ಶ್ರೀ ವೀತರಾಅತಾಯನಮಃ ||

          ಶ್ರೀಮತೇ ಶಾಂತಿನಾಥಾಯ ಕೇವಲ ಜ್ಞಾನಮೂರ್ತ್ತಯೇ
ಸ್ಯಾದ್ವಾದನೇಕ ನಿತ್ಯತ್ವಂ ನಮೋಸ್ತು ಭವಹರಣೇ
|

ಅದೆಂತೆಂದೊಡೀ ಜಂಬೂದ್ವೀಪದ ಭರತ ಕ್ಷೇತ್ರದೊಳು ನೇಪಾಳವೆಂಬುದುನಾಡು | ಲಲಿತಪುರಮೆಂಬುದು ಪೊಳಲದನಾಳ್ವಂ ಉತ್ತುಂಗ ಮಹಾರಾಜನಾತನ ಪಟ್ಟದರಸಿ ಚಿತ್ರಗುಪ್ತಿಯೆಂಬಳು | ಅಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರೆ | ಆ ಪಟ್ಟಣದ ಮನೋಹರಮೆಂಬ ಉದ್ಯಾನವನಕ್ಕೆ ಸಕಲಾಗಮಧಾರಿಗಳಪ್ಪ ದಿವ್ಯ ತಪೋಧನರಪ್ಪ ಶ್ರುತಸಾಗರ ಭಟ್ಟಾರಕರು ಬಿಜಯಂ ಮಾಡಲು ಆ ವನಪಾಲಕಂ ಕಂಡು ತ್ವರಿತಗತಿಯಿಂ ಲಲಿತಪುರಮನೆಯ್ದಿ ಸರ್ವ್ವಾವಸರಮೆಂಬೋಲಗೆ ಸಾಲೆಯೊಳಿರ್ದ್ದ ಉತ್ತಂಗ ಮಹಾರಾಜಂಗೆ ಸಾಷ್ಟಾಂಗ ಪ್ರಣುತನಾಗಿ ಕರಕಮಲಂಗಳಂ ಮುಗಿದಿರ್ದು ಬಿಂನಪಗೆಯ್ದನೆಲೆ ಸ್ವಾಮಿ ಮನೋಹರಮೆಂಬುದ್ಯಾನವನಕ್ಕೆ ಶ್ರುತಸಾಗರ ಭಟ್ಟಾರಕರೆಂಬ ದಿವ್ಯಜ್ಞಾನಿಗಳು ಬಿಜಯಂಗೆಯ್ದರೆಂಬುದುಂ ಹರುಷೋತ್ಕರುಷಚಿತ್ತನಾಗಿ ವನಪಾಲಕಂಗಂಗಚಿತ್ತ ಮನಿತ್ತಾನಂದ ಭೇರಿಯಂ ಪೊಯಿಸಿ ಪರಿಜನ ಪುರಜನಗಳಂ ಕೂಡಿಕೊಂಡು ಬಂದು ಶುಚಿತ್ವದ ತ್ರಿಃ ಪ್ರದಕ್ಷಿಣಗೆಯ್ದು ಪಲವರ್ಚ್ಚನೆಗಳಿಂದರ್ಚ್ಚಿಸಿ | ಕರಕಮಲಂಗಳಂ ಮುಗಿದು ಯೆಲೆಸ್ವಾಮಿಯನಗೆ ಸ್ತ್ರೀ ಜಲ್ಮಕೆಟ್ಟು ಪೋಪಂತು ನಿಂಮಡಿಗಳು ಆವುದಾನುಮೊಂದು ನೋಂಪಿಯಂ ಬೆಸಸಿಮೆನಲವರಿಂತೆಂದು ಪೇಳ್ದರು ಆದಡೆ ನೀವು ಸೂತಕ ಪರಿಹಾರದ ನೋಂಪಿಯುಂಟು ಆ ನೋಂಪಿಯ ನೋಂಪುದೆನೆ ಮಹಾ ಪ್ರಸಾದಮೆಂದು ನೋಂಪಿಯಂ ಕೈಕೊಳ್ವೆ ಅದೊಡೆ ಸ್ವಾಮಿ ಆ ನೋಂಪಿಯ ವಿಧಾನಮೆಂತೆನೆ ಮುನಿಗಳು ಯಿಂತೆಂದು ಪೇಳ್ದರು | ಭಾದ್ರಪದಮಾಸದ ಶುದ್ಧ ತ್ರಯೋದಶಿಯಂ ರಾತ್ರೆಯಲ್ಲಿ ನೋಂಪವರೆಲ್ಲಂ ಶುಚಿರ್ಭ್ಭೂತರಾಗಿ ಚೈತ್ಯಾಲಯಕ್ಕೆ ಸಮ್ಯಕ್ತ್ವ ಪೂರ್ವ್ವಕಂ ಬಂದು ತುಪ್ಪ ಶರ್ಕ್ಕರೆವೆರಸು ದೇವರ್ಗ್ಗೆ ಅಭಿಷೇಕ ಪೂಜೆಯಂ ಮಾಡಿಸಿ ವಸುದಾರೆಯಂ ಕಟ್ಟಿ | ವೊಂದು ಬಂಣಿಗೆಯೊಳು ಹದಿನಾಱು ಭಕ್ಷಮಂ ಚರುವನಿಟ್ಟು ಶ್ರುತಗುರು ಪೂಜೆಯಂ ಮಾಡಿ ಕಥೆಯಂ ಕೇಳ್ದು ನಂದಾದೀವಿಗೆಯಂ ಹೊತ್ತಿಸಿ ಉಪವಾಸಮಂ ಕೈ ಕೊಂಡು ಅಧಃಶಯನ ಬ್ರಹ್ಮ ಚರ್ಯ್ಯಮಂ ಕೈಕೊಂಡು ಮನೆಗೆ ಬಂದು ಮಱುದಿವಸ ದೇವರ್ಗ್ಗೆ ಪಾಲು ತುಪ್ಪ ಶರ್ಕ್ಕರೆ ಸಮನ್ವಿತ ಪಂಚಾಮೃತದಭಿಷೇಕ ಪೂಜೆಯಂ ಮಾಡಿ | ಹದಿನಾಱು ಬಗೆಯ ವಸ್ತುವಿಂದೊಳಗೆ ಶಕ್ತಿಗೆ ತಕ್ಕಂತು ಅಷ್ಟವಿಧಾರ್ಚನೆಯಂ ಮಾಡಿ ಶ್ರುತಗುರು ಪೂಜೆಯಂ ಮಾಡಿ ಮನೆಗೆ ಬಂದು ಹದಿನಾರು ವಸ್ತುವಿನಿಮ್ದೊಳಗೆ ಶಕ್ತಿಗೆ ತಕ್ಕಂತೆ ವಸ್ತುವಿಂ ಪಾರಣೆಯಂ ಮಾಡಿ ಯೀ ಕ್ರಮದಿಂ ಮೂಱು ವರುಷಂ ಬರೆ ನೋಂತು ಕಡೆಯೊಳುದ್ಯಾಪನೆಯಂ ಮಾಳ್ಪ ಕ್ರಮಮೆಂತೆಂದೊಡೆ ದೇವರ್ಗ್ಗೆ ಮಹಾಭಿಷೇಕ ಪೂಜೆಯಂ ಮಾಡಿ ಹದಿನಾರು ಪರಿಯ ಬಂಣಿಗೆಯಂ ಭಕ್ಶಸಹಿತಂ ಪಾಲು ತುಪ್ಪ ಸರ್ಕ್ಕರೆ ವೆರಸು ಚರುವನಿಟ್ಟು ಶ್ರುತಗುರು ಪೂಜೆಯಂ ಮಾಡಿ ಕಥೆಯಂ ಕೇಳ್ದು ಜಾಗರಮಿರ್ದ್ದು ನಾಲ್ಕು ಜಾವ ಅಭಿಷೇಕ ಪೂಜೆಯಂ ಮಾಳ್ಪುದು | ಮಱುದಿನ ಪಾರಣೆಯೊಳು ವೊಂದು ತಂಡ ಆದಿಯಾಗಿ ಹದಿನಾಱು ತಂಡಕ್ಕೆ ಚರಿಗೆಯಂ ಮಾಡಿಸಿ ನೋನಿಸಿದವರ್ಗ್ಗೆ ಉಡಕೊಡುವುದು ಚಾತುರ್ವ್ವಣ್ನಕ್ಕೆ ಆಹಾರ ದಾನಮಂ ಮಾಳ್ಪುದು ಯೀ ಕ್ರಮದಿಂ ಉದ್ಯಾಪನೆಯಂ ಮಾಡಿ ಅಧಿಕವಾಗಿ ನೋಂಪಿಯಂ ನೋಂಪಿರೆ ಅಯ್ದು ವರ್ಷಂ ವೊಂಭತ್ತು ವರುಷಂ ಹಂನೊಂದು ವರ್ಷಂ | ಹದಿನಾಱು ವರುಷಂ ನೋಂಪಿಯಂ ಮಾಡಿದವರು ಅಚ್ಯುತ ಕಲ್ಪದಲ್ಲಿ ಅಚ್ಯುತೇಂದ್ರನಾಗಿ ಪುಟ್ಟುವರು ಪಂನೊಂದು ವರ್ಷಂ ನೋಂತರೆ | ಉತ್ತಮ ಕುಲದರಸುಗಳಾಗಿ ಪುಟ್ಟುವರು ವೊಂಭತ್ತು ವರ್ಷ ನೋಂತರೆ ಭೋಗ ಭೂಮಿಯೊಳು ಪುಟ್ಟಿ ಸುಖಮಿಪ್ಪರು | ಅಯ್ದು ವರುಷ ನೋಂತವರು ಉತ್ತಮ ಕುಲದ ವೈಶ್ಯರ ಬಸುಱಲ್ಲಿ ಪುಟ್ಟುವರು | ಮೂಱು ವರುಷಮಂ ನೋಂತರೆ ಉತ್ತಮ ಶ್ರಾವಕರ ಗರ್ಭದಲ್ಲಿ ಪುಟ್ಟಿ ಧನಕನಕ ಸಮೃದ್ಧಿಯಾಗಿ ಭೋಗೋಪಬೋಗಂಗಳನನುಭವಿಸಿ ಸುಖದಲ್ಲಿಪರುಮೆಂದು ಮುನೀಶ್ವರರು ಪೇಳೆ ಚಿತ್ರಗುಪ್ತಿ ಕೇಳ್ದು ಸಂತುಷ್ಟಚಿತ್ತೆಯಾಗಿ ನೋಂಪಿಯ ಬಂದು | ಅಖಂಡಿತವಾಗಿ ನೋಂಪಿಯಂ ಉತ್ಕೃಷ್ಟವಾಗಿ ನೋಂಪಿಯಂ ಮಾಡಿಯುದ್ಯಾಪನೆಯಿಂ ಮಾಡಿ ಸಮಸ್ತ ಭೋಗೋಪಬೋಗಂಗಳನನುಭವಿಸಿ ದೇವಕುಮಾರ ಸಂನಿಭರಪ್ಪ ಕುಮಾರರಂ ಪಡದು ಕಡೆಯೊಳು ದೀಕ್ಷೆಯಂ ಕೈಕೊಂಡು | ಉಗ್ರೋಗ್ರ ತಪಶ್ಚರಣಂ ಮಾಡಿ | ಸುಖಭಾವನೆಯಿಂ ಮರಣವನೆಯ್ದಿ ಸ್ವರ್ಗ್ಗಾಪವರ್ಗ್ಗಮಂ ಪಡೆದಳು ಈ ನೋಂಪಿಯಂ ನೋಂತವರ್ಗ್ಗೆ ಮಂಗಲ ಮಹಾ ಶ್ರೀ