ಹಾನಗಲ್‌ ತಾಲ್ಲೂಕಿನ ಕಾಡಶೆಟ್ಟಿ ಹಳ್ಳಿಯಲ್ಲಿ ಹುಟ್ಟಿನೊಂದಿಗೆ (ಜನನ: ಫೆಬ್ರವರಿ ೨, ೧೮೯೬), ಅಂಧತ್ವವನ್ನು ಪಡೆದಿದ್ದ ಗದಿಗೆಯ್ಯ ಎಂಬ ಬಾಲಕನು ಪಂಚಾಕ್ಷರಿ ಗವಾಯಿಯಾಗಿ ಮಾರ್ಪಟ್ಟಿದ್ದು ಅವಿರತ ಹೋರಾಟದ, ಮಹತ್ತರವಾದುದನ್ನು ಸಾಧಿಸಬೇಕೆಂಬ ದೃಢ ಸಂಕಲ್ಪದ, ಸಾಹಸ, ತ್ಯಾಗ, ಕಷ್ಟ ಕಾರ್ಪಣ್ಯಗಳ ಒಂದು ರಂಜನೀಯ ಕತೆಯಾಗಿದೆ. ಈ ಸುದೀರ್ಘ ಹೋರಾಟದ ಪ್ರಕ್ರಿಯೆಯಲ್ಲಿ ವಿಧಿ ಎಸೆದಿದ್ದ ಕ್ಲಿಷ್ಟ ಸವಾಲುಗಳನ್ನು, ಪಂಥಾಹ್ವಾನಗಳನ್ನು ಎದುರಿಸುತ್ತ, ದಿಟ್ಟತನದಿಂದ, ಆತ್ಮವಿಶ್ವಾಸದಿಂದ ಮುನ್ನಡೆದ ಪಂಚಾಕ್ಷರ ಗವಾಯಿಗಳ ಜೀವನ ಒಂದು ಮಹಯತ್ವದ ಮಜಲಾಗಿದೆ. ಅಪೇಕ್ಷಿತ ರೀತಿಯಲ್ಲಿ ಸಾಮಾಜಿಕ ಪರಿವರ್ತನೆಯನ್ನುಂಟು ಮಾಡುವ ರೀತಿಯಲ್ಲಿ, ತಲೆಮಾರುಗಳುದ್ದಕ್ಕೂ ನೆಲೆನಿಲ್ಲಬಲ್ಲ ಕೊಡುಗೆಗಳನ್ನು ನೀಡುವ ವ್ಯಕ್ತಿ ಚಾರಿತ್ರಿಕ ವ್ಯಕ್ತಿ ಎನಿಸುತ್ತಾನೆ. ಕುರುಡರ ಜೀವನದಲ್ಲಿ ಅದರಲ್ಲಿಯೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ನಮ್ಮ ಸಮಾಜದಲ್ಲಿ ಪಂಚಾಕ್ಷರ ಗವಾಯಿಗಳು ನೀಢಿದ ವಿಶಿಷ್ಟ ಕೊಡುಗೆಗಳು ಅಂಧರ ಜೀಔನದಲ್ಲಿ ಹೊಸ ಬೆಳಕನ್ನು ತಂದಿವೆ. ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದೆಂಬ ಆಶಾವಾದವನ್ನು ಸ್ಫುರಿಸಿವೆ. ಇಂದು ಅಖಿಲ ಭಾರತದ ಖ್ಯಾತಿಯ ಸಾಂಸ್ಕೃತಿ ಕ ಕೇಂದ್ರವಾಗಿರುವ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮವು ಈ ಏಕವ್ಯಕ್ತಿಯ ಚಿರಸ್ಮರಣಿಯ ಸಾಧನೆಯಾಗಿದ್ದು, ಅಂಧತ್ವಕ್ಕೇನೆ ಅಂಧತ್ವವನ್ನುಂಟು ಮಾಡಿ, ಮಾನವ ಸಾಧನೆಯು ಎಂತಹ ವಿಕಲತೆಯನ್ನೂ ಮೀರಿ ಮುನ್ನಡೆಯಬಲ್ಲದು ಎಂಬುದನ್ನು ಸ್ಥಿರೀಕರಿಸಿದೆ. ಮಾನವ ಇತಿಹಾಸದುದ್ದಕ್ಕೂ ಸಾಮ್ರಾಜ್ಯಗಳನ್ನು ಕಟ್ಟಿ ಬೆಳೆಸಿದ ಚಾರಿತ್ರಿಕ ಪುರುಷರ ಸಾಧನೆಗಳಿಗಿಂತ ಆದಮ್ಯವಾದ, ರೋಮಾಂಚನಕಾರಿಯಾದ ಈ ಸಾಧನೆ, ಎಂದೂ ಅಳಿಸಲಾರದ ಪಂಥವನ್ನು ಬೆಳೆಸಿದ ಹಾಗೂ ಬೆಳೆಸಬಲ್ಲ ಮೂಲವಾಗಿದೆ. ನದಿಗಳಂತೆ ನಿರಂತರವಾಗಿ ದಯಪಾಲಿಸಿಕ, ತಾವು ಇಲ್ಲವಾದರೂ, ಚೈತನ್ಯ ಸ್ವರೂಪಿಯಾಗಿ, ಪ್ರೇರಕ ಶಕ್ತಿಯಾಗಿ, ನಿತ್ಯನೂತನವಾಗಿ ಜನಮನವನ್ನು ಮಾರ್ಗದರ್ಶಿಸುತ್ತಿರುವ ಪಂಚಾಕ್ಷರಿ ಗವಾಯಿಗಳು ನಮ್ಮ ನಾಡಿನ, ರಾಷ್ಟ್ರದ ಕಣ್ಮಣಿಯಾಗಿದ್ದವರು.

ದಕ್ಷಿಣಾದಿ ಮತ್ತು ಹಿಂದುಸ್ತಾನಿ ಸಂಗೀತಗಳಲ್ಲಿ ಪರಿಣತಿಯನ್ನು ಸಾಧಿಸಿದ ಈ ಗಾನಯೋಗಿ ಉಭಯಕಗಾನ ವಿಶಾರದರೆಂಬ ಖ್ಯಾತಿಯನ್ನು ಪಡೆದಿದ್ದವರು.

ಸಂಗೀತಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿವಹಿಸಿದ್ದ ಗುರುಬಸವ ಹಾಗೂ ಗದಿಗೆಯ್ಯನವರನ್ನು ಹೆಚ್ಚಿನ ಅಭ್ಯಾಸಕ್ಕಾಗಿ ಮೈಸೂರಿಗೆ ಕಳುಹಿಸಿಕೊಡಲು ಶ್ರೀ ಕುಮಾರಸ್ವಾಮಿಗಳು ತೀರ್ಮಾನಿಸಿದರು. ತನ್ಮಧ್ಯೆ ಗುರುವಸವ ಕಾಲರಾ ಬೇನೆಗೆ ತುತ್ತಾಗಿ ಅಕಾಲಿಕವಾಗಿ ತೀರಿಹೋದಾಗ ಗದಿಗೆಯ್ಯನಿಗೆ ಆಘಾತವಾಯಿತು. ಸೋದರನ ಅಗಲುವಿಕೆಯಿಂದ ಆತನನ್ನು ಸಂತೈಸಿ, ಜೀವನದ ಗುರಿ ಸಫಲತೆಯತ್ತ ಆತನ ಮನಸ್ಸನ್ನು ಹರಿಸಿದರು. ಸಂಗೀತನ್ನು ಕಲಿಯಬಯಸಿದ್ದ ಇತರ ಈರ್ವರು ವಿದ್ಯಾರ್ಥಿಗಳೊಂದಿಗೆ ಗದಿಗೆಯ್ಯನನ್ನು ಮೈಸೂರಿಗೆ ಕಳುಹಿಸಿಕೊಟ್ಟರು. ಮೈಸೂರಿನ ಕುರುಡರ ಶಾಲೆಯಲ್ಲಿ ಪ್ರವೇಶವನ್ನು ಪಡೆದ ಗದಿಗೆಯ್ಯ ಪಿಟೀಲು ವಿದ್ವಾಂಸ ವೆಂಕಟರಮಣಯ್ಯನವರ ಅಚ್ಚುಮೆಚ್ಚಿನ ಶಿಷ್ಯರಾಗಿ ಕೇವಲ ನಾಲ್ಕೇ ತಿಂಗಳ ಅವಧಿಯಲ್ಲಿ ಆ ಶಾಲೆಯಲ್ಲಿ ಎಲ್ಲರಿಗಿಂತ ಮೊದಲಿಗನಾದನು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ತವಕ, ಆಕಾಂಕ್ಷೆಯನ್ನು ಹೊಂದಿದ್ದ ಗದಿಗಯ್ಯ ಮೈಸೂರಿನಲ್ಲಿಯ ಹೆಸರಾಂತ ಸಂಗೀತ ವಿದ್ವಾಂಸರ ಪರಿಚಯವನ್ನು ಪಡೆದುಕೊಂಡನು. ಮೈಸೂರನ್ನು ಬಿಟ್ಟು ಹೊರಡುವಾಗ ಶ್ರೀ ಗೌರಿಶಂಕರ ಸ್ವಾಮಿಗಳು ಗದಿಗೆಯ್ಯನಿಗೆ ಪಂಚಾಕ್ಷರಿ ಎಂದು ನಾಮಕರಣ ಮಾಡಿ ಆಶೀರ್ವದಿಸಿದರು.

೧೯೦೮ರ ಡಿಸೆಂಬರ್ ತಿಂಗಳಿನ ೨೮ರಿಂದ ೩೦ರವರೆಗೆ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಯ ನಾಲ್ಕನೆಯ ಅಧಿವೇಶನದಲ್ಲಿ ಗದಿಗೆಯ್ಯ ತಮ್ಮ ಪಾಂಡಿತ್ಯಪೂರ್ಣ ಗಾಯನದಿಂದ ಅಸಂಖ್ಯ ಶೋತೃಗಳನ್ನು ರಂಜಿಸಿದರು. ಅಂದಿನಿಂಧ ಗದಿಗೆಯ್ಯ ಪಂಚಾಕ್ಷರಿ ಗವಾಯಿಗಳಾದರು. ತಮ್ಮ ಕಂದ, ಶಿಷ್ಯನಾಗಿದ್ದ ಗದಿಗೆಯ್ಯನ ಸಾಧನೆಯನ್ನು ಕಂಡು ಕುಮಾರಸ್ವಾಮಿಗಳು ಸಂತಸಪಟ್ಟರು. ನಿನ್ನ ಪೂರ್ವ ಜನ್ಮದ ಸುಕೃತದಿಂದ ಈ ಗಾನವಿದ್ಯೆ ನಿನಗೆ ಲಭಿಸಿದೆ. ನಿಷ್ಠೆಯಿಂದ ಬ್ರಹ್ಮಚರ್ಯವನ್ನು ಪಾಲಿಸಿಕೊಂಡು, ಜಾತಿ-ಕುಲ ವ್ಯತ್ಯಾಸಗಳನ್ನು ಪರಿಗಣಿಸದೆ ಈ ವಿದ್ಯೆಯನ್ನು ಹೇಳಿಕೊಡು ಎಂಬುದಾಗಿ ಆದೇಶಿಸಿದರು. ಪಂಚಾಕ್ಷರಿ ಗವಾಯಿಗಳು ಗುರುಗಳ ಆಜ್ಞೆಯನ್ನು ತಮ್ಮ ಜೀವಿತದ ಅಂತ್ಯದವರೆಗೂ ಶಿರಸಾವಹಿಸಿ ಪಾಲಿಸಿದರು.

ಕರ್ನಾಟಕ ಅಥವಾ ದಕ್ಷಿಣಾದಿ ಸಂಗೀತವನ್ನು ಕರತಲಾಮಲಕ ಮಾಡಿಕೊಂಡಿದ್ದ ಪಂಚಾಕ್ಷರಿ ಗವಾಯಿಗಳು ಹಿಂದುಸ್ತಾನಿ ಸಂಗೀತವನ್ನು ಕಲಿಯುವಲ್ಲಿ ಆಸಕ್ತಿ ತೋರಿದರು. ಗ್ರಾಮಫೋನಿನಲ್ಲಿ ಗಾನಮುದ್ರಿಕೆಗಳನ್ನು ಆಲಿಸುತ್ತಲೇ ಹಿಂದೂಸ್ಥಾನಿ ಸಂಗೀತವನ್ನು ಕಲಿತುಕೊಂಡರು. ಗುರುವಿನ ಮೂಲಕ ಶಾಸ್ತ್ರೀಯವಾದ ರೀತಿಯಲ್ಲಿ ಹಿಂದುಸ್ತಾನಿ ಸಂಗೀತವನ್ನು ಕಲಿಯಬೇಕೆಂದು ಅವರು ಬಯಸಿದರು. ಕುಮಾರಸ್ವಾಮಿಗಳು ಅವರ ಬಯಕೆಯನ್ನು ಈಡೇರಿಸಿಕೊಟ್ಟರು. ಖ್ಯಾತ ಸಂಗೀತಗಾರ ಅಬ್ದುಲ್‌ ವಹೀದಖಾನರ೪ನ್ನು ಶಿವಯೋಗ ಮಂದಿರಕ್ಕೆ ಕರೆತಂದು ಪಂಚಾಕ್ಷರಿ ಗವಾಯಿಗಳಿಗೆ ಹಿಂದೂಸ್ತಾನಿ ಸಂಗೀತ ಶಿಕ್ಷಣದ ಏರ್ಪಾಟು ಮಾಡಿದರು. ಅಬ್ದುಲ್‌ ವಹೀದಖಾನರು ಪಂಚಾಕ್ಷರಿ ಗವಾಯಿಗಳಿಗೆ ೧೯೧೭ರಿಂದ ೧೯೨೧ರವರೆಗೆ ಕಲಿಸಿದರು. ಅನಂತರ ಸುದೈವವಶಾತ್‌ ಸಂಗೀತಾಚಾರ್ಯ ನೀಲಕಂಠಬುವಾ ಮಿರಜಕರರು ಗವಾಯಿಗಳಿಗೆ ಗುರುಗಳಾಗಿ ಲಭಿಸಿದರು. ಶಾಸ್ತ್ರೋಕ್ತವಾದ ಕ್ರಮಬದ್ಧ ಪದ್ಧತಿಯ ಶಿಕ್ಷಣಕ್ಕೆ ಹೆಸರಾಗಿದ್ದ ನೀಲಕಂಠಬುವಾ ೧೯೨೨-೧೯೨೩ರ ಅವಧಿಯಲ್ಲಿ ಪಂಚಾಕ್ಷರಿ ಗವಾಯಿಗಳಿಗೆ ಶಿಕ್ಷಣ ನೀಡಿದರು.

ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ, ಇನ್ನೂ ಹೆಚ್ಚು ಕಲಿಯಬೇಕೆಂದು ಪಂಚಾಕ್ಷರಿ ಗವಾಯಿಗಳ ಹಂಬಲ. ಅವರು ಕೊನೆಯವರೆಗೂ ಸಂಗೀತ ಶಾಸ್ತ್ರದ ವಿದ್ಯಾರ್ಥಿಯೇ ಆಗಿದ್ದರು ಎಂಬುದು ಗಮನಾರ್ಹ. ತಮ್ಮ ಶಿಷ್ಯರಿಂದಲೂ ಅವರು ಅನೇಕ ಉತ್ತಮ ಅಂಶಗಳನ್ನು ಕಲಿತುಕೊಂಡರು. ಪಂಚಾಕ್ಷರಿ ಗವಾಯ ಇಗಳು ಗಾಯನದಲ್ಲಿ ಮಾತ್ರವಲ್ಲದೇ ತಬಲಾ ವಾದನದಲ್ಲಿಯೂ ಅಷ್ಟೇ ಕುಶಲರಾಗಿದ್ದರು. ಅವರು ತಬಲಾ ಕಲಿತ ರೀತಿ ಸ್ವಾರಸ್ಯಕರ ಘಟನೆಯಾಗಿದೆ. ಅವರು ತಬಲವಾದನವನ್ನು ಕಲಯಬೇಕೆಂದು ಬಯಸಿದ್ದಾರೆ ಎಂದು ತಿಳಿದಾಗ ಕುಮಾರಸ್ವಾಮಿಗಳು ಅವರ ಅಪೇಕ್ಷೆಯನ್ನು ಈಡೇರಿಸಲು ವ್ಯವಸ್ಥೆ ಮಾಡಿದರು. ಆದರೆ, ಪಂಚಾಕ್ಷರ ಗವಾಯಿಗಳು ತಬಲಾ ಕಲಿಯುವ ಅಪೇಕ್ಷೆಯುಳ್ಳ ತಮ್ಮ ಶಿಷ್ಯನೋರ್ವನಿಗೆ ಆ ಅವಕಾಶವನ್ನು ಕಲ್ಪಿಸಿಕೊಡಲು ಸ್ವಾಮಿಗಳನ್ನು ಕೇಳಿಕೊಂಡರು. ಅದಕ್ಕೆ ಒಪ್ಪಿದ ಸ್ವಾಮಿಗಳು ಆ ವಿದ್ಯಾರ್ಥಿಯನ್ನು ಅಂದಿನ ಸುಪ್ರಸಿದ್ಧ ತಬಲಾ ವಾದಕ ಬೆಳಗಾವಿಯ ಶಹಪಊರ ಮಲ್ಲೇಶಪ್ಪನವರ ಬಳಿಗೆ ಕಳುಹಿಸಿಕೊಟ್ಟರು. ತಬಲಾ ವದನ ಕಲಿತು ಮರಳಿ ಬಂದ ತಮ್ಮ ಶಿಷ್ಯನನ್ನೇ ಗುರುವಾಗಿಸಿಕೊಂಡು, ಪಂಚಾಕ್ಷರಿ ಗವಾಯಿಗಳು ತಬಲಾ ವಾದನ ಕಲೆಯನ್ನು ಕಲಿತುಕೊಂಡರು. ಶಿಗ್ಗಾವಿ ತಾಲ್ಲೂಕಿನ ಜೇಕಿನಕಟ್ಟಿ ಶಿವಯ್ಯನೇ ಆ ಶಿಷ್ಯನಾಗಿದ್ದನು. ಪಂಚಾಕ್ಷರಿ ಗವಾಯಿಗಳ ತಬಲಾ ವಾದನದಲ್ಲಿ ಒಂದು ವೈಶಿಷ್ಟ್ಯವಿದ್ದಿತು. ಅವರು ಎಡಗೈಯಿಂದ ತಬಲಾ, ಬಲಗೈಯಿಂದ ಡಗ್ಗಾ ಬಾರಿಸುತ್ತಿದ್ದರು. ಎಡಗೈ ನಡು ಬೆರಳಿನಿಂದ ಟಾಕಿ ಹಾಕುತ್ತಿದ್ದು ದು ಅವರ ಇನ್ನೊಂದು ವೈಶಿಷ್ಟ್ಯವಾಗಿತ್ತು. ಗಾಯಕರ, ವಾದಕರ ಗುಣಮಟ್ಟಕ್ಕನುಗುಣವಾದ ರೀತಿಯಲ್ಲಿ ಅವರು ತಬಲಾ ಸಾಥಿ ನೀಡುತ್ತಿದ್ದರು.

ಸಂಗೀತ ಕ್ಷೇತ್ರದಲ್ಲಿನ ಎಲ್ಲ ಅಂಶಗಳನ್ನು ಕಲಿಯಬೇಕೆಂಬ ಇಚ್ಛೆಯು ಗವಾಯಿಗಳಲ್ಲಿ ತೀವ್ರತರವಾಗಿತ್ತಗು. ಅವಕಾಶ ಸಿಕ್ಕಾಗಲೆಲ್ಲಾ ಸಂಗೀತ ಸಾಧಕರ ಬಳಿ ಅಭ್ಯಾಸ ಮಾಡುವುದು ಅವರ ಪ್ರವೃತ್ತಿಯಾಗಿತ್ತು. ಬೆಳಗಾವಿಯ ಸ್ವಾಮಿಗಳ ಮಠದಲ್ಲಿ ನಾಲ್ಕಾರು ತಿಂಗಳುಗಳ ಕಾಲ ವಾಸ್ತವ್ಯ ಮಾಡಿದ್ದಾಗ, ಬೆಳಗಾವಿಯಲ್ಲಿದ್ದ ಹೆಸರಾಂತ ಸಂಗೀತಜ್ಞ, ರಾಮಕೃಷ್ಣಬುವಾವಝೆ ಅವರ ಬಳಿ ಅಭ್ಯಾಸ ಮಾಡಿದರು. ಬಾಬೂರಾವ ರಾಣೆ ಎಂಬುವರಲ್ಲಿ ಹಲವು ತಿಂಗಳು ಕಾಲ ಹಿಂದುಸ್ತಾನಿ ಸಂಗೀತವನ್ನು ಕಲಿತರು. ೧೯೩೭-೩ರಲ್ಲಿ ಗದಗಿನಲ್ಲಿ ವಾಸ್ತವ್ಯ ಮಾಡಿದ್ದ ಇನಾಯತ್‌ ಹುಸೇನ್‌ ಖಾನರ ಬಳಿಯಲ್ಲಿಯೂ ಪಂಚಾಕ್ಷರಿ ಗವಾಯಿಗಳು ಸಂಗೀತಾಭ್ಯಾಸ ಮಾಡಿದರು.

ಮಾನವರ ಸರ್ವಾಂಗೀಣ ಅಭ್ಯುನ್ನತಿಗೆ ಆಧ್ಯಾತ್ಮಿಕ ಸುಧಾರಣೆ ಮಾತ್ರವಲ್ಲದೇ ವ್ಯವಹಾರಿಕ ಸುಧಾರಣೆಯೂ ಅತ್ಯಗತ್ಯ ಎಂದು ಕುಮಾರಸ್ವಾಮಿಗಳು ಮನಗಂಡಿದ್ದರು. ಆರ್ಥಿಕವಾಗಿ ಹಿಂದುಳಿದ ಸಮಾಜದಲ್ಲಿ ಕೇವಲ ಸಂಗೀತ ಶಿಕ್ಷಣವನ್ನು ನೀಡುವ ಪಾಠಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸಲಾರದು ಎಂಬುದನ್ನು ಅರಿತಿದ್ದರು. ಅಂತೆಯೇ ಸಂಗೀತದೊಡನೆ ಸಾಹಿತ್ಯವನ್ನೂ ಅಭ್ಯಸಿಸಲು ಅವಕಾಶವಾಗುವ ಪಾಠಶಾಲೆಯನ್ನು ಆರಂಭಿಸಬೇಕೆಂದು ತೀರ್ಮಾನಿಸಿದರು. ೧೯೧೪ರ ಆನಂದನಾಮ ಸಂವತ್ಸರ ವೈಶಾಖ ಶುದ್ಧ. ತೃತೀಯ ಬಸವಜಯಂತಿಯ ಶುಭ ಮುಹೂತ್ದಲ್ಲಿ ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದಲ್ಲಿ ಕುಮಾರೇಶ್ವರ ಕೃಪಾಪೋಷಿತ ಸಂಗೀತ ಸಾಹಿತ್ಯ ಮಹಾವಿದ್ಯಾಲಯವನ್ನು ಪ್ರಾರಂಭಿಸಿದರು. ಈ ಪಾಠಶಾಲೆಯ ಉಸ್ತುವಾರಿಯ ಹೊಣೆಗಾರಿಕೆಯನ್ನು ಪಂಚಾಕ್ಷರಿ ಗವಾಯಿಗಳಿಗೆ ವಹಿಸಿಕೊಟ್ಟರು. “ಪಂಚಾಕ್ಷರಿ, ನೀನು ನಿನ್ನ ಹೆಸರನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಆಜನ್ಮ ಬ್ರಹ್ಮಚಾರಿಯಾಗಿದ್ದು ನಿನ್ನಲ್ಲಿರುವ ವಿದ್ಯೆಯನ್ನು ಲೋಕದಲ್ಲೆಲ್ಲಾ ಪ್ರಸಾರ ಮಾಡು, ನಿನ್ನ ಶಾಲೆಯು ಒಂದೆಡೆ ಇರದೇ ಲೋಕ ಮಧ್ಯದಲ್ಲಿ ಸಂಚರಿಸುತ್ತಿರಲಿ” ಎಂಬುದಾಗಿ ಕುಮಾರಸ್ವಾಮಿಗಳು ಆದೇಶಿಸಿದರು. ಈ ಸಂಗೀತ ಶಾಲೆಯ ಅಧ್ಯಾಪಕರಾಗಿ ಪಂಚಾಕ್ಷರಿ ಗವಾಯಿಗಳು ಶ್ರದ್ಧೆಯಿಂದ ಶ್ರಮಿಸಿದರು.

ಪಂಚಾಕ್ಷರಿ ಗವಾಯಿಗಳು ಬಿಡಾರ ಮಾಡಿದಲ್ಲೆಲ್ಲ ಪುರಾಣ-ಕೀರ್ತನೆಗಳು ಸಂಗೀತಮಯವಾಗಿ ನಡೆಯುತ್ತಿದ್ದವು. ಜನಮನವನ್ನು ಗಾಢವಾಗಿ ತಟ್ಟುತ್ತಿದ್ದವು. ಶಿಕ್ಷಣ ಸೌಕರ್ಯದ ದೃಷ್ಟಿಯಿಂದ ಗವಾಯಿಗಳು ಸಂಗೀತ ಶಾಲೆಯನ್ನು ಎರಡು ಭಾಗಗಳನ್ನಾಗಿ ಮಾಡಿದರು. ಆರಂಭದ ವಿದ್ಯಾರ್ಥಿಗಳಿಗೆ ಪ್ರಯಾಣದ ಸಮಯದಲ್ಲಿ ಸರಿಯಾಗಿ ಸಂಗೀತ ಶಿಕ್ಷಣ ಸಿಕ್ಕುತ್ತಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಸ್ಥಾಯಿಕ ಸಂಗೀತ ಶಾಲೆಯನ್ನು ರೂಪಿಸಿದರು. ಆರಂಭದ ಹಂತದಲ್ಲಿ ಸ್ಥಾಯಿಕ ಶಾಲೆಯು ಬೆಳಗಾವಿ, ಶಹಪೂರ, ಸಂಪಗಾವಿ, ನವಿಲುಗುಂದ, ಬಂಕಾಪೂರ, ಲಿಂಗದಳ್ಳಿಯಲ್ಲಿ ನಡೆಯಿತು. ಅನಂತರ ಕೆಲಕಾಲ ಗಜೇಂದ್ರಗಡದಲ್ಲಿ ನಡೆಯಿತು. ಕಮತಗಿಯ ಶ್ರೀ ಗದಿಗೆಪ್ಪ ಗವಾಯಿಗಳು ಸಂಗೀತ ಶಿಕ್ಷಕರಾಗಿದ್ದರು. ತದನಂತರ, ಗುಳೇದಗುಡ್ಡದ ಸದ್ಭಕ್ತರ ಇಚ್ಛೆಯ ಮೇರೆಗೆ ಶ್ರೀ ಹುಚ್ಚೇಶ್ವರ ಮಠಕ್ಕೆ ಸ್ಥಳಾಂತರಗೊಂಡಿತು. ಈ ಸಂಗೀತ ಶಾಲೆಯಲ್ಲಿ ಕೊಡಮಾಡುವ ಶಿಕ್ಷಣವು ಲೋಕಕ್ಕೆ ಉಪಯೋಗವಾಗಲೆಂಬ ಉದ್ದೇಶದಿಂದ ಸಂಗೀತದೊಂದಿಗೆ ಕನ್ನಡ, ಸಂಸ್ಕೃತ ಸಾಹಿತ್ಯ ಶಿಕ್ಷಣವನ್ನು ನೀಡುವ ಏರ್ಪಾಡು ಮಾಡಲಾಯಿತು. ಸ್ಥಾಯಿಕ ಶಾಲೆಯಲ್ಲಿ ದ್ಯಾಂಪುರದ ಶ್ರೀ ಮಹಾಲಿಂಗಯ್ಯನವರು ಸಾಹಿತ್ಯ ಶಿಕ್ಷಕರಗಿದ್ದರು. ಸಂಚಾರಿ ಸಂಗೀತ ಶಾಲೆಯಲ್ಲಿ ಕನ್ನಡ, ಸಂಸ್ಕೃತ ಪಾಠಗಳನ್ನು ಶ್ರೀ ಪುಟ್ಟರಾಜ ಗವಾಯಿಗಳು ಮೌಖಿಕವಾಗಿ ಹೇಳಿಕೊಡುತ್ತಿದ್ದರು.

ಶಿವಯೋಗ ಮಂದಿರದ ಈ ಸಂಗೀತ ಶಾಲೆಯು ಅನತಿಕಾಲದಲ್ಲಿ ಅಪಾರ ಪ್ರಗತಿ ಸಾಧಿಸಿತು. ೧೯೩೯ರಲ್ಲಿ ಈ ಸಂಗೀತ ಶಾಲೆಯ ರಜತಮಹೋತ್ವವನ್ನು ಆಚರಿಸಲಾಯಿತು. ಈ ಸಂಗೀತ ಶಾಲೆಯು ಅಂತಿಮವಾಗಿ ಗದಗಿನಲ್ಲಿ ಸ್ಥಿರವಾಯಿತು. ಅಂದಿನಿಂದ ಇಂದಿನವರೆಗೆ ಈ ಶಾಲೆ ನಿರಂತರವಾಗಿ ವಿದ್ಯಾದಾನ ಮಾಡುತ್ತಾ ತನ್ನದೇ ಆದ ವಿಶಿಷ್ಟ ಪರಂಪರೆಗಳನ್ನು ರೂಢಿಸಿಕೊಂಡು ಬಂದಿದೆ. ಈ ಸಂಸ್ಥೆಯಲ್ಲಿ ಅನೇಕ ಅನಾಥ ಕುರುಡ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ. ಸಂಗೀತದಲ್ಲಿ ಒಳ್ಳೆಯ ಸಾಧನೆಯನ್ನು ಮಾಡುತ್ತಿದ್ದಾರೆ. ಸಂಗೀತದೊಂದಿಗೆ, ಕನ್ನಡ, ಸಂಸ್ಕೃತ ಹಾಗೂ ಹಿಂದಿ ಸಾಹಿತ್ಯದ ಶಿಕ್ಷಣವನ್ನು  ಪಡೆಯುತ್ತಿದ್ದಾರೆ. ಜನ್ಮಾಂ ವಿದ್ಯಾರ್ಥಿಗಳಿಗೆ ಕುರುಡು ಲಿಪಿಯ ಮೂಲಕ ಓದು ಬರಹವನ್ನು ಕಲಿಸುವ ವ್ಯವಸ್ಥೆ ಇದೆ. ಇಂತಹ ಮಾದರಿಯ ಸಂಸ್ಥೆ ಇಡೀ ಭಾರತದಲ್ಲಿ ಇನ್ನೊಂದಿಲ್ಲ ಎನ್ನಬಹುದು. ಇಂದು ಕನ್ನಡ ನಾಡಿನಲ್ಲಿ ಕಾಣಬರುತ್ತಿರುವ ಸಂಗೀತ ಪ್ರಚಾರಕ್ಕೆ ಈ ಸಂಸ್ಥೆಯೇ ಕಾರಣವಾಗಿದೆ. ನೂರಾರು ಜನ ನುರಿತ ಶಿಕ್ಷರನ್ನು, ಸಂಗೀತ ಕಲಾ ನಿಪುಣರನ್ನು ಈ ಸಂಸ್ಥೆಯು ಸಮಾಜಕ್ಕೆ ಕಾಣಿಕೆಯಾಗಿ ನೀಡಿದೆ. ಉಳ್ಳವರು ಜಗತ್ತಿಗೆ ಬೇಕಾದ ಉಪಕಾರ ಮಾಡಬಹುದು. ಆದರೆ ಕಣ್ಣಿಲ್ಲದ ಅಸಹಾಯಕ ಸ್ಥಿತಿಯಲ್ಲಿದ್ದ ಗವಾಯಿಗಳು ಕಣ್ಣಿಲ್ಲದವರಿಗೆ ಮತ್ತು ನಿರ್ಗತಿಕರಿಗೆ ಗಾನ ವಿದ್ಯೆಯನ್ನು ದಾನ ಮಾಡಿದ್ದು, ಮತ್ತು ನಿರಂತರವಾಗಿ ಅಂತಹ ವ್ಯವಸ್ಥೆಯೊಂದನ್ನು ರೂಪಿಸಿ ಬೆಳೆಸಿದ್ದು ಒಂದು ಮಹಾನ್‌ ಸಾಧನೆಯಲ್ಲದೇ ಮತ್ತೇನು?

ಪಂಚಾಕ್ಷರಿ ಗವಾಯಿಗಳು ಅನುದಿನವೂ ತಮ್ಮ ಶಿಷ್ಯರಿಗೆ ಸಂಗೀತಾಭ್ಯಾಸವನ್ನು ಮಾಡಿಸುತ್ತಿದ್ದರು. ಬೆಳಗಿನ ೪ಘಂಟೆಯಿಂದ ಆರಂಭವಾಗುತ್ತಿದ್ದ ಅವರ ದಿನಚರಿ   ರಾತ್ರಿ ೧೨ಘಂಟೆಯವರೆಗೂ ನಡೆಯುತ್ತಿತ್ತು. ತನ್ಮಧ್ಯೆ ತಮ್ಮ ಸಂಗೀತಾಭ್ಯಾಸವನ್ನೂ ಮಾಡುತ್ತಿದ್ದರು. ತಬಲಾ, ಪಖವಜ ವಾದನಗಳಲ್ಲಿ ಅತ್ಯಂತ ಹೆಚ್ಚಿನ ಸಾಧನೆಯನ್ನು ಮಡಿದರು. ಗಾಯನವಲ್ಲದೇ ಹಾರ್ಮೋನಿಯಂ, ಪಿಟೀಲು, ಸಾಋಂಗಿ, ದಿಲ್ರುಬಾ ಹಾಗೂ ಕೊಳಲು ವಾದ್ಯಗಳನ್ನು ಹೇಳಿಕೊಡುವುದರಲ್ಲಿ ನಿಷ್ಣಾತರಾಗಿದ್ದರು. ಗಾಯಕರಾಗಿ, ಕೀರ್ತನಕಾರರಾಗಿ ಜನಮನ್ನಣೆಯನ್ನು ಪಡೆದರು. ಎಲ್ಲಡೆಗಳಲ್ಲಿ ವಿದ್ವಾಂಸರು, ಕಲಾಪ್ರೇಮಿಗಳು ಅವರಿಗೆ ಬಿರುದುಗಳನ್ನು ನೀಡಿ ಗೌರವಿಸಿ ಸತ್ಕರಿಸಿದರು. ಹುಬ್ಬಳ್ಳಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಂಗವಾಗಿ ನಡೆದ ಸಂಗೀತ ಗೋಷ್ಠಿಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಅವರ ಘನ ಸಂಸ್ಥೆಯಲ್ಲಿ ಕೀರ್ತನಕಾರರು, ಗವಾಯಿಗಳು, ಹಾರ್ಮೋನಿಯಂ, ತಬಲಾವಾದಕರು, ವೀಣೆ ನುಡಿಸುವವರು ಹೀಗೆ ಅನೇಕ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಸಮಾಜದ ಉದ್ಧಾರಕ್ಕಾಗಿ ಕೀರ್ತನ ಕಲೆಯನ್ನು ಕಲಿತು, ನಾಡಿನಲ್ಲಿ ಅದರ ಪ್ರಚಾರ ಮಾಡಿದರು. ಗೀತ ಕಚೇರಿ ನೀಡಿ ತಮ್ಮ ಸಂಚಾರಿ ಶಾಲೆಗಾಗಿ ಆ ಕಾಲಕ್ಕೆ ರೂ ೭,೦೦೦/- ಗಳ ದೇಣಿಗೆಯನ್ನು ಸಂಗ್ರಹಿಸಿದರು. ಅದನ್ನು ಸಂಗೀತ ಪ್ರಸಾರ ಮತ್ತು ಸಂಗೀತ ಶಾಲೆಗೆ ವಿನಿಯೋಗಿಸಿದರು.

ಹಲವು ಗುರುಗಳಿಂದ ಕಲಿತು, ಅನೇಕರ ಗಾಯನವನ್ನು ಆಲಿಸಿದ ಫಲವಾಗಿ ಪಂಚಾಕ್ಷರಿ ಗವಾಯಿಗಳ ಗಾಯನದಲ್ಲಿ ಹಲವು ಘರಾಣೆ ಶೈಲಿಗಳ, ಹಲವು ಗಾಯನ ಪ್ರಕಾರಗಳ ಮಾಧುರ್ಯ, ವೈವಿಧ್ಯತೆ ಸಮ್ಮಿಳಿತಗೊಂಡಿದ್ದವು. ಖ್ಯಾಲ್‌, ಠುಮರಿ,ಘಝಲ್‌, ಟಪ್ಪಾ, ದ್ರುಪದಗಳನ್ನು ಅವರು ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು. ವಿದ್ವತ್ತು, ಸರಳತೆ, ವಾತ್ಸಲ್ಯಗಳಿಂದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಸರಳ ರೀತಿಯ ಅವರ ಕಲಿಸುವಿಕೆಯ ಕ್ರಮವು ಶಾಸ್ತ್ರೀಯವಾಗಿತ್ತು. ಸ್ವರಸಾಧನೆಗೆ ಅವರು ಪ್ರಾಧಾನ್ಯವನ್ನು ನೀಡುತ್ತಿದ್ದರು. ಸಂಗೀತಕ್ಕೆ ಸ್ವರಾಭ್ಯಾಸವೇ ಬುನಾದಿಯಾದ್ದರಿಂದ ಆಕಾರದಿಂದಲೇ ಕಲಿಕೆಯನ್ನು ಆರಂಭಿಸುತ್ತಿದ್ದರು. ಅದು ವಿದ್ಯಾರ್ಥಿಗೆ ಕಠಿಣವೆನಿಸಿದರೆ, ಸರಿಗಮದಿಂದ ಪಾಠವನ್ನು ಆರಂಭಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಸ್ವರಜ್ಞಾನ ಚೆನ್ನಾಗಿ ಅರಿವಾ ಬಳಿಕ ರಾಗಗಳನ್ನು ಕಲಿಸುತ್ತಿದ್ದರು. ಆರೋಹ, ಅವರೋಹ, ವಾದಿ-ಸಂವಾದಿ ಸ್ವರಗಳು, ವಿಲಂಬಿತದಲ್ಲಿ ರಾಗ ವಿಸ್ತಾರ ಮಾಡುವ ಬಗ್ಗೆ, ಸ್ಥಾಯಿ, ಅಂತರಾ, ಬೋಲತಾನ, ಗಮಕತಾನ, ಧೃತ್‌ನಲ್ಲಿ ಸಂಚಾರ ಇವೆಲ್ಲವುಗಳನ್ನು  ಹಂತ ಹಂತವಗಿ ಸುವಿಸ್ತಾರವಗಿ ಅಭ್ಯಾಸ ಮಾಡಿಸುತ್ತಿದ್ದರು. ಚೀಜುಗಳ ಅರ್ಥ, ಪ್ರತಿರಾಗದ ರಸಭಾವ ವಿಶದೀಕರಿಸಿ, ಆಯಾ ರಾಗದ ಸ್ವಭಾವ ವಿದ್ಯಾರ್ಥಿಗಳ ಮನದಲ್ಲಿ ಸ್ಥಿರವಾಗಿ ನಿಲ್ಲುವಂತೆ ಪಾಠ ಹೇಳುತ್ತಿದ್ದರು. ಕಠಿಣ ವಿಷಯಗಳನ್ನು ನಿರಾಯಾಸವಾಗಿ ಕಲಿಸುವ ಜಾಣ್ಮೆ ಪಂಚಾಕ್ಷರ ಗವಾಯಿಗಳದು ಎಂಬುದಾಗಿ ಪ್ರಸಿದ್ಧ ಸಂಗೀತ ವಿಮರ್ಶಕ-ಲೇಖಕ ಸದಾನಂದ ಕನವಳ್ಳಿಯವರು ತಮ್ಮ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.

೧೯೨೫ರಲ್ಲಿ ಕೊಣ್ಣೂರಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಂಚಾಕ್ಷರ ಗವಾಯಿಗಳ ಗಾಯನವನ್ನು ಆಲಿಸಿದ ಮೈಸೂರಿನ ಬಿಡಾರಂ ಕೃಷ್ನಪ್ಪನವರು ನಮ್ಮ ಮೈಸೂರು ಆಸ್ಥಾನದಲ್ಲಿ ಪಂಚಾಕ್ಷರ ಗವಾಯಿಗಳಂತಹ ಗವಾಯಿ ಇಲ್ಲ. ಉತ್ತರ ಕರ್ನಾಟಕದಲ್ಲಿ ಇಂತಹ ವಿದ್ವಾಂಸರು ಇದ್ದುದರ ಕಲ್ಪನೆ ನಮಗಿರಲಿಲ್ಲ ಎಂದು ಉದ್ಗರಿಸಿದರು. ಜಮಖಂಡಿ, ಸಾಂಗಲಿ, ಕೊಲ್ಲಾಪೂರ ಮೊದಲಾದ ಪಟ್ಟಣಗಳಲ್ಲಿ ಮತ್ತು ರಾಜರ ಅರಮನೆಗಳಲ್ಲಿ ಪಂಚಾಕ್ಷರ ಗವಾಯಿಗಳ ಕಚೇರಿಗಳು ಯಶಸ್ವಿಯಾಗಿ ನಡೆದು ಮುಕ್ತ ಕಂಠದ ಪ್ರಶಂಸೆ ಸಂಪಾದಿಸಿದವು.

ಪಂಚಾಕ್ಷರಿ ಗವಾಯಿಗಳು ನಿಷ್ಣಾತ ಕೀರ್ತನಕಾರರಾಗಿದ್ದರು. ಮೋಡಿ ಮಾಡಬಲ್ಲ ಅವರ ವಾಗ್ಝರಿ ಸಮಯಾನುಸಾರ ಸಾದರ ಪಡಿಸುತ್ತಿದ್ದ ರಸವತ್ತಾದ ಹಾಸ್ಯ ಪ್ರವೃತ್ತಿ, ಕಥೆ ಹೇಳುವ ಕಲೆ ಅವರನ್ನು ಶ್ರೇಷ್ಠ ಮಟ್ಟದ ಕೀರ್ತನಕಾರರನ್ನಾಗಿ ಮಾಡಿತ್ತು. ಶಿವಕೀರ್ತನಪಟು ಎಂದೇ ಖ್ಯಾತಿಯನ್ನು ಹೊಂದಿದ್ದು ಅವರಿಗೆ ಜನರನ್ನು ಮಂತ್ರಮುಗ್ಧರನ್ನಾಗಿಸುವ ಕಲೆ ಕರಗತವಾಗಿತ್ತು.

೧೯೩೦ರ ದಶಕದಲ್ಲಿಯೇ ಕನ್ನಡ ಭಾಷೆಯ ಬೆಳವಣಿಗೆಯ ಬಗೆಗೆ ಪಂಚಾಕ್ಷರಿ ಗವಾಯಿಗಳು ಆಸಕ್ತಿ ತಳೆದಿದ್ದರೆಂಬುದು ಅಭಿಮಾನದ ಸಂಗತಿ. ೧೯೩೩ರಲ್ಲಿ ಎಚ್‌.ಎಮ್‌.ವಿ. ಕಂಪೆನಿಯಿಂದ ಧ್ವನಿಮುದ್ರಣಕ್ಕಾಗಿ ಗವಾಯಿಗಳಿಗೆ ಆಹ್ವಾನ ಬಂದಿತ್ತು. ಕನ್ನಡ ಚೀಜುಗಳನ್ನು ಹಾಡುವುದಾಗಿ ಅವರು ಹೇಳಿದಾಗ ಕಂಪೆನಿಯವರು ಗಾಬರಿಗೊಂಡು ಸಾಧ್ಯವಿಲ್ಲವೆಂದು ಹೇಳಿದರು. ಕನ್ನಡ ಚೀಜುಗಳಿಗೆ ಅವಕಾಶವಿಲ್ಲದಿದ್ದರೆ ಧ್ವನಿಮುದ್ರಣವೇ ಬೇಡ ಎಂದು ಗವಾಯಿಗಳೂ ಸ್ಪಷ್ಟಪಡಿಸಿದರು. ಕೊನೆಯಲ್ಲಿ ಎಚ್‌.ಎಂ.ವಿ. ಕಂಪನಿಯವರು ಅವರ ಷರತ್ತನ್ನು ಮನ್ನಿಸಿದರು. ಈಗಲೂ ಕೂಡಾ ಗಾಯಕರು ಕನ್ನಡ (ವಚನಗಳನ್ನುಳಿದು) ಚೀಜುಗಳನ್ನು ಹಾಡಲು ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ಐವತ್ತು ವರ್ಷಗಳಷ್ಟು ಕಾಲದ ಹಿಂದೆಯೇ ಪಂಚಾಕ್ಷರಿ ಗವಾಯಿಗಳು ಕನ್ನಡ ಡಿಂಡಿಮವನ್ನು ಬಾರಿಸಿದುದು ಅವರ ಮಾತೃಭಾಷಾ ಪ್ರೇಮವನ್ನು ನಿದರ್ಶಿಸುತ್ತದೆ.

೧೯೪೦ರಲ್ಲಿ ದೇಶದಲ್ಲಿ ಭೀಕರ ಕ್ಷಾಮ ತಲೆದೋರಿತು. ಆ ಸಮಯದಲ್ಲಿ ಪಂಚಾಕ್ಷರಿ ಗವಾಯಿಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಶಿಷ್ಯರಿದ್ದರು. ಹತ್ತು ಸಾವಿರ ರೂಪಾಯಿಗಳ ಸಾಲದ ಹೊರೆ ಇದ್ದಿತ್ತು. ಇದು ಅವರ ಪಾಲಿಗೆ ಕಠಿಣ ಪರೀಕ್ಷೆಯ ಸನ್ನಿವೇಶವಾಗಿತ್ತು. ಶಿಷ್ಯರನ್ನು ಕೆಲಕಾಲ ಅವರು ಊರುಗಳಿಗೆ ಕಳುಹಿಸಬೇಕೆಂದು ಕೆಲವರ ಸಲಹೆ ಮಾಡಿದರು. ಆದರೆ ಪಂಚಾಕ್ಷರ ಗವಾಯಿಗಳು ಅವರ ಸಲಹೆಯನ್ನು ತಿರಸ್ಕರಿಸಿದರು. ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಆ ಬಡ ಮಕ್ಕಳನ್ನು ಅವರ ಊರುಗಳಿಗೆ ಕಳುಹಿಸುವುದು ಸಲ್ಲದೆಂದು ಹೇಳಿದರು. ದಿಟ್ಟತನದಿಂದ ದುರ್ಭರ ಪ್ರಸಂಗವನ್ನು ಎದುರಿಸಲು ಸಿದ್ಧರಾದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಪಾಲಿನ ಕಾಯಕವನ್ನು

ತಾನೇ ಮಾಡಬೇಕೆಂದು ಅಪ್ಪಣೆ ಕೊಡಿಸಿದರು. ಸಂಸ್ಥೆಯ ನಿರ್ವಹಣೆಗೋಸ್ಕರ ೧೯೪೦ರ ವಿಜಯದಶಮಿಯಂದು ನರಗುಂದದಲ್ಲಿ ಸೊಲ್ಲಾಪುರದ ಸಿದ್ಧರಾಮೇಶ್ವರ ಎಂಬ ನಾಟಕವನ್ನು ತಮ್ಮ ತಮ್ಮ ಊರುಗಳಲ್ಲಿ ಆಡಬೇಕೆಂದು ಪ್ರೇಕ್ಷಕರು ಭಿನ್ನವಿಸಿದರು. ಈ ಪ್ರತಿಕ್ರಿಯೆಯಿಂದ ಉತ್ಸಾಹಿತರಾದ ಗವಾಯಿಗಳು ತಮ್ಮ ನಾಟಕ ಸಂಘಕ್ಕೆ ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಸಂಘ ಎಂಬ ಹೆಸರಿಟ್ಟು, ಸ್ಥಿರಗೊಳಿಸಿದರು. ಈ ನಾಟಕ ಸಂಘವು ಗದಗದಲ್ಲಿ ಹೇಮರೆಡ್ಡಿ ಮಲ್ಲಮ್ಮ ನಾಟಕದ ೩೭೬ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿತು. ಸಂಗೀತ, ಸಾಹಿತ್ಯ, ನಾಟ್ಯಕಲೆಗಳ ಸಂಗಮವಾಗಿದ್ದ ಈ ಸಂಘವು ಸಾವಿರಾರು ವಿದ್ಯಾರ್ಥಿಗಳಿಗೆ ನಾನಾ ಕಲೆಗಳನ್ನು ಕಲಿಸಿಕೊಟ್ಟಿತು. ಉತ್ತಮ ತರಗತಿಯ ನಾಟಕ ಕಲೆಯನ್ನು ಅಭಿನಯ ಕಲಾಕಾರರಿಗೆ ಕಲಿಸಿಕೊಟ್ಟು ತನ್ಮೂಲಕ ಸಮಾಜದಲ್ಲಿ ನೈತಿಕ ಮನೋಭಾವವನ್ನು ಪೋಷಿಸಿ ಬೆಳೆಸಿದ ಹೆಗ್ಗಳಿಕೆಕ ಅವರ ನಾಟ್ಯ ಸಂಘದ್ದು.

ಅಸಂಖ್ಯ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಪಂಡಿತ ಪಂಚಾಕ್ಷರಿ ಗವಾಯಿಗಳು ಊರಿಂದ ಊರಿಗೆ ಅಲೆದಾಡುತ್ತಿದ್ದರು. ಕೀರ್ತನ, ನಾಟಕಗಳಿಂದ ಆರ್ಜಿಸಿದ ಹಣದಿಂದ ಅವರ ಹೊಟ್ಟೆ-ಬಟ್ಟೆ ನಡೆಯಬೇಕಿತ್ತು. ಎಲ್ಲಿಯಾದರೂ ಒಂದೆಡೆಯಲ್ಲಿ ನೆಲೆ ನಿಂತು ಶಿಷ್ಯರಿಗೆ ಸಂಗೀತ ಪಾಠ ಹೇಳಿಕೊಡುವ ಆಶೆ ಅವರಿಗಿತ್ತಾದರೂ ಅಂದಿನ ಪರಿಸ್ಥಿತಿಯಲ್ಲಿ ಅದು ಅಸಾಧ್ಯವಾಗಿತ್ತು. ತಮ್ಮ ಗುರಿಯತ್ತ ಅಚಲ ವಿಶ್ವಾಸದಿಂದ, ದೃಢ ನಿಶ್ಚಯದಿಂದ ಮುನ್ನಡೆದಿದ್ದ ಪಂಚಾಕ್ಷರಿ ಗವಾಯಿಗಳು ತಮ್ಮ ಅಲೆಮಾರಿ ಜೀವನದಲ್ಲಿಯೇ ತಮ್ಮ ಕಾರ್ಯವನ್ನು ಅನೂಚಾನವಾಗಿ ನಡೆಸುತ್ತ ಬಂದಿದ್ದರು. ೧೯೪೨ರಲ್ಲಿ ಗವಾಯಿಗಳ ಕ್ಯಾಂಪು ಶಿರಹಟ್ಟಿಯಲ್ಲಿತ್ತು. ಎಂಬತ್ತು ಜನ ಶಿಷ್ಯರನ್ನು ಪೋಷಿಸಬೇಕಾಗಿತ್ತು. ಅದಕ್ಕೆ ಮಿಗಿಲಾಗಿ ಸಾಲದ ಹೊರೆ. ಆ ದಿನಗಳು ಗವಾಯಿಗಳ ಕಡುಕಷ್ಟದ ದಿನಗಳಾಗಿದ್ದವು . ಗದಗಿನ ಸಮಾಜ ಸೇವಾ ಮನೋಭಾವದ ಕೊಡುಗೈ ದಾನಿಯಾದ ಶ್ರೀ ವೀರಪ್ಪ ಬಸರೀಗಿಡದ ಅವರಿಗೆ ಗವಾಯಿಗಳ ಬಗೆಗಿನ ಸುದ್ದಿ ತಿಳಿಯಿತು. ಅವರನ್ನು ಗದಗಿದೆ ಕರೆತಂಧು ತಮ್ಮ ಜಾಗದಲ್ಲಿ ವೀರೇಶ್ವರ ಪುಣ್ಯಾಶ್ರಮ ಕಟ್ಟಿಸಿ ಪಂಚಾಕ್ಷರ ಗವಾಯಿಗಳು ಗದಗಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಅನುಕೂಲ ಒದಗಿಸಿದರು.

ಪಂಡಿತ ಪಂಚಾಕ್ಷರಿ ಗವಾಯಿಗಳು ಹುಟ್ಟು ಕುರುಡರಾಗಿದ್ದರೂ ನಾದಜ್ಞಾನ ಚಕ್ಷುಗಳಾಗಿದ್ದರು. ಅವರ ಜೀವನವು ಶ್ರುತಿಗೊಳಿಸಿದ ವೀಣೆಯಂತ್ತಿತು. ನಾದ ಯೋಗದಿಂದಲೇ ನಾದ ಬ್ರಹ್ಮನನ್ನಲು ಒಲಿಸಿಕೊಂಡರು. ನಾದಾಂತನನ್ನೇ ವೇದಾಂತನೆಂದು ಭಾವಿಸಿ ಪರಿಪೂರ್ಣತೆಯತ್ತ ನಡೆದರು. ಕೇವಲ ಗಾಯಕರಷ್ಟೇ ಅಲ್ಲದೆ, ವಾಗ್ಗೇಯಕಾರರು, ನಾಟಕಕಾರರು ಎಂಬ ಖ್ಯಾತಿಯನ್ನು ಪಡೆದರು. ಅಪಾರ ಶಿಷ್ಯವೃಂದವನ್ನು ಸೃಷ್ಟಿಸಿಕೊಂಡು ತಮ್ಮ ಧ್ಯೇಯ ಸಾಧನೆಯ ವ್ಯಾಪ್ತಿಯನ್ನು ವಿಸ್ತರಿಸಿದ ಹಿರಿಮೆ ಇವರದು. ಸರ್ವಧರ್ಮೀಯ ವಿದ್ಯಾರ್ಥಿಗಳನ್ನು ಹೊಂದಿದ್ದ ಅವರ ಮನೋಭಾವನೆ ಅತ್ಯಂತ ವಿಶಾಲವಾಗಿತ್ತು. ಮಾನವೀಯ ಅನುಕಂಪದಿಂದ ಕೂಡಿತ್ತು. ಜಾತಿ, ಮತ ಪಂಥವವೆನ್ನದೆ ಯಾರಲ್ಲಿಯೂ ವ್ಯತ್ಯಾಸವನ್ನು  ಎಣಿಸದೆ, ತಮ್ಮ ಬಳಿ ಬರುವ ಸಕಲರಿಗೂ ಆಶ್ರಯವಿತ್ತರು. ಸರಕಾರದಿಂದ ನೆರವು ಪಡೆಯದೇ ಉಚಿತ ಊಟ, ವಸತಿ , ವಿದ್ಯೆಗಳನ್ನು ನೀಡುವ ವೀರೇಶ್ವರ ಪುಣ್ಯಾಶ್ರಮವು ಭಾರತದಲ್ಲಿ ಏಕಮೇವವಾದುದು ಎಂದು ಹೇಳಬಹುದು.

ಯಾವುದೊಂದು ಸಂಸ್ಥೆಯ ಹಿರಿಮೆ, ಘನತೆ, ಉದಾತ್ತತೆ ಅದಕ್ಕೆ ಸಂಬಂಧಿಸಿದ ಸ್ಥಾವರ ಆಸ್ತಿಪಾಸ್ತಿಗಳನ್ನು ಆಧರಿಸಿರುವುದಿಲ್ಲ. ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಶಾಲೆಯ ಹಿರಿಮೆ ಅದರ ಶಿಷ್ಯರ ಸಾಧನೆಗಳ ಮೂಲಕ ನಿದರ್ಶನಗೊಂಡಿವೆ. ಮೂರು ದಶಕಗಳ ಅವಿಚ್ಛಿನ್ನವಾಗಿ ಸಂಗೀತ ಬೋಧನೆ, ಸಾಧನೆ ಮಾಡಿದ ಗವಾಯಿಗಳು ಅಪಾರ ಶಿಷ್ಯ ಸಂಪತ್ತನ್ನು ಆರ್ಜಿಸಿದ್ದಾರೆ. ಅವರ ಶಿಷ್ಯರಲ್ಲಿ ಅನೇಕರು ಶಾಲೆಗಳಲ್ಲಿ, ಬೇರೆ ಬೇರೆ ಸಂಸ್ಥೆಗಳಲ್ಲಿ ಅಧ್ಯಾಪನ ವೃತ್ತಿಯನ್ನು ಕೈಕೊಂಡಿದ್ದಾರೆ. ಹಲವಾರು ಮಂದಿ ಕೀರ್ತನಕಾರರಾಗಿದ್ದಾರೆ. ಕೆಲವರು ಬಾನುಲಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜನ್ಮಾಂಧ ವಿದ್ಯಾರ್ಥಿಗಳು ಸಂಗೀತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ನಾವು ಕುರುಡರೆಂದು ವ್ಯಸನ ಪಡದೆ ಸ್ವಾವಲಂಬನದ ಜೀವನವನ್ನು ಸಾಗಿಸಲು ಕಲಿಯಬೇಕು ಎಂದು ಗವಾಯಿಗಳು ತಮ್ಮ ಕುರುಡ ಶಿಷ್ಯರಿಗೆ ಉಪದೇಶಿಸಿದ್ದಾರೆ. ದೂರದ ಮುಂಬೈ ಮತ್ತು ಮದರಾಸುಗಳಲ್ಲಿಯೂ ಈ ಆಶ್ರಮದ ಶಿಷ್ಯರಿದ್ದಾರೆ. ಅಲ್ಲಿ ಅವರು ಕಲೆಯ ಕ್ಷೇತ್ರದಲ್ಲಿ ಹೆಸರನ್ನು ಗಳಿಸಿ ನೆಮ್ಮದಿಯಿಂದ ಬದುಕುತ್ತಿದ್ದಾರೆ.

ಪಂಡಿತ ಪಂಚಾಕ್ಷರಿ ಗವಾಯಿಗಳ ಗರಡಿಯಲ್ಲಿ ತರಬೇತಿ ಪಡೆದು ಸಕಲಶಾಸ್ತ್ರ ಕಲಾ ನಿಪುಣರಗಿ ಗುರುವಿನ ನಂತರದಲ್ಲಿ ಪುಣ್ಯಾಶ್ರಮದ ಕುಲಪತಿಗಳಾಗಿ, ಗುರುವಿನ ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿರುವ ಶ್ರೀ ಪುಟ್ಟರಾಜ ಗವಾಯಿಗಳು ಪಂಡಿತ ಪಂಚಾಕ್ಷರಿ ಗವಾಯಿಗಳ ಹೆಮ್ಮೆಯ ಶಿಷ್ಯರು. ಸಂಸ್ಕೃತ, ಕನ್ನಡ, ಹಿಂದಿ ಭಾಷೆಗಳಲ್ಲಿ ಕವಿತ್ವ ಶಕ್ತಿಯನ್ನು ಬೆಳೆಸಿಕೊಂಡು ಆ ಭಾಷೆಗಳಲ್ಲಿ ಉತ್ತಮ ಕಾವ್ಯ ರಚನೆ ಮಾಡಿ ಪಂಡಿತರಿಂದ ಸನ್ಮಾನಿತರಾಗಿದ್ದಾರೆ.

ಪಂಚಾಕ್ಷರಿ ಗವಾಯಿಗಳಲ್ಲಿ ಕಲಿತ ಗಾಯಕರು, ವಾದಕರು, ಕೀರ್ತನಕಾರರಿಗೆ ಲೆಕ್ಕವಿಲ್ಲ. ಪುಟ್ಟರಾಜ ಗವಾಯಿಗಳು, ಬಸವರಾಜ ರಾಜಗುರು, ಚಿತ್ತರಗಿಯ ಗಂಗಾಧರಶಾಸ್ತ್ರಿ, ಸಿದ್ಧರಾಮ ಜಂಬಲದಿನ್ನಿ, ಕಮತಗಿಯ ಗದಿಗೆಪ್ಪ ಗವಾಯಿ, ಶಂಕರರವ ದೀಕ್ಷಿತ, ಸದಾಶಿವಯ್ಯ ಹಾಲಿಗಿಮರುಳ, ಅನ್ನದಾನಯ್ಯ ಹಿರೇಮಠ, ಪಂಚಾಕ್ಷರ ಮತ್ತಿಗಟ್ಟಿ, ಅರ್ಜುನಸಾ ನಾಕೋಡ, ಶೇಷಾದ್ರಿ ಗವಾಯಿ, ಪುರಾಣಿಕತ್ರಯರು (ಮೃತ್ಯಂಜಯ, ಚಂದ್ರಶೇಖರ, ಬಸವರಾಜ), ಲಕಮಾಪುರದ ಜಯದೇವಗವಾಯಿ ಹೀಗೆ ಅನೇಕರು ಒಂದೊಂದು ಕಲೆಯಲ್ಲಿ ಪರಿಣತಿಯನ್ನು ಸಾಧಿಸಿದ್ದಾರೆ.

ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬಲವಾದ ವಿಶ್ವಾಸವನ್ನು ಹೊಂದಿದ್ದ ಪಂಡಿತ ಪಂಚಾಕ್ಷರಿ ಗವಾಯಿಗಳು ತಮ್ಮ ಗುರುಕುಲದಲ್ಲಿಯ ಯೋಗ್ಯ ವಿದ್ಯಾರ್ಥಿಗಳಲ್ಲಿ ಕೆಲವರನ್ನು ಆಯುರ್ವೇದ ಅಭ್ಯಾಸಕ್ಕಾಗಿಯೇ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅಂಥಹ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನೂ ಮಾಡಿದ್ದಾರೆ. ಹೀಗೆ ತಮ್ಮ ಶಿಷ್ಯರಲ್ಲಿ ಅನೇಕರನ್ನು ಆಯುರ್ವೇದ ತಜ್ಞರನ್ನಾಗಿ ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿಯ ತಮ್ಮ ವಿಶಿಷ್ಟವಾದ ಸಾಧನೆಯಿಂದ ಪಂಡಿತ ಪಂಚಾಕ್ಷರಿ ಗವಾಯಿಗಳು ಹಲವು ಹತ್ತು ಬಿರುದುಗಳನ್ನು ಪಡೆದಿದ್ದಾರೆ. ಉಭಯಗಾನ ವಿಶಾರದ, ಸಂಗೀತ ರತ್ನ, ಸಂಗೀತ ಸಾಮ್ರಾಟ, ಲಲಿತ ಕಲಾ ಪಿತಾಮಹ, ಗಾನಯೋಗಿ, ಭೂಗಂಧರ್ವಚಂದ್ರ, ಗಾನ ಕಲಾನಿಧಿ, ಸಂಗೀತ ಸಾಗರ, ಸಂಗೀತ ಸುಧಾನಿಧಿ, ಗಾಯನಾಚಾರ್ಯ, ಉಭಯಗಾಯನಾಚಾರ್ಯ ಮೊದಲಾದವುಗಳು ಅವರಿಗೆ ಸಂದ ಬಿರುದುಗಳಾಗಿವೆ.

ಬಿಡುವಿಲ್ಲದ ದುಡಿತ, ದೇಹ ದಂಡನೆ, ಎಡೆಬಿಡದ ಪುರಾಣ ಪ್ರವಚನ, ಶಿವಾನುಭವ ಪ್ರವಚನ, ಶಿವಕೀರ್ತನೆ, ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದು-ಹೀಗೆ ಗವಾಯಿಗಳಿಗೆ ವಿಶ್ರಾಂತಿಯೇ ಇರಲಿಲ್ಲ. ಅಜೀವಪರ್ಯಂತ ನಿರಂತರ ದುಡಿಮೆಯಿಂದಾಗ ಕೊನೆಯ ದಿನಗಳಲ್ಲಿ ಅವರ ಆರೋಗ್ಯ ಕೆಟ್ಟಿತು. ಉದರ ರೋಗ ಕಾಣಿಸಿಕೊಂಡಿತು. ಆರೋಗ್ಯ ಕೆಟ್ಟಾಗಲೂ ಅವರು ತಮ್ಮ ದಿನಚರಿಯನ್ನು ಬಿಡಲಿಲ್ಲ. ಸೂಜಿಮದ್ದಿನ ಚಿಕಿತ್ಸೆಯನ್ನು ಪಡೆದುಕೊಳ್ಳಲು ನಿರಾಕರಿಸಿದರು. ಶಸ್ತ್ರಚಿಕಿತ್ಸೆಗೆ ಅವರನ್ನು ಒಪ್ಪಿಸುವಾಗಲೇ ಕಾಲ ಮಿಂಚಿತ್ತು. ೧೯೪೪ರ (ಜೇಷ್ಠ ಬಹುಳ ಪಂಚಮಿ) ಜೂನ್‌ ೧೧ರಂದು ಕಾಯಕನಿರತ ಪಂಚಾಕ್ಷರಿ ಗವಾಯಿಗಳು ಲಿಂಗ ಪೂಜೆಯಲ್ಲಿ ತೊಡಗಿರುವಾಗಲೇ ತಮ್ಮ ಅಂತಿಮ ಶ್ವಾಸವನ್ನು ಬಿಟ್ಟು ಅಮರರಾದರು.