ಸ್ಥಳೀಯ ರಾಜಕಾರಣ

ವಿಕೇಂದ್ರೀಕರಣದ ಸಂದರ್ಭದಲ್ಲಿ ಸ್ಥಳೀಯ ಸ್ವಯಮಾಡಳಿತ ಜೊತೆಗಿನ ವಿವಿಧ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ರಾಜಕಾರಣವೆಂಬ ಪರಿಕಲ್ಪನೆಯು ಬಳಸಲ್ಪಡುತ್ತಿದೆ. ಇದರ ರಾಜಕೀಯ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಗುಣಲಕ್ಷಣಗಳು ಮತ್ತವುಗಳ ಮಿತಿ ಇಲ್ಲವೇ ನಿರ್ಧಾರಕಗಳಾವುವು ಎಂಬ ಅಂಶಗಳನ್ನು ಶೋಧಿಸುವ ಅಗತ್ಯದ ಕುರಿತು ಚಿಂತಕರು ಅಭಿಪ್ರಾಯಗಳನ್ನು ಮುಂದಿಡುತ್ತಾರೆ. ಅಂದರೆ ಇವನ್ನು ಸ್ಥಳೀಯತೆಗೆ ಪರ್ಯಾಯವಾಗಿ ಪ್ರಾದೇಶಿಕ ಮತ್ತು ಕೇಂದ್ರ ಘಟಕಕ್ಕೆ ಪೂರಕವಾದ ಅಥವಾ ವಿರುದ್ಧವಾದ ರಾಜಕಾರಣವೆಂದು ಪರಿಗಣಿಸಬೇಕೆ ಎಂಬುದರ ಕುರಿತಂತೆ ವಾದಗಳಿವೆ (ಮಾಥುರ್, ೧೯೮೧). ಈ ಸಂದರ್ಭದಲ್ಲಿ ಸ್ಥಳೀಯ ರಾಜಕಾರಣವೆಂದರೆ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿ ರಾಜ್ಯ ಇಲ್ಲವೇ ಕೇಂದ್ರ ಘಟಕಗಳೊಳಗಿನ ರಾಜಕೀಯ ಪ್ರಕ್ರಿಯೆಯ ವಿಸ್ತಾರತೆ ಎಂದು ಪರಿಗಣಿಸಲಾಗಿದೆ. ಸ್ಥಳೀಯ ಮಟ್ಟದಲ್ಲಿನ ವಿವಿಧ ಸಾಮಾಜಿಕ ಗುಂಪುಗಳ ನೆಲೆಗಳು ಮತ್ತವುಗಳ ಸಾಮಾಜಿಕ ಆರ್ಥಿಕ ಏರುಪೇರುಗಳಿಗೆ ಸಂಬಂಧಿಸಿದ ಸಂಘರ್ಷಗಳ ಸ್ವರೂಪ ಹಾಗೂ ರೂಪುಗೊಳ್ಳುತ್ತಿರುವ ನಾಯಕತ್ವಕ್ಕೆ ಸಂಬಂಧಿಸಿದ ಅಂಶಗಳು ಮತ್ತು ಅಭಿವೃದ್ಧಿ ಕಾರ್ಯಗಳ ಸುತ್ತ ಸ್ಥಳೀಯ ರಾಜಕಾರಣವು ಗುರುತಿಸಲ್ಪಡುತ್ತದೆ.

ಇದೇನು ಹೊಸ ಪರಿಕಲ್ಪನೆಯೇನಲ್ಲ. ಚಾರಿತ್ರಿಕವಾಗಿ ವಿಶ್ಲೇಷಿಸಿದರೆ ಜನಸಾಮಾನ್ಯರ ಕಷ್ಟಸುಖಗಳಿಗೆ ನೆರವಾಗುವ ಹತ್ತಿರದ ಆಡಳಿತ ಘಟಕವಾದ ಜಿಲ್ಲೆಗಳಲ್ಲೂ ಸಹ ಬ್ರಿಟಿಷರು ಮತ್ತು ಭಾರತೀಯರ ಮಧ್ಯೆ ಇಂತಹ ತಾಕಲಾಟಗಳು ಸರ್ವೇಸಾಮಾನ್ಯವಾಗಿತ್ತು (ಫ್ರೈಕೆನ್‌ಬರ್ಗ್‌, ೧೯೬೮), ೧೮೮೨ರಲ್ಲಿ ಲಾರ್ಡ್‌ ರಿಪ್ಪನ್‌ನ ಗೊತ್ತುವಳಿಯಿಂದ ಮುಂದುವರಿದು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳು ೧೯೩೫ರ ಹೊತ್ತಿಗೆ ಸ್ಥಿರೀಕರಣ ಹೊಂದುವುದರೊಂದಿಗೆ ಜಿಲ್ಲಾ ಬೋರ್ಡುಗಳು ಮತ್ತು ಮುನಿಸಿಪಲ್ ಕೌನ್ಸಿಲ್‌ಗಳು ಸಂಘರ್ಷಾತ್ಮಕ ಮತ್ತು ಸ್ಪರ್ಧಾ ಮನೋಭಾವದ ಸಾಮಾಜಿಕ ಹಾಗೂ ರಾಜಕೀಯ ಗುಂಪುಗಳಿಗೆ ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ನಿರೂಪಿಸಲು ವೇದಿಕೆಗಳಾದವು (ಟಿಂಕರ್, ೧೯೫೪). ಈ ಅಂಶವನ್ನು ಕಾಂಗ್ರೆಸ್ಸ್‌ ಪಕ್ಷವು ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ನಾಯಕತ್ವವನ್ನು ಪಡೆಯಿತು. ಕಾಂಗ್ರೆಸ್ಸಿಗರ ಜನಾಂದೋಲನ ತಂತ್ರಕ್ಕೂ ಈ ಮೂಲಕ ಸಹಕಾರಿಯಾಯಿತು. ಹಾಗೆ ನೋಡಿದಲ್ಲಿ ಹೆಚ್ಚಿನ ಸ್ವಾತಂತ್ರ‍್ಯ ಹೋರಾಟಗಾರರು ಸಹ ಬಾಂಬೆ, ಡೆಲ್ಲಿ, ಅಹಮದಾಬಾದ್ ಮುಂತಾದ ನಗರಗಳ ಮುನಿಸಿಪಲ್ ಕೌನ್ಸಿಲ್‌ಗಳಲ್ಲಿ ತಮ್ಮ ರಾಜಕೀಯ ಪ್ರವೇಶವನ್ನು ಆರಂಭಿಸುವುದರೊಂದಿಗೆ ರಾಜಕೀಯ ಶಿಕ್ಷಣವನ್ನು ಪಡೆದರು (ಬೆಯಿಲಿ, ೧೯೭೫).

ಈ ರೀತಿಯ ಸಂಸ್ಥೆಗಳು ಮತ್ತವುಗಳ ಪ್ರಕ್ರಿಯೆಗಳು ಭಾರತದ ರಾಜಕಾರಣದಲ್ಲಿ ಮಹತ್ವದ ಪ್ರಭಾವವನ್ನು ಬೀರಿವೆ. ಈ ಹಿನ್ನೆಲೆಯಲ್ಲಿ ಭಾರತದ ರಾಜಕಾರಣಕ್ಕೆ ಸಂಬಂಧಿಸಿದ ಗುರುತರವಾದ ರೂಪ ಮತ್ತು ಶೈಲಿಯ ನೆಲೆಗಳನ್ನು ಸ್ಥಳೀಯ ಸಂಸ್ಥೆಗಳ ಆವಿಷ್ಕಾರಗಳಲ್ಲಿ ಕಾಣಬಹುದಾಗಿದೆ (ಗಾಲ್ಡ್‌, ೧೯೭೪).

೧೯೫೦ರ ಬಳಿಕ ಸ್ಥಳೀಯ ಸಂಸ್ಥೆಗಳು ಮತ್ತು ಅಭಿವೃದ್ಧಿ ಪ್ರಕ್ರಿಯೆಗಳ ಅಂತರ್ ಕ್ರಿಯೆಯ ಮೂಲಕ ಜನತಾಂತ್ರಿಕ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡುವುದರೊಂದಿಗೆ ಸ್ಥಳೀಯ ಪ್ರಾದೇಶಿಕ ರಾಜಕೀಯ ಜಾಲೀಕರಣವು ಹೊಸ ರೂಪವನ್ನು ಪಡೆಯಿತು. ಈ ಪ್ರಕ್ರಿಯೆಗೆ ಕಾರಣವಾದ ಹಲವಾರು ಸಂಗತಿಗಳ ಕುರಿತಂತೆ ಅನೇಕ ವಿದ್ವಾಂಸರು ತಮ್ಮ ಅಧ್ಯಯನ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ರಾಜ್ಯಗಳ ಚಟುವಟಿಕೆಗಳ ವ್ಯಾಪ್ತಿಯ ವಿಸ್ತಾರದಿಂದಾಗಿ ಗ್ರಾಮಗಳ ಕಾರ‍್ಯಘಟಕಗಳಲ್ಲೂ ‘ಏರಿಕೆಯ ಆವರಣ’ ನಿರ್ಮಾಣವಾದಂತಾಗಿದೆ ಎಂದು ಒರಿಸ್ಸಾದಲ್ಲಿ ನಡೆಸಿದ ಅಧ್ಯಯನಗಳ ಕುರಿತು ಬೆಯಿಲಿಯವರು ತಿಳಿಸುತ್ತಾರೆ (ಬೆಯಿಲಿ, ೧೯೬೯). ಪೋಷಕ ಪ್ರವೃತ್ತಿಯಾಧಾರಿತ ಸ್ಪರ್ಧೆಗಳಿಂದಾಗಿ ಬಣ ವಿಭಜನೆಯ ಒಂದು ಸಮಗ್ರತೆಯ ಅಂಶವಾಗಲು ಕಾರಣವಾಗಬಹುದೆಂಬುದನ್ನು ಉತ್ತರ ಪ್ರದೇಶದಲ್ಲಿ ನಡೆಸಿದ ಅಧ್ಯಯನ ಕುರಿತು ಬ್ರಾಸ್‌ರವರು ವಿವರಿಸುತ್ತಾರೆ (ಬ್ರಾಸ್, ೧೯೬೫). ಮೇರಿ ಕಾರ‍್ರಸ್ ಅವರು ಮಹಾರಾಷ್ಟ್ರದಲ್ಲಿ ರೂಪುಗೊಳ್ಳುತ್ತಿರುವ ಗ್ರಾಮೀಣ ಮತ್ತು ನಗರ ರಾಜಕಾರಣಿಗಳ ವರ್ಗಗಳ ಮಧ್ಯದ ಹಿತಾಸಕ್ತಿಗಳಿಂದಾಗಿ ಸಂಘರ್ಷಗಳುಂಟಾಗುತ್ತವೆ ಎಂದು ತಿಳಿಸುತ್ತಾರೆ (ಕಾರ‍್ರಸ್, ೧೯೭೨). ಪ್ರಬಲ ರಾಜಕೀಯ ವರ್ಗ ಮತ್ತು ಗ್ರಾಮೀಣ ಜನರ ಮಧ್ಯೆ ಬಲವಾದ ಸಮಾನಾಂತರ ಮಟ್ಟದ ಏರುಪೇರುಗಳುಂಟಾಗುತ್ತವೆ ಎಂದು ಅಂಥೋಣಿ ಕಾರ್ಟರ್‌ರವರು ತಮ್ಮ ಅಧ್ಯಯನದಲ್ಲಿ ವಿವರಿಸುತ್ತಾರೆ. ಸ್ಥಳೀಯ ರಾಜಕಾರಣಿಗಳು ಪಂಚಾಯತ್ ಸಂಪನ್ಮೂಲಗಳನ್ನು ತಮ್ಮ ವೈಯಕ್ತಿಕ ಈರ್ಷೆಗಳಿಗೆ ಬಳಸಿಕೊಳ್ಳುವ ಮೂಲಕ ಪಂಚಾಯತ್‌ಗಳನ್ನು ಅವಕಾಶದ ಘಟಕಗಳೆಂದು ನಿರೂಪಿಸುವಲ್ಲಿ ಸಫಲವಾಗಿವೆ ಎಂದು ರೋಸೆಂಥಾಲ್‌ರವರು ಮಹಾರಾಷ್ಟ್ರದಲ್ಲಿ ನಡೆಸಿದ ಅಧ್ಯಯನಗಳ ಹಿನ್ನೆಲೆಯಲ್ಲಿ ವಿವರಿಸುತ್ತಾ ಈ ಮೂಲಕ ಇದು ರಾಜ್ಯ ಮತ್ತು ಕೇಂದ್ರದ ರಾಜಕಾರಣಕ್ಕೆ ಹತ್ತಿರವಾಗಬಹುದೆಂಬ ಅಂಶವನ್ನು ತಿಳಿಸುತ್ತಾರೆ (ರೋಸೆಂಥಾಲ್, ೧೯೭೭).

೧೯೫೯ ರಲ್ಲಿ ಸಮುದಾಯ ಅಭಿವೃದ್ಧಿ ಯೋಜನೆಯ ಭಾಗವಾಗಿ ಪಂಚಾಯತ್‌ ಸಂಸ್ಥೆಗಳನ್ನು ಸಂಘಟಿಸುವ ಪ್ರಯತ್ನದಲ್ಲಿ ಅಭಿವೃದ್ಧಿಯ ಪಾರುಪತ್ಯಕ್ಕೆ ಸಂಬಂಧಿಸಿ ಇವುಗಳನ್ನು ರಾಜಕೀಯೇತರ ಅಂಗವೆಂದ ಪರಿಗಣಿಸಲಾಯಿತು. ಭಾರತೀಯ ಗ್ರಾಮಗಳ ಸ್ವಾವಲಂಬನೆ ಮತ್ತು ಪ್ರತ್ಯೇಕತೆಯ ರಮ್ಯಾತ್ಮಕ ದೃಷ್ಟಿಕೋನದೊಂದಿಗೆ ಪಂಚಾಯತ್ ಕುರಿತ ಈ ನಿಲುವಿಗೆ ಮನ್ನಣೆ ದೊರಕಿತು ಎಂದು ಹೇಳಲಾಗುತ್ತಿದೆ. ಗಾಂಧೀಜಿಯವರು ಸಹ ಈ ಪರಿಕಲ್ಪನೆಯನ್ನು ತಮ್ಮ ವಿಚಾರಧಾರೆಯಲ್ಲಿ ಅಳವಡಿಸಿಕೊಂಡರು. ಮೋರಿಸ್ ಜಾನ್ಸ್ ಹೇಳುವಂತೆ ಪಂಚಾಯತ್ ಸಂಸ್ಥೆಗಳ ಆರಂಭಿಕ ಹಂತದಲ್ಲಿ ಗಾಂಧಿ, ವಿನೋಬಾ ಬಾವೆ, ಜಯಪ್ರಕಾಸ್‌ ನಾರಾಯಣ ಮತ್ತು ಎಸ್‌.ಕೆ. ಡೇ ಅವರು ಭಾರತ ರಾಜಕಾರಣದ ಸಂತ ಪಂಥದ ಪ್ರತಿಪಾದಕರಾಗಿದ್ದರು ಮತ್ತು ಪಂಚಾಯತ್‌ಗಳು ರಾಜಕಾರಣದಿಂದ ಮುಕ್ತರಾಗಿರಬೇಕೆಂದು ಆಶಿಸಿದ್ದರು ಎಂದು ತಿಳಿಸುತ್ತಾರೆ. ಆರ್.ಆರ್. ದಿವಾಕರ ಸಮಿತಿ ವರದಿಯು ಪಂಚಾಯತ್‌ಗಳು ರಾಜಕೀಯ ಪಕ್ಷಗಳಿಂದ ದೂರವಿರಬೇಕೆಂದು ತಿಳಿಸಿರುವುದಲ್ಲದೆ ಗ್ರಾಮಸ್ಥರು ಮತ್ತು ರಾಜಕೀ ಪಕ್ಷಗಳು ಪ್ರತಿನಿಧಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಸೂಚಿಸಿದೆ. ಇದರರ್ಥ ಗ್ರಾಮ ಚುನಾವಣೆಗಳಲ್ಲಿ ಸಂಘರ್ಷವನ್ನು ತಪ್ಪಿಸಲು ರಾಜಕೀಯ ಅಂಶಗಳ ಬದಲಿಗೆ ಪಂಚಾಯತ್‌ಗಳ ಸಾಮಾಜಿಕ ಆಯಾಮಗಳ ಬಗೆಗೆ ಒತ್ತು ನೀಡುವುದಾಗಿದೆ. ಇಂತದೆ ನಿಲುವನ್ನು ಸಂತಾನಂ ಸಮಿತಿ ವರದಿ ಸೂಚಿಸಿ ಪಂಚಾಯತ್‌ಗಳ ಅಧಿಕಾರ ಮತ್ತದರ ಚಲಾವಣೆಗೆ ಸಂಬಂಧಿಸಿ ರಾಜಕೀಯ ಪಕ್ಷಗಳಿಂದಾಗಿ ಸಂಘರ್ಷಗಳು ಉಂಟಾಗುವ ಸಂಭವವಿದೆ ಎಂದು ತಿಳಿಸಿದೆ.

ಕರ್ನಾಟಕದಲ್ಲಿ ಪಂಚಾಯತ್ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಪ್ರವೇಶಕ್ಕೆ ಶಾಸನಾತ್ಮಕ ಕ್ರಮವನ್ನು ಮೊತ್ತಮೊದಲ ಬಾರಿಗೆ ೧೯೮೩ರ ಕರ್ನಾಟಕ ಪಂಚಾಯತ್‌ ರಾಜ್ ಅಧಿನಿಯಮದಲ್ಲಿ ಹಸಿರು ನಿಶಾನೆಯನ್ನು ನೀಡುವ ಮೂಲಕ, ಜಾರಿಗೆ ತರಲಾಯಿತು. ಜನತಾ ಪಕ್ಷ ಸರಕಾರದ ರೂವಾರಿಯಾದ ರಾಮಕೃಷ್ಣ ಹೆಗಡೆ ಹಾಗೂ ಪಂಚಾಯತ್ ಹರಿಕಾರರಾದ ಅಬ್ದುಲ್ ನಜೀರ್ ಸಾಬ್ ಅವರು ಇದಕ್ಕೊಂದು ಉತ್ತಮ ಬುನಾದಿಯನ್ನು ಹಾಕಿದರೆಂದು ಹೇಳಬಹುದು. ಇದೇ ಹೊತ್ತಿಗೆ ಅಂದರೆ ೧೯೮೭ ರಲ್ಲಿ ಪಂಚಾಯತ್ ವ್ಯವಸ್ಥೆಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಎರಡು ಮಹತ್ತರ ಘಟನೆಗಳಿಗೆ ಕಾಯಕಲ್ಪವನ್ನು ಈ ಮೂಲಕ ನತಾ ಸರಕಾರವು ಹಾಕಿಕೊಟ್ಟಿತು. ಸಂವಿಧಾನದ ೬೧ನೇ ತಿದ್ದುಪಡಿ ಕಾಯ್ದೆಯಾದ ಮತದಾನದ ವಯಸ್ಸನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಇಳಿಸುವ ಕ್ರಮವನ್ನು ಕರ್ನಾಟಕ ಸರ್ಕಾರವು ಈ ಚುನಾವಣೆಯಲ್ಲಿ ಕ್ರಾಂತಿಕಾರಕ ಸವಾಲಾಗಿ ಸ್ವೀಕರಿಸಿತು. ಎರಡನೆಯದಾಗಿ ೧೯೮೫ ರಲ್ಲಿ ಜಾರಿಗೆ ತಂದ ಸಂವಿಧಾನದಲ್ಲಿ ಅಡಕವಾದ ೧೦ನೇ ಅನುಚ್ಛೇದವನ್ನು ಸಮರ್ಪಕವಾಗಿ ಜಾರಿಗೆ ತರಲು ಪ್ರಯತ್ನಿಸಿತು. ಅಂದರೆ ಪಕ್ಷಾಂತರ ವಿರೋಧಿ ಕಾಯ್ದೆಯನ್ನು ಪಂಚಾಯತ್ ಚುನಾವಣೆಯಲ್ಲಿ ಚಾಚುತಪ್ಪದೆ ಅಳವಡಿಸಿಕೊಳ್ಳುವ ಮೂಲಕ ರಾಜಕೀಯ ಪಕ್ಷಗಳ ಪ್ರವೇಶಕ್ಕೆ ರ‍್ಯಾಶನಾಲಿಟಿಯನ್ನು ಒದಗಿಸಿತು ಎಂದು ಹೇಳಬಹುದು. ಅಂದಿನ ಮಟ್ಟಿಗೆ ಕರ್ನಾಟಕದ ಈ ಕ್ರಮಗಳು ಮೊತ್ತಮೊದಲ ಬಾರಿಗೆ ಜಾರಿಗೊಳ್ಳುವ ಮೂಲಕ ಮಹತ್ವದ ಸಾಧನೆಗಳೆ. ಈ ಮುಂಚೂಣಿ ಕ್ರಮಗಳಿಂದ ಜನತಾ ಪಕ್ಷವು ಉತ್ತಮ ಗಳಿಕೆಯನ್ನೆ ಪಡೆಯಿತು. ಇದಕ್ಕೆ ಆ ಚುನಾವಣೆಗಳ ಫಲಿತಾಂಶಗಳೇ ಕೈಗನ್ನಡಿಯಾದವು. ಇದು ೧೯೯೨ರ ವರೆಗೆ ಅಬಾಧಿತವಾಗಿ ನಡೆಯಿತು. ಆದರೆ ೧೯೯೨ರ ಕೊನೆಗೆ ಪ್ರತಿನಿಧಿ ಸಂಸ್ಥೆಗಳ ಬದಲು ಅವಿಷ್ಕಾರಗೊಂಡ ಆಡಳಿತ ಸಂಸ್ಥೆಗಳು ಮತ್ತು ೧೯೯೩ರ ಪಂಚಾಯತ್‌ರಾಜ್ ಅಧಿನಿಯಮವು ರಾಜಕೀಯ ಪಕ್ಷಗಳ ಪ್ರವೇಶದ ಕುರಿತು ಗೊಂದಲದ ವಾತಾವರಣವನ್ನು ನಿರ್ಮಿಸಿತು. ಒಂದೆಡೆ ಆಡಳಿತಾಧಿಕಾರಿಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳ ನೇರ ಪ್ರವೇಶವಿಲ್ಲದಿದ್ದರೂ ಅತಿಯಾದ ರಾಜಕಾರಣ ನಡೆಯಿತೆಂಬ ವಾದಗಳು ಹುಟ್ಟಿಕೊಂಡವು. ಈ ನಿಟ್ಟಿನಲ್ಲಿ ಹೊಸ ಕಾಯ್ದೆಯು ರಾಜಕೀಯ ಪಕ್ಷಗಳ ಪಾತ್ರದ ಕುರಿತು ಯಾವುದೇ ಉಲ್ಲೇಖವನ್ನು ಸ್ಪಷ್ಟವಾಗಿ ನೀಡದಿದ್ದರೂ ಚುನಾವಣೆಗಳು ಫ್ರೆಪ್ಲೆ ಆಫ್ ಪಾಲಿಟಿಕ್ಸ್‌ಗೆ ಪೂರಕವಾಗಿ ನಡೆಯುತ್ತಿವೆ ಎಂಬುದು ಗಮನಾರ್ಹವಾಗಿದೆ.

ಇತ್ತೀಚೆಗೆ ಅವಿರೋಧ ಆಯ್ಕೆ ಪ್ರಕ್ರಿಯೆಗಳು ಪಂಚಾಯತ್‌ ಚುನಾವಣಾ ಸಂದರ್ಭದ ಬಿಸಿ ಸುದ್ದಿಗಳಾಗಿವೆ. ಇದು ಗ್ರಾಮಸ್ಥರ ಪ್ರಕಾರ ಸರ್ವಾನುಮತದ ಕ್ರಮವೆಂದೆನಿಸಿದರೂ ಚುನಾವಣೆಯಲ್ಲಿ ಸ್ಪರ್ಧಾಕಾಂಕ್ಷಿಗಳನ್ನು ಸ್ಪರ್ಧಿಸದಂತೆ ತಡೆಯುವ ಹುನ್ನಾರವಾಗಿದೆ. ಇದರ ಹೆಸರಿನಲ್ಲಿ ಪಂಚಾಯತ್‌ಗೆ ಹಣಕಾಸು ಒದಗಿಸುವ ಕ್ರಮವಾಗಿದೆ? ಆಂಧ್ರಪ್ರದೇಶ, ಪಂಜಾಬ್ ಮತ್ತು ಇತ್ತೀಚೆಗಿನ ಕರ್ನಾಟಕದ ಅನುಭವಗಳು ಇದನ್ನು ಶ್ರುತಿಪಡಿಸುತ್ತವೆ. ಇಂತಹ ಸರ್ವಾನುಮತ ಪ್ರೇರಿತ ಅವಿರೋಧ ಪ್ರಕ್ರಿಯೆಯು ನಮ್ಮ ಏಣಿಶ್ರೇಣಿ ಸಮಾಜದ ಸಂದರ್ಭದಲ್ಲಿ ಕೃತಕ ಹಾಗೂ ಹೇರಲ್ಪಡುವ ತಂತ್ರವಾಗಿ ಪರಿಣಮಿಸುವುದರಿಂದ ಇವು ಸ್ಪರ್ಧಾತ್ಮಕ ಚುನಾವಣೆಗಿಂತ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿಯೂ ದುಬಾರಿಯಾದ ಕ್ರಮವೇ ಆಗಿದೆ. ಇದು ಅರ್ಹ ಉತ್ಸಾಹಿ ಮತದಾರರ ರಾಜಕೀಯ ಹಕ್ಕಾದ ಮತ ಚಲಾವಣೆಯನ್ನು ಮೊಟಕುಗೊಳಿಸಿ ಹಳ್ಳಿ/ಗ್ರಾಮ ಅಥವಾ ದೇವಸ್ಥಾನದ ಹೆಸರಿನಲ್ಲಿ ಹಳ್ಳಿಯ ಯಜಮಾನರ ಮತ್ತು ಮೇಲ್ಜಾತಿ ಪ್ರಭಾವಿಗರ ಸರ್ವಾನುಮತವಾಗುವ ಕ್ರಮವನ್ನು ಪ್ರಜಾಪ್ರಭುತ್ವ ಮತ್ತು ವಿಕೇಂದ್ರೀಕರಣದ ಹೆಸರಿನಲ್ಲಿ ಪ್ರಶ್ನಿಸಬೇಕಿದೆ. ಆ ಮೂಲಕ ಸಾಂಪ್ರದಾಯಿಕ ಜಾಢ್ಯವಾದ ಯಜಮಾನಿಕೆಯ ನಾಯಕತ್ವದ ಏಕಸ್ವಾಮ್ಯವನ್ನು ಮುರಿದು ಜನಾದೇಶದ ನೆಲೆಗಟ್ಟಿನಲ್ಲಿ ನಾಯಕತ್ವವನ್ನು ರೂಪಿಸಬೇಕಾದ ಅನಿವಾರ್ಯತೆಯಿದೆ. ಈ ಕುರಿತಂತೆ ಗಂಭೀರವಾದ ಅಧ್ಯಯನಗಳು ನಡೆಯಬೇಕಿದೆ. ಇದರ ಸಾಮಾಜಿಕ ನೆಲೆಗಳನ್ನು ಶೋಧಿಸುವ ತುರ್ತಿನ ಕೆಲಸಗಳು ನಡೆಯಬೇಕು.

ಅವಿರೋಧ ಆಯ್ಕೆ ಪ್ರಕ್ರಿಯೆಯ ವಾಸ್ತವವೇನು? ಇದು ಯಾರ ಉಪಯೋಗಕ್ಕಾಗಿ ಹಳ್ಳಿಯ ಸರ್ವಾನುಮತದ ಕ್ರಮವಾಗಿದೆ? ಇದರ ಪ್ರಧಾನ ರೂವಾರಿಗಳು ಅಥವಾ ಚಾಲಕ ಶಕ್ತಿಗಳು ಯಾರು? ಇದರ ಸಾಂದರ್ಭಿಕತೆಯೇನು? ಇವುಗಳ ಅರ್ಥಪೂರ್ಣವಾದ ವಿಶ್ಲೇಷಣೆಯು ಬ್ಯಾಲೆಟ್‌ನ ರೂಪಾಂತರ ಅಥವಾ ಮೂಲೆಗುಂಪಾಗಿಸುವ ಪ್ರಕ್ರಿಯೆಯ ಒಳಮರ್ಮವನ್ನು ತೆರೆದಿಡುವ ಪುಟಗಳಾಗುವ ಸಾಧ್ಯತೆಗಳಾಗಿವೆ. ಅವಿರೋಧ ಹುನ್ನಾರದ ತಾರ್ಕಿಕತೆಯೇನು? ಯಾವ ಅಭ್ಯರ್ಥಿಯ ವಿರೋಧವಾಗಿ ಇದು ರೂಪುಗೊಂಡಿದೆ? ಒಂದು ವೇಳೆ ಚುನಾವಣೆ ನಡೆದರೆ ಒಟ್ಟು ನಾಯಕತ್ವದ ಫಲಿತವೇನಾಗಬಹುದು? ಇದರಲ್ಲಿ ಊರಿನ ಯಜಮಾನರು, ಜಾತಿಗಳ ಹಿರಿಯರು, ಮೇಲ್ಜಾತಿ ಪ್ರಭಾವಿಗರು ಇವರ ಶಾಮೀಲಾಗುವಿಕೆ ಎಷ್ಟರಮಟ್ಟಿಗಿದೆ? ಇವರನ್ನು ಮೀರಿ ಒಬ್ಬ ಅಭ್ಯರ್ಥಿ ಇಲ್ಲವೇ ಅಭ್ಯರ್ಥಿಗಳು ಪ್ರಜಾಸತ್ತಾತ್ಮಕವಾಗಿ ಸ್ಪರ್ಧಿಸಿದರೆ ಮತಗಳು ದೊರೆಯಬಹುದೆ? ಇದಕ್ಕಾಗಿ ಅಭ್ಯರ್ಥಿಗಳ ಹಕ್ಕನ್ನು ಕಡೆಗಣಿಸಿ ಯಜಮಾನಿಕೆಯ ಪ್ರಭಾವವನ್ನು ಹಣದ ಮಾನದಂಡದಲ್ಲಿ ಅಳೆಯುವ ಮೂಲಕ ಈ ಮೊತ್ತವನ್ನು ಚುನಾವಣೆ ರೂಪದಲ್ಲಿ ಪೋಲು ಮಾಡುವ ಬದಲು ಹೆಚ್ಚಿನ ಮೊತ್ತವನ್ನು ಗ್ರಾಮಪಂಚಾಯತಿ ಅಥವಾ ದೇವಸ್ಥಾನಕ್ಕೆ ಯಾರು ನೀಡುವರೊ ಅವರುಗಳು ನಿಜವಾದ ಜನ ಪ್ರತಿನಿಧಿಗಳು ಎಂದು ಟಾಂ ಟಾಂ ಹೊರಡಿಸುವ ಅವಿರೋಧ ಪ್ರಕ್ರಿಯೆಯು ಎಷ್ಟರಮಟ್ಟಿಗೆ ಜನಾದೇಶವಾಗಿದೆ? ಚುನಾವಣೆಯ ನಂತರ ಗ್ರಾಮಪಂಚಾಯತಿಗಳ ಕಾರ್ಯಕ್ಷಮತೆಯಲ್ಲಿ ಅವಿರೋಧ ಪ್ರಕ್ರಿಯೆಯು ಒಟ್ಟು ಸೇರಿಸಿದ ಹಣದ ಪರಿಸ್ಥಿತಿಯೇನು? ಇದರ ಬಳಕೆ ಮತ್ತು ಉಸ್ತುವಾರಿ ಕುರಿತ ಉತ್ತರದಾಯಿತ್ವವು ಯಾವುದೇ ಅವಿರೋಧವಾಗಿ ಆಯ್ಕೆಗೊಂಡ ಪಂಚಾಯತ್‌ನಲ್ಲಿ ಮತ್ತೆಂದೂ ಚರ್ಚೆಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಅವಿರೋಧವಾಗಿ ಆಯ್ಕೆಗೊಂಡ ಪಂಚಾಯತ್‌ಗಳಿಗೆ ಸರಕಾರವು ಅನುದಾನ ನೀಡುವ ಸಂದರ್ಭದಲ್ಲಿ ಇವನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ.

* * *

ಯಾವುದೇ ಸಂಸ್ಥೆ, ವ್ಯಕ್ತಿ ಅಥವಾ ಸಂಘಟನೆಗಳು ಕೆಲವು ನಿರ್ದಿಷ್ಟವಾದ ಧ್ಯೇಯೋದ್ದೇಶಗಳನ್ನು ಹೊಂದಿರುತ್ತವೆ. ಇವನ್ನು ಈಡೇರಿಸಲು ಗುರುತರವಾದ ಜವಾಬ್ದಾರಿ ಹಾಗೂ ಅಧಿಕಾರಿಗಳು ಇರುತ್ತವೆ. ಅಧಿಕಾರ ಚಲಾವಣೆಯ ಮೂಲಕ ನಿರೀಕ್ಷಿತ ಕಾರ್ಯಗಳು ಪಲಫ್ರದವಾಗುವುದೆಂಬ ಸರಳ ವ್ಯಾಖ್ಯೆಯೊಂದಿಗೆ ಅಧಿಕಾರ ಪರಿಕಲ್ಪನೆಯ ಸಂಕಥನವು ರಾಜಕೀಯ ವಿಜ್ಞಾನಿಗಳ ಮತ್ತು ಸಮಾಜಶಾಸ್ತ್ರಜ್ಞರ ಆಸಕ್ತ ವಿಷಯವಾಗಿ ಗಂಭೀರವಾದ ಚಿಂತನೆಗೆ ಎಡೆಮಾಡಿದೆ. ಅಧಿಕಾರದ ವಿವಿಧ ಮಜಲುಗಳ ವಿಭಿನ್ನ ಮುಖಗಳು ಅದರ ಹೊಂದುವಿಕೆ ಅಥವಾ ಚಲಾವಣೆಗೆ ಸಂಬಂಧಿಸಿದಂತೆ ತಾತ್ವಿಕ ಚರ್ಚೆಗಳನ್ನು ಮುಂದಿಟ್ಟಿದೆ. ಈ ನಿಟ್ಟಿನಲ್ಲಿ ಹೊಂದುವ ಅಧಿಕಾರವು ಹೆಚ್ಚು ಕೇಂದ್ರೀಕೃತವಾಗುವುದರ ಕುರಿತಂತೆ ಮಾತುಗಳು ಕೇಳಿ ಬರತೊಡಗಿದವು. ಇದಕ್ಕೆ ಪರ್ಯಾಯವಾಗಿ ಅಧಿಕಾರವು ಹೆಚ್ಚು ಪ್ರಸರಣಗೊಳ್ಳಬೇಕಾದ ಅಥವಾ ಅದರ ವಿಭಜನೆಗೆ ಒತ್ತು ನೀಡಬೇಕಾದ ಅನಿವಾರ್ಯತೆಯನ್ನು ವಿದ್ವಾಂಸರು ಮುಂದಿಟ್ಟಿದ್ದಾರೆ. ಇದಕ್ಕೆ ಪೂರಕವೆಂಬಂತೆ ಆಸ್ಟಿನ್‌ನ ಮಾನಿಸ್ಟಿಕ್ ಚಿಂತನೆಗೆ ಪರ್ಯಾಯವಾಗಿ ಬಹುತ್ವವಾದಿ ಚಿಂತನೆ ಬೇರೂರಿತು. ಆಸ್ಟಿನ್‌ನ ಏಕಮೇವ ಸಾರ್ವಭೌಮತೆಯು ಪರಿಕಲ್ಪನಾತ್ಮಕವಾಗಿ ಅಖಂಡವಾದಿ, ಅವರ್ಗೀಯ (ವಗಾವಣೆಯಾಗದ) ಮತ್ತು ಪರಾಧೀನವಲ್ಲವಾದರೂ ಅದರ ವಿಭಜನೆಗೆ ಒತ್ತಡಗಳು ಬಂದವು ಮತ್ತು ಈ ನಿಟ್ಟಿನಲ್ಲಿ ಟೀಕೆಗಳನ್ನು ಬಹುತ್ವವಾದಿಗಳು ಮುಂದಿಟ್ಟರು. ಹೀಗೆ ಬಹುತ್ವವಾದಿ ಚಿಂತನಾ ಪರಂಪರೆಯು ಅಧಿಕಾರ ವಿಭಜನೆ ಹಾಗೂ ಪ್ರಸರಣ ಕ್ರಮಗಳಿಗೆ ಪೂರಕವಾದ ಸೈದ್ಧಾಂತಿಕ ಮತ್ತು ಎಂಫಿರಿಕಲ್ ಮಾದರಿಗಳನ್ನು ಒದಗಿಸಿತು.

ಸರಕಾರ ಮತ್ತು ಸಾಂಸ್ಥಿಕ ಚೌಕಟ್ಟಿನ ಸಂದರ್ಭದಲ್ಲಿ ಸಂವಿಧಾನ, ಸಂವಿಧಾನವಾದದ ಸಿದ್ಧಾಂತ ಮತ್ತು ಪ್ರಯೋಗವು ಆಧುನಿಕ ಜಗತ್ತಿನ ಮಹತ್ವದ ಸಾಧನೆಯಾಗಿದೆ (ಫ್ರೆಡರಿಕ್, ೧೯೬೬). ಇದು ವಿಭಿನ್ನ ಕೇಂದ್ರ ಘಟಕಗಳಲ್ಲಿ ಅಧಿಕಾರ ವಿಭಜನೆಯ ಕಾರ‍್ಯಕ್ರಮವನ್ನು ಸುಸೂತ್ರಗೊಳಿಸಿದೆ. ಸರಕಾರದ ಅಂಗಸಂಸ್ಥೆಗಳಲ್ಲಿ ಅಧಿಕಾರ ವಿಭಜನೆ, ಅದರ ಕಾರ್ಯ ವ್ಯಾಪ್ತಿ, ಹಸ್ತಕ್ಷೇಪ ಮತ್ತು ಮಿತಿಗಳ ಕುರಿತಂತೆ ಮಾಂಟೆಸ್ಕ್ಯೂ ಪ್ರತಿಪಾದಿಸಿದ ಅಧಿಕಾರ ವಿಭಜನಾ ಸಿದ್ಧಾಂತವು ಮಹತ್ವದೆನಿಸಿದೆ. ಇದಕ್ಕೆ ಅಮೆರಿಕ ಸರಕಾರದ ಅಂಗ ಸಂಸ್ಥೆಗಳು ಉತ್ತಮ ಉದಾಹರಣೆಯಾಗಿದೆ. ಅಧಿಕಾರ ವಿಭಜನೆಗೆ ಒತ್ತು ಕೊಡುವುದರ ಮೂಲಕ ಪ್ರಜಾತಂತ್ರವು ಹೆಚ್ಚು ವ್ಯಾಪಕತೆಯನ್ನು ಹೊಂದಿತು.

ಪ್ರಜಾಪ್ರಭುತ್ವ ಮತ್ತು ಪ್ರಜಾತಾಂತ್ರಿಕ ಮಾದರಿಯು ವಿಕೇಂದ್ರೀಕರಣಕ್ಕೆ ಮಹತ್ವ ನೀಡಿದರೂ ಎಲ್ಲಾ ರೀತಿಯ ವಿಕೇಂದ್ರೀಕರಣವನ್ನು ಪ್ರಜಾತಂತ್ರವೆಂದು ಪರಿಗಣಿಸಲು ಸಾಧ್ಯವಾಗದು. ಪ್ರಜಾತಂತ್ರವಿಲ್ಲದ ರಾಷ್ಟ್ರಗಳಲ್ಲೂ ಉತ್ತಮ ರೀತಿಯ ವಿಕೇಂದ್ರಿತ ಯೋಜನೆಗಳು ಇವೆ. ಈ ಹಿನ್ನೆಲೆಯಲ್ಲಿ ವಿಕೇಂದ್ರೀಕರಣದ ವಿವಿಧ ರೂಪಗಳ ಕುರಿತ ಸ್ಪಷ್ಟತೆಗೆ ಹೆಚ್ಚು ಗಮನ ನೀಡಲಾಗಿದೆ. ಅಂದರೆ ಯಾವ ಮಾದರಿಯ ವಿಕೇಂದ್ರೀಕರಣ, ಅದು ರಾಜಕೀಯ, ಆಡಳಿತ ಅಥವಾ ಹಣಕಾಸಿಗೆ ಸಂಬಂಧಿಸಿದುದೆ ಎಂಬುದರ ಕುರಿತಂತೆ ನಿರ್ವಚಿಸಲು ವಿದ್ವಾಂಸರು ತೊಡಗಿಸಿಕೊಂಡರು. ಇದರರ್ಥ ಈ ಮೂರು ರೂಪಗಳು ಎಂದಿಗೂ ಜೊತೆಯಾಗಿ ಕಾರ‍್ಯನಿರ್ವಹಿಸಬೇಕೆಂಬ ಪೂರ್ವಷರತ್ತುಗಳೇನಿಲ್ಲ. ಒಂದು ಇನ್ನುಳಿದವುಗಳನ್ನು ಹೊರತುಪಡಿಸಿ ಕಾರ‍್ಯರೂಪಕ್ಕೆ ಬರಬಹುದು ಮತ್ತು ಹಾಗೆ ಕಾರ‍್ಯನಿರ್ವಹಿಸುವಾಗ ಸಮಸ್ಯೆಗಳು ಎದುರಾಗುವುದು ಸರ್ವೇಸಾಮಾನ್ಯವಾಗಿದೆ.

ವಿಕೇಂದ್ರೀಕರಣವಾದವು ಉದಾರವಾದಿ ರಾಜಕೀಯ ಚಿಂತನೆಯ ಭಾಗವಾಗಿ ರೂಪುಗೊಂಡಿದೆನ್ನಬಹುದು (ಸ್ಮಿತ್‌, ೧೯೮೫). ಈ ನಿಟ್ಟಿನಲ್ಲಿ ಇದು ಬಹುತ್ವವಾದಿ ಚಿಂತನೆಯ ಮುಂದುವರಿಕೆಯಾಗಿದೆ. ಚುನಾಯಿತ ಪ್ರತಿನಿಧಿ ಮಾದರಿಯ ಉಪಕರಣವಾದಿ ಪ್ರಜಾತಂತ್ರ ವಿಕೇಂದ್ರೀಕರಣವು ಹೆಚ್ಚು ಉತ್ತರದಾಯಿಯಾಗಿ ಪಾರದರ್ಶಕವಾಗಿರುವುದು ಎಂದು ಭಾವಿಸಲಾಗಿದೆ.

ವಿಕೇಂದ್ರೀಕರಣವನ್ನು ಒಂದು ದೇಶದ ವಿಸ್ತಾರ ಮತ್ತು ಅದರ ಸಾಮಾಜಿಕ ಆರ್ಥಿಕ ಸಂಕೀರ್ಣತೆಯ ಸನ್ನಿವೇಶದೊಂದಿಗೂ ಗುರುತಿಸಲು ಸಾಧ್ಯವಿದೆ. ಅಂದರೆ ವಿಸ್ತಾರವಾದ ಭೂಪ್ರದೇಶವುಳ್ಳ ದೇಶಗಳನ್ನು ಒಂದು ಕೇಂದ್ರಿತ ಸರಕಾರ ವ್ಯವಸ್ಥೆಯಿಂದ ನಿರ್ವಹಿಸಲು ಕಷ್ಟವಾಗಬಹುದು. ಹೀಗಾಗಿ ಇಂಥ ದೇಶಗಳು ಒಕ್ಕೂಟ ಮಾದರಿಯ ಸರಕಾರವನ್ನು ಅಳವಡಿಸಿಕೊಂಡಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಇವುಗಳೊಂದಿಗೆ ಭಾಷೆ, ಧರ್ಮ, ಆರ್ಥಿಕಾಭಿವೃದ್ಧಿ ಮತ್ತು ಸಾಂಸ್ಕೃತಿಕ ಪರಿಧಿಗಳು ಸಹ ವಿಕೇಂದ್ರೀಕರಣಕ್ಕೆ ಒತ್ತು ನೀಡಿವೆ. ಸಾಂಸ್ಕೃತಿಕ ಆಯಾಮಗಳು ವಿಶಿಷ್ಟ ಆಂತರಿಕ ಏಕಾತನತೆ ಮತ್ತು ಉಪ ಅಥವಾ ಬಹುರಾಷ್ಟ್ರೀಯ ಚಹರೆಗಳಿಗೆ ಆಸ್ಪದ ನೀಡಬಹುದು. ಸಾಮಾಜಿಕ ಸಂಗತಿಗಳು ಇವನ್ನು ಮತ್ತಷ್ಟು ಸಂಕೀರ್ಣಗೊಳಿಸಬಹುದು. ಜೊತೆಗೆ ಪ್ರದೇಶವಾರು, ಅಭಿವೃದ್ಧಿ ನೆಲೆಯಲ್ಲಿ ಹಾಗೂ ಗ್ರಾಮ ಮತ್ತು ನಗರವಾರು ಆರ್ಥಿಕ  ಅಸಮಾನತೆಗಳು ಮತ್ತಷ್ಟು ಆತಂಕಕಾರಿ ಅಂಶಗಳಾಗಿವೆ. ಇವನ್ನು ಒಂದು ಹಂತಕ್ಕೆ ಸರಿದೂಗಿಸುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಅಥವಾ ನಿವಾರಣೆಗಾಗಿ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ನೈತಿಕ ಬಲಗಳು ಅತ್ಯಗತ್ಯ. ಇವೆಲ್ಲವು ಒಂದಕ್ಕೊಂದು ಪೂರಕವಾದಾಗ ಹೊಸ ಸಾಮಾಜಿಕ ಗುಂಪುಗಳು ರೂಪುಗೊಂಡು ಸುಸಂಬದ್ಧವಾಗಿ ನಿರ್ವಚಿಸಲ್ಪಡುವ ಅಸ್ಮಿತೆಗಳು ರೂಪುಗೊಳ್ಳುವುದು. ಇಂಥ ಪ್ರದೇಶವಾರು ಸಾಮಾಜಿಕ ಗುಂಪುಗಳಿಂದಲೂ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಸ್ವಾಯತ್ತತೆಗಾಗಿ ಬೇಡಿಕೆಗಳು ಬರುವುದು ಸಹಜ. ಇಂಥ ಸನ್ನಿವೇಶದಲ್ಲಿ ವಿಭಿನ್ನ ಅಸ್ಮಿತೆಗಳು ತಮ್ಮ ತನವನ್ನು ನಿರೂಪಿಸುವ ಹಂತದಲ್ಲಿ ತಳಮಟ್ಟದಿಂದ ಬೇಡಿಕೆಯನ್ನು ಮುಂದೊಡ್ಡಬಹುದು. ಹೀಗಾಗಿ ತಳಸ್ತರ ಮತ್ತು ಮೇಲಿನ ಹಂತದಲ್ಲೂ ವಿಕೇಂದ್ರೀಕರಣದೆಡೆಗೆ ಸಹಜ ಒತ್ತಡಗಳು ಬರಬಹುದಾಗಿದೆ.

ನಮ್ಮ ವಿಸ್ತಾರವಾದ ವ್ಯವಸ್ಥೆಯು ಯೋಜನೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದಲೂ ವಿಕೇಂದ್ರೀಕರಣಗೊಳ್ಳಬೇಕಿದೆ. ಇದನ್ನು ೧೯೮೩ರ ಆರ್ಥಿಕ ಸಲಹಾ ಪರಿಷತ್ ಕೂಡ ಒತ್ತಿ ಹೇಳಿದೆ. ಯೋಜನಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಅಭಿವೃದ್ದಿ ಯೋಜನೆಗಳು ಮತ್ತು ಆಡಳಿತ ಒಂದಕ್ಕೊಂದು ಪೂರಕವಾಗಿರಬೇಕು.

ಭಾರತದಲ್ಲಿ ವಿಕೇಂದ್ರೀಕರಣದ ಅಗತ್ಯಕ್ಕೆ ಸಂಬಂಧಿಸಿದ ತರ್ಕ ಮತ್ತು ಯೋಜನೆಗಳು ಆಯಾ ಕಾಲಘಟ್ಟದ ಸನ್ನಿವೇಶಗಳ ಅವಶ್ಯಕತೆ ಮತ್ತು ವಿಚಾರಧಾರೆಗಳಿಗೆ ಪೂರಕವಾಗಿ ಬೆಳೆದುಬಂದವು. ವಸಾಹತು ಆಡಳಿತವು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ಮಹತ್ವವನ್ನು ಪ್ರಾಪ್ತಿಸಿದಲ್ಲದೆ ಜಿಲ್ಲಾಡಳಿತವನ್ನು ಪರಿಣಾಮಕಾರಿಯಾಗಿ ಸಾಂಸ್ಥೀಕರಿಸಿತು. ೧೮ನೇ ಶತಮಾನದ ಕೊನೆಯ ಭಾಗದಲ್ಲಿ ಜಿಲ್ಲಾಧಿಕಾರಿಯು ವಿಕೇಂದ್ರಿತ ಆಡಳಿತ ಘಟಕದ ಸಮರ್ಥ ನಾಯಕನಾದನು. ನಂತರದ ಕಾಲಘಟ್ಟದಲ್ಲಿ ಸ್ಥಳೀಯಾಡಳಿತೆಗೆ ಒಂದು ಪರಿಣಾಮಕಾರಿಯಾದ ರೂಪು ನೀಡುವ ಸಲುವಾಗಿ ೧೮೮೨ರ ಲಾರ್ಡ್‌ ರಿಪ್ಪನ್‌ನ ನಿಲುವಳಿಯು ಮಹತ್ವದ್ದಾಗಿ ಪರಿಣಮಿಸಿತು. ಈ ಹಿನ್ನೆಲೆಯಲ್ಲಿ ೧೯೦೯ರಲ್ಲಿ ವಿಕೇಂದ್ರೀಕರಣ ಕುರಿತು ರಾಯಲ್‌ಕಮಿಶನ್ ಕೂಡಾ ಮಹತ್ವದ ಕ್ರಮಗಳನ್ನು ಜಾರಿಗೆ ತಂದಿತು. ಇವೆಲ್ಲವೂ ಆಡಳಿತಾತ್ಮಕವಾಗಿ ಕೇಂದ್ರೀಕೃತ ವಸಾಹತು ಸರಕಾರದ ಅಗತ್ಯಗಳನ್ನು ಮನಗಂಡು ರೂಪಿಸಲಾಯಿತು.

ಒಕ್ಕೂಟ ಅನೂಚಾನತೆ

೧೮೦೧ರ ಸಮಯದಲ್ಲೆ ಬ್ರಿಟಿಷರು ಭಾರತದ ಸಂಕೀರ್ಣತೆಯನ್ನು ಮನಗಂಡು ಒಕ್ಕೂಟ ವ್ಯವಸ್ಥೆ ಅಗತ್ಯವೆಂದು ಭಾವಿಸಿದರು. ಇದಕ್ಕಾಗಿ ೧೯೦೯ ಮತ್ತು ೧೯೧೯ರ ಕಾಯ್ದೆಗಳಲ್ಲಿ ದ್ವಿಸರಕಾರ ವ್ಯವಸ್ಥೆಯನ್ನು ಜಾರಿಗೊಳಿಸುವತ್ತ ಹೆಜ್ಜೆ ಇಟ್ಟರು. ೧೯೩೫ರ ಕಾಯ್ದೆಯ ಹೊತ್ತಿಗೆ ಒಕ್ಕೂಟ ವ್ಯವಸ್ಥೆ ಮತ್ತು ಪ್ರತಿನಿಧಿ ಸರಕಾರಗಳು ಮೂರ್ತ ರೂಪ ಪಡೆಯುವಂತಾಯಿತು. ಭಾರತ ಸಂವಿಧಾನವು ಕೂಡಾ ಒಕ್ಕೂಟ ತತ್ವಗಳಿಗೆ ಮಹತ್ವದ ಸ್ಥಾನ ನೀಡಿತು. ಸಂವಿಧಾನದಲ್ಲಿ ಅಡಕವಾದ ಬಲಿಷ್ಠ ಕೇಂದ್ರ ತತ್ವಾಧಾರಿತ ಒಕ್ಕೂಟ ವ್ಯವಸ್ಥೆಯು ಅನಂತರದಲ್ಲಿ ವಿಭಿನ್ನ ಆಯಾಮಗಳ ಹಿನ್ನೆಲೆಯಲ್ಲಿ ಒತ್ತಡಕ್ಕೊಳಗಾಯಿತು. ೧೯೬೭ರ ಜನತಾಂತ್ರಿಕ ಪ್ರಕ್ರಿಯೆಗಳ ಬಳಿಕ ಕೇಂದ್ರ ಮತ್ತು ಒಕ್ಕೂಟ ಘಟಕಗಳಾದ ರಾಜ್ಯಗಳ ಮಧ್ಯೆ ಹಲವಾರು ವಿವಾದಾಂಶಗಳು ತಲೆದೋರಿದವು. ಇದು ಕೆಲವು ಊಹಿಸಲಾರದಂಥ ಬದಲಾವಣೆಗೆ ಎಡೆಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳ ರಾಜಕೀಯ ಸಂರಚನೆಯಲ್ಲಿ ಸಮಾನಾಂತರವಾದ ಉಪ ರಾಜ್ಯ ರಚನೆಗಳಿಗೆ ಒಕ್ಕೂಟ ವ್ಯವಸ್ಥೆಯಡಿ ಜನಾಂದೋಲನಗಳು ಚುರುಕುಗೊಂಡವು. ಅಂದರೆ ಸ್ವಾಯತ್ತೆಯ ಕೂಗು ತೀವ್ರತೆಯನ್ನು ಪಡೆಯಿತು. ಈ ಹಿನ್ನೆಲೆಯಲ್ಲಿ ಹಲವಾರು ಸ್ವಾಯತ್ತಾ ಪರಿಷತ್ತುಗಳು ರೂಪುಗೊಂಡವು. ನಂತರದ ದಿನಗಳಲ್ಲಿ ಇವು ರಾಜ್ಯದ ಸ್ಥಾನಮಾನಕ್ಕೆ ಬೇಡಿಕೆ ಮುಂದಿಟ್ಟವು ಮತ್ತು ಈ ನಿಟ್ಟಿನಲ್ಲಿ ಜಾರ್ಖಂಡ್ ಯಶಸ್ವಿಯಾಯಿತು. ಹೀಗಾಗಿ ರಾಜ್ಯದ ಕೆಳಹಂತಗಳಲ್ಲಿ ವಿಕೇಂದ್ರಿತ ಘಟಕಗಳ ಅಗತ್ಯತೆಗೆ ಸರಕಾರಗಳ ಒತ್ತಡಗಳು ಉಂಟಾದವು.

ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳು

೧೭ನೇ ಶತಮಾನದ ಕೊನೆಯ ಭಾಗದಲ್ಲಿ ಭಾರತದ ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಬೆಳಕಿಗೆ ಬಂದರೆ ಗ್ರಾಮೀಣ ಭಾಗದಲ್ಲಿ ಎರಡು ಶತಮಾನಗಳಷ್ಟು ತಡವಾಗಿ ಅಸ್ತಿತ್ವಕ್ಕೆ ಬಂದವು. ೧೬೮೭ ರಲ್ಲಿ ಮೊದಲ ಬಾರಿಗೆ ಮದ್ರಾಸ್‌ನಲ್ಲಿ ಮುನಿಸಿಪಲ್‌ ಕಾರ್ಪೋರೇಶನ್ ಆರಂಭಗೊಂಡರೆ ಬಾಂಬೇ ಮತ್ತು ಕಲ್ಕತ್ತದಲ್ಲಿ ೧೭೨೦ ರಲ್ಲಿ ಉಂಟಾದವು. ೧೮೪೨ ಮತ್ತು ೧೮೫೦ರ ಕಾಯ್ದೆಯನ್ವಯ ಈ ಸಂಸ್ಥೆಗಳಿಗೆ ಮುನಿಸಿಪಲ್ ಸ್ಥಾನಮಾನವು ದೊರೆಯುವಂತಾಯಿತು. ೧೮೭೦ರ ಮೇಯೋ ನಿಲುವಳಿಯ ಸಮಯದಲ್ಲಿ ಬ್ರಿಟಿಷ್ ಇಂಡಿಯಾದಲ್ಲಿ ಸುಮಾರು ೨೦೦ ಮುನಿಸಿಪಾಲಿಟಿಗಳಿದ್ದವು. ಆ ಸಂದರ್ಭದ ವಿಕೇಂದ್ರೀಕರಣ ಆಯೋಗ ಮತ್ತು ೧೯೧೯ ಹಾಗೂ ೧೯೩೫ರ ಕಾಯ್ದೆಗಳು ನಗರ ಸ್ಥಳೀಯ ಸಂಸ್ಥೆಗಳನ್ನು ಕಾರ‍್ಯವಾಹಿ ಬಲಿಷ್ಠಗೊಳಿಸಿದುವು. ಸ್ವಾತಂತ್ರ‍್ಯ ನಂತರವೂ ಪಂಚವಾರ್ಷಿಕ ಯೋಜನೆಗಳು ನಗರ ನಿರ್ವಹಣೆಯ ದುಸ್ಥಿತಿಗಳ ಕಡೆಗೆ ಬೊಟ್ಟು ಮಾಡಿದರೂ ನಗರ ಸಂಸ್ಥೆಗಳನ್ನು ಯೋಜನಾ ಪ್ರಕ್ರಿಯೆಗೆ ಒಳಪಡಿಸುವ ಪ್ರಯತ್ನ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ೧೯೬೬ರ ಗ್ರಾಮೀಣ-ನಗರ ಸಂಬಂಧ ಸಮಿತಿಯು ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸಮಗ್ರ ಯೋಜನಾ ಪ್ರಕ್ರಿಯೆಗೆ ಒಳಪಡಿಸುವ ಅಗತ್ಯವನ್ನು ಮನಗಂಡಿತು.

ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಬೋರ್ಡುಗಳು ಮತ್ತು ಗ್ರಾಮ ಪಂಚಾಯತಿಗಳು ರೂಪುಗೊಂಡವು. ಬ್ರಿಟಿಷ್ ಇಂಡಿಯಾದಲ್ಲಿ ಇವು ಕೆಲವು ಉಪಯುಕ್ತ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿತು. ಇದಕ್ಕೆ ಸಂಪನ್ಮೂಲಗಳನ್ನು ಸ್ಥಳೀಯ ಪ್ರಭಾವೀ ವ್ಯಕ್ತಿಗಳಿಂದ ಪಡೆದು ಅವರು ವಾಸಿಸುವ ಪ್ರದೇಶಗಳಿಗೆ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿತ್ತು. ಸಿಪಾಯಿದಂಗೆ ನಂತರದ ಅವಧಿಯಲ್ಲಿ ಉಂಟಾದ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವಿಧಾನಕ್ಕೆ ಮತ್ತಷ್ಟು ಒತ್ತು ನೀಡಲಾಯಿತು. ಪರಿಣಾಮವಾಗಿ ದೇಣಿಗೆದಾರರು ಸೌಲಭ್ಯಗಳ ನಿರ್ವಹಣೆಯಲ್ಲಿ ಸಹಭಾಗಿತ್ವದ ಬೇಡಿಕೆಯನ್ನು ಮುಂದಿಟ್ಟರು. ರಿಪ್ಪನ್ ಗೊತ್ತುವಳಿಯಿಂದಾಗಿ ತಾಲ್ಲೂಕು ಮಟ್ಟದಲ್ಲೂ ಇಂಥ ಸಂಸ್ಥೆಗಳು ಅಸ್ತಿತ್ವಕ್ಕೆ ಬರುವಂತಾದವು. ವಿಕೇಂದ್ರೀಕರಣದ ಸಲುವಾಗಿನ ರಾಯಲ್ ಕಮಿಶನ್ ಶಿಫಾರಸ್ಸು ಮತ್ತು ೧೯೧೫ ಮತ್ತು ೧೯೦೮ರ ಭಾರತ ಸರ್ಕಾರದ ಗೊತ್ತುವಳಿಗಳು ಪ್ರಾತಿನಿಧ್ಯ ಮತ್ತು ಕಾರ‍್ಯವಾಹಿ ನೆಲೆಯಲ್ಲಿ ಜಿಲ್ಲಾ ಬೋರ್ಡುಗಳನ್ನು ಬಲಿಷ್ಠಗೊಳಿಸಿದವು.

ಗ್ರಾಮ ಪಂಚಾಯತಿಗಳು ಗ್ರಾಮೀಣ ಭಾರತದಲ್ಲಿ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿತ್ತು. ಪಂಚಾಯತ್ ಸಂಪ್ರದಾಯದಂತೆ ಇದು ಗ್ರಾಮ ಗಣರಾಜ್ಯವಾಗಿತ್ತು ಎಂಬುದಕ್ಕೆ ಉಲ್ಲೇಖಗಳು ಸಿಗುತ್ತವೆ. ವಿವಾದಗಳ ಬಗೆಹರಿಸುವಿಕೆಯಲ್ಲಿ ಪಂಚಾಯತಿಗಳ ಪಾತ್ರವು ಮಹತ್ತರವಾಗಿದ್ದು ಜಾತಿ ಪಂಚಾಯತಿಗಳು ಬೆಳಕಿಗೆ ಬಂದುವು. ಇದರ ಸಮ್ಮತಿ ಸ್ವರೂಪವು ಪಂಚಾಯಿತ್‌ಗಳಿಗೆ ಒಂದು ಉತ್ತಮ ಹಿನ್ನೆಲೆಯನ್ನು ಒದಗಿಸಿದರೂ ಬರಗಾಲ ಆಯೋಗ ಮತ್ತು ರಿಪ್ಪನ್ ನಿಲುವಳಿಯ ಬಳಿಕವೇ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಯಾಗಿ ರೂಪುಗೊಳ್ಳುವತ್ತ ಹೆಜ್ಜೆ ಹಾಕಿತು. ನಂತರ ಬ್ರಿಟಿಷ್ ಇಂಡಿಯಾದ ಹಲವಾರು ಸಂಸ್ಥಾನಗಳಲ್ಲೂ ಇದು ಸೀಮಿತ ಕಾರ‍್ಯಗಳೊಂದಿಗೆ ಚಾಲನೆಗೆ ಬಂತು. ಸ್ವಾತಂತ್ರ್ಯಾಂದೋಲನದ ನಾಯಕರ ಬೆಂಬಲದೊಂದಿಗೆ ಗಾಂಧೀಜಿಯವರ ಪ್ರಮುಖ ವಿಚಾರಧಾರೆಯಾಗಿಯೂ ರೂಪುಗೊಂಡಿತು. ಸ್ವಾತಂತ್ರ‍ ಸಂದರ್ಭದಲ್ಲಿ ಜಿಲ್ಲಾ ಬೋರ್ಡು ಮತ್ತು ಗ್ರಾಮ ಪಂಚಾಯಿತಿಗಳು ಅಸ್ತಿತ್ವದಲ್ಲಿದ್ದವು. ಯೋಜನೆಯ ಅವಶ್ಯಕತೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾರ‍್ಯಕ್ರಮಗಳ ಹಿನ್ನೆಲೆಯಲ್ಲಿ ಗ್ರಾಮೀಣ ಸಂಸ್ಥೆಗಳ ಸಮಗ್ರ ಜಾಲೀಕರಣ ವ್ಯವಸ್ಥೆಯ ಅಗತ್ಯವನ್ನು ಮನಗಾಣಲಾಯಿತು.

ಸ್ವಾತಂತ್ರ್ಯಾನಂತರ ಗ್ರಾಮೀಣಾಭಿವೃದ್ಧಿ ಕಾರ‍್ಯಕ್ರಮಗಳನ್ನು ಜಾರಿಗೆ ತರಲು ಸಾಂಸ್ಥಿಕವಾಗಿ ಪಂಚಾಯತ್ ವ್ಯವಸ್ಥೆಯನ್ನು ಪುನರ್ ರೂಪಿಸಲಾಯಿತು. ಮೊದಲ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಸರಕಾರವು ೧೯೫೨ರಲ್ಲಿ ಸಮುದಾಯ ಅಭಿವೃದ್ಧಿ ಕಾರ‍್ಯಕ್ರಮಗಳನ್ನು ಜಾರಿಗೆ ತಂದಿತು. ಈ ಕಾರ‍್ಯಕ್ರಮವು ಹಿಂದಿನ ಗ್ರಾಮೀಣಾಭಿವೃದ್ಧಿ ಕಾರ‍್ಯಕ್ರಮಕ್ಕಿಂತ ಭಿನ್ನವಾಗಿತ್ತು. ಮೊದಲಿನ ಯೋಜನೆಗಳು ಕಾರ್ಯನಿರ್ವಹಣಾ ರೀತಿಯವುಗಳಾದರೆ ಸಮುದಾಯ ಕಾರ್ಯಕ್ರಮವು ವಿಸ್ತರಣಾ ವಿಧಾನವನ್ನು ಅನುಸರಿಸಿತು. ಹಾಗೆಯೇ ಹಿಂದಿನ ಕಾರ‍್ಯಕ್ರಮಗಳಲ್ಲಿ ಸರಕಾರಿ ಅಧಿಕಾರಿಗಳು ಕಾನೂನನ್ನು ಜಾರಿಗೊಳಿಸಲು ಕ್ರಮ ತೆಗೆದು ಕೊಂಡರೆ ಸಮುದಾಯ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಪಾತ್ರವು ಬದಲಾವಣೆಯ ನಿಯೋಗಿಗಳೆಂದು ಅಥವಾ ಪಾರುಪತ್ಯಗಾರಿಕೆಯ ಹೊಣೆಯನ್ನು ನೀಡಲಾಯಿತು. ವಿವಿಧ ಯೋಜನೆಗಳನ್ನು ಬ್ಲಾಕ್ ಮಟ್ಟದಲ್ಲಿ ಜಾರಿಗೊಳಿಸಲು ಸಮಗ್ರ ಆಡಳಿತ ದೃಷ್ಟಿಯಿಂದ ಲಂಬೀಕೃತ ಶ್ರೇಣಿ ರಚನೆಯ ಬದಲು ಸಮಾನಾಂತರ ಮಟ್ಟದ ಸಮನ್ವಯ ರಚನೆಗೆ ದಾರಿ ಮಾಡಿತು. ಆದರೆ ವಿವಿಧ ಇಲಾಖೆಗಳ ಸಮನ್ವಯತೆ ಮತ್ತು ಆಡಳಿತಶಾಹಿ ಧೋರಣೆಯಿಂದಾಗಿ ಕ್ರಮೇಣ ಇಂತಹ ಆಡಳಿತದ ಆವಿಷ್ಕಾರಕ್ಕೆ ನಿರೀಕ್ಷಿತ ಫಲ ದೊರಕಲು ವಿಫಲವಾಯಿತು. ಅಂದರೆ ಸಮುದಾಯ ಕಾರ್ಯಕ್ರಮಗಳಲ್ಲಿ ಜನರ ಭಾಗವಹಿಸುವಿಕೆಗೆ ಹೆಚ್ಚಿನ ಪಾತ್ರವಿಲ್ಲದಾಯಿತು. ಈ ಹಿನ್ನೆಲೆಯಲ್ಲಿ ಬಲವಂತರಾಯ್‌ಮಹ್ತಾ ಸಮಿತಿ ಇವನ್ನು ಗಮನಿಸಿ ೩ ಸ್ತರದ ಪಂಚಾಯತ್ ವ್ಯವಸ್ಥೆಗೆ ಶಿಫಾರಸ್ಸು ಮಾಡಿತು. ಇದರಂತೆ ರಾಜಸ್ಥಾನ ಮತ್ತು ಆಂಧ್ರಪ್ರದೇಶದಲ್ಲಿ ಈ ಸಂಸ್ಥೆಗಳು ಕಾರ‍್ಯರೂಪಕ್ಕೆ ಬಂದುವು. ಆದರೆ ಇವುಗಳ ಕಾರ‍್ಯಗಳಲ್ಲಿ ನಿರೀಕ್ಷಿತ ಫಲಗಳು ಕಾಣಲಿಲ್ಲ. ಹಾಗಾಗಿ ಕೇಂದ್ರ ಸರಕಾರವು ಅಶೋಕ್ ಮೆಹ್ತಾ ಸಮಿತಿಯನ್ನು ನೇಮಿಸಿತು. ಪ್ರಜಾತಂತ್ರ ವ್ಯವಸ್ಥೆಯ ವಿಸ್ತರಣೆಯಾಗಿ ಪಂಚಾಯತ್ ಸಂಸ್ಥೆಗಳು ಕಾರ್ಯವೆಸಗಬೇಕೆಂಬ ಸಲಹೆಯೊಂದಿಗೆ ಸಮಿತಿಯು ರಾಜ್ಯದ ಕೆಳಗಿನ ಹಂತಗಳಲ್ಲಿ ಜನತಾಂತ್ರಿಕ ಘಟಕಗಳ ಸ್ಥಾಪನೆಗೆ ಅನುವು ಮಾಡಿತು. ಮತ್ತವುಗಳಿಗೆ ಶಾಸನಾತ್ಮಕ ಮಾನ್ಯತೆ ನೀಡಲು ಹಾಗು ಸಾಕಷ್ಟು ಅಧಿಕಾರಗಳನ್ನು ವರ್ಗಾಯಿಸುವಂತೆಯೂ ಶಿಫಾರಸ್ಸು ಮಾಡಿತು.

೭೦ರ ದಶಕದ ಭಾರತದ ರಾಜಕಾರಣದಲ್ಲಿ ಕೆಲವು ಪಲ್ಲಟಗಳು ಉಂಟಾದವು. ಅಧಿಕಾರದ ಕೇಂದ್ರೀಕರಣವು ಒಂದೆಡೆ ಹೆಚ್ಚಾಗುತ್ತಿರುವಂತೆ ಕೇಂದ್ರದ ನಾಯಕತ್ವವು ಜನರನ್ನು ನೇರವಾಗಿ ತಲುಪಲು ಬೇಕಾದ ಮಾಧ್ಯಮವನ್ನು ಇನ್ನೊಂದೆಡೆ ಬಳಸುವ ತಂತ್ರದಲ್ಲಿ ತೊಡಗಿಸಿಕೊಂಡಿತು. ಇವನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಾಜ್ಯಗಳ ಸಂಸ್ಥೆ, ಪ್ರಕ್ರಿಯೆ ಮತ್ತು ನಾಯಕತ್ವವನ್ನು ಅಲ್ಲಗಳೆಯುವ ಹುನ್ನಾರವೆಂದು ಬೇರೆ ಹೇಳಬೇಕಾಗಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ಚುನಾಯಿತ ಸರಕಾರ ಎರಡು ಸಹ ಪ್ರಧಾನಮಂತ್ರಿಯ ಅಧೀನದಲ್ಲಿ ಹೆಚ್ಚು ಕೇಂದ್ರೀಕೃತಗೊಂಡಿತು. ೧೯೭೧ ರ ೫ನೇ ಮಹಾ ಚುನಾವಣೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಕೇಂದ್ರ (ಲೋಕಸಭಾ) ಮತ್ತು ರಾಜ್ಯ (ವಿಧಾನಸಭಾ)ಗಳಿಗೆ ಪ್ರತ್ಯೇಕವಾದ ಚುನಾವಣೆಗಳನ್ನು ನಡೆಸಲು ಅನುವು ಮಾಡಿರುವುದು ಕೂಡಾ ರಾಜಕಾರಣದ ಎರಡು ಪರಿಧಿಗಳನ್ನು ಬೇರೆ ಬೇರೆಯಾಗಿ ನಿರೂಪಿಸುವ ಮೂಲಕ ಕೇಂದ್ರದ ಪಾರಮ್ಯತೆಗೆ ಹೆಚ್ಚು ಒತ್ತು ನೀಡುವ ಕ್ರಮವೆನಿಸಿತು. ಕೇಂದ್ರ ಸರಕಾರವ ಕೆಲವು ವಿಶೆಷವಾದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜನರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಸಹ ಕಾರ್ಯೋನ್ಮುಖವಾಯಿತು. ಹಸಿರುಕ್ರಾಂತಿಯ ಆವಿಷ್ಕಾರ ಮತ್ತಿತರ ಪ್ರಕ್ರಿಯೆಗಳೊಂದಿಗೆ ವ್ಯವಸಾಯ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ವಿಶೇಷ ವರ್ಗವು ಈ ನಿಟ್ಟಿನಲ್ಲಿ ಅಧಿಕಾರದ ಹವಣಿಕೆ ಹಾಗೂ ಪಾಲುದಾರಿಕೆಯ ಮುಂಚೂಣಿಗೆ ಬಂದಿತು. ಪರಿಣಾಮವಾಗಿ ಪ್ರಜಾತಂತ್ರ ಸಂಸ್ಥೆಗಳಾದ ಪಂಚಾಯತ್‌ಗಳು ಅಧಿಕಾರ ಪಡೆಯಲು ಅವಕಾಶದ ಘಟಕಗಳಾದವು ಎಂದು ಬೇರೆ ಹೇಳಬೇಕಾಗಿಲ್ಲ.

೧೯೭೭ ರಲ್ಲಿ ಕೇಂದ್ರದಲ್ಲಿ ಜನತಾ ಪಕ್ಷವು ಅಧಿಕಾರಕ್ಕೆ ಬರುವುದರೊಂದಿಗೆ ಅಶೋಕ್ ಮೆಹ್ತಾ ವರದಿಯ ಶಿಫಾರಸ್ಸಿನ ಆಧಾರದನ್ವಯ ಕೆಲವು ರಾಜ್ಯಗಳಲ್ಲಿ ಪಂಚಾಯತ್ ಸಂಸ್ಥೆಗಳು ವಿಕೇಂದ್ರೀಕರಣದ ಘಟಕಗಳಾಗಿ ಕಾರ್ಯ ನಿರ್ವಹಿಸುವತ್ತ ದಿಟ್ಟ ಹೆಜ್ಜೆ ಇಟ್ಟಿತು. ಹೀಗಾಗಿ ವಿಕೇಂದ್ರೀಕರಣ ಪ್ರಯೋಗಕ್ಕೆ ಹೊಸ ಆಯಾಮಗಳು ದೊರಕುವಂತಾದವು. ಭಾರತದ ಸಂದರ್ಭದಲ್ಲಿ ೭೦ರ ದಶಕದ ಮೊದಲ ಭಾಗದ ಕೇಂದ್ರೀಕೃತ ಅಧಿಕಾರ ವ್ಯವಸ್ಥೆಗೆ ಪರ್ಯಾಯವಾಗಿ ೮೦ರ ದಶಕದಲ್ಲಿ ಕಾಂಗ್ರೆಸ್ಸೇತರ ಮತ್ತು ಪ್ರಾದೇಶಿಕ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವು. ೭೭ ರಲ್ಲಿ ಪಶ್ಚಿಮ ಬಂಗಾಳದ ಎಡರಂಗ ಸರಕಾರವು ಪಂಚಾಯತ್‌ ವ್ಯವಸ್ಥೆಗೆ ಹೊಸ ನಿರ್ದೇಶನವನ್ನು ನೀಡಿತು. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ಜನತಾ ಸರಕಾರ ಮತ್ತು ಆಂಧ್ರಪ್ರದೇಶದಲ್ಲಿ ಎನ್‌ ಟಿ ರಾಮರಾವ್ ಅವರ ತೆಲುಗು ದೇಶಂ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದವು.

ಈ ಹಿನ್ನೆಲೆಯೊಂದಿಗೆ ಕೇಂದ್ರ ಮತ್ತು ರಾಜ್ಯಗಳ ಸರಕಾರಗಳ ಕಾರ‍್ಯಕ್ಷೇತ್ರವನ್ನು ಪರಿಶೀಲಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಮರುಚಿಂತನಾ ಕ್ರಮಗಳಿಗೆ ೮೦ರ ದಶಕದಲ್ಲಿ ಅಧಿಕಾರಕ್ಕೆ ಬಂದ ಪ್ರಾದೇಶಿಕ ಹಾಗೂ ಕಾಂಗ್ರೆಸ್ಸೇತರ ಸರಕಾರಗಳು ಮುಖ್ಯ ಅಜೆಂಡಾವನ್ನಾಗಿ ಮಾಡಿದವು. ಇದರಿಂದ ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳ ಕುರಿತ ಚರ್ಚೆಗೆ ಹೊಸ ಆಯಾಮ ದೊರಕಿದಂತಾಯಿತು. ಇದಕ್ಕೆ ಮಣಿದ ಕೇಂದ್ರ ಸರಕಾರವು ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಅಧ್ಯಯನ ನಡೆಸಲು ಜಸ್ಟೀಸ್ ಸರ್ಕಾರಿಯಾ ಆಯೋಗವನ್ನು ನೇಮಿಸಿತು. ಆಯೋಗವು ಅತೀ ಮಹತ್ವದ ಶಿಫಾರಸ್ಸುಗಳನ್ನು ಸೂಚಿಸಿತು. ಇದರಲ್ಲಿ ಪ್ರಜಾತಂತ್ರ ವಿಕೇಂದ್ರೀಕರಣಕ್ಕೂ ಒತ್ತು ನೀಡಲಾಯಿತು. ಪರಿಣಾಮವಾಗಿ ೧೯೮೩ರ ಕರ್ನಾಟಕ ಜಿಲ್ಲಾ ಪರಿಷತ್‌ಗಳು, ತಾಲ್ಲೂಕು ಪಂಚಾಯತಿ ಸಮಿತಿಗಳು, ಮಂಡಲ ಪಂಚಾಯತಿ ಮತ್ತು ನ್ಯಾಯ ಪಂಚಾಯತಿಗಳ ಕಾಯ್ದೆ ಮತ್ತು ೧೯೯೩ರ ಸಂವಿಧಾನಿಕ ತಿದ್ದುಪಡಿ ಕಾಯ್ದೆಗಳು ಪಂಚಾಯತ್ ವ್ಯವಸ್ಥೆಗೆ ಸಂಬಂಧಿಸಿದಂತೆ ಅತೀ ಮಹತ್ವದ ಮೈಲುಗಲ್ಲಾಗಿ ಪರಿಣಮಿಸಿತು.