ಶ್ರೀ ವೀರ ವರ್ಧಮಾನ ಜಿ
ನಾವಳಿಗೊಲಿದೆರಗಿ ಭಕ್ತಿಯಿಂ ವಿರಚಿಸುವೇಂ
ಭೂವಳಯದೊಳತಿಶಯಶೋ
ಭಾವದ ಸೌಭಾಗ್ಯದೊಂದು ನೋಂಪಿಯಕಥೆಯಂ
||

ವ || ಅದೆಂತೆಂದೋಡಿ ಜಂಬೂದ್ವೀಪದ ಭರತಕ್ಷೇತ್ರದೊಳು | ಸುರಮ್ಯಮೆಂಬುದುದೇಶ | ಹಸ್ತಿನಾಪುರಮೆಂಬುದು ಪಟ್ಟಣಮದನಾಳ್ವಂ ಭೂಪಾಳನೆಂಬರಸನಾತನ ಪಟ್ಟದರಸಿ ಮನೋಹರಿಯೆಂಬವಳಂತವರೀರ್ವರು ಸುಖ ಸಂಕಥಾ ವಿನೋದದಿಂ ರಾಜ್ಯಂ ಗೆಯ್ಯುತ್ತಮಿರಲಾ | ಪುರದ ರಾಜಶ್ರೇಷ್ಠಿ ಧನಪಾಲನಾತನ ಪಿರಿಯ ಪೆಂಡತಿ ಧನವತಿಯೆಂಬಳು ತನ್ನ ಗಂಡನೊಲ್ಲದೆ ತನಗೆ ಮಕ್ಕಳಿಲ್ಲದೆ ಪಿರಿದು ದುಃಖಭಾಜನೆಯಾಗಿರ್ಪಿನಮೊಂದು ದಿವಸಂ ದೇಶಭೂಷಣರೆಂಬ ದಿವ್ಯಜ್ಞಾನಿಗಳು ನಾನಾದೇಶಂಗಳುಂ ವಿಹರಿಸುತ್ತಂ ಬಂದಾಪುರದ ನಡುವಣ ಸಹಸ್ರಕೂಟ ಚೈತ್ಯಾಲಯದೊಳಿರ್ದುದಂ ಧನವತಿ ಕೇಳ್ದು ತನ್ನ ಮನದೊಳಾದ ಚಿಂತಾವಿಷಾದಮಂ ಪತ್ತು ವಿಟ್ಟು ಸಂತೋಷಂಬಟ್ಟು ಶುಚಿವಸ್ತ್ರಾಭರಣ ಭೂಷಿತೆಯಾಗಿ ವಿವಿಧಾರ್ಚನಾಸಹಿತಂ ತನ್ನ ಪಕ್ಕದವರಂ ಕೂಡಿ ಕೊಂಡು ಚೈತ್ಯಾಲಯಕ್ಕೆ ಬಂದು ಪರಮೇಶ್ವರಂಗಭಿಷೇಕಾಷ್ಟ ವಿಧಾರ್ಚನೆಯಂ ಮಾಡಿ ಶ್ರುತಮಂ ಗುರುಗಳುಮಂ ವಂದಿಸಿ ಮುಂದೆ ಕುಳ್ಳಿರ್ದು ಕರಕಮಲಳಂಗಳಂ ಮುಗಿದು ಸ್ವಾಮಿ ಯೆನಗೆ ಮನುಷ್ಯ ಜನ್ಮಂ ನಿರರ್ತ್ಥಕಮುಂ ನಿಷ್ಫಲಮಾದಕಾರಣಮದಂ ಯೇಗೆಯ್ವೆಮೆನಲವರಿತೆಂದು ಪೇಳ್ದರು ನೀಂ ಮುನ್ನಿನ ಜನ್ಮದೊಳು ಚರ್ಯಾಮಾರ್ಗದಿಂ ಪುರದ್ವಾರಕ್ಕೆ ಬಂದು ಜಿನಮುನಿಗಳಂ ಕಂಡುರು ಮದದಿಂದುದಾಸೀನಂ ಗೆಯ್ದು ಕಾರಣದಿಂದಂನೀನುಜನ್ಮದೊಳೆಲ್ಲರ್ಗಮುದಾಸೀನೆ ಯಾಗಿರ್ಪೆಯೆಂಬುದುಂ ಮತ್ತಂ ಬಿನ್ನಪಮೆಂದಿಂತೆಂದಳನಗೀ ದೋಷ ಪರಿಹಾರಾರ್ತ್ಥ ಮಾವುದೊಂದು ನೋಂಪಿಯಂ ದಯೆಗೆಯ್ಯಿಮೆನಲವರು ಸೌಭಾಗ್ಯದ ನೋಂಪಿಯನಿಂತೆಂದು ಪೇಳ್ದರಾಷಾಢ ನಂದೀಶ್ವರದಷ್ಟಮಿಯೊಳು ನೋಂಪಿಯಂ ಕೈಕೊಂಡು ಕಾರ್ತೀಕ ನಂದೀಶ್ವರದ ಪೂರ್ಣಿಮಾ ಪರಿಯಂತಂ ಪ್ರತಿದಿನಂ ಚತುರ್ವಿಂಶತಿ ತೀರ್ಥಕರಮೂರ್ತಿಗೆ ನಿತ್ಯಾಭಿಷೇಕಮಂ ಶ್ರೀಗಂಧ ಕುಂಕುಮ ಕರ್ಪೂರ ಸಂಮಿಶ್ರಗಂಧದಿಂದುರ್ತ್ವನಂ ಗೆಯ್ದು ಕಮ್ಮನಪ್ಪ ಪುಷ್ಪ ಮಾಲೆಯುಂ ಕರ್ಪೂರದಾರತಿ ತಾಂಬೂಲಮುಂ ತಪ್ಪದೆ ನಡಸೂದು ಜ್ವಾಲಿನಿ ಜಕ್ಕಳೆ ಪದ್ಮಾವತಿಯರಂ ಪೆಸರ್ಗೊಂಡು ದಿನಂಪ್ರತಿ ಮುವ್ವರು ಮುತ್ತೈದೆಯರ್ಗೆ ಕುಂಕುಮದ ಬೊಟ್ಟನಿಡುವುದು | ದಿನಂಪ್ರತಿ ದೇವರಿಗುದ್ವರ್ತನಂಗೆಯ್ದು ಗಂಧಮಂ ತಾಂ ತಿಳಕಮನಿಟ್ಟುಕೊಂಬುದು ಕಡೆಯೊಳುಜ್ಜೈಸುವ ಕ್ರಮಮೆಂತೆನೆ ದೇವರ್ಗೆ ಮಹಾಭಿಷೇಕ ಪೂಜೆಯಂ ಸವಿಸ್ತಾರಂ ಮಾಡಿಸೂದು | ತದನಂತರಂ ಮೂರು ತೆರದಕ್ಷಂಗಳಿಪ್ಪತ್ತನಾಲ್ಕಿ ಪ್ಪತ್ತನಾಲ್ಕುಮಂ ದೇವರ್ಗೆ ಅರ್ಚಿಸೂದು | ಪ್ರತ್ಯೇಕಂ ಪನ್ನೆರಡುಮುಂ ಶ್ರುತಕ್ಕರ್ಚಿಸೂದು | ಶ್ರುತಕ್ಕೆ ವಸ್ತ್ರಪೂಜೆಯಂ ಮಾಳ್ಪುದು ಒಂದುತಂಡ ಅಜ್ಜಿಯರ್ಗ್ಗೆ ಉಡಕೊಡುವದು | ಜ್ವಾಲಿನಿ ಜಕ್ಕಳೆ ಪದ್ಮಾವತಿಯರಂ ಪೆಸರ್ಗೊಂಡು ಮೂವ್ವರು ಮುತ್ತೈದೆಯರ್ಗೆ ಮೂರು ತೆರದ ಭಕ್ಷದೊಳಂ ಪ್ರತ್ಯೇಕಂ ನಾಲ್ಕುನಾಲ್ಕುಮಂ ಒಂದೊಂದು ಬೆಲ್ಲದಚ್ಚುಸಹಿತಂ ಬಾಯಿನಮಂ ಕೊಡುವುದು | ಮೂರು ತೆರದ ಭಕ್ಷದೊಳಂ ವಂದೊಂದುತಂಡ ಋಷಿಯರ್ಗೆ ಶ್ರುತಪೂಜೆಯಂ ಮಾಳುಪ್ದು | ಚಾತುರ್ವರ್ನಕ್ಕೆ ಆಹಾರದಾನಮಂ ಮಾಳುದು ಇದು ಉಜ್ಜೈಸುವ ಕ್ರಮ | ಮತ್ತಂ ಬಡವರೊಡಯರೆನ್ನದೆ ಯಥಾಶಕ್ತಿಯಿಂ ಭಕ್ತಿಯುಕ್ತಮಾಗಿ ನೋಂಪುದೆಂದು ಪೇಳೆ ಕೇಳ್ದು ಸಂತುಷ್ಟಚಿತ್ತೆಯಾಗಿ ಗುರುಗಳಂ ಬೀಳ್ಕೊಂಡು ಬಳಿಕ ಯಥಾಕ್ರಮದಿಂ ನೋಂತುಜ್ಜೈಸಿ ತತ್ಫಲದಿಂ ತನ್ನಪುರುಷಂಗೆ ತಾನೆ ಪ್ರಾಣವಲ್ಲಭೆಯಾಗಿ ಸೌಭಾಗ್ಯವತಿಯುಂ ಗಾತ್ರಚಿಂತಾಮಣಿಯುಮೆಂಬೀ ಪೆಸರಿಂ ಪ್ರಸಿದ್ಧಿಯನೆಯ್ದಿ ದೇವಕುಮಾರ ಸನ್ನಿಭರಪ್ಪ ಪಲಂಬರ್ಮ್ಮಕಳಂ ಪಡೆದು ಮಹಾದಾನಪೂಜೆಯೋಳ್ಕೂಡಿ ಜಿನಧರ್ಮದ ಮಹಾಮಹಿಮೆಯಂ ಪ್ರಭಾವಿಸುತ್ತಂ ಸುಖದಿಂದಿರ್ದು ಕಡೆಯೊಳು ಸದ್ಗತಿಯನೆಯ್ದಿದಳಿಂತೀ ಸೌಭಾಗ್ಯದನೋಂಪಿಯಂ | ಯಥಾಶಕ್ತಿಯಂ ಭಕ್ತಿಸಹಿತಂ ನೋಂತವರ್ಗಂ ನೋನಿಸಿದ ವರ್ಗಂ ಮಂಗಳಮಹಾ || ಶ್ರೀ ಶ್ರೀ ಶ್ರೀ