ಸಂಗೀತ ಹಾಗೂ ಜ್ಯೋತಿಷ್ಯದಲ್ಲಿ ನಿಷ್ಣಾತರಾಗಿರುವ ಶ್ರೀ ಪಂಪಾಪತಿಸ್ವಾಮಿ ಒಡೆಯರ್ ಅವರು ಕರ್ನಾಟಕದ ಹಿರಿಯ ಸಂಗೀತಗಾರರಲ್ಲಿ ಒಬ್ಬರು. ೧೯೨೫ರಲ್ಲಿ ಜನಿಸಿದ ಶ್ರೀ ಪಂಪಾಪತಿಸ್ವಾಮಿ ಒಡೆಯರ್ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂ. ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳ  ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದರು. ಈ ಅವಧಿಯಲ್ಲೇ ಹಲವು ವಾದ್ಯಗಳನ್ನು ನುಡಿಸುವುದರಲ್ಲೂ ಒಡೆಯರಿಗೆ ಶಿಕ್ಷಣವಾಯಿತು. ಜ್ಯೋತಿಷ್ಯ ಶಾಸ್ತ್ರದಲ್ಲೂ ಶ್ರೀಯುತರಿಗೆ ಶಿಕ್ಷಣವಾಗಿದೆ.

ಚನ್ನೈ, ಹೈದರಾಬಾದ್‌, ಸೊಲ್ಲಾಪುರ, ಅರಕಲಗೂಡು, ಮೈಸೂರು, ಗೋವಾ ಮುಂತಾದ ಕಡೆ ಶ್ರೀಯುತರು ನಿರಂತರ ಕಾರ್ಯಕ್ರಮ ನೀಡಿದ್ದಾರೆ. ಕುರುಬ ಸಮಾಜದ ಕುಲಗುರುಗಳಾಗಿ ಧರ್ಮಪ್ರಸಾರ ಮಾಡಿದ್ದಾರೆ.

ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಮೂರ್ತಿ ಮಹಾಸ್ವಾಮಿಗಳಿಂದ ‘ಕಲಾರತ್ನ’ ಮತ್ತು ಕೇದಾರ ಜಗದ್ಗುರುಗಳಿಂದ ‘ಗಾನ ಗಂಧರ್ವ’ ಎಂಬ ಬಿರುದುಗಳನ್ನು ಶ್ರೀ ಒಡೆಯರ್ ಪಡೆದಿದ್ದಾರೆ.

ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ನೀಡಿ (೨೦೦೦-೦೧) ಗೌರವಿಸಿದೆ.