ಮೇರುಪರ್ವತಕ್ಕಿಂತಲೂ ಅತಿಶಯವಾದುದು. ಆದರೇನು? ಪ್ರಾಣವಿರುವವರೆಗೂ ಶೌರ್ಯಪ್ರದರ್ಶನ ಮಾಡಿ ಧನವಿರುವವರೆಗೂ ದಾನಮಾಡಿ ಪ್ರಸಿದ್ಧಿಯನ್ನು ಪಡೆಯಬೇಕೆಂಬ ಹಿರಿಯ ಗುರಿ ನಿನ್ನ ದೃಷ್ಟಿಗಿದೆ. ನಿನಗೆ ಸಮಾನರಾದವರು ಯಾರಿದ್ದಾರೆ? ವ|| ಎಂದು ತನಗೆ ಕೊಟ್ಟ ದಾನಕ್ಕೆ ಒಡಂಬಟ್ಟು ರಾಕ್ಷಸರ ಕುಲಕ್ಕೆ ಕಾಡುಗಿಚ್ಚಿನಂತಿರುವ ಕೃಷ್ಣನನ್ನೂ ಶತ್ರುಗಳಿಗೆ ಪ್ರಳಯಾಗ್ನಿಯಂತಿರುವ ಅರ್ಜುನನನ್ನೂ ಅಗ್ನಿಯು ‘ನಿಮ್ಮ ಇಷ್ಟಾರ್ಥ ಸಿದ್ಧಿಯಾಗಲಿ’ ಎಂದು ಹರಸಿ ಮನೋವಾಯುವೇಗದಿಂದ ಕ್ಷೀರಸಮುದ್ರವನ್ನು ಸೇರಿ ಅಲ್ಲಿ ತಾನು ಬಚ್ಚಿಟ್ಟಿದ್ದ ದೈವಾಂಶಸಂಭೂತಗಳಾದ ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥವನ್ನೂ ದಚಿಯ ಕಪೋಲಪ್ರದೇಶದಿಂದ ರಚಿತವಾದ ಗಾಂಡೀವವೆಂಬ ಬಿಲ್ಲನ್ನೂ ದಿವ್ಯವಾದ ಬಾಣಗಳಿಂದ ಪೂರ್ಣವಾಗಿ ತುಂಬಿದ ಅಕ್ಷಯತೂಣೀರಗಳನ್ನೂ (ಬತ್ತಳಿಕೆಗಳನ್ನೂ) ತಂದು ತನ್ನ ಪ್ರತಿಜ್ಞೆಯನ್ನು ತೀರಿಸುವುದಕ್ಕೂ ಇಂದ್ರನನ್ನು ಗೆಲ್ಲುವುದಕ್ಕೂ ಅಮೋಘವಾದ ಇವುಗಳನ್ನು ಸ್ವೀಕರಿಸಬೇಕು ಎಂದು ಹೇಳಲು ಅತಿರಥಮಥನನಾದ ಅರ್ಜುನನು ಅಗ್ನಿದೇವನಿಗೆ ನಮಸ್ಕಾರ ಮಾಡಿ ಅವನ್ನು ಸ್ವೀಕರಿಸಿ ಬೃಹಂದಳನೆಂಬ ಸಾರಥಿಯೊಡನೆ ರಥವನ್ನು ಹತ್ತಿದನು. ೭೮. ಅಗ್ನಿಯು ಖಾಂಡವವನ್ನು ಸುಟ್ಟು ಉಣ್ಣುತ್ತಾನೆ, ಅರ್ಜುನನು ಉಣಿಸುತ್ತಾನೆ. ಐರಾವತವಾಹನನಾದ ಇಂದ್ರನು ಸೈನ್ಯಸಮೇತನಾಗಿ ಪ್ರತಿಭಟಿಸುತ್ತಾನೆ. ಇಲ್ಲಿ ನಾನಾವಿಧವಾದ ಯುದ್ಧವುಂಟು ಎನ್ನುತ್ತ ಶೈಬ್ಯ, ಬಳಾಹಕ, ಮೇಘವರ್ಣ, ಸುಗ್ರೀವವೆಂಬ ಕುದುರೆಗಳಿಂದ ಪ್ರಕಾಶಮಾನವಾದ ರಥವನ್ನು ಕೃಷ್ಣನು ತಾನೂ ಹತ್ತಿದನು. ವ|| ದಾರುಕನು ರಥವನ್ನು ನಡೆಸಿದನು. ೭೯. ಸಾರಥಿಗಳು ಚೋದಿಸಲು ಎರಡು ರಥದ ಗಾಲಿಗಳ ಆಕ್ರಮಣದಿಂದಾದ ಧೂಳಿನ ಸಮೂಹವು ಮುತ್ತಿ ಮುಸುಕಿ ದೇವಸ್ತ್ರೀಯರ ಕಣ್ಣಲ್ಲಿ ವಿಶೇಷವಾಗಿ ತುಂಬಿತು. ವ|| ಯಮುನಾನದಿಯ ದಕ್ಷಿಣದಿಕ್ಕಿನಲ್ಲಿ ನೂರು ಯೋಜನದಗಲವೂ ಅಷ್ಟೇ ಉದ್ದವೂ ಆಗಿತ್ತು ಆ ಖಾಂಡವವನ.

೮೦. ಕೆಂಪುಮತ್ತಿ, ಅಶೋಕ, ಕದಂಬ, ಮಾತುಲುಂಗ, ಅರನೆಲ್ಲಿ, ಬಿಳಿಯಅತ್ತಿ ಮೊದಲಾದ ಮರಗಳ ಸಮೂಹಗಳಿಂದಲೂ ಪುಷ್ಪಭರಿತವಾದ ಹೊಂದಾವರೆಯ ಧೂಳಿನಲ್ಲಿ ಹೊರಳಾಡಿರುವ ಹೆಣ್ಣುದುಂಬಿಗಳ ಗುಂಪುಗಳಿಂದಲೂ ಬಕ, ಹಂಸ, ಕೋಗಿಲೆ ಮೊದಲಾದ ಪಕ್ಷಿಸಮೂಹದ ಶಬ್ದರಾಶಿಯಿಂದಲೂ ಆನಂದವನ್ನುಂಟುಮಾಡುವ ಆ ಖಾಂಡವವನವು ಪರಸ್ಪರ ಆಸಕ್ತರಾದ ದೇವದಂಪತಿಗಳಿಂದಲೂ ಸುಂದರವಾಗಿ ಕಂಡಿತು. ವ|| ಖಾಂಡವವನವನ್ನು ಶ್ರೀಕೃಷ್ಣನು ವಿಕ್ರಮಾರ್ಜುನನಿಗೆ ಸುತ್ತಾಡಿ ತೋರಿಸಿದನು.

ಮ|| ಅಲರಂ ನೋಯಿಸದೊಯ್ಯನೊಯ್ಯನಳಿಗಳ್ ಬಂಡುಣ್ಬುವಾಟಂದು ಬಂ
ದಲೆಯಲ್ಕಣ್ಮದು ಗಾಳಿ ಸೂರ್ಯಕಿರಣಾನೀಕಕ್ಕಮೆಂದಪ್ಪೊಡಂ|
ಸಲವಿಲ್ಲುದ್ಧತ ಸಿದ್ಧ ಖೇಚರರೆ ತಾಮಾಳ್ವೇರಿಯಾಗಿಂತು ನಿ
ಚ್ಚಲುಮೋರಂತಿರೆ ಕಾವರೀ ದೊರೆತು ಕಾಪೀ ನಂದನಕ್ಕಿಂದ್ರನಾ|| ೮೧

ಉ|| ಒಮ್ಮೆ ತೊೞಲ್ದು ನೋಡಿ ಬನಮಂ ಮಘವಂ ಶಚಿ ಪೂತ ಚೂತಮಂ
ನೆರ್ಮಿದಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ|
ಸೋರ್ಮುಡಿಯೊಳ್ ತಗುಳ್ಚಿದೊಡೆ ಸೂೞನೆ ಬಾರಿಸಿದಂ ದಲೆಂದೊಡಿಂ
ಕೂರ್ಮೆಯ ಮಾತು ಮೆಚ್ಚುವನಿತರ್ಕೆ ಬಳಾರಿ ಮುರಾಸುರಾರಿಯೇಂ|| ೮೨

ಕಂ|| ಇಂತಪ್ಪ ಬನಮನಿದನಿ
ನ್ನೆಂತನಲನನೂಡಲೆಂದು ಪೂಣ್ದಯ್ ಮುಂ ಪೂ|
ಣ್ದಂತೂಡು ಪೂಡು ಶಿತಶರ
ಸಂತತಿಯಂ ಬಿಲ್ಲೊಳೇಕೆ ನೀಂ ತಡೆದಿರ್ಪಯ್|| ೮೩

ಪರಮಾಣುವನಿತು ಬನದೊಳ್
ಚರಾಚರಂ ಪೋಗೆ ತಣಿಯನನಲನದರ್ಕಾಂ|
ನೆರಮಪ್ಪೆನುಗ್ರ ಕಿನ್ನರ
ಸುರ ದನುಜೋರಗರ ಕದನಮೇಂ ನಿನಗರಿದೇ|| ೮೪

ವ|| ಎಂಬುದುಮಂತೆ ಗೆಯ್ವೆನೆನ್ನ ಸಾಹಸಮಂ ನೋಡಿಮೆಂದು ವಿಕ್ರಾಂತ ತುಂಗನುತ್ತುಂಗ ಭುಜಪರಿಘದೆರಡು ದೆಸೆಯೊಳಂ ತವದೊಣೆಗಳಂ ಬಿಗಿದು ಗಾಂಡೀವಮನೇಱಸಿ ನೀವಿ ಜೇವೊಡೆದು ದಿವ್ಯಾಸ್ತ್ರಂಗಳಂ ಪಿಡಿದು ಕೆಯ್ತೀವಿಕೊಂಡಗ್ನಿದೇವನಂ ನೋಡಿ-

ಉ|| ಓಡುಗೆ ನಿಮ್ಮ ಮೆಯ್ಯ ಪಸಿವಾಂತ ವಿರೋಗಳೆನ್ನ ಕೆಯ್ಯೊಳ
ೞiಡುಗೆ ಕೊಳ್ಳಿಮಣ್ಣಿಮೆನೆ ಕೇಳ್ದನಲಂ ಪರಸುತ್ತಮಾ ಲಯ|
ಕ್ರೀಡೆಯೊಳೀ ಚರಾಚರಮುಮಂ ಸುಡುವಂದಿನ ಮೆಯ್ಗಮಗ್ಗಳಂ
ಮಾಡಿ ತಗುಳ್ದು ನೀಳ್ದು ಬಳೆದರ್ವಿಸೆ ಪರ್ವಿದನಾ ವನಾಂತಮಂ|| ೮೫

೮೧. ಇಲ್ಲಿ ದುಂಬಿಗಳು ಹೂವನ್ನು ನೋಯಿಸದೆ ಮಕರಂದಪಾನಮಾಡುತ್ತವೆ. ಗಾಳಿಯು ನುಗ್ಗಿ ವೇಗವಾಗಿ ಬೀಸುವುದಿಲ್ಲ, ಸೂರ್ಯನ ಕಿರಣಸಮೂಹಗಳೂ ಎಂದೂ ಇಲ್ಲಿಗೆ ಪ್ರವೇಶಿಸುವುದಿಲ್ಲ. ಗರ್ವಿಷ್ಠರಾದ ಸಿದ್ಧಖೇಚರರೇ ರಕ್ಷಕರಾಗಿ ಇದನ್ನು ನಿತ್ಯವೂ ಒಂದೇ ಕ್ರಮದಿಂದ ಕಾಯುತ್ತಿದ್ದಾರೆ. ಇಂದ್ರನ ಖಾಂಡವವನಕ್ಕೆ ರಕ್ಷಣೆ ಈ ರೀತಿಯಾಗಿ ಬಲಿಷ್ಠವಾಗಿದೆ. ೮೨. ಒಂದು ಸಲ ಇಂದ್ರನು ಶಚೀದೇವಿಯೊಡಗೂಡಿ ವನವನ್ನು ಸುತ್ತಾಡಿ ಬರುತ್ತಿದ್ದಾಗ ಹೂವಿನಿಂದ ಕೂಡಿದ ಮಾವಿನ ಮರವನ್ನು ಆಶ್ರಯಿಸಿದ್ದ ಅಶೋಕ ಬಳ್ಳಿಯನ್ನು ನೋಡಿ ಅದರ ಚಿಗುರನ್ನು ಶಚಿಯು ಕೊಯ್ದು ಪ್ರೀತಿಯಿಂದ ತನ್ನ ದೀರ್ಘವಾದ ತುರುಬಿನಲ್ಲಿ ಮುಡಿದುಕೊಳ್ಳಲು ಇಂದ್ರನು ಸೂಳ್ ಎಂದು ಶಬ್ದಮಾಡಿ ತಡೆದನು ಎಂಬುದು ನಿಜ ಎಂದು ಹೇಳುವಾಗ ಆ ವನದ ವಿಷಯದಲ್ಲಿ ಅವನ ಅಭಿಮಾನ ಎಷ್ಟಿರಬೇಕು? ಪ್ರೀತಿಯ ಮಾತನ್ನು ಕೇಳಿ ಮೆಚ್ಚುವುದಕ್ಕೆ ಇಂದ್ರನು ಕೃಷ್ಣನೆಂದು ತಿಳಿದೆಯಾ? ೮೩. ಹೀಗಿರುವ ಈ ವನವನ್ನು ಅಗ್ನಿ ಉಣಲೆಂದು ಹೇಗೆ ಪ್ರತಿಜ್ಞೆ ಮಾಡಿದೆ? ಮೊದಲು ಪ್ರತಿಜ್ಞೆ ಮಾಡಿದ ಹಾಗೆ ಉಣಿಸು, ಏಕೆ ತಡಮಾಡುತ್ತೀಯೆ? ಬಿಲ್ಲಿನಲ್ಲಿ ಹರಿತವಾದ ಬಾಣಸಮೂಹವನ್ನು ಸಂಧಾನಮಾಡು. ೮೪. ಈ ವನದಲ್ಲಿ ಪರಮಾಣುವಷ್ಟು ಚರಾಚರ ಪ್ರಾಣಿಗಳು ಹೊರಗೆ ಹೋದರೂ ಅಗ್ನಿಯು ತೃಪ್ತಿಪಡಲಾರ. ಅದಕ್ಕೆ ನಾನು ಸಹಾಯಕನಾಗಿದ್ದೇನೆ. ಭಯಂಕರರಾದ ಕಿನ್ನರರು, ದೇವತೆಗಳು, ರಾಕ್ಷಸರು, ನಾಗರು ಇವರೊಡನೆ ಯುದ್ಧ ಮಾಡುವುದು ನಿನಗೆ ಅಸಾಧ್ಯವೇ? ವ|| ಅರ್ಜುನನು ಹಾಗೆಯೇ ಮಾಡುತ್ತೇನೆಂದನು. ನನ್ನ ಪರಾಕ್ರಮವನ್ನು ನೋಡಿ ಎಂದು ಉತ್ತಮಪರಾಕ್ರಮಿಯಾದ ಅರ್ಜುನನು ತನ್ನ ಎತ್ತರವಾದ ಗದೆಯಂತಿರುವ ಎರಡು ಭುಜಗಳಲ್ಲಿಯೂ ಅಕ್ಷಯತೂಣೀರಗಳನ್ನು ಬಿಗಿದುಕೊಂಡು ಗಾಂಡೀವವೆಂಬ ಬಿಲ್ಲಿಗೆ ಹೆದೆಯೇರಿಸಿ ನೀವಿ ಜಡಿದು ಶಬ್ದಮಾಡಿನೋಡಿ ದಿವ್ಯಾಸ್ತ್ರಗಳನ್ನು ಕಯ್ಯಲ್ಲಿ ಹಿಡಿದು ಅಗ್ನಿದೇವನನ್ನು ನೋಡಿ- ೮೫. ನಿಮ್ಮ ಶರೀರದ ಹಸಿವು ಓಡಲಿ; ಪ್ರತಿಭಟಿಸಿದ ನಿಮ್ಮ ಶತ್ರುಗಳು ನಮ್ಮ ಕಯ್ಯಲ್ಲಿ ನಾಶವಾಗಲಿ; ತೆಗೆದುಕೊಳ್ಳಿ, ಉಣ್ಣಿ ಎನ್ನಲು ಅವರನ್ನು ಹರಸುತ್ತ ಪ್ರಳಯಕಾಲದಲ್ಲಿ ಈ ಚರಾಚರವನ್ನೆಲ್ಲ ಸುಡುವ ಅಂದಿನ ಶರೀರವನ್ನೂ

ಮ|| ಫಳ ಕರ್ಪೂರ ಲವಂಗ ಲುಂಗ ಲವಳೀ ಹಿಂತಾಳ ತಾಳೀ ತಮಾ
ಳ ಳತಾ ಸುಂದರ ನಂದನಕ್ಕಳುರೆ ಮುಂ ತನ್ನರ್ಚಿಗಳ್ ಬಂದು ಮೊ|
ಕ್ಕಳಮೆತ್ತಂ ಸುರಿಯುತ್ತುಮಿರ್ಪ ರಸಮಂ ಮುಂ ಪೀರ್ದುಕೊಂಡಂ ಮನಂ
ಗೊಳೆ ಸಪ್ತಾರ್ಚಿ ಪೊದಳ್ದು ನೀಳ್ದೊಸಗೆಯಿಂದಾಪೋಶನಂಗೊಳ್ವವೋಳ್|| ೮೬

ಕಂ|| ನನೆಕೊನೆಯ ತಳಿರ ಪೂವಿನ
ಬನಮನಿತುಂ ಶಿಖಿಗಳಳುರೆ ಬೆಂಕೆಯ ಪೊಯ್ದು|
ರ್ವಿನೊಳೆ ಕೊರಗಿರ್ದ ಲತೆಗಳ
ಕೊನೆಗೊನೆಯನೆ ದಹನನಳುರ್ದು ಕೊನೆಗೊನೆಗೊಂಡಂ|| ೮೭

ವ|| ಆಗಳಾ ಬನಮನಿಂದ್ರನ ಬೆಸದೊಳ್ ಕಾವ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಬಲಮನಿತುಮೊಂದಾಗಿ ವಿಕ್ರಮಾರ್ಜುನನೊಳ್ ತಾಗೆ-

ಕಂ|| ಕೊಂಡಪುದುರಿ ಬನಮನದಂ
ಕಂಡೆಂತಿರಲಕ್ಕುಮೆಂದು ತಾಗಿದ ನೆಗೞ್ದೊ|
ಳ್ಗಂಡರ ಗಂಡೋಡುವಿನಂ
ಕೊಂಡುವು ಗಾಂಡೀವಮುಕ್ತ ಬಾಣಗಣಂಗಳ್|| ೮೮

ವ|| ಅಂತು ಕಾದೆ ವಿದ್ವಿಷ್ಟವಿದ್ರಾವಣನ ಮೊನೆಯಂಬಿನಂಬೇಱಂಗಳ್ಕಿ ಹತವಿಹೆತ ಕೋಳಾಹಳರಾಗಿ ಸಿದ್ಧರಸಿದ್ಧರಾಗೆಯುಂ ಕಿನ್ನರರಿನ್ನಾರ ಮಯಂ ಪುಗುವಮೆನೆಯುಂ ಕಿ ಪುರುಷರ್ ಕಾಪುರುಷರಂತೆ ಬಾಯಂ ಬಿಡೆಯುಂ ಗಂಧರ್ವರ್ ಗರ್ವಮನುೞ ದೊಂದೊರ್ವರುಂ ಮಿಗೆಯೋಡೆಯುಂ ವಿದ್ಯಾಧರರಧರರಾಗೆಯುಂ ಪನ್ನಗರ್ ಪನ್ನತಿಕೆಯಿಂ ಬಂದಾಂತೊಡೆ-

ಕಂ|| ನಾಗರ ಖಂಡಂಗಳನಾ
ನಾಗರ ಖಂಡದೊಳೆ ತೊಡರೆ ನರನಿಸುವುದುಮಾ|
ನಾಗರ ಖಂಡಂಗಳುಮಂ
ನಾಗರ ಖಂಡಮುಮನಳುರ್ದು ಕೊಂಡಂ ದಹನಂ|| ೮೯

ವಿರಹಿಗಳ ಸುಯ್ಯ ಬೆಂಕೆಯೊ
ಳಿರದೊಣಗಿದುವಕ್ಕುವಿಗಳೆನಲುರಿವುರಿಯಿಂ|
ಕರಿಮುರಿಕನಾದುವುನ್ಮದ
ಪರಭೃತ ಷಟ್ಚರಣ ರಾಜಕೀರಕುಲಂಗಳ್|| ೯೦

ಮೀರಿದ ಆಕಾರವನ್ನು ಧರಿಸಿ ನೀಳವಾಗಿ ಬೆಳೆದು ಸುಡುವುದಕ್ಕಾಗಿ ಆ ವನದ ಒಳಭಾಗವನ್ನೆಲ್ಲ ಆಕ್ರಮಿಸಿದನು. ೮೬. ಫಲಿಸಿರುವ ಕರ್ಪೂರ, ಲವಂಗ, ಮಾದಲ, ಅರನೆಲ್ಲಿ, ಹಿಂತಾಳ, ತಾಳೆ, ಹೊಂಗೆಯಬಳ್ಳಿ ಇವುಗಳಿಂದ ಸುಂದರವಾಗಿದ್ದ ವನವನ್ನು ಮೊದಲೇ ತನ್ನ ಉರಿಯ ಜ್ವಾಲೆಗಳು ಹರಡಿರಲು ಮುಂದುವರಿದು ದೀರ್ಘವಾಗಿ ಬೆಳೆದು ಸಂತೋಷದಿಂದ ಆಪೋಶನವನ್ನು ತೆಗೆದುಕೊಳ್ಳುವ ಹಾಗೆ ವಿಶೇಷವಾಗಿ ಸುರಿಯುತ್ತಿರುವ ಮರದ ರಸವನ್ನು ಅಗ್ನಿಯು ತೃಪ್ತಿಯಾಗುವಷ್ಟು ಹೀರಿದನು. ೮೭. ಮೊಗ್ಗಿನ, ಟಿಸಿಲಿನ, ಚಿಗುರಿನ, ಹೂವಿನ ಆ ವನವನ್ನೆಲ್ಲ ಬೆಂಕಿಯ ಜ್ವಾಲೆಗಳು ವ್ಯಾಪಿಸಲು ಬೆಂಕಿಯು ಹೊಡೆದ ರಭಸದಲ್ಲಿಯೇ ಬಾಡಿದ ಬಳ್ಳಿಗಳ ಕವಲು ಕವಲುಗಳನ್ನೇ ಅಗ್ನಿಯು ಸುಟ್ಟು ತುತ್ತತುದಿಯನ್ನೂ ಆಕ್ರಮಿಸಿದನು. ವ|| ಆಗ ಅವನನ್ನು ಇಂದ್ರನ ಆಜ್ಞೆಯಂತೆ ರಕ್ಷಿಸುತ್ತಿದ್ದ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಸೈನ್ಯವಷ್ಟೂ ಒಂದಾಗಿ ವಿಕ್ರಮಾರ್ಜುನನನ್ನು ಬಂದು ತಾಗಿದುವು.

೮೮. ಬೆಂಕಿಯು ವನವನ್ನು ಸುಡುತ್ತಿದೆ. ಅದನ್ನು ನೋಡಿಯೂ ಹೇಗೆ ಸುಮ್ಮನಿರುವುದು ಎಂದು ಪ್ರತಿಭಟಿಸಿದ ಪ್ರಸಿದ್ಧವಾದ ಶೂರರ ಪೌರುಷವು ಪಲಾಯನ ಮಾಡುವ ಹಾಗೆ ಗಾಂಡೀವದಿಂದ ಬಿಡಲ್ಪಟ್ಟ ಬಾಣಸಮೂಹಗಳು ಅವರನ್ನು ಆಹುತಿಗೊಂಡವು. ವ|| ಹಾಗೆ ಕಾದಲು ವಿದ್ರಾವಣನ ಮೊನಚಾದ ಬಾಣದ ಬಿಲ್ಲಿನ ಯುದ್ಧದ ನಾನಾ ವಿಧವಾದ ಹೊಡೆತ ಮರುಹೊಡೆತಗಳ ಕೋಲಾಹಲದಲ್ಲಿ ಸಿದ್ಧರು ಸಿದ್ಧತೆಯಿಲ್ಲದವರಾದರು, ಕಿನ್ನರರು ಇನ್ನು ಯಾರ ಮರೆಯನ್ನು ಹೋಗೋಣವೆಂದು ಯೋಚಿಸಿದರು, ಕಿಂಪುರುಷರು ಅಲ್ಪಮನುಷ್ಯರಂತೆ ಹಾಹಾಕಾರಪಟ್ಟರು. ಗಂಧರ್ವರು ತಮ್ಮ ಆತ್ಮಗರ್ವವನ್ನು ಬಿಟ್ಟು ಒಬ್ಬೊಬ್ಬರನ್ನೂ ಮೀರಿಸಿ ಓಡಿದರು. ವಿದ್ಯಾಧರರು ತಿರಸ್ಕೃತರಾದರು. ಪನ್ನಗರು ಪರಾಕ್ರಮದಿಂದ ಬಂದು ಎದುರಿಸಿದರು. ೮೯. ಅಲ್ಲಿ ಬೆಳೆದ ಹಸಿಯ ಶುಂಠಿಯ ಚೂರುಗಳೂ ಆ ಸರ್ಪಗಳ ಚೂರುಗಳಲ್ಲಿಯೇ ಸಿಕ್ಕಿಕೊಳ್ಳುವಂತೆ ಅರ್ಜುನನು ಬಾಣಪ್ರಯೋಗ ಮಾಡಲು ಆ ಹಸಿರು ಶುಂಠಿಯ ಚೂರುಗಳನ್ನೂ ಸರ್ಪಗಳ ಚೂರುಗಳನ್ನೂ ಅಗ್ನಿಯು ವ್ಯಾಪಿಸಿ ಸುಟ್ಟನು. ೯೦. ಮದಿಸಿದ ಕೋಗಿಲೆ ದುಂಬಿ ಮತ್ತು ಅರಗಿಳಿಗಳ ಸಮೂಹಗಳು

ಉರಿ ಕೊಳೆ ದೆಸೆಗಾಣದೆ ದೆಸೆ
ವರಿವರಿದು ಕುಜಂಗಳಂ ಪಡಲ್ವಡಿಸಿ ಭಯಂ|
ಬೆರಸೊಳ ನೆಗೆದುದಾ ವನ
ಕರಿ ಶರಭ ಕಿಶೋರ ಕಂಠಗರ್ಜನೆ ಬನದೊಳ್|| ೯೧

ಸಂಗತ ಧೂಮಾವಳಿಯನಿ
ಭಂಗಳೆ ಗೆತ್ತೊಳಱ ಪಾಯ್ದು ಪೊಗೆ ಪುಗೆ ಕಣ್ಣಂ|
ಸಿಂಗಂಗಳಳುರೆ ಗರ್ಜಿಸಿ
ಲಂಗಿಸಿ ಪುಡಪುಡನೆ ಪುೞ ಸತ್ತುವು ಪಲವುಂ|| ೯೨

ವ|| ಮತ್ತಮಲ್ಲಿ ಕೆಲವು ಲತಾಗೃಹಂಗಳೊಳಂ ಧಾರಾಗೃಹಂಗಳೊಳಂ-

ಕಂ|| ಒಡನಳುರೆ ಕಿರ್ಚು ತೋಳಂ
ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ|
ದೊಡಗಳೆದರೋಪರೋಪರೊ
ಳೊಡಸಾಯಲ್ ಪಡೆದರಿನ್ನವುಂ ಸಯ್ಪೊಳವೇ|| ೯೩

ವ|| ಅಂತು ಖಾಂಡವವನಮೆಲ್ಲಮನನಲಂ ಪ್ರಳಯಕಾಳಾನಳನಂತಳುರ್ದು ಕೊಳೆ ಬಳಸಿ ಬಂದು ಕಾವ ನಾರಾಯಣನ ಸುದರ್ಶನಮೆಂಬ ಚಕ್ರದ ಕೋಳುಮಂ ವಿಕ್ರಮಾರ್ಜುನನ ದಿವ್ಯಾಸ್ತ್ರಂಗಳ ಕೋಳುಮನಗ್ನಿದೇವನ ಶಿಖಾಕಳಾಪದ ಕೋಳುಮನೆಂತಾನುಂ ಬಂಚಿಸಿ ಬಲೆ ಪಱದ ಕೋಕನಂತೊರ್ವ ವನಪಾಲಕಂ ಪೋಗಿ ದೇವೇಂದ್ರನಂ ಕಂಡು-

ಮಲ್ಲಿಕಾಮಾಲೆ|| ದೇವ ಬಿನ್ನಪಮಿಂದು ಖಾಂಡವಮಂ ಕೃಶಾನು ತಗುಳ್ದು ನಾ
ನಾ ವಿಧಂ ಸುಡೆ ನೋಡಲಾರದೆ ತಳ್ತ ದೇವರ ಕಾಪಿನಾಳ್|
ದೇವ ಕಿನ್ನರ ಪನ್ನಗಾವಳಿ ಮೊಟ್ಟನಪ್ಪಿನಮೆಚ್ಚು ಕೊಂ
ದೇವರೆಂದಱದಿರ್ದನೊರ್ವನಗುರ್ವು ಪರ್ವಿರೆ ದೇವರಂ|| ೯೪

ಕಂ|| ಎರಡು ರಥಮೊಳವು ನೋಟ
ಕ್ಕೆರಡಳವನೊಂದು ರಥಮೆ ತೋಟಿಗೆ ಪಲವಾ|
ಗಿರೆ ಪರಿದು ಕಣ್ಣೊಳಿನ್ನುಂ
ತಿರಿದಪುದುರಿದಪುದು ನಮ್ಮ ಬನಮೆನಿತನಿತುಂ|| ೯೫

ತಮ್ಮನ್ನು ಅಗಲಿದ ಪ್ರೇಮಿಗಳ ಬಿಸಿಯುಸಿರಿನ ಬೆಂಕಿಯಲ್ಲಿ ಒಣಗಿದುವೋ ಎನ್ನುವ ಹಾಗೆ ಉರಿಯುವ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಿಮುರುಕಾದುವು. ೯೧. ಬೆಂಕಿಯು ಆಕ್ರಮಿಸಲು ಏನುಮಾಡಬೇಕೆಂದು ತೋಚದೆ ದಿಕ್ಕುದಿಕ್ಕಿಗೆ ಓಡಿ ಮರಗಳನ್ನು ಕೆಳಗುರುಳಿಸಿ ಭಯದಿಂದ ಕೂಗಿಕೊಳ್ಳಲು ಕಾಡಾನೆಯ ಶರಭಗಳ ಮರಿಗಳ ಕೊರಳ ಗರ್ಜನೆ ಆ ಕಾಡಿನಲ್ಲಿ ಚಿಮ್ಮಿ ಹಾರಿದುವು. ೯೨. ಒಟ್ಟಾದ ಹೊಗೆಯ ಸಮೂಹವನ್ನು ಆನೆಯೆಂದು ಭ್ರಾಂತಿಸಿ ಸಿಂಹಗಳು ಕೂಗಿಕೊಂಡವು. ಮೇಲೆ ಹಾಯ್ದು ಹೊಗೆಯು ಕಣ್ಣನ್ನು ವ್ಯಾಪಿಸಲು ಗರ್ಜನೆಮಾಡಿ ನೆಗೆದು ಪುಡಪುಡನೆ ಸುಟ್ಟು ಸತ್ತುಹೋದವು. ವ|| ಅಲ್ಲಿಯ ಕೆಲವು ಬಳ್ಳಿ ಮನೆಯಲ್ಲಿಯೂ ಧಾರಾಗೃಹಗಳಲ್ಲಿಯೂ ೯೩. ಉರಿಯು ತಮ್ಮನ್ನು ಒಟ್ಟಿಗೆ ಸುಡಲು ತಮ್ಮ ತೋಳುಗಳನ್ನು ಸಡಿಲಿಸಿದೆ ಆ ಪ್ರಿಯಪ್ರೇಯಸಿಯರು ಜೊತೆಯಲ್ಲಿಯೇ ಪ್ರಾಣವನ್ನು ಕಳೆದರು. ಪ್ರಿಯರು ಪ್ರಿಯರೊಡನೆ ಸಾಯುವ ಅದೃಷ್ಟವನ್ನು ಪಡೆದರು. ಇದಕ್ಕಿಂತ ಬೇರೆ ಅದೃಷ್ಟವೂ ಉಂಟೇ? ವ|| ಹೀಗೆ ಖಾಂಡವವನವೆಲ್ಲವನ್ನೂ ಅಗ್ನಿಯು ಪ್ರಳಯಕಾಲದ ಬೆಂಕಿಯಂತೆ ಸುಟ್ಟು ತಾನು ಭುಂಜಿಸುತ್ತಿರಲು ಸುತ್ತಲೂ ಬಳಸಿ ಬಂದು ರಕ್ಷಣೆ ಮಾಡುತ್ತಿರುವ ಕೃಷ್ಣನ ಸುದರ್ಶನವೆಂಬ ಚಕ್ರದ ಆಕ್ರಮಣವನ್ನೂ ವಿಕ್ರಮಾರ್ಜುನನ ದಿವ್ಯಾಸ್ತ್ರಗಳ ಆಕ್ರಮಣವನ್ನೂ ಅಗ್ನಿದೇವನ ಜ್ವಾಲೆಗಳ ಸಮೂಹದ ಆಕ್ರಮಣವನ್ನೂ ಹೇಗೋ ವಂಚಿಸಿ ಬಲೆಯಿಂದ ತಪ್ಪಿಸಿಕೊಂಡ ಕೋಕಪಕ್ಷಿಯಂತೆ ಆ ತೋಟದ ಕಾವಲುಗಾರನೊಬ್ಬನು ಹೋಗಿ ದೇವೇಂದ್ರನನ್ನು ಕಂಡು- ೯೪. ಸ್ವಾಮಿ ವಿಜ್ಞಾಪನೆ, ಈ ದಿನ ಖಾಂಡವವನವನ್ನು ಅಗ್ನಿಯು ವ್ಯಾಪಿಸಿ ನಾನಾ ರೀತಿಯಾಗಿ ಸುಡಲು ನೋಡಲಾರದೆ ಎದುರಿಸಿದ ಸ್ವಾಮಿಯ ಕಾವಲುಗಾರರಾದ ದೇವ ಕಿನ್ನರ ಪನ್ನಗಾವಳಿಯನ್ನು ನಾಶವಾಗುವ ಹಾಗೆ ಹೊಡೆದು ಕೊಂದು ಪ್ರಭುವಾದ ನಿಮ್ಮನ್ನು ‘ಏನು ಮಾಡಬಲ್ಲರವರು’ ಎಂದು ಅಹಂಕಾರಮಗ್ನನಾಗಿ ನಿಂತಿದ್ದಾನೆ.

೯೫. ನೋಟಕ್ಕೆ ಎರಡು ರಥಗಳಿವೆ. ಅದರಲ್ಲಿ ಒಂದು ರಥವೇ ಯುದ್ಧದಲ್ಲಿ ಅನೇಕ ರಥವಾಗಿರುವಂತೆ ಹರಿದು ಇನ್ನೂ ಕಣ್ಣಿನಲ್ಲಿ

ವ|| ಎಂಬುದುಂ ಪೌಳೋವಿ ಪತಿ ತನ್ನ ದಿವ್ಯಜ್ಞಾನದೊಳ್ ನೋಡಿ ಚಕ್ರಿಯುಂ ವಿಕ್ರಮಾರ್ಜುನನುಮಪ್ಪುದನಱದು ಗಜಱ ಗರ್ಜಿಸಿ ವಿಳಯ ಕಾಳಾಂಬುದದಂತೆ ಮೊೞಗುಮಂ ಸಿಡಿಲ ಬಳಗಮನೊಳಕೊಂಡ ದ್ರೋಣ ಮಹಾದ್ರೋಣ ಪುಷ್ಕಳಾವರ್ತ ಸುವರ್ತಕಂಗಳೆಂಬ ಮುಗಿಲ್ಗಳಂ ಬೆಸಸಿದಾಗಳವು ವಿಂಧ್ಯಾಚಳಕೂಟ ಕೋಟಿಗಳೆ ಕಿೞ್ತೆೞ್ದುಬರ್ಪಂತೆ ಬಂದು ದೆಸೆಗಳೆಲ್ಲಮಂ ಮುಸುರಿ ಕೞ್ತಲಿಸಿ ಕವಿದು-

ಚಂ|| ಕವಿದುವು ಸಪ್ತಸಾಗರ ಜಲಂಗಳೆ ಲೋಕಮನೀಗಳೆಂಬಿನಂ
ಕವಿದು ಮುಗಿಲ್ಗಳಲ್ಲಿ ಕಯುತ್ತಿರೆ ಪಾವಕನುರ್ಕುಗೆಟ್ಟಿದೆಂ|
ತುವೊ ತೊದಳಾಯ್ತು ದಾನಮೆನೆ ಮಾರುತಬಾಣದೆ ಮೇಘಮಾಲಿಕಾ
ನಿವಹಮನೆಚ್ಚು ಕೂಡೆ ಶರಪಂಜರಮಂ ಪಡೆದಂ ಗುಣಾರ್ಣವಂ|| ೯೬

ವ|| ಅಂತು ಪುಂಖಾನುಪುಂಖಮಾಗೆ ಪಾಯ್ವ ಶರಸಂಧಾನದೊಳೆಡೆವಱಯದಂತೆರಡುಂ ಕೆಯ್ಯೊಳ್ ತೋಡುಂ ಬೀಡುಂ ಕಾಣಲಾಗದಂತಿಸೆ ತುಱುಗಿ ಕವಿವಂಬಿನ ಮೞೆಯೆ ಮೞೆಯಂ ಮಾಣಿಸೆ ದಿವ್ಯಾಸ್ತ್ರಂಗಳಿಂ ನೂಱು ಯೋಜನದಳವಿಯ ಖಾಂಡವವನವೆಲ್ಲಮಂ ತಟ್ಟಿ ಮೆಡಱ ಮಶಕ ಮಾತ್ರಮಪ್ಪೊಡಂ ಮಿಸುಕಲ್ ಛಿದ್ರಮಿಲ್ಲದಂತಾಗೆ ಶರಪಂಜರದೊಳ್ ಮುಚ್ಚಿ ಮುಸುಕಿದಾಗಳಭಿನವ ಜೀಮೂತವಾಹನನ ದಿವ್ಯಾಸ್ತ್ರದ ಕೋಳ್ಗಿರಲಾಱದೆ ಜೀಮೂತಂಗಳೆಲ್ಲಂ ತೆರಳ್ಪೋಡಿದೊಡಗ್ನಿದೇವನಾವಗೆಯ ಕಿರ್ಚಿನಂತೊಳಗೊಳಗಳುರ್ದು

ಕಂ|| ವನ ಖಗ ಮೃಗ ವನ ತರು
ವನಚರ ವನ ವನಜ ನಿವಹಮುಳ್ಳನಿತುಂ ಸೀ|
ರನಿತುಮಣಮುೞದುದಿಲ್ಲೆಂ
ಬಿನಮುಂಡಂ ದಹನನಳುರ್ದು ಖಾಂಡವವನಮಂ|| ೯೭

ವ|| ಅಂತಾ ವನಗಹನಮೆಲ್ಲಂ ದಹನಮಯವಾದ ಪ್ರಸ್ತಾವದೊಳ್ ವಿಸ್ಮಯಮಾಗೆಮಯನೆಂಬ ದಾನವವಿಶ್ವಕರ್ಮಂ ನೆಗೆದುರಿವುರಿಮಾಲೆಗಳಂ ಗದೆಯೊಳ್ ಬೀಸುತ್ತುಂ ಪೊಱಮಡೆ ಪೊಱಮಡಲೀಯದೆ-

ಕಂ|| ಒಂದು ದೆಸೆಯೊಳ್ ತಗುಳ್ವ ಮು
ಕುಂದನ ಕರಚಕ್ರಮೊಂದು ದೆಸೆಯೊಳ್ ನರನೆ|
ಚ್ಚೊಂದು ಶರಮೊಂದು ದೆಸೆಯೊಳ್
ಕುಂದದೆ ದಹನಾರ್ಚಿ ಸುತ್ತಿ ಮುತ್ತುವ ಪದದೊಳ್|| ೯೮

ತಿರುಗುತ್ತದೆ. ನಮ್ಮ ತೋಟವೆಷ್ಟಿತ್ತೊ ಅಷ್ಟೂ ಉರಿಯುತ್ತಿದೆ. ವ|| ಎಂದು ಹೇಳಲು ಶಚೀಪತಿಯಾದ ಇಂದ್ರನು ತನ್ನ ದಿವ್ಯಜ್ಞಾನದಿಂದ ನೋಡಿ ಅವರಿಬ್ಬರೂ ಶ್ರೀಕೃಷ್ಣಾರ್ಜುನರಾಗಿದ್ದುದನ್ನು ತಿಳಿದು ರೇಗಿ ಗರ್ಜಿಸಿ ಪ್ರಳಯಕಾಲದ ಮೋಡದಂತೆ ಗುಡುಗು ಸಿಡಿಲುಗಳ ಸಮೂಹವನ್ನೊಳಗೊಂಡ ದ್ರೋಣ, ಮಹಾದ್ರೋಣ, ಪುಷ್ಕಳಾವರ್ತ, ಸಂವರ್ತಕಗಳೆಂಬ ಮೋಡಗಳಿಗೆ ಅಗ್ನಿಯನ್ನು ನಾಶಪಡಿಸಲು ಆಜ್ಞೆಮಾಡಿದನು. ಅವು ವಿಂಧ್ಯಪರ್ವತದ ಕೋಟ್ಯಂತರ ಶಿಖರಗಳೇ ಕಿತ್ತೆದ್ದು ಬರುವ ಹಾಗೆ ಬಂದು ದಿಕ್ಕುಗಳೆಲ್ಲವನ್ನೂ ಮುಸುಕಿ ಕತ್ತಲಿಸಿ ಕವಿದು- ೯೬. ಲೋಕವನ್ನೆಲ್ಲ ಏಳುಸಾಗರಗಳ ನೀರುಗಳೇ ಮುಚ್ಚಿಕೊಂಡವೊ ಎನ್ನುವ ಹಾಗೆ ಮೋಡಗಳು ಮಳೆಯನ್ನು ಸುರಿಸಿದುವು. ಅಗ್ನಿಯು ಶಕ್ತಿಗುಂದಿ ಹೇಗೋ ದಾನವು ಸುಳ್ಳಾಯಿತು ಎನ್ನಲು ಅರ್ಜುನನು ವಾಯವ್ಯಾಸ್ತ್ರದಿಂದ ಮೇಘಮಾಲೆಗಳ ಸಮೂಹವನ್ನು ಹೊಡೆದೋಡಿಸಿ ತಕ್ಷಣವೇ ಒಂದು ಬಾಣದ ಪಂಜರವನ್ನು ನಿರ್ಮಿಸಿದನು. ವ|| ಪುಂಖಾನುಪುಂಖವಾಗಿ ತೋಡುಬೀಡುಗಳು ಕಾಣದಷ್ಟು ವೇಗದಿಂದ ಎರಡು ಕೈಗಳಿಂದಲೂ ಏಕಪ್ರಕಾರವಾಗಿ ಪ್ರಯೋಗಮಾಡಿದ ಬಾಣಗಳಿಂದ ಮಳೆಯನ್ನು ಅರ್ಜುನನ್ನು ನಿಲ್ಲಿಸಿದನು. ದಿವ್ಯಾಸ್ತ್ರದಿಂದ ನೂರುಯೋಜನವಿಸ್ತಾರವುಳ್ಳ ಖಾಂಡವವನವೆಲ್ಲವನ್ನೂ ತಟ್ಟಿಯ ಹಾಗೆ ಹೆಣೆದು ಸೊಳ್ಳೆಯಂತಹ ಪ್ರಾಣಿಯೂ ಚಲಿಸಲು ರಂಧ್ರವಿಲ್ಲದ ಹಾಗೆ ಬಾಣದ ಪಂಜರದಲ್ಲಿ ಮುಚ್ಚಿ ಮುಸುಕಿದನು. ಅಭಿನವ ಜೀಮೂತವಾಹನನಾದ ಅರ್ಜುನನ ದಿವ್ಯಾಸ್ತ್ರದ ಆಕ್ರಮಣವನ್ನು ಸಹಿಸಲಾರದೆ ಮೋಡಗಳೆಲ್ಲವೂ ಚಲಿಸಿ ಹೋದವು. ಅಗ್ನಿದೇವನು ಕುಂಬಾರರ ಆವಿಗೆಯ ಬೆಂಕಿಯಂತೆ ಒಳಗೊಳಗೇ ವ್ಯಾಪಿಸಿ ಸುಟ್ಟನು- ೯೭. ಕಾಡಿನಪಕ್ಷಿ, ಮೃಗ, ಮರ, ಪ್ರಾಣಿ, ತಾವರೆಗಳ ಸಮೂಹದಲ್ಲಿ ಒಂದು ಸಣ್ಣ ನೀರಿನಷ್ಟೂ ಉಳಿಯಲಿಲ್ಲವೆನ್ನುವ ಹಾಗೆ ಅಗ್ನಿಯು ವ್ಯಾಪಿಸಿ ಖಾಂಡವನವನ್ನೆಲ್ಲ ತಿಂದು ಬಿಟ್ಟನು. ವ|| ಹಾಗೆ ಆ ವನಪ್ರದೇಶವೆಲ್ಲ ಉರಿಗೆ ಅನವಾದ ಸಂದರ್ಭದಲ್ಲಿ ಆಶ್ಚರ್ಯವಾಗುವ ಹಾಗೆ ಮಯನೆಂಬ ರಾಕ್ಷಸ ಶಿಲ್ಪಿಯು ಮೇಲೆದ್ದು ಹಾರಿ ಚಿಮ್ಮುತ್ತಿದ್ದ ಜ್ವಾಲೆಗಳ ಸಮೂಹಗಳನ್ನು ತನ್ನ ಗದೆಯಿಂದ ಬೀಸುತ್ತ ಹೊರಗೆ ಬಂದನು. ಅದಕ್ಕೆ ಅವಕಾಶಕೊಡದೆ- ೯೮. ಒಂದು ಕಡೆ ಅಟ್ಟಿಬರುವ ಕೃಷ್ಣನ ಕಯ್ಯ ಸುದರ್ಶನಚಕ್ರವೂ ಮತ್ತೊಂದು ಕಡೆ ಅರ್ಜುನನು ಹೂಡಿದ ಬಾಣವೂ ಬೇರೊಂದೆಡೆಯಲ್ಲಿ ಸ್ವಲ್ಪವೂ ಕಡಿಮೆಯಾಗದ

ಶರಣಕ್ಕೆನಗರಿಕೇಸರಿ
ಯೆರಡು ಪದಾಂಬುಜಮುವಿಗಳೆಂಬುದಮಾಗಳ್|
ಹರಿ ಚಕ್ರಂ ಕೊಳ್ಳದೆ ನರ
ಶರಮುರ್ಚದೆ ದಹನಶಿಖೆಗಳಳುರದೆ ಅವನಂ|| ೯೯

ವ|| ಆಗಳ್ ಮಯಂ ವಿಸ್ಮಯಂಬಟ್ಟು ಪೊಡವಟ್ಟು ಪೋದನಾಗಳಾ ವನಾಂತರಾಳದೊಳಿರ್ಪ ತಕ್ಷಕನ ಮಗನಪ್ಪಶ್ವಸೇನನೆಂಬ ಪನ್ನಗಂ ತನ್ನ ತಾಯಂ ತನ್ನ ಬಾಲಮಂ ಕರ್ಚಲ್ವೇೞ್ದು ದಹನಾರ್ಚಿಗಳಿಂ ಬರ್ದುಂಕಿ ನೆಗೆದು ಪಾಱುವಾಗಳದನೆರೞ್ಖಂಡಮಪ್ಪಿನಮಾಖಂಡಳ ತನಯನಿಸುವುದುಂ ತನ್ನ ಬಾಲಂಬೆರಸುರಿಯೊಳ್ ಬಿೞ್ದು ಮಿಡುಮಿಡುಮಿಡುಕುತಿರ್ದ ಜನನಿಯಂ ಕಂಡು ಪಾವುಗಳುಳ್ಳ ಪಗೆಯಂ ಮಯವೆಂಬುದಂ ನನ್ನಿಮಾಡಿ-

ಕಂ|| ಪಗೆ ಸಾಱುವುದುಂ ಕೊಲ್ಲೆಂ
ಪದೆ ಸಾಱದ ನಿನ್ನನಾರ ಮಯಂ ಪೊಕ್ಕುಂ|
ಪಗೆಯಂ ನೆಱಪೆನೆ ನೆಱಪುವ
ಬಗೆಯೊಳೆ ಪೊಕ್ಕಂ ಕಡಂಗಿ ಕರ್ಣನ ದೊಣೆಯಂ|| ೧೦೦

ವ|| ಅಂತಶ್ವಸೇನನರ್ಧಾವಲಿಕಮೆಂಬಮೋಘಾಸ್ತ್ರಮಾಗಿ ಕರ್ಣನ ದೊಣೆಯೊಳಿರ್ದನಿತ್ತ ಖಾಂಡವವನದೊಳಗೆ ಮಂದಪಾಲನೆಂಬ ಮುನಿಗಮೊಂದು ಲಾವಗೆಗಂ ಪುಟ್ಟಿದ ನಾಲ್ಕುಂ ಲಾವಗೆಗಳಗ್ನಿಸೂಕ್ತಂಗಳನೋದುತ್ತುಮದಿರದಿದಿರಂ ಬರೆ ಮೆಚ್ಚಿ ಬರವನಗ್ನಿದೇವಂ ಬೇಡಿಕೊಳ್ಳಿಮೆಂದೊಡೆಮ್ಮನ್ವಯಕ್ಕೆ ನೀನ್ ತಣ್ಣಿದೆಯಾಗೆಂದು ಬೇಡುವುದುಂ ತದಸ್ತುವೆಂದನಿತ್ತಲಿಂದ್ರಂ ತನ್ನ ಬಲಮೆಲ್ಲಮಳ್ಕಿಮೆಳ್ಕಿ ದಂತಾದುದೆಂಬುದಂ ಕೇಳ್ದು-

ಚಂ|| ಮಗನೆನಗೆಂದು ಪೇೞು ಪಿಡಿದು ಕಟ್ಟದೆ ಮಾಣ್ಬೆನೆ ಪಾರ್ಥನಂ ಧರಿ
ತ್ತಿಗೆ ಗುರುವೆಂದು ವಜ್ರದೊಳುರುಳ್ಚದೆ ಮಾಣ್ಬೆನೆ ಚಕ್ರಿಯಂ ಕರಂ|
ಬಗೆಯದೆ ಗೊಡ್ಡಮಾಡಿದರ್ಗೆ ತಕ್ಕುದನೀಗಳೆ ಮಾೞ್ಪೆನೆಂದು ತೊ
ಟ್ಟಗೆ ಪೊಱಮಟ್ಟನೇಱ ನಿಜವಾಹನಮಂ ದಿವದಿಂ ಸುರಾಪಂ|| ೧೦೧

ವ|| ಅಂತು ದೇವನಿಕಾಯಂ ಬೆರಸು ಯುದ್ಧಸನ್ನದ್ಧನಾಗಿ ಪರಸೈನ್ಯ ಭೈರವನೊಳಿಱವೆನೆಂಬ ಪೞುವಗೆಯೊಳ್ ಭೈರವಂಬಾಯ್ವಂತೆ ಬಂದು ನಿಂದ ಪುರಂದರನಲ್ಲಿಗೆ ಸರಸಿಜಸಂಭವಂ ಬಂದು ಮಾರ್ಕೊಂಡು-

ಉರಿಯ ಜ್ವಾಲೆಯೂ ಸುತ್ತಿ ಮುತ್ತಿದುವು. ೯೯. ತಕ್ಷಣವೇ ಮಯನು ‘ಅರಿಕೇಸರಿಯ ಎರಡು ಪಾದಕಮಲಗಳೆ ನನಗೆ ಶರಣು ಎಂದನು. ಒಡನೆಯೇ ಕೃಷ್ಣನ ಸುದರ್ಶನವು ಪ್ರಯೋಗವಾಗದೆ ನಿಂತಿತು. ಅರ್ಜುನನ ಬಾಣಗಳು ಬೇಸಲಿಲ್ಲ. ಅಗ್ನಿಜ್ವಾಲೆಗಳು ಸುಡಲಿಲ್ಲ. ವ|| ಮಯನು ಆಶ್ಚರ್ಯಪಟ್ಟು ನಮಸ್ಕಾರ ಮಾಡಿ ಹೊರಟು ಹೋದನು. ಆಗ ಆ ಕಾಡಿನ ಮಧ್ಯದಲ್ಲಿದ್ದ ತಕ್ಷಕನ ಮಗನಾದ ಅಶ್ವಸೇನನೆಂಬ ಹಾವು ತನ್ನ ತಾಯಿಯನ್ನು ತನ್ನ ಬಾಲವನ್ನು ಕಚ್ಚಿಕೊಳ್ಳುವಂತೆ ಹೇಳಿ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ನೆಗೆದು ಹಾರುವಾಗ ಅದನ್ನು ಇಂದ್ರನಂದನನಾದ ಅರ್ಜುನನು ಎರಡುತುಂಡಾಗುವ ಹಾಗೆ ಹೊಡೆದನು. ಬಾಲದೊಡನೆ ಬೆಂಕಿಯಲ್ಲಿ ಬಿದ್ದು ಮಿಡುಮಿಡುಕುತ್ತಿದ್ದ ತನ್ನ ತಾಯಿಯನ್ನು ಕಂಡು ಕೆರಳಿತು. ಹಾವುಗಳು ತಮ್ಮಲ್ಲಿರುವ ದ್ವೇಷವನ್ನು ಮರೆಯುವುದಿಲ್ಲ ಎಂಬುದನ್ನು ಸತ್ಯವನ್ನಾಗಿ ಮಾಡುವಂತೆ ೧೦೦. ತನ್ನ ಶತ್ರುತ್ವವನ್ನು ಸಾರಿ ಹೇಳಲು ಅರ್ಜುನನು ಅದನ್ನು ಕುರಿತು ‘ದ್ವೇಷವನ್ನು ಸಾರಿದ ನಿನ್ನನ್ನು ಕೊಲ್ಲುವುದಿಲ್ಲ. ಯಾರ ಆಶ್ರಯವನ್ನಾದರೂ ಪಡೆದು ದ್ವೇಷವನ್ನು ತೀರಿಸು’ ಎಂದನು. ಅದನ್ನು ಪೂರೈಸುವ ಮನಸ್ಸಿನಿಂದ ಕೋಪಿಸಿಕೊಂಡು ಕರ್ಣನ ಬತ್ತಳಿಕೆಯನ್ನು ಪ್ರವೇಶಿಸಿದನು. ವ|| ಹಾಗೆ ಅಶ್ವಸೇನನು ಅರ್ಧಾವಲೀಕವೆಂಬ ಅಮೋಘವಾದ ಬಾಣವಾಗಿ ಕರ್ಣನ ಬತ್ತಳಿಕೆಯಲ್ಲಿದ್ದನು. ಈ ಕಡೆ ಖಾಂಡವವನದಲ್ಲಿ ಮದನಪಾಲನೆಂಬ ಋಷಿಗೂ ಒಂದು ಲಾವುಕಪಕ್ಷಿಗೂ ಹುಟ್ಟಿದ ನಾಲ್ಕು ಲಾವುಕಹಕ್ಕಿಗಳು ಅಗ್ನಿಸೂತ್ರಮಂತ್ರಗಳನ್ನು ಜಪಿಸುತ್ತ ಬೆಂಕಿಗೆ ಹೆದರದೆ ಎದುರಾಗಿ ಬರಲು ಅವುಗಳ ಬರುವಿಕೆಗೆ ಸಂತೋಷಪಟ್ಟು ಅಗ್ನಿದೇವನು (ನಿಮಗೆ ಬೇಕಾದ) ವರವನ್ನು ಕೇಳಿಕೊಳ್ಳಿ ಎನ್ನಲು ‘ನಮ್ಮ ವಂಶಕ್ಕೆ ನೀನು ಹಿತವಂತನಾಗು’ ಎಂದು ಬೇಡಿಕೊಂಡವು. ಅಗ್ನಿಯು ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟನು. ಈ ಕಡೆ ಇಂದ್ರನು ತನ್ನ ಬಲವೆಲ್ಲ ನಾಶವಾಗಿ ಸಾರಿಸಿದಂತಾಯಿತೆಂಬುದನ್ನು ಕೇಳಿದನು. ೧೦೧. ‘ನನ್ನ ಮಗನೆಂದು ಅರ್ಜುನನನ್ನು ಹಿಡಿದು ಕಟ್ಟದೆ ಬಿಡುತ್ತೇನೆಯೇ? ಲೋಕಗುರುವೆಂದು ಕೃಷ್ಣನನ್ನು ವಜ್ರಾಯುಧದಿಂದ ಉರುಳಿಸದೆ ಬಿಡುತ್ತೇನೆಯೇ? ನನ್ನನ್ನು ಸ್ವಲ್ಪವೂ ಲಕ್ಷಿಸದೆ ಚೇಷ್ಟೆಮಾಡಿದವರಿಗೆ ಯೋಗ್ಯವಾದುದನ್ನು ಈಗಲೇ ಮಾಡುತ್ತೇನೆ’ ಎಂದು ಇದ್ದಕ್ಕಿದ್ದ ಹಾಗೆ ದೇವೇಂದ್ರನು ತನ್ನ ವಾಹನವಾದ ಐರಾವತವನ್ನು ಹತ್ತಿ ಸ್ವರ್ಗದಿಂದ ಹೊರಟನು. ವ|| ದೇವತೆಗಳ

ಚಂ|| ಬನಮನೆ ಕಾಯಲೆಂದಿಱವೆಯಪ್ಪೊಡೆ ಮುನ್ನಮೆ ಪೋದುದಂದು ಪಾ
ರ್ಥನೊಳೆನಗೇವಮೆಂಬ ಬಗೆಯುಳ್ಳೊಡೆ ನಿನ್ನಯ ಪುತ್ರನಚ್ಯುತಂ|
ಗಿನಿಸೆರ್ದೆ ನೋವೆಯಪ್ಪೊಡದು ಕೂಡದು ಮೂವರೊಳೊರ್ವನೆಮ್ಮ ಮಾ
ತಿನಿತೆ ಗುಣಾರ್ಣವಂಗೆ ಕುಡು ಗೆಲ್ಲಮನಿಂತಿದೆ ಕಜ್ಜದುಜ್ಜುಗಂ|| ೧೦೨

ವ|| ಎಂದು ಕಮಲಾಸನನಾಸೆದೋಱ ನುಡಿದುಳ್ಳುದನೆ ನುಡಿದೊಡಂತೆಗೆಯ್ವೆನೆಂದು-

ಚಂ|| ಸುರಿವರಲೊಂದು ಬೆಳ್ಸರಿಯದಾತ್ಮತನೂಭವನುತ್ತಮಾಂಗದೊಳ್
ದೊರೆಕೊಳೆ ನಿಲ್ಲದಲ್ಲಿ ಕುಸುಮಂ ಕೆಲವಲ್ಲುಗೆ ತನ್ನ ರತ್ನವಿ|
ಸುರಿತ ಕಿರೀಟಮಂ ಕವಿದು ತಾನೆ ನರಂಗೆ ಕಿರೀಟಿ ನಾಮಮಂ
ಸರಸದಿನಾಗಳುಚ್ಚರಿಸಿ ಸಾಹಸಮಂ ಪೊಗೞ್ದಂ ಸುರಾಪಂ|| ೧೦೩

ವ|| ಅಂತು ಪೊಗೞ್ದು ಖಾಂಡವವನದಹನದೊಳಾದ ಪೊಗೆಯೊಳಮಲ್ಲಿಯ ಮಹಾನಾಗಂಗಳ ವಿಷಂಬೆರಸು ಸುಯ್ವ ಸುಯ್ಯ ಪೊಗೆಯೊಳಂ ಕಱಂಗಿ ಕೞದ ಮೆಯ್ಯುಮಂ ಪ್ರಚಂಡ ಗಾಂಡೀವ ವ್ಯಾಘಾತದೊಳಿಂದ್ರನೀಲಂಗಳನಡಸಿದಂತಪ್ಪ ಮುಂಗೆಯ್ಯಮುಂ ಕಂಡು ಕೃಷ್ಣನೆಂಬ ಪೆಸರನಿಟ್ಟನಾಗಳ್ ಬ್ರಹ್ಮಂ ಬ್ರಹ್ಮಾಯುವಕ್ಕೆಂದು ಪರಸಿದನೀಶ್ವರಂ ನೀನುದಾರಮಹೇಶ್ವರ ನಪ್ಪುದಱಂ ನಿನಗಮೆನಗ ಮೇತಳಂ ವಿಕಲ್ಪಮುಂ ವಿಚ್ಛಿನ್ನಮುಮಿಲ್ಲೆಂದನಂತು ಮೂದೇವರುಂ ಪರಸಿ ನಿಜನಿವಾಸಂಗಳ್ಗೆ ಪೋದರಾಗಳ್-

ಚಂ|| ಅನಿತಿನಿತೆನ್ನದಾಂತ ಸುರ ಪನ್ನಗ ಕಿನ್ನರ ಸೈನ್ಯಮೆಲ್ಲಮಂ
ಬಿನ ಮೊನೆಯೊಳ್ ಪಡಲ್ವಡೆ ಲತಾಭವನಂ ಕೃತಕಾಚಳಂಗಳೆಂ
ಬಿನಿತುಮವೞ ತೞ್ಗೆ ನುಡಿಯಂ ನುಡಿದಂತೆ ನೆಗೞ್ಚಲಗ್ನಿದೇ
ವನನಮರೇಂದ್ರನಂದನಮನೂಡಿದನಂದಮರೇಂದ್ರನಂದನಂ|| ೧೦೪

ಸಮೂಹವನ್ನು ಕೂಡಿಕೊಂಡು ಯುದ್ಧಕ್ಕೆ ಸಿದ್ಧನಾಗಿ ಪರಸೈನ್ಯಭೈರವನಾದ ಅರ್ಜುನನೊಡನೆ ಯುದ್ಧ ಮಾಡುತ್ತೇನೆಂಬ ಕೆಟ್ಟಮನಸ್ಸಿನಿಂದ ಭೈರವನು ಹಾಯ್ದುನುಗ್ಗುವ ಹಾಗೆ ಬಂದು ನಿಂತ ಇಂದ್ರನ ಹತ್ತಿರಕ್ಕೆ ಬ್ರಹ್ಮನು ಬಂದು ಅವನನ್ನು ತಡೆದು ೧೦೨. “ನೀನು ವನವನ್ನು ರಕ್ಷಿಸುವುದಕ್ಕಾಗಿ ಯುದ್ಧಮಾಡುವುದಾದರೆ ಅದು ಮೊದಲೇ ನಾಶವಾಗಿದೆ. ಪಾರ್ಥನಲ್ಲಿ ನಿನಗೆ ದ್ವೇಷವಿದೆಯೆನ್ನುವುದಾದರೆ ಅವನು ನಿನ್ನ ಮಗ; ಕೃಷ್ಣನ ವಿಷಯದಲ್ಲಿ ಹೃದಯವೇದನೆ (ಕೋಪ)ಯಿರುವುದಾದರೆ ಅದು ಕೂಡದು. ಅವನು ತ್ರಿಮೂರ್ತಿಗಳಲ್ಲೊಬ್ಬ, ನಮ್ಮ ಮಾತಿಷ್ಟೆ ; ಗುಣಾರ್ಣವನಾದ ಅರ್ಜುನನಿಗೆ ಜಯವನ್ನು ಕೊಡು. ಈಗ ಮಾಡಬೇಕಾದ ಕಾರ್ಯವಿಷ್ಟೆ.” ೧೦೩. ಎಂದು ಬ್ರಹ್ಮನು ಇಂದ್ರನಿಗೆ ಆಶೆದೋರಿಸಿ ಮಾತನಾಡಿ ವಾಸ್ತವಾಂಶವನ್ನು ತಿಳಿಸಲು (ಇಂದ್ರನು) ಹಾಗೆಯೇ ಮಾಡುತ್ತೇನೆಂದು ತನ್ನ ಮಗನಾದ ಅರ್ಜುನನ ತಲೆಯ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ಹೂಗಳು ಆ ಸ್ಥಳದಲ್ಲಿಯೇ ನಿಲ್ಲದೆ ಪಕ್ಕದಲ್ಲಿ ಬೀಳುತ್ತಿರಲು ಇಂದ್ರನು ತಾನೇ ರತ್ನಕಾಂತಿಯಿಂದ ಕೂಡಿದ ತನ್ನ ಕಿರೀಟವನ್ನು ಅರ್ಜುನನ ತಲೆಯ ಮೇಲಿಟ್ಟು ಅರ್ಜುನನಿಗೆ ‘ಕಿರೀಟಿ’ ಎಂಬ ಹೆಸರನ್ನು ಸರಸವಾಗಿ ಇಟ್ಟು ಅವನ ಸಾಹಸವನ್ನು ಹೊಗಳಿದನು. ವ|| ಖಾಂಡವವನದಹನದಿಂದುಂಟಾದ ಹೊಗೆಯಿಂದಲೂ ಅಲ್ಲಿಯ ಮಹಾಸರ್ಪಗಳ ವಿಷಮಿಶ್ರವಾಗಿ ಉಸಿರಾಡುವ ಗಾಳಿಯಿಂದಲೂ ಕಪ್ಪುಕಪ್ಪಾದ ಶರೀರವನ್ನೂ ಮಹಾಶಕ್ತಿಯುಕ್ತವಾದ ಗಾಂಡೀವದ ಪೆಟ್ಟಿನಿಂದ ಇಂದ್ರನೀಲರತ್ನಗಳು ಸೇರಿಕೊಂಡ ಹಾಗಿರುವ ಮುಂಗಯ್ಯನ್ನೂ ಕಂಡು ಇಂದ್ರನು ಅರ್ಜುನನಿಗೆ ಕೃಷ್ಣನೆಂಬ ಹೆಸರಿಟ್ಟನು. ಬ್ರಹ್ಮನು ನಿನಗೆ ದೀರ್ಘಾಯುವಾಗಲಿ ಎಂದು ಹರಸಿದನು. ಈಶ್ವರನು ನೀನು ಉದಾರಮಹೇಶ್ವರನಾಗಿರುವುದರಿಂದ ನಿನಗೂ ನನಗೂ ಯಾವುದರಲ್ಲಿಯೂ ವ್ಯತ್ಯಾಸವೂ ಭೇದವೂ ಇಲ್ಲ ಎಂದನು. ಹಾಗೆ ತ್ರಿಮೂರ್ತಿಗಳೂ ಅರ್ಜುನನನ್ನು ಹರಸಿ ತಮ್ಮ ವಾಸಸ್ಥಳಗಳಿಗೆ ಹೋದರು. ೧೦೪. ಅಷ್ಟಿಷ್ಟೆನ್ನದೆ ಪ್ರತಿಭಟಿಸಿದ ದೇವತೆಗಳ ನಾಗರರ ಕಿನ್ನರರ ಸೈನ್ಯವೆಲ್ಲವೂ ತನ್ನ ಬಾಣದ ಹೊಡೆತಕ್ಕೆ ಸಿಕ್ಕಿ ಚೆಲ್ಲಾಪಿಲ್ಲಿಯಾಗಿ ಕೆಳಗುರುಳಲು ಬಳ್ಳಿವನೆ ಕೃತಕಪರ್ವತ ಎಂಬಿವೆಲ್ಲ ನಾಶವಾಗಿ ತಗ್ಗಿದರೂ ತಾನಾಡಿದ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅಗ್ನಿದೇವನಿಗೆ ಇಂದ್ರನ ಉದ್ಯಾನವಾದ ಖಾಂಡವವನವನ್ನು ಅರ್ಜುನನು ಉಣಿಸಿದನು. ವ|| ಆಗ ಸ್ವಾಹಾದೇವಿಯ ಪತಿಯಾದ ಅಗ್ನಿಯು ಇಷ್ಟಾರ್ಥವನ್ನು ಪೂರ್ಣವಾಗಿ ಪಡೆದವನಾಗಿ ಖಟ್ವಾಂಗನೆಂಬ ರಾಜನ ಯಜ್ಞದಲ್ಲಿ ಅವನು ತಂದಿದ್ದ ತುಪ್ಪದ ಸಮುದ್ರವನ್ನು ಕುಡಿದುದರಿಂದ ಉಂಟಾದ ರೋಗವು ಇಂದು ಪರಿಹಾರವಾಯಿತು ಎಂದು ರೋಗರಹಿತನಾಗಿ ವಿಶೇಷ ಸಂತೋಷದಿಂದು ಕೂಡಿ ಆಶೀರ್ವದಿಸಿ ಹೋದನು. ಆಗ ಕೃಷ್ಣಾರ್ಜುನರಿಬ್ಬರೂ ಇಂದ್ರಪ್ರಸ್ಥಪಟ್ಟಣಕ್ಕೆ ಬಂದು ಸೇರಿದರು.

ವ|| ಆಗಳ್ ಸ್ವಾಹಾಂಗನಾನಾಥಂ ಸಂಪೂರ್ಣ ಮನೋರಥನಾಗಿ ಖಟ್ವಾಂಗನೆಂಬರಸನ ಯಜ್ಞದೊಳಾತನ ತಂದ ಘೃತಸಮುದ್ರಮಂ ಕುಡಿದೊಡಾದ ರೋಗಮಿಂದು ಪೋದುದೆಂದು ನೀರೋಗನಾಗಿ ಮಹಾನುರಾಗಂಬೆರಸು ಪರಸಿ ಪೋದನಾಗಳಿರ್ವರುಮಿಂದ್ರಪ್ರಸ್ಥಕ್ಕೆಯ್ದೆವಂದು-

ಚಂ|| ಇದಿರ್ವರೆ ಧರ್ಮಜಂ ಬೆರಸು ತನ್ನೊಡವುಟ್ಟಿದರೆಯ್ದೆ ತಳ್ತು ಕ
ಟ್ಟಿದ ಗುಡಿ ರಂಗವಲ್ಲಿಗಳೆ ದಾಂಗುಡಿಯಂತಿರೆ ಸೂಸೆ ಸೇಸೆಯಂ|
ಸುದತಿಯರಿಕ್ಕೆ ಚಾಮರಸಮನಂಗನೆಯರ್ ನಿಜಕೀರ್ತಿ ಲೋಕಮಂ
ಪುದಿದಿರೆ ಪೊಕ್ಕನಂದು ನಿಜಮಂದಿರಮಂ ಪರಸೈನ್ಯಭೈರವಂ|| ೧೦೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಪಂಚಮಾಶ್ವಾಸಂ

೧೦೫. ಆಗ ತನ್ನ ಒಡಹುಟ್ಟಿದವರು ಧರ್ಮರಾಯನೊಡಗೂಡಿ ಇದಿರಾಗಿ ಬರಲು ಕಟ್ಟಿದ ತೋರಣವೂ ಇಟ್ಟ ರಂಗವಲ್ಲಿಯೂ ತನ್ನ ಕೀರ್ತಿಯ ದಾಂಗುಡಿಗಳಂತಿರಲು ಸ್ತ್ರೀಯರು ಅಕ್ಷತೆಗಳನ್ನು ಚೆಲ್ಲುತ್ತಿರಲು ಅಂಗನೆಯರು ಚಾಮರವನ್ನು ಬೀಸುತ್ತಿರಲು ತನ್ನ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸುತ್ತಿರಲು ಅಂದು ಪರಸೈನ್ಯಭೈರವನಾದ ಅರ್ಜುನನು ತನ್ನ ಅರಮನೆಯನ್ನು ಪ್ರವೇಶಿಸಿದನು.

ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ

ಅಯ್ದನೆಯ ಆಶ್ವಾಸ.