Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ರಾಜಗುರು ಗುರುಸ್ವಾಮಿ ಕಲಿಕೇರಿ

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವವರು ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರು.
ಬಿಜಾಪುರ ಜಿಲ್ಲೆಯ ಕಲಿಕೇರಿ ಗ್ರಾಮದಲ್ಲಿ ೧೯೪೦ ರಲ್ಲಿ ಜನಿಸಿದ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ತಂದೆ ಭಕ್ತಿ ಗೀತೆಗಳ ಗಾಯಕರು. ತಂದೆಯಿಂದ ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿ ತಳೆದ ಶ್ರೀಯುತರು ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರು ಹಾಗೂ ಕವಿ ಮತ್ತು ಲೇಖಕರು. ಗ್ವಾಲಿಯರ್ ಘರಾನಾಕ್ಕೆ ಸೇರಿದ ಹಿಂದೂಸ್ತಾನಿ ಗಾಯಕರಾದ ಹಾಗೂ ವಾದ್ಯಗಾರರಾದ ಪಂಡಿತ ಪುಟ್ಟರಾಜ ಗವಾಯಿಯವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದ ಶ್ರೀಯುತರು ಆಕಾಶವಾಣಿ ಮಾನ್ಯತೆ ಪಡೆದ ಗಾಯಕರು.
ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಗಾಯಕರಲ್ಲದೆ ಹೃದಯ ಮುಟ್ಟುವ ಸುಪ್ರಭಾತಗಳನ್ನು ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಬನಾರಸ್, ಹೈದರಾಬಾದ್, ಚೆನ್ನೈ, ಪುಣೆ ಮುಂತಾಗಿ ರಾಷ್ಟ್ರಾದ್ಯಂತ ಸಂಗೀತ ಕಚೇರಿ ನೀಡಿರುವ ಶ್ರೀಯುತರು ‘ವೀರೇಶ್ವರ ಪುಣ್ಯಾಶ್ರಮ’ದಲ್ಲಿ ಸಾವಿರಾರು ಪ್ರತಿಭಾವಂತ ಯುವಕರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ಅನೇಕ ಪುಸ್ತಕಗಳು ಪ್ರಕಟಗೊಂಡಿವೆ ಮತ್ತು ಕರ್ನಾಟಕದಲ್ಲಿ ಅನೇಕ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಶ್ರೀಯುತರ ಸಂಗೀತ ನಿರ್ದೆಶನದಲ್ಲಿ ಪ್ರಮುಖ ಹಿನ್ನೆಲೆ ಗಾಯಕರಾದ ಡಾ. ಪಿ.ಬಿ. ಶ್ರೀನಿವಾಸ, ಡಾ. ರಾಜಕುಮಾರ್, ಜಿ.ವಿ. ಅತ್ರಿ ಮುಂತಾದವರು ಹಾಡಿರುತ್ತಾರೆ. ಇವರ ಗಾನಭಾರತಿ, ಭಾವ ಭಗವದ್ಗೀತೆ ಸಂಗೀತ ಗ್ರಂಥಗಳನ್ನು ಪ್ರಕಟಿಸಿರುವ ಎಂಟು ಗ್ರಾಮಫೋನ್ ರೆಕಾರ್ಡುಗಳು, ಹದಿನಾಲ್ಕು ಆಡಿಯೋ ಕ್ಯಾಸೆಟ್‌ಗಳು, ನಾಲ್ಕು ನಾಟಕ ಕಂಪನಿಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಯುತರು ‘ಮಹಾತಪಸ್ವಿ’ ಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಕವನ ಸಂಕಲನಗಳು, ಮೂರು ಕಾದಂಬರಿಗಳು, ಮೂರು ಜೀವನಚರಿತ್ರೆ ರಚಿಸಿರುವುದಲ್ಲದೆ ಪಂಚಾಕ್ಷರವಾಣಿಯ ಸಹಸಂಪಾದಕರಾಗಿ, ಇವರ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳು ಇವರ ಸಂಗೀತ ಸಾಧನೆಗಾಗಿ ಬಿರುದುಗಳನ್ನಿತ್ತು ಸನ್ಮಾನಿಸಿವೆ.
ಭಕ್ತಿ ಸಂಗೀತ ಗಾಯನದಲ್ಲಿ ಪ್ರಸಿದ್ಧಿ ಪಡೆದ, ಹಿಂದೂಸ್ತಾನಿ ಗಾಯಕ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರು.