ಗುಡುಗನು ಗುಡುಗಿಸಿ, ನೆಲವನು ನಡುಗಿಸಿ, ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ, ಜಡಿಮಳೆ ಸುರಿವೋಲ್, ಬಿರುಮಳೆ ಸುರಿವೋಲ್….. ಪ್ರಕೃತಿಯ ಬೀಕರ-ರೌದ್ರತೆಯನ್ನು ಮನದಟ್ಟು ಮಾಡುವ ಈ ಸಾಲುಗಳನ್ನು ಬರೆದವರು ಕುವೆಂಪುರವರಲ್ಲ. ೨೦ ನೇ ಶತಮಾನದ ಮೊದಲ ಕವಿ ಪಂಜೆ ಮಂಗೇಶ ರಾವ್. ಹುಟ್ಟಿದ್ದು ೨೨ ಫೆಬ್ರವರಿ ೧೮೭೪ ರ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಮಂಗಳೂರಿನ ಎಲೋಷಿಯಸ್ ಕಾಲೇಜಿನಲ್ಲಿ ಬಿ.ಎ. ಪದವಿ ಮದ್ರಾಸಿನಲ್ಲಿ ಎಲ್.ಟಿ. ತರಬೇತಿ, ಅದ್ಯಾಪಕರು ಮತ್ತು ಶಾಲಾ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ೨೪ ಅಕ್ಟೋಬರ್ ೧೯೩೭ ರಲ್ಲಿ ದೈವಾದೀನರಾದರು.ಪಂಜೆ ಎಂದ ತಕ್ಷಣ ಪ್ರತಿ ಕನ್ನಡಿಗನಿಗೂ ನೆನಪಿಗೆ ಬರುವುದು ತನ್ನ ಬಾಲ್ಯ: ತೊಟ್ಟಿಲ ತೂಗುವೆ, ಹೂವಿನ ಹಾಡು, ಜೋಗುಳ, ಸಂಜೆಯ ಹಾಡು, ಶಿಶು ಗೀತೆಗಳು, ಇವರು ಶಾಲಾ ಇನ್‌ಸ್ಪೆಕ್ಟರ್ ಆಗಿ ಅಂದಿನ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯ ನಡುವೆ ಮಕ್ಕಳಿಗಾಗಿ ‘ಕನ್ನಡ ಪದ್ಯಪುಸ್ತಕ, ಗಳನ್ನು ಸಂಪಾದಿಸಿದರು. ೧೯೨೧ ರಲ್ಲಿ ಬಾಲ ಸಾಹಿತ್ಯದ ಪ್ರಕಟಣೆ ಮತ್ತು ಪ್ರಚಾರಕ್ಕಾಗಿ ‘ಬಾಲ ಸಾಹಿತ್ಯ ಮಂಡಲ, ಕಟ್ಟಿದರು.

ಮಕ್ಕಳ ಸಾಹಿತ್ಯವನ್ನು ಕನ್ನಡದಲ್ಲಿ ಮೊದಲಿಗೆ ಕಟ್ಟಿದ ಮಂಗೇಶರಾವ್ ಪ್ರೌಡ ಕವಿತೆಗಳನ್ನೂ ಬರೆದಿದ್ದಾರೆ. ಹುತ್ತರಿಯ ಹಾಡು ಮತ್ತು ತೂಕಡಿಕೆಯನು ಕಳೆಯದೇಕೆ ಕುಳಿತಿರುವೆ ಗೆಳೆಯು, ಇವು ರಾಷ್ಟ್ರೀಯ ಹೋರಾಟದ ಮನೋಭಾವನೆ ಉಳ್ಳಂಥ ಕವಿತೆಗಳು. ಕಾವ್ಯ ರೂಪಗಳು ಮತ್ತು ಪ್ರಾಸದ ವಿಷಯದಲ್ಲಿ ಸಂಪ್ರದಾಯನಿಷ್ಠತೆ ಇದ್ದರೂ ಜನಸಾಮಾನ್ಯರ ಸರಳವಾದ ಭಾಷಾ ಬಳಕೆಯಿದೆ. ಇವರ ಕವಿತೆಗಳಲ್ಲಿ ಭಾವಗೀತೆ ಮತ್ತು ಸರಳ ರಗಳೆಯ ಮೊದಲ ಹೊಳಹುಗಳಿವೆ. ತೆಂಕಣ ಗಾಳಿಯಾಟ, ದೊಂಬರ ಚೆನ್ನಿ, ಯಂಥ ಕವಿತೆಗಳು ಇವರ ಸೃಷ್ಟಿಶೀಲತೆಗೆ ಒಳ್ಳೆಯ ಉದಾಹರಣೆಗಳು. ತೆಂಕಣ ಗಾಳಿಯಾಟ ಕುವೆಂಪುವಿನ ವರ್ಷಭೈರವ ಕವಿತೆಯನ್ನು ನೆನಪಿಸುತ್ತದೆ. ಎಂ.ಗೋವಿಂದ ಪೈ ಹೇಳುವಂತೆ “ಪಂಜೆಯವರೇ ಕನ್ನಡ ಕಥೆಗಳ ವಿಧಾತೃ ೧೯೦೦ ರಿಂದ ಪ್ರಕಟವಾದ ಪತ್ರಿಕೆ ಸುವಾಸಿನಿ ಯಲ್ಲಿ ಮಂಗೇಶರಾಯರ ಅನೇಕ ಲೇಖನಗಳಿವೆ. ಅವುಗಳಲ್ಲಿ ಹೆಚ್ಚಿನವು ಸಣ್ಣ ಕಥೆಗಳು, ಹಾಗೆ ನೋಡಿದರೆ ಕಥನ ಕವನಕ್ಕೂ ಪಂಜೆಯವರೇ ಮೂಲ ಪುರುಷರು. ಕಿಟಲ್ ನ ಶಬ್ದಮಣಿ ದರ್ಪಣ ವನ್ನು ಬಾಸೆಲ್ ಮಿಷನ್ ನಿಂದ ಪರಿಷ್ಕರಿಸಿ ಪ್ರಕಟಿಸಿದ ಇವರು ಸ್ಥಳನಾಮ, ಮೂಡ ಬಿದರೆಯ ಹೊಸಬಸದಿಯ ಶಾಸನಗಳು, ಕುಮಾರವ್ಯಾಸನ ಹೆಗ್ಗಳಿಕೆ, ನಂದಳಿಕೆ ಲಕ್ಷ್ಮಿನಾರಣಪ್ಪನವರು, ಮುಂತಾದ ಸಂಶೋಧನ ಲೇಖನಗಳನ್ನು ಬರೆದು ಕನ್ನಡದ ಆರಂಭದ ಪ್ರಮುಖ ಸಂಶೋಧಕರಲ್ಲಿ ಒಬ್ಬರೆನಿಸಿಕೊಂಡರು. ಮಕ್ಕಳ ಶಿಕ್ಷಣನ್ನು ಕುರಿತು ಮಹತ್ವದ ಚಿಂತನೆ ನಡೆಸಿದ್ದಾರೆ.

ಇವರ ಅನುವಾದ-ರೂಪಾಂತರಗಳು ಕನ್ನಡವೆನ್ನುವಷ್ಟು ಸಹಜವಾಗಿವೆ, ಸೃಜನ ಶೀಲವಾಗಿವೆ. ಜೊತೆಗೆ ಇಂಗ್ಲಿಷ್ ಗೀತೆಗಳು, ಬರುವುದಕ್ಕೆ ಮೊದಲಿನ ಅನುವಾದ ಸಾಹಿತ್ಯವನ್ನು ಪ್ರತಿನಿದಿಸುತ್ತವೆಯಾದ್ದರಿಂದ ಅವಕ್ಕೆ ಐತಿಹಾಸಿಕ ಪ್ರಾಮುಖ್ಯತೆಯಿದೆ.

ಶಿಶು ಸಾಹಿತ್ಯ, ಸಣ್ಣಕಥೆ, ಸಂಶೋಧನೆ, ವ್ಯಾಕರಣ, ಅನುವಾದ,- ಹೀಗೆ ಇಂಥ ಹತ್ತು ಹಲವು ಕಾರಣಗಳಿಗಾಗಿ, ಪಂಜೆಯವರನ್ನು ಆಧುನಿಕ ಕನ್ನಡ ಸಾಹಿತ್ಯದ ಮುಂಗೋಳಿಯೆನಿಸಿದ ಮುದ್ದಣನ ಸಮಕಾಲೀನರು ಹೇಗೋ ಹಾಗೆ, ಮುದ್ದಣನ ಸಮಪ್ರಾತಿಭರೂ ಸಹ ಎಂದು ಹೇಳಬೇಕಾಗುತ್ತದೆ. ಪಂಜೆ ಕನ್ನಡ ಸಾಹಿತ್ಯದಲ್ಲಿ ಮೂಲಮಾದರಿಗಳನ್ನು ಸೃಷ್ಟಿಸಿದವರು.