೧೯೮೩ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ

೧೯೮೩ರಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಜನತಾಪಕ್ಷ ಸರಕಾರವು ವಿಕೇಂದ್ರೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ‘ಜನತೆಗೆ ಅಧಿಕಾರ’ ಎಂಬ ಘೋಷಣೆಯೊಂದಿಗೆ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಶಾಸನಾತ್ಮಕ ಕ್ರಮಗಳನ್ನು ರೂಪಿಸಿತು. ಈ ನಿಟ್ಟಿನಲ್ಲಿ ೧೯೮೩ ರ ಜಿಲ್ಲಾ ಪರಿಷತ್‌ಗಳು, ತಾಲ್ಲೂಕು ಪಂಚಾಯತ್‌ ಸಮಿತಿಗಳು, ಮಂಡಲ ಪಂಚಾಯತಿ ಮತ್ತು ನ್ಯಾಯ ಪಂಚಾಯತಿಗಳ ಕಾಯ್ದೆಯನ್ನು ಜಾರಿಗೊಳಿಸಿತು. ೧೯೮೭ರಲ್ಲಿ ಪಂಚಾಯತ್‌ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಿತು. ಈ ಕಾಯ್ದೆ ದೇಶದಲ್ಲೆ ಹಲವು ಪ್ರಥಮಗಳ ದಾಖಲೆಯನ್ನು ತನ್ನೊಳಗೆ ಅಂತರ್ಗತಗೊಳಿಸಿತು. ಅವುಗಳು :

ದೇಶದಲ್ಲಿ ಮೊದಲ ಬಾರಿಗೆ ಜಿಲ್ಲೆಯ ಎಲ್ಲಾ ಅಭಿವೃದ್ಧಿ ವಿಭಾಗಗಳು ಮತ್ತು ನಿಯೋಗಗಳು ಚುನಾಯಿತ ಪ್ರತಿನಿಧಿಗಳ ಅಧೀನದಲ್ಲಿ ತರಲ್ಪಟ್ಟವು. ಎರಡನೆಯದಾಗಿ ಪಂಚಾಯತ್‌ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಆಡಳಿತಗಾರರು ಉತ್ತರದಾಯಿಗಳಾಗುವ ಅಂಶವನ್ನು ಇದು ಒಳಗೊಂಡಿತ್ತು. ಕಾಯ್ದೆಯಿಂದಾಗಿ ಜಿಲ್ಲೆಯ ಅಭಿವೃದ್ಧಿ ಮತ್ತು ಆಡಳಿತ ನಿಯಂತ್ರಣಕಾರ‍್ಯಗಳು ಸಂಪೂರ್ಣವಾಗಿ ಪ್ರತ್ಯೇಕಗೊಂಡು ಆಡಳಿತ ನಿಯಂತ್ರಣಕಾರ‍್ಯಗಳು ಜಿಲ್ಲಾಧಿಕಾರಿಗಳ ಅಧೀನಕ್ಕೂ, ಅಭಿವೃದ್ಧಿ ಕಾರ‍್ಯಗಳ ನಿರ್ವಹಣಾ ಹೊಣೆಯನ್ನು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ‍್ಯದರ್ಶಿಯವರಿಗೆ ವಹಿಸಲಾಯಿತು. ಮೂರನೆಯದಾಗಿ ಕಾಯ್ದೆಗನುಸಾರವಾಗಿ ಯೋಜನೆ ಮತ್ತು ಅನುಷ್ಠಾನದ ಹೊಣೆಯನ್ನು ತಳಮಟ್ಟದ ಜನಪ್ರತಿನಿಧಿಗಳು ಹಾಗು ಗ್ರಾಮಸಭೆಯ ಮೂಲಕ ಜನಸಹಭಾಗಿತ್ವಕ್ಕೆ ಅವಕಾಶವನ್ನು ಕಲ್ಪಿಸಲಾಯಿತು. ನಾಲ್ಕನೆಯದಾಗಿ ಪಂಚಾಯತ್‌ರಾಜ್ ಸಂಸ್ಥೆಗಳನ್ನು ರಾಜ್ಯದ ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಅಭಿವೃದ್ಧಿ ಪರಿಷತ್‌ನೊಂದಿಗೆ ಕಲ್ಪಿಸಲಾಗಿದೆ.

ಐದನೆಯದಾಗಿ ಮೊದಲ ಬಾರಿಗೆ ಮಹಿಳೆಯರಿಗೆ ಪಂಚಾಯತ್‌ರಾಜ್ ಸಂಸ್ಥೆಗಳಲ್ಲಿ ೨೫ ಪ್ರತಿಶತ ಮೀಸಲಾತಿಯನ್ನು ವಿಸ್ತರಿಸಲಾಯಿತು. ಹಾಗೆಯೇ ಪರಿಶಿಷ್ಟರಿಗೆ ೧೮ ಪ್ರತಿಶತ ಮೀಸಲಾತಿಯನ್ನು ಒದಗಿಸಿತು. ಮಾತ್ರವಲ್ಲ ಪ್ರತಿ ಜಿ.ಪಂ. ಮತ್ತು ಮ.ಪಂ.ಗಳಲ್ಲಿ ಪರಿಶಿಷ್ಟ ಮಹಿಳೆಯರಿಗೆ ಒಂದು ಸ್ಥಾನವನ್ನು ಮೀಸಲಿಡುವ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಗ್ರಾಮಸಭೆಯಲ್ಲಿ ಜನ ಸಹಭಾಗಿತ್ವಕ್ಕೆ ಅಧಿಕಾರವನ್ನು ಕಲ್ಪಿಸಿ ಪಂಚಾಯತ್ ಸಂಸ್ಥೆಗಳ ಮೂಲಕ ನೇರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುವು ಮಾಡಲಾಯಿತು. ಮತದಾನದ ವಯಸ್ಸನ್ನು ೧೮ ವರ್ಷಕ್ಕೆ ಇಳಿಸಿ ಪಕ್ಷಾಂತರ ಮಸೂದೆಯನ್ನು ಪಂಚಾಯತ್ ಸಂಸ್ಥೆಗಳಿಗೆ ವಿಸ್ತರಿಸಿರುವುದು ಮತ್ತು ಪಂಚಾಯತ್ ಚುನಾವಣೆಗಳನ್ನು ಪಕ್ಷಾಧಾರಿತ ನೆಲೆಯಲ್ಲಿ ನಡೆಸಲು ಅವಕಾಶ ನೀಡಲಾಯಿತು. ಜಿಲ್ಲಾ ಪರಿಷತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ರಾಜ್ಯ ಸಚಿವರ ಮತ್ತು ಉಪಸಚಿವರ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ೧೯೮೩ರ ಕಾಯ್ದೆಯನ್ವಯ ಮಂಡಲ ಪಂಚಾಯತ್ ಮತ್ತು ಜಿಲ್ಲಾ ಪರಿಷತ್‌ಗಳು ಕಾರ್ಯೋನ್ಮುಖವಾದವು.

೧೯೯೨ರ ಸಂವಿಧಾನ ತಿದ್ದುಪಡಿ ಕಾಯ್ದೆಯು ಪಂಚಾಯತ್‌ರಾಜ್ ಸಂಸ್ಥೆಗಳಲ್ಲೊಂದು ಅಪರೂಪದ ಮೈಲುಗಲ್ಲಾಗಿ ಪರಿಣಮಿಸಿತು. ಇದರಿಂದಾಗಿ ಪಂಚಾಯತ್‌ಗಳು ಸಾಂವಿಧಾನಿಕ ಮನ್ನಣೆ ಪಡೆದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ೧೯೯೩ರ ಕರ್ನಾಟಕ ಪಂಚಾಯತಿರಾಜ್ ಅಧಿನಿಯಮವು ಜಾರಿಗೆ ತಂದಿತು. ಇದರಂತೆ ೧೯೯೩ರ ಡಿಸೆಂಬರ್‌ ನಲ್ಲಿ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆಗಳು ನಡೆದವು.

ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನಾವಳಿಯನ್ನು ಸಿದ್ಧಪಿಡಿಸಿ ಕೆಲವು ಸೂಚಿಗಳ ಮೂಲಕ ಪ್ರತಿನಿಧಗಳು ಸಹಭಾಗಿತ್ವವನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಲಾಗಿದೆ. ಪ್ರತಿನಿಧಿಗಳ ಸಾಮಾಜಿಕ ಹಿನ್ನೆಲೆಯನ್ನು ಅರಿಯುವ ಮೂಲಕ ಸಾಮಾಜಿಕ ಆಯಾಮಗಳನ್ನು ಕಂಡುಕೊಳ್ಳಲಾಗಿದೆ. ಇವುಗಳಲ್ಲಿ ಮುಖ್ಯವಾದ ಸೂಚಿಗಳು ಇಂತಿವೆ. ಪ್ರತಿನಿಧಿಗಳ ಲಿಂಗ, ವಯಸ್ಸು, ಜಾತಿ, ಶಿಕ್ಷಣ ಮಟ್ಟ, ಭೂ ಒಡೆತನ ಉದ್ಯೋಗ, ಆದಾಯ, ಕುಟುಂಬದಲ್ಲಿ ದುಡಿಯುವವರ ಸಂಖ್ಯೆ ಅಥವಾ ವರಮಾನ ಗಳಿಸತಕ್ಕ ಕುಟುಂಬ ಸದಸ್ಯರ ವಿವರ ಮತ್ತು ಸದಸ್ಯರ ಒಟ್ಟು ಮಕ್ಕಳ ಸಂಖ್ಯೆ, ಕುಟುಂಬ ಸದಸ್ಯರು ಮತ್ತು ಸದಸ್ಯತ್ವದ ಜೊತೆ ಇತರೆ ಸಂಘ ಸಂಸ್ಥೆಗಳ ಸದಸ್ಯತ್ವ, ಕುಡಿಯುವ ನೀರಿನ ಮೂಲ. ಶೌಚಾಲಯ, ಮತ್ತು ರಾಜಕೀಯ ಪ್ರವೇಶಕ್ಕೆ ಕಾರಣವಾದ ಅಂಶಗಳನ್ನು ಪರೀಕ್ಷಿಸಲಾಗಿದೆ. ಈ ಮೂಲಕ ಅವರ ಕೌಟುಂಬಿಕ ಮತ್ತು ಪ್ರಾತಿನಿಧ್ಯಕ್ಕೆ  ಪೂರಕವಾದ ಅಂಶಗಳ ಕುರಿತು ಚರ್ಚಿಸಲಾಗಿದೆ. ಇವನ್ನು ಒಟ್ಟಾರೆಯಾಗಿ ಸದಸ್ಯರ ಪ್ರಾತಿನಿಧ್ಯದ ನಿರ್ಧಾರಕ ಅಂಶಗಳೆಂದು ಪರಿಗಣಿಸಬಹುದಾಗಿದೆ. ಸಾಮಾನ್ಯವಾಗಿ ಸದಸ್ಯರ ಸಾಮಾಜಿಕ ಹಿನ್ನೆಲೆ ಎಂದಾಗ ಕೆಲವು ಪ್ರಾಥಮಿಕ ಸೂಚಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಆದರೆ ನಮ್ಮ ಅಧ್ಯಯನ ಸಂದರ್ಭದಲ್ಲಿ ಇವುಗಳ ಜೊತೆಗೆ ಸದಸ್ಯರ ಕೌಟುಂಬಿಕ ಪರಿಸರದ ಒಟ್ಟು ಆಯಾಮಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಅಧ್ಯಯನದ ಫಲಿತಗಳನ್ನು ಮೂರು ಹಂತಗಳಲ್ಲಿ ಮಂಡಿಸಲಾಗಿದೆ. ಅಂದರೆ ಪ್ರತಿ ಸೂಚಿಗಳಿಗೆ ಪೂರಕವಾದ ವಿವರಣೆಯನ್ನು ಮೂರು ಹಂತಗಳಲ್ಲಿ ಮಂಡಿಸಲಾಗಿದೆ. ಇವು ತೀರಾ ಸರಳ ಹಾಗೂ ಪುನರಾವರ್ತನೆಯಾಗುವ ಅಂಶಗಳೆಂದು ಕಂಡರೂ ನಮ್ಮ ಅಧ್ಯಯನ ದೃಷ್ಟಿಯಿಂದ ಬಹಳ ಮಹತ್ವದೆನಿಸಿವೆ.

ಮೊದಲ ಹಂತದಲ್ಲಿ ನೀರಾವರಿ ಗ್ರಾಮ ಪ್ರದೇಶ ವ್ಯಾಪ್ತಿಯ ಗ್ರಾಮ ಪಂಚಾಯತ್ ಸದಸ್ಯರ ಸಾಮಾಜಿಕ ಆಯಾಮಗಳನ್ನು ಪರಿಶೀಲಿಸೋಣ. ಇದರಲ್ಲಿ ನಂ. ೧೦ ಮುದ್ದಾಪುರ ಗ್ರಾಮ ಪಂಚಾಯತ್ ಬಹುಮುಖ್ಯವಾದುದು. ಇಲ್ಲಿನ ಒಟ್ಟು ೧೫ ಮಂದಿ ಸದಸ್ಯರಲ್ಲಿ ೯ ಪುರುಷರು ಹಾಗೂ ೬ ಮಹಿಳೆಯರು ಇದ್ದು ಅವರ ಸಾಮಾಜಿಕ ಗುಣಲಕ್ಷಣಗಳು ಹೀಗಿವೆ. ಸದಸ್ಯರುಗಳು ವಯಸ್ಸನ್ನು ಗಮನಿಸಿದಾಗ ಇಲ್ಲಿ ಶೇ. ೨೬.೬ ರಷ್ಟು ಮಂದಿ ಸದಸ್ಯರ ವಯಸ್ಸು ೩೧ ರಿಂದ ೩೫ ವರ್ಷಗಳು, ಶೇ. ೬.೬ ರಷ್ಟು ಸದಸ್ಯರ ವಯಸ್ಸು ೩೬ ರಿಂದ ೪೦ ವರ್ಷಗಳು. ಶೇ. ೧೩.೩ ರಷ್ಟು ಮಂದಿ ೪೧ ರಿಂದ ೪೫ ವಯಸ್ಸಿನವರೂ ಹಾಗೂ ಶೇ. ೩೩.೩ ರಷ್ಟು ಸದಸ್ಯರು ೪೬ ರಿಂದ ೫೦ ವರ್ಷ ವಯಸ್ಸಿನವರು ಆಗಿದ್ದಾರೆ. ಶೇ. ೨೦ ರಷ್ಟು ಸದಸ್ಯರು ಮಾತ್ರ ೫೦ ವರ್ಷಕ್ಕಿಂತ ಮೇಲ್ಪಟ್ಟವರಾಗಿರುತ್ತಾರೆ. ಇವರಲ್ಲಿ ಶೇ. ೨೬.೬ ರಷ್ಟು ಮಂದಿ ಪರಿಶಿಷ್ಟ ಜಾತಿಯವರು, ಶೇ. ೬ ಪರಿಶಿಷ್ಟ ಪಂಗಡ, ಶೇ. ೩೩ ರಷ್ಟು ಮಂದಿ ಇತರೆ ಹಿಂದುಳಿದವರು ಮತ್ತು ಅಷ್ಟೆ ಪ್ರಮಾಣದ ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರು. ಸದಸ್ಯರ ಶಿಕ್ಷಣ ಮಟ್ಟವನ್ನು ಗಮನಿಸಿದಲ್ಲಿ ಶೇ. ೨೦ ರಷ್ಟು ೫ ರಿಂದ ೭ನೇ ತರಗತಿವರೆಗೂ, ಶೇ. ೩೩.೩ ರಷ್ಟು ೮ ರಿಂದ ೧೦ನೇ ತರಗತಿವರೆಗೂ, ಶೇ. ೧೩.೩ ರಷ್ಟು ಮಂದಿ ಪಿ.ಯು.ಸಿ. ಹಾಗೂ ಶೇ. ೩೩.೩ ರಷ್ಟು ಮಂದಿ ಪದವೀಧರರಾಗಿರುತ್ತಾರೆ. ಶೇ. ೬೬.೬ ಮಂದಿ ಕೃಷಿಯನ್ನೇ ಪೂರ್ಣಪ್ರಮಾಣದಲ್ಲಿ ಹಾಗೂ ೨೬.೬ ರಷ್ಟು ಕೃಷಿ ಕಾರ್ಮಿಕರಾಗಿಯೂ, ಶೇ. ೬.೬ ಮಂದಿ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸದಸ್ಯರ ಕುಟುಂಬವನ್ನು ಗಮನಿಸಿದಾಗ ಶೇ. ೫೩.೩ ರಷ್ಟು ಕುಟುಂಬಗಳಲ್ಲಿ ಒಬ್ಬರಿಂದ ಇಬ್ಬರು ವರಮಾನಗಳಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಶೇ. ೩೩.೩ ರಷ್ಟು ಕುಟುಂಬಗಳಲ್ಲಿ ೩ ರಿಂದ ೪ ಮಂದಿ ಇದರಲ್ಲಿ ನಿರತರು. ಶೇ. ೬.೬ ರಷ್ಟು ಕುಟುಂಬಗಳಲ್ಲಿ ೫ ರಿಂದ ೬ ಮತ್ತು ೬ ರಿಂದ ಮೇಲ್ಪಟ್ಟು ಕುಟುಂಬ ಸದಸ್ಯರು ವರಮಾನ ತರತಕ್ಕ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಸದಸ್ಯರ ಕೌಟುಂಬಿಕ ವಾರ್ಷಿಕ ಆದಾಯವನ್ನು ಪರಿಗಣಿಸಿದಾಗ ಶೇ. ೩೦ ರಷ್ಟು, ೫.೦೦೦ ರೂ.ಗಳ ವಾರ್ಷಿಕ ವರಮಾನವನ್ನು, ಶೇ. ೭೩.೩ ರಷ್ಟು ೬ ರಿಂದ ೧೦,೦೦೦ ರೂ.ಗಳ ವಾರ್ಷಿಕ ವರಮಾನವನ್ನು ಹಾಗೂ ಶೇ. ೬.೬ ರಷ್ಟು ಮಂದಿ ತಮ್ಮ ಆದಾಯ ೧೫,೦೦೦ ರೂ.ಗಳು ಎಂದು ತಿಳಿಸಿರುತ್ತಾರೆ. ಸದಸ್ಯರ ಕುಟುಂಬದ ಗಾತ್ರವನ್ನು ಪರಿಗಣಿಸಿದಲ್ಲಿ ಶೇ. ೬.೬ ರಷ್ಟು ಮಂದಿಯ ಸದಸ್ಯರ ಒಟ್ಟು ಕುಟುಂಬದ ಸಂಖ್ಯೆ ೫ ರಿಂದ ೮ರವರೆಗೂ, ಶೇ. ೩೩.೩ ರಷ್ಟು ಮಂದಿ ೯ ರಿಂದ ೧೨ ರವರೆಗೆ ಕುಟುಂಬ ಸದಸ್ಯರ ಸಂಖ್ಯೆಯನ್ನು ಹೊಂದಿರುತ್ತಾರೆ. ಪಂಚಾಯತ್ ಸದಸ್ಯತ್ವದ ಜೊತೆಗೆ ಸದಸ್ಯರ ಇಲ್ಲವೇ ಅವರ ಕುಟುಂಬ ವರ್ಗದವರಲ್ಲಿ ಶೇ. ೩೩.೫ ರಷ್ಟು ಮಂದಿ ಇತರೆ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಅಥವಾ ಪಾತ್ರ ಹೊಂದಿರುವರೆಂದೂ, ಶೇ. ೬೬.೬ ರಷ್ಟು ಮಂದಿ ಇಲ್ಲವೆಂದು ಅಂದರೆ ಬರೀ ಪಂಚಾಯತ್ ಸದಸ್ಯತ್ವ ಮಾತ್ರವೆಂದು ತಿಳಿಸಿರುತ್ತಾರೆ. ಕುಡಿಯುವ ನೀರಿನ ಮೂಲಕ್ಕೆ ಸಂಬಂಧಿಸಿ ಶೇ. ೧೦೦ ರಷ್ಟು ಮಂದಿ ಟ್ಯಾಂಕ್ ನೀರು ಬಳಸುತ್ತಾರೆ. ಶೇ. ೫೩ ರಷ್ಟು ಮಂದಿ ಶೌಚಾಲಯವನ್ನು ಹೊಂದಿರುತ್ತಾರೆ. ಇನ್ನುಳಿದಂತೆ ಶೇ. ೪೬.೬ ರಷ್ಟು ಮಂದಿ ಶೌಚಾಲಯವನ್ನು ಹೊಂದಿಲ್ಲ. ಚುನಾವಣೆಗೆ ಸ್ಪರ್ಧಿಸಲು ಅಥವಾ ರಾಜಕೀಯ ಪ್ರವೇಶಕ್ಕೆ ಕಾರಣವಾದ ಅಂಶಗಳ ಕುರಿತಂತೆ ಶೇ. ೪೦ ರಷ್ಟು ಮಂದಿ ಸ್ನೇಹಿತರು/ಸಮುದಾಯದ ಪ್ರೇರಣೆ ಎಂದೂ ಶೇ. ೪೬.೬ ರಷ್ಟು ಮಂದಿ ಪಕ್ಷದ ಕಾರ್ಯಕರ್ತರಾಗಿದ್ದರೆಂದು ತಿಳಿಸಿರುತ್ತಾರೆ. ಶೇ. ೬.೬ ರಷ್ಟು ಮಂದಿ ರಾಜಕೀಯ ವ್ಯಕ್ತಿಗಳ ಸಂಪರ್ಕದಿಂದ ಚುನಾವಣೆಗೆ ಸಜ್ಜಾದರು ಎಂದು ವಿವರಿಸಿದ್ದಾರೆ.

ಒಣ ಭೂಮಿ ಪ್ರದೇಶದ ಬೈಲುವದ್ದಿಗೇರಿ ಗ್ರಾಮಪಂಚಾಯತ್ ಸದಸ್ಯರ ಸಾಮಾಜಿಕ ಆಯಾಮಗಳನ್ನು ವಿವರಿಸಲಾಗಿದೆ. ಇಲ್ಲಿ ಕೂಡಾ ಒಟ್ಟು ೯ ಪುರುಷರು ಹಾಗೂ ೬ ಮಹಿಳೆಯರು ಸೇರಿ ೧೫ ಮಂದಿ ಸದಸ್ಯರಿದ್ದು ಅವರ ವಯಸ್ಸಿನ ವಿವರಗಳನ್ನು ಗಮನಿಸಿದರೆ ಶೇ. ೨೬.೬ ರಷ್ಟು ಮಂದಿ ೨೫ ರಿಂದ ೩೦ ವರ್ಷದ ಅಂತರದಲ್ಲೂ, ಅಷ್ಟೇ ಪ್ರಮಾಣದಲ್ಲಿ ೩೧ ರಿಂದ ೩೫ ರ ವಯಸ್ಸಿನವರೂ, ಶೇ. ೨೦ ರಷ್ಟು ೩೬ ರಿಂದ ೪೦ರ ವಯಸ್ಸಿನವರೂ, ಹಾಗೆ ಅಷ್ಟೆ ಪ್ರಮಾಣದ ಮಂದಿ ೫೦ ಮತ್ತು ಅದಕ್ಕಿಂತ ಹೆಚ್ಚಿನ ಪ್ರಾಯದವರು ಎಂದು ತಿಳಿಸಿದ್ದಾರೆ. ಶೇ. ೬.೬ ರಷ್ಟು ಮಂದಿ ಮಾತ್ರ ೪೬ ರಿಂದ ೫೦ ವರ್ಷ ವಯಸ್ಸಿನವರು ಆಗಿದ್ದಾರೆ. ಸದಸ್ಯರ ಜಾತಿವಾರು ಹಂಚಿಕೆಯನ್ನು ಪರಿಗಣಿಸಿದಾಗ, ಶೇ. ೩೦ ರಷ್ಟು ಮಂದಿ ಪರಿಶಿಷ್ಟ ಜಾತಿ, ಶೇ. ೨೬.೬ ಮಂದಿ ಪರಿಶಿಷ್ಟ ವರ್ಗ ಮತ್ತು ಶೇ. ೫೩.೩ ರಷ್ಟು ಮಂದಿ ಇತರೆ ಜಾತಿವರ್ಗದವರಾಗಿದ್ದಾರೆ. ಸದಸ್ಯರ ಶೈಕ್ಷಣಿಕ ಮಟ್ಟವನ್ನು ಗಮನಿಸಿದಾಗ ಶೇ. ೩೦ ರಷ್ಟು. ಐದರಿಂದ ಏಳನೇ ತರಗತಿ ಮಟ್ಟದ ಶಿಕ್ಷಣ ಹೊಂದಿದವರೆಂದೂ, ಶೇ. ೩೩.೩ ರಷ್ಟು ಮಂದಿ ಎಂಟರಿಂದ ಹತ್ತನೇ ತರಗತಿವರೆಗಿನ ಶಿಕ್ಷಣ ಪಡೆದವರೆಂದು ಮತ್ತು ಶೇ. ೪೬.೬ ರಷ್ಟು ಮಂದಿ ಅನಕ್ಷರಸ್ಥರೆಂದು ತಿಳಿದುಬಂದಿದೆ. ಶೇ. ೨೬.೬ ಮಂದಿ ಒಣಭೂಮಿಯನ್ನು ಹೊಂದಿರುವವರು ಹಾಗೂ ಶೇ. ೬೬.೬ ಮಂದಿ ನೀರಾವರಿ ಭೂಮಿ ಹೊಂದಿರುತ್ತಾರೆ. ಸುಮಾರು ಶೇ. ೮೬.೬ ರಷ್ಟು ಮಂದಿ ಕೃಷಿಯನ್ನೇ ಪೂರ್ಣಪ್ರಮಾಣದಲ್ಲಿ ಅವಲಂಬಿಸಿದರೆ ಶೆ. ೬.೬ ರಷ್ಟು ಮಂದಿ ಕೃಷಿಕಾರ್ಮಿಕರು ಹಾಗೂ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಸುಮಾರು ಶೇ. ೫೩.೩ ರಷ್ಟು ಮಂದಿ ಸದಸ್ಯರ ಕುಟುಂಬದಲ್ಲಿ ಒಬ್ಬರಿಂದ ಇಬ್ಬರು ವರಮಾನ ಗಳಿಸತಕ್ಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಶೇ. ೨೬.೬ ರಷ್ಟು ಸದಸ್ಯರ ಕುಟುಂಬದಲ್ಲಿ ೩ ರಿಂದ ೪ ಮಂದಿ ಹಾಗೂ ಶೇ. ೬.೬ ರಷ್ಟು ಸದಸ್ಯರ ಕುಟುಂಬದಲ್ಲಿ ೫ ರಿಂದ ೬ ಮಂದಿ ವರಮಾನ ತರುವಂತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಶೇ. ೧೩.೩ ರಷ್ಟು ಸದಸ್ಯರ ವಾರ್ಷಿಕ ಆದಾಯವು ರೂ. ೫,೦೦೦ ಗಳೆಂದು, ೨೬.೬ ರಷ್ಟು ಸದಸ್ಯರ ಆದಾಯವು ೧೧ ಸಾವಿರದಿಂದ ೧೫,೦೦೦ ರೂ.ಗಳೆಂದು, ಶೇ. ೧೩.೩ ರಷ್ಟು ಸದಸ್ಯರ ಆದಾಯವು ೧೫ ಸಾವಿರ ಹಾಗೂ ಅದಕ್ಕಿಂತ ಹೆಚ್ಚಾಗೆ ಇರುತ್ತದೆ. ೨೬.೬ ರಷ್ಟು ಮಂದಿ ಪ್ರತಿನಿಧಿಗಳ ಕುಟುಂಬ ಸದಸ್ಯರ ಸಂಖ್ಯೆಯು ೨ ರಿಂದ ೪ ಮಂದಿ, ಶೇ. ೬೦ ರಷ್ಟು ಸದಸ್ಯರ ಸಂಖ್ಯೆಯು ೫ ರಿಂದ ೮ ಮಂದಿ ಹಾಗೂ ಶೇ. ೬.೬ ರಷ್ಟು ಸದಸ್ಯರದ್ದು ೯ ರಿಂದ ೧೨ ಆದರೆ ಅಷ್ಟೇ ಪ್ರಮಾಣದ ಸದಸ್ಯರ ಕುಟುಂಬ ಗಾತ್ರದ ಸಂಖ್ಯೆ ೧೩ ಕ್ಕಿಂತ ಹೆಚ್ಚಿಗೆ ಇದೆ. ಶೇ. ೪೬ ರಷ್ಟು ಮಂದಿ ಸದಸ್ಯರು ಪಂಚಾಯತ್ ಸದಸ್ಯತ್ವದ ಜೊತೆಗೆ ಇಲ್ಲವೇ ಅವರ ಕುಟುಂಬದ ಸದಸ್ಯರು ಇತರ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವದ ಪಾತ್ರ ಹೊಂದಿರುತ್ತಾರೆ. ಶೇ. ೮೦ ರಷ್ಟು ಸದಸ್ಯರು ತಿಳಿಸುವಂತೆ ಕುಡಿಯುವ ನೀರಿಗಾಗಿ ಸಾರ್ವಜನಿಕ ನಳವನ್ನು ಆಶ್ರಯಿಸಿರುತ್ತಾರೆ. ಶೇ. ೧೩.೩ ರಷ್ಟು ಸದಸ್ಯರು ಶೌಚಾಲಯ ಹೊಂದಿದರೆ ೬೬.೬ ರಷ್ಟು ಮಂದಿ ಹೊಂದಿಲ್ಲ. ಶೇ. ೫೩.೩ ರಷ್ಟು ಮಂದಿ ತಮ್ಮ ರಾಜಕೀಯ ಪ್ರವೇಶ ಅಥವಾ ಪಂಚಾಯತ್ ಸದಸ್ಯತ್ವಕ್ಕೆ ಸ್ನೇಹಿತರು ಅಥವಾ ಸಮುದಾಯ ಪ್ರೇರಣೆ ಎಂದು ತಿಳಿಸಿದರೆ, ಶೇ. ೪೬.೬ ರಷ್ಟು ಸದಸ್ಯರು ಮೀಸಲಾತಿಯಿಂದಾಗಿ ಮಾತ್ರ ತಾವು ಪಂಚಾಯತ್ ಸದಸ್ಯತ್ವ ಇಲ್ಲವೇ ರಾಜಕೀಯಕ್ಕೆ ಪ್ರವೇಶಿಸಲು ಅನುಕೂಲವಾಗಿದೆ ಎಂದಿದ್ದಾರೆ.

ಎರಡನೆ ಹಂತದಲ್ಲಿ ನೀರಾವರಿ ಗ್ರಾಮಪಂಚಾಯತ್ ಮತ್ತು ಒಣ ಭೂಮಿಪ್ರದೇಶದ ಪಂಚಾಯತ್‌ಗಳ ಸದಸ್ಯರ ಸಾಮಾಜಿಕ ಆಯಾಮಗಳನ್ನು ಈ ಮೂಲಕ ಹಿಡಿದಿಡಲು ಪ್ರಯತ್ನಿಸಲಾಗಿದೆ. ಈ ಕುರಿತಂತೆ ಕೆಲವು ಸೂಚಿಗಳ ವಿವರಗಳನ್ನು ಕೊನೆಯಲ್ಲಿ ನೀಡಲಾಗಿರುವ ಕೋಷ್ಠಕದಲ್ಲಿ ನೋಡಬಹುದು (ಕೋಷ್ಟಕ ೧ ರಿಂದ ೧೩). ನೀರಾವರಿ ಪ್ರದೇಶ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ೨೧ ಮಹಿಳಾ ಸದಸ್ಯರು ಹಾಗೂ ೩೧ ಪುರುಷರು ಸೇರಿದಂತೆ ಒಟ್ಟು ೫೨ ಸದಸ್ಯರುಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಇದು ನೀರಾವರಿ ಪ್ರದೇಶವಾದರೂ ಶೇ. ೨೬.೯೨ ರಷ್ಟು ಮಂದಿ ಸದಸ್ಯರು ಭೂರಹಿತರಾಗಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆ ಅಥವಾ ಪರಿಪೂರ್ಣ ವ್ಯವಸಾಯಗಾರರು ಶೇ. ೭೧.೧೫ ಎಂದಾದರೆ, ಶೇ. ೨೩.೦೭ ರಷ್ಟು ಮಂದಿ ಕೃಷಿಕಾರ್ಮಿಕರಾಗಿದ್ದಾರೆ. ಇನ್ನುಳಿದಂತೆ ಕೃಷಿಯೇತರ ಚಟುವಟಿಕೆಗಳಲ್ಲಿ ಶೇ. ೧.೯೨ ರಷ್ಟು ಮಂದಿ ತೊಡಗಿಸಿಕೊಂಡರೆ ಅಷ್ಟೇ ಪ್ರಮಾಣದಲ್ಲಿ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ವಲಸೆ ಪ್ರಮಾಣ ಅತ್ಯಂತ ವಿರಳವೆನ್ನಬಹುದು. ಈ ಹಿನ್ನೆಲೆಯಲ್ಲಿ ಒಟ್ಟು ಸದಸ್ಯರುಗಳ ಕುಟುಂಬದಲ್ಲಿ ವರಮಾನ ಗಳಿಸತಕ್ಕವರ ಸಂಖ್ಯೆಯನ್ನು ಗಮನಿಸಿದಲ್ಲಿ ಶೇ. ೫೨.೮೪ ರಷ್ಟರಲ್ಲಿ ೩ ರಿಂದ ೪ ಮಂದಿ ನಿರತರಾಗಿದ್ದಾರೆ. ಹಾಗಾಗಿ ಶೇ. ೨೬.೯೨ ರಷ್ಟು ಮಂದಿಯ ವಾರ್ಷಿಕ ಆದಾಯ ರೂ. ೫,೦೦೦೦ ಗಳೆಂದು, ಶೇ. ೫೯.೬೧ ರಷ್ಟು ಮಂದಿ ಸದಸ್ಯರ ವಾರ್ಷಿಕ ಆದಾಯ ೬,೦೦೦ ದಿಂದ ೧೦,೦೦೦ ರೂ.ಗಳು, ಶೇ. ೧.೯೨ ರಷ್ಟು ಸದಸ್ಯರ ಆದಾಯ ೧೧,೦೦೦ ದಿಂದ ೧೫,೦೦೦ ರೂ.ಗಳೆಂದು ಹಾಗೂ ಶೇ. ೧೧.೫೩ ರಷ್ಟು ಸದಸ್ಯರ ವಾರ್ಷಿಕ ವರಮಾನ ೧೫,೦೦೦ ಮತ್ತು ಅದಕ್ಕಿಂತ ಮೇಲ್ಪಟ್ಟಿರುವುದೆಂದು ತಿಳಿದುಬಂದಿದೆ.

ಶೇ. ೧೩.೪೬ ರಷ್ಟು ಸದಸ್ಯರ ಕುಟುಂಬದ ಸಂಖ್ಯೆ ೩ ರಿಂದ ೪ ರಷ್ಟಿದ್ದರೆ, ಶೇ. ೫೫.೭೬ ರಷ್ಟು ಪ್ರತಿನಿಧಿಗಳ ಕುಟುಂಬದ ಸದಸ್ಯರ ಸಂಖ್ಯೆ ೫ ರಿಂದ ೮ ಆಗಿವೆ. ಶೇ. ೨೬.೯೨ ರಷ್ಟು ಸದಸ್ಯರ ಕುಟುಂಬ ಸದಸ್ಯರ ಸಂಖ್ಯೆ ೯ ರಿಂದ ೧೨ ಆಗಿವೆ. ಶೇ. ೨೬.೫೩ ರಷ್ಟು ಸದಸ್ಯರು ಪಂಚಾಯತ್ ಸದಸ್ಯತ್ವದ ಜೊತೆಗೆ ಇಲ್ಲವೆ ಅವರ ಕುಟುಂಬದ ಸದಸ್ಯರು ಸೇರಿದಂತೆ ಇತರೆ ಸಂಘಸಂಸ್ಥೆಗಳ ಸದಸ್ಯತ್ವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನೀರಾವರಿ ಭಾಗದ ಸದಸ್ಯರು ತಿಳಿಸಿರುವಂತೆ ಶೇ. ೧೦೦ ರಷ್ಟು ಮಂದಿ ಕುಡಿಯುವ ನೀರಿಗಾಗಿ ಟ್ಯಾಂಕ್‌ ನೀರನ್ನು ಆಶ್ರಯಿಸಿದ್ದಾರೆ. ಶೇ. ೫೧.೯೨ ರಷ್ಟು ಮಂದಿ ಸದಸ್ಯರು ಶೌಚಾಲಯವನ್ನು ಹೊಂದಿದ್ದಾರೆ. ರಾಜಕೀಯ ಪ್ರವೇಶಕ್ಕೆ ಪ್ರೇರಣೆಯಾದ ಸಂಶಗಳ ಕುರಿತು ಗಮನಿಸಿದಾಗ ಶೇ. ೪೬.೧೫ ಮಂದಿ ಸದಸ್ಯರು ಸ್ನೇಹಿತರು/ಸಮುದಾಯದಿಂದ ಪ್ರಭಾವಿತರಾದರೆ, ಶೇ. ೫.೭೬ ಮಂದಿ ರಾಜಕೀಯ ವ್ಯಕ್ತಿಗಳ ಸಂಪರ್ಕದಿಂದ ಪ್ರಭಾವ ಪಡೆದಿದ್ದಾರೆ. ಶೇ. ೧೩.೪೬ ರಷ್ಟು ಸದಸ್ಯರು ಪಕ್ಷದ ಕಾರ್ಯಕರ್ತರಾಗಿದ್ದರೆ, ಶೇ. ೩೨.೬೯ ರಷ್ಟು ಸದಸ್ಯರು ಮೀಸಲಾತಿಯಿಂದಾಗಿ ಮಾತ್ರ ಸದಸ್ಯತ್ವ/ಪ್ರಾತಿನಿಧ್ಯ ಅಥವಾ ರಾಜಕೀಯ ಪ್ರವೇಶ ಪಡೆಯಲು ಕಾರಣವಾಯಿತೆಂದು ತಿಳಿಸಿದ್ದಾರೆ.

ಈಗ ಒಣಭೂಮಿ ಪ್ರದೇಶದ ಒಟ್ಟು ಗ್ರಾಮಪಂಚಾಯತಿ ಸದಸ್ಯರ ಸಾಮಾಜಿಕ ಆಯಾಮಗಳನ್ನು ಪರಿಶೀಲಿಸೋಣ. ಇದಕ್ಕೆ ಸಂಬಂಧಿಸಿದಂತೆ ಕೆಲವು ಸೂಚಕಗಳ ವಿವರಗಳನ್ನು ಈ ಪುಸ್ತಕದ ಕೊನೆಯಲ್ಲಿ ನೀಡಲಾಗಿದೆ. (ಕೋಷ್ಟಕ ೧ ರಿಂದ ೧೩). ಒಣಭೂಮಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ೧೯ ಮಹಿಳೆ ಹಾಗೂ ೨೫ ಪುರುಷರು ಸೇರಿದಂತೆ ಒಟ್ಟು ೪೪ ಸದಸ್ಯರುಗಳನ್ನು ಸಂದರ್ಶಿಸಿ ಮಾಹಿತಿ ಪಡೆಯಲಾಗಿದೆ. ಇಲ್ಲೂ ಕೂಡ ಸದಸ್ಯರಲ್ಲಿ ಶೇ. ೨.೨೭ ರಷ್ಟು ಮಂದಿ ಭೂರಹಿತರು ಇದ್ದಾರೆ. ಶೇ. ೮೧.೮೧ ರಷ್ಟು ಮಂದಿಗೆ ಕೃಷಿಯೇ ಮುಖ್ಯ ಜೀವಾಳ. ಶೇ. ೨.೨೭ ರಷ್ಟು ಮಂದಿ ಕೃಷಿ ಕಾರ್ಮಿಕರಾಗಿದ್ದು, ಶೇ. ೧೫.೯೦ ರಷ್ಟು ಮಂದಿ ಇತರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟು ೪೪ ಸದಸ್ಯರ ಕುಟುಂಬಗಳಲ್ಲಿ ಪರಿಗಣಿಸಿದಲ್ಲಿ ಶೇ. ೫೪.೫೪ ರಷ್ಟು ಸದಸ್ಯರ ಕುಟುಂಬಗಳಲ್ಲಿ ಒಬ್ಬರಿಂದ ಇಬ್ಬರವರೆಗೆ ವರಮಾನ ಗಳಿಸತಕ್ಕ ಕಸುಬುಗಳಲ್ಲಿ ತೊಡಗಿಸಿಕೊಂಡರೆ, ಶೇ. ೩೧.೮೧ ರಷ್ಟು ಕುಟುಂಬಗಳಲ್ಲಿ ಮೂವರಿಂದ ನಾಲ್ವರವರೆಗೆ ತೊಡಗಿಸಿಕೊಂಡಿದ್ದಾರೆ. ಶೇ. ೬.೮ ರಷ್ಟು ಸದಸ್ಯ ಕುಟುಂಬಗಳಲ್ಲಿ ಐದರಿಂದ ಆರು ಮಂದಿ ತೊಡಗಿಸಿಕೊಂಡರು. ೨.೨೭ ಕುಟುಂಬಗಳಲ್ಲಿ ಆರು ಮತ್ತು ಅದಕ್ಕಿಂತ ಹೆಚ್ಚಿನ ಮಂದಿ ದುಡಿಮೆಯಲ್ಲಿ ತೊಡಗಿ ವರಮಾನದ ಪಾಲನ್ನು ನೀಡುತ್ತಾರೆ.

ಹೀಗಾಗಿ ಶೇ. ೬.೬೧ ರಷ್ಟು ಸದಸ್ಯರ ವಾರ್ಷಿಕ ಆದಾಯವು ರೂ. ೫೦೦೦ ರೂ.ಗಳೆಂದು ಅಂದಾಜು ಮಾಡಲಾಗಿದೆ. ಶೇ. ೩೮.೬೩ ರಷ್ಟು ಸದಸ್ಯರು ೬ ರಿಂದ ೧೦ ಸಾವಿರದ ವರೆಗೆ ಆದಾಯ ಹೊಂದಿರುತ್ತಾರೆ. ಶೇ. ೯.೦೯ ರಷ್ಟು ಸದಸ್ಯರ ವಾರ್ಷಿಕ ಆದಾಯವು ೧೧,೦೦೦ ರೂ.ಗಳಿಂದ ೧೫,೦೦೦ ಗಳೆಂದು ಹಾಗೂ ಶೇ. ೩೪.೦೯ ರಷ್ಟು ಸದಸ್ಯರ ವಾರ್ಷಿಕ ಆದಾಯವು ರೂ. ೧೫,೦೦೦ ಹಾಗೂ ಅದಕ್ಕೂ ಮೇಲ್ಪಟ್ಟಿರುವುದೆಂದು ತಿಳಿದುಬಂದಿದೆ. ಶೇ. ೨೫ ರಷ್ಟು ಸದಸ್ಯರ ಕುಟುಂಬ ಗಾತ್ರದ ಸಂಖ್ಯೆಯು ೨ ರಿಂದ ೪ ರಷ್ಟಿದ್ದರೆ, ಶೇ. ೫೨.೨ ರಷ್ಟು ಸದಸ್ಯರ ಕುಟುಂಬದ ಗಾತ್ರ ೫ ರಿಂದ ೮ ಮಂದಿಯನ್ನೊಳಗೊಂಡಿದೆ. ಶೇ. ೧೩.೬೩ ರಷ್ಟು ಸದಸ್ಯರ ಕುಟುಂಬ ಗಾತ್ರ ೯ ರಿಂದ ೧೨ ಮಂದಿಯಿದ್ದರೆ, ಶೇ. ೬.೮೧೪ ರಷ್ಟು ಸದಸ್ಯರ ಕುಟುಂಬ ಸಂಖ್ಯೆ ೧೩ ಹಾಗೂ ಅದಕ್ಕಿಂತ ಹೆಚ್ಚಿನದೆಂದು ತಿಳಿದುಬಂದಿದೆ. ಶೇ. ೪೦.೯೦ ರಷ್ಟು ಸದಸ್ಯರು ತಮ್ಮ ಗ್ರಾಮಪಂಚಯತ್ ಸದಸ್ಯತ್ವದ ಜೊತೆ ಇಲ್ಲವೇ ಅವರ ಕುಟುಂಬ ಸದಸ್ಯರು ಇತರೆ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿರುತ್ತಾರೆ. ಒಣಭೂಮಿ ಪಂಚಾಯತ್ ವ್ಯಾಪ್ತಿಯ ಈ ಸದಸ್ಯರುಗಳ ಪೈಕಿ ಶೇ. ೮೪.೦೯ ರಷ್ಟು ಮಂದಿ ಕುಡಿಯುವ ನೀರಿಗೆ ಸಾರ್ವಜನಿಕ ನಳವನ್ನು, ಶೇ. ೪.೫೪ ರಷ್ಟು ಮಂದಿ ಬೋರು ನೀರನ್ನು ಹಾಗೂ ಶೇ. ೪.೫೪ ರಷ್ಟು ಮಂದಿ ಇತರೆ ಮೂಲಗಳಿಂದ ಕುಡಿಯುವ ನೀರನ್ನು ಬಳಸುತ್ತಾರೆ. ಶೇ. ೯.೦೯ ರಷ್ಟು ಮಂದಿ ಸದಸ್ಯರು ಮಾತ್ರ ಶೌಚಾಲಯ ಸೌಲಭ್ಯವನ್ನು ಹೊಂದಿದ್ದಾರೆ. ರಾಜಕೀಯ ಪ್ರವೇಶ ಅಥವಾ ಗ್ರಾಮಪಂಚಾಯತ್ ಸದಸ್ಯರಾಗಿ ಚುನಾವಣೆಗೆ ಸ್ಪರ್ಧಿಸಲು ಕಾರಣವಾದ ಅಂಶಗಳನ್ನು ಶೋಧಿಸಿದಾಗ ಶೇ. ೫೪.೫೪ ಮಂದಿ ಸ್ನೇಹಿತರು ಮತ್ತು ಸಮುದಾಯದಿಂದ ಪ್ರೇರಿತರಾದರೆ, ಶೇ. ೨೯.೫೪ ರಷ್ಟು ಸದಸ್ಯರು ರಾಜಕೀಯ ವ್ಯಕ್ತಿಗಳ ಸಂಪರ್ಕದಿಂದ ಆಯ್ಕೆಯಾಗಲು ಇಲ್ಲವೇ ಸ್ಪರ್ಧಿಸುವಂತೆ ಪ್ರಭಾವಿತರಾಗಿರುವರು ಎಂದು ತಿಳಿಸುತ್ತಾರೆ.

ಈಗ ಮೂರನೇ ಹಂತದಲ್ಲಿ ನೀರಾವರಿ ಮತ್ತು ಒಣ ಪ್ರದೇಶಗಳ ಒಟ್ಟು ೬ ಗ್ರಾಮಪಂಚಾಯತಿ ಸದಸ್ಯರುಗಳನ್ನು ಹೊಸಪೇಟೆ ತಾಲೂಕು ಪಂಚಾಯತಿಗೆ ಅನುಗುಣವಾಗುವಂತೆ ಪರಿಗಣಿಸಿ ಇವರ ಸಾಮಾಜಿಕ ಆಯಾಮಗಳನ್ನು ವಿಶ್ಲೇಷಿಸೋಣ. ಇದರಲ್ಲಿ ಒಟ್ಟು ೪೦ ಮಹಿಳಾ ಸದಸ್ಯರು ಮತ್ತು ೫೬ ಪುರುಷರು ಸೇರಿದಂತೆ ಒಟ್ಟು ೯೬ ಮಂದಿ ಗ್ರಾಮಪಂಚಾಯತಿ ಸದಸ್ಯರ ಸಾಮಾಜಿಕ ಆಯಾಮಗಳ ಕುರಿತು ಬೆಳಕು ಚೆಲ್ಲಲು ಪ್ರಯತ್ನಿಸಲಾಗಿದೆ. ಒಟ್ಟು ಸೂಚಿಗಳ ಪ್ರಮುಖ ವಿವರಗಳನ್ನು ಕೊನೆಯಲ್ಲಿ ನೀಡಲಾಗಿರುವ (ಕೋಷ್ಟಕ ೧ ರಿಂದ ೧೩) ಗಮನಿಸಬಹುದು. ಒಟ್ಟು ಸದಸ್ಯರಲ್ಲಿ ಶೇ. ೨೨.೯೧ ಮಂದಿ ಗ್ರಾಮಪಂಚಾಯತಿ ಅಧ್ಯಕ್ಷರಾದರೆ, ಶೇ. ೧೪.೫೮ ಮಂದಿ ಉಪಾಧ್ಯಕ್ಷರು ಹಾಗೂ ಶೇ. ೬೦.೫೧ ರಷ್ಟು ಮಂದಿ ಗ್ರಾಮಪಂಚಾಯತಿ ಸದಸ್ಯರಾಗಿರುತ್ತಾರೆ. ಶೇ. ೪.೧೬ ರಷ್ಟು ಸದಸ್ಯರು ಒಣಭೂಮಿ ಹಿಡುವಳಿದಾರರಾದರೆ ಶೇ. ೭೧.೮೭ ರಷ್ಟು ಸದಸ್ಯರು ನೀರಾವರಿ ಭೂಮಿಯನ್ನು ಹೊಂದಿರುತ್ತಾರೆ. ಇವರೆಲ್ಲರನ್ನು ನೀರಾವರಿ ಪ್ರದೇಶದ ಸದಸ್ಯರೆಂದು ಭಾವಿಸುವ ಹಾಗಿಲ್ಲ. ಯಾಕೆಂದರೆ ಒಣಭೂಮಿ ಪ್ರದೇಶದಲ್ಲೂ ಪಂಪುಸೆಟ್ ಇಲ್ಲವೇ ಬೇರೆ ವಿಧಾನಗಳ ಮೂಲಕ ನೀರುಣಿಸಿ ಕೃಷಿಯಲ್ಲಿ ನಿರತರಾಗಿರುವ ಸದಸ್ಯರಿದ್ದಾರೆ. ವಿಷಾದದ ಸಂಗತಿಯೆಂದರೆ ಶೇ. ೧೫.೬೨ ರಷ್ಟು ಮಂದಿ ಮೇಲಿನ ರೀತಿಯಲ್ಲಿ ವರ್ಗೀಕರಣಕ್ಕೊಳಪಡುವ ಯಾವುದೇ ಭೂಮಿಯನ್ನು ಹೊಂದಿರುವುದಿಲ್ಲ. ಇರುವ ಸೂರು ಬಿಟ್ಟರೆ ಭೂಹಿಡುವಳಿ ಅಥವಾ ಭೂಮಿ ಹೊಂದುವಿಕೆಗೆ ಸಂಬಂಧಿಸಿದಂತೆ ಇವರಿಗೆ ಪರ್ಯಾಯವಾದ ವ್ಯವಸ್ಥೆ ಇಲ್ಲವೆನ್ನುವುದು ಗಮನಾರ್ಹವಾಗಿದೆ. ಹೀಗಾಗಿ ಶೇ. ೧೩.೫೪ ರಷ್ಟು ಸದಸ್ಯರು ಕೃಷಿಕಾರ್ಮಿಕರ ಯಾದಿಯಲ್ಲಿ ಕಂಡುಬರುತ್ತಾರೆ. ಈ ರೀತಿಯ ಹಂಚಿಕೆಯ ಪರಿಣಾಮವು ಒಣಭೂಮಿ ಪ್ರದೇಶದಲ್ಲಿ ಹೆಚ್ಚಿಗೆ ವ್ಯಕ್ತವಾಗುವುದು ವಿಶೇಷವಾಗಿದೆ. ಆದರೆ ಒಣಭೂಮಿ ಮತ್ತು ನೀರಾವರಿ ಪ್ರದೇಶದಲ್ಲಿ ಭೂಹಿಡುವಳಿ ಹೊಂದಿರುವ (ಭೂರಹಿತರನ್ನು ಹೊರತುಪಡಿಸಿ) ಸದಸ್ಯರು ಒಟ್ಟು ಸೇರಿ ಉದ್ಯೋಗವಾರು ಪರಿಗಣಿಸಿದಲ್ಲಿ ಕೃಷಿಕರೆಂದು ನಮೂದಿತರಾಗಿದ್ದಾರೆ. ಅಂದರೆ ಶೇ. ೪.೧೬ ಮತ್ತು ೭೧.೮೭ ಒಟ್ಟು ಸೇರಿ ಶೇ. ೭೬.೦೩ ಆಗುತ್ತದೆ. ಒಟ್ಟು ಸದಸ್ಯರ ೧.೦೪ ರಷ್ಟು ಮಂದಿ ಕೃಷಿಯೇತರ ಚಟುವಟಿಕೆ ಮತ್ತು ಶೇ. ೮.೩೩ ರಷ್ಟು ಮಂದಿ ಇತರೆ ವೃತ್ತಿ/ಉದ್ಯೋಗಗಳಲ್ಲಿ ತೊಡಗಿಸಿದ್ದಾರೆ. ಭೂರಹಿತರಾದ ಶೇ. ೧೫.೬೨ ರಷ್ಟು ಮಂದಿಯಲ್ಲಿ ಹೀಗಾಗಿ ಶೇ. ೧೩.೫೪ ರಷ್ಟು ಸದಸ್ಯರು ಕೃಷಿಕಾರ್ಮಿಕರಾಗಿಯೂ, ಉಳಿದ ೨.೮ ರಷ್ಟು ಭೂರಹಿತ ಸದಸ್ಯರು ಕೃಷಿಯೇತರ ಇಲ್ಲವೆ ಇತರೆ ವೃತ್ತಿಗಳಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದು ತಿಳಿಯಬಹುದು. ಅಂದರೆ ಸ್ಪಷ್ಟವಾಗಿ ಹೇಳುವುದಾದರೆ ಶೇ. ೨.೦೮ ರಷ್ಟು ಭೂರಹಿತ ಸದಸ್ಯರ ಪೈಕಿ ಕೆಲವರು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರೆ, ಹೆಚ್ಚಿನ ಪಾಲು ಇತರೆ ವೃತ್ತಿ ನಿರತರಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಕೃಷಿಯೇತರ ಚಟುವಟಿಕೆ ಎಂದರೆ ಕೃಷಿಗೆ ಪೂರಕವಾಗುವಂತೆ ಹೈನುಗಾರಿಕೆಯೂ ಆಗಬಹುದು. ಇಲ್ಲವೇ ಇತರೆ ಚಟುವಟಿಕೆಗಳೆಂದರೆ ಬೇಲ್‌ದಾರ್ ವೃತ್ತಿಯೂ ಆಗಬಹುದಾಗಿದೆ. ನಮ್ಮ ವಿಶ್ಲೇಷಣೆ ದೃಷ್ಟಿಯಿಂದ ಒಂದು ಗ್ರಾಮಪಂಚಾಯತಿಗೆ ಸಂಬಂಧಿಸಿದಂತೆ ಲಭ್ಯವಿರುವ ದಿನಗೂಲಿ ಕೆಲಸ ಮತ್ತು ಕೆಲಸ ದೊರೆಯುವ ಮಾನದಿನಗಳ ಲೆಕ್ಕವನ್ನು ನಿಖರವಾಗಿ ಹೇಳಲು ಕಷ್ಟವಾಗುತ್ತದೆ. ಇವೆಲ್ಲವೂ ಸರ್ಕಾರದ ಅಥವಾ ಗ್ರಾಮಪಂಚಾಯತಿ ನಿರ್ವಹಿಸಬಹುದಾದ ಕೆಲವು ಯೋಜನೆಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಲಭ್ಯವಿರುವ ಸಂಪನ್ಮೂಲ, ಗ್ರಾಮದ ಆದ್ಯತೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುವುದು.

ಈ ಆರು ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ವಲಸೆ ಪ್ರಭಾವವು ಬಹಳ ಕಡಿಮೆಯಿದೆ ಶೇ. ೪.೧೬. ಒಟ್ಟು ಸದಸ್ಯರ ಶೇ. ೫೬.೨೫ ರಷ್ಟು ಮಂದಿಯ ಕುಟುಂಬಗಳಲ್ಲಿ ಒಬ್ಬರಿಂದ ಇಬ್ಬರವರೆಗೆ ವರಮಾನ ಗಳಿಸತಕ್ಕ ಕುಟುಂಬ ಸದಸ್ಯರಿದ್ದರೆ, ಶೇ. ೪೩೭೫ ರಷ್ಟು ಸದಸ್ಯರ ಕುಟುಂಬಗಳಲ್ಲಿ ೩ ರಿಂದ ೪ ಮಂದಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಶೇ. ೪.೧೬ ರಷ್ಟು ಸದಸ್ಯ ಕುಟುಂಬಗಳಲ್ಲಿ ೫ ರಿಂದ ೬ ಮಂದಿ ವರಮಾನ ತರತಕ್ಕ ವೃತ್ತಿ, ಇತ್ಯಾದಿಗಳಲ್ಲಿ ತೊಡಗಿಸಿಕೊಂಡರೆ, ಶೇ. ೨.೦೮ ರಷ್ಟು ಸದಸ್ಯರ ಕುಟುಂಬಗಳಲ್ಲಿ ೬ ಮತ್ತು ಅದಕ್ಕಿಂತಲೂ ಹೆಚ್ಚಿನ ಮಂದಿ ಇವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದಸ್ಯರ ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಂಡಾಗ ಶೇ. ೧೭.೭೦ ರಷ್ಟು ಸದಸ್ಯರ ವಾರ್ಷಿಕ ಆದಾಯ ರೂ. ೫,೦೦೦ ರೂ.ಗಳಿದ್ದರೆ, ಶೇ. ೫೦ ರಷ್ಟು ಸದಸ್ಯರ ವಾರ್ಷಿಕ ಆದಾಯವು ರೂ. ೬.೦೦೦ ಗಳಿಂದ ರೂ. ೧೦,೦೦೦ ಗಳೆಂದು, ಶೇ. ೫.೨೦ ರಷ್ಟು ಸದಸ್ಯರ ಆದಾಯವು ೧೧,೦೦೦ ರೂ.ಗಳಿಂದ ೧೫,೦೦೦ ಮತ್ತು ಅದಕ್ಕೆ ಮೇಲ್ಪಟ್ಟು ಇರುವುದೆಂದು ತಿಳಿದುಬಂದಿದೆ. ಒಟ್ಟು ಸದಸ್ಯರ ಕುಟುಂಬ ಗಾತ್ರವನ್ನು ಗಮನಿಸಿದಲ್ಲಿ ಶೇ. ೧೮.೭೫ ರಷ್ಟು ಸದಸ್ಯರ ಕುಟುಂಬದ ಸಂಖ್ಯೆ ೨ ರಿಂದ ೪ ಜನಗಳನ್ನೊಳಗೊಂಡರೆ, ಶೇ. ೫೪.೧೬ ರಷ್ಟು ಸದಸ್ಯರ ಕುಟುಂಬ ಗಾತ್ರ ೫ ರಿಂದ ೮ ಮಂದಿಯನ್ನೊಳಗೊಂಡಿದೆ. ಶೇ. ೨೧.೮೭ ರಷ್ಟು ಪ್ರತಿನಿಧಿಗಳ ಕುಟುಂಬ ಸದಸ್ಯರ ಸಂಖ್ಯೆಯು ೯ ರಿಂದ ೧೨ ಆಗಿದ್ದರೆ, ಶೇ ೩.೧೨ ರಷ್ಟು ಸದಸ್ಯರ ಕುಟುಂಬ ಗಾತ್ರದ ಸಂಖ್ಯೆ ೧೩ ಮತ್ತು ಅದಕ್ಕಿಂತ ಹೆಚ್ಚಿನದೆಂದು ತಿಳಿದುಬಂದಿದೆ. ಶೇ. ೩೮.೫೯ ರಷ್ಟು ಸದಸ್ಯರು ತಮ್ಮ ಗ್ರಾಮಪಂಚಾಯತಿ ಪ್ರಾತಿನಿಧ್ಯದ ಜೊತೆಗೆ ಇಲ್ಲವೇ ಇವರ ಕುಟುಂಬದ ಸದಸ್ಯರುಗಳು ಇತರೆ ಸಂಘ ಸಂಸ್ಥೆಗಳ ಸದಸ್ತ್ವವನ್ನು ಹೊಂದಿರುತ್ತಾರೆ. ಶೇ. ೫೪.೧೬ ರಷ್ಟು ಸದಸ್ಯರು ಕುಡಿಯುವ ನೀರಿಗಾಗಿ ಟ್ಯಾಂಕ್ ನೀರನ್ನು, ಶೇ. ೩೮.೫೪ ರಷ್ಟು ಸದಸ್ಯರು ಸಾರ್ವಜನಿಕ ನಳವನ್ನು ಹಾಗೂ ಶೇ. ೨.೦೮ ರಷ್ಟು ಸದಸ್ಯರು ಬೋರುನೀರು ಹಾಗೂ ಇದೇ ಪ್ರಮಾಣದ ಸದಸ್ಯರು ಇತರ ಮೂಲಗಳಿಂದ ಕುಡಿಯುವ ನೀರನ್ನು ಬಳಸುತ್ತಾರೆ. ಶೇ. ೩೫.೪೧ ರಷ್ಟು ಸದಸ್ಯರು ಮಾತ್ರ ಶೌಚಾಲಯವನ್ನು ಹೊಂದಿದ್ದಾರೆ ಎಂದು ತಿಳಿದುಬರುತ್ತದೆ. ಹಾಗೆಯೇ ಒಟ್ಟು ಸದಸ್ಯರ ಪಂಚಾಯತ್ ಸದಸ್ಯತ್ವ ಅಥವಾ ರಾಜಕೀಯ ಪ್ರವೇಶಕ್ಕೆ ಕಾರಣೀಭೂತ ಅಂಶಗಳನ್ನು ಪರಿಶೀಲಿಸಿದಲ್ಲಿ ಶೇ. ೬೦.೪೧ ರಷ್ಟು ಸದಸ್ಯರು ಸ್ನೇಹಿತರು/ ಸಮುದಾಯ ಪ್ರೇರಣೆಯಿಂದಾಗಿ ಸದಸ್ಯತ್ವ ಅಥವಾ ರಾಜಕೀಯ ಪ್ರವೇಶ ಪಡೆದಿರುವುದಾಗಿಯೂ, ಶೇ. ೧೬.೬೬ ರಷ್ಟು ಸದಸ್ಯರು ರಾಜಕೀಯ ಪಕ್ಷಗಳ ಸಂಪರ್ಕದಿಂದಲೂ, ಶೇ. ೭.೨೯ ಮಂದಿ ತಾವು ರಾಜಕೀಯ ಪಕ್ಷಗಳ ಕಾರ್ಯಕರ್ತ ರಾದುದರಿಂದ ಅನುಕೂಲಕರವಾಯಿತೆಂದು ಮತ್ತು ಶೇ. ೧೭.೭೦ ರಷ್ಟು ಸದಸ್ಯರು ಮಾತ್ರ ಮೀಸಲಾತಿಯಿಂದ ತಾವು ಪಂಚಾಯತ್ ವ್ಯವಸ್ಥೆಯಲ್ಲಿ ಸದಸ್ಯತ್ವ ಇಲ್ಲವೇ ರಾಜಕೀಯ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿರುತ್ತಾರೆ.