ಪ್ರಸ್ತಾವನೆ

ಪ್ರಸ್ತುತ ಅಧ್ಯಯನ ಯೋಜನೆಯಲ್ಲಿ ಬಳ್ಳಾರಿ ಜಿಲ್ಲೆಯ ಗ್ರಾಮಪಂಚಾಯತಿ ಸದಸ್ಯರ ಕಾರ್ಯಕ್ಷಮತೆ ಮತ್ತು ಅವರ ಸಾಮಾಜಿಕ, ಆರ್ಥಿಕ ಗುಣಲಕ್ಷಣಗಳ ನಡುವಿನ ಸಂಬಂಧವನ್ನು ಹಿಡಿದಿಡಲು ಪ್ರಯತ್ನಿಸಲಾಗಿದೆ. ಪಂಚಾಯತ್ ಸದಸ್ಯರ ಕಾರ್ಯಕ್ಷಮತೆ ಮತ್ತು ಸಹಭಾಗಿತ್ವಗಳ ನಡುವಿನ ಸಂಬಂಧ ಕುರಿತಂತೆ ಅನೇಕ ಅಧ್ಯಯನಗಳು ನಡೆದಿವೆ. ಇವುಗಳ ಫಲಿತಗಳು ಪಂಚಾಯತ್ ಸದಸ್ಯರು ಈ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯತೆಗಳಿವೆ ಎಂಬುದನ್ನು ಶ್ರುತಿಪಡಿಸುತ್ತವೆ. ಇವುಗಳು ಅವರ ಸಾಮಾಜಿಕ-ಆರ್ಥಿಕ ಗುಣಲಕ್ಷಣಗಳಿಗೆ ಒತ್ತು ಕೊಡುವುದರ ಮೂಲಕ ಸದಸ್ಯರ ಶಿಕ್ಷಣಮಟ್ಟ, ಜಾತಿ, ಆಸ್ತಿವಿವರ, ಲಿಂಗ, ಮೀಸಲಾತಿ ಮತ್ತು ತರಬೇತಿ ಮುಂತಾದ ಸಂಗತಿಗಳನ್ನು ಅವಲಂಬಿಸಿರುತ್ತವೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯತ್‌ ಸದಸ್ಯರುಗಳ ಸಾಮಾಜಿಕ ಸ್ವರೂಪವು ಅವರ ಕಾರ್ಯಕ್ಷಮತೆಯನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಪರಿಶೀಲಿಸುವುದು ಈ ಅಧ್ಯಯನ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸಂವಿಧಾನದ ೭೩ನೇ ತಿದ್ದುಪಡಿಗನುಗುಣವಾಗಿ ಕರ್ನಾಟಕ ಸರ್ಕಾರವು ೧೯೯೩ರ ಪಂಚಾಯತ್‌ರಾಜ್ ಅಧಿನಿಯಮವನ್ನು ಜಾರಿಗೊಳಿಸುವುದರ ಮೂಲಕ ಮಹಿಳೆಯರಿಗೆ, ಪರಿಶಿಷ್ಟರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಶೇ. ೩೩ ರಷ್ಟು ಮೀಸಲಾತಿಯನ್ನು ವಿಸ್ತರಿಸಿತು. ಇದರಂತೆ ಮೂರು ಸ್ತರದ ಪಂಚಾಯತ್ ಸಂಸ್ಥೆಗಳು ಕಾರ್ಯರೂಪಕ್ಕೆ ಬಂದವು. ಈಗಾಗಲೆ ಪಂಚಾಯತ್‌ಗಳಿಗೆ ಮೂರು ಬಾರಿ ಚುನಾವಣೆಗಳು ನಡೆದು ಇವುಗಳು ಕಾರ್ಯೋನ್ಮುಖವಾಗಿವೆ.

ಸಾಂಪ್ರದಾಯಿಕ ಮತ್ತು ಆಧುನಿಕ ಸಹಯೋಗದ ನಡುವೆ ಸಿಲುಕಿ ಸ್ಥಿತ್ಯಂತರ ಹೊಂದುತ್ತಿರುವ ನಮ್ಮ ಸಮಾಜದ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಕಾರ‍್ಯಕ್ಷಮತೆ ಮತ್ತು ಅದಕ್ಕೆ ಬೇಕಾಗುವ ಪೂರಕ ಪರಿಸ್ಥಿತಿಯ ಜೊತೆ ಹೊಸ ಸಾಮಾಜಿಕ ಗುಂಪುಗಳ ನಾಯಕತ್ವಕ್ಕೆ ಸಂಬಂಧಿಸಿದ ಅಧ್ಯಯನಗಳ ಅಗತ್ಯವಿದೆ ಎಂದು ಲಾಲಿನಿ ಅಭಿಪ್ರಾಯಪಡುತ್ತಾರೆ. ಹೊಸ ಅಥವಾ ರೂಪುಗೊಳ್ಳುತ್ತಿರುವ ನಾಯಕತ್ವಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳ ಗುಣಲಕ್ಷಣಗಳು ತಳಮಟ್ಟದಲ್ಲಿನ ಜನಪ್ರತಿನಿಧಿಗಳ ಜವಾಬ್ದಾರಿಯ ಮೇಲೆ ಪ್ರಭಾವ ಬೀರುತ್ತವೆ. ಮಂಡಲ ಪಂಚಾಯತಿ ವ್ಯವಸ್ಥೆಯಲ್ಲೂ ಸಹ ಈ ತರದ ಅಧ್ಯಯನಗಳು ಪಂಚಾಯತಿಯ ಯಶಸ್ಸು ಮತ್ತು ವಿಫಲತೆಗಳೆಡೆಗೆ ಬೆರಳು ಮಾಡಿ ತೋರಿಸುತ್ತವೆ.

ಕರ್ನಾಟಕದ ಪಂಚಾಯತ್‌ರಾಜ್‌ ವ್ಯವಸ್ಥೆಯ ಕಥೆಯು ದುರ್ಬಲ ವರ್ಗದವರ ಡೆಲಿವರೆನ್ಸ್‌ಗೆ ಸಂಬಂಧಿಸಿದಂತೆ ಅಲ್ಲಲ್ಲಿ ಯಶಸ್ಸು ಮತ್ತು ಹೆಚ್ಚಾಗಿ ವಿಫಲತೆಗಳ ಮಿಶ್ರಣವಾಗಿದೆ ಎಂದು ರೇ ಮತ್ತು ಜಯಲಕ್ಷ್ಮಿಯವರು ವಿವರಿಸುತ್ತಾರೆ.

ನೀತಿ ನಿರೂಪಣೆಯಲ್ಲಿ ಜನರ ನೇರ ಸಹಭಾಗಿತ್ವ ಪೂರಕವಾಗಿ ರಾಜ್ಯದ ಕಾರ‍್ಯಕ್ರಮಗಳು ಮತ್ತು ಸಂಪನ್ಮೂಲಗಳು ಕೇಂದ್ರದಿಂದ ಕೆಳಗಿನ ಹಂತಗಳಿಗೆ ತಲುಪುವ ಪ್ರಕ್ರಿಯೆಯ ಜನತಂತ್ರ ವಿಕೇಂದ್ರೀಕರಣವಾಗಿದೆ. ಈ ಕಾರ‍್ಯಕ್ರಮಗಳು ಮತ್ತು ಸಂಪನ್ಮೂಲಗಳನ್ನು ತಲುಪಿಸುವ ಪ್ರಧಾನಧಾರೆಯ ತತ್ವವು ಸಮವರ್ತಿಯಾಗಿದೆ. ಅಂದರೆ ಒಂದು ನಿರ್ದಿಷ್ಟ ಹಂತದಲ್ಲಿ ನಡೆಯುವ ಕೆಲಸವು ಆ ಹಂತದಲ್ಲೆ ನಡೆಯಬೇಕೆ ವಿನಹ ಮೇಲಿನ ಹಂತದಲ್ಲಲ್ಲ. ಅಂದರೆ ಕೆಳಗಿನ ಹಂತದಲ್ಲಿನ ಕೆಲಸಗಳು ಕೆಳಗಿನ ಹಂತದಲ್ಲಿ ಕಾರ್ಯರೂಪಕ್ಕೆ ಬರಬೇಕು. ಶೇಷಾಧಿಕಾರವು ಮಾತ್ರ ಮೇಲಿನ ಹಂತಕ್ಕೆ ರವಾನೆಯಾಗಬೇಕು. ವಿವಿಧ ಸ್ತರಗಳು ತಮ್ಮ ಕಾರ‍್ಯಕ್ಷಮತೆಯಲ್ಲಿ ಒಂದಕ್ಕೊಂದು ಪೂರಕವಾಗಿರಬೇಕು ಮತ್ತವುಗಳಿಗೆ ಕಾರ್ಯವಾಹಿ, ಹಣಕಾಸು ಮತ್ತು ಆಡಳಿತ ಸ್ವಾಯತ್ತತೆ ಇರಬೇಕು. ಹೀಗೆ ಜನತಂತ್ರ ವಿಕೇಂದ್ರೀಕರಣ ಪ್ರಸ್ತಾವದ ಪರಿಕಲ್ಪನೆಯು ಪ್ರಾತಿನಿಧಿಕ ಪ್ರಜಾಪ್ರಭುತ್ವದ ಆಂದೋಲನ ಪ್ರಕ್ರಿಯೆಗಿಂತಲೂ ವಿಸ್ತಾರವಾದುದು. ಸರಕಾರದ ಕಾರ್ಯಕ್ರಮಗಳ ಕುರಿತ ನೀತಿನಿರೂಪಣೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಪ್ರತಿಫಲಗಳ ಪಾಲುದಾರಿಕೆಯಲ್ಲಿ ಜನಸಾಮಾನ್ಯರ ಸಹಭಾಗಿತ್ವಕ್ಕೆ ಪೂರಕವಾಗಿ ಕೆಳಗಿನ ಹಂತಗಳಲ್ಲಿ ತಕ್ಕುದಾದ ಸಾಂಸ್ಥಿಕ ರಚನೆಗಳು, ಅವಕಾಶಗಳು ಮತ್ತು ಅಗತ್ಯವಾದ ಧಾರಣಾಶಕ್ತಿಯನ್ನು, ಉತ್ತೇಜಿಸುವ ಕ್ರಮಗಳು ಜಾರಿಗೊಳ್ಳಬೇಕು. ಇಂತಹ ಜನಸಹಭಾಗಿತ್ವವು ಜನಪ್ರತಿನಿಧಿಗಳನ್ನು ನಾಗರಿಕರಿಗೆ ನಿರಂತರವಾಗಿ ಉತ್ತರದಾಯಿಗಳನ್ನಾಗಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗುವುದು.

ವಿಕೇಂದ್ರೀಕರಣವನ್ನು ಜಾಗತಿಕರಣ ಮತ್ತು ಸ್ಥಳೀಯ ಸ್ವಯಮಾಡಳಿತವೆಂಬ ಎರಡು ವಿರುದ್ಧ ಪ್ರವೃತ್ತಿಗಳ ಮಧ್ಯೆ ಗಮನಿಸಬೇಕಾದ ಸಂದರ್ಭ ಸಹ ನಮ್ಮ ಮುಂದಿದೆ. ಇಡಿ ವಿಶ್ವವೆ ಒಂದೆಡೆ ಮಹತ್ತರವಾದ ಬದಲಾವಣೆಗೆ ಒಳಗಾಗುತ್ತಿದೆ. ಉತ್ತರ ಮತ್ತು ದಕ್ಷಿಣದ ದೇಶಗಳ ಮಧ್ಯದ ಬಿಕ್ಕಟ್ಟು, ಜನತಂತ್ರ ಹೋರಾಟಗಳು, ನಿರಂಕುಶ ಪ್ರಭುತ್ವದ ನಿರ್ಗಮನ, ಹೊಸ ಸಾಂಸ್ಥಿಕ ಆವಿಷ್ಕಾರಗಳ ಪ್ರಯೋಗ, ಜನಾಂಗೀಯ ಪ್ರಶ್ನೆಗಳು, ಧರ್ಮ ಮತ್ತು ಸಾಮಾಜಿಕ ಅಸ್ಮಿತೆಗಳು ಇವೆಲ್ಲವುಗಳನ್ನು ರಾಜಕೀಯ ನೆಲೆಯಲ್ಲಿ ಮರುವ್ಯಾಖ್ಯಾನಿಸುವ ಅಗತ್ಯವಿದೆ. ಇವೆಲ್ಲವು ಪ್ರಮಖವಾದ ವಿಷಯಗಳಾಗಿವೆ. ಏಶಿಯಾದ ಸಂದರ್ಭದಲ್ಲಂತೂ ಇವು ಗಂಭೀರವಾದ ಪ್ರಶ್ನೆಗಳು. ಜನತಂತ್ರ ಆಂದೋಲನ ಮತ್ತು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳಿಗೆ ಮೂರ್ತ ರೂಪ ನೀಡುವ ಬಹುಮುಖ್ಯವಾದ ಆಸಕ್ತಿ ಮತ್ತು ಕಾಳಜಿಯ ಪಲ್ಲಟವಾಗಬೇಕಿದೆ.

ಪಂಚಾಯತ್ ವ್ಯವಸ್ಥೆಯು ಭಾರತಕ್ಕೆ ಹೊಸ ಪರಿಕಲ್ಪನೆಯಲ್ಲ. ಆ ಮೂಲಕ ನಮಗೆ ಅದು ಅಪರಿಚಿತವೂ ಅಲ್ಲ. ಅದರ ಇತಿಹಾಸವು ನಮ್ಮನ್ನು ಬಹಳ ಹಿಂದಕ್ಕೆ ಕೊಂಡೊಯ್ಯುತ್ತದೆ. ಪಂಚಾಯತ್‌ರಾಜ್ ಚಿಂತನೆ ಕುರಿತ ಆಧುನಿಕವಾದವು ಗತಕಾಲದ ನಿರ್ಗಮನವೆಂಬಂತೆ ಕಂಡರೂ ಇದು ಅಸ್ತಿತ್ವದಲ್ಲಿತ್ತೆಂಬುದರಲ್ಲಿ ಎರಡು ಮಾತಿಲ್ಲ. ಪ್ರತಿ ಜಾತಿ ಪಂಗಡ ಕುಲಗಳಲ್ಲಿ ಜಾತಿ ಪಂಚಾಯತ್ ಅಥವಾ ನ್ಯಾಯಪಂಚಾಯತ್ ಅಸ್ತಿತ್ವದಲ್ಲಿದ್ದೂ ಆಯಾ ಜನವರ್ಗಕ್ಕೆ ಅದು ಸೇವೆಯನ್ನೊದಗಿಸುತ್ತಿದ್ದವು. ಇದಕ್ಕೆ ಹೆಚ್ಚಿನ ಮಹತ್ವವಿಲ್ಲದಿದ್ದರೂ ಅವು ಆಯಾ ಜನವರ್ಗಗಳಲ್ಲಿ ಸ್ವೀಕೃತ ಹಾಗೂ ಗುರುತರವಾಗಿತ್ತು. ಇವು ವಿಸ್ತೃತಗೊಂಡು ಒಂದು ಗ್ರಾಮದ ಅಧಿಕಾರ ಅಥವಾ ಅಂತಸ್ತು ಹಂಚಿಕೆ ಮತ್ತು ಪ್ರಾಬಲ್ಯತೆಗೆ ಮನ್ನಣೆ ನೀಡಿತು. ಈ ಹಿನ್ನೆಲೆಯಲ್ಲಿ ಯೋಗೇಂದ್ರಸಿಂಗ್ ಹೇಳುವಂತೆ ಸಾಂಪ್ರದಾಯಿಕ ಪಂಚಾಯತ್ ಮತ್ತು ಗ್ರಾಮಹಬ್ಬಗಳು (ಸಾಂಸ್ಕೃತಿಕ ಆಚರಣೆಗಳು) ಹಿಂದೆ ಹಳ್ಳಿಯ ಅಧಿಕಾರ ಅಥವಾ ಅಂತಸ್ತು ಹಂಚಿಕೆ ಮತ್ತು ಪ್ರಭಾವಕ್ಕೆ ತಕ್ಕ ನ್ಯಾಯಸಮ್ಮತಿ ಒದಗಿಸಿತು. ಆದರೆ ಇಂದು ನಮ್ಮ ಜನತಂತ್ರ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣಾ ಆಧಾರದ ಮೇಲೆ ನಿಂತಿರುವ ಅಧಿಕೃತ ಪಂಚಾಯತ್‌ಗಳಿವೆ. ಇವು ಅಧಿಕಾರ ವಿತರಣೆಯ ಸಾಂಪ್ರದಾಯಿಕ ಸಂಸ್ಥೆಗಳ ಬದಲು ಸಮಾಜದಲ್ಲಿ ಸ್ಪರ್ಧಾ ಗುಂಪುಗಳಿಗೆ ಅವಕಾಶ ನೀಡಿದೆ ಎಂದು ಹೇಳುತ್ತಾರೆ.

ಸ್ಥಳೀಯ ಹಂತದ ಆಡಳಿತ ವ್ಯವಸ್ಥೆಯಾದರೂ ಪಂಚಾಯತ್‌ ಬಹಳ ದಶಕಗಳವರೆಗೆ ಕಾರ್ಯವಾಹಿ ಕುರಿತಂತೆ ನಿಷ್ಕ್ರಿಯ ಹಾಗೂ ನಿರ್ಲಿಪ್ತವಾಗಿರುವುದು ನಮಗೆ ಎದ್ದು ಕಾಣುವುದು. ಈ ಹಿನ್ನೆಲೆಯಲ್ಲಿ ಎರಡು ಮಹತ್ತರ ಕಾರಣಗಳಿಂದಾಗಿ ಇದರ ಪುನರುಜ್ಜೀವನ ಅಗತ್ಯವೆನಿಸುತ್ತದೆ. ನಮ್ಮ ಸಮಾಜದ ಮೂಲಭೂತವಾದ ಊಳಿಗ ರಚನಾ ವ್ಯವಸ್ಥೆಯಲ್ಲಿ ಅದು ಹೇರಲ್ಪಟ್ಟಿದ್ದರಿಂದಾಗಿ ಜನತಂತ್ರ ವಿಕೇಂದ್ರೀಕರಣವು ಆಡಳಿತದಲ್ಲಿ ಅಲ್ಪ ಯಶಸ್ಸನ್ನು ಪಡೆಯಿತು. ಎರಡನೆಯದಾಗಿ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ರಾಜಕೀಯ ನಾಯಕತ್ವವು ಜನ ಸಹಭಾಗಿತ್ವದ ನಿಜವಾದ ಅರ್ಥದಲ್ಲಿ ಜನರನ್ನು ಸಂಚಯನಗೊಳಿಸಲು ಅಸಾಧ್ಯವಾಗಿತ್ತು. ಸರಿಯಾಗಿ ಸಂಚಯನಗೊಳಿಸಿದ್ದಲ್ಲಿ ರಾಜ್ಯದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅವರು ಪಾಲುದಾರರಾಗಿರುತ್ತಿದ್ದರು. ರಾಜ್ಯ ಮತ್ತು ಜನರ ಸಂಬಂಧ ಕೊಡುವ ಮತ್ತು ಪಡೆಯುವುದರ ಮಟ್ಟಿಗೆ ಸೀಮಿತವಾಗಿದ್ದಂತಿತ್ತು. ತಳಮಟ್ಟದ ಆಡಳಿತ ಘಟಕವು ಪ್ರಾಯೋಗಿಕವಾಗಿ ಸರಿಯಾದ ನಾಯಕತ್ವ ಮತ್ತು ಸಂಪನ್ಮೂಲಗಳಿಲ್ಲದೆ ಅಧಿಕಾರರಹಿತ ವಾಗಿತ್ತು. ಈ ನಿಟ್ಟಿನಲ್ಲಿ ಮಹಿಳೆಯನ್ನೊಳಗೊಂಡಂತೆ ಸಮಾಜದ ವಿವಿಧ ವಂಚಿತ ವರ್ಗಗಳಿಗೆ ಅಧಿಕಾರವನ್ನು ಒದಗಿಸುವುದು ಗ್ರಾಮಮಟ್ಟದಲ್ಲಿ ಸಾಧ್ಯವಾಯಿತು ಮತ್ತು ಈ ಮೂಲಕ ಜನತಂತ್ರವನ್ನು ಇನ್ನಷ್ಟು ವಿಸ್ತರಿಸಲಾಯಿತು. ಇದು ಕಾನೂನಿನ ಮಾನ್ಯತೆ ಇಲ್ಲದೆ ಸಾಧ್ಯವಿಲ್ಲವೆಂಬ ನಿಟ್ಟಿನಲ್ಲಿ ಪಂಚಾಯಿತಿಗಳಿಗೆ ಶಾಸನಾತ್ಮಕ ತಿದ್ದುಪಡಿಗಳನ್ನು ತರಲಾಯಿತು.

ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಸಮುದಾಯದ ಎಲ್ಲಾ ಜನವರ್ಗಗಳಿಗೆ ನೀತಿ ನಿರೂಪಣಾ ಪ್ರಕ್ರಿಯೆ ಮತ್ತು ಲಭ್ಯವಿರುವ ಸಂಪನ್ಮೂಲಗಳ ಮೂಲಕ ಸಮಾನ ಅವಕಾಶ ದೊರೆಯುವಂತೆ ಮಾಡುವುದು ಪ್ರಜಾತಂತ್ರ ದೇಶಗಳ ಮಹತ್ವದ ಕ್ರಮವೂ ಆಗಿದೆ. ನಿರ್ಣಯ ನಿರೂಪಣೆ ಘಟಕಗಳಲ್ಲಿ ದುರ್ಬಲರಿಗೆ ಪ್ರಾತಿನಿಧ್ಯ ದೊರೆಯದಾಯಿತು. ಚಾರಿತ್ರಿಕವಾಗಿ ಸಮಾಜದಲ್ಲಿ ಕೆಳಮಟ್ಟದ ಅಂತಸ್ತನ್ನು ಹೊಂದಿದ್ದರಿಂದಾಗಿ ದುರ್ಬಲರ ವಿರುದ್ಧ ಪ್ರಬಲ ಪೂರ್ವಾಗ್ರಹ ಆಧಾರಿತ ಭಾವನೆಯೂ ಇತ್ತು. ಸಾಮಾಜಿಕ ಸ್ಥರದಲ್ಲಿನ ಕೆಳ ಅಂತಸ್ತಿನಿಂದಾಗಿ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಅವರ ಸಾರ್ವಜನಿಕ ಜೀವನದಲ್ಲಿನ ಸಹಭಾಗಿತ್ವಕ್ಕೆ ತಡೆಯೊಡ್ಡಿದುವು. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅವಕಾಶವಂಚಿತ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಮಹಿಳೆ ಮತ್ತು ಹಿಂದುಳಿದವರ ಸಾಮಾಜಿಕ ಸಮಾನತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವತ್ತ ಸಾಂಸ್ಥಿಕ ಕ್ರಮಗಳನ್ನು ರೂಪಿಸಲು ಕ್ರಮ ತೆಗೆದುಕೊಂಡಿತು. ಈ ನಿಟ್ಟಿನಲ್ಲಿ ಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿಯು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳಲ್ಲಿ ಸ್ಥಾನ ಮೀಸಲಾತಿಯ ಕ್ರಮಗಳಿಗೆ ಅವಕಾಶಗಳನ್ನು ಕಲ್ಪಿಸಿತು.

ಅಧ್ಯಯನದ ಉದ್ದೇಶ

ಪ್ರಸ್ತುತ ಅಧ್ಯಯನದ ಮುಖ್ಯ ಉದ್ದೇಶಗಳು ಇಂತಿವೆ.

೧. ಗ್ರಾಮ ಪಂಚಾಯತಿ ಸದಸ್ಯರ ಸಹಭಾಗಿತ್ವ ಮತ್ತು ಅವರ ಸಾಮಾಜಿಕಾರ್ಥಿಕ ಗುಣಲಕ್ಷಣಗಳ ಸಂಬಂಧಗಳನ್ನು ಗುರುತಿಸುವುದು.

೨. ಮೀಸಲಾತಿಯ ಸ್ವರೂಪ ಮತ್ತು ಅದರ ಕಾರ್ಯ ನಿರ್ವಹಣೆಯ ಕುರಿತು ಅಧ್ಯಯನ ನಡೆಸುವುದು.

ಅಧ್ಯಯನದ ವಿಧಾನ

ಇದೊಂದು ಎಂಪಿರಿಕಲ್ ಅಧ್ಯಯನವಾಗಿದೆ. ಅಧ್ಯಯನಕ್ಕೆ ಪೂರಕವಾದ ಮಾಹಿತಿಯನ್ನು ಪ್ರಾಥಮಿಕ ಮತ್ತು ಆನುಷಂಗಿಕ ಮೂಲಗಳಿಂದ ಸಂಗ್ರಹಿಸಲಾಗಿದೆ. ಮುಖ್ಯವಾಗಿ ಪಂಚಾಯತಿ ಸದಸ್ಯರ ಸಾಮಾಜಿಕ ಆಯಾಮಗಳ ಕುರಿತ ಮಾಹಿತಿಯನ್ನು ಪ್ರಾಥಮಿಕ ಮೂಲಗಳಿಂದ ಪಡೆಯಲಾಗಿದೆ. ಇದಕ್ಕಾಗಿ ನಿರ್ದಿಷ್ಟವಾದ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ಸದಸ್ಯರನ್ನು ಸಂದರ್ಶಿಸುವ ಮೂಲಕ ಕ್ಷೇತ್ರಕಾರ್ಯ ನಡೆಸಿ ಮಾಹಿತಿಯನ್ನು ಕಲೆ ಹಾಕಲಾಯಿತು. ನಂತರದಲ್ಲಿ ಮಾಹಿತಿಯನ್ನು ಪರಿಷ್ಕರಿಸಿ ವಿಶ್ಲೇಷಿಸಲಾಗಿದೆ. ಈ ಅಧ್ಯಯನ ವಿಷಯಕ್ಕೆ ಸಂಬಂಧಿಸಿ ಲಭ್ಯವಿರುವ ಪುಸ್ತಕಗಳನ್ನು, ನಿಯತಕಾಲಿಕೆಗಳನ್ನು, ಅಧ್ಯಯನ ಪತ್ರಿಕೆಗಳನ್ನು ಮತ್ತು ಅಧ್ಯಯನ ವರದಿಗಳನ್ನು ಪರಾಮರ್ಶಿಸಲಾಗಿದೆ. ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ನೆರವು ಪಡೆಯಲಾಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಆರು ಗ್ರಾಮ ಪಂಚಾಯತಿ ಪ್ರತಿನಿಧಿಗಳ ಸಾಮಾಜಿಕ ಆಯಾಮಗಳನ್ನು ಕುರಿತಂತೆ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ನಾಲ್ಕು ನೀರಾವರಿ ಪ್ರದೇಶದ ಗ್ರಾಮ ಪಂಚಾಯತಿಗಳು ಮತ್ತು ಎರಡು ಬಣಭೂಮಿ ಪ್ರದೇಶ ವ್ಯಾಪ್ತಿಯ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಬುಕ್ಕಸಾಗರ, ರಾಮಸಾಗರ, ನಂ.೧೦ ಮುದ್ದಾಪುರ ಮತ್ತು ಸಣಾಪುರ ನೀರಾವರಿ ಪ್ರದೇಶ ವ್ಯಾಪ್ತಿಯ ಗ್ರಾಮಪಂಚಾಯತಿಗಳಾಗಿವೆ. ಬೈಲುವದ್ದಿಗೇರಿ ಮತ್ತು ಗಾದಿಗನೂರು ಒಣಭೂಮಿ ಪ್ರದೇಶವ್ಯಾಪ್ತಿಯ ಗ್ರಾಮಪಂಚಾಯತಿಗಳಾಗಿವೆ.

ಅಧ್ಯಯನವನ್ನು ಮೂರು ಹಂತಗಳಲ್ಲಿ ಮಂಡಿಸಲಾಗಿದೆ. ಮೊದಲಿಗೆ ನೀರಾವರಿ ಪ್ರದೇಶ ಗ್ರಾಮಪಂಚಾಯತಿ ಸದಸ್ಯರ ಸಾಮಾಜಿಕ ಆಯಾಮಗಳ ವಿಶ್ಲೇಷಣೆಯನ್ನು ಎರಡನೆಯದಾಗಿ ಒಣಭೂಮಿ ಪ್ರದೇಶದ ಪಂಚಾಯತಿ ಸದಸ್ಯರ ಸಾಮಾಜಿಕ ಆಯಾಮಗಳು ಮತ್ತು ಮೂರನೆಯದಾಗಿ ನೀರಾವರಿ ಮತ್ತು ಒಣ ಪ್ರದೇಶ ಸೇರಿ ಒಟ್ಟು ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಗ್ರಾಮಪಂಚಾಯತಿಯ ಸದಸ್ಯರ ಸಾಮಾಜಿಕ ಆಯಾಮಗಳೆಂದು ರೂಪಿಸಲಾಗಿದೆ.

ಪೂರಕ ಅಧ್ಯಯನಗಳು

ಜನಪ್ರತಿನಿಧಿಗಳ ಸಾಮಾಜಿಕ ಗುಣಲಕ್ಷಣಗಳನ್ನು ತಿಳಿದುಕೊಳ್ಳುವ ಮೂಲಕ ಸಂಸ್ಥೆ ಅಥವಾ ವ್ಯವಸ್ಥೆಯ ಸಾಮಾಜಿಕ ನೆಲೆಗಳನ್ನು ಶೋಧಿಸುವ ಪರಿಪಾಠ ಸಮಾಜ ವಿಜ್ಞಾನಗಳಲ್ಲಿ ಇಂದು ಪ್ರಚಲಿತದಲ್ಲಿದೆ. ಈ ಮೂಲಕ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಇದು ಬಹುಮುಖ್ಯವಾದ ಆಯಾಮವನ್ನು ಒದಗಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಮೇರಿಕದಲ್ಲಿ ಹುಟ್ಟಿಕೊಂಡ ವರ್ತನಾ ಸಿದ್ಧಾಂತವು ಇಂಥ ಅಧ್ಯಯನ ಕ್ರಮಗಳಿಗೆ ವಿಶೇಷ ತಿರುವು ನೀಡಿತು. ಮೊದಲನೆಯ ಮಹಾಯುದ್ಧದ ಸಂದರ್ಭದ ಅಮೆರಿಕದಲ್ಲಿ ಈ ಚಿಂತನಾಕ್ರಮವು ಒಂದು ಸೈದ್ಧಾಂತಿಕ ಚೌಕಟ್ಟಿಗೆ ಅನುಗುಣವಾಗಿ ರೂಪುಗೊಂಡರೂ ಇದು ಬಹಳ ಹಿಂದಿನಿಂದಲೂ ಅಲ್ಲಿನ ಅಧ್ಯಯನ ವಿಷಯವಾಗಿ ಬಳಕೆಯಲ್ಲಿತ್ತೆಂಬುದನ್ನು ಅಲ್ಲಿನ ಚುನಾವಣಾ ಅಧ್ಯಯನಗಳು ನಿರೂಪಿಸುತ್ತವೆ. ಅರಿಸ್ಟಾಟಲ್ ಗುರುತಿಸಿರುವ ವಿವಿಧ ಸಂವಿಧಾನಗಳ ತುಲನಾತ್ಮಕ ಅಧ್ಯಯನ ವಿಧಾನದಲ್ಲೂ ಈ ಚಿಂತನಾಕ್ರಮದ ಬಳಕೆಯನ್ನು ನಾವು ಗುರುತಿಸಬಹುದು.

ರಾಜಕೀಯ ವಿಜ್ಞಾನದಲ್ಲಿ ಸಾಂಪ್ರದಾಯಿಕವಾಗಿ ಪ್ರಚಲಿತದಲ್ಲಿರುವ ರಾಜಕೀಯ ಸಿದ್ಧಾಂತ, ಸಂಸ್ಥೆಗಳು ಮತ್ತು ರಾಜಕೀಯ ಸಂಘಟನೆಗಳ ಅಧ್ಯಯನ ಬದಲು. ವ್ಯಕ್ತಿ ಅಥವಾ ಸಮೂಹದ ರಾಜಕೀಯ ಘಟನೆ ಮತ್ತು ವರ್ತನೆಗೆ ಕಾರಣವಾಗುವ ಅಂಶಗಳಿಗೆ ಒತ್ತು ನೀಡುವುದು ವರ್ತನಾವಾದದ ಬಹುಮುಖ್ಯ ವಿಷಯವಸ್ತುವಾಗಿದೆ. ರಾಜಕೀಯ ಘಟಕ ಹಾಗೂ ರಾಜಕೀಯ ಘಟನೆ ಮತ್ತದರ ಪರಿಸರದ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡುವುದು ಈ ಸಿದ್ಧಾಂತದ ತಿರುಳಾಗಿದೆ. ಈ ಮೂಲಕ ವ್ಯಕ್ತಿ ಅಥವಾ ಸಮೂಹದ ರಾಜಕೀಯ ಘಟನೆ ಮತ್ತು ವರ್ತನೆಗೆ ಕಾರಣವಾಗುವ ಅಂಶಗಳ ಕುರಿತು ಅಧ್ಯಯನವು ಹೆಚ್ಚು ಬೆಳಕು ನೀಡುತ್ತದೆ. ಆದರೆ ಈ ಅಧ್ಯಯನ ವಿಧಾನದಿಂದ ರಾಜಕೀಯದಿಂದ ಮುಂದಿನ ಘಟನೆಗಳನ್ನು ನಿರೂಪಿಸಲು ಸಾಧ್ಯವಾಗದ ನಿಟ್ಟಿನಲ್ಲಿ ಕೆಲವೊಮ್ಮೆ ಇವುಗಳ ತಾತ್ವಿಕತೆಯನ್ನು ಸಂಶಯದಿಂದ ನೋಡಲಾಯಿತು. ಉದಾಹರಣೆಗೆ ವರ್ತನಾ ವಿಧಾನದ ಚೌಕಟ್ಟಿನಲ್ಲಿ ನಡೆದ ಅಧ್ಯಯನಗಳು ಎರಡನೆ ಮಹಾಯುದ್ಧದ ಮುನ್ಸೂಚನೆಯನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಇವುಗಳ ಅಧ್ಯಯನ ವಿಧಾನದ ಪರಿಷ್ಕರಣೆ ಕುರಿತಂತೆ ವಾದಗಳು ಮುಂದೆ ಬಂದುವು. ಈ ನಿಟ್ಟಿನಲ್ಲಿ ವರ್ತನೋತ್ತರವಾದ ಅಥವಾ ಪೋಸ್ಟ್ ಬಿಹೇವಿಯರಲಿಸಂ ವಿಧಾನವು ಪ್ರಚಲಿತಕ್ಕೆ ಬಂದಿತು. ಈ ವಿಧಾನದ ಅನ್ವಯಿಕತೆ ಅಥವಾ ಕ್ರೆಡೋ ಆಫ್ ರೆಲವನ್ಸ್‌ಗೆ ಒತ್ತು ನೀಡುವ ಮೂಲಕ ಹೆಚ್ಚು ಹೆಚ್ಚು ಅಧ್ಯಯನಗಳು ನಡೆದವು. ಹೀಗಾಗಿ ಚುನಾವಣಾ ಕುರಿತ ಅಧ್ಯಯನಗಳು ವ್ಯಾಪಕತೆ ಪಡೆದವು. ಇದರಂತೆ ವ್ಯಕ್ತಿಯ ರಾಜಕೀಯ ವರ್ತನೆ ಮತ್ತದು ಸಂಭವಿಸುವ ಪರಿಸರದ ಸಾಮಾಜಿಕ ಆರ್ಥಿಕ ಅಂಶಗಳ ಕಡೆಗೆ ಹೆಚ್ಚು ಒತ್ತು ನೀಡಲಾಯಿತು. ಭವಿಷ್ಯದ ರಾಜಕೀಯ ಆಗುಹೋಗುಗಳ ಮುನ್ನೋಟವನ್ನು ಇದು ಒದಗಿಸಲು ಶಕ್ತವಾಯಿತು. ವರ್ತನಾವಾದದ ಅಭಿಜಾತ ಅಧ್ಯಯನ ಕ್ರಮ ಇಂದು ವ್ಯಾಪಕವಾಗಿ ಬಳಕೆಯಲ್ಲಿಲ್ಲವಾದರೂ ಇದರ ಮುಂದುವರಿಕೆಯನ್ನು ಫ್ಯೂಚರ್ ಸ್ಟಡೀಸ್ ಮತ್ತು ಬಿಹೇವಿಯರಲ್ ಸಯಿನ್ಸಸ್‌ನಲ್ಲಿ ನಾವು ಕಾಣಬಹುದು. ಚುನಾವಣಾ ಅಧ್ಯಯನ ಕ್ರಮವೂ ಸಹ ಸೈದ್ಧಾಂತಿಕವಾದ ಚೌಕಟ್ಟನ್ನು ಪಡೆಯುವುದರೊಂದಿಗೆ ಚುನಾವಣಾ ಸಮೀಕ್ಷೆ, ಚುನಾವಣಾ ಪೂರಕ ಸಮೀಕ್ಷೆ ಇತ್ಯಾದಿ ವಿಧಾನಗಳು ಹೆಚ್ಚು ಪ್ರಚಲಿತದಲ್ಲಿವೆ. ಇದರ ಜೊತೆಗೆ ಚುನಾಯಿತ ಪ್ರತಿನಿಧಿಗಳ ಕಾರ್ಯಕ್ಷಮತೆ ಕುರಿತ ಅಧ್ಯಯನಗಳು ಬೆಳಕಿಗೆ ಬಂದಿವೆ. ವ್ಯಕ್ತಿಗತವಾಗಿ ಪ್ರತಿನಿಧಿಗಳ ಕಾರ್ಯಕ್ಷಮತೆಯ ಒಳನೋಟಗಳು ಅವರ ಸಾಮಾಜಿಕ ಗುಣಲಕ್ಷಣಗಳನ್ನು ಅವಲಂಬಿಸಿರುತ್ತವೆ ಎಂಬುದನ್ನು ಪ್ರಜಾಸತ್ತಾತ್ಮಕ ಅಧ್ಯಯನಗಳು ಶ್ರುತಿಪಡಿಸಿವೆ. ಹೇಗೆ ಪಕ್ಷವೊಂದರ ಸಾಮಾಜಿಕ ನೆಲೆಗಳನ್ನು ವಿಭಿನ್ನ ಆಯಾಮಗಳ ಮೂಲಕ ಅಧ್ಯಯನ ಮಾಡಲಾಗುತ್ತಿದೆಯೊ ಅದೆ ಪ್ರಕಾರ ಜನಪ್ರತಿನಿಧಿಗಳ ಸಾಮಾಜಿಕ ಗುಣಲಕ್ಷಣಗಳ ಅಧ್ಯಯನದಿಂದ ಅವರ ಕಾರ್ಯಕ್ಷಮತೆ, ನಾಯಕತ್ವದ ಸ್ವರೂಪ ಮತ್ತು ಒಟ್ಟಾರೆಯಾಗಿ ಸಂಸ್ಥೆ ಅಥವಾ ವ್ಯವಸ್ಥೆಯ ಒಟ್ಟು ಪರಿಸರದ ನೆಲೆಗಳನ್ನು ಶೋಧಿಸಬಹುದಾಗಿದೆ. ಇದರ ಮೂಲಕ ಸಂಸ್ಥೆ ಅಥವಾ ವ್ಯವಸ್ಥೆಯ ಒಟ್ಟು ಕಾರ್ಯವೈಖರಿಗೆ ಕನ್ನಡಿಯಾಗಬಹುದು. ನಮ್ಮಲ್ಲೂ ಸಹ ಕೇಂದ್ರ ಶಾಸಕಾಂಗ ಅಥವಾ ರಾಜ್ಯಶಾಸಕಾಂಗದ ಒಟ್ಟು ರಚನೆಯ (Composition) ಸಾಮಾಜಿಕ ನೆಲೆಗಳ ಅಧ್ಯಯನಗಳು ರೂಡಿಯಲ್ಲಿವೆ. ಇವು ಜನಪ್ರತಿನಿಧಿಗಳ ಸ್ಥಳೀಯ ಬೇರುಗಳನ್ನು ಪ್ರಾತಿನಿಧ್ಯಕ್ಕೆ ಸಮೀಕರಿಸುವ ಪ್ರಯತ್ನ ಮಾಡುತ್ತವೆ. ಈ ಮೂಲಕ ಸ್ಥಳೀಯ ನೆಲೆಗಳಿಗೆ ಅಥವಾ ಅಧಿಕಾರ ಸಂಬಂಧದ ಮೂಲಬೇರುಗಳಿಗೆ ಒತ್ತು ನೀಡುತ್ತವೆ. ಈ ಮಾದರಿಯ ಅಧ್ಯಯನಗಳು ಇಂದು ಸೂಕ್ಷ್ಮಾತಿ ನೆಲೆಯಲ್ಲಿ ಜಿಲ್ಲಾ ಘಟಕಗಳು ಮತ್ತು ತಳಮಟ್ಟದ ಸಂಸ್ಥೆಗಳಲ್ಲೂ ನಡೆಯುತ್ತವೆ. ಇದರಿಂದ ವಿಕೇಂದ್ರಿಕರಣದ ವಿವಿಧ ಆಯಾಮಗಳನ್ನು ಅಲ್ಲಿನ ಸದಸ್ಯರ ಸಾಮಾಜಿಕ ಗುಣಲಕ್ಷಣಗಳಿಗೆ ಒತ್ತು ನೀಡುವ ಮೂಲಕ ಸದಸ್ಯರ ಪಾತ್ರನಿರ್ವಹಣೆ, ಮಹಿಳಾ ಸಹಭಾಗಿತ್ವ, ನಾಯಕತ್ವದ ಸ್ವರೂಪ, ಗ್ರಾಮಸಭೆ ಮತ್ತು ಸಂಸ್ಥೆಗಳ ಕಾರ್ಯವೈಖರಿಯ ಹಿನ್ನೆಲೆಯಲ್ಲಿ ಗುರುತಿಸಬಹುದಾಗಿದೆ.

ಪಂಚಾಯತಿ ಸದಸ್ಯರ ಸಾಮಾಜಿಕ ಆಯಾಮಗಳ ಕುರಿತಂತೆ ಹಲವಾರು ಅಧ್ಯಯನಗಳು ನಡೆದಿವೆ. ಇವು ಪ್ರತಿನಿಧಿಗಳು ಮತ್ತು ಪ್ರತಿನಿಧಿ ಸಂಸ್ಥೆಯ ಒಟ್ಟು ಕಾರ್ಯಕ್ಷಮತೆಯ ಚೌಕಟ್ಟನ್ನು ನಿರ್ಧರಿಸುತ್ತವೆ. ವಿಕೇಂದ್ರಿಕರಣ ಅಥವಾ ಪಂಚಾಯತ್‌ನ ಪ್ರಾತಿನಿಧ್ಯದ ಇಂಥ ಒಳನೋಟಗಳು ಪ್ರತಿನಿಧಿಗಳ ಮೂಲಕ ಗ್ರಾಮದ ವಾಸ್ತವತೆಯನ್ನು ನಮ್ಮ ಮುಂದಿಡುವುದರಿಂದ ಇವು ಸೂಕ್ಷ್ಮಾತಿ ನೆಲೆಯಲ್ಲೆ ಹೆಚ್ಚಾಗಿ ನಡೆಯುತ್ತವೆ. ಅಂದರೆ ಗ್ರಾಮ, ತಾಲ್ಲೂಕು ಘಟಕ ಅಥವಾ ಜಿಲ್ಲಾ ಘಟಕದ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುವ ಮೂಲಕ ಪಂಚಾಯತ್ ಕಾಯ್ದೆ, ಅಧಿಕಾರಿಗಳ ಬದಲು ಪಂಚಾಯತ್ ಪ್ರಕಾರ್ಯ, ಮತ್ತು ಕರ್ತವ್ಯಗಳ ಕುರಿತಂತೆ ಹೆಚ್ಚಿನ ವಿವರಣೆ ಒದಗಿಸುತ್ತವೆ. ಇದನ್ನು ಗಮನಿಸಿದರೆ ಕಾಯ್ದೆ ಅನುಷ್ಠಾನಗೊಂಡ ನಂತರದ ಮೊದಲ ಹಂತದ ಬರವಣಿಗೆಗಳು ಎಲ್ಲವೂ ಕಾಯ್ದೆ ಮತ್ತು ಅಧಿಕಾರಗಳ ಕುರಿತಂತೆ ಹೆಚ್ಚು ಪ್ರಕಟಗೊಂಡಿವೆ ಎಂಬುದು ವಿಶೇಷವಾಗಿದೆ. ಹಾಗಾಗಿ ೭೩ನೇ ಕಾಯ್ದೆ ಅನುಷ್ಠಾನ ನಂತರದ ಮೊದಲು ಘಟ್ಟದ ಸೂಕ್ಷ್ಮ ಅಧ್ಯಯನಗಳಲ್ಲಿ ಪಂಚಾಯತಿ ಕಾಯ್ದೆ, ಮೀಸಲಾತಿ ಮೊದಲಾದ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅನಂತರದ ಬರವಣಿಗೆಗಳು ಹೆಚ್ಚಾಗಿ ಪಂಚಾಯತಿಯ ಸಾಮಾಜಿಕ ಗುಣಲಕ್ಷಣಗಳ ವಿವಿಧ ಆಯಾಮಗಳು, ಸ್ಥಳೀಯ ರಾಜಕಾರಣ ಮತ್ತು ಪಂಚಾಯತಿ ನಿರ್ವಹಣೆಯ ಆಂತರಿಕ ಸಂಘರ್ಷಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ.

ಅಮಲ್‌ರೇ ಮತ್ತು ಜಯಲಕ್ಷ್ಮಿ (೧೯೯೯) ಯವರು ೧೯೮೩ರ ಕರ್ನಾಟಕ ಪಂಚಾಯತ್‌ ಕಾಯ್ದೆಯನ್ವಯ ಅಸ್ತಿತ್ವಕ್ಕೆ ಬಂದ ಜಿಲ್ಲಾಪರಿಷತ್ ಅಧ್ಯಕ್ಷರುಗಳ ಸಾಮಾಜಿಕ ಹಿನ್ನೆಲೆ ಕುರಿತ ಅಧ್ಯಯನದ ಬಹುಮುಖ್ಯವಾದ ಒಳನೋಟಗಳನ್ನು ವಿವರಿಸುತ್ತಾರೆ. ಪಾತ್ರ ನಿರ್ವಹಣೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯು ರಾಜಕೀಯವಾಗಿ ಪ್ರಭಾವ ಬೀರಲು ಕೇವಲ ಜಾತಿ ಮಾತ್ರವಲ್ಲ ಜೊತೆಗೆ ಶಿಕ್ಷಣ ಮತ್ತು ಆರ್ಥಿಕ ದೃಢತೆಯ ಅಂಶಗಳು ನಿರ್ಧಾರಕವಾಗಿವೆ ಎಂದು ತಿಳಿಸುತ್ತಾ ಪೂರ್ವರಾಜಕೀಯ ಅನುಭವ ಮತ್ತು ಜಾತಿ ಆಧಾರದ ವಿಸ್ತೃತ ನೆಲೆಯ ಪ್ರಾಮುಖ್ಯತೆಗೆ ಒತ್ತುಕೊಡುತ್ತಾರೆ. ಸಂದರ್ಶಿಸಿದ ಅಧ್ಯಕ್ಷರುಗಳಲ್ಲಿ ಯಾರೂ ಮಹಿಳಾ ಅಧ್ಯಕ್ಷರುಗಳು ಇರಲಿಲ್ಲವೆಂದೂ ಹೆಚ್ಚಿನ ಅಧ್ಯಕ್ಷರ ವಯಸ್ಸು ೫೦ ಮತ್ತು ಅದಕ್ಕಿಂತ ಹೆಚ್ಚಾಗಿತ್ತೆಂದು ತಿಳಿಸುತ್ತಾರೆ. ಹೆಚ್ಚಿನ ಅಧ್ಯಕ್ಷರಿಗೆ ಪೂರ್ವರಾಜಕೀಯ ತರಬೇತಿಯ ಅನುಭವವಿತ್ತು. ಬಹುಪಾಲು ಪ್ರಬಲ ಜಾತಿಯ ಅಧ್ಯಕ್ಷರುಗಳಿದ್ದರು.

ಇದಕ್ಕೆ ಆರ್ಥಿಕ ಭದ್ರತೆಯೆ ಕಾರಣವಾಗಿದೆ. ಮುಖ್ಯವಾಗಿ ಹಿಂದುಳಿದ ಜಾತಿವರ್ಗಗಳ ಅಧ್ಯಕ್ಷರ ಸಂದರ್ಭದಲ್ಲಿ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಜಾತಿ ಅಂಶವು ಅವರ ಕಾರ‍್ಯಕ್ಷಮತೆಯ ಮೇಲೆ ಪರಿಣಾಮಬೀರುವಾಗಿಲ್ಲ ಎಂದು ೧೯೮೧ ರ ಜನಗಣತಿ ವಿವರಗಳನ್ನು ನೀಡುತ್ತಾ ಒಕ್ಕಲಿಗರು, ಲಿಂಗಾಯಿತರು ಮತ್ತು ಪರಿಶಿಷ್ಟರು ಸಂಖ್ಯಾತ್ಮಕವಾಗಿ ಪ್ರಧಾನವಾದ ಸಮುದಾಯಗಳು. ಒಕ್ಕಲಿಗ ಮತ್ತು ಲಿಂಗಾಯಿತ ಅಧ್ಯಕ್ಷರು ಆಯ್ಕೆಯಾಗಿರುವ ಕ್ಷೇತ್ರಗಳಲ್ಲಿ ಇವೆರಡು ಜಾತಿಗಳ ಪ್ರಾಬಲ್ಯವಿದ್ದರೆ, ಪರಿಶಿಷ್ಟರು ಹಾಗೂ ಹಿಂದುಳಿದ ಅಧ್ಯಕ್ಷರುಗಳ ಕ್ಷೇತ್ರದ ಪರಿಸ್ಥಿತಿ ಹಾಗಿಲ್ಲ. ಈ ಹಿನ್ನೆಲೆಯಲ್ಲಿ ಇದು ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳ ಪಾತ್ರನಿರ್ವಹಣೆಗೆ ತೊಡಕಾಗಬಹುದೆಂಬ ಅಂಶವನ್ನು ತಿಳಿಸುತ್ತಾರೆ.

ಶ್ಯಾಮಲ (೨೦೦೧) ಅವರು ೧೯೯೩ರ ಕರ್ನಾಟಕ ಪಂಚಾಯತ್ ಕಾಯ್ದೆಯನ್ವಯದ ಜಿಲ್ಲಾ ಪಂಚಾಯತಿ ಸದಸ್ಯರ ಸಮಾಜಿಕ ಆಯಾಮಗಳ ಅಧ್ಯಯನದಲ್ಲಿ ರೂಪುಗೊಳ್ಳುತ್ತಿರುವ ನಾಯಕತ್ವವು ಆಶಾದಾಯಕವಾಗಿದ್ದು ಕಾಳಜಿಯುಳ್ಳ, ಹೆಚ್ಚಾಗಿ ಯುವ ಸದಸ್ಯರು ಪ್ರಾತಿನಿಧ್ಯ ಪಡೆದಿದ್ದಾರೆ ಎಂದು ವಿವರಿಸುತ್ತಾರೆ. ಹೊಸ ಗ್ರಾಮೀಣ ಅಧಿಕಾರ ರಚನೆಯು ಎಲ್ಲಾ ಜಾತಿವರ್ಗಗಳಿಗೆ ಅವಕಾಶ ಕಲ್ಪಿಸುವ ಮೂಲಕ ಹಿಂದಿನ ಎರಡು ಕಾಯ್ದೆಗಳಗಿಂತಲೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ವಾಸ್ತವಕ್ಕೆ ಹತ್ತಿರದಲ್ಲಿವೆ. ಹೆಚ್ಚಿನ ಸದಸ್ಯರು ಶಿಕ್ಷಣ ಹೊಂದಿದ್ದಾರೆ. ಬಹುತೇಕರು ಕೃಷಿಕರಾಗಿ ಭೂಮಿ ಉಳ್ಳವರು ಹಾಗೂ ರಾಜಕೀಯ ಪೂರ್ವ ಅನುಭವವಿದ್ದವರು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಪ್ರತಿನಿಧಿಗಳಿಗೆ ತರಬೇತಿ ನೀಡುವಲ್ಲಿ ಕಾರ್ಯತತ್ಪರವಾಗಿದೆ ಎಂದು ತಿಳಿಸುತ್ತಾರೆ.

ಸುಕ್ಲಾ ದೇವ್ ಕನಾಂಗೊ (೧೯೯೬) ಪಶ್ಚಿಮ ಬಂಗಾಳದ ಮಹಿಳಾ ಪಂಚಾಯತ್ ಸದಸ್ಯರ ಕುರಿತ ಅಧ್ಯಯನದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳು ಮಹಿಳಾ ಸಹಭಾಗಿತ್ವದ ವಿಸ್ತೃತ ಅವಕಾಶಕ್ಕೆ ತೊಡಕಾಗಿದ್ದರೂ ಕೆಲವು ಮಹಿಳೆಯರು ಸಹಭಾಗಿತ್ವದ ಸ್ವಾವಲಂಬನೆಗೆ ಮಾದರಿಯಾಗಿದ್ದಾರೆಂದು ವಿಶ್ಲೇಷಿಸುತ್ತಾರೆ. ಮಹಿಳಾ ಸದಸ್ಯರ ಪಾತ್ರದ ಬಗೆಗೆ ಗಂಡಸರು ಪೂರ್ವಾಗ್ರಹ ಹೊಂದಿರುವುದರಿಂದ ಮಹಿಳೆಯರು ಒಂದು ವರ್ಷದಿಂದೀಚೆಗೆ ಪಂಚಾಯತ್ ಸಭೆಗೆ ಹಾಜರಾಗಿಲ್ಲ. ಅವರ ಸಹಿ ಬೇಕಾದ ಸಂದರ್ಭದಲ್ಲಿ ಮನೆಗೆ ಹೋಗಲಾಗುತ್ತಿತ್ತು. ಇನ್ನು ಕೆಲವರು ಆಸಕ್ತಿಯಿಂದ ಸಭೆಗೆ ಹಾಜರಾದರೂ ಸಹಭಾಗಿತ್ವದ ತಮ್ಮ ಅವಕಾಶಗಳಿಂದ ವಂಚಿತರಾಗಿದ್ದಾರೆ. ಆಸಕ್ತ ವಿಷಯದ ಕುರಿತು ಚರ್ಚಿಸಿದರೂ ಪುರುಷರು ಅದಕ್ಕೆ ಗಮನ ನೀಡುತ್ತಿಲ್ಲ. ಪುರುಷ ಸದಸ್ಯರು ಮಹಿಳಾ ಸದಸ್ಯರ ಅಧಿಕಾರದ ಬಗೆಗೆ ಅಣಕಿಸುತ್ತಿದ್ದರು. ಹೀಗಾಗಿ ಹೆಚ್ಚಿನವರು ಮರುಚುನಾವಣೆ ಕುರಿತು ಆಸಕ್ತಿ ಕಳೆದುಕೊಂಡಿದ್ದಾರೆ. ತರಬೇತಿ ಪಡೆದರೂ ಅತಿಯಾದ ಪುರುಷಶಾಹಿ ಪ್ರಭಾವ ತೊಡಕಾಗಿದೆ ಎಂದು ವಿವರಿಸುತ್ತಾರೆ.

ಮಧುಸೂದನ್ ಬಂಡಿ (೨೦೦೪) ಯವರು ಬೀದರ್ ಜಿಲ್ಲೆಯ ಪಂಚಾಯತ್‌ನ ಹಿಂದುಳಿದ ವರ್ಗಗಳ ಸದಸ್ಯರ ಪಾತ್ರ ನಿರ್ವಹಣೆಯ ತಮ್ಮ ಅಧ್ಯಯನದಲ್ಲಿ ಸಂಖ್ಯಾತ್ಮಕವಾಗಿ ಹೆಚ್ಚಿರುವ ಹಿಂದುಳಿದ ವರ್ಗದ ಸದಸ್ಯರ ಸಹಭಾಗಿತ್ವವು ಸಾಂಪ್ರದಾಯಿಕ ಅಧಿಕಾರ ರಚನೆಯನ್ನು ಬುಡಮೇಲಾಗಿಸಿದೆ ಎಂದು ತಿಳಿಸುತ್ತಾರೆ. ಮಹಿಳಾ ಸದಸ್ಯರೂ ಸಹ ಹೆಚ್ಚಾಗಿ ಅನಕ್ಷರಸ್ಥರಿದ್ದರೂ, ಜಾತಿ ನೆಲೆಯಲ್ಲಿ ಹಿಂದುಳಿದವರೆಂಬ ಭಾವನೆಯಿದ್ದರೂ ತಮ್ಮ ಪಾತ್ರನಿರ್ವಹಣೆಗೆ ಹೆಚ್ಚಿನ ಒಲವು ನೀಡುತ್ತಾರೆಂದು ವಿವರಿಸುತ್ತಾರೆ.

ವರ್ಮಿಂದರ್ ಕೌರ್ ಮತ್ತು ಸುಖ್‌ದೇವ್ ಸಿಂಗ್ (೨೦೦೧) ರವರು ಪಂಜಾಬ್‌ನ ೩ ಜಿಲ್ಲೆಗಳ ಆಯ್ದ ಗ್ರಾಮಪಂಚಾಯಿತಿ ಮಹಿಳಾ ಸದಸ್ಯರ ಪಾತ್ರನಿರ್ವಹಣೆ ಕುರಿತ ಅಧ್ಯಯನದಲ್ಲಿ ಬಹುತೇಕ ಸದಸ್ಯರು ಮಧ್ಯವಯಸ್ಕರಾಗಿದ್ದು, ಹೆಚ್ಚಿನ ಮೇಲ್ಜಾತಿ ಸದಸ್ಯರು ಕಡಿಮೆ ಶಿಕ್ಷಣ ಹೊಂದಿದ್ದಾರೆಂದು ವಿವರಿಸುತ್ತಾರೆ. ಶೇ. ೯೫ ರಷ್ಟು ಸದಸ್ಯರ ಭೂಆಸ್ತಿ ಒಡೆತನವು ಗಂಡಸರ ಹೆಸರಿನಲ್ಲಿ ದಾಖಲಾಗಿದೆ ಸದಸ್ಯರು ಹೆಚ್ಚಾಗಿ ಮಧ್ಯಮ ಆದಾಯ ಗುಂಪಿಗೆ ಸೇರಿದ್ದಾರೆ. ಬಹುತೇಕರು ಪ್ರಥಮ ಬಾರಿಗೆ ರಾಜಕೀಯ ಪ್ರವೇಶ ಪಡೆದಿದ್ದರೂ ಕುಟುಂಬ ಸದಸ್ಯರ ಸಹಾಯ, ಜಾತಿಯ ಬೆಂಬಲ ಮತ್ತು ರಾಜಕೀಯ ಪಕ್ಷಗಳ ಉತ್ತೇಜನದಿಂದಾಗಿ ಚುನಾವಣೆಯಲ್ಲಿ ಯಶಸ್ಸು ಸಾಧ್ಯವಾಯಿತು ಎಂದು ತಿಳಿಸುತ್ತಾರೆ. ಸಂದರ್ಶಿಸಿದ ಯಾವ ಸದಸ್ಯರಿಗೂ ಹಳೆಯ ಇಲ್ಲವೇ ಹೊಸ ಪಂಚಾಯತ್ ಕಾಯ್ದೆಯ ಕುರಿತು ಅರಿವು ಇರಲಿಲ್ಲವಾದರೂ ಕೆಲವು ಸದಸ್ಯರಿಗೆ ವಿವಿಧ ಶಾಸನಾತ್ಮಕ ಅಧಿಕಾರಗಳ ಅರಿವಿದ್ದು, ಬಹುತೇಕರಿಗೆ ಕರ್ತವ್ಯಗಳ ಕುರಿತ ಜ್ಞಾನವಿತ್ತು. ಮಹಿಳಾ ಸಹಭಾಗಿತ್ವದ ಕಳೆಗುಂದುವಿಕೆಗೆ ಪುರುಷ ಪ್ರಾಧಾನ್ಯತೆಯ ತೊಡಕಾಗಿರುವುದರಿಂದ ತರಬೇತಿ ಮುಂತಾದ ಕಾರ‍್ಯಕ್ರಮಗಳು ಈ ನಿಟ್ಟಿನಲ್ಲಿ ಪ್ರೋತ್ಸಾಹದಾಯಕವಾಗಬಹುದು ಎಂದು ವಿವರಿಸುತ್ತಾರೆ.

ದಿಲೀಪ್ ಘೋಪ್ (೧೯೯೭) ಪಶ್ಚಿಮ ಬಂಗಾಳದ ಜಿಲ್ಲೆಯೊಂದರ ಗ್ರಾಮ ಪಂಚಾಯತಿಗಳ ಮಹಿಳಾ ಸದಸ್ಯರ ಪಾತ್ರ ನಿರ್ವಹಣೆ ಕುರಿತ ಅಧ್ಯಯನದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಶಿಕ್ಷಣಮಟ್ಟವು ತೀರಾ ಕಡಿಮೆಯಿದ್ದು ಪರಿಣಾಮಕಾರಿ ಪಾತ್ರ ನಿರ್ವಹಣೆಗೆ ತೊಡಕನ್ನುಂಟುಮಾಡಿರುವುದಕ್ಕೆ ಪೂರಕವಾದ ತರಬೇತಿ ಕಾರ‍್ಯಕ್ರಮಗಳು ಅಗತ್ಯವೆಂದು ವಿಶ್ಲೇಷಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕೃಷಿಯನ್ನವಲಂಬಿಸಿರುವ ವಿವಿಧ ಜಾತಿವಾರು ಮಹಿಳೆಯರಲ್ಲಿ ಹೆಚ್ಚಾಗಿ ಮಧ್ಯಮ ವಯಸ್ಸಿನವರು ಹಾಗೂ ಯುವತಿಯರು ಸದಸ್ಯರಾಗಿರುವರೆಂದು ತಿಳಿಸುತ್ತಾರೆ.

ಕೆ.ಶುಭಾ (೧೯೯೬) ರವರು ಕರ್ನಾಟಕ ಪಂಚಾಯತಿ ಚುನಾವಣೆಗಳು ಎಂಬ ಪುಸ್ತಕದಲ್ಲಿ ರೂಪುಗೊಳ್ಳುತ್ತಿರುವ ನಾಯಕತ್ವದ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ ವಿಶ್ಲೇಷಣಾತ್ಮಕ ವಿವರವನ್ನು ಒದಗಿಸುತ್ತಾರೆ. ಸದಸ್ಯರ ವೈವಾಹಿಕ ಸ್ಥಾನಮಾನಗಳ ಕುರಿತ ಮಾಹಿತಿ ಒದಗಿಸುತ್ತ ದೇವದಾಸಿಯರು ಪಂಚಾಯತ್ ಸದಸ್ಯತ್ವ ಹೊಂದಿರುವ ಅಂಶಗಳ ಬಗೆಗೆ ಬೆಳಕು ಚೆಲ್ಲುತ್ತಾರೆ. ಸದಸ್ಯರಲ್ಲಿ ಯುವಜನರು ಹೆಚ್ಚಾಗಿದ್ದು ಬಹುತೇಕರು ಮಧ್ಯ ವಯಸ್ಸಿನ ಗುಂಪಿಗೆ ಸೇರಿರುತ್ತಾರೆ. ಸದಸ್ಯರು ಮಧ್ಯಮ ಗಾತ್ರದ ಕುಟುಂಬವನ್ನು ಹೊಂದಿದವರಾಗಿದ್ದು ಜಂಟಿ ಕುಟುಂಬ ವ್ಯವಸ್ಥೆ ಅಥವಾ ವೈಯಕ್ತಿಕ ಕುಟುಂಬಗಳಲ್ಲಿ ಮಕ್ಕಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಕುಟುಂಬದ ಗಾತ್ರ ದೊಡ್ಡದಾಗಿದೆ ಎಂದು ತಿಳಿಸುತ್ತಾರೆ. ಶಿಕ್ಷಣವು ಅಭಿಪ್ರಾಯ ಮತ್ತು ಮನೋಭಾವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಗ್ರಾಮಪಂಚಾಯತಿಯ ಹೆಚ್ಚಿನ ಸದಸ್ಯರು ಕೂಲಿಕಾರರಾಗಿ ದುಡಿಯುವುದರಿಂದ ಕಡಿಮೆ ಆದಾಯದ ಗುಂಪಿಗೆ ಸೇರಿದವರಾಗಿರುತ್ತಾರೆ. ಗ್ರಾಮ ಮಟ್ಟದಲ್ಲಿ ರಾಜಕೀಯ ಪಕ್ಷಗಳಿಗೆ ಅಧಿಕೃತ ಮನ್ನಣೆ ನೀಡದಿದ್ದರೂ ಸದಸ್ಯರು ಪಕ್ಷ ಸಂಬಂಧವನ್ನು ವಿವರಿಸುತ್ತಾರೆಂದು ತಿಳಿಸುತ್ತಾರೆ.