ಬಿ.ಎಂ.ಶ್ರೀಕಂಠಯ್ನೋರು ದೇಶಕ್ಕೇ ಹೆಸರಾದೋರು
ಕನ್ನಡ ಕನ್ನಡ ಅಂತ ಅವರು ಊರೂರನ್ನೆ ಸುತ್ತೋರು
ಜರೀ ಪೇಟ, ಕಂಚಿನ ಕಂಠ, ಅವರ ಮಾತೂ ಅಂದ್ರೆ
ಬಾಯ್ ಬಿಟ್ಕೊಂಡ್ ಕೇಳೋರ್ ಜನ, ಮರೆತು ಎಲ್ಲಾ ತೊಂದ್ರೆ.

ಒಂದ್ಸಲ ಏನಾಯ್ತಂದ್ರೆ : ಅದ್ಯಾವ್ದೋ ಒಂದು ಊರು,
ಗುಲಬರ್ಗಾನೋ ರಾಯ್‌ಚೂರೋ ನೆನಪಿಗೆ ಬರಲೇ ವಲ್ದು.
ಪಂಪನ ಬಗ್ಗೆ ಅವರ ಭಾಷಣ ರಾತ್ರೀ ಹತ್ತಕ್ಕೆ
ಜನ ಜಮಾಯ್ಸಿ ಕೂತೇ ಬಿಟ್ರು ಅವರ‍್ಮಾತ್ ಕೇಳೋಕ್ಕೆ.

ಅವರು ಭಾಷಣ ಮಾಡೋಮೊದ್ಲು ಅದೇ ಊರ‍್ನಾಗೆ
ಪಂಪ್ ಸೆಟ್ ಚಾಲೂ ಸಮಾರಂಭ ಅಲ್ಲೇ ಪಕ್ದಾಗೆ.
‘ಪಂಪೋತ್ಸವ’ ಬ್ಯಾನರ್ ನೋಡಿ ಅಲ್ಲಿಗ್ಹೋಗೋರೆಲ್ಲ
ಇಲ್ಲಿಗೆ ಬಂದು ಕೂತ್ಕಂಬುಟ್ರು ಅರ್ಥ ಗೊತ್ತಾಗ್ಲಿಲ್ಲ.

ಮೂರು ತಾಸು ಪಂಪನ್ ಮ್ಯಾಲೆ ಅದ್ಭುತವಾದ ಮಾತು
ಗರಾ ಹೊಡ್ಡಂಗ್ ಕೇಳ್ತಾ ಇದ್ರು ಅಷ್ಟೂ ಜನವೂ ಕೂತು
ಕೊನೇಗೊಬ್ಬ ಮೇಲಕ್ಕೆದ್ದ ಭಾಷಣ ಮುಗಿಯೋ ಹೊತ್ಗೆ
‘ಸ್ವಾಮೀ’ ಅಂದ: ‘ಏನಪಾ’ ಅಂದ್ರು ಶ್ರೀಕಂಠಯ್ನೋರ್ ಮೆತ್ಗೆ.

‘ಬಾಳ ಛಲೋ ಮಾತಾಡಿದ್ರಿ ಇಷ್ಟೊತ್ತನಕಾ ನೀವು
ಹೊತ್ತೇ ಹೋದದ್ ಗೊತ್ತಾಗ್ಲಿಲ್ಲ ಕರಗ್ಹೋಗಿದ್ವಿ ನಾವು
ಪಂಪ ಪಂಪ ಅಂತ ನೀವು ಇಷ್ಟೊತ್ ಬಡಕೊಂಡ್ರೂನು
ಒಂದ್ ತೊಟ್ ನೀರೂ ಬರ‍್ಲಿಲ್ಲಾಂದ್ಮೇಲ್ ಎಂಥ ಪಂಪೋ ಏನೋ!