ಪಂಪಕವಿ ತನ್ನ ಎರಡು ಮಹಾಕೃತಿಗಳಲ್ಲಿ ಬಹುಮುಖ್ಯವಾದ ಎರಡು ಸೂಚನೆಗಳನ್ನು ಎತ್ತಿ ಹೇಳಿದ್ದಾನೆ : ವಿಕ್ರಮಾರ್ಜುನ ವಿಜಯವನ್ನು ಬರೆಯುವಲ್ಲಿ ‘ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಮಂ’ ಎಂದೂ, ಆದಿಪುರಾಣವನ್ನು ಬರೆಯುವಲ್ಲಿ ‘ಆದಿಪುರಾಣದೊಳಱಿವುದು ಕಾವ್ಯಧರ್ಮಮಂ ಧರ್ಮಮುಮಂ’ ಎಂದೂ ಘೋಷಿಸಿಕೊಂಡಿದ್ದಾನೆ. ಪಂಪಕವಿ ತನ್ನ ಮಹಾ ಪ್ರತಿಭೆ ಹೀಗೆ ‘ಲೌಕಿಕ’ ‘ಆಗಮಿಕ’ವೆಂಬ ಎರಡು ಪ್ರತ್ಯೇಕ ಕವಲುಗಳೆಂಬಂತೆ ಪ್ರವಹಿಸಿದುದನ್ನು ಗುರುತಿಸಿದಾಗ ಅವನು ತನ್ನ ಈ ಎರಡೂ ಸೂಚನೆಗಳಲ್ಲಿ ಆ ಎರಡೂ ಕೃತಿಗಳ ಆತ್ಮಲಕ್ಷಣವನ್ನು ನಿರ್ದೇಶಿಸಿದ್ದಾನಲ್ಲದೆ, ಆ ಎರಡರ ಹಿಂದೆಯೂ ಕೆಲಸ ಮಾಡುತ್ತಿರುವುದು ಒಂದೇ ಮಹಾಕವಿ ಪ್ರತಿಭೆ ಎಂಬುದನ್ನು ಸಹೃದಯರು ಮರೆಯದಿರಲಿ ಎಂಬ ಎಚ್ಚರಿಕೆಯನ್ನೂ ಕೊಟ್ಟಂತೆ ತೋರುತ್ತದೆ. ಏಕೆಂದರೆ ವಿಕ್ರಮಾರ್ಜುನ ವಿಜಯವನ್ನು ಯಾವ ಧರ್ಮಸಂಬಂಧಿಯೂ ಅಲ್ಲದ ಕೇವಲ ಲೌಕಿಕ ಕಾವ್ಯವೆಂದು ಭಾವಿಸುವ ಅಪಾಯದಿಂದ, ಆದಿಪುರಾಣವನ್ನು ಕಾವ್ಯಪ್ರಯೋಜನ ದೂರವಾದ ಕೇವಲ ಪುರಾಣವೆಂದು ಭಾವಿಸುವ ನೀರಸ ಮಡಿವಂತಿಕೆಯಿಂದ ಅಥವಾ ತಟಸ್ಥತೆಯಿಂದ ಸಹೃದಯರು ಪಾರಾಗದಿದ್ದರೆ ಅವರು ಪಂಪನನ್ನೇ ಅರ್ಥಮಾಡಿಕೊಳ್ಳಲಾರರು. ಆದಕಾರಣ ಪಂಪ ತನ್ನ ಆದಿಪುರಾಣವನ್ನು ಜನ ಕೇವಲ ಜಿನಪುರಾಣವೆಂದು ಭಾವಿಸಿಯಾರೋ ಎಂದೋ, ತಾನು ಹಾಗೆ ಭಾವಿಸಿಲ್ಲ ಎಂದೋ ಹೇಳುವಂತೆ ತೋರುತ್ತದೆ, ‘ಆದಿಪುರಾಣದೊಳಱಿವುದು ಕಾವ್ಯಧರ್ಮಮಂ ಧರ್ಮಮುಮಂ’ ಎಂಬ ಘೋಷಣೆಯಲ್ಲಿ. ಅಷ್ಟೇ ಅಲ್ಲದೆ ಹತ್ತನೆಯ ಶತಮಾನದಷ್ಟು ಹಿಂದೆ ತನ್ನ ಆದಿಪುರಾಣವನ್ನು ಕುರಿತು ಹೇಳಿದ ‘ಅರಿವುದು ಕಾವ್ಯಧರ್ಮಮಂ ಧರ್ಮಮುಮಂ’ ಎಂಬ ಒಂದು ಮಾತು ಇಡೀ ಕನ್ನಡ ಸಾಹಿತ್ಯಕ್ಕೆ ಯಥಾವತ್ತಾಗಿ ಅನ್ವಯಿಸುವ ವಿಮರ್ಶೆಯ ಸೂತ್ರವೆಂಬಂತೆ ತೋರುವುದು ಸೋಜಿಗದ ಸಂಗತಿಯಾಗಿದೆ.

ಆದಿಪುರಾಣ ತೀರ್ಥಂಕರನ ಕಥೆ; ಇದನ್ನು ಕವಿ ಬರೆದದ್ದು ಯಾವ ಬಹಿರಂಗದ ಒತ್ತಡಗಳ ಪ್ರೇರಣೆಯಿಂದಲೂ ಅಲ್ಲ; ಯಾವ ರಾಜಮಹಾರಾಜರನ್ನಾಗಲಿ, ಪಂಡಿತರನ್ನಾಗಲಿ ಮೆಚ್ಚಿಸಲು ಬರೆದದ್ದಲ್ಲ. ಭವರಾಶಿ ನಿಮಗ್ನರಾದ ಜೀವರಿಗೆ ಜಿನೇಂದ್ರ ಚರಣದ ಶರಣ್ಯವನ್ನು ಅರಿವು ಮಾಡಿಕೊಡಲು ಬರೆದದ್ದು. ಹೀಗಿರುವಾಗ ಈ ಕೃತಿ ಅರ್ಹತ್ ಪದವಿಗೇರುವ ಆದಿದೇವನ ಜನ್ಮಾಂತರ ಪರಿಭ್ರಮಣಗಳನ್ನೂ, ಅವನ ಸುತ್ತಲೂ ಹೆಣೆದುಕೊಂಡ ಇನ್ನೂ ಹಲವು ಚೇತನಗಳ ಏಳುಬೀಳುಗಳನ್ನೂ ಚಿತ್ರಿಸುತ್ತದೆ. ಭವಭವಗಳಲ್ಲಿ ತೊಳಲಿ ಬಳಲಿ, ಹಲುಬಿ ಹಂಬಲಿಸಿ, ಚತುರ್‌ಗತಿಗಳ ಚಕ್ರ ಪಥಗಳಲ್ಲಿ ತಿರುಗಿ ತಿರುಗಿ ಹಣ್ಣಾಗಿ ಆದಿದೇವನು ಕಡೆಗೆ ಅರ್ಹತ್ ಪದವಿಯ ನಿರ್ಮಲ ನಿಲುವಿನಲ್ಲಿ ನಿಂತದ್ದನ್ನು ವರ್ಣಿಸುವ ‘ಭವ್ಯಲೋಕ ಪ್ರಮುದಪ್ರದ’ವಾದ ಕಥಾ ಕೋಲಾಹಲ. ಹೀಗಾಗಿ ಮೊದಲ ಆಶ್ವಾಸದಿಂದ ಹತ್ತನೆ ಆಶ್ವಾಸದ ತನಕ ಈ ಭವ ಭವದ ತೊಳಲಾಟ, ಜೈನತಪಸ್ಸಿನ ಕಠೋರಸಾಧನೆ ವೈರಾಗ್ಯ ಬೋಧನೆ ಹೆದ್ದೊರೆಯಾಗಿ ಹರಿದು ಆದಿದೇವನ ಅರ್ಹತ್ ಪದವಿಯ ಪಾದಮೂಲದಲ್ಲಿ ತಿಳಿಯಾಗಿ ನಿಲ್ಲುತ್ತದೆ. ಇಲ್ಲಿನ ತನಕ ಜಿನಧರ್ಮದ ಹೊನಲು; ಮುಂದಿನದು ಹನ್ನೊಂದನೆಯ ಆಶ್ವಾಸ ಕಾವ್ಯಧರ್ಮದ ಮಡು.

ಹತ್ತನೆ ಆಶ್ವಾಸದ ತನಕ ಯೋಗಮುಖವಾದ ಭೋಗದ ನಿರರ್ಥಕತೆಯ ಉಜ್ವಲ ವ್ಯಥೆ; ಹಾಗೂ ಯೋಗದಲ್ಲಿ ವ್ಯಕ್ತಿ ಏರಿ ಮುಕ್ತನಾದ ಕಥೆ. ಹನ್ನೊಂದನೆಯ ಆಶ್ವಾಸದಲ್ಲಿ ಮೊದಲಾಗುತ್ತದೆ ಭೋಗದ ಕಥೆ. ಆದಿದೇವನ ಮಗನ ಮಹತ್ವಾಕಾಂಕ್ಷೆಯ ವಿಲಾಸ ವೈಭವಗಳ ಯಾತ್ರೆ. ಹೀಗಾಗಿ ಹತ್ತನೆ ಆಶ್ವಾಸದ ತನಕ, ಆದಿದೇವ ಅರ್ಹತ್ ಪದವಿಯಲ್ಲಿ ನಿಂತದ್ದನ್ನು ಕಾಣುವ ತನಕ ಕವಿಗೂ ಓದುಗರಿಗೂ ಬಿಡುವಿಲ್ಲ. ಭವಭವಾಂತರಗಳ ತೊಳಲಾಟ ಬಳಲಾಟಗಳಿಂದ ಬಿಡುಗಡೆಗೊಂಡ ಚೇತನ ಮುಕ್ತಸ್ಥಿತಿಯಲ್ಲಿ ನಿಂತದ್ದನ್ನು ಕಂಡ ಆ ಭವ್ಯಾನುಭವದ ಬೆಳಕಿನಲ್ಲಿ ನಾವು ಮರ್ತ್ಯರು ಹೆಚ್ಚು ಹೊತ್ತು ನಿಲ್ಲಲಾರೆವು. ಆದಿದೇವನ ಸನ್ನಿಧಿ ನಮ್ಮಂಥವರಿಗೆ “ಪ್ರವಾಸಕ್ಕೇ ಹೊರತು ನಿವಾಸಕ್ಕಲ್ಲ”. ಆ ಪರಮ ವೈರಾಗ್ಯದ ಪ್ರಭೆಯಲ್ಲಿ ಉಬ್ಬಸಗೊಳ್ಳುವ ನಮ್ಮನ್ನು ಕವಿ ಕರುಣೆಯಿಂದ ತಂದು ಭರತ ಚಕ್ರವರ್ತಿಯ ದಿಗ್ವಿಜಯ ಮುಖವಾದ ಸೈನ್ಯದ ನಡುವೆ ಸೇರಿಸುತ್ತಾನೆ; ನಮಗೆ ಚಿರಪರಿಚಿತವಾದ ಪ್ರಿಯವಾದ ಈ ರಾಜಸಿಕ ತುಮುಲಗಳ ನಡುವೆ ನಾವು ಮತ್ತೆ ಮೊದಲಿನಂತವರಾಗಿಬಿಡುತ್ತೇವೆ. ಹಾಗೆಯೇ ಮುಂದೆ ನಡೆದು ತಟಕ್ಕನೆ ಭರತ ಚಕ್ರವರ್ತಿಯ ಅಂತಃಪುರದ ಲಲನಾ ಮಣಿಯರೊಂದಿಗೆ ಪುಷ್ಪೋದ್ಯಾನವೊಂದನ್ನು ಪ್ರವೇಶಿಸುತ್ತೇವೆ.

ಅದೂ ಎಂಥ ಪುಷ್ಪೋದ್ಯಾನ! ಎಷ್ಟು ಹೂವು, ಏನು ಬಗೆ, ಏನು ಬಣ್ಣ, ಏನು ಬೆಡಗು, ಏನು ಕಂಪು! ಬಹುದೂರದ ಪಯಣದಿಂದ ಬಳಲಿದ ಭರತನಿಗೂ ಅವನ ಅಂತಃಪುರದ ಕಾಂತೆಯರಿಗೂ ಎಂಥ ಚೆಲುವಿನ ನೆಲೆ. ಕೊಳಗಳ, ಮರಗಳ, ಲತೆಗಳ, ಹೂವು-ಹಣ್ಣುಗಳ ಈ ನಂದನದಲ್ಲಿ ಆರು ಋತುಗಳ ಚೆಲುವನ್ನೂ ಕಾಣಲಾಯಿತಂತೆ. ಪಾದರಿ, ಮಲ್ಲಿಗೆ, ಜಾಜಿ, ಮಾವಿನ ಚಿಗುರು, ಮಾವಿನ ಮಿಡಿ, ಸಂಪಿಗೆ, ಗೊಜ್ಜಗೆ, ಕರ್ಣಿಕಾರ, ಪಾಟಲಿ, ಸುರಹೊನ್ನೆ, ಕೇದಗೆ, ಕನ್ನೆ ದಿಲೆ, ಒಂದೇ ಎರಡೇ. ಈ ಹೂವುಗಳ ಸಂಖ್ಯೆಗೆ ಮನಸ್ಸು ಮಾರುಹೋಗುತ್ತದೆ. ಕವಿ ಪಂಪನ ಕಣ್ಣು ಪ್ರತಿಯೊಂದು ಹೂವಿನ ಸೊಗಸನ್ನೂ ಇಡಿ ಇಡಿಯಾಗಿ, ಬಿಡಿ ಬಿಡಿಯಾಗಿ ಬಣ್ಣಿಸಿ ಅದರ ಬಗ್ಗೆ ಹೊಸತೊಂದು ಕಣ್ಣನ್ನೆ ನಮ್ಮಲ್ಲಿ ತೆರೆಸುತ್ತದೆ. ಇದನ್ನೆಲ್ಲ ನೋಡಿದ ಮೇಲೆ ಈ ಸುಖ ಈ ಸಂತೋಷ ಇದೇ ಬದುಕಿನ ಸಾರ ‘ಇಂ ಪೆರತಾವುದು ಸಂಸಾರಸಾರ ಸರ್ವಸ್ವ ಫಲಂ’ ಅನ್ನಿಸಿಬಿಡುತ್ತದೆ. ಇಂಥ ಹೂವಿನ ತೋಟವನ್ನು ನಾವು ಕಾಣಲೇ ಇಲ್ಲ ಅನ್ನಿಸುತ್ತದೆ.

ಹೌದು. ಇಂಥ ಹೂವಿನ ತೋಟವನ್ನು ಇನ್ನೆಲ್ಲಾದರೂ ಕಂಡ ನೆನಪುಂಟೆ? ನೆನಸಿಕೊಳ್ಳಿ. ಓ ಮರೆತೆ. ಹರಿಹರನ ತೋಟವಿದೆ ‘ಪುಷ್ಪರಗಳೆ’ಯಲ್ಲಿ. ಅಲ್ಲೂ ಹೂವಿನ ಸುಗ್ಗಿಯೇ ಸುಗ್ಗಿ. ಪಂಪನದು ಅವನ ವರ್ಣನೆಯ ಪ್ರಕಾರ ಪಯಣದ ಹಾದಿಯಲ್ಲಿ ಕಂಡ ಉದ್ಯಾನವಾದರೂ ಅದು ಅರಮನೆಯ ಪಕ್ಕದ ತೋಟದಂತಿದೆ; ಹರಿಹರನದು ದೇವಸ್ಥಾನದ ಪಕ್ಕದ ತೋಟ. ಪಂಪಾವಿರೂಪಾಕ್ಷನ ಪೂಜೆಗೆ ಬೆಳೆದ ಹೂವಿನ ತೋಟ ಅದು. ಅಲ್ಲಿ ಹರಿಹರನಂಥ ಭಕ್ತನಿಗೆ ಹೊರತು ಬೇರೆ ಯಾರಿಗೂ ಪ್ರವೇಶವಿಲ್ಲ. ಅರಮನೆಯ ಪ್ರಮದೆಯರ ಕಾಲ್ಗೆಜ್ಜೆಗಳ ಝಣತ್ಕಾರದ ಸದ್ದು ಅಲ್ಲಿಲ್ಲ. ಹೂವುಗಳನ್ನು ಮನಬಂದಂತೆ ತರಿದು ತಮ್ಮ ಮೈ ಚೆಲುವಿಗೆ ಬಳಸುವ ವಿಲಾಸಿನಿಯರ ಅಟ್ಟಹಾಸವಿಲ್ಲ. ಅಳಿ-ಗಿಳಿ-ಕೋಗಿಲೆಗಳ ಸಂಭ್ರಮವೂ ಇಲ್ಲ. ಅದೇನಿದ್ದರೂ ತಪೋಮಯವಾದ ಪ್ರಶಾಂತ ವಾತಾವರಣ. ಅಲ್ಲಿ ಹೂವುಗಳು ಅರಳುವುದು ಮಹಾದೇವನ ಸಿರಿಮುಡಿಯ ಸಿಂಗರಕ್ಕೆ ಮಾತ್ರವೇ. ಆದರೆ ಪಂಪನದು ಕೇವಲ ವಿಲಾಸವನ. ಅಲ್ಲಿ ಅರಮನೆಯ ಸೀಮಂತಿನಿಯರಿಗೆ ಮಾತ್ರ ಪ್ರವೇಶ; ಅದು ಅವರ ಕ್ರೀಡಾರಂಗ. ಈ ವಿಲಾಸಿನಿಯರು ನಿಮಿರ್ದ ಲತೆಗಳ ಮೇಲೆ ವಿಲಾಸದಿಂದ ಕಾಲನ್ನು ನೀಡಿ ಮಲಗುತ್ತಾರೆ. ಗಿಳಿಗಳೊಡನೆ ಗಳಪಿ ಮೊರೆವ  ಅಳಿಕುಳಗಳೊಡನೆ ತಾವೂ ಗುಣುಗುಟ್ಟುತ್ತಾರೆ. ಅಲ್ಲಿ ಕಣ್ಣಿಗೆ ಹೂವಿನ ಚೆಲುವಿದೆ. ನಾಲಿಗೆಗೆ ಆಮ್ರ ಜಂಬೂ ಪನಸಾರಗಳ ಸವಿಯಿದೆ. ಮಲಗಲು ತಳಿರಿನ ನೆಳಲಿದೆ; ಮನೋರಂಜನೆಗೆ ಮಲಯಾನಿಳ ನರ್ತಕನು ದುಂಬಿಗಳ ಕೋಗಿಲೆಯ ಕಲವಾದ್ಯಗಳ ಹಿನ್ನೆಲೆಯಲ್ಲಿ ಕುಣಿಸುವ ಲತಾ ನರ್ತಕಿಯ ನಾಟ್ಯವಿದೆ. ಅಲ್ಲಲ್ಲಿ ಬಂದ ಮಾವುಗಳು ಚೆಲ್ವಾಗಿವೆ. ಅದನ್ನು ಕಂಡು ಅರಮನೆಯ ಹೆಣ್ಣುಗಳ ಮನಸ್ಸು ಉಬ್ಬಿ ಹೋಗಿದೆ. ಆ ಮಾವಿನ ಮರವನ್ನು ತಬ್ಬಿಕೊಂಡು ಅವರು ಉದ್ಗಾರವೆತ್ತುತ್ತಾರೆ:

ತಳಿರೊಳ್ ನೀನೆ ಬೆಡಂಗನೈ
ನನೆಗಳೊಳ್ ನೀಂ ನೀಱನೈ
ಪುಷ್ಪಸಂಕುಳದೊಳ್ ನೀನೆ ವಿಲಾಸಿಯೈ
ಮಿಡಿಗಳೊಳ್ ನೀಂ ಚಲ್ವನೈ
ಪಣ್ತಪಣ್ಗಳಿನೋವೊ ಪೆಱತೇನೋ ನೀನೆ ಭುವನಕ್ಕಾರಾಧ್ಯನೈ
ಭೃಂಗಕೋಕಿಳ ಚೂತರಾಜ
ತರುಗಳ್ ನಿನ್ನಂತೆ ಚೆನ್ನಂಗಳೇ (೧೧-೧೬)

ಎಂದು. ಯಾವುದರಲ್ಲಿ ತಾನೇ ಈ ಮಾವಿನ ಮರ ಉಳಿದ ಮರಗಳಿಗಿಂತ ಶ್ರೇಷ್ಠವಲ್ಲ! ತಳಿರಿನಲ್ಲೇ, ನನೆಗಳಲ್ಲೇ, ಹೂವಿನಲ್ಲೇ, ಮಿಡಿಗಳಲ್ಲೇ, ಹಣ್ಣಿನಲ್ಲೇ. ಉಳಿದ ಮರಕ್ಕೆ ಎಲ್ಲಿ ಬಂತು ಈ ಸೊಗಸು-ಎಂದು ಮಾವಿನ ಮರವನ್ನು ಪ್ರಶಂಸೆ ಮಾಡಿದರು ಈ ಚೆಲುವೆಯರು. ಮಾವಿನ ತಳಿರನ್ನು, ಹೂವನ್ನು, ಮಿಡಿಯನ್ನು ಕೊಯ್ದು ಸಿಂಗರಿಸಿಕೊಂಡು ‘ಪಸದನದ ಬಸನಿ’ಯರಾದರು ಕೆಲವರು. ಒಡನೆಯೇ ಅವರ ಕಣ್ಣಿಗೆ ಕಂಡಿತು ಮಲ್ಲಿಗೆಯ ಹೂವು. ಅರಳಿ ನಗುವ ಮಲ್ಲಿಗೆಯ ಮೊಗ್ಗುಗಳನ್ನು ಕಿತ್ತು ಮಾಲೆ ಮಾಡಿ ಕೊರಳಿಗೆ ಹಾಕಿಕೊಂಡರು. ಮಲ್ಲಿಗೆಯ ಕಂಪು ಮನವನ್ನು ತಟ್ಟಿತು. ಈ ಹೂವಿಗೆ ಸಮ ಇನ್ನಾವುದಿದೆ ಎಂದಿತು ಅವರ ಅಂತರಂಗ. ಮಧು ಮನ್ಮಥರಿಬ್ಬರೂ ಸೇರಿ ತಮ್ಮ ಯಶಸ್ಸನ್ನು ಬೆಳಗುವುದಕ್ಕೆ ಈ ಮಲ್ಲಿಗೆಯೊಂದೇ ಸಾಕು ಎಂದು ವಸಂತಮಾಸದಲ್ಲಿ ಮಲ್ಲಿಗೆಗೇ ಪಟ್ಟವನ್ನು ಕಟ್ಟಿರಬೇಕು ಎಂದು ಅಂದುಕೊಂಡರು. ಅಷ್ಟೇ ಅಲ್ಲ. ಕಾಮನ ಒಡ್ಡೋಲಗದಲ್ಲಿ ವಸಂತನು ಮಲ್ಲಿಗೆಯ ಹೂವಿನ ಅತಿಶಯವನ್ನು ಹೀಗೆ ಎತ್ತಿ ಹೊಗಳುತ್ತಾನೆ ಎಂದು ಭಾವಿಸಿದರು-

ಸೊಡರ ಬೆಳಗಿನೊಳ್ ಕೊರಗುವ ಜಾದಿಯ ತುಂಬಿಯೊಳ್ ಪಗೆಗೊಂಡ ಸಂಪಗೆಯಂ,
ಮುಡಿಯೆ ಸೊಗಯಿಸಿದದಿರ್ಮುತ್ತೆಯಲರಂ ಮಸಿಯೊಳ್ ಸಮನಾದ ಗೊಜ್ಜುಗೆಯಂ,
ನುಡಿಯಲಕ್ಕುಮೆ ಪೂಗಳ ಲೆಕ್ಕದೊಳ್ ಎಂದೆೞ್ದು ಕಾಮನೊಡ್ಡೋಲಗದೊಳ್
ಮುಡಿಗೆಯಿಕ್ಕಿಯಂ ಕೈಯನೆತ್ತಿ ಪೊಗೞ್ದಂ ತಣಿಯನೆ ಮಧುನೃಪಂ ಮಲ್ಲಿಗೆಯಂ      (೧೧-೧೦೫)

ಕಾಮನ ಒಡ್ಡೋಲಗ ಸೇರಿದೆ; ಮಧುನೃಪನು ಮಲ್ಲಿಗೆಯ ಹೂವಿನೊಂದಿಗೆ ಇತರೆ ಹೂಗಳನ್ನು ಹೋಲಿಸಿ ಬೆಲೆ ಕಟ್ಟುವ ಕುಸುಮವಿಮರ್ಶಕನಾಗಿದ್ದಾನೆ. ವಸಂತದಲ್ಲಿ ಅರಳುವ ಒಂದೊಂದು ಹೂಗಳನ್ನೂ ಆತ ಪರಿಶೀಲಿಸಿ ನೋಡುತ್ತಾನೆ. ಜಾಜಿಯ ಹೂವು ಸೊಡರ ಬೆಳಕಿಗೇ ಬಾಡಿಹೋಗುತ್ತದೆ. ಸಂಪಗೆಯಾದರೋ ದುಂಬಿಯಲ್ಲಿ ಹಗೆಗೊಂಡಿದೆ; ಅದಿರ್ಮುತ್ತೆ ಮುಡಿಯಲು ಮಾತ್ರ ಸೊಗಸು; ಗೊಜ್ಜುಗೆಯಾದರೋ ಮಸಿಗೆ ಸಮನಾಗಿದೆ. ಹೀಗಿರುವಾಗ ಈ ಹೂವುಗಳ ಲೆಕ್ಕದಲ್ಲಿ ಮಲ್ಲಿಗೆಯನ್ನಿರಿಸಿ ಸಮಾನವೆಂದು ಭಾವಿಸಿ ಅಪಚಾರ ಮಾಡುವುದೆ? ಆದುದರಿಂದ ಕಾಮನ ಒಡ್ಡೋಲಗದಲ್ಲಿ ಇಂಥ ಶ್ರೇಷ್ಠವಾದ ಮಲ್ಲಿಗೆಯನ್ನು ತಲೆಯ ಮೇಲಿರಿಸಿಕೊಂಡು, ಕೈಯೆತ್ತಿ ಹೊಗಳಿದರೂ ವಸಂತನಿಗೆ ತೃಪ್ತಿಯೇ ಇಲ್ಲವಾಗಿದೆ. ಅಂಥ ಹೂವು ಈ ಮಲ್ಲಿಗೆ ಎಂದು ಭರತನ ಅಂತಃಪುರದ ಸ್ತ್ರೀಯರು ಹೊಗಳಿ ಮಲ್ಲಿಗೆಗೆ ಸಂತೋಷವನ್ನುಂಟು ಮಾಡಿದರು. ಮಲ್ಲಿಗೆಯಿಂದ ಅವರ ಕಣ್ಣು ಇರವಂತಿ, ಅದಿರ್ಮುತ್ತೆ, ಜಾಜಿ, ಪಾದರಿ ಮೊದಲಾದ ಹೂವಿನ ಸೊಗಸಿನಲ್ಲಿ ವಿಹರಿಸುತ್ತಾ ಬಂದು ಸುರಹೊನ್ನೆ ಹೂವಿನ ಸೊಗಸಿನಲ್ಲಿ ನಿಂತಿತು. ಆ ಹೂವಿನ ಚೆಲುವನ್ನು ಬಣ್ಣಿಸುವ ಕಣ್ಣು ಇದು-

ಎಸಳ್ಗಳನ್ ಎಯ್ದೆ ಕಂಡರಿಸಿ ಮುತ್ತಿನೊಳ್ ಅಲ್ಲಿ ಸುವರ್ಣ ಚೂರ್ಣಮಂ
ಪಸರಿಸಿ ಕೇಸರಾಕೃತಿಯೊಳ್ ಅಲ್ಲಿಗೆ ಕರ್ಣಿಕೆಯ ಅಂದಮಾಗೆ ಕೀ
ಲಿಸಿ ಪೊಸತಪ್ಪ ಮಾಣಿಕದ ನುಣ್ವರಲಂ ಮಧು ಮನ್ಮಥಂಗೆ ಬಣ್ಣಿಸಿ
ಸಮೆದಂತೆ ತೋರುವುದು ಪೂಗಳೊಳ್ ಏಂ ಸುರಹೊನ್ನೆ ಚನ್ನನೋ!    (೧೧-೧೧೨)

ಈ ಒಂದು ಕುಸುರಿ ಕೆಲಸಕ್ಕೆ ಯಾವುದು ಎಣೆ! ಒಂದು ಸೊಗಸಾದ ಮುತ್ತನ್ನು ತೆಗೆದುಕೊಂಡು, ಅದನ್ನು ಎಸಳು ಎಸಳಾಗಿ ಬಿಡಿಸಿ, ಆ ಎಸಳುಗಳಿಗೆ ಬಂಗಾರದ ಹುಡಿಯನ್ನು ಲೇಪಿಸಿ, ಅದರ ನಡುವೆ ಕೆಂಪುಮಾಣಿಕದ ನುಣ್ಣನೆಯ ಹರಳೊಂದನ್ನು ಕೇಸರಕರ್ಣಿಕೆಯ ರೀತಿಯಲ್ಲಿ ಕೀಲಿಸಿ, ವಸಂತನು ಮನ್ಮಥನಿಗೆ ಕಾಣಿಕೆ ಕೊಡಲು ಮಾಡಿದಂತೆ ತೋರುತ್ತದೆಯಂತೆ ಸುರಹೊನ್ನೆ. ಸುರಹೊನ್ನೆಯಿಂದ ಈ ಕವಿತೆಯ ಕಣ್ಣು ಹಾಯುತ್ತದೆ ಕರ್ಣಿಕಾರ ಕುಸುಮದ ಮೇಲೆ-

ಪರಿಣಯನೋತ್ಸವಂ ರತಿಗನಂಗನೊಳಾಗೆ ವಸಂತಕಾಂತೆಯರ್
ನೆರೆದು ದಿಗಂಗನಾ ಸಮಿತಿಗೆ ಅೞ್ಕಱಿನೊಳ್ ಕೊಡುವಲ್ಲಿ ಕೇಸರಂ
ಬೆರೆಸಿದ ಪೊನ್ನ ಬಾಯಿನದ ಬಟ್ಟಲಿವೆಂಬಿನಮಾರ್ದ್ರ ಕೇಸರಂ
ಬೆರಸಿದ ಚೆಲ್ವು ತಳ್ತೆಸಳೊಳೇನೆಸೆದಿರ್ದುದೊ ಕರ್ಣಿಕಾರದಾ    (೧೧-೧೧೩)

ರತಿಗೂ ಮನ್ಮಥನಿಗೂ ಮದುವೆಯಾದಾಗ ವಸಂತ ಕಾಂತೆಯರು ಸೇರಿ ದಿಗಂಗನೆಯರಿಗೆ  ಅಕ್ಷತೆಕೊಡಲೆಂದು ಮಾಡಿದ ಹೊನ್ನ ಬಾಗಿನದ ಬಟ್ಟಲೆಂಬಂತೆ ತೋರುತ್ತಿದೆ ಕರ್ಣಿಕಾರ ಕುಸುಮ. ಕರ್ಣಿಕಾರದಿಂದ ಮುಂದೆ ಮತ್ತೆ ಬೇರೆ ಬೇರೆಯ ಹೂವುಗಳಲ್ಲಿ ವಿಹರಿಸಿದೆ ಈ ಹೆಣ್ಣುಗಳ ಮನಸ್ಸು. ಒಬ್ಬಳು ಚಂಪಕವನ್ನು ಮೆಚ್ಚಿದಳು; ಮತ್ತೊಬ್ಬಳು ಉತ್ಪಲವನ್ನು, ಇನ್ನೊಬ್ಬಳು ಬಕುಳವನ್ನು, ಇನ್ನೂ ಒಬ್ಬಳು ಗೊಜ್ಜುಗೆಯನ್ನು-ಹೀಗೆ ಭಿನ್ನರುಚಿಗಳಾಗಿ ಒಬ್ಬೊಬ್ಬರು ಒಂದೊಂದು ಹೂವಿನ ಸೊಗಸನ್ನು ಮೆಚ್ಚಿಕೊಂಡರು. ತಮಗೆ ಮೆಚ್ಚಿಗೆಯಾದ ಹೂವುಗಳಿಂದ ತೊಡುಗೆಗಳನ್ನು ಮಾಡಿಕೊಂಡು ಸಿಂಗರಿಸಿಕೊಂಡರು. ಆ ವನದ ತಳಿರು, ಕಳಿಕೆ, ಮೊಗ್ಗು, ನನೆಗಳು, ಬಿರಿಮುಗುಳ್ ಹೂವಿನ ಗೊಂಚಲುಗಳು ಅವರ ಸಿಂಗಾರಕ್ಕೆ ಒದಗಿ ಸಮನಾದವು. ಹೀಗೆ ನಾನಾ ವಿಧ ಕ್ರೀಡೆಗಳಿಂದ ವನವನವನ್ನೆಲ್ಲಾ ಬಳಸಿ ಮನಸ್ಸಿಗೆ ಸಂತೋಷವನ್ನು ತುಂಬಿಕೊಂಡರು. ಆದರೆ ತಮಗೆ ಹೀಗೆ ಸಂತೋಷವನ್ನು ಕೊಟ್ಟ ಈ ವನಕ್ಕೆ ಕೃತಜ್ಞತೆಯನ್ನು ಹೇಳದೆ ಹೋಗಲಿಲ್ಲ. ಈ ಎಲ್ಲ ಚೆಲುವನ್ನೇನೋ ನಮ್ಮ ಸಂತೋಷಕ್ಕೆ ಬಳಸಿದೆವು. ಆದರೆ ಈ ವನದ ಸೌಂದರ್ಯಕ್ಕೆ ನಾವು ಎಂಥ ಅಪಚಾರವನ್ನೆಸಗಿದ್ದೇವೆ ಎಂಬ ಪಶ್ಚಾತ್ತಾಪವೂ ಅವರ ಉದ್ಗಾರದಲ್ಲಿದೆ. “ನೀವು ನಮ್ಮನ್ನು ಮರೆಯಬೇಡಿ, ನೆನಸಿಕೊಳ್ಳಿರಿ ಎಂದು ಹೇಳುವುದಕ್ಕೆ ನಮಗೇ ನಾಚಿಕೆಯಾಗುತ್ತದೆ; ಯಾವ ಸದ್ಗುಣಗಳಿಗಾಗಿ ನೀವು ನಮ್ಮನ್ನು ನೆನೆಯಬೇಕು? ನಾವು ನಮ್ಮ ಕಾಲುಗಳಿಂದ ಒದೆದಿದ್ದೇವೆ. ಬಾಯಿಂದ ಉಗಿದಿದ್ದೇವೆ. ನಮ್ಮ ಮದೋತ್ಕಟ ಚೇಷ್ಟೆಗಳಿಂದ ನಿಮ್ಮನ್ನು ನೋಯಿಸಿದ್ದೇವೆ” ಎಂದು ಅಶೋಕ ವಕುಳಗಳಿಗೆ ಇವರು ಬಿನ್ನವಿಸಿಕೊಂಡರು. ತಮಗೆ ಪ್ರಿಯವಾದ ಮಾವಿನ ಮರವನ್ನು ಕುರಿತು-

ನನೆಗಳ ಗೊಂಚಲಂ ತಳಿರ ತೊಂಗಲನ್ ಆಡುವ ಚೆಲ್ವನಪ್ಪ ಕೊಂ
ಬಿನ ಮಿಡಿಯಂ ತೆರಳ್ಚಿ ತೆಗೆದು ಓವದೆ ಕಾಯದೆ ಕೂರಕಮ್ಮದಿಂ
ಸೊನೆಸುರಿವನ್ನೆಗಂ ಪಱೆದು ನೋಯಿಸಿ ಕಾಡಿದೆವು ಇನ್ನದೊಂದುಮಂ
ನೆನೆಯದೆ ನೀನುಮಾಮುಮೊಡನಿರ್ದಿರವಂ ನೆನೆ ಬಾಳ ಚೂತಮೇ      (೧೧-೧೨೮)

ನಾವು ಇಷ್ಟು ಹೊತ್ತಿನ ತನಕ ನಿಮ್ಮ ಮೊಗ್ಗುಗಳ ಗೊಂಚಲನ್ನು, ಚಿಗುರಿನ ಜೊಂಪವನ್ನು, ಗಾಳಿಗೆ ತೂಗಾಡುವ ಸೊಗಸಾದ ಮಿಡಿಗಳನ್ನು ಒಂದು ಸ್ವಲ್ಪವೂ ಕರುಣೆಯಿಲ್ಲದೆ ಕ್ರೂರಕರ್ಮದಿಂದ ಸೊನೆಸುರಿಯುವಂತೆ ಹರಿದು ನೋಯಿಸಿ ಕಾಡಿದ್ದೇವೆ. ನೀನು ಇದೊಂದನ್ನೂ ನೆನೆಯದೆ, ನಾವೂ ನೀನೂ ಕೊಂಚಕಾಲ ಜೊತೆಯಲ್ಲಿದ್ದೆವು ಎನ್ನುವುದನ್ನು ಮಾತ್ರ ನೆನೆ ಎಂದು ಬೇಡಿಕೊಂಡರಂತೆ. ವನದ ಎಲ್ಲಾ ತರುಗಳನ್ನೂ ಕುರಿತು-

ಪಡೆದು ಉತ್ತಂಸ ಅವತಂಸ ಶೋಭೆಗೆ ಭವತ್ ಬಾಲ ಪ್ರವಾಲೋಲ್ಲಸನ್
ಮೃದುಪುಷ್ಪಸ್ತಂಬಕಂಗಳಂ ಪಱಿದೆವು, ಇನ್ನಾ ದೋಷಮಂ ಕೊಳ್ಳದೆ
ಇರ್ಪುದು ಕೇಳೀವನ ಪಾದಪಂಗಳಿರ ಚಿತ್ತಗೊಂಡು ಬೀಳ್ಕೊಂಡು ರಾ
ಗದೆ ನಿಮ್ಮಂ ಬಲಗೊಂಡು ಪೋಪಗುಣಮಂ ಕೊಳ್ಳಿಂ ಮನಃಪ್ರೀತಿಯಿಂ   (೧೧-೧೩೦)

ನಾವು ನಮ್ಮ ಅಲಂಕಾರಗಳಿಗಾಗಿ ನಿಮ್ಮ ಎಳೆಯ ಚಿಗುರು ಹೂಗೊಂಚಲುಗಳನ್ನು ಹರಿದು ಕಿತ್ತೆವು; ಇನ್ನು ಆ ದೋಷವನ್ನು ಕ್ಷಮಿಸಿ ಎಂದು ಪ್ರದಕ್ಷಿಣೆ ಹಾಕಿ ಹೊರಟಿದ್ದೇವೆ. ಅದೊಂದು ಗುಣವನ್ನು ಮಾತ್ರ ಮನಸ್ಸಿನಲ್ಲಿರಿಸಿಕೊಳ್ಳಿರಿ ಎಂದು ಬೇಡಿಕೊಂಡರು. ಭರತನ ಅಂತಃಪುರದ ಈ ಲಲನೆಯರ ಸೌಂದರ‍್ಯಾನುಭವದಲ್ಲಿ ಒಂದು ರೀತಿಯ ಪ್ರಮತ್ತತೆ ಮೊದಮೊದಲಿಗೆ ಕಂಡು ಬಂದರೂ, ಸೌಂದರ್ಯಾನುಭವದ ನಂತರ, ತಮ್ಮ ಉಪಭೋಗಕ್ಕೆ ಈ ಪ್ರಕೃತಿಯ ಸೌಂದರ್ಯವನ್ನು ನೋಯಿಸಿ ಕಾಡಿದೆವಲ್ಲಾ ಎಂಬ ಈ ಪಶ್ಚಾತ್ತಾಪದ ಮಾರ್ದವತೆ ಅಪೂರ್ವವಾಗಿದೆ.

ಈ ಒಂದು ವರ್ಣನೆ ಬರುವುದು ಧರ್ಮಗ್ರಂಥವಾದ ಆದಿಪುರಾಣದಲ್ಲಿ. ಪಂಪ ಆದಿಪುರಾಣವನ್ನು ಬರೆಯುವಲ್ಲಿ ಜಿನಸೇನಾಚಾರ್ಯರ ಪೂರ್ವಪುರಾಣವನ್ನು ಅತ್ಯಂತ ಶ್ರದ್ಧೆಯಿಂದ, ಅನುಸರಿಸಿರುವನಾದರೂ, ಹನ್ನೊಂದನೆಯ ಆಶ್ವಾಸದಲ್ಲಿ ನಾವು ಕಾಣುವ ಈ ವನವಿಹಾರಪರ್ವ ಪಂಪನ ಸ್ವಂತ ಸೃಷ್ಟಿಯಾಗಿರುವುದು ಒಂದು ವಿಶೇಷ. ಪೂರ್ವಪುರಾಣದಲ್ಲಿ ಭರತಚಕ್ರವರ್ತಿಯ ಭೋಗ ವೈಭವಗಳ ವರ್ಣನೆಗೇನೂ ಕೊರತೆಯಿಲ್ಲ; ಆದರೆ ಭರತನ ಸೈನ್ಯ ತನ್ನ ದಿಗ್ವಿಜಯದ ಹಾದಿಯಲ್ಲಿ ಇಂಥ ವನಗಳ ಪಕ್ಕದಲ್ಲೇ ಹೋದರೂ, ಪಂಪನಲ್ಲಿಯ ಹಾಗೆ ಅದು ಯಾವ ಇಂಥ ವನವನ್ನೂ ಪ್ರವೇಶಮಾಡಿ ಈ ಹೂವಿನ ಸೊಗಸಿನಲ್ಲಿ ತಂಗುವುದಿಲ್ಲ. ಆದರೆ ಪಂಪ ಮೂಲತಃ ಕವಿ ರಸಿಕ. ಭರತ ಚಕ್ರವರ್ತಿಯ ಸೈನ್ಯವನ್ನು ಕ್ಷಣಕಾಲ ಆ ಕಡೆ ನಿಲ್ಲಿಸಿ, ಭರತಚಕ್ರವರ್ತಿಯ ಅಂತಃಪುರದ ಲಲನೆಯರೊಂದಿಗೆ ಓದುಗರನ್ನೂ ಕರೆದುಕೊಂಡು ಈ ಸುಂದರ ವನಸೌಂದರ್ಯದಲ್ಲಿ ಸ್ವಲ್ಪ ಹೊತ್ತು ನಮ್ಮನ್ನೂ ಅಡ್ಡಾಡಿಸಿದ್ದಾನೆ. ಹೂವಿನ ಚೆಲುವನ್ನು ಬಿಡಿ ಬಿಡಿಯಾಗಿ ಬಿಡಿಸಿ ತೋರಿದ್ದಾನೆ. ತಾನು ಬರೆಯುತ್ತಿರುವುದು ಧಾರ್ಮಿಕ ಪುರಾಣ ಎಂಬ ಅರಿವಿದ್ದರೂ, ಸೌಂದರ್ಯ ಧರ್ಮವನ್ನು ಕಡೆಗಣಿಸಲಿಲ್ಲ. ಈ ಸೌಂದರ್ಯದ ಭೋಗದಲ್ಲಿ ಯಾವ ವೈರಾಗ್ಯ ಸಂಬಂಧಿಯಾದ ಭಾವನೆಯನ್ನಾಗಲೀ, ನಿರೂಪಣೆಯನ್ನಾಗಲೀ ಸೇರಿಸಿಲ್ಲದಿರುವುದು ವಿಶೇಷದ ಸಂಗತಿಯಾಗಿದೆ. ಇಲ್ಲಿ ಸೌಂದರ‍್ಯ, ಜೈನಪುರಾಣಗಳಲ್ಲಿ ಬರುವ ಹಾಗೆ, ವೈರಾಗ್ಯ ಪ್ರಚೋದನೆಗೆ ಬಂದುದಲ್ಲ. ಹಿಂದಿನ ಅಧ್ಯಾಯಗಳಲ್ಲಿ ಆದಿದೇವನ ಆತ್ಮಯಾತ್ರೆಯಲ್ಲಿ ಅಲ್ಲಲ್ಲಿ ಪ್ರಕೃತಿ ಸೌಂದರ್ಯದ ವರ್ಣನೆ ಬರುತ್ತದೆ. ವಜ್ರಬಾಹು ಮಹಾರಾಜ ಒಮ್ಮೆ ಶರತ್ಕಾಲದ  ಮನೋಹರವಾದ ಮೋಡವನ್ನು ನೋಡಿದನು. ಅದರ ಸೊಗಸಿಗೆ ಮಾರು ಹೋಗಿ ಅದನ್ನು ಚಿತ್ರವೊಂದರಲ್ಲಿ ಹಿಡಿದಿಡಬೇಕೆಂಬ ಬಯಕೆಯಿಂದ ಪಟವರ್ಣಗಳನ್ನು ತರಿಸಿ ಚಿತ್ರಿಸಬೇಕೆನ್ನುವಷ್ಟರಲ್ಲಿಯೇ ಅದು ಕರಗಿ ಮಾಯವಾಗಿ ಜೀವನ ನಶ್ವರತೆಯ ಒಂದು ಪ್ರತಿಮೆಯಾಗಿ ಆತನ ವೈರಾಗ್ಯಕ್ಕೆ ಪ್ರಚೋದಕವಾಯಿತು. (ಆ.ಪು. ೪-೬೩, ೬೪). ವಜ್ರದಂತ ಮಹಾರಾಜನು ಪ್ರತೀಹಾರಿಯೊಬ್ಬ ತಂದುಕೊಟ್ಟ ತಾವರೆಯ ಹೂವನ್ನು ನೋಡಿ ಮೆಚ್ಚುತ್ತಿರುವಾಗಲೇ ಅದರೊಳಗಿನಿಂದ, ಹಿಂದಿನ ದಿನ ಸೂರ್ಯಾಸ್ತಮಾನದಂದು ಸೆರೆಸಿಕ್ಕಿ ಮೃತವಾದ ದುಂಬಿಯೊಂದು ಕೆಳಗೆ ಬಿದ್ದುದನ್ನು ಕಂಡು ಬೆರಗಾಗಿ ಸಂಸಾರಾನಿತ್ಯತೆಯನ್ನು ಅನುಭವಿಸಿ ವಿರಾಗಿಯಾಗುತ್ತಾನೆ. (ಆ.ಪು. ೪-೬೯ ರಿಂದ ೭೪). ಹೀಗೆ ಹಿಂದಿನ ಕಥಾಭಾಗದಲ್ಲಿ ಈ ಪ್ರಕೃತಿಯ ಚೆಲುವಿನ ವಸ್ತುಗಳಾದ ಮೋಡವಾಗಲಿ, ತಾವರೆಯಾಗಲಿ, ಕಾಣಿಸುವುದು ಸೌಂದರ್ಯದ ನಶ್ವರತೆಯ ಅರಿವಿಗಾಗಿ; ವೈರಾಗ್ಯ ಪ್ರಚೋದನೆಗಾಗಿ. ಆದರೆ ಈ ಆಶ್ವಾಸದಲ್ಲಿ ಅಂಥ ಭಯವಿಲ್ಲ; ಹೂವುಗಳನ್ನು ಅವುಗಳ ಸೊಗಸಿಗಾಗಿ, ಅವುಗಳಿಂದ ಒದಗುವ ಸುಖಕ್ಕಾಗಿ ನಾವು ಮೆಚ್ಚುತ್ತೇವೆ. ಇಲ್ಲಿ ಈ ಎಲ್ಲ ಸೌಂದರ್ಯವೂ ನಶ್ವರವೆಂದಾಗಲೀ, ಬಂಧನವೆಂದಾಗಲೀ ಯಾವ ಒಂದು ಮಾತೂ ಇಲ್ಲ. ಯಾವ ವೈರಾಗ್ಯದ ಭಯವೂ ಇಲ್ಲದೆ ಮುಕ್ತ ಮನಸ್ಸಿನಿಂದ ಲೋಕದ ಚೆಲುವನ್ನು ಆಸ್ವಾದಿಸುವ ಆನಂದದಲ್ಲಿದ್ದೇವೆ. ಕಾರಣ, ನಾವು ಭೋಗಮುಖಿಯಾದ ಭರತ ಚಕ್ರವರ್ತಿಯ ಜೊತೆಗಿದ್ದೇವೆ. ಆದುದರಿಂದಲೇ ಲೋಕದ ಚೆಲುವಿನಿಂದ ಕವಿ ತನ್ನ ಮುಖವನ್ನು ತಿರುಗಿಸಿಲ್ಲ. ಕವಿ ತಾನು ಬರೆಯುತ್ತಿರುವುದರಲ್ಲಿ, ಬರೀ ಧರ್ಮ ಮಾತ್ರವಲ್ಲ, ಕಾವ್ಯಧರ್ಮವು ಧಾರಾಳವಾಗಿದೆ ಎಂದು ಹೇಳಿಕೊಂಡಿಲ್ಲವೆ? ಆ ಕಾವ್ಯಧರ್ಮದ ಬಹು ಪ್ರಧಾನವಾದ ಸೌಂದರ‍್ಯ ಧರ್ಮದ ಅನುಭವವನ್ನು ಕವಿ ನಮ್ಮೆದುರು ಪ್ರಕಟಿಸಿದ್ದಾನೆ.

ಇದರ ಮೇಲೆ, ಆದಿಪುರಾಣದ ಈ ಭಾಗ ಚಕ್ರವರ್ತಿಚರಿತ; ಆದಿದೇವನ ಯೋಗದ ಕಥೆಗೆ ಪ್ರತಿಯಾಗಿ ಭರತ ಚಕ್ರವರ್ತಿಯ ಭೋಗದ ಕಥೆಯನ್ನು ಇಟ್ಟು ತೋರಿಸಬೇಕಾಗಿದೆ. ಒಂದು ಜೀವಕ್ಕೆ ಯೋಗ ಮೈಗೂಡಬೇಕಾದರೆ, ಭೋಗದ ಹಾದಿಯನ್ನು ಸಾಕಷ್ಟು ತುಳಿದೂ ತುಳಿದೂ ಬಳಲಿ, ಕಡೆಗೆ ಎಂದೋ ಒಂದು ದಿನ ಎಚ್ಚರವಾಗಬೇಕು. ಹೀಗಾಗಿ ಇಲ್ಲಿ ಚಿತ್ರಿತವಾಗಿರುವ ಭರತ ಚಕ್ರವರ್ತಿಯ ಭೋಗ-ವೈಭವದ ಕಥೆ, ನಮ್ಮೆಲ್ಲರ ಹಾಗೂ ಎಲ್ಲ ಕಾಲದ ಜಗತ್ತಿನ ಕಥೆ. ಚಕ್ರವರ್ತಿಯ ಚರಿತೆ ಎಂದ ಮೇಲೆ ಅವನ ವಿಜಯೋದ್ಯೋಗ ವರ್ಣನೆ, ವನವಿಹಾರ ವರ್ಣನೆ, ಚಂದ್ರಿಕಾ ವಿಹಾರ ವರ್ಣನೆ ಇರಬೇಕಲ್ಲ. ಹೀಗಾಗಿ ಹನ್ನೊಂದು ಹನ್ನೆರಡನೆಯ ಆಶ್ವಾಸದಲ್ಲಿ ಕಾವ್ಯಕ್ಕೆ ಅಗತ್ಯವಾದ ಅಷ್ಟಾದಶ ವರ್ಣನೆಯ ಒಂದು ಅಂಶವನ್ನು ಕವಿ ಅತ್ಯಂತ ಸೊಗಸಾಗಿ ತಂದಿದ್ದಾನೆ. ಆದರೆ ಉಳಿದ ಕವಿಗಳಲ್ಲಿ ಬರುವ ಅಷ್ಟಾದಶ ವರ್ಣನೆಯ ನೀರಸತೆಗೂ, ಪಂಪನ ಈ ವರ್ಣನೆಯ ರಸಿಕತೆಗೂ ಅಜಗಜಾಂತರ. ಪಂಪಕವಿ ವನವಿಹಾರ ವರ್ಣನೆಯ ನೆಪದಲ್ಲಿ ತನ್ನ ವಿಶಿಷ್ಟವಾದ ಸೌಂದರ್ಯ ಧರ್ಮವನ್ನು ಇಲ್ಲಿ ಕಾಣಿಸಿದ್ದಾನೆ. ಅವನ ಸೌಂದರ್ಯಾನುಭವದ ರೀತಿಯಲ್ಲಿ ಕೇವಲ ಪ್ರಮತ್ತತೆ ಕಾಣುವುದಿಲ್ಲ; ಅದರೊಳಗಣ ಚೈತನ್ಯವನ್ನು ಅವನ ಅಂತಃಕರಣ ಹೇಗೆ ಗುರುತಿಸುತ್ತದೆಂಬುದನ್ನು ತೋರಿಸುತ್ತದೆ. ಅವನ ಕಣ್ಣುಗಳು ಎಷ್ಟು ರೀತಿಯ ಹೂವುಗಳ ಸೊಗಸನ್ನು, ಬಣ್ಣವನ್ನು, ಗುಣವನ್ನು ಬಲ್ಲವು! ಪಂಪನಲ್ಲಿಯಂತೆ ಪ್ರಕೃತಿಯ ಚೆಲುವಿನ ಇಂಥ ವಸ್ತುಗಳನ್ನು ಬಲ್ಲವರೇ ವಿರಳ ಅನ್ನಿಸಿ ಬಿಡುತ್ತದೆ, ಈ ಒಂದು ಸಂದರ್ಭವನ್ನು ಗಮನಿಸಿದರೆ. ಪಂಪನ ಕಣ್ಣು ಸೌಂದರ್ಯದ ಬಗೆಗೆ ಕೇವಲ ಐಂದ್ರಿಯ ಮಟ್ಟದ್ದಲ್ಲ; ಆತ್ಮಸಂಬಂಧಿಯಾದುದೂ ಹೌದು. ಹೂವಿನ ಸೊಗಸು ಕೇವಲ ರಮ್ಯತೆಯ, ಉಪಭೋಗದ ವಸ್ತು ಮಾತ್ರವಲ್ಲ, ಅವುಗಳ ಒಳಗೆ ಬೇರೊಂದು ಚೈತನ್ಯದ ಸ್ಪಂದನವೂ ಉಂಟು ಎಂಬ ಅರಿವು ಕವಿಗಿದೆ. ಅರಮನೆಯ ವಿಲಾಸಿನಿಯರು ಉದ್ಯಾನದೊಳಗಣ ಹೂವನ್ನು ಕಂಡು ಸೌಂದರ್ಯಾನುಭವದ ಉದ್ಗಾರವೆತ್ತಿದರು; ಒಂದೊಂದೇ ಹೂವಿನ ಬಳಿ ನಿಂತು ಅದರ ಬಣ್ಣವನ್ನು, ಗುಣವನ್ನು, ಕಂಪನ್ನು ಎದೆ ತುಂಬಿ ಬಣ್ಣಿಸಿದರು; ಹೂವುಗಳನ್ನು, ಚಿಗುರುಗಳನ್ನು, ಕಿತ್ತು ಮುಡಿದು, ಮಾಲೆ ಹಾಕಿಕೊಂಡು ಸುಖಿಸಿದರು. ಆದರೆ ಕಡೆಗೆ ಇಂಥ ಸೊಗಸಾದ ಮಾವಿನ ಚಿಗುರನ್ನು ಕಿತ್ತೆವಲ್ಲಾ, ಈ ವನದ ಲತೆಗಳ ತರುಗಳ ಹೂವನ್ನು ಉಪಭೋಗದ ಪ್ರಮತ್ತತೆಗೆ ಸಿಕ್ಕಿ ಅನ್ಯಾಯವಾಗಿ ತರಿದು ನೋಯಿಸಿದೆವಲ್ಲಾ ಎಂದು ಕೊರಗಿ ಮುರುಗಿ ನಮ್ಮ ತಪ್ಪನ್ನು ಕ್ಷಮಿಸಿ ಎಂದು ಮರಗಳನ್ನು ಬಲವಂದು, ನಾವೂ ನೀವೂ ಸ್ವಲ್ಪಕಾಲ ಜೊತೆಗಿದ್ದೆವು ಎಂಬುದನ್ನು ಮಾತ್ರ ನೆನೆಯಿರಿ, ಉಳಿದುದನ್ನು ಮನ್ನಿಸಿ- ಎಂದು ಬೇಡಿಕೊಳ್ಳುವ ಈ ವಿಲಾಸಿನಿಯರ ಅಂತರಂಗದ ಕೊರಗಿನ ಹಿಂದೆ ಪಂಪಕವಿಯೇ ನಿಂತು ನಿಟ್ಟುಸಿರಿಟ್ಟ ಹಾಗೆ ತೋರುತ್ತದೆ. ಹೂವುಗಳನ್ನು ಕಿತ್ತು ಮುಡಿದು ನೋಡಿ, ಹಾಡಿ ಸುಖಿಸುವುದು ಸೌಂದರ್ಯಾನುಭವದ ಒಂದು ಮಟ್ಟವಾದರೆ, ಇಂಥ ಹೂವುಗಳನ್ನು ಹರಿದು ನೋಯಿಸಿದೆವಲ್ಲಾ ಎಂದು ಕೊರಗುವುದೂ ಸೌಂದರ್ಯಾನುಭವದ ಬೇರೊಂದು ಮೇಲ್ಮಟ್ಟವೆ. ಈ ಜೀವ ಹಿಂಸೆಯ ಭಾವ ಇದು ಜೈನ ಧರ್ಮದ ಗ್ರಂಥವಾದದ್ದರಿಂದ ಬಂದಿರಬಹುದೆಂದು ಊಹಿಸಲು ಅವಕಾಶವಿರುವುದಾದರೂ, ಇದು ಪಂಪಕವಿಯ ವೈಯಕ್ತಿಕ ಸೌಂದರ್ಯ ಧರ್ಮವೆಂದು ಭಾವಿಸುವುದರಲ್ಲಿ ಆತಂಕವೇನೂ ಇಲ್ಲ. ಈ ಮನೋಧರ್ಮ ಎಲ್ಲ ದೊಡ್ಡ ಕವಿಚೇತನಗಳ ಸೌಂದರ‍್ಯಧರ್ಮ ಕೂಡಾ ಹೌದು. ಕಾಳಿದಾಸನ ಶಕುಂತಲೆಯಂತೆ ಇಲ್ಲಿ ಈ ಪಂಪನ ಉದ್ಯಾನದ ರಮಣಿಯರೂ ಚೆಲುವನ್ನು ಒಂದು ಚೈತನ್ಯವೆಂದು ಕಾಣಬಲ್ಲರು, ಸೌಂದರ್ಯಪ್ರಿಯತೆಯಲ್ಲಿ ಅದರ ಸಂವೇದನೆಯಲ್ಲಿ ಪಂಪ ಕಾಳಿದಾಸನ ತಮ್ಮ. ಆದುದರಿಂದಲೇ  ಹೇಳಬಹುದು: ‘ಪಂಪ ಕನ್ನಡದ ಕಾಳಿದಾಸ.’

– ಪರಿಶೀಲನ (೧೯೬೭)

* * *