ಮಹಾಭಾರತದ ಒಂದು ಅನಿವಾರ‍್ಯ ಅಂಗವಾಗಿರುವ, ಭಗವಾನ್ ಶ್ರೀಕೃಷ್ಣನ ಯೌಗಿಕ ಮಹತ್ತನ್ನು ಪ್ರಕಟಿಸುವ ಭಗವದ್ಗೀತೆ, ಏಳುನೂರು ಶ್ಲೋಕಗಳ ಒಂದು ಉಜ್ವಲವಾದ ಖಂಡ ಕಾವ್ಯ. ಇದು ಜಗತ್ತಿನ ಶ್ರೇಷ್ಠ ಧಾರ್ಮಿಕ ಗ್ರಂಥಗಳಲ್ಲಿ ಒಂದೆಂದು ಪರಿಗಣಿತವಾಗಿ ಹಿಂದೂಧರ್ಮದ ಆಚಾರ್ಯರುಗಳಿಂದ ಕಾಲಕಾಲಕ್ಕೆ ಭಾಷ್ಯ ಕೈಂಕರ್ಯವನ್ನು ಕೈಗೊಳ್ಳುತ್ತಾ, ಭಾರತದ ಆಧ್ಯಾತ್ಮಿಕ ಜೀವನವನ್ನು ರೂಪಿಸುತ್ತಾ ಬಂದಿರುವ ಪರಮಪೂಜನೀಯ ಗ್ರಂಥವಾಗಿದೆ. ಭಗವದ್ಗೀತೆಯನ್ನೇ ಪ್ರತ್ಯೇಕವಾಗಿ ಪಾರಾಯಣ ಮಾಡುವ ಧಾರ್ಮಿಕರಿಗೆ ಕೂಡ ಇದು ಮಹಾಭಾರತ ಕಥೆಯ ಬಹುಮುಖ್ಯವಾದ ಒಂದು ಭಾಗ ಎನ್ನುವ ಅರಿವಿಲ್ಲದೆ ಇರಲು ಸಾಧ್ಯವಿಲ್ಲ. ಅಂತಹ ಏಕಾಖಂಡ ಸಾವಯವ ಸಂಬಂಧವಿದೆ ಇದಕ್ಕೆ ಮಹಾಭಾರತದ ಕಥೆಯೊಂದಿಗೆ. ಶ್ರೀ ಸುಕ್ತಂಕರ್ ಅವರು ಹೇಳುತ್ತಾರೆ: “ಭಗವದ್ಗೀತೆ ಮಹಾಭಾರತದ ಹೃದಯದ ಹೃದಯ. ಅಷ್ಟೇ ಅಲ್ಲ, ಮಹಾಭಾರತದ ಸಾರವೇ ಅದು; ಇಡೀ ಮಹಾಭಾರತವೇ ಭಗವದ್ಗೀತೆಯನ್ನು ಕುರಿತ ಒಂದು ರೀತಿಯ ವ್ಯಾಖ್ಯಾನ”[1] ಎಂದು. ಇಂತಹ ಸಾರಭೂತವಾದ ಕೃತಿಯಾಗಿ, ಪವಿತ್ರವಾದ ಧಾರ್ಮಿಕ ಗ್ರಂಥವಾಗಿ, ಮನುಷ್ಯ ಹೃದಯದ ನಿತ್ಯ ಕುರುಕ್ಷೇತ್ರದಲ್ಲಿ ಒದಗುವ ಧರ್ಮಸಂಕಟವನ್ನೂ, ಅಲ್ಲಿ ವ್ಯಕ್ತಿ ತಾಳಬೇಕಾದ ನಿಲುವನ್ನೂ ಅತ್ಯಂತ ನಾಟಕೀಯವಾದ ರೀತಿಯಲ್ಲಿ ನಿರೂಪಿಸುವ ಕಲಾಪ್ರತಿಮೆಯಾಗಿರುವ ಈ ಭಗವದ್ಗೀತೆ ಭಾರತದ ಜನಮನದಲ್ಲಿ ಸಹಸ್ರಾರು ವರ್ಷಗಳಿಂದ ಪೂಜನೀಯವಾಗಿ ಬಾಳಿಗೊಂದು ಭರವಸೆಯಾಗಿ ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ.[2]

ಪ್ರಜ್ಞಾಪೂರ್ವಕವಾಗಿಯೆ ಅರ್ಜುನನ ಪಾತ್ರದ ಹಿರಿಮೆಯನ್ನು ಅಥವಾ ಅದರಲ್ಲಿ ಸಮಾವೇಶಗೊಂಡ ಅರಿಕೇಸರಿಯ ಘನತೆಯನ್ನು ಮೆರೆಯಲು ಎತ್ತಿಕೊಂಡ ಪಂಪಮಹಾಕವಿಯ ‘ವಿಕ್ರಮಾರ್ಜುನ ವಿಜಯ’ದಲ್ಲಿ, ಭಗವಾನ್ ಶ್ರೀಕೃಷ್ಣನ ಅತಿಮಾನುಷವೂ ಅಲೌಕಿಕವೂ ಆದ ಮಹಿಮೆಯನ್ನು ಪ್ರಧಾನವಾಗಿ ಪ್ರಕಟಿಸುವ ಈ ಭಗವದ್ಗೀತೆಯ ಸನ್ನಿವೇಶ ಹೇಗೆ ಬಂದಿದೆ ಎನ್ನುವುದು ಕುತೂಹಲಕರವಾದ ಸಂಗತಿ. ಪಂಪನಲ್ಲಿ ಅಲ್ಲದೆ ಉಳಿದ ಜೈನೇತರ ಕವಿಗಳ ಕಾವ್ಯದಲ್ಲಿ ಈ ಪ್ರಸಂಗವನ್ನು ಅವಲೋಕಿಸುವಲ್ಲಿ, ಈ ಸನ್ನಿವೇಶ ಚಿತ್ರಣದ ಬಗೆಗೆ ಇಷ್ಟೊಂದು ಕುತೂಹಲ ಬರುವುದಿಲ್ಲ. ಕಾರಣ ಇಷ್ಟೆ: ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಸಮಸ್ತ ಪ್ರಾಧಾನ್ಯವೂ ಅರ್ಜುನನಿಗೇ; ಆದರೆ ಶ್ರೀಕೃಷ್ಣನೇ ಪ್ರಧಾನಪಾತ್ರವಾಗುವ ಈ ಭಗವದ್ಗೀತೆಯ ಪ್ರಸಂಗವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ಎಂಬುದು ಒಂದು. ಎರಡನೆಯದು, ಪಂಪಕವಿ ಜೈನ. ಜೈನ ದೃಷ್ಟಿಗೆ ಕೃಷ್ಣನ ಪಾತ್ರದ ಬಗ್ಗೆ ಅಂತಹ ಗೌರವವಿಲ್ಲ.[3] ಆದ್ದರಿಂದ ಕೃಷ್ಣನ  ಮಹಿಮಾತಿಶಯವನ್ನು ಪ್ರಕಟಿಸುವ ಗೀತಾ ಪ್ರಸಂಗದಲ್ಲಿ ಕವಿ ಕೃಷ್ಣನ ಪಾತ್ರವನ್ನು ಹೇಗೆ ತಂದಿದ್ದಾನೆ ಎನ್ನುವುದು ಮತ್ತೊಂದು. ಈ ಎರಡು ದೃಷ್ಟಿಗಳಿಂದ ಈ ಪ್ರಸಂಗವನ್ನು ಗಮನಿಸಿದರೆ ನಮಗೆ ಅಂತಹ ನಿರೀಕ್ಷಿತವಾದ ನಿರಾಶೆಯೇನೂ ಆಗುವುದಿಲ್ಲ  ಎಂಬುದೇ ವಾಸ್ತವವಾದ ಸಂಗತಿ.

ಪಂಪ ಸಂಗ್ರಹನಿಪುಣ ; ಹಿತಮಿತ ಮೃದುವಚನ ಪ್ರಿಯ. ಸಮಸ್ತ ಭಾರತವನ್ನು ಅಪೂರ್ವವಾಗಿ ಹೇಳುವ ನವೀನಕ್ರಮದಲ್ಲಿ ಕಥೆಯ ‘ಮೆಯ್ಗೆಡಲೀಯದೆ’ ಅಲ್ಲಲ್ಲಿ ಮೂಲದ  ಕಥಾಕ್ರಮವನ್ನು ತನಗೆ ರುಚಿಸಿದಂತೆ ಬದಲಾಯಿಸಿಕೊಂಡಿದ್ದಾನೆ. ಈ ಸಂಗ್ರಹ ಕ್ರಮದಲ್ಲಿ ಯಾರಿಗಾದರೂ ಎದ್ದು ಕಾಣಿಸುವ ಅಂಶವೆಂದರೆ, ಪಂಪ ಎಷ್ಟು ಸೊಗಸಾಗಿ ಮೂಲದ ಕಥಾನಕಗಳನ್ನು ಹಿಡಿದಿರಿಸಿದ್ದಾನೆ ಎನ್ನುವುದು. ಅರ್ಜುನನನ್ನೇ ನಾಯಕನನ್ನಾಗಿ ಮಾಡಿಕೊಂಡಿರುವ ಈ ಕೃತಿಯಲ್ಲಿ ಪಂಪ ಇಷ್ಟಪಟ್ಟಿದ್ದರೆ ಭಗವದ್ಗೀತೆಯ ಸಂದರ್ಭವನ್ನು ಕೈಬಿಡಬಹುದಾಗಿತ್ತು. ಹಾಗೆ ಬಿಟ್ಟಿದ್ದ ಪಕ್ಷದಲ್ಲಿ ಪಂಪ ಭಾರತದ ಕಥಾಕ್ರಮದಲ್ಲಿ ಯಾವ ಊನವೂ ಆಗುತ್ತಿರಲಿಲ್ಲ. ಕೃಷ್ಣನ ಪಾತ್ರಕ್ಕೆ ಸಹಜವಾಗಿ ಪ್ರಾಧಾನ್ಯ ಒದಗುವ ಈ ಭಾಗವನ್ನು ಕೈಬಿಟ್ಟು, ಅರ್ಜುನನೇ ಯಾವ ತಾಕಲಾಟವೂ ಇಲ್ಲದೆ, ಅಳುಕೂ ಇಲ್ಲದೆ ನೇರವಾಗಿ ಯುದ್ಧಸನ್ನದ್ಧನಾದನೆಂದು ಹೇಳಿ ವಿಕ್ರಮಾರ್ಜುನನ ವಿಜಯವನ್ನೇ ಎತ್ತಿ ಹಿಡಿಯಬಹುದಾಗಿತ್ತು. ಆದರೂ ಪಂಪ ಇಡೀ ಭಗವದ್ಗೀತಾ ಸನ್ನಿವೇಶವನ್ನು, ಅದರ ಯಾವ ಉದ್ದೇಶಕ್ಕೂ ಭಂಗವನ್ನು ತಾರದ ರೀತಿಯಲ್ಲಿ[4] ಒಂದೇ ಒಂದು ವೃತ್ತದಲ್ಲಿ ಅದರ ಹಿಂದೆ ಮುಂದೆ ಒಂದೆರಡು ವಚನ ಗದ್ಯಪಂಕ್ತಿಗಳಲ್ಲಿ ಸಂಗ್ರಹಿಸಿ ಮುಂದೆ ನಡೆದಿದ್ದಾನೆ. ಇದಕ್ಕೆ ಕಾರಣ, ಬಹುಶಃ ಪಂಪನು ಭಗವದ್ಗೀತೆಯನ್ನು ಕುರಿತು ಜನಮನದಲ್ಲಿ ಪರಂಪರಾಗತವಾಗಿ ಬಂದಿರುವ ಪೂಜ್ಯ ಭಾವವನ್ನು ಮತ್ತು ಗೀತೆಯ ಬಗ್ಗೆ ತನಗೆ ಇರುವ ಅಭಿಮಾನವನ್ನು ಗುರುತಿಸಿ ಪ್ರಕಟಿಸಿದ್ದಾನೆ ಎಂದು ಭಾವಿಸಬಹುದು. ಇದರ ಮೇಲೆ ಭಗವದ್ಗೀತೆಯಿಲ್ಲದ ಮಹಾಭಾರತ ಇನ್ನೇತರ ಭಾರತ! ಮಹಾಭಾರತವನ್ನು ವಸ್ತುವನ್ನಾಗಿ ತೆಗೆದುಕೊಂಡ ಯಾವ ಕವಿಯೂ ಗೀತೆಯಂಥ ಉಜ್ವಲವಾದ ಭಾಗವನ್ನು ಕೈಬಿಡುವ ಎಗ್ಗತನಕ್ಕೆ ಪಾತ್ರನಾಗಲಾರ.[5] ಆದುದರಿಂದಲೇ ಏನೊ, ಪಂಪಕವಿ ಮೂಲದ ಈ ಸನ್ನಿವೇಶವನ್ನು ಭಗವದ್ಗೀತೆಗೆ ಊನವಾಗದಂತೆ ಹಾಗೂ ಅರ್ಜುನನ ಘನತೆ ತಗ್ಗದಂತೆ ಸಂಗ್ರಹಿಸಿದ್ದಾನೆ. ಭಗವದ್ಗೀತೆಯನ್ನು ಮಥನ ಮಾಡಿ ಅದರ ಸಾರವನ್ನು ಮೂರೇ ಮಾತುಗಳಲ್ಲಿ ಕಡೆದಿರಿಸಿದ್ದಾನೆ.

ಪಂಪನಲ್ಲಿ ಭಗವದ್ಗೀತೆಯ ಸನ್ನಿವೇಶ ಹೀಗಿದೆ :

ವ|| ಅಂತಾ ಯುಯುತ್ಸವನೊಡಗೊಂಡು ಬಂದು ಧರ್ಮಪುತ್ರನುತ್ಸಾಹದೊಳಿರ್ಪ ಪದದೊಳ್ ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯ ಸ್ವರೂಪಮಂ ತೋಱಿ-

ಅದಿರದಿದಿರ್ಚಿ ತಳ್ತಿಱಿಯಲೀ ಮಲೆದೊಡ್ಡಿದ ಚಾತುರಂಗಮೆಂ
ಬುದು ನಿನಗೊಡ್ಡಿ ನಿಂದುದಿದನೋವದೆ ಕೊಲ್ವೊಡೆ ನೀನುಮೆನ್ನ ಕ
ಜ್ಜದೊಳೆಸಗೆಂದು ಸೈತಜಿತನಾದಿಯ ವೇದ ರಹಸ್ಯದೊಳ್ ನಿರಂ
ತದ (ಪರಿಚರ್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ|| (೧೦-೬೪)

ವ|| ಆಗಳ್ ಪರಸೈನ್ಯ ಭೈರವಂ ಪುರಾಣ ಪುರುಷನಪ್ಪ ಪುರುಷೋತ್ತಮಂಗೆಱಗಿ ಪೊಡಮಟ್ಟು ರಿಪುಪಕ್ಷ ಕ್ಷಯಕರಮಪ್ಪ ವಿಶ್ವಕರ್ಮ ನಿರ್ಮಿತಮಾದ ತನ್ನ ದಿವ್ಯರಥಮಂ ಮನೋರಥಂ ಬೆರಸು ರಥಾಂಗಧರನಂ ಮುನ್ನಮೇಱಲ್ವೇೞ್ದು ಮೂಱುಸೂೞ ಬಲವಂದು ಪೊಡಮಟ್ಟು ಬೞಿಯಂ ತಾನೇಱಿ ವಜ್ರ ಕವಚಮಂ ತೊಟ್ಟು ತವದೊಣೆಗಳನೆರಡುಂ ದೆಸೆಯೊಳಂ ಬಿಗಿದು ದ್ರೋಣಾಚಾರ‍್ಯಂಗೆ ಮನದೊಳ್ ನಮಸ್ಕಾರಂಗೆಯ್ದು ದ್ರೋಣಂ ಬಾೞ್ಗೆಂದು ಮಹಾಪ್ರಚಂಡ ಗಾಂಡೀವಮಂ ಕೊಂಡೇಱಿಸಿ ನೀವಿ ಜೇವೊಡೆದು ದೇವದತ್ತ ಶಂಖಮಂ ಪೂರಿಸಿ ಸಂಸಪ್ತಕರೊಡ್ಡಣದತ್ತ ರಥಾಂಗಧರನಂ ರಥಮಂ ಚೋದಿಸಲ್ವೇೞುಗಳ್-

ಇದು ಪಂಪನ ಚಿತ್ರಣ. ಈ ಎರಡು ವಚನಗಳ ನಡುವಣ ಒಂದು ಪದ್ಯದಿಂದ ಚಿತ್ರಿತವಾಗಿರುವ ಗೀತಾ ಪ್ರಸಂಗವನ್ನು ನೋಡಿದರೆ “ಭಗವದ್ಗೀತೆಯನ್ನು ಇಷ್ಟರಲ್ಲೇ ತೇಲಿಸಿದ್ದಾನೆ ಕವಿ”[6] ಎಂದು ಅನ್ನಿಸುವುದು ತೀರ ಸಹಜ. ಮೂಲಭಾರತದ ಆ ಉಜ್ವಲವಾದ ನಾಟಕೀಯತೆಯೆಲ್ಲಿ, ಪಂಪನ ಈ ಅವಸರದ ಚಿತ್ರಣವೆಲ್ಲಿ ಎಂದು ಅನ್ನಿಸಬಹುದು. ಮೂಲದ ಪ್ರಕಾರ, ಯುದ್ಧಸನ್ನದ್ಧವಾದ ಉಭಯ ಸೇನೆಗಳ ಮಧ್ಯೆ ಪಾರ್ಥನ ರಥವನ್ನು ಕೃಷ್ಣ ತಂದು ನಿಲ್ಲಿಸಿದಾಗ ತನ್ನೊಡನೆ ಕಾದಲೆಂದು ಬಂದು ನಿಂತ ಸಮಸ್ತ ಬಂಧು ಬಾಂಧವರನ್ನು ಕಂಡು ‘ಕೃಪಯಾಪರಯಾವಿಷ್ಟ’ ನಾಗಿ ಅರ್ಜುನನು ವಿಷಾದದಲ್ಲಿ ನಿಲ್ಲುತ್ತಾನೆ : ಕೈಯಿಂದ ಗಾಂಡೀವ ಜಾರಿ ಬೀಳುತ್ತಿದೆ. ಶರೀರ ನಡುಗುತ್ತಿದೆ, ಮೈ ಬಿಸಿಯಾಗಿದೆ, ಮನಸ್ಸು ಸ್ವಜನಾಸಕ್ತಿಯ ಗೊಂದಲದಲ್ಲಿ ತುಮುಲಗೊಂಡಿದೆ; ಅರ್ಜುನನನ್ನು ಅನಿರೀಕ್ಷಿತವಾದ, ಸ್ವಭಾವ ವಿರುದ್ಧವಾದ ವಿರಾಗ ಆವರಿಸಿದೆ. ಕೃಷ್ಣನ ಮಾತಿನಲ್ಲೇ ಹೇಳುವುದಾದರೆ ವ್ಯಾಮೋಹ ಮೂಲವಾದ ಕ್ಲೈಬ್ಯ ಅರ್ಜುನನನ್ನು ಆವರಿಸಿದೆ. ಆದರೆ ಪಂಪ ತನ್ನ ವಿಕ್ರಮಾರ್ಜುನನನ್ನು ಆ ಸ್ಥಿತಿಗೆ ಇಳಿಸಲಿಲ್ಲ. ಏಕೆಂದರೆ ಪಂಪನು ಮಾಡಿಕೊಂಡಿರುವ ಬದಲಾವಣೆಯ ಪ್ರಕಾರ ಕೃಷ್ಣನು ‘ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆ’ದದ್ದು ಮೂಲಭಾರತದ ಹಾಗೆ ಉಭಯ ಸೇನೆಗಳ ಮಧ್ಯದಲ್ಲಿ ರಥವನ್ನು ಸ್ಥಾಪಿಸಿದ ನಂತರ ಅಲ್ಲ; ಯುದ್ಧಕ್ಕೆ ಕೃಷ್ಣಾರ್ಜುನರಿಬ್ಬರೂ ರಥವನ್ನು ಆರೋಹಿಸುವ ಮುನ್ನ! ಹೀಗಾಗಿ ಮೂಲಭಾರತದ ಅರ್ಜುನನಿಗೆ ಉಭಯ ಸೇನೆಗಳ ಮಧ್ಯೆ ಒದಗಿದಂಥ ಸ್ಥಿತಿ, ಈ ವಿಕ್ರಮಾರ್ಜುನನಿಗೆ ಒದಗಲಿಲ್ಲ; ಅದರ ಬದಲು ಕವಿ ವಿಕ್ರಮಾರ್ಜುನನ ಮನಸ್ಸಿನಲ್ಲಿ ವ್ಯಾಮೋಹ ಕವಿಯಿತು ಎನ್ನುತ್ತಾನೆ- ಹಾಗೆ ಕವಿದದ್ದು ತೀರಾ ಸಹಜ ಎನ್ನುವಂತೆ. ಮೂಲದ ಪ್ರಕಾರ ಶ್ರೀಕೃಷ್ಣನು ತನ್ನ ದಿವ್ಯರೂಪವನ್ನು ತೋರಿದ್ದು ಅರ್ಜುನನ ಕೋರಿಕೆಯಂತೆ ಗೀತೋಪದೇಶದ ಮಧ್ಯದಲ್ಲಿ; ಆದರೆ ಪಂಪನ ಕೃಷ್ಣ  ತಾನಾಗಿಯೇ ಮೊದಲೆ ‘ದಿವ್ಯಸ್ವರೂಪಮಂ ತೋಱ’ ಹೇಳಬೇಕಾದ ನಾಲ್ಕು ಮಾತನ್ನು ಹೇಳುತ್ತಾನೆ. ಅನಂತರ ಪರಸೈನ್ಯ ಭೈರವನಾದ ಅರ್ಜುನನು ‘ಪುರಾಣ ಪುರುಷೋತ್ತಮಮಂಗೆಱಗಿ’ ರಥವನ್ನೇರಲು ಹೇಳಿ, ತಾನು ಮೂರು ಸಲ ಬಲವಂದು, ವಜ್ರ ಕವಚವನ್ನು ತೊಟ್ಟು ಅಕ್ಷಯ ತೂಣೀರವನ್ನು ಬಿಗಿದು, ದ್ರೋಣರಿಗೆ ಮನದಲ್ಲಿ ನಮಸ್ಕರಿಸಿ, ಮಹಾ ಪ್ರಚಂಡ ಗಾಂಡೀವವನ್ನು ನೀವಿ ಜೇವೊಡೆದು, ದೇವದತ್ತ ಶಂಖವನ್ನು ಊದಿ, ಸಂಸಪ್ತಕರ ಒಡ್ಡಿನ ಕಡೆ ತನ್ನ ರಥವನ್ನು ಚೋದಿಸಲು ಕೃಷ್ಣನಿಗೆ ಹೇಳುತ್ತಾನೆ. ಇದನ್ನು ನೋಡಿದರೆ ಶ್ರೀಕೃಷ್ಣನು ತನ್ನ ದಿವ್ಯರೂಪವನ್ನು ತೋರಿಸಿ, ಗೀತೆಯ ಸಾರದಂಥ ನಾಲ್ಕು ಮಾತನ್ನು ಅರ್ಜುನನಿಗೆ ಹೇಳಿ ಯುದ್ಧಕ್ಕೆ ಅವನನ್ನು ನಿಯೋಜಿಸಿದ ನಂತರ ಅರ್ಜುನ ಯುದ್ಧ ಸನ್ನದ್ಧನಾದನೆಂದು ಸ್ಪಷ್ಟವಾಗುತ್ತದೆ. ಆದರೆ ಈ ಮಾತಿಗೆ ಹಿಂದಿನ ವೃತ್ತ (೧೦-೪೪)ದಲ್ಲಿ ‘ಅದಿರದಿರ್ಚಿ ತಳ್ತಿಱಯಲೀ ಮಲೆದೊಡ್ಡಿದ ಚಾತುರಂಗಮೆಂಬುದು ನಿನಗೊಡ್ಡಿ ನಿಂದುದು’ ಎನ್ನುವ ಕೃಷ್ಣನ ಮಾತು ಎದುರಿಗೆ ನಿಂತ ಸಮೀಪಸ್ಥವಾದ ಸೈನ್ಯವನ್ನು ಸೂಚಿಸುತ್ತದೆಯಲ್ಲ! ಈ ಎರಡು ವಚನ ಒಂದು ವೃತ್ತದಿಂದ ಈ ಸಂದರ್ಭ ಪ್ರಾಪ್ತವಾದದ್ದು ಅರ್ಜುನ ಯುದ್ಧ ಸನ್ನದ್ಧನಾಗಿ ಹೊರಡುವ ಮುನ್ನ, ಬಹುಶಃ ಕುರುಕ್ಷೇತ್ರದ ಒಡ್ಡಣಕ್ಕೆ ಸಮೀಪದ ಶಿಬಿರದಲ್ಲಿ ಎಂದು ಊಹಿಸಬೇಕಾಗುತ್ತದೆ. ಒಟ್ಟಿನಲ್ಲಿ ಪಂಪ ಮೂಲದ ಗೀತಾ ಪ್ರಸಂಗವನ್ನು ತನಗೆ ತೋರಿದ ಹಾಗೆ ಬದಲಾಯಿಸಿಕೊಂಡಿದ್ದಾನೆ. ಮೂಲದ ಪ್ರಕಾರ ಗೀತಾಪ್ರವಚನ ಪೂರ್ವದಲ್ಲಿ ಬರಬೇಕಾದ ಸನ್ನಿವೇಶವನ್ನು ತನ್ನ ಕೃತಿಯಲ್ಲಿ ಇತ್ತ ಕಡೆಗೂ, ಗೀತೋಪದೇಶದ ಕಡೆಕಡೆಗೆ ಬರುವ ವಿಶ್ವರೂಪದರ್ಶನದ ಪ್ರಸಂಗವನ್ನು ಅತ್ತ ಕಡೆಗೂ ಸ್ಥಳಾಂತರಿಸಿ ‘ತಿರುಗಾ ಮುರುಗಾ’ ಮಾಡಿದ್ದಾನೆ. ಪಂಪನು ಮೂಲದ ಗೀತಾ ಪ್ರಸಂಗವನ್ನು ಹೀಗೆ ಯಾಕೆ ಬದಲಾಯಿಸಿಕೊಂಡಿದ್ದಾನೆ? ಈ ಬದಲಾವಣೆಯಿಂದ ಅವನು ಸಾಧಿಸಿರುವುದೇನನ್ನು? ಮೂಲದ ಗೀತಾ ಪ್ರಸಂಗದ ಆ ಉಜ್ವಲವಾದ ನಾಟಕೀಯ ಸನ್ನಿವೇಶವನ್ನು ಯಥಾವತ್ತಾಗಿ ತರಬಹುದಾಗಿತ್ತಲ್ಲ ಎಂಬ ಪ್ರಶ್ನೆಗಳು ನಮಗೆ ಏಳುವುದು ಸಹಜ. ಆ ಪ್ರಶ್ನೆಗಳಿಗೆ ಉತ್ತರವಾಗಿ ಕವಿಯ ಆಶಯ ಬಹುಶಃ ಹೀಗಿರಬಹುದು ಎಂದು ನಾವು ಊಹಿಸಲು ಸಾಧ್ಯವಿದೆ: ಅದೇನೆಂದರೆ, ಮೊದಲನೆಯದಾಗಿ ಇದು ವಿಕ್ರಮಾರ್ಜುನ ವಿಜಯ. ಕಥಾನಾಯಕನಾದ ಅರ್ಜುನನನ್ನು ತನ್ನ ಸ್ವಾಮಿಯಾದ ಅರಿಕೇಸರಿಯಲ್ಲಿ ಅಭಿನ್ನಗೊಳಿಸಿರುವುದರಿಂದಲೋ ಏನೊ, ಕವಿ ಮೂಲ ಭಾರತದ ಅರ್ಜುನನಿಗೆ ರಣರಂಗದ ಮಧ್ಯೆ ಒದಗಿದಂತಹ ಕ್ಲೆ ಬ್ಯವೆಂಬಂತೆ ತೋರುವ ನಡವಳಿಕೆ ತನ್ನ ಅರ್ಜುನನಿಗೆ ಒದಗಿತೆಂದು ಚಿತ್ರಿಸಲು ಒಪ್ಪದೆ ಆ ಸನ್ನಿವೇಶವನ್ನು ಹೀಗೆ ಬದಲಾಯಿಸಿಕೊಂಡಿರಬಹುದು. ಮತ್ತೊಂದು, ಆ ಉಭಯ ಸೇನೆಗಳ ಮಧ್ಯೆ, ಇಂಥಾ ವಿಸ್ತಾರವಾದ ಗೀತೋಪದೇಶವಾಯಿತೆಂದು ವಿಸ್ತರಿಸಿ ಚಿತ್ರಿಸುವುದು, ಆ ವ್ಯಾಸಭಾರತದ ಹರಹಿಗೆ ಹೇಗೋ ಹೊಂದಿಕೊಳ್ಳಬಹುದಾದರೂ, ವಾಸ್ತವ ದೃಷ್ಟಿಯಿಂದ ನೋಡುವುದಾದರೆ ಮೂಲತಃ ಗೀತೆ ಕೆಲವೇ ಸಾರವತ್ತಾದ ಸಂಕ್ಷೇಪವಾದ ಮಾತಿನಲ್ಲಿ ಮುಗಿದಿರಲು ಸಾಧ್ಯವೆಂಬ ಗ್ರಹಿಕೆಯಿಂದಲೋ ಅಥವಾ ವ್ಯಾಸಭಾರತವನ್ನು ತಾನು ಸಂಗ್ರಹಿಸಿ ಬರೆಯುವಲ್ಲಿ ತನಗೆ ಉಚಿತವಾದದ್ದು ಹಿತಮಿತ ಮಾರ್ಗವೆ ಎಂದೋ ಕವಿ ಈ ಸಂದರ್ಭವನ್ನು ಇಷ್ಟು ಸಂಕ್ಷೇಪವಾಗಿ ಚಿತ್ರಿಸಿರಬಹುದು. ಈ ಬಹಿರಂಗದ ಮಾರ್ಪಾಡುಗಳು ಏನೇ ಇರಲಿ ಪಂಪಕವಿ ಮೂಲದಲ್ಲಿ ಹದಿನೆಂಟು ಅಧ್ಯಾಯಗಳಷ್ಟು ಹರಡಿರುವ ಗೀತಾ ತತ್ವವನ್ನು ಕೇವಲ ನಾಲ್ಕೇ ಪಂಕ್ತಿಗಳ ಒಂದು ವೃತ್ತದಲ್ಲಿ ಅತ್ಯಂತ ಸೊಗಸಾಗಿ ಕಡೆದಿರಿಸಿದ್ದಾನೆ ಎಂಬುದು ವಿಶೇಷದ ಸಂಗತಿಯಾಗಿದೆ.

ಪಂಪನ ಈ ಪದ್ಯವನ್ನು ಮತ್ತೊಮ್ಮೆ ಪರಿಭಾವಿಸಿ :

‘ಅದಿರದೆ ಇದಿರ್ಚಿ ತಳ್ತಿಱಿಯಲ್ ಈ ಮಲೆತು ಒಡ್ಡಿದ ಚಾತುರಂಗಮೆಂಬುದು ನಿನಗೆ ಒಡ್ಡಿ ನಿಂದುದು’

‘ಇದನ್ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳ್ ಎಸಗು’

ಈ ಪದ್ಯದಲ್ಲಿ ಇದಿಷ್ಟು ಸಾರವತ್ತಾದ ಭಾಗ. ಉಳಿದದ್ದು ‘ಸೈತ ಅಜಿತನ್ ಆದಿಯ ವೇದರಹಸ್ಯದೊಳ್ ನಿರಂತದ (ಪರಿಚರ‍್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’

ಭಗವದ್ಗೀತೆಯನ್ನು ಗಮನವಿರಿಸಿ ಓದಿದವರಿಗೆ ಮತ್ತು ಆ ಬೆಳಕಿನಲ್ಲಿ ಪಂಪನ ಈ ಪದ್ಯವನ್ನು ಕಣ್ಣಿಟ್ಟು ಪರಿಶೀಲಿಸಿದವರಿಗೆ, ಈ ಪದ್ಯದ ಒಂದೊಂದು ಮಾತಿನಲ್ಲೂ ಗೀತೆಯ ಸಾರ ಘನೀಭವಿಸಿರುವುದು ಕಂಡುಬರುತ್ತದೆ. ಯುದ್ಧ ಮಾಡಲೇ ಬೇಕಾದದ್ದು ಸ್ವಧರ್ಮವಾಗಿರುವ ಕ್ಷತ್ರಿಯ ವೀರನಾದ ಅರ್ಜುನನಿಗೆ ವಿಷಮ ಸಮಯದಲ್ಲಿ ವ್ಯಾಮೋಹ ಆವರಿಸಿ, ವಿಲಕ್ಷಣವಾದ ವೈರಾಗ್ಯ ಕವಿದು[7] ಆತ ತನ್ನ ಕರ್ತವ್ಯದಿಂದ ಪರಾಙ್ಮುಖನಾಗಿರುವ ಹೊತ್ತಿನಲ್ಲಿ, ಆತನಿಗೆ ತನ್ನ ಕರ್ತವ್ಯದ ಅರಿವನ್ನು ಮಾಡಿಕೊಟ್ಟದ್ದು ಗೀತೋಪದೇಶದ ನೆಲೆಗಟ್ಟು. ಈ ವಿಷಯವನ್ನೆ ಪಂಪನ ಕೃಷ್ಣ ಹೇಳಿದ್ದಾನೆ: ‘ಅದಿರದೆ ಇದಿರ್ಚಿ ತಳ್ತು ಇಱಿಯಲ್ ಈ ಮಲೆತು ಒಡ್ಡಿದ ಚಾತುರಂಗಮೆಂಬುದು ನಿನಗೆ ಒಡ್ಡಿ ನಿಂದುದು’- ಎಂಬ ಈ ಮಾತಿನಲ್ಲಿ. ಹೆದರದೆ ನಿನ್ನೊಂದಿಗೆ ಹೋರಾಡಲೆಂದು ವಿಜೃಂಭಿಸಿ ನಿಂತ ಚತುರಂಗ ಬಲ ಎನ್ನುವುದು ನಿನಗೆ ಒಡ್ಡಿ ನಿಂದದ್ದು ಎನ್ನುವ ಈ ವಾಕ್ಯದಲ್ಲಿ ‘ನಿನಗೊಡ್ಡಿ ನಿಂದುದು’ ಎನ್ನುವ ಮಾತಿನ ಅರ್ಥ ಕೇವಲ ನಿನಗೆ ಎದುರಾಗಿ ನಿಂತಿದೆ ಎಂದು ಮಾತ್ರ ಅಲ್ಲ; ಈ ಸೈನ್ಯ ನಿನ್ನ ವ್ಯಕ್ತಿತ್ವಕ್ಕೆ ಆಹ್ವಾನವಾಗಿ, ನಿನ್ನ ವಿಕ್ರಮದ ಒರೆಗಲ್ಲಾಗಿ ನಿಂತಿದೆ ಎಂದು ಅರ್ಥ.[8] ಮಹಾಭಾರತದ ಕಥೆಯ ಹಿನ್ನೆಲೆಯಲ್ಲಿ ಅರ್ಜುನನ ಲೋಕೈಕವೀರತೆ ಅದ್ವಿತೀಯವಾಗಿ ಪ್ರಕಟವಾದದ್ದು ಕುರುಕ್ಷೇತ್ರದ ರಣರಂಗದಿಂದಲೇ. ಆದಕಾರಣ ತನಗೆ ಒಡ್ಡಿನಿಂತ ಈ ಕರ್ತವ್ಯದಿಂದ ಅರ್ಜುನ ಯಾವ ಕಾರಣದಿಂದಲೂ ವಿಮುಖನಾಗುವ ಹಾಗಿಲ್ಲ. ಕ್ಷತ್ರಿಯನಾದ ಅರ್ಜುನನಿಗೆ ತನಗೆ ಒಡ್ಡಿ ನಿಂದ ಈ ಪರಬಲವನ್ನು ಎದುರಿಸುವುದೇ ಸ್ವಧರ್ಮವಲ್ಲದೆ ಬೇರೆಯ ದಾರಿಯಿಲ್ಲ[9]– ಎನ್ನುವ ಕರ್ತವ್ಯ ನಿರ್ದೇಶನದ ಅಧಿಕಾರವಾಣಿ ಧ್ವನಿತವಾಗುತ್ತದೆ, ‘ಅದಿರದೆ ಇದಿರ್ಚಿ ತಳ್ತು ಇಱಿಯಲ್ ಈ ಮಲೆತು ಒಡ್ಡಿದ ಚಾತುರಂಗ ಬಲಮೆಂಬುದು ನಿನಗೊಡ್ಡಿ ನಿಂದುದು’ ಎನ್ನುವ ಮಾತಿನಲ್ಲಿ.

ಮುಂದಿನ ಮಾತು, ಪಂಪನ ಪದ್ಯದಲ್ಲಿ : ‘ಇದನ್ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳ್ ಎಸಗು.’ ಕರ್ತವ್ಯ ನಿರ್ದೇಶನವಾಯಿತು, ಇನ್ನು ಕರ್ತವ್ಯ ಕರ್ಮದ ಕೌಶಲ್ಯವನ್ನು ಕುರಿತ ಮಾತು ಇದು. ಭಗವದ್ಗೀತೆಯಲ್ಲಿ ಅತ್ಯಂತ ಸಾರವತ್ತಾದ ಮಾತು ಇದು.

ಸ್ವಧರ್ಮವನ್ನು ಕ್ಷಣಕಾಲ ಮರೆತ ಅರ್ಜುನನಿಗೆ ತನ್ನ ಸ್ವಧರ್ಮ ಏನೆಂಬುದರ ಅರಿವನ್ನು ತಂದುಕೊಟ್ಟುದಾಯಿತು. ಅಕರ್ಮ ಆತನ ಗುರಿ ಅಲ್ಲ, ಕರ್ಮದಲ್ಲಿ- ಯುದ್ಧಕರ್ಮದಲ್ಲಿ- ತೊಡಗಬೇಕಾದದ್ದು ಅನಿವಾರ್ಯ ಎನ್ನುವ ಮಾತನ್ನು ಕೃಷ್ಣನು ಹೇಳಿದ್ದಾಯಿತು. ಆದರೆ ಆತನ ಕರ್ತವ್ಯದ ಬುಡದಲ್ಲಿ ಮನೆಮಾಡಿರುವ ಸ್ವಜನ ವ್ಯಾಮೋಹವನ್ನು ಕಳೆದಲ್ಲದೆ ಅವನ ಕರ್ತವ್ಯ ವಿಮುಖವಾದ ಮನಸ್ಸಿನಲ್ಲಿ ತೊಳಲಾಟ ತಪ್ಪದು. ಭಗವದ್ಗೀತೆಯಲ್ಲಿ ಪ್ರತಿಪಾದಿತವಾಗಿರುವ ಮತ್ತೊಂದು ಪ್ರಧಾನವಾದ ಅಂಶವೇ ಇದು. ಕರ್ಮದಲ್ಲಿ ತೊಡಗಿಯೂ ಅಕರ್ಮಿಯಾಗ ಬೇಕಾದರೆ ವ್ಯಕ್ತಿಗೆ ನಾನು, ನನ್ನದು, ನನ್ನವರು ಎನ್ನುವ ಮೋಹ ತೊಲಗಿ “ಅಸಂಗತ್ವ” ಪ್ರಾಪ್ತವಾಗಬೇಕು. ಇದರೊಂದಿಗೇ, ಅರ್ಜುನನಿಗೆ ಎದುರಿಗೆ ಒಡ್ಡಿ ನಿಂತವರು ತನ್ನವರು ಎನ್ನುವ ಮಮಕಾರದಿಂದ ಬಿಡುಗಡೆ ಮಾತ್ರವಲ್ಲದೆ, ಈ ಯುದ್ಧ ಕರ್ಮದಲ್ಲಿ ಕೊಲ್ಲುವವನೂ ನಾನೇ ಎಂಬ ಅಹಂಕಾರದಿಂದಲೂ ಬಿಡುಗಡೆ ದೊರೆಯಬೇಕು. ಹಾಗಾದಾಗ ಕರ್ಮದಲ್ಲಿ ತೊಡಗಿದ ವ್ಯಕ್ತಿತ್ವಕ್ಕೆ ನೆಲೆ ಎಲ್ಲಿ? ನೆಲೆ ಇಲ್ಲಿ: ಕೊಲ್ಲುವವನು ನಾನಲ್ಲ; ಕೊಲ್ಲುವಂತೆ ತೋರುವ, ಯುದ್ಧಕರ್ಮ ಪ್ರವೃತ್ತವಾದಂತೆ ತೋರುವ, ‘ಈ ನಾನು’ ಎನ್ನುವುದು ಬೇರೊಂದು ದಿವ್ಯಶಕ್ತಿಯ ಉಪಕರಣ ಅಥವಾ ನಿಮಿತ್ತ ಮಾತ್ರ ಎನ್ನುವ ಅರಿವಿನಲ್ಲಿ. ಹಾಗೆ ಭಾವಿಸಿದಾಗ ವ್ಯಕ್ತಿಗೆ ಕರ್ಮಫಲರೂಪವಾದ, ಲಾಭ-ನಷ್ಟ, ಪಾಪ-ಪುಣ್ಯ ಇತ್ಯಾದಿ ಭಾವನೆಗಳ ಸೋಂಕು ಇರುವುದಿಲ್ಲ. ಇದೇ ಭಗವದ್ಗೀತೆಯ ಪ್ರಕಾರ ನಿಷ್ಕಾಮಕರ್ಮ, ಅಥವಾ ಕರ್ಮದಲ್ಲಿ ತೊಡಗಿಯೂ ಅಕರ್ಮದಲ್ಲಿ ನಿಲ್ಲುವ ಕೌಶಲ. ಆದ್ದರಿಂದಲೇ ಪಾರ್ಥನಿಗೆ ಶ್ರೀಕೃಷ್ಣ ಹೇಳುತ್ತಾನೆ: “ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್”[10]

ಭಗವದ್ಗೀತೆಯ ಈ ತತ್ವವೆಲ್ಲವೂ ಸಾರವತ್ತಾಗಿ ಬಂದಿದೆ ಪಂಪನ ‘ಇದನ್ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳ್ ಎಸಗು’- ಎಂಬ ಒಂದು ಮಾತಿನಲ್ಲಿ. ಇಲ್ಲಿ ಪ್ರತಿಯೊಂದು ಮಾತೂ ಸಾರ್ಥಕವಾಗಿದೆ. ‘ಇದನ್’, ನಿನಗೆ ಒಡ್ಡಿದ ಈ ಚಾತುರಂಗಬಲವನ್ನು, ‘ಓವದೆ ಕೊಲ್ವೊಡೆ,’ ಇವರು ನನ್ನವರು ತನ್ನವರು ಎನ್ನುವ ಸ್ವಜನಾಸಕ್ತಿಯನ್ನು ತಾಳಿಕೊಳ್ಳದೆ ಕೊಲ್ಲುವುದಾದರೆ ‘ನೀನುಂ ಎನ್ನ ಕಜ್ಜದೊಳ್ ಎಸಗು ’ ನೀನೂ ನನ್ನ ಕಾರ್ಯದಲ್ಲಿ- ಇದು ನಿನ್ನ ಕೆಲಸ ಎಂದು ಅಲ್ಲ, ನನ್ನ, ಸೃಷ್ಟಿ ಸ್ಥಿತಿ ಲಯಕರ್ತನಾದ ನನ್ನ ಕಾರ್ಯ ಎಂದು ತಿಳಿದು[11]– ವ್ಯವಹರಿಸು ಎನ್ನುತ್ತಾನೆ ಪಂಪನ ಕೃಷ್ಣ. ‘ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್’- ಎನ್ನುವ ಮಾತು ಅದರ ಹಿನ್ನೆಲೆಯ ಸಮೇತ ‘ನೀನುಂ ಎನ್ನ ಕಜ್ಜದೊಳ್ ಎಸಗು’ ಎಂಬ ಒಂದು ಮಾತಿನಲ್ಲಿ ಅಡಕವಾಗಿದೆ.

ಪಂಪನ ಈ ಒಂದು ವೃತ್ತದಲ್ಲಿ ಉಳಿದ ಮಾತು ಇಷ್ಟು : ‘[ಎಂದು] ಸಯ್ತಜಿತನ್ ಆದಿಯ ವೇದ ರಹಸ್ಯದೊಳ್ ನಿರಂತದ (ಪರಿಚರ್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’ ಹೀಗೆ ನೇರವಾಗಿ ಅಜಿತನು (ಕೃಷ್ಣನು) ಆದಿಯ ವೇದ ರಹಸ್ಯದಲ್ಲಿ ನಿರಂತರವಾದ  ಅನುನಯದ ಮಾತುಗಳಿಂದ ಕದನ ತ್ರಿಣೇತ್ರನಾದ ಅರ್ಜುನನನ್ನು ಸಂಪೂರ್ಣವಾಗಿ [ಯುದ್ಧೋದ್ಯಮಕ್ಕೆ] ನಿಯೋಜಿಸಿದನು. ಇಲ್ಲಿ ‘ಆದಿಯ ವೇದರಹಸ್ಯದೊಳ್’ -ಎಂಬ ಮಾತು ಸ್ವಾರಸ್ಯವಾಗಿದೆ. ‘ಆದಿಯ ವೇದರಹಸ್ಯದೊಳ್’ ಎಂದರೆ ಬಹುಶಃ ಉಪನಿಷತ್ ಪ್ರಣೀತವಾದ ಈ ತತ್ವದಲ್ಲಿ ಎಂದು ಅರ್ಥವಿರಬಹುದು ಕವಿಯ ಅಭಿಪ್ರಾಯದಲ್ಲಿ. ಏಕೆಂದರೆ ಭಗವದ್ಗೀತೆಯಲ್ಲಿ   ಸರ್ವೋಪನಿಷತ್ತುಗಳ ಸಾರವೇ ಬಂದಿದೆ, ತಿಳಿಯಾದ ಸ್ವಾದುವಾದ ರೂಪದಲ್ಲಿ ಬಂದಿದೆ ಎನ್ನುವ ಪ್ರಶಸ್ತಿ ಭಗವದ್ಗೀತೆಗೆ ಸಂದಿದೆ.[12]

ಭಗವದ್ಗೀತೆಯ ತಿರುಳನ್ನು[13] ಇದಕ್ಕಿಂತ ಸೊಗಸಾಗಿ ಸಾರಭೂತವಾಗಿ, ಪ್ರಾಮಾಣಿಕವಾಗಿ, ಅತ್ಯಂತ ಸಂಗ್ರಹವಾಗಿ ಒಂದೇ ವೃತ್ತದಲ್ಲಿ ಮೂರೇ ಮಾತಿನಲ್ಲಿ ಹಿಡಿದಿರಿಸಬಲ್ಲ ಈ ತ್ರಿವಿಕ್ರಮ ಪ್ರತಿಭೆ ಪಂಪನಿಗಲ್ಲದೆ ಇನ್ನಾರಿಗೆ ಸಾಧ್ಯ? ಭಗವದ್ಗೀತೆಯಲ್ಲಿ ವೇದಾಂತದ ದೃಷ್ಟಿಯಿಂದ ಇನ್ನೂ ಎಷ್ಟೋ ವಿಷಯಗಳು ಇವೆ. ಅವೂ ಅಮೂಲ್ಯವಾಗಿಯೇ ಇವೆ. ಆದರೆ ಕವಿ ಪಂಪ ಮಹಾಭಾರತವನ್ನು ಬರೆಯುವಲ್ಲಿ, “ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು”- ಇಡೀ ಗೀತೆಯ ಉದ್ದೇಶವೇ ಅದು; ಅರ್ಜುನನ ಮನಸ್ಸಿನ ವ್ಯಾಮೋಹವನ್ನು ಕಳೆದು ಸ್ವಧರ್ಮಕ್ಕೆ ತಂದು ಕರ್ತವ್ಯದಲ್ಲಿ ನಿಯೋಜಿಸುವುದು[14] -ಹೇಳಬೇಕಾದ ಗೀತಾತತ್ವವನ್ನು ಅತ್ಯಂತ ಎಚ್ಚರಿಕೆಯಿಂದ ಕಡೆದಿರಿಸಿದ್ದಾನೆ. ಇಷ್ಟನ್ನು ನೋಡಿದ ಮೇಲೆ ಭಗವದ್ಗೀತೆಗೆ ಊನವಾಗಿದೆಯೆಂದಾಗಲಿ, ಗೀತೆ ಇಷ್ಟರಲ್ಲೇ ತೇಲಿಹೋಗಿದೆ ಎಂದಾಗಲೀ ನಮಗೆ ಅನ್ನಿಸುವುದಿಲ್ಲ. ಜೊತೆಗೆ ಕೃಷ್ಣನ ಪಾತ್ರದ ಹಿರಿಮೆಗೆ ಯಾವ ಕೊರತೆಯೂ ಉಂಟಾದಂತೆ ತೋರುವುದಿಲ್ಲ. ಅದರ ಬದಲು ಅರ್ಜುನನ ಪಾತ್ರದ ಘನತೆಯನ್ನು ತಗ್ಗಿಸದೆ ಕೃಷ್ಣನ ಪಾತ್ರದ ದಿವ್ಯತ್ವವನ್ನೇ ಪಂಪ ಎತ್ತಿಹಿಡಿದಿರುವುದು ಸ್ವಾರಸ್ಯದ ಸಂಗತಿಯಾಗಿದೆ.

ಭಗವದ್ಗೀತೆಯ ಪ್ರಸಂಗವನ್ನು ಸಂಗ್ರಹನಿಪುಣನಾದ ಪಂಪ ಅತ್ಯಂತ ಸಂಕ್ಷೇಪವಾಗಿ ನಿರೂಪಿಸಿದ್ದಾನೆಯೇ ಹೊರತು, ಅವನಿಗೆ ಗೀತೆಯ ವಿಚಾರಕ್ಕಾಗಲೀ ಗೀತಾಚಾರ್ಯನಾದ ಶ್ರೀಕೃಷ್ಣನ ವಿಚಾರದಲ್ಲಾಗಲಿ ಯಾವ ಸಂಕೋಚ ಭಾವನೆಯೂ ಇರುವಂತೆ ತೋರುವುದಿಲ್ಲ. ಹಾಗೆ ನೋಡಿದರೆ ಮೂಲ ಭಗವದ್ಗೀತೆಯಲ್ಲಿ ಕೃಷ್ಣನಿಗೆ ಯಾವ ಮಹತ್ವವಿದೆಯೋ ಅದೇ ಮಹತ್ತನ್ನು ಪಂಪ ಇಲ್ಲಿಯೂ ಎತ್ತಿಹಿಡಿದಿದ್ದಾನೆ. ಕೃಷ್ಣನ ದಿವ್ಯಾವತಾರ, ದಿವ್ಯಲೀಲೆ, ದಿವ್ಯೋಪದೇಶಗಳನ್ನು ಕವಿ ಗೌರವಿಸಿದ್ದಾನೆ. ಪಂಪನು ಚಿತ್ರಿಸಿರುವ ಈ ಭಾಗದಲ್ಲಿ “ಮುಕುಂದಂ ದಿವ್ಯಸ್ವರೂಪಮಂ ತೋಱಿ”ದ್ದು, ಅರ್ಜುನನನ್ನು ಕುರಿತು ‘ನೀನುಂ ಎನ್ನ ಕಜ್ಜದೊಳೆಸಗು’ ಎಂದು ಬೆಸಸಿದ್ದು, ‘ಅಜಿತ’ ಎನ್ನುವ ವಿಶೇಷಣವನ್ನು ಕೃಷ್ಣನ ವಿಚಾರದಲ್ಲಿ ಉಪಯೋಗಿಸಿ ತೀರ್ಥಂಕರನಿಗೆ ಸಮಾನವಾದ ಗೌರವವನ್ನು ತೋರಿದ್ದು, ಕಡೆಯಲ್ಲಿ ಕೃಷ್ಣನಿಂದ ಯುದ್ಧೋದ್ಯಮಕ್ಕೆ ನಿಯೋಜಿತನಾದ ‘ಪರಸೈನ್ಯ ಭೈರವಂ ಪುರಾಣಪುರುಷನಪ್ಪ ಪುರುಷೋತ್ತಮಂಗೆಱಗಿ ಪೊಡಮಟ್ಟು’ ರಥವನ್ನೇರಿದನೆಂದು ವರ್ಣಿಸಿದ್ದು, ಉದ್ದಕ್ಕೂ ಕೃಷ್ಣನ ಮಹಿಮೆಯನ್ನು ಇದೇ ಮಟ್ಟದಲ್ಲಿ ಚಿತ್ರಿಸಿಕೊಂಡು ಬಾರದಿರುವ ದೃಷ್ಟಿಯಿಂದ ವಿಸ್ಮಯಕರವಾಗಿ ತೋರಿದರೂ, ಇಲ್ಲಿ ಶ್ರೀಕೃಷ್ಣ  ದಿವ್ಯರೂಪವನ್ನು ತೋರುವ ಮುಕುಂದನಾಗಿ, ಅಜಿತನಾಗಿ, ಪುರಾಣಪುರುಷನಪ್ಪ ಪುರುಷೋತ್ತಮನಾಗಿ ನಿಂತಿದ್ದಾನೆ ಎನ್ನುವುದು ಗಮನಾರ್ಹವಾಗಿದೆ. ಇದರ ಮೇಲೆ ಕೃಷ್ಣನ ಮಹಿಮೆಯನ್ನು ಇದೇ ಮಟ್ಟದಲ್ಲಿ ಚಿತ್ರಿಸಬೇಕಾಗಿತ್ತೆಂದೂ, ಹಾಗೆ ಚಿತ್ರಿಸಿದ್ದರೆ ಮಾತ್ರ ಪಂಪನಿಗೆ ಕೃಷ್ಣನ ವಿಚಾರದಲ್ಲಿ ಗೌರವವಿತ್ತೆಂದೂ, ಇಲ್ಲದಿದ್ದರೆ ಇರಲಿಲ್ಲವೆಂದೂ ಭಾವಿಸುವುದು ಸರಿಯಾಗಿ ತೋರುವುದಿಲ್ಲ. ಏಕೆಂದರೆ “ಪಂಪನಲ್ಲಿ ಶ್ರೀಕೃಷ್ಣನನ್ನು ಕುರಿತು ಭಕ್ತಿಯ ಉದ್ರೇಕವಿಲ್ಲವೆಂಬುದು ದಿಟ; ಆದರೆ ಅವನ ಕಾವ್ಯದಲ್ಲಿ ಅದನ್ನು ನಿರೀಕ್ಷಿಸುವುದೇ ಅನುಚಿತ. ಇದೊಂದು ಅಂಶವನ್ನು ಬಿಟ್ಟರೆ ಸಾಕು ಕೃಷ್ಣನು ಪುರುಷೋತ್ತಮ ಮಾತ್ರವಲ್ಲ, ಅವನು ಅವತಾರ ಪುರುಷನೆಂಬುದನ್ನೂ ಪಂಪನು ಅರಿತು ಅದೇ ರೀತಿಯಾಗಿ ನಿರೂಪಿಸಿರುವುದು ಅವನ ಕೃತಿಯಲ್ಲಿ ಎಷ್ಟೋ ಕಡೆ ಗೋಚರವಾಗುತ್ತದೆ.”[15]

ಪರಿಶೀಲನೆ (೧೯೬೭)

* * *


[1] V.S. Sukthankar : On the Meaning of Mahabharatha. P.119.

[2] ಭಗವದ್ಗೀತೆ ಅತ್ಯಂತ ಪವಿತ್ರವಾದ ಗ್ರಂಥವಾದ್ದರಿಂದ ಅದು ಮೂಲದಲ್ಲಿ ಭಗವಾನ್ ಶ್ರೀ ಕೃಷ್ಣನ  ಮುಖದಿಂದ ಉಕ್ತವಾದಾಗ ಹೇಗಿತ್ತೋ ಹಾಗೆಯೇ ಈಗಲೂ ಇದೆ, ಅದರಲ್ಲಿ ಪಾಠಭೇದಗಳೆ ಇಲ್ಲ- ಎಂದು ಪರಂಪರಾಗತವಾದ ತಿಳುವಳಿಕೆ. ಆದರೆ ಮಹಾಭಾರತದ ಉಳಿದ ಭಾಗಗಳ ಮೇಲೆ ಹೇಗೋ ಹಾಗೆ ಭಗವದ್ಗೀತೆಯ ಪಾಠದ ಮೇಲೂ ಜನ ಸಾಕಷ್ಟು ಕೈಯಾಡಿಸದೆ ಇಲ್ಲ ಎಂಬುದನ್ನು ಗೀತೆಯ ಬಗ್ಗೆ ದೊರೆತಿರುವ ವಿಪುಲ ಪಾಠಭೇದಗಳು ತೋರಿಸುತ್ತವೆ. ಆ ಎಲ್ಲ ಪಾಠಭೇದಗಳನ್ನೂ ಸಂಗ್ರಹಿಸಿ ಮೊಟ್ಟ ಮೊದಲಿಗೆ ಒಂದು ಕಡೆ ಕೊಟ್ಟಿದ್ದಾರೆ. ಪುಣೆಯ ಭಂಡಾರ್ಕರ್ ಸಮಿತಿಯವರು. ನೋಡಿ : Bhishma Parvam : Part I, Ed, S.K. Belvalkar.

[3] “….. ಎಲ್ಲಕ್ಕೂ ಬಹುಮುಖ್ಯವಾದ ಅಂಶದಲ್ಲಿ ಮಹಾಭಾರತವೆಂಬ ವೇದಕ್ಕೆ ಬೃಹದ್ದೇವತೆಯಾದ  ಶ್ರೀಕೃಷ್ಣನ ವಿಷಯದಲ್ಲಿ, ಆತನ ದಿವ್ಯಾವತಾರ, ದಿವ್ಯೋಪದೇಶ, ದಿವ್ಯಲೀಲೆಗಳ ವಿಷಯದಲ್ಲಿ, ಆದಿತೀರ್ಥೇಶ್ವರನಲ್ಲಿ ಪಂಪನಿಗಿದ್ದ ಅನನ್ಯ ಶರಣ ಭಾವವಿಲ್ಲದೆ ಇದ್ದುದರಿಂದ, ತನ್ನ ಜೈನಶ್ರದ್ಧೆಗೂ, ತನ್ನ ಪೂರ್ವಿಕರ ವೈದಿಕ ಸಂಸ್ಕಾರಕ್ಕೂ ಹೋರಾಟ ಹುಟ್ಟಿ, ಒಳಗೇ ಪಂಪನ ಮನಸ್ಸು ಎರಡು ಕವಲಾಗಿ ಒಡೆದು, ಆತನ ಕವಿ ದೃಷ್ಟಿಯನ್ನೂ, ಆತನ ಉತ್ಸಾಹ ಧ್ವನಿಯನ್ನೂ ಸ್ವಲ್ಪ ಮಟ್ಟಿಗೆ ಕುಗ್ಗಿಸಿತೆಂದು ಹೇಳಬೇಕಾದ ನಿರ್ಬಂಧ ಒದಗಿದೆ.”

-ಬಿ.ಎಂ. ಶ್ರೀಕಂಠಯ್ಯ ; ಕನ್ನಡ ಕೈಪಿಡಿ ಸಂಪುಟ, ೨.ಪು : ೫೧೮-೫೧೯.

[4] ಪಂಪನಲ್ಲಿ ವೈದಿಕ-ಜೈನ ಸಂಸ್ಕಾರಗಳೆರಡೂ ಮಿಶ್ರವಾದದ್ದರಿಂದಲೋ, ಅಥವಾ ಅವನ ವ್ಯಕ್ತಿತ್ವದ ಸಮತೂಕದಿಂದಲೋ, ಅವನು ನಾಗಚಂದ್ರಾದಿ ಜೈನ ಕವಿಗಳ ಹಾಗೆ ಪರಂಪರಾಗತವಾದ ಹಿಂದೂ ಭಾವನೆಗಳನ್ನು ಮನಸ್ವಿಯಾಗಿ ಬದಲಾಯಿಸಿ, ಜೈನ ಮುದ್ರೆಯನ್ನು ಬಲವಂತವಾಗಿ ಒತ್ತಲು ಹೋಗಿಲ್ಲ. ಆದರೂ ಜೈನಪ್ರಭಾವ ಆತನ ಲೌಕಿಕ ಕೃತಿ ವಿಕ್ರಮಾರ್ಜುನ ವಿಜಯದಲ್ಲಿ ಕಾಣದೆ ಇಲ್ಲ.

[5] ಶ್ರೀಮದಾಂಧ್ರಭಾರತ (ತಿಕ್ಕನ ವಿರಚಿತ ಭಾಗದಲ್ಲಿ) ಭಗವದ್ಗೀತೆಯ ಸಂದರ್ಭ ಬಹುಸಂಗ್ರಹವಾಗಿ ಬಂದಿದೆ. ಮೂಲ ಭಗವದ್ಗೀತೆಯ ನುಡಿನುಡಿಗಟ್ಟುಗಳನ್ನೇ ಬಳಸಿ, ಕೇವಲ ನಲವತ್ತೆಂಟು ಪದ್ಯಗಳಲ್ಲಿ ಕವಿ ಸಂಕ್ಷೇಪವಾಗಿ ಸಂಗ್ರಹಿಸಿದ್ದಾನೆ. ಕುಮಾರವ್ಯಾಸ ಭಾರತದಲ್ಲಿ ಇಡೀ ಗೀತೆ ೬೮ ಪದ್ಯಗಳಲ್ಲಿ ಸಂಗ್ರಹಿತವಾಗಿದೆ: ಅದರಲ್ಲಿ ೩೫ ಪದ್ಯ ವಿಶ್ವರೂಪದರ್ಶನದ ವರ್ಣನೆಗೇ ಮೀಸಲಾಗಿದೆ.

[6] ಬಿ.ಎಂ. ಶ್ರೀಕಂಠಯ್ಯ : ಕನ್ನಡ ಕೈಪಿಡಿ. ಭಾಗ ೨, ಪುಟ ೫೧೮.

[7] ನ ಚ ಶ್ರೇಯೋನುಪಶ್ಯಾಮಿ ಹತ್ವಾ ಸ್ವಜನ ಮಾಹವೇ|
ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ||
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ||                             (೧-೮೧,೩೨) ಭಗವದ್ಗೀತೆ

[8] ಇಂಗ್ಲಿಷಿನಲ್ಲಿ ಹೇಳುವುದಾದರೆ ‘ನಿನಗೊಡ್ಡಿ ನಿಂದುದು’ ಎಂಬುದನ್ನು It is meant for you ಅಥವಾ It is a challenge for you ಎಂದು ಹೇಳಬಹುದು.

[9] ಹತೋ ವಾ ಪ್ರಾಪ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹಿಮ್|
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ || (೨-೩೭)
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನಿಷ್ಠಿತಾತ್
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ|| (೩-೩೫)                          -ಭಗವದ್ಗೀತೆ

[10] ತಸ್ಮಾತ್ ತ್ವಮುತ್ತಿಷ್ಠ ಯಶೋಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್
ಮಯೈವೈತೇನಿಹತಾಃ ಪೂರ್ವಮೇವ
ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್. (೧೧-೩೩)
ಶ್ರೀ ಮದ್ಭಗವದ್ಗೀತಾ; ಸಂ : ಸ್ವಾಮಿ ಆದಿದೇವಾನಂದ, ಪು. ೧೯೫

[11] ಇಲ್ಲಿ ಶ್ರೀಕೃಷ್ಣ ಹೇಳುತ್ತಾನೆ : ಆಗಲೇ ಇವರೆಲ್ಲರೂ ನನ್ನಿಂದ ಹತರಾಗಿದ್ದಾರೆ, ಸವ್ಯಸಾಚಿಯೇ ನೀನು ನಿಮಿತ್ತ ಮಾತ್ರನಾಗು-ಎಂದು. (ಗೀತೆ ೧೧-೩೩).

[12] ಸರ್ವೋಪನಿಷದೋ ಗಾವೋ
ದೋಗ್ದಾ ಗೋಪಾಲನಂದನಃ
ಪಾರ್ಥೋ ವತ್ಸಃ ಸುಧೀರ್ಭೋಕ್ತಾ
ದುಗ್ದಂ ಗೀತಾಮೃತಂ ಮಹತ್ (೪)
ಅಲ್ಲೇ. “ಧ್ಯಾನ”- ಪು.೮

[13] ನಾನು, ನನ್ನದು, ನನ್ನವರು, ಎನ್ನುವ ಸ್ವಜನಾಶಕ್ತಿ ಇರುವ ತನಕ ವ್ಯಕ್ತಿ ನಿಜವಾದ ಕರ್ತವ್ಯ ಕರ್ಮದಲ್ಲಿ ತೊಡಗಲಾರ. ಆದುದರಿಂದ ಆತ ಮೊದಲನೆಯದಾಗಿ ನಾನು, ನನ್ನದು ಎನ್ನುವ ಮಮಕಾರವನ್ನು ಬಿಟ್ಟು ಅನಾಸಕ್ತಿಯಿಂದ ಕರ್ತವ್ಯದಲ್ಲಿ ತೊಡಗಬೇಕು. ಈ ಅನಾಸಕ್ತಿ ಸಿದ್ಧಿಸಬೇಕಾದರೆ ವ್ಯಕ್ತಿ, ತಾನು ಏನಿದ್ದರೂ ಬೇರೊಂದು ದಿವ್ಯೋದ್ದೇಶದ ಉಪಕರಣ ಅಥವಾ ನಿಮಿತ್ತ ಮಾತ್ರ ಎನ್ನುವ ಅರಿವನ್ನು ಪಡೆಯಬೇಕು. ಹಾಗಾದಾಗ ಕರ್ಮಫಲಗಳು ಆತನಿಗೆ ಅಂಟುವುದಿಲ್ಲ. ಗೀತೆಯ ಸಾರ ಇದಕ್ಕಿಂತ ಹೆಚ್ಚಿಗೆ ಇನ್ನೇನಿದೆ?

[14] ಭಗವದ್ಗೀತೆಯ ಕಡೆಯಲ್ಲಿ ಅರ್ಜುನ ಹೇಳುವ ಮಾತೇ ಇದು: ಅಚ್ಯುತ ನಿನ್ನ ಅನುಗ್ರಹದಿಂದ ಮೋಹ ಕಳೆಯಿತು, ಸ್ಮ ತಿ ಲಭಿಸಿತು, ಸಂಶಯ ನಿವಾರಿತವಾಯಿತು, ನೀನೆಂದಂತೆ ಮಾಡುತ್ತೇನೆ- ಎಂದು

ನಷ್ಟೋ ಮೋಹಃ ಸ್ಮ ತಿರ್ಲಬ್ಧಾ ತ್ವತ್ಪ್ರಸಾದಾನ್ಮ ಯಾಚ್ಯುತ|
ಸ್ಥಿತೋsಸ್ಮಿಗತಸಂದೇಹಃ ಕರಿಷ್ಯೇ ವಚನಂ ತವ || ೧೮-೭೩. ಅಲ್ಲೇ, ಪು. ೩೦೯.

[15] ತೀ.ನಂ.ಶ್ರೀಕಂಠಯ್ಯ ; ಪಂಪಭಾರತದ ಕೃಷ್ಣ: ಒಂದು ಚಿಕ್ಕ ಟಿಪ್ಪಣಿ, ‘ಅಭಿವಂದನೆ’- [ಎ.ಆರ್. ಕೃಷ್ಣಶಾಸ್ತ್ರಿಗಳಿಗೆ ಅರ್ಪಿಸಿದ ಸಂಭಾವನಾ ಗ್ರಂಥ.] ಪು. ೫೨೧.