ಶಬ್ಧ ಮಾಲಿನ್ಯ ಇತರ ಮಾಲಿನ್ಯಗಳ ರೀತಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಆದರೆ ಇದು ಆಗೋಚರವಾದದ್ದರಿಂದ ನಾವು ಅಲಕ್ಷ್ಯ ಮಾಡುತ್ತೇವೆ. ಶಬ್ದ ಮಾಲಿನ್ಯದಿಂದ ಅಕಾಲಿಕ ಕಿವುಡು, ರಕ್ತದೊತ್ತಡ, ಮೈಗ್ರೇನ್ ಮತ್ತು ನರಸಂಬಂಧಿ ರೋಗಗಳು ಉಂಟಾಗುತ್ತವೆ. ಮಕ್ಕಳಿಗೆ ಅಭ್ಯಾಸದ ಮೇಲೆ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಆಗುವುದಿಲ್ಲ. ವಾಹನ ನಿಬಿಡ ಪ್ರದೇಶದಲ್ಲಿರುವ ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಕಡಿಮೆ ಇರುವುದು ಕಂಡುಬಂದಿದೆ. ಶಬ್ದ ಮಾಲಿನ್ಯದಿಂದ ಗರ್ಭಸ್ಥೊಶಿಶುವಿನ ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮವಾಗುತ್ತದೆ.

ನಗರ/ಪಟ್ಟಣಗಳ ಶಬ್ದ ಮಾಲಿನ್ಯದ ಮೂಲಗಳಲ್ಲಿ ಮುಖ್ಯವಾದದ್ದು ವಾಹನಗಳು ಮತ್ತು ಅವುಗಳ ಹಾರ್ನ್. ಅನೇಕರಿಗೆ ಹಾರ್ನ್ ಪ್ರತಿ ಕ್ಷಣ ಬಾರಿಸುತ್ತ ಹೋಗುವುದೇ ಹವ್ಯಾಸ.  ಹಾರ್ನ್ ಬಳಸುವಾಗ ಕೆಳಗಿನ ಎಚ್ಚರಗಳನ್ನು ಪಾಲಿಸಿದರೆ ಶಬ್ದದ ತೀವ್ರತೆಯನ್ನು ಬಹಳವಾಗಿ ಕಡಿಮೆಮಾಡಬಹುದು.

ಹಾರ್ನ್‌ನ ಶಬ್ದದ (ಡೆಸಿಬಲ್) ಪ್ರಮಾಣ ನಿಯಮಿತ ವಾಗಿರಬೇಕು. ಕೆಲವು ಲಾರಿ ಮತ್ತು ಸಾರ್ವಜನಿಕ ವಾಹನಗಳ ಡೆಸಿಬೆಲ್‌ನ ಪ್ರಮಾಣ ಮಿತಿಮೀರುತ್ತದೆ.

ಶಾಲಾ ಕಾಲೇಜು ಮತ್ತು ಆಸ್ಪತ್ರೆಗಳ ಬಳಿ ಹಾರ್ನ್ ಒತ್ತಲೇಬಾರದು.

ರಾತ್ರಿ ವೇಳೆ ಲೈಟ್ ಡಿಪ್‌ಡಿಮ್ ಮಾಡಿದರೆ ಸಾಕು, ಹಾರ್ನ್ ಬೇಕಾಗಿಲ್ಲ.

ಹಾರ್ನ್ ಕರೆಗಂಟೆ ಅಲ್ಲ. ಬಹಳ ಜನ ತಾವು ಬಂದಿರುವುದನ್ನು ಮನೆಯಲ್ಲಿರುವವರಿಗೆ ತಿಳಿಸಲು ಹಾರ್ನ್ ಬಳಸಿ ಕರೆಗಂಟೆಯಂತೆ ಬಜಾಯಿಸುತ್ತಾರೆ.

ಶಾಲಾ ವಾಹನಗಳು ತಮ್ಮ ಬರುವಿಕೆಯನ್ನು ತಿಳಿಪಡಿಸಲು ಹಾರ್ನ್ ಬಾರಿಸುತ್ತ ಬರುತ್ತವೆ.  ಇದರಿಂದ ವಾಹನದಲ್ಲಿ ಕುಳಿತ ಮಕ್ಕಳಿಗೂ ತೊಂದರೆ ಆಗುತ್ತದೆ.

ಬಸ್ಸು, ಟಂಟಂ, ಟೆಂಪೊ ಮತ್ತು ಇತರ ಸಾರ್ವಜನಿಕ ವಾಹನಗಳು ತಮ್ಮ ಬರುವಿಕೆಯನ್ನು ಪ್ರಚುರಪಡಿಸಲು ಹಾರ್ನ್‌ನ್ನು ಸೈರನ್‌ನಂತೆ ಬಾರಿಸುತ್ತಾ ಬರುತ್ತವೆ.

ಹಾಡು, ಸಂಗೀತಗಳು ವಾಹನದಲ್ಲಿ ಕುಳಿತವರಿಗೆ ಕೇಳಿಸಿದರೆ ಸಾಕು, ದಾರಿಯಲ್ಲಿ ಹೋಗುವವರಿಗೆ ಬೇಡ.

ಶಬ್ದದ ದುಷ್ಪರಿಣಾಮ ಕೇಳುಗರಿಗಲ್ಲದೆ ಶಬ್ದ ಮಾಡುವವರಿಗೂ ಆಗುತ್ತದೆ.

ಶಬ್ದಮಾಲಿನ್ಯ ನಿಧಾನ ವಿಷ. ಇದನ್ನು ನಿಯಂತ್ರಿಸಬೇಕಾದವರು ನಾವು.