ರಾಷ್ಟ್ರದ ಹೆಸರಾಂತ ಹಿಂದೂಸ್ಥಾನಿ ಗಾಯಕಲ್ಲೊಬ್ಬರಾಗಿರುವ ಗ್ವಾಲಿಯರ್ – ಜೈಪುರ ಘರಾಣೆಯ ದಿಗ್ಗಜ ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿಯವರು ಕನ್ನಡನಾಡು ಕಂಡ ಅಪೂರ್ವ ಕಲಾವಿದರು. ಅವರು ಜನಿಸಿದ್ದು ಶಿಶುನಾಳದಲ್ಲಿ ೧೨-೧೦-೧೯೨೭ ರಂದು. ಅವರದು ಸಂಗೀತ ಪರಂಪರೆಯ ಮನೆತನ. ಅವರ ತಂದೆ ಚನ್ನಬಸಯ್ಯನವರು ಸಂಗೀತಗಾರರು. ದೊಡ್ಡಾಟ, ಸಣ್ಣಾಟ, ಗೀಗೀಪದ ಹಾಡುವುದರಲ್ಲಿ ನಿಷ್ಣಾತರು. ತಾಯಿ ಸಾತವ್ವ ಸಂಗೀತದ ಪರಮಭಕ್ತಿ. ಇಂತಹ ಪರಿಸರದಲ್ಲಿ ಹುಟ್ಟಿದ ಅವರಿಗೆ ಸಂಗೀತ ತಾನಾಗಿಯೇ ಒಲಿದು ಬಂದಿತು.

ಹುಟ್ಟಿನೊಂದಿಗೆ ಕೋಮಲ ಕಂಠ ಪಡೆದುಕೊಂಡು ಬಂದಿದ್ದ ಅವರು ತಮ್ಮ ಮೂರನೇ ವಯಸ್ಸಿನಿಂದಲೇ ಹಾಡಲು ಆರಂಭಿಸಿದರು. ೧೯೩೭ ರಲ್ಲಿ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ವಹಿಸಿ ಹತ್ತು ವರ್ಷಗಳ ಕಾಲ ಅವರಲ್ಲಿ ಗ್ವಾಲಿಯರ್ ಘರಾಣೆ ಅಧ್ಯಯನ ಮಾಡಿದರು. ಸಂಗೀತ ಸಾಧನೆಯೊಂದಿಗೆ ಗವಾಯಿಗಳ ‘ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ. ಸಂಘ’ದಲ್ಲಿ ನಟ-ಗಾಯಕರಾಗಿ ಕೆಲಸ ಮಾಡಿದರು. ನಾಟಕದಲ್ಲಿಯ ನಟನೆ – ಕಂಚಿನ ಕಂಠದ ಗಾಯನ ಕೇಳಿದ ಹೆಸರಾಂತ ಗಾಯಕ ಪಂ. ಮಲ್ಲಿಕಾರ್ಜುನ ಮನಸೂರ ಅವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ (೧೯೬೧ ರಲ್ಲಿ) ಜೈಪುರ ಘರಾಣೆಯ ತಾಲೀಮು ನೀಡಿದರು. ನಂತರ ಅವರು ಕೊಲ್ಹಾಪೂರದ ಹೆಸರಾಂತ ಜೈಪುರ ಘರಾಣೆಯ ಗಾಯಕ ಪಂ. ನಿವೃತ್ತಿ ಬುವಾ ಸರನಾಯಕರಲ್ಲಿ ಎರಡು ವರ್ಷ ಸಂಗೀತ ಶಿಕ್ಷಣ ಪಡೆದುಕೊಂಡು ಸತತ ಪರಿಶ್ರಮದಿಂದ ದೇಶದ ತುಂಬೆಲ್ಲ ಹೆಸರು ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ಅಧ್ಯಯನ ಪೀಠದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಹನ್ನೆರಡು ವರ್ಷ (೧೯೭೬-೧೯೮೮) ಸೇವೆ ಸಲ್ಲಿಸಿ ನಿವೃತ್ತರಾಗಿ ಧಾರವಾಡದಲ್ಲಿ ನೆಲೆಸಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.

ಆಕಾಶವಾಣಿಯ ‘ಎ’ ಗ್ರೇಡ್‌ ಕಲಾವಿದರಾಗಿರುವ ಅವರು ದೇಶದ ಅನೇಕ ಪ್ರತಿಷ್ಠಿತ ಸಂಗೀತ ಸಮ್ಮೇಳನದಲ್ಲಿ ಸಂಗೀತ ಕಛೇರಿ ನೀಡಿ ಸಂಗೀತ ದಿಗ್ಗಜರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರ ಹಾಡುಗಾರಿಕೆಯಲ್ಲಿ ಜೈಪುರ ಘರಾಣೆಯ ಶ್ರುತಿ ಶುದ್ಧತೆ, ಲಯದ ಖಚಿತತೆ ಎದ್ದು ಕಾಣುತ್ತದೆ. ಭೋರ್ಗರೆವ ತಾನ, ಸ್ವರಗಳ ಮೇಲಿನ ಹಿಡಿತ, ಕಣ್‌ ಹಾಗೂ ಮೀಂಡ್‌ದಂತಹ ಸೂಕ್ಷ್ಮಾತಿಸೂಕ್ಷ್ಮ ಕೆಲಸ ಅವರ ಕಂಠಗಳಲ್ಲಿ ಹೊರಹೊಮ್ಮುತ್ತವೆ. ಲಂಡನ್ನಿನ ದಿ ಭವನ್‌ ಸೆಂಟರಕ್ಕೆ ಅನೇಕ ಅಪರೂಪದ ಬಂದೀಶ್‌ಗಳನ್ನು ಧ್ವನಿ ಮುದ್ರಿಸಿಕೊಟ್ಟಿದ್ದಾರೆ. ಅವರ ಶಿಷ್ಯ ಸಂಪತ್ತು ಅಪಾರ. ಅಂಥವರಲ್ಲಿ ಉಷಾ ಕುಲಕರ್ಣಿ, ಪ್ರೊ. ಎ.ಯು. ಪಾಟೀಲ, ಗೀತಾ ಜಾವಡೇಕರ, ಷಡಕ್ಷರಿ ಬುವಾಯತ್ನಳ್ಳಿ, ಡಾ. ಮೀರಾ ಶಿವಶಂಕರ ಗುಂಡಿ, ವಿಜಯಾ ಹಿರೇಮಠ (ಬಾರಾಮತಿ), ಪ್ರೊ. ಸುಮಿತ್ರಾ ಕಾಡದೇವರ ಮಠ, ಡಾ. ಶಶಿಕಲಾ ಚವಡಿ, ಪ್ರೊ. ಸರೂಯ ಸೊನ್ನಿ (ಬನಾರ ಸ), ಸುನಂದಾ ಕಡಪಾ, ಚಂದ್ರಶೇಖರ ಹಿರೇಮಠ, ಡಾ. ವೀರಣ್ಣ ಹೂಗಾರ, ಪಾರ್ವತಿದೇವಿ ಮಾಳೇಕೊಪ್ಪ ಮಠ, ಫಕೀರಪ್ಪ ಹೂಗಾರ, ನಿರ್ಮಲಾ ಜಯಾನಂದಯ್ಯ (USA) – ಮುಂತಾದವರು ಉಲ್ಲೇಖನೀಯರಾಗಿದ್ದಾರೆ.

ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟೆಯವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರ ಬಂದಿವೆ. ಅಂಥವುಗಳಲ್ಲಿ ದಾವಣಗೆರೆ ಸಂಗೀತ ಬಳಗದ ‘ಸಂಗೀತಗಾನ ಪ್ರವೀಣ’ (೧೯೮೮), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾತಿಲಕ’ (೧೯೮೮), ಗದಗ-ಬೆಟಗೇರಿ ರೋಟರಿ ಕ್ಲಚನ್‌ ‘ಗಾನ ರತ್ನಾಕರ’ (೧೯೯೧), ರಾಯಚೂರು ಇಂಚರ ಸಮಿತಿಯ ‘ಸಂಗೀತ ಕಲಾನಿಧಿ’ (೧೯೯೧), ಹೊಸರಿತ್ತಿಯ ಗುದ್ದಲೀಶ್ವರ ಮಠದ ‘ಗಾನ ಗಂಧರ್ವ’ (೧೯೯೩), ಹುಬ್ಬಳ್ಳಿ-ಧಾರವಾಡ ಸೂರ ಸಂಗೀತ ಸಭಾ ‘ಗಾನ ತಪಸ್ವಿ’ (೧೯೯೩), ಕರ್ನಾಟಕ ರಾಜ್ಯೋತ್ಸವ (೧೯೯೪), ‘ಕನಕ-ಪುರಂದರ’ ಪ್ರಶಸ್ತಿ (೨೦೦೨), ‘ಪುಟ್ಟರಾಜ ಸಮ್ಮಾನ’ (೨೦೦೨), ಬೆಂಗಳೂರಿನ ಶರಣ ಸಾಹಿತ್ಯ ಪರಿಷತ್ತಿನ ‘ರಮಣಶ್ರೀ ಶರಣ ಪ್ರಶಸ್ತಿ’ (೨೦೦೫) ಮುಂತಾದವುಗಳು ಉಲ್ಲೇಖನೀಯವಾಗಿವೆ.