ಸುಗಂಧ ಬಂಧುರದ ನೋಂಪಿಯಕಥೆ ಯಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರದೊಳು ಅವಂತೀದೇಶದೊಳುಜ್ಜಯಿನಿಯೆಂಬ ಪುರದ ರತ್ನಪಾಲಂಗಂ ರತ್ನಮಿತ್ರೆ ಎಂಬರಸಿಯಾಗೆ ಸುಖಮಿರಲೊಂದು ದಿವಸಂ ರತ್ನಸಾಗರ ಭಟ್ಟಾರಕರಂ ವನಪಾಳಕನಿಂದರಿದುಪೋಗಿ ವಂದಿಸಿ ರತ್ನಮಿತ್ರೆ ಕರಕಮಳಂಗಳಂ ಮುಗಿದು ಎಲೇಸ್ವಾಮಿ ಎನಗೆ ಪರಮಸುಖಮಪ್ಪ ನೋಂಪಿಯಂ ಬೆಸಸಿಮೆನೆ ಅವರಿಂತೆಂದರೂ ಸುಗಂಧ ಬಂಧುರದ ನೋಂಪಿಯಂ ಶ್ರಾವಣಶುದ್ಧ ಪಾಡ್ಯವಾದಿಯಾಗಿ ಕಾರ್ತ್ತೀಕ ನಂದೀಶ್ವರಪರ್ಯ್ಯಂತ ದಿನಂಪ್ರತಿ ಪಾರ್ಶ್ವತೀರ್ಥಂಕರಿಗೆ ನಿತ್ಯಾಭಿಷೇಕ ಪೂಜೆಯಂ ಮಾಡಿ ಚರುವಂ ಹುಗ್ಗಿ ತುಪ್ಪ ಏಳಡಕೆ ಏಳೆಲೆ ಶ್ರೀ ಗಂಧದುತ್ವರ್ತನಂಗಳಿಂ ಅಷ್ಟವಿಧಾರ್ಚನೆಯಂ ಮಾಡಿ ಶ್ರುತಗುರುಪೂಜೆಯಂ ಮಾಡಿ ಅಷ್ಟಮಿಚತರ್ದಶಿಯಲ್ಲಿ ಏಕಭುಕ್ತಮಂ ಮಾಡಿ ಕಥೆಯಂ ಕೇಳ್ದು ಉದ್ಯಾಪನೆಗೆ ಪಾರ್ಶ್ವತೀರ್ಥಕರಿಗೆ ಮಹಾಭಿಷೇಕ ಪೂಜೆಯಂ ಮಾಡಿ ಪಂಚಭಕ್ಷಪಾಯಸ್ವನಿರಿಸಿ ಚರುವನಿಟ್ಟು ಉದ್ದಿನರಾಶಿಯ ಮೇಲೆ ಚರುವನಿಟ್ಟು ಕುಂಭದೇಳು ಹಾಲುಮಂ ತೀವಿ ಚಿನ್ನದ ಹೂವು ೩ ಬೆಳ್ಳಿಯಹೂವು ೩ ದರ್ಶನಜ್ಞಾನ ಚಾರಿತ್ರಗಳೆಂದುಸ್ಥಾಪಿಸಿ ಅರಿಶಿನದ ಮೂನೂಲುಸುತ್ತಿ ಗಂಧಾಕ್ಶತೆ ಪುಷ್ಪಮಾಲೆಯಂ ವಸ್ತ್ರ ದಿಂದಲಂಕರಿಸಿ ತ್ರಿಕಟುಕ ತ್ರಿಫಲೆ ಶ್ರೀ ಸುಗಂಧಗಳಂ ಸೆರಗಿನಲಿ ಕಟ್ಟಿ ಕುಂಭದ ಮೇಲೆ ಪಾರ್ಶ್ವತೀರ್ಥಕರಂ ಸ್ಥಾಪಿಸಿ ಅಷ್ಟಗಂಧಮಂ ಓಂ ಹ್ರೀಂ ಸುಗಂಧಬಂಧುರಾಯ ನಮಃ ಸ್ವಾಹಾ ಎಂದು ಲೇಪಿಸಿ ೩೦ ಹೊರಗೆ ೩೦ ಗಾರಿಗೆ ೩೦ ಕರಜಿಕಾಯಿ ೩೦ ಅಡಕೆ ೩೦ ಎಲೆ ಫಲಂಗಳಿಂದರ್ಚಿಸಿ ಓಂ ಹ್ರೀಂ ಸುಗಂಧ ಬಂಧುರಾಯನಮಃ ಸ್ವಾಹಾ ಯೆಂದರ್ಘ್ಯಮನೆತ್ತಿ ಶ್ರುತಗುರು ಪೂಜೆಯಂಮಾಡಿ ಹೂರಿಗೆಯಂ ಮಾಡಿ ಕಥೆಯಿಂ ಕೇಳ್ದು ಸೌವಾಸಿನಿಯರ್ಗೆ ನೋನಿಸಿದವರ್ಗ್ಗೆ ಪ್ರತ್ಯೇಕ ಒಂದೊಂದು ಹೂರಿಗೆ ಬೆಲ್ಲ ಎಂಟಡಕೆ ಎಲೆಯಿಂ ಹೊಳವೆಳಿಗೆಯೊಳು ಸುವರ್ಣ್ನವೆರಸಿ ಬಾಯಿನಮು ಕೊಡುವುದು ಚತುರ್ವ್ವಿಧದಾನಮಂ ಕೊಟ್ಟು ತಾನೇಕುಭುಕ್ತಮಂ ಮಾಳ್ಪುದುಯೆನೆ ಕೈಕೊಂಡು ಕಥೋಕ್ತಾನುಸಾರದಿನಾಚರಿಸಿ ರಾಜ್ಯಂಗೆಯ್ದು ಸ್ವರ್ಗಮೋಕ್ಷಂಗಳಂ ಪಡೆದರು ಸುಗಂಧಬಂಧುರದ ನೋಂಪಿಯಂ ನೋಂತವರ್ಗಂ ನೋನಿಸಿದವರ್ಗ್ಗಂ ವಡಂಬಟ್ಟವರ್ಗಂ ಜಯಮಂಗಳ ಮಹಾಶ್ರೀ ||