ಶ್ರೀಮದ್ದೇವೇಂದ್ರವಂದ್ಯಂ ಗುಣಗಣನಿಲಯಂ ವಿಶ್ವಲೋಕೈಕಪೂಜ್ಯಂ
ಸೋಮಾದಿತ್ಯಪ್ರಕಾಶಂ ಮದನಮದಹರಂ ಸರ್ವತತ್ತ್ವಾವಬೋಧಂ
ಹೇಮಾಂಗಂ ವರ್ಧಮಾನಂ ಗಣಧರವಿನುತಂ ಧೂತಘಾತಿಸ್ವರೂಪಂ
ಪ್ರೇಮಂ ವಿತ್ತೆಮ್ಮನೀಗಲ್
ಸಲಹುಗೆ ಮುದದಿಂ ಧ್ವಸ್ತಘೋರೋಪಸರ್ಗಂ ||

|| ಸರ್ಪೋಪಸರ್ಗಹರಣಂ
ಸರ್ವರ್ಗಂ ತಿಳಿಯೆ ಪೇಳ್ವೆ ಪೊಸಕನ್ನಡದಿಂ
ಸರ್ವಜ್ಞ ಕಥಿತವಿಧಿಯಂ
ಸರ್ವರುಜಾಹರಣ ಮುಕ್ತಿಕಾರಣ ಸಹಿತಂ ||

ವಚನ || ಅದೆಂತೆಂದೊಡೆ ಅನಂತಾಕಾಶದ ಮಧ್ಯದೊಳ್‌ ವಾಯುಪುತ್ರಯ ಪರಿವೇಷ್ಟಿತ ಸಪ್ತೈಕಪಂಚೈಕರಜ್ಜು ವಿಸ್ತಾರ ಚತುರ್ದಶರಜುತ್ಸೇಧ ಸಪ್ತಘನರಜ್ಜುಪ್ರಮಿತಾಸಂಖ್ಯಾತ ಪ್ರದೇಶಮನುಳ್ಳ ಲೋಕತ್ರಯದ ನಡುವಣ ಅಸಂಖ್ಯಾತ ದ್ವೀಪಸಮುದ್ರ ಮಧ್ಯಸ್ಥಿತ ಜಂಬೂದ್ವೀಪದ ನಟ್ಟನಡುವಿನೊಳ್‌ ಶೋಭಿಸುವ ನಾನಾರತ್ನ ಸುವರ್ನಾಮಯಮಪ್ಪ ನಾನಾಸಂಪತ್ತುಗಳಿಂ ಶೋಭಿತಮಾದ ರಾಜಗೃಹದೊಳು ಅಷ್ಟಸಹಸ್ರಮಕುಟಬದ್ಧ ರಾಜರಿಂದೆರಗಿಸಿ ಕೊಂಬ ಮಹಾಮಂಡಲೇಶ್ವರ ಪದವಿಯಂ ನಿಜಭುಜದೊಳು ಧರಿಸಿದ ಶ್ರೇಣಿಕ ಮಹಾಮಂಡಲೇಶ್ವರಂ ನಿಜರಾಜಮಂದಿರ ಸಭಾಮಂಟಪ ಮಧ್ಯಸ್ಥಿತಮಣಿ ಮಯ ಸಿಂಹಾಸನಾರೂಢನಾಗಿ ಭಗತ – ಜಠರಾಗ್ನಿಯೆಂಬಂ ತನಗೆ ಗುರುವಾಗಿ ಸರ್ವಾಶ್ರಯಮೆಂಬೊಡ್ಡೋಲಗದೊಳು ಸುಖಮಿರ್ಪನ್ನೆಗಂ ಇತ್ತಲು ಸಿಂಹ ವಿಷಯದ ವೈತಾಳೀನಗರಮನಾಳ್ವಂ ಪರಮಸಮ್ಯಗ್ದೃಷ್ಟಿಯಪ್ಪ ಚೇಟಕ ಮಹಾರಾಜಂಗಂ ಸುಭದ್ರೆಗಂ ಧನದತ್ತ ಧನಭದ್ರ ಉಪೇಂದ್ರ ಸುದತ್ತ ಸಿಂಹಭದ್ರ ಪ್ರಭಂಜನ ಪ್ರಭಾಸರೆಂಬೀ ಸಪ್ತಪುತ್ರರುಂ ಪ್ರಿಯಕಾರಿಣಿ ಮೃಗಾವತಿ ಸುಭದ್ರೆ ಪ್ರಭಾವತಿ ಚೇಳಿನಿ ಜ್ಯೇಷ್ಠ ಚಂದನೆಯೆಂಬೀ ಸಪ್ತಪುತ್ರಿಯರುಮಾಗಿ ಸುಖದಿಂದಿರಲೊಂದು ದಿವಸಂ ಮಹಾರಾಜಂ ಪದ್ಮಾವತಿಯ ವರಪ್ರಸಾದಮನುಳ್ಳ ಭರತನೆಂಬ ಚಿತ್ರಕಾರನಂ ಬರಿಸಿ ಪುತ್ರಿಯರ ಪಟಮಂ ಬರೆಯಿಸೆ ಚೇಳಿನಿಯ ಪಟದೊಳು ಒಳತೊಡೆಯೊಳೊಂದು ಬಿಂದು ಬೀಳೆ ರಹಸ್ಯಸ್ಥಾನ ದೊಳಿರ್ದ ಕುರುಹನಿವನೆತ್ತಂದರಿತನೆಂದು ಕೋಪಿಸೆ ಆಗಳಾ ಚಿತ್ರಕಾರಂ ಭಯದಿಂದೋಡಿಪೋಗಿ ರಾಜಗೃಹನಗರಂ ಪೊಕ್ಕು ಶ್ರೇಣಿಕಮಹಾಮಂಡಲೇಶ್ವರನಂ ಕಂಡು ಚೇಳಿನಿಯ ಪಟಮಂ ತೋರೆ ಆ ಕನ್ನೆಯ ಮೇಲೆ ಶ್ರೇಣಿಕನಾಸಕ್ತನಾಗಿ ತನ್ನ ಮಂತ್ರಿಗಳೊಳಾಲೋಚಿಸಿ ಕೈಕಾಣಿಕೆಯೊಡನೆ ಪ್ರಮುಖ ಸಚಿವನಂ ಕಳುಹಿದೊಡಾ ಚೇಟಕಮಹಾರಾಜಂ ಆ ಸಚಿವನೊಡನೆ ನಿಮ್ಮರಸಂ ಮಿಥ್ಯಾದೃಷ್ಟಿಯಪ್ಪುದರಿಂ ಪುತ್ರಿಯಂ ಕೊಡಲಾಗುವುದಿಲ್ಲವೆಂದು ಪೇಳಿ ಕಳುಹಲಾತಂ ಬಂದಾ ವಾರ್ತೆಯಂ ಶ್ರೇಣಿಕಂಗೆ ಪೇಳೆ ಕೇಳ್ದು ದುಃಖಿತಮಾನಸವಾಗಿ ಶಯ್ಯೆಯೊಳು ಪವಡಿಸಿರ್ಪನ್ನೆಗಂ ಅಭಯಕುಮಾರಂ ಬಂದು ಆ ವಾರ್ತೆಯಂ ಕೇಳ್ದು ನಿಮ್ಮ ಭೀಷ್ಟಮಂ ತೀರ್ಚಿಪೆಂ ಎಂದು ಅರಸಂಗೆ ಬಿನ್ನವಿಸಿ ವಾಣಿಜ್ಯ ಮಾರ್ಗದಿಂ ಪೋಗಿ ಚೇಳಿನಿಯಂ ಉಪಾಯಾಂತರದಿಂ ತಂದೊಪ್ಪಿಸೆ ಮಹೋತ್ಸವದಿಂ ವಿವಾಹಮಾಗಿ ಆಕೆಗಂ ಪಟ್ಟದರಸಿಯ ಪಟ್ಟಮಂ ಕಟ್ಟಿ ಸುಖದಿಂದಿರ್ಪನ್ನೆಗಂ ಜಠರಾಗ್ನಿ – ಗುರುವು ಬಂದು ಆಶೀರ್ವಾದಪೂರ್ವಕಮಾಗಿ ಮಾತನಾಡಿಸಿ ಚೇಳಿನಿಯಂ ಕುರಿತು ನಿಮ್ಮ ಶ್ರವಣರು ಸತ್ತು ವೈಕೆಂಠದಲ್ಲಿ ಬೆತ್ತಲಾಗಿರ್ಪರ್‌ ಎಂದು ಪೇಳ್ವುದುಂ ಕರಲೇಸು ನಾಳೆ ನಿಮಗೆಲ್ಲರ್ಗೆ ಭಿಕ್ಷಾ ಹಾರಮಂ ಕೊಡುವೆನೆಂದು ಪೇಳಿ ಮರುದಿವಸಂ ಚೇಳಿನೀ ಮಾಹಾದೇವಿ ಜಠರಾಗ್ನಿ ಮೊದಲಾದವರಂ ಕರೆಯಿಸಿ ಮನೆಯೊಳಗೆ ಕರೆದೊಯ್ದು ಕುಳ್ಳಿರಿಸಿ ಪೊರಗವರಿರಿಸಿರ್ದ ಪಾದರಕ್ಷಗಳೊಳೊಂದಂದಂ ಬಲು ಕಿರಿದಾಗಿ ಛೇದಿಸಿ ಪರಮಾನ್ನ ಪಾಯಸವ್ಯಂಜನಾದಿಗಳೋಳ್ಕೂಡಿಸಿ ಅವರ್ಗುಣಲಿಡುವುದುಂ ಅವರು ಯಥೇಷ್ಟಮಾಗಿ ಉಂಡು ಪೋಪವೇಳೆಯೊಳು ತಂತಮ್ಮ ಪಾದರಕ್ಷೆಯಂ ಕಾಣದೆ ಚೇಳಿನಿಯಂ ಬೆಸಗೊಳೆ ಆಕೆ ದಿವ್ಯಜ್ಞಾನದಿಂ ನೋಡಿಕೊಳ್ಳಿಮೆನೆ ಅವರು ಈ ಪ್ರಕಾರದ ಜ್ಞಾನಮೆಮಗಿಲ್ಲ ಮೆಂಬುದುಂ. ಅಂತಾದೊಡೆ ಪಾದ ರಕ್ಷೆಯ ಸವಿಗಂಡಿರೆಂದು ಚೇಳಿನಿ ಪೇಳಲ್‌ ಅವರೆಲ್ಲರುಂ ಕಾರಿಕೊಂಡು ಪರಿಚ್ಛೇದಿಸಿ ಲಜ್ಜಿತರಾಗಿ ಪೋದರ್‌‍

ಮತ್ತೊಂದು ದಿವಸಂ ಶ್ರೇಮಿಕಮಹಾಮಂಡಲೇಶ್ವರಂ ತನ್ನಾ ಗುರುಗಳ ಧ್ಯಾನಮಹಿಮೆಯಂ ಕೊಂಡಾಡೆ ಚೇಳಿನಿ ಕೇಳ್ದು ಮುಗುಳ್ನಗೆ ನಗುತ ಅವರು ಧ್ಯಾನಾರೂಢರಾಗಿದ್ದ ಮಂಟಪಕ್ಕೆ ಅಗ್ನಿಸಂಧುಕ್ಷಣಂ ಮಾಡೆ ಅವರೋಡಿ ಪೋದರ್‌ ಅದಂ ಮನದೊಳಿರಿಸಿಕೊಂಡು ಶ್ರೇಣಿಕಮಹಾಮಂಡಲೇಶ್ವರನೊಂದು ದಿವಸಂ –

|| ಕ || ಬಂದೋರ್ವ ಶಬರನೆಂದನು
ಬಂಧುರಮಾಗಿರ್ದ ನೃಪನ ಸಭೆಯೊಳು ತಾನಿಂ
ತೆಂದನು ಎಲೆ ನೃಪ ಕೇಳೈ
ಸಂದಣಿಸದೆ ಬನವು ನೋಡೆ ಮೃಗಸಂಕುಲದಿಂ ||

ಎಂದು ಬಿನ್ನವಿಸಿದ ಶಬರಂಗಂಗಚಿತ್ತಮಂ ಕೊಟ್ಟು ಪಾಪೋಪಾರ್ಜನ ಚಿತ್ತನಾಗಿ ಚತುರಂಗಬಲವೆರಸು ಅರಣ್ಯಮಂ ಪುಗಲಲ್ಲಿ ಮಾರಹರಯೋಗದೊಳಿರ್ದ ಯಶೋಧರಮುನೀಂದ್ರನಂ ಕಂಡು ಅತಿ ಕುಪಿತಮಾನಸನಾಗಿ ಸತ್ತಪಾವಂ ತಂದು ಯೋಗಾರೂಢನಾಗಿರ್ದ ಮುನಿಯ ಕೊರಳೊಳಕ್ಕಿ ನರಕಾಯುಮಂ ಬಂಧಿಸಿಕೊಂಡು ಮಗುಳ್ದು ನಾಲ್ಕನೆಯ ದಿನದ ರಾತ್ರಿಯೊಳು ಆ ವಾರ್ತೆಯಂ ಚೇಳಿನಿಗೆ ಪೇಳೆ ಕೇಳ್ದಾಕೆ ಭಯಚಕಿತಚಿತ್ತಳಾಗಿ ನಡನಡುಗಿ ಎಲೆ ದೇವ ! ನೀಂ ಮಹಾಪಾಪಮಂ ಮಾಡಿದೆ ನಿನ್ನಾತ್ಮನಂ ನರಕಭಾಜನಂ ಮಾಡಿದೆ ಎನಲು ಶ್ರೇಣಿಕಂ ನಗುತ್ತಿಂತೆಂದಂ

|| ಕ || ಇಕ್ಕಿದೆನದನಾಗಳೆ ನಾಂ
ಚೆಕ್ಕನೆ ಬಿಸುಪನೆನಗದೆಲ್ಲಿಯ ಪಾಪಂ
ಬಕ್ಕುಮೆನೆಯಾಕೆ ಮನದೊಳು
ಕೊಕ್ಕರಿಸುತ್ತವನಿಪತಿ ಮತ್ತಿಂತೆಂದಳ್

ಆ ಮುನೀಶ್ವರನಾ ಪಾವುಮಂತೆ ಬಿಸುಡುವನಲ್ಲೆನೆ ಅಂತಾದೊಡೆ ತೋರು ಬಾ ಎಂದು ಆ ರಾತ್ರಿಯೊಳು ಕೈದೀವಿಗೆಯಂ ಪೊತ್ತಿಸಿಕೊಂಡು ಸಮಸ್ತ ರಾಜಾ ನೀಕಮಂ ಬೆರಸು ಆ ಅರಣ್ಯಮನೈದಳ್‌ ಆ ಯತಿಲಲಾಮಂ ಘೋರೋಸರ್ಗದೊಳ್ಕೈಯಿಕ್ಕಿಕೊಂಡು ಮುನ್ನಿರ್ದ ಪರಿಯೊಳಿರ್ದುದಂ ಕಂಡು ಚೇಳಿನೀ ಮಹಾದೇವಿಯಾ ಮುನಿತಿಲಕನ ಕಂಠದೊಳಿರ್ದ ಸತ್ತಪಾವಂ ತೆಗೆದು ಬಿಸುಟು ಪನ್ನೀರಿನಿಂ ಮೈತೊಳೆದು ಸುಗಂಧದ್ರವ್ಯಂಗಳಿಂದರ್ಚನೆಯಂ ಮಾಡಿ ಆ ರಾತ್ರಿಯೊಳಾ ಮುನಿಯ ಪಾದೋಪಾಂತದೊಳ್ಕುಳ್ಳಿರ್ದು ನೇಸರ್ಮೂಡಲಾ ಮುನೀಶ್ವರಂಗೆ ತ್ರಿಪ್ರದಕ್ಷಿಣಮಂಗೈದು ಎಲೈ ಸಂಸಾರಸಾಗರರೋತ್ತಾರಕ ಉಪಸರ್ಗಂ ಪಿಂಗಿತು ಕೈಯೆತ್ತುವುದು ಎನೆ ಸಮ್ಯಕ್ತ್ವರತ್ನಾಕರಂ ಕಾಯೋತ್ಸರ್ಗದೊಳಿರ್ದು ಕೈಯೆತ್ತಿಕೊಂಡು ಕಣ್ದೆರೆದು ಮುಂದೆ ವಂದಿಸುತ್ತಿರ್ಪ ಚೇಳಿನೀ ಮಹಾದೇವಿಯಂ ಶ್ರೇಣಿಕ ಮಹಾಮಂಡಲೇಶ್ವರನಂ ಕಂಡು ಮುನೀಶ್ವರಂ ಪರಸೆ ಶ್ರೇಣಿಕಂ ತಾಂ ಮಾಡಿದ ಅಪರಾಧಕ್ಕವರು ಕ್ರೋಧಮಂ ಮಾಡದೆ ಶಾಂತರಸಮಯರ್ಗಿರ್ದುದಕ್ಕಚ್ಚರಿವಟ್ಟು ನಾನೀ ಶಿರವನವರ ಪಾದ ಕರ್ಚಿಪೆನೆಂದು ನೆನೆಯೆ ಆಗಳಾ ಮುನಿವರಂ ಎಲೈ ರಾಜನೆ ! ನೀನಿತಂತಪ್ಪ ಪೊಲ್ಲಮೆಯಂ ನೆನೆಯದಿರು ಎನೆ ಅದೇನೆಂದು ಶ್ರೇಣಿಕಂ ಬೆಸಗೊಳೆ ಆ ಮುನೀಶ್ವರನಾ ಕಥನಮಂ ವ್ಯಕ್ತಮಾಗಿ ನುಡಿಯೆ ಶ್ರೇಣಿಕಂ ಮುನೀಶ್ವರಾ ! ನೀವಿದನೆಂತರಿವಿರಿ? ಎಂದು ಬೆಸಗೊಳೆ ಜ್ಞಾನನಾವರಣೀಯ ಪಂಚಕದೊಳವಧಿ ಮನಃಪರ್ಯಯ ಜ್ಞಾನಾವರಣ ಕ್ಷಯೋಪಶಮದಿಂದರಿದೆವೆಂದು ಪೇಳಿ ಮತ್ತಮಿಂತೆಂದು ನಿರೂಪಿಸಿದರು.

ಎಲೈ ಭವ್ಯೋತ್ತಮ ಕೇಳು ಮುನ್ನ ನೀಂ ದ್ರವ್ಯ ಕ್ಷೇತ್ರ ಕಾಲ ಭವಭಾವರೂಪ ಪಂಚಸಂಸಾರದೊಳ್‌ ತಿರುತಿರುಗಿ ಬಂದು ದುರ್ಲಭಮಪ್ಪೀ ಸಕಲ ಸೌಕರ್ಯಮಂ ಸುಲಭದಿಂ ನೀನಾಂತೆ ಇನ್ನಾದೊಡಂ ಮಿಥ್ಯಾತ್ವಮಂ ಬಿಟ್ಟು ಶುಭಕರಮಪ್ಪ ವಿಲಸದ್ಧರ್ಮಮಂ ನೀಂ ಪೊರ್ದು ಎಂದು ಪೇಳೆ ಶ್ರೇಣಿಕಂ ಬಹುಸಂತುಷ್ಟನಾಗಿ ಮತ್ತಂ ತನ್ನ ಗುರುವಾದ ಜಠರಾಗ್ನಿ ಮೊದಲಾದವರಿಗೆ ತತ್ತ್ವಜ್ಞಾನಮಿಲ್ಲೆಂದು ಬಗೆದು ಅವರ ಧರ್ಮಮಂ ಪತ್ತುವಿಟ್ಟು ಶ್ರೀ ಜಿನ ಧರ್ಮದೊಳ್‌ ದೃಢನಾಗಿ ಮುನಿಸಮೀಪದೊಳ್‌ ಉಪಶಮಸಮ್ಯಕ್ತ್ವಮಂ ಪಡೆದು ಚೇಳಿನೀ ಮಹಾದೇವಿಯಂ ತಾನುಂ ಸಮಸ್ತ ರಾಜಾನೀಕಮುಂ ಆ ಮುನೀಶ್ವರರರಂ ಪೂಜಿಸಿ ವಂದಿಸಿ ಸದ್ಧರ್ಮಸ್ವರೂಪಮಂ ಸವಿಸ್ತರದಿಂ ಕೇಳಿ ಗುರುಗಳಂ ಬೀಳ್ಕೊಂಡು ಪುರಮನರಮನೆಯಂ ಪೊಕ್ಕು ಸುಖದಿಂದಿರ್ಪನ್ನೆಗಂ

ಇತ್ತ ಭರತಕ್ಷೇತ್ರ ಕುಂಡಲಪುರಮನಾಳ್ವ ನಾಥಾವಂಶಜ ಸಿದ್ಧಾರ್ಥ ಮಹಾರಾಜಂಗೆ ಪ್ರಿಯಕಾರಿಣೀ ಮಹಾದೇವಿಯ ಗರ್ಭಶೋಧನಪುರಸ್ಸರ ಮಾಗಿ ಮರೀಚಿಚರಂ ದೇವಲೋಕದಿಂ ಬಂದು ತ್ರಿಜ್ಞಾನಧರನಾಗಿ ಆಶಾಢಶುದ್ಧ ಷಷ್ಠಿಯಲ್ಲಿ ಗರ್ಭಕ್ಕವತರಿಸಿ ಚೈತ್ರಶುದ್ಧ ತ್ರಯೋದಶಿಯೊಳು ಜನ್ಮಾಭಿಷಿಕ್ತನಾಗಿ ವರ್ಧಮಾನ ಸನ್ಮತಿ ವೀರ ಮಹತಿ ಮಹಾವೀರ ಮೊದಲಾದ ಅಷ್ಟೋತ್ತರ ಸಹಸ್ರನಾಮಧರನಾಗಿ ತ್ರಿಶದ್ವರ್ಷಕುಮಾರಕಾಲದೊಳಿರ್ದು ಮಾರ್ಗಶಿರ ಕೃಷ್ಣದಶಮಿಯೊಳು ಪರಿನಿಷ್ಕ್ರಮಣಕಲ್ಯಾಣಕ್ಕೊಡೆಯನಾಗಿ ದ್ವಾದಶಸಂವತ್ಸರಂ ಛದ್ಮಸ್ಥಕಾಲಂ ಸಂದುಬಳಿಕ ವೈಶಾಖ ಶುದ್ಧ ದಶಮಿಯೊಳು ಜ್ಞಾನಾವರಣ ದರ್ಶನಾವರಣ ಮೋಹನೀಯ ಅಂತರಾಯುಗಳೆಂಬ ಘಾತಿಕರ್ಮಮಂ ಸೂತ್ರಾರ್ಥಮಪ್ಪ ತ್ರಿಷಷ್ಠಿ ಕರ್ಮಮಂ ಮಿರ್ಮೂಲನಂ ಗೈದು ಅನಂತಚತುಷ್ಠಯ ಸ್ವರೂಪನಾಗಿ ಧರೆಯಿಂ ಗಗನಕ್ಕೈಸಾಸಿರ ಬಿಲ್ಲಂತರಮನೊಗೆದು ನುಲ್ಲುವಾಗಳ್‌ ಶಕ್ರನಾಜ್ಞೆಯಿಂ ಧನದನಿಂ ಭಕ್ತಿಯಿಂ ವಿರಚಿತಮಪ್ಪ ಸಮವಸರಣದ ಮಧ್ಯಸ್ಥಿತ ಮಣಿಮಯ ಸಿಂಹವಿಷ್ಟರದ ಮೇಲೆ ಅಷ್ಟೋತ್ತರ ಸಹಸ್ರದಳಕಮಲ ಕರ್ಣಿಕೆಯ ಮೇಲೆ ನಾಲ್ವೆರಲಂತರಮಾಗಿ ಅಷ್ಟಮಹಾಪ್ರಾತಿಹಾರ್ಯ ಚತುಸ್ತ್ರಿಂಶದತಿಶಯ ಸಮೇತನುಂ ಶತೇಂದ್ರಪೂಜಿತನುಂ ಆಗಿನಿಂದು ನಾನಾದೇಶದ ಭವ್ಯರನುದ್ಧರಿಸುತ್ತ ವಿಹರಿಸಿ ಮಗಧವಿಷಯದ ರಾಜಗೃಹನಗರದ ಪಶ್ಚಿಮ ದಿಗ್ಭಾಗದೊಳಿರ್ಪ ವಿಪುಲಾಚಲಕ್ಕವತರಿಸೆ

|| ಕ || ವರಮುನಿಸೂಚಕ ಭರದಿಂ
ಪರಿತಂದು ಶ್ರೇಣಿಕಂಗೆ ಬಿನ್ನಪವೆಂದಂ
ನರವರ ವಿಪುಲಾಚಲದೊಳ್

ಪರಮಾತ್ಮಂ ಬಂದು ನೆಲಸಿದಂ ವೀರಜಿನಂ ||

ಎಂದು ಬಿನ್ನವಿಸೆ ಮೇಗಧ್ವನಿಯಂ ಕೇಳ್ದ ನವಿಲಿನಂತೆ ಪೂರ್ಣಚಂದ್ರನಂ ಕಂಡಂಬುಧಿಯಂತೆ ಪೆರ್ಚಿ ನಿಜಸಿಂಹಾಸನದಿಂದಿಳಿದು ಆ ದಿಶೆಗೇಳಡಿಯಂ ನಡೆದು ಸಾಷ್ಟಾಂಗವೆರಗಿ ಆನಂದಭೆರಿಯಂ ಪೊಯ್ಸಿ ವಸಗೆಯುಂ ತಂದವಂಗಂಗಚಿತ್ತಮಂ ಕೊಟ್ಟು ಸಕಲ ಪರಿಜನ ಪುರಜನಂ ಬೆರಸು ಚೇಳೀನೀ ಸಮನ್ವಿತನಾಗಿ ವಿಜಯಗಜೇಂದ್ರಮನೇರಿ ವಿಪುಲಾಚಲಕ್ಕೆ ಬಂದು ಸಮರಸರಣಮಂ ಕಂಡು ವಾಹನದಿಂದಿಳಿದು ರಾಜಹ್ನಂಗಳಾಂ ಬಿಟ್ಟು ಸಮವಸರಣದ ವಿಂಶತಿ ಸಹಸ್ರ ಸೋಪಾನಂಗಳಿಂದೇರಿ ಧೂಳೀಸಾಲ ಮೊದಲಾದ ಭವ್ಯಾತಿಶಯಂಗಳಂ ನೋಡುತ್ತ ಪೋಗಿ ಮುಂದಣ ಸ್ಫಟಿಕಪ್ರಾಕಾರದೊಳಗಣ ಭೂಮಿಪರಿವ್ರತಮಾದ ಪೀಠತ್ರಯದ ಮೇಲಣ ನಾನಾರತ್ನಮಯ ಗಂಧ ಕುಟಿಯ ಮಧ್ಯಸ್ತಿತ ಮಣಿಮಯ ಸಿಂಹವಿಷ್ಟರದ ಮೇಲೆ ಕಮಲಕರ್ಣಿಕೆಯಂ ಸೋಂಕದೆ ಚಂದ್ರಾದಿತ್ಯಪ್ರಕಾಶಮಂ ತಿರಸ್ಕರಿಪ ಪರಮೌದಾರಿಕ ದಿವ್ಯದೇಹ ಮನುಳ್ಳ ವೀರನಾಥಜಿನನಂ ಕಂಡು :

|| ಕ || ಜಯ ಜನ್ಮಮರಣದೂರನೆ
ಜಯ ಭಾಕ್ತಿಕ ಭವ್ಯವೃಂದಚಿಂತಾಮಣಿಯೆ
ಜಯ ಫಣಿನರಸುರಸೇವ್ಯನೆ
ಜಯ ಮುಕ್ತಿಶ್ರೀಯ ರಮಣ ವೀರಜಿನೇಶಾ ||

ಜಯ ನಿರ್ಮಲ ಕಾಮಹರಾ
ಜಯ ನಿರ್ಮಲ ಕಾಮದಂತಿ ಮದಹರಸಿಂಹಾ
ಜಯ ಮುಕ್ತಿಕಾಂತೆಯರಸಾ
ಜಯ ರಕ್ಷಿಸು ವೀರಜಿನಪ ಕರುಣಾಧಾರಾ ||

ಎಂದನೇಕ ವಸ್ತುಸ್ತವ ರೂಪಸ್ತವ ಗುಣಸ್ತವಾದಿ ಸ್ತುತಿಶತಸಹಸ್ರಂಗಳಿಂ ಸ್ತುತಿಸಿ ದಿವ್ಯವಸ್ತುಗಳಿಂದರ್ಚಿಸಿ ಸ್ವಯೋಗ್ಯಮಪ್ಪ ಕೋಷ್ಠದೊಳ್ಳುಳ್ಳಿರ್ದು ಗೌತಮಗಣಧರರಿಗಭಿಮುಖನಾಗಿ ಕರಕಮಲಂಗಲಂ ಮುಗಿದು ಪಂಚಾಸ್ತಿಕಾಯ ಷಡ್ಡ್ರವ್ಯ ಸಪ್ತತತ್ತ್ವ ನವಪದಾರ್ಥ ಸಮಸ್ತ ಧರ್ಮಸ್ವರೂಪಮಂ ಸವಿಸ್ತರಮಾಗಿ ಕೇಳ್ದು ತದನಂತರಂ ಗೌತಮಗಣಧರರ್ಗೆ ಮುಕುಳೀಕೃತ ಹಸ್ತ ಕಮಲಮಸ್ತಕನಾಗಿ ಪುನಃ ನಮಸ್ಕರಿಸಿ ಇಂತೆಂದು ಬಿನ್ನವಿಸಿದಂ

|| ಕ || ಎಲೆ ಮುನಿನಾಥನೆ ಎನ್ನೊಳು
ನೆಲೆಗೊಳಿಸಿತು ಕರ್ಮಬಂಧ ನಾರಕಗತಿಯಂ
ಖಳನುಪಸರ್ಗದ ಮುನಿಯಳು
ಸಲೆ ಮಾಡಿದಘವ ಬೇಗದಿಂ ಪರಿಹರಿಸೈ ||

ಎನಲಾ ಮುನಿಪುಂಗವನವಧಿಯಿಂದರಿದು ಇಂತೆಂದಂ

ನೀನೀ ಉಪಸರ್ಗಮಂ ಮಾಡಿದ ತೀವ್ರಪ್ಪಕರ್ಮಮೇಳನೆಯ ನರಕ ಮನೈಸಿಸುವುದು. ಎಂದು ಪೇಳೆ ಕೇಳ್ದು ಶ್ರೇಣಿಕ ಮಹಾಮಂಡಲೇಶ್ವರನಂ ನಡನಡುಗಿ ಎಲೈ ಸ್ವಾಮಿ ! ಏನಗೀ ಪಾಪವಿಮೋಚನಮಂ ಮಾಳ್ಪುದಾವುದಾನು ಮೊಂದು ನೋಂಪಿಯಂ ಬೆಸಸಿಂ ಎನಲವರಿತೆಂದರು –

ಸರ್ವಕರ್ಮ ನಿವಾರಣಮಪ್ಪುಪಸರ್ಗ ನಿವಾರಣಮೆಂಬ ನೋಂಪ ನೊನು ಎನಲದರ ವಿಧಾನಮೆಂತೆನೆ – ಶ್ರಾವಣಮಾಸದ ಶುಕ್ಲಪಕ್ಷದ ತ್ರಯೋದಶಿಯೊಳು ನೋಂಪವರೆಲ್ಲಂ ತೈಲಾಭ್ಯಂಗದಿಂ ಶುಚಿರ್ಭೂತರಾಗಿ ಧೌತ ವಸ್ತ್ರಮುನುಟ್ಟು ಅಷ್ಟವಿಧಾರ್ಚನಾದ್ರವ್ಯ ಬೆರಸು ಚೈತ್ಯಾಲಯಕ್ಕೆ ಪೋಗಿ ಶ್ರೀ ಜಿನ ಭವನಮಂ ತ್ರಿಪ್ರದಕ್ಷಿಣಂ ಗೈದು ನಿಷಿಧಿಯೊಳಗಂ ಪೊಕ್ಕು ತ್ರಿಭುವನ ಸ್ವಾಮಿಯಂ ಸ್ತುತಿಸಿ ಧರಣೇಂದ್ರ ಪದ್ಮಾವತೀ ಸಹಿತಮಾದ ಶ್ರೀಪಾರ್ಶ್ವನಾಥ ಪ್ರತಿಮೆಗೆ ಅಭೀಷೇಕಪೂಜೆಯಂ ಮಾಡಿ ಶ್ರುತಗುರುಗಳಂ ವಂದಿಸಿ ಗುರುಗಳಾಂ ಪೂಜಿಸಿ ಗುರುಸಾನ್ನಿಧ್ಯದೊಳು ನೋಂಪಿಯಂ ಕೈಕೊಂಡು ಮೂರು ದಿನಂ ಭೂಶಯನ ಬ್ರಹ್ಮಚರ್ಯ ದಿಗ್‌ವ್ರತ ದೇಶವ್ರತ ಮೊದಲಾದ ನಿಯಮಮಂ ಕೈಕೊಂಡು ಮನೆಗೆ ಬಂದೇಕಭುಕ್ತಮಂ ಮಾಡಿ ಮರಳಿ ಚೈತ್ಯಾಲಯಕ್ಕೆ ಪೋಗಿ ಪೌರ್ಣಮಿಯ ಮಧ್ಯಾಹ್ನಪರ್ಯಂತಂ ಚರುರ್ವಿಧಾಹಾರನಿವೃತ್ತಿಯೆಂದುಪವಾಸಮಂ ಕೈಕೊಂಡು ಮರುದಿವಸ ಚತುರ್ದಶಿಯೊಳು ನೋಂಪವರೆಲ್ಲಂ ಶುಚಿರ್ಭೂತರಾಗಿ ದೌತವಸ್ತ್ರಮನುಟ್ಟು ಅಷ್ಟವಿಧಾರ್ಚನಾದ್ರವ್ಯಂ ಬೆರಸು ಚೈತ್ಯಾಲಯಕ್ಕೆ ಪೋಗಿ ತ್ರಿಪ್ರದಕ್ಷಿಣಂಗೈದು ತ್ರಿಕರಣ ವಿಶುದ್ಧಿಯಿಂದರ್ಹತ್ಪರ ಮೇಶ್ವರನಂ ವಸ್ತುಸ್ತವ ರೂಪಸ್ತವ ಗುಣಸ್ತವಗಳಿಂ ದರ್ಶನಸ್ತುತಿಗೈದು ಈರ್ಯಾಪಥಶುದ್ಧಿಯಂ ಮಾಡಿ ಪಾರ್ಶ್ವನಾಥಾಸ್ವಾಮಿ ಪ್ರತಿಬಿಂಬಕ್ಕಂ ಶ್ರುತಗಣಧರರ್ಗಂ ಅಭೀಷೇಕಮಂ ಮಾಡಿ ಪೂಜಾಮಂಡಪಮಂ ಮೇಲ್ಕಟ್ಟು ಫಲಗಳಿಗೆ ಯಿಂದಲಂಕರಿಸಿ ಸಕಲೀಕರಣ ಯಜ್ಞದೀಕ್ಷೆಯಂ ಮಾಡಿಕೊಂಡು ಭೂಮಿ ಶೋಧನಾನಂತರಂ ಅಷ್ಟದಳಕಮಲಮಂ ಬರೆದು ಪಂಚವರ್ಣದ ರಂಗವಲ್ಲಿ ಯನಿಕ್ಕಿ ಆ ಕಮಲಕರ್ಣಿಕೆಯಂ ಮೊದಲ್ಮಾಡಿಕೊಂಡು ನವದೇವತೆಗಳಂ ಬರೆವುದು

ಮಧ್ಯೇರ್ಹಂತಂ ಸಿದ್ಧಾದೀನ್ | ಧರ್ಮಾದೀಂಶ್ಚ ಯಥಾವಿಧಿ
ಪೂರ್ವಾದಿದಿಗ್ದಲೇಷ್ವೇವಂ ವಿದಿಕ್ಷು ಚ ಲಿಖೇತ್ಸುಧೀಃ ||

ಆ ಯಂತ್ರದ ಮುಂದೆ ಬೀಜಾಕ್ಷರ ಸಮನ್ವಿತಮಾಗಿ ನವದೇವತೆಗಳ ಪೆಸರ್ಗೊಂಡು ಪೂಜೆಯಂ ಮಾಡುವಲ್ಲಿ ೯ ಜಲಧಾರೆ ಮೊದಲಾಗಿ ಒಂಬೊಂಬತ್ತಾಗಿ ೯ ಬಗೆಯಿಂದ ಅಷ್ಟಾವಿಧಾರ್ಚನೆಯಂ ಮಾಡುವುದು ತದನಂತರಮೀ ಕ್ರಮದಿಂ ಪಾರ್ಶ್ವನಾಥಸ್ವಾಮಿಯ ಪೂಜೆಯಂ ಮಾಡುವುದು ಬಳಿಕ ಶ್ರುತಗುರು ಪೂಜೆಯಂ ಧರಣೇಂದ್ರ ಪದ್ಮಾವತೀ ಪೂಜೆಯಂ ಮಾಡಿ ಕಥೆಯಂ ಕೇಳ್ದು ಕಥಕನಂ ಪೂಜಿಸುವುದು ಧರ್ಮಕಥಾಸಂಗದಿಂ ರಾತ್ರಿ ಜಾಗರಣಿರ್ದು ಪ್ರಾತಃಕಾಲದೊಳು ಪಾರ್ಶ್ವನಾಥಸ್ವಾಮಿಗೆ ಅಭಿಷೇಕ ಪೂಜೆಯಂ ಮಾಡಿ ಏಕಭುಕ್ತಮಂ ಕೈಕೊಂಡು ಮನೆಗೆ ಬಂದು ಋಷಿಯರಂ ನಿಲ್ಲಿಸಿ ನಿರಂತರಾಯಮಾಗಿ ಆಹಾರದಾನಮಂ ಮಾಡಿ ಸಮ್ಯಗ್‌ದೃಷ್ಟಿಗಳಪ್ಪ ಚತುಸ್ಸಂಘಕ್ಕೆ ಆಹಾರ ದಾನಮಂ ಮಾಡಿ ಬಳಿಕ ತಾಂ ಪಾರಣೆಯಂ ಮಾಳ್ಪುದು ಈ ಕ್ರಮದಿಂ ೯ ವರ್ಷಂಬರಂ ನೋಂತು ಕಡೆಯೊಳುಜ್ಜಯಿಸುವಾಗ ಪಾರ್ಶ್ವನಾಥ ಸ್ವಾಮಿ ನವದೇವತಾ ಬಿಂಬಮಂ ಯಕ್ಷಯಕ್ಷೀಸಹಿತಮಾಗಿ ಮಾಡಿಸಿ ಶುಭಮುಹೂರ್ತ ದೊಳ್‌ಪ್ರತಿಷ್ಠಾವಿಧಾನಂಗೈದು ಮನೆಗೆ ಬಂದು ೯ ತಂಡ ಮೊದಲಾಗಿ ಸಮುದಾಯಮಂ ನಿಲ್ಲಿಸಿ ನಿರಂತರಾಯಮಾಗಿ ಆಹಾರದಾನಮಂ ಕೊಟ್ಟು ಕಥೆಯ ಪುಸ್ತಕ ಟವಣೆಕೋಲು ಶ್ರುತವಸ್ತ್ರಪಿಂಛ ಗುಂಡಿಗೆಯಂ ಕೊಟ್ಟು ಉಳಿದ ಋಷಿ ಯಜ್ಜಿಯರ್ಮೊದಾಲದ ಸಂಘಕ್ಕೆ ಆಹಾರದಾನಮಂ ಸಂಘಪೂಜೆಯಂ ಮಾಡಿ ಪಂಡಿತರ್ಗೆ ದೀನಾನಾಥರ್ಗೆ ದಕ್ಷಿಣೆಯಂ ಕೊಟ್ಟು ಜೈನಮಿಥುನಕ್ಕೆ ಉಣಲಿಕ್ಕಿ ಉಡಕೊಡುವುದು. ಚಾತುವರ್ಣರ್ಣ್ಯಕ್ಕಾಹಾರದಾನ ಪುರಸ್ಸರಮಾಗಿ ತಾಂ ಪಾರಣೆಯಂ ಮಾಳ್ಪುದು

ಎಂದು ಶ್ರೀ ಗೌತಮಸ್ವಾಮಿಗಳು ಶ್ರೀಣಿಕಮಹಾಮಂಡಲೇಶ್ವರಂಗಂ ಚೇಳಿನೀ ಮಹಾದೇವಿಗಂ ನಿರೂಪಿಸೆ ಕೇಳ್ದು “ಎಲೈ ಸ್ವಾಮಿ! ಮುನ್ನೀ ನೋಂಪಿಯಂ ನೋಂತು ಇದರ ಫಲಮನೆಯ್ದಿದವರ ಕಥೆಯಂ ನಿರೂಪಿಸಿ” ಎನಲವರಿಂತೆಂದರು:

ಈ ಚಂಬೂದ್ವೀಪದ ಭರತಕ್ಷೇತ್ರದ ಆರ್ಯಾಖಂಡದ ಕುರುಜಾಂಗಣ ವಿಷಯದ ಹಸ್ತಿನಾಪುರಮನಾಳ್ವ ಮೇಘರಥ ಮಹಾರಾಜಂ ರೂಪಿನೊಳು ಮನೋಜನಂ ಸಮುನ್ನತಿಯೊಳು ಸುರೇಂದ್ರಗಿರಿಯಂ ಗಾಂಭೀರ್ಯದೊಳು ರತ್ನಾಕರನಂ ವಿಭವದೊಳು ವಿಬುಧೇಂದ್ರನಂ ಸಮಸ್ತ ಭೋಗೋಪಭೋಗಂಗಳೊಳಹಿಪತಿಯಂ ಸಕಲ ಕಲಾಪ್ರೌಢಿಯೊಳು ವಿರಿಂಚಿಯಂ ಸರ್ವಜನಾ ನಂದಕರದೊಳು ಚಂದ್ರನಂ ವಿತರಣದೊಳು ಕಲ್ಪವೃಕ್ಷಮಂ ಕಾಮಧೇನು ಚಿಂತಾಮಣಿಗಳನಿಳಿಕೆಯ್ದನಾತನ ಪಟ್ಟದರಸಿ ಪದ್ಮಾವತಿಯಂಬವಳ್‌ ರೂಪಸೌಭಾಗ್ಯಾದಿ ಸಂಪನ್ನೆಯಂ ದಾನ ಪೂಜಾ ಶಿಲೋಪವಾಸಾದಿಗಳೊಳತಿ ಪ್ರಮೋದೆಯುಮೆನಿಸಿರ್ದಳಂತವರೀರ್ವಗಂ ಜನಿಸಿದ ಪುತ್ರರು ವಿಷ್ಣು ಕುಮಾರನುಂ ಪದ್ಮರಥನುಂ ಅಂತವರೆಲ್ಲಂ ಸುಖಸಂಕತಥಾ ವಿನೋದದಿಂದಿರೆ ಒಂದಾನೊಂದು ದಿವಸಂ ತತ್ಪುರದ ಬಹಿರುದ್ಯಾನದೊಳಿರ್ದ ಸಹಸ್ರಕೂಟ ಚೈತ್ಯಾಲಯಕ್ಕೆ ಸಮ್ಯಕ್ತ್ವಾದ್ಯನೇಕ ಗುಣಸಂಪನ್ನರುಂ ನವವಿಧ ಬ್ರಹ್ಮಚರ್ಯ ಸಮನ್ವಿತರುಂ ತ್ರಯೋದಶ ಚಾರಿತ್ರಾಂಕಿತರುಂ ನಿರತಿಚಾರಮೂಲೋತ್ತರ ಗುಣಸಂಪನ್ನರುಂ ಶುದ್ದಾವಭೋಧರೆನಿಸಿದ ಸುಗ್ರೀವ ಮಹಾ ಮುನೀಶ್ವರರುಂ ಮುನಿಸಮುದಾಯಂ ಬೆರಸು ಬಂದಿರಲಾಮುನೀಶ್ವರನ ತಪೋ ಮಹಿಮೆಯಿಂದಾದ ಅಕಾಲ ಫಲಪುಷ್ಪಂಗಳಂ ವನಪಾಲಕಂ ತಂದರಸಂಗೆ ಕಾಣಿಕೆಯನಿತ್ತು ಸಾಷ್ಟಾಂಗವೆರಗಿ ಬಿನ್ನವಿಸಿದನೆಲೆ ಮಹಾರಾಜ ನಿಮ್ಮ ಪುಣ್ಯೋದಯದಿಂ ಪುರದ ಪೊರಗಣ ಸಹಸ್ರಕೂಟ ಚೈತ್ಯಾಲಯಕ್ಕೆ ಮುನಿಸಮುದಾಯಂ ಬೆರಸು ಸುಗ್ರೀವ ಮುನೀಶ್ವರರು ಬಿಜಯಂಗೈದರೆನಲಾ ಮೇಘರಥ ಮಾರಾಜಂ ಸಂತೋಷಂ ಬಟ್ಟಾದಿಶೆಗೇಳಡಿಯಂ ನಡೆದು ಸಾಷ್ಟಾಂಗವೆರಗಿ ಪೊಡಮಟ್ಟು ಒಸಗೆಯಂ ಪೇಳ್ದಾತಂಗಂಚಿತ್ತಮಂ ಕೊಟ್ಟು ಆನಂದ ಭೇರಿಯಂ ಪೊಯ್ಸಿ ಅಷ್ಟವಿಧಾರ್ಚನಾದ್ರವ್ಯವೆರಸು ಸಕಲ ಪರಿಜನ ಪುರಜನ ಅಂತಃ ಪುರಜನಂಬೆರಸು ಜಿನಭವನಕ್ಕೆ ಬಂದು ತ್ರಿಪ್ರದಕ್ಷಿಣಂಗೈದು ನಾನಾರ್ಚನೆಗಳಿಂದರ್ಚಿಸಿ ಬಳಿಕಂ ಆ ಮುನೀಶ್ವರರ ಪಾದಾರ್ಚನೆಯಂ ಗೈದು ವಂದಿಸಿ ಅವರ ಮುಂದೆ ಕುಳ್ಳಿರ್ದು ನಿರ್ಮಲಚಿತ್ತದಿಂ ಧರ್ಮಶ್ರವಣಮಂ ಕೇಳ್ದು ಸಂತುಷ್ಟಚಿತ್ತನಾಗಿ ಮೇಘರಥ ಮಹಾರಾಜಂ ಪುನರ್ವಂದಿಸಿ ಬಳಿಕಂ ಕರಕಮಲಂಗಳಂ ಮುಗಿದು ಎನಗಾವುದಾನೊಂದು ನೋಂಪಿಯಂ ಬೆಸಸಿ ರೆನಲಾ ಸುಗ್ರೀವ ಮುನಿಗಳಿಂತೆಂದು ನಿರೂಪಿಸಿದರು

ಈ ಚಂಬೂದ್ವೀಪದ ಭರತಕ್ಷೇತ್ರದಾರ್ಯಾಖಂಡದ ಕಾಶೀ ವಿಷಯದ ವಾರಾಣಸೀಪುರಮನಾಳ್ವ ಉಗ್ರವಂಶಾಧಿನಾಯಕ ವಿಶ್ವಸೇನ ಮಹಾರಾಜಂಗೆ ಬ್ರಾಹ್ಮಿಲಾದೇವಿಯ ಗರ್ಭಾಂಬುಧಿಯೊಳ್‌ ಗರ್ಭಶೋಧನ ಪುರಸ್ಸರಮಾಗಿ ಮರುಭೂತಿಚರಂ ದೇವಲೋಕದಿಂ ಬಂದು ತ್ರಿಜ್ಞಾನಧರನಾಗಿ ಅವತರಿಸಿ ಜನ ನಾಂತರದೊಳ್‌ ಶಕ್ರಪ್ರಭೃತಿ ಚತುರ್ನಿಕಾಯಾಮರರೈತಂದು ಆ ಜಿನಾಬಾಲಕನಂ ಸುರಗಿರಿಗೈದಿಸಿ ಜನ್ಮಾಭಿಷೇಕಮಂ ಮಾಡಿ ತದನಂತರಂ ಆ ಜಿನಬಾಲಕಂ ತನಗಂ ಪರರ್ಗಂ ಹಿತಮಪ್ಪ ಸಮ್ಯಗ್ದರ್ಶನ ಜ್ಞಾನ ಚಾರಿತ್ರರೂಪ ರತ್ನತ್ರಯಕ್ಕೆ ಸ್ವಾಮಿಯಪ್ಪುದರಿಂ ಪಾರ್ಶ್ವನಾಥನೆಂದು ನಾಮಕರಣಮಂ ಮಾಡಿ ತಿರುಗಿ ತಂದರಮನೆಯಂ ಪೊಗಿಸಿ ದೇವಾನೀಕಂ ಪೋಗೆ ಆ ಕುಮಾರಂ ಬೆಳೆದು ಒಂದು ದಿವಸಂ ಚತುರಂಗ ಬಲವೆರಸು ವೈಯಾಳಿಗೆ ಪೋಗಿ ತಿರುಗಿ ಬರ್ಪಸಮಯದೊಳು ಆಶ್ರಮವೆಂಬ ವನದ ಮಧ್ಯದೊಳು ಪಂಚಾಗ್ನಿತಪಮಂ ಗೈಯುತ್ತಿರ್ದ ಕಮಠಚರಂ ಕುಂಡದ ಅಗ್ನಿಸಂಧುಕ್ಷಣ ನಿಮಿತ್ತಮಾಗಿ ಪರಶುವಿನಿಂ ಸೌದೆಯನೊಡೆಯಲಾ ಕುಮಾರಂ ಕಂಡು ಇದರೊಳಗೆ ಪ್ರಾಣಿ ಗಳಿರ್ಪವು. ಈ ಸೌದೆಯನೊಡೆಯಬೇಡ ಎಂದು ಪೇಳೆ ಆ ತಾಪಸಂ ಕೇಳದೆ ಕುಪಿತನಾಗಿ ಕಡಿದು ಖಂಡಮಾಡೆ ಅದರೊಳಗಿರ್ದ ನಾಗನಾಗಿಣಿಗಳುಂ ಖಂಡಮಾಗಿ ಅದನಾ ತಾಪಸಂಗೆ ಜಿನಕುಮಾರಂ ತೋರಿ ಕಂಠಗತ ಪ್ರಾಣಂಗಳಾಗಿರ್ದಾ ಫಣಿಗಳ್ಗೆ ಪಂಚನಮಸ್ಕಾರಮಂತ್ರಮಂ ನಿರೂಪಿಸಲಾ ಫಣಿಗಳು ಪಂಚತ್ವಮನೈದಿ ಭವನಲೋಕದೊಳು ಧರಣೇಂದ್ರ ಪದ್ಮಾವತಿಯರಾಗಿ ಜನಿಸಿ ಅಂತರ್ಮುಹೂರ್ತದೊಳು ಪಟ್ಟರ್ಯಾಪ್ತಿಗಳಂ ಪಡೆದು ಅಣಿಮಾದ್ಯಷ್ಟೈಶ್ವರ್ಯಕ್ಕೊಡೆಯ ರಾಗಿ ನಿಜಾವಧಿಬೋಧದಿಂದೆಲ್ಲಾ ಸ್ವರೂಪಮಂ ತಿಳಿದಿರ್ಪನ್ನೆಗಂ ಇತ್ತಲಾ ತಾಪಸನ ಕೃತ್ಯಕ್ಕೆಲ್ಲರುಂ ನಿಂದಿಸೆ ಆತನಾ ಜಿನಕುಮಾರನೊಳ್‌ ಶಲ್ಯಮಂ ತಾಳ್ದು ಸತ್ತು ತನ್ನ ಕಾಯಕ್ಲೇಶದ ಫಲದಿಂ ಜ್ಯೋತಿರ್ಲೋಕದೊಳು ಶಂಬರನೆಂಬ ದೇವನಾಗಿ ಪುಟ್ಟಿದಂ

ಇತ್ತಲಾ ಜಿನಕುಮಾರಂಗೆ ಕುಮಾರಕಾಲಂ ಸಂದು ಬಳಿಕಪರಿನಿಷ್ಕ್ರಮಣ ಕಲ್ಯಾಣಕ್ಕೊಡೆಯನಾಗಿ ಚತುರ್ಜ್ಞಾನಧರನಾಗಿ ಚತುರ್ಮಾಸಂಗಳ ಛದ್ಮಸ್ಥಕಾಲಂ ಸಂದು ಮುನ್ನದೀಕ್ಷೆಗೊಂಡ ವನದೊಳು ದೇವದಾರು ವೃಕ್ಷದಡಿಯೊಳು ಏಳುದಿನ ಪರ್ಯಂತಮತ್ಯಂತ ಶುದ್ಧಪರಿಣಾಮದಿಂ ಪ್ರತಿಮಾಯೋಗದಿಂದಿರ್ಪುದುಂ ಮುನ್ನಿನ ವೈರಿ ಸಂಬರದೇವಂ ವಿಹಾರರಾರ್ಥಮಾಗಿ ಅಂಬರದೊಳ್ಪೋಗುತ್ತಮಿರ್ಪನ್ನೆಗಂ ತನ್ನ ವಿಮಾನಂ ಕೀಲಿಸೆ ನಿಜವಿಧಂಗಜ್ಞಾನದಿಂ ತನ್ನ ವೈರಿಯಿರ್ದಪನೆಂದರಿತು ಕಡುಮುಳಿದು ಪಾರ್ಶ್ವನಾಥತಪೋಧನನ ಮೇಲೆ ವೃಷ್ಟ್ಯಾದಿ ಘೋರೋಪಸರ್ಗಮಂ ಮಾಡುತ್ತಿರಲಾ ಧರಣೇಂದ್ರ ಪದ್ಮಾವತಿಯರು ನಿಜಾವಧಿಬೋಧದಿಂ ತಿಳಿದು ಬಂದುನಿಜಫಣಾಮಂಡಪಮಂ ಮರೆಮಾಡಿ ಮೇಲೆ ವಜ್ರಮಯಮಪ್ಪ ಛತ್ರಮಂ ಪದ್ಮಾವತಿ ಪಿಡಿಯೆ ನಿಜಾತ್ಮ ಧ್ಯಾನಪರನಪ್ಪಾ ಪಾರ್ಶ್ವನಾಥ ತಪೋಧನಂ ಅಚಲಿತ ಧೈರ್ಯದಿಂದಾ ಘೋರೋಪಸರ್ಗಮಂ ಲೆಕ್ಕಿಸದೆ ಕ್ಷಪಕಶ್ರೇಣ್ಯಾರೋಹಣಂ ಗೈದು ಘಾತಿ ಕರ್ಮಂಗಳಾಂ ಕೆಡಿಸಿ ಕೇವಲಜ್ಞಾನ ದರ್ಶನ ಸುಖ ವೀರ್ಯ ಸ್ವರೂಪನಾಗಿ ಇಂದ್ರನಾಜ್ಜೆಯಿಂ ಧನದನಿರ್ಮಿತ ಸಮವಸರಣ ವಿಭೂತಿಗೊಡೆಯನಾಗಿ ಶತೇಂದ್ರಪೂಜಿತಪಾದನಪ್ಪುದಂ ಶಂಬರದೇವಂ ಕಂಡು ವೈರಬಾವಮಂ ಬಿಟ್ಟು ಸಮ್ಯುಕ್ತ್ವಭಾವಮಂ ಕೈಕೊಂಡು ಮತ್ತಮಾ ವನದ ತಾಪಸರೆಲ್ಲಂ ತಮ್ಮ ಅಜ್ಞಾನಮಂ ಪತ್ತುವಿಟ್ಟು ಸಮ್ಯಕ್ತ್ವಮಂ ಸ್ವೀಕರಿಸುವುದುಂ

ಮತ್ತಮಾ ಪಾರ್ಶ್ವನಾಥಭಟ್ಟಾರಕಂ ಸ್ವಯಂಭು ಮೊದಲಾದ ದಶಗಣ ಧರರಿಗೊಡೆಯನಾಗಿ ಭರತಾರ್ಯಖಂಡದೊಳು ಸಕಲಭವ್ಯಜನರನುದ್ಧರಿಸುತ್ತಂ ಸಮವಸರಣ ವಿಭೂತಿಯೊಳು ಅರುವತ್ತೊಂಬತ್ತು ವರುಷಗಳ ಮೇಲೆ ಎಂಟು ತಿಂಗಳುಗಳವರೆಗೆ ಸದ್ಧರ್ಮೋಪದೇಶಮಂ ಗೈದು ತದನಂತರಂ ಸಮ್ಮೇದಪರ್ವತದೊಳು ಸಮವಸಸರಣವಿಭೂತಿಯಂ ವಿಸರ್ಜಿಸಿ ಒಂದು ತಿಂಗಳ ಕಾಲಮಿರ್ದು ೮೫ ಅಘಾತಿಕರ್ಮಂಗಳಂ ಅಯೋಗಿಕೇವಲಿಗುಣ ಸ್ಥಾನದ ಚರಮಸಮಯದೊಳ್ಕೆಡಿಸಿ ಮುಕ್ತಿವಡೆದು ನಿರ್ವಾಣಕಲ್ಯಾಣಮಂ ಪಡೆದ ಪಾರ್ಶ್ವನಾಥಭಟ್ಟಾರಕರ ನೋಂಪಿಯಂ ನೋನಿ

ಎನಲಾ ನೋಂಪಿಯ ವಿಧಾನಮೆಂತೆನೆ – ಮುಂಪೇಳ್ದ ಕ್ರಮಮಂ ಸವಿಸ್ತರಮಾಗಿ ಪೇಳೆ ಕೇಳ್ದು ಸಂತುಷ್ಟಚಿತ್ತರಾಗಿ ಈರ್ವರುಂ ನೋಂಪಿಯಂ ಕೈಕೊಂಡು ಗುರುಗಳು ಬೀಳ್ಕೊಂಡು ಪುರಮನರಮನೆಯ ಪೊಕ್ಕು ಸುಖದಿಂದಿರ್ದು ನೋಂಪಿಯ ದಿನಂ ಬರೆ ನೋತುಜ್ಜಯಿಸಿ ತತ್ಫಲದಿಂ ಸಮಸ್ತ ವಿಭೂತಿಯಂ ಪಡೆದು ದರ್ಶಾನಿಕಾದಿ ಗೃಹಸ್ಥಧರ್ಮದೊಳ್ನಡೆಯುತ್ತಿ ರ್ದೊಂದು ದಿವಸಂ ವಿಚಿತ್ರತರ ಮೇಘಾಡಾಂಬರಮಂ ಕಂಡು ತತ್ಕಾಲದೊಳದೃಶ್ಯಮಾಗಲದು ವೈರಾಗ್ಯ ಹೇತುವಾಗೆ ಮೇಘರಥ ಮಹಾರಾಜಂ ವಿಷ್ಣು ಕುಮಾರಂಗೆ ಈ ರಾಜ್ಯಭಾರವನೊಪ್ಪಿಸಿಕೊಳ್ಳೆನೆ ಎಲೈ ತಂದೆಯೆ ನಿನಗಾಗಿ ಇಷ್ಟುದಿನ ಮಿರ್ದೆನಲ್ಲದೆ ನನಗಾಗಿ ಅಲ್ಲ ನನಗಿದರಲ್ಲಿ ಅಭಿಲಾಷೆಯಿಲ್ಲ ಎನೆ ಆತನ ತಮ್ಮ ಪದ್ಮರಥಂಗೆ ರಾಜ್ಯಬಾರಮಂ ಕೊಟ್ಟು ಬಾಹ್ಯಾಭ್ಯಂತರ ಪರಿಗ್ರಹರಹಿತರಾಗಿ ಸುಗ್ರಿವಾಚಾರ್ಯರ ಸಮೀಪದೊಳ್‌ ದಿಕ್ಷೆಯಂ ಕೈಕೊಂಡು ಸಕಲಾಗಮಧಾರಿಗಳಾಗಿ ಸಮ್ಯಗ್ಧರ್ಶನ ಜ್ಞಾನ ಚಾರಿತ್ರಂಗಳಂ ಅತಿಚಾರಮಿಲ್ಲದೆ ನಡೆಸಿ ನಿಜ ಗುರುಗಳೊಡನೆ ವಿಹರಿಸುತ್ತಂ ಬುದ್ಧ್ಯೋಷಧಿ ಮೊದಲಾದ ಸಪ್ತರ್ದ್ಧಿಸಮನ್ವಿತರಾಗಿ ಒಂದಾನೊಂದು ಪರ್ವತದ ಗುಹೆಯೊಳಿರ್ದರಿತ್ತಲ್‌

ಭರತಾರ್ಯಾಕಂಡದ ಅವಂತೀವಿಷಯದ ಉಜ್ಜೈನೀಪುರಮನಾಳ್ವ ವೃಷಭಸೇನಮಹಾರಾಜಂಗೆ ಬಲಿ ಬೃಹಸ್ಪತಿ ಶುಕ್ರರೆಂಬ ಮಂತ್ರಿಗಳಿರ್ದರ್‌ ಒಂದು ದಿನದೊಳಾ ಪುರದ ಬಹಿರುದ್ಯಾನಕ್ಕೆ ಅಕಂಪನಾಚಾರ್ಯರು ಮುನಿ ಸಮುದಾಯಂ ಬೆರಸು ಬಂದಿರಲದಂ ವನಪಾಲಕನಿಂದರಿದು ವೃಷಭಸೇನ ಮಹಾರಾಜಂ ವಂದಿಸಲು ಪೋಗೆ ಆ ಮೂವರು ಮಂತ್ರಿಗಳು ಕೂಡೆ ಪೋಗಿ ತಮ್ಮ ಮಿಥ್ಯಾಶಾಸ್ತ್ರದಿಂ ಅಕಂಪನಾಚಾರ್ಯರೊಡನೆ ವಾದವಂ ಮಾಡಿ ಸೋತು ಮುಖಭಂಗಿತರಾಗಿರ್ದು ಆ ರಾತ್ರಿಯೊಳು ಪ್ರತಿಮಾಯೋಗದೊಳಿರ್ದ ಅಕಂಪನಮುನೀಶ್ವರನಂ ಕೊಲ್ಲಲೆಂದು ಕತ್ತಿಯನೆತ್ತಿ ಪೊಯ್ವಸಮಯದೊಳು ವನದೇವತೆಯರ್ಬಂದು ಮಂತ್ರಿಗಳ ಹಸ್ತಪಾದಂಗಳಲ್ಲಿಯೇ ಕೀಲಿಸಿ ನಾನಾ ಬಾಧೆಯಂ ಮಾಡೆ ಸೂರ್ಯೋದಯಪರ್ಯಂತಮಲ್ಲಿಯೇ ಗೋಳಾಡುತ್ತಿರೆ ಸೂರ್ಯೋದಯಾನಂತರಮಾ ವಾರ್ತೆಯಂ ಚಾರರಿಂದರಿದು ವೃಷಭಸೇನ ಮಹಾರಾಜಂ ಬಂದಾ ಮುನೀಶ್ವರರಂ ಪೂಜಿಸಿ ಆ ಮಂತ್ರಿಗಳಂ ಕೊಲಲುದ್ಯುಕ್ತನಾದಾಗಳಾ ಮುನಿತಿಲಕಂ ಅಹಿಂಸಾಪರಮಧರ್ಮಮನುಪದೇಶಿಸೆ ಆಗಲಾ ಮಹಾರಾಜನಾ ಮೂವರಂ ಪೊರಮಡಿಸಲವರ್‌ ಪೋಗಿ ಹಸ್ತಿನಾಪುರಮನಾಳ್ವ ಪದ್ಮರಥರಾಜನೊಳು ಮಂತ್ರಿತ್ವಮಂ ಪಡೆದು ಸುಖದಿಂದಿರ್ಪನ್ನೆಗಂ ಒಂದು ದಿನಂ ಪದ್ಮರಥನ ಮೇಲೆ ಮ್ಲೇಚ್ಛದೇಶದ ರಾಜರು ದಂಡೆತ್ತಿ ಬರೆ ಅದಂ ಚರರಿಂದರಿದು ಪದ್ಮರಥ ತಾಂ ಯುದ್ಧಸನ್ನದ್ಧನಾಗಿ ಪೊರಮುಡುವ ಸಮಯದೊಳು ಬಲಿಯು ಬಂದು ಈ ಬೆಸನಮೆನಗೀವಿದೆಂದು ಪ್ರಾರ್ಥಿಸಿಕೊಂಡು ದಂಡೆತ್ತಿ ನಡೆದು ಶತ್ರುರಾಜರಂ ಜಯಿಸಿ ಅವರಿಂದ ಪದ್ಮರಥಂಗೆ ಕಪ್ಪಮಂತೆಗೆಯಿಸಿಕೊಂಡು ಬಂದು ಕಾಣಲೊಡಂ ಮಂತ್ರಿ! ನಿನ್ನ ಸಾಹಸಕ್ಕೆ ಮೆಚ್ಚಿದೆಂ. ನಿನ್ನಭೀಷ್ಟಮಂಬೇಡಿಕೊಳ್ಲು ಎನೆ, ಆಗಲಾ ಮಂತ್ರಿ ನೀನೀವ ಮೆಚ್ಚು ಭಂಡಾರದೊಳಿರಲಿ, ಎನಗೆ ಬೇಕಾದ ಸಮಯದೊಳವ ಪಾಲಿಸು ಎಂದು ಬಿನ್ನವಿಸೆ ಅಂತಾಗಲಿ ಎಂದಿರ್ಪ್ಪನ್ನೆಗಂ.

ಇತ್ತಲಾ ಅಂಕಪನಾಚಾರ್ಯ ಐನೂರು ಮಂದಿ ಮುನಿಸಮುದಾಯಂ ಬೆರಸು ನಾನಾದೇಶಂಗಳೊಳ್ವಿಹರಿಸುತ್ತಂ ಬಂದಾ ಪುರದ ಸಮೀಪದ ಸೌಮ್ಯಗಿರಿಯೊಳಿರ್ದುದನಾ ಬಲಿ ಬೃಹಸ್ಪತಿ ಶುಕ್ರ – ಮಂತ್ರಿಗಳರಿತು ಮುನ್ನಮೀ ಅಂಕಪನಮುನಿಯಿಂದೆಮನಾ ವೃಷಭಸೇನಂ ಪೊರಮಡಿಸಿದನಂ. ಅದಂ ಈಗ ಸಾಧಿಸುವೆವೆಂದು ಬಗೆದು ಪದ್ಮರಥನಲ್ಲಿಗೆ ಪೋಗಿ ಬಲಿಯು ಎನ್ನ ಮೆಚ್ಚನೀವುದು ಎನೆ ನಿಶ್ಚಯಂ ಬೇಡು ಎಂದು ಪದ್ಮರಥಂ ಪೇಳೆ ಸಪ್ತದಿನಪರ್ಯಂತಂ ರಾಜ್ಯದ ದೊರೆತನಮನೆನಗೆ ಪಾಲಿಸಬೇಕು ಎಂದು ಬಿನ್ನವಿಸೆ ಅಂತಾಗಲೆಂದು ದೊರೆತನಮಂ ಕೊಟ್ಟು ತಾಂ ಮಂದಿರದೊಳು ಸುಖದಿಂದಿರ್ಪುದುಂ ಬಲಿ ಬೃಹಸ್ಪತಿ ಶುಕ್ರ – ಮಂತ್ರಿಗಳು ಲೇಖನಂಗಳಂ ಕಳುಹಿಭೂಸುರನಿಕರಮಂ ಬರಿಸಿ ಆ ಸೌಮ್ಯಗಿರಿಯ ಗುಹದ್ವಾರದೊಳು ಸೌದೆಯ ಪೊರೆಗಳಂ ತಂದೊಡ್ಡಿಸಿ ಧೂಮೋತ್ಪತ್ತಿಗೆ ಕಾರಣಮಾದ ಕರೀಷ (ಬೆರಣಿ) ಮೊದಲಾದವರು ತರಿಸಿ ಅಗ್ನಿಸಂಧುಕ್ಷಣಮಂ ಮಾಡಿ ಘೃತತೈಲಂಗಳನೆರೆದು ಮಹಾದ್ಭುತಘ್ನಿಯುನುತ್ಪಾದಿಸಿ ಘೋರರೋಪಸರ್ಗಮಂ ಮಾಡುತ್ತ ತಾವೆಸಗುವ ಕಾರ್ಯಕ್ಕೆ ನಿರ್ವಿಘ್ನಾರ್ಥಮಾಗಿ ಬ್ರಾಹ್ಮಣನಿಕರಕ್ಕೆ ಸಮಾರಾಧನೆಯಂ ದಾನಮಂ ಜಪಮಂ ಯಜ್ಞಮಂ ಆ ಗಿರಿಯ ಸುತ್ತಲೂ ಮಾಡೆ ಆ ರಾತ್ರಿಯೊಳಲ್ಲಿಗೆ ಸಹಸ್ರಯೋಜನಾಂತರದೊಳು ಮುಂಪೇಳ್ದ ಸುಗ್ರೀವಾ ಚಾರ್ಯರು ಮೇಘರಥಮುನಿ ವಿಷ್ಣುಕುಮಾರಮುನಿ ಮೊದಲಾಗಿರಲಾ ರಾತ್ರಿಯೊಳು ಅಂಬರಮಂ ನೋಡೆ ಶ್ರವಣತಾರೆಯದ್ಭುತಮಾಗಿ ಕಂಪಿಸೆ ಅದಂ ನೋಡಿ ನಿಜಾವಧಿಬೋಧಮಂ ಪ್ರಯೋಗಿಸಿ ಮುನಿಯಪಸರ್ಗಮಂ ತಿಳಿದು ಹಸ್ತಿನಾಪುರದ ಸೌಮ್ಯಗಿರಿಯೊಳು ಅಕಂಪನಾಚಾರ್ಯ ರ್ಮೊದಲಾದೈನೂರು ಮುನಿಗಳಿಗೆ ಬಲಿ ಬೃಹಸ್ಪತಿ ಶುಕ್ರರು ಘೋರರೋಪಸರ್ಗಮಂ ಮಾಡಿದರಾ ಮುನಿಗಳುಪಶಮ ಮಹಿಮೆಯಂ ಕೊಂಡಾಡುವಲ್ಲಿ ಅಹಿಪತಿಗಳವಲ್ಲ. ಆ ಮುನೀಶ್ವರರುಪಸರ್ಗಮಂ ಪಿಂಗಿಪರಾರಾದೊಡಂ ನಮ್ಮೊಳಿರುವರೇ? ಎಂದು ನಮ್ಮ ಶಿಷ್ಯರಂ ಬೆಸಗೊಳೆಖಚರಬ್ರಹ್ಮಚಾರಿ ನಾಂ ಪೋಗಿ ಆ ಬಲಿಯಂ ಕೊಂದು ಕಿಚ್ಚಿಂ ನಂದಿಸಿ ಆ ಮುನಿಗಳುಪಸರ್ಗಮಂ ಪಿಂಗಿಸಿ ಬರ್ಪೆಂ ಎಂದು ಬಿನ್ನವಿಸೆ ನಮ್ಮ ಧರ್ಮಂ ಅಹಿಂಸಾಲಕ್ಷಣಮಪ್ಪುದರಿಂ ಕೊಲಲಾಗದು ಎಂದು ಆತನಂ ನಿಲಿಸಿ ಮತ್ತಾರುಂಟೆಂದು ವಿಚಾರಿಸೆ ವಿಷ್ಣುಕುಮಾರ ಮುನೀಶ್ವರನಿದಕ್ಕೆ ಮಹಾಸಮರ್ಥನೆಂದು ಗುಹಾಂತರದೊಳಿರ್ದ ಮುನಿಯಂ ಕರೆದು ಈ ಉಪಸರ್ಗಮಂ ಪಿಂಗಿಸು ಎಂದು ಪೇಳೆ ಮಹಾ ಪ್ರಸಾದಂ ಎಂದು ಪೊರಮಟ್ಟು ಆಕಾಶ ಚರಾಣರ್ದ್ಧಿಬಲದಿಂ ಆಕಾಶಮಾರ್ಗದೊಳು ಪೋಗಿ ಹಸ್ತಿನಾಪುರದ ರಾಜಭವನಮಂ ಪುಗಲಾ ಪದ್ಮರಥನಿದಿರ್ವಂದು ಸಾಷ್ಟಾಂಗವೆರಗಿ ಪೊಡಮಟ್ಟು ಮುಂದೆ ನಿಂದಿರಲಾತನಂ ಪರಸದೆ ಮೌನದೊಳಿರ್ದ ಮುನಿಯಂ ಕಂಡು ಸರಾಗ ವಿರಾಗಾಸಂಗಗಳೆರಡಂ ತಂದಿಡಲಾಗ ಎಲೈ ಪದ್ಮರಥ ನೀಂ ನಿನ್ನ ಮಂತ್ರಿಮುಖದಿಂ ಮುನಿಗಳ್ಗೆ ಘೋರೋಪಸರ್ಗಂಗಳಂ ಮಾಡಿಸುತ್ತ ಪಾಪಾಪಕೀರ್ತಿಗಳ್ಗೆ ಭಾಜನನಾಗಿ ನರಕಾದಿ ದುರ್ಗತಿಗೆ ದಾರಿಯಂ ಮಾಡಿಕೊಂಡು ನೀಂ ಗ್ರಹವಡರ್ದಂತೆ ರಾಜಭವನ ದೊಳಿರ್ದುದು ಲೇಸಾಯ್ತು ಎನೆ ಅವಂ ಭಯಗ್ರಸ್ತನಾಗಿ ನಡನಡುಗಿ ಆ ಬಲಿ ಬೃಹಸ್ಪತಿಶುಕ್ರರನೀಗಲೆ ಕೊಂದು ದಿಗ್ಬಲಿಯಂ ಕೊಡುವೆಂ ಎಂದು ಗದ್ದುಗೆಯ ಪೊಯ್ದು ಏಳುವಾಗಲ್‌ ಎಲೈ ಅರಸ ! ನೀಂ ಮುಂದುವರಿದೆ ರಾಜ್ಯ ಭಾರಮಂ ಕೊಟ್ಟೀಗೆಸಗುವ ಕಾರ್ಯಂ ತಕ್ಕುದಲ್ಲ ಎನೆ ಅಂತಾದೊಡಕ್ಕು ಪಾಯಮಾವುದೆಂದು ಬಿನ್ನವಿಸೆ ಇದಕ್ಕೆ ತಕ್ಕುದಂ ನಾನೇ ಆತಂಗೆ ಮಾಳ್ಪೆನೆಂದು ಅಲ್ಲಿಂ ಪೊರಮಟ್ಟು ಸೌಮ್ಯಗಿರಿಗಾಗಿ ಬರುತ್ತಂ ಮಾರ್ಗದೊಳು ಮುನ್ನ ತಾನುಪಸರ್ಗನಿವಾರಣ ನೋಂಪಿಯ ಫಲದಿಂ ಪಡೆದ ಸಪ್ತರ್ದ್ಧಿಯೊಳು ವಿಕ್ರಿಯರ್ದ್ಧಿಯಂ ಪ್ರಯೋಗಿಸಿ ಶಿಖಾ ಯಜ್ಞೋಪವೀತಾಂತ ರೀಯೋತ್ತರೀಯ ಮುಕುಟೋಪಯುಕ್ತ ರೂಪ ಶೋಭಿತ ವಾಮನ ಬ್ರಹ್ಮ ಚಾರಿಯಾಗಿ ಬಲಿಯಿರ್ದೆಡೆಗೆ ಬಂದು ಸ್ವಸ್ತಿ ಐಶ್ವರ್ಯಾದಿ ವೃದ್ಧಿರಸ್ತು ಎಂದು ಪರಸಿ ಎಲೈ ಬಲಿಶ್ರೇಷ್ಠನೆ! ನೀಂ ಮಹಾಯಜ್ಞಮಂ ಮಾಡಿಸಿಯವರವರ ಮನೋಭಿಲಾಷಿ ತಮಂ ಕೊಡುತ್ತಿರ್ದ ಪೆಯೆಂಬುದರಿಂ ನಾಂ ಬಂದೆ. ನನ್ನಭೀಪ್ಸಿತಮಂ ಸಲಿಸು ಎನೆ ಅಂತಾಗಲಿ ನಿಮ್ಮ ಮನದಭೀಷ್ಟಮಂ ಬೇಡಿ ಎನೆ ಆ ವಾಮನ ಬ್ರಹ್ಮಚಾರಿ ಯೆಂತೆಂದನೆಂದೊಡೆ :

|| ಎಲೈ ದ್ವಿಜಶ್ರೇಷ್ಠನೆ ಈಗಳ್
ಸಲೆ ಮಾಳ್ಪೆವು ಯಜ್ಞಹೋಮ ಜಪಮಂ ಮಾಡ
ಲ್ಕಲಸದೆಯೀವುದು ನೆಲಮಂ
ಸುಲಲಿತಮಾದೆಮ್ಮ ಪಾದದಿಂ ಮೂರಡಿಯಂ ||

ಇಂತು ಧನಮಂ ಧಾನ್ಯಮಂ ಕನ್ಯಾದಿಗಳಂ ಚಿಂತಿಸದೆ ಬೇಡಿದಡಿಗಳನಂತರಿಸದೆ ಕೊಟ್ಟೆಂ ನೀನಳೆಯೆಂದೆನಲಾಗ ಶುಕ್ರನಡ್ಡವಂದಡೆ ಮಾಣದೆ ಧಾರಾಪೂರ್ವಕಮಾಗಿ ಕೊಟ್ಟ ಭೂಮಿಯನಳೆವಾಗಳ್‌ ಆರರೆ! ವಾಮನಂ ಬೆಳೆದ ಸುರನಂದದಿ ನೀವೆಲ್ಲ ನೋಡಿ ನೋಡಿ ಇರದೀ ಕಥನಂ ತ್ವರಿತದಿಂ ಸುರಸಭೆಯಂ ಪೊಕ್ಕುದಾಗ ಅಂತು ಉಡುವಿಮಾನಂಬರಂ ಬೆಳೆದು ಮಾನುಷೋತ್ತರಗಿರಿಯೊಳೇಕ ಪಾದಮಂ ಅಂಬರದೊಳೇಕ ಪಾದಮಂ ಮಾಡಿ ಮತ್ತೊಂದಡಿಗವಾಕಾಶಮಿಲ್ಲದೆ ತಿರುಗುತಿರ್ದ ವಿಗುರ್ವಣ್ ಸಾಮರ್ಥ್ಯಮಂ ಕಂಡು ದೇವರ್ಕಳೆಲ್ಲ ಅಚ್ಚರಿಯಂ ಬಡುತ್ತ ತ್ರಿಪ್ರದಕ್ಷಿಣ ಗೈದು ನಾನಾರ್ಚನೆಗಳಿಂದರ್ಚಿಸಿ ವಿಗುರ್ವಣೆಯಮುಪ ಸಂಹರಿಸಿಸಿ ಕುಲಿಶಾಯುಧಂ ಬಲಿಗಾಜ್ಞೆಯಂ ಮಾಳ್ಪ ಸಮಯದೊಳು ಗಂಧರ್ವ ದೇವರ್ಕಳು ಗಾಂಧಾರಿ ಸಂಘೋಷಿಣಿಯೆಂಬೆರಡು ವೀಣೆಯಂತಂದು ಮುನಿಗುಣಂಗಳಾಂ ಕೀರ್ತಿಸೆ ಆ ಬಲಿ ಬೃಹಸ್ಪತಿ ಶುಕ್ರರು ಅತಿಭಯಸ್ಥರಾಗಿ ಮುನೀಶ್ವರನ ಪಾದಮಂ ಶರಣ್ಬುಗುವುದು ಶಚೀವಲ್ಲಭನಾ ಕಿಚ್ಚುಪೊಗೆಗಳಂ ಪರಿಹರಿಸಿ ನಿಜಾತ್ಮ ಧ್ಯಾನಮಾನಸ ಸರೋವರದೊಳು ಮುಳುಗಿರ್ದ ಮುನೀಶ್ವರನಂ ಪೂಜಿಸಿ ವಂದಿಸಿ ಆ ವೀಣೆಗಳಾಂ ಪದ್ಮರಥಂಗೆ ಕೊಡಿಸಿ ತನ್ನ ಲೋಕಕ್ಕೆ ಪೋದಂ. ಆ ಬಲಿ ಬೃಹಸ್ಪತಿ ಶುಕ್ರದಿಗಳ್‌‍ ಸದ್ಧರ್ಮ ಸ್ವರೂಪಮಂ ಕೇಳ್ದು ಸಮ್ಯಕ್ತ್ವ ಮಂ ಕೈಕೊಂಡರ್‌

ಇಂತಿದಂ ಪದ್ಮರಥಮೀ ನೋಂಪಿಯಂ ಕೈಕೊಂಡು ನೋಂತುಜ್ಜಯಿಸಿ ತತ್ಪಲಮನೈದಿದಂ ಆ ಸುಗ್ರೀವ ಮೇಘರಥ ವಿಷ್ಣು ಕುಮಾರ ಮುನಿಗಳು ಬಹುಕಾಲ ತಪಮಂ ಗೈದು ಗ್ರೈವೇಯಕ ಮೊದಲಾದ ಅಹಮಿಂದ್ರ ಲೋಕ ಮನೈದಿದರ್‌ ಮುಂದೆ ನಿರ್ವಾಣಪದಪ್ರಾಪ್ತರಪ್ಪರ್‌ ಎಂದು ಗೌತಮಸ್ವಾಮಿಗಳು ಶ್ರೇಣಿಕಂಗಂ ಚೇಳಿನಿಗಂ ನಿರೂಪಿಸೆ ಕೇಳ್ದು ಸಂತೋಷಂಬಟ್ಟು ತಾವೀರ್ವರುಮೀ ನೋಂಪಿಯಂ ಕೈಕೊಂಡು ಮಹಾವೀರಸ್ವಾಮಿಯಂ ಗೌತಮ ಮೊದಲಾದ ಋಷಿಸಮುದಾಯಮಂ ಬೀಳ್ಕೊಂಡು ಸಮವಸರಣದಿಂ ಪೊರಮಟ್ಟು ಮಹಾವಿಭೂತಿಯಂ ಪುರಮನರಮನೆಯಂ ಪೊಕ್ಕು ಸುಖಸಂಕಥಾ ವಿನೋದಿಂದಿರುತಿರ್ದ ಆ ನೋಂಪಿಯ ದಿನಂ ಬರೆ ತಾವೀರ್ವರುಂ ಯಥಾಕ್ರಮದಿಂ ನೋಂತುಜ್ಜಯಿಸಿ ಪಲವು ನಿಧಿನಿಧಾನಂಗಳಿಗೊಡೆಯರಾಗಿ ಶ್ರೇಣಿಕಂ ನರಕಾಯುಷ್ಯಮಂ ಜಘನ್ಯ ಸ್ಥಿತಿಗೆ ನಿಲಿಸಿ ಬಹುಕಾಲಪರ್ಯಂತಂ ರಾಜ್ಯ ಸುಖಮನನಭವಿಸುತ ಸುಖದಿಂದಿರ್ಪನ್ನೆಗಂ ಚೇಳಿನೀಮಹಾದೇವಿಗೆ ಗರ್ಭಮಾಗಿ ನಿಜವಲ್ಲಭನ ರಕ್ತಮಂ ಪೀರುವೆನೆಂಬ ಬಯಕೆಯಾಗಿ ತಾಂ ಭಯದಿಂದುಸುರದಿರೆ ಶರೀರಂ ಕೃಶಮಾಗೆ ಶ್ರೇಣಿಕಂ ಕಂಡು ನಿನ್ನ ಶರೀರಕೃಶಕ್ಕೇಂ ಕಾರಣಂ ಎಂದು ಬೆಸಗೊಳೆ ನಾಣ್ಚಿಪೇಳದಿರಲು ಮಂತ್ರಿಮುಖದಿಂ ವಿಚಾರಿಸಿ ತಿಳಿದು ರಹಸ್ಯದೊಳಾಕೆಯ ಬಯಕೆಯಂ ತೀರ್ಚಿಪೆನೆಂದಾಳೋಚಿಸಿ ಲೆಪ್ಪದಿಂ ನಿಜಸ್ವರೂಪಮಂ ಮಾಡಿಸಿ ಅಲತಿಗೆಯ ರಸಮಂತುಂಬಿಸಿ ವಸ್ತ್ರದಿಂ ಚೇಳಿನಿಯ ಮುಖಮಂ ಮುಚ್ಚಿ ಕೈಯೊಳ್‌ ಚೂರಿಯಂ ಕೊಟ್ಟು ನಿನ್ನ ಗರ್ಭದೊಳಾದ ಬಯಕೆಯಂ ತೀರ್ಚು ಎನೆ ಅಂತೆಗೈದು ಮೂರ್ಛಿತಳಾಗೆ ಶ್ರೇಣಿಕನ ಶೈತ್ಯೋಪಚಾರದಿರೆಚ್ಚುತು ಶ್ರೇಣಿಕಂ ಬಂದು ಪುತ್ರಮುಖಾವಲೋಕನಂ ಗೈದು ಆ ಶಿಶುವು ಕ್ರೋಧದಿಂ ಭ್ರುಕುಟಿಪುಟ ರಕ್ತಲೋಚನವಾಗಿ ಔಡಂ ಕಚ್ಚಿ ಅರಸಂ ತಿರುಗಿ ಪೋಗಲಾ ಶಿಶುವಂ ವನದೊಳ್ಪಿಸಾಡಿಸೆ ಶ್ರೇಣಿಕನದಂ ಕೇಳಿ ತಿರುಗಿ ತರಿಸಿ ಕುಣಿಕನೆಂದು ಪೆಸರಿಟ್ಟು ದಾದಿಯರಾ ಶಿಶುವಂ ಸಲಹುತ್ತಿರಲಾ ಚೇಳಿನಿಗೆ ವಾರಿಷೇಣ ಮೊದಲಾದ ಪುತ್ರರಾಗಿ ಮತ್ತೊಂದು ದಿವಸಂ ಮಹಾವಿಭವದಿಂ ಸಮವಸರಣಮನೈದಿ ಮಹಾವೀರಸ್ವಾಮಿಯನರ್ಚಿಸಿ ಗಣಧರಾದಿ ಮುನಿಗಳಂ ವಂದಿಸಿ ಸ್ವಯೋಗ್ಯಕೋಷ್ಠದೊಳ್ಕುಳ್ಳಿರ್ದು ಧರ್ಮ ಶ್ರವಣಾನಂತರಂ ಶ್ರೋತೃ ಮುಖ್ಯನಪ್ಪ ಶ್ರೇಣಿಕ ಮಹಾಮಂಡಲೆಶ್ವರಂ ಮಹಾವೀರ ಸ್ವಾಮಿಗಭಿಮುಖನಾಗಿ ತನ್ನ ಭವಾವಳಿಯಂ ಬೆಸಸಿಮೆಂದು ಬಿನ್ನವಿಸೆ ಅವರಿಂತೆಂದು ನಿರೂಪಿಸಿದರು.

ನಿನ್ನೀ ಭವಕ್ಕೆ ಪಿಂದೆ ತೃತೀಯಭವದೊಳ್‌ ಗಿರಿಯ ಕೂಟಜವನದೊಳು ಖದಿರಸಾಗರನೆಂಬ ಪುಳಿಂದನಾಯಕನಾಗಿರ್ದೊಂದು ದಿನಂ ಸಮಾಧಿ ಗುಪ್ತ ಮುನಿಯುಪದೇಶದಿಂ ಮಧು ಮದ್ಯ ಮಾಂಸ ನಿವೃತ್ತಿಯ ಫಲಂಗಳಂ ಸವಿಸ್ತರಂ ಕೇಳ್ದು ಕಾಗೆಯ ಮಾಂಸವ್ರತಮಂ ಕೈಕೊಂಡು ನಡೆಸುತ್ತಿರೆ ಕರ್ಮವಶದಿಂ ವ್ಯಾದಿಗ್ರಸ್ತನಾಗಿ ಕಾಗೆಯ ಮಾಂಸದಿಂದೌಷಧಂ ಮಾಡೆ ವ್ಯಾದಿ ಮಾಣ್ಗು ಮೆಂದು ವೈದ್ಯರ್ಪೆಳೆ ಕೇಳದೆ ತಾಂ ಮೊದಲು ಕೈಕೊಂಡ ವಾಯಸಮಾಂಸ ವ್ರತಮನೆ ಪಾಲಿಸುತ್ತಿರುವಾಗಲ್‌ ತನ್ನ ಮೈದುನನಪ್ಪ ಸರಪುರಮನಾಳ್ವ ಸೂರವೀರನೆಂಬ ಪುಳಿಂದಂ ಖದಿರಸಾಗರಂಗೆ ಬೋಧಿಸಲ್ಪರುತಿರೆ ಮಧ್ಯದೊಳೊಂದೆಡೆಯೊಳು ವನದ ವೃಕ್ಷಮೂಲದೊಳು ಅಳುತಿರ್ದ ಯುವತಿಯಂ ಕಂಡು ಇದೇಕೆ ಅಳುತಿರ್ಪೆ? ಎಂಬುದುದುಂ ಆಗಳಾ ಯುವತಿ ಆ ವನದೇವತೆ – ಯಕ್ಷಿ. ನಿನ್ನ ಮೈದುನಂ ವಾಯಸ ಮಾಂಸವ್ರತದ ಫಲದಿಂದೆನಗೆ ಮುಂದೆ ವಲ್ಲಭನಕ್ಕುಮದಂ ನೀಂ ಪೋಗಿ ತಪ್ಪಿಸುತ್ತಿರ್ದಪೆ ಎನೆ ಅಂತಾದೊಡೆ ನಾಂ ವಿಘ್ನಮಂ ಮಾಡೆನೆಂದು ಪೇಳ್ದು ಬಂದು ಕಂಠಗತಪ್ರಾಣನಾಗಿರ್ದ ಖದಿರಸಾಗರನಂ ಕಂಡು ನಾನಾ ವಿಧದಿಂದೊಡಂಬಡಿಸೆ ಕೇಳದಿರಲಾ ಯಕ್ಷಿ ಪೇಳ್ದ ಕಥನಮಂ ಪೇಳೆ ಕೇಳ್ದು ಸಂತುಷ್ಟಚಿತ್ತನಾಗಿ ಮುನ್ನ ಮುನಿನಿರೂಪಿತಮಾದ ಮಧುಮದ್ಯಾದಿ ನಿವೃತ್ತಿಯೆಲ್ಲಮುಂ ನನಗಿರಲಿ ಎಂದು ಸಂಕಲ್ಪಿಸಿ ಪರಿತ್ಯಕ್ತ ಶರೀರನಾಗಿ ಆ ದೃಢ ವ್ರತಫಲದಿಂ ಸೌಧರ್ಮಕಲ್ಪದೊಳು ದೇವನಾಗಿ ಪುಟ್ಟಿ ಎರಡು ಸಾಗರೋಪಮಕಾಲಪರ್ಯಂತಂ ದಿವ್ಯ ಸುಖಮನನುಭವಿಸಿ ಬಂದಿಲ್ಲಿ ರಾಜಗೃಹ ನಗರಮನಾಳ್ವ ಶ್ರೇಣಿಕನಾಗಿ ಪುಟ್ಟಿ ಇಂತಪ್ಪ ಮಹಾಮಂಡಲೆಶ್ವರ ಪದವಿಯಂ ಪಡೆದು ನೀನೀಗ ಸಮವಸರಣದ ಧರ್ಮೋಪದೇಶಕ್ಕೆ ಶ್ರೋತೃ ಮುಖ್ಯನಾದೆ

ಗೌತಮಗಣಧರರ್ಪೇಳ್ದೀ ಕತನಮಂ ಸ್ರೇವಿಕಮಹಾಮಂಡಲೆಶ್ವರಂ ಕೇಳ್ದು ಎನಗೆ ಸಕಲಕರ್ಮಕ್ಷಯದೊಳು ಜನಿಸುವ ಸಮ್ಯಕ್ತ್ವಾದ್ಯಷ್ಟಗುಣ ವಿಶಿಷ್ಟಮಪ್ಪ ಮುಕ್ತಿಸ್ಥಾನಮೆಂದಕ್ಕು ಮೆಂದು ಬಿನ್ನವಿಸೆ ಎಲೈ ಭವ್ಯೋತ್ತಮ ನೀನೀಗಿಲ್ಲಿಯೇ ದರ್ಶನಮೋಹನೀಯಕರ್ಮದ ಭೇದಂಗಳಪ್ಪ ಮಿಥ್ಯಾತ್ವ ಸಮ್ಯಜ್ಞೆಥ್ಯಾತ್ವ ಸಮ್ಯಕ್ತಪ್ರಕೃತಿ ಚಾರಿತ್ರಮೋಹನೀಯ ಕರ್ಮದ ಭೇದಂ ಗಳಪ್ಪ ಅನಂತಾನುಬಂಧಿಕ್ರೋಧ ಮನಮಾಯಾ ಲೋಭಂಗಳೇಂಬೀ ಸಪ್ತ ಪ್ರಕೃತಿಗಳಾಂ ಅಧಃಪ್ರವೃತ್ತಿಕರಣ ಅಪೂರ್ವಕರಣ ಅನಿವೃತ್ತಿಕರಣಗಳೇಂಬ ಕರಣ ತ್ರಯಂಗಳಿಂ ನಿಃಶೇಷಮಾಗಿ ಕೆಡಿಸಿ ಕ್ಷಾಯಿಕಸಮ್ಯಗ್ದೃಷ್ಟಿಯಾಗಿ ದರ್ಶನ ವಿಶುದ್ಧ್ಯಾದಿ ಷೋಡಶಭಾವನೆಗಳಾಂ ಭಾವಿಸುವೆಯಪೊಡೆ ಈ ಭರತಕ್ಷೇತ್ರದೊಳು ಮುಂದೆ ನಿತ್ಸರ್ಪಿಣಿಯ ಚತುರ್ಥಕಾಲದ ಮೊದಲೊಳು ಮಹಾಪದ್ಮನೆಂಬ ಪೆಸರನುಳ್ಳ ಪ್ರಥಮತೀರ್ಥಂಕರ ಪರಮದೇವನಾಗಿ ಪಂಚಕಲ್ಯಾಣಂಗಳಿಗೊಡೆಯನಾಗಿ ಪರಮಮುಕ್ತಿಶ್ರೀಗೆ ವಲ್ಲಭನಪ್ಪೆ ಎಂದು ನಿರೂಪಿಸೆ ಅಂತೆಗೈದು ತೀರ್ಥಕರನಾಮಪುಣ್ಯಮಂ ಬಂಧಿಸಿಕೊಂಡು ಮಹಾವೀರಸ್ವಾಮಿಯಂ ಗೌತಮಗಣಧರಾದಿ ಮುನಿಸಮುದಾಯಮಂ ಬೀಳ್ಕೊಂಡು ಪರಮಾನಂದದಿಂ ಪುರಮನರಮನೆಯಂ ಪೊಕ್ಕು ಸುಖದಿಂದಿರ್ಪನ್ನೆಗಂ ಅಭಯಕುಮಾರಂ ಮೊದಲಾದವರೆಲ್ಲಂ ಭಕ್ತಿಯಿ ಜಿನಪಾದಯುಗಮಂ ಪೂಜಿಸಿ ತಂತಮ್ಮ ಭವಾಳಿಯಂ ಕೇಳ್ದು ವೈರಾಗ್ಯಪರಾಯಣರಾಗಿ ಮುನಿದೀಕ್ಷೆಯಂ ಧರಿಸಿ ಪರಮೋತ್ಕೃಷ್ಟತಪದೊಳ್‌ ನೆಗಳ್ದು ಮುಕ್ತಿವಧೂವಲ್ಲಭರಾಗೆ ಶ್ರೇಣಿಕ ಮಹಾಮಂಡಲೆಶ್ವರಂ ತನ್ನ ರಾಜ್ಯಭಾರಮೆಲ್ಲಮಂ ಕುಣಿಕಕುಮಾರಂಗೊಪ್ಪಿಸಿ ತಾಂ ದಾನಪೂಜಾದಿಗಳೋಳ್‌ ತತ್ಪರನಾಗಿ ರಾಜಾಲಯದೊಳಿರ್ಪನ್ನೆಗೆಂ ಕುಣಿಕಂ ಪ್ರಬಲನಾಗಿ ಪೂರ್ವಭವವೈರಸಂಬಂಧದಿಂ ಶ್ರೇಣಿಕನಂ ಪಿಡಿದಸಿಯ ಪಂಜರದೊಳಿಕ್ಕಿ ಪ್ರತಿದಿನಂ ನಾನಾ ದಂಡನೆಗಳೀಂ ದಂಡಿಸುತಿರ್ಪುದುಂ ಚೇಳಿನೀ ಮಹಾದೇವಿ ಕುಣಿಕನ ಸಮೀಪಕ್ಕೆ ಪೋಗಿ ನಾನಾಪ್ರಕಾರದಿಂದೊಡಂಬಡಿಸಿ ಶ್ರೇಣಿಕನಂ ಬಿಡೆಂದು ಪೇಳೆ ಅಂತೆ ಗೈವೆನೆಂದು ಕುಣಿಕಂ ಶ್ರೇಣಿಕನ ಅಸಿಪಂಜರದ ಸಮೀಪಕ್ಕೆ ಬರೆ ಆ ಕುಣಿಕನಂ ದೂರದೊಳೆ ಕಂಡು ಈತಂ ಬಂದು ಮುನ್ನಿನಂತೆ ನಿಗ್ರಹಂಗೈವನೆಂದು ಬಗೆದು ಅಲ್ಲಿಯ ಆಯುಧದ ಮೇಲೆ ಬಿದ್ದು ಆತ್ಮಘಾತಮಂ ಮಾಡಿಕೊಂಡು ಗತಪ್ರಾಣನಾಗಿ ಪ್ರಥಮ ನರಕದೊಳ್ಜನಿಸಿ ಸಂಖ್ಯೇಯವರ್ಷ ಜಘನ್ಯಾಯುಷ್ಯ ಸ್ಥಿತಿಯನನುಭವಿಸುತ್ತಿಹನು.

ಇತ್ತ ಚೇಳಿನೀ ಮಹಾದೇವಿ ದೀಕ್ಷೆಯಂ ಕೈಕೊಂಡು ಉಗ್ರೋಗ್ರತಪದೊಳ್ನೆಗಳ್ದು ಆಯುಷ್ಯಾವಸಾನದೊಳ್‌ ಸಮಾಧಿವಿಧಿಯಿಂ ಮಡಿದು ಅಚ್ಯುತಕಲ್ಪದೊಳ್‌ ದೇವನಾಗಿ ಜನಿಸಿರ್ಪಳು ಮತ್ತಾಕುಣಿಕಂ ತನ್ನ ತಂದೆಗೆ ಮಾಡಿರ್ದ ಅಪರಾಧಕ್ಕೆ ತನ್ನಂ ತಾನೆ ನಿಂದಿಸಿಕೊಳುತ್ತ ಮತ್ತೊಂದು ದಿವಸಂ ಆ ದೋಷ ಪರಿಹಾರರ್ಥಮಾಗಿ ಜಿನಭವನಮಂ ಕಟ್ಟಿಸಿ ಸಮ್ಯಗ್‌ ವ್ರತಂಗಳಂ ಸ್ವೀಕರಿಸಿ ಸುಖದಿಂದಿರ್ದನಿತ್ತಲಾ ಮಹಾವೀರಜಿನನಾಥರ್‌ ತ್ರಿಂಶದ್ವರ್ಷಂಬರಂ ವಿಹರಿಸಿ ಪಾವಾಪುರದ ಬಹಿರುದ್ಯಾನದೊಳ್‌ ಸಮವಸರಣಮಂ ವಿಸರ್ಜಿಸಿ ಪದ್ಮಕೈರವಂಗಳಿಂ ಹಂಸ ಶುಕ ಪಿಕ ಭ್ರಮರ ನಾದಂಗಳಿಂ ಕೂಡಿದ ನಾನಾ ವೃಕ್ಷಲತೆಗಳೀಂ ಪರಿವೃತಮಾದಿ ಸರೋವರದ ಮಧ್ಯದೊಳ್ನಿಂದು ಕಾರ್ತ್ತಿಕಮಾಸದ ಕೃಷ್ಣಪಕ್ಷದ ಚತುರ್ದಸಿಯ ಅಂತ್ಯಮನೋಹರಜಾವದೊಳ್‌ ವ್ಯುಪರತಕ್ರಿಯಾನಿವೃತ್ತಿಯೆಂಬ ಚತುರ್ಥಶುಕ್ಲಧ್ಯಾನದ ಬಲದಿಂದ ಯೋಗಿಕೇವಲಿಗುಣಸ್ಥಾನದ ಉಪಾಂತ್ಯಸಮಯದೊಳ್‌ ೭೨ ಅಘಾತಿಕರ್ಮಪ್ರಕೃತಿಗಳಾಂ ನಾಶಮಾಡಿ ತದನಂತರಂ ಅಂತ್ಯ ಸಮಯದೊಳ್‌ ತೀರ್ಥಕರನಾಮಕರ್ಮ ಮೊದಲಾದ ತ್ರಯೋದಶಪ್ರಕೃತಿಗಳಾಂ ನಾಶಮಾಡಿ ಏಕಸಮಯದೊಳ್‌ ಈಷತ್ಪ್ರಾಗ್ಫಾರಮೆಂಭಷ್ಟಮ ಪೃಥ್ವಿಯ ನಡುವಣ ಗೋಲಾಕಾರ ಸ್ಫಟಿಕಮಯಸಿದ್ದಶಿಲೆಯ ಮೇಲೆ ಘನೋದಧಿ ಘನಾನಿಲಗಳ ಮೇಲಣ ತನುವಾತಾಗ್ರದೊಳ್ನಿಂದು ಕಿಂಚಿನ್ನ್ಯೂನಚರಮ ಶರೀರಪ್ರಮಾಣ ಜೀವಘನಾಕಾರಮನುಳ್ಳವನಾಗಿ ಸಮ್ಯಕ್ತಾದ್ಯಷ್ಟಗುಣವಿಶಿಷ್ಟನಾಗಿ ಪರಮಮುಕ್ತಿವಲ್ಲಭನಾಗಲಾ ಶಚೀವಲ್ಲಭ ಪ್ರಭುತಿ ಸಮಸ್ತಸುರರೈತಂದು ನಿರ್ವಾಣಕಲ್ಯಾಣಮನೊಡರ್ಚಿ ಪರಮಾನಂದ ತುಂದಿಲರಾಗಿ ತಂತಮ್ಮ ಲೋಕಕ್ಕೆ ಪೋದರ್‌

|| ನರಕೋತ್ಕೃಷ್ಟಸ್ಥಿತಿಯಂ
ನೆರೆ ಕೆಡಿಸಿ ಜಗತ್ಪುಣ್ಯ ಸ್ಥಿತಿಯೊಳ್ನಿಂದಂ
ಇರದೀ ನೋಂಪಿಯ ಫಲದಿಂ
ವರ ತೀರ್ಥಕರತ್ವ ಕರ್ತೃವಾದಂ ನಿಜದಿಂ ||

ಇಂತೀ ನೋಂಪಿಯನೊಲವಿಂ
ಸಂತಸದೆ ಭಕ್ತಿಪೂರ್ವಕಂ ನೋಂತವರ್ಗಂ
ಕಂತುಹರಪಾರ್ಶ್ವಜಿನವರ
ನಂತರಸದೆ ಕೊಡುಗೆ ಶುದ್ಧ ಶಿವಪದಮನಘಂ ||

ಇಂತೀ ನೋಂಪಿಯ ಕಥೆಯಂ
ಸಂತತಮೊಡನೊಡನೆ ಕೇಳಿ ಭಾವಿಪ ಜನಗಳ್

ಸಂತೋಷಾಕರರಪ್ಪರ್
ತಾ
ಮುಂ ತಡೆಯದೆ ನಿತ್ಯರಾಗಿ ಸಿದ್ಧರ ನೆಲೆಯೊಳ್
||

ಧರಣೀ ವಂದ್ರಾರ್ಕ ತಾರಾ ಜಲಧಿ ಕುಲಕುಬೃತ್ಸ್ವರ್ಗ ಪಾತಾಳವೆಂತುರ
ಸ್ಥಿರಮಾಗಿರ್ಪಂತೆ ತಾನುಂ ಕಥಿತಕಥನಮುಂ ಸರ್ವಲೋಕಪ್ರಸಿದ್ಧಂ
ಪರಮಾನಂದಪ್ರದಾನಂ ಸುರನರಖೇಚರೇಶತ್ವ ಭೋಗೀಶ್ವರತ್ವಂ
ನೆರೆ ಮಾಳ್ಪೀ ಜೈನಧರ್ಮಂ ಸಕಲಭುವನದೊಳ್
ಶ್ರೇಷ್ಠಮಾಗಿರ್ಕೆ ನಿತ್ಯಂ ||

ಇಂತೀ ಉಪಸರ್ಗನಿವಾರಣ ನೋಂಪಿಯಂ ಭಕ್ತಿಪೂರ್ವಕಮಾಗಿ
ನೋಂತವರ್ಗಂ ನೋನಿಸಿದವರ್ಗಂ ಪೇಳ್ದವರ್ಗಂ ಒಡಂಬ
ಟ್ಟವರ್ಗಂ ಸ್ವರ್ಗಮೋಕ್ಷಂಗಳಪ್ಪುವೆಂಬುದಿದು
ಸಿದ್ಧಾಂತಂ
ಮಂಗಳಮಹಃ
ಜಯತು ಜಿನಶಾಸನಂ