ಕಂ || ಕಾರುಣಜಲನಿಧಿಯೆನಿಸಿದ
ವೀರ ಜಿನಂಗೆರಗಿ ಭಕ್ತಿಯಂ ವಿರಚಿಸುವೇಂ
ಸಾರತರಮಪ್ಪ ನೋಂಪಿಯ
ನಾರಾಧಿಸು ವಂದುವಿಧಿಯನುಜ್ಜವಣೆಯುಮಂ ||

ವ || ಅದೆಂತೆದೋಡೀ ಜಂಬೂದ್ವೀಪದ ಭರತಕ್ಷೇತ್ರದೊಳು ಮಗಧೆ ಎಂಬುದು ನಾಡು ರಾಜಗೃಹಮೆಂಬುದು ಪೊಳಲದನಾಳ್ವಂ ಶ್ರೇಣಿಕ ಮಹಾರಾಜನಾತನ ಪಟ್ಟದರಸಿ ಚೇಳಿನಿಯೆಂಬುವಳಾದಳಂತವರೀರ್ವ್ವರುಂ ಸಂಖಸಂಕಥಾ ವಿನೋದದಿಂ ನೆಲಸಿರ್ದ್ದುದಂ ಋಷಿ ನಿವೇದಕನಿಂದಮರಿದು ಶ್ರೇಣಿಕ ಮಹಾರಾಜ ನಾತ್ಮೀಯವಲ್ಲಭೆಯರಪ್ಪ ಚೇಳಿನಿ ಮನೋಹರಿ ಜಯಾವತಿ ವಿಜಯ ಸುಮತಿ ವಸ್ಯ್ಧೆ ನಂದಿ ಲಕ್ಷ್ಮಣೆ ಮಾಯವತಿ ವಿಮಳೆ ಸುಭದ್ರೆ ಶ್ಯಾಮೆಯೆಂಬೀ ಪನ್ನೀರ್ವ್ವರ್ಬೆರಸು ವಂದನಾಭಕ್ತಿಗೆ ಪೋಗಿ ಸಮವಸರಣಮಂ ಪೊಕ್ಕು ಗಂಧಕುಟಿಯಂ ತ್ರಿಃಪ್ರದಕ್ಷಿಣಂ ಗೆಯ್ದು ಜಿನಪತಿಯನಭ್ಯರ್ಚ್ಚಿಸಿ ಗೌತಮಾದಿ ಮುನಿಮುಖ್ಯರಂ ವಂದಿಸಿ ಧರ್ಮ್ಮಮಂ ಕೇಳ್ದನಂತರಂ ಗೌತಮಗಣಧರರನಿಂತೆಂದು ಬೆಸಗೊಂಡನೆಲೆ ಸ್ವಾಮಿ ಎನ್ನಪನ್ನೀರ್ವರು ಸ್ತ್ರೀಯರ್ಕ್ಕಳು ಪೂರ್ವ್ವಭವದೊಳಾವ ಪುಣ್ಯಮಂ ನೆರಪಿದರದಂ ಬೆಸಸಿಮೆಂದರೆ ಗಣಧರರಿಂತೆಂದು ನಿರೂಪಿಸಿದರೀ ಪನ್ನೀರ್ವ್ವರುಂ ಮೂರನೆಯಭವದೊಳುಜ್ಜಯಿನಿಯೆಂಬ ಪೊಳಲಲ್ಲಿಯ ಪರದರಮಕ್ಕಳು ಪಿಹಿತಾಸ್ರವ ಭಟ್ಟಾರಕರ ಪಕ್ಕದಿ ನೋಂಪಿಯಂ ಕೈಕೊಂಡು ಕಡೆಯೊಳ್ಸಮಾಧಿಯಿಂ ಮುಡುಪಿ ಸೌಧರ್ಮ್ಮ ಕಲ್ಪದೊಳು ದೇವಿಯರಾಗಿ ವಿಶೇಷ ಪುಣ್ಯಂದಿದಮಲ್ಲಿಂದಿಲ್ಲಿ ನಿನಗೆ ಪ್ರಾಣವಲ್ಲಭೆಯರಾದರಿವರು ನೋಂತ ನೋಂಪಿಗಳಾವುದೆನೆ ವಿನಯಸಂಪತ್ತಿಯಂ ಚೇಳಿನಿನೋಂತಳು ಕಲ್ಪಾಮರಮೆಂಬ ನೋಂಪಿಯಂ ಜಯಾವತಿ ನೋಂತಳು ಕೇವಳಬೋಧಿಯಂ ವಿಜಯ ನೋಂತಳು ಚಾರಿತ್ರಮಾನಮೆಂಬ ನೋಂಪಿಯಂ ಸುಮತಿನೋಂತಳು ಶ್ರುತಸ್ಕಂದಮೆಂಬ ನೋಂಪಿಯಂ ವಸುಧೆ ನೋಂತಳು ತ್ರೈಳೋಕ್ಯಸಾರಮೆಂಬ ನೋಂಪಿಯಂ ನಂದಮಹಾದೇವಿ ನೋಂತಳು ಕಂದರ್ಪಸಾಗರಮಂ ಮನೋಹರಿ ನೋಂತಳು ದುರ್ಗ್ಗತಿ ನಿವಾರಣಮಂ ಲಕ್ಷ್ಮೀಮತಿ ನೋಂತಳು ಕಲ್ಯಾಣ ತಿಲಕಮಂ ಮಾಯಾವತಿ ನೋಂತಳು ಅನಮ್ತಸುಖಮಂ ವಿಮಲೆ ನೋಂತಳು ಸಮಾಧಿ ವಿಧಾನಮಂ ಸುಭದ್ರೆ ನೋಂತಳು ಭವದುಃಖನಿವಾರಣಮಂ ಶ್ಯಾಮಾದೇವಿ ನೋಂತಳು ಇಂತೀ ಪನ್ನೆರದು ನೋಂಪಿಯಂ ಪನ್ನೀರ್ವರು ನೋಂತು ನಿನಗೆ ಪ್ರಾಣವಲ್ಲಭೆಯರಾದರು ಇಂತು ಶ್ರೇಣಿಕಮಹಾರಾಜಂಗೆ ಗೌತಮಸ್ವಾಮಿಗಳು ವೆಸಸಿದರಲ್ಲದೆ ಮುಂದೆ ಕುಂಡಕುಂದಾಚಾರ್ಯ್ಯರು ಚತುರಂಗುಲ ಚಾರಣಋದ್ದಿ ಸಂಪನ್ನರಾದುದನರಿದು ಯಿರ್ವ್ವರ್ಚಾರಣರುಗಳು ಪೂರ್ವ್ವವಿದೇಹದಿಂ ಬಂದು ವಿದೇಹಕ್ಕೊಡಕೊಂಡು ಪೋಗಿ ಶ್ರೀಧರತೀರ್ತ್ಥಕರ ಸಮವಸರಣಕ್ಕೊಡಗೊಂಡುಪೋಗಿ ದೇವರಂ ಕಂಡಲ್ಲಿ ತಮಗೆ ಮೊದಲೆ ಸಂದೇಹಗಳಪ್ಪ ಪದಾರ್ಥಂಗಳೆಲ್ಲಮಂ ಬೆಸಗೊಂಡು ತಿಳಿದು ಮತ್ತಂ ಸರ್ವ್ವಜೀವಸಹಿತಹೇತುವಾಗಿ ಸುಖದಿಂ ನೋನಲು ತಕ್ಕ ಸ್ವರ್ಗ್ಗ ಮೋಕ್ಷಮನೆಯ್ದಿ ಸುವುಪಾಯಮಪ್ಪ ಪನ್ನೆರಡು ತಿಂಗಳಿಗೆ ಪನ್ನೆರಡು ನೋಂಪಿಗಳಂ ಸವಿಸ್ತರಂ ಕೇಳಿ ಸಂತೋಷಂಬಟ್ಟಿರೆ ಮುನ್ನಕೊಂಡುಪೋದ ಚಾರಣರುಗಳು ಪುನಹ ಭರತಕ್ಷೇತ್ರಕ್ಕೆ ತಂದಿಳಿಪಿ ಪೋದರು ಮತ್ತಂ ಅವರು ಭವ್ಯ ಜನಂಗಳ್ಗೆ ಆ ನೋಂಪಿಗಳಂ ಪೇಳ್ದು ನೆಗಳುತ್ತಂಬರೆ ಶ್ರೀಮದಿಂದ್ರನಂದಿಸಿದ್ಧಾಂತಿಗಳು ಪನ್ನೆರಡು ತಿಂಗಳಿಗೆ ಪನ್ನೆರಡು ನೋಂಪಿಯಂ ತಿಳಿದುಕೊಂಡು ನೋಂಪಿಯ ತೆರನನಿಂತೆಂದು ಪೇಳ್ದರು ವಿನಯ ಸಂಪತ್ತಿಯೆಂಬ ನೋಂಪಿಯಂ ಆಷಾಢಮಾಸದ ಶುಕ್ಲಪಕ್ಷದ ಪ್ರಢಮನಂದೀಶ್ವರದಂದು ಉಪವಾಸಂಗೆಯ್ವುದಾರದೊಡೊಂದು ರಸಪರಿತ್ಯಾಗಮಂ ವಂದು ಪಕ್ಷ ಪರ್ಯ್ಯಂತರಂಮಾಡಿ ಏಕಭುಕ್ತಮಂ ಮಾಳ್ಪುದು ಮತ್ತಂ ಜಿನರಿಗಭಿಷೇಕ ಅಷ್ಟವಿಧಾರ್ಚನೆಯಂ ಮಾಳ್ಪುದು ತ್ರಿಕಾಲದಲ್ಲಿಯೂ ಬೇರೆ ಬೇರೆ ಪಂಚವರ್ಣ್ನದ ರಂಗವಲಿಯನಿಕ್ಕಿ ಹೊತ್ತಿಗೆ ನಾಲ್ಕುನಾಲ್ಕು ಪಿಟ್ಟಿನ ಸೊಡರುಮಂ ಮಾಡಿ ಅರ್ಚಿಸಿ ಮತ್ತಮಿಂತೆಂದೇಳು ದಿವಸಮರ್ಚಿಸಿ ಚತುದರ್ಶಿಯೊಳುಪವಾಸಮಂ ಮಾಳ್ಪುದು ಅರದೊಡೆ ರಸಪರಿತ್ಯಾಗಂ ಗೆಯ್ದು ಯೇಕಭುಕ್ತಮಂ ಮಾಡಿ ಪಗಲುನಾಲ್ಕು ಜಾವದೊಳು ಅಭಿಷೇಕಮಂ ಮಾಡಿಸಿ ಪೂಜೆಯಂ ಮಾಡುವಾಗ ನಾಲ್ಕುಚ್ಛಂದೋಹ ನಾಲ್ಕುಠಾಣ ದೀವಿಗೆ ನಾಲ್ಕು ನೀರಾಂಜನ ನಾಲ್ಕು ಪ್ರತಿಮೆಯಂ ಯಥಾಶಕ್ತಿಯಿಂ ಮಾಡಿಸಿ ನಾಲ್ಕು ಬೆಲ್ಲದಚ್ಚಂ ನೀರಾಂಜನ ಮಾಡಿ ದೇವರ ಮುಂದಿರಿಸುವುದು ನಾಲ್ಕು ತಂಡ ಋಷಿಯರ್ಗ್ಗಾ ಹಾರದಾನ ಮಂ ಮಾಡಿ ತಟ್ಟು ಕುಂಚ ಪುಸ್ತಕ ಮೊದಲಾದವಂ ಕೊಡುವುದು ಅನಿತೆ ಅಜ್ಜಿಯರ್ಗ್ಗುಡ ಕೊಡುವುದು ಈ ನೋಂಪಿಯ ಫಲದಿಂ ವಂದು ಭವದೊಳು ನೋಂತವರೆಲ್ಲರೂ ಮರುಭವದೊಳು ಸತ್ಕುಲಜರುಂ ಗುಣಿಗಳುಂ ಶ್ರೀಮಂತರುಂ ಸ್ತ್ರೀ ಪುರುಷರೊಂದಾಗಿ ಯಿಷ್ಟ ಕಾಮ ಭೋಗಂಗಳನನುಭವಿಸಿ ಪಲಂಬರಿಂ ಬೆಸಕೆಯ್ಸಿಕೊಂಡು ಕಡೆಯೊಳುತ್ತಮ ತಪದಿಂ ಸರ್ವ್ವಶ್ರೀಯೊಳ್ಕೂಡಿರ್ಪರೂ || ವಿನಯ ಸಂಪತ್ತಿಯ ನೋಂಪಿಯ ನೋಂತವರ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಜಯಮಂಗಳಮಹಾ || ಶ್ರೀ ಶ್ರೀ