ಎತ್ತಿನಗಾಡಿ ದುರಸ್ತಿ ಮಾಡಿಸಿ ಶಿವಣೆ ಮರದ ಹೊಸ ನೊಗ ಮಾಡಿಸಿದ್ದನ್ನು ಕೃಷಿ ವಕ್ತಾರರಂತೆ ಚೋಟುದ್ದದ ಮಕ್ಕಳು ಹೇಳುತ್ತಿದ್ದರು. ಕೂಲಿ ಕೆಲಸ ಮಾಡುವವರ ಹೆಸರು, ತೆಂಗಿನ ಮರದ ಬುಡಕ್ಕೆ ಕಾಸರಕದ ಸೊಪ್ಪು ತಂದವರ ವಿವರಗಳು ತಿಳಿದಿದ್ದವು. ಒಬ್ಬ ಆಳು ದಿನಕ್ಕೆ ಎಷ್ಟು ಹೊರೆ ಸೊಪ್ಪು ಕಡಿದು ದೊಡ್ಡಿಗೆ ತರಬಹುದು ಎಂಬ ಕಲ್ಪನೆಯಿತ್ತು. ಸೊಪ್ಪುಗತ್ತಿ, ಸದೆಗತ್ತಿ, ಹಲ್ಲುಗತ್ತಿ, ಕೈಗೊಡಲಿ, ಧಮಾಸು, ನೇಗಿಲು, ಕೊರಡು, ತಳೆ, ಕೊಕ್ಕೆ ಹೀಗೆ ನೂರಾರು ಕೃಷಿ ಉಪಕರಣ ಜ್ಙಾನವಂತೂ ತೀರ ಸಹಜ ಸಂಗತಿ. ಒಮ್ಮೆ ನಮ್ಮ ಮನೆಗೆ ರಜೆಯಲ್ಲಿ ಬಂದಿದ್ದ ೧೦ರ ಹುಡುಗ ಎಳೆ ಕರು ದಿನವಿಡೀ ತೆಳ್ಳನೆಯ ಸಗಣಿ ಹಾಕುವದು ನೋಡಿ ಔಷಧವಾಗಿ ಕಾಡಿನ ಬಿಕ್ಕೆ ಸೊಪ್ಪು ತಿನ್ನಿಸಲು ಹಿರಿಯರಿಗೆ ಸಲಹೆ ಮಾಡಿದ್ದು ಈಗಲೂ ನೆನಪಾಗುತ್ತಿದೆ!.


ಹಳ್ಳಿ ಮೂಲೆಯ ನಮಗೆ ಶಾಲೆಗೆ ಹೋಗುವ ಕಾಲಕ್ಕೆ ರಜೆ ಬಂದರೆ ಖುಷಿ. ಕಾಡು ಬೆಟ್ಟಗಳಲ್ಲಿ ದನ ಮೇಯಿಸುವುದು, ಕೃಷಿ ಭೂಮಿ ತಿರುಗುವುದು, ಏನೋ ಸಣ್ಣ ಪುಟ್ಟ ಕೃಷಿ ಕೆಲಸ ಮಾಡುವುದರಲ್ಲಿ ಉಮೇದಿ. ಹಿರಿಯರಿಗೂ ಅಷ್ಟೇ, ಮಕ್ಕಳಿಗೆ ಯಾವಾಗ ಶಾಲೆ ಆರಂಭವಾಗುತ್ತದೆ ಎಂಬುದಕ್ಕಿಂತ ಯಾವಾಗ ರಜೆ ಎಂಬುದು ಮುಖ್ಯ! ನಮ್ಮ ರಜಾ ದಿನಗಳ ಸಮರ್ಥ ಬಳಕೆಗಾಗಿಯೇ ಕೆಲವು ಕೆಲಸಗಳನ್ನು ಕಾಯ್ದಿರಿಸುತ್ತಿದ್ದರು. ನಾಳೆ ರಜೆಯೆಂದು ಪಾಟೀ ಚೀಲ ಬೀಸಾಕಿದ ಮರುಕ್ಷಣದಲ್ಲೇ ನಮ್ಮನ್ನು ಪುಸಲಾಯಿಸಿ ಸಣ್ಣಪುಟ್ಟ ಕೆಲಸಗಳಲ್ಲಿ ಸೆಳೆಯುವ ಮಹಾನ್ ಜಾಣ್ಮೆ ಅವರದು. ರುಚಿ ರುಚಿಯ ಕಾಡು ಹಣ್ಣು ಕೊಯ್ಯುವದು, ಜೇನು ತೆಗೆಯುವದು, ಹೊಳೆ ಹಳ್ಳಗಳಲ್ಲಿ ಸ್ನಾನಕ್ಕೆ ಕರೆದೊಯ್ಯುವ ಆಮಿಷಗಳು ಬತ್ತಳಿಕೆಯಲ್ಲಿರುತ್ತಿದ್ದವು. ಹೀಗಾಗಿ ನಾವು ಹಿರಿಯರ ಆಣತಿಯಂತೆ ಕೆಲಸ ಮಾಡುತ್ತಿದ್ದೆವು. ಹಾಣೇ ಗೆಂಡಿನಂತಹ ಹುಡುಗರಾದ ನಾವು ಕೆಲಸಕ್ಕೆ ನಿಂತು ಏನು ಮಹಾ ಸಾಧಿಸಿದೆವು ಎನ್ನುವದಕ್ಕಿಂತ ಅನ್ನ ನೀಡುವ ವೃತ್ತಿ ಜತೆ ಒಡನಾಡುತ್ತಿದ್ದೆವು ಎನ್ನುವುದು ಮುಖ್ಯ. ಟಿ.ವಿ. ಲೋಕ  ಹಳ್ಳಿ ಪ್ರವೇಶಿಸದ ಕಾಲಕ್ಕೆ ಕೃಷಿ ಕೆಲಸವೇ ಚೆಂದದ ಆಟ, ಭತ್ತದ ಹುಲ್ಲು ಒಕ್ಕುವಾಗ ಎತ್ತಿನ ಹಿಂದೆ ಮಕ್ಕಳೆಲ್ಲ ತಿರುಗುವುದು, ಗೊಬ್ಬರ ತೆಗೆದ ಬಳಿಕ ಗುಂಡಿಯ ಸುತ್ತ ಓಡುವದರಲ್ಲಿ ಸಿಗುವ ಖುಷಿಗೆ ಇವತ್ತಿಗೂ ಯಾವ ಸಾಟಿಯಿಲ್ಲ!

ಕೃಷಿ ಪರಿಸರಗಳು ಹೆಚ್ಚು ಆಪ್ತವಾಗಲು, ಅರ್ಥವಾಗಲು ಹಿರಿಯರ ಕೊಡುಗೆಗಳು ಮುಖ್ಯ. ಮಕ್ಕಳು ಅಂತ ಮುದ್ದು ಮಾಡುವ ಜಾಯಮಾನವಿಲ್ಲ, ದುಡಿದು ತಿನ್ನಬೇಕು ಎಂಬುದು ಸಾರ್ವತ್ರಿಕ ಗಟ್ಟಿ ನಿರ್ಧಾರ. ಅಡಿಕೆ ಹೆಕ್ಕುವುದು, ಏಲಕ್ಕಿ ಕೊಯ್ಯುವದು, ತೋಟದಲ್ಲಿ ನೆಲಕ್ಕೆ ಬಿದ್ದಕಾಳು ಮೆಣಸು ಆರಿಸುವದು, ಬಾಳೆಗೊನೆ ತಿನ್ನಲು ಬಂದ ಮಂಗಗಳನ್ನು ಓಡಿಸುವದು, ಭತ್ತದ ಗದ್ದೆಗೆ ಬೀಜ ಬಿತ್ತನೆ ಪೂರ್ವದಲ್ಲಿ ಉಳಿಮೆ ಮಣ್ಣಿನಲ್ಲಿದ್ದ ಹುಲ್ಲಿನ ಬುಡ ಹೆಕ್ಕಿ ರಾಶಿ ಹಾಕುವದು, ಬೀಜ ಬಿತ್ತನೆ ಬಳಿಕ ಪಕ್ಷಿಗಳ ಹಿಂಡು ಗದ್ದೆಗೆ ಬಾರದಂತೆ ಮುಂಜಾನೆ, ಸಾಯಂಕಾಲ ಡಬ್ಬಿ ಬಡಿಯುತ್ತ ಪಕ್ಷಿಗಳನ್ನು ದೂರ ಓಡಿಸುವುದು, ಕಬ್ಬು ನಾಟಿ ಸಂದರ್ಭದಲ್ಲಿ ಮೊಳಕೆ ಬಂದ ಬೀಜದ ಹೊರಸಿಪ್ಪೆ ತೆಗೆಯುವುದು, ಮಳೆಗಾಲದಲ್ಲಿ ಬೇಣದ ಹುಲ್ಲು ಮೇಯಲು ಜಾನುವಾರು ಬಾರದಂತೆ ನಿಗಾ ವಹಿಸುವುದೆಲ್ಲ ನಮ್ಮ ಹೊಣೆ. ಏಲಕ್ಕಿ ಗಿಡದ ಬುಡಕ್ಕೆ ನೆಲ್ಲಿ ಸೊಪ್ಪು ಮುಚ್ಚುವುದು, ಜಾನುವಾರು ಮೇವಿಗೆ ಅಡಿಕೆ ಹೊಂಬಾಳೆ ಸಂಗ್ರಹಿಸುವುದು ಹೀಗೆ ಕೆಲಸಗಳು ಕೈತುಂಬ. ಹೇಳಿದ ಕೆಲಸ ಪೂರೈಸಿದ ಬಳಿಕ ಮೇಲುಸ್ತುವಾರಿ ನಡೆಸುವ ಹಿರಿಯರು ನಮ್ಮ ಕಾರ್ಯವೈಖರಿಗೆ ಸ್ಥಳದಲ್ಲಿ ಸರ್ಟಿಫಿಕೇಟ್ ನೀಡುತ್ತಿದ್ದರು. ಸರಿಯಾಗಿ ಕೆಲಸ ಮಾಡಿದಾಗ ಬೆನ್ನು ತಟ್ಟುವದು, ತಪ್ಪಿದಾಗ ಬೆನ್ನಿಗೆ ಗುದ್ದು ಹಾಕುವದು ರೂಢಿ. ಅಳುವ/ನಗುವ ಯಾವುದೇ ಪ್ರಸಂಗಕ್ಕೂ ಮನಸ್ಸು ಅಣಿಯಾಗಿರುತ್ತಿತ್ತು. ಕೃಷಿ ಕಷ್ಟದ ಅನುಭವವಾಗುತ್ತಿತ್ತು. ನೆಲದ ಭಾಷೆ ನಿಧಾನಕ್ಕೆ ಅರ್ಥವಾಗುತ್ತಿತ್ತು. ಕೈಕಾಲು ಕೆಸರಾಗದೇ, ಮೈಯೆಲ್ಲಾ ಮಣ್ಣಾಗದೇ ಒಂದೇ ಒಂದು ರಜಾ ದಿನವೂ ಕೈ ಜಾರಿದ್ದು ನೆನಪಿಗೆ ಬರುವದಿಲ್ಲ. ಕಾಲೇಜಿನ ಕ್ಲಾಸ್‌ಮೇಟುಗಳ ಹಲವರ ಹೆಸರು ಕಾಲದ ಮಸುಕಿನಲ್ಲಿ ಮರೆತಿರಬಹುದು, ಆದರೆ ನಾಲ್ಕನೇ ಕ್ಲಾಸು ಓದುವ ಕಾಲಕ್ಕೆ ನಮ್ಮ ದೊಡ್ಡಿಯಲ್ಲಿದ್ದ ‘ಜ್ಯೋತಿ, ಸೋಮಿನಿ,…..’ ಹೀಗೆ ದನಕರುಗಳ ಬಹುತೇಕ ಹೆಸರು ಈಗಲೂ ನೆನಪಿವೆ. ಮನುಷ್ಯರ ಜತೆ ಮಾತಾಡುವ ಹಾಗೇ ತಾಸುಗಟ್ಟಲೆ  ಎಳೆಗರುವಿನ ಜತೆ ಸಹಜವಾಗಿ ಮಾತಾಡುತ್ತಿದ್ದೆವು! ಸಗಣಿಯ ವಾಸನೆ, ಚಿಗುಟಿನ ಕಡಿತದ  ಮಧ್ಯೆ ಬಾಲ್ಯದ ಸೆಳೆತಗಳು ಕೃಷಿ ಪರಿಸರದ ಸುತ್ತ ಹೆಣೆದ ವಿಶೇಷಗಳು.

ಪುಟ್ಟ ಮಕ್ಕಳಾದ ನಾವು ನೆಂಟರ ಮನೆಗೆ ಹೋದರೆ ವಾರ ಗಟ್ಟಲೆ ಠಿಕಾಣೆ. ಅಲ್ಲಿನ ಹಿರಿಯರು ನಮ್ಮಲ್ಲಿ ಕೃಷಿ ಸುದ್ದಿ ಕೇಳುತ್ತಿದ್ದರು. ಎಮ್ಮೆ ಕರು ಹಾಕಿದ್ದು, ಅಡಿಕೆ ಕೊಯ್ಲು ನಡೆದದ್ದು, ಹೊಸ ಎತ್ತು ಖರೀದಿಸಿದ್ದು, ಎತ್ತಿನಗಾಡಿ ದುರಸ್ತಿ ಮಾಡಿಸಿ ಶಿವಣೆ ಮರದ ಹೊಸ ನೊಗ ಮಾಡಿಸಿದ್ದನ್ನೂ ಕೃಷಿ ವಕ್ತಾರರಂತೆ ಚೋಟುದ್ದದ ಮಕ್ಕಳು ಹೇಳುತ್ತಿದ್ದೆವು. ಕೂಲಿ ಕೆಲಸ ಮಾಡುವವರ ಹೆಸರು, ತೆಂಗಿನ ಮರದ ಬುಡಕ್ಕೆ ಕಾಸರಕ ಮರದ ಸೊಪ್ಪು ತಂದವರ ವಿವರಗಳು ನಮಗೆ ತಿಳಿದಿದ್ದವು. ಒಬ್ಬ ಆಳು ದಿನಕ್ಕೆ ಎಷ್ಟು ಹೊರೆ ಸೊಪ್ಪು ಕಡಿದು ದೊಡ್ಡಿಗೆ ತರಬಹುದು ಎಂಬ ಕಲ್ಪನೆಯಿತ್ತು. ಸೊಪ್ಪುಗತ್ತಿ, ಸದೆಗತ್ತಿ, ಹಲ್ಲುಗತ್ತಿ, ಕೈಕೊಡಲಿ, ಧಮಾಸು, ನೇಗಿಲು, ಕೊರಡು, ತಳೆ, ಏಣಿ, ಕೊಕ್ಕೆ ಹೀಗೆ ನೂರಾರು ಕೃಷಿ ಉಪಕರಣ ಜ್ಞಾನವಂತೂ ತೀರ ಸಹಜ ಸಂಗತಿ. ಒಮ್ಮೆ ನಮ್ಮ ಮನೆಗೆ ರಜೆಯಲ್ಲಿ ಬಂದಿದ್ದ ೧೦ರ ಹುಡುಗ ಎಳೆಗರು ದಿನವಿಡೀ ತೆಳ್ಳನೆಯ ಸಗಣಿ ಹಾಕುವದು ನೋಡಿ ಔಷಧವಾಗಿ ಕಾಡಿನ ಬಿಕ್ಕೆ ಸೊಪ್ಪು ತಿನ್ನಿಸಲು ಹಿರಿಯರಿಗೆ ಸಲಹೆ ಮಾಡಿದ್ದು ಈಗಲೂ ನೆನಪಾಗುತ್ತದೆ!. ಹೆಗ್ಗೆ, ಮುಳ್ಳರೆ, ರತ್ನಚಿವುಡ, ಹಕ್ಕಲಸಾಲೆ ಎಂದು ಊಟಕ್ಕೆ ಕುಳಿತಾಗ ಅನ್ನದ ಅರಿವು ಹಂಚುವ ರುಚಿ ಪ್ರಾತ್ಯಕ್ಷಿಕೆ ಹಿರಿಯರ ಸಾರಥ್ಯದಲ್ಲಿ  ನಡೆಯುತ್ತಿತ್ತು. ಯಾವ ಅಕ್ಕಿಯ ರುಚಿ ಹೇಗೆಂಬುದು ನಾಲಗೆಗೆ ನೆನಪಿತ್ತು. ಶಾಲೆ/ನೆಂಟರ ಮನೆಗೆ ಹೋದಾಗ ಅಲ್ಲಿನ ರೈತರಲ್ಲಿ ಬೀಜದ ಭತ್ತಕ್ಕೆ ಬೇಡಿಕೆ ಒಪ್ಪಿಸುವುದು, ಹಳ್ಳಿ ಔಷಧಿ ತರುವುದು ಮಕ್ಕಳ ಹೆಗಲಿಗೂ ಬರುತ್ತಿತ್ತು. ಶಾಲೆ ಪಾಠದಂತೆ ಇಂತಹ ಮನೆ ಪಾಠವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೆವು.

ಕೃಷಿ ಚಟುವಟಿಕೆಗಳ ನಡುವೆ ತಲ್ಲೀನವಾದ ನಮಗೆ ಓದುವುದು, ಬರೆಯುವುದು, ಮೇಷ್ಟ್ರ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಬೆತ್ತದ ರುಚಿ ನೋಡುವ ಪ್ರಮೇಯ ಎದುರಾಗುತ್ತಿತ್ತು. ಆಗ ಶಾಲೆ, ಕೃಷಿ ಆಯ್ಕೆಯಲ್ಲಿ ನೆಲದ ಪ್ರೀತಿಯೇ ಕಾಡುತ್ತಿತ್ತು. ನೆನಪಿಗೆ ಸಿಕ್ಕ ಕೃಷಿ ಬಾಲ್ಯಗಳನ್ನು ಪರಿಸರದ ಪರಿವರ್ತನೆಯ ವರಾತಕ್ಕೆ ಈಗ ಹೆಕ್ಕಿ ಹೇಳುವ ಸಂದರ್ಭ ಬಂದಿದೆ. ಇಂದಿನ ಶಿಕ್ಷಣ ಪ್ರಯೋಗದಲ್ಲಿ ಮಕ್ಕಳಿಗೆ ಅಮೇರಿಕಾ, ಜಪಾನ್, ಹಿಮಾಲಯ, ಪೆಂಗ್ವಿನ್, ವಿದ್ಯುತ್, ಮೋಟಾರು ಮುಂತಾದ ನೂರಾರು ಸಂಗತಿಗಳು ತಿಳಿದಿವೆ. ಅದೇ ಊರು, ಅದೇ ಶಾಲೆಯಲ್ಲಿ ಓದಿದ ನಮಗೂ, ಈ ಕಾಲದ ಮಕ್ಕಳ ಕೃಷಿ- ಪರಿಸರ ಜ್ಞಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹೈಟೆಕ್ ಯುಗದಲ್ಲಿ ವಿಶ್ವದ ಎಲ್ಲೆಡೆಯಿಂದ ಜ್ಞಾನ ಹರಿದು ಬರಬೇಕು, ಮಾಹಿತಿಯುಳ್ಳವರು ಮಹದೇವ ಎನ್ನುವುದು ಇವತ್ತಿನ ಬೀಜ ಮಂತ್ರ. ಈಗ ಹತ್ತು ವರ್ಷದ ಹಿಂದೆ ದೀಪಾವಳಿಗೆ ಭತ್ತದ ಕದಿರನ್ನು ಪೂಜೆಗೆ ತರುತ್ತಿದ್ದವರಲ್ಲಿ ‘ಅದೇನು?’ ಎಂದು ನಮ್ಮೂರಿನ ಹೈಸ್ಕೂಲು ಹುಡುಗ ಕುತೂಹಲದಲ್ಲಿ ಕೇಳಿದ್ದ! ಹತ್ತು ನಿಮಿಷ ನೋಡಿ ಹೇಳುವ ಸಮಯ ಕೊಟ್ಟರೂ ಆತ ಮುಖಮುಖ ನೋಡಿದನೇ ಹೊರತೂ ಕೊನೆಗೂ ಅವನಿಗೆ ಭತ್ತದ ಹಸುರು ಕದಿರು ಗುರುತಿಸಲಾಗಲಿಲ್ಲ! ಆ ಹುಡುಗನ ಇಡೀ ಬಾಲ್ಯವನ್ನು ನಗರ ಹಾಗೂ ಟಿ.ವಿ. ಚಾನಲ್ ಕಸಿದುಕೊಂಡಿದ್ದನ್ನು ಹತ್ತಿರದಿಂದ ಗಮನಿಸಿದ್ದೇನೆ. ಅಂಗಳ ಇಳಿಯದೇ ಆಗಸಕ್ಕೆ ನೆಗೆದ ಪರಿಣಾಮ ಅದು.

ಉಣ್ಣುವ ಅನ್ನದ ಮೂಲ ಕದಿರೇ ಗೊತ್ತಾಗದಂತೆ ಸಮಾಜ ತಲೆಮಾರನ್ನು ಪೋಷಿಸುತ್ತಿದೆ. ಈ ಕಾಲಕ್ಕೆ ಇದು ಅಚ್ಚರಿಯಾಗಿ ಕಾಣುತ್ತಿಲ್ಲ, ಮಣ್ಣಿನ ಕತೆ ಅರಿಯದ ದಂಡೇ ಹಳ್ಳಿಯಲ್ಲಿದೆ. ಮಕ್ಕಳಿಗೆ ನೋಟುಬುಕ್, ಬಸ್‌ಪಾಸ್, ಕ್ರಿಕೆಟ್, ಮೊಬೈಲ್, ಚಾಕಲೇಟ್, ಐಸ್‌ಕ್ರೀಮ್ ಅರಿವು ಹೆಚ್ಚುತ್ತ ಕೃಷಿ ಜ್ಞಾನದ ಬರ ಆರಂಭವಾಗಿದೆ. ಈಗ ಹಳ್ಳಿಗಳು ಇದ್ದಕ್ಕಿದ್ದಂತೆ ಖಾಲಿ ಖಾಲಿಯಾಗುತ್ತಿವೆ. ಇದರ ಖಾಸಾ ಕಾರಣಗಳಲ್ಲಿ ನಮ್ಮ ವೈಫಲ್ಯವೂ ಇದೆ. ಮಕ್ಕಳನ್ನು ಶಾಲೆಯಲ್ಲಿ ಬೆಳೆಸಿ, ದೇಶವಿದೇಶಗಳ ಹೆಮ್ಮರವಾಗಿಸಲು ಆಸೆ ಪಡುವವರು ನೆಲದ ಋಣ ತೀರಿಸುವ ಹೊಣೆಗೆ ಭೂಮಿಯಲ್ಲೂ ಬೇರು ಬಿಡಲು ಎಚ್ಚರವಹಿಸಬೇಕು.