ಶ್ರೀ ವೀತರಾಗಾಯನಮಃ || ಶೀತಳ ತೀರ್ತ್ಥಂಕರಾಯನಮಃ ||

ದಶಲಾಕ್ಷಣಿಕೋಧರ್ಮ್ಮಾಯೆನಾ ಸೌಪ್ರತಿವಾದಿತಃ
ವಕ್ಷೇಹಂ ಜಿನಂ ನತ್ವಾ ಸುಗಂಧದಶಮಿಕಥಾ
|

ಅದೆಂತೆಂದೊಡೆ

|| ಕ || ಶರನಿಧಿವೇಷ್ಟಿತಮಾಗಿರೆ
ವರ ಜಂಬೂದ್ವೀಪಮಿರ್ಪುದಾ ದ್ವೀಪಕ್ಕಾ
ಭರಣದವೊಲ್ಪಡುವಿಕ್ಕುಂ
ಸುರಗಿರಿಯುದಱಿಂದ ತೆಂಕ ಭರತ ಕ್ಷೇತ್ರಂ ||

|| ವ || ಆ ಭರತ ಕ್ಷೇತ್ರದ ಮಗಧ ವಿಷಯದ ರಾಜಗೃಹದ ನಗರದಧಿರಾಜಂ ಸಕಲಗುಣನಿಧಿ ಶ್ರೇಣಿಕ ಮಹಾ ಮಂಡಲೇಶ್ವರನಾತನ ಮನೋನಯನ ವಲ್ಲಭೆ ಸಕಲಗುಣನಿಧಿಯುಮೆನಿಸಿದ ಚೇಳಿನಿ ಮಹಾದೇವಿಯಂತವರಿರ್ವ್ವರುಮುಖಂಡಿತ ಭೋಗಭಾಗಿಗಳಾಗಿ ಸಕಲ ಸಾಮ್ರಾಜ್ಯ ಶ್ರೀಯನನುಭವಿಸುತ್ತುರ್ದ್ದೊಂದು ದಿವಸಂ ಸರ್ವ್ವಾವಸರಮೆಂಬೊಡ್ಡೋಲಗ ಸಾಲೆಯೊಳೋಲಗಂಗೊಟ್ಟಿರ್ಪ್ಪುದಾ ಸಮಯದೊಳು

|| ಕ || ವನಪಾಲಕನೊರ್ವ್ವಂ ಬಂ
ದನವಧ್ಯ ಚರಿತ್ರನಖಿಳ ಸುರ ಸಮಿತಿಯುತಂ
ಗನ ಮೋಹಾಂಧ ತಮಃ ಸಂ
ಹನನಂ ಬಂದಿರ್ದ್ದ ವೀರಜಿನನೀ ಗಿರಿಯೊಳು ||

|| ವ || ಯೆಂದು ಬಿಂನಪಂಗೆಯ್ವ ವಸಂತಾನಿಲನೆಲಪದಿಂ ನಲಿದಂ ಕುರಿತಮಾದಮಾಕಂದದಂತಿರಾನಂದಮನೆಯ್ದಿ ರೋಮಾಂಚನ ಕಂಚುಕಿತ ಶರೀರನಾಗಿ ಸಿಂಹಾಸನದಿಂದೆಂರ್ದ್ದು ತತ್ಫುರದ ನೈರುತ್ಯ ದಿಗ್ಭಾಗದ ವಿಪುಲಗಿರಿದಿರಾಗಿ ಚೇಳಿನಿ ಮಹಾದೇವಿ ಸಹಿತೇಳಡಿಯಂ ನಡದು ಜಯ ಜಯ ಜಯೆಮೆನುತ್ತಂ ಸಾಷ್ಟಾಂಗವೆಱಗಿ ಪೊಡೆವಟ್ಟು | ರುಷಿ ಸೂಚಕಂಗಂಗ ಚಿತ್ತಮನಿತ್ತು ಆನಂದ ಭೇರಿಯಂ ಪೊಯ್ಸಿ

|| ಕ || ಪರಿಜನ ಪುರಜನಮೆಲ್ಲಂ
ಬರೆ ಪೂಜಾದ್ರವ್ಯವೆರಸು ಚೇಳಿನಿಸಹಿತಂ
ನರನಾಥಂ ನಡೆ ತಂದಂ
ಪರಮ ಜಿನೇಶ್ವರನಂ ಕಾಣ್ಪುತ್ಸವದಿಂ ||

ವ || ಅಂತು ಬಂದು ಸಮವಸರಣಮಂ ಪೊಕ್ಕು ಗಂಧಕುಟಿಯಂ ಪೊಕ್ಕು ತ್ರಿಃ ಪ್ರದಕ್ಷಿಣಂಗೆಯ್ದು ರೂಪಸ್ತವ ಗುನಸ್ತವ ವಸ್ತುಸ್ತವಂಗಳಿಂ ಸ್ತುತಿಯಿಸಿ ಸಾಷ್ಟಾಂಗ ಪ್ರಣುತನಾಗಿ ದಿವ್ಯಾರ್ಚ್ಚನೆಗಳಿಂದರ್ಚ್ಚಿಸಿ ವಂದಿಸಿ ಗುರುಭಕ್ತಿ ಪೂರ್ವ್ವಕಂ ಗೌತಮ ಗಣಧರಾದಿ ಮುನಿ ಸಮುದಾಯಕ್ಕೆ ವಂದನೆಯಂ ಮಾಡಿ ಜೀವ ಜೀವಾದಿ ತತ್ವಶ್ರವಣಾ ನಂತರಂ ನಲಿದೆಲೆ ಸ್ವಾಮಿ ಯೆಮಗನಂತ ಸುಇಕ ಕಾರಣಮುಮಜ್ಞಾನ ಕೃತ್ಯದಿಂದಾದ ದೋಷ ಪರಿಹಾರಾರ್ತ್ಥಮುಮಾಗಿ ಯಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರಿಂತೆಂದರೂ

|| ಕ || ಅನುಪಮ ಸುಗಂಧ ದಶಮಿಯ
ದೆನೆ ಪೆಸರಿಂದೊಪ್ಪುತಿರ್ಪ್ಪುದಾ ನೋಂಪಿಯ ನಿಂ
ಮನಮೊಲ್ದು ನಲಿದು ಮಾಡೆನೆ
ವನಜಾನನೆ ಯದಱ ತೆಱನನಱಿಪುದೆಂದಳ್ ||

|| ವ || ಯೆನಲವರೀ ಜಂಬೂ ದ್ವೀಪದ ಭರತ್ ಕ್ಷೇತ್ರದಾ ವಿಜೆಯಾರ್ದ್ಧ ಪರ್ವತದುತ್ತರ ಶ್ರೇಣಿಯ ಶಿವಮಂದಿರದ ನರನಾಥಂ ಅರಿಂಜಯ | ಪ್ರಿಯಂಕರನಾತನ ಪಟ್ಟದರಸಿ ಕಮಳಶ್ರೀಯೆಂಬಳಾತನ ರಾಜಶ್ರೇಷ್ಠಿ ಸಾಗರದ್ಅತ್ತನೆಂಬನತನ ಮನೋನಯನ ವಲ್ಲಭೆ ಧನಲತೆಯೆಂಬಳವರ್ಗ್ಗೆ ಮಗಳು ಮನೋರಮೆಯೆಂಬಳವಳ್ಸಕಲ ಜನಮನೋರಮೆಯಾಗಿ ಕಂನೆಗಾಲದುಂನತೋನ್ನತ ಮದದಿಂದಿರುತಿರಲೊಂದು ದಿವಸಂ

|| ಕ || ಮಾಸೋಪವಾಸಮಂ ತಾಂ
ಮಾಸದ ಪರಿಣಾಮದಿಂದೇಕಡೆಯೆಯ್ದಿಸಿ ದಿ
ಗ್ವಾಸ ಸುಗುಪ್ತಾಚಾರ್ಯ್ಯ
ರ್ಮ್ಮಾಸಿದ ರತ್ನದ ವೋಲಾಗಿ ಚರಿಗೆಗೆ ಬಂದರು ||

|| ವ || ಅಂತವರ್ಶಿವಮಂದಿರ ನಗರಮಂ ಪುಗಲಾ ಮನೋರಮೆ ಕಂಡೆಜಲನೀಡಾಡೆಯವರಲಾಭಮಾಗಿ ಪೋಗಲಾ ಮನೋರಮೆಗೆ ನೀಚಗತಿಗಾಯುಷ್ಯಂ ಕೆಟ್ಟಿ ಕೆಲವು ದಿವಸಕ್ಕೆ ಪಮ್ಚತ್ವಮನೆಯ್ದಿ ಯಿ ನಗರದಲ್ಲಿಯೇ ರಾಸಭಿಯಾಗಿ ಪುಟ್ಟಿ ನಾನಾ ದುಃಖಮನುಂಡು ಸತ್ತುಜ್ಜೆನಿಯಲ್ಲಿ ಪೆಂಣ್ನಾನೆಯಾಗಿ ಪುಟ್ಟಿ ನಮೆದು ಮೈಖಜ್ಜಿಯಾಗಿ ಪುಳಿತು ಸತ್ತು ಪುರಮೆಂಬಗ್ರಹಾರದೊಳು ಗ್ರಾಮ ಶೂಕರಿಯಾಗಿ ಪುಟ್ಟಿ ಕಿಸುಗುಳಮೆ ತನಗಾಹಾರಮಾಗಿ ಬೆಳೆದು | ಕಡೆಯೊಳು ಚೈತ್ಯಾಲಯಕ್ಕೆ ಬರ್ಪ್ಪ ಬಟ್ಟೆಯೊಳ್ಬಿದ್ದು ಪೂಜೆಗೆ ಪುರದ ವಿನಯಸೇನರಾಜನರಸಿ ವಸಂತ ತಿಲಕೆಯೆಂಬಳ್ಗೆ ದುರ್ಗ್ಗಂಧಮೇ ಮೂರ್ತಿಯಾಗಿ ಪುಟ್ಟಿ ದುರ್ಗ್ಗಂಧಿಯೆಂಬ ಪೆಸರಂ ಪಡೆದು

|| ತ್ರಿವಿಧಿ || ದಿಟ್ಟಿಗೆಸೆವಾ ರೂಪಮುಂಮುಟ್ಟೆವರೆ ದುರ್ಗ್ಗಂಧ
ಕೆಟ್ಟಳೀ ರೂಪ ಪಡೆದಳೆನುತಮಿವಳನಿಂ
ಮುಟ್ಟುವ ಪಾಪಿಯವನಾರೋ ||

ಎಂದು ಜನಮೆಲ್ಲಂ ನಯನಮನಿತ್ತು ನಾಸಿಕನೊತ್ತುತಿರ್ದ್ದೊಳ ಸಾರ್ದ್ದು ಪೋಗುತ್ತಿರಲೊಂದು ದಿವಸಮಾ ಪುರೋಪವನಕ್ಕೆ ಸಾಗರಸೇನ ಭಟ್ಟಾರಕ್ಕರ್ಬಿಜಯಂಗೆಯ್ಯಲಾ ವನಮೆಲ್ಲಮಂಕುರಿತ ಕೋರಕಿತ ಕುಸುಮಿತ ಫಲಿತಮಾಗಲಾ ವನಪಾಲಕನಕಾಲ ಫಲಂಬೆತ್ತನೆಂದು ಅವನೆಲ್ಲಮಂ ಕೊಂಡುಇ ಪೋಗಿಯರಸಂಗೆ ಕುಡಲಾತಂ ಮುನಿಗಳ ತಪಃ ಪ್ರಭಾವಮೆಂದು ರಾಗಿಸಿ ರಾಗೋತ್ತ ರೋಮಾಂಚ ಕಂಚುಕಿತ ಶರೀರನಾಗಿ ಪರಿಜನಂಗಳೆರಸು ಸಂಭ್ರಮದಿಂ ಪೋಗಿ ಪೂಜಿಸಿ ವಂದಿಸಿ ಸ್ತುತಿಸಿ ಧರ್ಮ್ಮಶ್ರವಣಮಂ ಕಾರಣಮಾಉದೆಂದು ಭಿಂನಪಂಗೆಯ್ಯಲವರಧಿ ಬೋಧದಿಂದಱಿದಿಂತೆಂದರೂ

|| ಕ || ನಿಂನ್ನ ಮಗಳಯ್ದು ಭವದೊಳು
ಮುಂನೆ ಸುಗುಪ್ತಾಚಾರ್ಯ್ಯರಂ ಮಹಾಪಾತಕದಿಂ
ಮಂನಯಕೆಡೆ ನುಡಿದಂನಯ
ಬೆಂನಂಬೆಂನಡಿ ಬಿದದಲೆಂದು ಕಾಡಿತಿಂತೀ ತೆಱೆದಿಂದಂ ||

|| ವ || ಯಂದು ಮುನ್ನ ಪೇಳ್ದೆಂತೆ ಸವಿಸ್ತರಮರಿಪಲಾ ವಿನಯಸೇನಾ ನೃಪನೆಲೆ ಸ್ವಾಮಿ ಯಿಂನಾಉದು ದೋಷಂ ದುರ್ಗ್ಗಂಧಂ ಪೋಪ ತೆಱನಂ ದಯಗೆಯ್ವದೆನಲವರಿಂತೆಂದರುಂ | ಮಾಪ್ತಾಗಮ ಪದಾರ್ಥಶ್ರದ್ಧಾನರೂಪಮಪ್ಪ ಸಮ್ಯಕ್ತ್ವ ಪೂರ್ವ್ವಕಂ | ಸುಗಂಧ ದಶಮಿಯ ಭಾದ್ರಪದ ಮಾಸದ ಶುಕ್ಲಪಕ್ಷದ ದಶಮಿಯೊಳು ಶುಚಿರ್ಭ್ಭೂತರಾಗಿ ಚೈತ್ಯಾಲಯಕ್ಕೆ ಪೋಗಿ ನಿಶಿಧಿಯಿದೊಳಗಂ ಪೊಕ್ಕು ಈರ್ಯಾಪಥಶುದ್ಧಿ ಶರೀರ ಶುದ್ಧಿಗೆಯ್ದು ಸರ್ವ್ವೌಷಧಿಯಿಂ ಗಂಧೋದಕಮಂ ಮಾಡಿಸಿ ಆ ಗಂಧೋದಕಂ ನೋಂಪವರೆಲ್ಲಂ ಮಸ್ತಕದೊಳ್ತಳಿದುಕೊಂಬುದು ಪ್ರತ್ಯೇಕಂ ಹತ್ತುಹತ್ತು ಜಲಧಾರೆ ಗಂಧಾಕ್ಷತೆ ಪುಷ್ಪ ಚರು ದೀಪ ಧೂಪ ಫಲಾರ್ಗ್ಘ್ಯಂಗಳಂ ವಕ್ಷ್ಯಮಾಣ ಮಂತ್ರದಿಂ ಕ್ರಮಂ ತಪ್ಪದರ್ಚ್ಚನೆಯಂ ಮಾಡುವ ಮಂತ್ರಂ || ಓಂ ಹ್ರೀಂ ಅರ್ಹಂ ವೃಷಭ ತೀರ್ತ್ಥಂಕರಾಯ ಜಲಂ ನಿರ್ವ್ವಪಾಮಿತಿ ಸ್ವಾಹಾ | ಓಂ ಹ್ರೀಂ ಅರ್ಹಂ ಅಜಿತ ತೀರ್ತ್ಥಂಕರಾಯ | ಓಂ ಹ್ರೀಂ ಅರ್ಹಂ ಶಂಭವತೀರ್ತ್ಥಂಕರಾಯ ಜಲಂ || ಓಂ ಹ್ರೀಂ ಅರ್ಹಂ ಸುಮತಿ ತೀರ್ತ್ಥಂಕರಾಯ || ಓಂ ಹ್ರೀಂ ಅರ್ಹಂ ಪದ್ಮ ಪ್ರಭತೀರ್ತ್ಥಂಕರಾಯ ಜಲಂ || ಓ ಹ್ರೀಂ ಅರ್ಹಂ ಸುಪಾರಿಶ್ಚ ತೀರ್ತ್ಥಂಕರಾಯ ಜಲಂ || ಓಂ ಹ್ರೀಂ ಅರ್ಹಂ ಚಂದ್ರ ಪ್ರಭ ತೀರ್ತ್ಥಂಕರಾಯ ನಮಃ ಮಮಾ ಜ್ಞಾನ ಸ್ವಕ್ರುತದೋಷಂ ಜಾಂಸ್ಯಪಹಾರ ತುಚ್ ಭಾವಾನ್ ಸ್ವಾಹಾ || ಯೀ ಕ್ರಮದಿಂ ಹತ್ತು ಜಲಧಾರಾಧ್ಯಷ್ಟ ವಿಧಾರ್ಚ್ಚನೆಯಂ ಮಾಡಿ ಶ್ರೀಗಂಧ ಕುಂಕುಮ ಕರ್ಪ್ಪೂರ ಪಂನೀರು ಕೃಷ್ಣಾಗರುಸಾರ ಯೇಲಕ್ಕಿ ಲಾಮಂಚ | ಮುಡಿವಾಳ | ಸಂಪಗೆಯ ಮೊಗ್ಗೆ ಮೊದಲಾದ ಸಕಲ ಸುರಭಿ ದ್ರವ್ಯಂಗಳಿಂದ ವಸುಧಾರೆಯನಿಟ್ಟು ಜಾವ ಜಾವಕ್ಕೊಂದೊಂದಾರಾಧನೆಯಂ ಈ ಕ್ರಮದಿಂ ರಾತ್ರೆ ನಾಲ್ಕು ಜಾನವರಂ | ನಾಲ್ಕಾರಾಧನೆಯಂ ಮಾಡಿ ಯಿಂತು ಧರ್ಮ್ಮ ಧ್ಯಾನದಿಂದ ರಾತ್ರಿಯಂ ಕಳಿದು | ಪ್ರಭಾತದಲ್ಲಿ ಯಾ ವಸುಧಾರೆಯ ಗಂಧೋದಕಮಂ

||ಕ || ಸರ್ವ್ವಾಂಗದೊಳುದ್ಭವಿಸಿದ
ದುರ್ವ್ವಾಸನೆ ಪೋಪ ತೆಱದಿನುದ್ವರ್ತ್ಥನಮಂ
ನಿರ್ವ್ವೇಗವೆರಸಿ ಮಾಡುಗೆ
ಪೂರ್ವ್ವದ ದುರ್ಗ್ಗಂಧಮಳಿಗು ಕ್ರಮದಿಂದಾಗಳೂ ||

|| ವ || ಮತ್ತಮುದಯದಾರಾಧನೆಯಂ ಮಾಡಿ | ಕನಕಮಯ ಕೇತಕಿದಳದಿಂದರ್ಗ್ಗ್ಯಮನೆತ್ತಿ ಶ್ರುತಮಂ ಗುರುಗಳುಮಂ ಪೂಜಿಸಿ ಹತ್ತು ತಂಡ ರುಷಿಯರ್ಗ್ಗೆ ಕೈಯಲೆತ್ತಿ ಚಾತುರ್ವ್ವಣ್ನಕ್ಕಾಹಾರ ದಾನಂಗಳನಿತ್ತು ಬಮ್ದು ಜನಂಗಳ್ಸಹಿತಂ ಪಾರಣೆಯಂ ಮಾಳ್ಪುದು | ನಿಚ್ಚ ನಿಚ್ಚಮಾ ಗಂಧೋದಕಮಂ ಪೂಸಿಕೊಂಬುದಿಂತು ದಶವರ್ಷಂಬರಂ ನೋಂತುದ್ಯಾಪನೆಯಂ ಮಾಳ್ಪ ಕ್ರಮಮೆಂತೆನೆ

|| ಕ || ಶೀತಳ ತೀರ್ತ್ಥಂಕರ
ಮೂರ್ತ್ತಿಯಂ ಮಾಡಿ ಪ್ರತಿಷ್ಠೆಗೆಯ್ಯನುನಯದಿಂ
ಶೀತಳನಾಥ ಪುರಾಣಮ
ನೋತತಿ ನಿಪುಣರ್ಗ್ಗೆ ಕಾಡಿಗೆ ವಸ್ತ್ರ ಸಮೇತಂ ||

|| ವ || ಬಳಿಕಂ ಶ್ರುತ ವಸ್ತ್ರ ಬೆಳ್ಳಿಯ ಪುಷ್ಪಮನ್ನಿಕ್ಕಿದ ಪೊಟ್ಟನೂಲದಾರ ಅಉಷದವ ತುಂಬಿದ ಭರಣಿ | ನಾಳಿಕೇರ ಫಲಮಿವಂ ಪ್ರತ್ಯೇಕಂ ಹತ್ತು ಹತ್ತು ತಂಡ ಕ್ಷುಲ್ಲಕ ಸಾಧುಗಳ್ಗೆ ಸುಗಂಧ ದ್ರವ್ಯ ಸಹಿತಂ ಕೊಡುಉದು | ರುಷಿಯರ್ಗ್ಗೆ ಹತ್ತು ತಟ್ಟು ಕುಂಚ ಗುಂಡಿಗೆ ಸಹಿತಂ ಕೊಡುಉದು | ಸಮ್ಯಗ್ದೃಷ್ಟಿಗಳ್ಗೆ ಹತ್ತು ಹಚ್ಚಡಮಂ ಕೊಡುಉದು ಕಥಾ ಪುರುಷನಂ ಮಂನಿಸೂದು | ದೀನಾನಾಥರ್ಗ್ಗೆ ಭೂರಿದಾನಮಂ ಕೊಟ್ಟು ತುಷ್ಟಿವಡಿಸೂದು | ಯೀ ಕ್ರಮದಿಂದುದ್ಯಾಪನೆಯಂ ಮಾಳ್ಪುದೆನೆ ಕೇಳ್ದಾ ವಿನಯಸೇನ ಭೂಪಾಲನ ಕುಮಾರಿಯುಂ ನೋಂಪಿಯಂ ಕೈಕೊಂಡು ಕ್ರಮದಿಂ ನೋಂತುದ್ಯಾಪನೆಯಂ ಮಾಡಿದ ಫಲದಿಂ ತದ್ಭವ ದೊಳೆ | ಪಾರಿಜಾತ ಕುಸುಮವತ್ಸುಗಂಧೆಯ | ಸುವರ್ಣ್ನವರ್ಣ್ನೆಯುಮಾಗಿ ಸುಖದಿಂದಿರುತಿರಲೊಂದು ದಿವಸಂ

|| ಕ || ಶೀತಳ ಜಿನರಂ ಕಂಡಾ
ಕೇತಕಿಪಂಚ ರತ್ನಮಯಮಾಗಿರೆ ಬರ್ಪ್ಪಾ
ಸುಸರ ನೆರವಿಯಂದಾ
ಸಸಿ ಮುಖಿ ಪೂತ ತಂದವೆರಸು ಬೆಱಗಾದಾಗಳ್ ||

|| ವ || ಅಂತು ಸಮವಸರಣದಿಂ ಬರ್ಪ್ಪ ದೇವರ್ಕ್ಕಳ ವೈಭವಮಂ ಕಂಡದೆಮಗಕ್ಕೆಂದು ನಿಧಾನಿಸಿ ಕೆಲವಾನು ದಿವಸಕ್ಕೆ ಶರೀರ ಭಾರಮನಿಳಿಪಿ ಯಾ ಸುಗಂಧೆ ದ್ವಿತೀಯ ಸ್ವರ್ಗ್ಗದೊಳು ದೇವ ಸ್ತ್ರೀಯಾದುಳುಮಾ ವಿನಯಸೇನ ಪದಿನಾಱನೆಯ ಸ್ವರ್ಗ್ಗದೊಳು ದೇವನಾಗಿ ದ್ವಾವಿಂಶತಿ ಸಾಗರೋಪಮಮಾಯುರ್ವ್ವರಂ ಸಕಲ ಭೋಗೋಪಭೋಗಂ ಗಳನನುಭವಿಸುತ್ತಮಿರ್ದ್ದಮಂನೆಗಮಾ ಸುಗಂಧೆಯಲ್ಲಿಂ ಬಂದೀ ವಿಷಯದ ಪೃಥ್ವೀಪುರದಧಿ ರಾಜಂ ಪ್ರಜಾಪಾಲನಾತನರಸಿ ಮದನ ಸೌಂದರಿಗಂ ಮದನಾವಳಿಯೆಂಬ ಕುಮಾರಿಯಾಗಿ | ಕಕನೋಜ್ಜಲಾಂಗಿಯುಂ | ಮೃಗನಾಭಿವಂತ್ಸುಂಗಂಧೆಯುಂ | ಭ್ರಮರಚ್ಛತೆಯಮೆನಿಸಿ ಬೆಳೆಯುತ್ತಮಿರೆ

|| ಕ || ಅತ್ತಾ ಕೌಶಂಬಿ ನಗರದೊ
ಳುತ್ತಮನರಿಮದನನರಿಸಿ ಗುಣವತಿಗಂ ಸ
ದ್ದೃತ್ತಕುಮಾರಂ ತಾಂ ಪುರು
ಷೋತ್ತಮನೆನೆ ಪುಟ್ಟಿದ ಕಂನೆಗರಸಾದನವಂ ||

|| ವ || ಅಂತುವರನಾಗಿ ಭೋಗೋಪಭೋಗಂಗಳನನುಭವಿಸುತ್ತಮಿರಲೊಂದು ದಿವಸಂ | ಶ್ರೇಯಾಂಸಮುನಿಗಳಾ ಪಟ್ಟಣದ ಬಹಿರುದ್ಯಾನವನಕ್ಕೆ ಬಿಜಯಂಗೆಯ್ಯಲಾ ಪುರುಷೋತ್ತಮಂ ಮದನಾವಳಿ ಸಹಿತಂ ಸಂಭ್ರಮದಿಂ ಬಂದು ಪೂಜಿಸಿ ಪೊಡೆವಟ್ಟು ಧರ್ಮ್ಮ ಶ್ರವಣಮ ಬ್ಕೇಳ್ದು ಯೆಲೆ ಸ್ವಾಮಿ | ಯೆಂನರಸಿ ಮದನಾವಳಿಗಾವ ಕಾರಣದಿನತ್ಯಂದ ಶರೀರ ಸುಗಂಧಮುದಯಿಸಿತ್ತೆಂಬುದುಮಾ ಭಟ್ಟಾರಕರು ಪೂರ್ವ್ವಂ ವೃತ್ತಾಂತಮಂ ಸವಿಸ್ತರಂ ಪೇಳಲಾ ನಿಜಭತ್ರಯಮನೆಯ್ದಿ ವರ್ತ್ತಿಸಿದುದಂ ಕೇಳಿಯದುವೆ ವೈರಾಗ್ಯಕಾರಣಮಾಗ್ ಪುರುಷೋತ್ತಮನುಂ | ಮದನಾವಳಿಯುಂ ಜಿನದೀಕ್ಷೆಯಂ ಕೈಕೊಂಡುಗ್ರೋಗ್ರ ತಪಮಂ ಮಾಡಿ ಷಡ್ಡಸಮ ಸ್ವರ್ಗ್ಗದಲ್ಲಿ ಮಹರ್ದ್ದಿಕ ದೇವನಾಗಿ ಪುಟ್ಟಿ

|| ಕ || ಅಲ್ಲಿಯ ಕಡಲುಪಮಾಯುಮ
ನೆಲ್ಲಮನನುಭವಿಸಿ ಬಂದು ಮದನಾವಳಿಭರ
ನಿಲ್ಲಿಯ ವಸುಂಧರಾ ಪುರ
ದಲ್ಲಿ ಶ್ರೀಮಕರ ಕೇತುವೆಂಬರ ಸಂಗಂ ||

          || ಉತ್ಸಾಹ || ಆತನರಸಿ ವಿಮಲಮತಿ ಸುದೇವಿಗಂ ತನೂಭವಂ
ಖ್ಯಾತ ಕನಕ ಕೇತುವೆಂಬ ನಾಮ ಕುವರನಾಗಿ ತಾಂ
ನೋಂತು ಚಂದ್ರನಂತೆ ಸಕಳಕಳೆಯನೆಯ್ದೆ ಪೆರ್ಚ್ಚುತಂ
ಕಾಂತ ರೂಪವೆನಿಸಿ ಮೆಱೆದನೀತಂ ಕಂತುವೆಂಬಿನಂ ||

|| ವ || ಅಂತು ಸುಖದಿಂದಿರುತ್ತಿರಲೊಂದು ದಿವಸಂ | ಕನಕ ಕೇತು ವಿಜಯವಿಲಾಸ ನಾಟಕಮಂ ನೋಡಿಯುದಯದೊಳಾ ನಾಟಕ ಪುರುಷನಂ ಕಂಡು ತನಗದುವೆ ವೈರಾಗ್ಯಕ್ಕೆ ಕಾರಣಮಾಗಿ ಕನಕಕೇತು ಕುಮಾರಂಗೆ ಸಕಲರಾಜ್ಯಮನಿತ್ತು ತಾಂ ತಪೋರಾಜ್ಯಮಂ ಕೈಕೊಂಡುಗ್ರೋಗ್ರ ತಪಃಶ್ಚರಣಮಂ ಮಾಡಿ ಗ್ರಾಮ ನಗರ ಖೇಡ ಖರ್ವ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಮಾ ವಸುಂಧರಾನಗರಿಯ ಬಹಿರುದ್ಯಾನವನಕ್ಕೆ ಬಿಜಯಂಗೆಯ್ಯಲಾ ಕನಕಕೇತು ಮಹಾರಾಜಂ ಪುರಜನ ಪರಿಜನ ಸಹಿತಂ ಸಂಭ್ರಮದಿಂ ಪೋಗಿ ಪೂಜಿಸಿ ವಂದಿಸಿ | ಸಂಸಾರ ಸ್ವರೂಪಮಂ ಕೇಳ್ದಲ್ಲಿ ವೈರಾಗ್ಯಂ ಪುಟ್ಟಿ ತನಂ ಮಗಂ ಮಕರಕೇತುವಿಂಗೆ ಸಕಲ ಸಾಮ್ರಾಜ್ಯಮಂ ಕೊಟ್ಟು ತಾಂ ತಪೋ ಸಾಮ್ರಾಜ್ಯಮಂ ಕೈಕೊಂಡು ಘೋರ ವೀರ ತಪಶ್ಚರಣಮಂ ಮಾಡಿ ಕೇವಲ ಜ್ಞಾನಂ ಪುಟ್ಟಿ ಗಂಧಕುಟಿ ವಿಭೂತಿ ನಾಥನಾಗಿ ಮೋಕ್ಷಮನೆಯ್ದಿದಳೆಂದಿಂತು ಗೌತಮ ಗಣಧರರು ಶ್ರೇಣಿಕ ಮಹಾಮಂಡಲೇಶ್ವರಂಗಂ ಚೇಳಿನಿ ಮಹಾದೇವಿಗಂ ಪೇಳಲಾ ನೋಂಪಿಯಂ ಕೈಕೊಂಡು ಬಂದು ರಾಜಗೃಹಮಂ ಪೊಕ್ಕನೇಕ ವಿಭವದಿಂ ನೋಂತುಜ್ಜವಣೆಯಂ ಮಾಡಿ | ಅಜ್ಞಾನ ಕೃತದಿಂದಾದ ದೋಷಮಂ ಪರಿಹರಿಸುತ್ತಮನಾಗತಾಸ್ರವಮಂ ನಿರೋಧಿಸುತ್ತ ಪಲಉಂ ನಿಧಿನಿಧಾನಂಗಳೊಡೆಯರಾಗಿ ಸುಖಂದಿದಿರ್ದ್ದರಿಂತು

|| ಕ || ಯಿಂತೀ ನೋಂಪಿಯ ನೋಂತವ
ರ್ಗ್ಗಿಂತೀ ಕಥೆವೇಳ್ದ ಕೇಳ್ದ ನೆನೆಉತ್ತಿರ್ಪ್ಪ
ರ್ಗ್ಗಿಂತೀ ಸುಗಂಧೆ ತಾಂ ಪಡೆ
ದಂತಾ ಪದಮಕ್ಕೆ ಚಂದ್ರ ರವಿಯಿಪ್ಪೆನಗಂ ||

          ನರಪಾಲ ಪಂಡಿತೇಶನ
ವರವಧು ಗಂಗಾಂಬಿಕಾ ತನೂಭವನಿಂತಂ
ತರಿಸದ ಸುಖಮಂ ಕೊಡುವೀ
ಪರಮ ಕಥಾಂತರಮನಱಿಯಲಭಿವರ್ಣ್ನಿಸಿದಂ
||