ಸುರರಾಜವಂದ್ಯಪಾದಂ
ಉರಗೇಂದ್ರರ ಸ್ತುತಿಗುಣಗಣಾನ್ವಿತ ಮಹಿಮಂ
ವರವೀರವರ್ದ್ಧಮಾನಂ
ಗೆರಗಿ ಶ್ರುತಸ್ಕಂಧನೋಂಪಿಯಂ ವಿರಚಿಸುವೆಂ ||

ವಚನ || ಅದೆಂತೆಂದೊಡೆ ಈ ಜಂಬೂದ್ವೀಪದ ಭರತಕ್ಷೇತ್ರದ ಆರ್ಯಾ ಖಂಡದೊಳು ಮಗಧೆಯೆಂಬುದು ನಾಡು ಅನೇಕ ವಿರಾಜಿತ ಪದ್ಮಷಂಡಮಂಡಿತ ಶಾಲಿವನಂಗಳಿಂ ಸುತ್ತಲ್ಪಟ್ಟಿ ರಾಜಗೃಹಮೆಂಬುದು ಪೊಳಲದನಾಳ್ವಂ | ಸುರರಾಜೋಂನತ ವೈಭವಂ ಪರಹಿತಂ | ವೈರೀಭಕಂಠೀರವನೆಂಬ | ಅಧಿಗಮ ಸಮ್ಯಗ್ದೃಷ್ಟಿ | ಶ್ರೇಣಿಕ ಮಹಾಮಂಡಲೇಶ್ವರನಾತರಸಿ | ಸಕಲಗುಣಮಣಿ ಭೂಷಣ ಭೂಷಿತಾಂಗೆ

|| ಕಂದ || ಸುರರಾಜನರಸಿ ಶಚಿಯೊಳು
ಸರಿಗಧಿಕಂ ಚಂದ್ರನರಸಿ ರೋಹಿಣಿಗಧಿಕಂ
ಸ್ಮರನರಸಿ ರತಿಯೊಳಗ್ಗಳ
ವರವೈಭವ ರೂಪ ಪಡೆದ ಚೇಳಿನಿಯೆಂಬಳು ||

ವ || ಅನ್ತವರೀರ್ವ್ವರುಂ ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ | ಸಕಲ ಪುರಜನ ಆಪ್ತಜನಂಬೆರಸು | ಮಂತ್ರಿ ಮಂಡಳಿಕ | ರಾಜಾಧಿರಾಜ ತಳವಾರ ದಂಡನಾಯಕ ರಾಜಶ್ರೇಷ್ಠಿ ಪುರೋಹಿತ | ವಿದ್ವಜ್ಜನ ಸಮನ್ವಿತನಾಗಿ | ಯೊಡ್ಡೋಲಗಂಗೊಟ್ಟಿರಲಾ ಸಮಯದೊಳು | ಅಕಾಲಜನಿತ ಪುಷ್ಪಫಲಂಗಳಂ ಪಿಡಿ ದೋರ್ವ್ವ | ರುಷಿ ನೀವೇದಕಂ ಬಂದು | ಆಸ್ಥಾನಮಂಟಪ ಮಧ್ಯಸ್ಥಿತ ಮರಕತ ಪದ್ಮರಾಗ ಮಣಿಗಣ ಕಿರಣ ಪಟಳ ಪ್ರಚ್ಛಾದಿತ | ಆಸ್ಥಾನಮಂಟಪ ಮಧ್ಯಸ್ಥಿತ ಸಿಂಹಾಸನದೊಳು | ಚೇಳಿನಿ ಮಹಾದೇವಿ ಸಹಿತ | ವೊಡ್ಡೋಲಗಂಗೊಟ್ಟಿರ್ದ್ದ | ಶ್ರೇಣಿಕಮಹಾರಾಜಂಗೆ | ತಾಂತಂದ ಪುಷ್ಪಫಲಂಗಳನಿತ್ತು | ಸಾಷ್ಟಾಂಗವೆರಗಿ | ಪೊಡವಟ್ಟು | ಕರಕಮಲಂಗಳಂ ಮುಗಿದು | ದೇವ ಬಿಂನಪ ನಂಮ ಪುರದ ಪಶ್ಚಿಮ ದಿಗ್ಭಾಗದೊಳಿಪ್ಪ | ವಿಪುಳಾಚಳಕೆ ಅಂತಿಮ ತೀರ್ತ್ಥೇಶ್ವರನಪ್ಪ | ಶ್ರೀ ವೀರವರ್ದ್ಧಮಾನಸ್ವಾಮಿಯ ಸಮವಸರಣಂ ಬಂದುದೆನೆ ಕೇಳ್ದು | ಸಿಂಹಾಸನದಿಂದೆರ್ದ್ದಾ ದೆಸೆಗೇಳಡಿಯಂ ನಡೆದು | ಸಾಷ್ಟಾಂಗವೆರಗಿ ಪೊಡಮಟ್ಟಾನಂದ ಭೇರಿಯಂ ಪೊಯ್ಸಿ | ಋಷಿನಿವೇದಕಂಗಂಗಚಿತ್ತಮನಿತ್ತು | ಪರಿಜನ ಪುರಜನ ಆಪ್ತಜನಂ ಬೆರಸಿ | ಚೇಳಿನಿಮಹಾದೇವಿಯುಂ | ತಾನುಂ ವಿಜಯಗಜೇಂದ್ರಮನೇರಿ | ಆನಂದದಿಂ ಬಂದು ದೂರಾಂತರದಿಂ | ವಾಹನಮನಿಳಿದು | ಪಾದಮಾರ್ಗ್ಗದಿಂ | ಯಾತ್ರಾ ಮಾತ್ರಾ ಫಲಂ ಪದಂ | ಯೆಂಬೀನ್ಯಾಯದಿಂ ಪೋಗಿ | ಸಮವಸರಣಮಂ ಪೊಕ್ಕು | ಗಂಧಕುಟಿಯಂ ತ್ರಿಪ್ರದಕ್ಷಿಣಂಗೆಯ್ದು | ಸಾಷ್ಟಾಂಗ ವೆರಗಿ | ಪೊಡವಟ್ಟು | ಫಲವರ್ಚ್ಚನೆಗಳಿಂದರ್ಚ್ಚಿಸಿ ||

ಕಂ || ಜಯ ಮದನಮದ ವಿಹಾರಣ
ಜಯಜಯ ಮೋಹಾಂಧಕಾರ ತಿಮಿರದ್ಯುಮಣೀ
ಜಯಕಾಲಾನಲ ವಾರಿಜ
ಜಯಜಯ ದೇವೇಂದ್ರ ಮಕುಟತಾಟಿತ ಚರಣ ||

|| ವ || ಯೆಂದನೇಕಸ್ತುತಿಶತಂಗಳಿಂ ಸ್ತುತಿಯಿಸಿ | ತದನಂತರಂ | ಗೌತಮಗಣ ಧರರ್ಗ್ಗೆ ಪೊಡವಟ್ಟು ಯಥಾಕ್ರಮದಿಂದಿಂತೆಂದಳೆಲೇ ಸ್ವಾಮಿಯೆನಗೆ ಅನಂತಸುಖಕ್ಕೆ ಅನಂತಜ್ಞಾನಸಂಪತ್ತಿಗೆ ಕಾರಣಮಪ್ಪುದಕ್ಕೆ | ಕಾರಣಮಪ್ಪುದಾವುದಾನುಮೊಂದು ನೋಂಪಿಯಂ ಬೆಸಸಿಮೆನೆ | ಗೌತಮಗಣಧರಸ್ವಾಮಿಗಳಿಂತೆಂದು ಬೆಸಸಿದರು | ನೀನೀ ಶ್ರುತಸ್ಕಂಧದ ನೋಂಪಿಯಂ ನೋಂಪುದೆನಲಾ ನೋಂಪಿಯ ವಿಧಾನಮಂ ಬೆಸಸಿಮೆನಲವರಿಂತೆಂದು ಬೆಸಸಿದರು | ಕಾರ್ತ್ತೀಕಮಾಸದ ಶುಕ್ಲಪಕ್ಷದ ಚವುತಿಯೊಳು | ಶುಚಿರ್ಬ್ಭೂತರಾಗಿ | ಚೈತ್ಯಾಲಯಕ್ಕೆ ಪೋಗಿ | ಈರ್ಯ್ಯಾಪಥ ಶುದ್ಧಿಗೆಯ್ಡು | ಜಿನೇಶ್ವರನಂ ಸ್ತುತಿಸಿ | ತದನಂತರಂ | ಚತುರ್ವ್ವಿಂಶತಿ ತೀರ್ಥಂಕರ ಪ್ರತುಮೆಗೆ ಯಥಾಶಕ್ತಿಯಿಂದಭಿಷೇಕ ಪೂಜೆಯಂ ಮಾಡಿ | ಶ್ರುತಗುರು ಪೂಜೆಯಂ ಮಾಡಿ | ತದನಂತರಂ | ಯೇಕಭುಕ್ತಮಂ ಕೈಕೊಂಡು | ಮರುದಿವಸ ಪಂಚಮಿಯುಪವಾಸಮಂ ಕೈಕೊಂಬುದಾದೊಡೇಕಭುಕ್ತಮಂ ಮಾಳ್ಪುದು | ರಾತ್ರಿಯಲ್ಲಿ ಚೈತ್ಯಾಲಯಕ್ಕೆ ಪೋಗಿ | ಚತುರ್ವ್ವಿಂಶತಿ ತೀರ್ತ್ಥಕರ ಪ್ರತುಮೆಗೆ | ಪಂಚಾಮೃತದಭಿಷೇಕಮಂ ಮಾಡಿ ತದನಂತರಂ | ಚತುರ್ವ್ವಿಂಶತಿ ತೀರ್ತ್ಥೇಶ್ವರ ಪ್ರತುಮೆಗೆ ಪ್ರತ್ಯೇಕ ಪ್ರತ್ಯೇಕ ಪೂಜೆಯಂ ಮಾಡುತ್ತಲಾ ಸ್ತೋತ್ರಮನುಳ್ಳ ಸಮಂತಭದ್ರಮಂ ಪ್ರತ್ಯೇಕ ಪೇಳುತ್ತ ಇಪ್ಪತ್ತು ನಾಲ್ಕು ತೀರ್ತ್ಥಕರ ಪೂಜೆಯಂ | ಸವಿಸ್ತರದಿಂ ರಾತ್ರಿಯೊಳು ಶ್ರುತಸ್ಕಂಧದ ವ್ಯಾಖ್ಯಾನಮನಕ್ಕೆ | ಶ್ರುತಾವತಾರದ ಕಥೆಯಕ್ಕೆ | ಶ್ರೀಪಂಚಮಿಯ ಕಥೆಯಕ್ಕೆ ವೋದಿಸಿಕೇಳುತ್ತ ಸದ್ಧರ್ಮ್ಮ ಕಥಾವಿನೋದದಿಂ ಕಾಲಮಂ ಕಳೆವುತ್ತ | ಮರುದಿವಸ ಷಷ್ಠಿಯ ದಿವಸದಲ್ಲಿ ಪಾರಣೆಯ ಕಾಲದೊಳು | ಅರ್ಹದಾದಿಗಳಂ ಪೂಜಿಸಿ | ಶಕ್ತಿಗೆ ತಕ್ಕನಿತು ಋಷಿಸಮುದಾಯಮಂ ನಿಲಿಸಿ | ಆಹಾರಮಂ ಕೊಟ್ಟು | ನಿರಂತರಾಯಾನಂತರಂ | ಪಾರಣೆಯಂ ಮಾಳ್ಪುದು | ಇದು ನೋಂಪಿಯ ಕ್ರಮಮಮಿಂತು | ಪದಿನಾಲ್ಕುವರ್ಷಂಬರಂ | ನೋಂತುಜ್ಜವಣೆಯಂ ಮಾಳ್ಪ ಕ್ರಮಮೆಂತೆಂದೊಡೆ || ಶ್ರುತದೇವಿಯ ಪ್ರತುಮೆಯನಾದೊಡಂ | ಶ್ರುತಾವತಾರದ ಪುಸ್ತುಕವನಾದೊಡಂ | ಶ್ರತಸ್ಕಂಧವುನಾದೊಡಂ ಮಾಡಿಸಿ | ಬರಸಿ ಕೊಡುವುದು | ಅಯ್ದುತಂಡ ತಪೋಧನರ್ಗ್ಗೆ | ಪುಸ್ತಕ ಠವಣೆಕೋಲು ಕವಳಿಗೆ | ಪಾವಡೆ ಸಮನ್ವಿತವಾಗೆ ಕೊಡುವುದು | ಅಯಿದು ತಂಡ ತಪಸ್ವಿಗಳ್ಗೆ | ಆಹಾರದಾನಮಂ ಮಾಳ್ಪುದು | ಯಿದು ವುಜ್ಜವಣೆಯ ಕ್ರಮ | ಮೀನೊಂಪಿಯ ನೋಂತ ಭವದೊಳು | ನೋಂತವರೆಲ್ಲಂ | ಭವಭವಾಂತರದೊಳು | ರಾಜಾಧಿರಾಜ ಮಂಡಲೀಕ ಮಹಾಮಂಡಲೀಕ ಪದವಿಯಂ ಪಡೆದು | ಪುತ್ರ ಕಲತ್ರ ಗೋತ್ರಮಿತ್ರ | ಧನ ಕನಕ ಸಮೃದ್ಧಿಯಂ ಪಡೆದು | ಇಷ್ಟವಿಷಯ ಭೋಗೋಪಭೋಗಂಗಳನನುಭವಿಸಿ ಕಡೆಯೊಳು ವೈರಾಗ್ಯಂ ಪುಟ್ಟಿ | ಜಿನದೀಕ್ಷೆಯಂ ಕೈಕೊಂಡು | ತಪಶ್ಚರಣಂಗೆಯ್ದು | ತಪಃಪ್ರಭಾವದಿಂ ಕೋಷ್ಠಬುದ್ಧಿಯುಂ ಬೀಜಬುದ್ಧಿಯುಂ ಪದಾನುಸಾರಬುದ್ಧಿಯುಂ | ಸಂಭಿಂನಶ್ರೋತೃ ಬುದ್ಧಿಯುಂ | ನವಬೋಧಿತ ಬುದ್ಧಿಯುಂ | ಪ್ರತ್ಯೇಕ ಸ್ವಯಂ ಬುದ್ಧಿಯುಂ | ಭಾವಿತಸ್ವಯಂ ಬುದ್ಧಿಯುಂ | ಅಷ್ಟಾಂಗ ಮಹಾನಿಮಿತ್ತ ಸಪ್ತರ್ದ್ಧಿಸಂಪ್ಪಂನರುಮಾಗಿ | ಕವಿ ಗಮಕಿ ವಾದಿ ವಾಗ್ಮಿತ್ವಗುಣಂಗಳೊಳತಿಶಯಂಬೆತ್ತು | ತತ್ಪಾತತ್ವನಿಶ್ಚಯ ವ್ಯವಹಾರ ಮೋಕ್ಷಮಾರ್ಗ್ಗವೇದಿಗಳಾಗಿಕ್ರಮದಿಂ | ಮತಿಶ್ರುತಾವಧಿ ಮನಃಪರ್ಯ್ಯಯ ಕೇವಲಜ್ಞಾನಿಗಳುಮಾಗಿ | ಅನಂತಜ್ಞಾನಾದ್ಯನಂತ ಚತುಷ್ಟಯ ಸ್ವರೂಪಮಪ್ಪ ಮೋಕ್ಷಪದಮೆನೆಯ್ದುವರೆಂದು | ಗಣಧರಸ್ವಾಮಿಗಳು | ಚೇಳಿನಿಮಹಾದೇವಿಗೆ ನೋಂಪಿಯ ಫಳಮಂ ಸವಿಸ್ತರಂ ಪೇಳೆ ಕೇಳ್ದು | ಸಂತುಷ್ಟಚಿತ್ತೆಯಾಗಿ | ಕರಕಮಳಂಗಳಂ ಮುಗಿದು | ಗಣಧರರ್ಗ್ಗಿಂತೆಂದು ಬಿಂನವಿಸಿದಳೀ ನೋಂಪಿಯ ಮುಂನ ನೋಂತ | ಮಹಾಪುರುಷರ ಕಥೆಯಂ ಚಿತ್ತೈಸಿಮೆನೆ | ಗಣಧರರಿಂತೆಂದು ಪೇಳ್ದರು | ಈ ಜಂಬೂದ್ವೀಪದ ಪೂರ್ವ್ವವಿದೇಹದ ಸೀತಾನದಿಯ ಬಡಗಣ ತಡಿಯ | ಪುಷ್ಕಳಾವತಿ ವಿಷಯದ ಪುಂಡರೀಕಿಣಿ ಪುರಮನಾಳ್ವ | ವಿಜಯಂಧರನಾತನರಸಿ | ವಿಶಾಲನೇತ್ರೆಯೆಂಬಳಾ ಪಟ್ಟಣದ ಪುರೋಹಿತಂ ಸೀಮದತ್ತನಾತನಸತಿ | ಲಕ್ಷ್ಮೀಮತಿಯೆಂಬಳವರೀರ್ವ್ವರ್ಗ್ಗೆ ಸೋಮದತ್ತೆಯೆಂಬ ಮಗಳಾಗೆ | ಶಿಶುತ್ವಮಂ ಪತ್ತುವಿಟ್ಟು ಅತಿರೂಪವತಿಯಾಗೆ | ಸುಖದಿಂದಿರಲೊಂದು ದಿವಸಮಾ ಪುರಕ್ಕೆ | ಚಾತುರ್ಮ್ಮಾಸೋಪವಾಸಿಗಳಪ್ಪ | ಸುಗಪ್ತ್ಯಾಚಾರ್ಯ್ಯರೆಂಬ ದಿವ್ಯಜ್ಞಾನಿಗಳುಗಳಪ್ಪವರಾ ಪುರಕೆ ಭಾವಲೆಯಿಂ ಬರೆ | ಪುರೋಹಿತನ ಮಗಳು | ಸೋಮದತ್ತೆ ಕಂಡು ಪೇಸಿಯವರ ಮೇಲುಗುಳ್ದು ಪೇಸಿ ಚರ್ಯ್ಯಾವಿಘ್ನಂ ಮಾಡಿಯಾ ಪಾಪೋದಯ ಫಲದಿಂ | ತತ್ಕ್ಷಣದೊಳೆ ಮೂಕೆಯಾಗಿ ಮತಿಗೆಟ್ಟು ನಾಲಿಗೆ ನಷ್ಟವಾಗಿರ್ದ್ದುದಂ | ತಂದೆತಾಯಿಗಳು ಕಂಡುದುಃಖಿತರಾಗಿ | ಕೆಲವು ದಿವಸದಿಂ ಮೇಲೆ ಪುರಕ್ಕೆ ಯಶೋಧರರೆಂಬ ದಿವ್ಯಜ್ಞಾನಿಗಳು ನಂಮ ಪಟ್ಟದ ವುದ್ಯಾನವನಕ್ಕೆ ಬಿಜಯಂಗೆಯ್ದರೆಂದು | ವನಪಾಳಕನಿಂದರಿದು | ಬಿಜಯಂಧರನುಮರಿದು | ಹರ್ಷಚಿತ್ತನಾಗೆ | ಋಷಿನಿವೇದಕಂಗಗಚಿತ್ತಮನಿತ್ತು | ಅರ್ಚ್ಚನಾದ್ರವ್ಯಂಬೆರಸು | ಸೋಮದತ್ತೆಸಹಿತಂ ಪೋಗಿ | ಭಕ್ತಿಪೂರ್ವ್ವಕಮರ್ಚ್ಚಿಸಿ | ಪೂಜಿಸಿ | ಪೊಡವಟ್ಟು | ಕುಳ್ಳಿರ್ದ್ದು ನಿರ್ಮ್ಮಳಚಿತ್ತದಿಂ | ಧರ್ಮ್ಮಶ್ರವಣಮಂ ಕೇಳ್ದು ತದನಂತರಂ | ಸೋಮದತ್ತಂ ಪೊಡಮಟ್ಟು | ಯೆಲೆಸ್ವಾಮಿ ಯಂನ ಮಗಳಿಗೆ ಬಹ್ವದೊಳೊರ್ಮ್ಮೊದಲೊಳೆ | ಮೂಕೆಯಾಗೆ | ನಾಲಗೆ ನಷ್ಟವಾದುದಾವ | ಪಾಪದ ಫಲಮೆಂದು ಬೆಸಗೊಳೆ | ಮುನೀಶ್ವರರಿಂತೆಂದು ಪೇಳ್ದರೆಲೆ | ಬ್ರಾಹ್ಮಣಾಂಗಿಮೀಪಟ್ಟಣಕ್ಕೆ | ಚಾತುರ್ಮ್ಮಾಸೋಪವಾಸಿಗಳಪ್ಪ ಗುಪ್ತಿಸಾಗರರೆಂಬ ಪರಮಾಜ್ಞಾನಿಗಳು | ಚರ್ಯ್ಯಾಮಾರ್ಗ್ಗದಿಂ ಬರಲವರಂ ಕಂಡು ಪೇಸಿ | ದೂಷಿಸಿಯವರಮೇಲುಗುಳ್ದಡವರ್ಗ್ಗೆ | ಚರ್ಯ್ಯಾವಿಘ್ನಮಾಗೆ ಮಗುಳ್ದಾರಣ್ಯಕ್ಕೆ ಪೋಗಿ ಮುಂನಿನಂತೆ | ಚಾತುರ್ಮ್ಮಾಸ ವುಪವಾಸಮಂ ಕೈಕೊಂಡು ಕೆಲವು ದಿವಸದಿಂದ ಮೇಲೆ ಆಹಾರಶರೀರನಿವೃತ್ತಿಯಿಂದುಪವಾಸಮಂಕೊಂಡು | ಆಯುಷ್ಯಾವಸಾನದೊಳು | ಪೃಥುಕ್ತ್ವ ಯೇಕತ್ವ ವಿತರ್ಕ್ಕವೀಚಾರ ಸೂಕ್ಷ್ಮಕ್ರಿಯಾ ಪ್ರತಿಪಾತಿಕ್ರಿಯಾನಿವೃತ್ತಿಯೆಂಬ ಧ್ಯಾನಂಗಳಂ ಧ್ಯಾನಿಸಿ | ಸಕಲಕರ್ಮ್ಮಂಗಳಂ ಕೆಡಿಸಿ | ಮೋಕ್ಷಕ್ಕೆ ಸಂದರಿತ್ತ ನಿಂನ ಮಗಳಿಗೆ ನಾಲಗೆ ನಷ್ಟವಾಗಿ ಮೂಕೆಯಾಗಿ ಮತಿಗೆಟ್ಟಳೆಂದು ಪೇಳೆ ಕೇಳ್ದು ದೋಷಂ ಪಿಂಗುವಂತೆ ವು ಪಾಯಮಂ ಬೆಸಸಿಮೆನೆ | ಮುನಿವರರಿಂತೆಂದು ಬೆಸಸಿದರು | ಅನಂತಜ್ಞಾನಸಂಪತ್ತಿ ಕಾರಣಮಪ್ಪ | ಶ್ರುತಸ್ಕಂಧದ ನೋಂಪಿಯಂ ನೋಂಪುದೆನಲಾ ನೋಂಪಿಯ ವಿಧಾನಮಂ ಮುನಿಂನತೆ ಸವಿಸ್ತರಂ ಬೆಸಸೆ | ಅರಸನುಂ ಸೋಮದತ್ತನುಂ | ಗುರುಗಳಂ ಬೀಳ್ಕೊಂಡು ಪುರಮನರಮನೆಯಂಪೊಕ್ಕು ಸೋಮದತ್ತಂ ತಂನ ಮಗಳಿಗೆ ಮುನೀಶ್ವರರು ಬೆಸಸಿದಂತೆ | ಹದಿನಾಲ್ಕು ವರ್ಷಂಬರಂ ನೋಂತು | ವುಜ್ಜವಣೆಯಂ ಮಾಡಿ | ಮುನ್ನಿನಂತೆ | ವಾಕ್ಸೌಭಗ್ಯಮುಂ | ಸಕಲಕಲಾಸಂಪನ್ನೆಯುಮಾಗೆ | ಅತಿಶಯಗುಣಂಗಳ್ನೆಗಳೆ | ಬಾಲಬ್ರಹ್ಮಚಾರಿಯಾಗಿ | ಕೆಲವು ದಿವಸದಿಂ ಮೇಲೆ ದೀಕ್ಷೆಯಂ ಕೈಕೊಂಡು | ಸಕಲಗುಣಂಗಳೊಳ್ನೆಗಳ್ದು | ಅಂತ್ಯಕಾಲದೊಳು ಸಮಾಧಿವಿಧಿಯಿಂ ಮುಡುಪಿ | ಅಚ್ಯುತಕಲ್ಪ ದೊಲಚ್ಯುತೇಂದ್ರನಾಗಿಪ್ಪತ್ತೆರಡು | ಸಾಗರೋಪಮದಾಯುಮನೊಡೆಯನಾಗಿರ್ದ್ದು | ಸ್ವರ್ಗ್ಗದ ದಿವ್ಯಸುಖಮನನುಭವಿಸಿ ಬಂದೀ | ಜಂಬೂದ್ವೀಪದ ಅಪರವಿದೇಹದ ಸೀತೋ ದಾನದಿಯ | ಬಡಗಣತಡಿಯ ವಪ್ರಕಾವತೀವಿಷಯಂ ರತ್ನಸಂಚಯಪುರಮನಾಳ್ವ ರತ್ನ ವಾಹನಂಗಂ | ಪೃಥ್ವೀಮತಿ ಮಹಾದೇವಿಗಂ | ಶ್ರೀಕಂಠನೆಂಬ ಕುಮಾರನಾಗಿ ಪುಟ್ಟಿ | ಶೈಶವಮಂ ಪತ್ತುವಿಟ್ಟು ಯವ್ವನಪ್ರಾಪ್ತಿಯಾಗಿ | ಸಕಲ ಶಾಸ್ತ್ರದೊಳು ಪ್ರವೀಣನಾಗಿರೆ | ಕುಮಾರಸಹಿತಂ | ರತ್ನವಾಹನಂ | ಪಲಕಾಲಂ ರಾಜ್ಯಸುಖಮನನುಭವಿಸಿ | ರತ್ನವಾಹನಂ ತಂನ ಮಗನಪ್ಪ | ಶ್ರೀಕಂಠಂಗೆ ರಾಜ್ಯ ಪಟ್ಟಮಂಕಟ್ಟಿ ಯಮಧರರೆಂಬ ಮುನಿಗಳ ಪಕ್ಕದೊಳ್ಜಿನದೀಕ್ಷೆಯಂ ಕೈಕೊಂಡುಗ್ರೋಗ್ರ ತಪದೊಳ್ನೆಗಳ್ದು ಕರ್ಮಕ್ಷಯಂಗೆಯ್ದನಿತ್ತಲು | ಶ್ರೀಕಂಠ ತಂನರಸಿ ರತ್ನಾವಳಿಸಹಿತ | ಪಲಕಾಲ ರಾಜ್ಯಸುಖಮಂ ಭೋಗೋಪ ಭೋಗಂಗಳನನುಭವಿಸಿ | ತಂನ ಮಗ ರತ್ನಶೇಖರಂಗೆ ರಾಜ್ಯಮಂ ಕೊಟ್ಟು | ಗಣಧರ ಮುನಿಗಳ ಪಕ್ಕದೆ | ಜಿನದೀಕ್ಷೆಯಂ ಕೈಕೊಂಡು ಗುರುಗಳ ಪಕ್ಕದೆ ಪಲಕಾಲ ಶಾಸ್ತ್ರಮಂ ಕಲಿತು | ಏಕಹಾರಿಯಾಗಿ | ಗ್ರಾಮ ನಗರ ಖೇಡ ಖರ್ವ್ವಡ ಮಂಡಂಬ ಪತ್ತನ ದ್ರೋಣಾಮುಖಂಗಳಂ ವಿಹರಿಸುತ್ತ ವುಗ್ರೋಗ್ರ ತಪಶ್ಚರಣದೊಳ್ನೆಗಳುತ್ತ ದರ್ಶನ ವಿಶುದ್ಧಿ ವಿನಯಸಂಪತ್ತಿ ಮೊದಲಾದ | ಷೋಡಶ ಭಾವನೆಗಳಂ ಭಾವಿಸುತ್ತಂ | ಮೂಲೋತ್ತರೋತ್ತರ ಗುಣಂಗಳ್ನೆಗಳುತ್ತ | ಸಕಲಭವ್ಯ ಜನಂಗಳಂ ಪ್ರತಿಬೋಧಿಸುತ್ತ | ಯಿಂದ್ರಿಯನಿಗ್ರಹ ಸಂಯಮಮಂ ಪ್ರತಿಪಾಲಿಸುತ್ತ | ದ್ವಾದಶ ತಪದೋಳ್ನಿರತಿಚಾರಂ ಬೆತ್ತು ತಪಃಪ್ರಭಾವದಿಂ ಕೋಷ್ಠ ಬುದ್ಧಿಯಂ | ಸಂಭಿನ್ನ ಶ್ರೋತೃಬುದ್ಧಿಯುಂ | ನವಬೋಧಿಬುದ್ಧಿಯಂ | ಪ್ರತ್ಯೇಕ ಸ್ವಯಂ ಬುದ್ಧಿಯುಂ | ಅಷ್ಟಾಂಗನಿಮಿತ್ತ ಸಪ್ತರ್ದ್ಧಿ ಸಂಪನ್ನರುಮಾಗೆ | ಕವಿ ಗಮಕಿ ವಾದಿವಾಗ್ಮಿತ್ವದೊಳತಿಶಯಂ ಬೆತ್ತು | ತತ್ವಾತತ್ವ ನಿಶ್ವಯ ವ್ಯವಹಾರ ಮೋಕ್ಷಮಾರ್ಗ್ಗವೇದಿಗಳುಮಾಗೆ | ಕ್ರಮದಿಂ ಮತಿ ಶ್ರುತಾವಧಿ ಮನಃಪರ್ಯ್ಯಯ ಕೇವಳಜ್ಞಾನಿಗಳುಮಾಗೆ | ಗವುತಮ ಗಣಧರಸ್ವಾಮಿಗಳು ಚೇಳಿನಿ ಮಹಾದೇವಿಗೆ ಸವಿಸ್ತರಂ ಪೇಳೆ ಕೇಳ್ದು | ಸಂತುಷ್ಟಚಿತ್ತೆಯಾಗಿ | ಗಣಧರರು ನಿರೂಪಿಸಿದಂದದಿಂ | ನೋಂಪಿಯಂ ಕೈಯ್ಕೊಂಡು | ಗಣಧರರಂ ಬೋಳ್ಕೊಂಡು | ರಾಜಗೃಹಮನೆಯ್ದಿ | ಪುರಮನರಮನೆಯಂ ಪೊಕ್ಕು | ಗಣಧರರ್ಬ್ಬೆಸಸಿದಂತೆ | ಚೇಳಿನಿಮಹಾದೇವಿ | ಪದಿನಾರು ವರ್ಷಂಬರಂ | ನೋತುಜ್ಜವಣೆಯುಂ ಮಾಡಿ ಪಲಕಾಲಂ ರಾಜ್ಯಸುಖಮನನುಭವಿಸಿ | ಕಡೆಯೊಳು ದೀಕ್ಷೆಯಂ ಕೈಕೊಂಡು | ತಪಶ್ಚರಣಂಗೆಯ್ದು | ಸಮಾಧಿಯಿಂ ಮುಡುಪಿ | ಅಚ್ಯುತಕಲ್ಪದೊಳಚ್ಯುತೇಂದ್ರನಾಗಿರ್ದ್ದಂ | ಯೀ ನೋಂಪಿಯನೊಂದು ಭವದೊಳು | ನೋಂತವರನಂತಸುಖಮನೆಯ್ದುವರು | ಯೀ ನೋಂಪಿಯಂ ನೋಂತವರ್ಗ್ಗಂ | ನೋನಿಸಿದವರ್ಗ್ಗಂ | ಕ್ರಮದಿಂದೊಡಂಬಟ್ಟವರ್ಗ್ಗಂ | ಬರೆದವರ್ಗ್ಗಂ | ಸುಖಪರಂಪರಾ ಪ್ರಾಪ್ತಿಯಪ್ಪುದು ಜಯಮಂಗಳ ಮಹಾ || ಶ್ರೀ ಶ್ರೀ ಶ್ರೀ