ಹಂಗಾವಿ ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೦.೦೭.೬೯ ರಿಂದ ೨೩.೦೮.೬೯

೧೯೦೫ರ ಡಿಸೆಂಬರ್ ೧೭ರಂದು ಮಹಾರಾಷ್ಟ್ರದ ಬೇತುಲ್ ಎಂಬಲ್ಲಿ ಹಿದಾಯತುಲ್ಲಾ ಅವರ ಜನನ. ಇವರ ಹಿರಿಯರು ವಾರಣಾಸಿಯ ಒಂದು ಸುಸಂಸ್ಕೃತ ಹಾಗೂ ಸಾಹಿತ್ಯಪ್ರಿಯ ಕುಟುಂಬಕ್ಕೆ ಸೇರಿದವರು. ತಂದೆ ಖಾನ್ ಬಹದ್ದೂರ್ ಹಫೀಜ್ ಮಹಮ್ಮದ್ ವಿಲಾಯತುಲ್ಲಾ ಅವರು ಸ್ವತಃ ಕವಿ; ಡೆಪ್ಯೂಟಿ ಕಮೀಷನ್ ಆಗಿದ್ದರು. ತಾಯಿ, ಮಹಮ್ಮದಿ ಬೇಗಂ ಸಂಪ್ರದಾಯಸ್ಥ ಕುಟುಂಬದಿಂದ ಬಂದವರು.
ಹಿದಾಯತುಲ್ಲಾ ರಾಯಪುರದಲ್ಲಿ ಪ್ರೌಢಶಾಲಾಶಿಕ್ಷಣ ಮುಗಿಸಿ, ನಾಗಪುರದಲ್ಲಿ B.A. ಇಂಗ್ಲೆಂಡಿನಲ್ಲಿ M.A ಪದವಿಗಳನ್ನು ಪಡೆದು, ಬ್ಯಾರಿಸ್ಟರ್ ಆದರು. ೧೯೩೦ರಲ್ಲಿ ಭಾರತಕ್ಕೆ ಮರಳಿ, ನಾಗಪುರದಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಸಿದರು. ವಕೀಲ ವೃತ್ತಿಯ ಜೊತೆಗೆ, ನಾಗಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು. ಎಷ್ಟೇ ಕ್ಲಿಷ್ಟವಾದ ವಿಷಯವನ್ನಾದರೂ, ವಿದ್ಯಾರ್ಥಿಗಳ ಆಸಕ್ತಿ ಕೆರಳಿಸಿ, ಅವರಿಗೆ ಮನ ಮುಟ್ಟುವಂತೆ ಬೋಧಿಸುವುದು ಅವರ ವೈಶಿಷ್ಟ್ಯ. ಆಗಿನ ಮಧ್ಯಪ್ರಾಂತ ಹಾಗೂ ಬೇರಾರ್ ಸಂಸ್ಥಾನದ ಸಕಾರಗಳ ಅಡ್ವೊಕೇಟ್ ಜನರಲ್ ಆಗಿಯೂ ಕೆಲಸ ಮಾಡಿದರು
೧೯೪೭ರಲ್ಲಿ ಭಾರತ ಎರಡು ಹೋಳಾಗಿ, ಪಾಕಿಸ್ಥಾನ ಉದಯಿಸಿದಾಗ, ಸಾವಿರಾರು ಮುಸ್ಲಿಂ ಕುಟುಂಬಗಳು ಅಲ್ಲಿಗೆ ವಲಸೆ ಹೋದವು. ಸ್ವತಃ ಪಾಕಿಸ್ಥಾನದ ಅಧ್ಯಕ್ಷರಿಂದಲೇ ಪಾಕಿಸ್ಥಾನಕ್ಕೆ ಬಂದು ನೆಲೆಸಲು ಕೆರೆ ಬಂದರೂ, ಅದನ್ನು ಲೆಕ್ಕಿಸದೆ, ತಮ್ಮ ತಾಯ್ನಾಡಲ್ಲೇ ಉಳಿದದ್ದು ಹಿದಾಯತುಲ್ಲಾ ಅವರ ಸ್ವದೇಶ ಪ್ರೇಮಕ್ಕೆ, ಹೃದಯ ವೈಶಾಲ್ಯಕ್ಕೆ ಸಾಕ್ಷಿ.
೧೯೪೮ರಲ್ಲಿ ಅವರು ಮದುವೆಯಾದದ್ದು ಪುಷ್ಪಾ ಷಾ ಎಂಬ ಹಿಂದೂ ಕನ್ಯೆಯನ್ನು. ಇದರಿಂದ ನಾಗಪುರದ ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳ ಪ್ರೀತಿ, ಗೌರವಗಳನ್ನು ಗಳಿಸಿಕೊಂಡರು.
ಹಿದಾಯತುಲ್ಲಾ ಅವರು ನಾಗಪುರ ಮತ್ತು ಮಧ್ಯ ಪ್ರದೇಶಗಳ ಉಚ್ಚನ್ಯಾಯಾಲಯಗಳಲ್ಲಿ ಹಾಗೂ ಭಾರತದ ಶ್ರೇಷ್ಠ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿದ್ದರು. ೧೯೬೮ರಲ್ಲಿ ಭಾರತದ ಶ್ರೇಷ್ಠ ನ್ಯಾಯಾಧೀಶ ಪದವಿಯು, ಅವರ ದಕ್ಷತೆ, ಶ್ರದ್ಧೆ ಮತ್ತು ನ್ಯಾಯಾಪರತೆಗಳ ಫಲವಾಗಿ ಅವರನ್ನು ಆರಿಸಿ ಬಂದಿತು.
ಹಿದಾಯತುಲ್ಲಾ ಅವರು ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಕೀರ್ತಿ ತಂದರು. ಸ್ಕೌಟ್ ಆಂದೋಳನದಲ್ಲಿ ಅವರು ಸಲ್ಲಿಸಿದ ವಿಶೇಷ ಸೇವೆಗಾಗಿ ೧೯೪೬ರಲ್ಲೇ ಇಂಗ್ಲೆಂಡಿನ ರಾಣಿಯಿಂದ Order of the British Empire ಎಂಬ ಗೌರವ ಲಭಿಸಿತ್ತು. ೧೯೬೯ರಲ್ಲಿ ಸ್ಕೌಟ್ ಆಗಿ ಅವರು ಸಲ್ಲಿಸಿದ ಸೇವೆಗಾಗಿ ಭಾರತದ ಅತ್ಯುಚ್ಚ ಶೌರ್ಯ ಪ್ರಶಸ್ತಿ ನೀಡಲಾಯಿತು. ಪ್ರಸಿದ್ಧ ಸಾಹಿತಿ ಮಾರ‍್ಕ್‌ಟ್ವೈನ್ ಹೆಸರಿನಲ್ಲಿ ಅಮೆರಿಕಾದಲ್ಲಿ ಸ್ಥಾಪಿಸಿರುವ ಮಾರ‍್ಕ್‌ಟ್ವೈನ್ ಸೊಸೈಟಿ, Knight of Mark Twain ಎಂಬ ಗೌರವವನ್ನು ಅವರಿಗೆ ನೀಡಿತು. ಯುಗೋಸ್ಲಾವಿಯಾ ದೇಶ, Order of the Yugoslav Flag ಪ್ರಶಸ್ತಿಯನ್ನು ೧೯೭೧ರಲ್ಲಿ ಕೊಡಮಾಡಿತು. ಭಾರತದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಫಿಲಿಪೀನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗಳೇ ಅಲ್ಲದೆ ಇನ್ನೂ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಸಂದವು.
ಹಿದಾಯತುಲ್ಲಾ ಅವರು ಶ್ರೇಷ್ಠ ನ್ಯಾಯಾಧೀಶರಾಗಿದ್ದಾಗ ಒಂದು ವಿಶೇಷ ಸಂವೈಧಾನಿಕ (Constitutional) ಸಮಸ್ಯೆ ಹುಟ್ಟಿಕೊಂಡಿತು. ರಾಷ್ಟ್ರಪತಿ ಡಾ|| ಜಾಕೀರ್ ಹುಸೇನ್ ಇದ್ದಕ್ಕಿದಂತೆ ನಿಧನರಾದ ಮೇಲೆ, ಕಾರ್ಯವಾಹಕ ರಾಷ್ಟ್ರಪತಿಯಾಗಿದ್ದ ಉಪರಾಷ್ಟ್ರಪತಿ ಗಿರಿಯವರು ತಮ್ಮ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಿಟ್ಟರು ಹಾಗೂ ರಾಷ್ಟ್ರಪತಿ ಚುನಾವಣೆಯಲ್ಲಿ ತಾವೇ ಖುದ್ದಾಗಿ ಉಮೇದುವಾರಿಕೆ ಪತ್ರ ಸಲ್ಲಿಸಿದರು. ಹೀಗಾಗಿ, ಚುನಾವಣೆ ನಡೆದು ಹೊಸ ರಾಷ್ಟ್ರಪತಿಗಳು ಅಧಿಕಾರ ವಹಿಸಿಕೊಳ್ಳುವವರೆಗೂ ಬೇರೊಬ್ಬರನ್ನು ಕಾರ್ಯವಾಹಕ ರಾಷ್ಟ್ರಪತಿಯಾಗಿ ನೇಮಕ ಮಾಡಲೇ ಬೇಕಾಯಿತು. ಹಾಗೆ ಕಾನೂನಿನ್ವಯ ನಿಯುಕ್ತರಾದವರು ಆಗಿನ ಶ್ರೇಷ್ಠ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಮಹಮ್ಮದ್ ಹಿದಾಯತುಲ್ಲಾ. ಅವರು ಕಾರ್ಯವಾಹಕ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದು ಕೇವಲ ೩೫ ದಿನಗಳ ಅವಧಿಗೆ ಮಾತ್ರ.
ನ್ಯಾಯಮೂರ್ತಿಯಾಗಿ ೨೫ ವರ್ಷಗಳ ಸುದೀರ್ಘ ಸೇವೆಯ ನಂತರ. ೧೯೭೦ರಲ್ಲಿ ನಿವೃತ್ತರಾಗಿ ಮುಂಬೈಯಲ್ಲಿ ನೆಲೆಸಿದರು. ನಿವೃತ್ತಿಯ ನಂತರವೂ, ೧೯೭೧ರಲ್ಲಿ ಬೆಲ್‌ಗ್ರೇಡ್‌ನಲ್ಲಿ ನಡೆದ ನ್ಯಾಯಮೂರ್ತಿಗಳ ವಿಶ್ವಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗಿದ್ದ ಮನ್ನಣೆಯನ್ನು ಬಿಂಬಿಸುತ್ತದೆ.
೧೯೭೯ರಲ್ಲಿ ಹಿದಾಯತುಲ್ಲಾ ಅವರು ಉಪರಾಷ್ಟ್ರಪತಿಗಳಾಗಿ ಸರ್ವಾನುಮತದಿಂದ ಚುನಾಯಿತರಾಗಿ ಆಗಸ್ಟ್ ೩೧ರಂದು ಪ್ರಮಾಣವಚನ ಸ್ವೀಕರಿಸಿದರು.ಉಪರಾಷ್ಟ್ರಪತಿ ರಾಜ್ಯ ಸಭೆಯ ಅಧ್ಯಕ್ಷರೂ ಆಗಿರುತ್ತಾರೆ. ಆ ಸ್ಥಾನದಿಂದ , ರಾಜಸಭೆಯ ಕಾರ್ಯಕಲಾಪಗಳನ್ನು ಅವರು ನಿರ್ವಹಿಸುತ್ತಿದ್ದ ಹಾಗೂ ನಿಯಂತ್ರಿಸುತ್ತಿದ್ದ ರೀತಿ ಎಲ್ಲ ಸಂಸತ್ ಸದಸ್ಯರ ಮೆಚ್ಚುಗೆಯನ್ನು ಗಳಿಸಿತು. ತಮ್ಮ ಪಾಂಡಿತ್ಯ, ಸಾಂಸದಿಕ ವ್ಯವಹಾರಗಳ ಜ್ಞಾನದ ಜೊತೆಗೆ ತಿಳಿಹಾಸ್ಯ, ಮಾನವೀಯತೆ, ಇನ್ನೊಬ್ಬರ ಅಭಿಪ್ರಾಯಗಳನ್ನು ಅರ್ಥಮಾಡಿಕೊಂಡು ಸ್ನೇಹದಿಂದ ತಿಳಿಹೇಳುವುದು, ಮಾರ್ಗದರ್ಶನ ಮಾಡುವುದು ಅವರ ಈ ಎಲ್ಲ ಸದ್ಗುಣಗಳನ್ನು ಎಲ್ಲರೂ ಮೆಚ್ಚಿದ್ದರು.
“My own Boswell”ಎಂಬ ಶೀರ್ಷಿಕೆಯಡಿ ಅವರು ಬರೆದ ಆತ್ಮಕಥೆ, ಆತ್ಮಕಥೆಗಳ ಸಾಲಿನಲ್ಲೇ ವಿಶಿಷ್ಟವಾದ ಕೃತಿ; ನ್ಯಾಯಾವಾದಿಗಳನ್ನೂ ಸಾಮಾನ್ಯ ಓದುಗನನ್ನೂ ಸಮಾನವಾಗಿ ಆಕರ್ಷಿಸಬಲ್ಲ ಕೃತಿ. ಇದಲ್ಲದೆ, ಕಾನೂನಿಗೆ ಸಂಬಂಧಿಸಿದ ಅನೇಕ ಗಹನ ವಿಷಯಗಳ ಮೇಲೂ ಉದ್ಗ್ರಂಥಗಳನ್ನು ಬರೆದಿದ್ದಾರೆ.ಗಾಲ್ಫ್ ಮತ್ತು ಬ್ರಿಜ್ ಆಟಗಳು ಹಾಗೂ ಓದುವುದು ಅವರ ಹವ್ಯಾಸವಾಗಿತ್ತು.
ನ್ಯಾಯಮೂರ್ತಿ ಮಹಮ್ಮದ್ ಹಿದಾಯತುಲ್ಲಾ ಅವರು ೧೯೯೨ರಲ್ಲಿ ನಿಧನರಾದರು.