ಶರಣಾಗು ಕಂತುಮದಹರ
ಶರಣಾಗಮರೇಂದ್ರವಂದ್ಯ ನಿರುಪಮ ಮಹಿಮಾ
ಶರಣಾಗನಂತ ಬೋಧಾ
ಶರಣಾಗನೆಗಾವಾವ ಭವದೊಳು ಶ್ರೀ ವೃಷಭಜಿನಾ ||

(ಮನ್ಮಥನ ಮದವನ್ನು ನಾಶಪಡಿಸಿದವನೂ, ದೇವೇಂದ್ರನಿಂದ ವಂದಿಸಿಕೊಂಡಿರುವವನೂ, ಎಣೆಯಿಲ್ಲದ ಮಹಿಮೆಯುಳ್ಳವನೂ, ಅನಂತಜ್ಞಾನವನ್ನು ಪಡೆದವನೂ ಆದ ಎಲೈ ವೃಷಭಜಿನಸ್ವಾಮಿಯೇ ನನಗೆ ಎಲ್ಲಾ ಭವಗಳಲ್ಲೂ ಅನುಗ್ರಹವನ್ನು ಕರುಣಿಸು. )

ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಆರ್ಯಖಂಡದೊಳಗೆ ರಾಜಗೃಹವೆಂಬ ನಗರ. ಅದನ್ನು ಆಳುವವನು ಶ್ರೇಣಿಕ ಮಹಾಮಂಡಲೇಶ್ವರ. ಆತನ ಪಟ್ಟದರಸಿ ಚೇಳಿನಿ ಎಂಬಾಕೆ. ಹಾಗೆ ಅವರಿಬ್ಬರೂ ಸುಖ ಸಂಕಥಾ ವಿನೋದದಿಂದ ರಾಜ್ಯವಾಳುತ್ತಿರಲು ಒಂದು ದಿವಸ ವನಪಾಲಕನು ‘ವಿಪುಲಾಚಲದಲ್ಲಿ ಶ್ರೀ ವೀರವರ್ಧಮಾನ ಸ್ವಾಮಿಗಳ ಸಮವಸರಣ ಅವತರಿಸಿದೆ’ ಎಂದು ಹೇಳಿದನು. ಅದನ್ನು ಕೇಳಿ ಸಂತೋಷದಿಂದ ಆನಂದಭೇರಿಯನ್ನು ಹೊಯಿಸಿ ಚೇಳಿನಿ ಸಮೇತ ಹೊರಟನು. ಸಮವಸರಣವನ್ನು ಹೊಕ್ಕು ಶ್ರೀವೀರ ವರ್ಧಮಾನಸ್ವಾಮಿಗಳನ್ನು ನಮಸ್ಕರಿಸಿ ಗೌತಮಸ್ವಾಮಿಗೆ ಎರಗಿ ಧರ್ಮಶ್ರವಣ ಮಾಡಿದನು. ಅನಂತರ ‘ಸ್ವಾಮಿ, ನನಗೆ ಸಕಲ ಸುಖಕರವಾದ ನೋಂಪಿಯನ್ನೂ, ಮೊದಲಲ್ಲಿ ಅದನ್ನು ನೋಂತವರ ಸಂಗತಿಯನ್ನೂ ಬೆಸರಿಸಿ’ ಎಂದನು. ಅವರು ಹೀಗೆಂದರು –

ಈ ಜಂಬೂದ್ವೀಪದ ಐರಾವತ ಕ್ಷೇತ್ರದ ಆರ್ಯಾಖಂಡದ ಪೂರ್ವ ವಿದೇಹದಲ್ಲಿ ಪುಂಡರೀಕಿಣಿ ಎಂಬ ಪುರವಿದೆ. ಅದನ್ನು ಅಳುವವನು ಶೂರಸೇನ ಮಹಾರಾಜ. ಆತನ ರಾಣಿ ಸುಮಂಗಲಾದೇವಿ. ಅವರಿಗೆ ರುದ್ರಸೇನ – ವಿಷ್ಣುವಿನ ಎಂಬ ಇಬ್ಬರು ಕುಮಾರರು ಹುಟ್ಟಿ ಯೌವನ ಕಾಲದಲ್ಲಿ ಸಪ್ತವ್ಯಸನಿಗಳಾಗಿದ್ದರು. ಅವರನ್ನು ನೋಡಿ ಸೂರಸೇನ ಮಹಾರಾಜನು ವೈರಾಗ್ಯದಿಂದ ದೀಕ್ಷೆ ತಲೆದು ಉಗ್ರವಾದ ತಪಸ್ಸನ್ನು ಆಚರಿಸಿ ಶರೀರಭಾರವನ್ನು ಉಳಿದು ಸ್ವರ್ಗದಲ್ಲಿ ದೇವನಾಗಿ ಹುಟ್ಟಿದನು. ಇತ್ತ ರುದ್ರಸೇನ ವಿಷ್ಣುಸೇನರು ಆರ್ತಧ್ಯಾನದಿಂದ ಸತ್ತು ಸಂಸಾರದಲ್ಲಿ ತಿರುಗಿದರು. ಹಲವು ಕಾಲದ ಬಳಿಕ ಅವರಿಬ್ಬರೂ ಹಿಮವದ್ಗಿರಿಯಲ್ಲಿ ಹುಲಿಗಳಾಗಿ ಹುಟ್ಟಿದರು. ಆಗ ಅವರು ಜಯಂಧರ ಚಾರಣ ಮುನಿಗಳನ್ನು ಕಂಡು ಉಪಶಾಂತವನ್ನು ಹೊಂದಿ ಭವಸ್ಮರಣೆ ಪಡೆದರು; ಅವರಿಂದ ಪೂರ್ವವೃತ್ತಂತವನ್ನು ತಿಳಿದರು. ಪಕ್ಷವಾದ ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತಾ ಕೆಲವು ದಿನಗಳ ಮೇಲೆ ಸತ್ತು ಸೌಧರ್ಮ ಕಲ್ಪದ ವಿಮಲ ವಿಮಾನದಲ್ಲಿ ಪುಂಡರೀಕ ಮತ್ತು ಚಂದ್ರಾಭ ಎಂಬ ಹೆಸರಿನ ದೇವತೆಗಳಾಗಿ ಹುಟ್ಟಿದರು. ಅಲ್ಲಿಂದ ಬಂದು ಧಾತಕೀಷಂಡ ದ್ವೀಪದ ಪೂರ್ವ ವಿದೇಹದಲ್ಲಿ ಮಂಗಳಾವತಿ ದೇಶದಲ್ಲಿ ಅಯೋಧ್ಯೆಯೆಂಬ ಪಟ್ಟಣವನ್ನು ಆಳುವ ವಿಪುಲಮತಿ ಮಹಾರಾಜನಿಗೂ ಸುಮಂಗಲಾದೇವಿಗೂ ಜಯ – ವಿಜಯರೆಂಬ ಮಕ್ಕಳಾಗಿ ಹುಟ್ಟಿದರು.

ವಿಪುಲಮತಿ ಮಹಾರಾಜನಿಗೆ ವೈರಾಗ್ಯವುಂಟಾಯಿತು. ಆಗ ಜಯನಿಗೆ ಸಾಮ್ರಾಜ್ಯ ಪದವಿಯನ್ನೂ ವಿಜಯನಿಗೆ ಸೇನಾಧಿಪತಿ ಪದವಿಯನ್ನೂ ಕೊಟ್ಟು, ಮೂವತ್ತೆರಡು ರಾಜರುಗಳೊಡನೆ ಶೃತಸಾಗರ ಮುನಿಗಳ ಸಮೀಪದಲ್ಲಿ ದೀಕ್ಷೆ ತೆಗೆದುಕೊಂಡನು. ಆಮೇಲೆ ಉಗ್ರೋಗ್ರವಾದ ತಪಸ್ಸನ್ನು ಆಚರಿಸಿ ಸನತ್ಕುಮಾರಕಲ್ಪದ ಪುಷ್ಪಕ ವಿಮಾನದಲ್ಲಿ ಪುಷ್ಪಕೇತುವೆಂಬ ದೇವನಾದನು.

ಇತ್ತ ಜಯನು ಷಟ್ಖಂಡಪತಿಯಾಗಿರಲು ಒಂದು ದಿವಸ ಮತಿಸಾಗರ ಕೇವಲಿಗಳ ಸಮವಸರಣಕ್ಕೆ ಹೋಗಿ ವಂದನಪೂರ್ವಕಾನಂತರದಲ್ಲಿ ಭವನಸಂತಾಪನಾಶವಾದ ಸಕಲ ಸುಖಕರವಾದ ನೊಂಪಿಯನ್ನು ತಿಳಿಸಬೇಕೆಂದು ಬೆಡಿದನು. ಅವರು ಇಂತೆಂದರು –

ಮಾಘಮಾಸದ ಕೃಷ್ಣಪಕ್ಷದ ಚತುದರ್ಶಿಯಲ್ಲಿ ಪುರುದೇವಜೀನನಿಗೆ ಪರಿನಿಷ್ಕ್ರಮಣವಾಯಿತು. ಅದರಿಂದ ಶುಚಿರ್ಭೂತರಾಗಿ ಚೈತ್ಯಾಲಯಕ್ಕೆ ಹೋಗಿ ಜಿನನಿಗೆ ಪೂಜಿಸಿ ನಮಸ್ಕರಿಸಿ ಗುರುಸಾಕ್ಷಿಯಾಗಿ ಏಕಭುಕ್ತವನ್ನಾಗಲಿ ಉಪವಾಸವನ್ನಾಗಲೀ ಕೈಗೊಂಡು ರಾತ್ರಿಯಲ್ಲಿ ಆದಿನಾಥನಿಗೆ ಅಭಿಷೇಕ ಪೂಜೆಯನ್ನು ಮಾಡುವುದು. ಅನಂತರ ಮಂತ್ರಪೂರ್ವಕವಾಗಿ ಅಷ್ಟವಿಧಾರ್ಚನೆ ಮಾಡುವುದು. ಈ ಪ್ರಕಾರವಾಗಿ ನಾಲ್ಕು ಅಭಿಷೇಕ ಪೂಜೆಯನ್ನು ಮಾಡಿ ಜಾಗರವಿದ್ದು ಕತೆಯನ್ನು ಕೇಳುವುದು.

ಮರುದಿವಸ ಪಂಚಭಕ್ಷ ಪಾಯಸಗಳೊಡನೆ ಅಷ್ಟವಿಧಾರ್ಚನೆ ಮಾಡಿ ಉತ್ಸಾಹದಿಂದ ತೂರ್ಯತ್ರಯವೆರಸಿ ಚೈತ್ಯಾಲಯವನ್ನು ಮೂರು ಸಲ ಬಲಗೊಂಡು ಮಹಾ ಅರ್ಘ್ಯವನ್ನು ಎತ್ತುವುದು. ತದನಂತರ ಪಂಚಭಕ್ಷ್ಯಪಾಯಸವನ್ನು ಹೊಸ ಪಟ್ಟಣಗಳಲ್ಲಿಟ್ಟು ಐದು ಬಾಯಿನಗಳನ್ನು ಜೈನ ಉಪಾಧ್ಯಾಯರಿಗೆ ಕೊಡುವುದು. ಚಾತುರ್ವರ್ಣಕ್ಕೆ ಆಹಾರಾದಿ ದಾನವನ್ನು ಕೊಡುವುದು. ತಾನೂ ಪಾರಣೆಯನ್ನು ಮಾಡುವುದು. ಈ ಕ್ರಮದಿಂದ ಐದೈದು ವರ್ಷ ನೋಂತು ಉದ್ಯಾಪನೆಯಲ್ಲಿ ಚತುರ್ವಿಂಶತಿ ತೀರ್ಥಕರ ಪ್ರತಿಮೆಯನ್ನು ಮಾಡಿಸಿ, ಪ್ರತಿಷ್ಠಾವಿಧಾನದಿಂದ ಪ್ರತಿಷ್ಠೆಯನ್ನು ಮಾಡಿಸುವುದು. ದೇವರಿಗೆ ಕಪಿಲೆಯನ್ನು ಕೊಡುವುದು. ಯಥಾಶಕ್ತಿಯಿಂದ ಚಾತುರ್ವರ್ಣಕ್ಕೆ ಆಹಾರಾದಿ ದಾನವನ್ನು ಮಾಡುವುದು – ಇದು ಉದ್ಯಾಪನೆಯ ಕ್ರಮ – ಎಂಬುದಾಗಿ ಮತಿಸಾಗರ ಕೇವಲಿಗಳು ನಿರೂಪಿಸಿದರು.

ಇದನ್ನು ಜಯಚಕ್ರವರ್ತಿ ಕೇಳಿ, ವಿಜಯ ಮೊದಲಾದ ಮುಕುಟಬದ್ಧರ ಸಹಿತ ಶಿವರಾತ್ರೆಯ ನೋಂಪಿಯನ್ನು ಕಗೊಂಡು ನೋಂತು ಹಲವು ಕಾಲ ರಾಜ್ಯ ಸುಖವನ್ನು ಅನುಭವಿಸಿ ವೈರಾಗ್ಯದಿಂದ ಶ್ರೀ ವಿಜಯನೆಂಬ ಕುಮಾರನಿಗೆ ರಾಜ್ಯವನ್ನು ಕೊಟ್ಟು ವಿಜಯಾದಿ ಪಂಚಶತ (೫೦೦) ಮುಕುಟಬದ್ಧರ ಸಹಿತ ಗಿರಿಕೂಟಾಚಲಕ್ಕೆ ಹೋಗಿ ಮತಿಸಾಗರ ಕೇವಲಿಗಳ ಸಮೀಪದಲ್ಲಿ ದೀಕ್ಷೆಯನ್ನು ಕೈಗೊಂಡು ಉಗ್ರೋಗ್ರ ತಪಸ್ಸು ಮಾಡಿದನು. ಘಾತಿಕರ್ಮವನ್ನು ನಾಶಮಾಡಿ ಗಂಧಕುಟಿಯಲ್ಲಿ ನಿಂತು ನಾನಾ ದೇಶಗಳನ್ನು ವಿಹಾರಿಸಿ ಕೈಲಾಸಗಿರಿಗೆ ಹೋಗಿ ಹುಕ್ಲಧ್ಯಾನದಿಂದ ಘಾತಿ ಅಘಾತಿ ಕರ್ಮಗಳನ್ನು ಕೆಡಿಸಿ ಮುಕ್ತಿಗೆ ಸಂದರು. ಇತ್ತ ವಿಜಯಮುನಿಗಳು ತಪದಿಂದ ಸರ್ವಾರ್ಥ ಸಿದ್ದಿಗೆ ಹೋದರು. ಉಳಿದ ಮುನಿಗಳ ಸೌಧರ್ಮಕಲ್ಪದಲ್ಲಿ ಹುಟ್ಟಿದರು – ಎಂದು ಗೌತಮ ಸ್ವಾಮಿಗಳು ಶ್ರೇಣಿಕ ಮಹಾಮಂಡಲೇಶ್ವರನಿಗೆ ಹೇಳಿದರು.

ಇದನ್ನು ಕೇಳಿ ಶ್ರೇಣಿಕನೂ ಕೈಗೊಂಡು ರಾಜಗೃಹಕ್ಕೆ ಹೋಗಿ ಮುನಿ ನಿರೂಪಿಸಿದ ಕ್ರಮದಿಂದ ಚೇಳಿನಿ ಸಹಿತ ನೋಂತು ಉದ್ಯಾಪನೆಯನ್ನು ಮಾಡಿ ಹಲವು ಕಾಲ ಸುಖವನ್ನು ಅನುಭವಿಸುತ್ತಿದ್ದರು.

ಹೀಗೆ ಶಿವರಾತ್ರಿಯ ನೊಂಪಿಯನ್ನು ಭಕ್ತಿಪೂರ್ವಕವಾಗಿ ನೋಂತವರಿಗೂ ನೋನಿಸಿದವರಿಗೂ ಸ್ವರ್ಗಮೋಕ್ಷಗಳು ದೊರೆಯುತ್ತವೆ.

ಮಂಗಳಮಹಾ