ಅಳುಬರುತ್ತದೆ ನನಗೆ ಪಂಡಿತರೆ ನಿಮ್ಮ
ಈ ಲೇಖನ ಕಲೆಯ ನೋಡಿದಾಗೆಲ್ಲ.
ಎಂಥ ಆಕ್ಟಪಸ್ ಹಿಡಿತ ನಿಮ್ಮದು ! ತುಂಬಿದ್ದ
ಮೈ ಮಾಂಸ ರಕ್ತ ಎಲ್ಲವನ್ನೂ ಹೀರಿ
ಬರೀ ಮೂಳೆಯಷ್ಟನ್ನೇ ಉಳಿಸಿ ಪಟ್ಟಿ ಹಾಕಿದ್ದೀರಿ
ಕವಿಯನ್ನು ಸಲೀಸಾಗಿ ಜೀರ್ಣಿಸಿಕೊಂಡು !

ಹೂ ತಳಿರು ಎಲೆ ಕಾಂಡಗಳ ನೆನಪೇ ಇಲ್ಲ ;
ನಿಮ್ಮ ಖಾಂಡವದಹನದಾರ್ಭಟದಲ್ಲಿ ಬಿದ್ದಿರುವ
ಬೂದಿ ರಾಶಿಯ ಕಂಡು, ಅದರೊಳಗಿನಾತ್ಮಕ್ಕೆ
ಕಣ್ಣೀರ ತರ್ಪಣ ಕೊಟ್ಟು ಕರಗಿ ನಿಂತಿದ್ದೇನೆ.

ನಾನು ಅತ್ತಿದ್ದೇನೆ ಪಂಡಿತರೆ, ಈ ಸ್ಮಶಾನ ಪರ್ವದ ಬದಿಗೆ
ನಿಂತು ನೋಡಿ.
ನಿಮ್ಮ ವ್ಯಾಕರಣದಿಕ್ಕಳದಲ್ಲಿ ಈ ಮೂಲ ರೂಪಗಳ
ಕಬ್ಬಿಣವ ಹಿಡಿದೆತ್ತಿ, ಕಮ್ಮಟದ ಅಡಿಗಲ್ಲ ಮೇಲಿಟ್ಟು
ಬಡಿವ ಸುತ್ತಿಗೆಯ ಹೊಡೆತಕ್ಕೆ
ನಾನು ನಡುಗಿದ್ದೇನೆ ಪಂಡಿತವರ‍್ಯ
ಯಾವ ಕಾಲಕ್ಕೂ ನಿಮ್ಮ ಧೈರ್ಯವೆ ಧೈರ್ಯ.