ಸುಮಾರು ಮೂವತ್ತು ಮೈಲಿ ದೂರ, ವಿಮಾನ ನಿಲ್ದಾಣದಿಂದ ಮಾಸ್ಕೋ ನಗರಕ್ಕೆ. ಮುಕ್ಕಾಲು ಗಂಟೆಯ ತನಕ ಪ್ರಯಾಣ. ಮಾಸ್ಕೋದ ದೊಡ್ಡ – ಪುಟ್ಟ ಬೀದಿಗಳಲ್ಲಿ ಹಾದು, ಮಾಸ್ಕೋ ವಿಶ್ವವಿದ್ಯಾಲಯದ ಬದಿಗೆ ಅರ್ಧಚಂದ್ರಾಕಾರವಾಗಿ ಹರಿಯುವ ಮಾಸ್ಕ್ವಾ ನದಿಯ ಸೇತುವೆಗಳ ಮೇಲೆ ಹಾಯ್ದು, ಮಾಸ್ಕೋ ವಿಶ್ವವಿದ್ಯಾಲಯದ ಹೋಟೆಲ್ ಎದುರಿಗೆ ಕಾರು ನಿಂತಿತು. ಹದಿನೈದು ಹಂತಗಳ ಹೋಟೆಲಿನಲ್ಲಿ ಲಿಫ್ಟ್‌ಗಳನ್ನೇರಿಸಿ ಒಂಬತ್ತನೆ ಮಹಡಿಯ ಮೂರನೆಯ ಕೊಠಡಿಯಲ್ಲಿ ನನ್ನನ್ನು, ಐದನೆಯ ಮಹಡಿಯ ಹತ್ತನೆಯ ಕೊಠಡಿಯಲ್ಲಿ ಮ್ಯಾಥ್ಯೂ ಅವರನ್ನು ಸ್ಥಾಪಿಸಿ, ನಮ್ಮನ್ನು ಕರೆತಂದ ಯುವಕ ‘ನೋಮನಿ; ಮಿನಿಸ್ಟ್ರಿ ; ಬ್ರಿಂಗ್,’ ಎಂಬ ಮೂರು ಮಾತಿನ ಗಾಯತ್ರಿಪಠನ ಮಾಡಿ ಹೊರಟೇಹೋದ.

ಒಂಬತ್ತನೆ ಮಹಡಿಯಲ್ಲಿ ಏಕಾಕಿಯಾದ ನಾನು ಮಿಕಿ ಮಿಕಿ ನೋಡುವಾಗ, ಆ ಮಹಡಿಯ ಉಸ್ತುವಾರಿಣಿಯಾದ ಮುದುಕಿ ರೂಮಿಗೆ ಬಂದು, ಕೈ ಸನ್ನೆಗಳಲ್ಲಿ ಬಿಸಿನೀರು ಬರುವ ನಲ್ಲಿ ಯಾವುದು, ತಣ್ಣೀರಿನ ನಲ್ಲಿ ಯಾವುದು, ಸ್ನಾನದ ಷವರ್ ಬಳಸುವುದು ಹೇಗೆ – ಇತ್ಯಾದಿಗಳನ್ನು ಸೂಚಿಸಿ ಹೊರಟು ಹೋದಳು. ಎತ್ತರದ ಮೆತ್ತನೆ ಹಾಸಿಗೆಯ ಮಂಚ; ದಪ್ಪನೆಯ ಬೆಚ್ಚನೆಯ ಹೊದಿಗೆ; ಪಕ್ಕದಲ್ಲೆ ಮರದ ಮಣೆಯಾಕಾರದ ಪೆಟ್ಟಿಗೆಯ ಮೇಲೆ ಪುಟ್ಟ ರೇಡಿಯೋ; ಅದರ ಪಕ್ಕದಲ್ಲಿ ಫೋನ್; ಒಂದು ಮರದ ಬೀರು; ಎತ್ತರವಾದ, ಗಾಜಿನ ಭದ್ರವಾದ ಕಿಟಕಿ; ಅದಕ್ಕೆ ಇಳಿಬಿಟ್ಟ ಪರದೆಗಳು; ಕಿಟಕಿಯ ಬದಿಗೆ ಇಳಿಬಿಟ್ಟ ಚೌಕಾಕಾರದ ಮರದ ಹಲಗೆ; ಅದನ್ನೆತ್ತಿ ಕಬ್ಬಿಣದ ಕೊಕ್ಕೆ ಸಿಕ್ಕಿಸಿದರೆ ಬರೆಯುವ ಮೇಜಾಗುತ್ತದೆ. ಅಂತೂ ತುಂಬ ಸ್ವಲ್ಪ ಸ್ಥಳದಲ್ಲಿ ಸಮಸ್ತ ಅನುಕೂಲಗಳು. ಆದರೆ ಮೊದಲ ಯೋಚನೆ ಹೊಟ್ಟೆಯದು. ಅದಕ್ಕೇನು ಮಾಡಲಿ; ಮ್ಯಾಥ್ಯೂ ಅವರನ್ನು ಸಂಧಿಸುವುದು ಹೇಗೆ ?

ರೇಡಿಯೋ ಪಕ್ಕದಲ್ಲಿ ಪುಟ್ಟ ಪುಸ್ತಕವೊಂದಿತ್ತು ಅದರಲ್ಲಿ ಯಾವ್ಯಾವ ಕೊಠಡಿಯಲ್ಲಿ ಯಾವ್ಯಾವ ನಂಬರಿನ ಫೋನ್ ಇದೆ ಎಂಬುದು ಪತ್ತೆಯಾಯಿತು. ಕೂಡಲೇ ಹತ್ತನೆ ಕೊಠಡಿಗೆ ಫೋನ್ ಮಾಡಿದೆ. ಮ್ಯಾಥ್ಯೂ ಅವರು ಸಿಕ್ಕರು, ‘ಮುಖ ಮಾರ್ಜನಾದಿಗಳನ್ನು ಮುಗಿಸಿ ನನ್ನ ಕೊಠಡಿಗೆ ಬನ್ನಿ, ಇಬ್ಬರೂ ಕೆಳಗೆ ಹೋಗಿ ಒಂದಿಷ್ಟು ಉಪಹಾರದ ವ್ಯವಸ್ಥೆ ಮಾಡಿಕೊಳ್ಳೋಣ’ ಎಂದರು. ಇಂಥ ಕಡೆ ಪರಿಚಿತರಾದ ಇವರಾದರೂ ಇದ್ದದ್ದು ಎಷ್ಟೋ ಧೈರ್ಯ ಅನ್ನಿಸಿ, ಪ್ರಾತರ್‌ವಿಧಿಗಳನ್ನು ತೀರಿಸಿಕೊಂಡು ಹನ್ನೊಂದೂವರೆಯ ವೇಳೆಗೆ ಮ್ಯಾಥ್ಯೂ ಅವರ ಕೋಣೆಗೆ ಹೋದೆ. ಇಬ್ಬರೂ ಲಿಫ್ಟ್‌ನಲ್ಲಿ ಕೆಳಗೆ ಬಂದೆವು. ಅಲ್ಲಿ ರೆಸ್ಟೋರಾಂಟ್. ಎಲ್ಲರೂ ಉಪಹಾರ – ಊಟಾದಿಗಳಿಗೆ ಅಲ್ಲಿಗೇ ಬರಬೇಕು. ನಮ್ಮಲ್ಲಿನ ಹಾಗೆ ನಾವಿದ್ದಲ್ಲಿಗೇ ತಂದುಕೊಡುವ ವ್ಯವಸ್ಥೆ ಈ ದೇಶದಲ್ಲಿಲ್ಲ. ರೆಸ್ಟೋರಾಂಟಿನಲ್ಲಿ ಅಲ್ಲಲ್ಲಿ ಮೇಜುಗಳನ್ನು ಹಾಕಿ ಗಾಜಿನ ತಟ್ಟೆಗಳನ್ನೂ, ಹೂವಿನ ಕುಂಡಗಳನ್ನೂ ಇರಿಸಲಾಗಿತ್ತು. ಕೂರುವ ಮೊದಲು, ನಿಂತ ಪರಿಚಾರಿಕೆಯನ್ನು ಕರೆದು, ‘ನಮಗೆ ಒಂದಷ್ಟು ಊಟಬೇಕು’ ಅಂದೆವು. ನಮ್ಮ ಇಂಗ್ಲಿಷ್ ಆಕೆಗೆ ತಿಳಿಯಲಿಲ್ಲ. ನಮ್ಮ ಅವಸ್ಥೆಯನ್ನು ನೋಡಿ ಒಳಗೆ ಹೋಗಿ ಇಂಗ್ಲಿಷ್ ಬಲ್ಲ ಮತ್ತೊಬ್ಬಾಕೆಯನ್ನು ನಮ್ಮೆದುರು ಕರೆತಂದಳು. ನಮ್ಮ ಕೋರಿಕೆಯನ್ನು ಆಕೆಗೆ ತಿಳಿಸಿದೆವು. ಆಕೆ, ಹಣ ಕೊಡದೆ ಊಟ ಕೊಡುವುದಿಲ್ಲ ಎಂದಳು. ನಮ್ಮಲ್ಲಿ ರೂಬಲ್ಲುಗಳಿಲ್ಲ, ಡಾಲರುಗಳಿವೆ, ಅದನ್ನೇ ತೆಗೆದುಕೊಂಡು ಉಪಹಾರಕೊಡಿ ಎಂದರೆ, ಆಕೆ ಒಪ್ಪಲಿಲ್ಲ ; ರಷ್ಯನ್ ರೂಬಲ್ಲುಗಳಲ್ಲಿ ಹಣ ಕೊಟ್ಟರೆ ಮಾತ್ರ ಊಟ ಎಂದು ಸ್ಪಷ್ಟಪಡಿಸಿದಳು. ‘ನಮಗಿನ್ನೂ ನಿಮ್ಮ ಸರ್ಕಾರದಿಂದ ಹಣ ಬಂದಿಲ್ಲ; ಮಧ್ಯಾಹ್ನ ಬರುತ್ತದೆ’ ಎಂದೆವು. ಅದಕ್ಕವಳು ‘ಹಾಗಾದರೆ ಸರ್ಕಾರದ ಹಣ ಬರುವ ಮಧ್ಯಾಹ್ನದ ತನಕ ಕಾಯಿರಿ’ – ಎಂದವಳೇ ಒಳಕ್ಕೆ ನಡೆದೇಬಿಟ್ಟಳು.

ಹಿಂದಿನ ರಾತ್ರಿ ನಿದ್ದೆಯಿಲ್ಲದ ಆಯಾಸ; ಅರ್ಧರಾತ್ರಿಯ ಉಪಹಾರದ ನಂತರ ವಿಮಾನದಲ್ಲಿ ಏನೂ ಕೊಟ್ಟಿರಲಿಲ್ಲವಾದ ಕಾರಣ ಚುರುಗುಟ್ಟುವ ಹೊಟ್ಟೆ. ಬಂದೊಡನೆ ವಿಮಾನ ನಿಲ್ದಾಣದಲ್ಲಿ, ಒಂದು ಡಾಲರ್‌ನಷ್ಟು ರೂಬಲ್‌ಗಳನ್ನು ಪಡೆಯಬಹುದಾಗಿತ್ತು; ಅದರ ಆ ಬಗ್ಗೆ ನಮಗೆ ಯಾರೂ ಹೇಳಲಿಲ್ಲ. ‘ನೋಮನಿ; ಮಿನಿಸ್ಟ್ರಿ; ಬ್ರಿಂಗ್’ ಎಂದು ಪಠನ ಮಾಡಿ ನಮ್ಮನ್ನು ಇಲ್ಲಿ ಇಳಿಸಿದ ಆಸಾಮಿ ಪತ್ತೆಯಿಲ್ಲ. ಪರದೇಶದಿಂದ ಬಂದು ತಮ್ಮ ನಾಡಿನಲ್ಲಿರುವ ಜನದ ಬಗ್ಗೆ ರೆಸ್ಟೋರಾಂಟಿನ ಸಂಚಾಲಕರ ನಡವಳಿಕೆ ತುಂಬ ವಿಲಕ್ಷಣವಾಗಿದೆ ಅನ್ನಿಸಿತು. ನಮ್ಮ ದೇಶಕ್ಕೆ ಬೇರೆಯ ನಾಡಿನವರು ಬಂದು ಈ ಬಗೆಯ ಸ್ಥಿತಿಯಲ್ಲಿದ್ದಾಗ ನಾವು ಯಾರೂ ಹೀಗೆ ನಡೆದುಕೊಳ್ಳುವ ಜನವಲ್ಲ; ಆದರೆ ಈ ಜನ ಮಾನವ ಸಹಜವಾದ ಭಾವನೆಗಳನ್ನೇ ಕಳೆದುಕೊಂಡು ನಿರ್ದಾಕ್ಷಿಣ್ಯದ ಮುದ್ದೆಗಳಂತಿದ್ದಾರಲ್ಲ, ಯಾಕೆ ? ಈ ದೇಶದಲ್ಲಿ, ಈ ಜನದ ನಡುವೆ ಇನ್ನೂ ಮೂರುವಾರ ಬದುಕುವುದು ಹೇಗೆ ? – ಇತ್ಯಾದಿ ಆಲೋಚನೆಗಳು ಹಾದುಹೋದವು. ನನಗೆ ಮಾಸ್ಕೋ ರೇಡಿಯೋದ ಮಹಾದೇವಯ್ಯನವರ ನೆನಪು ಬಂತು. ಅವರ ದೂರವಾಣಿಯ ನಂಬರ್ ನನ್ನ ಬಳಿ ಇತ್ತು. ಫೋನ್ ಮಾಡಿದೆ. ಸಿಕ್ಕರು. ನಾವು ಈ ದಿನ ಬರುವ ವಿಷಯ ಅವರಿಗೆ ತಿಳಿದಿರಲಿಲ್ಲ. ಬಹುಶಃ ನಾನು ಬರೆದ ಪತ್ರ ತಲುಪಿರಲಿಲ್ಲ. ಅವರು ಸದ್ಯದಲ್ಲಿ ರೇಡಿಯೋ ಸ್ಟೇಷನ್ ಬಿಟ್ಟು ಬರುವಂತಿಲ್ಲವೆಂದೂ, ಭಾರತೀಯ ರಾಯಭಾರ ಕಛೇರಿಗೆ ಫೋನ್ ಮಾಡಬೇಕೆಂದೂ, ತಾವು ಸಂಜೆ ಐದು ಗಂಟೆಗೆ ನನ್ನ ಕೊಠಡಿಗೆ ಬರುವುದಾಗಿಯೂ ಹೇಳಿದರು. ವಿಮಾನ ನಿಲ್ದಾಣಕ್ಕೆ ನಮ್ಮನ್ನು ಎದುರುಗೊಳ್ಳಲು ಬೆಳಿಗ್ಗೆ ಭಾರತೀಯ ರಾಯಭಾರ ಕಛೇರಿಯವರಾರಾದರೂ ಬರಬಹುದೆಂದು ನಿರೀಕ್ಷಿಸಿದ್ದೆವು; ಆದರೆ ಯಾರೂ ಬಂದಿರಲಿಲ್ಲ. ಹೀಗಿರುವಾಗ ಫೋನ್ ಮಾಡುವುದೇ ಬೇಡವೇ, ಎಂದು ಯೋಚಿಸಿ, ಬೇರೆ ದಾರಿ ತೋರದೆ ಫೋನ್ ಮಾಡಿ ನಮ್ಮ ಅಸಹಾಯಕ – ಉಪವಾಸ ಪರಿಸ್ಥಿತಿಯನ್ನು ತೀರಾ ವಾಚ್ಯವಾಗಿಯೇ ನಿವೇದಿಸಿಕೊಂಡದ್ದಾಯಿತು. ಅವರಿಗೆ ನಮ್ಮ ಸ್ಥಿತಿ ಅರ್ಥವಾಯಿತು; ‘ದಯವಿಟ್ಟು ಕಾಯಿರಿ, ಇನ್ನೊಂದು ಗಂಟೆಯ ಒಳಗೆ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಬರುತ್ತಾರೆ; ನಿಮಗೆ ಹತ್ತು ರೂಬಲ್ ಸಾಲ ಕೊಡುತ್ತಾರೆ’ ಎಂದು ಉತ್ತರ ಬಂತು. ಮತ್ತೆ ಲಿಫ್ಟ್ ಹಿಡಿದು ಮೇಲೇರಿ ಕೋಣೆಗೆ ಹೋಗಿ, ಹೆಜ್ಜೆ ಸಪ್ಪುಳಕ್ಕೆ ಕಾದು ಕೂತೆವು. ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಬಾಗಿಲು ಬಡಿದದ್ದು ಕೇಳಿತು. ಬಂದವರು ಇಬ್ಬರು ಭಾರತೀಯ ವಿದ್ಯಾರ್ಥಿಗಳು. ನಮಗೆ ಹತ್ತು ರೂಬಲ್ ಕೊಟ್ಟು ಮತ್ತೆ ಕೆಳಗೆ ಕರೆದುಕೊಂಡು ಹೋಗಿ ಊಟ ಹಾಕಿಸಿದರು. ನನ್ನ ಊಟ ಎಂದರೆ, ಬ್ರೆಡ್, ಬೆಣ್ಣೆ, ಬೇಯಿಸಿದ ಬಟಾಣಿ, ಮೊಸರು. ಅಂತೂ ಶಿವರಾತ್ರಿಯ ಪಾರಣೆಯಾದಂತಾಯಿತು. ಆ ವಿದ್ಯಾರ್ಥಿಗಳಿಗೆ ವಂದನೆ ಹೇಳಿ ಮತ್ತೆ ನನ್ನ ಕೊಠಡಿಗೆ ಬಂದು ಗಾಜಿನ ವಿಸ್ತಾರವಾದ ಕಿಟಕಿಯಾಚೆಗೆ ಚಾಚಿಕೊಂಡ ನೀಲಿಯಾಕಾಶವನ್ನು ನೋಡುತ್ತ  ಮಲಗಿಕೊಂಡೆ. ಸ್ವಲ್ಪ ಹೊತ್ತಿಗೆ ಪಕ್ಕದಲ್ಲಿದ್ದ ಫೋನು ಟಿಂಟ್ರಿಣಿಸಿತು. ಮ್ಯಾಥ್ಯೂ ಅವರು ಮಾತನಾಡಿದರು: ‘ನಾಳೆ ನಾನು ಕೀವ್ ನಗರಕ್ಕೆ ಹೊರಡುವ ಏರ್ಪಾಡು ಮಾಡಲು, ಬೆಳಿಗ್ಗೆ ವಿಮಾನ ನಿಲ್ದಾಣದಿಂದ ಕರೆತಂದ ಆಸಾಮಿ ಬಂದಿದ್ದಾನೆ; ಈಗ ನಿಮ್ಮನ್ನು ನೋಡಲು ಬರುತ್ತಾನೆ.’ ‘ಬರಲಿ’ ಎಂದು ಮತ್ತೆ ಉರುಳಿಕೊಂಡೆ. ಸ್ವಲ್ಪ ಹೊತ್ತಿನ ಮೇಲೆ ಆತ ಬಂದ. ನಾನು ‘ಮನಿ’ ಎಂದು ಪ್ರಶ್ನಾರ್ಥಕ ಧ್ವನಿ ಮಾಡಿದೆ. ಆತ ಕೈ ಅಲ್ಲಾಡಿಸಿ – ‘ನೋಮನಿ, ಇನ್‌ಸ್ಟಿಟ್ಯೂಟ್’ ಎಂದ. ಅದರರ್ಥ, ‘ನಾವು ಹಣಕೊಡುವುದಿಲ್ಲ; ಮಾಸ್ಕೋ ನಗರದಲ್ಲಿ ನಿಮ್ಮನ್ನು ಒಪ್ಪಿಕೊಂಡಿರುವ ಇನ್‌ಸ್ಟಿಟ್ಯೂಟ್ ಆಫ್ ಈಸ್ಟರ‍್ನ್ ಲ್ಯಾಂಗ್ವೇಜಸ್‌ದವರು ಕೊಡುತ್ತಾರೆ’ – ಎಂದು. ಇನ್ನಿವನ ಬಳಿ ಮಾತಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ. ಆತ ಹೊರಟು ಹೋದ.

ಸಂಜೆಯಾಯಿತು. ಐದು ಗಂಟೆಗೆ ಮಹಾದೇವಯ್ಯನವರು ಬಂದರು. ಮ್ಯಾಥ್ಯೂ ಅವರನ್ನು ಜತೆ ಮಾಡಿಕೊಂಡು ಒಂದಷ್ಟು ಅಡ್ಡಾಡಿ ಬರೋಣ ಎಂದು ಹೊರಟೆವು. ಸಂಜೆ ಏಳರವರೆಗೆ, ಬಸ್ಸಿನಲ್ಲಿ, ನೆಲದೊಳಗಿನ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದೆವು. ಬಸ್ಸುಗಳು ಒಂದೂವರೆ ನಿಮಿಷಕ್ಕೆ ಒಂದು ಬರುತ್ತವೆ. ಪೆಟ್ರೋಲ್ ಬಸ್ಸಲ್ಲದೆ ಟ್ರಾಲಿ ಬಸ್‌ಗಳು. ಜತೆಗೆ ಟ್ರಾಂವೇಗಳು ಹಾಸುಗಂಬಿಯ ಮೇಲೆ ಧಾವಿಸುತ್ತವೆ. ಬಸ್ಸುಗಳ ಬಾಗಿಲುಗಳು ತಾವಾಗಿಯೇ ಬಿಚ್ಚುತ್ತವೆ – ಮುಚ್ಚುತ್ತವೆ. ಎಲ್ಲಿಂದೆಲ್ಲಿಗೆ ಬೇಕಾದರೂ ಕೇವಲ ಐದು ಕೊಪೆಕ್. ನಮ್ಮಲ್ಲಿನ ಐದು ಪೈಸೆಯಂತೆ ಎಂದು ಅನುಕೂಲಕ್ಕೆ ಇರಿಸಿಕೊಳ್ಳಬಹುದು. ಜನ ಕೊಪೆಕ್ ಅನ್ನು ಬಸ್ಸಿನಲ್ಲಿರಿಸಿದ ಯಂತ್ರವೊಂದರೊಳಕ್ಕೆ ಹಾಕಿ ಟಿಕೆಟನ್ನು ಹರಿದುಕೊಳ್ಳುತ್ತಾರೆ. ಈ ಯಂತ್ರದೊಳಕ್ಕೆ ನೀವು ಹಣ ಹಾಕಿದಿರಾ ಇಲ್ಲವಾ ಎಂದು ಯಾರೂ ತನಿಖೆ ಮಾಡುವುದಿಲ್ಲ; ಯಾಕೆಂದರೆ ಬಸ್ಸಲ್ಲಿ ಡ್ರೈವರ್ ಒಬ್ಬನೇ. ಜನ ಪ್ರಾಮಾಣಿಕವಾಗಿ ಐದು ಕೊಪೆಕ್ ಹಾಕಿ ಟಿಕೆಟ್ ಪಡೆಯುತ್ತಾರೆ. ಡ್ರೈವರ್ ಪ್ರತಿ ನಿಲುಗಡೆಯಲ್ಲೂ ಆ ನಿಲುಗಡೆಯ ಹೆಸರು ಯಾವುದು, ಮುಂದಿನ ನಿಲುಗಡೆ ಯಾವುದು, ಎಂದು ಧ್ವನಿವರ್ಧಕದಲ್ಲಿ ಹೇಳುತ್ತಾನೆ. ಟ್ರಾಲಿ ಬಸ್ಸಿನಲ್ಲಿ ಕೇವಲ ನಾಲ್ಕು ಕೊಪೆಕ್. ಸುರಂಗ ರೈಲಿನಲ್ಲಿ ಐದು ಕೊಪೆಕ್. ಇಡೀ ನಗರವನ್ನು ಸಂಚರಿಸಲು ಅನುಕೂಲವಾದ ಮಾರ್ಗ ಇದು. ಹಿಂದೆ ಸ್ಟಾಲಿನ್ ಕಾಲದಲ್ಲಿ ಹಗಲಿರುಳು  ಶ್ರಮಿಸಿ ಈ ಸುರಂಗ ರೈಲು ಮಾರ್ಗಗಳನ್ನು ಮಾಡಿಸಲಾಯಿತಂತೆ. ಊರಿನ ಉದ್ದ ಅಗಲಗಳನ್ನು ನೆಲದೊಳಗೆ ಹಾಯುವ ಈ ಮೆಟ್ರೋ ವ್ಯವಸ್ಥೆ ಜಗತ್ತಿನಲ್ಲೇ ಅತ್ಯಂತ ಸಮರ್ಥವಾದದ್ದಂತೆ. ಒಮ್ಮೆ ಐದು ಕೊಪೆಕ್ ನಾಣ್ಯವನ್ನು ಮೆಟ್ರೋ ನಿಲ್ದಾಣದ ಬಾಗಿಲಲ್ಲಿರುವ ಎರಡು ಸ್ತಂಭಾಕೃತಿಯ ಯಂತ್ರದ ನಡುವಣ ತೂತಿನಲ್ಲಿ ತೂರಿಸಿದರೆ. ಕೆಂಪು ಬೆಳಕು ಹಸಿರಾಗುತ್ತದೆ. ಆಗ ನಾವು ಮುಂದುವರಿದು ಒಳಗೆ ಹೋಗಬಹುದು; ಹಣವನ್ನು ತೂರಿಸದೆ ಮುಂದೆ ನಡೆದರೆ ಚಕ್ಕನೆ ಎರಡು ಕಂಬಿಗಳು ತಡೆದು ನಿಲ್ಲಿಸುತ್ತವೆ. ಚಿಲ್ಲರೆ ಇಲ್ಲದಿದ್ದರೆ ಬೇಕಾದ ನಾಣ್ಯಕ್ಕೆ ಚಿಲ್ಲರೆಯನ್ನು ಕೊಡುವ ಯಂತ್ರಗಳಿವೆ. ಮೆಟ್ರೋಕ್ಕೆ ಹೋಗಲು ಚಲಿಸುವ ಮೆಟ್ಟಿಲ ಮೇಲೆ ನಿಂತರಾಯಿತು. ತನಗೆ ತಾನೇ ಐನೂರ – ಆರುನೂರು ಅಡಿಗಳ ಆಳಕ್ಕೆ ನಮ್ಮನ್ನು ಒಯ್ಯುತ್ತದೆ. ಅಲ್ಲಿ ಮೆಟ್ರೋಸ್ಟೇಷನ್, ಜಗಜಗಿಸುವ ದೀಪದ, ಹಾಲುಗಲ್ಲಿನ ಕಂಬಗಳ ಕಟ್ಟಡ. ಕ್ಷಣಾರ್ಧದಲ್ಲಿ ಧಾವಿಸಿ ಬರುತ್ತದೆ ಮೆಟ್ರೋ. ಒಂದು ನಿಮಿಷಕ್ಕೆ ಒಂದು ರೈಲು ಬಂದು ನಿಲ್ಲುತ್ತದೆ. ಒಂದು ನಿಮಿಷಕ್ಕೆ ಒಂದು ಎಂಬುದು ಕಲ್ಪನೆಯ ಉದ್ಗಾರವಲ್ಲ; ವಾಸ್ತವ ಸಂಗತಿ. ನಿಲ್ಲುವುದು ಅರ್ಧ ನಿಮಿಷ. ರೈಲು ಬಂದೊಡನೆ ಬಾಗಿಲುಗಳು ತಾವಾಗಿ ತೆರೆದು ಸರಿಯುತ್ತವೆ. ಧಡಧಡನೆ ಜನ ಒಳಗೆ ಧಾವಿಸುತ್ತಾರೆ. ‘ಬಾಗಿಲು ಹಾಕಲಾಗುತ್ತದೆ. ಎಚ್ಚರವಾಗಿರಿ’ ಎಂಬ ಧ್ವನಿ ಕೇಳುತ್ತದೆ. ಝಲ್ಲೆಂದು ಬಾಗಿಲುಗಳು ಮುಚ್ಚುತ್ತವೆ. ಸುರಂಗವನ್ನು ಹೊಕ್ಕು ವೇಗವಾಗಿ ಮೆಟ್ರೋ ಧಾವಿಸುತ್ತದೆ. ಮತ್ತೆ ನಿಲ್ದಾಣದಲ್ಲಿ ರೈಲು ನಿಂತೊಡನೆಯೇ, ಈ ನಿಲ್ದಾಣದ ಹೆಸರು ಇದು;  ಮುಂದಿನ ನಿಲ್ದಾಣ ಇಂಥದ್ದು; ಈಗ ರೈಲಿನಲ್ಲಿ ಬಾಗಿಲು ಮುಚ್ಚುತ್ತದೆ, ಹುಷಾರಾಗಿರಿ – ಈ ಗಾಯತ್ರಿ ಪಠಣ ಧ್ವನಿವರ್ಧಕದಲ್ಲಿ, ಬೇಸರವಿಲ್ಲದೆ ಸಾಗುತ್ತದೆ. ಮತ್ತೆ ದಢದಢನೆ ರೈಲು ಧಾವಿಸಿ ಸುರಂಗದಲ್ಲಿ ಮರೆಯಾಗುತ್ತದೆ. ರೈಲು ನಿಂತ ಕೂಡಲೇ ಪ್ರತಿಯೊಂದು ಸುರಂಗ ನಿಲ್ದಾಣದಿಂದಲೂ ನೂರಾರು ಜನ ಮತ್ತೆ ಚಲಿಸುವ ಮೆಟ್ಟಿಲ ಮೇಲೇರಿ, ನೆಲಮಟ್ಟದ ಬಾಗಿಲುಗಳಿಂದ ಹೊರಬೀಳುತ್ತಾರೆ, ಹುತ್ತದ ಬಾಗಿಲಿಂದ ಸಾಲಾಗಿ ಬರುವ ಕೆಂಜಿಗಗಳಂತೆ !

ಈ ದಕ್ಷವಾದ ಸಂಚಾರ ವ್ಯವಸ್ಥೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಒಂದು ಮೆಟ್ರೋ ನಿಲ್ದಾಣದ ಕೆಳಗೂ ಇನ್ನೊಂದು ನಿಲ್ದಾಣವಿರುತ್ತದೆ; ಬಹುಶಃ ಮೇಲೂ ನಿಲ್ದಾಣವಿರುತ್ತದೆ. ಹೀಗಾಗಿ ಮೆಟ್ರೋದಲ್ಲಿ ಸಂಚರಿಸುವಾಗ, ನಮ್ಮ ಮೇಲಿನ ನೆಲದ ಸ್ತರದಲ್ಲಿ, ನಮ್ಮ ಕೆಳಗಿನ ನೆಲದ ಸ್ತರದಲ್ಲಿ ರೈಲುಗಳು ಧಾವಿಸುತ್ತಿರುತ್ತವೆ. ಒಂದೆಡೆ ಮಾಸ್ಕ್ವಾ ನದಿಯ ನೀರಿನ ಕೆಳಗೂ ಮೆಟ್ರೋ ಹಾದು ಹೋಗಿದೆಯಂತೆ. ಇದನ್ನೆಲ್ಲ ನೋಡಿದರೆ ನಾವಿನ್ನೂ ಯಾವ ಪ್ರಾಚೀನ ಯುಗದಲ್ಲಿದ್ದೇವೆ ಅನ್ನಿಸುತ್ತದೆ.

ಒಂದು ವಿಶೇಷವೆಂದರೆ ಯಾವ ಬಸ್ಸಿಂದಾಗಲಿ, ಕಾರು – ಟ್ಯಾಕ್ಸಿಗಳಿಂದಾಗಲಿ ಒಂದು ಚೂರು ಹೊಗೆ ಹೊರಡುವುದಿಲ್ಲ. ಕಾರು – ಟ್ಯಾಕ್ಸಿ – ಬಸ್ಸುಗಳು ಮಹಾ ವೇಗದಲ್ಲಿ ಸಂಚರಿಸಿದರೂ, ಅಪಘಾತಗಳಾಗುವುದು ಅಪರೂಪವಂತೆ. ಕಾರಣ, ಎಲ್ಲವೂ ವಿದ್ಯುತ್ ದೀಪಗಳ ಕಣ್‌ಸನ್ನೆಯ ಹತೋಟಿಯಲ್ಲಿ ನಿಲ್ಲುತ್ತವೆ: ಚಲಿಸುತ್ತವೆ. ಪೋಲೀಸಿನವನು ಕಣ್ಣಿಗೇ ಬೀಳುವುದಿಲ್ಲ; ಆತ ಎಲ್ಲೋ ಇರುತ್ತಾನೆ; ಆತನ ಕಣ್ಣಿನ ಕಾವಲು ಮಾತ್ರ ಇರುತ್ತದೆ.

ಊರ ತುಂಬ ಬಗೆಯ ಸ್ತಬ್ಧತೆ. ಅನಗತ್ಯವಾದ ನೂಕು ನುಗ್ಗಲು ಇಲ್ಲ. ಜನ ಒಂದು ಥರಾ ಬಿಗಿದುಕೊಂಡಂತೆ ತೋರಿತು. ಇವರು ಯಾವಾಗಲಾದರೂ ನಗುತ್ತಾರೋ ಅಥವಾ ಹೀಗೇ ಗಂಭೀರತೆಯ ಕೀಲುಕೊಟ್ಟ ಗೊಂಬೆಗಳಂತೆಯೆ ಇರುತ್ತಾರೋ ಎಂಬ ಸಂಶಯ ಬಂದರೂ, ಕೇವಲ ಒಂದು ಸಂಜೆಯ ಅನುಭವ ನನ್ನ ಸಂದೇಹಕ್ಕೆ ಸಾಕಷ್ಟು ಆಧಾರವಲ್ಲ ಎನ್ನಿಸಿತು. ಸಂಜೆ ಏಳರ ತನಕ ಅಲೆದು, ನಾನೂ ಮ್ಯಾಥ್ಯೂ ಅವರೂ ಮಹಾದೇವಯ್ಯನವರ ಜತೆಗೆ ಅವರ ಮನೆಯ ಮೆಟ್ಟಲೇರಿದೆವು. ಅವರ ಮನೆಯ ಬಾಗಿಲನ್ನು ಅವರ ಮಡದಿ ತೆರೆದಾಗ ಅಡುಗೆಯ ಒಗ್ಗರಣೆಯ ಕಂಪು ಮೂಗಿಗೆ ಬಡಿಯಿತು. ಎಂಟು ಗಂಟೆಯ ತನಕ ಅದೂ ಇದೂ ಮಾತನಾಡಿ ಅವರ ಮನೆಯ ಅನ್ನ – ಸಾರನ್ನು ಊಟ ಮಾಡಿದ ಮೇಲೆ, ನಮಗೆ ಈ ಎರಡು ದಿನದ ಆತಂಕ – ಬೇಸರ – ಆಯಾಸಗಳು ಪರಿಹಾರವಾದಂತೆನಿ ಸಿತು. ಊಟದ ನಂತರ ನನ್ನ ಗೆಳೆಯರು ನಮ್ಮಿಬ್ಬರನ್ನೂ ಹೋಟೆಲಿಗೆ ಸುರಕ್ಷಿತವಾಗಿ ಮುಟ್ಟಿಸಿ, ‘ನಾಳೆಯಿಂದ ದಿನಾ ಸಂಜೆ ಮನೆಗೇ ಊಟಕ್ಕೆ ಬರಬೇಕು; ಏನೂ ಸಂಕೋಚ ಪಡಬೇಡಿ’ ಎಂದು ಹೇಳಿದರು.