ಎಪ್ಪತ್ತೈದಕ್ಕೆ ಕಾಲಿಟ್ಟಿರುವ (ಜನನ ೧೨.೧೦.೧೯೨೭) ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಜೈಪುರ-ಅತ್ರೌಳಿ ಘರಾಣೆಯ ಹಿರಿಯ ಗಾಯಕರು. ಆಕಾಶವಾಣಿ-ದೂರದರ್ಶನಗಳ ಎ ಶ್ರೇಣಿಯ ಕಲಾವಿದರು. ಈ ಇಳಿವಯಸ್ಸಿನಲ್ಲೂ ಇನ್ನೂ ಕಲಿಯುವ ಅದಮ್ಯ ಉತ್ಸಾಹ. ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ಕೊಲ್ಹಾಪುರಕ್ಕೆ ಹೋಗಿ ಒಂದು ವಾರ ಇದ್ದು ಬಾಬಾ ಅಜೀಜುದ್ದೀನಖಾನರಲ್ಲಿ (ಬುರ್ಜಿಖಾನರ ಮಗ, ಅಲ್ಲಾದಿಯಾಖಾನರ ಮೊಮ್ಮಗ) ಕಲಿಯುತ್ತಿರುವರು. ಅಜೀಜುದ್ದೀನಖಾನರು ರಾಗ-ರಾಗಿಣಿಗಳ ಗಣಿ. ೮೦೦ ರಾಗಗಳನ್ನು ಬಲ್ಲವರು. ಬಿಲಾವಲ ರಾಗವೊಂದರಲ್ಲಿಯೆ ೯೦ ಪ್ರಕಾರಗಳನ್ನು ಬಲ್ಲವರು. ಶಂಕರಾ ಅರನ್‌, ಗೌಂಡಗಿರಿ ಮಲ್ಹಾರ, ಲಚ್ಚಾಸಾಗ, ರಾಮಸಾಗ, ದೇವಸಾಗ, ಭಿವಸಾಗ ಹೀಗೆ ಇನ್ನೂ ಅಸಂಖ್ಯ ಅಪ್ರಚಲಿತ ರಾಗಗಳ ಭಂಡಾರವಾಗಿದ್ದಾರೆ. ಬುರ್ಜಿಖಾನರ ಮರಣಾನಂತರ ಮಲ್ಲಿಕಾರ್ಜುನ  ಮನಸೂರ ಸಹ ಅಜೀಜುದ್ದೀನ ಖಾನರಿಂದ ಅನೇಕ ಚೀಜುಗಳನ್ನು ಕಲಿತಿದ್ದನ್ನು ಕಾಣುತ್ತೇವೆ.

ಪಂಚಾಕ್ಷರಿಸ್ವಾಮಿ ಹುಟ್ಟಿದ್ದು ತಾಯಿ ಸಾತವ್ವರ ತವರೂರಾದ ಶಿಶುನಾಳದಲ್ಲಿ. ತಂದೆಯ ಊರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮತ್ತಿಗಟ್ಟಿ. ತಂದೆ ಚನ್ನಬಸವಯ್ಯ ಶರೀಫರ ಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಮನೆಯಲ್ಲಿ ಸದಾ ತಬಾಲ ಪೇಟಿ.

ವಿಸ್ಮಯವೆಂದರೆ ಪಂಚಾಕ್ಷರಿಸ್ವಾಮಿ ನಿಜಕ್ಕೂ ಸತ್ತು ಹುಟ್ಟಿದ್ದು. ಆರು ತಿಂಗಳ ಕೂಸಿದ್ದಾಗ ಮೃತಪಟ್ಟು ಸ್ಮಶಾನಕ್ಕೂ ಒಯ್ಯಲಾಗಿತ್ತು. ಕುಣಿತೋಡಿದರು. ಇನ್ನೇನು ಕುಣಿಯಲ್ಲಿ ಇಡಬೇಕು. ಏನಾಶ್ಚರ್ಯ! ಕೂಸು ಅಳಲಾರಂಭಿಸಿತು. ಕೂಸನ್ನು ಮನೆಗೆ ತಂದರು. ಅದೇ ಕೂಸು ಇಂದು ಹಿಂದುಸ್ತಾನಿ ಸಂಗೀತದ ಉಚ್ಚ ಗಾಯಕನಾಗಿದೆ. ಬಾಲ್ಯವನ್ನು ಶಿಶುನಾಳದಲ್ಲಿ ಕಳೆದ ಪಂಚಾಕ್ಷರಿಸ್ವಾಮಿಗೆ ಶಿಶುನಾಳ ಶರೀಫರ ಮೊಮ್ಮಗ ಮೊಯಿನುದ್ದೀನನ ಸ್ನೇಹ. ಅವನೇಕ ಪಂಚಾಕ್ಷರಿಸ್ವಾಮಿಯಲ್ಲಿ ಸಂಗೀತಬೀಜ ನೆಟ್ಟವನು. ಅವನು ಕಲಿಸಿದ ಕರ್ನಾಟಕ ಕೃತಿ ‘ಪಾಲಯಮಾಂ ಶ್ರೀ ಗೌರಿ’ ಪಂಚಾಕ್ಷರಿ ಸ್ವಾಮಿಯವರಿಗೆ ಇನ್ನೂ ಹಸಿರಾಗಿದೆ.

ಪಂಚಾಕ್ಷರಿಸ್ವಾಮಿ ತಮ್ಮ ಏಳನೆಯ ವಯಸ್ಸಿನಲ್ಲಿಯೆ ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಕಲಿಯಲು ಆರಂಭಿಸಿದರು. ಪಂಚಾಕ್ಷರಿ ಗವಾಯಿಗಳು ಉಭಯ ಗಾಯನಾಚಾರ್ಯರು. ಕಿರಾಣಾ ಘರಾಣೆಯ ಅಬ್ದುಲ್‌ ವಹೀದಖಾನ ಮತ್ತು ಗ್ವಾಲಿಯರ ಘರಾಣೆಯ ನೀಲಕಂಠಬುವ ಮೀರಜಕರರ ಶಿಷ್ಯರು. ವಿಚತ್ರವೆಂದರೆ, ಪಂಚಾಕ್ಷರಿಸ್ವಾಮಿಯ ತಂದೆ ಚನ್ನಬಸಯ್ಯರು ಪಂಚಾಕ್ಷರಿ ಗವಾಯಿಗಳಲ್ಲಿ ಕಲಿಯಬಯಸಿದ್ದರು. “ಮದುವೆಯಾದವರಿಗೆ ನಾನು ಕಲಿಸುವುದಿಲ್ಲ. ನಿನ್ನ ಹೊಟ್ಟಾಗ ಹುಟ್ಟಿದವರು ಯಾರಾದರೂ ಇದ್ದರೆ ಕಳಿಸು” ಎಂದು ಪಂಚಾಕ್ಷರಿ ಗವಾಯಿಗಳ ಅಪ್ಪಣೆ. ಆ ಭಾಗ್ಯ ಮಗನಿಗೆ ಲಭಿಸಿತು. ಪಂಚಾಕ್ಷರಿಸ್ವಾಮಿಯು ಪಂಚಾಕ್ಷರಿ ಗವಾಯಿಗಳ ಸಂಗೀತಶಾಲೆ ಸೇರಿದಾಗ ಪುಟ್ಟರಾಜ ಗವಾಯಿಗಳು, ಬಸವರಾಜ ರಾಜಗುರು ಹಿರಿಯ ಸಹಪಾಠಿಗಳು. ಸಿದ್ಧರಾಮ ಜಂಬಲದಿನ್ನಿ ಸಮವಯಸ್ಕ ಸಹಪಾಠಿ.

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಹತ್ತು ವರ್ಷ ಪಂಚಾಕ್ಷರಿ ಗವಾಯಿಗಳಲ್ಲಿ ಪರಿಶ್ರಮವಹಿಸಿ ಅಭ್ಯಾಸ ಮಾಡಿದರು. ಪಂಚಾಕ್ಷರಿ ಗವಾಯಿಗಳು ಶಿಷ್ಯರನ್ನು ಬಾಗಿಲು ತಟ್ಟಿ ಬೆಳಿಗ್ಗೆ ಐದು ಘಂಟೆಗೆ ಎಬ್ಬಿಸುತ್ತಿದ್ದರು. ಐದರಿಂದ ಏಳರವರೆಗೆ ತೋಡಿ ರಾಗದ ಅಭ್ಯಾಸ. ಆರು ತಿಂಗಳು ಅದೊಂದೇ ರಾಗದ ಅಭ್ಯಾಸ. ಆರು ತಿಂಗಳು ಜೀವನಪುರಿ ರಾಗದ ಅಭ್ಯಾಸ. ಹೀಗೆಯೆ, ಒಂದೊಂದಾಗಿ ರಾಗಗಳಿಗೆ ಭದ್ರ ಬುನಾದಿ.

ಪಂಚಾಕ್ಷರಿ ಗವಾಯಿಗಳು ತಮ್ಮ ವಿದ್ಯಾರ್ಥಿಗಳ ಪೋಷಣೆಗಾಗಿ ಬಹಳಷ್ಟು ಸಾಲಸೋಲ ಮಾಡಿದರು. ಸಾಲ ತೀರಿಸಲು ಉಪಾಯವೆಂದು ನಾಟಕ ಕಂಪನಿ ಪ್ರಾರಂಭಿಸಿದರು. ಪಂಚಾಕ್ಷರಿ ಗವಾಯಿಗಳು ಕಂಪನಿಗೆ ತಮ್ಮ ಪಾಲನೆಪೋಷಣೆ ಮಾಡಿ ಮುಂದೆ ತಂದೆ ಗುರುಗಳಾದ ಹಾನಗಲ್ಲ ಕುಮಾರಸ್ವಾಮಿಗಳ ಹೆಸರನ್ನಿಟ್ಟರು: ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಸಂಘ. ಅದು ಗವಾಯಿಗಳ ಕಂಪನಿಯೆಂದೇ ಜನಜನಿತವಾಗಿತ್ತು. ಪಂಚಾಕ್ಷರಿ ಗವಾಯಿಗಳ ಶಿಷ್ಯರನೇಕರು ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಸ್ತ್ರೀಯರು ನಟಿಸುವಂತಿರಲಿಲ್ಲ. ಪುರುಷರೇ ಸ್ತ್ರೀಪಾತ್ರ ಮಾಡಬೇಕಿತ್ತು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಕೂಡ ನಾಟಕ ಕಂಪನಿ ಸೇರಿದರು. ಹಲವಾರು ವರ್ಷ ಅಭಿನಯಿಸಿದರು. ಯಾವ ಪಾತ್ರವಾದರೂ ಸೈ.ಆಲ್‌ರೌಂಡ್‌ ನಟ.ಹೇಮರಡ್ಡಿ ಮಲ್ಲಮ್ಮ ನಾಟಕ ಸತತವಾಗಿ ೩೭೬ ಪ್ರಯೋಗ ಕಂಡಿತ್ತು. ಅದರ ಪ್ರಧಾನ ಆಕರ್ಷಣೆ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ. ಅವರ ಅಭಿನಯ ಹಾಡುಗಾರಿಕೆ. ಅವರು ಮಲ್ಲಿಕಾರ್ಜುನ, ವೇಮನ, ಭರಮರೆಡ್ಡಿ ಪಾತ್ರಗಳಲ್ಲಿ ಮಿಂಚಿದರು. ಅಂದಿನ ನಾಟಕಗಳೆಲ್ಲ ಸಂಗೀತಮಯ. ಹಾಡುಗಳ  ಸುರಿಮಳೆ. ಅದರಲ್ಲೂ ಶಾಸ್ತ್ರೀಯ ಸಂಗೀತಾಧಾರಿತ ಹಾಡುಗಳು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಹಾಡುತ್ತಿದ್ದ ರಂಗಗೀತೆಗಳು ರಸಿಕರ ನಾಲಗೆಯ ಮೇಲೆ ಕುಣಿದಾಡುತ್ತಿದ್ದವು.

ಹೀಗಿರುತ್ತ ೧೯೪೪ರಲ್ಲಿ ಪಂಚಾಕ್ಷರಿ ಗವಾಯಿಗಳು ಸ್ವರ್ಗಸ್ಥರಾದರು. ಮುಂದೇನು? ಎಂಬ ಪ್ರಶ್ನೆ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಮುಂದೆ ಧುತ್ತೆಂದು ನಿಂತಿತು. ಅಂಥ ಸನ್ನಿವೇಶದಲ್ಲಿ ಗುರುವೇ ಶಿಷ್ಯನನ್ನರಸಿ ಬಂದಂತೆ ಮಲ್ಲಿಕಾರ್ಜುನ ಮನಸೂರ ಬಂದರು. ಅದರ ಕಥೆ ಹೀಗಿದೆ. ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಕಂಪನಿ ಗದಗಿನಲ್ಲಿಲ ಕ್ಯಾಂಪ್‌ ಮಾಡಿತ್ತಗು. ಒಂದು ರಾತ್ರಿ ಮಲ್ಲಿಕಾರ್ಜುನ ಮನಸೂರ ನಾಟಕ ನೋಡಲು ಬಂದರು. ಮನಸೂರರಿಗೆ ಸ್ನೇಹಿತರೊಬ್ಬರು ಹೇಳಿದ್ದರು: “ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟಕ ಕಂಪನಿಯಲ್ಲಿ ಮಲ್ಲಿಕಾರ್ಜುನನ ಪಾತ್ರ ಮಾಡುವ ಹುಡುಗನೊಬ್ಬ ಏನ ಹಾಡತಾನ! ನೀವು ಒಂದು ಸಲಲ ಕೇಳಬೇಕು”. ಆ ಹುಡುಗ ಯಾರೆಂದು ಮಲ್ಲಿಕಾರ್ಜುನ ಮನಸೂರರಿಗೆ ಗೊತ್ತಿತ್ತು.

ಮಧ್ಯಾಂತರದಲ್ಲಿ ಮಲ್ಲಿಕಾರ್ಜುನ ಮನಸೂರ ಗ್ರೀನ್‌ರೂಮಿಗೆ ಧಾವಿಸಿ ಬಂದು “ಮತ್ತಿಗಟ್ಟಿ ಎಲ್ಲಿ, ಮತ್ತಿಗಟ್ಟಿ ಎಲ್ಲಿ?” ಎಂದು ಆತುರಪಟ್ಟು ಕೇಳಿದರು. “ನಿನ್ನ ಕಡೆಗೆ ಒಂಧು ಕೆಲಸ ಐತಿ. ನಾಳೆ ಸಂಜೆಗೆ ಮುನಿಸಿಪಲ್‌ ಹೈಸ್ಕೂಲ ಗ್ರೌಂಡಿನ್ಯಾಗ ಇರತೀನಿ. ಬಂದು ಭೆಟ್ಟಿಯಾಗು” ಎಂದು ಹೇಳಿ ಹೊರಟುಹೋದರು. ಸಂಜೆ ಐದು ಘಂಟೆಗೆ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಮುನಿಸಿಪಲ್‌ ಹೈಸ್ಕೂಲ ಗ್ರೌಂಡಿಗೆ ಹೋಗಿ ಮಲ್ಲಿಕಾರ್ಜುನ ಮನಸೂರ ಅವರನ್ನು ಕಂಡರು. ಮನಸೂರರ ಜೊತೆ ಬಂಗ್ಲೆದ ಮಾಸ್ತರರು, ಸಿದ್ಧರಾಮ ಜಂಬಲದಿನ್ನಿ (ಅವರು ಅಷ್ಟೊತ್ತಿಗಾಗಲೆ ಮಲ್ಲಿಕಾರ್ಜುನ ಮನಸೂರರ ಶಿಷ್ಯರಾಗಿದ್ದರು) ಮತ್ತು ಭೀಮರಾವ ಹರಕಾರೆ ಇದ್ದರು. ಭೀಮರಾವ ಗದಗಿನವರಾಗಿದ್ದು ಜೈಪುರ ಗಾಯಕಿಯ ಅಪ್ಪಟ ಅಭಿಮಾನಿಗಳಾಗಿದ್ದರು. ಜೈಪುರ ಗಾಯಕಿ ಬಿಟ್ಟು ಬೇರೆ ಗಾಯಕಿ ಕೇಳುತ್ತಿರಲಿಲ್ಲ. ಸರಿ, ಮಲ್ಲಿಕಾರ್ಜುನ ಮನಸೂರ ಮಾತಿಗಾರಂಭಿಸಿದರು.

“ನಾನೂ ನಿನ್ಹಂಗ ಭಾಳ ವರ್ಷ ಬಣ್ಣ ಹಚ್ಚಿಕೊಂಡಾವ-ಅದಕ್ಕ ಈ ಮಾತ ಕೇಳತೀನಿ. ನೀ ಹೀಂಗ ಬಣ್ಣ ಹಚ್ಚಿಕೊಂತಾನ ಇರತೀಯಾಏನ? ಅದ ಬಿಟ್ಟು ಶಾಸ್ತ್ರೀಯ ಗಾಯನ ಹಿಡಿಯ್ಯಾವನೊ?”

“ಇಲ್ಲ ರೀ, ನನಗೂ ಶಾಸ್ತ್ರೀಯ ಗಾಯಕ ಆಗಬೇಕಂತ ಐತಿ”.

“ಹಂಗಾರ, ಯಾರ ಹತ್ರ ಕಲೀಬೇಕಂತ ಮಾಡೀದಿ?”

ನಾನೇ ಕಲಿಸುವೆನೆಂದು ಮಲ್ಲಿಕಾರ್ಜುನ ಮನಸೂರ ಹೇಳಲೊಲ್ಲರು. ನಿಮ್ಮಲ್ಲಿಯೆ ಕಲಿಯಬೇಕೆಂದಿರುವೆನೆಂದು ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಬಾಯಿ ಬಿಡಲೊಲ್ಲರು. ಒಬ್ಬರು ಇನ್ನೊಬ್ಬರ ಮನಸ್ಸಿನಲ್ಲೇನಿದೆ ಎನ್ನುವುದನ್ನು ತಿಳಿದುಕೊಳ್ಳುವಕಲ ಕುತೂಹಲ. ಸುಮ್ಮನೆ ನೋಡೋಣವೆಂದು ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅಂದರು.

“ಬಡೆ ಗುಲಾಮ ಅಲಿಖಾನರಲ್ಲಾಗಲಿ ನಿಸ್ಸಾರ ಹುಸೇನಖಾನರಲ್ಲಾಗಲಿ ಅಮೀರಖಾನರಲ್ಲಾಗಲಿ ಕಲೀಬೇಕಂತ ಮಾಡೀನಿ.”

ಹೀಗಂದದ್ದೇ ತಡ. ಭೀಮರಾವ ಹರಕಾರೆ ಮೂದಲಿಸಿದರು

“ಹುಚ್ಚಾ, ಎದುರಿಗೇ ಇರುವ ಸಂಗೀತಸಾಗರಾ ಬಿಟ್ಟು ಎಲ್ಲೆಲ್ಲೋ ಹೊರಟೀದಿ.”

ಪಂಚಾಕ್ಷರಿಸ್ವಾಮಿ ಬೇಕೆಂತಲೆ ಪರೀಕ್ಷಿಸೋಣವೆಂದು ಕೇಳಿದರು

“ಎಲ್ಲೈತ್ರಿ? ಸಂಗೀತಸಾಗರಾ?”

“ಮತ್ತೆಲ್ಲಿ? ಎದುರಿಗೇ ಕುಳಿತಿಲ್ಲೇನು? ಮಲ್ಲಿಕಾರ್ಜುನ ಮನಸೂರ ಅವರಂಥಾ ಗಾಯಕರು ಎಲ್ಲದಾರ?”

ಇದೆನ್ನೆಲ್ಲ ಗಮನಿಸುತ್ತಿದ್ದ ಮಲ್ಲಿಕಾರ್ಜುನ ಮನಸೂರ ನುಡದರು: “ನಿನ್ನ ಸಲುವಾಗೇ ಬಂದೀನಿ. ನಾಟಕ ಕಂಪನಿ ಬಿಟ್ ಬಾ. ನಾ ಕಲಿಸತೀನಿ”.

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಿಗೂ ಅದೇ ಬೇಕಿತ್ತು.

“ನೀವು ಕಲಿಸದರೆ ನಾ ಕಲಿಯಾಕ ಒಪ್ಪಿದೀನ್ರಿ.”

ಜೈಪುರ-ಅತ್ರೌಳಿ ಘರಾಣೆಯ ಮಹತ್ವಪೂರ್ಣ ಗುರು-ಶಿಷ್ಯ ಜೋಡಿ ಸಂಗಮಿಸಿದ್ದು ಇಂತು.

ಜುಲೈ ೨೯, ೧೯೬೯ರಂದು ಧಾರವಾಡದ ರಸಿಕಾಗ್ರೇಸರ ನಾರಾಯಣರಾವ ಗುರ್ಟು ಅವರ ಮನೆಯಲ್ಲಿ ಗಂಡಾಬಂಧನ. ಇದು ವಿಧ್ಯುಕ್ತವಾಗಿ ಶಿಷ್ಯನನ್ನು ಗುರು ಸ್ವೀಕರಿಸುವ ಸಮಾರಂಭ. ತಮ್ಮಲ್ಲಿ ಕನಿಷ್ಠ ಐದು ವರ್ಷ ಕಲಿಯಬೇಕೆಂಬುದು ಮಲ್ಲಿಕಾರ್ಜುನ ಮನಸೂರರ ಷರತ್ತು. ಶಿಷ್ಯ ಅರೆಬರೆ ಕಲಿತು ಗುರುವಿನ ಹೆಸರು ಕೆಡಿಸುವುದು ಬೇಡವೆಂದು ಆಗಿನ ಕಾಲದಲ್ಲಿ ಇಂಥ ಷರತ್ತು ಪ್ರಚಲಿತವಿತ್ತು. ಮಲ್ಲಿಕಾರ್ಜುನ ಮನಸೂರ ಜೈಪುರ-ಅತ್ರೌಳಿ ಘರಾಣೆಯ ಗಾಯಕಿಯಲ್ಲಿ ತಮ್ಮದೇ ವಿಶಿಷ್ಟ ಶೈಲಿ ನಿರ್ಮಿಸಿಕೊಂಡವರು. ಒಮ್ಮೆಮ್ಮೆ ನಸುಕಿನ ೩-೪ ಘಂಟೆಗೆ ಬಾಗಿಲು ಬಡಿದು ಎಬ್ಬಿಸಿ ಅಭ್ಯಾಸ ಮಾಡಿಸುತ್ತಿದ್ದರು. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರಿಗೆ ಸಂಗೀತದ ಹುಚ್ಚು ಎಷ್ಟೂ ಹತ್ತಿತ್ತೆಮದರೆ ಊಟ, ನಿದ್ರೆ ಕೂಡ ಬೇಕೆನಿಸುತ್ತಿರಲಿಲ್ಲ. ಅದು ನಿಜವಾದ ನಿಷ್ಠೆಯ ಲಕ್ಷಣ. ದಿನಾಲು ೧೦-೧೨ ತಾಸು ಮೆಹನತ್‌ ಮಾಡಿದರು. ಐದು ವರ್ಷ ಕಳೆದುದೇ ಗೊತ್ತಾಗಲಿಲ್ಲ.

ಮಲ್ಲಿಕಾರ್ಜುನ ಮನಸೂರರಿಗೆ ಮೂಲವ್ಯಾಧಿ ತೊಂದರೆ ಜೋರಾಯಿತು. ಶಸ್ತ್ರಚಿಕಿತ್ಸೆ ಮಾಡಿದ ಹುಬ್ಬಳ್ಳಿಯ ಡಾ.ಆರ್.ಬಿ. ಪಾಟೀಲರು ಎರಡು ವರ್ಷ ಹಾಡಕೂಡದೆಂದು ಹೇಳಿದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಿಗೆ ಇನ್ನೂ ಕಲಿಯುವಾಸೆ. ಹೇಗೆ ಮಾಡುವುದೆಂದು ಮನಸೂರರಿಗೆ ಚಿಂತೆಗಟ್ಟಿತು. ಅವರ ಆತಂಕವನ್ನು ಗ್ರಹಿಸಿದ ಪಂಚಾಕ್ಷರಿ ಮತ್ತಿಗಟ್ಟಿ ಪರಿಹಾರ ಸೂಚಿಸಿದರು.

“ನಿವೃತ್ತಿಬುವಾ ಸರನಾಯಕರಲ್ಲಿ ಕಲಿಯಲೆ?”

“ಅಡ್ಡಿಯಿಲ್ಲ. ಅವರೂ ನಮ್ಮ ಘರಾಣೆಯವರೆ.”

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ನಿವೃತ್ತಿಬುವಾ ಸರನಾಯಕರಲ್ಲಿ ಎರಡು ವರ್ಷ ಅಭ್ಯಾಸಗೈದು ಮತ್ತೆ ಮಲ್ಲಿಕಾರ್ಜುನ ಮನಸೂರರಲ್ಲಿಗೆ ಬಂದರು. ಮನಸೂರರು ತಮ್ಮ ವಿದ್ಯೆಯನ್ನೆಲ್ಲ ಧಾರೆಯೆರೆದರೆಂದು ಪಂಚಾಕ್ಷರಿಸ್ವಾಮಿ ಮತ್ತಿಗಟ್ಟ ಸ್ಮರಿಸುತ್ತಾರೆ. ಮಲ್ಲಿಕಾರ್ಜುನ ಮನಸೂರ ತಾವು ಕಚೇರಿಗೆ ಹೋಧೆಡೆಯಲ್ಲೆಲ್ಲ ಶಿಷ್ಯನನ್ನು ಕರೆದೊಯ್ಯುತ್ತಿದ್ದರು. ಹೀಗೆ, ಪಂಚಾಕ್ಷರಿಸ್ವಾಮಿ ಮತಿಗಟ್ಟಿ ನಾಲ್ವರು ಗುರುಗಳ ಗರಡಿಯಲ್ಲಿ ಪಳಗಿದರು: ಪಂಚಾಕ್ಷರಿ ಗವಾಯಿ, ಮಲ್ಲಿಕಾರ್ಜುನ ಮನಸೂರ, ನಿರುತ್ತಿಬುವಾ ಸರನಾಯಕ, ಈಗ ಬಾಬಾ ಅಜೀಜುದ್ದೀನಖಾನ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಜ್ಞಾನದಾಹ ಯುವಕರಿಗೊಂದು ಆದರ್ಶ.

೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಂಗೀತ ವಿಭಾಗ ಆರಂಭ. ಮಲ್ಲಿಕಾರ್ಜುನ ಮನಸೂರರು ಸಂಸ್ಥಾಪಕ ನಿರ್ದೇಶಕರು. ಅವರು ಗಂಗೂಬಾಯಿ ಹಾನಗಲ್ಲ ಮತ್ತು ಬಸವರಾಜ ರಾಜಗುರು ಅವರನ್ನು ಗೌರವ ಪ್ರಾಧ್ಯಾಪಕರಾಗಿ ನಿಯುಕ್ತಿಗೊಳಿಸಿದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಮತ್ತು ಸಂಗಮೇಶ್ವರ ಗುರವ ವರನ್ನು ಪೂರ್ಣಾವಧಿ ಉಪನ್ಯಾಸಕರಾಗಿ ನಿಯಮಿಸಿದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಿಗೆ ತಂಬೂರಿ ಕಲಾವಿದರಾಗಿ ಆಕಾಶವಾಣಿಯಿಂದ ನೇಮಕಾಜ್ಞೆ ಬಂದಿತ್ತು. ತಾವು ಆಕಾಶವಾಣಿ ಉದ್ಯೋಗ ಸೇರುವುದಾಗಿ ಹೇಳಿದಾಗ ಮಲ್ಲಿಕಾರ್ಜುನ ಮನಸೂರ “ಅದ್ನೇನು ಮಾಡತೀ. ಇಲ್ಲೇ ಉಪನ್ಯಾಸಕನಾಗಿ ಕಲಿಸು” ಎಂದುಬಿಟ್ಟರು. ಗುರುವಿನ ಮಾತಿಗೆ ಮನ್ನಣೆ ನೀಡಿ ಅಧ್ಯಾಪಕರಾಗಿಯೇ ಮುಂದುವರಿದರು. ೧೯೮೭ರಲ್ಲಿ ನಿವೃತ್ತರಾಗುವವರೆಗೆ ಅನೇಕಾನೇಕ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದರು.

ಆರಂಭದಲ್ಲಿ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಮುಂಬೈ ಆಕಾಶವಾಣಿಯಿಂದ ಹಾಡುತ್ತಿದ್ದರು. ತಿಂಗಳಿಗೊಂದು ಕಾರ್ಯಕ್ರಮ. ಹೋಗಲು, ಬರಲು, ಕಾರ್ಯಕ್ರಮಕ್ಕೆ ಒಂದೊಂದು ದಿನದಂತೆ ಒಟ್ಟು ಮೂರು ದಿನ ಬೇಕಿತ್ತು. ಪ್ರತಿ ತಿಂಗಳು ಮೂರು ಮೂರು ದಿನ ನಿಯಮಿತವಾಗಿ ರಜೆ ತೆಗೆದುಕೊಳ್ಳುತ್ತಿದ್ದುದು ಏಕೆಂದು ಮಲ್ಲಿಕಾರ್ಜುನ ಮನಸೂರರಿಗೆ ತಿಳಿಯಿತು. ಅವರು ಕಾಂಟ್ರಾಕ್ಟನ್ನು ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ವರ್ಗಾಯಿಸಿಕೊಟ್ಟರು.

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅನೇಕ ಆಕಾಶವಾಣಿ ಕೇಂದ್ರಗಳಿಂದ ಗಾಯನ ಬಿತ್ತರಿಸಿದ್ದಾರೆ. ಹಲವು ಸಂಗೀತ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ದೂರದರ್ಶನದಲ್ಲೂ ಕಾರ್ಯಕ್ರಮ ನೀಡಿರುವರು. ೧೯೮೯ರಲ್ಲಿ ಅಮೆರಿಕ ಪ್ರವಾಸ ಮಾಡಿ ೩೦-೩೫ ಕಚೇರಿ ನೀಡಿರುವರು. ಅವರಿಗೆ ಇಂಗ್ಲಿಷ್‌ ಬಾರದು. ಬಲು ಪಂಚೇತಿ. ಅತಿಥೇಯರಾಗಿದ್ದ ಡಾ. ಜಯಾನಂದಯ್ಯ ಒಂದು ಸೂತ್ರ ಹೇಳಿಕೊಟ್ಟಿದ್ದರು “ಯಾರು ಏನು ಕೇಳಿದರೂ No ಎಂದುಬಿಡಿರಿ”. ಬಹಳ ಚೆನ್ನಾಗಿ ಹಾಡಿದಿರಿ ಎಂದು ಯಾರಾದರೂ ಇಂಗ್ಲಿಷಿನಲ್ಲಿ ಹೇಳಿದರೂ ಇವರು No ಎನ್ನುತ್ತಿದ್ದರು. ಒಮ್ಮೆ ಬಾಸ್ಟನ್‌ ವಿಶ್ವವಿದ್ಯಾಲಯದಲ್ಲಿ ಕಚೇರಿ. ಕುಲಪತಿಗಳು ಬಂದು “ನಿಮ್ಮ ಗಾಯನವನ್ನು ಧ್ವನಿಮುದ್ರಿಸಿಕೊಳ್ಳಲೇ” ಎಂದು ಕೇಳಿದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ತಮಗೆ ಕಲಿಸಿಕೊಟ್ಟಿದ್ದ ಮಂತ್ರದಂತೆ No ಎಂದುಬಿಟ್ಟರು. ಕಕ್ಕಾಬಿಕ್ಕಿಯಾದ ಕುಲಪತಿಗಳು ಡಾ. ಜಯಾನಂದಯ್ಯ ಅವರನ್ನು ಏನಿದು ಎಂದು ವಿಚಾರಿಸಿದರು. ಜಯಾನಂದಯ್ಯ Yes ಅಂದುಬಿಡಿರಿ ಅಂದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ Yes ಅಂದರು. ಕುಲಪತಿಗಳಿಗೆ ಖುಷಿ.

ಲಂಡನ್ನಿನ ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಮತ್ತೂರು ಕೃಷ್ಣಮೂರ್ತಿ ಅವರಿಂದ ಆಹ್ವಾನ ಬಂತು. ಎಲ್ಲ ವ್ಯವಸ್ಥೆ ಮಾಡಿದರು. ವಿಮಾನಯಾನದ ಟಿಕೆಟ್‌, ವೀಸ್‌ಆ ೧೫ ದಿನದಲ್ಲಿ ಬಂದವು. ಲಂಡನ್ನಿನಲ್ಲಿ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಹಾಡಿದ ದಿನ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್‌ ಲಂಡನ್ನಿಗೆ ಬಂದಿದ್ದರು. ಮತ್ತೂರು ಕೃಷ್ಣಮೂರ್ತಿ ಭಾರತದ ಪ್ರಧಾನಿಯನ್ನು ಸಂಗೀತ ಆಲಿಸಲು ಆಮಂತ್ರಿಸಿದ್ದರು. ಐದು ನಿಮಿಷ ಕುಳಿತು ಹೋಗುವುದಾಗಿ ಹೇಳಿದ್ದ ನರಸಿಂಹರಾಯರು ಕಚೇರಿ ಮುಕ್ತಾಯವಾಗುವವರೆಗೂ ಕುಳಿತು ಆಸಕ್ತಿಯಿಂದ ಆಲಿಸಿದರು. ಭೈರವಿ ಹಾಡಿದ ಮೇಲೆ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರನ್ನು ಅಭಿನಂದಿಸುತ್ತ ಅಚ್ಚ ಕನ್ನಡದಲ್ಲಿ ಪ್ರಶ್ನಿಸಿದರು.

“ಸ್ವಾಮಿ, ಯಾವ ಊರು ನಿಮ್ಮದು?”

“ಭಾರತ.”

“ಅದು ಗೊತ್ತು. ಊರು ಯಾವುದು?”

“ಧಾರವಾಡ.”

“ಮಲ್ಲಿಕಾರ್ಜುನ ಮನಸೂರರ ಶಿಷ್ಯರೇನು? ದಿಲ್ಲಿಗೆ ಬಂದಾಗ ನನ್ನನ್ನು ಕಾಣಿರಿ.”

ಭಾರತೀಯ ವಿದ್ಯಾಭವನದ ಲಂಡನ್‌ ಶಾಖೆಯಲ್ಲಿ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ೧೫ ದಿನ ಹಿಂದುಸ್ತಾನಿ ಗಾಯನ ಕಲಿಸಿದರು. ಐದು ವರ್ಷದ ಒಪ್ಪಂದದ ಮೇಲೆ ಲಂಡನ್ನಿಗೆ ಬರಲು ಮತ್ತೂರು ಕೃಷ್ಣಮೂರ್ತಿ ಅಮಂತ್ರಿಸಿದರು. ಇಂಗ್ಲೆಂಡಿನ ಧೋ ಧೋ ಸುರಿಯುವ ಮಳೆಯಿಂದ ಹೈರಾಣಾಗಿದ್ದ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ “ನಾನು ಊರಿಗೆ ಹೋಗಿ ತಿಳಿಸುವೆ” ಎಂದವರು ಲಂಡನ್ನಿನತ್ತ ಮತ್ತೆ ಮುಖ ಮಾಡಲಿಲ್ಲ.

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ದೊಡ್ಡ ಶಿಷ್ಯಬಳಗ ನಿರ್ಮಿಸಿರುವರು. ಅವರಲ್ಲಿ ಗೀತಾ ಜಾವಡೆಕರ, ನಿರ್ಮಲಾ ಜಯಾನಂದಯ್ಯ, ಸರಯೂ ಸೊನ್ನಿ, ಷಡಕ್ಷರಿಬುವಾ, ದಿ.ಅಜ್ಜಣ್ಣ ಪಾಟೀಲ, ಮುಕ್ತಾ ಮಜುಮದಾರ, ಮೀರಾ ಗುಂಡಿ, ವೀರಣ್ಣ ಹೂಗಾರ, ಶಶಿಕಲಾ ಚವಡಿ, ಮೃತ್ಯಂಜಯ ಅಗಡಿ, ನಾಗರಾಜ ಹವಾಲ್ದಾರ ಪ್ರಮುಖರು. ಒಬ್ಬ ಸಂಗೀತಗಾರನ ನಿಜವಾದ ಸಂಪತ್ತೆಂದರೆ ಶಿಷ್ಯಸಂಪತ್ತೇ.

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಪ್ರತಿಭೆ ಗುರುತಿಸಿ ಬಿರುದು, ಪ್ರಶಸ್ತಿಗಳು ಬಂದಿವೆ. ಸಂಗೀತ ಕಲಾನಿಧಿ, ನಾದಬ್ರಹ್ಮ, ಲಯಬ್ರಹ್ಮ. ೧೯೮೬ರಲ್ಲಿ ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ. ೧೯೯೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ೨೦೦೨ರಲ್ಲಿ ಪುಟ್ಟರಾಜ ಸಮ್ಮಾನ, ಈಗ ಇವೆಲ್ಲಕ್ಕೂ ಕಿರೀಟವಿದ್ದಂತೆ ಕನಕ ಪುರಂದರ ಪ್ರಶಸ್ತಿ.

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ “ಅಕ್ಕ ಕೇಳವ್ವ” ಕ್ಯಾಸೆಟ್‌ ಹೊರಬಂದಿದೆ. ಅದರಲ್ಲಿ ಬಸವೇಶ್ವರ ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಸುಶ್ರಾವ್ಯವಾಗಿ, ಅರ್ಥಪೂರ್ಣವಾಗಿ ಹಾಡಿರುವರು.

ಜೈಪುರ ಗಾಯಕಿ ಕಠಿಣವಾದುದು. “ಧ್ರುಪದವನ್ನೆ ಖ್ಯಾಲ ಮಾಡಿಕೊಂಡು ಹಾಡುವುದೆ ಜೈಪುರ ಗಾಯಕಿಯ ವೈಶಿಷ್ಟ್ಯ” ಎಂಧು ಮಲ್ಲಿಕಾರ್ಜುನ ಮನಸೂರ ವ್ಯಾಖ್ಯಾನಿಸುತ್ತಿದ್ದರು. ಅಂಥ ಮುಶ್ಕಿಲ್‌ ಗಾಯಕಿಯನ್ನು ಕರತಲಾಮಲಕ ಮಾಡಿಕೊಂಡುದು ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಸಾಧನೆ. ಅಂತೆಯೆ, ರಸಿಕರ, ವಿಮರ್ಶಕರ ಪ್ರಶಂಸೆಗೆ ಪಾತ್ರರಾಗಿರುವರು.