ಶ್ರೀ ಚಂದ್ರನಾಥಾಯ ನಮಃ ||

          ಸುರೇಂದ್ರಮಕುಟಾಶ್ಲಿಷ್ಟಪಾದ ಪದ್ಮಾಂಶುಕೇಸರಂ
ಪ್ರಣಮಾಮಿ ಮಹಾವೀರಂ ಲೋಕತ್ರಿತಯ ಮಂಗಳಂ
||

ವ || ಸರ್ವ್ವತೋಭದ್ರದ ನೋಂಪಿಯಕಥೆ ಯೆಂತೆಂದೊಡೆ | ಈ ಜಂಬೂದ್ವೀಪದ ಭರತಕ್ಷೇತ್ರದ ಆರ್ಯ್ಯಾಖಂಡದೊಳು ಅವನ್ತಿಯೆಂಬುದು ನಾಡು ಭೂತಿಳಕಮೆಂಬ ಪೊಳಲದನಾಳ್ವಂ ಯಶೋಭದ್ರ ಮಹಾರಾಜನಾತನರಸಿ ಯಶೋಮಹಾದೇವಿ ಯಂತವರೀರ್ವ್ವರುಂ ಸುಖಂದಿದಿರೆ ಯಶೋಭದ್ರರೆಂಬವಧಿ ಜ್ಞಾನಿಗಳು ಆ ಪುರದು ದ್ಯಾನವನಕ್ಕೆ ಬಿಜಯಂ ಗೆಯದುದಂ ವನಪಾಳಕನಿಂ ಕೇಳ್ದುಪೋಗಿ ಪಾದಾರ್ಚ್ಚನೆಯಂ ಮಾಡಿ ವಂದಿಸಿಕುಳ್ಳಿರ್ದ್ದು ಧರ್ಮ್ಮಶ್ರವಣಾನಂತರಂ ಯಶೋಮಹಾದೇವಿ ಇಂತೆಂದಳೆಲೇ ಸ್ವಾಮಿ ಯೆನಗಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರಿಂತೆಂದರೂ ಸರ್ವ್ವತೋಭದ್ರಮೆಂಬ ನೋಂಪಿಯುಂಟದಕೆ ಆಷಾಢ ಕಾರ್ತ್ತೀಕ ಫಾಲ್ಗುಣದೊಳಂ ಅಷ್ಟಾಹ್ನೀಕದೊಳು ಕೈಕೊಂಡು ಮುಂದಣ ಅಷ್ಟಾಹ್ನೀಕ ಪರ್ಯ್ಯಂತಮಿರ್ದ್ದಷ್ಟಮಿ ಚತುರ್ದ್ದಶಿಯೊಳು ಶುಚಿರ್ಬ್ಭೂತರಾಗಿ ಚೈತ್ಯಾಲಯಕ್ಕೆ ಬಂದು ಪಾರ್ಶ್ವತೀರ್ತ್ಥಕರಿಗೆ ಅಭಿಷೇಕಮಂ ಮಡಿ ಹೆಸರಹುಗ್ಗಿ ಬೆಲ್ಲ ತುಪ್ಪ ಸಹಿತಂ ಚರುವನಿಡುವುದು ಜಲಮೊದಲಾದಷ್ಟವಿಧಾರ್ಚ್ಚನೆಯುಂ ಪ್ರತ್ಯೇಕವಾಗಿ ಹಂನೆರಡರಿಂದರ್ಚ್ಚಿಸಿ ಫಲಚರುವನರ್ಚಿ ಸೊದು || ಓಂ ಹ್ರೀಂ ಅಸಿಅವುಸಾ ಸ್ವಾಹಾ ಯೆಂಬೀಮಂತ್ರದಿಂದರ್ಚ್ಚಿಸುವುದು ಶ್ರುತಗುರುಪೂಜೆಯುಂ ಮಾಳ್ಪುದು ಉಪವಾಸಮಂ ಮೇಣೇಕಭುಕ್ತಮಂ ಮಾಳ್ಪುದು | ಯಥಾಶಕ್ತಿಯಿಂ ಚತುರ್ವ್ವಿಧ ದಾನಮಂ ಮಾಳ್ಪುದು ಯಿಕ್ರಾಮದಿಂ ನೋಂತು ಉದ್ಯಾಪನೆಗೆ ವಕ್ಕುಳಕ್ಕಿ ಹೆಸರು ಗೋಧೀ ಕಡಲೆ ತೊಗರಿ ವುದ್ದುಗಳಿಂ ಕೊಳನಕಟ್ಟಿ ನಡುವೆ ವಕ್ಕುಳಕ್ಕಿಯ ರಾಸಿಯಮಾಡಿ ಯದರಮೇಲೆ ಕುಂಭಮನಿರಿಸಿ ಯದರೊಳು ಶ್ರೀಗಂಧಪಂಚರತ್ನ ತ್ರಿಕಟುಕ ಜೀರಗೆ ಅರಿಸಿನ ಕುಂಕುಮ ಕರ್ಪ್ಪೂರಮಂ ತುಂಬಿ ಕುಂಭಕ್ಕೆ ಷೋಡಶಭಾವನೆಯುಂ ಭಾವಿಸುತ್ತಾ ಹದಿನಾರು ಮೊಳದ ಹೊಸ ಸೀರೆಯಂ ಸ್ತುತಿ ಕುಂಭದಮೇಲೆ ಪಾರ್ಶ್ವತೀರ್ತ್ಥಕರಂ ಸ್ಥಾಪಿಸಿ ಅಭಿಷೇಕಮಂ ಮಾಡಿ ಸುವರ್ನ್ನದಲ್ಲೆರಡು ಸಂಪಗೆಯಪುಷ್ಪಂ ಬೆಳ್ಳಿಯಲ್ಲಿ ನಾಲ್ಕು ನಮ್ದ್ಯಾವರ್ತ್ತಮಂ ಓಂಹ್ರೀಂ ಸರ್ವ್ವನೃಸಾರಸುರ ಪೂಜಿತೇಭ್ಯಃ ಸ್ವಾಹಾ ಯೆಂದರ್ಚ್ಚಿಸುವುದು ಓಂ ಹ್ರೀಂ ನಮಃ ಪರಮಬ್ರಹ್ಮಣೇನಮಃಯೆಂದು ಗಂಧೋದ್ವರ್ತನಂ ಮಾಳ್ಪುದು ನೂರೆಂಟು ಹೂರಿಗೆ ಲಡ್ಡುಗೆ ಕರಜಿಕಾಯಿ ಅಡಕೆಯೆಲೆ ದೊಡ್ಡಚರು ಪಲವುತೆರದ ಫಲಂಗಳಿಂದರ್ಚ್ಚಿಸೂದು ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀಪಾರ್ಶ್ವನಾಥಾಯ ಸ್ವಾಹಾಯೆಂದು ದ್ರವ್ಯಶುದ್ಧಿಯಂ ಮಾಡಿ ಓಂ ಹ್ರೀಂ ಅಸಿಆವುಸಾಸ್ವಾಹಾಯೆಂದಷ್ಟ ವಿಧಾರ್ಚ್ಚನೆಯಂ ಮಾಡಿ ಓಂ ಹ್ರೀಂ ಅಸಿಆವುಸಾಸ್ವಾಹಾಯೆಂದಷ್ಟವಿಧಾರ್ಚ್ಚನೆಯಂ ಮಾಡಿ ಸರ್ವ್ವತೋಭದ್ರಮೆಂಬ ಮಂಟಪಮಂ ಕಲ್ಪಿಸಿ ನಾಲ್ಕಬಾಯಿನಕ್ಕುಂ ಹಂನೆರಡು ಹೂರಿಗೆ ಅಡಕೆ ಯೆಲೆಯನಿರಿಸಿ ಅವರಿಗೆ ಕೊಡುವುದು ಗುರುವಿಂಗೊಂದುಂದು ಬಾಯಿನಮಂ ಕೊಡುವುದು ಕತೆಯಂ ಕೇಳ್ದು ಯಥಾಶಕ್ತಿಯಿಂ ಚತುರ್ವ್ವಿಧ ದಾನಮಂ ಮಾಡಿ ತಾನೇಕಭುಕ್ತಮಂ ಮಳ್ಪಾಗ ಋಷಿಯರಂ ನಿಲಿಸೂದು ಉದ್ಯಾಪನೆಯ ಕ್ರಮಮೆಂದು ಪೇಳೆ ಕೇಳ್ದು ಕೈಕೊಂಡು ಮನೆಗೆ ಪೋಗಿ ನೋಂಪಿಯಂ ನೋನುತ್ತುಮಿರೆ ಆ ಪುರದ ಪರದನೋರ್ವ್ವಂ ಸರ್ವ್ವಾಂಗರೂಪುಳ್ಳ ರೂಪುಲಾವಣ್ಯನಿಷ್ಕಂಚನ ಕಕನಭದ್ರನಾತನ ಪರಿದಿತಿ ಕನಕಪ್ರಭೆಯೆಂಬಳುಮಾ ನೋಂಪಿಯಂ ಯಶೋಮಂಗಳಾದೇವಿಯಿಂ ಕೈಕೊಂಡು ನೋಂತು ಉದ್ಯಾಪನೆಯಂ ಮಾಡಿ ತತ್ಫಲದಿಂ ಸರ್ವಾಂಗಸೌಂದರ್ಯ್ಯರಾಗಿ ಸರ್ವ್ವತೋಭದ್ರೆಯಾಗಿ ಪಲವು ಮಕ್ಕಳಂ ಪಡೆದು ಕಡೆಯೊಳು ಸನ್ಯಸನ ವಿಧಿಯಿಂ ಮುಡುಪಿ ಸೌಧರ್ಮ್ಮದೊಳ್ದೇವರ್ಕ್ಕಳಾದರು ಯಿನ್ತೀನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕೇಳಿದವರ್ಗ್ಗ ಬರೆದವರ್ಗ್ಗಂ ವಡಂಬಟ್ಟವರ್ಗ್ಗಂ ಮೋಕ್ಷಂಗಳಂ ಪಡೆವರು ಜಯಮಂಗಳ ಮಹಾಶ್ರೀ ||