|| ಶ್ರೀ ವೃಷಭನಾಥಾಯ ನಮಃ ||

          ಕಂ || ಶ್ರೀಮದ್ವೀರ ಜಿನೇಂದ್ರಂ
ಗಾಮೊಲಿದೆರಗೀ ಸರ್ವಜ್ಞ ಸಂಪತ್ಕರಮೆಂ
ಬೀವಿಧದ ನೋಂಪಿಯಂ ತಾಂ
ಭಾವಿಸಿ ಭವ್ಯರಿಗೆ ಪೇಳ್ವೆನತಿಮುದದಿಂದಂ ||

ವ || ಅದೆಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರದೊಳುಮಗಧದೇಶವೆಂಬುದು ನಾಡು ರತ್ನಭೂಷಣಮೆಂಬುದು ಪೊಳಲದನಾಳ್ವಂ ರತ್ನಶೇಖರ ಮಹಾರಾಜನಾತನ ಪಟ್ಟದರಸಿ ರತ್ನಮಂಜೂಷೆಯೆಂಬಳು ಅಂತವರೀರ್ವ್ವರುಂ ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತ ಮಿರಲೊಂದು ದಿವಸಂ ವನಪಾಲಕನನೇಕಪುಷ್ಪ ಫಲಂಗಳಂ ಕೊಂಡು ಬಂದು ದೇವಾ ಬಿನ್ನಪ ಪಶ್ವಿಮ ದಿಗ್ಭಾಗದ ಪಶ್ಚಿಮಗಿರಿಯಲ್ಲಿಗೆ ವರ್ದ್ಧಮಾನ ಸ್ವಾಮಿಗಳ ಸಮವಸರಣಂ ಬಂದುದೆಂದು ಬಿನ್ನವಿಸೆ ಕೇಳ್ದು ಹರ್ಷೋತ್ಕರ್ಷ ಚಿತ್ತನಾಗಿ ಆ ದೆಶೆಗೇಳಡಿಯಂ ನಡೆದು ಸಾಷ್ಟಾಂಗಮೆರಗಿ ಆನಂದಭೇರಿಯಂ ಪೊಯ್ಸಿ ಪರಿಜನ ಪುರಜನಸಹಿತ ಪೋಗಿ ದೂರಾಂತರದಿಂ ವಾಹನಮುನಿಳಿದು ಸಮವಸರಣಂ ಪೊಕ್ಕು ಗಂಧಕುಟಿಯಂ ತ್ರಿಃ ಪ್ರದಕ್ಷಿಣಂಗೆಯ್ದು ವಸ್ತುಸ್ತವ ರೂಪವಸ್ತವಗುನಸ್ತವಂನಂಗಳಿಂ ಸ್ತುತಿಯಿಸಿ ದಿವ್ಯಾರ್ಚನೆಗಳಿಂದರ್ಚಿಸಿ ಗೌತಮಸ್ವಾಮಿಗಳ್ಗೆ ಅರ್ಚನೆಯಂ ಮಾಡಿ ವಂದನೆಯಂ ಮಾಡಿ ಋಷಿಸಮುದಾಯಮಂ ಗುರುಪರಿವಿಡಿಯಿಂ ವಂದಿಸಿ ತನದನಂತರ ಮನುಷ್ಯಕೋಷ್ಠದೊಳ್ಕುಳ್ಳಿರ್ದು ನಿರ್ಮ್ಮಳಚಿತ್ತದಿಂ ಧರ್ಮ್ಮಶ್ರವಣಮಂ ನೋಂಪಿಯಂ ಬೆಸಸಿಮೆನಲವರಿಂತೆಂದರು ಎಲೆಮಗಳೆ ಎಲ್ಲಾ ನೋಂಪಿಗಳೊಳತಿಶಯಮಪ್ಪ ಸರ್ವ್ವಜ್ಞ ಸಂಪತ್ಕರಮೆಂಬ ನೋಂಪಿಯುಂಟು ಆ ನೋಂಪಿಯಂ ನೋನುವುದೆನಲದರ ವಿಧಾನಮೆಂತನೆ ಆವರಿಂತೆಂದು ಬೆಸಸಿದರು ಶ್ರಾವಣಶುದ್ಧ ಅಷ್ಟಮಿಯ ದಿನದೊಳು ನೋಂಪವರೆಲ್ಲಂ ದಂತಧಾವನ ಸ್ನಾನಮಂಮಾಡಿ ಧೌತವಸ್ತ್ರಮನುಟ್ಟು ಶುಚಿರ್ಭೂತರಾಗಿ ಚೈತ್ಯಾಲಯಕ್ಕೆ ಬಂದು ಚತುರ್ವ್ವಿಂಶತಿ ತೀರ್ತ್ಥಕರಿಗೆ ಪಂಚಾಮೃತದಿಂದಭಿಷೇಕಮಂ ಅಷ್ಟವಿಧಾರ್ಚನೆಯಂ ಮಾಡಿ ಪಂಚಭಕ್ಷ ಪಾಯಸದಿಂ ಚರುವನಿಟ್ಟು ಶ್ರುತಗುರು ಪೂಜೆಯಂ ಮಾಡಿ ಸಮ್ಯಕ್ತ್ವಪೂರ್ವಕಮಾಗಿ ನೋಂಪಿಯಂ ಕೈಕೊಂಬುದು ಆದಿನಂ ಮೊದಲಾಗಿ ನಾಲ್ಕು ತಿಂಗಳ ಪರ್ಯ್ಯಂತಂ ದಿನಂಪ್ರತಿ ದೇವರಿಗಭಿಷೇಕಾಷ್ಟವಿಧಾರ್ಚನೆಯಂ ಮಾಡುವುದು ಸಂಜೆಯದೀವಿಗೆಯಂ ಬೆಳಗುವುದು ಮೂರು ಪಿಡಿಯಕ್ಕಿಯ ಪುಂಜಮನಿಕ್ಕುವುದು ಮೂರುಮಡಕೆಯೊಳು ಎಲೆದೊರಕಿದಂಥಾ ಫಲವಸ್ತುವನರ್ಚಿಸುವುದು ಕಥೆಯಂಕೇಳ್ದು ಉಪವಾಸಮಂ ಕೈಕೊಂಬುದು ಅರದೋಡೇಕಭುಕ್ತಮಂ ಕೈಕೊಂಬುದು ಅಷ್ಟಮಿಯ ಪರ್ವದೊಳು ವಂದು ಭಕ್ಷಸಹಿತಂ ಚರುವನಿಡುವುದು ಕಡೆಯ ಅಷ್ಟಮಿಯೊಳುದ್ಯಾಪನೆಯಂ ಮಾಳ್ಪಕ್ರಮಮೆಂತೆಂದೊಡೆ ಇಪ್ಪತ್ತುನಾಲ್ಕು ತೀರ್ತ್ಥಕರಿಗೆ ಅಭಿಷೇಕಮಂ ಮಾಡಿ ಅಷ್ಟವಿಧಾರ್ಚನೆಗೆ ಅಯ್ದುಪರಿಯಭಕ್ಷ ಸೇವಗೆಯಪಾಯಸ ಕಲಸೋಗರ ತೆಂಗಿನಕಾಯಿ ಬಾಳೆಹಣ್ಣು ನೆನಗಡಲೆ ಚಿಗುಳಿ ತಂಬಿಟ್ಟುಸಹಿತಂ ವಂದೊಂದುಭಕ್ಷದಲ್ಲೂ ವಂಭತ್ತೊಂಭತ್ತು ಅಷ್ಟವಿಧಾರ್ಚನೆಯಂ ಮಾಡುವುದು ಶ್ರುತಕ್ಕೆ ಸ್ರುತವಸ್ತ್ರಸಹಿತಂ ಐದುಭಕ್ಷ ಪಾಯಸ ಕಲಸೋಗರ ತೆಂಗಿನಕಾಯಿ ಬಾಳೆಹಣ್ಣುಸಹಿತಂ ಶ್ರುತಕ್ಕರ್ಚ್ಚನೆಯಂ ಮಾಡುವುದು ಆಚಾರ್ಯ್ಯರ್ಗ್ಗೆ ನಾಲ್ಕುನಾಲ್ಕು ಭಕ್ಷ ಪಾಯಸ ಕಲಸೋಗರ ತೆಂಗಿನಕಾಯಿ ಬಾಳೆಹಣ್ಣುಸಹಿತಂ ಅರ್ಚನೆಯಂ ಮಾಡುವುದು ಬ್ರಹ್ಮಂಗೆ ತೈಲಾಭಿಷೇಕಮಂ ಮಾಡುವುದು ಭಕ್ಷಸಹಿತಂ ಎಲ್ಲವನ್ನು ಚರುವನಿಟ್ಟು ಪದ್ಮಾವತಿಗೆ ಗಂಧ ಚಂದ್ರ ಭಕ್ಷ ಬಿಚ್ಚೋಲೆ ಸಹಿತಂ ಅರ್ಚನೆಯಂ ಮಾಡುವುದು ಆಚಾರ್ಯ್ಯರಿಂಕಥೆಯಂ ಕೇಳಿ ಕಥಕನಂ ಪೂಜಿಸುವುದು ಉಪವಾಸಮಂ ಕೈಕೊಂಬುದು ಅರದೊಡೇಕ ಠಾಣದಿಂದೇಭುಕ್ತಮಂ ಮಾಳ್ಪುದು ಐದುತಂಡ ಋಷಿಯರ್ಗ್ಗೆ ಭಕ್ಷಪಂಚ ಪಂಚಪಾಯಿಸದಿಂ ಚರಿಗೆಯಂಮಾಡಿಸಿ ತಟ್ಟುಕುಂಚ ಗುಂಡಿಗೆ ಠವಣೆಕೋಲು ಶ್ರುತಪಾವಡೆಸಹಿತಂ ಕೊಂಡು ಕೊಡುವುದು ಐವರಜ್ಜಿಯರ್ಗ್ಗೆ ಉಡಕೊಡುವುದು ಚಾತುರ್ವ್ವಣ್ನಕ್ಕಾಹಾರದಾನ ಸುವರ್ಣ್ನದಾನಮಂ ಮಾಡುವುದು ಯಿದು ಉದ್ಯಾಪನೆಯ ಕ್ರಮಮೆಂದುಪೇಳೆ ಕೇಳ್ದು ಸಂತುಷ್ಟಚಿತ್ತೆಯಾಗಿ ನೋಂಪಿಯಂ ಕೈಕೊಂಡು ನೋಂತು ಉದ್ಯಾಪನೆಯಂ ಮಾಡಿ ಸಂಸಾರಶರೀರಕ್ಕೆ ಪೇಸಿ ವೈರಾಗ್ಯಪರಾಯಣೆಯಾಗಿ ಜಿನದೀಕ್ಷೆಯಂ ಕೈಕೊಂಡು ಉಗ್ರೋಗ್ರತಪಮಂ ಮಾಡಿ ಅಚ್ಚುತಕಲ್ಪದೋಳ್ಪುಟ್ಟಿ ಅಲ್ಲಿಯದಿವ್ಯ ಸುಖಮನನುಭವಿಸಿ ಬಂದಿಲ್ಲಿ ಚಕ್ರವರ್ತ್ತಿ ಪದವಿಯಂ ಕೈಕೊಂಡು ಷಟ್ಖಂಡಾಧಿಪತಿಯಾಗಿ ಭೋಗೋಪ ಭೋಗಂಗಳನನುಭವಿಸಿ ಕಡೆಯೊಳು ಕುಮಾರಂಗೆ ಪಟ್ಟಮಂ ಕಟ್ಟಿ ದೀಕ್ಷಾಪ್ರಾಪ್ತನಾಗಿ ಸಮಾಧಿವಿಧಿಯಿಂ ಶರೀರಭಾರಮನಿಳುಪಿ ಪರಂಪರೆಯಿಂ ಮೋಕ್ಷಕ್ಕೆ ಸಂದರು ಇಂತೀಸರ್ವಜ್ಞ ಸಂಪತ್ಕರದ ನೋಂಪಿಯಂ ನೋಂತವರ್ಗಂ ನೋನಿಸಿ ದವರ್ಗ ಒದಂಬಟ್ಟವರ್ಗಂ ಜಯಮಂಗಳ ಮಹಾ || ಶ್ರೀ