ಹೈದ್ರಾಬಾದ ಕರ್ನಾಟಕದ ಭಾಗದ ಕಲ್ಬುರ್ಗಿಯಲ್ಲಿ ನಿಜಾಮಶಾಹಿ ಮಧ್ಯೆ ಹಿಂದೂಸ್ಥಾನಿ ಸಂಗೀತವನ್ನು ಶ್ರದ್ಧೆಯಿಂದ ಸಾಧನೆ ಮಾಡಿದ ಬೆಲ್ಲದಕೊಂಡಿ ಹಿರೇಮಠದ ಶ್ರೀ ಪಂಚಾಕ್ಷರಿ ಗವಾಯಿಯವರು ಹೈದ್ರಾಬಾದ ಕರ್ನಾಟಕದ ಹಿರಿಯರ ತಲೆಮಾರಿನ ಹಿಂದೂಸ್ಥಾನಿ ಸಂಗೀತಗಾರರಲ್ಲೊಬ್ಬರು.

ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಶಹಾಪೂರದವರು. ಅವರ ತಂದೆ ಶಿವರುದ್ರಸ್ವಾಮಿ, ತಾಯಿ ಸಿದ್ಧಮ್ಮ. ಭಾರತದ ಸ್ವಾತಂತ್ರ ಪೂರ್ವದ ದಿನಗಳಲ್ಲಿ ಅವರು ಶಾಲೆ ತ್ಯಜಿಸಿ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದ್ದುಂಟು. ಗಾಂಧಿ, ನೆಹರು, ವಲ್ಲಭಭಾಯಿ ಪಟೇಲರ ಕುರಿತು ಅವರು ರಚಿಸಿದ ಪಂಚರತ್ನ ಗೀತೆಗಳು ಇಂದಿಗೂ ಜನಪ್ರಿಯತೆ ಪಡೆದಿವೆ.

ಮಹಾರಾಷ್ಟ್ರದ ಪಂಢರಪೂರದ ಶ್ರೀ ನಾರಾಯಣ ಬುವರ್ಥ, ಜೆ.ಜೆ. ಪಾಟೀಲರಲ್ಲಿ ಹಿಂದೂಸ್ಥಾನಿ ಸಂಗೀತದ ಶಿಕ್ಷಣ ಪಡೆದವರು ಕಠಿಣ ತಾಮ ಸಾಧನೆಯಿಂದ ಸಂಗೀತದಲ್ಲಿ ಹೆಸರು ಸಂಪಾದಿಸಿದ್ದಾರೆ. ಕಲಬುರ್ಗಿಯಲ್ಲಿ ನೂತನ ಸಂಗೀತ ವಿದ್ಯಾಲಯ ಸ್ಥಾಪಿಸಿ ಅನೇಕ ಶಿಷ್ಯರನ್ನು ತಯಾರಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದೂಸ್ಥಾನಿ ಹಾಡುಗಾರಿಕೆಯ ಜೊತೆಗೆ ವಚನ ಗಾಯನ, ದಾಸರಪದ ಹಾಗೂ ಭಕ್ತಿ ಪದ ಗೀತೆಗಳನ್ನು ಸಹ ಸುಶ್ರಾವ್ಯವಾಗಿ ಹಾಡಬಲ್ಲರು. ಆಕಾಶವಾಣಿಯಲ್ಲೂ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಜಗದ್ಗುರು ಪಂಚಾಚಾರ್ಯರ ಆದೇಶದಂತೆ ನಿಜಗುಣ ಶಿವಯೋಗಿಗಳ ಅನುಭಾವ ಗೀತೆಗಳಿಗೆ ರಾಗ ಸಂಯೋಜನೆ “ರೇಣುಕ ಗೀತೆ” ಎಂಬ ಪುಸ್ತಕ ಪ್ರಕಟಿಸಿದ್ದಾರೆ.

ಶ್ರೀ ಪಂಚಾಕ್ಷರಿ ಗವಾಯಿ ಅವರಿಗೆ ರಂಭಾಪುರಿ ಜಗದ್ಗುರುಗಳು ‘ಸಂಗೀತ ರತ್ನ’, ಉಜ್ಜಯಿನಿ ಜಗದ್ಗುರುಗಳು ‘ಸಂಗೀತ ಸಾಗರ’ ಎಂಬ ಬಿರುದು ನೀಡಿ ಆಶೀರ್ವದಿಸಿದ್ದಾರೆ. ಇವರ ಸಂಗೀತ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.