರಿಯಂ ಪೊಯ್ಸಿ ನಿಜಪರಿಜನಪುರಜನಮುಮೊಡನೆ ಬರೆ ತಂನಗ್ರವಲ್ಲಭೆಯುಮಂ ಕುಮಾರನುಮಂ ತಂನೊಡನೆ ಭದ್ರಾಜಮನೇಱಿಸಿಕೊಂಡು ಪಂಚ ಮಹಾ ಶಬ್ದಂ ಬೆರಸು ಬಂದು ದೂರಾಂತರದಿ ವಾಹನಮನಿಳಿದು ಚೈತ್ಯಾಲಯ ಮಂ ತ್ರಿಪ್ರದಕ್ಷಿಮಂಗೆಯ್ದೊಳಗಂ ಪೊಕ್ಕು ಕರಕಮಲಂಗಳಂ ಮುಗಿದು ಪರಮೇಶ್ವರಂ ಗಭಿಮುಖನಾಗಿ

|| ಕ || ಶ್ರೀಮುಖಮಂ ಕಾಣಲೊಡಂ
ಶ್ರೀ ಮುಖಮಂ ಕಾಣ್ಭರಭವ ನಿರುತಂ ಮ್ಮೀ
ಶ್ರೀಮುಖಮಂ ಕಾಣದವಂ
ಶ್ರೀಮುಖಮಂ ಕಾಣನಾವ ಭವದೊಳರ್ಹ ||

ಯೆಂದನೇಕ ರೂಪಸ್ತವ ವಸ್ತುಸ್ತವ ಗುಣಸ್ತವಂಗಳಿಂ ಸ್ತುತಿಯಿಸಿ ಮಹಾಭಿಷೇಕಾಷ್ಟ ವಿಧಾರ್ಚ್ಚನೆಯಿಂದರ್ಚ್ಚಿಸಿ ಮಹಾ ಪೂಜೆಯಂ ಮಾಡಿ ತದನಂತರಂ ಗುರುಗಳುಮಂ ವಂದಿಸಿ ಮುಂದೆ ಕುಳ್ಳಿರ್ದ್ದು ಕರಕಮಲಂಗಳಂ ಮುಗಿದು ಧರ್ಮ್ಮ ಸ್ವರೂಪಮಂ ಕೇಳ್ದು ಮತ್ತಮಿಂತೆಂದು ಭಿಂನಪಂಗೆಯ್ದನೀ ಕುಮಾರನಂಬು ಚೆಂಬನೆಂಬನೀತನಾವ ಪಾಪದ ಫಲಮನುಪಾರ್ಜ್ಜಿಸಿದ ಫಲದಿಂದವಯವಂಗಳು ಕ್ಷೀಣಮಾದುದಿದಂ ಬೆಸಸಿಮೆನಲವರಿಂತೆಂದು ಪೇಳ್ದರೀತನೀ ಭವಕ್ಕೇಳನೆಯ ಭವದೊಳು ನಂದಿಮಿತ್ರನೆಂಬನಾದಂದು ಪಿಹಿತಾಸ್ರವ ಭಟ್ಟಾರಕರಧ್ಯಾನಮಂ ಮಾಳ್ಪ ಚೈತ್ಯಾಲಯದೊಳಗೆ ಹಾತಿ ಕಳೆವರಮಂ ತಂದಿಕ್ಕಿದ ಫಲದಿಂ ತನು ನೇತ್ರೇಂದ್ರಿಯದ ಪೂದರ್ಪ್ಪು ಗೆಟ್ಟುದು ಮುಂನಮಾ ದೇವರಷ್ಟ ವಿದಾರ್ಚ್ಛನಾ ದ್ರವ್ಯಂಗಳಂ ಕೊಂಡಾಡಿದ ಫಲದಿಂ ರಸನ ಘ್ರಾಣೀಂದ್ರಿಯದ ಪೊಡರ್ಪ್ಪುಗೆಟ್ಟುದು | ಮುಂನಮಾ ದಿವ್ಯ ತಪೋಧನರ ಪರಮಾಗಮದ ಪುಸ್ತಕಮಂ ಕ್ಷೇತ್ರ ಸುದ್ದಿಯಿಲ್ಲದ ಸ್ಥಳಕ್ಕೀಡಾಡುವನಪ್ಪುದುಱಿಂದೀ ಭವದೊಳೀ ಕುಮಾರಂಗೆ ಶ್ರೋತ್ರೇಂದ್ರಿಯದ ಪೊಡರ್ಪ್ಪುಗೆಟ್ಟುದೆಂದು ಪೇಳೆ ಕೇಳ್ದು ಮತ್ತಮೀತಂಗೀ ಭವದೊಳೀ ಶರೀರದವಸ್ತೆ ಪಿಂಗಿ ಪೋಪಂತುಟಂ ನಿಂಮಡಿಗಳು ಬೆಸಸಿಮೆಂದು ಭಿಂನಪಂಗೆಯ್ಯ ಲವರಿಂತೆಂದು ಪೇಳ್ದರು ಸಕಲ ಕರ್ಮ್ಮ ಕ್ಷಯ ಕಾರಣಮಪ್ಪ ವಸ್ತು ಕಲ್ಯಾಣಮೆಂಬ ನೋಂಪಿಯಂ ನೋಂತು ಮಿರಲೀ ಭವದೊಳೆ ಪ್ರತ್ಯಕ್ಷಂ ಕಾಮದೇವ ಸಂನಿಭನಕ್ಕುಮೆನಲಾ ನೋಂಪಿಯ ವಿಧಾನಮಂ ಸವಿಸ್ತರಂ ಬೆಸಸಿಮೆನಲವರಿಂತೆಂದರಾವು ದಾನೊಂದು ನಂದೀಶ್ವರದಷ್ಟಮಿಯೊಳು ಶುಚಿರ್ಬ್ಬೂತರಾಗಿ ಚೈತ್ಯಾಲಯಕ್ಕೆ ಬಂದು ಗುರುಗಳ ಕಯ್ಯಲಿ ನೋಂಪಿಯಂ ಕೈಕೊಂಬುದಷ್ಟಾಹ್ನಿಕದೆಂಟು ದಿನಂ ಬ್ರಹ್ಮಚರ್ಯಮಂ ಕೈಕೊಂಬುದು ನಂದಾದೀವಿಗೆಯಂ ಕುಂದದೆ ನಡಸೂದಷ್ಟಮಿಯ ದಿನಂ ದೇವರ್ಗ್ಗಭಿಷೇಕಾಷ್ಟ ವಿಧಾರ್ಚ್ಛನೆ ಯಂ ಮಾಡಿ ಕಥೆಯಂ ಕೇಳ್ದೊಂದು ಜಪಮಂ ಮಾಡಿ ತಾನುಂಬ ವಸ್ತುವಿನೊಳೊಂದು ವಸ್ತುವಂ ಕೊಂಬುದು ನವಮಿ ದಿನದೊಳಂ ಪೊರ್ವ್ವೋಕ್ತಕ್ರಮದಿಂದೆರಡು ಜಪಮಂ ಮಾಡಿ ಋಷಿಯರಂ ನಿಲಿಸಿ ನಿರಂತರಾಯಮಂ ಮಾಡಿಯೆರಡು ವಸ್ತುವಂ ಕೊಂಬುದು ದಶಮಿ ದಿನದೊಳು ಮೂಱು ಜಪಮಂ ಮಾಡಿ ಮೂಱು ವಸ್ತುವಂ ಕೊಂಬುದು ಯೇಕಾದಶೀ ದಿನದಲ್ಲಿ ನಾಲ್ಕು ಜಪಮಂ ಮಾಡಿ ನಾಲ್ಕು ವಸ್ತುವಂ ಕೊಂಬುದು ದ್ವಾದಶಿಯ ದಿನದಲ್ಲಿಯುಂ ನಾಲ್ಕು ಜಪಮಂ ಮಾಡಿ ನಾಲ್ಕು ವಸ್ತುವಂ ಕೊಂಬುದು ತ್ರಯೋದಶಿಯ ದಿನದಲ್ಲಿ ಮೂಱು ಜಪಮಂ ಮಾಡಿಯೆರಡು ವಸ್ತುಮಂ ಕೊಂಬುದು | ಪಾಡ್ಯದ ದಿನದಲ್ಲಿ ಶ್ರುತ ಪೂಜೆಯಂ ಮಾಡಿ ಗುರುಗಳಂ ನಿಲಿಸಿ ನಿರಂತರಾಯಮಂ ಮಾಡಿಸಿ ತಾನೇಕ ಭುಕ್ತಮಂ ಮಾಳ್ಪುದು | ಯೀ ಕ್ರಮದಿಂದೆಂಟುವರುಷಂ ನೋಂತು ಕಡೆಯೊಳುದ್ಯಾಪನೆಯ ಮಾಡಿ ಪಂಚ ಮಂಡಲೋದ್ಧರಣ ಕ್ರಮದಿಂದಭಿಷೇಕ ಪೂಜೆಯಷ್ಟವಿಧಾರ್ಚ್ಚನೆಯಂ ಕ್ರಮದಿಂ ಪ್ರತ್ಯೇಕಮೆಯ್ದಿ ಚರುಸಮನ್ವಿತವಾಗಿ ಶಾಂತಿಧಾರೆಯಂ ಕೊಟ್ಯರ್ಗ್ಘ್ಯಂ ಕೊಟ್ಟು ಕಡೆಯೊಳು ಶ್ರುತಸ್ಕಂಧಮಂ ಸ್ಥಾಪ್ಯಂ ಮಾಡಿ ಶ್ರುತಪಾವಡೆ ಸಮನ್ವಿತವಾಗಿ ಶ್ರುತಮಂ ಪೂಜಿಸಿ ಗುರುವಿಗೆ ಪಾದರ್ಚ್ಚನೆಯಂ ಮಾಡಿ ಕಥೆಯಂ ಕೇಳ್ದು ಯಿಪ್ಪತ್ತನಾಲ್ಕು ತಂಡ ರುಷಿಯರ್ಗ್ಗೆ ತಟ್ಟು ಕುಂಚ ಠವಣೆ ಕೋಲು ಶ್ರುತ ಪಾವಡೆಯಂ ಕೊಡುಉದನಿತೆಯಜ್ಜಿಯರ್ಗ್ಗೆ ವಸ್ತ್ರದಾನಮಂಮಾಳ್ದುದು ದೀನಾನಾಥರ್ಗ್ಗೆ ಶಕ್ತಿಗೆ ತಕ್ಕ ಹಾಂಗೆ ಆಹಾರದಾನ ವಸ್ತ್ರದಾನ ಸುವರ್ನ್ನ ದಾನಮಂ ಮಾಳ್ಪುದು ಬಡವರು ಶಕ್ತಿಗೆ ತಕ್ಕಂತು ಮಾಳ್ಪುದೆಂದಂತು ಪೇಳೆ ಕೇಳ್ದರಸನುಮರಸಿಯು ಪಿರಿದು ಸಂತೋಷಂಬಟ್ಟು ಗುರುಗಳಂ ಬೀಳ್ಕೊಂಡು ಮಗುಳ್ದುಬಂದು ಪುರಮನರಮನೆಯಂ ಪೊಕ್ಕು ಯಥಾಕ್ರಮದಿಂ ಕುಮಾರನ ನೋನಿಸಿದೊಡಾಭವದೊಳೆ ಸಕಲಾವಯಂಗಳ್ಸಂಪೂರ್ಣ್ಣನಾಗಿ ಜ್ಞಾನಾವರಣೀಯಂ ಮೊದಲಾದ ಕರ್ಮ್ಮಂಗಳ ಕ್ಷಯೋಪಶಮದಿಂ.. (ತ್ರುಟಿತ) ಜ್ಞಾನಂ ಮೊದಲಾದ ಸಕಲ ಕಳಾಕುಶಲಮಂ ಸೌಂದರ ರೂಪನುಂ ಸರ್ವ್ವ ಲಕ್ಷಣ ಸಂಪೂರ್ಣ್ಣನುಮಾದೊಡರ ಸನುಮರಸಿಯಂ ಪ್ರಧಾನರುಂ ಸಮಸ್ತ ಪರಿವಾರಮುಂ ಕುಮಾರನ ರೂಪು ಲಾವಣ್ಯಮಂಕಂಡು ಧರ್ಮ್ಮದ ಮಹಾತ್ಮ್ಯೆಗೆ ಮೆಚ್ಚಿ ಸಂತೋಷಂಬಟ್ಟು ನೋಂಪಿಯಂ ಕೈಕೊಂಡು ಯಥಾಕ್ರಮದಿಂ ನೋಂತುಜ್ಜಯಿಸಿದರಿಂತೂ ||

ಅರಸನುಮರಸಿಯು ಸುತನುಂ
ಪರಿವಾರಮುಮಿಷ್ಟವಿಷ್ಟ ಪುರಜನಮೆಲ್ಲಂ
ನಿರುತಂ ಸುಖಮಂ ಪಡೆದ
ರ್ಪ್ಪರಮಾರ್ಥ್ಥಂ ನೋಂತಫಲದಿ ಕಲ್ಯಾಣಮುಮಂ ||

ಯಿಂತೀ ವಸ್ತು ಕಲ್ಯಾಣದ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಡಂಬಟ್ಟೆವರ್ಗ್ಗಂ ಮಂಗಳ ಮಹಾಶ್ರೀ