ಬೆಂಗಳೂರಿನ ಸಸ್ಯಕಾಶಿಯಲ್ಲಿ ಹೂ ಬಿಡುವ ಹಲವಾರು ಬಳ್ಳಿಗಳಿವೆ. ಛಳಿಗಾಲದಲ್ಲಿ ಅರಳಿ ತನ್ನ ಸೊಬಗಿನಿಂದ ಎಲ್ಲರನ್ನೂ ತನ್ನತ್ತ ಸೆಳೆಯುವ, ಅಪರೂಪದ ‘ಪಚ್ಚೆ ಬಣ್ಣ’ದ ಹೂವಿನ ಬಳ್ಳಿಯೇ ಈ ‘ಜೇಡ್ ವೈನ್’. ಹೊಸ ವರ್ಷದ ಮೊದಲ ತಿಂಗಳು, ಛುಮು ಛುಮು ಛಳಿಯ ಗಣರಾಜ್ಯೋತ್ಸವದ ಫಲ ಪುಷ್ಪ ಪ್ರದರ್ಶನಕ್ಕೆ ಕಿರೀಟ ಪ್ರಾಯ ಈ ಬಳ್ಳಿ.

ಮೊದಲ ವರ್ಷ ಎರೆಡು ಮೂರು ಗೊಂಚಲು ಹೂವಷ್ಟೇ ಬಿಟ್ಟಿದ್ದು ಇದೀಗ ಮೈತುಂಬ ಹೂವಿನ ಹೊದಿಕೆಯಂತೆ ಕಾಣುವ ಹೂವು  ಪ್ರಮುಖ ಆಕರ್ಶಣೆ. ಲೆಗ್ಯುಮಿನೇಸಿ ಸಸ್ಯ ಕುಟುಂಬಕ್ಕೆ ಸೇರಿದ, ಫಿಲಿಫೈನ್ಸ್ ಮೂಲದ ಈ ಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು ‘ಸ್ಟ್ರಾಂಗಿಲೇಡನ್ ಮ್ಯಾಕ್ರೋಬಾಟ್ರಿಸ್’. ಅಲ್ಲಿನ ಸಮ ಶೀತೋಷ್ಣ ವಲಯದ ಮಳೆ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.  ನವರತ್ನಗಳಲ್ಲಿ ಒಂದಾದ, ತುಂಬ ಬೇಡಿಕೆಯುಳ್ಳ ‘ಜೇಡ್’ (ಪಚ್ಚೆಕಲ್ಲು) ನ್ನು ಹೋಲುವುದರಿಂದ ಈ ಬಳ್ಳಿಗೆ ‘ಜೇಡ್ ವೈನ್’ ಎಂಬ ಹೆಸರು. ಬಾವಲಿಗಳಿಗೆ ಬಹು ಪ್ರಿಯವಾದ ಹೂವು . ಅವುಗಳಿಂದಲೇ ಪರಾಗ ಸ್ಪರ್ಶ ಕ್ರಿಯೆ.

ಹೂ ಗೊಂಚಲು,

೩೦ರಿಂದ ೪೦ಅಡಿ ಎತ್ತರಕ್ಕೆ ಬೆಳೆಯ ಬಲ್ಲ, ಸುತ್ತಿಕೊಂಡು ಬೆಳೆಯುವ  ಬಳ್ಳಿ. ಹಬ್ಬಿಸಲು ಸೂಕ್ತ. ಪರ್ ಗೋಲಾಗಳ ಮೇಲೆ ಸುಂದರವಾಗಿ ಹಬ್ಬುತ್ತವೆ. ಕೆಳಕ್ಕೆ ನೇತಾಡುವ ಹಸಿರು- ನೀಲಿ ಹೂ ಗೊಂಚಲು, ಹೊಳೆಯುವ ಕಪ್ಪು ಬಣ್ಣದ ಚಿಗುರುಗಳು, ದಟ್ಟ ಹಸಿರಿನ ಎಲೆಗಳು,   ಕಪ್ಪು, ಹಸಿರು ನೀಲಿ ಬಣ್ಣಗಳ ಸಂಗಮ ನೋಡುಗರನ್ನು ಸೆಳೆಯದೆ ಬಿಡದು.

ಹಬ್ಬಿರುವ ಜೇಡ್

ಛಳಿಗಾಲದ ಆರಂಭಕ್ಕೆ, ಮಕರ ಸಂಕ್ರಮಣದ ಹೆಗ್ಗುರುತಾಗಿ ಅರಳುವ ಈ ಹೂ ಗೊಂಚಲು ಐದು ಅಡಿಗಿಂತಲೂ ಉದ್ದವಾಗಿರುವುದು ವಿಶೇಷ. ಸಸ್ಯ ಪ್ರಪಂಚದಲ್ಲೇ ಅಪರೂಪವೆನಿಸುವ ಈ ಹಸಿರು-ನೀಲಿ ಬಣ್ಣದ ಹೂಗಳ ಬಳ್ಳಿ , ಫಳ ಫಳನೆ ಹೊಳೆಯುವ ಎಲೆಗಳು, ಹೂಗೊಂಚಲಿನ ಉದ್ದ, ಅದರಲ್ಲಾಗುವ ದೊಡ್ಡ ಕಾಯಿ (ಮಾವಿನ ಕಾಯಿ ತರಹ. ) ಎಲ್ಲವೂ ಒಂದು ಕೌತುಕ. ಸಮುದ್ರದ ನೀರಿನ ಹಸಿರು, ನೀಲಿ ಬಣ್ಣದಂತೆ, ಈ ಹೂವಿಗೆ  ಬಹಳ ಅಪರೂಪದ ಬಣ್ಣ. ಈ ಬಣ್ಣದಿಂದಾಗಿಯೇ ಈ ಗಿಡಕ್ಕೆ ಬಹು ಬೇಡಿಕೆ  ಮತ್ತು ಬೆಲೆ ಸಹ ಹೆಚ್ಚು. ಈ ಹೂವುಗಳನ್ನು ಹಾರ ಕಟ್ಟಲು ‘ಹವಾಯಿ’ಯಲ್ಲಿ ಬಳಸುತ್ತಾರೆ.

ಅರಳಿರುವ ಹೂವು

ಆಮ್ಲೀಯ ಅಥವ ಮಧ್ಯಮ ಗುಣದ ಮಣ್ಣಿನಲ್ಲಿ ಜೇಡ್ ವೈನ್ ಸೊಗಸಾಗಿ ಬೆಳೆಯುತ್ತದೆ. ಬಿಸಿಲಿದ್ದರೆ ಚೆನ್ನಾಗಿ ಹರಡುವ ಬಳ್ಳಿಯಾದರೂ, ಮಧ್ಯಾನ್ಹದ ಬಿಸಿಲು ಬೀಳದ ಸ್ಥಳವಾದರೆ ಒಳ್ಳೆಯದು. ಬೇರುಗಳಿಗೆ ಮುಚ್ಚಿಗೆ ಮಾಡಿ ನೇರ ಬಿಸಿಲು ಬೀಳದಂತೆ ಮಾಡಿದರೆ ಬಳ್ಳಿ ಸೊಂಪಾಗಿ ಬೆಳೆಯುತ್ತದೆ. ಬೆಳೆಯುವ ಹಂತದಲ್ಲಿ ಹೆಚ್ಚು ನೀರು ಬೇಕಾಗುತ್ತದೆ. ಛಳಿಗಾಲದಲ್ಲಿ ನೀರು ಹೆಚ್ಚು ಬೇಕಿಲ್ಲ, ಆದರೆ ಮಂಜು ಬೀಳುವ ಜಾಗ ಸೂಕ್ತವಲ್ಲ.

ಮಾರುದ್ದದ ಹೂ ಗೊಂಚಲು.

ಬೀಜಗಳಿಂದ, ಬಲಿತ ಕಾಂಡದ ತುಂಡುಗಳಿಂದ ಹೊಸ ಗಿಡ ಮಾಡಿಕೊಳ್ಳ ಬಹುದು. ದಪ್ಪನಾದ ಕಾಯಿ ‘ಮಲಗೋವ’ ಮಾವಿನ ಹಣ್ಣಿನ ಗಾತ್ರವಿರುತ್ತದೆ. ಆದರೆ ಬೀಜಗಳು ಮಾತ್ರ ೬-೭ ಇದ್ದರೆ ಹೆಚ್ಚು. ತೆಗೆದೊಡನೆ ಬೀಜ ನಾಟಿ ಮಾಡ ಬೇಕು.  ಈ ಬೀಜಗಳಿಂದ ನರ್ಸರಿಯಲ್ಲಿ ಬೆಳೆಸಿದ ಗಿಡಗಳು, ಲಾಲ್ ಬಾಗಿನ ‘ಥಂಡಿ ಸಡಕ್’ ನಲ್ಲಿ ಬೆಳೆಯುತ್ತಿವೆ. ಇದು ಡಾ : ಜಗದೀಶ್ ಅವರ ಪರಿಶ್ರಮದ ಫಲ, ಹೆಮ್ಮೆಯ ಕೂಸು.

ಸಿದ್ಧ ಗೊಂಚಲು

ವಿಶೇಷವಾಗಿ ಈ ಬಳ್ಳಿಯನ್ನು ‘ಟ್ರಿಲ್ಲೀಸ್’ (ಜಾಲಂದರ), ‘ಪರ್ ಗೋಲ’ (ಲತಾ ಕುಂಜ) ಗಳ ಮೇಲೆ ಹಬ್ಬಿಸ ಬಹುದು. ಅಲ್ಲಿಂದ ಕೆಳಗಿಳಿದು ಬೀಳುವ ಹೂ ಮೊಗ್ಗಿನ ಸರ ನೋಡಿರುವ ಜನ ಈ ವರ್ಷ ಹೂ ಬಿಡುವುದನ್ನೇ ಕಾಯುತ್ತಿದ್ದಾರೆ. ಲಾಲ್ ಬಾಗ್ ಗೆ ಬಂದವರು ನೋಡಲೇ ಬೇಕಾದ ಹೂ ಬಳ್ಳಿ ಈ ‘ಜೇಡ್-ವೈನ್’. ಲಾಲ್ ಬಾಗ್ ನ ಬೋನ್ಸಾಯ್ ಆರ್ಚ್ ಹತ್ತಿರ  ಸುಮಾರು ೫೦ಗಿಡಗಳು ಆಗಲೇ ಮೊಗ್ಗು ಬಿಟ್ಟು ಅರಳುವ ಹಂತದಲ್ಲಿವೆ. ಬಹಳ ಚೆನ್ನಾಗಿ ಹಬ್ಬಿವೆ ಎನ್ನುತ್ತಾರೆ ತೋಟಗಾರಿಕಾ ಅಪರ  ನಿರ್ದೇಶಕರಾದ ಡಾ : ಹಿತ್ತಲಮನಿ.

(ಚಿತ್ರಗಳು : ರಾಜಾರಾಂ ಶರ್ಮ)