ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|
ಭಾವಿಸಿದ ಪೆಂಡಿರೆನಿಸಿದ
ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧

ಎಂಬ ಬಗೆಯೊಳ್ ಸುಭದ್ರೆ ಪ
ಲುಂಬಿ ಮನಂಬಸದೆ ತನುವನಾಱಸಲಲರಿಂ|
ತುಂಬಿಗಳಿಂ ತಣ್ಣೆಲರಿಂ
ತುಂಬಿದ ತಿಳಿಗೊಳದಿನೆಸೆವ ಬನಮಂ ಪೊಕ್ಕಳ್|| ೨

ತಳತಳಿಸಿ ಪೊಳೆವ ಮಾವಿನ
ತಳಿರ್ಗಳಶೋಕೆಗಳ ಮಿಸುಪ ಲತೆಗಳ ನೆಲೆ ಬ|
ಳ್ವಳ ಬಳೆದ ಬೇಟದುರುಳಿಯ
ಬಳಗಮಿದೆಂದೆಳೆಯಳೆಳಸಿ ತಳವೆಳಗಾದಳ್|| ೩

ಕೊಳದ ತಡಿವಿಡಿದು ಬೆಳೆದೆಳ
ದಳಿರ್ಗಳಶೋಕೆಗಳ ಲತೆಯ ಮನೆಗಳೊಳೆ ತೆಱಂ|
ಬೊಳೆವಲರ ಬಸದೆ ಸುೞವಳಿ
ಗಳ ಬಳಗದ ದನಿಗೆ ಕಿನಿಸಿ ಕಿಂಕಿಱವೋದಳ್|| ೪

ಸುರಯಿಯ ಬಿರಿಮುಗುಳ್ಗಳ ಪೊರೆ
ವೊರೆಯೊಳ್ ಪೊವೊರಕನಲ್ಲದಲ್ಲುಗುವ ರಜಂ|
ಬೊರೆದು ಪರಕಲಿಸಿದಳಿಕುಳ
ಪರಿಕರಮುಮನತನುಶಿಖಿಯ ಕಿಡಿಗಳೆ ಗೆತ್ತಳ್|| ೫

ವ|| ಅಂತು ನನೆಯ ಕೊನೆಯ ತಳಿರ ನಿಱದಳಿರ ಮುಗುಳ ಬಿರಿಮುಗುಳ ಮಿಡಿಯ ಕಿಱುಮಿಡಿಯ ಬಲ್ಮಿಡಿಗಳೊಳೆಱಗಿ ತುಱುಗಿದ ಬನಮಂ ಪೊಕ್ಕಲ್ಲಿಯುಂ ಮೆಯ್ಯನಾಱಸಲಾಱದೆ ಪೂತ ಚೂತಲತೆಗಳೊಳ್ ತಳ್ಪೊಯ್ದ ಪೊಸ ಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿ ಮುಗುಳ್ಗಳೊಳ್ ತುಱುಗಿದದಿರ್ಮುತ್ತೆಯ ಸುತ್ತಿನೊಳೆಸೆದುಪಾಶ್ರಯಂಬಡೆದ ಸಾಂದ್ರ ಚಂದ್ರಕಾಂತದ ಶಿಲೆಯನೊಳಗುಮಾಡಿ-

೧. ಲಕ್ಷ್ಮಿ, ಜಯಲಕ್ಷ್ಮಿ, ಕೀರ್ತಿಲಕ್ಷ್ಮಿ, ವಾಕ್‌ಲಕ್ಷ್ಮಿ ಎಂಬ ಸ್ತ್ರೀಯರು ತನ್ನನ್ನು ಯಾವಾಗಲೂ ಧ್ಯಾನಿಸುತ್ತಿರುವ ಸ್ತ್ರೀಯರು ಎಂಬ ಸೌಭಾಗ್ಯವನ್ನುಳ್ಳ ಅರ್ಜುನನು ನನ್ನನ್ನು ಪ್ರೀತಿಸುತ್ತಾನೆಯೋ ಇಲ್ಲವೋ? ೨. ಎಂಬ ಮನಸ್ಸಿನಿಂದ ಕೂಡಿದ ಸುಭದ್ರೆಯು ಹಲುಬಿ ಮನಸ್ಸನ್ನು ಎರಡು ಭಾಗ ಮಾಡದೆ (ಏಕಮನಸ್ಕಳಾಗಿ) ಶರೀರದ (ವಿರಹದ) ಸಂತಾಪವನ್ನು ಆರಿಸಿಕೊಳ್ಳಲು ಹೂವಿನಿಂದಲೂ ದುಂಬಿಗಳಿಂದಲೂ ತಂಗಾಳಿಯಿಂದಲೂ ತುಂಬಿದ ತಿಳಿನೀರಿನ ಕೊಳಗಳಿಂದಲೂ ಸೊಗಯಿಸುವ ವನವನ್ನು ಪ್ರವೇಶಿಸಿದಳು. ೩. ತಳತಳ ಎಂದು ಹೊಳೆಯುವ ಮಾವಿನ ಚಿಗುರುಗಳ, ಅಶೋಕ ವೃಕ್ಷಗಳ, ಹೊಳೆಯುವ ಬೆಳ್ಳಿ ಮೋಡಗಳ ಈ ಪ್ರದೇಶವು ಅತ್ಯತಿಶಯವಾಗಿ ಬೆಳೆಯುವ ಪ್ರೇಮದುಂಡೆಗಳ ಸಮೂಹವೆಂದು ಬಾಲೆಯಾದ ಸುಭದ್ರೆಯು ತಳವೆಳಗಾದಳು. ೪. ಸರೋವರದ ದಡವನ್ನೇ ಅನುಸರಿಸಿ ಬೆಳೆದ ಎಳೆಯ ಚಿಗುರನ್ನುಳ್ಳ ಅಶೋಕ ಮರಗಳ ಲತಾಗೃಹಗಳಲ್ಲಿಯೇ ವಿಧವಿಧವಾಗಿ ಹೊಳೆಯುವ ಹೂವುಗಳಿಗೆ ಮುತ್ತಿ ಸುತ್ತಾಡುವ ದುಂಬಿಗಳ ಧ್ವನಿಗೆ ಕೋಪಿಸಿ ಕಿರಿಕಿರಿಯಾದಳು. ೫. ಸುರಗಿಯ ಹೂವಿನ ಅರಳಿದ ಮೊಗ್ಗುಗಳ ಒತ್ತಾದ ಪದರಗಳಲ್ಲಿ ಲಘುವಾಗಿ ಹೊರಳಾಡಿ ಅಲ್ಲಿ ಸುರಿಯುವ ಪರಾಗದಿಂದ ಲೇಪಿಸಲ್ಪಟ್ಟು ಹಾರಾಡುತ್ತಿರುವ ದುಂಬಿಯ ಸಮೂಹದ ಪರಿವಾರವನ್ನು ಕೂಡ ಮದನಾಗ್ನಿಯ ಕಿಡಿಗಳೆಂದೇ (ಸುಭದ್ರೆಯು) ಭಾವಿಸಿದಳು. ವ|| ಹಾಗೆ ಹೂವಿನ, ರೆಂಬೆಗಳ, ಚಿಗುರಿನ, ನಿರಿಯಾಗಿರುವ ಚಿಗುರುಗಳ, ಭಾರದಿಂದ ಬಗ್ಗಿ ಕಿಕ್ಕಿರಿದ ವನವನ್ನು ಪ್ರವೇಶಿಸಿ ಅಲ್ಲಿಯೂ ಶರೀರತಾಪವನ್ನು ಆರಿಸಲಾರದೆ ಹೂವನ್ನು ಬಿಟ್ಟಿರುವ ಮಾವಿನ ಬಳ್ಳಿಗಳಿಗೆ ತಗುಲಿಸಿದ ಹೊಸ ಮುತ್ತಿನ ಹೊದಿಕೆಯಲ್ಲಿ ಬಿರಿದ ಮೊಗ್ಗುಗಳಲ್ಲಿ ಸೇರಿಕೊಂಡಿರುವ ಅದಿರ್ಮುತ್ತೆಯ ಹೂವಿನ ಬಳಸಿನಲ್ಲಿ ಪೂರ್ಣವಾದ ಆಶ್ರಯವನ್ನು ಪಡೆದ ಒತ್ತಾಗಿರುವ ಚಂದ್ರಕಾಂತ ಶಿಲೆಯಿಂದ ಕೂಡಿದ ಒಂದು ಮಾಧವೀ

ಮ|| ಇದಿರೊಳ್ ಕಟ್ಟಿದ ತೋರಣಂ ನಿಱದಳಿರ್ ಪೂಗೊಂಚಲಂದೆತ್ತಮೆ
ತ್ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ಯನ್ಮಧೂ|
ನ್ಮದ ಭೃಂಗಧ್ವನಿ ಮಂಗಳಧ್ವನಿಯೆನಲ್ ಸಾಲ್ವನ್ನೆಗಂ ತಾನೆ ತ
ಕ್ಕುದು ಕಾಮಂಗೆ ವಿವಾಹಮಂಟಪಮೆನಲ್ಕಾ ಮಾದವೀಮಂಟಪಂ|| ೬

ವ|| ಆ ಮಾಧವೀ ಲತಾಮಂಟಪಮಂ ಕಾಮನ ಡಾಮರಕ್ಕಳ್ಕಿ ವನದುರ್ಗಂಬುಗುವಂತೆ ಪೊಕ್ಕದಳಗೆ ಕಪ್ಪುರವಳುಕಿನ ಜಗಲಿಯನಗಲಿತಾಗಿ ಸಮೆದು ಚಂದನದೆಳದಳಿರ್ಗಳಂ ಪಾಸಿ ಮಲ್ಲಿಗೆಯಲರ್ಗಳಂ ಪೂವಾಸಿ ಮೃಣಾಳನಾಳದೊಳ್ ಸಮೆದ ಸರಿಗೆಗಂಕಣಂಗಳುಮಂ ಯವ ಕಳಿಕೆಗಳೊಳ್ ಸಮೆದ ಕಟಿಸೂತ್ರಮುಮಂ ಸಾರ ಕರ್ಪೂರದೊಳ್ ವಿರಚಿಸಿದ ಹಾರಮುಮಂ ಕರಿಯ ನೆಯ್ದಿಲ ಕಾವಿನೊಳ್ ಭಾವಿಸಿದ ನೂಪುರಮುಮನದಱ ಬಿರಿಮುಗುಳ್ಗಳೊಳ್ ಚಿತ್ರಿಸಿದ ಕರ್ಣಪೂರಮುಮಂ ಬಿಳಿಯ ತಾವರೆಯೆಳಗಾವಿನಸಿಯ ನೂಲೊಳ್ ಕೋದ ತೋರ ಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ ಕಪ್ಪುರವಳುಕಿನ ಲಂಗಣಮುಮಂ ತೊಟ್ಟು ಕುಳಿರ್ಕೋೞ್ಪ ಚಂದನರಸಮನೆರ್ದೆಯೊಳಂ ಮೆಯ್ಯೊಳಂ ತಳ್ಕಿಱದು ಕರಿಯ ಕರ್ಬಿನ ಕಾವಿನೆಳ ಮೈಂದವಾೞೆಯೆಲೆಯೆ ಬಿಜ್ಜಣಿಗೆಗಳಿಂ ಬೀಸಲ್ವೇೞ್ದು ತಣ್ಬುಗೆಯ್ಯೆ ಮನದ ಮೆಯ್ಯ ಸಂತಾಪದೊಳ್ ಬಿಸುಸುಯ್ದು ಬಿಸುಪಿನೊಳನಿತುಮಂ ಗೆಲ್ದು-

ಉ|| ಕೆಂದಳಿರ್ವಾಸು ಸೇಕದ ತೊವಲ್ಗೆಣೆಯಾಯ್ತು ಮೃಣಾಳ ನಾಳವೊಂ
ದೊಂದಡೆವೊತ್ತಿ ಪತ್ತಿದುವು ಸೂಸುವ ಶೀತಳವಾರಿ ಮೈಯ್ಯನೆ|
ಯ್ತಂದಿರದೆತ್ತ ಬತ್ತಿದುವು ತಚ್ಛಶಿಕಾಂತಶಿಳಾತಳಂ ಸಿಡಿ
ಲ್ದಂದೊಡೆದತ್ತಿದೇಂ ಬಿಸಿದೊ ಬೇಟದ ಬೆಂಕೆ ಮೃಗಾಂಕವಕ್ತ್ರೆಯಾ|| ೭

ಚಂ|| ಅರಿಗನ ಬೇಟದೊಂದೆ ಪೊಸಬೇಟದ ಕೇಸುರಿಯಿಂದಮೆಯ್ದೆ ದ
ಳ್ಳುರಿ ನೆಗೆದಂದು ಕೆಂದಳಿರ ಪಾಸುಗಳಿಂ ಕುಳಿರ್ವಾಲಿನೀರ್ಗಳಿಂ|
ತುರಿಪದೆ ಸೂಸುತುಂ ಕೆಳದಿಯರ್ ನದಿಪುತ್ತಿರೆ ನೋಡೆ ದಾಹಮೋ
ತ್ತರಿಸಿದುದೊಂದು ಪೊನ್ನ ಸಲಗಿರ್ಪವೊಲಿರ್ದುದು ಮೆಯ್ ಸುಭದ್ರೆಯಾ|| ೮

ಮದನ ದವಾನಲಾರ್ಚಿ ತನುವಂ ಸುಡೆ ತಳ್ತೆಮೆಯೊಳ್ ಪಳಂಚಿ ಬೀ
ಗಿದ ಬೆಳರ್ವಾಯೊಳುಚ್ಚಳಿಸಿ ತುಂಗ ಕುಚಂಗಳ ಪೊಯ್ಲೆಳೆತ್ತಲುಂ|
ಕೆದಱ ವಳಿತ್ರಯಂಗಳ ತೊಡರ್ಪುಗಳೊಳ್ ತೊಡರ್ದೊಯ್ಯನೊಯ್ಯನೆ
ಯ್ದಿದುವು ವಿಲೋಲನೇತ್ರ ಜಲಬಿಂದುಗಳಾಕೆಯ ನಿಮ್ನನಾಭಿಯಂ|| ೯

ಮಂಟಪವನ್ನು ಕಂಡಳು ೬. ಇದಿರಿನಲ್ಲಿ ಕಟ್ಟಿದ ತೋರಣದಂತೆ ಚಿಗುರು ಕಾಣುತ್ತಿರಲು ಹೂಗೊಂಚಲು, ಎಲ್ಲೆಲ್ಲಿಯೂ ಎತ್ತಿ ಕಟ್ಟಿದ ಹೂವಿನ ಮಾಲೆಯಂತಿರಲು ಹೂವಿನ ಪರಾಗದ ಕೆಂಪು ರಮ್ಯವಾಗಿರುವ ದಿಕ್ಕಿನ ಕಾಂತಿ, ಹಾಗಿರಲು ಮಧುಮತ್ತವಾದ ದುಂಬಿಗಳ ಧ್ವನಿಯೇ ಮಂಗಳವಾದ್ಯ ಎನ್ನುವಂತೆ ಆ ಮಾಧವೀ ಮಂಟಪವು ಇದೇ ಮದನನ ವಿವಾಹ ಮಂಟಪವಾಗುವುದಕ್ಕೆ ಯೋಗ್ಯವಾದುದು ಎನ್ನುವಂತೆ ಪ್ರಕಾಶಮಾನವಾಗಿದ್ದಿತು. ವ|| ಕಾಮನ ಕೋಟಲೆಗೆ ಹೆದರಿ ಕಾಡಿನ ಕೋಟೆಯನ್ನು ಪ್ರವೇಶಿಸುವ ಹಾಗೆ ಆ ಮಾಧವೀ ಲತಾ ಮಂಟಪವನ್ನು ಪ್ರವೇಶಿಸಿ ಅದರಲ್ಲಿ ಕರ್ಪೂರದ ಹಳುಕಿನ ಜಗುಲಿಯನ್ನು ವಿಸ್ತಾರವಾಗಿ ನಿರ್ಮಿಸಿದಳು. ಶ್ರೀಗಂಧದ ಎಳೆಯ ಚಿಗುರುಗಳನ್ನು ಹಾಸಿದಳು. ಮಲ್ಲಿಗೆಯ ಹೂವುಗಳನ್ನು ಹರಡಿದಳು. ತಾವರೆಯ ದಂಟಿನಿಂದ ಮಾಡಿದ ತಂತಿಬಳೆಗಳನ್ನೂ ಗೋದುವೆಯ ಮೊಳಕೆಗಳಿಂದ ಮಾಡಿದ ಉಡಿದಾರವನ್ನೂ ಕರ್ಪೂರದ ತಿರುಳಿನಿಂದ ರಚಿಸಿದ ಹಾರವನ್ನೂ ಕನ್ನೆ ದಿಲೆಯ ಕಾವಿನಲ್ಲಿ ಮೇಳಿಸಿದ ಕಾಲಂದಿಗೆಯನ್ನೂ ಧರಿಸಿದಳು. ಅದರ ಬಿರಿದ (ಅರಳಿದ) ಮೊಗ್ಗುಗಳಲ್ಲಿ ಚಿತ್ರಿಸಿದ ಕಿವಿಯ ಅಲಂಕಾರವನ್ನು ಬಿಳಿಯ ತಾವರೆಯ ಎಳೆಯ ದಂಟಿನ ನೂಲಿನಲ್ಲಿ ಪೋಣಿಸಿದ ದಪ್ಪ ಮಲ್ಲಿಗೆಯ ಬಿರಿ ಮುಗುಳಿನ ಅಡ್ಡಿಕೆಯನ್ನೂ ಕರ್ಪೂರದ ಹಳುಕಿನ ಹಾರವನ್ನೂ ತೊಟ್ಟಳು. ವಿಶೇಷ ತಂಪಾಗಿರುವ ಶ್ರೀಗಂಧದ ರಸವನ್ನು ಶರೀರದಲ್ಲೆಲ್ಲ ಲೇಪಿಸಿಕೊಂಡಳು. ಕರಿಯ ಕಬ್ಬಿನ ಕಾವಿನ ಎಳೆಯದಾದ ಮಹೇಂದ್ರ ಬಾಳೆಯ ಎಲೆಯ ಬೀಸಣಿಗೆಗಳಿಂದ ಬೀಸಹೇಳಿ ತಂಪನ್ನುಂಟುಮಾಡಲು ಮನಸ್ಸಿನ ಮತ್ತು ಶರೀರದ ಸಂತಾಪದಿಂದ ನಿಟ್ಟುಸಿರನ್ನು ಬಿಟ್ಟಳು. ಆ ಶಾಖದಲ್ಲಿ ಅಷ್ಟು ಶೈತ್ಯೋಪಕರಣಗಳನ್ನು ಮೀರಿಸಿ ೭. ಆ ಕೆಂಪು ಚಿಗುರಿನಿಂದ ಮಾಡಿದ ಹಾಸಿಗೆಯು ಬಿಸಿ ನೀರು ಚಿಮುಕಿಸಿದ ಚಿಗುರಿಗೆ ಸಮಾನವಾಯಿತು. ತಾವರೆಯ ದಂಟೊಂದೊಂದು ತಳಹತ್ತಿಕೊಂಡು ಮೈಗೆ ಅಂಟಿಕೊಂಡವು. ಮೇಲೆ ಚೆಲ್ಲಿದ ತಣ್ಣಗಿರುವ ನೀರು ನಿಧಾನವಾಗಿ ಹರಿದು ಎಲ್ಲಿಯೋ ಬತ್ತಿಹೋಯಿತು. ಆ ಚಂದ್ರಕಾಂತ ಶಿಲಾತಳವು ಸಿಡಿದು ಒಡೆದುಹೋಯಿತು. ಆ ಚಂದ್ರವದನೆಯಾದ ಸುಭದ್ರೆಯ ವಿರಹಾಗ್ನಿಯಿದು ಎಷ್ಟು ಬಿಸಿಯಾದುದೋ? ೮. ಅರ್ಜುನನ ಮೇಲಿನ ಪ್ರೇಮದ ಒಂದು ಹೊಸ ಅನುಭವದ ಒಂದು ಕೆಂಪುಜ್ವಾಲೆಯು ಚಿಮ್ಮಿದಾಗ ಅವಳ ಸಖಿಯರು ಕೆಂಪು ಚಿಗುರಿನ ಹಾಸಿಗೆಯಿಂದಲೂ ತಂಪಾಗಿರುವ ಮಂಜಿನ ನೀರಿನಿಂದಲೂ ಆರಿಸಲು ಪ್ರಯತ್ನಿಸಿದರೂ ಎಲ್ಲರೂ ನೋಡುತ್ತಿರುವ ಹಾಗೆಯೇ ಆ ಉರಿಯು ಮತ್ತೂ ಅಭಿವೃದ್ಧಿಯಾಯಿತು. ಸುಭದ್ರೆಯ ಶರೀರವು ಕಾಸಿದ ಚಿನ್ನದ (ಅಪರಂಜಿಯ) ಸಲಾಕೆಯ ಹಾಗಿದ್ದಿತು. ೯. ಕಾಮವೆಂಬ ಕಾಡುಗಿಚ್ಚಿನ

ನಗೆಮೊಗಮಂ ಪೊದಳ್ದಲರ್ದ ತಾವರೆಯೆಂಬ ವಿಮೋಹದಿಂ ಮೊಗಂ
ಬುಗಲೊಡಮಾ ತಳೋದರಿಯ ಸುಯ್ಗಳ ಬೆಂಕೆಯೊಳಿಚ್ಚೆಗೆಟ್ಟು ತೊ|
ಟ್ಟಗೆ ಕೊಳೆ ಮುಂದೆ ಬಿೞ್ದು ಮಗುೞು ಸತಿಯಿಕ್ಕಿದ ಕಣ್ಣ ನೀರ ಧಾ
ರೆಗಳೊಳೆ ನಾಂದೆಲರ್ಚಿ ಪೊದಳ್ದೊರ್ಮೆಯೆ ಪಾಱದುವುನ್ಮದಾಳಿಗಳ್|| ೧೦

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುರ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ ಮಧುಮಥನನ ಕಣ್ಣಂ ಬಂಚಿಸಿ ವಿಜೃಂಭಮಾಣ ನವ ನಳಿನ ಪರಿಕಾರ ಕೃಷ್ಣ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ ವಿರಹಿತ ಜನನಿಚಯ ನಿಚಿತ ಮಾನಸೋನ್ಮತ್ತ ಕಾಮಿನೀ ಗಂಡೂಪ ಸಿಂಧು ಸೇಕ ಪುಳಕಿತ ವಕುಳ ಮುಕುಳ ವಿದಳಿತ ಮನೋಹರಾಶೋಕಲತಾ ರಮಣೀ ರಮಣೀಯ ನೂಪುರರವ ರಮ್ಯಮನವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನುತುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲೋಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನೆಯ್ದೆವಂದು-

ಚಂ|| ಬಿರಿದಲರೊಳ್ ತೆಱಂಬೊಳೆವ ತುಂಬಿ ತಳಿರ್ತೆಳಮಾವು ಮಾವಿನಂ
ಕುರಮನೆ ಕರ್ಚಿ ಬಿಚ್ಚೞಪ ಕೋಗಿಲೆ ಕಂಪನವುಂಕಿ ಪೊತ್ತು ನಿ|
ತ್ತರಿಪೆರಲೆಂಬಿವೇವುವೊ ಮದೀಯ ಮನೋಗತ ಕಾಮ ರಾಗ ಸಾ
ಗರದೊದವಿಂಗೆ ನಲ್ಲಳ ವಿಲೋಕನಚಂದ್ರಿಕೆಯೊಂದೆ ಸಾಲದೇ|| ೧೧

ವ|| ಎನುತ್ತುಂ ಬಂದು ಬಿರಿದ ಬಿರಿಮುಗುಳ್ಗಳೊಳೆಱಗಿ ತುಱುಗಿದಶೋಕಲತೆಯನ್ನೞ್ಕರ್ತು ನೋಡಿ-

ಚಂ|| ಅಲರಲರ್ಗಣ್ ಮುಗುಳ್‌ನಗೆ ಮಡಲ್ ತೊಡೆ ತುಂಬಿ ಕುರುಳ್ ತಳಿರ್ ತಳಂ
ಗೊಲೆ ಮೊಲೆ ಕೆಂಪು ಕೆಂಪು ಕೊನೆ ಸೆಳ್ಳುಗುರ್ಗಳ್ ಕುಡಿ ತೋಳ್ ನಯಂ ನಯಂ|
ನೆಲೆ ನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪೆಱತಲ್ಲಿದೆಂತೊ ಕೋ
ಮಲಲತೆ ಪೇೞಮೆನ್ನಿನಿಯಳಂ ಮಗೊಂಡುದೊ ಸೂಗೊಂಡುದೋ|| ೧೨

ಜ್ವಾಲೆಯು ಶರೀರವನ್ನು ವ್ಯಾಪಿಸಲು ಸುಭದ್ರೆಯ ಚಂಚಲವಾದ ಕಣ್ಣೀರಿನ ಹನಿಗಳು ಮುಚ್ಚಿರುವ ರೆಪ್ಪೆಯನ್ನು ತಗುಲಿ ಬಿಳಿಚಿಕೊಂಡಿರುವ ತುಟಿಯಲ್ಲಿ ಚಿಮ್ಮಿ ನೆಗೆದು ಎತ್ತರವಾದ ಸ್ತನಗಳ ಬಡಿತದಿಂದ ಎಲ್ಲ ಕಡೆಯೂ ಚೆದುರಿ ತ್ರಿವಳಿಗಳ ತೊಡಕುಗಳಲ್ಲಿ ಸೇರಿಕೊಂಡು ನಿಧಾನವಾಗಿ ಆಕೆಯ ಆಳವಾದ ಹೊಕ್ಕುಳನ್ನು ಸೇರಿದುವು. ೧೦. ಸೊಕ್ಕಿದ ದುಂಬಿಗಳು ಸುಭದ್ರೆಯ ಮುಖವನ್ನು ಚೆನ್ನಾಗಿ ಅರಳಿದ ತಾವರೆಯೆಂಬ ಭ್ರಾಂತಿಯಿಂದ ಪ್ರವೇಶಿಸಲು ಆ ತಳೋದರಿಯಾದ ಸುಭದ್ರೆಯ ಉಸಿರಿನ ಬೆಂಕಿಯಲ್ಲಿ ಆಶಾಭಂಗವಾಗಿ ಕಾವು ಹತ್ತಲು ಮುಂದೆ ಬಿದ್ದು ಪುನ ಆ ಸತಿಯು ಸುರಿದ ಕಣ್ಣೀರಿನ ಧಾರೆಗಳಲ್ಲಿ ನೆನೆದು ಚೇತರಿಸಿಕೊಂಡು ಇದ್ದಕ್ಕಿದ್ದ ಹಾಗೆಯೇ ಹಾರಿದುವು. ವ|| ಹಾಗೆ ಬಾಲೆಯು ಕಾದ ಧೂಳಿನಲ್ಲಿ ಬಿಸುಟ ಎಳೆಯ ಬಾಳೆಯ ಹಾಗೆ ಸುರತಮಕರಧ್ವಜನಾದ ಅರ್ಜುನನಲ್ಲಿ ಉಂಟಾದ ವಿರಹದಿಂದ ಮಮ್ಮಲಮರುಗುತ್ತಿದ್ದಳು. ಆ ಕಡೆ ಮನುಜ ಮನೋಜನಾದ ಅರ್ಜುನನೂ ಕೂಡ ಮದನತಾಪವನ್ನು ಸಹಿಸಲಾರದೆ ದುಖಿಸಿ ಕೃಷ್ಣನ ಕಣ್ಣನ್ನು ತಪ್ಪಿಸಿಕೊಂಡು ವಿಜೃಂಭಿಸುತ್ತಿರುವ ಹೊಸತಾವರೆಯ ಸಮೂಹದಿಂದ ಆಕರ್ಷಿಸಲ್ಪಟ್ಟ ದುಂಬಿಗಳಿಂದ ರಮ್ಯವಾದುದೂ ಮರಳಿನ ಸಮೀಪ ಸ್ಥಳದಲ್ಲಿ ಇಡಲ್ಪಟ್ಟು ವಿರಹಿಜನಗಳ ಸಮೂಹದಲ್ಲಿ ಸೇರಿಕೊಂಡಿರುವ ಮನಸ್ಸುಳ್ಳ ಸ್ತ್ರೀಯರು ಮುಕ್ಕುಳಿಸಿದ ಮದ್ಯದಿಂದ ರೋಮಾಂಚಗೊಂಡ ಬಕುಳದ ಮೊಗ್ಗನ್ನುಳ್ಳುದೂ ಅರಳಿದ ಹೂವುಗಳಿಂದ ಕೂಡಿದ ಅಶೋಕವೃಕ್ಷಗಳನ್ನುಳ್ಳದೂ ರಮಣಿಯರ ರಮಣೀಯವಾದ ಕಾಲಂದಿಗೆಯ ಶಬ್ದದಿಂದ ರಮ್ಯವೂ ದಟ್ಟವೂ ಹೂವಿನ ಪರಾಗಗಳಿಂದ ಮಾಸಲಾದ ಮರಳಿನಿಂದ ಬಿಳುಪಾಗಿ ಮಾಡಲ್ಪಟ್ಟ ಭೂಭಾಗವನ್ನುಳ್ಳುದೂ ಅರಳಿರುವ ಚಿಗುರುಗಳ ಲೀಲೆಗೊಳಗಾದ ಮದಿಸಿರುವ ಕೋಗಿಲೆಗಳಿಗೆ ಉಲ್ಲಾಸವನ್ನುಂಟುಮಾಡುವುದೂ ತುಂತುರುಮಳೆಯಿಂದ ದೀರ್ಘವಾದ ಮೋಡ ಕವಿದ ದಿನದಂತಿರುವುದೂ ಆದ ವನವನ್ನು ಅರ್ಜುನನು ಸಮೀಪಿಸಿದನು. ೧೧. ಅರಳಿದ ಪುಷ್ಪದಲ್ಲಿ ವಿಧವಿಧವಾಗಿ ಹೊಳೆಯುವ ದುಂಬಿಯೂ ಚಿಗುರಿದ ಎಳೆಮಾವೂ ಮಾವಿನ ಮೊಳಕೆಯನ್ನೇ ಕಚ್ಚಿ ಉತ್ಸಾಹಗೊಳ್ಳುವ ಕೋಗಿಲೆಯೂ ವಾಸನೆಯನ್ನು ತನ್ನಲ್ಲಿ ಅಡಕಿಕೊಂಡು ಹೊತ್ತು ದಾಟಿ ಬರುವ ಗಾಳಿಯೂ (ವಿರಹ ಪರಿಹಾರಕ್ಕೆ) ಏನುಮಾಡಬಲ್ಲವು. ನನ್ನ ಮನಸ್ಸಿನಲ್ಲಿ ಸೇರಿರುವ ಮನ್ಮಥಪ್ರೇಮಸಾಗರದ ಅಭಿವೃದ್ಧಿಗೆ ಸುಭದ್ರೆಯ ನೋಟವೆಂಬ ಬೆಳದಿಂಗಳಿನ ಸಹಾಯವೊಂದೆ ಸಾಲದೆ ವ|| ಎನ್ನುತ್ತ ಬಂದು ಅರಳಿದ ಬಿರಿಮುಗುಳಿನಿಂದ ಬಾಗಿ ಕಿಕ್ಕಿರಿದಿದ್ದ ಅಶೋಕದ ಬಳ್ಳಿಯನ್ನು ಪ್ರೀತಿಸಿ ನೋಡಿ ೧೨. ಈ ಬಳ್ಳಿಯ ಹೂವು ಅವಳ ಹೂವಿನಂತಿರುವ ಕಣ್ಣು, ಇದರ ಮೊಗ್ಗು ಅವಳ ನಗೆ, ಇದರ ಬಳ್ಳಿ ಅವಳ ತೊಡೆಗಳು, ಇಲ್ಲಿಯ ದುಂಬಿ ಅವಳ ಮುಂಗುರುಳುಗಳು, ಇಲ್ಲಿಯ ಚಿಗುರು ಅವಳ ಅಂಗೈ, ಗೊಂಚಲು ಸ್ತನಗಳು, ಈ ಬಳ್ಳಿಯ ಕೆಂಪು ಬಣ್ಣ

ವ|| ಎಂದು ಕಿಱದಾನುಂ ಬೇಗಮಱ ಮರುಳಾದಂತಾ ಲತೆಯೊಳ್ ಪೞಗಾಳೆಗಂಗಾದಿ ಬರೆವರೆ ಕಾಮದೇವನಿಮ್ಮಾವಿನ ನನೆಯನಂಬುಗಳುಮನವಱ ಬಲ್ಮಿಡಿಯನೆ ಮಿಟ್ಟೆಯುಮಂ ಮಾಡಿ ತನ್ನನೇಸಾಡಿ ಕಾಡೆ-

ಚಂ|| ಅಸಿಯಳನೊಲ್ಗು ಮೊಲ್ಲನಣಮೆನ್ನದೆ ರೂಪನೆ ನೋಡಿ ಕೂಡಲಾ
ಟಿಸಿ ಪರಿದೆಯ್ದಿ ಪತ್ತಿದಲರ್ಗಣ್ಗಳನೇನುಮನೆನ್ನದಂತುಪೇ|
ಕ್ಷಿಸಿ ಮನಮೆಲ್ಲಮಂ ಕವರ್ದಪಂ ತನುವಂ ಬಡಮಾಡಿ ಕಾಡಿ ದಂ
ಡಿಸಿದಪನಂಗಜನ್ಮನ ಕವರ್ತೆಯ ದಂಡದ ಪಾಂಗಿದೆಂತುಟೋ|| ೧೩

ವ|| ಎಂದು ನಂದನವನೋಪಕಂಠಂಗಳೊಳನಂಗಶರವಶನಾಗಿ ತೊೞಲ್ದು ನೋಡುತ್ತುಂ ತನ್ನ ಮನದೊಳಿಂತೆಂದು ಬಗೆಗುಂ-

ಚಂ|| ಉರಿವೆರ್ದೆಯಾ ಚಿಂತಿಪ ಮನಂ ಗುಡಿಗಟ್ಟೆ ಮರಲ್ದು ನೋಡುವ
ಚ್ಚರಿಯೊಳೆ ಬೆಚ್ಚ ಕಣ್ಮಲರ್ಗೆ ಸಂತಸದಾಗರಮಾಗೆ ಬೇಟದೊಳ್|
ಬಿರಿವೊಡಲೊಯ್ಯನಂಕುರಿಸೆ ಸೈಪಿನೊಳಿಂತೆನಗೀಗಳೀ ವನಾಂ
ತರದೊಳೆ ಕಾಣಲಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ|| ೧೪

ವ|| ಎಂದು ಬಗೆಯುತ್ತುಮಾಕೆಯಿರ್ದ ಮಾಧವೀಮಂಟಪಕ್ಕೆ ಮೊಗಸಿ ಪಲರ ಪಲವುಂ ತೆಱದ ಬೇಟದ ಪಡೆಮಾತುಗಳಂ ಕೇಳ್ದಲ್ಲಿಯಾರಾನುಮೆಮ್ಮಂದಿಗರಿರ್ದರಕ್ಕುಮೆನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರೆ ಭೋಂಕನೆ ಕಂಡು-

ಚಂ|| ಪಡಿದೆವಂದದಿಂದಮೆರ್ದೆಯುಂ ತೆದತ್ತು ಪೊದಳ್ದ ಸಂಕೆಯಿಂ
ನಡುಕಮುಮಾಗಳುಬ್ದದಿಗಮಾದುದು ಸಾಧ್ವಸದಿಂ ಬೆಮರ್ ಬೆಮ|
ರ್ವೆಡೆಗಳಿನುಣ್ಮಿ ಪೊಣ್ಮಿದುದು ಕಣ್ ನಡೆ ನೋಡದೆ ತಪ್ಪು ನೋಡಿ ನಾ
ಣೆಡೆಯೊಳಮಾದುದಾ ಸತಿಗೆ ನೋಡಲೊಡಂ ಪಡೆಮೆಚ್ಚೆಗಂಡನಂ|| ೧೫

ವ|| ಆಗಳ್ ಸುರತಮಕರಧ್ವಜನುಮನಂಗಾಮೃತ ಪಯೋಯೊಳ್ ಮೂಡಿ ಮುೞುಗಾಡಿದರಂತೆ ಕಿಱದು ಬೇಗಮನಿರ್ತು ತನ್ನಿಂತ ತಾನೆ ಚೇತರಿಸಿ ಸುಭದ್ರೆಯ ರೂಪನಾಪಾದಮಸ್ತಕಂಬರಮೆಯ್ದೆ ನೋಡಿ ತನ್ನೊಳಾದ ಬೇಟದೊಳ್ ಬಡವಟ್ಟುಮೇೞ್ಗೆವಾಡಿವದ ಸಸಿಯಂತೆ ಸೊಗೆಯಿಸುವಸಿಯಳಂ ಕಂಡು-

ಅವಳ ಕೆಂಪು ಬಣ್ಣ, ಅವಳ ತೆಳುವಾದ ಉಗುರುಗಳು ಇದರ ಎಳೆಯದಾದ ಕೊನೆಗಳು, ಕುಡಿಗಳು ಅವಳ ತೋಳುಗಳು; ಬಳ್ಳಿಯ ನಯ ಸುಭದ್ರೆಯ ನಯ, ಇದರ ರೀತಿ, ಅವಳ ರೀತಿ, ಇಲ್ಲಿಯ ಹದವಾದ ಹಣ್ಣುಗಳು ಹೊಳೆಯುವ ತುಟಿಗಳು ಬೇರೆಯಿಲ್ಲ, ಈ ಬಳ್ಳಿಯು ನನ್ನ ಪ್ರಿಯೆಯನ್ನು ಮರೆಯಾಗಿಟ್ಟುಕೊಂಡಿದೆಯೋ ಇಲ್ಲವೇ ಅವಳ ಸರ್ವಸ್ವವನ್ನೂ ಸೂರೆಗೊಂಡಿದೆಯೋ? (ಬಳ್ಳಿಗೆ ಸ್ವತ ಇಷ್ಟೆಲ್ಲ ಸೌಂದರ್ಯವೆಲ್ಲಿ ಬರಬೇಕು?) ವ|| ಎಂದು ಸ್ವಲ್ಪಕಾಲ ಜ್ಞಾನಶೂನ್ಯನಾದ ಹುಚ್ಚನಂತೆ ಆ ಬಳ್ಳಿಯೊಡನೆ ಹುಚ್ಚುಮಾತನಾಡಿ ಬರುತ್ತಿರಲು ಕಾಮದೇವನು ಸಿಹಿಮಾವಿನ ಹೂವುಗಳನ್ನು ಬಾಣಗಳನ್ನಾಗಿಯೂ ಅದರ ಬಲಿತ ಹೀಚುಗಳನ್ನು ಮಣ್ಣಿನುಂಡೆಯನ್ನಾಗಿಯೂ ಮಾಡಿ ಅವನನ್ನು ಹೊಡೆದು ಕಾಡಿದನು. ೧೩. ಕೃಶಾಂಗಿಯಾದ ಸುಭದ್ರೆಯನ್ನು ಇವನು ಪ್ರೀತಿಸುತ್ತಾನೆಯೇ ಇಲ್ಲವೇ ಎಂಬುದೇನನ್ನೂ ಸ್ವಲ್ಪವೂ ಯೋಚಿಸದೇ ರೂಪವನ್ನೇ ನೋಡಿ ಸೇರಿಸಲು ಆಶೆಪಟ್ಟು ಓಡಿಬಂದು ಅಂಟಿಕೊಂಡಿರುವ ಕಣ್ಣುಗಳನ್ನೂ ಏನೂ ಹೇಳದೆ ಉಪೇಕ್ಷಿಸಿ ಮನ್ಮಥನು ಮನಸ್ಸೆಲ್ಲವನ್ನೂ ಸೂರೆಮಾಡುತ್ತಾನೆ. ಶರೀರವನ್ನು ಕೃಶವನ್ನಾಗಿ ಮಾಡಿ ಕಾಡಿ ಶಿಕ್ಷಿಸುತ್ತಾನೆ. ಮನ್ಮಥನ ಈ ಸೂರೆಯ ಈ ಶಿಕ್ಷೆಯ ರೀತಿ ಅದೆಂತಹುದೊ ! ವ|| ಎಂದು ನಂದನವನದ ಸಮೀಪ ಪ್ರದೇಶಗಳಲ್ಲಿ ಮನ್ಮಥನಿಗೆ ಅನನಾಗಿ ಸುತ್ತಿ ತೊಳಲಿ ನೋಡುತ್ತ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿದಳು ೧೪. ಉರಿಯುತ್ತಿರುವ ನನ್ನ ಎದೆಯು ಸಮಾಧಾನಗೊಳ್ಳುವ ಹಾಗೆ, ಚಿಂತಿಸುತ್ತಿರುವ ನನ್ನ ಮನಸ್ಸು ಉತ್ಸಾಹಗೊಳ್ಳುವ ಹಾಗೆ, ಪುನ ನೋಡಬೇಕೆಂಬ ಆಶ್ಚರ್ಯದಿಂದಲೇ ಮುಚ್ಚಿಕೊಂಡಿರುವ ನನ್ನ ಕಣ್ಣಿಗೆ ಸಂತೋಷಸ್ಥಾನವಾಗುವ ಹಾಗೆ ವಿರಹದಿಂದ ಬಿರಿಯುತ್ತಿರುವ ಶರೀರವು ಇದ್ದಕ್ಕಿದ್ದ ಹಾಗೆ, ರೋಮಾಂಚಗೊಳ್ಳುವ ಹಾಗೆ ನನ್ನ ಅದೃಷ್ಟದಿಂದ ಹೀಗೆ ಇಲ್ಲಿಯೇ ನನ್ನ ಮನೋರಥಕ್ಕೆ ಜನ್ಮಭೂಮಿಯಾದ ಸುಭದ್ರೆಯನ್ನು ಕಾಣಲು ಸಾಧ್ಯವಾಗುತ್ತದೆಯೇ? ವ|| ಎಂಬುದಾಗಿ ಯೋಚಿಸುತ್ತ ಆಕೆ ಇದ್ದ ಮಾಧವೀಮಂಟಪದ ಹತ್ತಿರಕ್ಕೆ ಬಂದು ಅಲ್ಲಿ ಅದೇತೆರನಾದ ವಿರಹವಾರ್ತೆಯನ್ನು ಕೇಳಿ ನಮ್ಮಂತಹವರೂ ಇಲ್ಲಿ ಯಾರಾದರೂ ಇದ್ದಿರಬಹುದು ಎನ್ನುತ್ತ ಬರುತ್ತಿರುವ ಅರ್ಜುನನನ್ನು ಸುಭದ್ರೆಯು ಇದ್ದಕ್ಕಿದ್ದ ಹಾಗೆ ನೋಡಿದಳು. ೧೫. ಪಡೆಮೆಚ್ಚೆಗಂಡನಾದ ಅರ್ಜುನನ್ನು ನೋಡಿದ ತಕ್ಷಣವೇ ಆ ಸತಿಗೆ ಬಾಗಿಲು ತೆರೆಯುವಂತೆ ಎದೆಯು ತೆರೆಯಿತು, ಉಂಟಾದ ಸಂದೇಹದಿಂದ ನಡುಕವೂ ವಿಶೇಷವಾಗಿ ತಲೆದೋರಿತು; ಸಡಗರದಿಂದ ಬೆವರು, ಬೆವರುವ ಕಡೆಗಳಿಂದ ಹೆಚ್ಚಿ ಹೊರಸೂಸಿತು ;

ಚಂ|| ಸರಸ ಮೃಣಾಳನಾಳವಳಯಂಗಳೊಳುಜ್ಜ್ವಳ ವೃತ್ತ ಮೌಕ್ತಿಕಾ
ಭರಣ ಗಣಂಗಳೊಳ್ ಶಶಿಕರಂಗಳೊಳಾಱದೆ ಬೇಟದೊಳ್ ಕನ|
ಲ್ದುರಿವೆರ್ದೆ ನೋಡ ನೋಡಲೊಡನಾಱದುದೇನಮರ್ದಿಂದೆ ತೊಯ್ದು ಕ
ಪ್ಪುರವಳುಕಿಂದಜಂ ಕಡೆದು ಕಂಡರಿಪಂ ವಲಮೆನ್ನ ನಲ್ಲಳಂ|| ೧೬

ಉ|| ವೃತ್ತಕುಚಂಗಳಿಂದುದಿರ್ದ ಚಂದನದೊಳ್ ತಳಿರ್ವಾಸು ಬೆಳ್ಪನಾ
ಳ್ದತ್ತು ದುಕೂಲದೊಂದು ಮಡಿವಾಸಿದ ಮಾೞ್ಕೆವೊಲಾಯ್ತು ಮೆಯ್ಯನಿ|
ಕ್ಕುತ್ತಿರೆ ಪತ್ತಿ ಕೆಂದಳಿರ್ಗಳಚ್ಚುಗಳಚ್ಚಿಱದಂತೆ ಕಾಮನ
ಚ್ಚೊತ್ತಿದ ಬೇಟದಚ್ಚುಗಳ ಮಾೞ್ಕೆಯೊಳಿರ್ದುದು ಮೆಯ್ ಸುಭದ್ರೆಯಾ|| ೧೭

ವ|| ಅದಱನೀಕೆಯುಮೆನಗೆರಡಱಯದ ನಲ್ಲ ಮನಂದೋಱುವುದು ಸಲ್ಗೆದೋಱುವುದು ಮಾವುದು ದೋಸಮೆಂದಾಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ ನಾಣ್ಚಿ ಪೋಗಲೆಂದೆೞ್ದ ಕನ್ನೆಯಂ ಚೂತಲತಿಕೆಯಂಬ ಕೆಳದಿ ಜಡಿದು ಕುಳ್ಳಿರಿಸಿ ಗಂಧೇಭ ವಿದ್ಯಾಧರನನಿಂತೆಂದಳ್-

ಚಂ|| ಮದನನ ಕಾಯ್ದು ಮಾಣ್ಗೆ ಸರಸೀರುಹಜನ್ಮನ ಮೆಚ್ಚು ತೀರ್ಗೆ ಕೊ
ಳ್ಗುದಿ ಮನದಿಂದಮಿಂದು ಪೊಱಮಾಱುಗೆ ಚಂದ್ರಕರಂಗಳಿಂದು ತ|
ಣ್ಣಿದುವೆರ್ದೆಗಕ್ಕೆ ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ ನಿನ್ನ ಕೂ
ಟದೊಳಿನಿದಕ್ಕೆ ಮತ್ಸಖಿಗೆ ಬೇ ಪಳಾಳದೊಳೇಂ ಗುಣಾರ್ಣವಾ|| ೧೮

ಬೆಳಗುವ ಸಾಂದ್ರಚಂದ್ರಕಿರಣಾಳಿಗಳೋಳಿಗಳಿಂದಮೆತ್ತಮು
ಜ್ಜ್ವಳಿಸುವಿರುಳ್ಗಳಂ ಕಳೆದುಮೆಯ್ದೆ ತಳಿರ್ತೆಳಮಾವುಮಂ ಮನಂ|
ಗೊಳೆ ನಡೆ ನೋಡಿಯುಂ ಕಿವಿಯನಿಂದೊಳದಿಂಚರಕಾಂತುಮಿಂತು ಕೋ
ಮಳೆಯಸು ಮತ್ತವಿಯೊಡಲೊಳಿರ್ದುದಿದೆಮ್ಮಯ ಸೈಪು ಭೂಪತೀ|| ೧೯

ವ|| ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಂದಾ ವನಾಂತರಾಳಕ್ಕೊರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು-

ಕಣ್ಣುಗಳ ಲಜ್ಜೆಯಿಂದ ನೇರವಾಗಿ ನೋಡದೆ ತಪ್ಪು (ಓರೆ) ದೃಷ್ಟಿಯಿಂದ ನೋಡಿದುವು. ವ|| ಆಗ ಸುರತಮಕರಧ್ವಜನಾದ ಅರ್ಜುನನೂ ಕೂಡ ಮನ್ಮಥನ ಅಮೃತಸಮುದ್ರದಲ್ಲಿ ಮೂಡಿ ಮುಳುಗಿದವರ ಹಾಗೆ ಕೆಲವು ಕಾಲವಿದ್ದು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸುಭದ್ರೆಯ ರೂಪವನ್ನು ಕಾಲಿನಿಂದ ತಲೆಯವರೆಗೆ ನೋಡಿ ತನ್ನಲ್ಲುಂಟಾದ ವಿರಹದಿಂದ ಕೃಶನಾಗಿ ಶುಕ್ಲಪಕ್ಷದ ಪಾಡ್ಯದ ಚಂದ್ರನ ಹಾಗೆ ಸೊಗಯಿಸುವ ಕೃಶಾಂಗಿಯನ್ನು ಕಂಡು- ೧೬. ಚಂದ್ರಕಿರಣಗಳಿಂದ ಕಡಮೆಯಾಗದೆ ವಿರಹದಿಂದ ಕೆರಳಿ ಉರಿಯುತ್ತಿದ್ದ ನನ್ನ ಎದೆಯು ರಸಯುಕ್ತವಾದ ತಾವರೆಯ ದಂಟಿನ ಕಂಕಣಗಳಿಂದಲೂ ಹೊಳೆಯುವ ದುಂಡು ಮುತ್ತಿನ ಒಡವೆಗಳಿಂದಲೂ ಕೂಡಿದ ಸುಭದ್ರೆಯನ್ನು ನೋಡಿದೊಡನೆಯೇ ಆರಿ ಹೋಯಿತು; ನಿಜವಾಗಿಯೂ ಬ್ರಹ್ಮನು ಈ ನನ್ನ ಪ್ರಿಯಳನ್ನು ಅಮೃತದಲ್ಲಿ ನೆನೆಸಿ ಕರ್ಪೂರದ ಹಳುಕಿನಿಂದ ಕಡೆದು ಕೊರೆದಿದ್ದಿರಬೇಕು. ೧೭. ದುಂಡಾದ ಮೊಲೆಗಳಿಂದ ಉದುರಿದ ಶ್ರೀಗಂಧದಿಂದ ಚಿಗುರಿನ ಹಾಸಿಗೆಯು ಬಿಳಿಯ ಬಣ್ಣವನ್ನು ತಾಳಿದೆ. ರೇಷ್ಮೆಯ ಮಡಿವಸ್ತ್ರವು ಮಾಸಿದ ವಸ್ತ್ರದಂತಾಗಿದೆ. (ಹಾಸಿಗೆಯ ಮೇಲ) ಮೈಯನ್ನಿಟ್ಟಿರಲಾಗಿ ಆ ಸುಭದ್ರೆಯ ಮೈಯಿ ಕೆಂಪು ಚಿಗುರುಗಳು ಮುದ್ರೆಗಳಿಂದ ಅಚ್ಚೊತ್ತಿದ ಹಾಗೆ ಅಂಟಿಕೊಂಡು ಮನ್ಮಥನು ಮುದ್ರಿಸಿದ ಪ್ರೇಮಮುದ್ರೆಗಳಂತಿವೆ. ವ|| ಆದುದರಿಂದ ಈಕೆಯು ನನಗೆ ನೈಜವಾದ ಮನಸ್ಸನ್ನು ತೋರಿಸುವುದರಲ್ಲಿಯೂ ಸಲಿಗೆಯನ್ನು ತೋರಿಸುವುದರಲ್ಲಿಯೂ ದೋಷವೇನಿದೆ? ಎಂದು ಆಕೆ ಕುಳಿತಿದ್ದ ಚಿಗುರುಹಾಸಿಗೆಯಲ್ಲಿಯೇ ಕುಳಿತನು. ಲಜ್ಜೆಪಟ್ಟು ಹೋಗಲೆಂದು ಎದ್ದ ಕನ್ಯೆಯನ್ನು ಚೂತಲತಿಕೆಯೆಂಬ ಸಖಿಯು ಗದರಿಸಿ ಕುಳ್ಳಿರಿಸಿ ಗಂಧೇಭವಿದ್ಯಾಧರನಾದ ಅರ್ಜುನನನ್ನು ಕುರಿತು ಹೀಗೆಂದಳು- ೧೮. ಮನ್ಮಥನ ಕೋಪ ನಿಲ್ಲಲಿ; ಬ್ರಹ್ಮನು ಆಶೆ ತೀರಲಿ, ಹೃದಯದ ವಿರಹತಾಪ ಮನಸ್ಸಿನಿಂದ ಹೊರಹೋಗಲಿ, ಚಂದ್ರಕಿರಣಗಳು ಇಂದು ಹೃದಯಕ್ಕೆ ತಂಪನ್ನುಂಟುಮಾಡುವುದಾಗಲಿ. ಕೆಂದಳಿರ ಹಾಸಿಗೆಯ ತಾಪವು ಹೋಗಲಿ. ನಿನ್ನನ್ನು ಸೇರುವುದರಿಂದ ನನ್ನ ಸಖಿಗೆ ಸವಿಯುಂಟಾಗಲಿ, ಗುಣಾರ್ಣವನೇ ಇತರ ವ್ಯರ್ಥಾಲಾಪದಿಂದ ಏನು ಪ್ರಯೋಜನ? ೧೯. ಅರ್ಜುನ! ಪ್ರಕಾಶಮಾನವೂ ದಟ್ಟವೂ ಆದ ಚಂದ್ರಕಿರಣಗಳ ಸಮೂಹದಿಂದ ಎಲ್ಲೆಡೆಯೂ ವಿಜೃಂಭಿಸುವ ರಾತ್ರಿಗಳನ್ನು ಕಳೆದು ಸಂಪೂರ್ಣವಾಗಿ ಚಿಗುರಿದ ಎಳೆಯ ಮಾವಿನ ಮರಗಳನ್ನು

ಮ|| ಕುಡಲಿರ್ಪಂ ಬಲದೇವನೆನ್ನನುಜೆಯಂ ದುರ್ಯೋಧನಂಗಾನೊಡಂ
ಬಡೆನೀವೞಯದಾಗಳುಂ ನಿನಗೆ ದಲ್ ಪದ್ಮಾಸನಂ ತಾನೆ ನೇ|
ರ್ಪಡಿಸಲ್ ಕೂಡಿದನಿರ್ಪುದಲ್ತು ನಯಮಿನ್ನೀ ಪೊೞ್ತೆ ಪೊೞುಗೆ ನೀ
ನೊಡಗೊಂಡುಯ್ವುದು ಕನ್ನೆಯಂ ತಡೆಯದಿರ್ ವಿದ್ವಿಷ್ಟವಿದ್ರಾವಣಾ|| ೨೦

ವ|| ಅಂತು ಪೋಗೆವೋಗೆ ಬಲದೇವನನುಮತದೊಳ್ ಪೆಱಗಂ ತಗುಳ್ವ ಯಾದವ ಬಲಮುಂಟಪ್ಪೊಡದನಂಬುಗಾಣಿಸಲ್ ನೀನೆ ಸಾಲ್ವೆಯುೞದುದಂ ಮಾಣಿಸಲಾನೆ ಸಾಲ್ವೆನಿದುವೆ ಮುಹೂರ್ತಮಾಗೆ ನಡೆವುದೆಂದು ಶೈಬ್ಯ ಬಳಾಹಕ ಮೇಘವರ್ಣ ಸುಗ್ರೀವಂಗಳೆಂಬ ನಾಲ್ಕು ಕುದುರೆಗಳೊಳ್ ಪೂಡಿದ ದಿವ್ಯರಥಮನೆಸಗಲ್ ದಾರುಕನೆಂಬ ಸಾರಥಿಯನೀವುದುಮಾ ರಥಮಂ ಮನೋರಥನಂ ಬೆರಸೇಱ ಚೂತಲತಿಕೆವೆರಸು ಸುಭದ್ರೆಯನೇಱಲ್ವೇೞ್ದುದಾತ್ತನಾರಾಯಣಂ ನಾರಾಯಣನ ಪರಸಿದ ಪರಕೆಗಳುಮಂ ಕೆಯ್ಕೊಂಡು ಬೀೞ್ಕೊಂಡಿಂದ್ರಪ್ರಸ್ಥದ ಬಟ್ಟೆಯೊಳ್ ಸುಖಪ್ರಯಾಣಂಗೆಯ್ದನನ್ನೆಗಮಿತ್ತ ಬಲದೇವಂ ಸುಭದ್ರೆಯಂ ಸಾಮಂತಚೂಡಾಮಣಿಯುಯ್ದನೆಂಬುದಂ ಕೇಳ್ದು-

ಮ|| ಉಱದೆನ್ನಂ ಕುಡಲಿರ್ದ ಕೂಸನೊಡಗೊಂಡುಯ್ವಾತನಂ ತಾಗಿ ತ
ಳ್ತಿಱಯಲ್ ಕೋಡಗಗಟ್ಟುಗಟ್ಟಿ ತರಲಿನ್ನಾರಾರ್ಪರಂತಪ್ಪ ಪೊ|
ಚ್ಚಱಸಾಮಂತರೆ ಪೋಗಿಮೆಂದು ಪಲರಂ ಪೇೞುಗಳೆಯ್ತಂದರಂ
ತೊಕೊಳ್ವಂತಿರೆ ಕೊಂಡುವಂದರಿಗನೆಚ್ಚುಗ್ರೇಷು ಧಾರಾಜಳಂ|| ೨೧

ವ|| ಆಗಳ್ ತನ್ನ ಪೇೞ್ದ ನಾಯಕರ ಸಾವಂ ಕೇಳ್ದು ಯಾದವಬಲ ಜಳನಿವೆರಸು ವಿಳಯಕಾಲ ಜಳನಿಯಂತೆ ತೆರಳಲ್ ಬಗೆದ ಬಲದೇವನಂ ವಾಸುದೇವನಿಂತೆಂದಂ-

ಮ|| ಕುಲಮಂ ಪೇೞ್ವೊಡೆ ಸೋಮವಂಶತಿಲಕಂ ಬಿಲ್ಲಾಳ್ತನಂಬೇೞ್ವೊಡು
ಜ್ವಲ ತೀವ್ರಾಸ್ತ್ರನಿಘಾತಪಾತಿತ ರಿಪುವ್ಯೂಹಂ ಬಲಂಬೇೞೆ ದೋ|
ರ್ವಲದೊಳ್ ಕೇಳ್ ನಿನಗಂ ಬಲಸ್ಥನೊಡೆಯಂ ಕೂಸಿಂಗೆ ಕೊಂಡುಯ್ವುದೇ
ಚಲಮೇ ದೋಷಮದರ್ಕೆ ನೀನ್ ಮುಳಿವುದೇ ನೀನ್ ಪೇೞ್ವೊಡಾನ್ ಸಾಲೆನೇ|| ೨೨

ತೃಪ್ತಿಯಾಗುವ ಹಾಗೆ ದೀರ್ಘವಾಗಿ ನೋಡಿಯೂ ಹಿಂದೋಳರಾಗದ ಇಂಪಾದ ಧ್ವನಿಗೆ ಕಿವಿಗೊಟ್ಟೂ ಈ ಕೋಮಳೆಯಾದ ಸುಭದ್ರೆಯ ಪ್ರಾಣವು ಈ ಶರೀರದಲ್ಲಿಯೇ ಇದ್ದುದು ನಮ್ಮ ಅದೃಷ್ಟವೆಂದೇ ಹೇಳಬೇಕು. ವ|| ಎನ್ನುವಷ್ಟರಲ್ಲಿ ಅರ್ಜುನ ಸುಭದ್ರೆಯರ ವಿರಹತಾಪಕ್ಕೆ ಸಂಬಂಧಪಟ್ಟ ಮಾತುಗಳನ್ನು ಕಿವಿಯಿಂದ ಕಿವಿಗೆ ಕೇಳಿ ಸಂತೋಷಪಟ್ಟು ಶ್ರೀಕೃಷ್ಣನು ಕಪಟೋಪಾಯವುಳ್ಳವನಾದುದರಿಂದ ಆ ವನದ ಮಧ್ಯಭಾಗಕ್ಕೆ ಒಬ್ಬನೇ ಬಂದು ಮಾಧವೀಮಂಟಪವನ್ನು ಪ್ರವೇಶಿಸಿ ಅವರಿಬ್ಬರ ಲಜ್ಜೆಯನ್ನೂ ನಡುಕವನ್ನೂ ಹೋಗಲಾಡಿಸಿ ಹೇಳಿದನು. ೨೦. ಬಲರಾಮನು ನನ್ನ ತಂಗಿಯನ್ನು ದುರ್ಯೋಧನನಿಗೆ ದಾನಮಾಡಲಿದ್ದಾನೆ. ನಾನು ಅದಕ್ಕೆ ಒಪ್ಪುವುದಿಲ್ಲ. ನಿನಗೇ ದಾನಮಾಡಬೇಕೆಂಬುದು ನನ್ನ ನಿಶ್ಚಯ. ಇದನ್ನು ಸರಿಪಡಿಸಿಕೊಳ್ಳುವುದಕ್ಕಾಗಿಯೇ ಬ್ರಹ್ಮನು ನಿಮ್ಮಿಬ್ಬರನ್ನೂ ಒಟ್ಟಿಗೆ ಸೇರಿಸಿದ್ದಾನೆ. ಇನ್ನು ಮೇಲೆ ಇಲ್ಲಿರುವುದು ನೀತಿಯಲ್ಲ. ಈ ಹೊತ್ತೆ ಹೊತ್ತಾಗಿ ಅಂದರೆ ಈಗಲೇ ಕನ್ಯೆಯನ್ನು ಜೊತೆಯಲ್ಲಿ ಕರೆದುಕೊಂಡು ಹೊರಟುಹೋಗು, ವಿದ್ವಿಷ್ಟವಿದ್ರಾವಣನಾದ ಅರ್ಜುನನೇ ತಡಮಾಡಬೇಡ. ವ|| ಹಾಗೆ ಹೋಗುವಾಗಲೂ ಬಲರಾಮನ ಅಭಿಪ್ರಾಯದಂತೆ ಬೆನ್ನಟ್ಟಿಬರುವ ಯಾದವ ಬಲವುಂಟಾದರೂ ಅದಕ್ಕೆ ಬಾಣಪ್ರಯೋಗ ಮಾಡಲು ನೀನು ಶಕ್ತನಾಗಿದ್ದೀಯೆ. ಉಳಿದುದನ್ನು ತಪ್ಪಿಸಲು ನಾನು ಬಲ್ಲೆ, ಇದನ್ನೇ ಸುಮುಹೂರ್ತವನ್ನಾಗಿ ಎಣಿಸಿ ಹೊರಡು ಎಂದು ಶೈಬ್ಯ, ಬಳಾಹಕ, ಮೇಘವರ್ಣ, ಸುಗ್ರೀವಗಳೆಂಬ ನಾಲ್ಕು ಕುದುರೆಗಳನ್ನು ಹೂಡಿದ್ದ ದಿವ್ಯರಥವನ್ನೂ ಅದನ್ನು ನಡೆಯಲು ದಾರುಕನೆಂಬ ಸಾರಥಿಯನ್ನೂ ಕೊಟ್ಟನು. ಆ ರಥವನ್ನು ಅರ್ಜುನನು ಸಂತೋಷದಿಂದ ಚೂತಲತಿಕೆಯೊಡಗೂಡಿ ಸುಭದ್ರೆಯನ್ನು ಹತ್ತಲು ಹೇಳಿ ನಾರಾಯಣನು ಹರಸಿದ ಹರಕೆಗಳನ್ನು ಅಂಗೀಕರಿಸಿ ಅವನಿಂದ ಅಪ್ಪಣೆಪಡೆದು ಇಂದ್ರಪ್ರಸ್ಥದ ದಾರಿಯಲ್ಲಿ ಸುಖಪ್ರಯಾಣಮಾಡಿದನು. ಅಷ್ಟರಲ್ಲಿ ಈಕಡೆ ಬಲರಾಮನು ಸುಭದ್ರೆಯನ್ನು ಸಾಮಂತಚೂಡಾಮಣಿಯಾದ ಅರ್ಜುನನು ಕರೆದುಕೊಂಡು ಹೋದನೆಂಬುದನ್ನು ಕೇಳಿ- ೨೧. “ನನ್ನನ್ನು ಲಕ್ಷ್ಯಮಾಡದೆ ದಾನಮಾಡಲಿದ್ದ ಹೆಣ್ಣನ್ನು ಜೊತೆಯಲ್ಲಿ ಕೊಂಡು ಹೋದವನನ್ನು ಎದುರಿಸಿ ಹೋರಾಡಲೂ ಕಪಿಯನ್ನು ಕಟ್ಟುವ ಹಾಗೆ ಕಟ್ಟಿ ತರಲೂ ಯಾರು ಸಮರ್ಥರಾಗಿರುತ್ತಾರೆ, ಅಂತಹ ಪರಾಕ್ರಮವುಳ್ಳ ಶೂರಸಾಮಂತರೇ ಹೋಗಿ” ಎಂದು ಹಲವರನ್ನು ನೇಮಿಸಲು (ಹಾಗೆ ಬಂದು) ಎದುರಿಸಿದವರನ್ನು ಅರ್ಜುನನು ಪ್ರಯೋಗಿಸಿದ ಭಯಂಕರವಾದ ಬಾಣಗಳ ಧಾರಾಪ್ರವಾಹವು ನದಿಯು ನುಗ್ಗುವ ಹಾಗೆ ಆಕ್ರಮಿಸಿ ಕೊಂದಿತು. ವ|| ಆಗ ತಾನು ನಿಯಮಿಸಿದ ನಾಯಕರ ಸಾವನ್ನು ಕೇಳಿ ಯಾದವ ಬಲಸಮುದ್ರದೊಡಗೂಡಿ ಪ್ರಳಯಕಾಲದ ಸಮುದ್ರದಂತೆ ಹೊರಡಲು ಯೋಚಿಸಿದ ಬಲರಾಮನನ್ನು ವಾಸುದೇವನು ಹೀಗೆಂದನು – ೨೨. ಕುಲವನ್ನು ಹೇಳುವುದಾದರೆ ಚಂದ್ರವಂಶದಲ್ಲಿ ಶ್ರೇಷ್ಠನಾದವನಾಗಿದ್ದಾನೆ. ಪರಾಕ್ರಮವನ್ನು

ವ|| ಎಂದು ಬಲದೇವನ ಮನದೊಳಾದ ಮುಳಿಸೆಂಬ ಕಿಚ್ಚಂ ತನ್ನ ಮೃದು ಮಧುರ ವಚನರಚನಾಜಲಂಗಳಂ ತಳಿದು ನದಿಪಿದನಿತ್ತ ವಿಕ್ರಮಾರ್ಜುನನುಂ ಕತಿಪಯ ದಿನಂಗಳಿಂದನೇಕ ಸಹಕಾರಶೋಕಾನೋಕಹನಂದನವನಪ್ರಸ್ಧಮನಿಂದ್ರ ಪ್ರಸ್ಥಮನೆಯ್ದೆವಂದು ಮುನ್ನಮೆ ತನ್ನ ಬರವನಱದು ಪೊೞಲೊಳಷ್ಟಶೋಭೆಯಂ ಮಾಡಿ ತನಗಿದಿರ್ವಂದ ಕೊಂತಿಯ ಧರ್ಮಪುತ್ರ ಭೀಮಸೇನಾದಿಗಳ ಪಾದ ಪದ್ಮಂಗಳಂ ತನ್ನ ಕರಕಮಲಂಗಳಿಂದರ್ಚಿಸಿ ತದೀಯಾಶೀರ್ವಚನಂಗಳನಾಂತು ತನಗೆ ಪೊಡಮಟ್ಟ ನಕುಲ ಸಹದೇವಂ ಪರಸಿ ಪುನಪುನರಾಲಿಂಗನಂಗೆಯ್ದು ಮುಹುರ್ಮುಹುರಾಳೋಕನಂಗೆಯ್ಯುತ್ತುಂ ಬಂದು ದಿವಿಜೇಂದ್ರ ವಿಳಾಸದಿಂ ಪೊೞಲಂ ಪುಗೆ-

ಕಂ|| ಪರಸುವ ಪುರಜನದೊದವಿದ
ಪರಕೆಗಳಂಬುನಿನಾದಮಂ ಮಿಗೆ ತಮ್ಮ|
ಯ್ವರುಮೊಡನೆ ಮೆದು ಪರಮಾ
ನುರಾಗದಿಂ ಬಂದು ಪೊಕ್ಕರಂದರಮನೆಯಂ|| ೨೩

ವ|| ಅಂತು ರಾಜಮಂದಿರಮಂ ಪೊಕ್ಕು ಧರ್ಮಪುತ್ರನನಗಲ್ಲ ಪನ್ನೆರಡು ಮಾಸದೊಳಾದ ದಿಗ್ವಿಜಯ ಪ್ರಪಂಚಮುಮಂ ಸುಭದ್ರಾಹರಣಮುಮಂ ಪುರುಷೋತ್ತಮನ ಪರಮ ಮಿತ್ರತ್ವಮು ಮನಱದು ಸಂತಸಂಬಟ್ಟು ತಮ್ಮನಿಬರುಮೇಕಸ್ಥರಾಗಿ-

ಮ|| ಎರೆದಿಂತಟ್ಟಲೇವೇೞ್ಪ ಕನ್ನೆ ಬೞಯಂ ಬಂದಳ್ ಮರುಳ್ದಂಬುಜೋ
ದರನಿಂತಟ್ಟಿದನಿಂತು ನೋಂತರೊಳರೇ ಸೈಪಿಂಗೆ ನಾಮಿನ್ನಿಳಾ|
ಧರನುಂ ಯಾದವ ವಂಶಜರ್ವೆರಸು ಬರ್ಪಂತಟ್ಟಿ ಮಾೞ್ಪಂ ಮನೋ
ಹರಮಪ್ಪಂತು ವಿವಾಹಮಂಗಳಮನೆಂದಂದಟ್ಟಿದರ್ ದೂತರಂ|| ೨೪

ವ|| ಅಟ್ಟಿದೊಡವರ್ ಪೋಗಿ ಬಲದೇವನುಮಂ ವಾಸುದೇವನುಮಂ ಕಂಡು ತಮ್ಮ ಬಂದ ಕಜ್ಜಮನೊಡಂಬಡಿಸಿ ಯಾದವರ್ವೆರಸು ಮುಂದಿಟ್ಟೊಡಗೊಂಡು ಬರೆ ಬರವನಱದು ಪಾಂಡವರಯ್ವರುಮಿದಿರ್ವೋಗಿ ಯಥೋಚಿತ ಪ್ರತಿಪತ್ತಿಗಳಿಂ ಕಂಡು ಪೊೞಲ್ಗೊಡಗೊಂಡು ಬಂದು ಶುಭದಿನ ನಕ್ಷತ್ರ ಯೋಗಕರಣಂಗಳಂ ನಿಟ್ಟಿಸಿ-

ಹೇಳುವುದಾದರೆ ತನ್ನ ತೀಕ್ಷ್ಣಬಾಣಗಳ ಹೊಡೆತದಿಂದ ಶತ್ರುವ್ಯೂಹವನ್ನು ಕೆಡವಿದ ಸಾಮರ್ಥ್ಯವುಳ್ಳವನಾಗಿದ್ದಾನೆ. ಬಲವನ್ನು ಹೇಳುವುದಾದರೆ ಬಾಹುಬಲದಲ್ಲಿ ನಿನಗಿಂತಲೂ ಬಲಿಷ್ಠನಾದವನು; ನಮ್ಮ ಕೂಸಿಗೆ ಒಡೆಯನಾಗಿ ಕೊಂಡುಹೋಗಲಿ, ಹಟವೇತಕ್ಕೆ? ದೋಷವೇನು? ಅದಕ್ಕೆ ನೀನು ಕೋಪಿಸುವುದೇ? ನೀನು ಹೋರಾಡು ಎಂದು ಆಜ್ಞೆ ಮಾಡುವುದಾದರೆ ಅವನೊಡನೆ ಯುದ್ಧಮಾಡಲು ನಾನೇ ಸಮರ್ಥನಲ್ಲವೇ? ವ|| ಎಂದು ಬಲರಾಮನ ಮನಸ್ಸಿನಲ್ಲುಂಟಾದ ಕೋಪವೆಂಬ ಬೆಂಕಿಯನ್ನು ತನ್ನ ಮೃದುಮಧುರ ವಚನರಸಚನಾಜಲಗಳನ್ನು ಸಿಂಪಿಸಿ ನಂದಿಸಿದನು. ಈ ಕಡೆ ವಿಕ್ರಮಾರ್ಜುನನು ಕೆಲವು ದಿವಸಗಳಲ್ಲಿ ಅನೇಕ ಮಾವಿನ ಮತ್ತು ಅಶೋಕಮರಗಳುಳ್ಳ ವನಗಳಿಂದ ಕೂಡಿದ ಇಂದ್ರಪ್ರಸ್ಥಪುರವನ್ನು ಸೇರಿದನು. ಮೊದಲೇ ತಾನು ಬರುವುದನ್ನು ತಿಳಿದು ಪಟ್ಟಣವನ್ನು ಎಂಟು ವಿಧವಾದ ಅಲಂಕಾರಗಳಿಂದ ಅಲಂಕರಿಸಿತ್ತು. ತನಗಿದಿರಾಗಿ ಬಂದ ಕುಂತೀದೇವಿ, ಧರ್ಮರಾಜ, ಭೀಮಸೇನನೇ ಮೊದಲಾದವರ ಪಾದಕಮಲಗಳನ್ನು ತನ್ನ ಕಮಲಹಸ್ತಗಳಿಂದ ಪೂಜೆಮಾಡಿ ಅವರ ಆಶೀರ್ವಾದಗಳನ್ನು ಪಡೆದನು. ತನಗೆ ನಮಸ್ಕಾರ ಮಾಡಿದ ನಕುಲ ಸಹದೇವರನ್ನು ಹರಸಿ ಪುನ ಪುನ ಆಲಿಂಗನಮಾಡಿಕೊಂಡು ಪುನ ಪುನ ನೋಡುತ್ತ ದೇವೇಂದ್ರ ವೈಭವದಿಂದ ಪಟ್ಟಣವನ್ನು ಪ್ರವೇಶಿಸಿದನು- ೨೩. ಆಗ ಪಟ್ಟಣಿಗರು ಹರಸಿದ ಹರಕೆಗಳು ಸಮುದ್ರಘೋಷವನ್ನು ಮೀರಿರಲು ತಾವಯ್ದುಜನರೂ ಅತ್ಯಂತ ಸಂತೋಷದಿಂದ ಅರಮನೆಯನ್ನು ಪ್ರವೇಶಿಸಿದರು. ವ|| ಹಾಗೆ ಅರಮನೆಯನ್ನು ಪ್ರವೇಶಿಸಿ ಧರ್ಮರಾಜನನ್ನು ಅಗಲಿಹೋದ ಹನ್ನೆರಡು ತಿಂಗಳುಗಳಲ್ಲಿ ನಡೆದ ದಿಗ್ವಿಜಯದ ವಿಷಯವನ್ನೂ ಸುಭದ್ರಾಪಹರಣವನ್ನೂ ಎಲ್ಲರೂ ಕೇಳಿದರು. ಪುರುಷೋತ್ತಮನಾದ ಶ್ರೀಕೃಷ್ಣನ ಉತ್ತಮ ಸ್ನೇಹಸ್ವಭಾವವನ್ನು ತಿಳಿದು ಸಂತೋಷಪಟ್ಟರು. ತಾವೈದು ಜನವೂ ಒಮ್ಮನಸ್ಸಿನಿಂದ. ೨೪. ನಮಗೆ ದಾನವಾಗಿ ಕೊಡಿ ಎಂದು ದೂತರ ಮೂಲಕ ಪ್ರಾರ್ಥಿಸಿ ಪಡೆಯಬೇಕಾದ ಕನ್ಯೆಯು ತಾನಾಗಿಯೇ ಜೊತೆಯಲ್ಲಿಯೇ ಬಂದಿದ್ದಾಳೆ. ಕೃಷ್ಣನೇ ಹೀಗೆ ಕಳುಹಿಸಿಕೊಟ್ಟಿದ್ದಾನೆ. ಇಂತಹ ಅದೃಷ್ಟಶಾಲಿಗಳಾದವರು (ವ್ರತ ಮಾಡಿರುವವರು) ಬೇರೆ ಯಾರಿದ್ದಾರೆ. ನಾವು ಇನ್ನು ಯಾದವರೊಡಗೂಡಿ ಕೃಷ್ಣನು ಬರುವ ಹಾಗೆ ದೂತರನ್ನು ಕಳುಹಿಸಿ ಮನೋಹರವಾಗಿರುವ ರೀತಿಯಲ್ಲಿ ಮದುವೆಯ ಮಂಗಳವನ್ನು ಮಾಡೋಣ ಎಂದು ದೂತರನ್ನು ಅಟ್ಟಿದರು. ವ|| ಅವರು ಹೋಗಿ ಬಲರಾಮನನ್ನೂ ವಾಸುದೇವನನ್ನೂ ಕಂಡು ತಾವು ಬಂದ ಕಾರ್ಯಕ್ಕೆ ಅವರು ಒಪ್ಪುವ ಹಾಗೆ ಮಾಡಿ ಯಾದವರೊಡಗೂಡಿ ಅವರನ್ನೇ ಮುಂದುಮಾಡಿಕೊಂಡು ಬಂದರು. ಅವರು ಬರುವುದನ್ನು ತಿಳಿದು ಪಾಂಡವರೈದು ಮಂದಿಯೂ ಅವರಿಗಿದಿರಾಗಿ ಹೋಗಿ ಸೂಕ್ತವಾದ ಸತ್ಕಾರಗಳಿಂದ ಕಂಡು ಪಟ್ಟಣಕ್ಕೆ ಜೊತೆಯಲ್ಲಿ ಕರೆದುಕೊಂಡು ಬಂದರು.

ಮ|| ಪಸುರ್ವಂದರ್ ಪರೆ ವೇದಪಾರಗರವಂ ಕಣ್ಬೇಟದುದ್ದಾನಿಯಂ
ಪಸರಂ ಗೆಯ್ದವೊಲಪ್ಪ ಪೊಚ್ಚಱ ಮಹಾ ಸಾಮಂತ ಸೀಮಂತಿನೀ|
ಪ್ರಸರಂ ಮಂಗಳ ತೂರ್ಯನಾದಮೆಸೆಯುತ್ತಿರ್ಪನ್ನೆಗಂ ಚಕ್ರಿ ರಾ
ಗಿಸಿ ಕೆಯ್ನೀರೆದಂ ಗುಣಾರ್ಣವ ಮಹೀಪಾಲಂಗಮಾ ಕನ್ನೆಯಂ|| ೨೫

ವ|| ಅಂತವರಿರ್ವರ ಬೇಟಮೆಂಬ ಲತೆಯ ಬೆಳಸಿಂಗೆ ಪೊರೆವಂತೆ ಕೆರೆದು ಬಿಯಮಂ ಮೆದು-

ಪಿರಿಯಕ್ಕರಂ|| ತೊಟ್ಟ ತುಡುಗೆಗಳ್ ಕೌಸ್ತುಭರತ್ನಮನೋರೆಂದೆ ಮಸುಳಿಸೆ ಪಾಲ್ಗಡಲೊಳ್
ಪುಟ್ಟಿದಾನೆಯನಾನೆಗಳ್ ಗೆಲೆವರೆ ಕುದುರೆಗಳ್ ಕುದುರೆಯಂ ಕೀೞುಡೆ|
ತೊಟ್ಟ ಮದನನ ಪೂಗಣೆಗೆಣೆಯಾಗೆ ಗಣಿಕೆಯರ್ ಗಣಿದಮಂ ಬಗೆಯದಿಂತು
ಕೊಟ್ಟಂ ತಂಗೆಗೆ ಬೞವೞಯೆಂದಿಂತು ಸರ್ವಸ್ವಮೆಲ್ಲಮಂ ಪುರುಷೋತ್ತಮಂ|| ೨೬

ವ|| ಅಂತು ಬೞವೞಗೊಟ್ಟಿಂಬೞಯಂ ಧರ್ಮಪುತ್ರಂ ಬಲದೇವನನೆನಿತಾನುಮುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ದ್ವಾರಾವತಿಗೆ ಕೞಪಿದನಾ ವಿವಾಹೋತ್ಸವಾನಂತರದೊಳ್-