ನಾಗರಹಾವೇ ! ಹಾವೊಳು ಹೂವೆ !
ಬಾಗಿಲ ಬಿಲದಲಿ ನಿನ್ನಯ ಠಾವೆ !
ಕೈಗಳ ಮುಗಿವೆ
, ಹಾಲನ್ನೀವೆ !
ಬಾ ಬಾ ಬಾ ಬಾ ಬಾ ಬಾ ಬಾ ಬಾ
||||

ಹಳದಿಯ ಹೆಡೆಯನು ಬಿಚ್ಚೋ ಬೇಗ !
ಹೊಳಹಿನ ಹೊಂದಲೆ ತೂಗೋ ನಾಗಾ!
ಕೊಳಲನ್ನೂದುವೆ ಲಾಲಿಸು ರಾಗಾ
|
ನೀ ನೀ ನೀ ನೀ ನೀ ನೀ ನೀ ನೀ ನೀ ನೀ
||||
……………………………………………….

ಎಷ್ಟು ಸುಂದರವಾದ ಕವನ, ಅಲ್ಲವೆ? ನಾಗರ ಹಾವು ಕಣ್ಣಿನ ಮುಂದೆ ಇದೆಯೋ ಎನ್ನಿಸುತ್ತದೆ. ಶಬ್ದಗಳು ಸುಲಲಿತವಾಗಿ ಒಂದನ್ನೊಂದು ಹಿಂಬಾಲಿಸುತ್ತವೆ. ಕಣ್ಣಿಗೆ ಚಿತ್ರ, ಕಿವಿಗೆ ಇಂಪು. ಇಂತಹ ಅನೇಕ ಸುಂದರ ಕವನಗಳನ್ನೂ ಕಥೆಗಳನ್ನೂ “ಕವಿಶಿಷ್ಯ” ಎಂಬ ಹೆಸರಿನಿಂದ ಬರೆದರು ಶ್ರೀ ಮಂಗೇಶರಾಯರು. ಕನ್ನಡ ಸಾಹಿತ್ಯಕ್ಕೆ ಬಹಳ ಸೇವೆ ಮಾಡಿದ ಹಿರಿಯರು.

ಬಾಲ್ಯ -ಶಿಕ್ಷಣ ಮತ್ತು ಜೀವನ ಪರಿಚಯ

ಪಂಜೆ ಮಂಗೇಶರಾಯರು ದಕ್ಷಣ ಕನ್ನಡ ಜಿಲ್ಲೆಯ ಬಂಟವಾಳ ಗ್ರಾಮದಲ್ಲಿ ೧೮೭೪ರ ಫೆಬ್ರುವರಿ ೨೨ರಂದು ಸಾರಸ್ವತರ ಮನೆತನದಲ್ಲಿ ಜನಿಸಿದರು. ಇವರ ಪೂರ್ವಜರ ನಿವಾಸ ಸುಬ್ರಹ್ಮಣ್ಯದ ಸಮೀಪದಲ್ಲಿರುವ ಪಂಜೆ ಗ್ರಾಮವಾಗಿತ್ತು; ಇದರಿಂದ ಇವರ ಮನೆತನಕ್ಕೆ “ಪಂಜೆ” ಎಂದು ಹೆಸರು.

ಇವರ ತಂದೆ ರಾಮಪ್ಪಯ್ಯ; ತಾಯಿ ಶಾಂತಾದುರ್ಗಾ ಅಥವಾ ಸೀತಮ್ಮ. ತಂದೆ ಶಾನುಭೋಗರು. ಸ್ವಭಾವದಿಂದ ಸರಳ ಜೀವಿಗಳು, ದೇಶಭಕ್ತರು. ವಾತ್ಸಲ್ಯಮಯಿಮ ಸೌಜನ್ಯಶೀಲಳಾದ ತಾಯಿ, ಪಂಜೆಯವರ ಬುದ್ಧಿ-ಶೀಲಗಳಿಗೆ ಪೋಷಕವಾಗಿ ಬಂದ ಪ್ರಭಾವಗಳೆಂದರೆ ಅವರ ತಾಯಿಯ ಪ್ರೀತಿ, ಶೀಲಗಳು, ತಾಯಿ ಮಗನಿಗೆ ಕಥೆಗಳನ್ನೂ ಹೇಳುತ್ತದ್ದಳು.

ಕಾವ್ಯ ಪ್ರೀತಿಯು ಅವರಲ್ಲಿ ಚಿಕ್ಕಂದಿನಿಂದಲೇ ಮೊಳೆಯತೊಡಗಿತ್ತು. ಆಟ-ಊಟದ ವೇಳೆಯನ್ನು ಕೂಡ ಅವರು ಶಬ್ದಗಳ ಜೋಡಣೆ, ಗಾದೆಗಳ ನಿರ್ಮಾಣದಲ್ಲಿಯೇ ಕಳೆಯುತ್ತಿದ್ದರು. ಅವರು ಕೊಂಕಣಿ ಭಾಷೆಯಲ್ಲಿ ಪ್ರಾಸವಿರುವಂತೆ ಶಬ್ದಗಳನ್ನು ಜೋಡಿಸುತ್ತಿದ್ದರು. ಉದಾಹರಣೆಗೆ :

ಆಂಬೋ ನಾತಿಲೊ ಜವಣ್ಣ”
          (ಮಾವಿನ ಹಣ್ಣಿಲ್ಲದ ಊಟ)
ಚೆಂಬು ನಾತಿಲೊ ಭಟ್ಟು”
          (ತಂಬಿಗೆ ಇಲ್ಲದ ಪುರೋಹಿತ)
ಖಾಂತ ನಾತಿಲೆ ಘರ”
          (ಕಂಬವಿಲ್ಲದ ಮನೆ)
ಎಂಬೊ ಚಾಬಿಲೆ ಮಣ್ಕೆ” ಸರ್ವಜ್ಞ
          (ಇರುವೆ ಕಚ್ಚಿದಂತೆ ಸರ್ವಜ್ಞ)

ಅವರು ಎಳೆತನದಲ್ಲಿ ಅನೇಕ ಕೊಂಕಣಿ ಹಾಡುಗಳನ್ನು ರಚಿಸಿದ್ದರಂತೆ. ತಿರುಗು ಮುರುಗು ಶಬ್ದಗಳ ನಿರ್ಮಾಣ ಅವರ ಇನ್ನೊಂದು ವಿನೋದವಾಗಿತ್ತು. ಎಡದಿಂದ ಎಡಕ್ಕೆ ಓದಲಿ ಒಂದೇ ಇರುವ ಶಬ್ದಗಳ ಮಾಲೆ ಎಂದರೆ ನಮಗೆಲ್ಲ ವಿನೋದ ಅಲ್ಲವೆ? ಉದಾಹರಣೆಗೆ “ಕುಬೇರನಿಗೇನಿರಬೇಕು?” ಇದನ್ನು ರಚಿಸಿದವರು-ಪಂಜೆಯವರು, ಇನ್ನೂ ಹುಡುಗನಾಗಿದ್ದಾಗ.

ಕಾವ್ಯದ ಕುರುಹು ಹೇಗೆ ಚಿಕ್ಕಂದಿನಿಂದಲೇ ತೋರುತ್ತಿತ್ತೋ ಅದೇ ರೀತಿ ಶಿಕ್ಷಕ-ಪ್ರವೃತ್ತಿಯೂ ಆಗಿನಿಂದಲೇ ಮೊಳೆದು ಬಂದಿತ್ತು. ಅವರಿಗೆ “ಶಾಲೆಯಾಟ” ಆಡುವುದೆಂದರೆ ತುಂಬ ಪ್ರೀತಿಯಾಗಿತ್ತು. ಅವರು, ಅವರ ಅಣ್ಣ-ತಮ್ಮಂದಿರು ಮತ್ತು ನೆರೆ-ಹೊರೆಯ ಬಾಲಕರು ಕೂಡಿ ಶಾಲೆಯಾಟವನ್ನು ಆಡುತ್ತಿದ್ದರು. ಶಾಲೆಯಾಟದಲ್ಲಿ ಅಧ್ಯಾಪಕರ ಪಾತ್ರವನ್ನು ಯಾವಾಗಲೂ ಮಂಗೇಶರಾಯರೇ ವಹಿಸುತ್ತಿದ್ದರಂತೆ.

ಶಾಲೆಯಾಟವಲ್ಲದೆ ಚಿಣ್ಣಿಕೋಲು, ಗೋಲಿ, ಗಜ್ಜುಗ, ಪಗಡೆ, “ಗಂಜೀಡು” ಎಂಬ ಬಗೆಯ ಇಸ್ಪೀಟು ಆಟ ಇವೆಲ್ಲ ಅವರಿಗೆ ಪ್ರಿಯವಾದ ಆಟಗಳಾಗಿದ್ದವು.  ಓದು-ಬರಹ, ಆಟ-ಪಾಠಗಳಲ್ಲಿ ವೇಳೆ ಕಳೆಯುವುದಲ್ಲದೇ ಧಾರ್ಮಿಕ ಉತ್ಸವಗಳಲ್ಲಿಯೂ ಭಾಗವಹಿಸುತ್ತಿದ್ದರು. ಇಷ್ಟೇ ಅಲ್ಲದೆ, ಅವರ ತಂದೆಯೇನೂ ಶ್ರೀಮಂತರಲ್ಲದ ಕಾರಣ ನೀರು ಸೇದುವುದು ಮೊದಲಾದ ಮನೆಕೆಲಸವನ್ನೂ ಹುಡುಗ ಮಂಗೇಶರಾವ್ ಮಾಡಬೇಕಾಗಿತ್ತು.

ಆ ಕಾಲದಲ್ಲಿ ಬಂಟವಾಳದಲ್ಲಿ ಪ್ರಾಥಮಿಕ ಶಾಲೆ ಮಾತ್ರವಿದ್ದುದ್ದರಿಂದ ಮಂಗೇಶರಾಯರು ಪ್ರೌಢಶಾಲೆ ಅಭ್ಯಾಸಕ್ಕಾಗಿ ಮಂಗಳೂರಿಗೆ ಹೋಗಬೇಕಾಯಿತು. ಅವರಿಗೆ ಊಟ-ವಸತಿಯ ಖರ್ಚಿಗೆ ಹಣವಿರಲಿಲ್ಲ. ಇದರಿಂದ ಅವರು ಅವರ ಬಂಧುಗಳೊಬ್ಬರಲ್ಲಿ ನಿಲ್ಲಬೇಕಾಯಿತು.

ವಿದ್ಯಾರ್ಥಿ ಜೀವನದಲ್ಲಿ ಅವರು ಸಹಿಸಿದ ಕಷ್ಟ ಕಾರ್ಪಣ್ಯಗಳು ಬಹಳ. ಇತರರಿಂದ ಸಾಲ ಪಡೆಯಬೇಕು, ಸಹಾಯವನ್ನು ಬೇಡಬೇಕು. ಅವರಿಂದ ಹಂಗಿನ ಮಾತುಗಳನ್ನು ಕೇಳಬೇಕು. ಇದೆಲ್ಲದರಿಂದ ಅವರ ಮನಸ್ಸು ರೋಸಿ ಹೋಯಿತು. ಸ್ವತಂತ್ರವಾಗಿ ಬದುಕಬೇಕು ಎಂದು ಮನಸ್ಸು ಹಾತೊರೆಯಿತು. ಪುಸ್ತಕಗಳನ್ನು ಕೊಳ್ಳಲು ದುಡ್ಡಿಲ್ಲ. ಇತರರಿಂದ ತಂದು, ಅವರು ಕೊಟ್ಟ ಕಾಲದಲ್ಲಿ ಓದಿ ಮುಗಿಸಬೇಕು. ರಾತ್ರಿ-ಇನ್ನೂ ವಿದ್ಯಚ್ಛಕ್ತಿ ಬೆಳಕಿಲ್ಲದ ದಿನಗಳಲ್ಲಿ ಸ್ವಲ್ಪ ಬೆಳಕಿನಲ್ಲೆ ಹುಡುಗ ಓದಿ ಮುಗಿಸುತ್ತಿದ್ದ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ಶಕ್ತಿ ಕಡಿಮೆಯಾಯಿತು.

ಮಂಗಳೂರಿನಲ್ಲಿ ಓದುತ್ತಿದ್ದಾಗಲೇ ತಂದೆಗೆ ಕಾಯಿಲೆ ಎಂದು ಸುದ್ದಿ ಬಂದಿತು. ತಂದೆ ಇದ್ದ ಬಂಟವಾಳ ಹದಿನಾರು ಮೈಲಿ ದೂರ. ಹುಡುಗ ಮಂಗೇಶ ಒಬ್ಬನೇ ನಡೆದುಕೊಂಡು ಊರು ಸೇರಿದ. ಆಗಲೇ ತಂದೆಯ ಬಾಳು ಆರುತ್ತಿತ್ತು. “ಒಳ್ಳೆಯ ರೀತಿಯಲ್ಲಿ ಬದುಕು; ಕೆಟ್ಟ ಕೆಲಸ ಮಾಡಬೇಡ; ಕುಡಿಯಬೇಡ; ಎಷ್ಟೇ ಕಷ್ಟ ಬಂದರೂ ತಮ್ಮ ತಂಗಿಯರ ಕೈಬಿಡಬೇಡ” ಎಂದು ಹೇಳಿ ತಂದೆ ಕಣ್ಮುಚ್ಚಿದರು.

ಸಾಲಕ್ಕಾಗಿ ಇದ್ದ ಸ್ವಲ್ಪ ಆಸ್ತಿಯೂ ಹೋಯಿತು. ಹದಿನಾರು ವರ್ಷದ ಹುಡುಗ ತನ್ನ ಸಂಪಾದನೆಯಿಂದ ಸಂಸಾರವನ್ನೂ ಸಾಗಿಸಿ, ಓದನ್ನೂ ಮುಂದುವರಿಸಬೇಕಾಯಿತು. ಆದರೂ ಹುಡುಗರಿಗೆ ಪಾಠಗಳನ್ನು ಹೇಳಿಕೊಟ್ಟು ಒಂದಿಷ್ಟು ಹಣ ಸಂಪಾದಿಸಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು.

೧೮೯೪ರಲ್ಲಿ ಎಫ್.ಎ. ತರಗತಿಯಲ್ಲಿ ಓದುತ್ತಿರುವಾಗಲೇ ಮದುವೆಯಾಯಿತು. ಅವರ ಪತ್ನಿ ಕನ್ನಡ ಕ್ಷೇತ್ರದಲ್ಲಿ ಹೆಸರಾದ ಬೆನಗಲ್ ರಾಮರಾಯರ ಸಹೋದರಿ ಗಿರಿಜಾಬಾಯಿ.

 

‘ಒಳ್ಳೆಯ ರೀತಿಯಲ್ಲಿ ಬದುಕು’.

ಎಫ್.ಎ. ಮುಗಿದ ಮೇಲೆ ಗಣಿತವನ್ನು ತೆಗೆದುಕೊಂಡು ಬಿ.ಎ. ಮಾಡುವ ಆಸೆ ಯುವಕ ಮಂಗೇಶನಿಗೆ. ಆದರೆ ಅದಕ್ಕೆ ಮದರಾಸಿಗೆ ಹೋಗಬೇಕು. ಹಣವಿಲ್ಲ. ಈ ಆಸೆ ಮಣ್ಣುಗೂಡಿ ಮಂಗಳೂರಿನ ಕಾಲೇಜಿನಲ್ಲೇ ಇತಿಹಾಸ ಮತ್ತು ಅರ್ಥಶಾಸ್ತ್ರಗಳನ್ನು ಐಚ್ಛಿಕವನ್ನಾಗಿ ತೆಗೆದುಕೊಂಡರು. ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತರಾದರು. ಆನಂತರ ಮಂಗೇಶರಾಯರು ಮದರಾಸಿಗೆ ಹೋಗಿ ಎಲ್.ಟಿ. ಪರೀಕ್ಷೆ ಮಾಡಲು ತೀರ್ಮಾನಿಸಿದರು. ಮದರಾಸಿನಲ್ಲಿ ಓದುವುದೆಂದರೆ ಖರ್ಚು, ಮದರಾಸಿಗೆ ಪ್ರಯಾಣವೇ ಕಷ್ಟವಾಗಿತ್ತು. ಅವರ ಹೆಂಡತಿ ಗರ್ಭಿಣಿ. ಇಬ್ಬರು ಮಕ್ಕಳು-ಐದು ವರ್ಷ ಮತ್ತು ಎರಡು ವರ್ಷಗಳವರು. ಕನ್ನಾನೂರವಗೆ ಎತ್ತಿನ ಗಾಡಿಯಲ್ಲಿ ದೋಣಿಯಲ್ಲ ಪ್ರಯಾಣ ! ಅಂತೂ ಕಷ್ಟಪಟ್ಟು ಮದರಾಸು ಸೇರಿದರು. ಅಲ್ಲಿ ಬಡತನ, ಕಷ್ಟ ಎಲ್ಲ ಸಹಿಸಿಕೊಂಡು ಎಲ್.ಟಿ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆಗ ಅವರಿಗೆ ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ೬೦ ರೂಪಾಯಿ ಸಂಬಳದ ಮೇಲೆ ಅಸಿಸ್ಟೆಂಟ್ ಉಪಾಧ್ಯಾಯರ ಕೆಲಸ ದೊರಕಿತು. ಆನಂತರ ಮಂಗಳೂರಿನಲ್ಲೂ ಆಮೇಲೆ ಕಾಸರಗೋಡಿನಲ್ಲೂ ಸಬ್ ಅಸಿಸ್ಟೆಂಟ್ ಇನಸ್ಪೆಕ್ಟರರಾಗಿ ಕೆಲಸ ಮಾಡಿದರು. ಹಲವು ಸ್ಥಾನಗಳಲ್ಲಿ ಕೆಲಸ ಮಾಡಿದ ನಂತರ ಅವರಿಗೆ ಕೊಡಗಿನ ಮಡಿಕೇರಿಗೆ ವರ್ಗವಾಯಿತು. ೧೯೨೮ರ ತನಕ ಮಡಿಕೇರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದು ನಿವೃತ್ತರಾದರು. ಆನಂತರ ಮಂಗಳೂರಿಗೆ ಬಂದು ನೆಲೆಸಿದರು. ಬಹುಮಂದಿಗೆ ನಿವೃತ್ತಿ ಎಂದರೆ ವಿರಾಮ. ಸರ್ಕಾರಿ ಕೆಲಸದಿಂದ ನಿವೃತ್ತಿ ಎಂದರೆ ವಯಸ್ಸಾಯಿತು, ಕೆಲಸ ಮಾಡುವ ಕಾಲ ಮುಗಿಯಿತು ಎಂದು ಸಾಮಾನ್ಯ ನಂಬಿಕೆ. ಆದರೆ ಪಂಜೆಯವರಿಗೆ ಸರ್ಕಾರಿ ಪಂಜೆಯವರಿಗೆ ಸರ್ಕಾರಿ ಕೆಲಸದಿಂದ ನಿವೃತ್ತಿ ಎಂದರೆ ಹೊಸ ಬಗೆಯ ಕೆಲಸಕ್ಕೆ ಹೆಚ್ಚು ಕಾಲಾವಕಾಶ ಎಂದೇ ಭಾವನೆ.

ನಿವೃತ್ತರಾಗುವ ಮುನ್ನ ಅವರು ರಜ ಪಡೆದರು. ಈ ಕಾಲದಲ್ಲಿ ಅವರು ಕರ್ನಾಟಕದಲ್ಲೆಲ್ಲ ಸಂಚರಿಸಿದರು. ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದರು. ಅನೇಕ ಸಾಹಿತಿಗಳನ್ನು ಕಂಡರು. ಕನ್ನಡ ಸಾಹಿತ್ಯ ಸೇವೆ ಮಾಡಲೂ ಈ ಕಾಲವು ಯೋಗ್ಯವಾಗಿತ್ತು. ಅವರು ಸಂಶೋಧನಾತ್ಮಕ ಲೇಖನಗಳನ್ನು ಬರೆದುದೂ ನಿವೃತ್ತಿಯಾದ ಮೇಲೇಯೇ.

ನಿವೃತ್ತಿಯಾಗುವವರೆಗೆ ಪಂಜೆಯವರ ಹೆಸರು ದಕ್ಷಣ ಕನ್ನಡವನ್ನು ದಾಟಿರಲಿಲ್ಲ. ಪಂಜೆಯವರನ್ನು ಕರ್ನಾಟಕದ ಜನತೆಗೆ ಪರಿಚಯ ಮಾಡಿಸಿದವರಲ್ಲಿ ಪ್ರೊ. ಬಿ.ಎಂ. ಶ್ರೀಕಂಠಯ್ಯನವರು ಮತ್ತು ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಪ್ರಮುಖರು.

೧೯೩೪ರಲ್ಲಿ ರಾಯಚೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆ ಸಮ್ಮೇಳನಕ್ಕೆ ಪಂಜೆಯವರು ಅಧ್ಯಕ್ಷರಾಗಿದ್ದರು. ಅವರು ಕೊಟ್ಟ ಅಧ್ಯಕ್ಷ ಭಾಷಣವು ವಿಚಾರಪೂರ್ಣವೂ ಬೋಧಕವೂ ಆಗಿದ್ದು ಕನ್ನಡ ಸಾಹಿತಿಗಳ ಮೆಚ್ಚುಗೆಯನ್ನು ಗಳಿಸಿತು. ಪಂಜೆಯವರ ಪರಿಚಯ ಎಲ್ಲರಿಗೆ ಆಗುವಂತಾಯಿತು.

ರಾಯಚೂರಿನ ಸಮ್ಮೇಳನವಾದ ನಂತರ ಅವರು ಕರ್ನಾಟಕ ಬಿಡುವಂತಾಯಿತು. ೨-೩ ವರ್ಷ ಪಾಟ್ನಾದಲ್ಲಿ ತಮ್ಮ ಒಬ್ಬ ಮಗನ ಮನೆಯಲ್ಲಿದ್ದು ಆನಂತರ ಇನ್ನೊಬ್ಬ ಮಗನ ಮನೆಗೆ ಹೈದರಾಬಾದಿಗೆ ಹೋದರು.

ಹೈದರಾಬಾದಿನಲ್ಲಿ ಹೆಚ್ಚು ಕಡಿಮೆ ಒಂದು ವರ್ಷ ಕಳೆದ ಮೇಲೆ ಅವರಿಗೆ ೫-೬ದಿನ ನ್ಯುಮೋನಿಯಾ ಜ್ವರ ಬಂದು ತಾ. ೨೫-೧೦-೧೯೩೭ರಂದು ತಮ್ಮ ೬೪ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು.

ಸರಳ ಜೀವಿ

ಪಂಜೆಯವರು ಏನೂ ಆಡಂಬರವಿಲ್ಲದ ಸರಳ ವ್ಯಕ್ತಿಗಳು. ಜೋಲು ನಿರಿ ಬಿಟ್ಟ ಧೋತರ, ಕಪ್ಪು ನಿಲುವಂಗಿ, ಜರಿ ರುಮಾಲು ಇವಿಷ್ಟೇ ಅವರು ಉಡುಪು. ಪಂಜೆಯವರು ಮಿತ ಆಹಾರಿಗಳು. ಒಂದಿಷ್ಟೂ ಅಹಂಭಾವವಿಲ್ಲದೇ ಬಾಳಿದವರು. ಅಹಂಕಾರ, ಹೆಮ್ಮೆ, ಬಿಗುವು ಇವೊಂದೂ ಅವರಲ್ಲಿರಲಿಲ್ಲ. ಸದಾ ಹಸನ್ಮುಖಿಗಳು. ಎಲ್ಲರಲ್ಲಿಯೂ ನಯದ ವರ್ತನೆ. ಮೂರು-ನಾಲ್ಕು ವರ್ಷದ ಮಕ್ಕಳೊಡನೆ ಕೂಡ ಆತ್ಮೀಯತೆಯಿಂದ ಮಾತನಾಡಿ ಅವರ ಮನದಿಂಗತವನ್ನು ತಿಳಿದುಕೊಳ್ಳುತ್ತಿದ್ದರು. ಬೇರೆಯವರ ಬಗ್ಗೆ ಅವರಿಗೆ ತುಂಬ ಸಹಾನುಭೂತಿ ಇತ್ತು. ಅವರ ನೆರವನ್ನು ಪಡೆಯಲು ಅಳುಕಿ ಅಳುಕಿ ಹೋದವರು “ಇವರು ಇಷ್ಟೊಂದು ಪ್ರೇಮಜೀವಿಯೇ!” ಎಂದು ಆಶ್ಚರ್ಯಪಟ್ಟಿದ್ದುಂಟು.

ಬದುಕಿನ ಕ್ರೂರ ನೋಟಗಳನ್ನು ಅವರು ಸಹಿಸಲಾರರಾಗಿದ್ದರು. ಅಂಥವು ಅವರನ್ನು ತುಂಬಾ ನೋಯಿಸುತ್ತಿದ್ದವು. ಸಾಧ್ಯವಾದರೆ ಅವುಗಳಿಂದ ದೂರವಾಗಿರುತ್ತಿದ್ದರು. ಒಮ್ಮೆ ಪ್ರಸಿದ್ಧ ಸಾಹಿತಿ ಡಾ.ಶಿವರಾಮ ಕಾರಂತರು ಅವರನ್ನು ಕುರಿತು, “ತಾತಾ ನಗರಕ್ಕೆ ಹೋದಾಗ ಅಲ್ಲಿಯ ಕಬ್ಬಣ ಕಾರ್ಖಾನೆ ನೋಡಿ ತಮಗೆ ಹೇಗೆನಿಸಿತು?” ಎಂದು ಕೇಳಿದರು. ಅದಕ್ಕೆ ಪಂಜೆಯವರು ನಕ್ಕು, “ನಾನು ಅದನ್ನು ನೋಡಲೇ ಇಲ್ಲ, ಅಂತಹದನ್ನು ನನ್ನಿಂದ ನೋಡಲಿಕ್ಕಾಗದು” ಎಂದರು. ಅವರ ಮನಸ್ಸು ಅಷ್ಟೊಂದು ಸೂಕ್ಷ್ಮವಾಗಿತ್ತು.

ಪಂಜೆಯವರ ಜೀವನದಲ್ಲಿ ಮುಖ್ಯ ಸೂತ್ರ ಒಂದಿತ್ತು: “ಇತರರನ್ನು ಅವಲಂಬಿಸಬೇಡ, ನಂಬಿದರೆ ನಮ್ಮ ಕೈ ನಮ್ಮ ತಲೆ ಮೇಲೆ.” ಇದಕ್ಕಾಗಿ ಎಷ್ಟು ಕಷ್ಟ ಬಂದರೂ ಅವರು ಸಾಲಕ್ಕೆ ಕೈ ಹಾಕುತ್ತಿರಲಿಲ್ಲ.

ಬಡವರಾಗಿಯೇ ಹುಟ್ಟಿದ ಅವರು ಸ್ವತಂತ್ರವಾಗಿ, ಗೌರವವಾಗಿ, ಇನ್ನೊಬ್ಬರ ಹಂಗಿಲ್ಲದೆ ಬಾಳಿದರು. ದೊಡ್ಡ ಕೆಲಸಗಳನ್ನು ಮಾಡಿದರೂ ಅದಕ್ಕಾಗಿ ಹೆಮ್ಮೆ ಪಡಲಿಲ್ಲ. ಬಹು ಕೀರ್ತಿವಂತರಾದರೂ ನಿರಾಡಂಬರವಾಗಿ ತಮ್ಮ ಪಾಲಿನ ಕರ್ತವ್ಯ ನೆರವೇರಿಸುತ್ತಾ ಸದ್ದಿಲ್ಲದೆ ಅದೃಶ್ಯರಾದರು.

ಹಾಸ್ಯಪ್ರಿಯರು

ಪಂಜೆಯವರು ಹಾಸ್ಯಪ್ರಿಯರು. ಒಳಗೊಳಗೆ ಎಷ್ಟು ಕಷ್ಟ-ಕಾರ್ಪಣ್ಯಗಳಿದ್ದರೂ ಬಾಯ್ತುಂಬ ನಗುತ್ತಿದ್ದರು. ಪತ್ರಿಕೆಯೊಳಗೆ ಮತ್ತು  ಪುಸ್ತಕದೊಳಗೆ ಪ್ರಕಟವಾದ ಹಾಸ್ಯಭರಿತ ತುಣುಕುಗಳನ್ನು ಆಗಾಗ ಓದಿ ತೋರಿಸಿ ಮಕ್ಕಳನ್ನು ನಗಿಸುತ್ತಿದ್ದರು. ಹಿರಿಯ ಸಾಹಿತಿಗಳಾದ ಡಿ.ವಿ. ಗುಂಡಪ್ಪನವರು ಅಂದಂತೆ “ಹಾಸ್ಯಪ್ರಧಾನ ರಸಿಕತೆ ಅವರನ್ನೆಂದೂ ಬಿಟ್ಟಿರುತ್ತಿರಲಿಲ್ಲ. ಗೋಷ್ಠಿಗೆ ತಕ್ಕಂತೆ ಅವರ ರಸಪಾಕ. ಮುದುಕರೆಂದರೆ ಮುದುಕರು, ಯುವಕರೆಂದರೆ ಯುವಕರು.”

ಚಿಕ್ಕಂದಿನಿಂದಲೂ ಅವರು ತುಂಬಾ ಹಾಸ್ಯಪ್ರಿಯರು. ಅವರ ಸಹಪಾಠಿಗಳು ಇ‌ದನ್ನು ತೋರಿಸುವ ಹಲವು ಘಟನೆಗಳನ್ನು ಹೇಳಿದ್ದಾರೆ.

“ಊರಿನ ಜಗಳಗಂಟ”ರೆಂದು ಹೆಸರಾದ ಶ್ಯಾಮರಾಯರೊಮ್ಮೆ ಊರಿನ ಸಮಾರಾಧನೆಗೆ ಬಂದಿದ್ದರು. ಶ್ಯಾಮಣ್ಣ ಎಂದು ಅವರನ್ನು ಕರೆಯುವುದು ರೂಢಿಯಾಗಿತ್ತು. ಅವರು ಯಾವಾಗಲೂ ಪಂಜೆಯವರನ್ನು ಮೂದಲಿಸುತ್ತಿದ್ದರು. ಆ ದಿನವೂ ಅದೇ ರೀತಿ ಮೂದಲಿಸಲಾಗಿ ಪಂಜೆಯವರು ಎದುರುತ್ತರವಾಗಿ, “ಜಗಳದ ಬೀಜಕ್ಕೆ ಯಾವ ಮಣ್ಣು?” ಎಂದು ಕೇಳಿದರು. ಅಲ್ಲಿ ಊಟಕ್ಕೆ ಕುಳಿತವರಿಗೆ ಏನೂ ಅರ್ಥವಾಗದೆ ಅದೇ ಪ್ರಶ್ನೆಯನ್ನು ಅವರು ಪಂಜೆಯವರಿಗೆ ತಿರುಗಿ ಕೇಳಿದರು. ಅದಕ್ಕೆ ಪಂಜೆಯವರು ಕೂಡಲೇ “ಶ್ಯಾಮಣ್ಣು” ಎಂದರು. ಇಡೀ ಸಭೆಯೇ ನಕ್ಕಿತು. ಶ್ಯಾಮರಾಯರ ಮುಖ ಸಪ್ಪಗಾಯಿತು.

ಪಂಜೆಯವರ ಮಾತೆಂದರೆ ಮಧುರ, ಮನಸ್ಸನ್ನು ಸೆಳೆದು ನಿಲ್ಲಿಸುವುದು. ಅವರ ಸ್ನೇಹಿತರಿಗೆಲ್ಲ ಅವರ ಮಾತನ್ನು ಕೇಳುವುದೇ ಒಂದು ಸಂತಸ.

ಶ್ರೇಷ್ಠ ನಟರು

ಪಂಜೆಯವರು ನಟ ಶ್ರೇಷ್ಠರಲ್ಲೊಬ್ಬರು. ಅವರು ಹುಟ್ಟು ನಟರಾಗಿದ್ದರೆಂದು ಹೇಳಬಹುದು. ಅವರ “ಬಾಲ್ಯ ಸ್ಮರಣೆ” ಎಂಬ ಪದ್ಯದಲ್ಲಿ ತಮ್ಮ ಬಾಲ್ಯದ ಆಟಗಳನ್ನೇ ಸ್ಮರಿಸಿ ಬರೆದಿದ್ದರೆಂದು ಅವರೇ ಹೇಳುತ್ತಿದ್ದರು.

ವೀರ ಕಚ್ಚೆಯ ಕೂದಲಿನ ಮೀಸೆ ಧರಿಸಿ
ಶ್ರೀರಾಮನೆಂದಾಡಿ “ಹಾ ! ಪ್ರಾಣದರಿಸಿ”
ಬಾ ! ರಮಣಿ ! ಎಂದು ನಾ ಕುಣಿದುದನು ಸ್ಮರಿಸ
ಹಾರುವುದು ಬಗೆಯು ಗೈದಂಗ ನರ್ತನವಾ
||

ಇಂಗ್ಲಿಷ್ ಮತ್ತು ಕನ್ನಡ ನಾಟಕ ಪ್ರಯೋಗಗಳಲ್ಲಿ ಅವರಿಗೆ ತುಂಬ ಪ್ರೀತಿ ಇತ್ತು. ನಾಡಕದ ಅಭಿರುಚಿ ಇದ್ದಂತೆ ಅವರಿಗೆ ಅಭಿನಯಿಸುವ ಆಸೆಯೂ ಬಹಳ. “ಚಂದ್ರಹಾಸ” ನಾಟಕದಲ್ಲಿ ಪಂಜೆಯವರು ದುಷ್ಟಬುದ್ಧಿಯ ಪಾತ್ರ ವಹಿಸಿ ತಮ್ಮ ಅಪ್ರತಿಮ ಅಭಿನಯ ಕಲಾ-ಕೌಶಲವನ್ನು ಪ್ರದರ್ಶಿಸಿದ್ದರು. ತಮ್ಮು ಮುಖಚರ್ಯ-ನಡೆ-ನುಡಿ ಅಭಿನಯಾದಿಗಳಲ್ಲಿ ಮೈ ಮರೆತು ತಾವು ಅಭಿನಯಿಸುವ ಪಾತ್ರದಲ್ಲಿ ತಲ್ಲೀನರಾಗಿರುತ್ತಿದ್ದರು.

ಶಿಕ್ಷಕರಾಗಿ

ಪಂಜೆ  ಮಂಗೇಶರಾಯರು ಹುಟ್ಟು ಉಪಾಧ್ಯಾಯರೆಂದು ಹೇಳಬಹುದು. ಅಂದರೆ ಎಳೆತನದಿಂದಲೇ ಅವರಲ್ಲಿ ಶಿಕ್ಷಣ ವೃತ್ತಿಗೆ ಬೇಕಾದ ಶೀಲ, ಗುಣಗಳು ಮೊಳೆತು ಬಂದಿದ್ದವು. ಆದರೆ ನಿಜವಾಗಿ ಆ ವೃತ್ತಿಯನ್ನು ಕೈಕೊಳ್ಳುವಂತೆ ಮಾಡಿದ ಪ್ರಸಂಗಗಳು ಮಾತ್ರ ಜೀವನದ ಕಷ್ಟನಿಷ್ಠುರಗಳು. ಕೊಡಗಿನ ಮಡಿಕೇರಿಯಲ್ಲಿನ ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯರಾಗಿ ಅವರು ಹೋದಾಗ ಅನೇಕರಿಗೆ ಸಂಶಯ-ಇವರು ಶಾಲೆಯನ್ನು ಸಮರ್ಥವಾಗಿ ನಡೆಸುವರೇ ಎಂದು. ಏಕೆಂದರೆ ಅಲ್ಲಿಯವರೆಗೆ ಅಲ್ಲಿ ಇಂಗ್ಲಿಷರೇ ಮುಖ್ಯೋಪಾಧ್ಯಾಯರಾಗಿದ್ದರು. “ನೀವು ಮುಖ್ಯೋಪಾಧ್ಯಾಯರಾಗಿ ಬಂದದ್ದು ನನಗೆ ಇಷ್ಟವಿಲ್ಲ” ಎಂದು ಅವರಿಗೆ ತರುಣ ಉಪಾಧ್ಯಾಯರು ಹೇಳಿದರು. ಆ ತರುಣ ಉಪಾಧ್ಯಾಯರದು ಸ್ವಲ್ಪ ಕಾಲದ ಸ್ಥಾನ. ಮಂಗೇಶರಾಯರೇ ಆ ಉಪಾಧ್ಯಯರು ಶಾಲೆಯಲ್ಲಿ ಉಳಿಯುವಂತೆ ಸ್ಥಾನ ಮಾಡಿಕೊಟ್ಟರು. ಅವರು ಇಂಗ್ಲೆಂಡಿಗೆ ಹೊರಟಾಗ ತುಂಬ ಅಭಿಮಾನದ ಮಾತುಗಳನ್ನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಅವರ ದುಡಿಮೆ-ಹಿರಮೆಗಳೆರಡೂಹೆಚ್ಚಿನವು. ಅವರು ಜೀವನದುದ್ದಕ್ಕೂ ತಮಗೆ ತಿಳಿದುದನ್ನು ಇನ್ನೊಬರಿಗೆ ಹೇಳಿಕೊಡುತ್ತಿದ್ದರು. ಈ ಗುಣದಿಂದಲೇ ಅವರು ಶಿಕ್ಷಕ ವೃತ್ತಿಗೆ ತಕ್ಕವರಾದರು. ಅವರಲ್ಲಿಯ ಶಿಕ್ಷಕರ ಗುಣ ಅಮೋಘವಾದುದು. ತಾವು ಹೇಳಲಿರುವ ವಿಷಯವನ್ನು ತುಂಬ ಸುಂದರವಾಗಿಯೊ ವಿವರಿಸುತ್ತಿದ್ದರು. ಅದಕ್ಕೆ ತಕ್ಕಂತೆ ಅವರ ಕಂಠವೂತುಂಬ ಮಧುರವಾಗಿತ್ತು.

ಉಪಾಧ್ಯಾಯರಾದ ಮೇಲೆ ಕಾಲೇಜಿನ ಹುಡುಗರಿಗೆ, ಪ್ರೌಢಶಾಲೆಯ ಹುಡುಗರಿಗೆ ಪಾಠ ಹೇಳಿದರು. ಆದರೆ ಅವರಿಗೆ ಅಭಿರುಚಿಯನ್ನುಂಟುಮಾಡಿದ ಶೈಕ್ಷಣಿಕ ವಿಷಯವೆಂದರೆ “ಶಿಶು ಶಿಕ್ಷಣ” ಶಿಶು ಶಿಕ್ಷಣದಲ್ಲಿ ರೂಢಿಯ ಶಿಕ್ಷಣವು ಯೋಗ್ಯವಲ್ಲವೆಂದು ಮನಗಂಡರು. ನೇರವಾದ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು.

ನೇರವಾದ ಶಿಕ್ಷಣದ ಹೆಚ್ಚಿನ ಬೆಳವಣಿಗೆಯಾದದ್ದು ಮಂಗಳೂರಿನ ಶಿಕ್ಷಕರ ಕಾಲೇಜಿನ ಜೊತೆಗೂಡಿಸಿದ ಮಾದರಿ ಶಾಲೆಯಲ್ಲಿ ನಿಜವಾಗಿಯೂ ಆ ಶಾಲೆ ಮಾದರಿಯೇ ಆಗಿತ್ತು. ಆಟ-ವಿಶ್ರಾಮಗಳ  ಆ ಶಾಲೆಯ ಮುಖ್ಯ ತತ್ವವೆನಿಸಿದ್ದು ಪಾಟಕ್ಕೂ ಆಟದ ರೂಪವನ್ನು ಕೊಡುವ ಪ್ರಯತ್ನ ನಡೆದಿತ್ತು. ಅನೇಕ ಬಗೆಯ ಹೂಗಿಡಗಳು, ಆಟದ ಸಾಮಾನುಗಳು ಚಿತ್ರ-ನಕ್ಷೆಗಳಲ್ಲದ ಮೂಲ, ಪಾರಿವಾಳ, ಗಿಳಿ ಮೂದಲಾದ ಸಾಕು ಪ್ರಾಣಿಗಳನ್ನು ಇರಿಸಿದ್ದರು. ನಿಜಕ್ಕೂ ಅದು “ಕಿಂಡಲ್ ಗಾರ್ಡನ್” ಅಥವಾ “ಮಕ್ಕಳ ತೋಟ” ಎನಿಸಿತ್ತು.

ಆಗಿನ ಕಾಲದಲ್ಲಿ ಮಕ್ಕಳಿಗೆ “ಶಾಲೆ” ಎಂದರೆ “ಬೆತ್ತ” ಎಂದೇ ಮನಸ್ಸು. ಮರುನುಡಿ ಕೊಡಿತ್ತಿತ್ತು. ಶಾಲೆಯ ಉಪಾಧ್ಯಾಯರಿಗೆ ಬೆತ್ತವೇ ಸಂಗಾತಿ ಎನಿಸಿತ್ತು. ಪಂಜೆಯವರು ಮಾಡಿದ ಶೈಕ್ಷಣಿಕ ಸುಧಾರಣೆಗಳಲ್ಲಿ ಮೂದಲಿನ ಕೆಲಸವೆಂದರೆ ಶಾಲೆಯಿಂದ ಬೆತ್ತವನ್ನು ಒಡಿಸಿದ್ದು. ಮಕ್ಕಳ ಶಿಕ್ಷಣದಲ್ಲಿ ಕಥೆಗಾರಿಕೆಗೆ ವಿಶೇಷ ಸ್ಥಾನವಿದೆ ಎಂದು ನಂಬಿದವರವರು. ಅದಕ್ಕಾಗಿಯೇ ಮಕ್ಕಳ ಕಥೆಗಳನ್ನು ಬರೆದು ಪ್ರಕಟಿಸಿದರು.

ಸುಮಾರು ಐದು ಅಡಿ ಏಳಂಗುಲದ ಎತ್ತರ ಪಂಜೆಯವರದು. ತಳ್ಳಗಿನ ವ್ಯಕ್ತಿ, ಮೈ ಬಣ್ಣ ಬಿಳಿ, ದಪ್ಪವಾದ ಮೀಸೆ. ಮಂಗೇಶರಾಯರು ತರಗತಿಗೆ ಪ್ರವೇಶಿಸಿದರೆಂದರೆ ವಿದ್ಯಾರ್ಥಿಗಳಿಗೆ ಒಂದು ಬಗೆಯ ಆನಂದವಾಗುತ್ತಿತ್ತು. ಅವರು ತರಗತಿಗೆ ಪ್ರವೇಶಿಸುವ ರೀತಿಯೂ ವಿಚಿತ್ರವಾಗಿತ್ತು. ಒಂದೊಂದು ವೇಳೆ ಎದುರಿನಿಂದ, ಒಂದೊಂದು ವೇಳೆ ಹಿಂದಿನಿಂದ ಆ ದಿನದ ಪಾಠವನ್ನು ಹಾಡುತ್ತ ಪ್ರವೇಶಿಸುತ್ತಿದ್ದರು. ತರಗತಿಯಲ್ಲಿ ಅವರಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಅಭ್ಯಾಸವಿರಲಿಲ್ಲ. ಮಧ್ಯಭಾಗದಲ್ಲಿ ನಿಂತುಕೊಂಡು ಪಾಠ ಹೇಳುವುದು ಅವರ ಕ್ರಮವಾಗಿತ್ತು.

ದೊಡ್ಡವರಿಗೆ, ಎಳೆಯರಿಗೆ ಎಲ್ಲರಿಗೂ ಸಾಹಿತ್ಯವನ್ನು ಕೊಟ್ಟ ಹಿರಿಯ ಸಾಹಿತಿ

ಮಕ್ಕಳಿಗೆ ಪಂಜೆಯವರ ಕಥೆಗಳು, ಕವನಗಳು ಎಂದರೆ ಬಲು ಖೂಷಿ. ಅವರ ಸುತ್ತ ನೆರೆದು ಕೇಳುತ್ತಿದ್ದರು. ಮನೆಯಲ್ಲಿ ತಮ್ಮ ಮಕ್ಕಳಿಗೂ ಕೂಡ ಅವರು ಗಣಿತ ಕಲಿಸುವುದು, ಕಥೆ ಹೇಳುವುದು, ಹಲವಾರು ಸ್ವಾರಸ್ಯಕರ ಘಟನೆಗಳನ್ನು ವಿವರಿಸುವುದು ಮೊದಲಾದುವನ್ನು ಮಾಡುತ್ತಿದ್ದರು. ಅವರ ಶಿಕ್ಷಣವು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾದುದಲ್ಲ. ಸಂದರ್ಭ ಸಿಕ್ಕಿದಲ್ಲೆಲ್ಲ ಅವರು ಕಲಿಸುವುದೇ ! ಕೆಲವೊಮ್ಮೆ ತಮ್ಮ ಮಕ್ಕಳೊಡನೆ ರಸ್ತೆಯಲ್ಲಿ ಹೋಗುವಾಗಲೂ ಒಂದು ಕಡೆ ನಿಂತು, ಮರಳಿನಿಂದ ಗೀಚುತ್ತ ನದಿಯ ಗತಿಯನ್ನೋ ಅಥಾವಾ ಊರಿನ ತಾಣವನ್ನೋ ಗುರುತಿಸಿದರೂ ಗುರುತಿಸಿದರೇ ! ಆಚೀಚೆಯ ಜನರು ಏನು ತಿಳಿದುಕೊಳ್ಳಬಹುದೆಂಬ ಸಂಕೋಚವೂ ಅವರಿಗೆ ಇದ್ದಿಲ್ಲ. ರಾತ್ರಿಯ ಹೊತ್ತು ಆಕಾಶದ ನಕ್ಷತ್ರಗಳೂ ಮತ್ತು ಗ್ರಹಗಳ ಪರಿಚಯ ಮಾಡಿಕೊಡುವರು.

ಪಂಜೆಯವರು ಉಪಾಧ್ಯಾಯರಾಗಿದ್ದಷ್ಟು ಕಾಲ ಉತ್ಸಾಹ, ಆಸಕ್ತಿ, ತನ್ಮಯತೆಗಳಿಂದ ಕೆಲಸ ಮಾಡಿದರು. ಶಿಕ್ಷಣವೇ ಅವರ ಪಾಲಿನ ಗುರಿಯಾಗಿತ್ತು. ಮಕ್ಕಳ ತರಗತಿಗೆ ಕಾಲಿರಿಸಿದರೆಂದರೆ ತಾವೇ ಮಕ್ಕಳಾಗುತ್ತಿದ್ದರು.

ಯಾವುದಾದರೊಂದು ವಿಷಯದ ಬಗ್ಗೆ ಉಪನ್ಯಾಸ ಕೊಡುವಾಗಲೂ ಅಷ್ಟೇ. ಉಪಚಾರದ ಪೀಠಿಕೆಯಿಲ್ಲದೆ ನೇರವಾಗಿ ಆ ವಿಷಯವನ್ನು ಬಣ್ಣಿಸುತ್ತಿದ್ದರು. ನಡು ನಡುವೆ ಹಾಸ್ಯ ಚಟಾಕಿಗಳಿಂದ ಪ್ರೇಕ್ಷಕರನ್ನು ನಗಿಸುತ್ತ ಸನ್ನಿವೇಶದಿಂದ ಸನ್ನಿವೇಶಕ್ಕೆ ಸಭೆಯನ್ನೇ ತಮ್ಮ ಜೊತೆಗೆ ಎಳೆದುಕೊಂಡು ಹೋಗುತ್ತಿದ್ದರು. ಸಮಯದ ಪರಿವೆಯೇ ಯಾರಿಗೊಬ್ಬರಿಗೂ ಆಗುತ್ತಿರಲಿಲ್ಲ. ನಿತ್ಯ ಜೀವನದಲ್ಲಿ ಜರುಗುವ ಘಟನೆಗಳನ್ನು ಹೇಳಿ ಕೇಳುವವರ ಹೃದಯವು ಮರುಕದಿಂದ ತುಂಬಿ ಕಣ್ಣೀರು ಸುರಿಸುವಂತೆ ಮಾಡುತ್ತಿದ್ದರು. ಅವರ ಮಾತುಗಳನ್ನು ಕೇಳುವವರೆಲ್ಲ ಮಂತ್ರಮುಗ್ಧರಾಗಿ ಕುಳಿತುಕೊಳ್ಳುತ್ತಿದ್ದರು.

ತರಗತಿಯಲ್ಲಿ ಇವರು ಗಂಭೀರರಾಗಿರುತ್ತಿದ್ದರೂ ಅಲ್ಲಿಂದ ಹೊರಗೆ ಬಂದ ಮೇಲೆ ತಾವು ಉಪಾಧ್ಯಾಯರೆಂದು ದೂರ ನಿಲ್ಲುತ್ತಿರಲಿಲ್ಲ. ವಿದ್ಯಾರ್ಥಿಗಳೊಡನೆ ಆಟ-ಪಾಠಗಳಲ್ಲಿ ಬಹು ಸ್ನೇಹಭಾವದಿಂದ ಇರುತ್ತಿದ್ದರು. ಹುಡುಗರೊಟ್ಟಿಗಿರುವಾಗ ಹುಡುಗಾಟಿಕೆಯಿಂದ ಸಂತೋಷವಾಗಿ ಕಾಲಕಳೆಯುತ್ತಿದ್ದರು.

ಒಂದು ದಿನ ಕಾಲೇಜಿಗೆ ರಜವಿತ್ತು. ಕೆಲವು ಹುಡುಗರು ಟೆನ್ನಿಸ್ ಆಡಿ ಕಾಫಿ ಕುಡಿಯಲು ಹೋಟೆಲಿಗೆ ಹೋದಾಗ ಅಲ್ಲಿ ಒಬ್ಬ ದಾಂಡಿಗ ಗೌಡನನ್ನು ಕಂಡರು. ಅವನ ಉಡುಪನ್ನು ಕಂಡರೆ ಅವನು ಅಂದೇ ಹೊಸದಾಗಿ ಮಂಗಳೂರಿಗೆ ಬಂದಂತಿತ್ತು! ಅವನ ಉಡುಪಿನಲ್ಲಿ ಶುಭ್ರವಾದುದು ಒಂದಂಗುಲ ಅಗಲವಾದ ಜರಿ ಪೇಟ ಒಂದೇ. ಅವನ ಪೇಟವನ್ನು ಕೆಳಗುರುಳಿಸಿದರೆ ತುಂಬ ತಮಾಷೆಯಾಗಿರುತ್ತದೆಂದು ಅವರೆಲ್ಲ ಮಾತನ್ನಾಡುತ್ತಿರುವಾಗ ಅಲ್ಲಿಗೆ ಮಂಗೇಶರಾಯರ ಆಗಮನವಾಯಿತು. ಅವರು ವಿಷಯ ತಿಳಿದು ’ಅಷ್ಟೆಯೇ, ಗೌಡನು ಸಿಟ್ಟಾಗದ ಹಾಗೆ ನಾನು ಅವನ ಪೇಟವನ್ನು ಕೆಡಿಸುತ್ತೇನೆ. ನನ್ನ  ಕಾಫಿಯ ಖರ್ಚು ನೀವು ಕೊಡುತ್ತೀರಾ?” ಎಂದರು. ವಿದ್ಯಾರ್ಥಿಗಳೆಲ್ಲರೂ ಒಪ್ಪದರು. ಆದಷ್ಟು ಬೇಗ ಪೇಟ ಉರುಳಿಸಬೇಕೆಂದು ಬಲವಂತ ಮಾಡಿದರು.

ಪಂಜೆಯವರು ಗೌಡನಲ್ಲಿಗೆ ಹೋದರು. ಅವನಿಗೆ ನಮಸ್ಕರಿಸಿ ಪರಿಚಯ ಮಾಡಿಕೊಂಡರು. ಅವನು ಊರು, ಮಂಗಳೂರಿಗೆ ಬಂದಿರುವ ಕಾರಣ, ಅವನ ಹೊಲಗಳ ಬೆಳೆ ಮುಂತಾದ ವಿಷಯಗಳ ಬಗ್ಗೆ ಸಂಭಾಷಣೆಯನ್ನು ಬೆಳೆಸಿದರು.

ಹೀಗೆ ಮಾತಿನಲ್ಲಿ ಮಗ್ನರಾದಾಗ ಒಮ್ಮೆಲೇ “ಸ್ವಾಮಿ, ಕ್ಷಮಿಸಿ ಚೇಳು! ಚೇಳು!” ಎಂದು ಕೂಗಿದರು. ಹೀಗೆ ಕೂಗುತ್ತಾ ಬಲವಾಗಿ ಕೈಯಿಂದ ಹೊಡೆದು ಗೌಡನ ಪೇಟವನ್ನು ಹಾರಿಸಿಯೇ ಬಿಟ್ಟರು. ಸುಮಾರು ದೂರದಲ್ಲಿ ಬಿದ್ದಿರುವ ಪೇಟವನ್ನು ಗೌಡನು ಅಂಜುತ್ತಾ ಎತ್ತಿ “ಸ್ವಾಮೀ, ನೀವು ಬಹಳ ಉಪಕಾರ ಮಾಡಿದಿರಿ. ಕೋರ್ಟಿಗೆ ಹೋಗುವ ಮೊದಲು ಚೇಳು ನನ್ನನ್ನು ಕಚ್ಚಿದ್ದರೆ ನನ್ನ ಕೆಲಸವೆಲ್ಲಾ ಕೆಟ್ಟು ಹೋಗುತ್ತಿತ್ತು” ಎಂದು ಕೃತಜ್ಞತೆನ್ನು ಅರ್ಪಿಸುತ್ತಾ ಆ ಪೇಟವನ್ನು ತಲೆಗೆ ಸುತ್ತಿಕೊಂಡನು.

ಪಂಜೆಯವರು ತಿರುಗಿ ಬಂದ ಕೂಡಲೇ ವಿದ್ಯಾರ್ಥಿಗಳೆಲ್ಲ ಅವರನ್ನು ಅಭಿನಂದಿಸಿದರು. ಆಗ ಪಂಜೆಯವರು “ನಿಮ್ಮಂತಹ ಮಂಗಗಳ ಈಶನಾಗಬಹುದೆಂತಲೇ ನನತೆ ’ಮಂಗೇಶ’ ಎಂದು ಹೆಸರಿಟ್ಟ ಹಾಗೆ ತೋರುತ್ತದೆ ಎಂದರು.

ಇನ್ ಸ್ಪೆಕ್ಟರ್ ಮಂಗೇಶರಾಯರು

ಪಂಜೆಯವರು ಎಲ್.ಟಿ. ಪರೀಕ್ಷೆ ಮುಗಿಸಿ ಮಂಗಳೂರಿಗೆ ಬಂದ ಕೆಲವೇ ಸಮಯದಲ್ಲಿ ಮಂಗಳೂರು ರೇಂಜಿನ ಸಬ್ ಅಸಿಸ್ಟೆಂಟ್ ಶಾಲಾ ಇನ್ ಸ್ಪೆಕ್ಟರರಾಗಿ ನೇಮಕಗೊಂಡರು. ಆ ಹೊಸ ನೌಕರಿಯಲ್ಲಿ ಒಂದೇ ಕಡೆ ಕೆಲಸ ಮಾಡುವುದಲ್ಲ. ಮಲೇರಿಯಾ ಪೀಡಿತ ಮೂಲೆ ಮೂಲೆಗಳನ್ನು ಸಂಚರಿಸಬೇಕಾಗಿತ್ತು. ಅದರಿಂದಾಗಿ ಅವರು ಒಮ್ಮೆ ಮಲೇರಿಯಾ ಬೇನೆಗೂ ಗುರಿಯಾದರು.

ಪಂಜೆಯವರ ಇನ್‌ಸ್ಪೆಕ್ಷನ್ ಅಂದರೆ ಪರೀಕ್ಷೆಗಿಂತಲೂ ಪಾಠ ಹೇಳುವುದೇ ಹೆಚ್ಚು. ತಮ್ಮ ಕರ್ತವ್ಯವನ್ನು ತಾವು ಮಾಡುವುದಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುವಾಗ ಹಳ್ಳಿಯ ’ಪಾಡ್ದೊನೆ’ (ಭೂತಾರಾಧನೆಯ ಹಾಡುಗಳು)ಗಳನ್ನು ಸಂಗ್ರಹಿಸುತ್ತಿದ್ದರು. ಸಾಮಾನ್ಯವಾಗಿ ಇನ್ ಸ್ಪೆಕ್ಟರು ಎಂದರೆ ಶಾಲೆಯ ಉಪಾಧ್ಯಾಯರಿಗೆ ಭಯ, ಅವರು ಶಾಲೆಯ ಪರೀಕ್ಷೆಗೆ ಬರುತ್ತಾರೆ ಎಂದರೆ ಹೆದರಿಕೆ. ’ಯಾವ ತಪ್ಪು ಹುಡುಕುತ್ತಾರೋ, ಏನು ಶಿಕ್ಷೆ ಮಾಡುತ್ತಾರೋ !’ ಎಂದು ಆತಂಕ. ಪಂಜೆಯವರು ಉಪಾಧ್ಯಾಯರ ಸ್ನೇಹಿತರಾದರು, ಹಿರಿಯಣ್ಣನಾದರು. ಇನ್ ಸ್ಪೆಕ್ಟರ ಮಾಡುವ ಶಾಲಾ ಪರೀಕ್ಷೆಯ ದಿನವನ್ನು ಉಪಾಧ್ಯಾಯರೆಲ್ಲ ಕಾಯುವಂತಾಯಿತು. ಪಂಜೆಯವರು ಬಡ ಉಪಾಧ್ಯಾಯರ ಜೀವನಕ್ಕೆ ಕಳೆ, ಸೊಗಸು ಬರುವಂತೆ ಮಾಡಿದರು. ಇನ್ಸಪೆಕ್ಟರರೆಂದರೆ ಉಪಾಧ್ಯಾಯರಿಗೆ ಎಷ್ಟೊಂದು ಪ್ರೀತಿ ಇತ್ತೆಂದರೆ ಅವರ ಸ್ನೇಹಪರವಾದ ಸವಿ ಮಾತುಗಳನ್ನು ಕೇಳಲು ಅವರನ್ನು ಮುಂದಿನ ಊರಿನ ತನಕ ತಲುಪಿಸಲು ಹೋಗುತ್ತಿದ್ದರು.

ಪಂಜೆಯವರು ಅವರಿಗೆ ತಮ್ಮಿಂದಾದಷ್ಟು ಸಹಕಾರ, ಸಹಾಯ ನೀಡಿದರು. ಅವರಿಗೂ ಆತ್ಮ ಗೌರವವಿದೆ ಎಂದು ತೋರಿಸಿಕೊಟ್ಟರು. ಅವರನ್ನು ’ನೀನು” ಎಂದು ಸಂಬೋಧಿಸದೆ ನೀವು ಎಂದು ಕರೆಯಲು ಪ್ರಾರಂಭಿಸಿದವರು ಇವರೇ!

‘ಕನ್ನಡ ಕನ್ನಡ ಎನ್ನುತ್ತಿರಿಲಿ’

‘‘ನನಗೀಗ ಇರುವುದು ಒಂದೇ ಆಸೆ -ನನ್ನ ಕಡೆಯ ಘಳಿಗೆಯಲ್ಲಿ ನನ್ನ ನಾಲಿಗೆ ‘ಕೃಷ್ಣ ಕೃಷ್ಣ’ ಎಂದು ನುಡಿಯುವಂತೆಯೇ ‘ಕನ್ನಡ ಕನ್ನಡ’ ಎಂದು ನುಡಿಯುತ್ತಿರಲಿ.

ಈ ಮಾತುಗಳನ್ನು ಆಡಿದವರು ಪಂಜೆ ಮಂಗೇಶರಾಯರು-೧೯೩೪ರಲ್ಲಿ ರಾಯಚೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾತನಾಡುವಾಗ.

ಪಂಜೆಯವರ ಮಾತುಗಳನ್ನು ಕೇಳಿದವರು ಚೇತರಿಸಿಕೊಳ್ಳಲು ಎರಡು ಘಳಿಗೆ ಬೇಕಾಯಿತು ಎಂದಿದ್ದಾರೆ. ಆ ಸಭೆಯಲ್ಲಿದ್ದ ಡಾ. ವಿ.ಗುಂಡಪ್ಪನವರು.

ನಲವತ್ತು ವರ್ಷಗಳ ನಂತರ ಈಗಲೂ ಈ ಮಾತುಗಳನ್ನು ಓದಿದಾಗ, ಎಂತಹ ಕನ್ನಡಪ್ರೇಮ! ಎಂದು ಮೂಕರಾಗುತ್ತೇವೆ.

ಈಗ ಕನ್ನಡದಲ್ಲಿ ಓದಲು ಬೇಕಾದಷ್ಟು ಒಳ್ಳೆಯ ಪುಸ್ತಕಗಳಿವೆ. ಮಕ್ಕಳಿಗೆ ಸಹ ಅವರಿಗೆ ಹಿಡಿಸುವಂತಹ, ಅರ್ಥವಾಗುವಂತಹ ಮುದ್ದಾದ ಪುಸ್ತಕಗಳು ಸಿಕ್ಕುತ್ತವೆ. ಕನ್ನಡ ನಾಡಿನಲ್ಲಿ ಸರ್ಕಾರ, ನಾಯಕರು ಎಲ್ಲರೂ ಕನ್ನಡ ಬಳಸುವುದು ಸಹಜ, ಇದಲ್ಲದೆ ಬೇರೆ ದಾರಿಯುಂಟೆ ಎನ್ನಿಸುತ್ತದೆ ಇಂದು. ನಮ್ಮ ರಾಷ್ಟ್ರಪತಿಗಳು ದೇಶವನ್ನು ಉದ್ದೇಶಿಸಿ ಆಕಾಶವಾಣಿಗಯಲ್ಲಿ ಭಾಷಣ ಮಾಡಿದರೆ, ಅವರ ಭಾಷಣ ಮುಗಿಯುತ್ತಲೇ ಕನ್ನಡದಲ್ಲಿ ಭಾಷಾಂತರ ಕೇಳುತ್ತೇವೆ.

ಪಂಜೆಯವರು ಕನ್ನಡ ಪಾಠ ಹೇಳುವುದಕ್ಕೆ, ಕನ್ನಡದಲ್ಲಿ ಬರೆಯುವುದಕ್ಕೆ ಪ್ರಾರಂಭಿಸಿದಾಗ, ಕನ್ನಡನಾಡಿನಲ್ಲೇ ಕನ್ನಡ ಯಾರಿಗೂ ಬೇಕಿಲ್ಲ ಎನ್ನುವ ಸ್ಥಿತಿ ಸರ್ಕಾರ ಬ್ರಿಟಿಷರದು; ಸರ್ಕಾರದ ಭಾಷೆ ಇಂಗ್ಲಿಷ್ ; ಪ್ರೌಢಶಾಲೆಯಿಂದ ಹಿಡಿದು ಪಾಠ ಕಲಿಸಲು ಬಳಸುವ ಭಾಷೆ ಇಂಗ್ಲಿಷ್. ವಿದ್ಯಾವಂತರಿಗೆ ಕನ್ನಡದಲ್ಲಿ ಮಾತನಾಡುವುದೇ ಅಪಮಾನ ಎಂಬ ಭಾವನೆ. ತಪ್ಪು ಇಂಗ್ಲಿಷ ಮಾತನಾಡಿ ತೃಪ್ತಿ ಪಟ್ಟುಕೊಳ್ಳುವದಲ್ಲದೆ ಶುದ್ಧ ಕನ್ನಡ ಬಳಸಲು ಮನಸ್ಸು ಮಾಡರು.

ಓದಬೇಕೆಂದರೆ ಪುಸ್ತಕಗಳೇ ಇಲ್ಲ. ಇವತ್ತು ಕಥೆ, ಕಾದಂಬರಿ ಎಂದರೆ  ನಮ್ಮ ಪುಸ್ತಕ ಭಂಡಾರಗಳಲ್ಲಿ ಎಷ್ಟು ಬೀರುಗಳಲ್ಲಿ ತುಂಬಿರುತ್ತವೆ. ಅಲ್ಲ? ಆಗ ಕಥೆ-ಕಾದಂಬರಿಗಳೇ ಇಲ್ಲ ಎನ್ನಬಹುದು. ೧೯೦೨ರ ಹೊತ್ತಿಗೆ  ಕನ್ನಡದಲ್ಲಿ ಬೆಳಕು ಕಂಡಿದ್ದದ್ದು ಹದಿನೇಳು ಹದಿನೆಂಟು ಕಾದಂಬರಿಗಳು; ಇವುಗಳಲ್ಲಿ ಎಷ್ಟೋ ಇಂಗ್ಲಿಷ್, ತೆಲುಗು, ಮರಾಠಿ ಮೊದಲಾದ ಭಾಷೆಗಳಿಂದ ಭಾಷಾಂತರ.

 

ಮಕ್ಕಳಿಗೆ ಪಂಜೆಯವರ ಕಥೆಗಳು, ಕವನಗಳು ಎಂದರೆ ಬಲು ಖುಷಿ

ಕನ್ನಡದಲ್ಲಿ ಸಣ್ಣ ಕಥೆಗಳಿರಲ್ಲಿ ಮಕ್ಕಳು ಓದುವಂತಹ ಕವನ-ಕಥೆಗಳು ಇರಲೇ ಇಲ್ಲ ಎನ್ನಬಹುದು.

ಇಂತಹ ಸನ್ನಿವೇಶದಲ್ಲಿ ಕನ್ನಡದಲ್ಲಿ ಸಣ್ಣ ಕಥೆಗಳನ್ನು ಬರೆದರು ಪಂಜೆಯವರು. ೧೯೦೦ರಲ್ಲಿ ಅವರ ಮೊದಲನೆಯ ಕಥೆ ನನ್ನ ಚಿಕ್ಕತಾಯಿ ಪ್ರಕಟವಾಯಿತು. ಮಕ್ಕಳಿಗಾಗಿ ಸಕ್ಕರೆಯಂತೆ ಸಿಹಿಯಾದ ಪದ್ಯಗಳನ್ನೂ ಕಥೆಗಳನ್ನೂ ಬರೆದರು.

ಸಾಹಿತ್ಯ ಸೇವೆ

ಪಂಜೆಯವರಿಗೆ ಸಾಹಿತ್ಯವೆಂದರೆ ಜೀವನದ ಒಂದು ಅಂಗವಾಗಿತ್ತು. ಜೀವನವೇ ಆಗಿತ್ತೆಂದರೂ ತಪ್ಪಿಲ್ಲ.

ಚಿಕ್ಕಂದಿನಿಂದಲೇ ಅವರಿಗೆ ಸಾಹಿತ್ಯದಲ್ಲಿ ಪ್ರೀತಿ ಇತ್ತು. ಕೊಂಕಣಿಯಲ್ಲಿ ಪುಟ್ಟ ಕವನಗಳನ್ನು ರಚಿಸಿ, ತಾಯಿಯ ಮುಂದೆ ಹಾಡಿದ್ದುಂಟು. ಅಂಥ ಅಭಿರುಚಿಯು ಬೆಳೆದು ಸುಮಾರು ೧೯೦೦ರಿಂದಲೇ ಅವರು ಸಾಹಿತ್ಯದ ರಚನೆಗೆ ತೊಡಗಿದ್ದರು. ವಿವಿಧ ಗುಪ್ತನಾಮಗಳಿಂದ ವೃತ್ತಪತ್ರಿಕೆಗಳಿಗೆ, ಮಾಸಪತ್ರಿಕೆಗಳಿಗೆ ಅವರು ಬರೆಯ ತೊಡಗಿದ್ದರು. ಮೊದ ಮೊದಲು ರಾಮಪಂ ಎಂಬ ಸಂಕೇತದಿಂದಲೂ, ಹರಟೆಮಲ್ಲ ಎಂಬ ಕಾವ್ಯನಾಮದಿಂದಲೂ ಬರೆಯ ತೊಡಗಿದ ಅವರು ಅನಂತರ ತಮ್ಮ ಹೆಸರನ್ನು ಕವಿಶಿಷ್ಯರೆಂದು ಬದಲಿಸಿಕೊಂಡರು. ಆ ಹೆಸರಿನಿಂದಲೇ ಚಿರಪರಿಚಿತರಾದರು.

ಬಾಸೆಲ್ ಮಿಷನ್ ಸಂಸ್ಥೆ ಪ್ರಕಟಿಸಿದ್ದ “ಸತ್ಯದೀಪಿಕೆ” ಯಲ್ಲಿ ಅವರ ಹಲವು ಕವನಗಳು,ಪ್ರಬಂಧಗಳು ಪ್ರಕಟವಾದವು. ಅದೇ ಪತ್ರಿಕೆಯಲ್ಲಿ “ಹರಟೆಮಲ್ಲ”ನೆಂಬ ಹೆಸರಿನಿಂದ ಅನೇಕ ವಿಡಂಬನಾತ್ಮಕ ಲೇಖನಗಳನ್ನು ಬರೆದರು.ಬೆನೆಗಲ್ ರಾಮರಾಯರ ಸಂಪಾದಕತ್ವದಲ್ಲಿ ಹೊರಡುತ್ತಿದ್ದ “ಸುವಾಸಿನಿ’ಯಲ್ಲಿ ಅವರ ಅನೇಕ ಲೇಖನಗಳು ಬೆಳಕು ಕಂಡವು.

ಅವರ ಸಣ್ಣ ಕಥೆಗಳಲ್ಲಿ ‘ನನ್ನ ಚಿಕ್ಕತಾಯಿ’, ‘ನನ್ನ ಚಿಕ್ಕ ತಂದೆ’, ‘ನನ್ನ ಚಿಕ್ಕ ತಂದೆಯವರ ಉಯಿಲ್’, ‘ಭಾರತ ಶ್ರವಣ’, ‘ನನ್ನ ಹೆಂಡತಿ’ ಮೊದಲಾದ ಹಾಸ್ಯ ಕಥೆಗಳು. ‘ಪೃಥುಲಾ’, ‘ಶೈಲಿನಿ’, ‘ದುರ್ಗಾವತಿ’ ಇವು ಐತಿಹಾಸಿಕ ಕಥೆಗಳು. ‘ಕಮಲ’, ‘ಭೀಷ್ಮ ನಿರ್ಯಾಣ’, ‘ಚಂದ್ರ’, ‘ಲಕ್ಷ್ಮೀಶ’ ಮೊದಲಾದವು ವೃತ್ತಬದ್ಧವಾದ ಕವನಗಳು ‘ಕಂಠೀರವ’ದಲ್ಲಿ ಪ್ರಕಟವಾದ ‘ಹಳೆಯ ಸಬ್ ಎಸಿಸ್ತಾಂಟನ ಸುಳ್ಳು ಡೈರಿಯಿಂದ’ ಮತ್ತು ‘ಸುವಾಸಿನಿ’ ಯಲ್ಲಿ ಪ್ರಕಟವಾದ ‘ಅಮ್ ನಹಿಂ ಗದ್ಧಾ’ (ನಾನು ಕತ್ತೆಯಲ್ಲವೆ) ಎಂಬ ಎರಡು ಲೇಖನಗಳು ನಗೆಯ ಬುಗ್ಗೆಗಳು. ‘ಸತ್ಯದೀಪಿಕೆ’ಯಲ್ಲಿ ಪ್ರಕಟವಾದ ‘ಹಲ್ಲಿ’ ಮತ್ತು ‘ಬಂದಣಿಕೆ’ ಎಂಬ ಪ್ರಬಂಧಗಳು ಉತ್ಕೃಷ್ಟವಾದವು.

ಅವರ ‘ಜೇಡನೂ-ನೊಣವೂ’, ‘ಅಣ್ಣನ ವಿಲಾಪ’, ‘ಡೊಂಬರ ಚೆನ್ನೆ’, ‘ಕಡೆಕಂಜಿ’ ಮೊದಲಾದ ಕಥನ-ಕವನಗಳು ‘ಸ್ವದೇಶಾಭಿಮಾನಿ’ಯಲ್ಲಿ ಪ್ರಕಟವಾದವು.  ಆಮೇಲೆ ಅವರು ತಾವು ರಚಿಸಿದ ಕವನಗಳನ್ನೂ ಇತರ ಕವಿಗಳ ರಚನೆಗಳನ್ನು ಕೂಡಿಸಿ ಬಾಸೆಲ್ ಮಿಷನ್ನಿನ ಪರವಾಗಿ ‘ಕನ್ನಡ ಪದ್ಯ ಪುಸ್ತಕ’ಗಳೆಂದು ಮೂರು ಭಾಗಗಳನ್ನು ಮಾಡಿ ಪ್ರಕಟಿಸಿದರು. ಅದರಲ್ಲಿ ಅವರು ಅನುವಾದಿಸಿದ ಕೆಲವು ಆಂಗ್ಲ ಕವನಗಳೂ ಇದ್ದವು. ಅವುಗಳಲ್ಲಿ ‘ಮಿನುಗೆಲೆ, ಮಿನುಗೆಲೆ ನಕ್ಷತ್ರ’, ‘ಮುರಳಿ ನೀ ತಮ್ಮನ ಕರೆಯಪ್ಪಾ’ ಇವು ಮುಖ್ಯವಾದವು.

ಲೇಖನ ಕವನಗಳನ್ನಲ್ಲದೆ ಕನ್ನಡ ಪಠ್ಯಪುಸ್ತಕಗಳಲ್ಲಿ ಅನೇಕ ಪಾಠಗಳನ್ನು ಬರೆದರು. ವ್ಯಾಕರಣ, ಭೂಗೋಳ ಮೊದಲಾದ ವಿಷಯಗಳ ಬಗ್ಗೆ ಪುಸ್ತಕಗಳನ್ನು ಬರೆದರು. ‘ಶಬ್ದಮಣಿದರ್ಪಣ’ದ ಮೂರನೇ ಆವೃತ್ತಿಯು ಇವರ ಸಾಮರ್ಥ್ಯಕ್ಕೆ ಸಾಕ್ಷಿ.

ಸಂಶೋಧನೆಯ ವಿಷಯದಲ್ಲೂ ಇವರಿಗೆ ತುಂಬಾ ಅಭಿರುಚಿ ಇತ್ತು. ಮಂಗಳೂರಿನಲ್ಲಿ ೧೯೨೭ರಲ್ಲಿ ನೆರೆದ ಸಾಹಿತ್ಯ ಪರಿಷತ್ತಿನ ಅಧಿವೇಶನ್ಕೆ ಒಪ್ಪಿಸಿದ ‘ಪಂಚಕಜ್ಜಾಯ’ ದಲ್ಲಿ ಅವರು ಬರೆದ ‘ಮೂಡಬಿದರೆಯ ಹೊಸ ಬಸದಿಯ ಶಿಲಾಶಾಸನಗಳು’ ಮತ್ತು ‘ರಾಷ್ಟ್ರಬಂಧು’ವಿನಲ್ಲಿ ಬರೆದ ‘ಬಿಳಗಿ ಅರಸರ ವಂಶಾವಳಿಗಳು’, ೧೯೩೧ರಲ್ಲಿ ‘ಸ್ವದೇಶಾಭಿಮಾನಿ’ಯಲ್ಲಿ ಬರೆದ ‘ಸ್ಥಳನಾಮ’ ಮತ್ತು ‘ಕಂಠೀರವ’ದಲ್ಲಿ ಬರೆದ ‘ಪದಾರ್ಥವೇನು’ ಇವು ಅವರ ಸಂಶೋಧನಾತ್ಮಕ ಲೇಖನಗಳು.

ಬಾಲಸಾಹಿತ್ಯ ಪಿತಾಮಹ

ಪಂಜೆ ಮಂಗೇಶರಾಯರು ಬಾಲಸಾಹಿತ್ಯದ ಪಿತಾಮಹರು. ಅವರು ಶಿಕ್ಷಣ ಕ್ಷೇತ್ರದಲ್ಲಿ ನೀಡುವ ಸಾಹಿತ್ಯದ ಕೊರತೆ ಕಂಡುಬಂತು. ಈ ಕೊರತೆಯನ್ನು ಹೋಗಲಾಡಿಸುವುದರ ಸಲುವಾಗಿ ಅವರು ಬಾಲ ಸಾಹಿತ್ಯದಲ್ಲಿ ತೊಡಗಿದರು. ಬಾಲಸಾಹಿತ್ಯದ ಪ್ರಕಟಣಾ ಕಾರ್ಯಕ್ಕೆ ‘ಬಾಲ ಸಾಹಿತ್ಯ ಮಂಡಲ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಮಕ್ಕಳಿಗಾಗಿ ತಾವು ಕವನ ಬರೆದರಲ್ಲದೆ ಮಕ್ಕಳಿಗೆ ಕಲಿತು ಹಾಡಲು ಸಾಧ್ಯವಾಗುವಂಥ ನೂರಾರು ಪದ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಹಾಡಿ ತೋರಿಸಿ, ಕಲಿಸಿ ಪ್ರಚಾರ ಮಾಡಿದರು. ಅವರ ಕವನಗಳು ಒಂದಕ್ಕಿಂತ ಒಂದು ಸುಂದರವಾದವು. ಅವರ ‘ಎಂಟು ಬೇಡರು’ ಕವನದ ಬೇಡರು ಯಾರೆಂಬುದನ್ನು ನೋಡೋಣ.

ಹೊತ್ತನು ತಿಂಬ ಸೋಮಾರಿತನ ಬೇಡ !
ಮತ್ತು ಹಿಡಿಸುವ ಮೈ ಕೊಲುವ ಕಳ್ಳು ಬೇಡ!
ಕತ್ತು ಕೊಯ್ಕರ ಕೂಡೆ ನಂಟುತನ ಬೇಡ !
ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ !
ಎತ್ತಿದ್ದ ಸಾಲವನು ಕೊಡದ ಮನ ಬೇಡ !
ಚಿತ್ತವನು ಕೆಡಿಪ ಹೊಟ್ಟೆಯ ಕಿಚ್ಚು ಬೇಡ !
ಮತ್ತೆ ಪಾಪವ ತರುವ ಕೆಡು ಕೆಲಸ ಬೇಡ.

ನೀತಿಶಾಸ್ತ್ರದ ಅಮೂಲ್ಯವಾದ ಎಂಟು ಸೂತ್ರಗಳೇ ಈ ‘ಎಂಟು ಬೇಡರು’ ಕವನದಲ್ಲಿದೆ.

ಅವರ ಇನ್ನುಳಿದ ಸುಪ್ರಸಿದ್ಧ ಕವನಗಳೆಂದರೆ ‘ಹಾವಿನ ಹಾಡು’, ‘ತೆಂಕಣ ಗಾಳಿಯಾಟ’, ‘ಹುತ್ತರಿ ಹಾಡು’, ‘ಹೊಲೆಯನ ಹಾಡು’ ಮೊದಲಾದವು. ‘ಹಾವಿನ ಹಾಡು’ ಹಾಡುವಾಗಲಂತೂ ಪಂಜೆಯವರು ಸ್ವತಃ ಗಾರುಡಿಗರಾಗಿದ್ದಾರೆ.  ಹಾವು ನಮ್ಮ ಮುಂದೆಯೇ ಕುಣಿದಂತೆ ಭಾಸವಾಗುತ್ತದೆ.

ನಾಗರ ಹಾವೇ ಹಾವೋಳು ಹೂವೆ
ಬಾಗಿಲ ಬಿಲದಲಿ ನಿನ್ನಯ ಠಾವೆ…..

‘ತೆಂಕಣ ಗಾಳಿಯಾಟ’ದಲ್ಲಿ ಗಾಳಿಯ ಬರವನ್ನು ಈ ರೀತಿ ವಿವರಿಸುತ್ತಾರೆ.

ಬುಸುಗುಟ್ಟುವ ಪಾತಾಳದ ಹಾವೋ?
ಹಸಿವಿನ ಭೂತವು ಕೊಯ್ಯುವ ಕೂವೋ
?

ಎಂಬಂತೆ ಬರುತ್ತದಂತೆ ಗಾಳಿ :

ಬರುವದು ! ಬರ ಬರ ಭರದಲಿ ಬರುವುದು
ಬೊಬ್ಬೆಯ ಹಬ್ಬಿಸಿ
, ಒಂದೇ ಬಾರಿಗೆ
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ
,
ಅಬ್ಬರದಲಿ ಭೋರ್ ಭೋರನೆ ಗುಮ್ಮಿಸಿ
,
ಬರುತಿದೆ ! ಮೈ ತೋರದೆ ಬರುತದೆ !

ಈ ಕವನದಲ್ಲಿ ಲಘು ಹಾಸ್ಯವು ಸರಳವಾಗಿ ಅಡಕಾವಗಿದೆ. ಇಂತಹ ಕವನಗಳಲ್ಲದೆ ‘ಹೊಲೆಯನ ಹಾಡಿ’ನಂಥ ಕರುಣಾಜನಕ ಹಾಡುಗಳನ್ನು ಬರೆದಿದ್ದಾರೆ. ಹಿಂದುಳಿದವನ ಹಾಡನ್ನು ಕೇಳುವಾಗ ಯಾರ ಮನಸ್ಸಿನಲ್ಲಾದರೂ ದಯೆಯ ಹೊನಲು ಹರಿಯದೆ ಇರಲಾರದು.

ಉಳ್ಳಯ್ಯಾ -ದಯೆಗೊಳ್ಳಯ್ಯಾ !
ದಟ್ಟ ದಿಕ್ಕಾ ! ಮಾರಿ ಮುಂಡ ಮುಂಡಾಳಾ !
ಹುಟ್ಟು ಹೊಲೆಯಾ ! ಪೋಲ ! ಚಂಡ ಚಂಡಲಾ !

………………………………………………..

ಹಾಸಿಗೆ ತಗಣೆಯ ಮುದ್ದಿಪ ನಿಮ್ಮ ಕಥಗೆ
ಹೇಸಿಗೆ ಅಹುದೆ ಮುಟ್ಟಲು ನಿಮ್ಮ ಕೈಗೆ

ವಾಸಕ್ಕೆ ನಮಗೂರ ಹೊರಗೊಂದು ಎಡೆಯೇ?

ಆ ಸುದ್ದ ಹಂದಿ ನಾಯ್ಗಳಿಗಿಂತ ಕಡೆಯೇ ?

ದೂರ ತಳ್ಳಿಸಿ ಒಂಡಾತನ ಈ ಕರುಣಾಜನಕ ಪರಿಸ್ಥಿತಿ ಕೇಳುವಾಗ ಯಾರ ಮನಸ್ಸು ತಾನೆ ಕರಗದಿರುತ್ತದೆ !

‘ಹುತ್ತರಿಯ ಹಾಡ’ನ್ನು ಅವರು ಕೊಡಗಿನ  ನಾಡನ್ನು ಜನರನ್ನು ಕುರಿತು ಬರೆದುದು.

ಪಂಜೆಯವರು ಬಾಲಗೀತೆಗಳಿಗಿಂತಲೂ ಅವರ ಬಾಲ ಕಥನ-ಕವನಗಳು ಇನ್ನಷ್ಟು ಮಿಗಿಲಾದವುಗಳೆಂದು ಹೇಳಬಹುದು. ಮಕ್ಕಳಿಗಾಗಿ ಕಥನ-ಕವನ ಬರೆದವರಲ್ಲಿ ಪಂಜೆಯವರೇ ಮೊದಲಿಗರು. ಅವರ ಕಥಾ-ಕವನಗಳಲ್ಲಿ ‘ಡೊಂಬರ ಚೆನ್ನೆ ‘ಕಡೆಕಂಜಿ’, ‘ನಾಗಣ್ಣನ ಕನ್ನಡಕ’, ‘ಅಣ್ಣನ  ವಿಲಾಪ’ ಮೊದಲಾದವು ಅಮೂಲ್ಯವಾಗಿವೆ.

‘ಡೊಂಬರ ಚೆನ್ನೆ’ಯಲ್ಲಿ ಡೊಂಬರಾಟವು ನಮ್ಮ ಕಣ್ಮುಂದೆಯೇ ನಡೆಯುವಂತೆ ಭಾಸವಾಗುತ್ತದೆ.

ಆಗ ಬಡಿಯಿತು ಡೋಲು ಬಡಬಡ
ಬಾಗಿ ಅರಸಿಗೆ ತಲೆಯನು
ಬೇಗ ತಿರ್ರ‍ನೆ ತಿರುಗಿ
, ಸರ್ರನೇ ಲಾಗ
ಹಾಕಿದ ಡೊಂಬನು
ನೀರಿನೊಂದಿಗೆ ಆರು ಬಿಂದಿಗೆ ಹೇರಿ
ನೆತ್ತಿಯ ಮೇಲಕೆ
,
ಹಾರಿ ಧಿಕ್ಕಟ
, ಕುಣಿದನಕ್ಕಟ ನೀರು
ಹೊರಗಡೆ ಚೆಲ್ಲದೆ !

ಅವರ ‘ಅಣ್ಣನ ವಿಲಾಪ’ದಲ್ಲಿ ಕರುಣಾಸರವು ಉಕ್ಕಿ ಹರಿದಿದೆ. ಸತ್ತು ಹೋದ ತಮ್ಮನನ್ನು ನೆನಸುವ ‘ಅಣ್ಣನ ವಿಲಾಪ’ ಓದಿದರೆ ಎಂತಹ ಕಲ್ಲೆದೆಯಾದರೂ ಕರಗುವುದು.

ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ ?
ನಿಲ್ಲದವನನು ತರುವೆ ಹುಡುಕಿ ನಾನಮ್ಮಾ !
ಅಲ್ಲಿಲ್ಲ
, ಇಲ್ಲಿಲ್ಲ, ಎಲ್ಲಿಹನು ತಮ್ಮಾ ?
ತಲ್ಲಣಿಸುತಿದೆ ಮನವು
; ಹೇಳು ನೀನಮ್ಮಾ !

ಕವನಗಳ ಜನಕರಾಗಿದ್ದಂತೆ ಪಂಜೆಯವರು ಸಣ್ಣ ಕಥೆಗಳ ಜನಕರು. ಕಿರಿಯರಿಗಾಗಿಯೇ ಕಥೆಗಳನ್ನು ರಚಿಸಿ ಅವರಲ್ಲಿ ಓದುವ ಹಂಬಲ  ಹೆಚ್ಚಿಸುವುದೇ ಅವರ ಆಶಯವಾಗಿತ್ತು.

ಮಕ್ಕಳಿಗಾಗಿ ಬರೆಯುವ ಸಾಹಿತ್ಯ ಹೇಗಿರಬೇಕು ಎಂಬುದನ್ನು ಆಳವಾಗಿ ಯೋಚಿಸಿದ್ದರು ಪಂಜೆಯವರು. ದೊಡ್ಡವರಿಗಾಗಿ ಬರೆದದ್ದೆಲ್ಲ ಮಕ್ಕಳಿಗೆ ಆಗುವುದಿಲ್ಲ. ಮಕ್ಕಳ ಕಥೆ ಸ್ವಾರಸ್ಯಕರವಾಗಿರಬೇಕು. ಭಾಷೆಯು ಸುಲಭವಾಗಿರಬೇಕು. ಶಬ್ದಗಳು ಮನೆಮಾತುಗಳಾಗಿರಬೇಕು. ವಾಕ್ಯಗಳು ಚಿಕ್ಕವಿರಬೇಕು. ಕೆಲವು ಕಡೆ ವಾಕ್ಯಗಳ ಪುನರಾವರ್ತನೆ ಇದ್ದರೆ ಒಳ್ಳೆಯದು. ಅಲ್ಲದೆ, ಪಂಜೆಯವರು ಹೇಳಿದಂತೆ ‘ಅಚ್ಚು ಹಾಕಿಸುವವರು ಅದನ್ನು ಸಚಿತ್ರವಾಗಿ ಮಾಡಿ, ದೊಡ್ಡ ಅಕ್ಷರಗಳಲ್ಲಿ ಮುದ್ರಿಸಿ, ಅಗ್ಗವಾಗಿ ಮಾರಬೇಕು’.

ಅವರು ಬರೆದ ಕಥೆಗಳಲ್ಲಿ ಮೂರು ಕರಡಿಗಳು, ಕೊಕ್ಕೋಕ್ಕೋ ಕೋಳಿ, ಬಿಟ್ಟೀ ಬಸವಯ್ಯ, ಇಲಿಗಳ  ಥಕಥೈ, ಹೇನು ಸತ್ತು ಕಾಗೆ ಬಡವಾಯಿತು, ಮಾತಾಡೋ ರಾಮಪ್ಪ ಗೋಣಿತಟ್ಟಿನ ಪಟ್ಟೆ ಹುಲಿ, ಬೊಕ್ಕೆ ಬಾಯಿ ಕೊಕ್ಕೆ ರಾಜ, ಅಜ್ಜಿ ಸಾಕಿದ ಮಗು, ಕೋಟ ಚೆನ್ನಯ, ಅಗೋಳಿ ಮಂಜಣ್ಣ -ಇವು ಜನಪ್ರಿಯವಾದವು.

‘ಮೂರು ಕರಡಿಗಳು’ ಎಂಬೊಂದು ಕಥೆಯಲ್ಲಿ; ‘ಚೆಲುವಮ್ಮನೆಂಬ ಚಿಕ್ಕ ಹುಡುಗಿ ದಾರಿ ತಪ್ಪಿ ಮಲೆಗೆ ಹೋಗುವಳು. ಅಲ್ಲೊಂದು ಹೊಳೆಯ ದಡದಲ್ಲಿ ದೊಡ್ಡದೊಂದು ಮನೆ – ಮಾಳಿಗೆಯ ಮನೆ ಇತ್ತು. ನಮೂರು ಕರಡಿಗಳ ಮನೆ ಅದು. ಅವುಗಳಲ್ಲಿ ಒಂದು ದೊಡ್ಡ ಕರಡಿ, ಒಂದು ಹದ ಕರಡಿ, ಒಂದು ಸಣ್ಣ ಕರಡಿಗೆ ಹದ ಮೈ, ಹದ  ಸ್ವರ. ಚಿಕ್ಕ ಕರಡಿಗೆ ಚಿಕ್ಕ ಮೈ, ಚಿಕ್ಕ ಸ್ವರ. ದೊಡ್ಡ ಕರಡಿಗೆ ದೊಡ್ಡ ಬಟ್ಟಲು, ದೊಡ್ಡ ಮಣೆ, ದೊಡ್ಡ ಮಂಚ, ದೊಡ್ಡ ಹಾಸಿಗೆ. ಹದ ಹಾಸಿಗೆ, ಚಿಕ್ಕ ಕರಡಿಗೆ ಚಿಕ್ಕ ಮಣೆ, ಚಿಕ್ಕ ಬಟ್ಟಲು, ಚಿಕ್ಕ ಮಂಚ, ಚಿಕ್ಕ ಹಾಸಿಗೆ’.

ತುಂಬ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಮೂರು ಕರಡಿಗಳ ವರ್ಣನೆಯನ್ನು ಮಕ್ಕಳ ಕಣ್ಣಿಗೆ ಕಟ್ಟಿಸಿದ್ದಾರೆ. ಇಲ್ಲಿ ಬರುವ ವಿಷಯಗಳೆಲ್ಳಾ ಮಕ್ಕಳಿಗೆಲ್ಲಾ ಅರ್ಥವಾಗುವಂತಹವೇ – ಬಟ್ಟಲು, ಮಣೆ, ಮಂಚ ಇತ್ಯಾದಿ.

ಮುಂದೆ ಚೆಲುವಮ್ಮನು ಮನೆಯೊಳಕ್ಕೆ ಹೋಗಿ ಚಿಕ್ಕ ಬಟ್ಟಲಲ್ಲಿ ಪಾಯಸ ಉಂಡು ಚಿಕ್ಕ ಮಂಚದ ಮೇಲೆ ಚಿಕ್ಕ ಹಾಸಿಗೆಯಲ್ಲಿ ಮಲಗುವಳು. ಚಿಕ್ಕ ವಸ್ತುಗಳೆಂದರೆ ಚಿಕ್ಕ ಮಕ್ಕಳಿಗೆ ಪ್ರೀತಿ. ಈ ರೀತಿ ಮಕ್ಕಳ ಮನಸ್ಸನ್ನು ಸೆಳೆಯುತ್ತ ಕಥೆ ಮುಮದೆ ಸಾಗುವುದು.

ಅವರ ‘ಕಾಗೆ-ಗುಬ್ಬಚ್ಚಿ’ ಕತೆಯಲ್ಲಿ ಸಂಭಾಷಣೆ ಮತ್ತು ವಾಕ್ಯಗಳ  ಪುನರಾವರ್ತನೆಯನ್ನು ಕಾಣಬಹುದು.

ಕಾಗೆ ಹೊರಗಿನಿಂದ ‘ಗುಬ್ಬಕ್ಕಾ, ಗುಬ್ಬಕ್ಕಾ’ ಬಾಗಿಲು ತೆರೆ’ ಎಂದಿತು. ಗುಬ್ಬಚ್ಚಿ ಒಳಗಿನಿಂದ ‘ನಾನು ಮುಖ ತೊಳೆಯುತ್ತೇನೆ ಕಾಣಾ’ ಎಂದಿತು. ಕಾಗೆ ಮತ್ತೆ ಗುಬ್ಬಕ್ಕಾ, ಗುಬ್ಬಕ್ಕಾ, ಬಾಗಿಲು ತೆರೆ’ ಎಂದಿತು.

ಗುಬ್ಬಚ್ಚಿ – ‘ನಾನು ಕಸ ಗುಡಿಸುತ್ತೇನೆ ಕಾಣಾ’.

ಕಾಗೆ – ‘ಗುಬ್ಬಕ್ಕಾ, ಗುಬ್ಬಕ್ಕಾ, ಬಾಗಿಲು ತೆರೆ’,

ಗುಬ್ಬಚ್ಚಿ – ನಾನು ನೀರು ಸೇದುತ್ತೇನೆ ಕಾಣಾ’

ಸಂಭಾಷಣೆ ಮುಂದೆ ಹೋದ ಹಾಗೆ ಓದುವವರ ಕುತೂಹಲವು ಕೆರಳುತ್ತಾ ಹೋಗುತ್ತದೆ.

‘ಅಮ್ಮನನ್ನು ಹೇಗೆ ಕರೆಯಬೇಕು? ಎಂಬ ಕಥೆಯಲ್ಲಿ ಪಂಜೆಯವರು ಪ್ರಾಣಿಜೀವನವನ್ನು ಚೆನ್ನಾಗಿ ಚಿತ್ರಿಸಿದ್ದಾರೆ.

ಒಂದು ದಿನ ಒಂದು ದನದ ಕರು ತನ್ನ ಅಮ್ಮನನ್ನು ಹುಡುಕುತ್ತಾ ಹೊರಟಿತು. ಅದಕ್ಕೆ ದಾರಿಯಲ್ಲಿ ಬೆಕ್ಕು ಇದಿರಾಯಿತು. ಕರು ಬೆಕ್ಕನ್ನು ಕಂಡು, ‘ಬೆಕ್ಕೇ ಬೆಕ್ಕೇ, ಅಮ್ಮನನ್ನು ಹೇಗೆ ಕರೆಯಬೇಕು?’ ಎಂದು ಕೇಳಿತು. ಅದಕ್ಕೆ ಬೆಕ್ಕು ‘ಮಿಯಾಂ ಮಿಯಾಂ’ ಎಂದು ಹೇಳಿತು. ಹಾಗೆಯೇ ಕರು. ‘ಮಿಯಾಂ ಮಿಯಾಂ’ ಎಂದು ಕೂಗಿತು. ಆದರೆ ಅದರ ಅಮ್ಮ ಓಗೊಡಲಿಲ್ಲ. ಮುಂದೆ ಅಲ್ಲೊಂದು ನಾಯಿ ಸಿಕ್ಕಿತು. ಅದು ಬೌ ಬೌ ಎಂದು ಅಮ್ಮನನ್ನು ಕರೆಯಬೇಕೆಂದು ಹೇಳಿಕೊಟ್ಟಿತು. ಕರು ನಾಯಿ ಹೇಳಿದಂತೆ ಕರೆದರೂ ಅದರಮ್ಮ ಬರಲಿಲ್ಲ. ಮುಂದೆ ನಡೆಯುತ್ತಾ ಇರಲು ಕರುವಿಗೊಂದು ಆಡು ಸಿಕ್ಕಿತು. ಅದು ಮೇ ಮೇ ಎಂದು ಕರೆಯಲು ಹೇಳಿಕೊಟ್ಟಿತು.ಮುಂದೆ ಕರುವಿಗೆ ಹಂದಿ, ಕೋಣ, ಕಪ್ಪೆ, ಹಾವು ಎಲ್ಲಾ ಎದುರಾದವು. ಎಲ್ಲವೂ ತಮ್ಮ ತಮ್ಮ ಭಾಷೆಯಲ್ಲಿ ಅಮ್ಮನನ್ನು ಕರೆಯುವ ರೀತಿ ಹೇಳಿಕೊಟ್ಟವು. ಕರು ಅವು ಹೇಳಿಕೊಟ್ಟಂತೆ ಕರೆದರೂ ಅದರಮ್ಮ ಬರಲಿಲ್ಲ. ಕೊನೆಯಲ್ಲಿ ಕರುವಿಗೊಂದು ಎತ್ತು ಸಿಕ್ಕಿತು. ಅದು ‘ಅಂಬಾ ಅಂಬಾ’ ಎಂದು ಕರೆಯಲು ಹೇಳಿತು. ಅದೇ ರೀತಿ ಕರೆಯಲಾಗಿ ಅದರಮ್ಮ ಬಂದೇ ಬಿಟ್ಟಿತು.

ಈ ಕಥೆಯಲ್ಲಿ ಎಲ್ಲ ಪ್ರಾಣಿಗಳು ಹೇಗೆ ಕೂಗುತ್ತವೆ ಎಂಬುದ ಅರಿವು ಮಗುವಿಗಾಗುವಂತೆ ಕಥೆಯನ್ನು ಹೆಣೆದಿದ್ದಾರೆ.

ಪಂಜೆಯವರು ದೊಡ್ಡ ಮಕ್ಕಳಿಗಾಗಿ ರಚಿಸಿದ ದೊಡ್ಡ ಕಥೆಗಳಲ್ಲಿ ‘ಅಗೋಳಿ ಮಂಜಣ್ಣ’ನ ಕಥೆಯು ಹೆಸರಾದುದು. ಮಂಜಣ್ಣನನ್ನು ಎಷ್ಟೊಂದು ಸೊಗಸಾಗಿ ಪರಿಚಯ ಮಾಡಿ ಕೊಟ್ಟಿದ್ದಾರೆ ನೋಡಿ :

‘ಮಂಜಣ್ಣ ಸೆಟ್ಟಿ ಒಂದು ಸರ್ತಿಗೆ ಎಂಟು ಮಂದಿ ಹುಡುಗರು ಊಟ ಮಾಡುವಷ್ಟು ಅನ್ನವನ್ನು ಊಟ ಮಾಡುವನು. ಕೂತಲ್ಲಿಂದ ಳುವುದರೊಳಗೆ ಮೂರು ದೊಡ್ಡ ಹಲಸಿನ ಹಣ್ಣುಗಳನ್ನು ಒಬ್ಬನೇ ತಿಂದು ಬಿಡುವನು.

ಸುಲಿಯದ ಐವತ್ತು ಬಾಳೇಹಣ್ಣುಗಳನ್ನು ಒಬ್ಬನೇ ನುಂಗಿ ಬಿಡುವನು. ಸೀಯಾಳ ಕುಡಿಯಲಿಕ್ಕೆ ತೊಡಗಿದರೆ ನೂರು ಎಳೆನೀರು ಕುಡಿಯುವನು. ಅವನ ಒಪ್ಪತ್ತು ಊಟಕ್ಕೆ ಚೆರಿಗೆ ಅನ್ನ ಎಂದು ಲೆಕ್ಕ. ಈ ಕಾರನದಿಂದಾಗಿ ಅವನಿಗೆ ‘ಅಗೋಳಿ ಮಂಜಣ್ಣ’ ಎನ್ನುತ್ತಿದ್ದರು. ಅಗೋಳಿ ಎಂದರೆ ತುಳುವಿನಲ್ಲಿ ದೊಡ್ಡ ಚೆರಿಗೆ ಎಂದರ್ಥ.

ಮಕ್ಕಳಿಗೆ ಸ್ವಾರಸ್ಯವಾದ ಬರಹವೇ ಇಲ್ಲದಿದ್ದಾಗ ಕನ್ನಡದಲ್ಲಿ ಇಂತಹ ಸೊಗಸಾದ ಮಕ್ಕಳ ಖತೆಗಳನ್ನು ಬರೆದರು ಪಂಜೆಯವರು.

ನಮ್ಮ ನಾಡಿನ ದೊಡ್ಡ ಕವಿಗಳಲ್ಲಿ ಒಬ್ಬರಾದ ಕೆ.ವಿ. ಪುಟ್ಟಪ್ಪನವರು ಪಂಜೆಯವರನ್ನು ಹೀಗೆ ಚಿತ್ರಿಸಿದ್ದಾರೆ :

ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ

…………………………………………
ಕಚ್ಚಿದರೆ ಕಬ್ಬಾಗಿ
, ಹಿಂಡಿದರೆ ಜೇನಾಗಿ
ನಿಮ್ಮುತ್ತಮಿಕೆಯನೆ ಮೆರೆದಿರಯ್ಯ !

ಎಂತಹ ಸ್ವಭಾವ ! ಇಷ್ಟು ಸೌಜನ್ಯಯ ಹಿರಿಯ ಸ್ವಭಾವದ ಕವ ಬರೆದದ್ದೆಲ್ಲ ಶುಚಿಯಾದ ಬರಹವಾದದ್ದು ಆಶ್ಚರ್ಯವಲ್ಲ.