ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಒಂದು ಪ್ರಸಂಗ : ಕುರುಕ್ಷೇತ್ರದ ರಣರಂಗ ನಿಶ್ಚಿತವಾಗಿದೆ. ಕೌರವರ ಪಾಂಡವರ ಸೇನೆಗಳು ಕುರುಕ್ಷೇತ್ರ ರಣಾಂಗಣದ ಹೊರವಲಯಗಳಲ್ಲಿ ಬೀಡುಬಿಟ್ಟಿವೆ. ಯುದ್ಧ ಪ್ರಾರಂಭದ ಹಿಂದಿನ ದಿನದ ಸಂಜೆ. ಸಾಣೆಗೆ ಒಡ್ಡಿದ ಇಟ್ಟಿಗೆಯ ಧೂಳಿನಂತೆ ಸಂಜೆಯ ಕೆಂಪು ಪಡುವಣ ಬಾನ ತುಂಬ ಹಬ್ಬಿಕೊಂಡಿದೆ. ಎರಡೂ ಕಡೆಯ ಸೈನ್ಯ ಶಿಬಿರಗಳಲ್ಲಿ ಯುದ್ಧ ಪೂರ್ವ ಸನ್ನಾಹಗಳು ನಡೆದಿವೆ. ಕತ್ತಲಾವರಿಸಿರುವ ಶಿಬಿರಗಳಲ್ಲಿ,  ಉರಿಯುವ ಬೊಂಬಾಳ ದೀಪಗಳ ಬೆಳಕಿನಲ್ಲಿ ವೀರರು ಯುದ್ಧ ಪೂರ್ವ ಧಾರ್ಮಿಕ ವಿಧಿಗಳಲ್ಲಿ ತೊಡಗಿದ್ದಾರೆ; ಮತ್ತೆ ಕೆಲವರು ರಣರಂಗದ ಬಗೆಗೆ ವೀರಾಲಾಪಗಳಲ್ಲಿ ತೊಡಗಿದ್ದಾರೆ. ಈ ಪರಿಸರದಲ್ಲಿ ಒಂದೆಡೆ ಶ್ರೀಸಾಮಾನ್ಯನ ಸಂಸಾರದಲ್ಲಿ ಗಂಡಹೆಂಡಿರ ಮಾತುಕತೆ ನಡೆದಿದೆ:

“ಈ ಹೊತ್ತೇ ಹೊತ್ತು ನಾಳೆ ನಾನು ದೇವಲೋಕದ
ಕನ್ನಿಕೆಯರ ಓಲಗದಲ್ಲಿರುತ್ತೇನೆ”- ಎನ್ನುತ್ತಾನೆ ಗಂಡ.
ಅದಕ್ಕೆ ಹೆಂಡತಿ ಹೇಳುತ್ತಾಳೆ: “ನೀನೆಂದ ಹಾಗೆ ಆಗುವುದಿಲ್ಲ;
ನಾಳೆ ಮತ್ತೆ ಬಂದು ನನ್ನೊಡನೆ ಕೂಡುತ್ತೀಯ.”
“ಅದು ನಿನಗೆ ಹೇಗೆ ಗೊತ್ತು?”
“ಗೊತ್ತು ನನಗೆ ಓಲೆ ಭಾಗ್ಯ ಉಂಟು.”
[ಪಂ. ಭಾ. ೧೦-೪೪ ವ.]

ಇನ್ನೊಂದೆಡೆ, ಯುದ್ಧಕ್ಕೆ ಹೋಗುವ ನಲ್ಲ, ತಾನು ನಾಳಿನ ರಣರಂಗದಲ್ಲಿ ಸಾಯುವುದು ನಿಶ್ಚಯ ಎಂದುಕೊಂಡಿದ್ದಾನೆ. ಅದನ್ನು ತಿಳಿದ ನಲ್ಲಳು ಹೇಳಿಕೊಳ್ಳುತ್ತಾಳೆ:

“ನನ್ನ ಗಂಡ ನಾಳೆ ರಣಾಂಗಣದಲ್ಲಿ ಹೋರಾಡಿ ದೇವಲೋಕದ ಸ್ತ್ರೀಯ
ರಲ್ಲಿ ಸೇರುತ್ತಾನಲ್ಲವೆ? ಹಾಗೆಂದು ನಾನು ಸುಮ್ಮನೆ ಇರುವಷ್ಟು ಬೆಪ್ಪಳೆ?
ಅವನಿಗಿಂತ ಮೊದಲೆ ನಾನು ಅಲ್ಲಿಗೆ ಹೋಗಿ, ನನ್ನ ನಲ್ಲನನ್ನು ಅಲ್ಲಿ ಎದುರು
ಗೊಳ್ಳುತ್ತೇನೆಯೆ ಹೊರತು, ಆ ದೇವಲೋಕದ ತೊತ್ತಿರ ಸಹವಾಸಕ್ಕೆ ನನ್ನ ಗಂಡನನ್ನು ಬಿಟ್ಟೇನೆ?”
(ಪಂ.ಭಾ. ೧೦-೪೫)

ಮೇಲುನೋಟಕ್ಕೆ ತೀರಾ ಸರಳವೂ, ವಿನೋದಮಯವೂ ಆಗಿ ತೋರುತ್ತವೆ, ಈ ಎರಡು ಸಂಸಾರಗಳಲ್ಲಿ ನಡೆಯುವ ಮಾತುಕತೆ. ಇರುಳು ಕಳೆದು ಬೆಳಗಾದಾಗ, ಕಾದಿರುವ ಮಹಾ ರಣರಂಗದ ಹಿನ್ನೆಲೆಯಲ್ಲಿ ಪಂಪ, ಈ ಸಾಮಾನ್ಯ ವ್ಯಕ್ತಿಗಳ ಪ್ರತಿಕ್ರಿಯೆಗಳನ್ನು ದಾಖಲು ಮಾಡಿದ್ದಾನೆ. ಪಾಂಡವರ ಪರವಾಗಿಯೋ, ಕೌರವ ಪರವಾಗಿಯೋ ಹೋರಾಡಲೇ- ಬೇಕಾಗಿರುವ ಈ ಸಾಮಾನ್ಯ ಸೈನಿಕರಿಗೆ ಗೊತ್ತು, ತಮ್ಮ ಹಣೆಯ ಬರಹವೇನೆಂದು. ಒಂದು ಯುಗದ ಹಣೆಯ ಬರಹವನ್ನೇ ನಿರ್ಣಯಿಸುವ ಮಹಾ ಸಂಘರ್ಷದ ಸಂದರ್ಭದಲ್ಲಿ ತಾನು ಬದುಕುವುದು, ಮತ್ತು ಬದುಕಿರುವುದು ಈ ಹೊತ್ತು ಮಾತ್ರ, ನಾಳೆ ಈ ವೇಳೆಗೆ ತಾನಿರುವುದಿಲ್ಲ ಎಂಬುದನ್ನು ಬಲ್ಲ ನಲ್ಲನಿಗೆ, ತನಗೆ ಓಲೆ ಭಾಗ್ಯ ಉಂಟೆಂದು ನಂಬುವ, ಆಶಿಸುವ, ತನ್ಮೂಲಕ ತನ್ನ ನಲ್ಲನನ್ನು ಸಂತೈಸುವ ಹೆಣ್ಣಿನ ಚಿತ್ರ ಒಂದೆಡೆಯಾದರೆ; ತಾನು ಅವನಿಗಿಂತ ಮೊದಲೇ ಸಾಯುವುದು ಅಗತ್ಯ ಹಾಗೂ ಅನಿವಾರ್ಯವೆಂದು ಭಾವಿಸುವ ಹೆಣ್ಣಿನ ಚಿತ್ರ ಇನ್ನೊಂದೆಡೆ, ಅಕ್ಕಪಕ್ಕದಲ್ಲೆ ಚಿತ್ರಿತವಾಗಿವೆ. ಆದರೆ ಈ ವೀರರಾಗಲಿ, ಅವರ ಹೆಂಡತಿಯರಾಗಲಿ, ಮಾತನಾಡುವುದು ವೈಯಕ್ತಿಕವಾದ ನಷ್ಟದ ಮತ್ತು ಸಾವಿನ ಭಯದ ಭಾಷೆಯಲ್ಲಿ ಅಲ್ಲ. ಅವರು ಮಾತನಾಡುವುದು, ದೇವಲೋಕಕ್ಕೆ ಹೋಗುವ ಮತ್ತು ಅಲ್ಲಿನ ದೇವ ಕನ್ನಿಕೆಯರೊಂದಿಗೆ  ಸೇರುವ ಅಥವಾ ದೇವಲೋಕದಲ್ಲೇ ಪರಸ್ಪರ ಭೆಟ್ಟಿಯಾಗುವ-ಧಾಟಿಯಲ್ಲಿ. ಹೀಗೆ ಮಾತನಾಡುವುದು ಸಾವನ್ನು ಕುರಿತ ಭಾರತೀಯ ಕಲ್ಪನೆಗೆ ಅನುಸಾರವಾಗಿದೆ ಎಂದುಕೊಂಡರೂ, ಅದಕ್ಕೂ ಮಿಗಿಲಾಗಿ ಪಂಪನ ಕಾಲದ ಹತ್ತನೆ ಶತಮಾನದ ವೀರಯುಗದ ಮೌಲ್ಯಗಳ ದೃಷ್ಟಿಯಿಂದಲೂ ಇದು ಗಮನಿಸತಕ್ಕದ್ದಾಗಿದೆ.

ಪಂಪನು ಚಿತ್ರಿಸುತ್ತಿರುವುದು ಒಂದು ಮಹಾರಣರಂಗದ ಹಿನ್ನೆಲೆಯಲ್ಲಿ, ಸಾಮಾನ್ಯ ವ್ಯಕ್ತಿಗಳ ಪ್ರತಿಕ್ರಿಯೆಯನ್ನು. ಆದರೆ ಹಾಗೆ ಚಿತ್ರಿಸುವಲ್ಲಿ, ಯಾರದೋ ಪ್ರತಿಷ್ಠೆಯ ಹೋರಾಟದಲ್ಲಿ ಸಾಮಾನ್ಯ ಜನದ ಬದುಕು ಹೇಗೆ ದುರಂತಕ್ಕೆ ಈಡಾಗುತ್ತಿದೆಯಲ್ಲ ಎಂಬ ಕಡೆಗೆ ಅವನ ಕಣ್ಣು ಹಾಯುವುದಿಲ್ಲ. ವೀರಯುಗದ ಮೌಲ್ಯಗಳಲ್ಲಿ, ಶೌರ‍್ಯ, ತ್ಯಾಗ, ಜೋಳದ ಪಾಳಿ, ಇವು ಪ್ರಧಾನವಾದವುಗಳು. ಸ್ವಾಮಿಕಾರ್ಯಕ್ಕಾಗಿ ಹೋರಾಡುವುದು, ಮಡಿಯುವುದು ಬದುಕಿನ ಒಂದು ಪುರಾಷಾರ್ಥವೆಂದು ಭಾವಿಸಿದ ವೀರರ ನಡವಳಿಕೆಗಳನ್ನು ಚಿತ್ರಿಸುವುದು ಪಂಪನ ಉದ್ದೇಶ. ಈ ಮೌಲ್ಯಗಳನ್ನು ಉದ್‌ಘೋಷಿಸುವ ಸಂದರ್ಭಗಳನ್ನು ಅವನು ಮತ್ತೆ ಮತ್ತೆ ಚಿತ್ರಿಸುತ್ತಾನೆ. ಮೇಲೆ ಹೇಳಿದ ಪ್ರಸಂಗವೂ ಅಷ್ಟೆ. ಸಾಮಾನ್ಯ ಸೈನಿಕರೂ, ಈ ವೀರ ಯುಗದ ನಿಲುವುಗಳನ್ನು ಎಷ್ಟರಮಟ್ಟಿಗೆ ಪ್ರಕಟಿಸುತ್ತಿದ್ದರೆನ್ನುವುದನ್ನು ತೋರಿಸುವುದು. ಆದುದರಿಂದಲೇ ಆ ಸಾಮಾನ್ಯ ಸೈನಿಕರು, ಮರಣವನ್ನು ವೈಭವಿಸುವ, ಅದು ದೇವಲೋಕಕ್ಕೆ ಕೈಗೊಳ್ಳುವ ಪ್ರಯಾಣವೆಂದು ಹಿಗ್ಗಿನಿಂದ ವರ್ಣಿಸುವ ಮತ್ತು ಈ ನಲ್ಲೆಯರೂ, ತಾವೂ ದೇವಲೋಕದಲ್ಲಿ ಗಂಡಂದಿರನ್ನು ಭೆಟ್ಟಿಯಾಗುವೆವೆಂದು ಹೇಳುವ-ಮಾತುಕತೆಯಾಗಿ, ತಮಗೊದಗುವ ದುಃಖದುರಂತಗಳನ್ನು ಮುಚ್ಚುವ, ಮೌಲ್ಯಗಳ ವೈಭವೀಕರಣವಾಗಿ ಇಲ್ಲಿ ಚಿತ್ರಿತವಾಗಿದೆ.

ಮಹಾಕವಿ ಹೋಮರನ “ಇಲಿಯಡ್”ನಲ್ಲಿ ಇಂಥದೇ ಒಂದು ಸಂದರ್ಭವಿದೆ. ಅದು ಯುದ್ಧ ಪೂರ್ವ ಪ್ರಸಂಗವಲ್ಲ; ಯುದ್ಧದ ನಡುವಣ ಒಂದು ದಿನದ ಪ್ರಸಂಗ. ಟ್ರಾಯ್‌ನಗರದ  ಮಹಾವೀರ ಹೆಕ್ಟರ್, ತಾನು ಯುದ್ಧಕ್ಕೆ ನೇರವಾಗಿ ಇಳಿಯುವ ದಿನ ರಣರಂಗದಿಂದ ಬಂದು ತನ್ನ ಮಡದಿಯಾದ ಆಂಡ್ರೊಮೆಕೆಯನ್ನು ಕಟ್ಟಕಡೆಯ ಬಾರಿಗೆ ಸಂಧಿಸುವ ಸಂದರ್ಭ ಅದು. ಇಲ್ಲಿ ಪರಸ್ಪರ ಭೇಟಿಯಾಗುವವರು ಸಾಮಾನ್ಯ ಸಂಸಾರದವರಲ್ಲ; ರಾಜ ಮನೆತನದವರು. ಅವರು ಯಾರಾದರೇನು, ಅವರು ಮೂಲತಃ ಮನುಷ್ಯರು ಎಂಬುದನ್ನು ಹೋಮರ್ ಮರೆತಿಲ್ಲ.

“ಹೆಕ್ಟರ್ ತನ್ನ ಮಡದಿಯನ್ನು ಕಾಣಲೆಂದು ಮನೆಯತ್ತ ಬಂದನು. ಆದರೆ ಆಕೆ ಅಲ್ಲಿರಲಿಲ್ಲ. ಟ್ರೋಜನರು ಆಘಾತಕ್ಕೆ ಸಿಲುಕಿದರೆಂಬುದನ್ನು ಕೇಳಿ ಹುಚ್ಚು ಹಿಡಿದವಳಂತೆ, ಮಗುವನ್ನು ಕರೆದುಕೊಂಡು ಕೋಟೆಯ ಗೋಡೆಯತ್ತ ಧಾವಿಸಿದ್ದಳು. ಹೆಕ್ಟರನು ಟ್ರಾಯ್ ನಗರದ ವಿಶಾಲವಾದ ಬೀದಿಗಳಲ್ಲಿ ಕೋಟೆಯ ಕಡೆ ನಡೆದನು. ಅವನು ಹೆಬ್ಬಾಗಿಲನ್ನು ಸಮೀಪಿಸುವ ಹೊತ್ತಿಗೆ ಅವನ ಹೆಂಡತಿ ಅವನನ್ನು ಕಂಡಳು: ಹತ್ತಿರಕ್ಕೆ ಓಡಿ ಬಂದಳು. ಅವಳ ಹಿಂದೆ ಅವಳ ಸೇವಕಿ ಮಗುವನ್ನು ಎತ್ತಿಕೊಂಡು ಬಂದಳು. ಆಂಡ್ರೊಮೆಕೆ ತನ್ನ ಗಂಡನ ಕೈಯನ್ನು ಹಿಡಿದುಕೊಂಡು ಅಳುತ್ತಾ ನಿಂತುಕೊಂಡಳು. ಹೆಕ್ಟರ್ ತನ್ನ ಮಗುವಿನ ಕಡೆ ನೋಡಿ ಮುಗುಳ್ನಕ್ಕನು. ಆತ ಏನನ್ನೂ ಮಾತಾಡಲಿಲ್ಲ. ಆಂಡ್ರೊಮೆಕೆ ಬಿಕ್ಕಿ ಬಿಕ್ಕಿ ಅಳುತ್ತಾ “ನನ್ನ ಹೆಕ್ಟರ್, ನಿನಗೆ ಏನೋ ಆವೇಶ ಅಮರಿಕೊಂಡಿದೆ. ನಿನ್ನ ಈ ಶೌರ‍್ಯವೇ ನಿನ್ನ ನಾಶಕ್ಕೆ ದಾರಿಯಾಗಿದೆ. ಯಾಕೆ ನೀನು ಈ ಪುಟ್ಟ ಮಗುವಿನ ಬಗೆಗಾಗಲಿ, ನಾಳೆ ವಿಧವೆಯಾಗಲಿರುವ ನತೃದೃಷ್ಟಳಾದ ನಿನ್ನ ಹೆಂಡತಿಯಾದ ನನ್ನ ಬಗೆಗಾಗಲಿ, ಯೋಚಿಸುವುದಿಲ್ಲ? ಇಂದೋ ನಾಳೆಯೋ ಅಕಿಯನರು ನಿನ್ನನ್ನು ಕೊಲ್ಲುವುದು ನಿಶ್ಚಯ. ನಿನ್ನನ್ನು ಕಳೆದುಕೊಂಡ ನಾನು ಬದುಕಿದ್ದರೂ ಸತ್ತಂತೆಯೇ. ನೀನು ಸತ್ತನಂತರ ನನಗೆ ಉಳಿಯುವ ಸಮಾಧಾನವಾದರೂ ಏನು? ನನಗೋ, ತಂದೆ ಇಲ್ಲ, ತಾಯಿ ಇಲ್ಲ. ಅವರನ್ನು ಹಿಂದೆಯೇ ನಾನು ಕಳೆದುಕೊಂಡೆ. ಈಗ ನೀನೇ ನನ್ನ ಪಾಲಿಗೆ ತಂದೆ, ತಾಯಿ, ಬಂಧು ಬಳಗ ಎಲ್ಲವೂ. ಹಾಗೆಯೇ ಪ್ರೀತಿಯ ಯಜಮಾನ ಕೂಡಾ. ನನ್ನ ಮೇಲೆ ಕರುಣೆ ಇಟ್ಟು ಇಲ್ಲೇ ನಿಲ್ಲು. ನಿನ್ನ ಮಗುವನ್ನು ಅನಾಥನನ್ನಾಗಿ ಮಾಡದಿರು; ನನ್ನನ್ನು ವಿಧವೆಯನ್ನಾಗಿ ಮಾಡಬೇಡ….”

ಹೆಕ್ಟರ್ ಹೇಳಿದ : “ಪ್ರಿಯತಮೆ, ನಾನು ಇದೆಲ್ಲವನ್ನೂ ಯೋಚಿಸಿದ್ದೇನೆ. ಆದರೆ, ನಾನು ಯುದ್ಧಕ್ಕೆ ಹೋಗದೆ ಹೇಡಿಯಂತೆ ಅಡಗಿಕೊಂಡರೆ ಟ್ರಾಯ್ ನಗರದ ಮಹನೀಯರಿಗೆ ಮಹಿಳೆಯರಿಗೆ ಹೇಗೆ ಮತ್ತೆ ಮುಖ ತೋರಿಸಲಿ? ಹಾಗೆ ಮಾಡುವುದು ನನ್ನ ಸ್ವಭಾವಕ್ಕೆ ವಿರುದ್ಧವಾದದ್ದು; ಯಾಕೆಂದರೆ ನಾನು ಸದಾ ಉತ್ತಮ ಯೋಧನಂತೆ ಶಿಕ್ಷಣ ಪಡೆದವನು; ಯುದ್ಧದಲ್ಲಿ ಸದಾ ಮೊದಲ ಪಂಕ್ತಿಯಲ್ಲಿಯೇ ಇದ್ದು, ನನಗೂ, ನನ್ನ ತಂದೆಗೂ ಹೆಸರು ತರಬೇಕಾದವನು. ನನಗೆ ಖಚಿತವಾಗಿ ಗೊತ್ತಿದೆ. ಈ ಪವಿತ್ರವಾದ ಇಲಿಯಂ ನಾಶವಾಗುವ ದಿನ ಹತ್ತಿರಕ್ಕೆ ಬರುತ್ತಿದೆ. ಇದರ ರಾಜ ಪ್ರಯಮ್ ಮತ್ತು ಆತನ ಪ್ರಜೆಗಳು ಉಳಿಯುವುದಿಲ್ಲ. ಆದರೆ ನಾನು ಇದಕ್ಕಾಗಿ ಹೆಚ್ಚು ವ್ಯಥೆಪಡುವುದಿಲ್ಲ. ದೊರೆ ಪ್ರಯಮ್‌ಗಾಗಲಿ, ಆತನ ಹೆಂಡತಿಗಾಗಲಿ, ಧೂಳೀಪಟವಾಗುವ ನನ್ನ ಸಹೋದರರ ಬಗೆಗಾಗಲಿ, ಸಾಯಬೇಕಾದ ಬಹು ಸಂಖ್ಯೆಯ ಟ್ರೋಜನರಿಗಾಗಲಿ ಅಲ್ಲ; ಆದರೆ ನಿನಗಾಗಿ, ನಿನಗೊದಗುವ ಪಾಡನ್ನು ಕುರಿತು ಹೆಚ್ಚು ಸಂಕಟವಾಗುತ್ತದೆ ನನಗೆ. ಇಲಿಯಂ ಪತನವಾದ ನಂತರ, ಕಣ್ಣೀರು ಸುರಿಸುವ ನಿನ್ನನ್ನು ಅಕಿಯನರಲ್ಲಿ ಯಾರೋ ಎಳೆದುಕೊಂಡು ಹೋಗುತ್ತಾರೆ. ಅಲ್ಲಿ ದೂರದ ಅರ್ಗಾಸ್‌ನಲ್ಲಿ, ಯಾರಿಗಾಗಿಯೋ ಮಗ್ಗದ ಬಳಿ ನೀನು ದುಡಿಯಬೇಕಾಗುತ್ತದೆ; ದೂರದ ಬಾವಿಯಿಂದ ನೀರನ್ನು ಹೊತ್ತು ತರಬೇಕಾಗುತ್ತದೆ. ಅಸಹಾಯಕಳಾಗಿ ಹೀಗೆ ನೀರು ಹೊತ್ತು ತರುವ ನಿನ್ನನ್ನು ನೋಡಿ “ಅಗೋ, ಟ್ರಾಯ್ ಮಹಾಯುದ್ಧದ ವೀರ ಹೆಕ್ಟರನ ಹೆಂಡತಿ ಇವಳು”- ಎಂದು ಅಲ್ಲಿನ ಜನ ನಿನ್ನ ಕಡೆ ಬೆರಳು ಮಾಡಿ ಮಾತನಾಡುತ್ತಾರೆ. ಹೀಗೆ ಪ್ರತಿಸಲವೂ ಮಾತಾಡಿಕೊಂಡಾಗ, ನಿನ್ನನ್ನು ಸಂರಕ್ಷಿಸಬಲ್ಲವನಾದ ಪುರುಷನನ್ನು ಕಳೆದುಕೊಂಡ ದುಃಖ ನಿನ್ನ ಕೊರಳನ್ನು ಅಮುಕುವುದು. ಇಂಥ ದಾಸ್ಯಕ್ಕೆ ನಿನ್ನನ್ನು ಎಳೆದುಕೊಂಡು ಹೋಗುವಂದು, ನಿನ್ನ ಚೀರಾಟವನ್ನು ಕೇಳುವ ಮೊದಲೇ ನನಗೆ ಸಾವು ಬಂದರೆ ಎಷ್ಟು ಒಳ್ಳೆಯದು ಅನ್ನಿಸುತ್ತದೆ ನನಗೆ.”

‘ಹೀಗೆ ಹೇಳಿ ಹೆಕ್ಟರ್ ಮಗುವನ್ನು ಎತ್ತಿಕೊಳ್ಳಲು ತೋಳು ಚಾಚಿದನು. ಸೇವಕಿಯ ಕೈಯಲ್ಲಿದ್ದ ಮಗು, ತನ್ನ ತಂದೆ ಧರಿಸಿದ ಯುದ್ಧ ಕವಚ-ಶಿರಸ್ತ್ರಾಣಗಳನ್ನು ಕಂಡು ಬೆದರಿ, ದಾದಿಯ ಎದೆಯನ್ನಪ್ಪಿಕೊಂಡಿತು. ತಂದೆ-ತಾಯಂದಿರಿಬ್ಬರೂ ಇದನ್ನು ನೋಡಿ ಗಟ್ಟಿಯಾಗಿ ನಕ್ಕುಬಿಟ್ಟರು. ಹೆಕ್ಟರ್ ಝಗಝಗಿಸುವ ತನ್ನ ಶಿರಸ್ತ್ರಾಣವನ್ನು ತೆಗೆದು ಕೆಳಗೆ ಇಟ್ಟನು. ಅನಂತರ ತನ್ನ ಮಗುವನ್ನು ಮುದ್ದಿಸಿ, ತೋಳುಗಳ ಮೇಲೆ ಕುಣಿಸಿದನು. ಜ್ಯೂಸ್ ದೇವನನ್ನು ಬೇಡಿಕೊಂಡನು : “ನನ್ನಂತೆ ನನ್ನ ಮಗನೂ ಒಂದು ದಿನ ಟ್ರೋಜನರ ನಡುವೆ ಧೀರನಾಗಿ, ನಾಯಕನಾಗಿ, ರಾಜನಾಗಿ ವಿರಾಜಿಸಲಿ ಎಂದು ದೇವತೆಗಳು ಅವನನ್ನು ಅನುಗ್ರಹಿಸಲಿ. ಇವನು ತನ್ನ ತಂದೆಗಿಂತ ಪೌರುಷವಂತ, ಎನ್ನುವಂತಾಗಲಿ. ಅವನು ಶತ್ರುಗಳನ್ನು ನಿರ್ನಾಮ ಮಾಡಿ, ಸೆರೆಸಿಕ್ಕವರ ಶಸ್ತ್ರಾಸ್ತ್ರಗಳನ್ನು ತಂದು ತನ್ನ ತಾಯಿಯನ್ನು ಸಂತೋಷಪಡಿಸಲಿ.”

ಹೀಗೆಂದು ಹೇಳಿ ಮಗುವನ್ನು ಅದರ ತಾಯಿಯ ಕೈಗೆ ಒಪ್ಪಿಸಿದನು. ತಾಯಿ ಕಂಪು ಸೂಸುವ ತನ್ನ ಎದೆಗೆ ಮಗುವನ್ನು ಒತ್ತಿ ಹಿಡಿದಳು. ತಾಯಿ-ಮಗುವನ್ನು ನೋಡಿ ಹೆಕ್ಟರನ ಮನಸ್ಸು ಕರಗಿತು. ತನ್ನ ಮಡದಿಯನ್ನು ತಟ್ಟಿ ಹೇಳಿದ. “ಪ್ರಿಯೆ, ಹೆಚ್ಚು ದುಃಖಿಸಬೇಡ. ನನ್ನ ಕಾಲ ಬರುವ ಮುನ್ನ ಯಾರೂ ನನ್ನನ್ನು ಕೊಲ್ಲಲಾರರು. ವಿಧಿ ನಿಯಮವನ್ನು ಯಾರೇ ಆಗಲಿ-ಅವನು ಹೇಡಿಯೇ ಆಗಲಿ, ವೀರನೇ ಆಗಲಿ-ತಪ್ಪಿಸಲು ಸಾಧ್ಯವಿಲ್ಲ. ಈಗ ಮನೆಗೆ ಹೋಗು. ಮನೆಗೆಲಸವನ್ನು ನೋಡಿಕೋ. ಯುದ್ಧ ಮಾಡುವುದು ಗಂಡಸರ ಕೆಲಸ; ಈ ಯುದ್ಧವಂತೂ ಇಲಿಯಂನ ಎಲ್ಲ ಗಂಡಸರ ಕೆಲಸ, ಅದರಲ್ಲೂ ಎಲ್ಲರಿಗಿಂತ ಮಿಗಿಲಾಗಿ ನನ್ನ ಕೆಲಸ.”

ಹೀಗೆಂದು ಶಿರಸ್ತ್ರಾಣವನ್ನು ಹೆಕ್ಟರ್ ಎತ್ತಿಕೊಂಡ. ಆಂಡ್ರೊಮೆಕೆ ಕಂಬನಿದುಂಬಿದ ಕಣ್ಣುಗಳಿಂದ ಹೆಕ್ಟರನ ಕಡೆ ಮತ್ತೆ ಮತ್ತೆ ನೋಡುತ್ತ ಮನೆಯ ಕಡೆ ನಡೆದಳು.[1]

ಯುದ್ಧದ ನಡುವಣ ಕಾಲದಲ್ಲಿ ಸ್ವಲ್ಪ ಹೊತ್ತು ಗಂಡ ಹೆಂಡಿರು ಭೆಟ್ಟಿಯಾಗುವ ಈ ಸಂದರ್ಭ ಅತ್ಯಂತ ಮಾನವೀಯವಾದದ್ದು. ತಪ್ಪಿಸಲಾಗದ ಮಹಾದುರಂತದ ನಡುವೆ, ಕಂಡು ಬರುವ ಈ ಸಂಸಾರದ ಚಿತ್ರ ಅತ್ಯಂತ ರಮ್ಯವೂ, ಮನಕರಗಿಸುವಂಥದೂ ಆಗಿದೆ. ಯುದ್ಧಕ್ಕೆ ಹೋಗಬೇಡ ಎನ್ನುವ, ಆತ ಹೋಗಿ ಮಡಿದರೆ ಅನಾಥವಾಗುವ ಮಗುವಿನ ಮತ್ತು ವಿಧವೆಯಾಗುವ ತನ್ನ ಗತಿ ಏನು ಎಂದು ಚಿಂತಿಸುವ ಹೆಂಡತಿ; ತನ್ನ ಮರಣಾನಂತರ, ತನ್ನ ಹೆಂಡತಿಗೆ ಒದಗುವ ದುರ್ಗತಿಯನ್ನು ಕುರಿತು ಕೊರಗುವ ಗಂಡ; ಈ ನಡುವೆ ಮಗುವನ್ನು ಮುದ್ದಿಸುವ ರಮ್ಯ ಕ್ಷಣ; ತಾನು ವೀರನಾದ್ದರಿಂದ, ಹಿಮ್ಮೆಟ್ಟುವಂತಿಲ್ಲವೆನ್ನುವ ಮೌಲ್ಯಪ್ರಜ್ಞೆ; ಗಂಡಿನ ಕೆಲಸ ಹೋರಾಡುವುದು, ಹೆಣ್ಣಿನ ಕೆಲಸ ಮನೆವಾರ್ತೆಯನ್ನು ನೋಡಿಕೊಳ್ಳುವುದು ಎಂದು ನಿರ್ದೇಶನ ಮಾಡುವುದರ ಮೂಲಕ ಪ್ರಕಟವಾಗುವ ಬದುಕಿನ ನಿರಂತರತೆ; ವಿಧಿ ತಂದೊಡ್ಡುವುದನ್ನು ಯಾರೂ ತಪ್ಪಿಸಿಕೊಳ್ಳಲಾರರು ಎಂಬ ಸಾಂತ್ವನದಲ್ಲಿರುವ ನಿಲುವು- ಇವೆಲ್ಲವೂ ಹೋಮರನ ಅದ್ಭುತ ಕಲಾವಂತಿಕೆಗೆ ಉಜ್ವಲ ನಿದರ್ಶನಗಳಾಗಿವೆ. ರಣರಂಗದ ರುದ್ರ ರಭಸಗಳ ನಡುವೆಯೂ ಮಾನವೀಯ ಸಂದರ್ಭಗಳ ವಿವರವಾದ ವರ್ಣನೆಯನ್ನು ಕೊಡಲು ಹೋಮರನು ಮರೆಯುವುದಿಲ್ಲ. ಪ್ರಸ್ತುತ ಸಂದರ್ಭವನ್ನು ಪಂಪನ ಯುದ್ಧ ಪೂರ್ವ ಶಿಬಿರದಲ್ಲಿನ ಗಂಡಹೆಂಡಿರ ಸಂಭಾಷಣೆಯ ಸಂದರ್ಭದೊಡನೆ ಹೋಲಿಸಿದರೆ, ಪಂಪನದು  ಕೇವಲ ಮೌಲ್ಯಪ್ರಜ್ಞೆಯುಳ್ಳವನ ಬರಹವೆಂದೂ, ಹೋಮರನದು ಮೌಲ್ಯಪ್ರಜ್ಞೆಯನ್ನು ವೈಭವಿಸದೆಯೂ, ವಾಸ್ತವತೆಯ ಅರಿವಿರುವ ಮನುಷ್ಯನೊಬ್ಬನು ಬರೆದ ಸಹಜವಾದ ಚಿತ್ರಣವೆಂದೂ ತೋರುತ್ತದೆ. ಇಂಥ ಕಡೆ ಹೋಮರ್ ಪಂಪನಿಗಿಂತ ಬಹಳ ದೊಡ್ಡವನೆಂದು ಅನ್ನಿಸುತ್ತದೆ.

ಪಂಪ ಮತ್ತು ಹೋಮರ್ ಇಬ್ಬರೂ ವೀರಯುಗದ ಕವಿಗಳು. ಪಂಪ ಮತ್ತು ಹೋಮರ್ ಇಬ್ಬರ ಸಾಂಸ್ಕೃತಿಕ ಪರಿಸರಗಳು ಭಿನ್ನವಾದುವೆಂಬುದನ್ನೂ, ಆ ಕಾರಣದಿಂದ ಕೆಲವು ವಿಷಯಗಳನ್ನು ಕುರಿತ ನಿಲುವುಗಳು ಅವರಿಬ್ಬರಲ್ಲಿ ಬೇರೆ ಬೇರೆಯಾಗಿರುತ್ತವೆ ಎಂಬುದನ್ನು ಒಪ್ಪಿದರೂ, ವೀರಯುಗದ ಕೆಲವು ಮುಖ್ಯ ಮೌಲ್ಯಗಳು ಇಬ್ಬರಲ್ಲಿಯೂ ಸಮಾನವಾಗಿ ಪ್ರತಿಪಾದಿತವಾಗಿವೆ. ವೀರಯುಗದ ಮೌಲ್ಯಗಳಾದ, ವೀರ, ತ್ಯಾಗ, ಸ್ವಾಮಿಭಕ್ತಿ ಇತ್ಯಾದಿಗಳು ಪಂಪನಿಗೂ ಹೋಮರನಿಗೂ ಸಮಾನವಾದವುಗಳು. ಕುರುಕ್ಷೇತ್ರದ ಶಿಬಿರವೊಂದರಲ್ಲಿನ ದಂಪತಿಗಳ ಸಂಭಾಷಣೆಯಲ್ಲಾಗಲೀ, ಟ್ರಾಯ್ ನಗರದಲ್ಲಿ ಯುದ್ಧದ ನಡುವಣ ಅವಧಿಯಲ್ಲಿ ಸಂಧಿಸುವ ಹೆಕ್ಟರ್ ಮತ್ತು ಅಂಡ್ರೊಮೆಕೆಯರ ಸಂಭಾಷಣೆಯಲ್ಲಾಗಲಿ ಕಂಡುಬರುವುದು, ರುದ್ರ ಭಯಂಕರವಾದ ಯುದ್ಧವೊಂದರಿಂದ ತಮ್ಮ ವೈಯಕ್ತಿಕವಾದ ಬದುಕಿಗೆ ಮತ್ತು ಸಾಂಸಾರಿಕ  ಜೀವನಕ್ಕೆ ಒದಗುವ ಆಘಾತದ ಭಯವೇ. ಇದನ್ನು ಪಂಪ ಪರಂಪರಾಗತ ನಂಬಿಕೆಗಳ ಉದ್ಘೋಷದ ಮೂಲಕ ಅಂದರೆ ‘ನಾಳೆ ಈ ಹೊತ್ತಿಗೆ ದೇವಲೋಕದ ಕನ್ನಿಕೆಯರ ಓಲಗದಲ್ಲಿರುತ್ತೇನೆ’ ಎಂದುಕೊಳ್ಳುವ ಸೈನಿಕರ ಮಾತಿನಲ್ಲಿ, ಮರಣವೆಂಬುದು ವೀರಸ್ವರ್ಗವೆಂದು ವೈಭವೀಕರಿಸುವ ಮಾತಿನಲ್ಲಿ, ಅಭಿವ್ಯಕ್ತಪಡಿಸಿ, ಈ ಬಗ್ಗೆ ಆ ದಂಪತಿಗಳಲ್ಲಿ ಇನ್ನು ಯಾವ ಮಾನವೀಯ ತಾಕಲಾಟಗಳೂ ಈ ಸಂದರ್ಭದಲ್ಲಿ ಉಂಟಾಗಲೇ ಇಲ್ಲವೇನೋ ಎಂಬ ಭಾವನೆಯನ್ನು ಉಂಟು ಮಾಡುತ್ತಾನೆ; ಆದರೆ ಹೋಮರ್, ರಣರಂಗಕ್ಕೆ ಧುಮುಕಿದವರಿಗೆ ಮರಣ ಅನಿವಾರ‍್ಯವೆಂಬುದನ್ನೂ, ಹೆಕ್ಟರನಂಥವರು ಹೋರಾಡುವುದು ಪೌರುಷದ ಹಾಗೂ ಕರ್ತವ್ಯನಿಷ್ಠೆಯ ಕೆಲಸವೆಂಬುದನ್ನೂ ಹೇಳುತ್ತಲೇ, ಯುದ್ಧದ ದುರಂತ ದುಷ್ಪರಿಣಾಮಗಳನ್ನೂ, ಅದರಿಂದ ಮಾನವೀಯ ಸಂಬಂಧಗಳಿಗೆ ಉಂಟಾಗುವ ಆಘಾತಗಳನ್ನೂ ಚಿತ್ರಿಸುವುದರ ಮೂಲಕ ಮಹಾಕವಿಗೆ ಉಚಿತವಾದ ಸಮಗ್ರ ದೃಷ್ಟಿಯನ್ನು ಪ್ರಕಟಿಸುತ್ತಾನೆ. ಯಾವ ದೊಡ್ಡ ಕವಿಯೆ ಆಗಲಿ, ತನ್ನ ಕೃತಿ, ತನ್ನ ಕಾಲದ ನಂಬಿಕೆ ಹಾಗೂ ಮೌಲ್ಯಗಳನ್ನು ಪ್ರಕಟಿಸುತ್ತಲೇ, ಅದಕ್ಕೆ ಹಿನ್ನೆಲೆಯಾದ ಮಾನವೀಯವಾದ ವೈಯಕ್ತಿಕ ಸಂಘರ್ಷಗಳನ್ನೂ, ನೋವುಗಳನ್ನೂ ಚಿತ್ರಿಸಬೇಕು. ಹಾಗಲ್ಲದೆ, ವ್ಯಕ್ತಿಗಳನ್ನು, ಪಾತ್ರಗಳನ್ನು, ಕೇವಲ ಮೌಲ್ಯದ ಮತ್ತು ನಂಬಿಕೆಗಳ ಪ್ರತಿನಿಧಿಗಳೆಂದೋ, ಉದ್‌ಘೋಷಕರೆಂದೋ ಭಾವಿಸುವುದು ಅಸಮಗ್ರವಾದ ಕಲೆಗಾರಿಕೆಯಾಗುತ್ತದೆ.

ಇದರಿಂದ ನಿಷ್ಪನ್ನವಾಗುವ ಇನ್ನೊಂದು ಸಂಗತಿಯೇನೆಂದರೆ: ಬಹುಶಃ ನಮ್ಮ ಸಾಂಸ್ಕೃತಿಕ ಇತಿಹಾಸವೆಲ್ಲವೂ, ಮಾನವನ ನೋವುಗಳನ್ನೂ, ತಾಕಲಾಟಗಳನ್ನೂ ಗಣನೆಗೆ ತೆಗೆದುಕೊಳ್ಳದೆ, ತತ್ಪರಿಣಾಮದ ಸಾಧನೆಗಳನ್ನೂ (achievements) ಮತ್ತು ಮೌಲ್ಯಗಳನ್ನೂ ಮಾತ್ರವೇ ವ್ಯಾಖ್ಯಾನಿಸುವ ಸ್ವರೂಪದ್ದಾಗಿರುವುದರಿಂದ, ಅದು ಕೇವಲ ಸಂಸ್ಕೃತಿಯ ವೈಭವೀಕರಣ- ವಾಗಿದೆಯೇನೋ- ಎಂದು ಅನುಮಾನ ನನಗೆ. ಚರಿತ್ರೆಯ ಹಿನ್ನೆಲೆಗಿರುವ ಶೋಷಣೆ, ನೋವು, ಸಂಕಟಗಳು ಮತ್ತು ಮೌಲ್ಯದ ಹಾಗೂ ನಂಬಿಕೆಗಳ ಹೆಸರಿನಲ್ಲಿ ಜನ ಸಾಮಾನ್ಯರು ಸದ್ದಿಲ್ಲದೆ ಅನುಭವಿಸಿದ ಯಾತನೆಗಳು, ಯಾವುದೇ ಸಾಂಸ್ಕೃತಿಕ ಸಾಧನೆಯನ್ನು ಅಧ್ಯಯನ ಮಾಡುವವರ  ಪಾಲಿಗೆ ನಿರ್ಲಕ್ಷ್ಯದ ಸಂಗತಿಗಳಾಗಿ ಉಳಿದಿರುವ ತನಕ, ನಮ್ಮ ಸಾಂಸ್ಕೃತಿಕ ಚರಿತ್ರೆ ಒಂದು ರೀತಿಯಲ್ಲಿ ಏಕಮುಖವೂ ಅಸಮಗ್ರವೂ ಆಗಿಯೆ ಉಳಿದಿರುತ್ತದೆ.

ಪ್ರತಿಕ್ರಿಯೆ (೧೯೮೨)

* * *


[1] Homer : The Iliad. Book IV, P. 128-130. Translated by B.V. Rieu.