ಸಂಚಿತಗುಣಗಣ ನಿಳಯರ
ಪಂಚೇಷು ವಿನಾಶ ಜಿನರ ಪದಯುಗಕೆಱಗಿ
ಪಂಚತ್ವ ನಾಶಮಂ ಶ್ರೀ
ಪಂಚಮ್ಯುಪವಾಸ ವಿಧಿಯನಭಿವರ್ಣಿಸುವೆಂ ||

ಅದೆಂತೆಂದೊಡೆ ಜಂಬೂದ್ವೀಪದ ಭರತಕ್ಷೇತ್ರದೊಳು ವಸಂತ ತಿಲಕಮೆಂಬ ಪುರಮುಂಟಾಪುರಮನಾಳ್ವಂ ಸತ್ಪತಿಯೆಂಬರಸನಾತನ ಸ್ತ್ರೀ ಪ್ರಿಯೆಯೆಂಬಳು ಮತ್ತಮಲ್ಲಿ ಕೋದಂಡನೆಂಬ ಬ್ರಾಹ್ಮಣನಿರ್ಪ್ಪನಾತನ ಸ್ತ್ರೀ ಕಮಳೆಯೆಂಬಳಾಯಿರ್ವ್ವರ್ಗ್ಗಂ ಶ್ರೀಯುಂ ಸಂಪತ್ತಿಯುಮೆಂಬ ಪುತ್ರಿಯರೀರ್ವ್ವರಾಗೆ ಕೋದಂಡಂ ಪರಲೋಕ್ತಪ್ರಾಪ್ತನಾಗೆ ಕಮಳೆಯನಾಥೆಯಾಗಿ ಜಲವಿಲ್ಲದ ಕಮಲದಂತೆ ಕಂದಿ ಕಂದಿ ಪರರ ಕೆಲಸಮಂ ಮಾಡಿ ಮಕ್ಕಳಿರ್ವ್ವರಂ ಪೊರೆವುತ್ತಮಿರೆಲೊಂದುದಿನಂ ಶ್ರೀಯು ತಂನ ತಂದೆಯ ತಂಗಿಯಪ್ಪ ಸಂಶಪ್ತೆಯಂ ನಿಂದಿಸುವುದುಮಾ ಶ್ರೀಯ ತಾಯಪ್ಪ ಕಮಳೆ ಕೇಳಿ ಝಂಕಿಸಿ ಗೃಹದಿಂ ಪೊಱಮಡಿಸೂದಾಮಾ ಶ್ರೀಯು ಮಾನಗರದ ಬಹಿರುದ್ಯಾನವನದೊಳಿರ್ದ್ದ ಯಮಧರರೆಂಬ ಮುನೀಶ್ವರಂ ಪೊರ್ದ್ದಿ ಎಲೆಸ್ವಾಮಿ ದಾರಿದ್ರ್ಯಶ್ರೀ ವಿನಾಶನೋಪಾಯಮಂ ಬೆಸಸಿಮೆನಲವರಾಕೆ ಮತ್ತೊಂದು ವ್ರತಮಂ ಕೈಕೊಳಲ್ಕ ಶಕ್ತಿಯೆಂದಱಿತೆಲೆಮಗಳೆ ಶ್ರೀ ಪಂಚಮ್ಯುಪವಾಸದಿಂದಭೀಷ್ಟ ಫಲಮಂ ಪಡೆವೆಯೆಂದು ಪೇಳ್ದದಱ ಫಲಮಂ ಸಂಕ್ಷೇಪದಿನಿಂತೆಂದಂ ಪೇಳ್ದರು ಮಹಾಶ್ರೀಯಂ ಮಹಾ ಸುಖಮಂ ಮಹಾಭಾಗಮುಂಮಹಾ ಕುಲಮುಂ ಮಹಾರೂಪುಂ ಮಹಾಶೀಲಮುಂ ಮಹಾ ಧೈರ್ಯಮುಂ ಮಹಾ ಸೌಭಾಗ್ಯಮುಂ | ಮಹಾತ್ಯಾಗಿತ್ವಮುಂ | ನಿರೋಗತ್ವಮುಂ | ಸದ್ಭಂಧುಗಳುಂ | ನಿರಾಕುಲತ್ವಮುಂ | ನಿಃಶೋಕತ್ವಮುಂ ದೀರ್ಗ್ಘಾಯುಷ್ಯಮುಂ | ಸತ್ಪುತ್ರರುಂ | ಸದ್ಭಂದುಗಳುಂ | ಸರ್ತ್ಕಿರ್ತ್ತಿಯುಂ | ಹಸ್ತ್ಯಶ್ವ ರಥ ಪದಾತಿ ವಿಭವಂಗಳುಂ | ರಾಜಾಧಿರಾಜಾರ್ದ್ಧಮಂಡಲಿಕ ಅರ್ದ್ಧ ಚಕ್ರವರ್ತ್ತಿ ಸಕಲ ಚಕ್ರವರ್ತ್ತಿಯಿಂದ್ರಾಹಮೀಂದ್ರ ಮುನೀಂದ್ರರ್ಹತ್ಪದವಿಯೆಂಬಿವು ಶ್ರೀಪಂಚಮ್ಯುಪವಾಸದ ಫಲಂಗಳೆಂದು ಪೇಳ್ದು ಮತ್ತದಱ ವಿಧಾನಮಂ ಯಿಂತೆಂದು ಪೇಳ್ದರು ಮಾಂಸ ಮಾಸಂದಪ್ಪದೆ ಶುಕ್ಲಪಕ್ಷದ ಪಂಚಮಿಯೊಳುಪವಾಸಮಂ ಜಘನಂದಿಂದಯ್ದು ತಿಂಗಳು ಮಾಳ್ಪುದು | ಮಧ್ಯಮಂದಿದಯ್ದುವರುಷಂ ಮಾಳ್ಪುದು | ಉತ್ಕೃಷ್ಟದಿಂದಯ್ದು ವರುಷಮಯ್ದು ತಿಂಗಳು ಮಾಳ್ಪುದು | ಮಧ್ಯಮದಿಂದಯ್ದು ವರುಷಮಂ ಮಾಳ್ಪುದು | ಉತ್ಕೃಷ್ಟದಿಂದಯ್ದು ವರುಷ ಮಯ್ದು ತಿಂಗಳು ಮಾಳ್ಪುದೆಂದು ಪೇಳೆ ಕೇಳ್ದು ಜಘನ್ಯ ವಿಧಾನಮಂ ಕೈಕೊಂಡು ಸಂತುಷ್ಟ ಚಿತ್ತೆಯಾಗಿ ಮನೆಗೆ ಪೋಗಿಯಾ ನೋಂಪಿಯ ವಿಧಾನಮಂ ಕೇಳಲಾಕೆಯ ವಚನದಿಂ ತಾಯುಂ ತಂಗಿಯುಂ ಕೈಕೊಂಡರಂತಾ ಮೂವರುಮಾ ವಿಧಾನಮಂ ಲೇಸಾಗಿ ಮಾಡಿ ಸುಖದಿಂದಿರುತ್ತ ಮಿರಲಾಯುಷ್ಯಾವಸಾನದೊಳು ಕಮಳೆ ಸತ್ತಾ ನೋಂಪಿಯ ಫಲದಿಂ ಜಂಬೂ ದ್ವೀಪದ ಭರತ ಕ್ಷೇತ್ರದ ಶಂಭಾ ದೇಶದ ಬಂಖಾಪುರದರಸಂ ದೇವಸೇನ ಮಹಾರಾಜಂಗಂ ಜಯಾವತಿ ಮಹಾದೇವಿಗಂ ಪ್ರಭಂಜನವೆಂಬ ಕುಮಾರನಾಗಿ ಪುಟ್ಟಿದಳು | ಸಂಪತ್ತಿಯುಮೆಂಬಾಕೆ ಸತ್ತಾ ನೋಂಪಿಯ ಫಲದಿಂದೀ ಜಂಬೂ ದ್ವೀಪದ ಭರತ ಕ್ಷೇತ್ರದ ಪೂರ್ವ್ವ ದೇಶದ ಪುಂಣ್ಯ ಪುರಮನಾಳ್ವ ಪೂರ್ಣ್ನಭದ್ರನೆಂಬರಸಾದಳು | ಕೋದಂಡನ ತಂಗಿಯಪ್ಪ ಸಂಶಪೆ ಸತ್ತು ಮುಂ ಪೇಳ್ದ ಪೂರ್ನ್ನಭದ್ರನ ತಂಗಿ ಪೃಥ್ವಿಯೆಂಬಾಕೆಯಾಗಿ ಪುಟ್ಟಿಯಾ ಪೃಥುವಿಯಂ ಪ್ರಭಂಜನಂಗೆ ಕುಡೆಯಾಯಿರ್ವ್ವರ್ಗ್ಗದಿಂ ಶ್ರೀಯೆಂಬಾಕೆ ಸತ್ತಾಕೆ ನೋಂಪಿಯ ಫಲದಿಂ ಸರಳನೆಂಬ ಕುಮಾರನಾಗಿ ಪುಟ್ಟಿದವಳಂತವರೆಲ್ಲಂ ಸುಖ ಸಂಕಥಾ ವಿನೋದದಿಂದಿರುತಿರಲೊಂದು ದಿನಂ | ಪ್ರಭಂಜನನ ಸ್ತ್ರೀ ಪೃಥುವಿಯೆಂಬಾಕೆ ಕುಮಂತ್ರಿಯೆಂಬ ಮಂತ್ರಿಯಂ ಕಂಡು ಆಸಕ್ತೆಯಾಗಿಯಾತನೊಳು ಮಱೆವಾಳುತ್ತಂ ಪೂರ್ವ್ವಂ ವೈರಾನುಭಾವದಿಂ ಪತಿ ಪುತ್ರ ವಿನಾಶನೋಪಾಯಮಂ ಮಾಡೆಯಾ ಸ್ತಿತಿಯನಱಿದು ಪ್ರಭಂಜನ ಮಹಾರಾಜನುಂ ಸರಳನುಂ ವೈರಾಗ್ಯದಿಂ ಶ್ರೀವರ್ದ್ಧನ ಮುನೀಶ್ವರನ ಸಮಕ್ಷದೊಳು ದೀಕ್ಷೆಯಂ ಕೈಕೊಂಡರು | ಅದಂ ಕೇಳ್ದು ಪೂರ್ಣ್ನಭದ್ರ ಮಹಾರಾಜನುಂ ಶ್ರೀ ವರ್ದ್ಧನಮುನೀಶ್ವರನ ಸಮಕ್ಷದೊಳು ದೀಕ್ಷೆಯಂ ಕೈಕೊಂಡರು ಅಂತಾ ಮೂಱು ತಂಡ ಋಷಿಯರುಂ ದ್ವಾದಶವಿಧ ತಪ ಷಡಾವಶ್ಯಕ ಪಂಚಾಪೂರ ದಶ ಧರ್ಮ್ಮ ತ್ರಿಗುಪ್ತಿ ಪಂಚ ಸಮಿತಿಯು ಮೊದಲಾದ ಗುಣಂಗಳಲ್ಲಿ ನಿರತರಾಗಿ ತಪೋ ಮಹಾತ್ಮ್ಯದಿಂ ಪುಟ್ಟಿದ ಸರ್ವ್ವಬುದ್ಧಿಯೊಡನೆ ಕೂಡಿ ಕೋಷ್ಟ ಬೀಜಾದಿ ಬುದ್ಧಿಗೊಡೆಯರಾಗಿ ಶ್ರುತ ಸಾಗರಪಾರಣೆ ಪಕ್ಷೋಪವಾಸ ಮಾಸೋಪವಾಸ ಚಾಂದ್ರಾಯಣ ಆಚಾಮ್ಲವರ್ದ್ಧನಾದಿ ತಪೋ ನಿರತರಾಗಿ ಬಹುದೇಶಂಗಳಂ ವಿಹಾರಿಸುತ್ತಂ ಕಡೆಯೊಳು ಪುರತಾಲಾಖ್ಯಮೆಂಬ ಪರ್ವ್ವತಮನೆಯ್ದಿ ಯಾಪರ್ವ್ವತದಮೇಲೆ ಕಾಯೋತ್ಸರ್ಗದಲ್ಲಿರ್ದ್ದು ರತ್ನತ್ರಂಯಗಳನಾರಾಧಿಸಿ ಧರ್ಮ್ಮ ಧ್ಯಾನದಿಂ ಮುಡುಪಿಯಚ್ಯುತ ಕಲ್ಪದೊಳು ಪುಟ್ಟಿಪ್ಪತ್ತೆರಡು ಸಾಗರೋಪಮ ಕಾಲ ಪರಿಯಂತಂ ದಿವ್ಯ ಸುಖಮನನುಭವಿಸಿ ಕ್ರಮದಿಂ ಮೋಕ್ಷ ಸುಖಮನನುಭವಿಸಿದರಿಂತೂ

|| ೦ ||