ಶ್ರೀಮತ್ಪರಮ ಗಂಭೀರ ಸ್ಯಾದ್ವಾಮೋಘ ಲಾಂಛನಂ
ಜೀಯಾತ್ ತ್ರೈಲೋಕ್ಯ ನಾಥಸ್ಯ ಶಾಸನಂ ಜಿನಶಾಸನಂ ||

ರಾಗ – ದ್ವೇಷ – ಮೋಹಾದಿ ದೋಷಗಳಿಲ್ಲದವರೂ ಅನಂತ ಜ್ಞಾನ ಅನಂತ ದರ್ಶನ ಅನಂತ ಶಕ್ತಿ ಅನಂತ ಸುಖಗಳಿಗೆ ಒಡೆಯರೂ ಕೈಲಾಸ ಪರ್ವತದ ಶಕಟ ಮುಖ್ಯ ಎಂಬ ಉದ್ಯಾನವನದಲ್ಲಿ ದೇವತೆಗಳು ನಿರ್ಮಿಸಿದ ಸಮವಸರಣ ಮಹಾಸಭೆಯ ಭೂಮಿಯಲ್ಲಿ ವಿರಾಜಿಸುತ್ತಿರುವ ಲಕ್ಷ್ಮೀ ಮಂಟಪದ ಮಧ್ಯೆ ಹನ್ನೆರಡು ಕೂಟಗಳಿಂದ ಸುತ್ತುವರಿದಿರುವ ಮೂರು ಜಗಲಿಗಳುಳ್ಳ ತ್ರಿಮೇಖಲಾ ಪೀಠದ ನಡುವಿನಲ್ಲಿ ಅರಳಿರುವ ಸಾವಿರದೆಂಟು ಎಸಳಿನ ಹೊಂದಾವರೆಯ ಮಧ್ಯ ಕರ್ನಿಕೆಯ ಮೇಲೆ ನಾಲ್ಪೆರಳು ಅಂತರದಲ್ಲಿ ಕಮಲವನ್ನು ಸೋಂಕದೆ ವಿರಾಜಮಾನವಾಗಿರುವ ಭಗವಾನ್ ಋಷಭ ತೀರ್ಥಂಕರರಿಗೆ ಸುರೇಂದ್ರ – ನರೇಂದ್ರ – ನಾಗೇಂದ್ರಾದಿಗಳು ಇಕ್ಕೆಲದಲ್ಲಿ ಚಾಮರವನ್ನು ಬೀಸುತ್ತಿರಲು, ಪ್ರಜಾಪತಿ ಮಹಾರಾಜನು ತನ್ನ ಪಟ್ಟದರಸಿ ಮಹಾದೇವಿಯೊಡನೆ ಭಗವಂತನ ದಿವ್ಯ ದರ್ಶನಕ್ಕಾಗಿ ಸಮವಸರಣದತ್ತ ಬರುತ್ತಿರಲು, ದೂರದಿಂದ ಸುಜ್ಞಾನ ಸ್ವರೂಪನಾದ ಭಗವಂತನನ್ನು ಕಣ್ತುಂಬ ನೋಡಿ, ಮನದಣಿಯೆ ನೆನೆದು, ನಲಿದು, ಹಾಡಿ, ಕೊಂಡಾಡಿ, ಸಂತೋಷದಿಂದ ಹಿರಿಹಿರಿ ಹಿಗ್ಗಿದನು. ಕಣ್ಣಲ್ಲಿ ಸಂತಸದ ನೀರು ತುಂಬಿ ಬರಲು ಮುಂದೆ ಬಂದು, ಜಗದೀಶ್ವರನನ್ನು ಕಂಡು ತಾನು ತನ್ನ ವಲ್ಲಭೆಯೊಡನೆ ತ್ರಿಪದಕ್ಷಿಣೆ ಬಂದು ದಿವ್ಯವಾದ ಪುಷ್ಪಹಾರಗಳಿಂದರ್ಚಿಸಿ ಸಾಷ್ಟಾಂಗ ಪ್ರಣಾಮವನ್ನು ಮಾಡುತ್ತಾ ಕೊಂಡಾಡಿದನು.

ಅಲ್ಲಿಯೇ ಮುಂದೆ ಶ್ರುತ ಮಂಟಪದಲ್ಲಿ ಕುಳಿತಿದ್ದ ಗಣಧರ ಪರಮೇಷ್ಠಿಗಳು ಸುರೇಂದ್ರ – ನರೇಂದ್ರ – ನಾಗೇಂದ್ರಾದಿ ಸಮಸ್ತ ಪ್ರಾಣಿಗಳಿಗೆ ಧರ್ಮೋಪದೇಶ ಕೊಡುತ್ತಿರುವುದನ್ನು ನೋಡಿ ರಾಜನೂ ರಾಜ್ಞಿಯೂ ಗಣಧರರನ್ನು ಸುಗಂಧ ಪುಷ್ಪಾದಿಗಳಿಂದ ಪೂಜಿಸಿ, ಸ್ತುತಿಸಿ, ವಂದಿಸಿ ಅವರ ಮುಂದೆ ಕುಳಿತು ಧರ್ಮೋಪದೇಶವನ್ನು ಕೇಳಿ ಕೊನೆಗೆ ಕೈ ಮುಗಿಯುತ್ತಾ – ‘ಗಣಧರ ಗುರುಗಳೆ | ನನ್ನದೊಂದು ಬಿನ್ನಪ. ಈ ಸಮವಸರಣದಲ್ಲಿ ಅರುವತ್ತಾರು ಸಾವಿರ ಪರಿವಾರ ದೇವಿಯರೊಡಗೂಡಿ ತ್ರಿಜಗದಾರಾಧ್ಯರಾದ ವೃಷಭ ತೀರ್ಥಂಕರರ ಪಾದಪದ್ಮಗಳ ಸೇವೆಯಲ್ಲಿ ತತ್ಪರಳಾದ ಜ್ವಾಲಾಮಾಲಿನೀ ದೇವಿಗೆ ಈ ತರದ ಸಿರಿ – ಸಂಪತ್ತು, ರೂಪ – ವಿಭವ, ಸುಖ. ಸೌಭಾಗ್ಯಗಳು ಅದಾವ ನೋಂಪಿಯನ್ನು ನೋಂತ ಫಲದಿಂದ ದೊರೆಕೊಂಡಿತು?’ ಎಂದು ಕೇಳಲು ಗುರು ಗಣಧರ ಪರಮೇಷ್ಠಿಗಳು ಹೇಳಿದರು :

‘ಈ ಜಂಬೂ ದ್ವೀಪದ ಭರತ ಕ್ಷೇತ್ರದಲ್ಲಿ ಆರ್ಯಾ ಖಂಡವಿದೆ. ಅದರಲ್ಲಿ ಮಗಧವೆಂಬ ರಾಜ್ಯದೊಳಗೆ ರಾಜಪುರವೆಂಬುದೊಂದು ನಗರ. ಆ ನಗರಕ್ಕೆ ಪ್ರೀತಿ ವರ್ಧನನೆಂಬುವನು ಆಳರಸು. ಆತನರಸಿ ರತ್ನಮಾಲೆ. ಅದೇ ಊರಿನಲ್ಲಿ ಸೋಮದತ್ತನೆಂಬ ಒಬ್ಬ ರಾಜಶ್ರೇಷ್ಠಿ. ಆತನ ಮಡದಿ ಅನಂತಮತಿ. ಇವರಿಬ್ಬರಿಗೆ ಕನಕ ಮಂಜರಿ ಎಂಬುವಳು ಮಗಳು. ನವಯೌವನತಿಯಾದ ಆಕೆಯು ಒಂದು ದಿನ ಊರ ಹೊರಗಣ ಉದ್ಯಾನವನದ ಮಧ್ಯದಲ್ಲಿ ಶೋಭಿಸುಸ ಜಿನಮಂದಿರಕ್ಕೆ ಹೋಗಿ ಜಿನರಾಜನನ್ನು ವಂದಿಸಿ, ಪೂಜಿಸಿ, ಪ್ರಾರ್ಥಿಸಿದಳು : ‘ಭಗವಾನ್ ! ನನಗೆ ಲೋಕೋತ್ತರ ಗುಣಶಾಲಿಯಾದ ಪತಿಯು ಪ್ರಾಪ್ತನಾದರೆ ನಿನ್ನ ಅಡಿದಾವರೆಗಳನ್ನು ಸಾವಿರದೆಂಟು ಕೆಂದಾವರೆಗಳಿಂದ ಅರ್ಚಿಸುವೆನು.” ಎಂದು ಹರಕೆಯನ್ನು ಹೊತ್ತಳು. ಅಲ್ಲಿಂದ ಮನೆಗೆ ಬಂದು ಒಂದು ತಿಂಗಳು ಕಳೆಯಿತು. ಒಂದು ದಿನ ಕನಕಮಂಜರಿಯು ವನವಿಹಾರಕ್ಕಾಗಿ ಹೋಗಿದ್ದಾಗ ಚಕ್ರವರ್ತಿಯ ಕುಮಾರನಾದ ಪುಂಡರೀಕನು ಸೌಂದರ್ಯವನ್ನು ಕಂಡು ಅವಳಲ್ಲಿ ಅನುರಕ್ತನಾದ. ಈ ವಿಚಾರವನ್ನು ತಿಳಿದ ಮಂತ್ರಿಗಳು ಚಕ್ರವರ್ತಿಗೆ ಈ ಸುದ್ಧಿಯನ್ನು ತಿಳಿಸಲು ರಾಜನು ತನ್ನ ಪರಿವಾರದೊದನೆ ರಾಜಶ್ರೇಷ್ಠಿ ಇದ್ದ ರಾಜಪುರಕ್ಕೆ ಬಂದು ತನ್ನ ಮಗನಿಗೆ ನಿಜಸುತೆಯನ್ನು ಧಾರೆ ಎರೆದು ಕೊಡಬೇಕೆಂದು ಸೆಟ್ಟಿಯನ್ನು ಪ್ರಾರ್ಥಿಸಿದನು. ಸೆಟ್ಟಿಯು ಇದಕ್ಕೆ ಒಡಂಬಟ್ಟು ತನ್ನ ಕುಮಾರಿಯಾದ ಕನಕಮಂಜರಿಯನ್ನು ಪುಂಡರೀಕನಿಗೆ ಧಾರೆ ಎರೆದು ಕೊಟ್ಟ. ಕನಕಮಂಜರಿಯು ಪುಂಡರೀಕನನ್ನು ಪಡೆದು ಸಂತಸ ಭರಿತಳಾದಳು. ಧನ – ಕನಕ, ಭೋಗ – ಭಾಗ್ಯ, ಸುಖ – ಸೌಖ್ಯಗಳ ಜೊತೆಗೆ ಮನದಿಯನ ಮೈಸುಖವನ್ನು ಪಡೆಯುತ್ತಾ ಹಿಗ್ಗಿ ಮೆರೆಯುತ್ತಾ ಜಿನನಾಥನಿಗೆ ತಾನು ಹೊತ್ತ ಹರಕೆಯನ್ನು ಮರೆತುಬಿಟ್ಟಳು.

ವರ್ಷಗಳು ಉರುಳಿದವು. ಆದರೆ ಕನಕಮಂಜರಿ ಪುತ್ರವತಿಯಾಗಲಿಲ್ಲ. ಪುಂಡರೀಕನ ಪ್ರೀತಿಯೂ ಕದಿಮೆಯಾಯಿತು. ಕನಕಮಂಜರಿಯು ದುಃಖದಲ್ಲಿ ಬೆಂದು ಬಳಲಿದಳು. ಒಂದು ರಾತ್ರಿ ಯಕ್ಷಿದೇವಿಯು ಅವಳಿಗೆ ಕನಸಿನಲ್ಲಿ ಬಂದು – ‘ಮಗಳೇ ! ನೀನು ಸಿರಿ – ಸುಖದ ಮದದಿಂದ ಜಿನನಿಗೆ ಹೇಳಿದ ಹರಕೆಯನ್ನು ಮರೆತಿರುವುದರಿಂದ ನಿಃಪುತ್ರಳಾದೆ. ಗಂಡನ ಪ್ರೀತಿಯಿಂದ ಚಂಚಿತಳಾಗಿರುವೆ’ ಎಂದು ಹೇಳಿ ಅದೃಶ್ಯಳಾದಳು. ನಿದ್ರೆಯಿಂದೆದ್ದು ತನ್ನ ಮರೆವೆಗಾಗಿ ಮರಗುತ್ತಾ ಕಣ್ನೀರಿಡುತ್ತಾ ಊರ ಮುಂದಣ ಉದ್ಯಾನವನದ ‘ಪದ್ಮಷಂಡ’ ವೆಂಬ ಸರೋವರಕ್ಕೆ ಹೋಗಿ ಕಮಲಗಳನ್ನು ಕೊಯ್ಯಲು ಕೊಳಕ್ಕೆ ಇಳಿದಳು. ಕೆರೆಯ ನೀರಿನ ತಳದಲ್ಲಿ ಒಳಗಡೆ ಬಂಗಾರ – ಮಣಿ ಮಾಣಿಕ್ಯಗಳಿಂದ ರಚಿಸಿದ ಉಪ್ಪರಿಗೆ ಮನೆಯನ್ನು ಕಂಡು ಬೆಕ್ಕಸ ಬೆರಗಾದಳು. ಮೆಲ್ಲನೆ ಇಳಿದು ಭವನದ ಒಳ ಬಂದಳು. ಸ್ವರ್ಗವೋ, ಭವನ ಲೋಕವೋ, ನಾಗಲೋಕವೋ ಎಂದು ಅವಳಿಗೆ ತಿಳಿಯದಾಯಿತು. ಮುತ್ತಿನ ರಂಗವಲ್ಲಿ, ಕುತ್ತುರಿ – ಕುಂಕುಮದ ಸಾರಣೆ – ಕಾರಣೆ, ಮರಕತ ಮಣಿಯ ನೆಲಗಟ್ಟು, ವೈಡೂರ್ಯದ ಚೌಕಟ್ಟು, ಇವುಗಳಿಂದೊಪ್ಪುವ ಮೊಗಸಾಲೆಯಲ್ಲಿ ಅರುವತ್ತಾರು ಸಾವಿರದ ಪರಿವಾರ ದೇವತೆಗಳಿಂದ ಸೇವೆಗೊಳ್ಳುತ್ತಾ ಓರ್ವ ದೇವಿ ಕುಳಿತಿರುವುದನ್ನು ಕನಕಮಂಜರಿ ಕಂಡಳು. ಅವಳು ಮುತ್ತಿನ ಹಸೆಯ ಮೇಲೆ ನವರತ್ನದ ಗದ್ದುಗೆಯಲ್ಲಿ ಮಂಡಿಸಿದ್ದಳು. ಕೆಲವರು ಪೊಸ ಪೂವಿನ ಮಾಲೆಯನ್ನು ತೊಡಿಸುತ್ತಿದ್ದರೆ ಇನ್ನು ಕೆಲವರು ನವರತ್ನದ ಹಾರಗಳಿಂದ ಸಿಂಗರಿಸುತ್ತಿದ್ದರು. ಮತ್ತೆ ಕೆಲವರು ಪೀತಾಂಬರವನ್ನು ಉಡಿಸುತ್ತಿದ್ದರು. ಕಲಶ, ಕನ್ನಡಿ, ಚಾಮರ, ಛತ್ರ, ಬಿಜ್ಜಣಿಗಗಳಿಂದ ಅವಳಿಗೆ ಪ್ರಸಾದನಗೈಯುತ್ತಿದ್ದರು. ಇನ್ನು ಕೆಲವರು ಬಂಗಾರದ ಕೊಡಗಳಲ್ಲಿ ಪಾಲ್ಗಡಲ ಹಾಲಿನಿಂದ ಮೀಯಿಸುತ್ತಿದ್ದರು. ಕೆಲವರು ಹಾಡಿದರೆ ಮತ್ತೆ ಕೆಲವರು ನರ್ತಿಸುತ್ತಿದ್ದರು. ಹಲವರು ಮಡಿವಾಳದ ಬಿಜ್ಜಣಿಗೆಯಿಂದ ಮೈ ತಂಪುಗೊಳಿಸುತ್ತಿದ್ದರು.

ಹೀಗೆ ಮೆರೆಯುತ್ತಿರುವ ಶ್ರೀ ದೇವಿಗೆ ಕನಕಮಂಜರಿಯು ನಮಸ್ಕರಿಸಿದಳು. ದೇವಿಯು ತನ್ನತ್ತ ನೋಡಲು ಕನಕಮಂಜರಿಯು -‘ಎಲೆ ತಾಯೆ ! ನಿಮಗೆ ಈತರದ ಸಂಪತ್ತು ಏತರಿಂದಾಯಿತು ? ಯಾವ ನೋಂಪಿಯ ಫಲ ಹೀಗೆ ಫಲಿಸಿತು? ಯಾವ ಪೂಜೆಯ ಪ್ರಸಾದದಿಂದ ಹೀಗಾಯಿತು ?’ ಎಂದು ಪ್ರಶ್ನಿಸಲು ಶ್ರೀದೇವಿಯು -‘ಮಗಳೇ ! ಹಲವು ನೋಂಪಿಗಳಲ್ಲಿ ಉತ್ತಮವಾದ ಶುಕ್ರವಾರದ ನೋಂಪಿಯನ್ನು ಆಚರಿಸಿದ ಫಲದಿಂದ ಇಂತಹ ಐಶ್ವರ್ಯ್ಯ ದೊರಕೊಂಡಿತು. ನೀನೂ ಕೂಡ ಪಂಚಪರಮೇಷ್ಠಿಗಳ ಪೂಜೆಯೊಡನೆ ಈ ಪುಣ್ಯ ನೋಂಪಿಯನ್ನು ಅಂಗೀಕರಿಸಿ ಕ್ರಮ ತಪ್ಪದೆ ತ್ರಿಕರಣ ಶುದ್ದಿಯಿಂದ ಆಚರಿಸಿದರೆ ನೀನೂ ಇಂತಹ ವಿಭವಗಳನ್ನು ಹೊಂದುವೆ’ ಎಂದು ಹೇಳಲು ಕನಕಮಂಜರಿಯು ದೇವಿಯನ್ನು ಬೀಳ್ಕೊಂಡು ಕೊಳದಲ್ಲಿರುವ ೧೦೦೮ ಕೆಂದಾವರೆಗಳನ್ನು ಕೊಯ್ದು ಜಿನಾಲಯಕ್ಕೆ ಬಂದು ಸಹಸ್ರ ನಾಮ ಮಂತ್ರಗಳಿಂದ ಜಿನೇಶ್ವರನನ್ನು ಭಕ್ತಿಯಿಂದ ಅರ್ಚಿಸಿ ಮನೆಗೆ ಬಂದಳು.

ಕೆಲಕಾಲ ಕಳೆಯಲು ಪುಂಡರೀಕನು ಪತ್ನಿಯನ್ನು ಪ್ರೀತಿಸತೊಡಗಿದ. ಕನಕ ಮಂಜರಿ ಗರ್ಭಿಣಿಯಾದಳು. ನವಮಾಸ ತುಂಬಲು ಆಕೆ ಪುತ್ರ ರತ್ನನ್ನು ಹಡೆದಳು. ಕುಮಾರನು ಬಿದಿಗೆಯ ಚಂದ್ರನಂತೆ ಬೆಳೆದು ಪ್ರಾಯ ಪ್ರಬುದ್ಧನಾದ. ಪರಾಕ್ರಮಶಾಲಿಯಾದ ಇವನು ಅನೇಕ ರಾಜ್ಯಗಳನ್ನು ಗೆದ್ದು ಹದಿನಾರು ಸಾಸಿರ ಮಡದಿಯರೊಡನಾಡಿ ಸುಖದಿಂದ ರಾಜ್ಯವಾಳುತ್ತಿದ್ದ. ಇವನ ತಾಯಿ ಅದರ ಫಲ – ಸುಖವನ್ನನುಭವಿಸುತ್ತಾ ಕೊನೆಗೆ ಸಮಾಧಿ ವಿಧಿಯಿಂದ ಮುಡುಪಿ ಬಂದು ಈಗ ಅರುವತ್ತಾರು ಸಾವಿರ ದೇವಿಯರಿಗೊಡತಿಯಾಗಿ -ಜ್ವಾಲಾ ಮಾಲಿನೀ ದೇವಿಯಾಗಿ ಹುಟ್ಟಿದ್ದಾಳೆಂದು ಗಣಧರರು ಪ್ರಜಾಪತಿ ಮಹಾರಾಜನಿಗೆ ತಿಳಿಸಲು ರಾಜದಂಪತಿಗಳು ಹರ್ಷಭರಿತರಾದರು. ರಾಜನು ಪುನಃ ‘ಈ ಮೊದಲು ಮತ್ತೆ ಯಾರು ಈ ನೋಂಪಿಯನ್ನು ನೋಂತರು?’ ಎಂದು ಕೇಳಲು ಗಣದ ಪರಮೇಷ್ಟಿಗಳು ಇಂತೆಂದರು :

ಅಯೋಧ್ಯಾಪತಿಯು ಈ ನೋಂಪಿಯನ್ನು ಆಚರಿಸಿ ಆಯುಷ್ಯಾವಸಾನದಲ್ಲಿ ದೇಹತ್ಯಾಗ ಮಾಡಿ ಅಲ್ಲಿಂದ ಈ ಜಂಬೂದ್ವೀಪದ ಭರತ ಕ್ಷೇತ್ರದಲ್ಲಿರುವ ಕಾಶ್ಮೀರ ದೇಶದ ಮಿಥಿಲಾಪುರದ ಅರಸ ಅರವಿಂದನಿಗೂ ಅವನರಸಿ ದೇವಶ್ರೀಗೂ ಅಶನಿವೇಗನೆಂಬ ಮಗನಾಗಿ ಹುಟ್ಟಿ ಯೌವನ ಭರಿತನಾದ. ಅರವಿಂದ ರಾಜನಿಗೆ ಶತ್ರುವಾದ ಪ್ರೀತಿಂಕರನೆಂಬ ಅರಸನಿದ್ದ. ಪ್ರೀತಿಂಕರನು ಒಂದು ದಿನ ತನ್ನ ಭಟ್ಟರನ್ನು ಅಟ್ಟಿ ಅರವಿಂದನನ್ನು ಕಟ್ಟಿ ತರಬೇಕೆಂದು ಕಟ್ಟಪ್ಪಣೆ ಮಾಡಿದನು. ದೂತರು ಬಂದು ಅಪ್ಪಣೆಯನ್ನು ತಿಳಿಸುತ್ತಲೇ ಅರವಿಂದನು ಕೆರಳಿ ಕೆಂಡವಾದ. ದೂತರ ಮಾತನ್ನೂ ಕೆರಳಿದ ತಂದೆಯನ್ನೂ ಕಂಡ ಅಶನಿವೇಗನೂ ಕೋಪದಿಂದ ಕಿಡಿಕಿಡಿಯಾಗಿ ಬಂದ ಭಟರನ್ನೂ ನೂಕಿ ಅವಮಾನಿಸಿ ಕಳುಹಿಸಿದ. ಭಟರು ವಿಷಯ ತಿಳಿಸಲು ಸೈನ್ಯದೊಡನೆ ತನ್ನ ಮಂತ್ರಿಯನ್ನು ಕಳುಹಿಸಿ ಅರವಿಂದನನ್ನು ಹಿಂಗಟ್ಟು ಕಟ್ಟಿ ತರಬೇಕೆಂದು ಆಜ್ಞೆ ಇತ್ತ. ಮಂತ್ರಿಯು ಮಿಥಿಲೆಗೆ ಬಂದು ಅರವಿಂದನನ್ನು ಬಂಧಿಸಿ, ನಿದ್ರಿಸುತ್ತಿದ್ದ ಅಶನಿವೇಗನನ್ನು ರಥದಲ್ಲಿರಿಸಿ, ಸಂಕೋಲೆಗಳಿಂದ ಬಂಧಿಸಿ ತಂದು ಅರಸನಿಗೆ ಒಪ್ಪಿಸಿದೆ.

ನಿದ್ದೆಯಿಂದ ಎಚ್ಚತ್ತ ಅಶನಿವೇಗನು ಮೈಮುರಿದಾಗ ಕಟ್ಟಿದ್ದ ಸಂಕಲೆಗಳು ಪುಡಿಪುಡಿಯಾದವು. ಅಷ್ಟರಲ್ಲೇ ಚತುರಂಗಬಲವು ಅವನನ್ನು ಮುತ್ತಲು ಸಿಡಿಲಮರಿ ಅಶನಿವೇಗನು ಕುರಿಯ ಹಿಂಡನ್ನು ಹೊಕ್ಕ ತೋಳನಂತೆ ಅತಿರಥ – ಮಹಾರಥರನ್ನು ಪುಡಿಗುಟ್ಟಲು ಶತ್ರುಪಕ್ಷವು ನಿರ್ನಾಮವಾಯಿತು. ತನ್ನ ಸೈನ್ಯವೆಲ್ಲ ನಾಶವಾಗುವುದನ್ನು ಕಂಡ ಪ್ರೀತಂಕರನು ಕೆರಳಿದ ಕಂಗಳಿಂದ ಕಿಡಿ ಕಾರುತ್ತಾ ಬಿಲ್ಲು ಕಣೆ ಹಿಡಿದು ಮುಂದೆ ಬಂದು ಮುತ್ತಿದ. ಅಶನಿವೇಗನಿಗೆ ಇದು ಯಾವ ಲೆಕ್ಕ ? ಆದರೂ ತುಂಬ ಶ್ರಮ ಪಡಬೇಕಾಯಿತು. ಆಗ ಶಾಸನದೇವಿಯಾದ ಜ್ವಾಲಾಮಾಲಿನಿಯು ಅಶನಿವೇಗನಿಗಾಗಿ ಬಲವಾದ ಅಸುರ ಬಲವನ್ನು ನಿರ್ಮಿಸಿ ಎದುರಾಗಿ ಕಳುಹಿಸಲು ಶತ್ರುಸೇನೆ ಪಲಾಯನ ಮಾಡಿತು. ಕನಲಿದ ಪ್ರೀತಿಂಕರನು ಬಿಲ್ಲು ಜೇವಡೆದು ಒಂದರ ಮೇಲೊಂದರಂತೆ ಕಣೆಗಳನ್ನು ಎಸೆಯಲು ಅಶನಿವೇಗನು ದೇವಿಯು ಕೊಟ್ಟ ಮಂತ್ರ ಬಾಣಗಳನ್ನು ಬಿಡಲು ಪ್ರೀತಿಂಕರನ ಬಿಲ್ಲು ಮುರಿಯಿತು. ಆ ಮೇಲೆ ಅಶನಿವೇಗನು ಸಿಂಹದಂತೆ ಲಂಘಿಸಿ ಪ್ರೀತಿಂಕರನನ್ನು ಭೂಮಿಗೆ ಕೆಡವಿ ಅಪ್ಪಳಿಸಿ ಕೊಂದುಬಿಟ್ಟನು.

ಆಮೇಲೆ ಅಶನಿವೇಗನು ಶತ್ರುವಿನ ರಾಜಧಾನಿಯನ್ನು ವಶಪಡಿಸಿ ಪ್ರೀತಿಂಕರನ ೯೬ ಮಂದಿ ಕುಮಾರಿಯನ್ನು ಮದುವೆಯಾಗಿ ಶತ್ರುಬಲ ಸಮೇತನಾಗಿ ಊರಿಗೆ ಹಿಂದುರುಗಿದನು. ವಿದ್ಯಾಧರರೆಲ್ಲ ಅಶನಿವೇಗನಿಗೆ ರತ್ನಾಭಿಷೇಕವನ್ನು ಮಾಡಿ ಸಾಮ್ರಾಜ್ಯ ಪಟ್ಟವನ್ನು ಕಟ್ಟಿ ತಮ್ಮ ಕುಮಾರಿಯನ್ನು ಧಾರಾಪೂರ್ವಕ ಕನ್ಯಾದಾನ ಮಾಡಿದರು. ಹೀಗೆ ದೇಶಾಧಿಪರನ್ನೆಲ್ಲ ಸನ್ಮಾನಿಸಿ ಬೀಳ್ಕೊಟ್ಟು ಅಶನಿವೇಗನು ತನ್ನ ಮಡದಿಯರೊಡನೆ ತೆರಪಿಲ್ಲದ ಸುಖವನ್ನನುಭವಿಸುತ್ತಾ ರಾಜ್ಯವಾಳುತ್ತಿದ್ದನು.

ಹೀಗೆ ಒಂದು ದಿನ ಅಶನಿವೇಗನು ತನ್ನ ‘ಸರ್ವಾವಸರ’ ಎಂಬ ಒಡ್ಡೋಲಗದಲ್ಲಿ ಆಸೀನನಾಗಿರಲು ವನಪಾಲಕನು ಬಂದು ಅಪೂರ್ವ ಫಲ – ಪುಷ್ಪಗಳ ಕಾಣಿಕೆಯನ್ನು ತಂದು ಅರಸನಿಗರ್ಪಿಸುತ್ತಾ ವಂದಿಸಿ – ‘ದೇವಾ! ನಮ್ಮ ಉದ್ಯಾನವನಕ್ಕೆ ಓರ್ವ ತಪೋಧನರು ಚಿತ್ತೈಸಿರುವರು’ ಎಂದು ಬಿನ್ನವಿಸಿದನು. ರಾಜನು ಆ ದೆಸೆಗೆ ಏಳಡಿ ಮುನ್ನಡೆದು ವಂದಿಸಿ ಒಸಗೆ ಒಪ್ಪಿಸಿದ ವನಪಾಲನಕನಿಗೆ ಊಟ ಉಡಿಗೆ ತೊಡಿಗೆಗಳನ್ನು ಉಡುಗೊರೆ ಗೊಟ್ಟನು. ಆ ಮೇಲೆ ಆನಂದ ಭೇರಿಯನ್ನು ಹೊಡಿಸಿ ಪುರಜನ – ಪರಿಜನ – ಅಂತಃಪುರ ಸ್ತ್ರೀ ಜನಸಮುದಾಯದೊಡನೆ ಪಾದಮಾರ್ಗದಿಂದ ಹೋಗಿ ಮುನೀಂದ್ರೋತ್ತಮರನ್ನು ತ್ರಿಪ್ರದಕ್ಷಿಣೆ ಬಂದು ವಂದಿಸಿ, ಪಾದ ಪೂಜೆಗೈದು ನಿರ್ಮಲ ಚಿತ್ತದಿಂದ ದರ್ಮಾಮೃತವನ್ನು ಸವಿದು ತೃಪ್ತನಾದನು. ಅನಂತರ ಅವರನ್ನು ವಂದಿಸಿ ಕೈ ಮುಗಿದು – ‘ಎಲೆ ಮುನಿವರ ! ಮೊನ್ನಿನ ಯುದ್ಧದಲ್ಲಿ ಶಾಸನ ದೇವಿಯು ಬಂದು ನನಗೆ ಸಹಾಯ ಮಾಡಿದುದು ಮತ್ತು ನನಗೆ ಈ ಸಾಮ್ರಾಜ್ಯ ಲಭಿಸಿದುದು ಆವ ಪುಣ್ಯದ ಫಲವೆಂದು ಅಪ್ಪಣೆ ಕೊಡಿಸಿ’ ಎಂದು ಪ್ರಾರ್ಥಿಸಿದನು.

ಮುನಿಗಳು – ‘ರಾಜನೆ ! ಮೊದಲು ನೀನು ಅಯೋಧ್ಯಾಧಿಪತಿಯಾಗಿದ್ದ ಕಾಲದಲ್ಲಿ ಶುಕ್ರವಾರ ನೋಂಪಿಯನ್ನು ನೋಂತು ಫಲದಿಂದ ಈ ಜನ್ಮದಲ್ಲಿ ಶಾಸನ ದೇವತೆಗಳು ನಿನಗೆ ಸಹಾಯರಾದರು. ಈ ಸಕಲ ಸುಖ ಸಂಪದಗಳೆಲ್ಲ ಆ ಪುಣ್ಯ ವೃಕ್ಷದ ದಿವ್ಯ ಫಲಗಳೆಂದೂ ಮುಂದೆಯೂ ನೀನು ಇದೇ ನೋಂಪಿಯನ್ನು ಪಾಲಿಸಿಸ್ವರ್ಗಾಪವರ್ಗಗಳನ್ನು ಪಡೆ’ ಎಂದು ಶುಭಾಶೀರ್ವಾದ ಮಾಡಲು ಮುನೀಶ್ವರರನ್ನು ಭಕ್ತಿಯಿಂದ ಬೀಳ್ಕೊಂಡು ಅರಮನೆಗೆ ಬಂದು ತನ್ನ ಮಡದಿಯರೊಡಗೂಡಿ ನೋಂಪಿಯನ್ನು ಸ್ವೀಕರಿಸಿ ಕೊನೆಗೆ ಉದ್ಯಾಪನೆಯನ್ನು ಮಾಡಿದನು. ಹೀಗೆ ಅನೇಕ ಕಾಲ ಸಂಸಾರ ಸುಖವನ್ನನುಭವಿಸಿ ಕೊನೆಯಲ್ಲಿ ಭಗವದ್ಧ್ಯಾನದಿಂದ ದೇಹವನ್ನು ತೊರೆದು ಸ್ವರ್ಗ ಲೋಕದಲ್ಲಿ ಲಲಿತಾಂಗ ದೇವನಾಗಿ ಹುಟ್ಟಿದನು’ ಎಂದು ಗುರು ಗಣಧರರು ವಿವರಿಸಲು ಪ್ರಜಾಪತಿ ರಾಜನು ಅತ್ಯಾನಂದಪಟ್ಟನು.

ಪುನಃ ಪ್ರಜಾಪತಿ ರಾಜನು – ’ಇನ್ನಾರಾದರೂ ಈ ನೋಂಪಿಯನ್ನುನೋಂತರೆ’ ಎಂದು ಕೇಳಲು ಗಣಧರರು – ‘ರಾಜನೇ! ರಾಜಪುರವೆಂಬ ಪಟ್ಟಣದಲ್ಲಿ ಶ್ರೀಧರನೆಂಬ ರಾಜಶ್ರೇಷ್ಠಿ. ಆತನ ಭಾರ್ಯೆ ಶ್ರೀಧರೆ ಎಂಬ ಸತಿ. ಇವರಿಗೆ ಪಾತಕಿಯಾದ ಶಿವಗಾಮಿನಿ ಎಂಬ ಪಾಪಿಷ್ಠ ಜನಿಸಿದಳು. ಇವಳು ಜನಿಸುತ್ತಲೇ ತಂದೆ – ತಾಯಿ ಬಂಧು – ಬಳಗವೆಲ್ಲ ನಿರ್ನಾಮವಾಯಿತು. ಮನೆ-ಮಾರು ನೆಲಸಮವಾಯಿತು. ದಿಕ್ಕಿಲ್ಲದ ಈ ಪಾಪಿ ಹೆಣ್ಣು ನಾಡನ್ನು ತೊರೆದು ಕಾಡುಪಾಲಾದಳು. ಕಾಡಿನಲ್ಲಿ ಮೆರೆಯುತ್ತಿರುವ ಕನಕಾಚಲವಂಬ ಪರ್ವತದ ಬಳಿ ದಶವಿಧ ಕಲ್ಪವೃಕ್ಷಗಳು ಬಯಸಿದವರ ಬಯಕೆಯನ್ನು ಈಡೇರಿಸುತ್ತಿರುವುದನ್ನೂ, ಇದರ ಒತ್ತಿನಲ್ಲಿ ಪದ್ಮರಾಗ ಮಣಿಯ ಉಪ್ಪರಿಗೆಗಳನ್ನೂ, ಮರಕತ – ಮಾಣಿಕ್ಯ – ಗೋಮೇಧಿಕ ಮಣಿಮಯ ಅರಮನೆಗಳನ್ನೂ ವಜ್ರ – ವೈಡೂರ್ಯ – ಮುತ್ತು – ಹವಳ – ಪುಷ್ಯರಾಗಗಳಿಂದ ಒಪ್ಪುವ ಗೋಪುರಗಳನ್ನೂ ಇಂದ್ರ ನೀಲ ಮಣಿಯ ನೆಲಗಟ್ಟು, ಮುತ್ತಿನ ರಂಗವಲ್ಲಿ, ರತ್ನದ ಜಲ್ಲರಿ, ಹೊಸ ಹೂಗಳ ಹಾಸಿಗೆ, ಎಣ್ದಿಕ್ಕುಗಳಲ್ಲಿಟ್ಟ ಕುಂಭಗಳಲ್ಲಿ ದಿವ್ಯೋದಕ, ಮಡಿವಾಳದ ಬಿಜ್ಜಣಿಗೆ, ಜಲಭರಿತ ಕೊಳ, ಇವುಗಳನ್ನು ಕಂಡ ಶಿವಗಾಮಿನಿ ಬೆಕ್ಕಸ ಬೆರಗಾದಳು. ಅವಳು ಕೊಳದ ಬಳಿಗೆ ಬಂದು ಸ್ನಾನ ಕ್ರೀಡೆಯಾಡಲು ಇಳಿದಾಗ ಕೆರೆಯ ನೀರೆಲ್ಲ ಬತ್ತಿ ಬರಡಾಯಿತು. ವಿಧಿಯನ್ನು ಹಳಿಯುತ್ತಾ ಕಲ್ಪವೃಕ್ಷದ ಬಳಿಗೆ ಬಂದು ವಸ್ತ್ರಾಭರಣಗಳಿಗೆ ಕೈ ಇಕ್ಕಲು ಅವೆಲ್ಲ ಅದೃಶ್ಯವಾದುವು. ಆಕೆಗೆ ಅಪಾರ ದುಃಖವಾಯಿತು. ತನ್ನ ದುರ್ವಿಧಿಗಾಗಿ ಮರುಗುತ್ತಾ ಕೊರಗುತ್ತಾ ಇದೆಲ್ಲ ನನ್ನ ಪಾಪೋದಯದ ಫಲವೆಂದು ತನ್ನನ್ನು ನಿಂದಿಸಿಕೊಂಡು ಅತ್ತು ಅತ್ತು ಅಲ್ಲೇ ನೆಲಕ್ಕೊರಗಿ ಹೋದಳು.

ಆಗ ಸ್ವಪ್ನದಲ್ಲಿ ಪಂಚಮಹಾವಾದ್ಯಗಳ ಧ್ವನಿ ಕೇಳಿಸಿತು. ಆ ಮೇಲೆ ಸಪ್ತಕನ್ನಿಕೆಯರು ಬಂದುದನ್ನು ಅವಳು ಕಂಡಳು. ಕಣ್ಣು ತೆರೆದರೂ ಅವರು ಕಾಣಲಾಗಿ ಅವರ ಮಹಿಮೆಯನ್ನು ಚಿಂತಿಸಿ ಕೈಮುಗಿದಳು – ‘ತಾಯಂದಿರೇ ! ನಿಮಗಿದೆಲ್ಲ ವೈಭವವು ಏತರಿಂದಾಯಿತು’ ಎಂದು ಕೇಳಲು ಆ ದೇವಿಯರು – ‘ಮಗಳೇ ! ಹಿಂದಿನ ಭವದಲ್ಲಿ ನಮ್ಮ ತಂದೆ ರಾಜರಾಜನೆಂಬ ಅರಸನಿಗೆ ಮಂತ್ರಿಯಾಗಿದ್ದ. ನಮ್ಮ ತಂದೆಗೆ ನಾವು ಏಳುಮಂದಿ ಕನ್ಯೆಯರು. ನಮ್ಮ ತಂದೆ ರಾಜ ದ್ರೋಹ ಮಾಡಿದನೆಂದು ರಾಜನು ಅವನನ್ನು ಕೊಲ್ಲಿಸಿದ. ಅನಾಥರಾದ ನಾವು ಆಶ್ರಯವಿಲ್ಲದೆ ನಾಡನ್ನು ತೊರೆದು ಕಾಡನ್ನು ಸೇರಿ ಅಲ್ಲಿನ ಹಣ್ಣು – ಕಾಯಿಗಳನ್ನು ತಿನ್ನುತ್ತಾ ಜೀವಿಸಿದೆವು. ಆ ವನದ ದೇವಿಯರು ನಮ್ಮ ಬವಣೆಯನ್ನು ಕಂಡು ಮರುಗಿ ಕರುಣಿಸಿ ಹೀಗೆಂದರು – ‘ಮಕ್ಕಳೇ ! ನಾವೆಲ್ಲ ಹಿಂದಿನ ಭವದಲ್ಲಿ ಶುಕ್ರವಾರದ ನೋಂಪಿಯನ್ನು ಆಚರಿಸಿದ ಫಲದಿಂದಾಗಿ ಈಗ ಈ ಸುಖವನ್ನು ಉಣ್ಣುತ್ತಿದ್ದೇವೆ. ನೀವೂ ಅದನ್ನು ನೋಂಪಿಸಿರಿ.’ ಎಂದು ಹೇಳುತ್ತಾ ಅದರ ವಿಧಾನವನ್ನು ತಿಳಿಸಿ ಅದೃಶ್ಯರಾದರು. ಅನಂತರ ನಾವೆಲ್ಲ ಆ ನೋಂಪಿಯನ್ನು ಆಚರಿಸಿ ಬಂದು ಇಲ್ಲಿ ಸಪ್ತ ಕನ್ಯೆಯರಾಗಿ ಹುಟ್ಟಿ ಸುಖ ಉಂಡೆವು’ ಎಂದು ಶಿವಗಾಮಿನಿಗೆ ತಿಳಿಸಿದರು.

ಶಿವಗಾಮಿನಿಯು ಪುನಃ – ‘ತಾಯಂದಿರೇ ! ನಾನು ಸರೋವರಕ್ಕೆ ಮೀಯಲು ಇಳಿದಾಗ ಅದು ಬತ್ತಿ ಬರಡಾಯಿತು. ಕಾಮಿತಾರ್ಥವನ್ನೀಯುವ ಕಲ್ಪವೃಕ್ಷಗಳಿದ್ದ ವಸ್ತ್ರಾಭರಣಗಳೆಲ್ಲ ಮುಟ್ಟುತ್ತಲೇ ಮಾಯವಾದವು. ಇದೇಕಾಯಿತು?’ ಎಂದು ಪ್ರಶ್ನಿಸಿದಳು. ಆಗ ದೇವಿಯರು -‘ಮಗಳೇ ! ಹಿಂದಣ ಜನ್ಮದಲ್ಲಿ ನೀನು ಇದ್ದ ಊರಿನ ಜಿನ ಚೆತ್ಯಾಲಯಕ್ಕೆ ಭವ್ಯರಾದ ಹೆಮ್ಮಕ್ಕಲು ಶುಕ್ರವಾರ ನೋಂಪಿಯನ್ನು ಪೂಜಿಸಲು ಫಲ – ಪುಷ್ಪ – ಅಕ್ಷತೆಗಳೊಡನೆ ಬರುತ್ತಿರಲು ನೀನು ನಿಂದಿಸಿದೆ. ಆ ಕಾರಣದಿಂದ ಜಿನೇಶ್ವರನ ಪೂಜೆ ಮಾಡುವಲ್ಲಿ ನೀನು ಗರ್ವಪಟ್ಟು ನಿಂದಿಸಿದುದರಿಂದ ಆ ಅಹಂಕಾರದ ಫಲವಾಗಿಯೇ ನೀನು ಈ ಜನ್ಮದಲ್ಲಿ ನೀನಿಳಿದ ನೀರಿನ ಕೊಳ ಬರಿದಾಯಿತು. ಕಲ್ಪವೃಕ್ಷದ ಫಲಗಳಿಗೆ ಕೈ ನೀಡಲು ಅವು ಅದೃಶ್ಯವಾದುವು. ಆದುದರಿಂದ ನೀನೂ ನಮ್ಮಂತಹ ಸುಖ ಬಯಸುವುದಾದರೆ ಶುಕ್ರವಾರ ನೋಂಪಿಯನ್ನು ಪಾಲಿಸು’ ಎಂದು ತಿಳಿಸಿ ಆ ದೇವಿಯರು ಅದೃಶ್ಯರಾದರು.

ಶಿವಗಾಮಿನಿಯು ನೋಂಪಿಯನ್ನು ಸ್ವೀಕರಿಸಿ ಪಾಲಿಸುತ್ತಾ ಉಜ್ಜವಣೆಯನ್ನು ಮಾಡಿ ಆ ಪುಣ್ಯದ ಫಲದಿಂದ ‘ಭದ್ರತಾರುಣ್ಯ’ ಎಂಬ ವನದ ವನದೇವತೆಯಾಗಿ ಹುಟ್ಟಿದಳು. ಅವಳ ಪುಣ್ಯದ ಅತಿಶಯವನ್ನು ಹೇಳಿ ತೀರದು – ಮಾಣಿಕದ ಉಪ್ಪರಿಗೆಗಳು, ನವರತ್ನದ ಗೋಪುರಗಳು, ಹವಳದ ಮಂಟಪಗಳು – ವಜ್ರದ ಪ್ರಾಸಾದಗಳು, ಮುತ್ತಿನ ಜಲ್ಲರಿ, ಪಚ್ಚೆಯ ತೋರಣ, ಪರಿಮಳಿತ ಪುಷ್ಪಗಳ ಹಂಸತೂಲಿಕಾ ತಲ್ಪ, ಮುರ್ನೂರು ಅರಮನೆ, ನೂರಾರು ಜಲಕ್ರೀಡೆಯಾಡುವ ಕೊಳೆಗಳು, ೩೬೦ ಮಂದಿ ಬಾಲಕಿಯರ ಸೇವೆ, ಹಾಲ್ಗಡಲ ಹಾಲನ್ನು ಕೊಡಗಳಲ್ಲಿ ತುಂಬಿ ತಂದು ದೇವಾಂಗನೆಯರು ಮಾಡಿದ ಮಜ್ಜನ. ಅವಳ ದೇಹದ ಸೌಂದರ್ಯ ದೇವತಾ ಸ್ತ್ರೀಯರಲ್ಲೂ ಕಾಣಸಿಗದು, ದೇಹ ಸೌರಭ ಒಂದು ಯೋಜನ ವ್ಯಾಪಿಸಿರುವುದು. ಇದು ಅಲ್ಲದೆ ಅನೇಕ ಸಿರಿ – ಸಂಪದಗಳನ್ನು, ಭೋಗ ಭಾಗ್ಯಗಳನ್ನು ಪಡೆದು ಸುಖ – ಸಾಗರದಲ್ಲಿ ಮುಳುಗಿದಳು” ಎಂದು ಗಣಧರರು ಹೇಳಿದರು. ಅದನ್ನು ಕೇಳಿದ ಪ್ರಜಾಪತಿ ಮಹಾರಾಜ ಮತ್ತು ಮಹಾದೇವಿಯರು ಸಂತಸಗೊಂಡು ಅದರ ವಿಧಾನವನ್ನು ಬೆಸಗೊಳಿಸಲು ಗುರು ಗಣಧರರು ನಿರೂಪಿಸಿದರು :

ಆಷಾಢಮಾಸದ ಶುಕ್ಲಪಕ್ಷದ ಮೊದಲ ಶುಕ್ರವಾರ ಅಥವಾ ಕೃಷ್ಣಪಕ್ಷದ ಕೊನೆಯ ಶುಕ್ರವಾರದಂದು ನೋಂಪಿ ಮಾಡುವವರು ಬೆಳಗ್ಗೆ ಸ್ನಾನಮಾಡಿ ಶುಚಿರ್ಭೂತರಾಗಿ ಮಡಿಬಟ್ಟೆಯನ್ನುಟ್ಟು ಸರ್ವಾಭರಣ ಭೂಷಿತರಾಗಿ ಪೂಜೆಗಾಗಿ ಫಲ – ಪುಷ್ಪ – ಭಕ್ಷ – ಜಲ – ಗಂಧ – ಅಕ್ಷತೆಗಳನ್ನು ಕೊಂಡು ಬಸದಿಗೆ ಬಂದು ಜಿನೇಂದ್ರ ಚಂದ್ರನಿಗೆ ಅಭಿಷೇಕ, ಅಷ್ಟ ವಿಧಾರ್ಚನೆಗಳನ್ನು ಮಾಡಿ ಶ್ರುತ ಗುರುಗಳನ್ನು ಪೂಜಿಸಬೇಕು. ಆ ಮೇಲೆ ಮನೆಗೆ ಬಂದು ಮನೆಯನ್ನು ಸಾರಿಸಿ, ರಂಗವಲ್ಲಿ, ಇಕ್ಕಿ, ಮೇಲ್ಗಡೆ ಮೇಲ್ಗಟ್ಟುನ್ನು ಬಿಗಿದು ಕೆಳಗಡೆ ಪಂಚವರ್ಣದ ಚೂರ್ಣದಿಂದ ಪಂಚಮಂಡಲವನ್ನು ಬರೆದು ಮಧ್ಯದಲ್ಲಿ ಗಂಧಶಾಲಿ ಭತ್ತವನ್ನು ಹರಡಿ, ಅಲ್ಲಿ ಸ್ವಸ್ತಿಕವನ್ನು ಬರೆದು ಅದರ ಮೇಲೆ ಮುನ್ನೂಲು ಸುತ್ತಿದ, ನೀರು ತುಂಬಿದ, ಪುಷ್ಪ ಮಾಲಾದಿಗಳಿಂದ ಅಲಂಕೃತವಾದ ಕುಂಭವನ್ನು ಇರಿಸಬೇಕು. ಮಂಡಲವನ್ನು ತೆಂಗು, ಕಂಗು, ಬಾಳೆಗಳಿಂದ ಸಿಂಗರಿಸಬೇಕು. ಮಂಡಲದ ಮುಂಭಾಗದಲ್ಲಿ ಒಂದು ಪೀಠವನ್ನಿಟ್ಟು ಅದರಲ್ಲಿ ಮೊನೆ ಮುರಿಯದ ಅಕ್ಷತೆಗಳಿಂದ ನೂರೆಂಟು ಪುಂಜವನ್ನು ಇರಿಸಿ, ಆ ಮೇಲೆ ಜಲಗಂಧಾಕ್ಷತೆಗಳಿಂದ ಜಿನೇಶ್ವರನನ್ನು ಪೂಜಿಸಬೇಕು. ಮೂರು ಬಳ್ಳ ಭತ್ತವನ್ನು ಕುಟ್ಟಿ ಮಾಡಿದ ಅಕ್ಕಿಯ ಹಿಟ್ಟಿನಿಂದ ಬೆಲ್ಲ, ಎಳ್ಳು, ತೆಂಗಿನಕಾಯಿ ತುರಿ ಬೆರಸಿದ ಹೂರಣವನ್ನು ತುಂಬಿಸಿ ೯ ಹೂರಣಗಡುಬನ್ನು ಮಾಡಬೇಕು. ಅದರಲ್ಲಿ ಮೂರು ಕಡುಬನ್ನು ಜಿನೇಶ್ವರರಿಗೆ ಪೀಠದಲ್ಲಿ ಇರಿಸಬೇಕು. ಇನ್ನು ಮೂರನ್ನು ಕರಿಮಣಿ, ಬಿಚ್ಚೋಲೆ, ಹೊಂಗನೂಲು, ಕುಂಭಕ್ಕೆ ಸುತ್ತಿದ ಮುರ್ನ್ನೂಲಿನಿಂದ ಕಂಕಣವನ್ನು ಕಟ್ಟಿಕೊಂಡು ಕಥೆಯನ್ನು ಕೇಳಿ ಕಥೆಯನ್ನು ಓದಿದ ವಿದ್ಯಾಂಸವನ್ನು ಎಲೆ, ಅಡಿಕೆ, ಕಾಣಿಕೆಗಳಿಂದ ಮನ್ನಿಸಬೇಕು. ಅನಂತರ ಉಳಿದ ಮೂರು ಹೂರಣಗಡುಬುಗಳಿಂದ ಏಕಭುಕ್ತವನ್ನು ಮಾಡುವುದು.

ಹೀಗೆ ಪ್ರತಿ ತಿಂಗಳ ಮೊದಲ ಶುಕ್ರವಾರದಲ್ಲಿ ಮೇಲೆ ಹೇಳಿದ ಕ್ರಮದಿಂದ ನೋಂಪಿಯನ್ನು ೩ ವರ್ಷ ೩ ತಿಂಗಳು ತನಕ ಮಾಡಬೇಕು. ಇದು ಸಾಧ್ಯವಾಗದಿದ್ದರೆ ಮೂರು ಅಷ್ಟಾಹ್ನಿಕದ ಮೂರು ತಿಂಗಳುಗಳಲ್ಲಿ ಬರುವ ಎಲ್ಲ ಶುಕ್ರವಾರಗಳಲ್ಲಿ ನೋಂಪಿ ಮಾಡಬಹುದು. ಅದೂ ಸಾಧ್ಯವಾಗದಿದ್ದಲ್ಲಿ ಆಷಾಢಮಾಸದ ಅಷ್ಟಾಹ್ನಿಕದ ಮೊದಲ ಶುಕ್ರವಾರದಲ್ಲಿ ನೋಂಪಿ ಮಾಡಿ ೯ ವರ್ಷಗಳಾದ ಮೇಲೆ ಕೊನೆಗೆ ಉದ್ಯಾಪನೆಯನ್ನು ಮಾಡಬೇಕು. ಉದ್ಯಾಪನೆ ಮಾಡುವಾಗ ಶುಚಿರ್ಭೂತರಾಗಿ ಬಸದಿಗೆ ಬಂದು ಜಿನೇಶ್ವರನಿಗೆ ಮಹಾಭಿಷೇಕವನ್ನು ಮಾಡಿ, ಅಷ್ಟವಿಧ ಅರ್ಚನೆಯಿಂದ ಅರ್ಚಿಸಿ ಪಂಚಭಕ್ಷ್ಯ, ಪಂಚಪರಮಾನ್ನೆ, ಪಂಚ ಕಜ್ಜಾಯಗಳಿಂದ ಚರುವನ್ನಿಟ್ಟು ದೇವರ ಮುಂದೆ ೧೦೦೮ ತಾವರೆಗಳನ್ನರ್ಪಿಸುವುದು, ಕಡೆಗೆ ದೊರೆತಷ್ಟು ಕಮಲಗಳಿಂದ ಅತವಾ ಇತರ ೧೦೦೮ ಸುಗಂಧ ಪುಷ್ಪಗಳಿಂದ ಪೂಜಿಸುವುದು. ಆಮೇಲೆ ಶುಕ್ರ – ಗುರುಗಳ ಪೂಜೆಯನ್ನು ಮಾಡಿ ಋಷಿ ಸಮುದಾಯಕ್ಕೆ ನಿರಂತರಾಯವಾಗಿ ಆಹಾರ ದಾನವನ್ನಿತ್ತು ಪಿಂಚ, ಕಮಂಡಲ, ಪುಸ್ತಕ, ಶಾಸ್ತ್ರ, ಶ್ರುತಪಾವಡೆಗಳನ್ನು ಕೊಡುವುದು. ಚಾತುರ್ವರ್ಣಕ್ಕೆ ಆಹಾರದಾನ, ಶಾಸ್ತ್ರದಾನ, ದಾನ, ದಕ್ಷಿಣೆಗಳನ್ನಿತ್ತು ಸನ್ಮಾನಿಸಬೇಕು.

ಆಮೇಲೆ ಮನೆಗೆ ಬಂದು ಮೊದಲು ಹೇಳಿದ ಕ್ರಮದಿಂದ ಮಂಡಲ, ಕುಂಭಗಳನ್ನು ರಚಿಸಿ ದೇವರನ್ನು ಅರ್ಚಿಸಿ ಆರು ತಂಡ ಋಷಿಯರ್ಗೆ ಅಥವಾ ಮೂರು ಅಥವಾ ಒಂದು ತಂಡ ಅರ್ಜಿಕೆಯರಿಗಾದರೂ ಆಹಾರ ದಾನವನ್ನು ಕೊಡಬೇಕು. ಅನಂತರ ಕಥೆಯನ್ನು ಕೇಲಿ, ಕಥನಕನನ್ನು ಸುವರ್ಣ – ವಸ್ತ್ರಾದಿಗಳಿಂದ ಸನ್ಮಾನಿಸಿ ಮತ್ತೆ ಮೂರು ಉಳಿದ ಹೂರಣಗದುಬುಗಳಿಂದ ಏಕಭುಕ್ತವನ್ನು ಭುಂಜಸಿಬೇಕು, ಇದು ಉದ್ಯಾಪನೆಯ ಕ್ರಮ.’ ಎಂದು ಗುರು ಗಣಧರಪರಮೇಷ್ಠಿಗಳು ಪ್ರಜಾಪತಿ ಮಹಾರಾಜನಿಗೂ ಆತನ ಮಹಿಶಿ ಮಹಾದೇವಿಗೂ ಬೆಸಸಿದರು.

ಇದನ್ನು ಕೇಳಿ ಹರ್ಷಚಿತ್ತರಾದ ರಾಹದಂಪತಿಗಳು ತಾವೂ ಆ ನೋಂಪಿಯನ್ನು ಭಕ್ತಿಯಿಂದ ಸ್ವೀಕರಿಸಿ, ಗಣಧರ ಸ್ವಾಮಿಗಳಿಗೆ ಗುರುಭಕ್ತಿಯಿಂದ ಮಣಿದು ಬೀಳ್ಕೊಂಡರು. ಅರಮನೆಗೆ ಬಂದು ಕ್ರಮವಾಗಿ ಈ ನೋಂಪಿಯನ್ನು ನೋಂತು ಕೊನೆಗೆ ವೈಭವದಿಂದ ಉದ್ಯಾಪನೆಯನ್ನು ನೆರವೇರಿಸಿದರು. ತತ್ಫಲವಾಗಿ ಹಲವು ಕಾಲ ಸುಖದಿಂದ ರಾಜ್ಯವಾಳುತ್ತಾ ಹಲವು ಕುಮಾರ – ಕುಮಾರಿಯರನ್ನು ಪಡೆದು, ಆಯುಷ್ಯಾವಸಾನದಲ್ಲಿ ಸಮಾಧಿಯಿಂದ ಶರೀರವನ್ನು ತೊರೆದು ಪ್ರಜಾಪತಿ ರಾಜನು ೧೨೮ ಸಾವಿರ ದೇವರ ಪರಿವಾರಕ್ಕೆ ಒಡೆಯನಾದ ದೇವೇಂದ್ರನಾಗಿಯೂ ಮಹಾದೇವಿಯು ಅವನಿಗೆ ಶ್ರೀದೇವಿ ಎಂಬ ಅರಸಿಯಾಗಿಯೂ ಹುಟ್ಟಿದರು.

ಇಂತು ಈ ಶುಕ್ರವಾರದ ನೋಂಪಿಯನ್ನು ಭವ್ಯ ಜನಂಗಳು ಆಯಾ ಕಾಲದಲ್ಲಿ ನೋಂತು ಅತುಲೈಶ್ವರ್ಯಕ್ಕೊಡೆಯರಾಗಿ ಅಪಾರ ಸುಖವನ್ನನುಭವಿಸಿದರು. ಈ ನೋಂಪಿಯನ್ನು ಇತರರಿಗೆ ಬೋಧಿಸಿ ಮಾಡಿಸಿದವರೂ ಸಕಲ ಸುಖ – ಸಂಪದವನ್ನು ಪಡೆದು ಸ್ವರ್ಗ ಮೋಕ್ಷಾದಿಗಳನ್ನು ಕ್ರಮೇಣ ಸ್ವರ್ಗ – ನಿರ್ವಾಣ ಪದವಿಗಳಿಗೆ ಒಡೆಯರಾಗುವರು. ಈ ಕತೆಯನ್ನು ಓದಿದವರು, ಓದಿಸಿದವರು, ಕೇಳಿದವರು ಸ್ವರ್ಗಾದಿ ಪದವಿಗೇರಿ ಮುಂದೆ ಮುಕ್ತಿ ಪಡೆಯುವರು. ಹೀಗೆ ಈ ನೋಂಪಿಯನ್ನು ನೋಂತವರಿಗೂ ನೋನಿಸಿದವರಿಗೂ ಒಡಂಬಟ್ಟವರಿಗೂ ಸಕಲ ಸನ್ಮಂಗಳಗಳಾಗಲಿ

ಇತಿ ಭದ್ರಂ ಭೂಯಾತ್