ಚಂ|| ಜವಮುೞದೊಂದು ಸೋಗೆನವಿಲೊಯ್ಯನೆ ಕರ್ಕಡೆಗಾಸಿಯಾಗಿ ಪಾ
ಱುವುದುಮಿದೆನ್ನ ನಲ್ಲಳ ರತಿಶ್ರಮವಿಶ್ಲಥ ಕೇಶಪಾಶದೊಳ್|
ಸವಸವನಾಗಿ ತೋಱದಪುದೆಂಬುದೆ ಕಾರಣದಿಂದದಂ ಗುಣಾ
ರ್ಣವನಿಡಲೊಲ್ದನಿಲ್ಲ ಹಯವಲ್ಗನಸಂಚಳ ರತ್ನಕುಂಡಳಂ|| ೫೧

ವ|| ಅಂತು ಬೇಂಟೆಯಾಡಿ ಬೞಲ್ದು ಬೇಸಗೆಯ ನಡುವಗಲೊಳ್ ವನಕ್ರೀಡೆಗಂ ಜಲಕ್ರೀಡೆಗಮಾಸಕ್ತರಾಗಿ ಯಮುನಾನದೀತಟ ನಿಕಟವರ್ತಿಗಳಾದರಲ್ಲಿ

ಚಂ|| ಸರಳ ತಮಾಳ ತಾಳ ಹರಿಚಂದನ ನಂದನ ಭೂಜರಾಜಿಯಿಂ
ಸುರಿವಲರೋಳಿ ತದ್ವನಲತಾಂಗಿಯ ಸೂಸುವ ಸೇಸೆಯಾಯ್ತು ಭೃಂ|
ಗರವಮದೊಂದು ಮಂಗಳರವಕ್ಕೆಣೆಯಾಯ್ತು ಮನೋನುರಾಗದಿಂ
ಕರೆವವೊಲಾಯ್ತು ಮತ್ತ ಕಳಹಂಸರವಂ ಪಡೆಮೆಚ್ಚೆಗಂಡನಂ|| ೯೨

ಕಂ|| ಯಮುನಾನದೀ ತರಂಗಮ
ನಮುಂಕಿ ವನಲತೆಯ ಮನೆಗಳಂ ಸೋಂಕಿ ವನ|
ಭ್ರಮಣ ಪರಿಶ್ರಮಮಂ ಮು
ನ್ನಮೆ ಕಳೆದುದು ಬಂದದೊಂದು ಮಂದಶ್ವಸನಂ|| ೫೩

ವ|| ಅಂತು ಕಾಳಿಂದೀಜಲ ಶಿಶಿರಶೀಕರವಾರಿ ಚಾರಿಯುಂ ಮೃಗಯಾ ಪರಿಭ್ರಮ ಶ್ರಮೋತ್ಥಿತ ಸ್ವೇದಜಲ ಲವಹಾರಿಯುಮಾಗಿ ಬಂದ ಮಂದಾನಿಲಕ್ಕೆ ಮೆಯ್ಯನಾಱಸುತ್ತುಮಾ ಪುಣ್ಯನದಿಯನೆಯ್ದೆವಂದು ತನ್ನ ಬಾಳ ನೀರಂತೆ ಕಱಂಗಿ ಕರ್ಗಿದ ನೀರಂ ನೋಡಿ ವಿಕ್ರಮಾರ್ಜುನಂ ಕಾಳಾಹಿಮಥನನ ಮೊಗಮಂ ನೋಡಿ-

ಕಂ|| ತನ್ನೊಳಗಣ ಪನ್ನಗನಂ
ಮುನ್ನೀನ್ ಪಿಡಿದೊಗೆಯೆ ಕಾಯಲಾಱದೆ ಪಿರಿದುಂ|
ಬನ್ನದ ಕರ್ಪೆಸೆದುದು ತೊ
ಗಿನ್ನುಂ ಹರಗಳ ತಮಾಳ ನೀಳಚ್ಛವಿಯಿಂ|| ೫೪

ತಡಿವಿಡಿದು ಪೂತ ಲತೆಗಳ
ನೊಡನೊಡನೆಲರಲೆಯೆ ಬಿಡದೆ ಸುರಿವಲರ್ಗಳನಂ|
ದೆಡೆಗುಡದೆ ನೂಂಕಿ ಮೆಲ್ಲನೆ
ತಡಿಯಂ ಸಾರ್ಚಿದಪುದಿದಱ ಬಂಬಲ್ದೆರೆಗಳ್|| ೫೫

ಕುದುರೆಗಳನ್ನು ಹತ್ತಿಬಂದರು. ೫೧. ಅಲ್ಲಿ ಕಕ್ಕಡೆ (ಮುಳ್ಳುಗೋಲು)ಯೆಂಬ ಆಯುಧದಿಂದ ಪೆಟ್ಟುತಿಂದು ಶಕ್ತಿಗುಂದಿ ಒಂದು ಗಂಡುನವಿಲು ನಿಧಾನವಾಗಿ ಹಾರುತ್ತಿತ್ತು. ಅದನ್ನು ನೋಡಿ ಅರ್ಜುನನು ಇದು ನನ್ನ ಪ್ರಿಯಳಾದ ಪ್ರಿಯಳಾದ ಸುಭದ್ರೆಯ ರತಿಕ್ರೀಡೆಯ ಕಾಲದಲ್ಲಿ ಬಿಚ್ಚಿಹೋದ ತುರುಬಿನ ಗಂಟಿಗೆ ಸಮಾವಾಗಿ ತೋರುತ್ತಿದೆ ಎಂಬ ಕಾರಣದಿಂದ ಕುದುರೆಯ ಅಲುಗಾಟದಿಂದ ಅಲುಗಾಡುವ ರತ್ನದ ಕುಂಡಲವನ್ನುಳ್ಳ ಅರ್ಜುನನು ಅದನ್ನು ಹೊಡೆಯಲು ಒಪ್ಪಲಿಲ್ಲ ವ|| ಹಾಗೆ ಬೇಟೆಯಾಡಿ ಬಳಲಿ ಆ ಬೇಸಗೆಯ ನಡುಹಗಲಿನಲ್ಲಿ ವನಕ್ರೀಡೆಗೂ ಜಲಕ್ರೀಡೆಗೂ ಆಸೆಪಟ್ಟವರಾಗಿ ಯಮುನಾನದೀದಡಕ್ಕೆ ಬಂದರು. ಅಲ್ಲಿ ೫೨. ತೇಗು, ಹೊಂಗೆ, ತಾಳೆ, ಶ್ರೀಗಂಧ ಮತ್ತು ನಂದನವೃಕ್ಷಗಳ ಸಮೂಹಗಳಿಂದ ಸುರಿಯುತ್ತಿರುವ ಪುಷ್ಪರಾಶಿಯು ಆ ವನಲಕ್ಷ್ಮಿಯು ಚೆಲ್ಲುತ್ತಿರುವ ಅಕ್ಷತೆಯಾಯಿತು. ದುಂಬಿಗಳ ಧ್ವನಿಯು ಮಂಗಳವಾದ್ಯಕ್ಕೆ ಸಮಾನವಾಯಿತು. ಮದಿಸಿದ ಕಳಹಂಸಧ್ವನಿಯು ಪಡೆಮೆಚ್ಚೆ ಗಂಡನಾದ ಅರ್ಜುನನನ್ನು ಪ್ರೀತಿಯಿಂದ ಕರೆಯುವ ಹಾಗಾಯಿತು. ೫೩. ಯಮುನಾ ನದಿಯ ಅಲೆಗಳನ್ನು ಅದುಮಿ ಕಾಡಿನ ಬಳ್ಳಿ ಮನೆಗಳನ್ನು ಮುಟ್ಟಿ ಬಂದ ಒಂದು ಮಂದಮಾರುತವು (ಅವರು) ಕಾಡಿನಲ್ಲಿ ಅಲೆದ ಆಯಾಸವನ್ನು ಮೊದಲೇ ಪರಿಹರಿಸಿತು. ವ|| ಯಮುನಾನದಿಯ ನೀರಿನ ತಂಪಾದ ತುಂತುರುಗಳ ಮೇಲೆ ಸಂಚಾರ ಮಾಡಿದುದೂ ಬೇಟೆಯ ಅಲೆದಾಟದ ಆಯಾಸದಿಂದುಂಟಾದ ಬೆವರಿನ ಕಣಗಳನ್ನು ಹೋಗಲಾಡಿಸಿದುದೂ ಆಗಿ ಬಂದ ಮಂದಮಾರುತಕ್ಕೆ ಶರೀರವನ್ನು ಒಡ್ಡುತ್ತಾ ಆ ಪುಣ್ಯನದಿಯ ಸಮೀಪಕ್ಕೆ ಬಂದು ತನ್ನ ಕತ್ತಿಯ ಕಾಂತಿಯಂತೆ ಕಪ್ಪಾಗಿ ಕರ್ರಗಿದ್ದ ನೀರನ್ನು ನೋಡಿ ವಿಕ್ರಮಾರ್ಜುನನು ಕಾಳಿಂಗಮರ್ದನನಾದ ಕೃಷ್ಣನನ್ನು ಕುರಿತು- ೫೪. ತನ್ನಲ್ಲಿದ್ದ ಕಾಳಿಂಗಸರ್ಪವನ್ನು ಮೊದಲು ನೀನು ಹಿಡಿದೆತ್ತಿ ಎಸೆಯಲು ಅದನ್ನು ರಕ್ಷಿಸಲಾರದೆ ಆ ನದಿಗೆ ವಿಶೇಷವಾಗಿ ಅಂದುಂಟಾದ ಸೋಲಿನ ಕರಿಯಬಣ್ಣವು ಇಂದೂ ಇನ್ನೂ ಶಿವನ ಕಂಠದಂತೆಯೂ ಹೊಂಗೆಯ ಮರದಂತೆಯೂ ಈ ನದಿಯಲ್ಲಿ ಕಪ್ಪು ಕಾಂತಿಯಿಂದ ಪ್ರಕಾಶಿಸುತ್ತಿದೆ. ೫೫. ದಡವನ್ನನುಸರಿಸಿ ಹೂಬಿಟ್ಟಿರುವ ಲತೆಗಳನ್ನು ಆಗಾಗ ಗಾಳಿಯು ಅಲುಗಿಸಲು ಅದರಿಂದ ಸುರಿಯುವ ಹೂವುಗಳನ್ನು ಒಂದೇ

ವಿದಳಿತ ನುತ ಶತಪತ್ರದ
ಪುದುವಿನೊಳಿರದಗಲೆವೋದ ಹಂಸನನಱಸಲ್|
ಪದೆದೆಳಸುವ ಪೆಣ್ಣಂಚೆಯ
ಪದ ಕೊರಲಿಂಚರದ ಸರಮೆ ಸವಿ ಕಿವಿಗಿದಳ್|| ೫೬

ಕಂ|| ನೆಯಲರ್ದಂಭೋರುಹದಲ
ರ್ದುಱುಗಲನೆಲೆದೊಗೆದುವೆಸೆಯೆ ಜಲದೇವತೆಗಳ್||
ನಿಱವಿಡಿದುಡಲ್ ನಿಮಿರ್ಚಿದ
ಕುಱುವಡಿಯ ತರಂಗದಂತೆ ಬಂಬಲ್ದೆರೆಗಳ್|| ೫೭

ಚಂ|| ತುರಗಚಯಂಗಳಂತಿರೆ ತರಂಗಚಯಂ ಚಮರೀರುಹಂಗಳಂ|
ತಿರೆ ಕಳಹಂಸೆ ಬೆಳ್ಗೊಡೆಗಳಂತಿರೆ ಬೆಳ್ನೊರೆ ಗೊಟ್ಟಿ ಗಾಣರಂ|
ತಿರೆ ಮಱದುಂಬಿ ಮೇಳದವರಂತಿರೆ ಸಾರಿಕೆ ರಾಜಗೇಹದಂ
ತಿರೆ ಕೊಳನಲ್ಲಿ ತಾಮರಸರಂತಿರೆ ತಾಮರಸಂಗಳೊಪ್ಪುಗುಂ|| ೫೮

ವ|| ಎಂದು ಭಾಸ್ಕರತನೂಜೆಯನುಭಯತಟ ನಿಕಟ ಕುಸುಮನಿವಹ ತತ್ಪರಾಗ ಪಟಳ ಪಿಶಂಗ ತರತ್ತರಂಗ ಸರೋಜೆಯಂ ಮೆಚ್ಚಿ ಪೊಗೞ್ದು ಜಲಕ್ರೀಡೆಯಾಡಲ್ ಬಗೆದು ತಾನುಮನಂತನುಮಂತಪುರಪರಿವಾರಂ ಬೆರಸು-

ಕಂ|| ಒತ್ತಿದ ತಳ್ಕೆತ್ತಿದ ತೞೆ
ಮುತ್ತಿನ ಪೊಸದುಡಿಗೆ ತಳಿರ ಸೋರ್ಮುಡಿ ಮನಮಂ|
ಪತ್ತಿಸಿ ಜೊತ್ತಿಸೆ ಮದನೋ
ನ್ಮತ್ತೆಯರವಯವದೆ ಬಂದರರಸಿಯರರೆಬರ್|| ೫೯

ಇದು ಮೃದು ಕಳಹಂಸದ ರವ
ಮಿದು ನೂಪುರ ನಿನದಮಿದು ರಥಾಂಗಯುಗಂ ಮ|
ತ್ತಿದು ಕುಚಯುಗಮಿದು ಸರಸಿಜ
ಮಿದು ಮೊಗಮೆನಿಸಿದುದು ನೆರೆದ ಪೆಂಡಿರ ತಂಡಂ|| ೬೦

ಸಮನಾಗಿ ಇದರ ಸಾಲಾದ ಅಲೆಗಳು ಮೃದುವಾಗಿ ದಡವನ್ನು ಸೇರಿಸುತ್ತವೆ. ೫೬. ಅರಳಿದ ಪ್ರಸಿದ್ಧವಾದ ತಾವರೆಯ ಹುದುವಿನ ಆಶ್ರಯದಲ್ಲಿರದೆ ಅಗಲಿಹೋದ ಗಂಡು ಹಂಸಪಕ್ಷಿಯನ್ನು ಹುಡುಕಲು ಆಶೆಪಟ್ಟು ಕೂಗುವ ಹೆಣ್ಣುಹಂಸದ ಹದವಾದ ಕೊರಲಿನ ಇಂಪಾದ ಧ್ವನಿಯೇ ಇಲ್ಲಿ ಕಿವಿಗಿಂಪಾದ ಸ್ವರವಾಗಿದೆ. ೫೭. ಜಲದೇವತೆಗಳು ಉಡಲು ಎತ್ತಿದ ಸೀರೆಯ ನಿರಿಗೆಗಳು ಚಿಮ್ಮುವಂತೆ ಅಲೆಗಳ ಸಮೂಹವು ತಾವರೆಗಳ ಮೇಲಿಂದ ಹಾರಿದುವು. ೫೮. ಅಲೆಗಳ ಸಮೂಹವು ಕುದುರೆಗಳ ಸಮೂಹದಂತಿರಲು ಕಳಹಂಸವು ಚಾಮರಗಳಂತಿರಲು ಬಿಳಿಯ ನೊರೆ ಶ್ವೇತಚ್ಛತ್ರಿಯಂತಿರಲು ದುಂಬಿಯ ಮರಿಗಳು ಗಾಯಕಗೋಷ್ಠಿಯಂತಿರಲು ಹೆಣ್ಣು ಗಿಳಿಯು ಸಖಿಯಂತಿರಲು ಅಲ್ಲಿಯ ಕೊಳವು ಅರಮನೆಯಂತಿರಲು ತಾವರೆಗಳು ತಾವೇ ಅರಸರಾಗಿರುವ ಹಾಗೆ ಪ್ರಕಾಶಿಸುತ್ತಿವೆ. ವ|| ಎಂದು ಎರಡು ಸಮೀಪದ ಮರಗಳಿಂದ ಉದುರಿದ ಹೂವಿನ ಪರಾಗರಾಶಿಯಿಂದ ಪಿಶಂಗ (ಕಪ್ಪುಮಿಶ್ರವಾದ ಕೆಂಪುಬಣ್ಣ)ವಾಗಿ ಮಾಡಲ್ಪಟ್ಟ ಚಂಚಲವಾದ ಅಲೆಗಳಿಂದ ಕೂಡಿದ ಕಮಲವನ್ನು ಸೂರ್ಯಪುತ್ರಿಯಾದ ಯುಮುನಾನದಿಯನ್ನು ಮೆಚ್ಚಿ ಹೊಗಳಿ ತಾನೂ ಕೃಷ್ಣನೂ ಅಂತಪುರಪರಿವಾರದೊಡನೆ ಕೂಡಿ ನೀರಾಟವಾಡಲು ಬಯಸಿದರು. ೫೯. ಲೇಪನಮಾಡಿಕೊಂಡಿರುವ ಶ್ರೀಗಂಧಾದಿಲೇಪನವೂ ಎತ್ತಿ ಹಿಡಿದಿರುವ ಛತ್ರಿಗಳೂ ಮುತ್ತಿನ ಹೊಸಒಡವೆಗಳೂ ಚಿಗುರಿನಿಂದ ಅಲಂಕರಿಸಿದ ಜಾರುಗಂಟೂ ಮನಸ್ಸನ್ನು ಪ್ರವೇಶಿಸಿ ಆಕರ್ಷಿಸುತ್ತಿರಲು ಕಾಮದಿಂದ ಹುಚ್ಚೆದ್ದ ಕೆಲವರು ರಾಣಿಯರು ಲೀಲೆಯಿಂದ ಅಲ್ಲಿಗೆ ಬಂದರು. ೬೦. ಅಲ್ಲಿ ನೆರೆದ ಹೆಂಗಸರ ಸಮೂಹವು ಇದು ಮೃದುವಾದ ಕಳಹಂಸಧ್ವನಿ; ಇದು ಕಾಲ್ಗಡಗದ ಶಬ್ದ; ಇದು ಚಕ್ರವಾಕಪಕ್ಷಿಗಳ ಜೋಡಿ, ಇದು ಮೊಲೆಗಳ ಜೋಡಿ, ಇದು ಕಮಲ, ಇದು ಮುಖ ಎನ್ನಿಸಿತು. ವ|| ಹಾಗೆ ಮನ್ಮಥನ ಮನೋರಾಜ್ಯವೇ ಬರುವಂತೆ ಬಂದು ಗುಂಪು ಗುಂಪಾದ ರಮಣೀಯರಾದ ಆ ಸ್ತ್ರೀಜನರೊಡನೆ ಕೂಡಿ ನೀರಿಗೆ ಪಂಚರತ್ನಗಳನ್ನು ಹರಡಿಸಿ ಶ್ರೀಗಂಧದ ವಾಸನೆಯನ್ನು ಕುಂಕುಮಕೇಸರಿ ಮತ್ತು ಕಸ್ತೂರಿಯ ಬಗ್ಗಡಗಳನ್ನು ಕದಡಿ ನದಿಯನ್ನು ಪ್ರವೇಶಿಸಿದರು. ೬೧. ನೀಲರತ್ನದ, ಬೆಳ್ಳಿಯ, ಸೌಂದರ್ಯವನ್ನು ಹೋಲುವ ಕಣ್ಣುಗಳನ್ನುಳ್ಳ ಈ ಕೋಮಲೆಯರ ಮುಂದೆ ನಾವು ಹೀನವಾಗಿ ಕಾಣಿಸಿಕೊಳ್ಳಲಾರೆವು ಎಂದು ಅಲ್ಲಿದ್ದ ಎಳೆಯ ಮೀನುಗಳು ಆ ಬಾಲೆಯರು

ವ|| ಅಂತು ಮದನನ ಮನೋರಾಜ್ಯಮೆ ಬರ್ಪಂತೆ ಬಂದು ತಂಡತಂಡದೆ ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಂ ಕೆದಱಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ-

ಕಂ|| ನೀಲದ ಬೆಳ್ಳಿಯ ಗಾಡಿಯು
ಮೀ ಲಲಿತಾಂಗಿಯರ ಕಣ್ಗೆ ಪೋಲ್ತುಂ ನಾಂ ಕ|
ಣ್ಗೇಳಿದಮಾಗಿರೆವೆಂದೆಳ
ವಾಳೆಗಳೋಡಿದುವು ಬಾಲೆಯರ್ ಪುಗುವಾಗಳ್|| ೬೧

ವ|| ಅಂತು ಪೊಕ್ಕಾಗಳ್-

ಕಂ|| ಆದಲೆ ನೀರ್ ಗುಂಡಿತ್ತೆಂ
ದೀದಲೆಯೊಳೆ ನಿಂದು ಸತಿಗೆ ಹರಿಗಂ ತೋಱು|
ತ್ತಾದರದೆ ಜಾನುದಘ್ನಮು
ರೋದಘ್ನಂ ಕಂಠದಘ್ನಮೆಂಬಳವಿಗಳಂ|| ೬೨

ವ|| ಅಂತು ಜಗುನೆಯ ಮಡುವಂ ತಮ್ಮರಸಿಯರ ವಿಕಟ ನಿತಂಬಬಿಂಬಂಗಳ ಘಟ್ಟಣೆಯೊಳಮರೆ ಬಗಿದೊಗೆದ ಮೊಲೆಗಳಳ್ಳೇಱ ನೊಳಳ್ಳಾಡಿ ತಳ್ಳಂಕಗುಟ್ಟಿ ನೀರಾಟಮಾಡುವಾಗಳ್-

ಚಂ|| ಪೊಸತಲರ್ದೊಂದು ತಾವರೆಯೆಗೆತ್ತು ಮುಖಾಬ್ಜಮನೊಂದು ತುಂಬಿ ಚುಂ
ಬಿಸೆ ಸತಿ ಬೆರ್ಚಿ ಪೆಳ್ಪಳಿಸಿ ನೋೞ್ಪದುಮಾಕೆಯ ಕಣ್ಣ ಬೆಳ್ಪುಗಳ್|
ಪಸರಿಸೆ ತುಂಬಿಗಳ್ ಕುವಲಯಂಗಳರಳ್ದುವೆ ಗೆತ್ತು ಮತ್ತೆಯುಂ
ಮುಸುಱುವುದುಂ ಗುಣಾರ್ಣವನನಾಗಳವಳ್ ಭಯದಿಂದಮಪ್ಪಿದಳ್|| ೬೩

ಅಸಿಯಳವುಂಕಿ ಕೆಂದಳದೊಳೊತ್ತುವ ನೀರ್ ಮೊಗಮಂ ಪಳಂಚೆ ಬಂ
ಚಿಸಲಿನಿಸಾನುಮಂ ಮುೞುಗಿದಾಗಡೆ ಭೋಂಕನೆ ಬಂದು ಬಾಳೆವಿನ್|
ಮುಸುಱ ನಿರಂತರಂ ಕರ್ದುಕೆ ಸತ್ಕವಿಯೊಳ್ ಸಮನಾಗಿ ಮಾರ್ಗಮಂ
ಪೊಸಯಿಸಿ ದೇಸಿಯಂ ಪೊಸತುಮಾಡಿದಳೊರ್ವಳಪೂರ್ವರೂಪದಿಂ||  ೬೪

ಕಂ|| ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿಯ ರಜದಿಂ|
ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುೞ್ದುವು ವಿಂಗಳ್|| ೬೫

ಕೊಳವನ್ನು ಪ್ರವೇಶಿಸಿದಾಗ ಓಡಿಹೋದುವು. ವ|| ಹಾಗೆ ಪ್ರವೇಶಿಸಿದಾಗ- ೬೨. ಆ ಕಡೆಯಲ್ಲಿ ನೀರು ಆಳವಾಗಿದೆ ಎಂದು ಅರ್ಜುನನು ಈ ಕಡೆಯಲ್ಲಿಯೇ ನಿಂತು ಸುಭದ್ರೆಗೆ ಮೊಳಕಾಲವರೆಗೆ ಮುಳುಗುವ ಎದೆಯವರೆಗೆ ಮುಳುಗುವ ಕತ್ತಿನವರೆಗೆ ಮುಳುಗುವ ಪ್ರಮಾಣಗಳನ್ನು ಆದರದಿಂದ ತೋರಿಸಿದನು. ವ|| ಯುಮುನಾನದಿಯ ಮಡುವನ್ನು ಆ ರಾಣಿಯರು ತಮ್ಮ ದಪ್ಪವಾದ ಪಿರ್ರೆಗಳ ತಾಗುವಿಕೆಯಿಂದ ಭಾಗಮಾಡಿ ಮೊಲೆಗಳ ಘಟ್ಟಣೆಯಿಂದ ತುಳುಕಾಡಿ ಜಲಕ್ರೀಡೆಯಾಡಿದರು. ೬೩. ಮುಖಕಮಲಗಳನ್ನು ಒಂದು ದುಂಬಿಯು ಒಂದು ಹೊಸದಾಗಿ ಅರಳಿದ ಕಮಲವೆಂದೇ ಭ್ರಮಿಸಿ ಮುತ್ತಿಡಲು ಆ ಸತಿಯು ಹೆದರಿ ಭಯದಿಂದ ನೋಡುತ್ತಿರಲು ಅವಳ ಕಣ್ಣಿನ ಬಿಳಿಯ ಬಣ್ಣವು ಪ್ರಸರಿಸಲು ಅದನ್ನು ದುಂಬಿಗಳ ಅರಳಿದ ಕನ್ನೆ ದಿಲೆಗಳೆಂದೇ ಭ್ರಾಂತಿಗೊಂಡು ಪುನ ಮುತ್ತಲು ಅವಳು ಭಯದಿಂದ ಗುಣಾರ್ಣವನನ್ನು ಆಲಿಂಗನ ಮಾಡಿಕೊಂಡಳು. ೬೪. ಕೃಶಾಂಗಿಯಾದ ಒಬ್ಬಳು ಕೆಂಪಾದ ತನ್ನ ಅಂಗೈಯಿಂದ ಅಮುಕಿ ಚೆಲ್ಲಿದ ನೀರು ತನ್ನ ಮುಖವನ್ನು ತಗುಲಲು ಮತ್ತೊಬ್ಬಳು ಅದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಒಂದಿಷ್ಟು ಮುಳುಗಿದಾಗಲೆ ಒಂದು ಬಾಳೆಯ ಮೀನು ಇದ್ದಕ್ಕಿದ್ದ ಹಾಗೆ ಬಂದು ಮುತ್ತಿಕೊಂಡು ಒಂದೇ ಸಮನಾಗಿ ಕಚ್ಚಲು ಅವಳು ಸತ್ಕವಿಗೆ ಸಮನಾಗಿ ಮಾರ್ಗೀಶೈಲಿಯನ್ನು ಹೊಸದಾಗಿಸಿ ದೇಸೀಶೈಲಿಯ ಸೌಂದರ್ಯವನ್ನು ಅಪೂರ್ವರೀತಿಯಿಂದ ಹೊಸತು ಮಾಡಿದಳು.

೬೫. ಆ ಸಮಸ್ತ್ರ ಸ್ತ್ರೀ ಸಮೂಹವು ಲೇಪನ ಮಾಡಿಕೊಂಡಿದ್ದ ಕಸ್ತೂರಿಯಿಂದಲೂ ತುರುಬಿನ ಹೂಗಳ ಪರಾಗಗಳಿಂದಲೂ ವಾಸನೆ ಈ ಪದ್ಯದ ಅರ್ಥವು ಸ್ಪಷ್ಟವಾಗಿಲ್ಲ.

ಮುಡಿ ಬಿಡೆ ಪರೆದೆಸೞ್ಗಳ ಪೊಸ
ದುಡುಗೆಯ ಮುತ್ತುಗಳ ಕುಚದ ಸಿರಿಕಂಡದ ಬೆ|
ಳ್ಪೊಡನೊಡನೆಸೆದಿರೆ ಜಗುನೆಯ
ಮಡು ಗಂಗೆಯ ಮಡುವನಿನಿಸನನುಕರಿಸಿರ್ಕುಂ|| ೬೬

ವ|| ಅಂತು ನಾಡೆಯುಂ ಪೊೞ್ತು ಜಲಕೇಳೀ ಲೀಲೆಯೊಳ್ ಮೆದು ನಿಮಿರ್ದ ಕುರುಳ್ಗಳುಂ ಕೆಂಪೇಱದ ಕಣ್ಗಳುಂ ಬೇಳ್ಪೇಱದ ಬಾಯ್ದೆಗಳುಂ ಪಳಂಚಿದ ಬಣ್ಣಂಗಳುಮೆಸೆಯೆ ಸೊಗಯಿಸುವ ನಿಜ ವಧೂಜನಂ ಬೆರಸು ಪೊಱಮಟ್ಟಾಗಳ್-

ಕಂ|| ತೆಱಪುವಡೆದಂಗಜಂ ಕೆ
ಯ್ಸೆಗೊಳೆ ನೋಟಕರ ಮನಮನಾಗಳ್ ಕೊಳದಿಂ|
ಪೊಱಮಡೆ ಜಿಗಿಲ್ತು ಪತ್ತಿದ
ಕುಱುವಡಿಗಳೆ ಮೆದುವವರ ನಾಣ್ಗಳ ತೆಱಪಂ|| ೬೭

ವ|| ಆಗಳ್ ಮಡಿಯ ಭಂಡಾರದ ಮಾಣಿಕ್ಯ ಭಂಡಾರದ ನಿಯೋಗಿಗಳ್ ತಂದು ಮುಂದಿಟ್ಟ ಪೊನ್ನ ಪಡಲಿಗೆಗಳೊಳೊಟ್ಟಿದ ದೇವಾಂಗವಸ್ತ್ರಂಗಳುಮನನೇಕವಿಧದ ತುಡುಗೆಗಳು ಮನೆನಿತಾನುಂ ತೆಱದ ಸುಗಂಧದ್ರವ್ಯಂಗಳುಮನರಸಿಯರ್ಗಮರಸುಮಕ್ಕಳ್ಗುಮಿತ್ತು ತಾಮಿರ್ವರುಂ ಉಟ್ಟುಂ ತೊಟ್ಟುಂ ಪೂಸಿಯುಂ ನೆಯೆ ಕೆಯ್ಗೆಯ್ದು ದಿವ್ಯಾಹಾರಂಗಳನಾರೋಗಿಸಿ ಕೆಯ್ಗಟ್ಟಿಕೊಂಡು ತಂಬುಲಂಗೊಂಡಿಂ ಬೞಯಮಚ್ಯುತಂ ವಿಕ್ರಮಾರ್ಜುನನ ಕೆಯ್ಯಂ ಪಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಂಗಳಂ ತೋಱಲೆಂದು-

ಉ|| ಕೊಂದೆನವುಂಕಿ ಸಂದ ಖರಧೇನುಕರಂ ಮುಳಿಸಿಂದಮಿಲ್ಲಿ ಕಾ
ಳಿಂದಿಯ ಪಾವನಪ್ಪಳಿಸಿದೆಂ ಪಿಡಿದೀ ಸಿಲೆಯಲ್ಲಿ ಮತ್ತಮಾ|
ಟಂದರನುಗ್ರದೈತ್ಯರನಳುರ್ಕೆಯಿನಿಕ್ಕಿದೆನಿಲ್ಲಿ ಮುನ್ನಮೆಂ
ದಂದು ಗುಣಾರ್ಣವಂಗೆ ಮಧು ಕೈಟಭಹಾರಿ ತೊೞಲ್ದು ತೋಱದಂ|| ೬೮

ವ|| ಅಂತಾ ವನಾಂತರಾಳಮಂ ತೊೞಲ್ದು ತೋಱುತ್ತಿರ್ಪನ್ನೆಗಮನೂನದಾನಿಯದಾನದುದ್ದಾನಿಯ ದಾನಮನಾನಲಾನಲ್ಲದೆ ಪೆಱರ್ ನೆಯರೆಂಬಂತೆ ತೊಟ್ಟನೆ ಕಟ್ಟಿದಿರೊಳ್-

ಮಾಡಲ್ಪಟ್ಟ ನೀರಿನ ಕದಡವೆಂಬ ಮದ್ಯಸೇವನೆಯಿಂದ ಮೀನುಗಳು ಸೊಕ್ಕಿ ಬೆಂಡಿನಂತೆ ಅಸ್ತವ್ಯಸ್ತವಾದುವು. ೬೬. ಆ ಸ್ತ್ರೀಯರ ಬಿಚ್ಚಿ ಹೋದ ತುರುಬಿನಿಂದ ಚೆದುರಿದ ಹೂವಿನ ದಳಗಳಿಂದಲೂ, ಹೊಸ ಒಡವೆಗಳ ಮುತ್ತುಗಳಿಂದಲೂ ಮೊಲೆಗೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧದಿಂದಲೂ ಬಿಳಿಯ ಬಣ್ಣವನ್ನು ಹೊಂದಿ ಯಮುನೆಯ ಮಡು (ಬಿಳುಪಾಗಿರುವ) ಗಂಗೆಯ ಮಡುವನ್ನು ಸ್ವಲ್ಪ ಹೋಲುತ್ತಿತ್ತು. ವ|| ಹಾಗೆ ಬಹಳ ಹೊತ್ತು ಜಲಕ್ರೀಡೆಯ ಆಟದಲ್ಲಿ ಮೆರೆದು ನೇರವಾಗಿ ನಿಂತ ಕೂದಲುಗಳೂ ಕೆಂಪು ಹತ್ತಿದ ಕಣ್ಣುಗಳೂ ಬಿಳಿಚಿಕೊಂಡಿರುವ ತುಟಿಗಳೂ ತಗಲಿ ಅಂಟಿಕೊಂಡಿರುವ ಬಣ್ಣದ ಸೀರೆಗಳೂ ರಮಣೀಯವಾಗಿರಲು ಸೊಗಸಾಗಿ ಕಾಣುತ್ತಿರುವ ತಮ್ಮ ಸ್ತ್ರೀಜನಗಳೊಜನೆ ಕೃಷ್ಣಾರ್ಜುನರು (ನೀರಿನಿಂದ) ಹೊರಟುಬಂದರು. ೬೭. ಮನ್ಮಥನು ಅವಕಾಶವನ್ನು ಪಡೆದು ನೋಟಕರ ಮನಸ್ಸನ್ನು ಸೆರೆಹಿಡಿಯುತ್ತಿರಲು ಕೊಳದಿಂದ ಸ್ತ್ರೀಯರು ಹೊರಗೆ ಬಂದರು. ಅವರ ಶರೀರಕ್ಕೆ ಅಂಟಿಕೊಂಡಿದ್ದ ಚಿಕ್ಕ ಸ್ನಾನಶಾಟಿಗಳೇ ಅವರ ರಹಸ್ಯಸ್ಥಾನಗಳ ವಿಸ್ತಾರವನ್ನು ಪ್ರಕಟಿಸಿದುವು. ವ|| ಆಗ ವಸ್ತ್ರಭಂಡಾರ ಮಾಣಿಕ್ಯ ಭಂಡಾರಗಳ ಅಕಾರಿಗಳು ತಂದು ಮುಂದೆ ಚಿನ್ನದ ತಟ್ಟೆಗಳಲ್ಲಿ ರಾಶಿ ಹಾಕಿದ ರೇಷ್ಮೆ ವಸ್ತುಗಳನ್ನೂ ಅನೇಕ ವಿಧವಾದ ಆಭರಣಗಳನ್ನೂ ಎಷ್ಟೋ ರೀತಿಯ ಸುಗಂಧದ್ರವ್ಯಗಳನ್ನೂ ರಾಣಿಯರಿಗೂ ರಾಜಕುಮಾರರಿಗೂ ಕೊಟ್ಟು ತಾವಿಬ್ಬರೂ ವಸ್ತ್ರಗಳನ್ನು ತೊಟ್ಟು ವಾಸನಾದ್ರವ್ಯವನ್ನು ಲೇಪಿಸಿಕೊಂಡು ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡರು. ಆಹಾರಗಳನ್ನು ಭುಂಜಿಸಿ ಕೈಗಂಧವನ್ನೂ ಲೇಪಿಸಿ ತಾಂಬೂಲ ಸ್ವೀಕರಿಸಿದ ಮೇಲೆ ಕೃಷ್ಣನು ಅರ್ಜುನನ ಕಯ್ಯನ್ನು ಹಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಗಳನ್ನು ತೋರಲೆಂದು ಹೊರಟನು. ೬೮. ಪ್ರಸಿದ್ಧರಾದ ಖರಧೇನು ಕುಂಭರೆಂಬ ರಾಕ್ಷಸರನ್ನು ಇಲ್ಲಿ ಒತ್ತಿ ಕೋಪದಿಂದ ಕೊಂದೆನು. ಯಮುನಾನದಿಯಲ್ಲಿದ್ದ ಕಾಳಿಂಗನೆಂಬ ಹಾವನ್ನು ಹಿಡಿದು ಈ ಕಲ್ಲಿನ ಮೇಲೆ ಅಪ್ಪಳಿಸಿದೆನು. ಮತ್ತು ಹಿಂದಿನ ಕಾಲದಲ್ಲಿ ಮೇಲೆಬಿದ್ದ ಭಯಂಕರರಾದ ರಾಕ್ಷಸರನ್ನು ಪರಾಕ್ರಮದಿಂದ ಇಲ್ಲಿ ಇಕ್ಕಿದೆನು ಎಂದು ಆ ದಿನ ಗುಣಾರ್ಣವನಾದ ಅರ್ಜುನನಿಗೆ, ಮಧುಕೈಟಭರಿಗೆ ಶತ್ರುವಾದ ಕೃಷ್ಣನು ಸುತ್ತಾಡಿ ತೋರಿಸಿದನು. ವ|| ಹಾಗೆ ವನದ ಒಳಭಾಗವನ್ನು ತೊಳಲಿ ತೋರುತ್ತಿರುವಷ್ಟರಲ್ಲಿ ಕುಂದಿಲ್ಲದೆ ದಾನಮಾಡುವವನ ದಾನವನ್ನು ಸ್ವೀಕರಿಸಿದುದಕೆ

ಕಂ|| ಉರಿವುರಿಯನೆ ತಲೆನವಿರನು
ಕರಿಸಿರೆ ಸಂತಪ್ತ ಕನಕವರ್ಣಮುಮುರಿಯೊಂ|
ದುರುಳಿವೊಲಿರೆ ಜಠರಾನಳ
ನುರಿವಿನಮಂತೊರ್ವನುರಿಯ ಬಣ್ಣದ ಪಾರ್ವಂ|| ೬೯

ವ|| ಅಂತು ವರ್ಪನಂ ಕಂಡು ಸಾಮಂತಚೂಡಾಮಣಿ ತನ್ನೊಳಿಂತೆಂದು ಬಗೆದಂ-

ಕಂ|| ತಪ ನಿಯಮ ನಿಯತನೀ ಬ
ರ್ಪ ಪಾರ್ವನೇನೞ ತನಗದಂ ಬೇಡಿದೊಡಿ|
ನ್ನಪಗತದುರಿತರ್ ಸಂಪೂ
ರ್ಣಪುಣ್ಯರಾನಲ್ಲದಿಲ್ಲ ಪೇೞು ಪೆಱರೊಳರೇ|| ೭೦

ವ|| ಎಂಬನ್ನೆಗಂ ಸಾಮಂತ ಚೂಡಾಮಣಿಯನೆಯ್ದೆವಂದು ನಾಲ್ಕುಂ ವೇದಂಗಳೊಳ್ ನಾಲ್ಕುಂ ಋಚಂಗಳಂ ಪೇೞ್ದು ಸಿತ ದೂರ್ವಾಂಕುರ ವಿಮಿಶ್ರಂಗಳಪ್ಪ ಶೇಷಾಕ್ಷತೆಗಳಂ ಕೊಟ್ಟು ಮುಂದೆ ನಿಂದನಂ ನಿಮಗೆ ಬಾೞ್ತೆಯಪ್ಪುದಂ ಬೇಡಿಕೊಳ್ಳಿಮೆನೆ-

ಚಂ|| ಮಣಿ ಕನಕಾದಿ ವಸ್ತುಗಳನೊಂದುಮನೊಲ್ಲೆನವೇವುವಾದವಿ
ನ್ನುಣಿಸೆನಗೞ ಮೆಯ್ ಪಸಿದು ಜೊಮ್ಮನೆ ಪೋದಪುದೆನ್ನ ವೇೞ್ಪುದಂ|
ತಣಿಯುಣಲೀವೊಡೀವುದೆನೆ ಪಾರ್ಥನದೇವಿರಿದಿತ್ತೆನಾವುದು
ಣ್ಬುಣಿಸೆನೆ ಪೇೞ್ವೆನೆಂಬ ಪದದೊಳ್ ನರಕಾಂತಕನಗ್ನಿದೇವನಂ|| ೭೧

ವ|| ಕಾಣಲೊಡಮಱದು ಶರಣಾಗತಜಳನಿಯನೆಯ್ದೆ ವಂದನೀ ಬಕವೇಷಿ ನಿನ್ನನೇನಂ ಬೇಡಿದಂ ನೀನೀತಂಗೇನನಿತ್ತಿಯೆನೆ-

ಚಂ|| ಪಸಿದುಣವೇಡಿದಂ ಬಡವನಾನುಣಲಿತ್ತೆನದಲ್ಲದಿಲ್ಲಿ ದಲ್
ಕುಸುರಿಯ ಮಾತುಗಾಣೆನೆನೆ ಕೇಳ್ದು ಮುರಾಂತಕನೇಂ ತಗುಳ್ದೆ ಯಿ|
ನ್ನುಸಿರದಿರೀವ ಮಾತನಿವನುಣ್ಬುದು ಖಾಂಡವವಿತನಗ್ನಿ ಮುಂ
ಪುಸಿದಿವನಿಂತೆ ಪಾಯಿಸಿದನಿಂದ್ರನೊಳಾದಿ ನರೇಂದ್ರರೆಲ್ಲರಂ|| ೭೨

ನಾನಲ್ಲದೆ ಬೇರೆಯವರು ಸಮರ್ಥರಾಗಲಾರರು ಎನ್ನುವ ಹಾಗೆ ಕಟ್ಟಿದಿರಿನಲ್ಲಿ- ೬೯. ಉರಿಯುತ್ತಿರುವ ಜ್ವಾಲೆಯನ್ನೇ ತಲೆಯ ಕೂದಲು ಅನುಕರಿಸುತ್ತಿರಲು ಅವನ ಪುಟವಿಟ್ಟ ಚಿನ್ನದ ಹೊಂಬಣ್ಣವು ಬೆಂಕಿಯ ಒಂದು ಉಂಡೆಯಂತಿರಲು ಜಠರಾಗ್ನಿಯ ಉರಿಯಿಂದ ಕೂಡಿ (ಹಸಿವಿನಿಂದ ಕೂಡಿದ) ಬೆಂಕಿಯ ಬಣ್ಣದ ಬ್ರಾಹ್ಮಣನೊಬ್ಬನು ವ|| ಬರುತ್ತಿರುವುದನ್ನು ಕಂಡು ಸಾಮಂತಚೂಡಾಮಣಿ ತನ್ನಲ್ಲಿ ಹೀಗೆಂದು ಯೋಚಿಸಿದನು. ೭೦. ತಪಸ್ಸಿನ ನಿಯಮದಲ್ಲಿ ಆಸಕ್ತನಾದ, ಎದುರಿಗೆ ಬರುತ್ತಿರುವ ಈ ಬ್ರಾಹ್ಮಣನು ತನ್ನ ಇಷ್ಟಾರ್ಥವೇನೆಂಬುದನ್ನು ನನ್ನಲ್ಲಿ ತಿಳಿಸುವುದಾದರೆ ನನಗಿಂತ ಪುಣ್ಯಶಾಲಿಗಳು ಮತ್ತಾರೂ ಇಲ್ಲ. ವ|| ಎನ್ನುವಷ್ಟರಲ್ಲಿ ಅವನು ಸಾಮಂತ ಚೂಡಾಮಣಿಯವರ ಅರ್ಜುನನ ಸಮೀಪಕ್ಕೆ ಬಂದು ನಾಲ್ಕು ವೇದಗಳಿಂದಲೂ ನಾಲ್ಕು ಋಕ್ಕುಗಳನ್ನು ಹೇಳಿ ಬಿಳಿಯ ಗರಿಕೆಯ ಮೊಳಕೆಯಿಂದ ಕೂಡಿದ ಆಶೀರ್ವಾದರೂಪವಾದ ಶೇಷಾಕ್ಷತೆಯನ್ನು ಕೊಟ್ಟು ಮುಂದೆ ನಿಂತನು. ಅರ್ಜುನನು ನಿಮ್ಮಿಷ್ಟಾರ್ಥವೇನು ಕೇಳಿಕೊಳ್ಳಿ ಎಂದನು. ೭೧. ಮಣಿಕನಕಾದಿ ವಸ್ತುಗಳಾವುದನ್ನೂ ಅಪೇಕ್ಷಿಸುವುದಿಲ್ಲ ; ಅವು ಏನು ಮಹಾದೊಡ್ಡವು; ಸಂಪೂರ್ಣವಾದ ರುಚಿಕರವಾದ ಊಟ ನನಗೆ ಈಗ ಬೇಕು, ಶರೀರವು ಹಸಿವಿನಿಂದ ಜೊಮ್ಮುಹಿಡಿದು ಹೋಗಿದೆ; ನನಗೆ ಬೇಕಾದ ತೃಪ್ತಿಕರವಾದ ಊಟವನ್ನು ಕೊಡುವುದಾದರೆ ಕೊಡಿ ಎನ್ನಲು ಪಾರ್ಥನು ಇದೇನು ದೊಡ್ಡದು, ಕೊಟ್ಟಿದ್ದೇನೆ. ಯಾವುದು ನೀವು ಊಟ ಮಾಡುವ ಆಹಾರ ಎಂದು ಕೇಳಿದನು. ‘ಹೇಳುತ್ತೇನೆ’ ಎನ್ನುವಷ್ಟರಲ್ಲಿ ನರಕಾಂತಕನಾದ ಶ್ರೀಕೃಷ್ಣನು ಅಗ್ನಿದೇವನನ್ನು

ವ|| ಕಂಡು, ತಕ್ಷಣವೇ ಗುರುತಿಸಿ ಶರಣಾಗತ ಸಮುದ್ರನಾದ ಅರ್ಜುನನ ಸಮೀಪಕ್ಕೆ ಬಂದು ‘ಈ ಬಕವೇಷಿಯು ನಿನ್ನನ್ನು ಏನು ಬೇಡಿದನು, ನೀನು ಇವನಿಗೆ ಏನನ್ನು ಕೊಡುತ್ತೇನೆಂದೆ’ ಎಂದು ಕೇಳಿದನು. ೭೨. ‘ಬಡವನು ಹಸಿದು ಊಟವನ್ನು ಬೇಡಿದನು; ನಾನು ಕೊಡುತ್ತೇನೆಂದೆ, ಅದಲ್ಲದೆ ಇನ್ನು ಮತ್ತಾವ ಚಮತ್ಕಾರದ ಮಾತನ್ನೂ ಕಾಣೆ ಎಂದನು. ಕೃಷ್ಣನು “ನೀನು ಏನು ಮಾಡಿದೆ? ಇನ್ನು ಮೇಲೆ ಕೊಡುವ ಮಾತನ್ನೇ ಆಡಬೇಡ. ಇವನು ಊಟ ಮಾಡುವುದು ಖಾಂಡವವನವನ್ನು, ಈತನು ಅಗ್ನಿದೇವ; ಹಿಂದೆ ಇವನು ಹೀಗೆಯೇ ಸುಳ್ಳು ಹೇಳಿ ಆದಿಕಾಲದ ರಾಜರನ್ನೆಲ್ಲ ದೇವೇಂದ್ರನಲ್ಲಿ ಹೋರಾಡುವಂತೆ ಮಾಡಿದನು. ವ|| ಈತನು ಹೋತನ ಮುಖದ ಹುಲಿ (ಕಪಟಿ). ಬಿಳಿಯದನ್ನು ಕರಿಯದನ್ನಾಗಿ ಮಾಡುವವನು (ಮೋಸಗಾರ) ಈತನ ಮಾತು ಮಾತಲ್ಲ” ಎಂದನು.

ವ|| ಈತನಜಮುಖವ್ಯಾಘ್ರಂ ಶ್ವೇತ ಕೃಷ್ಣಕಾರಕನೀತನ ಮಾತು ಮಾತಲ್ಲವೆಂದೊಡಾ ಮಾತು ತನ್ನಂ ಮೂದಲಿಸಿದಂತಾಗೆ ವಿದ್ವಿಷ್ಟವಿದ್ರಾವಣನಿಂತೆಂದಂ-

ಚಂ|| ಎರೆದನ ಪೆಂಪುವೇೞ್ವೊಡನಲಂ ಪೊಣರ್ವಾತನ ಪೆಂಪುವೇೞ್ವೊಡಾ
ಸುರಪತಿ ಕೊಟ್ಟ ತಾಣದೆಡೆವೇೞ್ವೊಡಮಾ ಯಮುನಾನದೀ ತಟಾಂ|
ತರಮೊಸೆದಿತ್ತನಾನೆರೆಯೆ ಕೇಳ್ವನಿಳಾಧರನೀನದರ್ಕೆ ಮಾ
ತೆರಡಣಮಾಡಲಾಗದಿರು ಸೈಪಿನೊಳಲ್ಲದೆ ಕೂಡಿ ಬರ್ಕುಮೇ|| ೭೩

ಮ|| ದನುಜಾರೀ ದಿವಿಜೇಂದ್ರ ಶಾಶ್ವತಗುಣಾ ನಿನ್ನಳ್ಕದೇಂ ಬೇಡಿದಾ
ನನಲಂ ತೀರ್ಥ ಸವಿಪಮಂಬುನಿವಹ ವ್ಯಾಳೋಳ ಕಾಳಿಂದಿಯಾ|
ವನಮುಂ ಕೇಳ್ದುವು ಭೂತಮಯ್ದುಮಱಗುಂ ಕೊಟ್ಟಿರ್ದುದಾದಂತಱಂ
ದೆನಗಿಂ ಮಾಣ್ಬುದು ಸೂೞೆ ಖಾಂಡವಮನಾಂ ತಳ್ವಿಲ್ಲದಿಂದೂಡುವೆಂ|| ೭೪

ಉ|| ಒತ್ತಿ ತಱುಂಬಿ ನಿಂದ ರಿಪು ಭೂಜ ಸಮಾಜದ ಬೇರ್ಗಳಂ ನಭ
ಕ್ಕೆತ್ತದೆ ಬಂದು ತನ್ನ ಮವೊಕ್ಕೊಡೆ ಕಾಯದೆ ಚಾಗದೊಳ್ಪಿನ|
ಚ್ಚೊತ್ತದೆ ಮಾಣ್ದು ಬಾೞ್ವ ಪುೞುವಾನಸನೆಂಬನಜಾಂಡಮೆಂಬುದೊಂ
ದತ್ತಿಯ ಪೆಣ್ಣೊಳಿರ್ಪ ಪುೞುವಲ್ಲದೆ ಮಾನಸನೇ ಮುರಾಂತಕಾ|| ೭೫

ವ|| ಎಂದು ಮಱುಮಾತಿಂಗೆಡೆಯಿಲ್ಲದಂತಿರೆ ನುಡಿದ ಪಡೆಮೆಚ್ಚೆ ಗಂಡನ ಗಂಡವಾತುಮಂ ನನ್ನಿವಾತುಮಂ ಮುರಾಂತಕಂ ಮೆಚ್ಚಿ-

ಮ|| ಸಮಕಟ್ಟಿಂಗೊರೆಗಾರುಮಿಲ್ಲರಿಗ ಕೇಳ್ ನಿನ್ನೊಳ್ ಸಮಂ ಧಾತ್ರಿಯೊಳ್
ಹಿಮಕೃದ್ಭೂಧರದಂತೆ ನಿನ್ನ ಗುಣಸಂದೋಹಂಗಳಂ ಕಾಣಲ|
ಕ್ಕುಮೆ ಮತ್ತೊರ್ವನೊಳಾಗದೆಂತೆನೆ ಸಮಸ್ತೋರ್ವೀಧರಾಶೇಷ ಶೇ
ಷ ಮಹಾ ನಾಗ ಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಬರೇ|| ೭೬

ಚಂ|| ಮುನಿಯಿಸಿದಂ ಕರಂ ರಿಡಿಯನಪ್ಪುದು ಬೇೞ್ಪನ ಬೇೞ್ಪ ವಸ್ತು ಕಾಂ
ಚನಗಿರಿಯಿಂದಮಗ್ಗಳಮೆನಿಪ್ಪುದದಾದೊಡಮೇನೊ ಜೀವಮು|
ಳ್ಳಿನಮಿಱದರ್ಥಮುಳ್ಳಿನೆಗಮಿತ್ತು ನೆಗೞ್ತೆಯನಾಂಪುದೆಂಬ ಪೆಂ
ಪಿನ ಸಮಕಟ್ಟು ಕಣ್ಗೆ ದೊರೆಯಾರರಿಕೇಸರಿ ನಿನ್ನವೋಲ್ ಪೆಱಂ|| ೭೭

ಆ ಮಾತು ತನ್ನನ್ನು ಮೂದಲಿಸಿದ ಹಾಗಾಗಲು ವಿದ್ವಿಷ್ಟವಿದ್ರಾವಣನಾದ ಅರ್ಜುನನು ಹೀಗೆಂದನು. ೭೩. ಬೇಡಿದವನ ಹಿರಿಮೆಯನ್ನು ಹೇಳುವುದಾದರೆ ಅಗ್ನಿದೇವ, ಯುದ್ಧಮಾಡುವವನ ಹಿರಿಮೆಯನ್ನು ಹೇಳುವುದಾದರೆ ಸಾಕ್ಷಾತ್ ದೇವೇಂದ್ರ, ಕೊಟ್ಟ ಸ್ಥಳವನ್ನು ಹೇಳುವುದಾದರೆ ಪವಿತ್ರವಾದ ಯಮುನಾನದೀದಡಪ್ರದೇಶ; ಪ್ರೀತಿಯಿಂದ ಕೊಟ್ಟವನು ನಾನು; ಪ್ರಾರ್ಥನೆಯನ್ನು ಕೇಳುವಾಗ ಸಾಕ್ಷಿಯಾಗಿದ್ದವನು ಭೂಧರನಾದ ನೀನು; ಅದಕ್ಕೆ ಸ್ವಲ್ಪವೂ ಎರಡು ಮಾತನಾಡಕೂಡದು; ಇಂತಹ ಸಂದರ್ಭವು ಅದೃಷ್ಟದಿಂದಲ್ಲದೆ ಕೂಡಿಬರುತ್ತದೆಯೇ? ೭೪. ರಾಕ್ಷಸವೈರಿಯಾದ ಶ್ರೀಕೃಷ್ಣನೇ, ದೇವೇಂದ್ರನಂತೆ ಶಾಶ್ವತವಾದ ಗುಣಗಳುಳ್ಳವನೇ, ನಿನ್ನ ಹೆದರಿಕೆಯೇನು? ಬೇಡಿದವನು ಅಗ್ನಿ, ಪುಣ್ಯತೀರ್ಥಕ್ಕೆ ಸಮೀಪದಲ್ಲಿ, ಜಲರಾಶಿಯಿಂದ ಸಂಚರಿಸುತ್ತಿರುವ ಯಮುನಾನದಿಯ ಸಮೀಪವಿರುವ ಈ ಕಾಡುಗಳೂ ನಾನಾಡಿದ ಮಾತುಗಳನ್ನು ಕೇಳಿವೆ. ನಾನು ಮಾತು ಕೊಟ್ಟಿರುವುದನ್ನು ಪಂಚಭೂತಗಳೂ ತಿಳಿದಿವೆ. ಆದುದರಿಂದ ಅದನ್ನು ತಪ್ಪುವುದು ನನಗೆ ಕ್ರಮವೇ? ಖಾಂಡವವನವನ್ನು ನಾನು ತಡೆಯಿಲ್ಲದೆ ಉಣಿಸುತ್ತೇನೆ. ೭೫. ಮೇಲೆಬಿದ್ದು ಅಡ್ಡಗಟ್ಟಿ ನಿಂತ ಶತ್ರುಗಳೆಂಬ ಮರಗಳ ಸಮೂಹದ ಬೇರುಗಳನ್ನು ಮೂಲೋತ್ಪಾಟನೆ ಮಾಡದೆ, ಬಂದು ತನಗೆ ಶರಣಾಗತರಾದವರನ್ನು ರಕ್ಷಿಸದೆ, ತ್ಯಾಗದ ಒಳ್ಳೆಯ ಗುಣವನ್ನು ಮುದ್ರಿಸದೆ ತಪ್ಪಿ ಬಾಳುವ ಹುಳುವಿಗೆ ಸಮಾನವಾದ ಮನುಷ್ಯನು ಬ್ರಹ್ಮಾಂಡವೆಂಬ ಅತ್ತಿಯ ಹಣ್ಣಿನಲ್ಲಿರುವ ಹುಳುವಲ್ಲದೇ ಮನುಷ್ಯನೇ ಮುರಾಂತಕಾ? ವ|| ಎಂದು ಪ್ರತ್ಯುತ್ತರ ಕೊಡುವುದಕ್ಕೆ ಅವಕಾಶವಿಲ್ಲದಂತೆ ಮಾತನಾಡಿದ ಪಡೆಮೆಚ್ಚೆಗಂಡನಾದ ಅರ್ಜುನನ ಪರಾಕ್ರಮದ ಮಾತನ್ನೂ ಸತ್ಯವಾಕ್ಕನ್ನೂ ಮುರಾಂತಕನು ಮೆಚ್ಚಿದನು. ವ|| ಎಲೈ ಅರಿಗನೇ ಕೇಳು, ಈ ಭೂಮಿಯಲ್ಲಿ ನಿನ್ನ ಹೋಲಿಕೆಗೂ ಸಮಾನತೆಗೂ ಬರುವವರು ಯಾರೂ ಇಲ್ಲ ; ಹಿಮವತ್ಪರ್ವತದಂತಿರುವ ನಿನ್ನ ಗುಣರಾಶಿಯನ್ನು ಮತ್ತೊಬ್ಬನಲ್ಲಿ ಕಾಣಲಾಗುವುದಿಲ್ಲ ಸಮಸ್ತ ಭೂಮಂಡಲವನ್ನು ಧರಿಸಿರುವ ಆದಿಶೇಷನೆಂಬ ಮಹಾಸರ್ಪದ ಹೆಡೆಯಲ್ಲಿರುವ ರತ್ನಕಾಂತಿಯನ್ನು ಮಿಂಚುಹುಳುವಿನಲ್ಲಿ ಕಾಣಬಹುದೇ? ೭೭. ನಿನ್ನನ್ನು ರೇಗಿಸಿದವನು ವಿಶೇಷ ದೊಡ್ಡವನಹುದು. ಬೇಡುವವನು ಬೇಡಿದ ವಸ್ತು

ವ|| ಎಂದು ತನಗೆ ಕೊಟ್ಟ ಕೋಡಿಂಗೊಡಂಬಟ್ಟ ದಿತಿಜಕುಲದಾವಾನಲನುಮನರಾತಿ ಕಾಲಾನಲನುಮನನಲನಿಷ್ಟಾರ್ಥಸಿದ್ಧಿಯಕ್ಕು ಮೆಂದು ಪರಸಿ ಮನಪವನವೇಗದಿಂ ಪಾಲ್ಗಡಲನೆಯ್ದಿ ತನ್ನ ಬಯ್ತಿಟ್ಟ ದಿವ್ಯ ಸಂಭವಂಗಳಪ್ಪ ಶ್ವೇತಾಶ್ವಂಗಳೊಳ್ ಪೂಡಿದ ದಿವ್ಯ ರಥಮುಮಂ ದಚಿ ಗಂಡಸ್ಥಮಪ್ಪ ಗಾಂಡೀವಮೆಂಬ ಬಿಲ್ಲುಮಂ ದಿವ್ಯಶರಂಗಳೊಳ್ ತೆಕ್ಕನೆ ತೀವಿದ ತವದೊಣೆಗಳುಮಂ ತಂದೆನ್ನ ಪ್ರತಿಜ್ಞೆಯಂ ತೀರ್ಚುವೊಡಮಿಂದ್ರನಂ ಗೆಲ್ವೊಡಮಿವನಮೋಘಂ ಕೆಯ್ಕೊಳಲ್ವೇೞ್ಕುಮೆಂದೊಡತಿರಥಮಥನನಗ್ನಿದೇವಂಗೆ ಪೊಡವಟ್ಟು ಕೆಯ್ಕೊಂಡು ಬೃಹಂದಳನೆಂಬ ಸಾರಥಿವೆರಸು ರಥಮನೇಱಲೊಡಂ-

ಉ|| ಪಾವಕನೞ ಖಾಂಡವಮನುಂಡಪನರ್ಜುನನೂಡಿದಷ್ಟನೈ
ರಾವತವಾಹನಂ ನೆದು ಸಾಧನ ಸಂಯುತನಾಂಪನಲ್ಲಿ ನಾ|
ನಾ ವಿಧ ಯುದ್ಧಮುಂಟೆನುತೆ ಶೈಬ್ಯ ಬಳಾಹಕ ಮೇಘವರ್ಣ ಸು
ಗ್ರೀವ ಹಯಂಗಳಿಂದೆಸೆವುದಂ ರಥಮಂ ಹರಿ ತಾನುಮೇಱದಂ|| ೭೮

ವ|| ಅಂತು ದಾರುಕಂ ರಥಮಂ ಚೋದಿಸಲೊಡಂ-

ಕಂ|| ಚೋದಿಸುವುದುಮಿರ್ವರ ರಥ
ಚೋದಕರವರೆರಡು ರಥದ ಗಾಲಿಯ ಕೋಳಿಂ|
ದಾದ ರಜಪಟಲಂ ಕವಿ
ದಾದಮೆ ತೀವಿದುದು ದಿವಿಜವಧುವಿರ ಕಣ್ಣೊಳ್|| ೭೯

ವ|| ಅಂತೆಯ್ದಿ ಯಮುನಾನದಿಯ ತೆಂಕಣ ದೆಸೆಯೊಳ್ ನೂಱು ಯೋಜನದಗಲದೊಳಮನಿತೆ ನೀಳದೊಳಂ ನೆದು-

ಮ|| ಕಕುಭಾಶೋಕ ಕದಂಬ ಲುಂಗ ಲವಲೀ ಭೂಜಾರ್ಜುನಾನೋಕಹ
ಪ್ರಕರಂ ಪುಷ್ಟಿತ ಹೇಮಪಂಕಜ ರಜಸ್ಸಂಸಕ್ತ ಭೃಂಗಾಂಗನಾ|
ನಿಕರಂ ಸಾರಸ ಹಂಸ ಕೋಕಿಳ ಕುಳಧ್ವಾನೋತ್ಕರಂ ಚೆಲ್ವನಾ
ಯ್ತು ಕರಂ ಸಕ್ತನಿಳಿಂಪ ದಂಪತಿಗಳಿಂದಾ ನಂದನಂ ನಂದನಂ|| ೮೦

ವ|| ಎನೆ ಸೊಗಯಿಸುವ ಖಾಂಡವವನಮಂ ವನರುಹನಾಭಂ ವಿಕ್ರಮಾರ್ಜುನಂಗೆ ತೊೞಲ್ದು ತೋಱ-