ಶ್ರೀ ಸುರನರೋರಗಾದಿಸ
ಭಾಸುರಮಣಿ ಮಕುಟ ರಶ್ಮಿ ರಂಜಿತ ಚರಣೋ
ದ್ಘಾಸಿ ದ್ವಾಸಪ್ತತಿ ಜಿನಾ
ವಾಸರ ಪತಿಗಳ್ಗೆ ಭಕ್ತಿಯಿಂ ವಂದಿಸುವೆಂ ||

          ಭಾವನೆಗಳನೀರೆಂಟಂ
ಭಾವಿಸಿ ಭವದೂರರಾದ ತೀರ್ತ್ಥೇಶ್ವರನಂ
ಭಾವದೊಳೆನಿಸಿದ ಷೋಡತ
ಭಾವನೆಗಳಂನೆಗಳ್ವ ನೋಂಪಿಯೊಂದು ಕಥೆಯಂ ಪೇಳ್ವೆಂ ||

ಅದೆಂತೆಂದೊಡೀ ಜಂಬೂದ್ವೀಪದೊಳಬಿರಾಜಿಪ ಭರತಾರ್ಯ್ಯ ಖಂಡದೊಳ್ಮಗಧಾಖ್ಯಂ | ರಾಜಿಪ ಜನಪದದೊಳು ರಾಜಾಧಿರಾಜ ರಾಜಗೃಹಪುರಂ ಕರಮೆಸಗುಂ |

ಅಂತೆಸೆವ ರಾಜಗೃಹಮಂ
ಕಂತುನಿಭಂ ಶ್ರೇಣಿಕಾಖ್ಯಂ ನೃಪ ಕುಲತಿಲಕಂ
ಸಂತತ ಪಾಲಿಸುತಿರಲುಂ
ಅಂತಿಂತೆನಲರಿದು ಭಾಗ್ಯಮಂ ಶ್ರೇಣಿಕನಾ ||

          ರತಿಯುಂ ಸೀತೆಯುಮಂ ರೇ
ವತಿಯುಂ ರುಗ್ಮಿಣಿಯುಮವರಂ ಗುಣಗಳನಿತಂ
ಸತತಂ ತಾಂ ಚೇಳಿನಿ ವಿ
ತತಯಶಃ ಶ್ರೇಣಿಕಂಗೆ ವಲ್ಲಭೆಯಾದಳೂ ||

|| ವ || ಅಂತಾ ಶ್ರೇಣಿಕ ಮಹಾರಾಜಂ ಚೇಳಿನಿ ಮಹಾದೇವಿ ಸಹಿತಮೊಂದು ದಿವಸಂ ವೊಡ್ಡೋಲಗಂಗೊಟ್ಟಿರಲಾ ಪ್ರಸ್ಥಾವದೊಳು ವನಪಾಲಕಂ ಬಂದಿಂತೆಂದನೆಲೆ ಮಹಾರಾಜಾ ತ್ರಿಭುವನ ಜನಮಾಕೀರ್ಣ್ನ ಸಭಾಮಂಡಲಮಂಡಿತ ಶ್ರೀ ವೀರವರ್ದ್ಧಮಾನ ಸ್ವಾಮಿಯ ಸಮವಸರಣಂ ಬಂದು ನಿಂದು ವಿಪುಲಾಚಲಮಸ್ತಕಾಲಂಕೃತಮಾದುದೆನೆ ಸಿಂಹಾಸನದಿಂದೆದ್ದು ಆ ದೆಶೆಗೇಳಡಿಯಂ ನಡೆದು ಬಂದು ಸಾಷ್ಟಾಂಗ ಪ್ರಣತನಾಗಿ ವೊಸಗೆದಂದಂಗಂಗಚಿತ್ತಮನಿತ್ತಾನಂದ ಭೇರಿಯಂ ಪೊಯಿಸಿ ಪರಿಜನ ಪುರಜನಮಂತಃ ಪುರಜನ ಸಹಿತಮಾಗಿ

|| ಕ || ಜಿನಪತಿಯ ನೋಳ್ವೆಂ ಭರದಿಂ
ದನುಮಿಷಪತಿಯೆಂತುಟಂತು ಚೇಳಿನಿ ಸಹಿತಂ
ಜನಪತಿ ವಿಜಯ ಗಜೇಂದ್ರಮ
ನಮನಯದಿಂದೇಱೆ ಲೀಲೆಯಿಂ ಪೊಱಮಟ್ಟಂ ||

ಅಂತು ಪೊಱಮಟ್ಟು ವಿಪುಲಾಚಲದ ಬಹಿರ್ವ್ವನಮನೈದಿ ದೂರಾಂತರದಿಂ ವಾಹನದಿಂದಿಳಿದು ಚೇಳಿನಿ ಸಹಿತಂ ಸಮವಸರಣಮಂ ಪೊಕ್ಕು ಗಂಧಕುಟಿಯಂ ತ್ರಿಃ ಪ್ರದಕ್ಷಿಣಂಗೆಯ್ದು ಸಾಷ್ಟಾಂಗ ಪ್ರಣತನಾಗಿ ತ್ರಿಭುವನ ಸ್ವಾಮಿಯಪ್ಪ ಶ್ರೀ ವ್ಚೀರ ವರ್ದ್ಧಮಾನ ಸ್ವಾಮಿಯಪ್ಪ ತೀರ್ತ್ಥನಾಥನಂ ಅಭಿಮುಖವಾಗಿ ದಿವ್ಯಾರ್ಚ್ಚನೆಗಳಂದರ್ಚ್ಚಿಸಿ ಕರಕಮಲಂಗಳಂ ಮುಗಿದು

|| ಕ || ಜಯವಿಶ್ವಜಗದ್ಬಂಧುವೆ
ಜಯ ಜಯ ತ್ರೈ ಲೋಕ್ಯನಾಥ ಪೂಜಿತ ಚರಣಾ
ಜಯ ವಿಶ್ವಗುಣಾಧಾರ
ಜಯ ಜಯ ಶಿವಕಾಮಿನಿ ಮೋಕ್ಷ ಸುಖ ಕಾರಣ ||

|| ವ || ಯಂದನೇಕೆ ಸ್ತುತಿಶತಸಹ್ರಂಗಳಿಂ ಸ್ತುತಿಯಿಸಿ ಮನುಷ್ಯಕೋಷ್ಠ ದೊಳ್ಕುಲ್ಳಿರ್ದ್ದು ಧರ್ಮ್ಮಶ್ರವಣಾನಂತರದೊಳು ಗೌತಮಾದಿ ಯತಿಸಮುದಾಯಮಂ ವಂದಿಸಿ ಶ್ರೇಣಿಕ ಮಹಾಮಂಡಲೇಶ್ವರಂ ಕರಕಮಲಂಗಳಂ ಮುಗಿದು ಗೌತಮಗಣಧರ ಸ್ವಾಮಿಗಿಂತೆಂದನೆಲೆಸ್ವಾಮಿ ಮೋಕ್ಷಸುಖಕ್ಕೆ ಕಾರಣಮಪ್ಪದಾಉದಾನುಮೊಂದು ನೋಂಪಿಯಂ ಬೆಸಸಿಮೆನಲಾ ಗೌತಮ ಗಣಧರರು ಯಿಂತೆಂದರೆಲೆ ಮಹಾರಾಜಾ ಷೋಡಶ ಭಾವನೆಯ ನೋಂಪಿಯಂ ಮಾಳ್ಪುದೆನಲದಱ ವಿಧಾನಮಂ ನಿರೂಪಿಸಿಮೆಂದು ಬಿಂನಪಂಗೆಯ್ಯೆಲವರಿಂತೆಂದರು ಶ್ರಾವಣ ಬಹುಳ ಶುದ್ಧ ಪಾಡ್ಯಂ ಮೊದಲ್ಗೊಂಡು ಪದಿನಾಱು ದಿನ ಪರ್ಯಂತರಂ ಭಾದ್ರಪದ ಶುದ್ಧ ಪಾಡ್ಯಂ ಮೊದಲ್ಗೊಂಡು ಪದಿನಾಱು ದಿನಪರ್ಯಂತಂ ಪ್ರತಿದಿನಂ ಪಂಚ ಚೂರ್ನ್ನಂಗಳಿಂ ಮಂಡಲಮನುದ್ಧರಿಸಿಸುವ ಕ್ರಮಂ ಪ್ರಥಮ ಕರ್ಣಿಕೆಯಂ ಮಾಡಿ ಅದಱೆಂ ಪೊಱಗೆ ಅಷ್ಟದಲಕಮಲಮಂ ಬರದು ಅದಱೆಂ ಪೊಱಗೆ ಷೋಡಷದಳಮಂ ಬರದು ಕರ್ನ್ನಿಕೆಯೊಳು ಭೂತವರ್ತ್ತಮಾನ ಭವಿಷ್ಯ ತೀರ್ತ್ಥಕರರಂ ಬರದು ಕರ್ಣ್ನಿಕೆಯವಳಯದೊಳು | ಜ್ ಹ್ರೀಂ ದರ್ಶನ ವಿರುದ್ಯಾದಿ ಷೋಡಶ ಕಾರಣೇ ಭ್ಯೊನಮಃ | ಯೆಂದು ಬರದು ಅದಱ ಹೊಱಗಳ ಅಷ್ಟದಳಂಗಳಲ್ಲಿ ದಶಧರ್ಮ್ಮ ತ್ರಿಗುಪ್ತಿಯೇಕಾದಶ ನಿಲಯಂಗಳಂ ಬರದು ಅದಱ ಹೊಱಗಳ ಷೋಡಶದಳಂಗಳಲ್ಲಿ ದರ್ಶನ ವಿಶುದ್ಧಾದಿ ಷೋಡಶವಾಕ್ಯಂಗಳಂ ಬರದು ಜಲದಿಂದಾದಿಯಷ್ಟ ವಿಧಾರ್ಚ್ಚನೆಯಂ ಮಾಡಿ ದರ್ಶನ ವಿಶುದ್ಯಾದಿಗಳಂ ಭಾವಿಸೂದು ನಿಖಿಲಜಗದಾಹ್ಲಾದಿಯುಂ ಮಹೇಂದ್ರ ಶತವಂದ್ಯಮುಂ ಜೀವಾದಿಪದಾರ್ತ್ಥಂಗಳ ಪ್ರತಿಕ್ಷಣದಿ ಭಾವೋಭಯ ಪರ್ಯ್ಯಂಗಳನಱಿದು ಪ್ರತಿಪಾಲಿಸುವ ದಿವ್ಯಭಾಷಾದಿಯ ಸಂಪತ್ತಿಯಕ್ಕುಮೆಂದು ನಿರೂಪಿಸಿದುದುಂ ಕಾಲಾಪೇಕ್ಷೆಯಿಂದಿದಂ ಪೂರ್ವ್ವಾಚಾರ್ಯ್ಯರುಗಳು ಷೋಡಷೋಪವಾಸಕ್ಕೆ ಅಶಕ್ತ ಜನಾನುಗ್ರಹದಿಂ ಧಾರಣೆ ಪಾರಣೆಗಳಂ ನಿರೂಪಿಸಿದರಾಗಿ ದ್ವಾತ್ರಿಂಶದ್ದಿನ ಪರ್ಯ್ಯಂತಮಾರಾಧಿಸಿ ಭಾವಿಸೂದು | ಯಿಂತೀ ವಿಧಾನಮಂ ಶ್ರೇಣಿಕ ಮಹಾ ಮಂಡಲೇಶ್ವರಂ ಚೇಳಿನಿ ಮಹಾ ದೇವಿಯುಂ ಕೈಕೊಂಡು ಮುಂನಂ ನೋಂತ ಮಹಾನುಭಾವರ ಕಥೆಯಂ ಪೇಳಿಮೆನಲವರುಮಿಂತೆಂದು ನಿರೂಪಿಸಿದರೂ || ಅದೆಂತೆನೆ

|| ಕ || ಸೋಮ ಪ್ರಭನೀ ಪುರಮಂ
ಕಾಮಾಂಕಜಿನಮತಾಭಿ ಚಂದ್ರಂ ಮುಂನಂ
ಪ್ರೇಮದಿ ಪಾಲಿಸಿದಂ ಸುರ
ಕಾಮಿಮಿಗೆಣೆಯಾದ ವಿಜಯ ಸುಂದರಿಯಾರ್ಣ್ನಂ ||

|| ವ || ಅಂತವರಿರ್ವ್ವರುಮೀ ರಾಜಗೃಹ ಪುರಮನಾಳುತ್ತಮಿರಲವರ ಪುರೋಹಿತಂ ಮಹಾಶರ್ಮ್ಮನಾತನ ಪೆಂಡತಿ ಜಯೆಯೆಂಬಳವರಿರ್ವ್ವರ್ಗ್ಗಂ ಪುಟ್ಟಿದ ಮಗಳು

|| ಕ || ಕತ್ತಲೆಯ ಮೊತ್ತ ಮೊದಲುಂ
ಪತ್ತಿದ ಮಸಿಯಂದಮೆಯ್ಯ ಬೆಳಗಿಂದಂ
ರಕ್ತಾಕ್ಷಿಗಾರ್ದಭಶ್ವರೆ
ಕುತ್ತದ ಮಡು ಪಾಪಿರೂಪೆ ಕೊಳಕಿ ಕುರುಪೆಯೂ ||

          ಪಱಿದ ತಲೆ ಮುಱಿದ ನಾಸಿಕ
ಬಿಱುಗಾಲುಮುದುರಿದ ಕೇಶಂ ಕುಗ್ಗಿದ ಕೊರಳುಂ
ಹೊಱ ಹಲ್ಲು ನೀಳ್ದ ತುಟಿಯುಂ
ಮುಱೆದರ್ದ್ದಿದ ಬೆಂನು ಪೊಟ್ಟಿಯುರಮುಂ ಶಿರಮುಂ ||

|| ವ || ಮತ್ತಂ ಡೊಂಕಿದ ಬೆರಳ್ಗಳುಂ ಹ್ರಸ್ವಮಾದ ಕೈ ಕಾಲ್ಗಳುಂ ಪಿರಿದುಂ ನಿಡಿದಾದಟ್ಟಿಯುಂ ಜೋಲ್ದ ಬಸುಱುಂ ನಿಲ್ಲುನಿತಂಬಸ್ತನಮುಂ ಕುಬ್ಜಕರ್ನ್ನಮುಂ ತನಗೆ ರೂಪಾಗಿ ಮತ್ತಂ ಮದಾಂಧೆಯುಂ ಸರ್ವ್ವಜನ ದ್ವೇಷಿಣಿಯುಂ ನಿಃಕೃಪೆಯುಂ ವಿವೇಕ ವಿಕಲೆಯುಂ ರಾಗಾಂಧ ಮಾನಸಿಯುಂ ದುರ್ಬ್ಬಗೆಯುಂ ಸ್ವೈರಾಚಾರಣೆಯುಂ ಸಂಪೂರ್ಣ್ನ ಯವ್ವನೆಯುಮಾಗಿರೆ ಬಂದು ಜನಂಗಳೆಲ್ಲಂ ಕಂಡನ್ನರ್ತ್ಥಮಪ್ಪ ಚಂಡಮಾರಿಯೆಂಬ ಪೆಸರಿಂ ಕರೆಯೆ ಕಾಮೋದ್ರೇಕದಿಂ ಪುರುಷರಂ ಕಂಡು ಮಲಮಲಂ ಮಱುಗಿ ಸಾವಿರ ಸಂಖೆಯ ಧನವನಿತ್ತಡಂ ತಂನಾರುಂ ದುರ್ಗ್ಗಂಧಕ್ಕಂ ಜಿಗುಪ್ಸೆಗಮೊಲ್ಲದಿರೆ ಮದನಾಗ್ನಿಯಿಂ ಬೇವುತ್ತಮಿಪ್ಪ ಮಗಳಂ ಕಂಡು ಮಹಾಶರ್ಮ್ಮನುಂ ಮಿಜೆಯೆಯುಂ ಸಂಕ್ಲೇಷ ಚಿತ್ತರಾಗಿ ಮಗಳಂ ಕರದು ಮಯಿದಡಹಿ | ಎಲೆ ಮಗಳೆ ನೀ ಪೂರ್ವ್ವ ಜಲ್ಮದಲ್ಲಿ ಹಿರಿದು ಬಹಳವಹಂತಾ ಪಾಪಕರ್ಮ್ಮಂಗಳಂ ಮಾಡಿದೆ ಅದಱಿನಿಂತಪ್ಪ ಪಾಪ ರೂಪಾಯ್ತು ಯಿಂತಪ್ಪ ಪಾಪಮಂ ಪರಿಹರಪ ಶ್ರೀ ಜಿನಧರ್ಮ್ಮಮಂ ಪೊರ್ದ್ದುಮೆನಲದಱ ತೆಱನೆಂತೆನೆ

|| ಕ || ಜೀವದಯಾ ಮೂಲಂ ತಾಂ
ಪಾವನ ಸತ್ಪಾತ್ರ ದಾನ ಜೈ ನಯ ಜನ ಪರಂ
ತೀವಿದ ವ್ರತಗುಣ ಶೀಲೊ
ಪಾಯಂ ಸದ್ಭರ್ಮ್ಮವದಱ ಪರಿಯಂ ಕೇಳಾ ||

|| ವ || ಅದಱಿಂದೆಂನಯ ಧನಮಂ ಕೊಂಡು ಜಿನಗೃಹ ನಿರ್ಮ್ಮಾಪಣಮಂ ಜಿನ ಬಿಂಬ ಪ್ರತಿಷ್ಠಾ ಮಹಾಭಿಷೇಕ ಶಾಂತಿಕ ಚಾತುರ್ವ್ವರ್ಣ್ನಕ್ಕಾಹಾರ ವಸ್ತ್ರತಾಂಬೂಲ ಸುವರ್ಣ್ನಾದಿ ದಾನಂಗಳಂ ಮಾಡಿ ಕೊಲೆ ಹುದಿ ಕಳವು ಮೊದಲಾದ ದೋಷಂಗಳಂ ಬಿಟ್ಟು ಅಷ್ಟಾಹ್ನಿಕಾದಿ ಪೂಜೋಪವಾಸಂಗಳಂ ಮಾಡಿ ನಡಸೂದೆನಲಂತೆ ಗೆಯ್ವೆನೆಂದು ಚಂಡಮಾರಿ ತಂನ ತಂದೆಯೇ ತನಗೆ ಗುರುವಾಗಿ ವ್ರತಪಂಚಕಮಂ ಸ್ವೀಕರಿಸಿ ಪೂಜಾದಾನ ಪರೆಯಾಗಿರಲೊಂದು ದಿವಸಂ ಸ್ತಪಸ್ತೇಜೋವ್ಯಾಪ್ತದಿಗಂತರಾಳರುಂ ದಯಾ ಭಾರ ಪರಿಕಲಿತ ವಿಶುದ್ಧ ವಿಶಿಷ್ಟ ಗಗನ ಚರಣಾಧಿ ಸಂಪಂನರಹ ಯಮಧರರುಂ ಜಯಕೀರ್ತಿಗಳೆಂಬ ಯತಿ ಕುಂಜರರಿರ್ವ್ವರುಂ ಚರ್ಯ್ಯಾಮಾರ್ಗ್ಗದಿಂ ಬರೆ ಮಹಾ ಶರ್ಮ್ಮನೆಂಬ ಪುರೋಹಿತಂ ಕಂಡು ಬಡವ ನಿಧಾನಮಂ ಪಡದಂತೆ ಕುರುಡಂ ಕಣ್ಬಡೆದಂತೆ ಭವ್ಯ ಭವಭಯ ವಿನಾಶಕಮಪ್ಪ ಧಮ್ಮೋಪದೇಶಂಗೆಯ್ವ ಯತಿ ನಿಕರಮಂ ಕಂಡಂತೆ ನಲಿದು ಮುನಿ ಮುಖ್ಯರಂ ನಿಲಿಸಿ ನವವಿಧ ಪುಂಣ್ಯ ಸಪ್ತಗುಣ ಸಮೇತನಾಗಿ ದಿವ್ಯಾಹಾರಮನಿತ್ತು ನಿರಂತರಾಯಾನಂತರಂ ಕರಕಮಲಂಗಳಂ ಮುಗಿದು ಚಂಡಮಾರಿಯ ಮುನಿಪತಿಯ ಪಾದೋಪಾಂತ್ಯದೊಳು ಭಕ್ತ್ಯವನತೆಯಂ ಮಾಡಿ | ಎಲೆ ಸ್ವಾಮಿ ನೀಂ ಪರಮ ಕಾರುಣಿಕನಾದ ಕಾರಣ

|| ಕ || ಕ್ಷಮೆಯುಂ ದಮೆಯುಂ ದಯೆಯುಂ
ಯಮಮುಂ ನಿಂನಲ್ಲಿ ನಿಂದವದಱಿಂದೆಂಮಯ
ಶ್ರಮೆಭಯಂ ಭವಭವದ ದುರ್ನ್ನ
ಯಮಂ ನಿಂತೋಲಗಿಸಲ್ಕೆ ವೇಳ್ಕುಮಮೋಘಂ ||

ಯೆಂದು ಬಿಂನಪಂಗೆಯ್ದು ಎಂನ ಮಗಳು ಚಂಡಮಾರಿ ಆವ ಪಾಪದ ಫಲದಿಂದಿಂತಪ್ಪ ನಿಂದ್ಯರೂಪೆಯಾದಳೆನೆ ಯಮಧರರಿಂತೆಂದರೀ ಜಂಬೂದ್ವೀಪದ ಭರತಕ್ಷೇತ್ರದಾರ್ಯ್ಯಾ ಖಂಡದ ವ್ಯಾಳವತಿ ಎಂಬುದು ನಾಡುಮದಱೊಳು ವಿಶಾಲಮೆಂಬುದು ಪುರಮಾ ಪುರದರಸಂ ಪರಮಸಮ್ಯಗ್ದೃಷ್ಟಿ ಮಹೀಪಾಲನೆಂಬನಾತನ ಪಟ್ಟದರಸಿ ವೇಗವತಿಯೆಂಬಳು ಮಂತವರಿರ್ವ್ವರು ರಾಜ್ಯಂಗೆಯ್ಯುತ್ತಮಿರಲು ಕೆಲವು ದಿವಸಂ ಪೋಗೆ ವೊಂದುದಿನಂ ಸತಿ ನಾಲ್ಕು ನೀರಂ ಮಿಂದಾ ಪತಿಯಲ್ಲಿಗೆ ಬಂದು ಸೆಜ್ಜೆಮನೆಯೊಳಗೊಲವಿಂ ಸುರತಂ ವಡೆದೊಂದೞ್ಕಱಿಂ | ತನ್ನ ಮಹಾದೇವನಾಜ್ಞೆಯಂ ನೆಱೆ ಪಾಲಿಸಿದಳೂ

|| ಕ || ಅಂತರ್ವ್ವತ್ನಿಮನಮಂ
ಸಂತಸದಿಂ ಧರಿಸಿ ವೇಗವತಿ ಮುದದಿಂ
ಕಂತುವಿನ ಸತಿಯನೇಳಿಪ
ಕಾಂತಾಗ್ರಣಿ ಸುತೆಯ ಪಡದಳುಂನತಮತಿಯಿಂ ||

|| ವ || ಅಂತು ಪೆಣ್ಗೂರು ಪಡೆದು ಪಾಲಿಸುತ್ತಿರಲಾ ಶಿಶು ಶೈಶವವಂತು ಪತ್ತುವಿಟ್ಟು ಬೆಳದಲ್ಲಿರುತ್ತಿರೆ ತಾಯುಂ ತಂದೆಯುಂ ತವೆ ಬೇಱೆಮಕ್ಕಳಿಲ್ಲದುಱೆಂದಿಕೆಗೇ ವಿಶಾಲಯೆಂಬ ಪೆಸರನಿಟ್ಟು ಅತಿಮೋಹದೊಳು ನಡಸುತ್ತಿರಲಾ ವಿಶಾಲೆ ಕುಮಾರಿ ಅಶಿಕ್ಷಿತೆಯಾದುದಱಿಂ ನಿರ್ಲ್ಲಜ್ಞೆಯುಂ ದುವೃತ್ತೆಯುಂ ದುರ್ದ್ದಮೆಯುಂ | ದ್ರಹಂಕಾರಿಯುಂ | ನಿರ್ಭೀತೆಯುಂ | ಹರಿಕೃತ ಸದ್ಗುಣೆಯುಂ | ಕಲಹ ಸ್ವಭಾವೆಯುಂ ಸಜ್ಜನ ವಿದ್ವೇಷಿಣಿಯುಂ | ದುರ್ಜ್ಜನಂಗಳಿಗತಿ ಪ್ರೀತೆಯಮಾಗಿ ಬಿಸಟುಂ ಪರಿದು ಮೊಲೆ ಮೂಡಿ ಪೆರ್ಚ್ಚಿದೊಡಂ | ಉಟ್ಟುದಂ ಬಿಟ್ಟು ಕುಣಿಕುಣಿದು ಕಂಡವರಂ ಬಯ್ದು ಮಾನಮಂ ತಗುಳ್ದು ದುಱುದುಂಬಿಯಾದಡಂ ಮಗಳ ಮೇಲಣ ಮೋಹದ್ಂದರಸಮರಸಿಯುಂ ನಯದಿಂ ಬುದ್ಧಿವೇಳದೆ ಯಿರಲೊಡಂ ವೊಂದು ದಿನಂ ವುಇದ್ಯಾತಪೋಭಿರಾಮಂ ವಿಶಿಷ್ಟಾದಿ ಲೋಚನಂ ಸಮಾಧಿಗುಪ್ತ ಭಟ್ಟಾರಕರ್ಚ್ಚರ್ಯ್ಯಾ ಮಾರ್ಗ್ಗದಿಂ ಬರೆ ಮಹೀಪಾಲ ಮಹಾರಾಜಂ ಕಂಡು

|| ಕಂಡು ಯೆನನಿನಿತು ಕಾಲವೀ ಮುನಿ
ವಿನುತರ್ದ್ದಯೆಂಯಿಂದ ಬಂದುದಿಲ್ಲಿಂದಿರದಿಂ
ವಿನಯ ನಿಧಿ ಬಂದನೆಂದಾ
ಜನಪತಿ ಪುಳಿಕಾಂಬು ರಾಶಿಯೊಳ್ಮುಳುಗಿರ್ದ್ದಂ ||

|| ವ || ಮೂಱು ಸೂಳಂ ಬಲಗೊಂಡು ಮುನಿಪನ ಕಾಮಿತ ಪದವೀದ ಪಾದಯುಗಕ್ಕೆಱಗಿ ನೃಪ ಪ್ರೇಮದಿ ನಿಲಿಸುತ್ತ ಜಿನ ಭವ ಸೀಮೆಯನಿವಂ ನಮಂ ಸುಧಗೆಣೆಯಂ ಅನ್ತು ನಿರಂತರಾಯಮಂ ಮಾಡಿಸಿ ಮಹೀಪಾಲನುಮರಸಿಯುಂ ಮುನಿಪತಿಯ ಬಳಿಗಳುಪಲೆಂದು ಬೆಂನಂ ಬರಲಂತರದ ಕರುಮಾಡದ ಮಱೆಗೊಂಡಿರ್ದ್ದ ವಿಶಾಲೆಕುಮಾರಿಯಾ ಮುನಿ ಮುಖ್ಯರಂ ನಿಷ್ಠುರ ವಚನಂಗಯ್ಯೆ ಅರಸನುಮರಸಿಯುಂ ಕಂಡು ನಡನಡಂ ನಡುಗಿ ತಂಮ ವಸ್ತ್ರದಿಂದೊರಸಿ ಶುದ್ಧ ಜಲದಿಂ ಪ್ರಕ್ಷಾಲಿಸಿ ಪೋಗಿ ನತ ಮಸ್ತಕನಾಗಿ ತಾನುಂ ವೇಗಮತಿಯುಂ ಸಮಾಧಿ ಗುಪ್ತಮುನೀಶ್ವರರಂ ಕ್ಷಮಿಯಿಸಲ್ವೇಡಿ ವಿಶಾಲೆಯಂ ತಂದು ನಮಸ್ಕಾರ ಮಾಡಿಸಿ ರಕ್ಷರಕ್ಷಮಹಾಯೆಂದೆನಿಸಿ

|| ಕ || ಕ್ಷಮೆ ಮೊದಲಾದ ಧರ್ಮ್ಮಂ
ಸಮನಾಧಿಪ ವಂದ್ಯ ನಿಂಮ ರೂಪದಿನಿರ್ದ್ದುದು
ದ್ಯುಮಣಿಕರ ನಿಕರ ಮತ್ತೆ
ಕ್ಷಮಿಸಿ ತಪದಜ್ವಲತೆಯನೆ ಪಾಲಿಪುದೆಂಮಂ ||

          ಅಱೆಯಮೆಂದೆಂಮಂ ಗೆಯ್ವ
ದುಱುದುಂಬಿಯನುಱದೆ ರಕ್ಷಿಸೈ ಗುಣನಿಧಿಯೇ
ಮಱೆಯಲ್ಲ ನಿಂನತಪದುಬ್ಬರ
ತಱಿಗಿಚ್ಚೆಂ ನಿಂದು ತಾನು ಬೇಯದೆ ಲೋಕಂ ||

|| ವ || ಯೆಂದಿವು ಮೊದಲಾದ ಸ್ತುತಿ ಶತ ಸಹಸ್ರಂಗಳಿಂದಂ ಮುನಿ ಪತಿಯ ಕ್ಷಮೆಗೊಳಿಸಲವರಿಂತೆದರೆಲೆ ಮಹಾರಾಜಾ ಯತಿಗಳಿಗೆ ಶತ್ರುಗಳುಂ ಮಿತ್ರರುಂ ಅರಣ್ಯಮುಂ ಪುರಮುಂ ಸ್ತುತಿಗೆಯ್ದವನುಂ ಬೈದವನುಂ ಬಂಡಿದವನು ಪಾದವನೊತ್ತಿದವನುಂ ಸಮಾನಮಾದಕಾರಣ ಮಹಾ ಕ್ಷಮೆಯಂ ಧರಿಸಿದೆನೆನಲವರಿರ್ವ್ವರುಂ ವಿಶಾಲೆಯುಂ ಮೂರ್ದ್ರಮನಸ್ಮರರಾಗಿ ಕೊಂಡಾಡುತ್ತಿರೆ ವಿಶಾಲೆಯಿಂತೆಂದಳೂ

|| ಕ || ಮುನಿಪತಿಯೇನಿಸಿ ತಾತಂ
ಘನ ಪಾತಕಿಯಾದ ತರಳೆಯಂ ರಕ್ಷಿಸಿ ನೀಂ
ಜಿನಮತಮನಱಿಪಿ ನಂನಂ
ಸುನಯ ಸುಧಾ ಜಲಧಿಯಲ್ಲಿ ಮುಳುಗಿಸು ಬೇಗಂ ||

|| ವ || ಯೆಂದು ಕಾರುಣ್ಯಮಂ ಪುಟ್ಟಿಸಿ ಸಮಾಧಿಗುಪ್ತಮುನಿಯ ಪಾದಮಂ ಪ್ರಕ್ಷಾಲಿಸುತ್ತಿರೆ ಕರುಣಾಕರನಪ್ಪ ಮುನಿನಾಯಕನಾ ವಿಶಾಲೆಯಂ ಸಂಸಾರ ಕೂಪದಿಂ ದೆತ್ತುವಂತೆ ನಿಜಕರದಿಂದೆತ್ತಿ ಕೃಪಾ ದೃಷ್ಟಿಯಂ ವ್ಯಾಪಸಿಯಿಂತೆಂದರಲೆ ಪುತ್ರಿ ಮುನಿಜನಗಳನಾವನಾನೊರ್ವ್ವನಂ ಮನಸಿನಂ ವಚನ ಮೇಣು ಅವಜ್ಞೆಯಂ ಮಾಳ್ಪನಾವಂ ಸಂಸಾರ ಸಾಗರದೊಳು ಮೂಡಿ ಮುಳುಗುವದನದಱಿಂ ನೀಮಾಡಿದ ದೋಷಂ ಪಿರಿದಪ್ಪುದದಱಿಂದಾ ದೋಷಮಂ ಕಿಡಿಸಲಾರ್ಪ್ಪ ಷೋಡಶ ಭಾವನೆಗಳಂ ಕ್ರಮದಿಂ ಪೂಜಸಿ ಭಾವಿಸಿ ಪುರುಷತ್ವಮಂ ಪಡೆದು ತೀರ್ತ್ಥಕರ ನಾಮ ಬಂಧಮಂ ಕಟ್ಟಿಕೊಂಡು ಮೋಕ್ಷಲಕ್ಷ್ಮಿಯ ನಾಥನಹಯೆಂದು | ಮತ್ತಮಿಂತೆಂದರುಮೆಂನೆವರಂ ನಿನಗೆ ಪುರುಷತ್ವಮಕ್ಕುಮಂನೆವರಂ ದರ್ಶನ ವಿಶುದ್ಯಾದಿ ಷೋಡಶ ಪದಂಗಳನಾರಾಧಿಸಿ ಶುಭಸಂಗತಿಯಂ ಪಡೆಯೆಂದು ಮತ್ತಮಿಂತೆಂದರು | ತೀರ್ತ್ಥಕರನಾಮ ಬಂಧಮಂ ದರ್ಶನ ಮೋಹ ಕ್ಷಪಣೆಯುಮಂ ತ್ರಿಕರಣದಲ್ಲಿ ಪುಟ್ಟಿದ ಸಮಸ್ತ ಸ್ತ್ರೀಯರುಂ ಭವನವಾಸಿಗರುಂ ವ್ಯಂತರ ಜ್ಯೋತಿಷ್ಕ ಕಲ್ಪವಾಸಿಗರುಂ ತಿರಿಯಂಚರುಂ ನಾರಕರುಂ ಅಪರಿಯಾಪ್ತ ಮನುಷ್ಯರುಂ ಕಟ್ಟುವರಲ್ಲೇಕೆಂದೊಡೆ ಕರ್ಮ್ಮ ಭೂಮಿಜಂ ವಿಶುದ್ಧ ಸಾಕಾರನುಂ ಉಪಯೋಗವಂತನುಂ ಗರ್ಬ್ಭಾಷ್ಟಮ ವರ್ಷ ವಯಸ್ಕನುಂ ದ್ರವ್ಯ ಪುಂವೇಧಿಯುಂ | ಮನುಷ್ಯನೆ ಕೇವಲಿ ಶ್ರುತ ಕೇವಲಿಗಳ ಪಾದಮೂಲದೊಳೆ ಕಟ್ಟುಗುಮಪ್ಪುದಱಿಂದಂ ನೀನೀ ದರ್ಶನ ವಿಶುದ್ಯಾದಿ ಷೋಡಶ ಪದಂಗಳಂನನುಕ್ರಮದಿಂದಾರಾಧಿಸಿ ಸ್ತ್ರೀಯತ್ವಮಂ ಬಿಟ್ಟು ಪುರುಷತ್ವಮಂ ಪಡೆದು ಭಾವ ಬಲದಿಂದಂ ತೀರ್ತ್ಥಕರ ನಾಮ ಬಂಧಮಂ ಕಟ್ಟಿಕೊಂಡು ಸಕಲ ಪದಾರ್ತ್ಥಂಗಳಂ ವ್ಯಾಖ್ಯಾನಿಸಿ ಸಿದ್ಧಿವಧುವಿಂಗೆ ವಲ್ಲಭನಪ್ಪೆಯೆನಲಾ ವಿಧಾನಮಂ ಭಕ್ತಿ ಭರದಿಂ ಕೈಕೊಂಡು ಅಣುಗುಣ ಶಿಕ್ಷಾವ್ರತಂಗಳಂ ಕೈಕೊಂಡು ಬ್ರಹ್ಮಚರ್ಯ್ಯಪೂರ್ವಕಂ ಸ್ವೀಕರಿಸ್ ಈರೆಂಟು ವಾಕ್ಯಂಗಳು ಪೂಜೆಗಳಂ ಮಾಡಿ ಮರ್ಹ್ಮೋಹಮಪ್ಪ ಸಮಸ್ತ ಪಾಪಮಂ ಖಂಡಿಸಿ ಶೇಷ ಪಾಪದಿಂದಂ ಚಂಡಮಾರಿಯಿಂತಪ್ಪ ನಿಂದ್ಯ ರೂಪಳಾದಳೆನೆಪುರೋಹಿತನುಂ ಜಯೆಯುಂ | ಚಂಡಮಾರಿಯುಂ | ಕೇಳೆ ಸಂಸಾರಭೀರುಗಳಾಗಿ ಷೋಡಶ ಕಾರಣಂಗಳಂ ಮಾಡಿ ತಂನಾಯುಷ್ಯಾವಸಾನದೊಳು ಸಮಾಧಿವಿಧಿಯಿಂ ಶರೀರ ಭಾರಮನಳಿಪಿ ಷೋಡಶಲ್ಕಲ್ಪದೊಳು ಅಣಿಮಾದ್ಯಷ್ತಗುಣ ಪುಷ್ಟಮಂ ಮೂಱು ಹಸ್ತಪ್ರಕಿರ್ಣ್ನಕಂಗಳ್ಳ ಯಧಿಪತಿಯುಂ ದ್ವಾವಿಮ್ಶತ್ಯಬ್ದಿ ಜೀವಿತಮಂ ವಿದ್ಯುಪ್ರಭನೆಂಬ ಪೆಸರನುಳ್ಳ ಅಚ್ಯುತೇಂದ್ರನಾಗಿ ಪುಟ್ಟಿಯಿಪ್ಪತ್ತೆರಡು ಸಾಗರೋಪಮ ಕಾಲಂಬರಂ ದಿವ್ಯ ಸುಖಂಗಳನನು ಭವಿಸಿ ನಿಜಾಯುಷ್ಯಾವಸಾನದೊಳು ಅಚ್ಯುತಕಲ್ಪದಿಂ ಬಳ್ಚಿ ಬಂದು | ಯೀ ಜಂಬೂದ್ವೀಪದ ಪೂರ್ವ್ವ ವಿದೇಹದ ಸುಕಚ್ಛ ವಿಷಯದ ಗಾಂಧರ್ವ್ವ ನಗರಮನಾಳ್ವಂ

|| ಕ || ಪೆಸರಿಂ ಸೀಮಂಕರನೆಂ
ವಸುಧೆಯ ಸತ್ಪುರುಷರ್ಗ್ಗೆ ರತ್ನಸೀಮಂಕರನೆಂ
ಪುಸಿಯತ್ತಿ ಪದ್ಮೆ ತಂನಯ
ಸಸಿ ಮುಕಿಯೆನೆ ರಾಜಶೇಖರಂ ಕರಮೆಸದಂ ||

          || ಕ || ದುರದೊಳಗೆ ವೈರಿ ರಾಯರ
ನಿರದಿಕ್ಕಿ ಯಶೋವನಿತೆಗಂ ಜಯಶ್ರೀಗಂ
ಪರಿಯಿಪ್ಪರಾಜ್ಯ ಲಕ್ಷ್ಮಿಗೆ
ಸುರಸತಿಗಂ ವರನಾದಂ ವೃಷಕುಲತಿಲಕಂ ||

|| ವ || ಅಂತು ಪ್ರತಾಪನಯ ಕೋವಿದ ಸೀಮಂಕರ ಮಹಾರಾಜಂಗೆ ರೂಪಿಂ ರತಿಯಂ ಸಿರಿಯಂ ರಮೆಯುಂ | ಗಣದಿಂ ಶಚಿಯುಂ | ಪತಿಭಕ್ತಿಯಿಂದ ಸೀತೆಯಂ ಹೋಲ್ಪಟ್ಟ ಪ್ರಿಯಂವಧೆಯಂಬ ಪಟ್ಟದರಸಿಯಾದಳಂತವರಿವ್ವರ್ಗ್ಗಂ ಅಚ್ಯುತೇಂದ್ರಂ ಶ್ರೀಪಾಲನೆಂಬ ಕುಮಾರನಾಗಿ ಶೈಶವಮಂ ಪತ್ತುವಿಟ್ಟು ಜೈನೋಪಾಧ್ಯಯರ ಪಕ್ಕದೊಳು ಸಕಲ ವಿದ್ಯಾಪರಿಣತನಾಗಿ ಪಿತೃದತ್ತ ರಾಜ್ಯಸುಖಮಂ ಚಿರಕಾಲಮನುಭವಿಸಿ ವೊಂದು ದಿನಂ ತಮ್ನ ಪಟ್ಟಣದ ಸಮೀಪದ ಪ್ರಮದವನಮೆಂಬುದ್ಯಾನಕ್ಕೆ ವಿಜಯರೆಂಬ ತೀರ್ತ್ಥನಾಥನ ಸಮವಸರಣಂ ಬಿಜಯಂಗೆಯ್ದುದಂ ವನಪಾಲಕಂ ಅಕಾಲದೊಳಾದ ಫಲಪುಷ್ಪಂಗಳಂ ತಂದಿತ್ತು ದೇವಾ ನಿಂಮ ಪುಂಣ್ಯಪ್ರಭಾವದಿಂ ನಂಮ ಪ್ರಮದವನಕ್ಕೆ ವಿಜಯತೀರ್ತ್ಥಕರ ಸಮವಸರಣಂ ಬಿಜಯಂಗೆಯ್ದುದೆನೆ ಶ್ರೀಪಾಲ ಮಹಾರಾಜಂ ನಿಜಸಿಂಹಾಸನದಿಂದೆದ್ದು ಆ ದೆಸೆಗಳೇಡಿಯ ನಡದು ಸಾಷ್ಟಾಂಗಪ್ರಣುತನಾಗಿ ವೊಸಗೆದಂದಗಂಗ ಚಿತ್ತಮನಿತ್ತಾನಂದ ಭೇರಿಯಂ ಪೊಯಿಸಿ ಪರಿಜನನ್ ಪುರಜನಸಹಿತ ಪಾದಮಾರ್ಗ್ಗದಿಂ ಪೋಗಿ ಸಮವಸರಣಂ ಪೊಕ್ಕು ಗಂಧಕುಟಿಯಂ ತ್ರಿಃಪ್ರದಕ್ಷಿಣಂಗೆಯ್ದು ಸರ್ವಜ್ಞರಿಗೆ ಸಾಷ್ಟಾಂಗ ಪ್ರಣುತನಾಗಿ ಕರಕಮಲಂಗಳಂ ಮುಗಿದು ಯಿದಿರೊಳು ನಿಂದು

|| ಕ || ಜಯ ಘಾತಿಕರ್ಮ್ಮದೂರನೆ
ಜಯ ಕೇವಲಬೋಧ ಬೋಧಿತದಖಿಲ ಪದಾರ್ಥ
ಜಯಮದನ ಮದವಿಭಂಜನ
ಜಯ ಜಯ ದೇವೇಂದ್ರ ವೃಂದ ವಂದಿತ ಚರಣಾ ||

|| ವ || ಯೆಂದನೇಕ ಸ್ತುತಿಶತ ಸಹಸ್ರಂಗಳಿಂ ಸ್ತುತಿಯಿಸಿ ಗಭಧರಾದಿ ಮಹಾಮುನಿಗಳ್ಗೆ ಗುರುಪರಿವಿಡಿಯಂ ಬಂಧಿಸಿ ಮನುಷ್ಯ ಕೋಷ್ಠದೊಳ್ಕುಳ್ಳಿರ್ದು ನಿರ್ಮ್ಮಲ ಚಿತ್ತದಿಂ ಧರ್ಮ್ಮ ಶ್ರವಣಾನಂತರಂ ದರ್ಶನ ವಿಶುದ್ಯಾದ ಷೋಡಶ ಭಾವನೆಗಳಂ ಸಂಮ್ಯಕ್ತ ಪೂರ್ವ್ವಕಂ ಭಾವ್ಸಿಇ ತೀರ್ತ್ಥಕರ ನಾಮಬಂಧಮಂ ಕಟ್ಟಿಕೊಂಡು ಪರಮೇಶ್ವರನಂ ಬೀಳ್ಕೊಂಡು ಸಮವಸರಣಮಂ ಪೊಱಮಟ್ಟು

|| ಕ || ಜಿನಪತಿಯ ಗುಣಗಣಂಗಳನ
ನುನಯದಿಂ ನೆನೌತ್ತಿರ್ದ್ದು ಕ್ರಮದೋದಯದಿಂ
ದನುಮೀಶಪತಿ ಪೂಜಿತನಾ
ಜನವಿನುತ ತೀರ್ತ್ಥೇಶನಾಮದಿಂ ದಿಟ್ಟಿಸಿದಂ ||

          ಭುವನತ್ರಯದೆಱೆಯರುಗಳ
ನವನತಿಯಂ ಮಾಳ್ಪ ಕತೆಯ ನಾಮದಿ ನರಪಂ
ಅವನಿಯೊಲಗುಳ್ಳ ಭವ್ಯರ
ಭವ ಭಯವುಂ ತೀರ್ಚ್ಚಿಪೊಂದು ಬಗೆಯಂ ಬಗೆದಂ ||

|| ವ || ಅಂತು ಸಕಲ ಜೀವಂಗಳನುದ್ಧರಿಪ ಬುದ್ಧಿಯಂ ಬಗೆಗೆ ತಂದು ಗಜೇಂದ್ರಮನೇಱಿ ನಿಜಸೇವಾ ಪರಿವೃತನಾಗಿ ಪುರಮಂ ಪೊಗುವಾಗಳೂ

|| ಕ || ತ್ರಿದಶೇಂದ್ರನೀತನೆಂಬಡೆ
ತ್ರಿದಶಮೆಗೆ ಸಲ್ಲಂ ಶ್ರೀಪಾಲಂ ನೃಪನೀತಂ
ಬುಧಜನ ನುತನುಮಾತೀತ
ಮುದಮೊದವಿದ ಕೋಟಿ ರಾಜನಿಕರಕ್ಕೊಡೆಯಂ ||

|| ವ || ಅನ್ತುಪಮಾತೀತ ವಿಭವದಿಂದಂ ಪುರಮನರಮನೆಯುಂ ಪೊಕ್ಕು ಶುಭದಿನ ಮುಹೂರ್ತ್ತದೊಳು ಸೇನಾಪತಿ ದಂಡನಾಯಕ ಮಂಡಲಿಕ ಸಾಮಂತರುಗಳ ಸಮಕ್ಷದಲ್ಲಿ ಲೋಕಪಾಲನೆಂಬ ಪಿರಿಯ ಮಗಂಗೆ ಪಟ್ಟಾಭಿಷೇಕ ಪುರಸ್ಪರಮಾಗಿ ತಂನ ಮಕುಟಮಂ ಮಗನ ಮಸ್ತಕದೊಳೊಕ್ಕಿ ಸಂಸಾರ ಭೀರುಗಳಾದರಸುಗಳಿರ್ಚ್ಛಾಸಿರ ಬೆರಸು ಧರ್ಮ್ಮ ಸುರರೆಂಬ ಮುನಿಮಖ್ಯರ ಪಾದಾಂತಮಂ ಪೊರ್ದ್ದಿ ಚತುರ್ವ್ವಿಶಂತಿ ಭೇದ ಭಿಂನಂಗಳಪ್ಪ ಚೇತನಾಚೇತನ ಪರಿಗ್ರಹಂಗಳಂ ಬಿಟ್ಟು ಜಾತರೂಪಧರನಾಗಿ ಸೈಯಮ ದ್ಬಯಮಂ ಪರಿಪಾಲಿಸಿ ತೃತೀಯಮಪ್ಪ ಅವಧಿಜ್ಞಾನಮಂ ಪಡೆದು ಬುಧ್ಯಾದಿ ಸಪ್ತರುದ್ಧಿ ಸಂಪಂನನಾಗಿ ಪಂಚ ಮಹಾವ್ರತ ಪಂಚ ಸಮಿತಿ ತ್ರಿಗುಪ್ತಿಗಳೆಂಬ ತ್ರಯೋದಶ ಚಾರಿತ್ರಭಾವನೆಗಳಿಂದಂ ಚಾರಣತ್ವಮಂ ಪಡೆದು ಚಿರಕಾಲಂ ಬರಂ ವಿವಿಧ ತಪದೊಳ್ನೆಱೆದು ತಂನ ಜೀವಿತಾಂತ್ಯದೊಳು ಪ್ರಾಯೋಪಗಮನ ವಿಧಿಯಿಂದಂ ಶರೀರ ಭಾರಮನಿಳಿಪಿ

|| ಕ || ಶ್ರೀಪಾಲ ಮುನಿಪನನುಪಮ
ಶ್ರೀಪಾಲಿತ ಸ್ವರ್ಗ್ಗದಗ್ರಮಂ ಸುಖನಿಧಿಯಂ
ಶ್ರೀ ಪರಿವೃತ ನಿರ್ವ್ವಾಣ
ಶ್ರೀಕಾಂತ ಭಾವಿ ಜಿನಪನೆಯ್ದಿಯೊಲವಿಂ ||

|| ವ || ಅನ್ತು ಸರ್ವ್ವಾರ್ತ್ಥ ಸಿದ್ದ್ಗಿಯೆಂಬ ವಿಮಾನದೊಳೊಂದು ಹಸ್ತ ಪ್ರಮಾಣಮಪ್ಪ ಶುಚಿತರ ದಿವ್ಯ ದೇಹನುಂ ಶುಕ್ಲಲೇಶ್ಯ ದಯ ಸಮೇತನಂ ನಿಜತೇಜೋವಧಿಗಳಿಂದಂ ವ್ಯಾಪಿಸಲ್ಪಟ್ಟ ಮಹಾತಮಪ್ರಭೆಯನುಳ್ಳಮಂ ನಾನಾ ಕ್ಷೇತ್ರಮಂ ಕಿಳ್ತೆತ್ತುವ ಸಾಮರ್ತ್ಥ್ಯಮನುಳ್ಳನುಂ ಆ ಕ್ಷೇತ್ರಮಂ ಪೂರೈಸುವ ವಿಕ್ರಿಯಾ ಶಕ್ತಿಯನುಳ್ಳನುಂ ಅಗಣ್ಯ ಪುಂಣ್ಯ ಪ್ರಭಾವನುಂ ಅಚಿಂತ್ಯ ಸುಖಸ್ವರೂಪನುಂ ಮೂವತ್ತಮೂಱು ಸಾಗರೋಪಮಾಯುಷ್ಯನುಮಾಗಿ ಪುಟ್ಟಿ

|| ಕ || ದಿವಿಜರೊದಗೂಡಿ ತತ್ವಮ
ನವಿರಳ ಪರ್ಯ್ಯಾಯ ದ್ರವ್ಯಗುಣಂ ಸ್ತಿತಿಯಂ
ಸುವಿಧಿತಮೆನಲಱಿವುತ್ತಂ
ತವೆಯದ ಸುಖಜಲಧಿ ಮಗ್ನನಾದಂ ದಿವಿಜಂ ||

|| ವ || ಅಂತು ಸುಖದ ತಿಂಥಿಣಿಯೊಳು ತಂಣನೆ ತಣಿದು ಸ್ವರ್ಗದಾಯುಷ್ಯ ಪರಿಪೂರ್ಣಮಾಗಲಮಱುದಿಂಗಳುಳಿದುದೆಂಬಂದು ಸರ್ವ್ವಾರ್ತ್ಥ ಸಿದ್ಧಿಯಿಂದಮಾ ದೇವಂ ಭೂಲೋಕಕ್ಕವತರಿಪಲೀ ಜಂಬೂದ್ವೀಪದ ಪೂರ್ವ್ವ ವಿದೇಹದ ಕಚ್ಚಕಾವಿಷಯದ ಚಕ್ರಪುರಮನಾಳ್ವರಸಂ ಮಹಾಸೇನನೆಂಬಂ

|| ಕ || ಮದದಿಂದುಕ್ಕಿದ ರಿಪುಗಳ
ನದಟಿಂದಂ ಮುಱಿದುಮವರ ರಾಜ್ಯಶ್ರೀಯಂ
ಪದನತ ಭೂಪರ್ಗ್ಗಿತ್ತಂ
ಮದನಾಂತಕ ಜಿನಪದ ಭಕ್ತ ಮಹಾಸೇನಂ ||

|| ವ || ಅಂತಪ್ಪ ಮಹಾಸೇನ ರಾಜಂಗಗ್ರವಲ್ಲಭೆ ಲಕ್ಷಣ ಮಹಾದೇವಿಯಂತವರಿರ್ವ್ವರುಂ ಸುಖಮನನುಭಸುತ್ತಿರಲಾ ಮಹಾದೇನ ಮಹಾರಾಜನ ರಾಜಾಂಗಣದೊಳು ದೇವೇಂದ್ರನಾಜ್ಞೆಯಿಂ ಧನದಂ ಷ್ನ್ಮಾಸ ಪರಿಯಂತಂ ಪ್ರತಿದಿನಂ ತ್ರಿಸಂಜೆಯೊಳಂ ಮೂಱುವರೆ ಕೋಟಿ ರತ್ನ ಸುವರ್ಣ್ನ ವೃಷ್ಟಿಯಂ ಕಱೆಯಲೊಂದು ದಿನಮಾ ಲಕ್ಷಣದೇವಿ ಚತುರ್ತ್ಥ ಸ್ನಾನಂ ಗೆಯ್ದು ಶ್ರೀ ಹ್ರೀಧೃತಿ ಕೀರ್ತ್ತಿ ಬುದ್ಧಿ ಲಕ್ಷ್ಮಿಯರ್ಮ್ಮೊದಲಾದ ದೇವಿಯರುಗಳಿಂದ ಪೂಜಿತೆಯಾಗಿ ಸೆಜ್ಜೆವನೆಯೊಳಗೆ ದಿವ್ಯಮಪ್ಪ ಪರಿಯಂಕದ ಹಂಸತೂಲತಲದಲ್ಲಿ ಮಹಾಸೇನನೆಂಬ ನಿಜವಲ್ಲಭನೊಡನೆ ಸುಖನಿದ್ರೆಯಿಂದಿರ್ದ್ದು ಬೆಳಗಪ್ಪ ಜಾವದೊಳು ದಿಷಾಂ ನಿದ್ರಾಮುದ್ರಿತ ಲೋಚನೆಯಾಗಿ ಗಜೇಂದ್ರ ಮೊದಲಾದ ಷೋಡಶ ಸ್ವಪ್ನಂಗಳಂ ಕಂಡು ಪ್ರಭಾತಿಕ ಮಂಗಳಗೀತದಿಂದೆಚ್ಚೆತ್ತು ದೇವಸ್ತ್ರೀಯರಿಂದಲಂ ಕೃತೆಯಾಗಿ ವೊಡ್ಡೋಲಗಂಗೋಟ್ಟಿರ್ದ್ದ ಮಹಾಸೇನ ಮಹಾರಾಜನಲ್ಲಿಗೆಯ್ತಂದು ಸಿಂಹಾಸನದೊಳ್ಕುಳ್ಳಿರ್ದು ಕರಕಮಲಂಗಳಂ ಮುಗಿದು ದೇವಾ ಬಿಂನಪಮಿಂತೆಂದಳೂ

ಗಜಮಂ ವೃಷಭನುಮಂ ಮೃಗ
ರಾಜನ ಸಿರಿಯ ದಾಮಯುಗಮಂ ಸಸಿಯಂ ಸೊಗ
ದಜ ರವಿಯಂ ಮನಂ ಮಿಗೆ
ಗಜರಾಜ ಕುಂಚಮನಗ್ನಿಯಂ ಪಣಿಗ್ರಹಮಂ ||

          ನಿರುಪಮ ಮಣಿರಾಸಿಯುಮಂ
ಸುರಗೇಹಮನತುಳ ಜಲಧಿ ಸಿಂಹಾಸನಮಮ್
ಸರಸಿಜ ಮುಖಿ ಶ್ರೀ ಲಕ್ಷಣೆ
ಪರಿವಿಡಿಯಂ ಕಂಡೆನೆಂದು ವಲ್ಲಭಂಗೆಂದಳೂ ||

|| ವ || ಅನ್ತು ತಾಂ ಕಂಡ ಸ್ವಪ್ನಂಗಳ ಫಲಂಗಳಂ ಬೆಸಗೊಳ ಮಹಾಸೇನ ಮಹೀಪತಿಯಿವೞ ಫಲಗಳನನು ಕ್ರಮದಿಂ ಪೇಳೆ ಯೆಲೆ ದೇವಿ ನಿಂನ ಗರ್ಭ್ಭದೊಳು ತ್ರಿಭುವನ ಸ್ವಾಮಿಯಪ್ಪ ತೀರ್ತ್ಥಕರ ಪರಮದೇವನುದಯಿಸಿದಪನೆನಲು ಆ ನುಡಿಯಂ ಕೇಳಿದಾಕ್ಷಣದೊಳೆ ಪುತ್ರನಂ ಪಡೆದೆನೆಂಬ ಸಮ್ತಸದಿಂದ್ಸಂ ಪುಳಕಾಂಬು ಪರಿಕಲಿತ ಗಾತ್ರೆಯ್ಯ್ಮಾಗಿರ್ಪ್ಪಂನೆಗಂ ಸೌಧಮ್ಮೇಂದ್ರ ಚತುರ್ನ್ನಿಕಾಯಾಮರರ್ವ್ವೆರಸಿ ಬಂದು ಗರ್ಭಾವತರಣಮೆಂಬ ಪ್ರಥಮ ಕಲ್ಯಾಣಮನೊಡರ್ಚ್ಚಿ ದೇವಸ್ತ್ರೀಯರನೆ ಪರಿಚಾರಕಿಯರಂ ಮಾಡಿಸಿ ನಿಜಲೋಕವೆಯ್ದಿದನಿತ್ತಲಾ ದಿವಸಮುಂ ಮೂಡಣ ದಿಕ್ಕುಂ ಸೂರ್ಯ್ಯನಂ ಪಡೆದಂತೆ ಸಮಸ್ತ ಭುವನ ವಂದಿತನಪ್ಪ ಸುತರತ್ನಮಂ ಪಡೆದಳಾ ಸಮಯದೊಳೂ

|| ವೃ || ಸಂಖಂ ಭೇರಿ ಮೃದಂಗಾದಿ ರಾಜ ನಿನದಂ ಘಂಟಾ ನಿಕಾಯಸ್ವರಂ
ಸಂಖ್ಯಾತೀತ ಚತುರ್ನ್ನಿಕಾಯ ಸುರರುಂ ಸರ್ವ್ವಜ್ಞ ಸಂಭೂತಿಯಂ
ಶಂಖ್ಯಾದ್ಯಂಕಿತ ಲೋಕವೆಲ್ಲದಱಿಯಲ್
ಉರ್ದ್ಘೊಷಣಂಗೆಯ್ದೊಡಂ…… || (ತ್ರುಟಿತ)

|| ವ || ಅಂತು ಭವನ ವ್ಯಂತರ ಜ್ಯೋತಿರ್ವ್ವಿಮಾನಂಗಳೊಳನು ಕ್ರಮದಿಂ ಶಂಖಾದಿಧ್ವ ನಿಗಳೊರ್ಮ್ಮೊದಲೆ ಯಾಗೆ ಸಿಂಹಾಸನ ನಡುಗಿ ಅವನತ ಮಸ್ತಕರಾಗಿ ಸೌಧರ್ಮ್ಮಾದಿ ದೇವನಿವಹಂ ಚಕ್ರಪುರನರಮನೆಯ್ದೆ ಬಂದು ಶಚಿ ದೇವಿಯಿಂದಂ ತೀರ್ತ್ಥಕರೆನಿಸಿದ ಶಿಶುವ ನೈರಾವತ ಗಜಸ್ಕಂಧಾರೂಢನಂ ಮಾಡಿ ಮೇರುಗಿರಿಗೊಯ್ದು ಕ್ಷೀರ ಸಮುದ್ರದ ಜಲಂಗಳಿಂದಭಿಷೇಕಂಗಯ್ದು ಸರ್ವ್ವಾಭರಣಂಗಳಿಂದಲಂಕರಿಸಿ

|| ಕ || ಕ್ಷಮೆ ಮೊದಲಾದೀ ಪತ್ತು
ನಮಗೀ ಭೂವಿನುತನಿಂದಲಕ್ಕುಂ ಧರ್ಮ್ಮಂ
ಕುಮತ ಭ್ರಾಂತಿ ವಿನಾಶಂ
ಸಮನಸ್ತುತ ಮುಕ್ತಿಕಂನೆ ವೊಲಿದಳ್ನಿಜದಿಂ ||

|| ವ || ಯೆಂದು ಸುತ್ರಾಮನಿಂ ಪೇಳ್ಪಟ್ಟ ಸರ್ವ್ವದೇವೇಂದ್ರರೆಲ್ಲರಾನತ ಮಸ್ತಕರಾಗಿ ಯೀ ಸ್ವಾಮಿ ಸಕಲ ಜೀವಂಗಳಂ ಸಂಸಾರಂ ಸಮುದ್ರದತ್ತಣಿಂದುದ್ದರಿನಪನಪ್ಪುದಱಿಂ ಜೀನಂಧರ ತೀರ್ತ್ಥಕರನೆಂದು ಪೆಸರನಿಟ್ಟು ಪರಮೋತ್ಸವಂ ಬೆರಸಿ ಚಕ್ರಪುರಕ್ಕೆ ತಂದು ಸಿಂಹಾಸನ ಮನೇಱಿರಿಸಿ ಆನಂದ ನೃತ್ಯಮನಾಡಿ ದೇವ ಬಾಲಕರನೀತನ ಸಹಚಾರಿಗಳಂ ಮಾಡಿ ಸ್ವರ್ಗ್ಗ ಲೋಕಕ್ಕೆ ಪೋದರಿಂತೀ ಪ್ರಕಾರದಿಂ ಪಂಚಕಲ್ಯಾಣನಾಥನೆನೆ ಶ್ರೇಣಿಕ ಮಹಾಮಂಡಲೇಶ್ವರಂ ಚೇಳಿನಿ ಮಹಾದೇವಿಯುಂ ಕೇಳಿ ಸಂತುಷ್ಟ ಚಿತ್ತರಾಗಿ ಷೋಡಶಕಾರಣಂಗಳ ಪ್ರಸಂನೆಯ್ದು ನಿಂದ್ಯಳಪ್ಪ ಚಂಡಮಾರಿ ಈ ಷೋಡಶ ಭಾವನೆಯ ನೋಂಪಿಯಿಂದಿಂತಪ್ಪ ತೀರ್ತ್ಥಕರ ಪದವಿಯಂ ಪಡದಳೆಂದು ಸಮಸ್ತ ಲೋಕಕ್ಕಱಿಪಿ ಮತ್ತಮಿಂತೆಂದರೂ

|| ಕ || ಶ್ರೀ ಶ್ರೀ ಪಾಲಮುನಿಪತುನಳ
ಶ್ರೀಪಾಲಿತ ದರ್ಶನಾದಿಗಳನೀರೆಂಟಂ
ಸೋಪಾನಂಗಳ ಮುಕ್ತಿಗೆ
ಪಾಪ ಪ್ರದ್ವಂಶನಂಗಳಂ ಭಾವಿಸಿದಂ ||

          ನರಪತಿ ಸುತೆ ವಿಶಾಲೆ ಪಾಪದ
ಪರಿಕರದಿಂ ಚಂಡಮಾರಿ ಮುನಿಪತಿಯೊಲವಿಂ
ದುರತರ ಕಲ್ಪಾದಿ ಸಂ
ಪರಮ ಶ್ರೀಪಾಲನತುಳ ಮುನಿಕುಲತಿಲಕಂ ||

          ಸರ್ವ್ವಾರ್ತ್ಥ ಸಿದ್ಧಿನಾಥಂ
ಉರ್ವ್ವಿಯೊಳಂ ತೀರ್ತ್ಥನಾಥ ಜೀವಂಧರನೆಂ
ಸರ್ವ್ವಜ್ಞನೀತನೀ ವಿಧ
ನಿರ್ವ್ವಾಣಕ್ಕೊಡೆಯನತುಳ ಭಾವನೆಯಿಂದಂ ||

|| ವ || ಅಂತು ಷೋಡಶ ಭಾವನೆಗಳ ಪೆರ್ಮ್ಮೆಯಿಂ ಬಹು ವಿಧಮಾಗಿ ಕೊಂಡಾಡಿ ನೋಂಪಿಯಂ ಕೈಕೊಂಡು ಸರ್ವ್ವಜ್ಞನಂ ಗೌತಮ ಸ್ವಾಮಿಗಳ್ಗೆ ವಂದಿಸಿ ಬೀಳ್ಕೊಂಡು ವಿಜಯ ಗಜೇಂದ್ರಮನೇಱಿ ಪುರಮನರಮನೆಯುಂ ಪೊಕ್ಕು ಸುಖದಿನಿರ್ದ್ದು ಶ್ರೇಣಿಕ ಮಹಾ ಮಂಡಲೇಶ್ವರಂ ಚೇಳಿನಿ ಮಹಾದೇವಿಯುಂ ಶ್ರೀ ವೀರವರ್ದ್ಧಮಾನಸ್ವಾಮಿಯ ಪಾದೋಪಾಂತದೊಳು ಷೋಡಶ ಭಾವನೆಗಳೊಳು ತನಗೆ ಯೋಗ್ಯಂಗಳಪ್ಪ ಕೆಲವು ಭಾವನೆಗಳಂ ಭಾವಿಸಿ ತೀರ್ತ್ಥಕರ ನಾಮಮಂ ಕಟ್ಟಿಕೊಂಡು ಚಿರಕಾಲಂ ರಾಜ್ಯಂಗೆಯ್ಯುತ್ತಿರ್ದ್ದನೀ ಷೋಡಶ ಭಾವನೆಗಳನೆರಡೂವರೆ ದ್ವೀಪದೊಳಗುಳ್ಳ ಮನುಷ್ಯರೆ ಸಮ್ಯಗ್ದೃಷ್ಟಿಗಳೆ ಪುಂವೇದಿಗಳೆ ವಿಶುದ್ಧ ಲೇಶ್ಯರೆ | ಸಾಕಾರೋಪಯೋಗಿಗಳೆ ಅಸಮಯತಾಗಿ ಚತುರ್ಗ್ಗುಣ ಸ್ಥಾನವರ್ತ್ಥಿಗಳೆ ನಾಕ್ಕುಂ ಸಮ್ಯಕ್ತ್ವ ಸಂಪನರೆ | ಕೇವಲಿ ಶ್ರುತಕೇವಲಿಗಳ ಪಾದೋಪಾಂತ್ಯದೊಳೆ ಷೋಡಶ ಭಾವನೆಗಳಂ ಭಾವಿಸಿ ಪಿಂತಾದ ತೀರ್ತ್ಥಕರ ಅನಂತರುಂ ಮುಂದೆ ತೀರ್ತ್ಥಕರ ಪದಮಂ ಪಡೆವ ಅನಂತಾನಂತರಮೀ ಕ್ರಮದಿಂದಮೇ ಭಾವಿಪರು ಮತ್ತೊಂದು ಪ್ರಕಾರಮಿಲ್ಲೆಂಬುದಂ ಭವ್ಯ ಜನಂಗಳು ನಂಬಿ ಭಾವಿಸುಉದು

|| ಕ || ಅನನ್ತಾತರ ಗುಣ ಕಾಪು
ರನಂತತೀರ್ತ್ಥೇಶರಾದರಿಂನುಂ ಮುಂದುಂ
ಕಂತುಹರ ತೀರ್ತ್ಥನಾಥರ
ನನ್ತರ್ಬ್ಭಾವಿಗಳುಮಪ್ಪತಿ ಭಾವನೆಯಿಂ ||

ಇಂತೀ ಷೋಡಶ ಭಾವನೆಯ ನೋಂಪಿಯ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕಥೆಯಂ ಪೇಳ್ದವರ್ಗ್ಗಂ ಕೇಳ್ದವರ್ಗ್ಗಂ ವರದವರ್ಗ್ಗಂ ಬರಯಿಸಿದವರ್ಗ್ಗಂ ಯಿಂತೀ ಭಾವನೆಯ ಭಾವಿಸಿದವರ್ಗ್ಗಂ ತೀರ್ತ್ಥಕರ ಪದವಿಯಕ್ಕುಂ ಮಂಗಳ ಮಹಾಶ್ರೀ ದ್ವಾವಿಂಶತಿ ತೀರ್ತ್ಥಕರಾಯ ನಮಃ || ಶುಭಮಸ್ತು || ನಿರ್ವ್ವಿಘ್ನಮಸ್ತು ||