ಕಂ || ಪರಮ ಜಿನವರನ ಚರಣ
ಕ್ಕುರುಮುದದಿಂದೆರಗಿ ಸೌಖ್ಯಸುತಸಂಪತ್ತಿಯ
ಸುರುಚಿರ ನೋಂಪಿಯಕಥೆಯಂ
ಧರೆಗೆಲ್ಲಂ ಪೇಳ್ವೆನೆಸೆದ ಪೊಸಕನ್ನಡದಿಂ ||

ವ || ಮತ್ತಮದೆಂತೆದೊಡೆ ಯೀ ಜಂಬೂದ್ವೀಪದ ಭರತಕ್ಷೇತ್ರದ ಮಗಧವಿಷಯದ ರಾಜಗೃಹ ನಾರಮನಾಳ್ವಂ ಶ್ರೇಣಿಕ ಮಹಾಮಂಡಲೇಶ್ವರಂ ಸಮ್ಯಕ್ತ್ವ ಚೂಡಾರತ್ನ ಮಪ್ಪಾತನರಸಿ ಚೇಳಿನೀನಾಮ ಮಹಾದೇವಿಯಾದಳಂತವರೀರ್ವ್ವಸ್ಸುಖ ಸಂಕಥಾವಿನೋದದಿಂ ರಾಜ್ಯಂಗೆಯುತ್ತಮಿರಲೊಂದು ದಿನಂ

ಕಂ || ಪರಿತಂದು ಋಷಿನಿವೇದಕ
ನರಸಗೆ ಸಾಷ್ಟಾಂಗವೆರಗಿ ಪೊರಮಟ್ಟಾಗಳು
ನರನಾಥ ವಿಪುಲಶಿಖರಿಗೆ
ಪರಮಾತ್ಮಂ ಬಂದು ನೆಲಸಿದಂ ವೀರಜಿನಂ ||

          ಕಂ || ಎನಲಂಗಸ್ಥಿರಮೆಲ್ಲಂ
ಮಣಿಭೂಷಣನಾಮ ಲೇಪವಸ್ತ್ರಾದಿಗಳಂ
ಮನಮೊಸೆದಿತ್ತಾ ನರಪತಿ
ಯನು ನಯದಿಂದೇಳುಪದಂನಡೆದಾದೆಸೆಗಂ ||

ವ || ಪರಮೇಶ್ವರನಂ ಮನದೋಳ್ನೆನೆದು ನಮಸ್ಕಾರಮಂ ಮಾಡಿ ಯಾನಂದಭೇರಿಯಂ ಪೊಯ್ಸಿ ನಿಜಾಂತಃಪುರಜನಪರಿಜನ ಸಮೇತಮಾಗಿ ನಾನಾವಿಧಾರ್ಚನ ದ್ರವ್ಯಸಹಿತಂ ಪಾದಮಾರ್ಗದಿಂ ಸಮವಸರಣಮಂ ಪೊಕ್ಕು ಗಂಧಕುಟಿಯಂ ತ್ರಿಃಪ್ರದಕ್ಷಿಣಂಗೈದು ಸುತ್ತಿ ಶರಸಹಸ್ರಂಗಳಿಂ ಸ್ತುತಿಯಿಸಿ ಶ್ರುತಮನರ್ಚಿಸಿ ಗುರುಪದವಿಡಿದು ವಂದಿಸಿ ಮುನಿಮುಖ್ಯರಪ್ಪ ಗೌತಮಗಣಧರರ ಸಮೀಪದೋಳ್ಮನುಷ್ಯ ಕೋಷ್ಟದೋಳ್ಕುಳ್ಳಿರ್ದ್ದು ಮುಕುಳಿತ ಕರಕಮಳನುಂ ವಿಕಸಿತ ಹೃತ್ಕಂಜನು ಕುಖಸರಸಿಜನುಮಾಗಿ ದರ್ಮ್ಮಾಧರ್ಮ್ಮ ಶ್ರವಣಮಂ ಕೇಳ್ದು ಸಂತುಷ್ಟಚಿತ್ತನಾಗಿ ನಿಜನಗರಮಂ ಪೊಕ್ಕು ಸುಖದಿಮಿರ್ದ್ದರಿತ್ತಲ್ಮತ್ತಮಾಪುರದ ರಾಜಶ್ರೇಷ್ಠಿ ಜಯಸೇನನೆಂಬನಾತನ ಪೆಂಡತಿ ಜಯಸೇನೆಯೆಂಬಳು ಗೌತಮಗಣಧರ ಸ್ವಾಮಿಗಳ್ಗೆ ಕರಕಮಲಂಗಳಂ ಮುಗಿದು ಸ್ವಾಮಿ ಎನಗಾವುದಾನೊಂದು ನೋಂಪಿಯಂ ಬೆಸಸಿಮೆನಲವರಿಂತೆಂದರೂ ಸೌಖ್ಯಸುತಸಂಪತ್ತಿನೋಂಪಿಯಂ ನೋನುಮೆನಲಾ ಆ ನೋಂಪಿಯ ವಿಧಾನಮೆಂತನೆ | ಆಷಾಢಶುದ್ಧ ನಂದೀಶ್ವರದ ಅಷ್ಟಮಿಯೊಳು ನೋಂಪಿಯಂ ನಿಜಗುರುಪಾದ ಸನ್ನಿಧಾನದೊಳ್ಕೈಕೊಂಡು ಕಾರ್ತ್ತಿಕಶುದ್ಧ ಪೌರ್ಣ್ನಮಿಯ ಮರ್ಯ್ಯಂತಂ ಪ್ರತಿದಿನಮಭಿಷೇಕಾಷ್ಟ ವಿಧಾನರ್ಚನೆಯಂ ಮಾಡಿದನಂತರಂ ಶ್ರುತಪೂಜೆಯಂ ಮಾಡಿ ಕಥೆಯಂ ಕೇಳ್ದು ಕಡೆಯೊಳುಜ್ಜವಣೆಯಂ ಮಾಳ್ಪಕ್ರಮಮೆಂತೆಂದೊಡೆ ರಕ್ತವರ್ಣ್ನ ಪಂಚಕುಂಭಮಂ ಮಾಡಿಸಿ ಕಲಶೋದ್ಧರಣಕ್ರಮದಿಂ ಸ್ಥಾಪಿಸುವುದು ಅಂತೆರಡು ಕೆಲಂ ಮಾಳ್ಪುದು ಹನ್ನೆರಡು ಗುಂಡಿಗೆಗಳೊಳು ಹನ್ನೆರಡುಪರಿಯ ಧಾನ್ಯಮಂ ಸ್ಥಾಪಿಸಿ ತೀವಿಯೊಂದು ಕಲಶದೋಳ್ತುಂಬಿ ಫಲಂಗಳಂ ತುಂಬಿ ಯದರಮೇಲೊಂದು ಸ್ರಾವೆಯನಿರಿಸಿ ಯದರಮೇಲೊಂದು ಕಲಶಮನಿರಿಸಿ ಯಾಕಲಶದೊಳು ಹಾಲುತ್ತುಪ್ಪಮಂ ತೀವಿ ಸುವರ್ಣ್ನಮನಿಕ್ಕಿ ಅಷ್ಟಗಂಧಮಂ ಪೂಜಸಿ ಮೂ ನೂಲಂ ಸ್ತುತಿ ಮತ್ತೊಂದು ಕಲಶದೊಳು ಕಡಲೆ ಗೋಧಿಯಹುಗ್ಗಿ ಅಚ್ಚಂಬಲಿ ಕಲಸೋಗರ ತುಯ್ಯಲು ತುಪ್ಪಮಂ ತೀವಿ ಫಲಪೂರಿತಂ ಮಾಡಿ ಹನ್ನೆರಡು ತರಗು ಹನ್ನೆರಡು ಮಂಡಗೆಯಂ ಮುಚ್ಚಿ ಅರ್ಹತ್ಪರಮೇಶ್ವರನುಂ ಅಭಿಷೇಕಾಷ್ಟ ವಿಧಾರ್ಚನೆ ಯಿಂದರ್ಚಿಸಿ ದೇವರಮುಂದೈದು ಮಾನಕ್ಕಿಯನೆಡರು ಪುಂಜಮಂ ಮಾಡಿ ಯಾಪುಂಜದ ಮೇಲೆರಡು ಕೆಲದೊಳುಪವಾಸ ಸೌಖ್ಯಸಂಪತ್ತಿ ಯಾಗಲೆಂದಿಳುಹಿ ದೇವರಮುಂದೆ ಧಾನ್ಯದ ಕಲಶಮ ನಿರಿಸುವುದು ಶ್ರುತಾಧಿವಾಸನಾ ಪೂರ್ವ್ವಕದಿಂ ಶ್ರುತಾಭಿಷೇಕಾಷ್ಟ ವಿಧಾರ್ಚನೆಯಂ ಮಾಳ್ಪುದು ಐದುತಂಡ ಋಷಿಯರುಂ ಮೇಣೈದು ತಂಡಜ್ಜಿಯರಂ ನಿಲಿಸೂದು ಚಾತುರ್ವ್ವರ್ಣ್ನಕ್ಕಾಹಾರ ಅಭಯ ಭೈಷಜ್ಯ ಶಾಸ್ತ್ರ ಸುವರ್ಣ್ನದಾನಮಂ ಮಾಳ್ಪುದು ಪಂಚಭಕ್ಷ ಪಾಯಸದಿಂ ತಾನುಂ ತನ್ನ ಗೋತ್ರಜರುಂ ಕೂಡಿಯುಂಬುದು ಗೋತ್ರಜರಲ್ಲದವರ್ಗೆ ಯಿಕ್ಕಲಾಗದೆಂಬುದು ಮನೆಲ್ಲ ಕೇಳ್ದು ನೋಂಪಿಯಂ ಕೈಕೊಂಡು ನೋನುತ್ತಮಿರ್ಪ್ಪುದುಮಲ್ಲಿಯ ಬಡಪರದನೋರ್ವ್ವಂ ಸುದರ್ಶನನೆಂಬನಾತನ ಪೆಂಡತಿ ಸದೃಷ್ಟಿಯೆಂಬಳೊಂದು ದಿನಂ ಬಸದಿಗೆಪೋಗಿ ಮನೆಗೆಬರುತ್ತಮಿರ್ಪ್ಪುದು ಅದಂ ಜಯಸೇನೆ ಅಕ್ಕಾ ಇಂದು ಎಲ್ಲಿಗೆ ಪೋದಿರಿಮೆನೆ ಬಸದಿಗೆ ಪೋಗಿ ನೋಂತು ಬಂದೆನೆನೆ ಆವನೋಂಪಿಯೆನೆ ಸೌಖ್ಯಸುತಸಂಪತ್ತಿ ಯನಲದರ ವಿಧಾನಮೆಂತೆನಲ್ಮುನ್ನಪೇಳ್ದ ವಿಧಾನಮಂ ಸವಿಸ್ತರಂ ಪೇಳೆ ಕೇಳ್ದಾನುಂ ನೋಂಪವೆನೆ ಬಡವರ್ಗ್ಗಿದಳವಡದೆನೆ ಅಳವಡುವಂತಾಗಿ ನೋಂಪೆನೆಂದು ಕೈಕೊಂಡು ಯಥಾಶಕ್ತಿಯಿಂ ನಿತ್ಯಾಭಿಷೇಕಾಷ್ಟವಿಧಾರ್ಚನೆ ಕಥಾಶ್ರವಣಸಹಿತಂ ಯಥಾಶಕ್ತಿಗನುಸಾರಮಗಿ ನೋನುತ್ತಮಿರ್ಪ್ಪುದು ಜಯಸೇನೆಗೆ ಮಕ್ಕಳುಂ ಸೊಸೆಯರುಂ ಪಿರಿದಾಗಿ ಮುನ್ನಿನಿಂ ಪಿರಿದಪ್ಪ ಶ್ರೀಯೊಳ್ಕೂಡಿ ಸೌಖ್ಯಸುತಸಂಪತ್ತಿಯಿಂ ಸಂತುಷ್ಟರಾಗಿರ್ದ್ದು ಶ್ರೀಯಮದಮುಂ ತನ್ನ ಮಕ್ಕಳು ಸೊಸೆಯರ ಬಲವರ್ಗದಿಂ ನೋಂಪಿಯನುದಾಸೀನಂ ಮಾಡಲಾ ನೋಂಪಿಯ ಕ್ರಮಂ ತಪ್ಪೆ ತನ್ನಶ್ರೀಯುಂ ಪಾರಿಪೋಗೆ ತನ್ನ ಮಕ್ಕಳುಂ ಸೊಸೆಯರುಂ ಕದುಮುಳಿದು ಬೇರೊಕ್ಕಲಾಗಲು ಮುಳಿಸಿಂ ಕಂದಿಕುಂದಿ ಶೆಟ್ಟಿಗೋರ್ವ್ವಂ ಗುಡಲೆಡೆಮಾಡಿ ಶೆಟ್ಟಿಬಾರದೆ ತಡೆದನೆಂದು ವಳಗಂ ಪೊರಗಂನೋಡುತ್ತಿರ್ಪ ಸಮಯದೊಳು ||

ಕಂ || ಬರೆಚರ್ಯ್ಯಾ ಮಾರ್ಗದಿ ತಾಂ
ಪರಮ ತಪೋಧನ ಸುಭದ್ರಭಟ್ಟಾರಕರುಂ
ಸರಸಿಜವದನೆ ಗುಣೋನ್ನತೆ
ಪರಮೋತ್ಸವೆ ವಿಜಯಸೇನೆ ಕಂಡಳು ಮುದದಿಂ ||

ವ || ಅಂತು ಕಂಡು ತ್ರಿಕರಣಶುದ್ಧಿಯಿಂ ವಂದಿಸಿ ನಿಲಿಸಿ ನವವಿಧ ಪುಣ್ಯದೋಳ್‍ನೆರೆದು ಸಪ್ತಗುಣ ಸಮ್ನಿತೆಯಾಗಿ ತ್ರಿಕರಣಶುದ್ಧಿಸಹಿತಂ ಚತುರ್ವ್ವಿಶೇಷಮನುಳ್ಳ ದಾನಮಂ ಕೊಟ್ಟು ಚರ್ಯ್ಯಾ ನಂತರಂ ಕರಕಮಲಂಗಳಂ ಮುಗಿದು ಜೀಯ್ಮಾ ಏನುಕಾರಾಣಂ ಮಕ್ಕಳು ಬೇರೊಕ್ಕಲಾದರು ಶ್ರೀಕೋಟಿನೂರ್ಮ್ಮೊದಲೆ ಪಾರಿಪೋದುದು ಬೆಸಸಿ ಮೆನಲವರವಧಿಜ್ಞಾನದಿಂ ನೀಂಕೈಕೊಂಡ ನೋಂಪಿಯ ಗರ್ವದಿನಿಳಿಕೆಯ್ದುಬಿಟ್ಟ ಪಾಪದ ಫಲದಿಂ ನಿನ್ನ ಮಕ್ಕಳುಂ ನಿನಗೆ ಮುಲಿದು ಬೇರೊಕ್ಕಲಾದರು ಶ್ರೀಯು ಪಾರಿಪೋಗಿ ನಿನಗನಿತವಸ್ಥೆ ಯಾದುದೆಂದು ಪೇಳೆ ಕೇಳ್ದು ತಾನುಗೆಯ್ದಪಾಪದ ಫಲಕ್ಕೆ ತಾನೆ ಭಯಂಕರ ಗೊಂಡು ಮರುಗಿ ಮತ್ತಾ ನೋಂಪಿಯ ತ್ರಿಕರಣ ಶುದ್ಧಿಯಿಂ ಸಮ್ಯಕ್ತಪೂರ್ವಕಮಾಗಿ ಕೈಕೊಂಬುದು ಪಿತೃಪುತ್ರರೊಂದಾಗಿ ಮುನ್ನಿನಂತೆ ಶ್ರೀಯೋಳ್ಕೂಡಿ ಜಯಸೇನೆವಿಜಯಸೇನ ನೊದನೆ ಸುಖಮಿರ್ದ್ದಳು ಸುದರ್ಶನೆಯುಂ ಯಥಾಕ್ರಮದಿಂ ನೋಂತುಜ್ಜಯ್ಸಿ ತತ್ಫಲದಿಂ ಪಲಂಬರ್ಮ್ಮಕ್ಕಳಂ ಪಡೆದು ಪಲವು ನಿಧಿನಿಧಾನಂಗಳಿಗೊಡೆಯರಾಗಿ ಸೌಖ್ಯಸುತಸಂಪತ್ತಿಯಾಗಿ ಚತುರ್ವ್ವಿಧ ದಾನಪೂಜೆಗಳಂ ಮಾಡಿ ಸಕಲಸಂಸಾರ ಸುಖಮನನುಭವಿಸಿ ಕಡೆಯೊಳು ಪರಮ ವೈರಾಗ್ಯ ಪರರಾಗಿ ಸಮ್ಯಕ್ತಪೂರ್ವ್ವಕಮಪ್ಪ ಜಿನದೀಕ್ಷೆಯಂ ಕೈಕೊಂಡು ವಿಶಿಷ್ಟತಪದೋಳ್ನೆಗಳ್ದಂತ್ಯ ಕಾಲದೊಳು ಪರಮ ಸಮಾಧಿಯಿಂ ಶರೀರ ಭಾರಮನಿಳುಪು ಸ್ವರ್ಗಲೋಕದೊಳ್ಮಹರ್ಧಿಕ ದೇವನಾಗಿ ಪುಟ್ಟಿ ದಿವ್ಯಸುಖಮನನುಭವಿಸಿ ಬಂದಿಲ್ಲಿ ಮಾನುಷೋತ್ತರಾದಿ ಪರಂಪರೆಯಿಂ ಅಷ್ಟಕರ್ಮ್ಮಮಂ ನಿಮ್ಮೂಲನಂ ಗೆಯ್ದು ಮೋಕ್ಷಸ್ಥಾನ ಮನೆಯ್ದಿದರಿಂತು ಸೌಖ್ಯಸುತ ಸಂಪತ್ತಿಯಂ ನೋಂತವರ್ಗಂ ನೋನಿಸಿದವರ್ಗಂ ಲೇಖಕ ಪಾಠಕ ಭಾವಾಕೇಕ್ಷಕ ಜನಾನಾಂ ಜಯ ಮಂಗಳಂ ||