ಶ್ರೀಮನ್ಮುಕ್ತಿರಮೇಶಂ
ಕಾಮಾಂತಕ ವೀರ ವರ್ಧಮಾನ ಜಿನೇಂದ್ರಂ
||
ಪ್ರೇಮದೆ ಭವ್ಯಜನಂಗಳಂ
ನಾಮಮನೆಂತೆಯ್ದೆ ಸಾರ್ಥಮಂ ಮಾಡದೆನೆ || ೧ ||

          ಸಿದ್ಧರಲೋಕಕ್ಕೆಲ್ಲ ಸ
ಮೃದ್ಧರ ಪರಮಾರ್ಥಸಿದ್ಧಿ ಬುದ್ದರಪದವಿ
ಶುದ್ಧಪ್ರಕಾಶಮೆನ್ನಯ
ಬುದ್ಧಿಧ್ವಾಂತಮನೆ ತೊಲಗಿಸಿರ್ಕನವರತಂ
|| ೨ ||

          ಪಂಚಾಚಾರಮನಾಚರಿ
ಪಂಚಿತಷಟ್ಟ್ರಶದಮಲಗುಣವೃದ್ಧಿಯನೇ
ಪಂಚಮನೋಧಮನೆಯ್ದುವ
ರೇಂಚತುರಾಚಾರ್ಯರೆಮ್ಮನಂತಾಗಿಪರೇ
|| ೩ ||

          ಪ್ರಮಾಣ ನಯನಿ ಕ್ಷೇಪ
ಪ್ರಮಾರ್ಥ ಪರತಂತ್ರ ನಿಶ್ವಯಾನ್ವಿತದೊಳ್
ಸಮುದಿತರಾದೊಡುಪಾದ್ಯರ್
ಪ್ರಮಾಣನಯತತ್ತ್ವಬೋಧಮಂಮಾಡದರೇ
|| ೪ ||

          ಸಾಧುಗಳೆಲ್ಲರ್ ಸತತಂ
ಸಾಧಿತ ಶುದ್ಧಾತ್ಮ ಸಿದ್ಧಿ ವಿಶದರ್ ನಿಶಿತರ್
||
ಬೋಧೈಕಲೋಲರಾದ್ಯರ್
ಬೋಧಮನಗೆಯ್ದೆಮಾಳ್ಕೆ ಸುಖಮಪ್ಪಿನೆಗಂ || ೫ ||

          ಇಂತು ಗುರುಪಂಚಪದಗಳ
ಸಂತಸದಿಂ ನಮಿಸಿ ಸಕಲದುಷ್ಕರ್ಮಗಳಂ
||
ಶಾಂತಿಕರಮಪ್ಪ ಜಿನಪತಿ
ಸಂತತಿಯ ಸಹಸ್ರನಾಮಕಥೆಯಂ ಪೇಳ್ವೆಂ || ೬ ||

ಅದೆಂತೆಂದೊಡೆ ಸಕಲ – ದ್ವೀಪಸಾಗರಮಧ್ಯದೊಳಿರ್ದು ಉತ್ತಮಮಪ್ಪಾ ಸಮಸ್ತದ್ವೀಪಕ್ಕೆ ಕರ್ಣಿಕಾರೂಪಮಾದ ಜಂಬೂದ್ವೀಪದ ಮಧ್ಯದೊಳು ಮನೋಹರಮಪ್ಪ ಮಹಾಮೇರುವಿಂಗೆ ದಕ್ಷಿಣದಿಗ್ವಿಭಾಗದೊಳಕ್ಷೂಣ ಲಕ್ಷ್ಮೀ ನಿವಾಸದ ಭರತಕ್ಷೇತ್ರ ದೊಳ್ ಆರ್ಯಖಂಡದೊಳ್‍ಮಗಧ ವಿಷಯದೊಳ್ ರಾಹದ್ರಾಜರಾಜ ರಾಜಧಾನಿಯಮ್ತೆ ರಾಜಿಪ ರಾಜಗೃಹ ನಗರಮನಾಳ್ವನುಂ ಸಮ್ಯಕ್ತಚೂಡಾಮಣಿಯುಮ್ ರಾಜ್ಯಸಪ್ತಾಂಗ ಸಮನ್ವಿತನುಂ ತ್ರಿವರ್ತ ವಿರಾಜಿತನುಂ ಶಕ್ತಿತ್ರಯೋಪೇತನುಂ ಚತುರ್ವಿಧ ಮಹಾರಾಜ ವಿದ್ಯಾವಿರಾಜಮಾನಸಮಂ ಚತುರ್ವಿಧಪಾಂಡಿತ್ಯ ಸಹಿತನುಂ ಸಂಧಿವಿಗ್ರಹಾದಿ ಷಡ್ಗುಣಸಮೇತನುಂ ಜಿತಾಂತಷಡ್ವರ್ಗ ಚತುರೋಪಾಯ ವಿಹಿತಧರ್ಮ ಕಾಮಾರ್ಥ ಮೋಕ್ಷಮೆಂಬ ಚರುರ್ವರ್ಗವತಿಯಪ್ಪ ಶ್ರೀಮನ್ಮಹಾಮಂಡಲೇಶ್ವರ ಪದವೀ ವಿರಾಜಮಾನ ಶ್ರೇಣಿಕಮಹಾಮಂಡಲೇಶ್ವರಂ ಆತಂಗೆ ಕೃತಾಭಿಷೇಕದೇವಿಯಪ್ಪ ವಿಶಿಷ್ಟತಪ್ತಕಾಂಚನಾಂಗಿಯುಂ ಪುಷ್ಟಿಶೀಲಾದಿ ಸಪ್ತಗುಣಭೂಷಣ ವಿಭೂಷಿತೆಯುಂ ಮನೋಜ್ಞ ಚರಿತ್ರೆಯುಂ ಪವಿತ್ರತರ ಶ್ರೀಮನ್ಮಹಾ ಜಿನೇಶ್ವರ ಪಾದಪದ್ಮಮಧುಪಾನ ಪರಿತೋಷಪುಜ್ಞೆಯಪ್ಪ ಇಂದಿಂದಿರೆಯುನಿಪ ಚೇಳಿನೀನಾಮವಿರಾಹಿತೆಯಂ ಅಂತವರೀರ್ವರುಂ ಮತ್ತಂ ಚಂದ್ರರೋಹಿಣಿಯರೆಂತಂತೆ ರತಿಮನೋಜನುಮಿಂದ್ರ ಶಚೀದೇವಿಯರೆಂತಂತಲ್ಲದೆ ಅನೂನ ನವೀನಮಂಜುಳ ಸುಖಕಂಥನಾ ವಿನೋದದಿಂ ಪೂಜ್ಯಪ್ರಾಜ್ಯರಾಜ್ಯಮನಾಳುತ್ತಿರಲೊಂದುದಿವಸಂ ಅಂತರ್ವರುಂ ಮಹಾವಿದ್ವತ್ಪುಂಡರೀ ಕಮಂಡಲ ಪರಿಮಂಡಿತ ಸಭಾಮಂಡಪ ಮಂಡನಾಯಮಾನಾನೂನರಾಗಿಯೊಡ್ಡೋಲಗಂ ಗೊಟ್ಟಿರಲೋರ್ವ ಋಷಿ ನಿವೇದಕಂ ಬದು ಅಕಾಲದೆಲ್ಲ ಋತುಫಲ ಪುಷ್ಪ ತಳಿ ರ್ಗೊಂಚುಲುಮಂ ಈ ಮಹಾರಾಜನೆಂತುಂಟು ಸಫಲಮಪ್ಪನೆಂದರಿಯಿಸುವಂತತ್ಯಂತ ಸಂತೋಷದೊಳೆ ವಂದು ರಾಜಗೃಹದ್ವಾರದೊಳ್ ದೌವಾರಿಕಂನಿಂದು ತಾಂ ಬಂದ ಹದನನರಿಯಿಸಿ ರಾಜಾನುಮತಪ್ರತೀಹಾರಪುರಸ್ಸರಮಾಗಿ ರಾಜಮುಖಾವ ಲೋಕನಮುಕುಲೀ ಕೃತಹಸ್ತಕಂಜನುಮಾಗಿ ದೂರದೊಳ್ಸಾಷ್ಟಾಂಗವೆರಗಿ ಪೊಡವಟ್ಟು ಜೀಯಾ ಜೀಯಾ ಅಪೂರ್ವಮಿದೆನ್ನಸಫಲಂ ಮಾಳ್ಪ ಫಲಪುಷ್ಪಾವಳಿಯನವಧರಿಸುವು ದೆಂದು ತಂದ ವಸ್ತ್ರಗಳಂ ಭೂಮಿನಾಥ ಪಾದೋಪಾಂತದೊಳಿರಿಸಲಾ ಮಹಾರಾಜಂ ಅಂತದಂ ಕಂಡು ಇದೇನೆಂದು ನಿರೂಪಿಸಲಾ ನಿರೂಪಾವಧಾರಣಾಭಾರವಿನಮದಂ ಗೋಪಾಂಗನಾಗಿಯುಂ ಪೇಳಲ್ತಗುಳ್ದಂ

|| ಜೀಯಬಿನ್ನವಿಸಲಳವ
ಲ್ಲಯ್ಯ ಮಹಾಶ್ಚರ್ಯಮಂ ಸುವಿಪುಲಾಚಲದೊಳ್
ರಯ್ಯಾ ವೀರಮಹಾಜಿ
ನ್ನಯ್ಯನ ತತ್ಸಮವಸರಣಮಿರ್ದುದುದೇವಾ ||

ಇಂತೆಂದು ಬಿನ್ನವಿಸಲದಿಂ ಕೇಳ್ದು ಘನಸ್ವನಮನಾಲಿಸಿದ ನೀಲಕಂಠನಂತೆ ಸಂತೋಷದಂತಮನೆಯ್ದಿ ರೋಮಾಂಚಕಂಚುಕಿತ ಮೂರ್ತಿಯಾಗಿ ಆ ಗಿರೀಂದ್ರ ದಿಶಾಭಾಗಾಭಿಮುಖನಾಗಿ ಸಿಂಹಪೀಠದಿಂದುದಯಪರ್ವತ ದಿಂದೇಳ್ವ ಚಂದ್ರರೋಹಿಣಿಯರಂತೆಳ್ದು ಸಪ್ತಪರಸ್ಥಾನ ಪ್ರತಿಪತ್ತಿಯಕ್ಕೆಂದು ಮುಂದೆ ಸಪ್ತಪದವಿನ್ಯಾಸಮಂ ಮಾಡಿ ಅಷ್ಟಕರ್ಮನಿರ್ನೂಳನಮುಮಷ್ಟ ಗುಣ ಪುಷ್ಟಿಯುಮಕ್ಕೆಂದು ಸಾಷ್ಟಾಂಗವೆರಗಿ ಪೊಡವಟ್ಟು ಋಷಿನಿವೇದಕಂಗಂಗಚಿತ್ತಮಂ ಕೊಟ್ಟು ಸಂತುಷ್ಟಚಿತ್ತನಾಗಿಯಾನಂದಭೇರಿಯಂ ಪೊಯ್ಸಿ ಪ್ರಶಸ್ತ ಸಮಸ್ತ ಪರಿಜನ ಪುರಜನಂ ಬೆರಸು ತಾನುಂ ಚೇಳಿನೀಮಹಾದೇವಿಯೊಡನೆ ಇಂದ್ರನುಂ ಶಚೀಮಹಾದೇವಿಯೊಡನೈರಾವತ ಮನೇರಿ ಬರ್ಪಂತೆ ನಿಜಗಜಸ್ಕಂಧಾರೂಢನಾಗಿ ಪೊರಮಟ್ಟು ಮಹೋತ್ಸವದಿಂದೆಯ್ದೆವಂದು ರಾಜನ್ಮಹಾಚಲಾವಲೋಕನಂಗೆಯ್ದಾಗಳ್ ಪೊಕ್ಕು ಮಾನಸ್ತಂಭಾದಿ ಮಹಾಶೋಭೆಯಂ ನೋಡುತ್ತಂ ತ್ರೈಲೋಕ್ಯಸ್ವಾಮಿಯ ಸಹಜಪರಮಕಾಯ ಗಂಧಬಂಧುರಮಾದ ಗಂಧಕುಟಿಯಂ ನಿರ್ಭರ ಭಕ್ತಿಯಂ ನಮಿತೋತ್ತಮಾಂಗನಾಗಿ ತ್ರಿಃಪ್ರದಕ್ಷಿಣಂಗೆಯ್ದು ನಿಜಕಿರೀಟ ಕೂಟಘಟಿತ ದೇದೀಪ್ಯಮಾನ ದಿವ್ಯರತ್ನಪ್ರಭಾಜಾಲ ಪ್ರದೀಪಿತ ಸಿಂಹಪೀಠ ತಟಗತನಾಗಿ ಜಿನಮುಖಾವ ಲೋಕನದಿಂದ ಸಂತೋಷಮನೆಯ್ದಿ ವಸ್ತುಸ್ತವ ರೂಪಸ್ತವ ಗುನಸ್ತವಮಪ್ಪ ಸ್ತೋತ್ರಂಗಳಿಂ ಸ್ತುತಿಯಿಸಲುದ್ಯುಕ್ತನಾದಂ ಅದೆಂತೆಂದೊಡೆ

ಜಯ ಭವ್ಯ ಸೇವ್ಯ ಭುವನತ್ರಯಲ್ಲಭ ದೇವದೇವ ನಿರ್ಭಯ ನಿರವದ್ಯ ನಿರ್ಮಳ ನಿರಾಮಯ ನಿರ್ಮದ ನಿರ್ಮಿಕಾರ ನಿರ್ವ್ಯಯಪದ ನಿಶ್ಚಿತಾಖಿಲ ಪದಾರ್ಥ ನಿರಂಜನ ನಿರ್ಜಿತಾಶ ನಿನ್ನಯ ಪದಪಂಕಜಕ್ಕೆರಗುವಂಗುದಯಮೆ ಮೃತ್ಯುವದುಂಟೆ ಭಬಮ್ಗಳೊಳ್ಜಿನಾ || ಇಂತನೇಕಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿ ಯಥಾಕ್ರಮದಿಂ ಗೌತಮಗಣಧರರಾದಿ ಮುನಿಸಮೂಹಕ್ಕೆ ವಂದನೆಯಂ ಮಾಡಿ ಪನ್ನೊಂದನೆಯ ಮನುಷ್ಯಕೋಷ್ಠದೊಳ್ಕುಳ್ಳಿರ್ದು ಗೌತಮಸ್ವಾಮಿಗಳ್ಗಭಿಮುಖನಾಗಿ ಕರಕಿಸಲಯಮಂ ಮುಗಿದು :

ಎಲೆ ಸ್ವಾಮಿ ! ದ್ರವ್ಯ ಕ್ಷೇತ್ರ ಕಾಲ ಭವ ಭಾವಸ್ವರೂಪಮಪ್ಪ ಪಂಚವಿಧಸಂಸಾರದೊಳನಾದಿ ಕಾಲದೊಳಾವ ಜೀವಂಗನಾದಿ ವಾಸನಾವಾಸಿತಮಪ್ಪ ಕರ್ಮೋದಯದಿಂದಾದ ಸಪ್ತವ್ಯಸನ ಮುಂತಾದ ದುರ್ವ್ಯಾಪಾರ ಸೂತಕ ಪ್ರೇತಕ ಮೋರೆದಪ್ಪಿದಾಚರಣೆ ಜಾತಿಸಂಕರೈಕೇಂದ್ರಿಯತಾಪ ಪ್ರಾಣಿಹಿಂಸೆ ದೇಹಾಶ್ರಿತಮಾದಜ್ವರ ಮಂಡೆಶೂಲೆ ಮಹಾಕುಷ್ಠವ್ಯಾಧಿ ದಾರಿದ್ರ್ಯ ಮೊದಲಾದುದರಿಂದಾದ ಚಿತ್ತಕ್ಷೇಷ ಮುಂತಾದ ನಾನಾ ಪ್ರಕಾರಮಪ್ಪ ದುಃಖಕ್ಕೆ ಕಾರಣಮೆನಿಸುವ ದುಶ್ಚರಿತ್ರಂಗಳಿಂದಾದ ನಾನಾಪ್ರಕಾರ ಕರ್ಮಂಗಳಂ ನಿರ್ಮೂಲನ ಮಾಳ್ಪಾವುದಾನೊಂದಪೂರ್ವಮಾದ ಮೋಕ್ಷಕ್ಕೆ ಬೀಜಮಪ್ಪ ಜೀವಕ್ಕೆ ಪರಮಾನಂದಮಂ ಮಾಳ್ಪ ತ್ರೈಲೋಕ್ಯಕ್ಕೆ ಪೂಜ್ಯಮೆನಿಸಿದ ಸಾರ್ವಭೌಮಾದಿ ದಿವ್ಯಭವಮಂ ಮಾಳ್ಪ ಮಹಾನೋಂಪಿಯಂ ನಿರೂಪಿಸಲ್ವೇಳ್ಕುಮೆಂದು ಶ್ರೇಣಿಕ ಮಹಾಮಂಡಲೇಶ್ವರಂ ಚೇಳಿನೀಮಹಾದೇವಿಸಹ ಬಿನ್ನಪಂಗೆಯ್ಯಲಾ ಗೌತಮಸ್ವಾಮಿಗಳು ಇಂತಪ್ಪ ಬಹುಪ್ರಕಾರಮಾದ ಕರ್ಮಂಗಳಂ ಕೆಡಿಸಲೋಸುಗಮಾವುದು ಸಮರ್ಥಮೆಂದು ತಮ್ಮ ದಿವ್ಯಜ್ಞಾನದಿಂ ವಿಚಾರಿಸಿ ಅದು ಅತೀತಾನಾಗತವರ್ತಮಾನ ಜಿನಸಂತಾನಾನಂತಷ್ಟಯಾದ್ಯನಂತ ಗುನ ಗರ್ಭಿತಮಾದ ಸಹಸ್ರನಾಮದ ನೋಂಪಿಯಾಗಲ್ವೇಳ್ಕುಮೆಂದು ನಿಶ್ಚಯಿಸಿ ಶ್ರೇಣಿಕಮಹಾರಾಜಂಗಂ ಚೇಳಿನೀದೇವಿಗಮಿಂತೆಂದು ನಿರೂಪಿಸಿದರು.

ಭಾದ್ರಪದಮಾಸದೊಳಾನುಂ ಆಶ್ವಯುಜಮಾಸದೊಳಾನುಂ ಆಷಾಢಂ ಕಾರ್ತ್ತಿಕ ಫಾಲ್ಗುನ ಮುಂತಾದ ತ್ರಿತಯಾಷ್ಟಾಹ್ನಿಕದೊಳಾನುಂ ಕೂಡಿ ಬಂದ ವೇಳೆಯೊಳು ಅಥವಾ ಮೇಣು ಭವ್ಯೋತ್ತಮರ್ಗೆ ಶಾರೀರಾ ಜವರಕುಷ್ಠಾದ್ಯಾ ಎಂಬಲ್ಲಿ ಯಾದಿಶಬ್ದದಿಂ ಮಹತ್ತಾದ ಜ್ವರ ಶಿರಃಶೂಲೆ ಗ್ರಹಸ್ಥಿತಿ ಮುಂತಾದ ಮಹೋಪಸರ್ಗಂಗಳ್ಗಡಣದೊಳವ ಪೂರ್ವೋಕ್ತಮಾಸಾದಿಗಳನಪೇಕ್ಷಿಸದೆ ಆವವೇಳೆಯೊಳಾದೊಡಂ ಉತ್ತಮ ಮಧ್ಯಮ ಜಘನ್ಯಭೇದದಿಂ ಮೂರು ತೆರನಪ್ಪ ಶ್ರೀಮದಷ್ಟೋತ್ತರಸಹಸ್ರಾಭಿಧಾನದ ನೋಂಪಿಯಂ ನೋಂಪುದು ಆ ಮೂರು ಪ್ರಕಾರದ ವಿಧಾನಂಗಳಲ್ಲಿ ಉತ್ತಮ ಪೂಜಾವಿಧಾನಮೆಂತೆಂದೊಡೆ

ನೋಂಪಿಯ ದಿನದೊಳ್ ತ್ರೈಲೋಕ್ಯಸ್ವಾಮಿಯ ಪವಿತ್ರ ಚೈತ್ಯಾಲಯಮಂ ಮಹಾಶ್ಚರ್ಯಮಾಗಿ ಜನಮುನೋನಯನ ಮಂಜುಳಮಪ್ಪಂತು ಸಾಕ್ಷಾನ್ಮೋಕಲಕ್ಷ್ಮೀಕಟಾಕ್ಷ ವಿಕ್ಷೇಪದ ಮಣಿಮಯಸ್ವಯಂವರ ವೇದಿಕಾ ವದ್ರಾಜಮಾನಮಿದೆಂಬಂತೆ ಝಲ್ಲಿಪಟ್ಟೆ ಫಲವಳಿಗೆ ಪುಷ್ಪಫಲಂಗಳಿಂದಲಂಕರಿಸಿ ಅರ್ಹತ್ಪರಮೇಶ್ವರಂಗೆ ಪಂಚಾಮೃತದಿಂ ಪಂಚವಾದ್ಯರವ ಜಯ ಜಯನಿನಾದ ಸಮನ್ವಿತಮಾಗಿ ಮಹಾಭಿಷೇಕಮಂ ಮಹಾಪ್ರಮೋದ ಯುತಾಂತರಂಗಸಂಗತರಾಗಿ ಮಾಡಿ ಮಂಡಪದಲ್ಲಿ ಅಷ್ಟದಳಾಂತರಾಳಬಹಿಃ ಷೋಡಶದಳ ಯಂತ್ರಮ ಪಂಚಚೂರ್ಣದಿಂದುದ್ಧರಿಸಿ ಆ ಯಂತ್ರೋಪರಿ ಚಂದ್ರೋಪಕಾಷ್ಟಮಂಗಲಧ್ವಜ ಕುಂಭಾಷ್ಟಕ ಕಲಶಸ್ಥಾಪನ ಜಾತರೂಪಸ್ತಂಭ ಮುಂತಾದ ಮಂಗಳೋಪಕರಣಂಗಳಿಂದಲಂಕರಿಸಿ ತದ್ಯಂತ್ರಮಧ್ಯಕರ್ಣಿಕೆಯ ಮೊದಲ್ಗೊಂಡು ನವದೇವತಾ ವಿನ್ಯಾಸಮಂ ಮಾಡಿ ಬಾಹ್ಯಷೋಡಶ ದಳಂಗಳಲ್ಲಿ ಷೋಡಶಸ್ವರಂಗಳಂ ಲಿಖಿಸಿ ಮಧ್ಯಕರ್ಣಿಕೆಯೊಳರ್ಹತ್ಪರ ಮೇಶ್ವರ ಪ್ರತಿಕೃತಿಯಂ ಬಿಜಯಂಗೈಸಿ ಸಂಹಿತೋಕ್ತಕ್ರಮದಿಂ ನಿತ್ಯಪೂಜಾ ವಿಧಿಯಂ ನಿರ್ವರ್ತಿಸಿ ಅರ್ಹದಾದಿ ಪಂಚಮರಮೇಷ್ಠಿ ಪೂಜಾನಂತರಂ ನವದೇವತಾರ್ಚನೆಯಂ ಅಂಬೀ ಮಂತ್ರದಿಂದೈದು ಜಲಧಾರೆ ಐದುವೇಳೆ ಗಂಧ ಮೊದಲಾಗಿ ಅಷ್ಟವಿಧಾರ್ಚನೆಯಂ ಪ್ರತ್ಯೇಕಮೈದೈದದಿ ಅರ್ಘ್ಯಮನೆತ್ತುವುದು ಈ ಕ್ರಮದಿಂ ಓಂ ಹ್ರೀಂ ಅರ್ಹಂ ನಮಃ ಎಂಬೀ ಮಂತ್ರಾಕ್ಷರ ಪೂರ್ವಕಮಾಗಿ ಸ್ವಯಂಭವೇ ಎಂಬುದಾದಿಯಾದ ಅಷ್ಟೋತ್ತರ ಸಹಸ್ರನಾಮಾಕ್ಷರಮ್ಗಳಂತ್ಯವಾದ ಸಾವಿರದೆಂಟು ನಾಮ ಪೂಜೆಯಂ ಮಾಡಿ ಕಡೆಯಲ್ಲಿ ಮಹಾರ್ಘ್ಯಮನೆತ್ತಿ ಆಮೇಲೆ ಶ್ರೀಮತೇ ನಮಃ ಸ್ವಯಂಭವೇ ನಮಃ ಎಂಬಿವು ಮೊದಲಾದ ಸಾವಿರದೆಂಟು ನಾಮ ಮಂತ್ರಮನುಚ್ಚರಿಸುತ್ತ ಸುರಭಿಕುಸುಮ ದಿವ್ಯಗಂಧಾಕ್ಷತೆಗಳಿಂ ಸಾವಿರದೆಂಟು ಮಂತ್ರಪುಷ್ಪಮನಿಕ್ಕುವುದು ಬಳಿಕ್ಕಂ ಸಹಸ್ರನಾಮಸ್ತೋತ್ರದಿಂ ಪಲಂಬರೊಡನೆ ಅರ್ಹತ್ಪರಮೇಶ್ವರನಂ ಭಕ್ತಿಪೂರ್ವಕಂ ನುತಿಸಿ ಬಲಗೊಂಬುದು

ಈ ನೋಂಪಿಯಂ ಒಂದು ದಿನದೊಳಾನುಂ ಎರಡು ದಿನದೊಳಾನುಂ ಮೂರು ದಿನದೊಳಾನುಂ ಸಾವಿರದೆಂಟು ನಾಮಗಳ ಪೂಜೆಯಂ ಮಾಡಿ ಪ್ರತಿದಿನದಲ್ಲಿಯುಂ ಮಂತ್ರಪುಷ್ಪಮನಿಕ್ಕಿ ಸಹಸ್ರನಾಮದ ಸ್ತೋತ್ರದಿಂ ಬಲಗೊಂಬುದು ಈ ಕ್ರಮದಿಂ ಪೂಜೆಯಂ ಸಂಪೂರ್ಣಂ ಮಾಡಿ ಆ ಮರುದಿನದೊಳ್ ಸಹಸ್ರದೆಮ್ಟು ಕಲಶಂಗಳಿಂ ಮಹಾಭಿಷೇಕಮಂ ಮಾಡಿ ಸ್ವಾಮಿಗೆ ಸಂಹಿತೋಕ್ತಕ್ರಮದಿಂ ಮಹಾನೈವೇದ್ಯಮಂ ಮಾಡುವುದು. ಅದರ ಕ್ರಮಮೆಂತೆಂದೊಡೆ – ಚರು ಪಾಯಸ ಸಹ ಅಕ್ಕಿಯ ಸೇರು ೩೨೦ ಆ ನೈವೇದ್ಯಕ್ಕೆ ವ್ಯಂಜನ ಐದು ಈ ಪ್ರಕಾರದಿಂದೊಂದು ನಗೆಗೆ ಸೇರು ಇಪ್ಪತ್ತರಲ್ಲಿ ೫ ಮೇಲೋಗರಮಂ ಮಾಡುವುದು ಇದಕ್ಕಿಂತ ವಿಶೇಷವಾದರೆ ಉತ್ತಮ ತುಪ್ಪ ಸೇರು ೧೫ ಹಾಲು ಸೇರು ೨೦. ಪಂಚಕಜ್ಜಾಯ ಒಂದೊಂದರಿಂದ ಐವತ್ತು ಚರುವೆನಲ್ಕೆ ಪಚ್ಚೆ ಕರ್ಪೂರದಾರತಿ ತುಪ್ಪದ ದ್ಪ ಲೋಭಾನದಶಾಂಗ ಧೂಪ ಬಾಳೆಯಹಣ್ಣು ಮುಂತಾದ ಪಣ್ಗಳಿಂದ ರಸಾಯನಮಂ ಮಾಡುವುದು ಅದಕ್ಕೆ ತಕ್ಕ ಸಾಸವೆ ವೆರಸಿ ಒಗ್ಗರಣೆಯಂ ಮಾಡುವುದು ಅಪೂರ್ವಮಾದ ಪಕ್ವ ಫಲಂಗಳನರ್ಚಿಸುವುದು. ಕಡೆಯಲ್ಲಿ ಮಹಾರ್ಘ್ಯಮನೆತ್ತುವುದು ಇದು ಮಹಾನೈವೇದ್ಯಕ್ರಮ ಆಮೇಲೆ ಸುಗಂಧಬಮ್ಧುರ ಜಲಂಗಳಿಂ ವಸಂತೋಕುಳಿಯಂ ಮಡುವುದು ತದನಂತರಂ ಸಾವಿರದೆಂಟು ತಪಸ್ವಿಗಳಿಗೆ ನವವಿಧಪುಣ್ಯ ಸಪ್ತಗುಣ ಸಮನ್ವಿತಮಾಗಿ ಆಹಾರದಾನಮಂ ಮಾಡುವುದು. ಅಥವಾ ಮೇಣ್ ಗೃಹಸ್ಥರು ಸಾವಿರದೆಂಟು ಸಂಖ್ಯೆಯನುಳ್ಳ ಚತುಸ್ಸಂಘಕ್ಕಾಹಾರದಾನಮಂ ಮಾಡುವುದು ಸಂಘಪೂಜೆಯಂ ಮಡಿ ದೀನಾನಾಥಾಶ್ರಿತ ಜನಂಗಳ್ಗೆ ಬೂರಿ ದಾನಮಂ ಕೊಡುವುದು ಇಂತಿದುತ್ತಮ ಪೂಜಾ ವಿಧಾನಮಕ್ಕುಂ ಇದರಲ್ಲೀ ಪರಿಯರ್ಧಕ್ಕೆ ಕಡಿಮೆಯಾಗಬಾರದು ಮತ್ತಂ ಮಧ್ಯಮಪೂಜಾವಿಧಾನ ಮೆಂತೆಂದೊಡೆ :

ಸ್ವಾಮಿಗೆ ಯಥಾಶಕ್ತಿಯಿಂ ಪಂಚಾಮೃತಾಭಿಷೇಕಮಂ ಮಾಡಿ ಮುಂಪೇಳ್ದಕ್ರಮದಿಂ ಯಂತ್ರೋದ್ಧರಣ ಮುಂತಾದ ಮಂಡಪಾಲಂಕಾರಮಂ ಮಾಡಿ ಹಿಂದೆ ಹೇಳಿದ ಮಂತ್ರದಿಂದೊಂದುಂದು ಜಲಧಾರಾದ್ಯಷ್ಟ ವಿಧಾರ್ಚನೆಗಳಿಂ ಪ್ರತ್ಯೇಕ ಅರ್ಘ್ಯಸಮನ್ವಿತಮಾಗಿ ಅಷ್ಟೋತ್ತರ ಸಹಸ್ರನಾಮದ ಸ್ತೋತ್ರದಿಂ ಸ್ತುತಿಯಿಸಿ ಮಹಾರ್ಘ್ಯಮನೆತ್ತಿ ಬಲಗೊಂಡು ಕಡೆಯಲ್ಲಿ ನೂರೆಂಟು ಕಲಾಭಿಶೇಕಮಂ ಮಹಾಸಂಭ್ರಮದಿಂ ಮಾಡಿ ಯಥಾಶಕ್ತಿಯಿಂ ಮಹಾನೈವೇದ್ಯಮಂ ಮಾಡಿ ನೂರೆಂಟು ತಪಸ್ವಿಗಳಿಗೆ ಆಹಾರದಾನಮನಿತ್ತು ವಸಂತೋಕುಳಿಯಂ ಮಾಡುವುದಿದು ಮಧ್ಯಮ ಪೂಜಾವಿಧಾನಂ ಮತ್ತಂ ಜಘನ್ಯ ಪೂಜಾವಿಧಾನಮೆಂತೆಂದೊಡೆ –

ಬಡವರಾದ ಸಮ್ಯಗ್‍ದೃಷ್ಟಿಗಳೆನಿಸಿದವರ್ಗೆ ಪೂರ್ವಾರ್ಜಿತ ಪಾಪೋದಯ ಫಲದಿಂ ಜ್ವರ ಶಿರಃಶೂಲೆ ಕುಷ್ಟರೋಗ ಗ್ರಹಸ್ಥಿತಿ ಮುಂತಾದವರಲ್ಲಿ ಆವಮಾಸ ಆವದಿನದಲ್ಲಿಯಾದೊಡಂ ಬಡವರೊಡೆಯರೆನ್ನದೆ ನೋಂಪಿಯ ದಿವಸದಲ್ಲಿ ಮುಂಪೇಳ್ದಕ್ರಮದಿಂ ಯಥಾಶಕ್ತಿಯಿಂ ಸ್ವಾಮಿಗೆ ಪಂಚಾಮೃತಾಭಿಷೇಕಮಂ ಮಾಡಿಸಿ ಕಜ್ಜಾಯ ಪಾಯಸ ಶಾಲ್ಯನ್ನ ವ್ಯಂಜನಂಗಳಿಂ ಸಂಪೂರ್ಣ ನೈವೇದ್ಯಮಂ ಮಾಡಿ ಸಂಕ್ಷೇಪದಿಂ ಅರ್ಹದಾದಿ ಪಮ್ಸಪರಮೇಷ್ಠಿಗಳ ಪೂಜೆಯಂ ಮಾಡಿ ಮುಂಪೇಳ್ದಕ್ರಮದಿಂ ಸಾವಿರದೆಂಟು ಮಂತ್ರಪುಷ್ಪಮನಿಕ್ಕಿ ಸಹಸ್ರನಾಮಸ್ತೋತ್ರಮಂ ಮಾಡಿ ಕಡೆಯೊಳೊಂದರ್ಘ್ಯಮನೆತ್ತಿ ತಂತಮ್ಮ ನಿಷ್ಟ ಪರಿಹಾರಮಪ್ಪಷ್ಟು ದಿನಪರ್ಯಂತಮಾಗಿ ನಿತ್ಯದಲ್ಲೂ ಈ ಕ್ರಮದಿಂ ಸಹಸ್ರ ನಾಮಪೂಜೆಯಂ ಮಾಡುವುದು ಇಂತೀ ಉತ್ತಮ ಮಧ್ಯಮ ಜಘನ್ಯಭೇದದಿಂ ಮೂರು ತೇರನಪ್ಪ ಸಹಸ್ರನಾಮಪೂಜೆಯಂ ಅನುಕ್ರಮದಿಂ ಯಥಾಶಕ್ತಿಯಿಂ ಭಕ್ತಿಪೂತ್ವಕದಿಂದನವರತಂ ನಿತ್ಯಾರ್ಚನೆಯಾಗಿ ಮಾಡುತ್ತಿರೆ ಪೂರ್ವೋಪಾರ್ಜಿತ ಕರ್ಮೋದಯದಿಂದಾದ ಮಹೋಪಸರ್ಗಂಗಳಂ ಇಹಜನ್ಮದಲ್ಲಿ ಧರ್ಮತಪ್ಪಿದಾಚರಣೆ ವರ್ಣಸಂಕರ ಸಪ್ತವ್ಯಸನ ಮುಂತಾದ ದುರ್ವ್ಯಾಪಾರದಿಂದಾದ ಮಹಾಪಾಪಾಂಗಳ್ಪ ಹರಿಕುಂ || ದುರ್ಭಿಕ್ಷ ಕ್ಷಾಮಡಾಮರಂಗಳಿಲ್ಲದೆ ರಾಜರಾಷ್ಟ್ರದೇಶಂಗಲ್ಗೆ ಮಹಾಶಾಂತಿಯಕ್ಕುಂ | ಈ ನೋಂಪಿಯನೊಂದು ವರ್ಷಂ ನೋಂತವರ್ಗೆ ಏಳುಭವಕ್ಕೆ ಮುಕ್ತಿಯಕ್ಕುಂ | ಎರಡು ವರ್ಷಂ ನೋಂತವರ್ಗೈದು ಭವಕ್ಕೆ ಮುಕ್ತಿಯಕ್ಕುಂ | ಮೂರು ವರ್ಷಂ ನೋಂತವರ್ಗೆ ಮೂರು ಭವಕ್ಕೆ ಮುಕ್ತಿಯಕ್ಕುಂ | ಎಂದು ಮತಿಶ್ರುತಾವಧಿಮನಃಪರ್ಯಯ ಚತುರ್ಜ್ಞಾನ ಮಹಾತ್ಮೆಯನುಳ್ಳ ಗೌತಮಸ್ವಾಮಿಗಳು ತಮ್ಮ ಬೋಧೆಯಿಂ ಕಥಾಂತರಾನುಪೇಕ್ಷೆಯಿಂ ನಿರೂಪಿಸೆ ತದ್ವಚನಾಮೃತಾರ್ದ್ರೀಕೃತಾಂತಃಕರಣ ಪ್ರದೇಶ ನಿಕ್ಷಿಪ್ತಾಕ್ಷೂಣಭಕ್ತಿ ಬೀಜಾಂಕುರಾಯಾಮಾಣ ರೋಮಾಂಚಕಂಚುಕಿತರಾಗಿ:

ಜೀಯಾ | ಮಹಾಪ್ರಸಾದಮೆಂದು ಗಣಧರಸ್ವಾಮಿಗಳ ಜ್ಞಾನಾತಿಶಯಕ್ಕಂ ನೋಂಪಿಯ ಮಹಾತ್ಮೆಗಂ ಮೆಚ್ಚಿ ಶ್ರೇಣಿಕಮಹಮಂಡಲೇಶ್ವರನುಂ ಚೇಳಿನೀ ಮಹಾದೇವಿಯುಂ ಸಹಸ್ರನಾಮದ ನೋಂಪಿಯಂ ಕೈಕೊಂಡು ಅರ್ಹತ್ಪರಮೇಶ್ವರರಂ ಬೀಳ್ಕೊಂಡು ಗೌತಮಾದಿ ಮುನೀಶ್ವರರ ನಿಕಾಯಕ್ಕೆ ಯಥಾ ಕ್ರಮದೊಳು ವಂದನೆಯಂ ಮಾಡಿ ಶ್ರೇಣಿಕಮಹಾಮಂಡಲೇಶ್ವರಂ ಚೇಳಿನೀ ಸಹಿತಂ ಸಮವಸರಣದಿಂ ಪೊರಮಟ್ಟು ನಿಜಗಜಾಧಿರೂಢನಾಗಿ ಗೌತಮ ಸ್ವಾಮಿಯ ಜ್ಞಾನಾತಿಶಯಮಂ ನಿಜವಲ್ಲಭೆಗಂ ಪರಿಜನಕ್ಕಂ ಮರಳಿ ಪೊಗಳುತ್ತಂ ಬಂದು ಪುರಮನರಮನೆಯಂ ಪೊಕ್ಕು ಈ ಅಷ್ಟೋತ್ತರ ಸಹಸ್ರ ನಾಮದ ತತ್ಕಾಲದೊಳು ಯಥಾಕ್ರಮದಿಂ ನೋಂತು ಸಂತೋಷದಂತ ಮನೆಯ್ದಿ ಕೆಲವು ಪೂರ್ವಾರ್ಜಿತ ಕರ್ಮಂಗಳಂ ಕೆಡಿಸಿ ಕ್ಷಾಯಿಕ ಸಮ್ಯಗ್ದೃಷ್ಟಿಯಾಗಿ ಪರಮಾರ್ಹಂತ್ಯ ಲಕ್ಷ್ಮೀನಿಧಾನಭೂತ ಷೋಡಶಭಾವನೆಗಳಂ ಭಾವಿಸಿ ತೀರ್ಥಂಕರನಾಮಕರ್ಮಮುಪಾರ್ಜಿಸಿ ಮಹದೈಶ್ವರ್ಯದಿಂ ರಾಜ್ಯಮನಾಳುತ್ತಮಿರ್ದು ಸೌಖ್ಯಾಸ್ಪದನಾದಂ ಮತ್ತಮೀ ನೋಂಪಿಯಂ ಮಾಡಿದವರ್ಗಂ ಮಾಡಿಸಿದವರ್ಗಂ ವರ್ಗಫಲಮಕ್ಕುಮೆಂಬುದರ್ಹತ್ಪರಮೇಶ್ವರ ನಿರೂಪಣಂ || ಕಂದ ||

ಅನುಪಮಸೌಖ್ಯಾಸ್ಪದಮಿದು
ಜನವಿನುತಂ ಮೋಕ್ಷಕಾರಣಂತನೆನಿಪೀ
||
ಘನತರ ಸಹಸ್ರನಾಮದ
ಮುನಿಮತಸತ್ಕಥೆಯು ಮಾಡೆ ಜಗದಭಿಮತಮಂ ||

|| ಇತಿ ಸಹಸ್ರನಾಮದ ನೋಂಪಿಯ ಕಥಾವಿಧಾನಂ ||