ಬೆರಳ ಬಂಡೆಯ ನಡುವೆ ಬಜ್ಜಿಯಾಗಿದೆ ಸೊಳ್ಳೆ ;
ಒಂದೇ ಒಂದು ಚಣ ಹಿಂದೆ ಕೈಮೇಲೆ ಕೂತು
ರಕುತವನು ಕುಡಿದೊಡಲು ಈಗ ರಕ್ತದ ಮುದ್ದೆ !
ಇಲ್ಲ, ಇನ್ನಿಲ್ಲ ಇದು ಗರಿಬಂದ ಗಾನದೊಲು
ಕಿವಿಕಿವಿಯ ಬಾಗಿಲಲಿ ಸುಳಿದು ಸುತ್ತುವ ಆಟ,
ಗೆಳೆಯರೊಡನಾಟದಲಿ ನಲಿವ ಸೊಗವಿನ್ನಿಲ್ಲ.

ಮನೆಬಾಗಿಲಲಿ ಕೂತು ಕಾಯುತಿಹುದೋ ಏನೊ
ಇದನು ಹಡೆದೊಡಲು ! ಇರಬಹುದೆ ಮನೆಯಲ್ಲಿ ಮಗು-
ವಿನೊಡನಿದಕಾಗಿ ಕಾಯ್ವೊಂದು ಪೆಣ್ ? ಕೊಲೆವಾರ್ತೆ
ವೃತ್ತ ಪತ್ರಿಕೆಯಲ್ಲಿ ಜನವ ಮರುಗಿಪುದೇನು ?
ಕೊಂದ ಕೊಲೆಪಾತಕನ ಕೋರ್ಟಿಗೆಳೆಯುವರೇನು ?
ಛೇ, ಅಷ್ಟೆಲ್ಲ ಏಕೆ ಈ ಸೊಳ್ಳೆ ಸತ್ತುದಕೆ ?
ನ್ಯಾಯ-ನಿಯಮಗಳೆಲ್ಲ ಮಾನವರ ಲೋಕಕ್ಕೆ !
ಒಂದೆ ದೇವರ ಸೃಷ್ಟಿ, ಎಷ್ಟೊಂದು ನಡವಳಿಕೆ !