ಕರ್ಮ್ಮೇಂಧನದಹನ ಶುಭಧ್ಯಾನದಾವಾರ್ಚ್ಚಿಷೇ ನಮಃ ||

|| ಕ || ಶ್ರೀ ಜಿನಚಂದ್ರಪ್ರಭರಂ
ಪೂಜಿಸಿ ಮನದೋಳೈಂದ್ರಧ್ವಜದೀ ನೋಂಪಿಯ
ರಾಜಪೊಲುಯರಿಯೆಪೇಳ್ವೆಂ
ಭೂಜನವಳಯಕ್ಕೆ ಪೇಳ್ವೆನತಿಹಿತಕಥೆಯಂ ||

ವ || ಅದೆಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರ ವಸುಧಾಭೂಷಣಮೆಂಬುದು ನಾಡು ಭೂತಿಳಕಮೆಂಬುದು ಪೊಳಲದನಾಳ್ವ ವಜ್ರಮಹಾರಾಜನೆಂಬರಸನಾತನ ಪಟ್ಟಮಹಿಷಿ ನಾಗಭಷಣೆಯೆಂಬಳು ಅಂತವರೀರ್ವ್ವರುಂ ಸುಖಸಂಕಥಾವಿನೋದದಿಂ ರಾಜ್ಯಂ ಗೆಯ್ಯುತ್ತಮಿರಲೊಂದು ದಿವಸಂ ವನಪಾಳಕಂ ಬಂದು ಬಿನ್ನಪ ನಮ್ಮ ಪಶ್ಚಿಮ ಸೌಂದರ್ಯವನಕ್ಕೆ ದೇಚಚಂದ್ರರೆಂಬ ಚಾರಣಮುನೀಶ್ವರರು ಬಿಜಯಂಗೆಯ್ದರೆಂದು ಬಿನ್ನವಿಸೆ ಹರ್ಷೋತ್ಕರ್ಷಚಿತ್ತನಾಗಿ ಬಂದವನಪಾಲಕಂ ಗಂಗಚಿತ್ತಮನಿತ್ತಾನಂದ ದುಂದುಭಿಯಂ ಪೊಯ್ಸಿ ಪರಿಜನ ಪುರಜನ ಪೋಗಿ ದೂರದಿಂ ವಾಹನಮನಿಳಿದು ಮುನೀಶ್ವರರಂ ಪ್ರದಕ್ಷಿಣೆಗೆಯ್ದು ನಾನಾ ಕುಸುಮ ಫಲಾರ್ಚನೆಗಳೀಂರ್ಚಿಸಿಯೊಂದಿಸಿ ಮುಂದೆ ಕುಳ್ಳಿರ್ದ್ದು ನಿರ್ಮಲಾಂತರಂಗ ಸಂಗತನಾಗಿ ಧರ್ಮ್ಮಶ್ರವಣಮಂ ಕೇಳ್ದು ನಾಗಭೂಷಣ ಕರಂಗಳಂ ಮುಗಿದು ಎಲೆಸ್ವಾಮಿ ಎನಗೆ ಗಂಡುಮಕ್ಕಳಿಲ್ಲದೆ ಯೆನ್ನಜನ್ಮಂ ನಿರರ್ತ್ಥಕಮಹುದು ಅಲ್ಲದೆನೆಗೆ ಪುತ್ರಸಂತಾನಮಕ್ಕಮೋ ಬೆಸಸಿಮೆಂಬುದುಮಾ ಮುನೀಶ್ವರರಿಂತೆಂದರು ಎಲೆಮಗಳೆ ನೀನು ಐಂದ್ರಧ್ವಜದ ನೋಂಪಿಯಂ ಕನಕಮಾಲೆಯೆಂಬ ಪರದಿತಿ ನೋನುತ್ತಿರಲಾ ನೋಂಪಿಯ ನಿರಾಕರಿಸಿದ ಪಾಪದ ಫಲದಿಂ ನಿನಗೆ ಪುತ್ರಸಂತಾನಮಿಲ್ಲದೆ ಯಿದ್ದೀತು ಯಿನ್ನಾ ನೋಂಪಿಯ ನೀನು ಸವಿಸ್ತರ ಸಮ್ಯಕ್ತ್ವಪೂರ್ವಕವಾಗಿ ನೋನುತ್ತಿರಲ್ಲಿನಗಿಂದ್ರನಿಗೆ ಸದೃಶ ಪುತ್ರನಾದನೆಂದು ಪೇಳೆ ಪುತ್ರೋತ್ಸವವಾದಂಥಾ ಪರಿಣಾಮಮಾಗಿ ಎಲೆಸ್ವಾಮಿ ಯಾ ನೋಂಪಿಯವಿಧಾನಮಂ ಬೆಸಸಿಮೆನಲವರಿಂತೆಂದರೂ ಆಶಾಢಶುದ್ಧ ಅಷ್ಟಮಿಯಲ್ಲು ಚಂದ್ರನಾಥಸ್ವಾಮಿಗಳ್ಗೆ ಪಂಚಾಮೃತಾಭೀಷೇಕ ಪೂಜೆಯಂ ಮಾಡಿ ಅಷ್ಟವಿಧಾರ್ಚನೆಗೆ ಸೇವಗೆಯ ಪಾಯಸತುಪ್ಪ ಬೆಲ್ಲ ಹೂರಿಗೆ ಮಂಡಗೆ ಹೂರಣಂಬುಸಹಿತಂ ಒಂದು ಭಕ್ಷದಲ್ಲೂ ಹನ್ನೆರಡು ಹನ್ನೆರಡುಸಹಿತ ಚರುವನಿಟ್ಟು ತದ ನಂತರಂ ಶ್ರುತಪೂಜೆಯಂ ಮಾಡಿ ಶ್ರುತಕ್ಕೆ ಆರಾರು ಭಕ್ಷಸಹಿತ ಚರುವನಿಟ್ಟು ಪೂರ್ವ್ವಾಚಾರ್ಯ್ಯಾರ್ಗೆ ನಾಲ್ಕು ನಾಲ್ಕು ಭಕ್ಷಸಹಿತ ಚರುವನಿಟ್ಟು ಯೀ ನೋಂಪಿಯ ಕೈಕೊಂಡು ಕಥೆಯಂ ಕೇಳ್ದು ಉಪವಾಸಮಂ ಕೈಕೊಂಡು ಆರದಿರ್ದೊಡೆ ಏಕಭುಕ್ತಮಂ ಏಕಠಾಮದಲ್ಲು ಮಾಡುವುದು ಯೀ ನೋಂಪಿಯಂ ನಾಲ್ಕು ತಿಂಗಳಪರ್ಯಾಂತ ದಿನಂಪ್ರತಿ ಎರಡು ಹಿಡಿಯಕ್ಕಿಯ ಪುಂಜಮಂ ಎರಡೆರಡಡಕೆ ನಾಲ್ಕು ಎಲೆ ಯನರ್ಚಿಸೂದು ಅವುದಾನೊಂದು ಬಿಳಿಯಪುಷ್ಪಮನರ್ಚಿಸೂದು ನಾಲ್ಕನೆಯ ತಿಂಗಳ ಪೌರ್ಣ್ನಿಮಿಯಲ್ಲಿ ಮಾಡುವ ಉದ್ಯಾಪನಾಕ್ರಮವೆಂತೆಂದೊಡೆ ಚಂದ್ರನಾಥರ್ಗೆ ಇಪ್ಪತ್ತು ನಾಲ್ಕು ಹೂರಿಗೆ ೨೪ ಮುಂಡುಗೆ ೨೪ ಹೂರಣಂಬು ೨೪ ಸೇವಗೆಯ ಪಾಯಸದ ಚರು ತುಪ್ಪ ಬೆಲ್ಲ ಸಹಿತ ಚರುವನಿಟ್ಟು ವಂದು ಧ್ವಜವನ್ನು ಮಾಡಿಸಿ ಅರ್ಚಿಸೂದು ಶೃತಕ್ಕೆ ೧೨ ಆಚಾರ್ಯ್ಯರ್ಗ್ಗೆ ೬ ಪದ್ಮಾವತಿರೋಹಿಣೀ ದೇವಿಯರ್ಗ್ಗೆ ನಾಲ್ಕು ನಾಲ್ಕು ಭಕ್ಷಸಹಿತ ಚರು ಪಾಯಸದಿಂದಿಡುವುದು ಜ್ವಾಲಾಮಾಲಿನಿಯ ಮರ್ಯ್ಯಾದೆಯಲ್ಲು ಒಬ್ಬ ಸುವಾಸಿನಿಯರಿಗೆ ವೋಲೆಯ ತೋಡು ಗಂಧ ಚಂದ್ರಸಹಿತಂ ಕೊಡುವುದು ದೇವರಿಗೆ ಕಾಣಿಕೆಯ ನಿಕ್ಕುವುದು ಕಥೆಯಂ ಕೇಳ್ದು ಕಥಕನಂ ಪೂಜಿಸೂದು ಮೂರು ತಂಡ ಋಷಿಯರ್ಗಮಜ್ಜಿಕ್ಕೆಯರ್ಗ್ಗೆ ಕುಂಚ ಗುಂಡಿಗೆ ಪುಸ್ತಕ ಠವಣೆ ಕೋಲು ಶ್ರುತಪಾವ್ಡೆಸಹಿತಮಾಗಿ ಕೊಡುವುದು ಮೂರುತಂಡ ಅಜ್ಜಿಯರ್ಗ್ಗೆ ವಸ್ತ್ರಮಂ ಕೊಡುವುದು ಚಾತುರ್ವ್ವರ್ಣ್ನಕ್ಕೆ ಆಹಾರದಾನ ಸುವರ್ಣ್ನದಾನಮಂ ಮಾಳ್ಪುದು ಇದು ಉದ್ಯಾಪನೆಯ ಕ್ರಮವೆಂದು ಪೇಳೆ ಕೇಳ್ದು ಸಂತುಷ್ಟಚಿತ್ತೆಯಾಗಿ ಆ ನೋಂಪಿಯಂ ಕೈಕೊಂಡು ನೋಂತುದ್ಯಾಪನೆಯಂ ಮಾಡಿದ ಫಲದಿಂ ಯಿಂದ್ರನ ಸಮಾನಮಪ್ಪಪುತ್ರನಂ ಪಡೆದು ಅನೇಕೈಶ್ವರ್ಯ್ಯಮನನುಭವಿಸಿ ಕುಮಾರಂಗೆ ಪಟ್ಟ ಮಂಕಟ್ಟಿ ಕಡೆಯೊಳಿವಶಿಷ್ಟ ವೈರಾಗ್ಯ ಪರಾಯಣೆಯಾಗಿ ಜಿನದೀಕ್ಷೆಯಂ ಕೈಕೊಂಡು ಉಗ್ರೋಗ್ರತಪಶ್ಚರಣದಿಂ ಮುಡುಪಿ ಬ್ರಹ್ಮಕಲ್ಪದೊಳ್ಪುಟ್ಟಿ ಅಲ್ಲಿಯ ದಿವ್ಯಸುಖಮನನುಭವಿಸಿ ಬಂದಿಲ್ಲಿ ಚಕ್ರವರ್ತ್ತಿಯಾಗಿ ಷ್ಟೃಂಡಾಧಿಪತಿಯಾಗಿ ರಾಜ್ಯಶ್ರೀಯನನುಬುಭವಿಸಿ ಕಡೆಯಲ್ಲಿ ಜಿನದೀಕ್ಷೆಯಂ ಕೈಕೊಂಡು ಪರಂಪರೆಯಿಂ ಮೋಕ್ಷಮ ನೈಯ್ದಿದರೂ || ಜಯಮಂಗಳ ಮಹಾ || ಶ್ರೀ ಶ್ರೀ