ಶ್ರೀ ವೀತರಾಗಾಯ ನಮಃ ||

          ಶ್ರೀವರವೀರ ಜಿನೇಂದ್ರ
ಗಾವಗಮೊಲಿದೀಱಗಿ ಭಕ್ತಿಯಿಂ ವಿರಚಿಸುವೆಂ
ಭೂವಳಯಕ್ಕತಿ ಹಿತಮಂ
ಪಾವನ ಸರ್ವ್ವಾರ್ತ್ಥ ಸಿದ್ಧಿಯೆಂಬೀ ಕಥೆಯಿಂ
||

ಅದೆಂತೆಂದೊಡೆ-

ಜಂಬೂದ್ವೀಪದ ಭರತ ಕ್ಷೇತ್ರದೊಳು ಸುರಂಮ್ಯಮೆಂಬುದು ನಾಡು ಭೂತಿಲಕಮೆಂಬುದು ಪೊಳಲದನಾಳ್ವಂದು ಪೊಳಲದನಾಳ್ವಂ | ದೇವಪಾಲ ಮಹಾರಾಜನೆಂಬರಸನಾತನ ಪಟ್ಟದರಸಿ ಲಕ್ಷ್ಮಿಮತಿ ಮಹಾದೇವಿಯೆಂಬಳಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ವುತ್ತಮಿರ್ದೊಂದು ದಿವಸಂ | ದೇಶಭೂಷಣ ಭಟ್ಟಾರಕರೆಂಬ ದಿವ್ಯಜ್ಞಾನಿಗಳು ನಾನಾ ದೇಶ ಗ್ರಾಮ ನಗರ ಖೇಡ ಕರ್ವ್ವಡ ಮಡಂಬ ಬ್ಪತ್ತನ ದ್ರೋಣಾಮುಖಂಗಳಂ ಯಥಾಕ್ರಮದಿಂ ವಿಹಾರಿಸುತ್ತಂ ಬಂದಾ ಪುರದ ಬಹಿರುದ್ಯಾನವನದೊಳಿರ್ದ್ದರೆಂಬುದಂ ವನಪಾಲಕನಿಂದಱಿದು ಸಮಸ್ತ ಪರಿಜನ ಪುರಜನಂ ಬೆರಸು ಪಾದ ಮಾರ್ಗ್ಗದಿಂ ಪೋಗಿ ತ್ರಿಪ್ರದಕ್ಷಿಣಂಗೆಯ್ದು ಫಲವರ್ಚ್ಚನೆಗಳಿಂದರ್ಚ್ಚಿಸಿ ಗುರುಭಕ್ತಿಪೂರ್ವ್ವಕಂ ವಂದಿಸಿ ಮುಂದೆ ಕುಳ್ಳಿರ್ದ್ದು ಧರ್ಮ್ಮ ಶ್ರವಣಮಂ ನಿರ್ಮ್ಮಲ ಚಿತ್ತದಿಂ ಕೇಳ್ದು ತದನಂತರಂ ಲಕ್ಷ್ಮಿಮತಿ ಮಹಾದೇವಿ ಕರಕಮಲಂಗಳಂ ಮುಗಿದು ವಿನಯ ವಿನಮಿತರಾಗಿ ಸ್ವಾಮಿ ಯೆನಗಾಉದಾನೊಂದು ನೋಂಪಿಯಂ ಬೆಸಸಿಮೆನಲವರು ಸರ್ವ್ವಾರ್ತ್ಥ ಸಿದ್ಧಿಯ ನೋಂಪಿಯ ನೋಂಪುದೆನಲಾ ನೋಂಪಿಯಂ ವಿಧಾನಮೆಂತೆನಲಾ ನೋಂಪಿಯ ವಿಧಾನಮನಿಂತೆಂದರಾಉದಾನೊಂದು ನಂದೀಶ್ವರದಷ್ಟಮಿಯೊಳು ಸಮ್ಯಕ್ತ್ವ ಪೂರ್ವ್ವಕಮಾಗಿ ನೋಂಪಿಯಂ ಕೈಕೊಂಡು ಮುಂದಣ ನಂದೀಶ್ವರದ ಪೌರ್ನ್ನಮಿ ಪರ್ಯ್ಯಂತ ಮಿರ್ದ್ದಷ್ಟಮಿ ಚತುರ್ದ್ದಶಿಗಳೊಳು ಶುಚಿರ್ಭ್ಭೂತರಾಗಿ ಪೂಜೆಯಂ ಮಾಡಿಸಿ ತದನಂತರಂ ಶೃತಮಂ ಗುರುಗಳುಮಂ ವಂದಿಸಿ ಉಪವಾಸಮಂ ಕೈಕೊಳ್ವುದಾಱದೊಡೇಕ ಭುಕ್ತಮಂ ಮಾಳ್ಪುದು | ಮಱು ದಿವಸ ಪಾರಣೆಯಂ ಮಾಳ್ಪಲ್ಲಿವೊಂದು ತಂಡ ಋಷಿಯರಂ ನಿಲಿಸಿಸೂದು ಮೇಣೊಂದು ತಂಡಜ್ಜಿಯರಂ ನಿಲಿಸೂದು ತಾನುಂಬ ವಸ್ತುವನೆಂಟಱಿಂದಧಿಕಂ ಮಾಡಲಾಗದು | ಯಿಂತೀ ಕ್ರಮದಿಂ ನೋಂತು ಕಡೆಯೊಳುಜ್ಜವಣೆಯಿಂ ಮಾಳ್ಪ ಕ್ರಮಮೆಂತೆನೆ ಜಿನೇಶ್ವರಂಗೆ ಮಹಾಭಿಷೇಕ ಪೂಜೆಯಂ ವಿಸ್ತರಂ ಮಾಳ್ಪುದು ತದನಂತರಂ ಶ್ರುತಕ್ಕೆ ವಸ್ತ್ರ ಶ್ರುತಪೂಜೆಯಂ ಮಾಳ್ಪುದು ಬಳಿಕ್ಕಂ ಸುಚಿತ್ತದಿಂ ಕಥೆಯಂ ಕೇಳ್ದು ಕಥಕನಂ ಪೂಜಿಸೂದು | ನೋನಿಸಿದರ್ಗ್ಗುಡೆ ಕೊಡುಉದು | ಅಯ್ದು ತಂಡ ಋಷಿಯರಂ ನಿಲಿಸೂದು | ಅಯ್ದು ತಂಡಜ್ಜಿಯರಂ ನಿಲಿಸೂದು | ಯಥಾಶಕ್ತಿಯಿಂ ಚಾತುರ್ವ್ವರ್ನ್ನಂಗಳಿಂಗಾಹಾರ ದಾನಂಗಳಂ ಮಾಳ್ಪುದು ಯಿದುಜ್ಜವಣೆಯ ಕ್ರಮ ಮತ್ತಂ ಬಡವರೊಡೆಯರೆಂನದೆ ಯಥಾಶಕ್ತಿಯಿಂ ಭಕ್ತಿಪೂರ್ವ್ವಕಂ ನೋಂಪುದೆಂದು ಪೇಳೆ ಕೇಳ್ದು ತದನಂತರಂ ಸಂತುಷ್ಟ ಚಿತ್ತೆಯಾಗಿ ನೋಂಪಿಯಂ ಕೈಕೊಂಡು ಗುರುಗಳಂ ಬೀಳ್ಕೊಂಡು ಮಗುಳ್ದು ಬಂದು ಪುರಮನರಮನೆಯಂ ಪೊಕ್ಕು ಸುಖಮಿರ್ದ್ದು ನೋಂಪಿಯ ದಿನಂಬರೆ ಲಕ್ಷ್ಮಿಮತಿ ಮಹಾದೇವಿ ಯಥಾಕ್ರಮದಿಂ ನೋಂತುಮಿರಲಾಪುರದ ಪರದನೊರ್ವ್ವಂ ಸರ್ವ್ವಾಂಗ ಸೌಂದರ್ಯರೂಪ ವಿಲಾಸ ವಿಭವ ದರಿದ್ರಂ ಸುವರ್ನ್ನಭದ್ರನಾತನ ಪೆಂಡತಿ ಸರ್ವ್ವ ಸೌಂದರ್ಯ್ಯ ರೂಪುವಿಲಾಸ ವಿಭವ ಸಂಪಂನೆ ಸುವರ್ಣ್ನಭದ್ರನಾತನ ಯೆಂಬಳು ಪತಿ ಭಕ್ತಿಯುಂಗುರ ಭಕ್ತಿಯುಮಪ್ಪುದಱಿಂ ತಾನುಮೀ ನೋಂಪಿಯ ಲಕ್ಷ್ಮಿಮತಿ ದೇವಿಯೊಡನೆ ಕೈಕೊಂಡು ಯಥಾಶಕ್ತಿಯಿಂ ಭಕ್ತಿಪೂರ್ವ್ವಕಂ ನೋಂತುಜ್ಜಯಿಸಿ ತತ್ಫಲದಿಂ ತಂನ ಪುರುಷನ ಸರ್ವ್ವಾಂಗ ಸೌಂದರ್ಯ ರೂಪು ವಿಲಾಸ ವಿಭವ ಸಂಪತ್ತಿಯ ಪಡದು ಮತ್ತಂ ಧನಕನಕ ಸಮೃದ್ಧಿಯಾಗಿ ಸಮಸ್ತ ಸಂಸಾರ ಭೋಗೋಪಭೋಗಂಗಳೊಳ್ಕೂಡಿ ಸರ್ವ್ವಾರ್ತ್ಥ ಸಿದ್ಧಿಯೊಳ್ಕೂಡಿ ಸುಖಮಿರ್ದ್ದಳಿಂತೀ ನೋಂಪಿಯಂ ಯಥಾ ಶಕ್ತಿಯಿಂ ನೋಂತ ವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಮಂಗಲ ಮಹಾಶ್ರೀ