ಒಂಬತ್ತು ವರ್ಷದ ಬಾಲಕ. ಶಾಲೆಯಿಂದ ಓಡೋಡಿ ಮನೆಗೆ ಬಂದು. ಕೋಟನ್ನು ತೆಗೆದಿಡುತ್ತಿದ್ದಂತೆಯೇ ತಾಯಿಗೆ ಕೂಗಿ ಹೇಳಿದ- “ಅಮ್ಮಾ, ಹಸಿವು, ತಿಂಡಿ ಕೊಡು”.

ಆದರೆ ತಾಯಿಗೆ ಕೇಳಿಸಿದ್ದು ಮಗನ ಕೂಗಲ್ಲ. ಅವನು ಕೋಟನ್ನು ತೆಗೆದಿಡುವಾಗ ಆದ ನಾಣ್ಯಗಳ ಸದ್ದು. ಅವಳು ಕೇಳಿದಳು, “ನಿನಗೆ ದುಡ್ಡೆಲ್ಲಿಂದ ಬಂತು?”

“ಅಮ್ಮಾ, ಇಂದು ಶಾಲೆಗೆ ಹೋಗುವಾಗ ಅಜ್ಜ ಒಂದು ಆಣೆ ಕೊಟ್ಟಿದ್ದ. ನಾನು ಪೇಟೆಯಲ್ಲಿ ಏನೂ ತಿನ್ನುತ್ತಿರಲಿಲ್ಲ, ಆದರೆ ಸ್ನೇಹಿತನ ಒತ್ತಾಯಕ್ಕೆ ಒಂದು ಬಿಲ್ಲಿಯ ತಿಂಡಿ ತಿಂದೆವು. ಮೂರು ಬಿಲ್ಲಿಗಳು ಉಳಿದವು”.

ಆ ಕಾಲದಲ್ಲಿ ಈಗಿನ ರೂಪಾಯಿ-ಪೈಸೆಗಳಿರಲಿಲ್ಲ. ಆಗ ೧ ರೂಪಾಯಿಗೆ ೧೬ ಆಣೆಗಳು, ೧ ಆಣೆಗೆ ೪ ಬಿಲ್ಲಿಗಳು, ೧ ಬಿಲ್ಲಿಗೆ ೩ ಪೈಗಳು. ಹೀಗೆ ಲೆಕ್ಕವಿತ್ತು. ಹೌದು, ಆಗ ಶಾಲೆಗೆ ಹೋಗುವ ಹುಡುಗರು ಸಹ ಕೋಟನ್ನು ಹಾಕಿಕೊಳ್ಳುತ್ತಿದ್ದರು.

ಶಕ್ತಿಯ ಪ್ರಯೋಜನ

“ಮಗೂ, ಹಾಗೆ ಪೇಟೆಯಲ್ಲಿ ತಿನ್ನುವುದು  ಒಳ್ಳೆಯದಲ್ಲ. ಇರಲಿ, ಆದರೆ ಈ ಮೂರು ಬಿಲ್ಲಿಗಳನ್ನು ಜೇಬಿನಲ್ಲಿಟ್ಟುಕೊಂಡು ಯಾಕೆ ಬಂದಿ? ದಾರಿಯಲ್ಲಿ ನಿನಗೆ ಕುರುಡರು, ಕುಂಟರು ಯಾರೂ ಕಾಣಿಸಲಿಲ್ಲವೇ? ಅಥವಾ ನಿನಗೆ ರಾತ್ರಿ ಮತ್ತು ನಾಳೆ ಊಟಕ್ಕೇನಾದರೂ ಕೊರತೆಯಾದೀತೆಂದು ಈ ದುಡ್ಡು ಇಟ್ಟುಕೊಂಡು ಬಂದಿರುವಿಯೋ?”

“ಯಾಕೆ? ಇದು ನನ್ನ ದುಡ್ಡು”

“ಹೇಗೆ ನಿನ್ನ ದುಡ್ಡು?”

“ಅಜ್ಜ ನನಗೆ ಕೊಟ್ಟಿದ್ದು. ನಾನಿಟ್ಟುಕೊಂಡರೆ ತಪ್ಪೇನು?”

“ಸರಿ. ನಿನ್ನ ಅಜ್ಜ ನಿನಗೆ ಕೊಟ್ಟ. ಆದರೆ ನಿನ್ನ ಅಜ್ಜನಿಗೆ ಯಾರು ಕೊಟ್ಟರು?”

“ಅವನು ದುಡಿದು ಸಂಪಾದಿಸಿದ”.

“ಅವನಿಗೆ ದುಡಿಯಲು ಶಕ್ತಿಕೊಟ್ಟವರು ಯಾರು?”

“ಯಾರು?”

“ದೇವರಲ್ಲವೆ? ದೇವರು ಆ ಶಕ್ತಿ ಕೊಟ್ಟಿದ್ದಿಲ್ಲವಾದರೆ ನಿನ್ನಜ್ಜ ಹೇಗೆ ಸಂಪಾದಿಸುತ್ತಿದ್ದ?

“ಹೌದು. ಆದರೆ ಈಗ ಅದೆಲ್ಲ ಯಾಕೆ? ನನಗೆ ತಿಂಡಿ ಕೊಡು.”

“ತಿಂಡಿ ಓಡಿ ಹೋಗುವುದಿಲ್ಲ. ಆದರೆ ಸ್ವಲ್ಪ ವಿಚಾರ ಮಾಡು. ನಿನ್ನಜ್ಜನಿಗೆ ದೇವರು ದುಡಿಯು ಶಕ್ತಿ ಕೊಟ್ಟಿದ್ದಿಲ್ಲವಾದರೆ ನಿನ್ನಜ್ಜನ ಗತಿಯೂ ಬೀದಿಯಲ್ಲಿ ಭಿಕ್ಷೆ ಬೇಡುವ ಕುರುಡ-ಕುಂಟನಂತೆ ಆಗುತ್ತಿತ್ತೋ ಇಲ್ಲವೋ?”

“ಹೌದು, ಆಗುತ್ತಿತ್ತು.”

“ಅಂದ ಬಳಿಕ ದುಡಿದು ಸಂಪಾದಿಸುವ ಶಕ್ತಿಯಿದ್ದವರು ತಾವು ಉಂಡ ಮೇಲೆ ಉಳಿದದ್ದನ್ನಾದರೂ ಕುರುಡ-ಕುಂಟ ಮುಂತಾದ ಅಂಗಹೀನರಿಗೆ ಕೊಡಬೇಕೋ ಬೇಡವೋ? ಶಕ್ತಿಯುಳ್ಳವರು ಪುಣ್ಯವಂತರೆಂದು ಹೇಳುವುದನ್ನು ಕೇಳಿದ್ದೀಯಲ್ಲವೇ?”

“ಹೌದು.”

“ಯಾಕೆ ಹಾಗೆ ಹೇಳುತ್ತಾರೆಂದು ಗೊತ್ತಿದೆಯೇ? ದುರ್ಬಲರನ್ನು ರಕ್ಷಿಸುವ ಶಕ್ತಿ ಅವರಲ್ಲಿರುತ್ತದೆ. ಅದಕ್ಕಾಗಿಯೇ ಅವರು ಪುಣ್ಯವಂತರು. ಅಂಥವರು ತಮ್ಮದೆಲ್ಲವನ್ನೂ ದುಃಖಪೀಡಿತರಿಗೆ ಕೊಟ್ಟ ಪುಣ್ಯಗಳಿಸುತ್ತಾರೆ, ಅವರು ಮಹಾಪುರುಷರು. ಆದರೆ ನಾವೆಂಥವರು? ನಾವು ಉಂಡು ಉಳಿದದ್ದನ್ನು ಸಹ ದುರ್ಬಲರಿಗೆ ಕೊಡುವುದಿಲ್ಲ. ಹೀಗಾದರೆ ದೇವರು ನಮಗೆ ಕೊಟ್ಟ ಶಕ್ತಿಯ ಪ್ರಯೋಜನವೇನು?”

ಕ್ಷಮೆ ಕೇಳು

ಬಾಲಕನ ಮನಸ್ಸಿಗೆ ಈ ಮಾತು ನಾಟಿತು. ಮರುದಿನ ಶಾಲೆಗೆ ಹೋಗುವಾಗ ಯಾವನಾದರೂ ಭಿಕ್ಷುಕನಿಗೆ ಆ ದುಡ್ಡನ್ನು ಕೊಡಲು ನಿರ್ಧರಿಸಿದ. ಆದರೆ ತಾಯಿ ಅಷ್ಟಕ್ಕೆ ಬಿಡಲಿಲ್ಲ. ಅವಳು ಹೇಳಿದಳು, “ಬಾ ಮಗೂ, ಹೋಗೋಣ.” ತಿಂಡಿ ಕೊಡಲಿಕ್ಕೆ ಕರೆದಿರಬೇಕೆಂದು ಬಾಲಕ ಅವಳ ಹಿಂದೆ ಹೋದ. ಅವಳು ಮತ್ತೆ ಹೇಳಿದಳು- “ಆ ಕೋಟು ಹೇಕಿಕೋ” ಬಾಲಕ ಕೋಟು ಧರಿಸಿ ಕೇಳಿದ- “ಈಗೆಲ್ಲಿ ಹೋಗಬೇಕು”. “ನೀನು ನನ್ನ ಮಗನಲ್ಲವೇ? ನನ್ನ ಹಿಂದೆಯೇ ಬಾ”.

ಇಬ್ಬರೂ ಹೊರಟರು. ಶಾಲೆಗೆ ಹೋಗುವ ದಾರಿಯಲ್ಲಿ ಸುಮಾರು ಮುಕ್ಕಾಲು ಮೈಲಿ ನಡೆದ ಬಳಿಕ ಒಂದು ದೇವಸ್ಥಾನ ಸಿಕ್ಕಿತು. ಅದರ ಮುಂದೆ ಒಬ್ಬ ಕಣ್ಣಿಲ್ಲದ ಮುದುಕ ಭಿಕ್ಷೆ ಬೇಡುತ್ತ ಕುಳಿತಿದ್ದ. ಅವನನ್ನು ತೋರಿಸಿ, ತಾಯಿ ಕೇಳಿದಳು- “ನೀನು ಶಾಲೆಯಿಂದ ಬರುವಾಗ ಇವನನ್ನು ನೋಡಿಲ್ಲವೆ?”

“ನಾನೇಕೆ ನೋಡಲಿ? ನಿನ್ನ ಬಳಿ ತಿಂಡಿ ಬೇಡಲು ಓಡೋಡಿ ಬಂದೆ”.

“ಮಗೂ, ಇಂಥವರನ್ನು ಹುಡುಕಿ ತೆಗೆದು ದಾನ ಕೊಡುವವರು ಎಷ್ಟು ಪುಣ್ಯವಂತರು”!

“ಆಗಲಿ, ಅವನಿಗೆ ಈ ದುಡ್ಡು ಕೊಟ್ಟು ಬಿಡು. ಬೇಗನೆ ಮನೆಗೆ ಹೋಗೋಣ. ನನಗೆ ಬಹಳ ಹಸಿವೆಯಾಗಿದೆ”.

“ಅವಸರ ಪಡಬೇಡ. ಮನೆಗೆ ಹೋಗಿ ತಿನ್ನುವಿಯಂತೆ. ಮೊದಲು ಈ ಅಜ್ಜನಿಗೆ ನಮಸ್ಕಾರ ಮಾಡು”.

 

"ತಮ್ಮದೆಲ್ಲವನ್ನೂ ದುಃಖಪೀಡಿತರಿಗೆ ಕೊಟ್ಟು ಪುಣ್ಯ ಗಳಿಸುತ್ತಾರೆ"

ಬಾಲಕನಿಗೆ ಹಸಿವೆಯ ಪೀಡೆ ಒಂದು ಕಡೆಯಾದರೆ ದರಿದ್ರ ಭಿಕ್ಷುಕನಿಗೆ ನಮಸ್ಕರಿಸಬೇಕೆಂಬ ಅಪಮಾನ ಇನ್ನೊಂದೆಡೆ. ಸಿಟ್ಟಿನಿಂದ ನುಡಿದ- “ಹಸಿವೆಯಾಗುತ್ತದಮ್ಮಾ. ಮನೆಗೆ ಹೋಗೋಣ”. ಆದರೆ ತಾಯಿ ಬಿಡಲಿಲ್ಲ”. “ನಿನಗೆ ಮಾತ್ರ ಹಸಿವೆಯೇ?” ಮಧ್ಯಾಹ್ನ ಉಂಡಿದ್ದೀಯಲ್ಲ ಮತ್ತೆ? ಈ ಅಜ್ಜ ಯಾವಾಗ ಉಂಡಿದ್ದಾನೆಂದು ಸ್ವಲ್ಪ ಕೇಳು.”

ಈ ಮಾತುಗಳು ಆ ಮುದುಕನಿಗೆ ಕೇಳಿಸಿದವು. ಬಾಲಕ ಕೇಳುವ ಮೊದಲೇ ಅವನು ಹೇಳಿಬಿಟ್ಟ, “ಬೆಳಿಗ್ಗೆ ಸ್ವಲ್ಪ ಗಂಜಿ ಕುಡಿದಿದ್ದೆ ಅಮ್ಮ”. ತಾಯಿ ಮಗನಿಗೆ ಹೇಳಿದಳು. “ನೋಡಿದೆಯಾ, ಈ ಅಜ್ಜ ಸ್ವಲ್ಪ ಗಂಜಿ ಕುಡಿದದ್ದು ಮುಂಜಾನೆ. ಮಧ್ಯಾಹ್ನ ಹೊಟ್ಟೆ ತುಂಬ ಉಂಡ ನಿನಗೆ ಇಷ್ಟು ಹಸಿವೆಯಾಗಿರುವಾಗ ಅವನಿಗೆ ಎಷ್ಟು ಹಸಿವೆಯಾಗಿದ್ದಿರಬೇಡ! ಈ ದುಡ್ಡನ್ನು ನೀನು ಶಾಲೆಯಿಂದ ಮನೆಗೆ ಬರುವಾಗಲೇ ಇವನಿಗೆ ಕೊಟ್ಟಿದ್ದಿದ್ದರೆ ಏನಾದರೂ ಕೊಂಡು ತಿನ್ನುತ್ತಿದ್ದನೋ ಇಲ್ಲವೊ? ನೀನು ಇಷ್ಟೊತ್ತು ಈ ದುಡ್ಡನ್ನು ಜೇಬಿನಲ್ಲಿಟ್ಟಿದ್ದರಿಂದ ಜೇಬಿಗೇನಾದರೂ ಸುಖ ಸಿಕ್ಕಿತೇನು?”

“ಜೇಬಿಗೆ ಸುಖ? ಅದು ಹೇಗೆ ಸಾಧ್ಯ?”

“ಹಾಗಾದರೆ ಇಷ್ಟೊತ್ತು ಆ ಸುಖ ಈ ಅಜ್ಜನಿಗೆ ಸಿಕ್ಕದೇ ಇರಲು ನೀನೇ ಕಾರಣನಲ್ಲವೆ? ಅದಕ್ಕಾಗಿ ಅವನಿಗೆ ನಮಸ್ಕರಿಸಿ ಕ್ಷಮೆ ಕೇಳು.”

ತಾಯಿಯ ಆ ಮಾತು ಕೇಳಿ ಮುದುಕನಿಗೆ ಹೃದಯ ತುಂಬಿ ಬಂದಿತು. ಅವನು “ಬೇಡ, ಅಮ್ಮಾ ಬೇಡ” ಎಂದು ಹೇಳುತ್ತಿದ್ದಾಗ ಬಾಲಕ “ತಪ್ಪಾಯಿತು, ಕ್ಷಮಿಸು” ಎಂದು ನಮಸ್ಕರಿಸಿದ.

ಬಡತನದಲ್ಲಿ ಬಾಲ್ಯ

ಈ ಘಟನೆ ನಡೆದದ್ದು ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ. ೧೯೦೦ ನೆಯ ಇಸವಿಯಲ್ಲಿ. ಈ ಬಾಲಕನೇ ಮುಂದೆ ಬಡಬಗ್ಗರ ಸೇವೆ ಮಾಡಿ ಮಹಾಪುರುಷನಾದ. “ಪಂಡಿತ ತಾರಾನಾಥ” ನೆಂದು ಪ್ರಖ್ಯಾತನಾದ.

ಪಂಡಿತ ತಾರಾನಾಥರು ಹುಟ್ಟಿದ್ದು ಮಂಗಳೂರಿನಲ್ಲಿ  ೧೮೯೧ ನೆಯ ಜೂನ್ ೫ ರಂದು. ತಂದೆ ರಂಗರಾಯರು, ತಾಯಿ ರಾಜೀವಮ್ಮ. ಒಬ್ಬ ತಮ್ಮ ಅಮೃತ, ಮೂವರು ತಂಗಿಯರು ವರದಾ, ಭಾಮಾ ಮತ್ತು ಲೀಲಾವತಿ.

ತಾರಾನಾಥರು ಚಿಕ್ಕವರಿದ್ದಾಗಲೇ ತಂದೆ ರಂಗರಾಯರು ತೀರಿಹೋದರು. ಬಡತನದ ಮೂಲಕ ರಾಜೀವಮ್ಮ ಬಹಳ ಕಷ್ಟದಿಂದ ಮಕ್ಕಳನ್ನು ಸಾಕತೊಡಗಿದಳು. ಮಕ್ಕಳು ಕಲಿತು ದೊಡ್ಡವರಾಗಲೆಂದು ಶಾಲೆಗೆ ಸೇರಿಸಿದಳು. ಜೊತೆಗೆ ಮನೆಯಲ್ಲಿ ಒಳ್ಳೆಯ ಪಾಠ ಕಲಿಸಿದಳು.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ರಾಜೀವಮ್ಮನ ಸ್ವಭಾವವಾಗಿತ್ತು. ಬಡವರ ಸೇವೆ ಮಾಡಬೇಕೆಂದು ಮಕ್ಕಳಿಗೂ ಕಲಿಸುತ್ತಿದ್ದಳು. ಒಮ್ಮೆ ತಾರಾನಾಥರ ಕೈಯಿಂದ ಕಣ್ಣಿಲ್ಲದ ಮುದುಕನಿಗೆ ದುಡ್ಡು ಕೊಡಿಸಿ ಬಡವರಿಗೆ ದಾನ ಮಾಡುವಾಗ ತಡ ಮಾಡಬಾರದೆಂದು ಕಲಿಸಿದ ಘಟನೆಯನ್ನು ಮೇಲೆ ವಿವರಿಸಿದೆ.

ನಿನಗೆ ವ್ಯಥೆಯಾಯಿತೆ?

ತಿಂಡಿಯಷ್ಟೇ ಅಲ್ಲ, ಏನೇ ದೊರೆತರೂ ಸಂಗಡಿಗರೊಡನೆ ಹಂಚಿಕೊಳ್ಳಬೇಕೆಂದು ಅವಳು ಮಕ್ಕಳಿಗೆ ಕಲಿಸುತ್ತಿದ್ದಳು. ಎಂದಿನಂತೆ ಮನೆಗೆ ಓಡೋಡಿ ಬಂದ. ಸಂತೋಷದಿಂದ ತಾಯಿಗೆ ಹೇಳತೊಡಗಿದ: “ಅಮ್ಮಾ, ಈ ಹೊತ್ತು ಮಾಸ್ತರರು ನನಗೆ “ಜಾಣ ಹುಡುಗ” ಎಂದರು. ಉಳಿದವರಿಗೆಲ್ಲ “ದಡ್ಡರು” ಎಂದು ಬೈದರು.”

ತಾಯಿ ಕೇಳಿದಳು -“ಯಾಕೆ ಮಗೂ”?

“ನಮ್ಮ ವರ್ಗದಲ್ಲಿ ೭೨ ಮಂದಿ ಹುಡುಗರಿದ್ದಾರೆ, ಭೂಗೋಳದ ಪ್ರಶ್ನೆ ಕೇಳಿದಾಗ ಅದರ ಉತ್ತರ ಯಾರೂ ಹೇಳಲಿಲ್ಲ. ನಾನೊಬ್ಬನೇ ಹೇಳಿದ. ಅದಕ್ಕಾಗಿ ನನಗೆ “ಜಾಣ ಹುಡುಗ” ಎಂದು ಹೊಗಳಿದರು.”

ಈ ಮಾತಿನಿಂದ ರಾಜೀವಮ್ಮನಿಗೆ ಸಂತೋಷವಾಗಲಿಲ್ಲ. ಅವಳು “ಸಾಕು ನಿನ್ನ ಪೌರುಷ, ನಡೆ ಇಲ್ಲಿಂದ” ಎಂದು ಬೇಸರದಿಂದ ಹೇಳಿದಳು.” ತಾಯಿಯಿಂದ ಹೊಗಳಿಕೆ ಸಿಕ್ಕುವುದೆಂದು ಶಾಲೆಯಿಂದ ಓಡೋಡಿ ಬಂದ ಬಲಕನಿಗೆ ನಿರಾಶೆಯಾಯಿತು. “ಅಮ್ಮಾ, ಯಾಕೆ ಹೀಗೆನ್ನುತ್ತೀ?” ಎಂದು ದುಃಖದಿಂದ ಕೇಳಿದ.

“ಮತ್ತೇನು ಹೇಳಬೇಕು?” ಮಾಸ್ತರರು ಕಲಿಸಿದ್ದನ್ನು ನೀನೊಬ್ಬ ತಿಳಿದುಕೊಂಡೆ. ಅದರಿಂದ ಮಹಾಜ್ಞಾನಿಯಾದೆಯೆಂದು ಉಬ್ಬಿಹೋದಿಯಲ್ಲವೆ? ನಿನ್ನ ಮಾಸ್ತರರು ಹೇಳಿದ್ದು ವರ್ಗದಲ್ಲಿರುವ ನಿನ್ನ ಅಣ್ಣ-ತಮ್ಮಂದಿರಿಗೆ ತಿಳಿಯಲಿಲ್ಲವೆಂದು ನಿನಗೆ ದುಃಖ ಆಯಿತೆ? ದಡ್ಡರೆಂದು ಮಾಸ್ತರರು ಬೈದಾಗ ಅವರಿಗೆ ಅಪಮಾನವಾಯಿತೆಂದು ನಿನಗೆ ವ್ಯಥೆಯಾಯಿತೆ?” ಹೀಗೆ ಹೇಳುವಾಗ ಅವಳು ಅಳತೊಡಗಿದಳು. ಬಾಲಕನಿಗೂ ತಾಯಿ ಹೇಳಿದ್ದು ಅರ್ಥವಾಯಿತು. ಅವನು ಕೇಳಿದ- “ಅಮ್ಮಾ, ನಾನೇನು ಮಾಡಬೇಕೀಗ?”

ಹೋಗಿ ಮಾಸ್ತರರಿಗೆ ಹೇಳು. “ನೀವು ಕಲಿಸಿದ ಪಾಠ ಯಾರಿಗೂ ತಿಳಿದಿರುವುದಿಲ್ಲ. ದಯಮಾಡಿ ಇನ್ನೊಮ್ಮೆ ಕಲಿಸಿರಿ ಎಂದು”.

ಈ ರೀತಿ ರಾಜೀವಮ್ಮ ಮಕ್ಕಳಿಗೆ ಪ್ರಸಂಗ ಬಂದಾಗಲೆಲ್ಲ ಒಳ್ಳೆಯ ಪಾಠ ಕಲಿಸುತ್ತಿದ್ದಳು. ನೆರೆಹೊರೆಯಲ್ಲಿ ಯಾವುದೇ ಕೆಲಸವಿದ್ದರೂ ಅವಳು ಸದಾ ಸಿದ್ಧಳು. ಕಾಯಿಲೆ ಬಂದು ಮಲಗಿದವರ ಉಪಚಾರ ಮಾಡುವಾಗ ಅವಳು ತನ್ನ ಆರೋಗ್ಯದ ಬಗ್ಗೆ ಕೂಡ ವಿಚಾರ ಮಾಡುತ್ತಿದ್ದಿಲ್ಲ. ತಮ್ಮ ಕಷ್ಟದ ಚಿಂತೆ ಮಾಡದೇ ಪರರ ಸೇವೆ ಮಾಡುವುದೇ ಅವಳ ಜೀವನವಾಗಿತ್ತು.

ನಾನೀಗ ಹೋಗಬೇಕು

ಒಮ್ಮೆ ಮಂಗಳೂರಿನಲ್ಲಿ ಪ್ಲೇಗಿನ ಕಾಯಿಲೆ ಹಬ್ಬಿ ಬಿಟ್ಟಿತು. ಆಗ ರಾಜೀವಮ್ಮನಿಗೆ ರೋಗಿಗಳ ಉಪಚಾರಕ್ಕೆ ಸಮಯವೇ ಸಾಲದಾಯಿತು. ಮತ್ತು ಹೀಗೆ ಉಪಚಾರ ಮಾಡುತ್ತಿದ್ದಾಗ ಒಂದು ದಿನ ಅವಳಿಗೂ ಪ್ಲೇಗು ಅಂಟಿಕೊಂಡಿತು. ಆಗ ಕೇಳುವುದೇನು? ಪ್ಲೇಗಿನಿಂದ ಸಾವು ಖಚಿತವೆಂದು ಅಷ್ಟೊತ್ತಿಗೆ ತಿಳಿದು ಕೊಂಡಿದ್ದ ತಾರಾನಾಥ ಕಂಗಾಲಾದರು. ತಾಯಿಯ ಸೇವೆಯನ್ನು ಬಹಳ ಕಾಳಜಿಯಿಂದ ಮಾಡತೊಡಗಿದರು. ಆದರೂ ಒಂದು ದಿನ ರಾತ್ರಿ ಬೇನೆ ಹೆಚ್ಚಾಯಿತು. ಸಾವು ಸಮೀಪಿಸಿದೆಯೆಂದು ರಾಜೀವಮ್ಮನಿಗೆ ತಿಳಿಯಿತು. ಮಕ್ಕಳಾದರೂ ಈ ಕಾಯಿಲೆಯಿಂದ ದೂರ ಉಳಿಯಲೆಂದು ಆಲೋಚಿಸಿದಳು ಮತ್ತು ತನ್ನ ಸೇವೆಗಾಗಿ ಎಚ್ಚರವಾಗಿಯೇ ಇದ್ದ ಹಿರಿಯ ಮಗನನ್ನು ಕರೆದಳು. “ತಾರಾ, ಅಮೃತನನ್ನೂ ತಂಗಿಯರನ್ನೂ ಹೊರಗಡೆ ಮಲಗಿಸಿ ಬಾ” ಎಂದಳು. ತಾರಾನಾಥರು ಹಾಗೆಯೇ ಮಾಡಿ ಬಂದರು. ತಾಯಿ ಕಣ್ಣೀರಿಡುತ್ತ ಮತ್ತೆ ಕರೆದಳು, “ತಾರಾ” ಏನಮ್ಮಾ ಕೂಗಿದೆ?” ಎಂದು ಅವರು ಸಮೀಪ ಹೋದರು. ತಾಯಿ ಹೇಳಿದಳು, “ತಾರಾ, ನೀನೂ ಸಹ ಈ ಕೋಣೆ ಬಿಟ್ಟು ಹೊರಗೇ ಇದ್ದು ಬಿಡು.”

ತಾಯಿಯ ಸೇವೆಗಾಗಿ ಅಲ್ಲಿಯೇ ಇರಬೇಕೆಂಬುದು ತಾರಾನಾಥರ ಇಚ್ಛೆ. ಅದಕ್ಕಾಗಿ ಕೇಳಿದರು “ಯಾಕಮ್ಮಾ”? ತನ್ನ ಮೇಲಿರುವ ಮಗನ ಭಕ್ತಿ ನೋಡಿ ತಾಯಿಗೆ ಕಣ್ಣೀರು ಉಕ್ಕಿ ಬಂತು. ಆದರೆ ಸಾವು ಸಮೀಪಿದಾಗ ದೇವರ ಧ್ಯಾನ ತೊಡಗಬೇಕೆಂದು ನಿಶ್ಚಯ ಮಾಡಿದ ಅವಳು ಹೇಳಿದಳು, “ತಾರಾ ಮಗೂ! ನಿನಗೇನು ಹೇಳಲಿ? ಈ ರೋಗ ನನ್ನ ಪ್ರಾಣ ಹೀರುತ್ತಿದೆ. ತಾರಾ, ಸ್ವಲ್ಪವೇ ಸಮಯದಲ್ಲಿ ನಾನು ಸಾಯುವುದು ನಿಶ್ಚಯ. ನಿನ್ನ ಮೇಲೆ ನನಗೆ ಬಹಳ ಮೋಗ. ನೀನು ಇಲ್ಲಿಯೇ ಇದ್ದರೆ ಮೋಹ ಹೆಚ್ಚುವುದು ತಾರಾ, ಮೋಹ ಹೆಚ್ಚುವುದು. ಆದರೆ ಮಗೂ, ನಾನೀಗ ಮಕ್ಕಳ ಮೇಲಿನ ಮೋಹ ಬಿಟ್ಟು ದೇವರ ಧ್ಯಾನ ಮಾಡುತ್ತಾ ಪ್ರಾಣ ಬಿಡಬೇಕು. ಆದುದರಿದ ನೀನೂ ಹೊರಗೆ ಹೋಗಿ ಬಿಡು ತಾರಾ! ಹೆದರಬೇಡ. ದೇವರು ನಿಮ್ಮನ್ನು ಕಾಪಾಡುವನು. ಜೀವನದಲ್ಲಿ ಹಾರಿ ಬೀಳು, ತಾರಾ, ಜಾರಿ ಮಾತ್ರ ಬೀಳಬೇಡ. ಇನ್ನು ನೀನು ಹೋಗಿ ಬಿಡು”.

ತಾರಾನಾಥರು ತಾಯಿಯ ಕೊನೆಯಾಸೆಯನ್ನು ಪೂರೈಸಲು ಹೊರಗೆ ಹೋದರು ಮತ್ತು ತಾಯಿಯ ಕೊನೆಯ ಮಾತನ್ನು ಮನಸ್ಸಿನಲ್ಲಿ ಗಟ್ಟಿಯಾಗಿಟ್ಟು ಕೊಂಡರು.

ಆಯಿತು, ರಾಜೀವಮ್ಮ, ಆ ಮಹಾತಾಯಿ, ದೇವರ ಧ್ಯಾನ ಮಾಡುತ್ತ ಪ್ರಾಣ ಬಿಟ್ಟರು.

ಇಂದೇ ಪರೀಕ್ಷೆ ಮಾಡಿ

ರಾಜೀವಮ್ಮ ಹೋದ ಬಳಿಕ ತಾರಾನಾಥರು ತಮ್ಮ ತಂಗಿಯರನ್ನು ಸಮಾಧಾನಗೊಳಿಸಿದರು. ಆದರೆ ಅವರನ್ನು ಸಾಕುವ ಹೊಣೆ ಇವರ ಮೇಲೆ ಬೀಳಲಿಲ್ಲ. ರಾಜೀವಮ್ಮನ ತಂಗಿ ನೇತ್ರಾವತಿಬಾಯಿಯವರು ಈ ಅನಾಥ ಮಕ್ಕಳನ್ನು ಸಾಕಲು ಓಡಿ ಬಂದರು. ಅವರಿಗೆ ಸ್ವಂತ ಸಂಸಾರದ ಹೊಣೆ ಇದ್ದಿಲ್ಲ. ಅವರ ಒಬ್ಬಳೇ ಮಗಳಾದ ಸುಲೋಚನಾಳ ವಿವಾಹವು ಹೈದರಾಬಾದಿನಲ್ಲಿ ಶಾಲಾ ಇನ್‌ಸ್ಪೆಕ್ಟರರಾಗಿದ್ದ ಸುಬ್ಬುರಾಯರೊಂದಿಗೆ ಆಗಿತ್ತು. ಹೈದರಾಬಾದಿಗೆ ಅಳಿಯನಿದ್ದಲ್ಲಿ ಈ ಮಕ್ಕಳನ್ನು ಒಯ್ದರೆ ಅವರ ಶಿಕ್ಷಣ ಸರಿಯಾಗಿ ಸಾಗುವುದೆಂದು ನೇತ್ರಾವತಿ ಬಾಯಿ ಆಲೋಚಿಸಿದರು. ಅಷ್ಟೊತ್ತಿಗೆ ತಾರಾನಾಥರು ಮಂಗಳೂರಿನ ಹೈಸ್ಕೂಲಿನಿಂದ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಮುಗಿಸಿದರು. ಅದು ೧೯೦೯ ನೆಯ ಇಸವಿ.

ತಾರಾನಾಥರು ಮೊದಲು ಹೈದರಾಬಾದಿನ ನಿಜಾಮ ಕಾಲೇಜನ್ನು ಸೇರಿದರು. ಅವರ ಚುರುಕು ಬಿದ್ದಿ ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಬೆಳಕು ಕಂಡಿತ್ತು. ಇತರರು ಒಂದು ವರ್ಷದ ಅವಧಿಯಲ್ಲಿ ಕಲಿಯುವ ಪುಸ್ತಕಗಳನ್ನು ತಾರಾನಾಥರು ಕೆಲವೇ ತಿಂಗಳುಗಳಲ್ಲಿ ಕಲಿತು ಮುಗಿಸುತ್ತಿದ್ದರು.

ಒಂದು ದಿನ ಅವರು ಕಾಲೇಜಿನ ಪ್ರಿನ್ಸಿಪಾಲರ ಬಳಿ ಹೋಗಿ ಹೇಳಿದರು, “ಸರ್, ನಾನು ಈ ವರುಷದ ಪುಸ್ತಕಗಳನ್ನು ಕಲಿತು ಮುಗಿಸಿದ್ದೇನೆ. ಬೇಕಾದರೆ ಇಂದೇ ನೀವು ನನ್ನನ್ನು ಪರೀಕ್ಷೆ ಮಾಡಬಹುದು. “ಪ್ರಿನ್ಸಿಪಾಲರಿಗೆ ಅಚ್ಚರಿಯಾಯಿತು. ಆ ರೀತಿ ಅಲ್ಲಿ ವಿದ್ಯಾರ್ಥಿಯಾಗಿದ್ದವರು ಹೇಳಿದ್ದು ಅದೇ ಮೊದಲನೇ ಬಾರಿ. ಅವರು ತಾರಾನಾಥರ ಚುರುಕು ಬುದ್ಧಿ ಅರಿತಿದ್ದರು. ಆದ್ದರಿಂದ ಅವರು ಕೂಡಲೇ ವಿಜ್ಞಾನದ ಪ್ರಾಧ್ಯಾಪಕರಾದ ಪ್ರೋಫೆಸರ್ ಮ್ಯಾಕ್ ವಿನ್ನರನ್ನು ಕರೆದು ತಾರಾನಾಥರ ಪರೀಕ್ಷೆ ತೆಗೆದುಕೊಳ್ಳಲು ಹೇಳಿದರು. ತಾರಾನಾಥರು ಎಲ್ಲ ಪ್ರಶ್ನೆಗಳನ್ನು ಸಮರ್ಪಕವಾಗಿ ಉತ್ತರಿಸಿ ಎಲ್ಲ ಶಿಕ್ಷಕರ ಮೆಚ್ಚುಗೆಗಳಿಸಿದರು.

ಆ ಬಳಿಕ ತಾರಾನಾಥರು ವೈದ್ಯಕೀಯ ಶಾಲೆಯನ್ನು ಸೇರಿದರು. ಅಲ್ಲಿಯೂ ಅವರ ಬುದ್ಧಿವಂತಿಕೆಯನ್ನು ಎಲ್ಲ ಅಧ್ಯಾಪಕರು ಮೆಚ್ಚಿದರು. ಅದರಲ್ಲಿಯೂ ಆ ಶಾಲೆಯ ವೈಸ್ ಪ್ರಿನ್ಸಿಪಾಲರಾದ ಡಾಕ್ಟರ್ ಅಬ್ದುಲ್ ಗನಿಯವರಿಗೆ ತಾರಾನಾಥರೆಂದರೆ ಬಹಳ ಆದರ.

ಇದೇ ಕಾಲಕ್ಕೆ ತಾರಾನಾಥರು ಪ್ರಭಾವೀ ಭಾಷಣಕಾರರೆಂಬುದು ಎಲ್ಲರಿಗೂ ಕಂಡು ಬಂತು. ಒಮ್ಮೆ ಹೈದರಾಬಾದಿನ “ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಶನ್” ಸಂಸ್ಥೆಯು ಏರ್ಪಡಿಸಿದ್ದ ಸಮಾರಂಭಕ್ಕೆ ಶ್ರೀಮತಿ ಸರೋಜಿನಿ ನಾಯುಡು ಅವರು ಅಧ್ಯಕ್ಷರಾಗಿದ್ದರು. ಆಗ ತಾರಾನಾಥರು ಮಾಡಿದ ಭಾಷಣವನ್ನು ಕೇಳಿ ಅವರು “ಈ ತರುಣ ರಾಜಕೀಯ ರಂಗದಲ್ಲಿ ಕಾಲಿಟ್ಟಿದ್ದೇ ಆದರೆ ಅವನಿಗೆ ಗೋಖಲೆ ಮತ್ತು ತಿಲಕರಂತೆ ಉತ್ತಮ ಭವಿಷ್ಯವಿದೆ” ಎಂದು ಹೋಗಳಿದರು.

ಅನ್ಯಾಯದ ವಿರುದ್ಧ ಹೋರಾಟ

ಅನ್ಯಾಯದ ವಿರುದ್ಧ ಹೋರಾಟಲು ವಿದ್ಯಾರ್ಥಿಗಳನ್ನು ಸಂಘಟಿಸುವ ಕೌಶಲವೂ ತಾರಾನಾಥರಲ್ಲಿತ್ತು. ಆಗ ಅವರು ವೈದ್ಯಕೀಯ ಶಾಲೆಯ ಕೊನೆಯ ವರ್ಷದಲ್ಲಿ ಓದುತ್ತಿದ್ದರು. ಇತರ ಪರೀಕ್ಷೆಗಳಲ್ಲಿ ಅವರು ಉತ್ತಮ ತರಗತಿಯಲ್ಲಿ ತೇರ್ಗಡೆಯಾಗಿದ್ದರು. ಕೊನೆಯ ವರ್ಷದ ಪರೀಕ್ಷೆಯನ್ನೂ ಅದೇ ರೀತಿ ತೇರ್ಗಡೆ ಮಾಡಿ ಅವರು ಇಂಗ್ಲೆಂಡಿಗೆ ಹೋಗುವರೆಂದು ಎಲ್ಲರೂ ಎಣಿಸಿದ್ದರು. ಯಾಕೆಂದರೆ ಆ ಶಾಲೆಯಿಂದ ಪ್ರತಿವರ್ಷವೂ ಇಬ್ಬರೂ ಬುದ್ಧಿವಂತ ವಿದ್ಯಾರ್ಥಿಗಳನ್ನು ಹೆಚ್ಚಿನ ಅಭ್ಯಾಸಕ್ಕೆ ಇಂಗ್ಲೆಂಡಿಗೆ ಕಳಿಸುತ್ತಿದ್ದರು.

ಆದರೆ, “ತಾನೊಂದು ಬಗೆದರೆ ದೈವವೊಂದು ಬರೆಯಿತು” ಎಂಬಂತೆ ಆ ಅವಕಾಶ ತಾರಾನಾಥರಿಗೆ ಲಭಿಸಲಿಲ್ಲ. ಅದಕ್ಕೆ ಕಾರಣ ಅನ್ಯಾಯದ ವಿರುದ್ಧ ಹೋರಾಡುವ ಅವರ ಸ್ವಭಾವ.

ತಾರಾನಾಥರು ಕೊನೆಯ ವರ್ಷದ ವಿದ್ಯಾರ್ಥಿಯಾಗಿದ್ದಾಗ ಹಿಂದಿನ ವರ್ಷ ಕೊನೆಯ ವರ್ಷದ ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯನ್ನು ಇಂಗ್ಲೆಂಡಿಗೆ ಕಳಿಸಲಿಲ್ಲ. ಬದಲಾಗಿ ನಿಜಾಮನ ಅಧಿಕಾರಿಗಳ ಒತ್ತಾಯದ ಮೂಲಕ ಬೇರೆಯವರನ್ನು ಕಳಿಸಲಾಯಿತು. ಇದರ ವಿರುದ್ಧ ತಾರಾನಾಥರು ವಿದ್ಯಾರ್ಥಿಗಳನ್ನು ಸಂಘಟಿಸಿ ಮುಷ್ಕರ ಹೂಡಿದರು. ಹೀಗಾಗಿ ಕೊನೆಯ ವರ್ಷದ ತಮ್ಮ ಪರೀಕ್ಷೆಯನ್ನು ಮುಗಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮತ್ತು ಇಂಗ್ಲೆಂಡಿಗೆ ಹೋಗುವ ಅವಕಾಶವೂ ತಪ್ಪಿಹೋಯಿತು.

ವಿಧವೆಗೆ ನೆರವು

ದುರ್ಬಲರಿಗೆ ಸಹಾಯ ಮಾಡುವ ಕೆಲಸವನ್ನೂ ಅವರು ಯಶಸ್ವಿಯಾಗಿ ಮಾಡುತ್ತಿದ್ದರು. ಅವರು ವೈದ್ಯಕೀಯ ಶಾಲೆಗೆ ಹೋಗುವ ದಾರಿಯಲ್ಲಿ ಒಂದು ದಿನ ಒಬ್ಬ ಹೆಂಗಸು ಅಳುತ್ತಿರುವುದು ಅವರಿಗೆ ಕೇಳಿಸಿತು. ಆ ಮನೆ ಶ್ರೀಮಂತ ಮುಸಲ್ಮಾನನರು. ಅವನು ಸತ್ತಾಗ ಅವನ ಹೆಸರಿನಲ್ಲಿ ಐವತ್ತು ಸಾವಿರ ರೂಪಾಯಿಗಳು ಬ್ಯಾಂಕಿನಲ್ಲಿದ್ದವು. ಆ ಹಣವನ್ನು ನುಂಗಬೇಕೆಂದು ಅವನ ತಮ್ಮ ತನ್ನ ಅತ್ತಿಗೆಗೆ ಹುಚ್ಚು ಹಿಡಿದಿದೆಯೆಂದು ಪ್ರಚಾರ ಮಾಡಿದ ಮತ್ತು ಒಬ್ಬ ವೈದ್ಯರಿಂದ ಸರ್ಟಿಫಿಕೇಟ್ ಕೂಡ ಪಡೆದ. ಹೀಗಾಗಿ ಆ ಅನಾಥ ವಿಧವೆ ತನ್ನ ಸಹಾಯಕ್ಕೆ ಯಾರೂ ಇಲ್ಲವೆಂದು ಗೋಳಾಡಿ ಅಳುತ್ತಿದ್ದಳು. ತಾರಾನಾಥರು ಹೋಗಿ ವಿಚಾರಿಸಿದಾಗ ಎಲ್ಲ ವಿಷಯ ಹೇಳಿದಳು. ಕೂಡಲೇ ಆ ವಿಧವೆಯನ್ನು ತಮ್ಮ ಶಾಲೆಯ ವೈಸ್ ಪ್ರಿನ್ಸಿಪಾನ್ ಡಾಕ್ಟರ್ ಗನಿಯವರ ಬಳಿ ಕರೆದುಕೊಂಡು ಹೋದರು. ಗನಿಯವರು ಅವಳನ್ನು ಪರೀಕ್ಷಿಸಿ ಹುಚ್ಚು ಹಿಡಿದಿಲ್ಲವೆಂದು ಸರ್ಟಿಫಿಕೇಟ್ ಕೊಟ್ಟರು. ಅದನ್ನು ತಾರಾನಾಥರು ನ್ಯಾಯಧೀಶರಿಗೆ ತೋರಿಸಿ ಅವರಿಂದ ಆಜ್ಞೆ ಪಡೆದು ಆ ವಿಧವೆಗೆ ಹಣವನ್ನು ದೊರಕಿಸಿಕೊಟ್ಟರು.

 

"ತಾರಾನಾಥರು, ಲೇಖಕರಾಗಿ, ಕಬೀರದಾಸ ಪಾತ್ರದಲ್ಲಿ, ಬಡವರ ಕೇರಿಯಲ್ಲಿ, ರೋಗಿಗಳ ಶುಶ್ರೂಷೆಯಲ್ಲಿ"

ಅರಮನೆಯ ಕರೆ

 

ವೈದ್ಯಕೀಯ ಶಾಲೆಯ ಕೊನೆಯ ಪರೀಕ್ಷೆಯನ್ನು ಮುಗಿಸದಿದ್ದರೂ ಕೂಡ ತಾರಾನಾಥರ ಪಾಂಡಿತ್ಯ ಶಾಲೆಯ ಅಧಿಕಾರಿಗಳಿಗೆ ತಿಳಿದಿತ್ತು. ಆದ್ದರಿಂದ ಮರುವರುಷವೇ ತಾರಾನಾಥರನ್ನು ತಮ್ಮ ಶಾಲೆಯಲ್ಲಿ ಅನಾಟಮಿಯ ಡೆಮಾನ್‌ಸ್ಟ್ರೇಟರ್ ಎಂದು ನೇಮಿಸಿದರು. ಆಗ ಶಿಕ್ಷಕನಾದರೆ ವಿದ್ಯಾರ್ಥಿಗಳನ್ನು ದಕ್ಷ ನಾಗರಿಕರನ್ನಾಗಿ ರೂಪಿಸಿ ನಿಜವಾದ ದೇಶಸೇವೆಯಲ್ಲಿ ತೊಡಗಿಸ ಬರುತ್ತದೆಂದು ತಾರಾನಾಥರಿಗೆ ಅನುಭವವಾಯಿತು. ಮತ್ತು ಶಿಕ್ಷಕರಾಗಿಯೇ ಜೀವನ ನಡೆಯಿಸಬೇಕೆಂದು ಅವರು ನಿಶ್ಚಯಿಸಿದರು.

ವೈದ್ಯಕೀಯ ಶಾಲೆಯಲ್ಲಿ ಡೆಮಾನ್‌ಸ್ಟ್ರೇಟರ್ ಆಗಿದ್ದಾಗ ಅವರ ಸ್ವಾಭಿಮಾನ ಪ್ರಕಟವಾಗುವ ಒಂದು ಘಟನೆ ನಡೆಯಿತು. ತಾರಾನಾಥರು ವಿದ್ಯಾರ್ಥಿಗಳಿಗೆ ಚೆನ್ನಾಗಿ ಕಲಿಸುತ್ತಾರೆಂಬ ಸಂಗತಿ ಹೈದರಾಬಾದ್‌ ಸಂಸ್ಥಾನ ಆಳುತ್ತಿದ್ದ ನಿಜಾಮನವರೆಗೂ ತಲುಪಿತ್ತು. ಆದ್ದರಿಂದ ತಾರಾನಾಥರು ರಾಜಮಹಲಿಗೆ ಬಂದು ನಿಜಾಮನ ಮಕ್ಕಳಿಗೆ ಪಾಠ ಹೇಳಬೇಕೆಂಬ ಆಜ್ಞೆ ಹೊರಟಿತು. ಇಷ್ಟೇ ಅಲ್ಲ, ನಿಜಾಮನ ಮಕ್ಕಳ ಖಾಸಗಿ ಶಿಕ್ಷಕರಾಗಿ ತಾರಾನಾಥರು ಇಂಗ್ಲೆಂಡಿಗೆ ಹೋಗಬೇಕೆಂದು ನಿರ್ಧಾರವಾಯಿತು.

ಆದರೆ ತಾರಾನಾಥರ ಸ್ವಾಭಿಮಾನ ಇದನ್ನು ಒಪ್ಪಿಸಲಿಲ್ಲ. ಭಾವ ಸುಬ್ಬರಾಯರು ಈ ಸುವರ್ಣಾವಕಾಶ ಕಳೆದುಕೊಳ್ಳಬಾರದೆಂದು ಬುದ್ಧಿವಾದ ಹೇಳಿದರು ಮತ್ತು ನಿಜಾಮನೊಡನೆ ತಾರಾನಾಥರ ಭೇಟಿಯನ್ನು ನಿಶ್ಚಯಿಸಿದರು. ನಜಾಮನ ಭೆಟ್ಟಿಗೆ ಹೋಗುವವರು ಚೂಡೀದಾರ ಪೈಜಾಮಾ, ಶರವಾನಿ ಮತ್ತು ಪಗಡಿಗಳನ್ನಾಗಲಿ ಪಾಶ್ಚಾತ್ಯರ ಪೋಷಾಕಾದ ಕೋಟು- ಷರಾಯಿಗಳನ್ನಾಗಲಿ ಧರಿಸಲೇ ಬೇಕಾಗಿತ್ತು. ಇದು ತಮ್ಮ ಅಭಿಮಾನಕ್ಕೆ ಕುಂದೆಂದು ತಾರಾನಾಥರು ಭಾವಿಸಿದರು. ಆದರೂ ಭಾವನ ಒತ್ತಾಯಕ್ಕೆ ಮಣಿದು ಭೆಟ್ಟಿಯ ದಿನ ಕೋಟು ಷರಾಯಿ ಧರಿಸಿ ಮನೆಯಿಂದ ಹೊರಬಿದ್ದರು. ದಾರಿಯಲ್ಲಿ ಅವನನ್ನು ಕಳಚಿಟ್ಟು, ಪೇಶ್ವೆಯವರ ಕಾಲದ ಬ್ರಾಹ್ಮಣರಂತೆ ವೇಷ ಧರಿಸಿ ನಿಜಾಮನ ಅರಮನೆಗೆ ಹೋದರು. ಅವರ ವೇಷವನ್ನು ನೋಡಿದ ಕಾವಲುಗಾರನು ಇವರನ್ನು ಒಳಗೆ ಬಿಡಲಿಲ್ಲ.

ತಾರಾನಾಥರು ಮನೆಗೆ ಬಂದ ಬಳಿಕ ಸುಬ್ಬರಾಯರು ಕೇಳಿದಾಗ “ನನ್ನನ್ನು ಒಳಗೆ ಬಿಡದೆ ಅಪಮಾನಿಸಿದರು” ಎಂದು ಹೇಳಿಬಿಟ್ಟರು. ಸುಬ್ಬರಾಯರಿಗೆ ದುಃಖವಾಯಿತು. “ತಾರಾ, ಎಂಥಾ ಅವಕಾಶ ಕಳೆದುಕೊಂಡೆ! ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋಗಬೇಕೆಂದು ಹಾತೊರೆದು ಪ್ರಯತ್ನಿಸುವವರು ಎಷ್ಟು ಮಂದಿ ಇಲ್ಲ? ನೀನೋ, ಬಾಗಿಲಿಗೆ ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳಲಿಲ್ಲ. ಅದೃಷ್ಟದ ಆಟ” ಎಂದು ಹಳಹಳಿಸಿದರು.

ವಿಕಾಸಕ್ಕೆ ಕ್ಷೇತ್ರ

ಜೀವನದಲ್ಲಿ ಶಿಕ್ಷಕನಾಗಿಯೇ ಬದುಕಬೇಕೆಂಬ ತಮ್ಮ ನಿಶ್ಚಯವನ್ನು ತಾರಾನಾಥರು ಒಮ್ಮೆ ಹೈದರಾಬಾದ್ ಸಂಸ್ಥಾನದ ವಿದ್ಯಾ ಇಲಾಖೆಯ ಮುಖ್ಯಸ್ಥರಿಗೆ ಹೇಳಿದಾಗ ಅವರಿಗೂ ಆನಂದವಾಯಿತು. ಅವರು ತಾರಾನಾಥರನ್ನು ಬೀದರಿನಲ್ಲಿದ್ದ ಪ್ರೌಢಶಾಲೆಗೆ ವಿಜ್ಞಾನದ ಶಿಕ್ಷಕರನ್ನಾಗಿ ನೇಮಿಸಿದ ಆಜ್ಞೆ ಕಳಿಸಿದರು. ತಾರಾನಾಥರು ಬೀದರಿಗೆ ಹೊರಟರು.

ಹೈದರಾಬಾದಿನಲ್ಲಿದ್ದಾಗಲೇ ತಾರಾನಾಥರಿಗೆ ಕಲಿಸುವುದರ ಜೊತೆಗೆ ಆಯುರ್ವೇದ, ಸಂಗೀತ ಮತ್ತು ಯೋಗಗಳಲ್ಲಿ ಆಸಕ್ತಿ ಬೆಳೆದಿತ್ತು. ಅದು ವಿಕಾಸವಾಗಲು ಬೀದರಿನಲ್ಲಿ ಅನುಕೂಲತೆ ಒದಗಿತು. ತಾರಾನಾಥರು ಶಿಕ್ಷಕರಾಗಿ ಸೇರಿದ ಪ್ರೌಢಶಾಲೆಗೆ ಜೆ. ಮಂಗಯ್ಯನೆಂಬುವರು ಮುಖ್ಯೋಧ್ಯಾಪಕರಾಗಿದ್ದು. ಅವರು ಯೋಗಶಾಸ್ತ್ರ- ಮಂತ್ರಶಾಸ್ತ್ರಗಳಲ್ಲಿ ಪಳಗಿದ್ದರು. ಬೀದರಿನ ಸಮೀಪದಲ್ಲೇ ಇದ್ದ “ಶುಕ್ಲ ತೀರ್ಥ” ವು ಯೋಗ ಸಾಧನೆಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿತ್ತು. ಮಂಗಯ್ಯನವರ ಮಾರ್ಗದರ್ಶನ ಮತ್ತು ಶುಕ್ಲ ತೀರ್ಥದ ವಾತಾವರಣ- ಇವುಗಳಿಂದ ತಾರಾನಾಥರು ಯೋಗಶಾಸ್ತ್ರದಲ್ಲಿ ಚೆನ್ನಾಗಿ ತರಬೇತಿ ಗಳಿಸಿದರು.

ಇದೇ ಸಮಯದಲ್ಲಿ ಉತ್ತಮದಾಸ ಪರಮಹಂಸರೆಂಬ ಸಾಧುಗಳು ಬೀದರಿಗೆ ಬಂದರು. ಇವರು ಹಿಮಾಲಯದಲ್ಲಿ ಸಿದ್ಧಿ ಪಡೆದು ಯೋಗಶಾಸ್ತ್ರದ ಸಾಧಕರಿಗೆ ಮಾರ್ಗದರ್ಶನ ಮಾಡಲು ದೇಶದಲ್ಲಿ ಸಂಚಾರ ಮಾಡುತ್ತಿದ್ದರು. ತಾರಾನಾಥರನ್ನು ಕಂಡು ಅವರಿಗೆ ಬಹಳ ಸಂತೋಷವಾಯಿತು. “ಆಧ್ವಾತ್ಮ ಯೋಗದ ಸಾಧನೆಗೆ ಈತ ಅತ್ಯಂತ ಯೋಗ್ಯ. ಇಂಥವನನ್ನು ನಾನು ಅನೇಕ ದಿನಗಳಿಂದ ಹುಡುಕುತಿದ್ದೆ” ಎಂದು ಉದ್ಗರಿಸಿ ತಾರಾನಾಥರಿಗೆ ಯೋಗದ ರಹಸ್ಯಗಳನ್ನು ಹೇಳಿಕೊಟ್ಟರು. ಹೀಗೆಯೇ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ಯೋಗೀಶ್ವರಾನಂದ ರಿಂಗ ಯೋಗ ಮತ್ತು ಆಯುರ್ವೇ ದೀಕ್ಷೆಯನ್ನು ತಾರಾನಾಥರು ಪಡೆದರು. ಆಧ್ಮಾತ್ಮದಲ್ಲಿ ಉಚ್ಚ ಮಟ್ಟದ ಸಿದ್ಧಿಗಳಿಸಿ ಬೀದರಿನಲ್ಲೇ ವಾಸವಾಗಿದ್ದ ರುದ್ರಮುನಿಯಪ್ಪನೆಂಬುವರೂ ಕೂಡ ತಾರಾನಾಥರನ್ನು ಪ್ರೇಮದಿಂದ ಕಂಡು ಮಾರ್ಗದರ್ಶನ ಮಾಡಿದರು.

ಕಾಲರಾ ಬೇನೆಯಲ್ಲಿ

ಹೀಗೆ ಯೋಗಸಾಧನೆಯಲ್ಲಿ ತೊಡಗಿದ್ದರೂ ತಾರಾನಾಥರು ಬಡವರ ಸೇವೆ ಮಾಡಬೇಕೆಂಬ ತಾಯಿ ಹೇಳಿಕೊಟ್ಟ ಪಾಠವನ್ನು ಎಂದಿಗೂ ಮರೆಯಲಿಲ್ಲ. ಒಮ್ಮೆ ಬೀದರಿನಲ್ಲಿ ಕಾಲರಾ ರೋಗ ಹಬ್ಬಿಕೊಂಡಿತು. ರೋಗಿಗಳ ಔಷಧೋಪಚಾರಕ್ಕಾಗಿ ತಾರಾನಾಥರು ಓಡಾಡತೊಡಗಿದರು. ಒಬ್ಬ ಕ್ರೈಸ್ತ ಪಾದ್ರಿಯ ಆಸ್ಪತ್ರೆಯ ಸಹಾಯ ಪಡೆದು ಆ ಭಯಂಕರ ರೋಗವನ್ನು ನಿಯಂತ್ರಿಸುವಲ್ಲಿ, ಯಶಸ್ವಿಯಾದರು. ಬೀದರಿನ ತುಂಬ ಜನರು ತಾರಾನಾಥರರನ್ನು ಹೊಗಳತೊಡಗಿದರು. ಆ ಕ್ರೈಸ್ತ ಪಾದ್ರಿಯು ತಾರಾನಾಥರರ ಜನಸೇವೆಯಿಂದ ಸಂತುಷ್ಟನಾಗಿ ತನ್ನ ಆಸ್ಪತ್ರೆಯನ್ನು ಅವರಿಗೆ ಬಿಟ್ಟುಕೊಟ್ಟನು. ತಾರಾನಾಥರರು ಹೈದರಾಬಾದಿನಲ್ಲಿದ್ದಾಗ ಅಲ್ಲಿಯ ಪ್ರಸಿದ್ಧ ಆಯುರ್ವೇದ ಪಂಡಿತರೂ ನಿಜಾಮನ ಖಾಸಗಿ ವೈದ್ಯರೂ ಆದ ಹಕೀಮ ಹದಿಗೋವಿಂದಜೀ ಮಹಾರಾಜರಿಂದ ನಾಡೀ ಪರೀಕ್ಷೆಯ ಶಾಸ್ತ್ರವನ್ನೂ ಕಲಿತಿದ್ದರು. ವೈದ್ಯಕೀಯ ಶಾಲೆಯಲ್ಲಿ ಗಳಿಸಿದ ಆಯುರ್ವೇದ ಜ್ಞಾನ ಮತ್ತು ನಾಡೀ ಪರೀಕ್ಷೆಯ ಈ ಜ್ಞಾನ ಎರಡನ್ನೂ ಅವರು ಜೀವನವಿಡೀ ರೋಗಿಗಳಿಗಾಗಿ ಮೀಸಲಿಟ್ಟರು ಮತ್ತು “ಕರ್ನಾಟಕದ ಧನ್ವಂತರಿ” ಎಂದು ಕೀರ್ತಿ ಗಳಿಸಿದರು.

ಮಾಸ್ತರರ ಶಕ್ತಿ

ಎಂತಹ ಪ್ರಸಂಗ ಬಂದರು ತಾರಾನಾಥರರು ಬಡವರನ್ನು ಮರೆಯುತ್ತಿದ್ದಿಲ್ಲ. ಆ ಕಾಲದಲ್ಲಿ ಪ್ರತಿ ವರುಷ ನಿಜಾಮನ ಹುಟ್ಟು ಹಬ್ಬದ ದಿನ ನಾಗರಿಕರೆಲ್ಲ ನಿಜಾಮನಿಗೆ ಏನಾದರೂ ಕಾಣಿಕೆ ಅರ್ಪಿಸುವ ಸಂಪ್ರದಾಯ ನಡೆದು ಬಂದಿತ್ತು. ಗುಲಾಮಗಿರಿಯ ಈ ಸಂಕೇತವನ್ನು ತಾರಾನಾಥರು ಬಹಿರಂಗವಾಗಿ ವಿರೋಧಿಸಿದರು. ಅಷ್ಟೇ ಅಲ್ಲ. ಅದೇ ಆಗ ಮುಗಿದಿದ್ದ ಮೊದಲನೆಯ ಮಹಾಯುದ್ಧದಲ್ಲಿ ಪ್ರಾಣ ತೆತ್ತ ವೀರ ಯೋಧರ ಪತ್ನಿಯರ ಸಹಾಯಕ್ಕಾಗಿ ನಿಧಿಯನ್ನು ಸಂಗ್ರಹಿಸಿದರು. ತಮ್ಮ ಒಂದು ತಿಂಗಳ ಸಂಬಳವನ್ನು ನಿಧಿಗೆ ಅರ್ಪಿಸಿ ನಿಜಾಮನಿಗೆ ಕೇವಲ ೧ ಪೈ ಕೊಟ್ಟರು. ಇದರಿಂದ ನಿಜಾಮನ ಅಧಿಕಾರಿಗಳಿಗೆ ಸಿಟ್ಟು ಬಂತು.

ತಮ್ಮ  ಅಧಿಕಾರದ ಬಲದಿಂದ ತಾರಾನಾಥರಮ್ಮಿ ಬಗ್ಗಿಸಬೇಕೆಂದು ಆ ಅಧಿಕಾರಿಗಳು ಆಲೋಚಿಸಿದರು. ಮತ್ತು ಒಂದು ನೆಪದಿಂದ ತಾರಾನಾಥರನ್ನು ಬಂಧಸಿ ಪೊಲೀಸ್ ಠಾಣೆಗೆ ಒಯ್ದರು. ಈ ಸುದ್ದಿ ತಿಳಿದ ಬೀದರಿನ ಜನತೆ ಆ ಠಾಣೆಗೆ ಮುತ್ತಿಗೆ ಹಾಕಿ “ಮಾಸ್ತರ”ರನ್ನು ಬಿಡಬೇಕೆಂದು ಬೆದರಿಕೆ ಹಾಕಿತು. ಜನರ ಸಿಟ್ಟು ನೋಡಿದ ಅಧಿಕಾರಿಗಳು ಹೆದರಿಬಿಟ್ಟರು. ಆ ಬಳಿಕ ಅಧಿಕಾರಿಗಳು ವಿನಂತಿಸಿಕೊಂಡಂತೆ ತಾರಾನಾಥರು ಹೊರಗೆ ಬಂದು ಜನರನ್ನು ಸಮಾಧಾನಪಡಿಸಿ ಕಳಿಸಿಕೊಟ್ಟರು.

ಆದರೆ ಇದರಿಂದ ಅಧಿಕಾರಿಗಳು ಮಾತ್ರ ಪಾಠ ಕಲಿಯಲಿಲ್ಲ. ತಾರಾನಾಥರಿಗೆ ಆಗಾಗ ಕಿರುಕುಳ ಕೊಡುತ್ತಲೇ ಇದ್ದರು. ತಾರಾನಾಥರು ಯಾವುದಕ್ಕೂ ಜಗ್ಗಲಿಲ್ಲ. ಸ್ವಾಭಿಮಾನ ಮತ್ತು ದೀನದಲಿತರ ಸೇವೆಗಳಿಂದ ಅವರ ಜನಪ್ರಿಯತೆ ದಿನೇ ದಿನೇ ಬೆಳೆಯ ತೊಡಗಿತು. ಇದನ್ನು ಸಹಿಸಲಾಗದ ಅಧಿಕಾರಿಗಳು ತಾರಾನಾಥರನ್ನು ಬೀದರಿನಿಂದ ರಾಯಚೂರಿನ ಮಾಧ್ಯಮಿಕ ಶಾಲೆಗೆ ವರ್ಗ ಮಾಡಿದರು.

ಸೊಕ್ಕಿಗೆ ಶಿಕ್ಷೆ

ತಾರಾನಾಥರು ರಾಯಚೂರು ತಲುಪುವ ಮೊದಲೇ ಅವರ ಕೀರ್ತಿ ಅಲ್ಲಿ ತಲುಪಿತ್ತು. ಮತ್ತು ಅಧಿಕಾರಿಗಳ ದುಷ್ಟತನದಿಂದ ರಾಯಚೂರಿನ ಜನ ತತ್ತರಿಸಿ ಹೋಗಿದ್ದರು. ತಾರಾನಾಥರ ಸ್ವಾಭಿಮಾನ, ಸೇವಾಭಾವನೆ, ಅನ್ಯಾಯದ ವಿರುದ್ಧ ಹೋರಾಟ ಮುಂತಾದವುಗಳನ್ನು ಕೇಳಿದ ಆ ಜನ ತಾರಾನಾಥರಿಂದ ತಮ್ಮ ಉದ್ಧಾರವಾಗುವುದೆಂದು ಆನಂದಪಟ್ಟರು. ಮತ್ತು ಸಂತೋಷದಿಂದ ಅವರನ್ನು ಬರಮಾಡಿಕೊಂಡರು.

ರಾಯಚೂರು ತಲುಪಿದ ಕೆಲವೇ ದಿನಗಳಲ್ಲಿ ತಾರಾನಾಥರು ಅಲ್ಲಿಯ ಅಧಿಕಾರಿಗಳಿಗೆ ತಮ್ಮ ಬಿಸಿಯನ್ನು ಮುಟ್ಟಿಸುವಂತಾದರು. ಆಗ ರಾಯಚೂರಿನಲ್ಲಿ ಅದೊಂದೇ ಶಾಲೆಯಿತ್ತು ಮತ್ತು ನಿಜಾಮ ಸರ್ಕಾರದ ಅಧಿಕಾರಿಗಳ ಮಕ್ಕಳು ಸಹ ಅಲ್ಲಿ ಕಲಿಯುತ್ತಿದ್ದರು. ತಮ್ಮ ತಂದೆಯರು ಅಧಿಕಾರಿಗಳಾಗಿದ್ದರಿಂದ ಈ ಮಕ್ಕಳು ಶಾಲೆಯಲ್ಲಿ ಸೊಕ್ಕಿನಿಂದ ವರ್ತಿಸುತ್ತಿದ್ದರು. ಯಾವ ಶಿಕ್ಷಕರ ಮಾತನ್ನೂ ಕೇಳುತ್ತಿದ್ದಿಲ್ಲ. ತಾರಾನಾಥರ ತರಗತಿಯಲ್ಲಿ ಊರಿನ ಪ್ರಮುಖ ಅಧಿಕಾರಿಯ ಮಗನೊಬ್ಬನಿದ್ದ. ಅವನ ಉದ್ಧಟತನಕ್ಕೆ ಶಿಕ್ಷೆ ಕೊಡುವ ಧೈರ್ಯ ಯಾವ ಶಿಕ್ಷಕನಿಗೂ ಇದ್ದಿಲ್ಲ. ಹೀಗಾಗಿ ಅದು ಬೆಳೆದು ಬಿಟ್ಟಿತ್ತು. ಆಗ, ಶಿಕ್ಷಕರು ತರಗತಿಗೆ ಬಂದ ಕೂಡಲೇ ವಿದ್ಯಾರ್ಥಿಗಳು ಎದ್ದು ನಿಲ್ಲಬೇಕೆಂದು ನಿಯಮವಿತ್ತು. ತಾರಾನಾಥರು ತರಗತಿಯನ್ನು ಪ್ರವೇಶಿಸಿದಾಗ ಆ ಹುಡುಗ ಎದ್ದು ನಿಲ್ಲಲಿಲ್ಲ. ತಾರಾನಾಥರ ಕೈಯೊಳಗಿನ ಬೆತ್ತದ ರುಚಿ ಅವನಿಗರ ದೊರೆಯಿತು. ಉದ್ಧಟತನ ಮಾಯವಾಯಿತು.

ಅದೇ ಶಾಲೆಯಲ್ಲಿ ಶಾಲಾ ಇನ್‌ಸ್ಪೆಕ್ಟರರ ಮಗನೂ ಓದುತ್ತಿದ್ದ. ಅವನೂ ಉದ್ಧಟನಾಗಿದ್ದ. ಮನೆಯಲ್ಲಿ ಮಾಡಿಕೊಂಡು ಬರಲು ಹೇಳಿದ್ದನ್ನು ಮಾಡಿಕೊಂಡು ಬಂದಿರಲಿಲ್ಲ. ಎರಡು-ಮೂರು ದಿನ ತಾರಾನಾಥರು ಅವನಿಗೆ ತಿಳಿಸಿ ಹೇಳಿದರೂ ಮಾಡಿಕೊಂಡು ಬರಲಿಲ್ಲ. ನಾಲ್ಕನೆಯ ದಿನ ತಾರಾನಾಥರು ಹೇಳಿದಾಗ ತಮಾಷೆ ಮಾಡುತ್ತ ಬರಿಗೂ ತೋರಿದ. ತಾರಾನಾಥರಿಗೆ ಸಿಟ್ಟು ತಡೆಯದಾಯಿತು. ಅವನು  ತೋರಿಸಿದ ಕೈ ಮೇಲೆ ಬೆತ್ತದಿಂದ ನಾಲ್ಕು ಬಾರಿಸಿದರು ಮತ್ತು ತರಗತಿಯಿಂದ ಅವನನ್ನು ಹೊರಹಾಕಿದರು.

ಆ ಹುಡುಗ ಅಳುತ್ತ ಮನೆಗೆ ಹೋಗಿ ತಂದೆಗೆ ಹೇಳಿದ. ತಂದೆಗೂ ಸಿಟ್ಟು ಬಂತು. ಶಾಲಾ ಇನ್‌ಸ್ಪೆಕ್ಟರರ ಮಗನಿಗೆ ಮಾಸ್ತರರು ಹೊಡೆಯುವುದೆಂದರೇನು? ಕೂಡಲೇ ಬಂದು ಕಾಣಲು ತಾರಾನಾಥರಿಗೆ ಹೇಳಿ ಕಳುಹಿಸಿದರು. ತಾರಾನಾಥರು ಉತತರ ಕಳಿಸಿದರು- “ನಿಮ್ಮ ಮನೆಗೆ ಬಂದು ಕಾಣಲು ನಾನೇನು ನಿಮ್ಮ ಆಳಲ್ಲ. ಸರ್ಕಾರ ನನಗೆ ಸಂಬಳ  ಕೊಡುವುದು ಶಾಲೆಯಲ್ಲಿ ಮಕ್ಕಳಿಗೆ ಕಲಿಸಲಿಕ್ಕೆ ಹೊರತು ನಿಮ್ಮನ್ನು ಕಾಣಲಿಕ್ಕಲ್ಲ.” ಈ ಉತ್ತರ ಕೇಳಿ ಅವರಿಗೆ ವಿಪರೀತ ಸಿಟ್ಟು ಬಂತು. ಈ ಹೊಸ ಮಾಸ್ತರರಿಗೆ ತಮ್ಮ ಬಿಸಿ ಮುಟ್ಟಿಸಬೇಕೆಂದು ಮರುದಿನ ಶಾಲೆಗೆ ಬಂದರು. ಅವರು ಬಂದಾಗ ತಾರಾನಾಥರು ಕಲಿಸುವಲ್ಲಿ ಮಗ್ನರಾಗಿದ್ದರು. ವಿದ್ಯಾರ್ಥಿಗಳೂ ಕಲಿಯುವುದಲ್ಲಿ ಮಗ್ನರಾಗಿದ್ದರು. ಇನ್‌ಸ್ಪೆಕ್ಟರರ ಕಡೆ ಯಾರೂ ನೋಡಲಿಲ್ಲ. ಇದರಿಂದ ಅಪಮಾನವಾಯಿತೆಂದು ಅವರು ತಾರಾನಾಥರಿಗೆ ಒಂದು ಬೆದರಿಕೆಯ ಪತ್ರ ಬರೆದರು- ತಾರಾನಾಥರೂ ಇದಕ್ಕೆ ಉತ್ತರ ಬರೆದರು. “ನೀವು ನನಗೆ ಬೆದರಿಕೆಯ ಪತ್ರ ಬರೆದದ್ದು ನಿಮ್ಮ ಅಧಿಕಾರದ ದುರುಪಯೋಗವಾಗಿದೆ. ನೀವೂ ನಿಮ್ಮ ಮಗನೂ ಬಂದು ಕ್ಷಮೆ ಕೇಳದಿದ್ದರೆ ಎಲ್ಲ ವಿಷಯವನ್ನೂ ನಿಮ್ಮ ಮೇಲಧಿಕಾರಿಗಳಿಗೆ ತಿಳಿಸುವೆನು.” ಈ ಉತ್ತರ ಓದಿ ಇನ್‌ಸ್ಪೆಕ್ಟರರು ಹೆದರಿ ಹೋದರು. ಆದರೆ ಕ್ಷಮೆ ಕೇಳಲು ಮನಸ್ಸು ಸಿದ್ಧವಾಗಲಿಲ್ಲ. ಅದಕ್ಕಾಗಿ ತಮ್ಮ ಪತ್ನಿಯನ್ನು ತಾರಾನಾಥರ ಬಳಿಗೆ ಕಳಿಸಿ ಕ್ಷಮೆ ಕೇಳಿಕೊಂಡರು.

ಶಕ್ತಿ ನೋಡೋಣ

ವಿದ್ಯಾರ್ಥಿಗಳಿಗೆ ವಿಷಯವು ಸರಿಯಾಗಿ ತಿಳಿಯುವಂತೆ ತಾರಾನಾಥರು ಅವಶ್ಯಕ ವಿಧಾನ ಉಪಯೋಗಿಸುತ್ತಿದ್ದರು. ಒಂದು ದಿನ ಮೋಡಗಳಿಂದ ಮಳೆ ಸುರಿಯುವ ವಿಷಯ ಕಲಿಸುವಾಗ ವಿದ್ಯಾರ್ಥಿಗಳನ್ನು ರಾಯಚೂರಿನ ಮಾಣಿಕ್ಯಪ್ರಭು ಗುಡ್ಡದ ಮೇಲೆ ಕರೆದುಕೊಂಡು ಹೋಗಿ ಮೋಡಗಳ ರಚನೆ ಮತ್ತು ಅವುಗಳಿಂದ ಮಳೆ ಸುರಿಯುವ ಪ್ರಕ್ರಿಯೆಗಳನ್ನು ತೋರಿಸಿಕೊಟ್ಟರು.

“ಮಕ್ಕಳು ದೇವರಿಗೆ ಸಮಾನ” ಎಂಬುದು ತಾರಾನಾಥರ ನಂಬಿಕೆಯಾಗಿತ್ತು. ವಿದ್ಯಾರ್ಥಿಗಳಿಗೆ ಅಪಮಾನವಾದರೆ ಅವರು ಸಹಿಸುತ್ತಿರಲಿಲ್ಲ. ನಿಜಾಮನ ಹುಟ್ಟು ಹಬ್ಬದ ದಿನ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಕೆಳಮಟ್ಟದ ನೌಕರರೊಡನೆ ಕೂಡಿಸಿದ್ದನ್ನು ವಿರೋಧಿಸಿ ಅವರು ಸಮಾರಂಭದಿಂದ ಹೊರಗೆ ಹೋದರು. ಬಳಿಕ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತಕ್ಕ ಗೌರವ ತೋರಿಸಿ ತಾರಾನಾಥರನ್ನು ಸಮಾಧಾನ ಪಡಿಸಿದರು.

ಇವೆಲ್ಲವುಗಳಿಂದ ತಾರಾನಾಥರು ಬಹು ಬೇಗ ವಿದ್ಯಾರ್ಥಿಗಳ ಅಚ್ಚು- ಮೆಚ್ಚಿನ ಶಿಕ್ಷಕರಾದರು. ಶಾಲೆಯಲ್ಲಷ್ಟೇ ಅಲ್ಲ, ಶಾಲೆಯ ಹೊರಗೂ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಗೆ ಅವಶ್ಯಕವಾದ ಶಿಕ್ಷಣ ನೀಡುತ್ತಿದ್ದರು. ಒಂದು ವಾಚನಾಲಯ ತೆರೆದು ಓದುವ ಅಭಿರುಚಿ ಬೆಳೆಸಿದರು. ವಿವಿಧ ವಿಷಯಗಳ ಮೇಲೆ ಮಾತನಾಡಲು ಹೇಳಿ ಭಾಷಣ ಕಲೆ ಕಲಿಸಿದರು. ಸಾಮೂಹಿಕ ಭಜನೆಗಳನ್ನು ಹಾಡಿಸಿ ದೈವಭಕ್ತಿ ಮೂಡಿಸಿದರು. ವಿದ್ಯಾರ್ಥಿಗಳು ಬ್ರಹ್ಮಚರ್ಯ ಪಾಲಿಸಿ ನೀತಿವಂತರಾಗಬೇಕೆಂದು ಅವರು ಬೋಧಿಸುತ್ತಿದ್ದರು. ಒಮ್ಮೆ ಬ್ರಹ್ಮಚರ್ಯದಿಂದ ಅಪಾರ ಶಕ್ತಿ ಬರುತ್ತದೆಂದು ಅವರು ಬೋಧಿಸಿದಾಗ ಒಬ್ಬ ವಿದ್ಯಾರ್ಥಿ ಕೇಳಿದ, “ಸರ್, ನೀವಂತೂ ಬ್ರಹ್ಮಚರ್ಯ ಪಾಲಿಸುತ್ತೀರಿ. ನಿಮಗೆ ಎಷ್ಟು ಶಕ್ತಿ ಬಂದಿದೆಯೆಂದು ನೋಡೇ ಬೀಡೋಣ” ತಾರಾನಾಥರು ಕೂಡಲೇ ಸಮೀಪದಲ್ಲಿದ್ದ ಬೇವಿನ ಮರಕ್ಕೆ ಭುಜದಿಂದ ಹೊಡೆದರು. ಮರದಲ್ಲಿದ್ದ ಹಣ್ಣುಗಳು ಉದುರಿಬಿದ್ದವು. ಬಳಿಕ ಅವರು ತಮ್ಮ ಹೆಬ್ಬೆರಳನ್ನು ನೆಲಕ್ಕೆ ಊರಿ ಅದನ್ನು ಸರಿಸಲು ಹೇಳಿದರು. ಯಾರಿಗೂ ಸಾಧ್ಯವಾಗಲಿಲ್ಲ.

ತಾರಾನಾಥರು ತಮ್ಮ ಆಸ್ಪತ್ರೆಯ ಮೂಲಕ ರೋಗಿಗಳ ಸೇವೆ ಮಾಡುತ್ತ ವಿದ್ಯಾರ್ಥಿಗಳನ್ನೂ ಇಂತಹ ಸೇವೆಗ ಸಿದ್ಧಪಡಿಸಿದರು. ರಾಯಚೂರಿನಲ್ಲಿ “ಫ್ಲೂ” ಬೇನೆ ಹಬ್ಬಿದಾಗ ರೋಗಿಗಳ ಸೇವೆಯಷ್ಟೇ ಅಲ್ಲ, ಸತ್ತವರನ್ನು ಸ್ಮಶಾನಕ್ಕೆ ಒಯ್ಯುವ ಕೆಲಸವನ್ನೂ ಅವರ ವಿದ್ಯಾರ್ಥಿಗಳು ಮಾಡಿದರು.

ಹಮ್‌ದರ್ದ್‌ ಪ್ರೌಢಶಾಲೆ

ತಾರಾನಾಥರ ಜನಪ್ರಿಯತೆ ಹೆಚ್ಚಾದಂತೆ ಅವರ ಬಗ್ಗೆ ಅಧಿಕಾರಿಗಳ ಅಸೂಯೆಯೂ ಬೆಳೆಯಿತು. ಅದಕ್ಕಾಗಿ ಅವರನ್ನು ರಾಯಚೂರಿನಿಂದ ಓಡಿಸಲು ನಿರ್ಮಲ ಎಂಬ ಊರಿಗೆ ವರ್ಗ ಮಾಡಿದರು. ಸರ್ಕಾರಿ ನೌಕರಿಯ ಈ ಪಾರತಂತ್ಯ್ರಕ್ಕೆ ಒಪ್ಪದ ತಾರಾನಾಥರು ನೌಕರಿಗೆ ರಾಜೀನಾಮೆ ನೀಡಿದರು. ವಿದ್ಯಾಪ್ರಸಾರದ ಪವಿತ್ರ ಕರ್ತವ್ಯವನ್ನು ಸಮರ್ಪಕವಾಗಿ ಪೂರೈಸಲು ರಾಯಚೂರಿನಲ್ಲಿ ೧೯೨೦ ರ ಮಾರ್ಚ್ ೨೪ ರಂದು ಯುಗಾದಿಯ ದಿನ “ಹಮ್‌ದರ್ದ್‌ ಪ್ರೌಢಶಾಲೆ” ಯನ್ನು ಸ್ಥಾಪಿಸಿದರು. ಅದನ್ನು ಕಷ್ಟಪಟ್ಟು ಬೆಳೆಸಿದರು.

ತಾರಾನಾಥರು ಮೊದಲಿನಿಂದಲೂ ದೇಶದ ಸ್ವಾತಂತ್ಯ್ರದ ಆಂದೋಲನದಲ್ಲಿ ಭಾಗವಹಿಸುತ್ತಿದ್ದರು. ಖಿಲಾಫತ್ ಆಂದೋಲನದ ನಿಧಿ ಸಂಗ್ರಹಕ್ಕಾಗಿ ಮಹಮ್ಮದ ಅಲಿ-ಶೌಕತ ಅಲಿ ಬಂಧುಗಳು ಮುಂಬಯಿಯಿಂದ ಮದ್ರಾಸಿಗೆ ಹೋಗುತ್ತಿದ್ದರು. ರಾಯಚೂರಿನ ರೈಲು ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿ ರಾಯಚೂರಿನಲ್ಲಿ ಸಂಗ್ರಹಿಸಿದ ನಿಧಿಯನ್ನು ಅರ್ಪಿಸಿದವರು ತಾರಾನಾಥರೇ. ಆಗ ಅವರು ಮಾಡಿ ಭಾಷಣದಿಂದ ಪ್ರಭಾವಿತರಾದ ಅಲೀ ಬಂಧುಗಳು ಅವರನ್ನು ತಮ್ಮೊಡನೆ ಮದ್ರಾಸಿಗೆ ಕರೆದೊಯ್ದು ಅನೇಕ ಊರುಗಳಲ್ಲಿ ಭಾಷಣ ಮಾಡಿಸಿದರು.

ಪ್ರೇಮಾಯತನ

೧೯೨೦ ನೆಯ ಇಸವಿಯಲ್ಲಿ ಭಾರತದ ತುಂಬ “ಮಾಂಟೆಗೋ-ಚೆಲ್ಮ್ಸ್‌ ಫರ್ಡ್‌” ಸುಧಾರಣೆಗಳನ್ನು ವಿರೋಧಿಸಿ ಆಂದೋಲನ ನಡೆಯಿತು. ತಾರಾನಾಥ ಮತ್ತು ಅವರ ಗೆಳೆಯರ ಪ್ರಯತ್ನದಿಂದ ರಾಯಚೂರಿನಲ್ಲಿಯೂ ಆಂದೋಲನ ನಡೆಯಿತು. ಹೀಗಿದ್ದಾಗ ಜನರಿಂದ ಕಾಣಿಕೆಯನ್ನು ಸ್ವೀಕರಿಸಲು ಸ್ವತಃ ನಿಜಾಮನು ರಾಯಚೂರಿಗೆ ಬರುವವನಿದ್ದನು. ಅವನು ಸ್ವಾಗತಕ್ಕಾಗಿ ರಸ್ತೆ ದುರಸ್ತಿ ಮುಂತಾದ ಕೆಲಸಗಳು ನಡೆದರು. ಈ ಕೆಲಸಗಳಿಗಾಗಿ ಬಡವರ ಮೇಲೆ ಅತ್ಯಾಚಾರವಾಗ ತೊಡಗಿತು. ಇದನ್ನು ಸಹಿಸಲಾಗದ ತಾರಾನಾಥರು ನಿಜಾಮನನ್ನು ಜಲಿಯನ್‌ವಾಲಾಬಾಗಿನ ಹತ್ಯಾಕಾಂಡ ನಡೆಸಿದ ಜನರಲ್ ಡಯರ್ ಸಾಹೇಬನಿಗೆ ಹೋಲಿಸಿ ಒಂದು ಲೇಖನ ಬರೆದರು. ಮತ್ತು ತಮ್ಮ ಸಹೋದ್ಯೋಗಿ ಆರ್. ಆನಂದರ ಹೆಸರಿನಲ್ಲಿ ಮದ್ರಾಸಿನ “ಹಿಂದು” ಪತ್ರಿಕೆಯಲ್ಲಿ ಪ್ರಕಟಿಸಿದರು. ಇದರಿಂದ ಕಿಡಿಕಿಡಿಯಾದ ನಿಜಾಮ ಸರ್ಕಾರ ಆನಂದರನ್ನು ಬಂಧಿಸಿ ಅಂಡಮಾನಿನ ಸೆರೆಮನೆಯಲ್ಲಿ ಕಳಿಸಿತು. ಆಗ ತಾರಾನಾಥರು ಸ್ವಾತಂತ್ಯ್ರದ ಆಂದೋಲನದ ಪ್ರಚಾರಕ್ಕೆಂದು ಮದ್ರಾಸ್ ಪ್ರಾಂತರ ಆರ್ಕಾಟ ಜಿಲ್ಲೆಗೆ ಹೋಗಿದ್ದರು. ಆನಂದರ ಬಂಧನದ ಸುದ್ಧಿ ತಿಳಿದ ಕೂಡಲೇ ಬಿಡುಗಡೆಗಾಗಿ ಆ ಜಿಲ್ಲೆಯ ಪ್ರಮುಖರಿಂದ ನಿಜಾಮನಿಗೆ ಬಿನ್ನಹಪತ್ರ ಕಳಿಸಿದರು. ಆ ಪತ್ರ ತಾರಾನಾಥರೇ ಬರೆದಿರುವರೆಂದು ಸರ್ಕಾರಕ್ಕೆ ತಿಳಿಯಿತು. ತಾರಾನಾಥರ ಬಂಧನ ಆಜ್ಞೆ ಹೊರಟಿತ.

ತಾರಾನಾಥರು ನಿಜಾಮನ ಸೆರೆಮನೆಯಲ್ಲಿ ಕೊಳೆಯಬಾರದು. ಅವರ ಮಾರ್ಗದರ್ಶನ ಹಮ್‌ದರ್ದ್‌ ಶಾಲೆಗೂ ಇತರ ಚಟುವಟಿಕೆಗಳಿಗೂ ದೊರೆಯಬೇಕು ಎಂದು ಅವರ ಗೆಳೆಯರು ನಿಶ್ಚಯಿಸಿ ಅವರು ರಾಯಚೂರಿಗೆ ಮರಳಿದ ಕೂಡಲೇ ಗುಪ್ತವಾಗಿ ಅವರನ್ನು ಹೈದರಾಬಾದ್ ಸಂಸ್ಥಾನದ ಹೊರಗೆ, ರಾಯಚೂರಿಗೆ ಸಮೀಪದಲ್ಲಿದ್ದ ತುಂಗಭದ್ರೆಗೆ ಕರೆದುಕೊಂಡು ಹೋದರು. ಇದನ್ನು ಅರಿತ ಸರ್ಕಾರ ತಾರಾನಾಥರ ಮೇಲೆ ಗಡೀಪಾರಿನ ಆಜ್ಞೆ ವಿಧಿಸಿತು.

ತುಂಗಭದ್ರೆಯಲ್ಲಿ “ಪ್ರೇಮಾಯತನ” ಎಂಬ ಆಶ್ರಮವನ್ನು ಸ್ಥಾಪಿಸಿ ತಾರಾನಾಥರು ಜನಸೇವೆಯ ತಮ್ಮ ಕಾರ್ಯವನ್ನು ಮುಂದುವರೆಸಿದರು. ಈ ಆಶ್ರಮದಲ್ಲಿ ಯೋಗಶಾಸ್ತ್ರದಲ್ಲಿ ಅಭಿರುಚಿಯಿದ್ದವರು  ಯೋಗಸಾಧನೆ ಮಾಡುತ್ತಿದ್ದರು. ರೋಗಿಗಳಿಗೆ ಔಷಧೋಪಚಾರ, ವೈದ್ಯರಾಗುವವರಿಗೆ ತರಬೇತಿ ಮತ್ತು ಸಮಾಜ ಸೇವಕರಿಗೆ ಅಲ್ಲಿ ಮಾರ್ಗದರ್ಶನ ದೊರೆಯುತ್ತಿತ್ತು. ಹೀಗಾಗಿ “ಪ್ರೇಮಾಯತನ” ಕ್ಕೆ ದೇಶದ ನಾನಾ ಕಡೆಗಳಿಂದ ಎಲ್ಲ ವಿಧದ ಜನರೂ ಬರುತ್ತಿದ್ದರು. ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿದ್ದರು. ಅಲ್ಪಕಾಲದಲ್ಲಿಯೇ ಅಲ್ಲಿ “ಪ್ರೇಮ ವಿದ್ಯಾಪೀಠ” ಎಂಬ ಆದರ್ಶ ಗುರುಕುಲ ನಿರ್ಮಾಣವಾಯಿತು.

೧೯೩೧ರಲ್ಲಿ ತಾರಾನಾಥರು ತಮ್ಮ ಆಶ್ರಮವಾಸಿ ಸುಮತಿಬಾಯಿಯೊಡನೆ ಮದುವೆಯಾದರು. ಸುಮತಿ ಬಾಯಿಯವರು ಮದ್ರಾಸಿನವರು. ಆಧುನಿಕ ಶಿಕ್ಷಣ ಪಡೆದು ಮಹಿಳೆಯರ ವಿಮೋಚನೆಗಾಗಿ ಹೋರಾಡುತ್ತಿದ್ದರು. ೧೯೨೫ ರಲ್ಲಿ ಔಷಧೋಪಚಾರಕ್ಕಾಗಿ “ಪ್ರೇಮಾಯತನ”ಕ್ಕೆ ಬಂದರು. ತಾರಾನಾಥರ ಬಹುವಿಧ ಚಟುವಟಿಕೆಗಳನ್ನು ಮೆಚ್ಚಿಕೊಂಡು ಸಹಾಯ ಮಾಡುತ್ತ ಆಶ್ರಮದಲ್ಲಿಯೇ ಉಳಿದರು. ಅವರ ಸೇವಾ ಭಾವನೆಯನ್ನು ಮೆಚ್ಚಿನ ತಾರಾನಾಥರು ಅವರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಡರು. ಸುಮತಿ ಬಾಯಿಯವರು ಆದರ್ಶಪತ್ನಿಯಾಗಿ ಜನಸೇವೆ ಮಾಡಿದರು.

ವಿಸ್ತಾರವಾದ ಸೇವಾ ಕ್ಷೇತ್ರ

ಮಕ್ಕಳನ್ನು ಉತ್ತಮ ನಾಗರಿಕನ್ನಾಗಿ ಬೆಳೆಸಿದವರೇ ನಿಜವಾದ ತಾಯಂದಿರೆಂದು ತಾರಾನಾಥರು ತಮ್ಮ “ಪ್ರೇಮ” ಪತ್ರಿಕೆಯಲ್ಲಿ “ತಾಯಂದಿರಿಗೆ” ಪತ್ರಗಳನ್ನು ಬರೆದು ಪ್ರತಿಪಾದಿಸಿದರು. ಈ ಪತ್ರಗಳ ಮೂಲಕ ಮಹಿಳೆಯರಲ್ಲಿ ಅವರ ನಿಜವಾದ ಸ್ಥಾನಮಾನಗಳ ತಿಳುವಳಿಕೆ ಮೂಡಿಸಿದರು. “ಧರ್ಮಸಂಭವ ಅಥವಾ, ಧರ್ಮದ ಮೂಲತತ್ತ್ವಗಳು” ಎಂಬ ಪುಸ್ತಕ ಬರೆದು ಧಾರ್ಮಿಕ ಜಾಗೃತಿ ಮಾಡಿದರು. “ಪ್ರಸಿದ್ಧ ರಸೌಷಧಿಗಳು” ಎಂಬ ಪುಸ್ತಕದಲ್ಲಿ ಆಯುರ್ವೇದ ಔಷಧಿಗಳ ಪರಿಚಯ ಮಾಡಿಕೊಟ್ಟು ವೈದ್ಯರು ತಮ್ಮ ಕರ್ತವ್ಯವನ್ನು ಹೇಗೆ ನಿರ್ವಹಿಸಬೇಕೆಂದು ತೋರಿಸಿಕೊಟ್ಟರು.

 

ಗುಡ್ಡದ ಮೇಲೆ ಕರೆದುಕೊಂಡು ಹೋಗಿ ಮೋಡಗಳ ರಚನೆ ಕುರಿತು ಪಾಠ ಹೇಳಿಕೊಡುತ್ತಿದ್ದರು

ತಾರಾನಾಥರು ಆಯುರ್ವೇದಶಾಸ್ತ್ರದಲ್ಲಿ ಸಿದ್ಧಿಯನ್ನೇ ಪಡೆದಿದ್ದರು. ೧೯೩೨ ರಲ್ಲಿ ರಾಯಚೂರಿನಲ್ಲಿ ಸೇರಿದ ಅಖಿಲ ಕರ್ನಾಟಕ ಆಯುರ್ವೇದದ ಮೊದಲನೆಯ ಪರಿಷತ್ತಿಗೆ ತಾರಾನಾಥರೇ ಅಧ್ಯಕ್ಷರಾಗಿದ್ದರು. ೧೯೩೮ ರಲ್ಲಿ ಪುಣೆಯಲ್ಲಿ ಸೇರಿದ ಮುಂಬಯಿ ಪ್ರಾಂತೀಯ ಆಯುರ್ವೇದ ಸಮ್ಮೇಳನಕ್ಕೂ ಅದೇ ವರ್ಷ ಬೆಂಗಳೂರಿನಲ್ಲಿ ಸೇರಿದ ಅಖಿಲ ಭಾರತೀಯ ಅನುವಂಶಿಕ ವೈದ್ಯ ಸಮ್ಮೇಳನಕ್ಕೂ ತಾರಾನಾಥರು ಅಧ್ಯಕ್ಷರಾಗಿದ್ದರು. ಅಮೆರಿಕದ “ಏಷ್ಯ” ಮೊದಲಾದ ಪ್ರಸಿದ್ಧ ಪತ್ರಿಕೆಗಳಲ್ಲಿ ತಾರಾನಾಥರ ಲೇಖನಗಳು ಪ್ರಕಟವಾಗುತ್ತಿದ್ದವು. ಹಿಂದೂಸ್ಥಾನದ ನಾನಾ ಭಾಗಗಳಿಂದಲೂ ಪರದೇಶಗಳಿಂದಲೂ ವಿಚಾರವಂತರು “ಪ್ರೇಮಯಾತನ”ಕ್ಕೆ ಬಂದು ತಾರಾನಾಥರೊಡನೆ ವಿಚಾರ ವಿನಿಮಯ ಮಾಡುತ್ತಿದ್ದರು.

ಧರ್ಮದ ಬಗ್ಗೆ ಭಾಷಣಕ್ಕಿಂತ“-

ಆದರೆ “ಜನಸೇವೆಯೇ ಜನಾರ್ಧನ ಸೇವೆ” ಎಂಬುದನ್ನು ತಾರಾನಾಥರು ಎಂದಿಗೂ ಮರೆಯಲಿಲ್ಲ. ರಾಯಚೂರಿನ ಆಯುರ್ವೇದ ಸಮ್ಮೇಳನವಾಗಿ ಕೆಲವು ತಿಂಗಳು ಕಳೆದಿದ್ದವು. ಅಮೆರಿಕಾದಲ್ಲಿ ವಿಶ್ವಧರ್ಮ ಸಮ್ಮೇಳನ ನಡೆಯಲಿತ್ತು. ಅದರಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಭಾಷಣ ಮಾಡಬೇಕೆಂದು ತಾರಾನಾಥರಿಗೆ ಆಮಂತ್ರಣ ಬಂತು. ಆಗ ಬಳ್ಳಾರಿ ಜಿಲ್ಲೆಯಲ್ಲಿ ಕಾಲರಾ ಬೇನೆ ಹಬ್ಬಿತ್ತು. ಬೇನೆಯನ್ನು ನಿಯಂತ್ರಿಸಿ ಓಡಿಸುವ ಕಾರ್ಯದಲ್ಲಿ ತಾರಾನಾಥರು ತೊಡಗಿದ್ದರು. “ಧರ್ಮದ ಬಗ್ಗೆ ಭಾಷಣ ಮಾಡುವುದಕ್ಕಿಂತ ರೋಗಿಗಳ ಉಪಚಾರವೇ ಮೇಲು” ಎಂದು ನುಡಿದು ಅವರು ಆಮಂತ್ರಣವನ್ನು ತಿರಸ್ಕರಿಸಿದರು. ನಿಜವಾದ ಧರ್ಮವು ಯಾವುದು ಎಂದು ಪ್ರತ್ಯಕ್ಷ ಕೃತಿಯಿಂದ ತೋರಿಸಿಕೊಟ್ಟರು.

ಬಹುಮುಖ ಪ್ರತಿಭೆಸೇವೆ

ಆದರೆ ಜನರಿಗೆ ತಾರಾನಾಥರ ಸೇವೆ ಬಹುಕಾಲ ಲಭಿಸಲಿಲ್ಲ. ೧೯೪೨ರ ಅಕ್ಟೋಬರ್ ೩೧ ರಂದು ಅವರು ಕೊನೆಯುಸಿರೆಳೆದರು. ಆದರೂ ಅಷ್ಟರಲ್ಲಿಯೇ ಅವರು ನಾನಾ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿ ಕೀರ್ತಿಗಳಿಸಿದ್ದರು. ಸ್ವಾತಂತ್ಯ್ರದ ಆಂದೋಲನಗಳ ಪ್ರಚಾರದಲ್ಲಿ ಅವರು ಮುಂದಾಳುಗಳಾಗಿ ಕರ್ನಾಟಕದಲ್ಲೂ ಇತರ ಪ್ರಾಂತಗಳಲ್ಲಿಯೂ ಸಂಚಾರ ಮಾಡಿ ಸ್ವಾತಂತ್ಯ್ರ ಹೋರಾಟದಲ್ಲಿ ಭಾಗವಹಿಸಲು ಜನರನ್ನು ಹುರಿದುಂಬಿಸಿದರು. ಹಿಂದೂ ಮುಸಲ್ಮಾನರಲ್ಲಿ ಭಾವನಾತ್ಮಕ ಐಕ್ಯವಾಗಬೇಕೆಂದು ಪ್ರಯತ್ನಿಸಿದರು. ಅದಕ್ಕಾಗಿ “ಧೀನ ಬಂಧು ಕಭೀರ” ಎಂಬ ನಾಟಕ ಬರೆದರು. ಅದರಲ್ಲಿ ತಾವೇ ಸ್ವತಃ ಕಬೀರನ ಪಾತ್ರ ವಹಿಸಿ ಆಡಿ ತೋರಿಸಿದರು. ಮಹಾತ್ಮ ಗಾಂಧಿಯವರು ಈ ನಾಟಕವನ್ನು ನೋಡಿ ಮೆಚ್ಚಿದರು ಮತ್ತು ಅದು ಅಚ್ಚಾದಾಗ ಮುನ್ನುಡಿ ಬರೆದುಕೊಟ್ಟರು. ತಾರಾನಾಥರು ಬರೆದ “ಮೋಹನಾಸ್ತ್ರ” ಮತ್ತು “ಇನ್‌ಸಾಫ್” ನಾಟಕಗಳೂ ಉತ್ತಮ ನಾಟಕಗಳಾಗಿದ್ದವು.

ತಾರಾನಾಥರು ಹಲವು ದಶಕಗಳ ಕಾಲ ಹರಿಜನರ ಸೇವೆಯಲ್ಲಿ ತೊಡಗಿದ್ದರು. ಅವರ ಆಶ್ರಮದಲ್ಲಿ ಅನೇಕ  ಹರಿಜನರು ಗೌರವದಿಂದ ಬಾಳುತ್ತಿದ್ದರು. ಹರಿಜನರ ವಸತಿಗಳಿಗೆ ಬೆಟ್ಟಿ ನೀಡಿ, ಅವರ ಅಜ್ಞಾನ, ಬಡತನಗಳನ್ನು ದೂರ ಮಾಡಲು ಪ್ರಯತ್ನಿಸಿದರು. ತಾರಾನಾಥರು ಹೋದಲೆಲ್ಲ ಸ್ವದೇಶಿ ಮತ್ತು ಖಾದಿ ಪ್ರಚಾರವನ್ನು ಮಾಡಿದರು. ಸ್ತ್ರೀಯರ ಉನ್ನತಿಗಾಗಿ ಪರಿಶ್ರಮಿಸಿದರು. ಅನೇಕ ಅನಾಥ ಮಹಿಳೆಯರಿಗೆ ಆಶ್ರಮದಲ್ಲಿ ಉದ್ಯೋಗ ಕೊಟ್ಟು ಸಲಹಿದರು. ಧರ್ಮದ ನಿಜವಾದ ಕಲ್ಪನೆ ಮಾಡಿಕೊಟ್ಟರು. ಕರ್ನಾಟಕ ಏಕೀಕರಣಕ್ಕಾಗಿ ಪ್ರಯತ್ನಪಟ್ಟರು.

ತಾರಾನಾಥರು ಸಂಪೂರ್ಣ ರಾಷ್ಟ್ರದ ಚಿಂತನೆ ಮಾಡುವ ವಿಚಾರವಂತರಾಗಿದ್ದರು. ಆಧ್ಮಾತ್ಮದಲ್ಲಿ ಸಿದ್ಧಿ ಪಡೆದ ಯೋಗಿಗಳಾಗಿದ್ದರು. ಕಳಕಳಿಯ ಸಮಾಜ ಸುಧಾರಕರಾಗಿದ್ದರು. ಗ್ರಂಥಕರ್ತರಾಗಿದ್ದರು; ಪತ್ರಿಕೆಯನ್ನು ನಡೆಸಿದರು; ನಾಟಕಗಳನ್ನು ಬರೆದರು; ಕವಿತೆ ರಚಿಸಿದರು; ಸಂಗೀತದ ವಿದ್ವಾಂಸರಾಗಿದ್ದರು; ನಾಟ್ಯದಲ್ಲಿ ಕೀರ್ತಿಗಳಿಸಿದ್ದರು. ಆಯುರ್ವೇದದ ಔಷಧಗಳನ್ನು ತಯಾರಿಸುತ್ತಿದ್ದರು.

ಹೀಗೆ ತಾರಾನಾಥರು ರಾಷ್ಟ್ರೀಯ, ಸಾಮಾಜಿಕ, ರಾಜಕೀಯ ಮುಂತಾದ ಹಲವು ವಿಧ “ರೋಗ”ಗಳ ಪರಿಹಾರದ ಮಾರ್ಗ ತೋರಿಸಿ ನಿಜವಾದ “ಧನ್ವಂತರಿ” ಎನಿಸಿದರು. ಇಂದಿಗೂ ಅವರ ಶಿಷ್ಯರು ಕರ್ನಾಟಕದ ನಾನಾ ಭಾಗಗಳಲ್ಲಿ ಆಯುರ್ವೇದ ವೈದ್ಯರಾಗಿಯೂ ಸಮಾಜದ ಸೇವೆ ಮಾಡುತ್ತಿದ್ದಾರೆ.